Home Blog Page 3219

ಎಂಇಎಸ್, ಶಿವಸೇನೆ ಪುಂಡಾಟ; ಮರಾಠರಿಗೆ ಸಚಿವ ಪಾಟೀಲ್ ಖಡಕ್ ಎಚ್ಚರಿಕೆ

ವಿಕೋಪಕ್ಕೆ ಹೋದ್ರೆ ನ್ಯೂಟನ್ ನ ಮೂರನೇ ನಿಯಮ ಅನುಸರಿಸಬೇಕಾಗುತ್ತೆ: ಸಿ.ಸಿ.ಪಾಟೀಲ್

ವಿಜಯಸಾಕ್ಷಿ ಸುದ್ದಿ, ಗದಗ:

‘ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಕರ್ನಾಟಕದ ಇಬ್ಬರು ಹೆಮ್ಮೆಯ ವ್ಯಕ್ತಿಗಳ ಮೂರ್ತಿಗಳನ್ನು ವಿಕಾರಗೊಳಿಸುವ ಎಂಇಎಸ್ ಪುಂಡರಿಗೆ ನಮ್ಮ ಸರ್ಕಾರ ಸರಿಯಾದ ಪಾಠ ಕಲಿಸುತ್ತದೆ. ಮರಾಠಿಗರು ಇನ್ನಾದರೂ ಇಂತಹ ಪುಂಡಾಟಿಕೆ ಬಿಟ್ಟು ಸಾಮರಸ್ಯದಿಂದ ಬದುಕುವುದನ್ನು ಕಲಿಯಬೇಕು’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ ನೀಡಿದರು.

ಶನಿವಾರ ಗದಗನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಪ್ರತಿವರ್ಷ ಬೆಳಗಾವಿ ಅಧಿವೇಶನ ನಡೆಯುವ ವೇಳೆ ಎಂಇಎಸ್ ನವರು ಇಂತಹ ಕಿತಾಪತಿ ಮಾಡುತ್ತಲೇ ಬರುತ್ತಿದ್ದು, ಈ ವರ್ಷ ಆ ಚಾಳಿಯನ್ನು ಮುಂದುವರೆಸಿದ್ದಾರೆ’ ಎಂದರು.

‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಬೇಕೆಂದವರಿಗೆ ಬಿಟ್ಟು ಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಬೆಳಗಾವಿ ಅಧಿವೇಶನ ಅತ್ಯಂತ ಯಶಸ್ವಿಯಾದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತೆ ಎಂಬ ಕಾರಣಕ್ಕೆ ಎಂಇಎಸ್ ನವರು ಈ ರೀತಿ ಮಾಡುತ್ತಿದ್ದಾರೆ. ಎಂಇಎಸ್ ನವರು ಉದ್ದೇಶ ಪೂರ್ವಕವಾಗಿ ಇಂತಹ ಕೃತ್ಯಗಳನ್ನು ಮಾಡುತ್ತಿದ್ದು, ಅವರು ಅರ್ಥ ಮಾಡಿಕೊಳ್ಳಬೇಕು. ಆದರೆ, ಕರ್ನಾಟಕದವರು ಶಾಂತಿಪ್ರಿಯರು ಅವರಂತೆ ನಾವು ಮಾಡಬಾರದು’ ಎಂದು ಮನವಿ ಮಾಡಿಕೊಂಡರು.

ಶಿವಸೇನಾ ಕಾರ್ಯಕರ್ತರ ಕಲ್ಲು ತೂರಾಟದ ಕುರಿತು ಪ್ರತಿಕ್ರಿಯಿಸಿದ ಅವರು ‘ಕರ್ನಾಟಕದ ಕಾರುಗಳು ಮಹಾರಾಷ್ಟ್ರದಲ್ಲಿ, ಮಹಾರಾಷ್ಟ್ರದ ಕಾರುಗಳು ಕರ್ನಾಟಕದಲ್ಲಿ ಓಡಾಡುತ್ತವೆ. ಓಡಾಡುತ್ತವೆ. ಅವರು ಅಲ್ಲಿ ತೊಂದರೆ ಮಾಡಿದರೆ, ಇಲ್ಲಿಯ ಅವರ ಜನಕ್ಕೆ ತೊಂದರೆ ಆಗುತ್ತದೆ ಎಂಬ ಪರಿಕಲ್ಪನೆ ಇರಬೇಕು. ಅಲ್ಲಿ ಅವರು ಕಲ್ಲು ತೂರಿದ್ದಾರೆಂದು ನಮ್ಮವರು ಕಲ್ಲು ತೂರಿ ಅಂತಾ ಹೇಳುವುದಿಲ್ಲ. ವಿಕೋಪಕ್ಕೆ ಹೋದಾಗ ನ್ಯೂಟನ್ ನ ಮೂರನೇ ನಿಯಮ ಅನುಸರಿಸಬೇಕಾಗುತ್ತದೆ. ಮರಾಠಿಗರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಸಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಶಿವಕುಮಾರ್ ಉದಾಸಿ, ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಉಪಸ್ಥಿತರಿದ್ದರು.

