Home Blog Page 3214

ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ, ಅತಿ ಹಿಂದುಳಿದ ವರ್ಗದ ಜನರಿಗೆ ಅನ್ಯಾಯ ಆಗದಂತೆ ಕ್ರಮ; ಸಚಿವ ಪೂಜಾರಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು:

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಲೇಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಿಯಾಶೀಲವಾಗಿದ್ದು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಾವೆಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ವೇದಿಕೆಯ ಮನವಿಯಂತೆ ಸುಮಾರು 73 ಅತಿ ಹಿಂದುಳಿದ ಜಾತಿಗಳನ್ನು ಗುರುತಿಸಿ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ. ದೇವರಾಜು‌ ಅರಸು ಸಂಶೋಧನಾ ಪೀಠಕ್ಕೆ  ಅನುದಾನ ನೀಡಲಾಗುತ್ತದೆ ಎಂದ ಸಚಿವ ಪೂಜಾರಿ, ಅತಿ ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ‌ವಿಚಾರವಾಗಿ ಯಾರಿಗೂ ಅನ್ಯಾಯವಾಗದಂತೆ ಸರಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.

ಈಗಾಗಲೇ ಹಿಂದುಳಿದ ಆಯೋಗದ ಅಧ್ಯಕ್ಷರು, ಹಲವು ಸಮುದಾಯಗಳ ಪ್ರಸ್ತಾಪವನ್ನು ಪರಿಶೀಲಿಸುತ್ತಿದ್ದಾರೆ. ನಮ್ಮ ಸಮಾಜ ಇನ್ನೂ ಹೆಸರೇ ಕೇಳದ, ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಅದೆಷ್ಟೋ ಸಮುದಾಯಗಳ ಬದುಕು ದಾರುಣವಾಗಿದೆ. ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಮೀಸಲಾತಿ ವಿಚಾರದಲ್ಲಿ ಮುಂದಿನ 15 ದಿನಗಳಲ್ಲಿ ಸಭೆ ಕರೆದು ಚರ್ಚೆ ಮಾಡುತ್ತೇವೆ ಎಂದು ಸಚಿವರು ಭರವಸೆ ನೀಡಿದರು.

ಬಲಾಡ್ಯ ಸಮುದಾಯಗಳೂ ಸಹ ಆರ್ಥಿಕವಾಗಿ ಹಿಂದುಳಿದಿರುವುದಾಗಿ ಕೇಂದ್ರಕ್ಕೆ ಅಹವಾಲು ಸಲ್ಲಿಸಲಾಗುವುದು. ಆದರೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಸಚಿವ ಪೂಜಾರಿ ಹೇಳಿದರು.

ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಕುರಿತಾಗಿ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವಿದೆ. ದೇವರಾಜ ಅರಸು ಅವರ ಭೂಸುಧಾರಣೆ ಯೋಜನೆಯ ಫಲಾನುಭವಿ ನಾನು, ಅವತ್ತು ನನಗೆ 2 ಎಕರೆ ಭೂಮಿ ಸಿಕ್ಕಿತ್ತು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಮರಿಸಿಕೊಂಡರು.  

ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷರಾದ ಎಂ ಸಿ ವೇಣುಗೋಪಾಲ ಮಾತನಾಡಿ, ಒಂದು ವೇಳೆ ವೀರಶೈವ ಲಿಂಗಾಯಿತದ ಉಪಜಾತಿಯಾದ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎ ಪಟ್ಟಿಗೆ ಸೇರಿಸಿದರೆ ಹಿಂದುಳಿದ ಸಮುದಾಯಗಳು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.  

ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಪಿ.ಆರ್‌ ರಮೇಶ್‌, ಮಾಜಿ ಶಾಸಕ ಹಾಗೂ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ನೆ.ಲ ನರೇಂದ್ರಬಾಬು ಸೇರಿದಂತೆ ಹಲವರು ಮಾತನಾಡಿ, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡಲು ತಾಂತ್ರಿಕ ಅಡೆತಡೆಯಿದೆ. 2ಎ ಮೀಸಲಾತಿ ನೀಡಿದರೆ ಅತಿ ಹಿಂದುಳಿದ ಸಮುದಾಯಕ್ಕೆ ಘೋರ ಅನ್ಯಾಯವಾಗುತ್ತದೆ. ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ-ಗೆ ಸೇರಿಸಬಾರದೆಂದು ಒಕ್ಕೂರಲಿನಿಂದ ಸಚಿವರ ಬಳಿ ಮನವಿ ಮಾಡಿಕೊಂಡರು.

ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಬಳಿ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಸರ್ಕಾರದ ಗಮನ ಸೆಳೆಯುವಂತೆ ಒತ್ತಾಯಿಸಿ, ಪ್ರಮುಖ ಬೇಡಿಕೆಗಳ ಮನವಿ ಪತ್ರ ನೀಡಲಾಯಿತು. ಹೆಚ್. ಕಾಂತರಾಜ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿರುವ ಸಮಾಜೋ-ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸರ್ಕಾರ ಕೂಡಲೇ ಸ್ವೀಕರಿಸಿ ಬಹಿರಂಗ ಪಡಿಸಬೇಕು. ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ-2ಎಗೆ ಸೇರ್ಪಡೆ ಗೊಳಿಸಬಾರದು.  ನ್ಯಾಯಮೂರ್ತಿ ಸುಭಾಷ್ ಆಡಿ ಸಮಿತಿಯಿಂದ ಪಂಚಮಸಾಲಿ ವಿಷಯ ಹಿಂಪಡೆಯಬೇಕು. ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸುಮಾರು 70 ಜಾತಿ-ಉಪಜಾತಿಗಳನ್ನು ಸೇರ್ಪಡೆಗೆ ಶಿಫಾರಸ್ಸು ಮಾಡಬೇಕು. ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಅತಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ‌ ನೀಡಬೇಕು. ಸಮಾಜದ ಅಲಕ್ಷಿತ ಅತಿ ಹಿಂದುಳಿದ ಸಮುದಾಯಗಳ ಸಾಮಾಜಿಕ ಸುಧಾರಣೆಗೆ ಸರ್ಕಾರ ಬದ್ಧವಾಗಬೇಕು ಎಂಬ ಬೇಡಿಕೆಗಳನ್ನೊಳಗೊಂಡ ಮನವಿ ನೀಡಲಾಯಿತು.

