‘ಉತ್ತರ ಕರ್ನಾಟಕಕ್ಕೆ ಆದ್ಯತೆ ಕೊಡವ ಹಿನ್ನೆಲೆಯಲ್ಲಿ ಈ ಭಾಗದ ಜ್ವಲಂತ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆಯಾಗಲಿ ಎಂಬ ಉದ್ದೇಶದಿಂದ ಅಧಿವೇಶನ ನಡೆಯುತ್ತಿದೆ. ಆದರೆ, ಕಾಂಗ್ರೆಸ್ ಕೇವಲ ರಾಜಕೀಯ ಲಾಭ ಪಡೆಯಲು ಮುಂದಾಗುತ್ತಿದೆ. ಇವರು ಯಾಕೆ ಪ್ರತಿಭಟನಾ ರ‌್ಯಾಲಿ ಮಾಡುವ ಮೂಲಕ ನಾಟಕ ಮಾಡುತ್ತಿದ್ದಾರೆ ಎಂಬುವುದು ತಿಳಿಯುತ್ತಿಲ್ಲ’ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಕಿಡಿಕಾರಿದರು.
ಗುರುವಾರ ನಗರದ ತಮ್ಮ ಸ್ವನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ‘ನಮ್ಮ ಸರ್ಕಾರ ಅಧಿವೇಶನದಲ್ಲಿ ಚರ್ಚೆಗೆ ಸಿದ್ಧವಿದೆ. ನಿಮ್ಮ ಪ್ರಶ್ನೆಗೆ ಉತ್ತರ ಕೊಡಲು ನಮ್ಮ ಮಂತ್ರಿಗಳು ಸಿದ್ಧರಿದ್ದಾರೆ. ಆದರೆ, ಅಧಿಕಾರ ಕಳೆದುಕೊಂಡ ಹತಾಶೆಯಿಂದ ಕಾಂಗ್ರೆಸ್ ಈ ರೀತಿ ಕೆಲಸ ಮಾಡುತ್ತಿದೆ. ತಾಕತ್ತಿದ್ದರೆ ಕಾಂಗ್ರೆಸ್ ನವರು ಚರ್ಚೆಯಲ್ಲಿ ಪಾಲ್ಗೊಳ್ಳಲಿ ಎಂದು ಸವಾಲ್ ಹಾಕಿದ ಅವರು, ಸ್ವಾರ್ಥವಿಟ್ಟುಕೊಂಡು ರ‌್ಯಾಲಿ ಮಾಡಿ ಜನರ ದಿಕ್ಕು ತಪ್ಪಿಸುವುದು, ಕಲಾಪದ ಸಮಯ ವ್ಯರ್ಥ ಮಾಡುವುದು ಸರಿಯಲ್ಲ’ ಎಂದರು.
‘ಕಾಂಗ್ರೆಸ್ ನಾಯಕರು ಪರ್ಸಂಟೇಜ್ ಪಿತಾಮಹರು. ನಾವು ಸಿದ್ದರಾಮಯ್ಯನವರ ಸರ್ಕಾರ 10 ಪರ್ಸೆಂಟ್ ಸರ್ಕಾರ ಅಂತಾ ಆರೋಪ ಮಾಡಿದ್ವಿ. ಈಗ ಅವರು ಆರೋಪಿಸುತ್ತಿದ್ದಾರೆ. ಆದರೆ, ಇದು ಸತ್ಯಕ್ಕೆ ದೂರವಾಗಿದೆ.
ರಾಜಕಾರಣಕ್ಕಾಗಿ ಕಾಂಗ್ರೆಸ್ ನಾಯಕರು ಈ ರೀತಿ ದೂರುತ್ತಿದ್ದಾರೆ. ಕಾಂಗ್ರೆಸ್ ನವರು ಕುಂಬಳಕಾಯಿ ಕಳ್ಳ ಯಾರು ಅಂದರೆ ಅವರು ತಮ್ಮ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದು, ಸತ್ಯ ಹರಿಶ್ಚಂದ್ರರು ಅಂತಾ ತೋರಿಸಿಕೊಳ್ಳಲು ಮುಂದಾಗಿದ್ದಾರೆ. ದಾಖಲೆಗಳಿದ್ದರೆ ರಾಜ್ಯದ ಜನರಿಗೆ ತೋರಿಸಲಿ’ ಎಂದು 40 ಪರ್ಸಂಟೇಜ್ ಸರ್ಕಾರ ಎಂಬ ಕಾಂಗ್ರೆಸ್ ನವರ ಆರೋಪಕ್ಕೆ ತಿರುಗೇಟು ನೀಡಿದರು.
ಶಾಲೆಯಲ್ಲಿ ಮೊಟ್ಟೆ ಕೊಡುವ ವಿಚಾರಕ್ಕೆ ‘ಯಾರಿಗೆ ಮೊಟ್ಟೆ ಬೇಕೋ ಅವರು ಮೊಟ್ಟೆ ತಿನ್ನುತ್ತಾರೆ’ ಎಂದು ಒಂದು ವಾಕ್ಯದಲ್ಲಿ ಉತ್ತರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ ಇದ್ದರು.
ಮತಾಂತರ ಮಸೂದೆ ಬಗ್ಗೆ ನನಗೆ ಗೊತ್ತಿಲ್ಲ. ಹೀಗಾಗಿ ನೋಡಿ ಮಾತನಾಡುತ್ತೇನೆ. ನಾನು ಬಿಲ್ ನೋಡಿಲ್ಲ. ಆದರೆ, ಮತಾಂತರ ಕಾಯ್ದೆ ಕುರಿತು ಚರ್ಚೆಯಾಗುತ್ತಿದೆ.
