Home Blog Page 3218

ಸಾವರ್ಕರ್ ಬಗ್ಗೆ ಮಾತಾಡೋರು ಅವ್ರ ಚಪ್ಪಲಿ ಕಿಮ್ಮತ್ತಿಗೂ ಬರಲ್ಲ; ಬಸನಗೌಡ ಯತ್ನಾಳ

ವಿಜಯಸಾಕ್ಷಿ ಸುದ್ದಿ, ಗದಗ

ಸಾವರ್ಕರ್ ಬಗ್ಗೆ ಮಾತನಾಡುವವರು ಅವರ ಚಪ್ಪಲಿ ಕಿಮ್ಮತ್ತು ಆಗಲ್ಲಾ, ಅವರ ತಪಸ್ಸಿನ ಬಗ್ಗೆ ಮಾತನಾಡುತ್ತೀರಾ ಎಂದು ಬಸನಗೌಡ ಯತ್ನಾಳ ಟಾಂಗ್ ನೀಡಿದ್ದಾರೆ.

ಅವರು, ಗದಗ ಕಾಟನ್ ಮಾರ್ಕೆಟ್ ರಸ್ತೆಯ ಹಿಂದೂ ಮಹಾ ಗಣಪತಿ ನೇತೃತ್ವದ ಧರ್ಮಸಭೆಯಲ್ಲಿ ಪಾಲ್ಗೊಂಡು ಯತ್ನಾಳ ಮಾತನಾಡಿದರು.

ಸಾವರ್ಕರ್ ಬಗ್ಗೆ ಮಾತನಾಡುವವರು ಅವರ ಚಪ್ಪಲಿ ಕಿಮ್ಮತ್ತಿಗೂ ಬರಲ್ಲ. ದೇಶದಲ್ಲಿನ ಸಾವರ್ಕರ್ ವಿರೋಧಿಗಳಿಗೆ ಒಂದು ಸವಾಲು ಹಾಕುತ್ತೀನಿ. ಇವರೆಲ್ಲ ತಾಕತ್ತಿದ್ದರೆ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಸಾರ್ವಕರ್ ಅವರನ್ನು ಇಡಲಾಗಿದ್ದ ಜೈಲಿನಲ್ಲಿ ಒಂದು ವಾರ ಇದ್ದು, ಕಾಲಪಾನಿ ಶಿಕ್ಷೆಗೆ ಒಳಗಾಗಿ ಇದ್ದು ಬರಲಿ. ಅಪ್ಪನಿಗೆ ಹುಟ್ಟಿದ್ದರೆ ಒಂದು ವಾರ ಅಲ್ಲಿರಬೇಕೆಂದು ಯತ್ನಾಳ ಸವಾಲು ಹಾಕಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ಪದೇ ಪದೇ ಹಿಂದೂ ಯುವಕರ ಹತ್ಯೆ ನಡೆಯುತ್ತಿದ್ದು, ರಾಜ್ಯಕ್ಕೆ ಸಮರ್ಥ ಗೃಹ ಸಚಿವರ ಅವಶ್ಯಕತೆ ಇದೆ ಎಂದು ಯತ್ನಾಳ ಅಭಿಪ್ರಾಯಪಟ್ಟಿದ್ದಾರೆ.

ನನ್ನಂತವರು ರಾಜ್ಯದ ಗೃಹ ಸಚಿವರಾದರೆ, ಹಿಂದೂ ಯುವಕರ ಹತ್ಯೆ ಮಾಡುತ್ತಿರುವರರ ಮೇಲೆ ಕಂಡಲ್ಲಿ ಗುಂಡಿಕ್ಕುವ ಆದೇಶ ಹೊರಡಿಸುತ್ತಿದ್ದೆ. ಹಿಂದೂಗಳ ರಕ್ಷಣೆಗೆ ನನ್ನಂತಹ ಸಮರ್ಥ ರಾಜ್ಯದ ಗೃಹ ಸಚಿವರಾಗಬೇಕು ಎಂದು ಯತ್ನಾಳ ಏರು ಧ್ವನಿಯಲ್ಲಿ ಹೇಳಿದರು.

ಯತ್ನಾಳ ಅವರ ಈ ಮಾತಿಗೆ ಸಭಿಕರು ಸಿಳ್ಳೆ ಹೊಡೆದು ಬೆಂಬಲ ಸೂಚಿಸಿದರು.

ದೇಶದಲ್ಲಿ ಗಣೇಶ ಹಬ್ಬಕ್ಕೆ ಯಾವುದೇ ಪರವಾನಗಿ ಬೇಕಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಸಿಗುವಲ್ಲಿ ಗಣೇಶ ಹಬ್ಬದ ಪಾತ್ರವೂ ಇದೆ. ಬಾಲಗಂಗಾಧರ ತಿಲಕ್‌ ಅವರು ಸಾರ್ವಜನಿಕ ಗಣೇಶ ಹಬ್ಬ ಆಚರಣೆಗ ಆರಂಭಿಸುವ ಮೂಲಕ, ಹಿಂದೂ ಸಮಾಜವನ್ನು ಒಟ್ಟುಗೂಡಿಸಿದರು ಎಂದರು.

ಉಪವಾಸ ಸತ್ಯಾಗ್ರಹದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿಲ್ಲ ಎಂಬ ಸತ್ಯವನ್ನು ನಾವು ಅರಿಯಬೇಕಿದೆ. ಭಾರತ ಮಾತೆಯ ವೀರ ಪುತ್ರರು ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ರಕ್ತ ಚೆಲ್ಲಿದ ಫಲವಾಗಿ, ನಮಗೆ ಸ್ವಾತಂತ್ರ್ಯ ಲಭಿಸಿದೆ.‌ ದೇಶಕ್ಕೆ ನೆಹರೂ, ರಾಜೀವ್ ಗಾಂಧಿ, ಇಂದಿರಾ ಗಾಂಧಿ ಕೊಡುಗೆ ಶೂನ್ಯ. ಆದರೂ ಇವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದು, ನಮ್ಮ ದುರದೃಷ್ಟಕರ ಎಂದು ಯತ್ನಾಳ ತೀವ್ರ ವಾಗ್ದಾಳಿ ನಡೆಸಿದರು.

ಭಾರತದ ಉಳಿವಿಗಾಗಿ ಹಿಂದೂ ಸಮಾಜ ಒಂದಾಗಬೇಕಿದೆ. ಹಿಂದೂ ಸಮಾಜ ಎಚ್ಚೆತ್ತುಕೊಂಡರೆ, ಈ ದೇಶವನ್ನು ತುಂಡು ಮಾಡಲು ಪ್ರಯತ್ನಿಸುತ್ತಿರುವ ದುಷ್ಟ ಶಕ್ತಿಗಳಿಗೆ ಸೋಲಾಗಲಿದೆ. ಹಿಂದೂ ಸಮಾಜದ ಒಳಿತಿಗಾಗಿ ತಾವು ಹೋರಾಟ ಮುಂದುವರೆಸುವುದಾಗಿ ಯತ್ನಾಳ ಇದೇ ವೇಳೆ ಘೋಷಿಸಿದರು.