ಹಣ ಕೊಟ್ಟು ಮತ‌ವೂ ನೀಡಿ; ಪಕ್ಷೇತರ ಅಭ್ಯರ್ಥಿ ವಿನೂತನ ಪ್ರಚಾರ

ವಿಜಯಸಾಕ್ಷಿ ಸುದ್ದಿ, ಗದಗ:

ಯಾವುದೇ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಮತದಾರರಿಗೆ ಆಸೆ, ಆಮಿಷಗಳನ್ನೊಡ್ಡಿ ಮತ ಪಡೆಯುವುದನ್ನು ಕೇಳಿದ್ದೇವೆ.. ನೋಡಿದ್ದೇವೆ. ಆದರೆ, ಇಲ್ಲೊಬ್ಬ ಅಭ್ಯರ್ಥಿ ಮತದಾರರಿಂದಲೇ ಹಣ ಹಾಕಿಸಿಕೊಳ್ಳುವ ಮೂಲಕ ಮತ ನೀಡಿ ಎಂದು ಇನ್ನುಳಿದ ಅಭ್ಯರ್ಥಿಗಳಿಗಿಂತ ವಿಭಿನ್ನವಾಗಿ ಪ್ರಚಾರ ಮಾಡುತ್ತಿದ್ದಾರೆ.

ಹೌದು, ಡಿಸೆಂಬರ್ 27 ರಂದು ನಡೆಯುವ ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ 15ನೇ ವಾರ್ಡ್ ನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿಶ್ವನಾಥ ಶೀರಿ ಅವರ ಪ್ರಚಾರ ವೈಖರಿ ಇದು. ಚುನಾವಣೆ ಗೆಲ್ಲಲ್ಲು ಅಭ್ಯರ್ಥಿಗಳು ಮತದಾರರಿಗೆ ಹಣ ಹಂಚಿ ಮತ ಪಡೆಯುತ್ತಿರುವ ಹೊತ್ತಲ್ಲಿ ವಿಶ್ವನಾಥ ಅವರ ವಿನೂತನ ಪ್ರಚಾರಕ್ಕಿಳಿದಿದ್ದಾರೆ. ಇವರ ಪ್ರಚಾರ ಶೈಲಿಗೆ ಅವಳಿ ನಗರದ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಕರಪತ್ರ ಹಂಚುತ್ತಿರುವ ವಿಶ್ವನಾಥ ಅವರು ‘ನಾನು ಮತದಾರರಿಗೆ ಹಣ ಕೊಟ್ಟು ಮತ ಪಡೆಯುವುದಿಲ್ಲ. ಚುನಾವಣಾ ವೆಚ್ಚಕ್ಕಾಗಿ ಮತದಾರರಿಂದಲೇ ಹಣದ ಜೊತೆಗೆ ಮತವನ್ನು ದಾನವಾಗಿ ಪಡೆಯಲು ಇಚ್ಛಿಸಿದ್ದೇನೆ. ಇದಕ್ಕಾಗಿ ಬ್ಯಾಂಕ್ ಖಾತೆ ವಿವರ ಹಾಗೂ ಡಿಜಿಟಲ್ ಮಾಧ್ಯಮದ ವಿವರ ನೀಡಿ, ಹಣ ಪಾವತಿಸಿದ ನಂತರ ಆ ವಿವರವನ್ನು ಗೂಗಲ್ ಫಾರ್ಮ್ ನಲ್ಲಿ ಅದನ್ನು ನಮೂದಿಸಿಲು ವಿನಂತಿಸಿದ್ದಾರೆ.

ಇಂದು ಹುಡ್ಕೋ ಕಾಲೋನಿಯ ಜಾಗೃತ ಆಂಜನೇಯ ಸ್ವಾಮಿ ಕಾರ್ತಿಕೋತ್ಸವ

0

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿಯ ಹುಡ್ಕೋ ಕಾಲೋನಿಯ ಸಿದ್ಧಲಿಂಗೇಶ್ವರ ನಗರದ ಉದ್ಯಾನವನದ ಹತ್ತಿರವಿರುವ ಶ್ರೀಜಾಗೃತ ಆಂಜನೇಯ ದೇವಸ್ಥಾನದಲ್ಲಿ ಶನಿವಾರ(ಡಿ.18) ಕಾರ್ತಿಕೋತ್ಸವ ಜರುಗಲಿದೆ.