ಸಭೆಗೂ ಮುನ್ನ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ 2ನೇ ಕಾರ್ಯಕಾರಿ ಮಂಡಳಿ ಸಭೆ ನಡೆಯಿತು. ಇತ್ತೀಚೆಗೆ ನಿಧನರಾದ ಹಿರಿಯ ಮುತ್ಸದ್ದಿ ರಾಜಕಾರಣಿ, ಮಾಜಿ ರಾಜ್ಯ ಮತ್ತು ಕೇಂದ್ರ ಸಚಿವ, ಹಿಂದುಳಿದ ಸಮುದಾಯಗಳ ನಾಯಕ ಆರ್‌.ಎಲ್‌ ಜಾಲಪ್ಪನವರಿಗೆ ಶ್ರದ್ಧಾಂಜಲಿ ಕೋರಲಾಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ಹಾನಗಲ್‌ ಶಾಸಕ ಶ್ರೀನಿವಾಸ್‌ ಮಾನೆ ಮಾತನಾಡಿ, ಸಂಘಟನೆಯಿಂದ ವಂಚಿತರಾಗಿ ಛಿದ್ರವಾಗಿರುವ ಅತಿ ಹಿಂದುಳಿದ ವರ್ಗಗಳಿಗೆ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ವೇದಿಕೆ ದೊಡ್ಡ ಭರವಸೆಯಾಗಿದೆ.

ಮುಂದಿನ ದಿನಗಳಲ್ಲಿ ಅತಿ ಹಿಂದುಳಿದ ವರ್ಗಗಳ ಸರ್ವಾಂಗೀಣ ಅಭಿವೃದ್ಧಿಯ ನಿರೀಕ್ಷೆಯನ್ನು ಖಂಡಿತಾ ಇಟ್ಟುಕೊಳ್ಳಬಹುದು. ಓರ್ವ ಶಾಸನ ಸಭೆಯ ಪ್ರತಿನಿಧಿಯಾಗಿ ಸಂಘಟನೆಗೆ ಸಾಧ್ಯವಿರುವ ಎಲ್ಲಾ ಅಗತ್ಯ ಕೆಲಸಗಳಿಗೂ ಬದ್ಧನಿದ್ದೇನೆ ಎಂದರು.

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಮೊಮ್ಮಗ ಸೂರಜ್, ನಿವೃತ್ತ ಐಎಎಸ್‌ ಅಧಿಕಾರಿ ಶ್ರೀನಿವಾಸ ಆಚಾರಿ, ನಿವೃತ್ತ ಐಎಎಸ್‌ ಅಧಿಕಾರಿ ಎಸ್‌ ಪುಟ್ಟಸ್ವಾಮಿ, ಕೆಎಎಸ್‌ ಅಧಿಕಾರಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆಎನ್‌ ಲಿಂಗಪ್ಪ, ವಿಧಾನ ಪರಿಷತ್‌ ಮಾಜಿ ಶಾಸಕ ತಿಪ್ಪಣ್ಣ, ವೇದಿಕೆಯ ಖಜಾಂಚಿ ಎಲ್‌.ಎ ಮಂಜುನಾಥ್‌, ಪ್ರಧಾನ ಕಾರ್ಯದರ್ಶಿ ಎಂ ನಾಗರಾಜ್‌, ಕಲಗೋಡು ರತ್ನಾಕರ್, ಶೋಭಾ, ಯಲ್ಲಪ್ಪ, ಕೆಎಸ್‌ ದುಶ್ಯಂತ, ಚಂದ್ರಶೇಖರ್‌ ಪಿ, ಮಂಜುನಾಥ್‌ ಎಸ್‌, ಪಲ್ಗುಣ, ಚಿದಾನಂದ ಬಡಿಗೇರಾ, ಕೆಎನ್‌ ಅಶೋಕ, ಶಿವಾನಂದ ಲಕ್ಷ್ಮಣ ಪಾಚಂಗಿ, ಗೋಪಿನಾಥ ರಾಜು, ಎಲ್‌ ಶಿವಶಂಕರ್‌, ಶಿವು ಯಾದವ್‌, ಗೋ ತಿಪ್ಪೇಶ್‌, ಗಣೇಶ್‌ ರಾವ್‌, ವರದರಾಜು, ಸತ್ಯನಾರಾಯಣ ರಾಜು, ದಿನೇಶ್‌ ಅರಸು, ಪದ್ಮನಾಭ್‌, ಚಂದ್ರಾನಾಯಕ್‌, ದೇವರಾಜು, ಶಂಕ್ರಪ್ಪ, ಚೆನ್ನಕೇಶವ ಮುಂತಾದವರು ಉಪಸ್ಥಿತರಿದ್ದರು.

ಗದಗ ಜಿಲ್ಲೆಯಲ್ಲಿ ಜ.19ರವರೆಗೆ ನೈಟ್ ಕರ್ಪ್ಯೂ; ಶುಕ್ರವಾರದಿಂದ ವೀಕೆಂಡ್ ಕರ್ಪ್ಯೂ; ಡಿಸಿ

0

ಧರಣಿ, ರ‌್ಯಾಲಿ ಮತ್ತು ಮುಷ್ಕರ ನಿರ್ಬಂಧ…. ಕೋವಿಡ್ ಲಸಿಕೆ ಕಡ್ಡಾಯ

ವಿಜಯಸಾಕ್ಷಿ ಸುದ್ದಿ, ಗದಗ:

ಇಂದಿನಿಂದ ರಾತ್ರಿ 10 ರಿಂದ ಜ.19ರ ಬೆಳಗ್ಗೆ 5ರವರೆಗೆ ರಾತ್ರಿ ಕರ್ಪ್ಯೂ ಹಾಗೂ ಶುಕ್ರವಾರ (ಜ.6)ದಿಂದ ರಾತ್ರಿ 10 ರಿಂದ ಸೋಮವಾರ ಬೆಳಗಿನ 5 ಗಂಟೆಯವರೆಗೆ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಆದೇಶಿಸಿದ್ದಾರೆ.