ಹುಡುಗಿಯ ಮದುವೆ ವಯಸ್ಸು ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇನ್ನು ಮುಂದೆ ಹುಡುಗಿಯ ಮದುವೆಯ ವಯಸ್ಸು 18 ರಿಂದ 21ಕ್ಕೆ ಮಾರ್ಪಾಡು ಆಗಲಿದ್ದು, ದೇಶದಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಸಮಾನ ವಯಸ್ಸು ಕಾನೂನು ಜಾರಿಗೊಳ್ಳಲಿದೆ.
ಕೇಂದ್ರ ಸರ್ಕಾರ ಮಹಿಳೆಯರ ಬಾಲ್ಯ ವಿವಾಹ, ಶಿಕ್ಷಣ, ಆರೋಗ್ಯ, ಮಹಿಳಾ ದೌರ್ಜನ್ಯ ತಪ್ಪಿಸುವಂತಹ ಇನ್ನಿತರ ಅನೇಕ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಂಡಿದೆ.
ಆರೋಗ್ಯ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಹಿರಿಯ ಅಧಿಕಾರಿಗನ್ನೊಳಗೊಂಡ ಜಯಾ ಜೇಟ್ಲಿ ನೇತೃತ್ವದ ನೀತಿ ಆಯೋಗದ ಶಿಫಾರಸ್ಸಿನನ್ವಯ ಕೇಂದ್ರ ಸಚಿವ ಸಂಪುಟ ಈ ತೀರ್ಮಾನ ಕೈಗೊಂಡಿದೆ.
ಬಾಲ್ಯ ವಿವಾಹ ತಡೆ ಕಾಯ್ದೆ ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮಸೂದೆಯನ್ನು ಮಂಡಿಸಬೇಕು. ಎರಡು ಸದನಗಳಲ್ಲಿ ಅಂಗೀಕರಿಸಿ ಒಪ್ಪಿಗೆ ಸೂಚಿಸಿದ ನಂತರ ರಾಷ್ಟ್ರಪತಿ ಅನುಮೋದನೆಗೆ ಅಧಿಸೂಚನೆ ಪ್ರಕಟವಾದ ಬಳಿಕ ಕಾನೂನು ಜಾರಿಯಾಗಲಿದೆ. ಬಾಲ್ಯ ವಿವಾಹ ನಿಷೇಧ, ವಿಶೇಷ ವಿವಾಹ ಕಾಯ್ದೆ ಹಾಗೂ ಹಿಂದೂ ವಿವಾಹ ಕಾಯ್ದೆಗೆ ತಿದ್ದುಪಡೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಕಳೆದ ವರ್ಷದ ಸ್ವಾತಂತ್ರ್ಯೋತ್ಸವ ಸಂದರ್ಭದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹಿಳೆಯರ ಮದುವೆ ವಯಸ್ಸು ಏರಿಕೆಯ ಸುಳಿವು ನೀಡಿದ್ದರು. ಇದು ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಸದ್ಯ ಸಚಿವ ಸಂಪುಟ ಮಹಿಳೆಯರ ಮದುವೆ ವಯಸ್ಸು ಏರಿಕೆಗೆ ಒಪ್ಪಿಗೆ ಸೂಚಿಸಿದ್ದು, ಇನ್ನು ಕೆಲವೇ ತಿಂಗಳಲ್ಲಿ ಕಾಯ್ದೆಯಾಗಿ ಜಾರಿಗೆ ಬರುವ ಸಾಧ್ಯತೆಗಳಿವೆ.
ಗದಗ-ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯ ದಿನವಾಗಿದ್ದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಅತ್ಯುತ್ಸಾಹದಿಂದ ತಮ್ಮ ಅಪಾರ ಬೆಂಬಲಿಗರೊಂದಿಗೆ ತಂಡೋಪತಂಡವಾಗಿ ಆಗಮಿಸಿ ಉಮೇದುವಾರಿಕೆ ಸಲ್ಲಿಸಿದರು. ಜನಜಂಗುಳಿಯಿಂದ ತುಂಬಿದ್ದ ನಗರಸಭೆ ಆವರಣ ಸುಮಾರು ಎಂಟು ವರ್ಷಗಳ ಅನಂತರ ಕಳೆಗಟ್ಟಿತ್ತು.
ಒಂದೆಡೆ, 2013ರ ಬಳಿಕ ಗದಗ-ಬೆಟಗೇರಿ ಸ್ಥಳೀಯ ಸಂಸ್ಥೆಯ ಚುನಾವಣೆ ನಡೆಯುತ್ತಿರುವುದು ಅವಳಿ ನಗರದ ಜನರಲ್ಲಿ ಸಂತಸ ಮೂಡಿಸಿದೆ. ಮತ್ತೊಂದೆಡೆ, ಟಿಕೆಟ್ ಸಿಕ್ಕ ಖುಷಿಯಲ್ಲಿದ್ದ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಗೆಲುವಿನ ನಗೆ ಬೀರುತ್ತೇನೆ ಎಂಬ ಭಾವ ಎದ್ದು ಕಾಣಿಸುತ್ತಿತ್ತು. ಹೀಗಾಗಿ ಪಕ್ಷದ ನಾಯಕರೊಂದಿಗೆ, ಡೊಳ್ಳು ಮೇಳಗಳ ಮೆರವಣಿಗೆ, ಪಾದಯಾತ್ರೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿ ಚುನಾವಣಾ ಯುದ್ಧಕ್ಕೆ ಅಣಿಯಾದರು. ಇನ್ನು ನಾಮಪತ್ರ ಸಲ್ಲಿಸುವ ವೇಳೆ ಗೆದ್ದಿರುವ ಭಾವನೆಯಲ್ಲೇ ಅಭ್ಯರ್ಥಿ ಪರ ಬೆಂಬಲಿಗರು ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು.
ಎಷ್ಟು ನಾಮಪತ್ರ?