ರಾತ್ರಿ 8 ಗಂಟೆಗೆ ಶ್ರೀಜಾಗೃತ ಆಂಜನೇಯ ಹಾಗೂ ನವಗ್ರಹಕ್ಕೆ ಕಾರ್ತಿಕೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಸಮಿತಿ ತಿಳಿಸಿದೆ.

ನಾಡದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಯ್ಯದ್ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ:

ಎಂಇಎಸ್‌ನ ಕೆಲವರು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿರುವುದು ಖಂಡನೀಯ. ಶೀಘ್ರವೇ ಬೆಂಕಿ ಹಚ್ಚಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನಶಕ್ತಿ ವೇದಿಕೆ ಅಧ್ಯಕ್ಷ ಸಯ್ಯದ್ ಖಾಲಿದ್ ಕೊಪ್ಪಳ ಆಗ್ರಹಿಸಿದ್ದಾರೆ.

ಬಹುಭಾಷಾ ಸಾಮರಸ್ಯ ಹೊಂದಿರುವುದು ಕನ್ನಡಿಗರ ದೌರ್ಬಲ್ಯವಲ್ಲ, ಇದು ಕನ್ನಡಿಗರ ಔದಾರ್ಯವಾಗಿದೆ. ಕೂಡಲೇ ಕನ್ನಡ ದ್ರೋಹಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕೊಪ್ಪಳ ಒತ್ತಾಯಿಸಿದ್ದಾರೆ.

ಕಾಂಗ್ರೆಸ್’ನವರು ಗದಗ-ಬೆಟಗೇರಿ ಸಮಸ್ಯೆ ಬಗೆಹರಿಸುವುದಿಲ್ಲ

ವಿಜಯಸಾಕ್ಷಿ ಸುದ್ದಿ, ಗದಗ:

‘ಗದಗ-ಬೆಟಗೇರಿ ಅವಳಿ ನಗರದ ಜನರಿಗೆ ಕಾಂಗ್ರೆಸ್ ನವರು ಪ್ರತಿ ಬಾರಿ ಸುಳ್ಳು ಹೇಳುತ್ತಾ ಬಂದಿದ್ದಾರೆ. ಇಲ್ಲಿನ ಜನಕ್ಕೆ ಕಾಂಗ್ರೆಸ್ ನಲ್ಲಿ ಎಚ್.ಕೆ.ಪಾಟೀಲ್ ಹಾಗೂ ಡಿ.ಆರ್.ಪಾಟೀಲ್ ಅವರ ಹೆಸರು ಬಿಟ್ಟು ಮತ್ತೇನು ಗೊತ್ತಿಲ್ಲ. ಇಷ್ಟು ವರ್ಷ ಅವರು ಹೇಳಿದ್ದನ್ನೆಲ್ಲಾ ಕೇಳಿಕೊಂಡು ಬಂದಿದ್ದೀರಾ. ಆದರೆ, ಈ ಬಾರಿ ಬದಲಾವಣೆ ಆಗಬೇಕು’ ಎಂದು ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಹೇಳಿದರು.

ಶುಕ್ರವಾರ ಅವಳಿ ನಗರದ 1ನೇ ವಾರ್ಡ್ ಅಭ್ಯರ್ಥಿ ಸೈನಾಜಬಿ ಶಾಮೀದ್ ನರಗುಂದ ಹಾಗೂ 2ನೇ ವಾರ್ಡ್ ಅಭ್ಯರ್ಥಿ ರಾಜೇಶ್ ಮುತಗಾರ ಪರವಾಗಿ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿ ಅವರು ಮಾತನಾಡಿದರು.

‘ನಗರದಲ್ಲಿ ಕಾಂಗ್ರೆಸ್ ನವರು ನೀರಿನ ಸಮಸ್ಯೆಯನ್ನು ಬಗೆಹರಿಸುವುದಿಲ್ಲ. ಕಳೆದ 50 ವರ್ಷಗಳಿಂದ ನೀರು, ಚರಂಡಿ, ವಿದ್ಯುತ್ ದೀಪಗಳ ಸಮಸ್ಯೆಗಳನ್ನೇ ಕೇಳುತ್ತಾ ಬಂದಿದ್ದೀರಿ. ಹೀಗಾಗಿ ಮತದಾರರು ಬದಲಾಗಬೇಕು. ನಗರದಲ್ಲಿನ ಸಮಸ್ಯೆಗಳ ಬಗ್ಗೆ ಸಚಿವರಾದ ಸಿ.ಸಿ.ಪಾಟೀಲ ಅವರು ಮುತುವರ್ಜಿ ವಹಿಸಿದ್ದು, ಈ ಕುರಿತು ಸಭೆ ನಡೆಸಿದ್ದಾರೆ. ಅಲ್ಲದೇ, ನಗರದಲ್ಲಿರುವ ವಸತಿ ರಹಿತರನ್ನು ಪಟ್ಟಿ ಮಾಡಿಕೊಟ್ಟಲ್ಲಿ ಕೆಲವೇ ತಿಂಗಳುಗಳಲ್ಲಿ ಮನೆ ಮಂಜೂರು ಮಾಡಿಸುವುದಾಗಿ ಹೇಳಿದ್ದಾರೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ರಾಜು ಕುರುಡಗಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯದರ್ಶಿಯಾಗಿ ಪ್ರವೀಣ ಸಂಗಳದ ನೇಮಕ