ಪ್ರಸ್ತುತ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಅನುಸಾರ ಗದಗ ಜಿಲ್ಲೆಯಾದ್ಯಂತ ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ರಾತ್ರಿ ಕರ್ಪ್ಯೂ ಮುಂದುವರೆಸಲಾಗಿದೆ. ಜ.19ರವರೆಗೆ ಎಲ್ಲಾ ಸರ್ಕಾರಿ ಕಚೇರಿಗಳು ವಾರದಲ್ಲಿ ಐದು ದಿನ ಕಾರ್ಯನಿರ್ವಹಿಸಲಿವೆ.

ಅದರಂತೆ, ಪಬ್, ಕ್ಲಬ್, ರೆಸ್ಟೋರೆಂಟ್, ಬಾರ್, ಹೋಟೆಲ್, ಚಿತ್ರಮಂದಿರ, ರಂಗಮಂದಿರ, ಸಭಾಭವನಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಲ್ಲದೇ, ಕೋವಿಡ್‌ನ ಎರಡೂ ಲಸಿಕೆ ಪಡೆದವರಿಗಷ್ಟೇ ಪ್ರವೇಶಕ್ಕೆ ಅವಕಾಶ ಇರಲಿದೆ.

ಮದುವೆ ಸಮಾರಂಭಗಳಲ್ಲಿ ಹೊರಾಂಗಣದಲ್ಲಿ 200, ಒಳಾಂಗಣದಲ್ಲಿ 100 ಜನರು ಮೀರಬಾರದು. ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದು, ಯಾವುದೇ ಸೇವೆ ಇತ್ಯಾದಿಗಳಿಗೆ ಅವಕಾಶವಿಲ್ಲ. ಜಿಲ್ಲೆಯ ವಾಣಿಜ್ಯ ಸಂಕೀರ್ಣಗಳು, ಎಲ್ಲಾ ಏಕ ಕಟ್ಟಡದಲ್ಲಿನ ಅಂಗಡಿಗಳು ಮತ್ತು ವಾಣಿಜ್ಯ ಸ್ಥಳಗಳು ವಾರದಲ್ಲಿ 5 ದಿನ ಕಾರ್ಯನಿರ್ವಹಿಸಬೇಕು.

ಈಜುಕೊಳ, ಜಿಮ್, ಕ್ರೀಡಾ ಸಂಕೀರ್ಣ, ಆಟದ ಮೈದಾನಗಳಲ್ಲಿ ಶೇ.50ರಷ್ಟು ಜನರಿಗೆ ಅವಕಾಶ ಇರಲಿದೆ. ಜಿಲ್ಲೆಯಲ್ಲಿ ಯಾವುದೇ ರ‍್ಯಾಲಿ, ಧರಣಿ, ಮುಷ್ಕರಗಳನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ನಗರಸಭೆ ಸದಸ್ಯ, ಬೆಂಬಲಿಗರಿಂದ ಗೂಂಡಾಗಿರಿ; ಮನೆಗೆ ನುಗ್ಗಿ ಹಲ್ಲೆ ನಡೆಸಿದ ಕಾಂಗ್ರೆಸ್ ಸದಸ್ಯ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಸದಸ್ಯರಾಗಿ ಇತ್ತೀಚೆಗಷ್ಟೇ ಆಯ್ಕೆಗೊಂಡಿರುವ 18 ವಾರ್ಡಿನ ಕಾಂಗ್ರೆಸ್ ಸದಸ್ಯ ಜೈಲಾಲುದ್ದೀನ ಅಲಿಯಾಸ್ ಜೀವನಸಾಬ ಅಲಿಯಾಸ್ ಜೂನಸಾಬ ನಮಾಜಿ ಜನಪ್ರತಿನಿಧಿಯಾಗಿದ್ದರೂ ತಮ್ಮ ಗೂಂಡಾಗಿರಿ ಪ್ರವೃತ್ತಿ ಮುಂದುವರೆಸಿದ್ದಾರೆ. ಈ ಬಗ್ಗೆ ಮಹಿಳೆಯೋರ್ವರು ನಗಸರಸಭೆ ಸದಸ್ಯನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಡಿ.28 ರಂದೇ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಜವಳಗಲ್ಲಿಯ ಜೈಲಾಲುದ್ದೀನ ಅಲಿಯಾಸ್ ಜೀವನಸಾಬ ಅಲಿಯಾಸ್ ಜೂನಸಾಬ ನಮಾಜಿ(ಎ-1), ಹುಸೇನಸಾಬ ಜೈನಾಪುರ(ಎ-2), ತನ್ವೀರ್ (ಎ-3), ಆಸೀಫ್ ಕರಮುಡಿ (ಎ-4), ಅಬ್ದುಲ್ ಅಣ್ಣಿಗೇರಿ (ಎ-5) ಐವರ ಮೇಲೆ ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದ ಹತ್ತು ವರ್ಷಗಳಿಂದ ಮಹಿಳೆಯೋರ್ವಳ ಕುಟುಂಬದ ಮೇಲೆ ದ್ವೇಷ ಸಾಧಿಸುತ್ತಿದ್ದ ಜೂನಸಾಬ ನಮಾಜಿ ಕಳೆದ ಡಿ.28ರಂದು ನಾಯಿ ಕಚ್ಚಿದೆ ಎಂದು ಸುಳ್ಳು ಆಪಾದನೆ ಮಾಡಿದ್ದನಂತೆ. ಆಗ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಿ ಕಳುಹಿಸಿದ್ದಾರೆ. ಆದರೆ, ಇಷ್ಟಕ್ಕೆ ಸುಮ್ಮನಾಗದ ಆರೋಪಿ ಜೂನಸಾಬ ನಮಾಜಿ ತನ್ನ ಸಂಗಡಿಗರೊಂದಿಗೆ ಮಹಿಳೆಯ ಮನೆಯೊಳಗೆ ನುಗ್ಗಿ ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೇ, ಮಹಿಳೆಯರು ಎನ್ನದೇ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾಳೆ.