ನಗರಸಭೆ ಚುನಾವಣೆಗೆ ಒಟ್ಟು 206 ನಾಮಪತ್ರಗಳು ಸಲ್ಲಿಕೆಯಾಗಿವೆ. ಅದರಲ್ಲಿ ಕಾಂಗ್ರೆಸ್ 49, ಬಿಜೆಪಿ 57, ಜೆಡಿಎಸ್ 13, ಪಕ್ಷೇತರ 74, ಕೆಆರ್‌ಎಸ್ 2, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಎಐಎಂ, ಎಂಐಎಂಐಎಂ ಹಾಗೂ ಎಎಪಿ ತಲಾ 1, ಎಐಎಂಐಎಂ 2, ರಾಣಿ ಚೆನ್ನಮ್ಮ ಪಕ್ಷದಿಂದ 5 ನಾಮಪತ್ರಗಳು ಸಲ್ಲಿಕೆಯಾಗಿವೆ. ಡಿ.10ರಂದು 1, ಡಿ. 13ರಂದು 25, ಡಿ. 14ರಂದು 52 ಸೇರಿ 85 ನಾಮಪತ್ರಗಳು ಸಲ್ಲಿಕೆಯಾಗಿದ್ದರು. ಕೊನೆಯ ದಿನವಾದ ಡಿ.15ರಂದು ಬರೊಬ್ಬರಿ 121 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಕೆ ಆರ್ ಎಸ್ ಪಕ್ಷದ ಶಾಂತಪ್ಪ ಚವಡಿ (ವಾ.ನಂ.22), ವೆಲ್ಫೇರ್ ಪಾರ್ಟಿ ಜೀವನಸಾಬ ಉಮಚಗಿ(ವಾ.ನಂ.22) ಆಮ್ ಆದ್ಮಿ ಪಕ್ಷದ ಫಕ್ರುದ್ದೀನ ನಾಗನೂರ (ವಾ.ನಂ.22), ನಾಗರಾಜ ಬಸವ (ವಾ.ನಂ.10), ರಾಣಿ ಚೆನ್ನಮ್ಮ ಪಕ್ಷದ ಮೇರಿ ರಾಜಾವೆಂಕಟೇಶ ಕಾರಬಾರಿ (ವಾ.ನಂ.4), ನಬಿದಾಬೇಗಂ ಕುರ್ತಕೋಟಿ (ವಾ.ನಂ.5), ತಯ್ಯಾಬ ಹೊಸಮನಿ (ವಾ.ನಂ.10), ಮೇರಿ ಕಾರಬಾರಿ (ವಾ.ನಂ.9), ಎಐಎಂಐಎಂ ಪಕ್ಷದ ಮಹ್ಮದ್ಆಸ್ರಿಕ್ ನಾಯ್ಕರ (ವಾ.ನಂ.22), ತಾಜುದ್ದೀನ ಬಳ್ಳಾರಿ (ವಾ.ನಂ.10) ಉಮೇದುವಾರಿಕೆ ಸಲ್ಲಿಸಿದ್ದಾರೆ.
ಗದಗ-ಬೆಟಗೇರಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಡ್ಯಾನ್ಸ್ ಮಾಡುತ್ತಿದ್ದ ಮಹಿಳೆಯರ ಮೇಲೆ ಹಣ ತೂರಿದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮೆರವಣಿಗೆಯ ಮಜಲಿನಲ್ಲಿ ಕುಣಿಯುತ್ತಿದ್ದ ಮಹಿಳೆಯರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಣ ತೂರಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದ್ದು, ವಿವಾದಕ್ಕೆ ಕಾರಣವಾಗಿದೆ.
ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಬುಧವಾರ(ಡಿ.15)ದಂದು ನಗರಸಭೆ ವಾರ್ಡ್ ನಂ.31ರ ಕಾಂಗ್ರೆಸ್ ಅಭ್ಯರ್ಥಿ ಗೀತಾಬಾಯಿ ಹಬೀಬ ಹಾಗೂ ವಾರ್ಡ್ ನಂ.32ರ ಕಾಂಗ್ರೆಸ್ ಅಭ್ಯರ್ಥಿ ಸುಮನ್ ಗಣಪತಿ ಜಿತೂರಿ ಅವರ ಮೆರವಣಿಗೆಯಲ್ಲಿ ಇಬ್ಬರು ಮಹಿಳೆಯರು ಭಾಗವಹಿಸಿ ಕುಣಿಯುತ್ತಿದ್ದರು. ಈ ವೇಳೆ ಕೆಲವರು ಕುಣಿಯುತ್ತಿದ್ದ ಮಹಿಳೆಯರ ಮೇಲೆ ಹಣ ತೂರಿದ್ದು, ಕಾರ್ಯಕರ್ತರ ಈ ನಡುವಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ನೃತ್ಯ ಮಾಡುತ್ತಿದ್ದ ಮಹಿಳೆಯರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಣ ತೂರಿದ್ದಕ್ಕಾಗಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೇ, ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಯಾವ ಸಂದೇಶ ಸಾರಲು ಹೊರಟಿದೆ ಎಂದು ಅವಳಿ ನಗರದ ಜನರು ಪ್ರಶ್ನಿಸುತ್ತಿದ್ದಾರೆ. ಚುನಾವಣಾ ಆಯೋಗ ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುವುದು ಎಂಬುದು ಕಾದುನೋಡಬೇಕಿದೆ.
ಹಣ ತೂರಿದವರು ಕಾಂಗ್ರೆಸ್ ಕಾರ್ಯಕರ್ತರಲ್ಲ
31 ಹಾಗೂ 32 ನೇ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸುವ ವೇಳೆ ಮಹಿಳೆಯರ ಮೇಲೆ ಹಣ ತೂರಿದವರು ಕಾಂಗ್ರೆಸ್ ಕಾರ್ಯಕರ್ತರಲ್ಲ, ಹಣ ಹಂಚುವ ವಿಡಿಯೋದಲ್ಲಿ ಇರುವ ಜಾವೇದ್ ಮಾನ್ವಿ ಅವರು, ಬಿಜೆಪಿಯ ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರ ಸಹೋದರರಾಗಿದ್ದು, ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಪಕ್ಷದ ಹೆಸರು ಹಾಳು ಮಾಡಲು ಮಾಡಿರುವ ಷಡ್ಯಂತ್ರ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಎಂ ಎನ್ ಶಾಲಗಾರ ಆರೋಪಿಸಿದ್ದಾರೆ.