ವಿಜಯಸಾಕ್ಷಿ ಸುದ್ದಿ, ಗದಗ:

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅನುಮೋದನೆಯ ಮೇರೆಗೆ ಸಾಮಾಜಿಕ ಜಾಲತಾಣ ವಿಭಾಗದ ಆದೇಶದಂತೆ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಕಾರ್ಯದರ್ಶಿಯಾಗಿ ಪ್ರವೀಣ ಸಂಗಳದ ಅವರು ನೇಮಕವಾಗಿದ್ದಾರೆ.

ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಸ್ಥಳೀಯ ನಾಯಕರ ಸಹಯೋಗದಲ್ಲಿ ಪಕ್ಷ ಸಂಘಟಿಸಬೇಕು. ವಾಟ್ಸ್‌ಆಪ್, ಪೇಸ್‌ಬುಕ್, ಟ್ವೀಟರ್, ಕ್ಲಬ್‌ಹೌಸ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕ ಪಕ್ಷ ಬಲವರ್ಧನೆಗೆ ಶ್ರಮಿಸಬೇಕು ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯಾಧ್ಯಕ್ಷ ಬಿ.ಆರ್.ನಾಯ್ಡು ಆದೇಶಿಸಿದ್ದಾರೆ.

ಕೇಳಿದ್ದು ಬಿಜೆಪಿ ಟಿಕೆಟ್, ಸಿಕ್ಕಿದ್ದು ಕಾಂಗ್ರೆಸ್ ಟಿಕೆಟ್! ಕಾರ್ಯಕರ್ತರಲ್ಲಿ ಅಸಮಾಧಾನ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಲು ಕಾಂಗ್ರೆಸ್ ಇನ್ನಿಲ್ಲದ ಕಾರ್ಯತಂತ್ರ ರೂಪಿಸುತ್ತಿದೆ. ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆಯಲ್ಲೂ ಗೆಲ್ಲಬಹುದಾದ ಪಕ್ಷದವರಲ್ಲದ ಆಕಾಂಕ್ಷಿಗಳಿಗೆ ‘ಕೈ ನಾಯಕರು ಮಣೆ ಹಾಕಿದ್ದು, ಪಕ್ಷಕ್ಕಾಗಿ ಕೆಲಸ ಮಾಡಿದ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎನ್ನಲಾಗಿದೆ.

ಅವಳಿ ನಗರದ ಪ್ರತಿ ವಾರ್ಡ್‌ಗಳಲ್ಲೂ ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್, ಬಿಜೆಪಿ ನಾಜೂಕಾಗಿ ನಡೆದುಕೊಂಡಿದೆ. ಉಭಯ ಪಕ್ಷಗಳು ಗೆಲ್ಲಬೇಕೆಂಬ ಒಂದೇ ಒಂದು ಮಾನದಂಡವಿಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಿವೆ. ಇದಕ್ಕಾಗಿ ಪಕ್ಷದವರಲ್ಲದಿದ್ದರೂ, ಅಂತಹವರಿಗೆ ಕೆಲ ವಾರ್ಡ್‌ನಲ್ಲಿ ಟಿಕೆಟ್ ನೀಡಿವೆ. ಇದು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಟಿಕೆಟ್ ಕೈ ತಪ್ಪಿದ್ದರಿಂದ ಆಕಾಂಕ್ಷಿಗಳು ತಮ್ಮ ಆಪ್ತರೆದುರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.

ಗದಗ-ಬೆಟಗೇರಿಯ ವಾರ್ಡ್ ನಂ.33 ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರವಾಗಿದ್ದು, ಕಾಂಗ್ರೆಸ್‌ನಿಂದ ರುದ್ರಮ್ಮಾ ಕೆರಕಲಮಟ್ಟಿ, ಜಯಶ್ರೀ ಪವಾರ, ಅನ್ನಪೂರ್ಣ ಮಾರುತಿ ಜೋಗದಂಡಕರ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದರು. ಟಿಕೆಟ್ ಗಿಟ್ಟಿಸಿಕೊಳ್ಳಲು ಹಲವು ನಾಯಕರ ಮನೆ ಬಾಗಿಲಿಗೆ ಹೋಗಿ ಮನವಿ ಮಾಡಿಕೊಂಡಿದ್ದರು.