ಈ ಹಿಂದೆ ಜೂನಸಾಬ ನಮಾಜಿ ಕತ್ತಿ (ತಲ್ವಾರ್) ಝಳಪಳಿಸುವ ಮೂಲಕ ಸುದ್ದಿಯಾಗಿದ್ದರು. ಇದೀಗ ಅದೇ ಪ್ರವೃತಿ ಮುಂದುವರೆಸಿದ್ದು, ಇವರೇನಾ ಜನಪ್ರತಿನಿಧಿ ಎಂದು ಅವಳಿ ನಗರದ ಜನತೆ ಆಡಿಕೊಳ್ಳುತ್ತಿದ್ದಾರೆ.

ಭೀಕರ ರಸ್ತೆ ಅಪಘಾತ; ದಂಪತಿ ಸ್ಥಳದಲ್ಲಿಯೇ ಸಾವು, 3 ವರ್ಷದ ಕಂದಮ್ಮ ಪಾರು

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಭೀಕರ ರಸ್ತೆ ಅಪಘಾತವೊಂದರಲ್ಲಿ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತರ ಮೂರು ‌ವರ್ಷದ ಕಂದಮ್ಮ ಅಪಾಯದಿಂದ ಪಾರಾದ ಘಟನೆ ಪಟ್ಟಣದ ಸಮೀಪದಲ್ಲಿ ನಿನ್ನೆ ರಾತ್ರಿ ಜರುಗಿದೆ.

ಮೃತರನ್ನು ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದ ಆನಂದ (35) ಹಾಗೂ ಸುಸ್ಮಾ (28) ಎಂದು ಗುರುತಿಸಲಾಗಿದೆ.

ವೇಗವಾಗಿ ಬಂದ ಟಿಪ್ಪರ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ದಂಪತಿ ತಮ್ಮ ಮೂರು ವರ್ಷದ ಮಗುವಿಗೆ ಚಿಕಿತ್ಸೆ ಕೊಡಿಸಲು ಬೆಳವಟಗಿ ಗ್ರಾಮದಿಂದ ನವಲಗುಂದ ಪಟ್ಟಣಕ್ಕೆ ಬರುವಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಮೂರು ವರ್ಷದ ಮಗು, ಇನ್ನೊರ್ವ ಮಂಜುನಾಥ ಎಂಬಾತ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರಸಭೆ ಚುನಾವಣೆ; ನಮ್ಮ ಅಭ್ಯರ್ಥಿಗಳ ಸೋಲಿಗೆ ನಮ್ಮವರೇ ಕಾರಣ; ಪಾಟೀಲ

ಅನಿಲ ಮೆಣಸಿನಕಾಯಿ ಸೋಲಿಗೆ ಕಾರಣ ಯಾರು?

‘ಕೆಲವೆಡೆ ನಮ್ಮವರೇ ನಮ್ಮನ್ನು ಸೋಲಿಸಿದರು!

ವಿಜಯಸಾಕ್ಷಿ ಸುದ್ದಿ, ಗದಗ:

‘ರಾಜಕಾರಣದಲ್ಲಿ ಸೋಲು ಗೆಲುವು ಎರಡು ಶಾಶ್ವತವಲ್ಲ. ಸೋತರೂ ಚುನಾವಣೆ ಮಾಡಬೇಕು. ಏಕೆಂದರೆ, ರಾಜಕೀಯ ಜೀವನದಲ್ಲಿ ಸಾಕಷ್ಟು, ಸೋಲು, ಗೆಲುವು ಕಂಡಿರುವ ನಾನು ಸೋತವರಿಗೆ ಉತ್ತಮ ಉದಾಹರಣೆ. ಆದರೆ, ನಗರಸಭೆ ಚುನಾವಣೆಯಲ್ಲಿ ಕೆಲವು ವಾರ್ಡ್‌ಗಳಲ್ಲಿ ನಮ್ಮವರೇ ನಮ್ಮನ್ನು ಸೋಲಿಸಿದರು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಸೋಮವಾರ ನಗರದ ವಿಠ್ಠಲಾರೂಢ ಸಭಾಭವನದಲ್ಲಿ ನಡೆದ ನೂತನ ನಗರಸಭೆ ಸದಸ್ಯರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ನಗರಸಭೆ ಚುನಾವಣೆ ವೇಳೆ ಕೆಲವೆಡೆ ನಮ್ಮ ಕಾರ್ಯಕರ್ತರು ಪ್ರಚಾರ ಮಾಡಲು ಮುಕ್ತ ಅವಕಾಶ ಇರಲಿಲ್ಲ. ಅಂತಹ ಕಡೆಯೂ, ಮತದಾರರು ನಮ್ಮ ಪಕ್ಷಕ್ಕೆ ಮತ ನೀಡಿದ್ದಾರೆ. ಹೀಗಾಗಿ ಗೂಂಡಾಗಿರಿಗೆ ಹೆದರುವ ಅವಶ್ಯಕತೆ ಇಲ್ಲ ಎಂದರು.