ಬಳಿಕ ಬಾಲಿವುಡ್ ಸ್ಟಾರ್​​ಗಳಾದ ಅಮೀರ್​​ ಖಾನ್​, ಶಾರುಖ್​​ ಖಾನ್, ಸಲ್ಮಾನ ಖಾನ್, ಸೈಫ್​​ ಅಲಿಖಾನ್ ಪಾಕಿಸ್ತಾನದ ಏಜೆಂಟರಾಗಿದ್ದಾರೆ ಎಂದು ಶಾಸಕ ಯತ್ನಾಳ್​​ ಕಿಡಿಕಾರಿದರು. ಭಾರತದ ಅನ್ನ ತಿಂದು ಪಾಕಿಸ್ತಾನ ಪರ ವಕಲಾತು ವಹಿಸುತ್ತಾರೆ. ನಮ್ಮ ಸಿನೆಮಾ ಪ್ರಿಯರು ಸಿನೆಮಾ ನೋಡುವುದರಿಂದ ಈಗ ಇವರು ದೊಡ್ಡ ಬಂಗಲೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದರು. ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಮಾಜಿ ಪ್ರಧಾನಿ ನೆಹರು ಭಾವಚಿತ್ರ ಕೈ ಬಿಟ್ಟಿರುವುದನ್ನು ಸಮರ್ಥಿಸಿಕೊಂಡ ಯತ್ನಾಳ, ನೆಹರು ಕೊಡುಗೆ ದೇಶಕ್ಕೆ ಏನಾದರು ಇದೆಯಾ? ನಿಜವಾಗಿ ದೇಶದ ಪ್ರಧಾನಿ ನೇತಾಜಿ ಸುಭಾಷ್​​ ಚಂದ್ರ ಬೋಸ್ ಎಂದರು. ಗಾಂಧೀಜಿ ಹಠಕ್ಕೆ ಬಿದ್ದ ಕಾರಣ ನೆಹರು ಪ್ರಧಾನಿಯಾದರೇ ಹೊರತು ಯಾರಿಗೂ ಇಷ್ಟವಿರಲಿಲ್ಲ ಎಂದರು.

ಸುಮಾರು ಏಳು ದಶಕಗಳ ಬಳಿಕ ಚೀತಾ ಭಾರತಕ್ಕೆ ಮರು ಪ್ರವೇಶಿಸಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಹುಟ್ಟುಹಬ್ಬದಂದೇ ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳ ಮರುಪರಿಚಯ ಯೋಜನೆಯಡಿ 70 ವರ್ಷಗಳ ಬಳಿಕ ಚೀತಾಗಳ ಪರಿಚಯಸಿದ್ದಾರೆ.

ಚೀತಾಗಳನ್ನು ಭಾರತಕ್ಕೆ ತರುವುದರ ಮೂಲಕ ಚೀತಾ ಸಂತತಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಆದ್ರೆ ಕಾಂಗ್ರೆಸ್ ನವರು ಭಾರತ ಜೋಡು ಯಾತ್ರೆ ಮಾಡುತ್ತಿದ್ದಾರೆ. ಅದು ಭಾರತ ತೋಡೋ ಯಾತ್ರೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸುಪ್ರೀಂ ಕೋರ್ಟಿನ ಆದೇಶ ಮಸೀದಿ ಮೇಲಿನ ಮೈಕ್ ಗೂ ಇದೆ, ಗಣಪತಿಗೂ ಇದೆ. ಮಸೀದಿ ಮೇಲಿನ ಮೈಕ್ ಯಾವಾಗ ಬಂದ್ ಆಗುತ್ತದೆಯೋ ಅಂದು ಗಣಪತಿ ಮುಂದಿನ ಡಿಜೆ ಬಂದ್ ಆಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಈಶ್ವರಸಿಂಗ್ ಠಾಕೂರ್, ರವಿ ಶಿದ್ಲಿಂಗ ಹಾಗೂ ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಬೊಮ್ಮಾಯಿಯವರನ್ನ ಟಾರ್ಗೆಟ್ ಮಾಡಿರುವ ಮೃತ್ಯುಂಜಯ ಶ್ರೀಗಳ ನಡೆ ಖಂಡನೀಯ; ಸಚಿವ ಪಾಟೀಲ

ವಿಜಯಸಾಕ್ಷಿ ಸುದ್ದಿ, ಗದಗ

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಕೆನ್ನುವ ಸಮಾಜದ‌ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮಿಗಳ ಹೋರಾಟ ಸ್ವಾಗತಾರ್ಹ. ಆದರೆ ಪೂಜ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಟಾರ್ಗೆಟ್ ಮಾಡುವ ನಡೆಯನ್ನು ಖಂಡಿಸುತ್ತೇನೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಸಿಎಂ ಬಸವರಾಜ ಬೊಮ್ಮಾಯಿ‌ ಅವರಿಗೆ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಬೇಡಿಕೆ ಕುರಿತು ಪ್ರಾಮಾಣಿಕ ಕಳಕಳಿ ಇದೆ. ಶ್ರೀಗಳು ಇದಕ್ಕಾಗಿ ಹೋರಾಟ ಮಾಡಲಿ, ಆದ್ರೆ ಸಿಎಂ ಅವರನ್ನು ಯಾಕೆ ಟಾರ್ಗೆಟ್ ಮಾಡ್ತಾರೆ ಎನ್ನುವುದು ನನ್ನ ಮಿಲಿಯನ್ ಡಾಲರ್ ಪ್ರಶ್ನೆ ಎಂದರು.

ಸಿಎಂ ಮನೆ ಮುಂದೆ ಯಾಕೇ ಧರಣಿ? ಅವರ ಕ್ಷೇತ್ರದಲ್ಲಿ ಸತ್ಯಾಗ್ರಹ ಯಾಕೆ? ಈ ಹಿಂದೆ ಅವರ ಹೋರಾಟಕ್ಕೆ ನಾವು ಬೆಂಬಲ ನೀಡಿದ್ದೇವೆ. ನಾವು ಕೂಡಾ ಸಾಕಷ್ಟು ಖರ್ಚು ಮಾಡಿ, ಪಾದಯಾತ್ರೆಗೆ ಜನರನ್ನು ಕಳಿಸಿದ್ದೇವೆ.
ಈಗ ಒಬ್ಬಿಬ್ಬರ ಮಾತು ಕೇಳಿಕೊಂಡು ಸಿಎಂ ಮನೆ ಮುಂದೆ ಹೋರಾಟ ಅಂತಾರೆ. ಶ್ರೀಗಳಿಗೆ ಭಕ್ತಿ, ನಮ್ರತೆಯಿಂದ ತಿಳಿಸಿ ಹೇಳಿದ್ದೇನೆ. ಸಮಾಜ ಎಂದರೆ ಒಬ್ಬಿಬ್ಬರ ಮಾತು ಕೇಳಿಕೊಂಡು, ನಿರ್ಧಾರ ಮಾಡೋದಲ್ಲ, ಸಮಾಜದ‌ ನಾಲ್ಕಾರು ಹಿರಿಯರ ಜೊತೆ ಸಮಾಲೋಚಿಸಿ ಮುಂದಿನ ನಡೆ‌ ತೀರ್ಮಾನಿಸಬೇಕು. ಬೊಮ್ಮಾಯಿಯವರ ಮನೆ ಮುಂದೆ ಶ್ರೀಗಳ ಹೋರಾಟವನ್ನು ವಿರೋಧಿಸುತ್ತೇನೆ ಎಂದರು.