ಅಲ್ಲದೇ, 33ನೇ ವಾರ್ಡ್ ವ್ಯಾಪ್ತಿಗೆ ಬರುವ ಬ್ಯಾಂಕರ್ಸ್ ಕಾಲನಿ ಹಿರಿಯರು ಈ ಮೂವರಲ್ಲಿ ಯಾರಿಗಾದರೊಬ್ಬರಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರು. ಆದರೆ, ಪಕ್ಷದ ನಾಯಕರು ಕಾಂಗ್ರೆಸ್‌ನಲ್ಲಿ ಪಕ್ಷದ ಈ ಮೂವರು ಪ್ರಬಲ ಆಕಾಂಕ್ಷಿಗಳನ್ನು ಬಿಟ್ಟು ಬಿಜೆಪಿ ಕಾರ್ಯಕರ್ತರಿಗೆ ಮಣೆ ಹಾಕಿದ್ದಾರೆ. ಇದರೊಂದಿಗೆ ಬ್ಯಾಂಕರ್ಸ್ ಕಾಲನಿ ಹಿರಿಯರ ಅಭಿಪ್ರಾಯವನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ ಎನ್ನಲಾಗಿದೆ.

ಹೌದು, 33ನೇ ವಾರ್ಡ್‌ನ ಬಿಜೆಪಿ ಟಿಕೆಟ್ ಕೇಳಿದ್ದ ಜ್ಯೋತಿ ಎಸ್.ಚಳಗೇರಿ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ. ಜ್ಯೋತಿ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದಕ್ಕಿಂತ ಮುಂಚೆ ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದರು. ಅಷ್ಟರಲ್ಲೇ ಕಾಂಗ್ರೆಸ್ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಚಳಿಗೇರಿ ಅವರ ಮನವೊಲಿಸಿ ಕಾಂಗ್ರೆಸ್ ಟಿಕೆಟ್ ಕೊಡಿಸಿದರು ಎಂದು ಮೂಲಗಳು ತಿಳಿಸಿವೆ.

ಕೊನೆಗಳಿಗೆಯಲ್ಲಿ ಬಿಜೆಪಿ ಅನಿತಾ ವಿಜಯಕುಮಾರ್ ಗಡ್ಡಿ ಅವರಿಗೆ ಟಿಕೆಟ್ ಕೊಟ್ಟು ನಿಟ್ಟುಸಿರು ಬಿಟ್ಟಿದೆ. ಇತ್ತ ಕಾಂಗ್ರೆಸ್ ಪಕ್ಷದವರೇ ಮೂವರು ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದರೂ, ಕೊನೆ ಕ್ಷಣದಲ್ಲಿ ಜ್ಯೋತಿ ಎಸ್.ಚಳಗೇರಿ ಅವರಿಗೆ ನೀಡಿರುವುದು ಆಶ್ಚರ್ಯ ಮೂಡಿಸಿದೆ. ಅಲ್ಲದೇ, ಕಾಂಗ್ರೆಸ್ ನಾಯಕರ ಇಂತಹದ್ದೊಂದು ತೀರ್ಮಾನ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ ಎನ್ನಲಾಗಿದೆ.

ಗುತ್ತಿಗೆದಾರರ ಆರೋಪದ ಹಿಂದೆ ‘ಕೈ’ವಾಡ; ಯಾವ್ಯಾವುದೋ ಪ್ರಾಣಿ ಮೇಲೆ ಸದನಕ್ಕೆ ಬಂದ್ರೆ ಬಿಡೋಕಾಗುತ್ತಾ?: ಸಚಿವ ಪಾಟೀಲ್ ವ್ಯಂಗ್ಯ

ವಿಜಯಸಾಕ್ಷಿ ಸುದ್ದಿ, ಗದಗ:

ಕಾಂಗ್ರೆಸ್ ನಾಯಕರ 40 ಪರ್ಸಂಟೇಜ್ ಆರೋಪ
ಆಧಾರ ರಹಿತವಾಗಿದ್ದು, ಗುತ್ತಿಗೆದಾರರ ಸಂಘ ತಂದಿದ್ದ ದೂರು ಯಾರೋ ಬರೆದುಕೊಟ್ಟಿದ್ದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.