‘ಕೆಲ ಸದಸ್ಯರು ಈಗಾಗಲೇ ಕೆಲಸ ಕಾರ್ಯಗಳನ್ನು ಆರಂಭಿಸಿದ್ದು, ಅಭಿನಂದನೀಯ. ಆದರೆ, ಇದು ಆರಂಭಿಕ ಶೂರತ್ವ ಆಗಬಾರದು. ಸರ್ಕಾರ, ಸಚಿವರು, ಶಾಸಕರು ನಮ್ಮವರಿರುವಾಗ ಕಡು ಬಡವರಿಗೆ ಅನುಕೂಲ ಕಲ್ಪಿಸಬೇಕು. ಕಾರ್ಯಕರ್ತರ ಶ್ರಮ ಮತ್ತು ಬೆಂಬಲದೊಂದಿಗೆ ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಪ್ರತಿಯೊಬ್ಬ ಕಾರ್ಯಕರ್ತನೂ ಮನೆ ಮನೆಗೆ ತೆರಳಿ, ಕಾಂಗ್ರೆಸ್ ವೈಫಲ್ಯವನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಗೆಲುವಿಗೆ ಶ್ರಮಿಸಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಎಂದುವುದನ್ನು ಬಿಜೆಪಿ ತನ್ನ ಸಾಮರ್ಥ್ಯದಿಂದ ತೋರಿಸಿಕೊಟ್ಟಿದ್ದು, ಕಾಂಗ್ರೆಸ್‌ನ ವಿಫಲತೆ ನಮ್ಮ ಸ್ಪಷ್ಟತೆಯಿಂದಾಗಿ ಗೆಲುವು ಸಿಕ್ಕಿದೆ. ಹೀಗಾಗಿ ವಾರ್ಡ್‌ನ ಆದ್ಯತೆಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಶಾಸಕ ಕಳಕಪ್ಪ ಬಂಡಿ ಮಾತನಾಡಿ, ‘ಜಿಲ್ಲೆಯ ರೋಣ, ನರಗುಂದ ಹಾಗೂ ಶಿರಹಟ್ಟಿಯಲ್ಲಿ ಪಕ್ಷ ತೀರ್ಮಾನಿಸುವ ಅಭ್ಯರ್ಥಿ ಪರ ಚುನಾವಣೆ ಮಾಡುತ್ತೇವೆ. ಆದರೆ, ಗದಗಿನಲ್ಲಿ ಚುನಾವಣೆ ಮಾಡುವುದು ಸುಲಭವಲ್ಲ. ನಮ್ಮಲ್ಲಿನ ಅಸಮಾಧಾನ, ಒಮ್ಮತವಿಲ್ಲದ ಕಾರಣ ಕಳೆದ ಎರಡು ಬಾರಿ ಅನಿಲ್ ಮೆಣಸಿನಕಾಯಿ ಸೋತಿದ್ದಾರೆ ಎಂದರು.

‘ಗದಗನಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬುದು ನಗರ ಹಾಗೂ ಗ್ರಾಮೀಣ ಭಾಗದ ಕಟ್ಟ ಕಡೆಯ ಕಾರ್ಯಕರ್ತನ ಅಪೇಕ್ಷೆಯಾಗಿತ್ತು. ಅದರಂತೆ ಅಧಿಕಾರಕ್ಕೆ ಬಂದಿದೆ. ಚುನಾವಣೆಯಲ್ಲಿ ಪಕ್ಷದ ಮತ್ತೊಬ್ಬರಿಗೆ ಅವಕಾಶ ಸಿಕ್ಕಿದ್ದರೆ, ಅದು ನಮಗೆ ಸಿಕ್ಕಿದೆ ಎಂದು ಭಾವಿಸಬೇಕು. ಅಲ್ಲದೇ, ಪಕ್ಷ ನಿಷ್ಠೆ ಹೊಂದುವ ಮೂಲಕ ಜನರ ಜೊತೆ ನಿಕಟ ಸಂಪರ್ಕ ಹೊಂದಿರಬೇಕು. ಜನರ ಸಮಸ್ಯೆಗಳಿಗೆ ಹಂತ ಹಂತವಾಗಿ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಮಾತನಾಡಿ, ‘ಮಿಷನ್-24 ವಾರ್ಡಗಳಲ್ಲಿ ಗೆಲ್ಲುವ ಗುರಿ ಹೊಂದಲಾಗಿತ್ತು. ಆದರೆ, 18ರಲ್ಲಿ ಗೆದ್ದಿದ್ದರೂ ತೃಪ್ತಿ ನೀಡಿಲ್ಲ. ಹೀಗಾಗಿ ಚುನಾವಣೆಯಲ್ಲಿ ಗೆದ್ದವರು ಹಿಗ್ಗಬಾರದು. ಸೋತವರು ಕುಗ್ಗಬಾರದು. ಜಯ ಸಾಧಿಸಿದವರು, ಪರಾಭಾವಗೊಂಡವರು ಒಟ್ಟಾಗಿ ವಾರ್ಡ್‌ಗಳಲ್ಲಿ ಕೆಲಸ ಮಾಡಬೇಕು. ಗೆಲುವಿಗೆ ಕಾರಣಾರಾಗಿರುವ ಜನರಿಗೆ ಕೊಟ್ಟ ಮಾತನ್ನು ಈಡೇರಿಸುವ ಮೂಲಕ ಸಚಿವರ ಗೌರವವನ್ನು ಹೆಚ್ಚಿಸಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಎಂ.ಎಸ್.ಕರಿಗೌಡ್ರ, ರಾಜು ಕುರುಡಗಿ, ಭೀಮಸಿಂಗ್ ರಾಥೋಡ, ರವಿ ದಂಡಿನ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಾಸಕ ರಾಮಣ್ಣ ಲಮಾಣಿ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ್ ಬನ್ಸಾಲಿ ಸೇರಿದಂತೆ ನೂತನ ನಗರಸಭೆ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

‘ಪಕ್ಷದ ಶಾಲು ಕಾರ್ಯಕರ್ತರಿಗೆ ತಂದೆ-ತಾಯಿ ಇದ್ದಂತೆ. ಈ ಶಾಲು ಧರಿಸಿಕೊಂಡು ವಿರೋಧ ಮಾಡಿದರೆ, ವ್ಯಭಿಚಾರ ಮಾಡಿದಂತೆ ಎಂದ ಅವರು, ಸೋತವರು ಧೃತಿಗೆಡುವ ಅಗತ್ಯವಿಲ್ಲ. ಅವರೊಂದಿಗೆ ನಾವೀದ್ದೇವೆ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಜನರು ಗಟ್ಟಿಯಾಗಿ ನಿಂತು ಮತ ನೀಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಮುನ್ನಡೆಸಬೇಕು.

ಸಿ. ಸಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

ಖಾಸಗಿ ಕಾಲೇಜಿನಲ್ಲಿ ಲಸಿಕಾಕರಣಕ್ಕೆ ಚಾಲನೆ; ಬಿಜೆಪಿ ಸಮಾರಂಭವಾಗಿ ಮಾರ್ಪಟ್ಟ ಕಾರ್ಯಕ್ರಮ?