ಪೊಲೀಸರ ಭರ್ಜರಿ ಕಾರ್ಯಾಚರಣೆ; ಗಾಂಜಾ ಬೆಳೆದಿದ್ದ ಇಬ್ಬರು ಸಹೋದರರ ಬಂಧನ

0

ವಿಜಯಸಾಕ್ಷಿ ಸುದ್ದಿ, ಗದಗ

ಈರುಳ್ಳಿ, ಮೆಣಸಿನಕಾಯಿ ಬೆಳೆಯಲ್ಲಿ ಗಾಂಜಾ ಗಿಡ ಬೆಳೆದಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ರೋಣ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಸಹೋದರರನ್ನು ವಶಕ್ಕೆ ಪಡೆದು, 80 ಸಾವಿರ ರೂ. ಮೌಲ್ಯದ ಐವತ್ತು ಗಾಂಜಾ ಗಿಡ ಜಪ್ತಿ ಮಾಡಿದ್ದಾರೆ.

ರೋಣ ತಾಲೂಕಿನ ಮಲ್ಲಾಪೂರ ಗ್ರಾಮದ ಹದ್ದಿನಲ್ಲಿ ಇರುವ ಜಮೀನಿನಲ್ಲಿ ಗಾಂಜಾ ಗಿಡ ಬೆಳೆದ ಆರೋಪದಲ್ಲಿ ಮಲ್ಲನಗೌಡ ಭರಮಗೌಡ ಹಾಗೂ ಚಂದ್ರಗೌಡ ಭರಮಗೌಡ ಎಂಬುವರನ್ನು ರೋಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಿಎಸ್ಐ ಚಂದ್ರಶೇಖರ ಹೆರಕಲ್ಲ‌ ನೇತೃತ್ವದಲ್ಲಿ ಸಿಬ್ಬಂದಿ ಈ ದಾಳಿ ಮಾಡಿದ್ದರು. 80 ಸಾವಿರ ರೂ. ಮೌಲ್ಯದ 16 ಕೆ.ಜಿ ತೂಕದ 50 ಗಿಡ ಜಪ್ತಿ ಮಾಡಿದ್ದು, 186/2022 ಕಲಂ 20: (ಎ)ಎನ್ ಡಿ ಪಿ ಎಸ್ ಆ್ಯಕ್ಟ್ 1985 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ತೋಟದಲ್ಲಿ ಚಿರತೆ ಪ್ರತ್ಯಕ್ಷ; ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ

ತಾಲೂಕಿನ ಕಳಸಾಪೂರ ಗ್ರಾಮದ ತೋಟವೊಂದರಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವೊಂದು ಸ್ಥಳಕ್ಕೆ ದೌಡಾಯಿಸಿದೆ.

ಗುರುವಾರದಂದು ಕಳಸಾಪೂರ ಗ್ರಾಮದಿಂದ ನಾಗಾವಿ ಗ್ರಾಮಕ್ಕೆ ಹೋಗುವ ದಾರಿಯಲ್ಲಿ ಇರುವ ಹಳ್ಳವೊಂದರ ಪಕ್ಕದ ರಾಮನಗೌಡ ಎಂಬುವವರ ತೋಟದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂಬ 26 ಸೆಕೆಂಡ್ ಇರುವ ವಿಡಿಯೋ ಒಂದು ನಿನ್ನೆ ಇಡೀ ದಿನ‌ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನಂತರ ಕಬಲಾಯತಕಟ್ಟಿ ತಾಂಡಾದಲ್ಲೂ ಅಂದೇ ರಾತ್ರಿ ಕಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ರೀತಿ ವಿಡಿಯೋ ಹರದಾಡಿದ ಪರಿಣಾಮ ಕಳಸಾಪೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರಲ್ಲಿ ಭೀತಿ ಆವರಿಸಿದೆ.

ಕಳಸಾಪೂರ ಗ್ರಾಮ ಪಂಚಾಯತಿ ಕೂಡ ಡಂಗೂರು ಸಾರಿದ್ದು, ಗ್ರಾಮಸ್ಥರಲ್ಲಿ ಒಬ್ಬಂಟಿಯಾಗಿ ತಿರುಗದಂತೆ ಮನವಿ ಮಾಡಿದೆ.

ಕಳಸಾಪೂರ ಗ್ರಾಮಕ್ಕೆ ಭೇಟಿ ನೀಡಿರುವ ಗದಗ ತಾಲೂಕಿನ ವಲಯ ಅರಣ್ಯಾಧಿಕಾರಿ ಮಂಜುನಾಥ್ ಮೇಗಲಮನಿ ಹಾಗೂ ಸಿಬ್ಬಂದಿ, ತೋಟದಲ್ಲಿ ಚಿರತೆ ನಡೆದಾಡಿರುವ ಹೆಜ್ಜೆ ಗುರುತುಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ವಲಯ ಅರಣ್ಯಾಧಿಕಾರಿ ಮಂಜುನಾಥ್ ಮೇಗಲಮನಿ, ಡಿಎಫ್ ಓ ಅವರ ಆದೇಶದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗುರುವಾರ ದಿನ ಈ ಚಿರತೆ ಕಂಡು ಬಂದಿದೆ ಎಂದು ಗ್ರಾಮದ ರಾಮನಗೌಡ್ರ ಎಂಬುವವರು ಮಾಹಿತಿ ನೀಡಿದ್ದಾರೆ. ವಿಡಿಯೋದಲ್ಲಿ ನೋಡಿದ ಹಾಗೇ ಮೇಲ್ನೋಟಕ್ಕೆ ಚಿರತೆ ಕಂಡು ಬಂದಿದೆ. ಆ ಕುರಿತು ಇನ್ನೂ ಪರಿಶೀಲನೆ ನಡೆಸಿದ್ದೇವೆ ಎಂದರು.