ಶುಕ್ರವಾರ ನಗರದ ವಿಠ್ಠಲರೂಢ ಸಭಾಭವನದಲ್ಲಿ ನಡೆದ ಗದಗ-ಬೆಟಗೇರಿ ನಗರಸಭೆ ಅಭ್ಯರ್ಥಿಗಳ ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

‘ಗುತ್ತಿಗೆದಾರರ ಅಧ್ಯಕ್ಷರು ದೂರಿನ ಕಾಪಿಯನ್ನು ನನಗೆ ಕೊಡಲಿಕ್ಕೆ ಬಂದಿದ್ದರು. ಅವರನ್ನು ಕೂರಿಸಿಕೊಂಡು ಪತ್ರ ಓದಿದೆ. ಓದಿದಾಗ ಅದರಲ್ಲಿ ಕೆಲ ಆಕ್ಷೇಪಾರ್ಹ, ಅಸಂವಿಧಾನಿಕ ಪದಗಳನ್ನು ಉಪಯೋಗಿಸಿದ್ದರು. ಹಿರಿಯರಿದ್ದು, ಇಷ್ಟು ದೊಡ್ಡ ಗುತ್ತಿಗೆದಾರರಿದ್ದು ನಿಮ್ಮ ನೋವು ನಲಿವುಗಳನ್ನು ತೊಂದರೆಗಳನ್ನು ಸರ್ಕಾರದ ಬಳಿ ಹೇಳುವ ಅಧಿಕಾರವಿದೆ. ಆದರೆ, ಪದ ಬಳಸುವಾಗ ಗೌರವಾನ್ವಿತ ಪದ ಬಳಕೆಯಾಗಬೇಕು ಅಂತಾ ಅವರ ಹಿರಿತನಕ್ಕೆ ಗೌರವ ಕೊಟ್ಟು ಹೇಳಿದ್ದೇನೆ. ಆದರೆ, ಅವರು ನೇರವಾಗಿ ‘ನನಗೇನು ಗೊತ್ತಿಲ್ಲ ಸರ್. ಯಾರೋ ಬರೆದುಕೊಂಡು ಬಂದಿದ್ದರು. ನಾನು ಸಹಿ ಮಾಡಿದ್ದೇನೆ’ ಎಂದರು. ಇದು ಅಕ್ಷರಶಃ ಸತ್ಯ. ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್ ಅಸ್ಥಿತ್ವದಲ್ಲಿ ಇದೆ ಎನ್ನುವುದಕ್ಕೆ ಸಿದ್ದರಾಮಯ್ಯ ಎಲ್ಲರೂ ಸೇರಿ ಟ್ರ್ಯಾಕ್ಟರ್ನಲ್ಲಿ ಬಂದರು. ಟ್ಯಾಕ್ಟರ್ ನಲ್ಲಿ ಬಂದವರನ್ನು ಸುವರ್ಣ ಸೌಧದಲ್ಲಿ ಬಿಡಲು ಸಾಧ್ಯವೇ ಎಂಬುವುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಆಲೋಚಿಸಬೇಕು. ಏಕೆಂದರೆ, ಇವತ್ತೊಬ್ಬ ಟ್ರ್ಯಾಕ್ಟರ್, ನಾಳೆ ಒಬ್ಬ ಒಂಟೆ, ಕುದುರೆ, ಚಕ್ಕಡಿ ಸೇರಿ ಇನ್ನಾವುದೋ ಪ್ರಾಣಿಗಳ ಮೇಲೆ ಬರುತ್ತಾನೆ. ಹಾಗಂತ ಸುವರ್ಣಸೌಧ ಒಳಗೆ ಬಿಡುವುದಕ್ಕೆ ಆಗುತ್ತಾ? ಎಂದು ವ್ಯಂಗ್ಯವಾಡಿದರು.

ರಮೇಶ್ ಕುಮಾರ್ ಅವರ ಅತ್ಯಾಚಾರ ಹೇಳಿಕೆಗೆ ‘ಅವರು ಒಬ್ಬ ಹಿರಿಯ ಶಾಸಕರು. ವಿಧಾನಸಭಾ ಅಧ್ಯಕ್ಷರಾಗಿ ಕೆಲಸ‌ ಮಾಡಿದವರು. ಒಮ್ಮೊಮ್ಮೆ ತಮ್ಮ ಹಿಡಿತ ತಪ್ಪಿ ಮಾತನಾಡುತ್ತಾರೆ. ಅವರು ಏನು ಹೇಳಿದ್ದಾರೋ ಅದನ್ನು ನಾನು ಕೇಳಿಲ್ಲ. ಅದನ್ನು ಕೇಳಿದ ಬಳಿಕ ಅವಶ್ಯಕತೆ ಅನಿಸಿದರೆ ಉತ್ತರ ಕೊಡುತ್ತೇನೆ. ಆದರೆ, ಅವರ ಬಗ್ಗೆ ಎಲ್ಲರಿಗೂ ವೈಯಕ್ತಿಕವಾಗಿ ಗೌರವವಿದೆ. ಇಂತಹ ವಿಷಯದಲ್ಲಿ ನನ್ನ ಬಳಿ ಭಾಷಾ ಜ್ಞಾನ ಇದೆ ಅಂತಾ ಹೇಳಿ ಎಲ್ಲ ಕಡೆಗೂ ಉಪಯೋಗಿಸಬಾರದು’ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಕಳಕಪ್ಪ ಬಂಡಿ, ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಎಂ.ಎಸ್.ಕರಿಗೌಡ್ರ, ಸಂಗಮೇಶ ದುಂದೂರ, ಸೇರಿದಂತೆ ಅನೇಕರು ಇದ್ದರು.