ಗದಗ- ಬೆಟಗೇರಿ ನಗರಸಭೆಯ ಚುನಾವಣಾ ಕಾವು ರಂಗೇರಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಪಡೆಯಲು ಸಾಕಷ್ಟು ಅಭ್ಯರ್ಥಿಗಳು ಪೈಪೋಟಿ ನಡೆಸಿದ್ದರು. ಆದರೆ ಎರಡೂ ಪಕ್ಷದಲ್ಲಿ ಅಳಿದು, ತೂಗಿ ಟಿಕೆಟ್ ಹಂಚಿಕೆ ಮಾಡಿದ್ದರು. ಇದರಿಂದಾಗಿ ಟಿಕೆಟ್ ಪಡೆಯಲು ಕೊನೆಯವರೆಗೂ ತೀವ್ರ ಪೈಪೋಟಿ ನಡೆಸಿದ್ದ ಆಕಾಂಕ್ಷೆಗಳಲ್ಲಿ ತೀವ್ರ ಆಕ್ರೋಶ ತರಿಸಿತ್ತು. ಹೀಗಾಗಿಯೇ ಕೆಲವು ಟಿಕೆಟ್ ಆಕಾಂಕ್ಷೆಗಳು ಬಂಡಾಯ ಎದ್ದಿದ್ದಾರೆ.
5 ನೇ ವಾರ್ಡ್ ಗೆ ಈ ಮೊದಲು ಬಿಜೆಪಿ ಶಶಿಕಲಾ ಶ್ಯಾವಿ ಅನ್ನೋವರಿಗೆ ಟಿಕೆಟ ನೀಡಿ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಆದರೆ ಇದು ಸ್ಥಳೀಯ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶ ತಂದಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಇದ್ದವರಿಗೆ ಕರೆ ತಂದು ಟಿಕೆಟ್ ನೀಡಲಾಗಿದೆ ಎಂದು ಕಾರ್ಯಕರ್ತರು ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದಿದ್ದರು. ಇದರಿಂದಾಗಿ ನಿನ್ನೆ ರಾತ್ರಿ ಲಕ್ಷ್ಮಿ ಖಾಕಿ ಎಂಬುವರಿಗೆ ಟಿಕೆಟ ಘೋಷಣೆ ಮಾಡಿ ಕಾರ್ಯಕರ್ತರ ಆಕ್ರೋಶ ತಣ್ಣಾಗಾಗಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಆರಂಭದಲ್ಲಿಯೇ ಆಘಾತ ಎದುರಾಗಿದೆ. 14 ವಾರ್ಡ್ ಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ತಡವರಿಸಿದ್ದ ಮುಖಂಡರು, ನಿನ್ನೆ ಅಷ್ಟೇ 14 ವಾರ್ಡ್ ಗೆ ಪರಶುರಾಮ ನಾಯ್ಕರ್ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದರು. ಆದರೆ ಸಂಜೆಯವರೆಗೂ ಕಾಯ್ದು ಪರಿಸ್ಥಿತಿ ಅವಲೋಕಿಸಿದ ಪರಶುರಾಮ, ನಾಮಪತ್ರ ಸಲ್ಲಿಸಲು ಒಲ್ಲೆ ಎಂದು ಮುಖಂಡರಿಗೆ ಆಘಾತ ನೀಡಿದರು.
ಈ ಬಾರಿ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡಲ್ಲ ಎಂದು ಮೊದಲೇ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಹೇಳಿದ್ದ ಮಾಜಿ ಸದಸ್ಯ ಶ್ರೀನಿವಾಸ್ ಹುಯಿಲಗೋಳ ಗೆ ಮತ್ತೇ ಸ್ಪರ್ಧೆ ಮಾಡಲು ಒತ್ತಡ ಹಾಕಿ ಅವರಿಂದಲೇ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ವಿಜಯಸಾಕ್ಷಿ ಗೆ ಪ್ರತಿಕ್ರಿಯೆ ನೀಡಿದ ಪರಶುರಾಮ ನಾಯ್ಕರ್, ನಾವು ಕೇಳಿದ ವಾರ್ಡ್ ಗೆ ಟಿಕೆಟ್ ಕೊಡಲಿಲ್ಲ. ಮತ್ತೊಂದು ವಾರ್ಡ್ ಗೆ ಹೋಗಿ ನಿಲ್ಲುವ ಮನಸ್ಸು ಒಪ್ಪಲಿಲ್ಲ ಎಂದರು.
‘ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷೆಯ ಇತಿಹಾಸ, ಕನ್ನಡ ವಿಷಯಗಳ ಪರೀಕ್ಷೆಗಳನ್ನು ಗದಗ ಜಿಲ್ಲೆಯಲ್ಲಿ ಯಾವ ರೀತಿ ನಡೆಸಿದ್ದೀರಿ. ಕೆಲವು ವಿಷಯಗಳ ಪ್ರಶ್ನೆಗಳು ಯಾಕೆ ಪ್ರಶ್ನೆಪತ್ರಿಕೆಯಲ್ಲಿ ಇರಲಿಲ್ಲ ಎಂಬುವುದರ ಕುರಿತು ಸಂಪೂರ್ಣ ಮಾಹಿತಿ ಒದಗಿಸಿ ಎಂದು ಪಿಯು ಮಂಡಳಿಯ ನಿರ್ದೇಶಕಿ ಸ್ನೇಹಲತಾ ಅವರು ಸೋಮವಾರ (ಡಿ.13) ಗದಗ ಡಿಡಿಪಿಯು ಅವರಿಗೆ ಪತ್ರದ ಮೂಲಕ ಮಾಹಿತಿ ಕೇಳಿದ್ದಾರೆ ಎನ್ನಲಾಗಿದೆ.