ಕಪ್ಪತಗುಡ್ಡದಿಂದ ಈ ಚಿರತೆ ಬಂದಿದ್ದು, ಮತ್ತೆ ಮರಳಿ ಹೋಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಜನ ಭಯಪಡದೇ ಇರಲು ಮನವಿ ಮಾಡಿರುವ ಅಧಿಕಾರಿಗಳು, ದಿನವೂ ಮುಂಜಾನೆ ಹಾಗೂ ಸಂಜೆ ಕಳಸಾಪೂರ, ಕಬಲಾಯತಕಟ್ಟಿ ಗ್ರಾಮಗಳಲ್ಲಿ ಅರಣ್ಯ ಇಲಾಖೆಯ ತಂಡವೊಂದು ಗಸ್ತು ತಿರುಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟಂಟಂ ಪಲ್ಟಿ: ಯುವಕ ಸ್ಥಳದಲ್ಲಿಯೇ ಸಾವು, ಆರು ಜನರಿಗೆ ಗಾಯ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ

ಟಂಟಂ ಪಲ್ಟಿಯಾಗಿ ಪ್ರಯಾಣಿಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟು, ಆರು ಜನ ಗಾಯಗೊಂಡ ಘಟನೆ ಗಜೇಂದ್ರಗಡ ತಾಲೂಕಿನ ಬೈರಾಪುರ ಕ್ರಾಸ್ ಬಳಿ ಗುರುವಾರ ನಡೆದಿದೆ.

ಬೈರಾಪುರ ಗ್ರಾಮದ ಶರಣಪ್ಪ (24) ಮೃತಪಟ್ಟವರು. ಗಾಯಗೊಂಡಿರುವ ಆರು ಜನರ ಪೈಕಿ ಮೂವರು ಜಿಲ್ಲಾಸ್ಪತ್ರೆ, ಉಳಿದವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟಂಟಂ ಬೈರಾಪುರ ಗ್ರಾಮದಿಂದ ಗಜೇಂದ್ರಗಡ ತೆರಳುತ್ತಿದ್ದಾಗ ಬೈರಾಪುರ ಕ್ರಾಸ್ ಬಳಿ ಟಂಟಂ ಪಲ್ಟಿಯಾಗಿದೆ.

ಸುದ್ದಿ ತಿಳಿಯುತ್ತಲೇ ಸಂಬಂಧಿಕರು ಸ್ಥಳಕ್ಕೆ ಆಗಮಿಸಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಗಜೇಂದ್ರಗಡ ಠಾಣೆ ಪಿಎಸ್‌ಐ ರಾಘವೇಂದ್ರ ಎಸ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ‌ದಾಖಲು ಮಾಡಿಕೊಂಡಿದ್ದಾರೆ.

ಸೈಬರ್ ಪೊಲೀಸರ ಕಾರ್ಯಾಚರಣೆ; ಮೋಸ ಮಾಡಿದ್ದ ಆರೋಪಿ ಬಲೆಗೆ; 3.39 ಲಕ್ಷ ರೂ. ಜಪ್ತಿ

0

ವಿಜಯಸಾಕ್ಷಿ ಸುದ್ದಿ, ಗದಗ

ಇಂಡಿಯಾ ಮಾರ್ಟ್ ಜಾಲತಾಣದಲ್ಲಿ ಖರೀದಿಸುವ ಉದ್ದೇಶದಿಂದ ಸ್ಟೀಲ್ ಮಟೀರಿಯಲ್ ಪರಿಶೀಲಿಸಿದಾಗ, ಅಪರಿಚಿತ ವ್ಯಕ್ತಿಯೊಬ್ಬ ಕರೆಮಾಡಿ, ಸ್ಟೀಲ್ ವಸ್ತುಗಳನ್ನು ನಿಮ್ಮ ಮನೆ ಬಾಗಿಲಿಗೆ ಒದಗಿಸುತ್ತೇನೆ ಎಂದು ತನ್ನ ಖಾತೆಗೆ ಲಕ್ಷಾಂತರ ರೂ. ಹಣ ವರ್ಗಾಯಿಸುವಂತೆ ಹೇಳಿ, ಹಣವನ್ನು ಪಡೆದುಕೊಂಡು ಮೋಸ ಮಾಡಿರುವ ಕುರಿತು ದಾಖಲಾಗಿದ್ದ ಪ್ರಕರಣವನ್ನು ಗದಗ ಸಿಇಎನ್ ಪೊಲೀಸರು ಬೇಧಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಗದಗ ಪೊಲೀಸ್ ಅಧೀಕ್ಷಕರು ಮಾಹಿತಿ ನೀಡಿದ್ದಾರೆ.

ಪ್ರಕರಣದ ವಿವರ

2021ರ ಅಕ್ಟೋಬರ್ 4ರಂದು ದೂರುದಾರ ಶಿರಹಟ್ಟಿ ತಾಲೂಕಿನ ತಾರಿಕೊಪ್ಪ ಗ್ರಾಮದ ಗುತ್ತಿಗೆದಾರ ವಿನಾಯಕ ಮಂಜುನಾಥಗೌಡ ಪಾಟೀಲ, ಇಂಡಿಯಾ ಮಾರ್ಟ್ ಎಂಬ ಜಾಲತಾಣದಲ್ಲಿ 4 ಎಂಎಂ ಸ್ಟೀಲ್ ಮಟೀರಿಯಲ್ ಪರೀಕ್ಷಿಸಿದ್ದರು.

ನಂತರ ದೂರುದಾರರ ಮೊಬೈಲ್ ಸಂಖ್ಯೆಗೆ ಕರೆಮಾಡಿದ ಅಪರಿಚಿತ ವ್ಯಕ್ತಿಯೊಬ್ಬ, ನಿಮಗೆ ಎಷ್ಟು ಮಟೀರಿಯಲ್ ಬೇಕಾಗಿದೆ ಎಂದು ವಿಚಾರಿಸಿ, ಬೇಡಿಕೆಯಿರುವ 6 ಟನ್ ಮೆಟೀರಿಯಲ್ಸ್ ಗೆ 2,54,880 ರೂ. ಮೊತ್ತವಾಗುತ್ತದೆ ಎಂದು ತಿಳಿಸಿ, ಖಾತೆಗೆ ಈ ಹಣವನ್ನು ಜಮಾ ಮಾಡಿದರೆ ನಿಮ್ಮ ವಿಳಾಸಕ್ಕೆ ನಾಳೆಯೇ ಮಟೀರಿಯಲ್ ಕಳಿಸುತ್ತೇವೆ ಎಂದು ನಂಬಿಸಿದ್ದ.