ಠಾಣೆಯಲ್ಲಿ ಹಣ ಕದ್ದ ಪೊಲೀಸ್ ಅಂದರ್; ಇದು ವಿಜಯಸಾಕ್ಷಿ ಇಂಪ್ಯಾಕ್ಟ್

ವಿಜಯಸಾಕ್ಷಿ ಸುದ್ದಿ, ಗದಗ:

ರಾತ್ರಿ ಪಾಳೆಯದಲ್ಲಿ ಠಾಣೆಯ ಕಪಾಟನಲ್ಲಿದ್ದ ಸಾವಿರಾರು ರೂ.ಗಳ ಹಣ ಕದ್ದಿದ್ದ ಪ್ರಕರಣದಲ್ಲಿ ಪೊಲೀಸ್ ಪೇದೆಯನ್ನು ಕೊನೆಗೂ ಶಹರ ಠಾಣೆಯ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಡಿ.1ರಂದು ಗದಗ ಗ್ರಾಮೀಣ ಠಾಣೆಯಲ್ಲಿ ನಡೆದಿದ್ದ ಕಳ್ಳತನ ಕೃತ್ಯ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿತ್ತು. ಅಂದು ಕರ್ತವ್ಯದಲ್ಲಿದ್ದ ಪೇದೆ ಮಂಜುನಾಥ ಕರಿಗಾರ ಎಂಬಾತ ಇಸ್ಪೀಟು ಜೂಜಾಟದಲ್ಲಿ ವಶಕ್ಕೆ ಪಡೆದಿದ್ದ ಹಣವನ್ನು ಕಳ್ಳತನ ಮಾಡಿದ್ದಾನೆ ಎಂದು ಶಹರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆದರೆ, ಪೇದೆ ಮಂಜುನಾಥ ಅನಾರೋಗ್ಯದ ನೆಪವೊಡ್ಡಿ ಜಿಮ್ಸ್ ಆಸ್ಪತ್ರೆಯಲ್ಲಿ ಒಂದು ವಾರಗಳ ಕಾಲ ಚಿಕಿತ್ಸೆ ಪಡೆದಿದ್ದ ಎನ್ನಲಾಗಿದೆ. ಅಷ್ಟೇ ಅಲ್ದೇ ಆತನಿಗೆ ಗ್ರಾಮೀಣ ಠಾಣೆಯ ಅಧಿಕಾರಿಗಳು (ಸಿಕ್ ಲೀವ್) ರಜೆ ಕೊಟ್ಟು ಕಳುಹಿಸಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಆದರೂ ಶಹರ ಠಾಣೆಯ ಪೊಲೀಸರು ಕಳ್ಳ ಪೇದೆಯನ್ನು ರಾಚೋಟೇಶ್ವರ‌ನಗರದ ಮನೆಯೊಂದರಲ್ಲಿ ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ್ದು, 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಆರೋಪಿ ಗ್ರಾಮೀಣ ಪೊಲೀಸ್ ಠಾಣೆಯ ಮಂಜುನಾಥ ಈ ಹಿಂದೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಎನ್ನಲಾಗಿದೆ . ಏನೇ ಆಗಲಿ ಸಮಾಜದಲ್ಲಿರುವ ಕಳ್ಳಕಾಕರರನ್ನು ಬಂಧಿಸಬೇಕಾದ ಪೊಲೀಸರು ತಮ್ಮ ಸಹದ್ಯೋಗಿ ಪೇದೆಯನ್ನೆ ಬಂಧಿಸಿದ್ದು ವಿಪರ್ಯಾಸ.

ಈ ಹಿಂದೆ ವಿಜಯಸಾಕ್ಷಿ ಈ ಪ್ರಕರಣದ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿತ್ತು.