ಡಿ.12ರಂದು ‘ವಿಜಯಸಾಕ್ಷಿ ಜಿಲ್ಲೆಯಲ್ಲಿ ನಡೆಯುತ್ತಿರುವ ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷೆಯ ಕುರಿತು ‘ಪಿಯುಸಿ: ‘ಕಾಟಾಚಾರದ ಮಧ್ಯಂತರ ಪರೀಕ್ಷೆ ಬೇಕೇ? ಎಂಬ ಶೀರ್ಷಿಕೆಯಡಿ ಪ್ರಶ್ನೆಪತ್ರಿಕೆಗಳಲ್ಲಾದ ಲೋಪದೋಷ ಹಾಗೂ ಡಿಡಿಪಿಯು ರಾಜೂರು ಅವರು ಪರೀಕ್ಷಾ ಪಾವಿತ್ರ್ಯಕ್ಕೆ ಧಕ್ಕೆಯನ್ನುಂಟು ಮಾಡಿರುವ ಕುರಿತು ಸವಿಸ್ತಾರವಾದ ಸುದ್ದಿ ಪ್ರಕಟಿಸಿತ್ತು. ಅಲ್ಲದೆ, ಈ ಬಗ್ಗೆ ಪಿಯು ಮಂಡಳಿ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕ(ಪರೀಕ್ಷೆ)ರ ಗಮನಕ್ಕೂ ತರಲಾಗಿತ್ತು. ಈ ಬೆನ್ನಲ್ಲೇ ಪಿಯು ಮಂಡಳಿ ಕೇಂದ್ರ ಕಚೇರಿಯಿಂದ ಡಿಡಿಪಿಯು ಅವರಿಗೆ ಪತ್ರ ಬಂದಿದೆ.
ದ್ವಿತೀಯ ಪಿಯುಸಿ ಮಧ್ಯಂತರ ಪರೀಕ್ಷೆಯ ಹಿನ್ನೆಲೆಯಲ್ಲಿ ಡಿ.9ರಂದು ಗದಗ ಜಿಲ್ಲೆಯಲ್ಲಿ ನಡೆದ ಇತಿಹಾಸ ವಿಷಯದ ಪ್ರಶ್ನೆಪತ್ರಿಕೆಯಲ್ಲಿ ಭೂಪಟ ಬಂದಿರಲಿಲ್ಲ. ಕನ್ನಡ ವಿಷಯದ ಪ್ರಶ್ನೆ ನಂ.27 ಮತ್ತು 28 ಮುದ್ರಣ ಆಗಿರಲಿಲ್ಲ ಎಂಬ ಮಾಹಿತಿ ಸಿಕ್ಕಿದ್ದು, ವರದಿ ತರಿಸಿಕೊಂಡಿದ್ದೇವೆ. ಈ ಬಗ್ಗೆ ಕ್ರಮ ಕೈಗೊಂಡಿರುವ ಕುರಿತು ಗದಗ ಡಿಡಿಪಿಯುಗೆ ಕೇಳಿದ್ದೇವೆ. ಅವರು ‘ಪರೀಕ್ಷಾ ಸಮಯದಲ್ಲಿಯೇ ಕುರ್ತಕೋಟಿಯ ಸರ್ಕಾರಿ ಕಾಲೇಜಿನಿಂದ ಭೂಪಟವನ್ನು ಝರಾಕ್ಸ್ ಮಾಡಿಸಿ ಎಲ್ಲ ಕಾಲೇಜುಗಳಿಗೂ ಕೊಟ್ಟಿದ್ದೇವೆ. ಕನ್ನಡ ಉಪನ್ಯಾಸಕರನ್ನು ಕರೆಸಿ ಪ್ರಶ್ನೆ ಪತ್ರಿಕೆಯಿಂದ ಬಿಟ್ಟು ಹೋಗಿದ್ದ 27 ಮತ್ತು 28ನೇ ಪ್ರಶ್ನೆಗೆ ವಿದ್ಯಾರ್ಥಿಗಳಿಗೆ ಬೇರೆ ಪ್ರಶ್ನೆಗಳನ್ನು ಕೊಟ್ಟು ಪರೀಕ್ಷೆ ಬರೆಸಿದ್ದೇವೆ ಎಂದು ಪತ್ರ ಕಳುಹಿಸಿದ್ದಾರೆ ಎಂದು ಪಿಯು ಮಂಡಳಿಯ ಪರೀಕ್ಷಾಂಗದ ಜಂಟಿ ನಿರ್ದೇಶಕಿ ಶೈಲಜಾ ‘ವಿಜಯಸಾಕ್ಷಿಗೆ ತಿಳಿಸಿದರು.