ದೂರುದಾರರು ಅವರು ತಿಳಿಸಿದ ಖಾತೆಗೆ ಹಣ ಜಮಾ ಮಾಡಿದ ನಂತರ, ನೀವು ತಿಳಿಸಿದಂತೆ 6 ಟನ್ ಮಟೀರಿಯಲ್ ಕಳಿಸಲು ಆಗುವದಿಲ್ಲ, 10 ಟನ್ ಆದರೆ ಕಳಿಸುತ್ತೇವೆ, ಮತ್ತೆ 4 ಟನ್ ಆರ್ಡರ್ ಮಾಡಿ, ಈಗ 2 ಟನ್ ಮಟೀರಿಯಲ್ ಹಣವನ್ನು ಖಾತೆಗೆ ಜಮಾ ಮಾಡಿ, ಉಳಿದ 2 ಟನ್ ಮಟೀರಿಯಲ್ ಮೊತ್ತವನ್ನು ಮಟೀರಿಯಲ್ ತಲುಪಿದ ಮೇಲೆ ಹಾಕಿ ಎಂದು ನಂಬಿಸಿ, 28-9-2021ರಂದು 85 ಸಾವಿರ ರೂ. ಸೇರಿ ಒಟ್ಟೂ 3,39,880 ರೂ. ಹಣವನ್ನು ಖಾತೆಗೆ ಹಾಕಿಸಿಕೊಂಡು ಮಟೀರಿಯಲ್ ಕಳಿಸಿಕೊಡದೇ, ಫೋನ್ ಕರೆಯನ್ನೂ ಸ್ವೀಕರಿಸದೇ ಮೋಸ ಮಾಡಿದ್ದಾರೆ ಎಂದು ಗದಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕಲಂ: 66 (ಸಿ)(ಡಿ) ಐ.ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಸದರಿ ಪ್ರಕರಣದ ಕುರಿತು ಡಿಸಿ ಆರ್ ಬಿ ಡಿಎಸ್ಪಿ ತಮ್ಮರಾಯ ಪಾಟೀಲ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆಯ ಪಿಐ ಮಹಾಂತೇಶ.ಟಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಸ್.ಬಿ. ಪಮ್ಮಾರ, ಎಸ್.ಎಚ್. ಅಂಗಡಿ, ಎಫ್.ಆರ್. ಕಂತಿ ಒಳಗೊಂಡ ವಿಶೇಷ ತಂಡವನ್ನು ರಚಿಸಿ, ಕಾರ್ಯಚರಣೆ ನಡೆಸಿ, ಪ್ರಕರಣವನ್ನು ಬೇಧಿಸಿ, ಮುಂಬೈ ಮೂಲದ ಆರೋಪಿ ಪ್ರದೀಪ ಓಂಪ್ರಕಾಶ ದುಬೆ ಎಂಬುವನನ್ನು ಸೆ.12ರಂದು ಪತ್ತೆಮಾಡಿ ಬಂಧಿಸಿದ್ದಾರೆ.

ಆರೋಪಿತನಿಂದ 2.5 ಲಕ್ಷ ರೂ. ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಸದರಿ ಪ್ರಕರಣವನ್ನು ಬೇಧಿಸಿ, ಆರೋಪಿಯನ್ನು ಪತ್ತೆಮಾಡಿ, ಕಾನೂನಿನನ್ವಯ ಕ್ರಮ ಜರುಗಿಸಿದ ತನಿಖಾಧಿಕಾರಿಗಳಿಗೆ ಹಾಗೂ ಗದಗ ಸಿಇಎನ್ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಶ್ಲಾಘಿಸಿದ್ದಾರೆ.

ಇತ್ತೀಚೆಗೆ ಸೈಬರ್ ಜಾಲತಾಣಗಳ ಮೂಲಕ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವಂಚನೆಗೊಳಗಾಗುತ್ತಿದ್ದು, ಯಾವ ಕಾರಣಕ್ಕೂ ತಮ್ಮ ವೈಯಕ್ತಿಕ ಹಾಗೂ ಇತರ ಮಾಹಿತಿಗಳನ್ನು ಅಪರಿಚಿತ ವ್ಯಕ್ತಿಗಳಿಗೆ ನೀಡದಂತೆ ವಿನಂತಿಸಿದ್ದು, ಯಾರಾದರೂ ಸೈಬರ್ ವಂಚನೆಗೆ ಒಳಗಾದಲ್ಲಿ ನೇರವಾಗಿ ಅಥವಾ 112/1930 ಮುಖಾಂತರ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಲು ಮನವಿ ಮಾಡಿದ್ದಾರೆ.

ಕುರ್ತಕೋಟಿ ಗ್ರಾ.ಪಂ ಮಾಜಿ ಸದಸ್ಯ ಯಲ್ಲಪ್ಪ ರವಳೋಜಿ ನಿಧನ

0

ವಿಜಯಸಾಕ್ಷಿ ಸುದ್ದಿ, ಕುರ್ತಕೋಟಿ

ಗ್ರಾಮ ಪಂಚಾಯತಿ ಮಾಜಿ ಸದಸ್ಯ, ಕಾಂಗ್ರೆಸ್ ಯುವ ಮುಖಂಡ ಯಲ್ಲಪ್ಪ ತಿಪ್ಪಣ್ಣ ರವಳೋಜಿ (48) ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು.

ಮೃತರು ತಾಯಿ, ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಸಹೋದರ ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 1ಗಂಟೆಗೆ ಜರುಗಿತು.

ಸಂತಾಪ: ಯಲ್ಲಪ್ಪ ರವಳೋಜಿ ಅವರ ನಿಧನಕ್ಕೆ ಮಾಜಿ ಸಚಿವ, ಗದಗ ಶಾಸಕ ಎಚ್. ಕೆ ಪಾಟೀಲ, ಮಾಜಿ ಶಾಸಕರಾದ ಡಿ. ಆರ್ ಪಾಟೀಲ, ಗ್ರಾಮ‌ ಪಂಚಾಯತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಅಪ್ಪಣ್ಣ ಇನಾಮತಿ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ನಗರಸಭೆಗೆ ದಿಢೀರ್ ಡಿಸಿ ಭೇಟಿ; ಅಧಿಕಾರಿಗಳ ಬೆವರಿಳಿಸಿ, ಶಾಕ್ ನೀಡಿದ ಜಿಲ್ಲಾಧಿಕಾರಿ

0
  • ಹಾಜರಾತಿ ಪುಸ್ತಕದಲ್ಲಿ ಮುಂದಿನ ದಿನಗಳದ್ದು ಸಹಿ ಹಾಕಿದ್ದ ಸಿಬ್ಬಂದಿ
  • ಲಾಸ್ಟ್ ವಾರ್ನಿಂಗ್‌ಗೆ ಬೆಚ್ಚಿ ಬಿದ್ದಿರುವ ನೌಕರರು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ-ಬೆಟಗೇರಿ‌ ನಗರಸಭೆ ಅವ್ಯವಸ್ಥೆ ಹೇಳತೀರದ್ದಾಗಿದ್ದು, ಯಾರೂ ಪ್ರಾಮಾಣಿಕವಾಗಿ ಸರಿಪಡಿಸುವ ಕೆಲಸಕ್ಕೆ ಕೈ ಹಾಕಿರಲಿಲ್ಲ. ಆದರೆ ಈಗ ಡಿಸಿ ಮೆಡಮ್ ನಗರಸಭೆ ಆಡಳಿತವನ್ನು ಸರಿದಾರಿಗೆ ತರಲು ಮುಂದಾಗಿದ್ದಾರೆ.