0

*ಬಿಜೆಪಿ ಕಾರ್ಯಕ್ರಮವಾದ ಲಸಿಕಾ ಉದ್ಘಾಟನಾ ಕಾರ್ಯಕ್ರಮ
*ಸಚಿವರನ್ನು ಹಿಂಬಾಲಿಸಿ ಬಂದ ನಗರಸಭೆ ನೂತನ ಚುನಾಯಿತ ಸದಸ್ಯರು
*ಪತ್ರಕರ್ತರಿಗೆ ಮಿಸಲಿದ್ದ ಜಾಗ ಅಕ್ರಮಿಸಿ ಬೇಜಾವಬ್ದಾರಿ ಮರೆತ ಕಮಲ ಸದಸ್ಯರು

ವಿಜಯಸಾಕ್ಷಿ ಸುದ್ದಿ, ಗದಗ:

ಇಲ್ಲಿನ ಆದರ್ಶ ಶಿಕ್ಷಣ ಸಮಿತಿಯ ದೇವದತ್ತ ಶಂಕರರಾವ್ ಕುರ್ತಕೋಟಿ ಮೆಮೊರಿಯಲ್ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ 15-18 ವರ್ಷದ ಮಕ್ಕಳ ಕೋವಿಡ್ ಕೋವ್ಯಾಕ್ಸಿನ್ ಲಸಿಕಾಕರಣಕ್ಕೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಚಾಲನೆ ನೀಡಿದರು.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಒಂದು ಸರ್ಕಾರಿ ಕಾಲೇಜ ಇದ್ದರು ಜಿಲ್ಲಾಡಳಿತಕ್ಕೆ ಖಾಸಗಿ‌ ಕಾಲೇಜುಗಳ ಮೇಲೆ ಮೋಹ ಹೆಚ್ಚಾದಂತೆ ಕಾಣಿಸುತ್ತಿದೆ. ಸರ್ಕಾರದ ಮಹತ್ತರ ಕೋವಿಡ್ ಲಸಿಕಾಕರಣ ಚಾಲನೆ ಕಾರ್ಯಕ್ರಮವನ್ನು ಸರ್ಕಾರಿ‌ ಕಾಲೇಜಿನಲ್ಲಿ ಏರ್ಪಡಿಸಿ ಜಾಗೃತಿ ಮೂಡಿಸುವುದು ಬಿಟ್ಟು ಅವಳಿ ನಗರದ ಅನುದಾನಿತ ಖಾಸಗಿ ಕಾಲೇಜಿನಲ್ಲಿ ಹಮ್ಮಿಕೊಂಡಿರುವುದು ವಿಪರ್ಯಾಸ.

ಇನ್ನು ಲಸಿಕಾ ಉದ್ಘಾಟನಾ ಕಾರ್ಯಕ್ರಮವು ಬಿಜೆಪಿ ಕಾರ್ಯಕ್ರಮವಾಗಿ ಮಾರ್ಪಟ್ಟಿತು. ಸಚಿವರನ್ನು ಹಿಂಬಾಲಿಸಿ ಬಂದ ಗದಗ-ಬೆಟಗೇರಿ ನಗರಸಭೆ ನೂತನ ಚುನಾಯಿತ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ಮಿಸಲಿರಿದ್ದ ಫ್ರಂಟ್ ಲೈನ್ ಜಾಗವನ್ನು ಅಕ್ರಮಿಸಿ ಬೇಜಾವಬ್ದಾರಿತನ ಮರೆತರು.

ಸರ್ಕಾರದ ನಿರ್ದೇಶನದ ಪ್ರಕಾರ ಮಕ್ಕಳ ಪಾಲಕರು ಲಸಿಕೆ ಹಾಕಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ ಕಾಲೇಜುಗಳಲ್ಲಿ‌ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ಸೋಮವಾರ ಲಸಿಕಾಕರಣ ಚಾಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಿದ್ದ ಕಾರಣ ಸರ್ಕಾರಿ ಕಾಲೇಜಿನಲ್ಲಿ ಇನ್ನೂವರೆಗೂ ಪಾಲಕರ ಒಪ್ಪಿಗೆ ಸೂಚಿಸದ ಕಾರಣದಿಂದಾಗಿ ಅನುದಾನಿತ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆರ್ಸಿಎಚ್ ಅಧಿಕಾರಿ ಡಾ.ಬಿ.ಎಂ.ಗೊಜನೂರ ತಿಳಿಸಿದರು. ಆದರೆ, ಸರ್ಕಾರಿ ಕಾಲೇಜುಗಳಲ್ಲಿ ಮಕ್ಕಳ ಪಾಲಕರು ಲಸಿಕೆಗೆ ಸೂಚಿಸಿಲ್ಲ ಎನ್ನುವುದು ಅತ್ಯಂತ ದುರಾದೃಷ್ಟಕರ ಸಂಗತಿ.

ಈ ಸಂದರ್ಭದಲ್ಲಿ ಶಾಸಕ ಎಚ್.ಕೆ.ಪಾಟೀಲ್, ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು, ಸಿಇಒ ಭರತ್, ಎಸ್ಪಿ ಶಿವಪ್ರಕಾಶ್ ದೇವರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಡಿಡಿಪಿಯು ಎಂ.ಎಂ.ಕಾಂಬಳೆ, ನಗರಸಭೆಯ ಸದಸ್ಯ ಸುರೇಶ ಕಟ್ಟಿಮನಿ, ಡಿಎಚ್ ಒ ಡಾ.ಸತೀಶ‌ಬಸರಿಗಿಡದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಗದಗ-ಬೆಟಗೇರಿ ನಗರಸಭೆ ಉಪಾಧ್ಯಕ್ಷ ಪಟ್ಟ ಯಾರಿಗೆ?; ಬಿಜೆಪಿ ಇಬ್ಬರು ಸದಸ್ಯರು ಹೈಜಾಕ್ !