ಇತಿಹಾಸ ವಿಷಯದಲ್ಲಿ ಕಣ್ಮರೆಯಾಗಿದ್ದ ಭೂಪಟ ಹಾಗೂ ಕನ್ನಡ ವಿಷಯದಲ್ಲಿ ನಾಪತ್ತೆಯಾಗಿದ್ದ ಎರಡು ಪ್ರಶ್ನೆಗಳನ್ನು ಡಿಡಿಪಿಯು ಎಚ್.ಎಸ್. ರಾಜೂರು ಅವರು ಕೇವಲ ಮೂರು ಗಂಟೆಗಳ ಪರೀಕ್ಷಾ ಅವಧಿಯಲ್ಲಿ ಪ್ರಶ್ನೆಗಳನ್ನು ಮುದ್ರಣ ಮಾಡಿಸಿ ಜಿಲ್ಲೆಯ ಎಲ್ಲ ಕಾಲೇಜುಗಳಿಗೂ ಸರಬರಾಜು ಮಾಡಲು ಸಾಧ್ಯವಿಲ್ಲ. ಕನ್ನಡ ವಿಷಯದಲ್ಲಿ ಬಿಟ್ಟು ಹೋಗಿದ್ದ ಎರಡೂ ಪ್ರಶ್ನೆ ಹಾಗೂ ಇತಿಹಾಸದ ಭೂಪಟವನ್ನು ವಾಟ್ಸ್‌ಆಪ್ ಮೂಲಕ ಶೇರ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಪರೀಕ್ಷಾ ಕೊಠಡಿಗಳಲ್ಲಿ ಮೊಬೈಲ್ ನಿಷಿದ್ಧವಾಗಿದ್ದರೂ, ಪರೀಕ್ಷಾ ಪಾವಿತ್ರ್ಯ ಕಾಪಾಡಬೇಕಿರುವ ಡಿಡಿಪಿಯು ಮೊಬೈಲ್‌ಗಳ ಮೂಲಕ ಪ್ರಶ್ನೆಗಳನ್ನು ಹರಿಬಿಟ್ಟಿದ್ದೇಕೆ? ಇದು ಪ್ರಶ್ನೆ ಪತ್ರಿಕೆ ಸೋರಿಕೆ ಅಲ್ಲವೇ? ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿದ ಅಧಿಕಾರಿಯ ವಿರುದ್ಧ ಕ್ರಮ ಯಾವಾಗ? ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಲಭಿಸಿಲ್ಲ.
ಪ್ರಶ್ನೆಪತ್ರಿಕೆಗಳ ಮುದ್ರಣ ಎಲ್ಲಿ?
ಪ್ರತಿ ಜಿಲ್ಲೆಯ ಪ್ರಶ್ನೆ ಪತ್ರಿಕೆಗಳಲ್ಲಿ ವ್ಯತ್ಯಾಸ ಇರುವುದರಿಂದ ಪಿಯು ಮಂಡಳಿ ನಿಯಮದ ಪ್ರಕಾರ ಜಿಲ್ಲೆಯಲ್ಲಿ ಪ್ರಶ್ನೆಪತ್ರಿಕೆಗಳ ಮುದ್ರಣ ಮಾಡಿಸುವಂತಿಲ್ಲ. ಪ್ರಶ್ನೆಪತ್ರಿಕೆಗಳ ಮುದ್ರಣಕ್ಕೆ ಟೆಂಡರ್ ಆಗಿರುವ ಪ್ರಿಂಟಿಂಗ್ ಪ್ರೆಸ್‌ನವರಿಗೆ ಪ್ರಭಾವಿ ವ್ಯಕ್ತಿಗಳು ಆಮಿಷವೊಡ್ಡಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುವಂತೆ ಮಾಡಬಹುದು. ಪರೀಕ್ಷಾ ಪಾವಿತ್ರ್ಯ ಕಾಪಾಡುವ ಹಿತದೃಷ್ಟಿಯಿಂದ ಪಕ್ಕದ ಜಿಲ್ಲೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಮುದ್ರಣ ಮಾಡಿಸಿ ತರಬೇಕು. ಆದರೆ, ಗದಗ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮುದ್ರಣ ಕಾಶಿ ಎಂದು ಖ್ಯಾತಿ ಹೊಂದಿರುವ ಗದಗದಲ್ಲಿಯೇ ಪ್ರಶ್ನೆ ಪತ್ರಿಕೆಗಳನ್ನು ಮುದ್ರಣ ಮಾಡಿಸಿದ್ದಲ್ಲದೆ, ಡಿಡಿಪಿಯು ಅವರು ಪರೀಕ್ಷಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎನ್ನಲಾಗುತ್ತಿದೆ.
ಫ್ರೂಪ್ ರೀಡ್ ಮಾಡಿದ್ದು ಯಾರು?
ಪಿಯು ಮಂಡಳಿ ಕೇಂದ್ರ ಕಚೇರಿಯಿಂದ ಕಳುಹಿಸಿದ ಪ್ರತಿ ವಿಷಯದ ಪ್ರಶ್ನೆ ಪತ್ರಿಕೆಗಳು ಮುದ್ರಣಗೊಳ್ಳುವ ಮುನ್ನ ನೈಪುಣ್ಯ ಹೊಂದಿರುವ ಆಯಾ ವಿಷಯಗಳ ಶಿಕ್ಷಕರು, ತಜ್ಞರನ್ನೊಳಗೊಂಡ ಒಂದು ಸಮಿತಿ ರಚಿಸಬೇಕು. ಸಮಿತಿಯ ಸಂಪನ್ಮೂಲ ವ್ಯಕ್ತಿಗಳು ಪ್ರತಿ ಪ್ರಶ್ನೆಪತ್ರಿಕೆಗಳನ್ನು ಫ್ರೂಫ್ ರೀಡ್ ಮಾಡಿ ಎಲ್ಲವೂ ಸರಿಯಾಗಿದೆ ಎಂದು ಒಪ್ಪಿಗೆ ಸೂಚಿಸಿದ ಬಳಿಕವಷ್ಟೇ ಅಂತಿಮವಾಗಿ ಪ್ರಶ್ನೆಪತ್ರಿಕೆಗಳನ್ನು ಮುದ್ರಣ ಮಾಡಿಸಬೇಕು. ಆದರೆ, ಗದಗ ಡಿಡಿಪಿಯು ಎಚ್.ಎಸ್.ರಾಜೂರು ಅವರ ನಿರ್ಲಕ್ಷ್ಯದಿಂದಾಗಿ ಅದ್ಯಾವುದು ನಡೆದಿಲ್ಲ ಎನ್ನಲಾಗುತ್ತಿದೆ. ಪಿಯು ಮಂಡಳಿಯ ನಿಯಮಾನುಸಾರ ಪರೀಕ್ಷೆಗಳು ನಡೆದಿದ್ದರೆ ಜಿಲ್ಲೆಯಲ್ಲಿ ಇಂತಹ ಅವಘಡಗಳು ಸಂಭವಿಸುತ್ತಿರಲಿಲ್ಲ ಎನ್ನಲಾಗಿದೆ.