ಬುಧವಾರ ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ದಿಢೀರನೇ ನಗರಸಭೆಗೆ ಭೇಟಿ ನೀಡಿ ಅಧಿಕಾರಿಗಳಿಗೆ, ಅಲ್ಲಿನ ಸಿಬ್ಬಂದಿಗಳಿಗೆ ಶಾಕ್ ನೀಡಿದರು.

ನಗರಸಭೆ ವ್ಯಾಪ್ತಿಯ ಯಾವುದೇ‌ ಕಡತಗಳಿದ್ದರೂ ಅವುಗಳಿಗೆ ಚಲನೆಯೇ ಇರುತ್ತಿದ್ದಿಲ್ಲ. ಕಾಂಚಾಣದ ಸದ್ದು ಕೇಳುತ್ತಿದ್ದಂತೆಯೇ ಧೂಳು ಮೆತ್ತಿ ಜಡಗೊಂಡಿದ್ದ ಕಡತಗಳಿಗೂ ಚಲನಾಶಕ್ತಿ ಬರುವುದು ಇಲ್ಲಿ ಸಹಜ, ಸಾಮಾನ್ಯ.

ಇಂಥ ಸಾಮಾನ್ಯ ಸಂಗತಿಗಳ ಬಗ್ಗೆ ಮಾಹಿತಿ ಪಡೆದಿದ್ದ ಜಿಲ್ಲಾಧಿಕಾರಿಗಳು, ತಮ್ಮ ಕರ್ತವ್ಯದಲ್ಲಿ ಬಿಡುವಿದ್ದ ಅರ್ಧ ಗಂಟೆ ಅವಧಿಯನ್ನು ನಗರಸಭೆಗೆ ಭೇಟಿ, ಅಧಿಕಾರಿಗಳ ಕಾರ್ಯವೈಖರಿ ಗಮನಿಸಲು ಮೀಸಲಿಟ್ಟರು.

ಜಿಲ್ಲಾಧಿಕಾರಿಗಳು ನಗರಸಭೆಗೆ ಕಾಲಿಡುತ್ತಿದ್ದಂತೆ ಹಾಜರಿದ್ದ ಅಧಿಕಾರಿಗಳು, ಸಿಬ್ಬಂದಿಗಳಿಗೆ ಶಾಕ್. ಡಿಸಿಯವರು ನಗರಸಭೆ ಪ್ರವೇಶಿಸಿದ ತಕ್ಷಣ ಅಧ್ಯಕ್ಷರ ಕೊಠಡಿಗೊ, ಪೌರಾಯುಕ್ತರ ಕೊಠಡಿಗೊ ತೆರಳಿ ಎಸಿ ಕೆಳಗೆ ಕೂತು ಕಡತ ಪರಿಶೀಲನೆ ಮಾಡಬಹುದು ಎಂದು ಅಧಿಕಾರಿಗಳು ಲೆಕ್ಕ ಹಾಕಿದ್ದರು.

ಆದರೆ ಡಿಸಿಯವರು ನಗರಸಭೆಯ ಬಹುತೇಕ ವಿಭಾಗಗಳಿಗೆ ತೆರಳಿ ಸಿಬ್ಬಂದಿ ಜೊತೆ ಮಾತನಾಡುತ್ತಾ ಕಾರ್ಯವೈಖರಿ ಕುರಿತು ಪರಿಶೀಲಿಸುವ ಮೂಲಕ ಅಧಿಕಾರಿಗಳ ಲೆಕ್ಕಾಚಾರ ತಲೆ ಕೆಳಗಾಗುವಂತೆ ಮಾಡಿದರು.

ಜಿಲ್ಲಾಧಿಕಾರಿಗಳು ಪ್ರತಿ ವಿಭಾಗಕ್ಕೂ ಭೇಟಿ ನೀಡಲಾರಂಭಿಸಿದಾಗ ನೌಕರರಿಗೆ ನಡುಕ ಶುರುವಾಯ್ತು. ಯಾಕೆಂದರೆ ಕೆಲವರು ಬೆಳಗ್ಗೆ ಬಂದು ನಾಳೆಯ ಹಾಜರಿಯನ್ನೂ ಹಾಕಿ ನಾಪತ್ತೆಯಾಗಿದ್ದರು. ಆಕಸ್ಮಿಕವಾಗಿ ಡಿಸಿಯವರು ಹಾಜರಾತಿ ಪುಸ್ತಕ ಪರಿಶೀಲಿಸಿದಾಗ ನೌಕರರ ದಿನವಹಿ ಸಹಿಯ ಅಸಲಿಯತ್ತು ಹೊರಬಿತ್ತು.

ಈ ಬಗ್ಗೆ ಪ್ರಶ್ನಿಸಿದಾಗ ನಗರಸಭೆ ಸಿಬ್ಬಂದಿ ಬಳಿ ಉತ್ತರವೇ ಇರಲಿಲ್ಲ. ಇದರಿಂದ ಕೆಂಡಾಮಂಡಲರಾದ ಜಿಲ್ಲಾಧಿಕಾರಿಗಳು, ಇದು ಲಾಸ್ಟ್ ವಾರ್ನಿಂಗ್. ಇನ್ನು ಮುಂದೆ ಹೀಗಾಗಕೂಡದು. ಒಂದೊಮ್ಮೆ ಇದು ಹೀಗೆ ಮುಂದುವರಿದರೆ ಸಂಬಂಧಿಸಿದ ಮೇಲ್ವಿಚಾರಕರನ್ನು ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಹಾಜರಾತಿ ಪುಸ್ತಕದಲ್ಲಿ ನೂರಕ್ಕೆ ನೂರು ಹಾಜರಾತಿ ಇದೆ. ಕಚೇರಿಯಲ್ಲಿ ಮಾತ್ರ ಶೇಕಡಾ 50ರಷ್ಟು ಸಿಬ್ಬಂದಿ ಇರಲಿಲ್ಲ. ಇದು ಡಿಸಿಯವರ ಕೆಂಗಣ್ಣಿಗೆ ಗುರಿಯಾಯಿತು. ನಗರಸಭೆಯ ಅಂದಂದಿನ ಕಡತಗಳು ಆಯಾ ದಿನವೇ ವಿಲೇವಾರಿಯಾಗುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕಟ್ಟಿಟ್ಟ ಬುತ್ತಿ ಎಂದು ಅಧಿಕಾರಿಗಳ ಬೆವರಿಳಿಸಿ, ಶಾಕ್ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಇದ್ದರು.