ನಾಮಪತ್ರಗಳ ಪರಿಶೀಲನೆ ಅಂತ್ಯ: 34 ತಿರಸ್ಕೃತ, 172 ಉಮೇದುವಾರಿಕೆಗಳು ಕ್ರಮಬದ್ಧ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರ ಸ್ಥಳೀಯ ಸಂಸ್ಥೆಯ ಚುನಾವಣೆಗೆ ಅವಳಿ ನಗರದ ಒಟ್ಟು 35 ವಾರ್ಡ್’ಗಳಿಗೆ ಸಲ್ಲಿಕೆಯಾಗಿದ್ದ ಅಭ್ಯರ್ಥಿಗಳ ನಾಮಪತ್ರಗಳ ಪರಿಶೀಲನೆ ಗುರುವಾರ ನಗರಸಭೆ ಕಚೇರಿಯಲ್ಲಿ ನಡೆಯಿತು.

ನಗರಸಭೆ ಚುನಾವಣೆಗೆ ಒಟ್ಟು 206 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಕಾಂಗ್ರೆಸ್ 49, ಬಿಜೆಪಿ 57, ಜೆಡಿಎಸ್ 13, ಪಕ್ಷೇತರ 74, ಕೆಆರ್‌ಎಸ್ 2, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಎಐಎಂ, ಎಂಐಎಂ ಹಾಗೂ ಎಎಪಿ ತಲಾ 1, ಎಐಎಂಐಎಂ 2, ರಾಣಿ ಚೆನ್ನಮ್ಮ ಪಕ್ಷದಿಂದ 5 ನಾಮಪತ್ರಗಳು ಸೇರಿ ಒಟ್ಟು 206 ಉಮೇದುವಾರಿಕೆಗಳು ಸಲ್ಲಿಕೆಯಾಗಿದ್ದವು.

ಅದರಂತೆ, ಗುರುವಾರ ನಡೆದ ನಾಮಪತ್ರಗಳ ಪರಿಶೀಲನೆ ವೇಳೆ 34 ಉಮೇದುವಾರಿಕೆಗಳು ತಿರಸ್ಕೃತಗೊಂಡಿದ್ದು, ಒಟ್ಟು 172 ನಾಮಪತ್ರಗಳು ಕ್ರಮಬದ್ಧವಾಗಿವೆ. ಇದರೊಂದಿಗೆ ಚುನಾವಣೆಗೆ 172 ಜನ ಅಂತಿಮವಾಗಿ ನಾಮನಿರ್ದೇಶಿತಗೊಂಡಂತಾಗಿದೆ.

ತಿರಸ್ಕೃತಗೊಂಡ ನಾಮಪತ್ರಗಳ ವಾರ್ಡ್ವಾರು ವಿವರ

ವಾರ್ಡ್ ನಂ.1ರಲ್ಲಿ 4, ವಾರ್ಡ್ ನಂ.2ರಲ್ಲಿ 3, ವಾರ್ಡ್ ನಂ.3ರಲ್ಲಿ 1, ವಾರ್ಡ್ ನಂ.4ರಲ್ಲಿ 1, ವಾರ್ಡ್ ನಂ.5ರಲ್ಲಿ 2, ವಾರ್ಡ್ ನಂ.6ರಲ್ಲಿ 2, ವಾರ್ಡ್ ನಂ.9ರಲ್ಲಿ 1, ವಾರ್ಡ್ ನಂ.10ರಲ್ಲಿ 1, ವಾರ್ಡ್ ನಂ.11ರಲ್ಲಿ 3, ವಾರ್ಡ್ ನಂ.12ರಲ್ಲಿ 3, ವಾರ್ಡ್ ನಂ.23ರಲ್ಲಿ 1, ವಾರ್ಡ್ ನಂ.26ರಲ್ಲಿ 2, ವಾರ್ಡ್ ನಂ.29ರಲ್ಲಿ 2, ವಾರ್ಡ್ ನಂ.30ರಲ್ಲಿ 2, ವಾರ್ಡ್ ನಂ.31ರಲ್ಲಿ 3, ವಾರ್ಡ್ ನಂ.32ರಲ್ಲಿ 1, ವಾರ್ಡ್ ನಂ.33ರಲ್ಲಿ 1 ಹಾಗೂ ವಾರ್ಡ್ ನಂ.35ರಲ್ಲಿ ಓರ್ವ ಅಭ್ಯರ್ಥಿಯ ನಾಮಪತ್ರ ಸೇರಿ ಒಟ್ಟು 34 ಉಮೇದುವಾರಿಕೆಗಳು ತಿರಸ್ಕಾರಗೊಂಡಿವೆ ಎಂದು ಗದಗ ತಹಶೀಲ್ದಾರ ಕಿಶನ್ ಕಲಾಲ ತಿಳಿಸಿದ್ದಾರೆ.

error: Content is protected !!