ಜಿಲ್ಲೆಯಲ್ಲಿ ಯಾವ ರೀತಿಯ ಪರೀಕ್ಷೆ ನಡೆಸಲಾಗಿದೆ ಎಂಬುವುದರ ಕುರಿತು ತನಿಖೆ ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಪರೀಕ್ಷೆಯ ಬಗ್ಗೆ ಸಂಪೂರ್ಣ ವರದಿ ಕೊಡುವಂತೆ ಡಿಡಿಪಿಯುಗೆ ಕೇಳಿದ್ದೇವೆ. ಈಗಾಗಲೇ ಒಂದು ಪತ್ರ ಕೊಟ್ಟಿದ್ದು, ಪಿಯು ಮಂಡಳಿಯಿಂದ ಮತ್ತೊಂದು ಪತ್ರ ಕಳುಹಿಸುತ್ತಿದ್ದೇವೆ. ಎಲ್ಲ ಕಾಲೇಜುಗಳಿಗೂ ಭೂಪಟ, ಪ್ರಶ್ನೆಗಳನ್ನು ಸರಬರಾಜು ಮಾಡಿರುವ ಬಗ್ಗೆ ಖಚಿತಪಡಿಸಿಕೊಂಡು ಕ್ರಮ ಕೈಗೊಳ್ಳುವ ಕುರಿತು ತೀರ್ಮಾನಿಸಲಾಗುವುದು. ಅಲ್ಲದೇ, ಪ್ರಶ್ನೆಪತ್ರಿಕೆ ಮುದ್ರಿಸುವುದಕ್ಕಿಂತ ಮುನ್ನ ಅವರು ಗಮನಿಸಬೇಕಿತ್ತು. ಕೇಂದ್ರ ಕಚೇರಿಯಿಂದ ಕೊಟ್ಟಿರುವ ಪ್ರಶ್ನೆಪತ್ರಿಕೆ ಮುದ್ರಣ ಮಾಡಿಸಬೇಕಿರುವುದು ಅವರ ಜವಾಬ್ದಾರಿಯಾಗಿದ್ದು, ಇದರಲ್ಲಿ ಡಿಡಿಪಿಯು ತಪ್ಪಿದೆ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ನೋಟಿಸ್ ಜಾರಿ ಮಾಡಲಾಗುವುದು.
ಶೈಲಜಾ, ಜಂಟಿ ನಿರ್ದೇಶಕರು (ಪರೀಕ್ಷೆ)
‘ಪಿಯು ಮಂಡಳಿ ನಿರ್ದೇಶಕರು ಮಾಹಿತಿ ಒದಗಿಸುವಂತೆ ಕೇಳಿದ್ದಾರೆ. ಏನಾಗಿದೆ ಎಂದು ಉತ್ತರ ಬರೆದು ಹೇಳುತ್ತೇನೆ ಎಂದು ಡಿಡಿಪಿಯು ಎಚ್.ಎಸ್.ರಾಜೂರು ಅವರು ಪ್ರತಿಕ್ರಿಯಿಸಲು ಹಿಂದೇಟು ಹಾಕಿದರು.
ಬಸವರಾಜ ಕರುಗಲ್. ವಿಜಯಸಾಕ್ಷಿ ವಿಶೇಷ, ಕೊಪ್ಪಳ: ಸಿನಿಮಾ ಜಗತ್ತಿಗೆ ಮಾಯಾ ಬಜಾರ್ ಅಂತ ಯಾಕೆ ಕರೀತಾರೆ ಅನ್ನೋದಕ್ಕೆ ಶ್ರೇಯಸ್ ಮಂಜು ಅಭಿನಯದ ರಾಣಾ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮ ನಿದರ್ಶನವಾಗಿತ್ತು.
ಇದೇ ಮೊದಲ ಬಾರಿಗೆ ಬಿಗ್ ಬಜೆಟ್ ಸಿನಿಮಾವೊಂದರ ಹಾಡೊಂದು ಕೊಪ್ಪಳ ಜಿಲ್ಲೆಯಲ್ಲಿ ಬಿಡುಗಡೆಗೊಂಡದ್ದು, ಹಾಡನ್ನು ಬಿಡುಗಡೆ ಮಾಡಲು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಂದದ್ದು, ಧ್ರುವ ಬಾಸ್‌ನ್ನ ಕಣ್ತುಂಬಿಕೊಳ್ಳಲು ಬಂದು ಹಲವರು ಮೊಣಕಾಲು ಕೆತ್ತಿಸಿಕೊಂಡದ್ದು… ಇವೆಲ್ಲ ಮಾಯಾಬಜಾರ್‌ನ ಝಲಕ್.
ಬಹದ್ದೂರ್ ಧ್ರುವ ಭರ್ಜರಿಯಾಗೇ ಎಂಟ್ರಿ ಕೊಟ್ರು. ನೂಕು ನುಗ್ಗಲಿನ ನಡುವೆಯೂ ಇಲ್ಲಿನ ಜನ ಆ್ಯಕ್ಷನ್ ಪ್ರಿನ್ಸ್ ಮತ್ತು ರಾಣಾ ಚಿತ್ರ ತಂಡವನ್ನು ಅದ್ಧೂರಿಯಾಗೇ ಸ್ವಾಗತಿಸಿದ್ರು. ಬ್ಯಾರಿಕೇಡ್‌ಗಳು ಮುರಿದು ಹೋಗುವಷ್ಟು, ಬೆತ್ತ, ಲಾಠಿಗಳು ತುಂಡಾಗುವಷ್ಟು (ಲಾಠಿ ಚಾರ್ಜ್ ಏನಲ್ಲ) ಜನ ಜಮಾಯಿಸಿದ್ದು, ನಿಯಂತ್ರಣಕ್ಕೆ ಪೊಲೀಸರು ಪಟ್ಟ ಪಾಡು, ತಾಯಿ ಹುಲಿಗೆಮ್ಮನಿಗೆ ಪ್ರೀತಿ ಎಂಬಂತಿತ್ತು.