“ಇವತ್ತು ಅರ್ಧ ಗಂಟೆ ಸಮಯ ಇತ್ತು. ಆ ಸಮಯವನ್ನು ನಗರಸಭೆಯ ಭೇಟಿಗೆ ಬಳಸಿಕೊಂಡೆ. ಮೇಲ್ನೋಟಕ್ಕೆ ಅವ್ಯವಸ್ಥೆ ಕಂಡು ಬಂದಿದೆ. ಕಡತಗಳ ವಿಲೇವಾರಿ ವಿಷಯದಲ್ಲಿ ನಿರ್ಲಕ್ಷ್ಯ ವಹಿಸದಂತೆ ಸೂಚನೆ ನೀಡಿದ್ದೇನೆ. ನಗರಸಭೆಯೊಂದನ್ನೇ ಟಾರ್ಗೆಟ್ ಮಾಡಿ ಭೇಟಿ ನೀಡಿಲ್ಲ. ಸಮಯ ಸಿಕ್ಕಾಗ ಯಾವುದೇ‌ ಇಲಾಖೆ, ಕಚೇರಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಅಧಿಕಾರಿಗಳು ಮೈ ಮರೆತು ಕೆಲಸ ಮಾಡುವ ಬದಲು ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡಿದರೆ ಸಾರ್ವಜನಿಕರಿಗೆ ಒಳಿತಾಗುತ್ತದೆ‌.”

ವೈಶಾಲಿ. ಎಂ. ಎಲ್, ಜಿಲ್ಲಾಧಿಕಾರಿಗಳು

ರೋಣದಲ್ಲಿ ಬಿಜೆಪಿ ಮುಖಂಡರು ಜಿ.ಎಸ್ ಪಾಟೀಲ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ

0

ವಿಜಯಸಾಕ್ಷಿ ಸುದ್ದಿ, ರೋಣ

ಬಿಜೆಪಿಯಿಂದ ನಮ್ಮ ಗ್ರಾಮದ ಅಭಿವೃದ್ಧಿ ಅಸಾಧ್ಯ. ಈ ಹಿಂದೆ ತಾವು ಶಾಸಕರಾಗಿದ್ದಾಗ ಆಗಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ಈಗಿನ ಶಾಸಕರಿಂದ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ, ಹೀಗಾಗಿ ನಾವು ಜನರಿಗೆ, ಯಾವ ರೀತಿ ಬಿಜೆಪಿಗೆ ಮತ ಹಾಕಿ ಅಂತಾ ಕೇಳುವುದು. ಇದನ್ನು ಅರಿತುಕೊಂಡೇ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿದ್ದೇವೆ ಎಂದು ಚಿಕ್ಕಮಣ್ಣೂರು ಗ್ರಾಮದ ಮುಖಂಡ ಯಲ್ಲಪ್ಪಗೌಡ ಶಿವನಗೌಡ ಪಾಟೀಲ ಹೇಳಿದರು.

ಅವರು, ಮಾಜಿ ಶಾಸಕ, ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಜಿ.ಎಸ್ ಪಾಟೀಲ ಅವರ ಮನೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಸಭೆಯಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅದ್ಯಕ್ಷ ಜಿ.ಎಸ್. ಪಾಟೀಲ ಮಾತನಾಡಿ, ಚಿಕ್ಕಮಣ್ಣೂರ ಗ್ರಾಮ ನನ್ನ ತವರು ಇದ್ದಹಾಗೆ. ಗ್ರಾಮದ ಜನರು ನನ್ನನ್ನು ಮನೆ ಮಗನಕ್ಕಿಂತಲೂ ಹೆಚ್ಚಿನ ರೀತಿ ಪ್ರೀತಿಯಿಂದ ಕಂಡಿದ್ದಾರೆ. ಹೀಗಾಗಿ ಚಿಕ್ಕಮಣ್ಣೂರ ಗ್ರಾಮದ ಜನರನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಸಹ ಕುಟುಂಬಸ್ಥರು. ಮುಂದಿನ ದಿನಗಳಲ್ಲಿ ಪಕ್ಷವನ್ನು ಎಲ್ಲರೂ ಸೇರಿ ಬಲಪಡಿಸೋಣ ಎಂದರು.

ಇದೆ ಸಂದರ್ಭದಲ್ಲಿ ಅವರು, ಚಿಕ್ಕ ಮಣ್ಣೂರ ಗ್ರಾಮದ ಬಿಜೆಪಿ ಮುಖಂಡರಾದ ರಾಘವೇಂದ್ರ. ಆರ್ ಸೋಮನಗೌಡ್ರ, ಯಲ್ಕಪ್ಪಗೌಡ. ಸಿ ಪಾಟೀಲ, ದೇವಪ್ಪ ಅಂಗಡಿ, ರಾಜು.ಬಿ ಹುಗ್ಗಿ, ನಿಂಗನಗೌಡ. ಆರ್ ಪಾಟೀಲ, ಸಂತೋಷಗೌಡ. ಎಸ್ ಪಾಟೀಲ, ವೀರಪ್ಪ. ಎಚ್ ಮಾಮನಿ, ಗಿರೀಶ್ ಗೌಡ. ಎಸ್ ಶಿವಳ್ಳಿ, ಪುಂಡಲೀಕ. ಎಮ್ ಕೊಪ್ಪದ, ಮಲ್ಲಪ್ಪ. ವಾಯ್ ಶಿವಳ್ಳಿ, ಯಲ್ಲಪ್ಪಗೌಡ. ಎನ್ ಮಣ್ಣೂರ, ಕಲ್ಲನಗೌಡ ನಾಡಗೌಡ್ರ, ಸಂಗನಗೌಡ. ಎಚ್ ಪೊಲೀಸ್ ಪಾಟೀಲ, ಪ್ರಕಾಶ್ ಗೌಡ. ಜಿ ಪಾಟೀಲ, ಕಲ್ಲನಗೌಡ. ವಿ ಪಾಟೀಲ
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಅವರನ್ನು ಪಕ್ಷದ ಶಾಲು ಹೊದಿಸುವ ಮೂಲಕ ಪಕ್ಷಕ್ಕೆ ಜಿ. ಎಸ್ ಪಾಟೀಲ ಬರಮಾಡಿಕೊಂಡರು.