*ಗದಗ-ಬೆಟಗೇರಿ ನಗರಸಭೆ ಉಪಾಧ್ಯಕ್ಷ ಪಟ್ಟಕ್ಕಾಗಿ ಶ್ವೇತಾ ದಂಡಿನ, ಸುನಂದಾ ಬಾಕಳೆ, ಶೈಲಾ ಬಾಕಳೆ ಮಧ್ಯೆ ಪೈಪೋಟಿ

ದುರಗಪ್ಪ ಹೊಸಮನಿ:

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ 14 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಭದ್ರಕೋಟೆ ಬೇಧಿಸಿರುವ ಕಮಲ ಪಡೆಯಲ್ಲೀಗ ಅಧ್ಯಕ್ಷರು ಯಾರಾಗುತ್ತಾರೆ? ಎಂಬ ಬಗ್ಗೆ ಸ್ಪಷ್ಟತೆ ಇದೆ. ಆದರೆ, ಉಪಾಧ್ಯಕ್ಷ ಕುರ್ಚಿ ಯಾರ ಪಾಲಾಗಲಿದೆ ಎಂಬ ಚರ್ಚೆ ಶುರುವಾಗಿದೆ.

ಚುನಾವಣಾ ಪೂರ್ವದಲ್ಲಿಯೇ ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಿದೆ. ಹೀಗಾಗಿ ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆದಿತ್ತು. ಸದ್ಯ 18 ಜನ ಬಿಜೆಪಿ ಸದಸ್ಯರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಉಷಾ ಮಹೇಶ ದಾಸರ ಒಬ್ಬರೇ ಇದ್ದಾರೆ. ಹೀಗಾಗಿ ಯಾರೊಬ್ಬರ ಪೈಪೋಟಿ ಇರದ ಕಾರಣ ಸುಲಭವಾಗಿ ನಗರಸಭೆ ಅಧ್ಯಕ್ಷರಾಗಲಿದ್ದಾರೆ.

ನಗರಸಭೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದೆ. ಬಿಜೆಪಿಯಿಂದ ಆಯ್ಕೆಯಾದ ಸದಸ್ಯರಲ್ಲಿ ಕೆಲವರ ಮಧ್ಯೆ ಉಪಾಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಅದರಲ್ಲಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ರವಿ ದಂಡಿನ ಅವರ ಪುತ್ರಿ 11ನೇ ವಾರ್ಡಿನ ಸದಸ್ಯೆ ಶ್ವೇತಾ ದಂಡಿನ ಹಾಗೂ ಹಿಂದುಳಿದ ವರ್ಗಗಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಬಾಕಳೆ ಅವರ ಪತ್ನಿ 32ನೇ ವಾರ್ಡಿನ ಸುನಂದಾ ಬಾಕಳೆ ಮುಂಚೂಣಿಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರೊಂದಿಗೆ ವೈಯಕ್ತಿಕವಾಗಿ ಉತ್ತಮ ಬಾಂಧವ್ಯ ಹೊಂದಿರುವ ರವಿ ದಂಡಿನ ಅವರು ಮೊದಲ ಬಾರಿಗೆ ರಾಜಕೀಯ ರಂಗ ಪ್ರವೇಶಿಸಿರುವ ತಮ್ಮ ಮಗಳನ್ನು ಉಪಾಧ್ಯಕ್ಷ ಪಟ್ಟದಲ್ಲಿ ಕೂರಿಸಬೇಕೆಂದು ಪಣತೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಅದರಂತೆ, 31ನೇ ವಾರ್ಡಿನ ಶೈಲಾ ನರಸಿಂಗಸಾ ಬಾಕಳೆ ಸಹಿತ ಉಪಾಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದಾರೆ ಎನ್ನಲಾಗುತ್ತಿದ್ದು, ಕೊನೆ ಘಳಿಗೆಯಲ್ಲಿ ಯಾರಿಗೆ ಉಪಾಧ್ಯಕ್ಷ ಪಟ್ಟ ಒಲಿಯಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

ಬಿಜೆಪಿಯ ಇಬ್ಬರು ಸದಸ್ಯರು ಹೈಜಾಕ್?

ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನಗಳಲ್ಲಿ ಗೆಲುವು ಸಾಧಿಸಿ, ಅಧಿಕಾರ ಹಿಡಿಯುವಲ್ಲಿ ಸೋತು ಹತಾಶೆಗೊಂಡಿದೆ. ಹೀಗಾಗಿ ಶತಾಯಗತಾಯ ನಗರಸಭೆ ಆಡಳಿತ ಚುಕ್ಕಾಣಿ ಹಿಡಿಯಲೇಬೇಕೆಂದು ರಣತಂತ್ರ ರೂಪಿಸುತ್ತಿದೆ. ಇತ್ತ ಮ್ಯಾಜಿಕ್ ಸಂಖ್ಯೆ 18 ಸ್ಥಾನಗಳಲ್ಲಿ ಜಯಿಸಿರುವ ಬಿಜೆಪಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಭರ್ಜರಿ ಸಿದ್ಧತೆ ನಡೆಸಿದೆ. ಈ ಬೆನ್ನಲ್ಲೇ ಆಪರೇಷನ್ ಹಸ್ತ ಮೂಲಕ ಬಿಜೆಪಿಯ ಇಬ್ಬರು ಸದಸ್ಯರನ್ನು ಹೇಗಾದರೂ ಮಾಡಿ ತನ್ನತ್ತ ಸೆಳೆಯಲು ಕಾರ್ಯತಂತ್ರ ರೂಪಿಸುತ್ತಿದೆ ಎಂಬ ಮಾತುಗಳು ಅವಳಿ ನಗರದಲ್ಲಿ ಕೇಳಿ ಬರುತ್ತಿದ್ದು, ಇದು ಅವಳಿ ನಗರದ ಜನರಲ್ಲಿ ಹಾಗೂ ನಗರಸಭೆ ಸದಸ್ಯರಲ್ಲಿ ಗೊಂದಲ ಮೂಡಿಸುವ ಸಲುವಾಗಿ ಹಬ್ಬಿರುವ ರೂಮರ್ ಎಂದೂ ಹೇಳಲಾಗುತ್ತಿದೆ.

ಸದ್ಯಕ್ಕೆ ತಟಸ್ಥರಿದ್ದೇವೆ. ನಮ್ಮ ಗೆಲುವಿಗಾಗಿ ತನು ಮನ ಧನದಿಂದ ಶ್ರಮಿಸಿದ ವಾರ್ಡಿನ ಮತದಾರರ, ವಿವಿಧ ಸಮಾಜದ ಮುಖಂಡರ, ಗೆಳೆಯರ, ಬೆಂಬಲಿಗರಮ ಅಭಿಮಾನಿಗಳ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು.