ಪುರಸಭೆ ಉಪಾಧ್ಯಕ್ಷ ಸಂಗನಗೌಡ ಪಾಟೀಲ, ಪುರಸಭೆಯ ಮಾಜಿ ಅದ್ಯಕ್ಷ ವೆಂಕಣ್ಣ ಬಂಗಾರಿ, ಪಿಎಲ್ ಡಿ ಬ್ಯಾಂಕ್ ಸದಸ್ಯ ಬಸವರಾಜ ನವಲಗುಂದ, ವಿ
ಬಿ. ಸೋಮನಕಟ್ಟಿಮಠ, ಯೂಸುಫ್ ಇಟಗಿ ಸೇರಿದಂತೆ ಚಿಕ್ಕಮಣ್ಣೂರ, ಅರಹುಣಸಿ, ಸವಡಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಹರಿಯುವ ನೀರಲ್ಲಿ ಈಜಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ ಕೆಇಬಿ ಸಿಬ್ಬಂದಿ; ಕರ್ತವ್ಯ ಪ್ರಜ್ಞೆ ಮೆರೆದ ಪವರ್ ಮ್ಯಾನ್

0

ವಿಜಯಸಾಕ್ಷಿ ಸುದ್ದಿ, ನರಗುಂದ

ಮೊನ್ನೆಯಷ್ಟೇ ಬೆಂಗಳೂರಿನ ವೈದ್ಯರೊಬ್ಬರು ಶಸ್ತ್ರಚಿಕಿತ್ಸೆಗೆ ತೆರಳುತ್ತಿದ್ದಾಗ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡಾಗ ಕಿಲೋಮೀಟರು ದೂರ ಓಡಿಯೇ ಹೋಗಿ ಚಿಕಿತ್ಸೆ ನೆರವೇರಿಸಿ ಕರ್ತವ್ಯಪ್ರಜ್ಞೆ ಮೆರೆದು ಮಾದರಿಯಾಗಿದ್ದರು.

ಇದೀಗ ನರಗುಂದ ತಾಲೂಕಿನ ಕೆ.ಇ.ಬಿ ಪವರ್ ಮ್ಯಾನ್ ಒಬ್ಬರು ಇಂಥದೇ ಕರ್ತವ್ಯ ಪ್ರಜ್ಞೆಯಿಂದ ಹರಿಯುವ ನೀರಿನಲ್ಲಿಯೇ ಈಜಿ, ಸಮಸ್ಯೆಯಿರುವ ಸ್ಥಳಕ್ಕೆ ತೆರಳಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ ಬಂದಿರುವ ಬಗ್ಗೆ ವರದಿಯಾಗಿದೆ.

ತಾಲೂಕಿನ ಕೊಣ್ಣೂರ ಗ್ರಾಮದ ಬಳಿ ಮಲಪ್ರಭಾ ನದಿ ಉಕ್ಕಿ ಹರಿಯುತ್ತದೆ. ಹರಿವಿನ ಪ್ರಮಾಣ ಎಷ್ಟಿತ್ತೆಂದರೆ, ನದಿ ತುಂಬಿ ಸುತ್ತಲಿನ ಪ್ರದೇಶಗಳಲ್ಲಿಯೂ ನೀರು ಆವರಿಸಿಕೊಳ್ಳುತ್ತಿತ್ತು. ಈ ಸಂದರ್ಭದಲ್ಲಿ ಕೊಣ್ಣೂರ ಗ್ರಾಮಕ್ಕೆ ನೀರು ಪೂರೈಕೆಯ ಉದ್ದೇಶಕ್ಕೆ ವಿದ್ಯುತ್‌ ಸರಬರಾಜು ಮಾಡುವ ಟ್ರಾನ್ಸ್ ಫರ್ಮರ್ಗಳೂ ಮುಳುಗುವ ಸಂದರ್ಭ ಎದುರಾಗಿತ್ತು.

ಅಲ್ಲದೆ, ಈ ಸಂದರ್ಭದಲ್ಲಿ ಪ್ರಸ್ತುತ ಟ್ರಾನ್ಸಫರ್ಮರ್ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಅನಿವಾರ್ಯತೆಯಿತ್ತು.

ತಕ್ಷಣವೇ ಕಾರ್ಯಪ್ರವೃತ್ತರಾದ ಈ ಭಾಗದ ಪವರ್ ಮ್ಯಾನ್ ಮಂಜುನಾಥ ಕುಂಬಾರ ಸುಮಾರು 30 ಅಡಿ ದೂರ ನೀರಿನಲ್ಲಿ ಈಜಿಯೇ ಸ್ಥಳಕ್ಕೆ ತಲುಪಿದರು. ಕೆಳಗೆ ನೆಲದಿಂದ ಒಂದಾಳು ನೀರು ತುಂಬಿತ್ತು. ಸೂಕ್ತ ಸಮಯದಲ್ಲಿ ಪ್ರಸ್ತುತ ಟ್ರಾನ್ಸಫರ್ಮರ್ ನ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಹಿಂದಿರುಗಿದರು. ಇದರಿಂದ ಇದಕ್ಕೂ ಮುಂದಿನ ಟ್ರಾನ್ಸಫರ್ಮರ್ ಕಾರ್ಯನಿರ್ವಹಿಸಲು ಪ್ರಾರಂಭಿಸುವದರಿಂದ ನೀರು ಸರಬರಾಜಿನ ವ್ಯವಸ್ಥೆಗೆ ಯಾವುದೇ ತೊಂದರೆಯಾಗದಂತೆ ಅನುವು ಮಾಡಿದ್ದಾರೆ. ಮಂಜುನಾಥರ ಈ ಕಾರ್ಯಕ್ಕೆ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಶಹಬ್ಬಾಸ್ ಎಂದಿದ್ದಾರೆ.

ಕೂಡಲೇ ಈ ಟ್ರಾನ್ಸಫರ್ಮರ್ ನ ಸಂಪರ್ಕ ಕಡಿತಗೊಳಿಸದಿದ್ದರೆ, ಕುಡಿಯುವ ನೀರು ಸರಬರಾಜು ವ್ಯವಸ್ಥೆಗೆ ತೊಂದರೆಯಾಗುವಂತಿತ್ತು. ಇದರ ಸಂಪರ್ಕ ಕಡಿತಗೊಳಿಸಿದಾಗ ಮುಂದಿನ ಟ್ರಾನ್ಸಫರ್ಮರ್ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ನೀರು ಸರಬರಾಜು ಮುಂದುವರೆಯುತ್ತದೆ. ಪ್ರತಿ ಬಾರಿ ಮಳೆ ಹೆಚ್ಚಾಗಿ ನದಿ ಉಕ್ಕಿ ಹರಿದಾಗಲೂ ಈ ಸಮಸ್ಯೆ ಎದುರಾಗುತ್ತದೆ. ಆದರೆ, ಸಾರ್ವಜನಿಕರಿಗೆ ಕುಡಿಯುವ ನೀರಿನ ಸರಬರಾಜಿಗೂ ತೊಂದರೆ ಆಗಬಾರದೆಂಬುದು ಇಲಾಖೆಯ ಕಳಕಳಿ. ಹೀಗಾಗಿ ಈ ಅಪಾಯವನ್ನು ಎದುರಿಸಲು ತಯಾರಾದೆ.

-ಮಂಜುನಾಥ ಕುಂಬಾರ. ಹೆಸ್ಕಾಂ ಪವರ್ ಮ್ಯಾನ್, ಕೊಣ್ಣೂರ
error: Content is protected !!