ಮೆಹಬೂಬ(ಚುಮ್ಮಿ) ನದಾಫ್ ಹಾಗೂ ಆಸ್ಮಾ ಮುನ್ನಾ ರೇಶ್ಮಿ, ವಿಜೇತ ಪಕ್ಷೇತರರು

ಇಲ್ಲಿಯವರೆಗೂ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಪಕ್ಷದವರು ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದಕ್ಕೆ ನಮ್ಮ ಸಹಮತವಿರುತ್ತದೆ. ಉಪಾಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಸಿಲ್ಲ. ಪಕ್ಷದ ಹಿರಿಯರು, ಮುಖಂಡರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧವಾಗಿದ್ದೇವೆ.

ರವಿ ದಂಡಿನ, ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಕಾರ್ಯದರ್ಶಿ

ನಾಳೆಯಿಂದ ಗದಗ ಜಿಲ್ಲೆಯ 55,880 ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೋವ್ಯಾಕ್ಸಿನ್ ಲಸಿಕೆ

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯ 15-18 ವರ್ಷದೊಳಗಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನಾಳೆಯಿಂದ(ಜ.3) ಕೋವಿಡ್ ಲಸಿಕೆ ಹಾಕಲಾಗುತ್ತಿದ್ದು, ಸೋಮವಾರ ಲಸಿಕಾಕರಣ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಚಾಲನೆ ನೀಡಲಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 55,880 ಜನ 15-18 ವರ್ಷದೊಳಗಿನ ವಿದ್ಯಾರ್ಥಿಗಳಿದ್ದು, ಲಸಿಕಾರಣಕ್ಕೆ ಆರೋಗ್ಯ ಇಲಾಖೆ 50 ಕಡೆ ಸಿದ್ಧತೆ ಮಾಡಿಕೊಂಡಿದೆ. ಅದರಂತೆ, 14 ಸಾವಿರ ಕೋವ್ಯಾಕ್ಸಿನ್ ಡೋಸ್ ಸಂಗ್ರಹವಿಟ್ಟುಕೊಂಡಿದೆ. ಲಸಿಕಾಕರಣದ ಮೊದಲ ದಿನ 5 ಸಾವಿರ ವಿದ್ಯಾರ್ಥಿಗಳಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕುವ ಗುರಿ ಹೊಂದಿದ್ದು, ಒಂದು ವಾರದೊಳಗೆ ಎಲ್ಲರಿಗೂ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.

ಸೋಮವಾರದಿಂದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೂ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಿದ್ದಾರೆ. ಇನ್ನು ಗೈರಾದ ವಿದ್ಯಾರ್ಥಿಗಳು ಸಮೀಪದ ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಎಂದು ಆರ್ ಸಿಎಚ್ ಅಧಿಕಾರಿ ಡಾ.ಬಿ.ಎಂ.ಗೊಜನೂರ ‘ವಿಜಯಸಾಕ್ಷಿ’ ಗೆ ತಿಳಿಸಿದರು.

ಶಲವಡಿಯಲ್ಲಿ ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ನವಲಗುಂದ:

ತಾಲ್ಲೂಕಿನ ಶಲವಡಿ ಶ್ರೀವೀರಭದ್ರೇಶ್ವರ ಮಹಾ ರಥೋತ್ಸವ ಹಾಗೂ ಲಕ್ಷ ದೀಪೋತ್ಸವ ಅಂಗವಾಗಿ ಡಿ.31 ಮತ್ತು ಜ.1 ರಂದು ಧರ್ಮ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ನರಗುಂದದ ಪತ್ರಿವನಮಠದ ಸ್ವಾಮೀಜಿ ಮತ್ತು ನವಲಗುಂದ ಗವಿಮಠದ ಸ್ವಾಮೀಜಿ, ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ, ಸಾಹಿತಿ ಶ್ರೀಶೈಲ್ ಹುದ್ದಾರ್ ಉಪಸ್ಥಿತರಿದ್ದರು.

ನಗರಸಭೆ ಬಿಜೆಪಿ ಸದಸ್ಯೆಯ ಕಾರು ಡಿಕ್ಕಿ; ಮಹಾಲಕ್ಷ್ಮಿ ದೇವಸ್ಥಾನ ಧ್ವಂಸ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಬೆಟಗೇರಿ ನಗರಸಭೆಗೆ ನೂತನವಾಗಿ ಆಯ್ಕೆಯಾಗಿರುವ 32ನೇ ವಾರ್ಡಿನ ಬಿಜೆಪಿ ಸದಸ್ಯೆಯ ಕಾರು ಡಿಕ್ಕಿ ಹೊಡೆದ ಪರಿಣಾಮ ದೇವಸ್ಥಾನ ಧ್ವಂಸಗೊಂಡಿರುವ ಘಟನೆ ಗುರುವಾರ ಮಧ್ಯೆರಾತ್ರಿ ಅವಳಿ ನಗರದ ಟಾಂಗಾಕೂಟ ಬಳಿ ನಡೆದಿದೆ.

ಬಿಜೆಪಿ ಸದಸ್ಯೆ ಸುನಂದಾ ಪ್ರಕಾಶ್ ಬಾಕಳೆಗೆ ಸೇರಿದ (ಕೆಎ 26 ಎನ್ 2360) ಕಾರನ್ನು ಸುನಂದಾ ಅವರ ಪುತ್ರ ಚಲಾಯಿಸುತ್ತಿದ್ದ ಎನ್ನಲಾಗಿದೆ.

ಕಾರು ಮೊದಲಿಗೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡಿದಿದ್ದು, ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮುರಿದಿದೆ. ಬಳಿಕ ಪುರಾತನ ಕಾಲದ ಹಳೆಯ ಮಹಾಲಕ್ಷ್ಮಿ ಗುಡಿ ಧ್ವಂಸವಾಗಿದೆ.

ಇನ್ನು ಘಟನೆಯ ಭೀಕರತೆ ನೋಡಿದರೆ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಇದುವರೆಗೂ ಪ್ರಕರಣ ದಾಖಲಾಗಿಲ್ಲ.

error: Content is protected !!