ಅಂತು-ಇಂತು ದಾಂಡಿಗರ ಕೈ ಸರಪಳಿಯ ಮಧ್ಯೆ ಹುಲಿಗೆಮ್ಮ ದೇವಸ್ಥಾನ ಪ್ರವೇಶಿಸಿದ ಚಿತ್ರತಂಡ ಪೂಜೆ ಸಲ್ಲಿಸಿ ವೇದಿಕೆ ಹತ್ತೊಷ್ಟರಲ್ಲಿ ಅರ್ಧ ಗಂಟೆ ಕಳೆದೇ ಹೋಗಿತ್ತು.
ಇಷ್ಟೆಲ್ಲ ಗದ್ದಲದ ನಡುವೆಯೂ ಧ್ರುವ ಅಭಿಮಾನಿಗಳ ಸೆಲ್ಫಿಗೆ ಮುಖವೊಡ್ಡುತ್ತಿದ್ದರು. ವೇದಿಕೆಯ ಮೇಲಿಂದಲೂ ಜನ ಕಾಣುವಂತೆ ತಾವೇ ಸೆಲ್ಫಿ ತೆಗೆದುಕೊಂಡರು.
ಮಾತು ಆರಂಭಿಸುತ್ತಿದ್ದಂತೆ ಡೈಲಾಗ್..ಡೈಲಾಗ್… ಎಂಬ ಅಭಿಮಾನಿಗಳ ಕೂಗು. ಮಾತಿನ ಮಧ್ಯೆ ಪೊಗರು ಸಿನಿಮಾದ ಡೈಲಾಗ್ ತುಣುಕೊಂದನ್ನ ಹೇಳಿದ ಧ್ರುವ ಅಣ್ಣ ಚಿರಂಜೀವಿ ಹಾಗೂ ಅಪ್ಪು ಸರ್ ಅವರನ್ನ ಕಳೆದುಕೊಂಡ ಚಿತ್ರರಂಗ ಚೇತರಿಕೆ ಕಾಣಬೇಕಿದೆ. ಶ್ರೇಯಸ್‌ನಂಥ ಯಂಗ್‌ಸ್ಟರ್‌ಗಳನ್ನ ಅವರ ಸಿನಿಮಾ ನೋಡೋ ಮೂಲಕ ನೀವೆಲ್ಲ ಅವರನ್ನ ಬೆಳೆಸಬೇಕಿದೆ. ರಾಣಾ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಈ ಭಾಗಕ್ಕೆ ಬಂದದ್ದು ತುಂಬಾನೇ ಖುಷಿ.. ಹೊಸಪೇಟೆ ಅಂದ್ರೆ ಬಹಳ ಇಷ್ಟ ಎನ್ನುತ್ತಿದ್ದಂತೆ, “ರಾಯಚೂರಣ್ಣಾ..” ಎನ್ನುವ ದೊಡ್ಡ ಧ್ವನಿ ಧ್ರುವಗೆ ಕೇಳಸ್ತು. ಆಗ “ಏಯ್.. ರಾಯಚೂರು ನಮ್ದೇ ಸುಮ್ಕಿರ್ಲಾ” ಎಂದು ಪ್ರೀತಿಯಿಂದ ಗದರಿದರು.
ಮತ್ತೇ ಮಾತು ಮುಂದುವರಿಸಿದ ಧ್ರುವ, ಶ್ರೇಯಸ್ ಮತ್ತು ತಾವು ಒಂದೇ ಜಿಮ್‌ಗೆ ಹೋಗ್ತಿವಿ, ಅಲ್ಲಿ ರಾಣಾ ಸಿನಿಮಾ ಬಗ್ಗೆನೇ ಜಾಸ್ತಿ ಮಾತಾಡ್ತಿವಿ.. ಸಿನಿಮಾ ತುಂಬಾ ಚನ್ನಾಗಿ ಬಂದಿದೆ.. ಇವತ್ತು ಇಲ್ಲಿ ಬಿಡುಗಡೆ ಆಗ್ತಿರೊ ಹಾಡನ್ನ ಎಲ್ರೂ ಷೇರ್ ಮಾಡಿ ಎಂದು ಲಿರಿಕಲ್ ಸಾಂಗ್ ರಿಲೀಸ್ ಮಾಡಿದ್ರು.
ಇದಕ್ಕೂ ಮುನ್ನ ಮಾತನಾಡಿದ ಚಿತ್ರರಂಗದ ಖ್ಯಾತ ನಿರ್ಮಾಪಕ ಗಂಡುಗಲಿ ಕೆ.ಮಂಜು, ಇದು ನನ್ನ ಪುತ್ರನ ಮೂರನೇ ಸಿನಿಮಾ. ಹರಸಿ, ಹಾರೈಸಿ ಅಂದ್ರು.
ರಾಣಾ ಚಿತ್ರದ ನಿರ್ಮಾಪಕ ಪುರುಷೋತ್ತಮ ಮಾತನಾಡಿ, ರಾಣಾ ಚಿತ್ರದಲ್ಲಿ ಬೇರೊಂದು ಹಾಡು ರೆಡಿಯಾಗಿತ್ತು. ಆದರೆ ಹುಲಿಗೆಮ್ಮದೇವಿಯ ಪರಮಭಕ್ತನಾದ ನಾನು ಆ ಹಾಡನ್ನ ಕೈ ಬಿಟ್ಟು, ಇಂದು ಬಿಡುಗಡೆ ಆಗ್ತಿರೊ ಈ ಹಾಡನ್ನ ಸೇರಿಸಿದೆ. ಹಾಡು ಖಂಡಿತವಾಗಿಯೂ ಎಲ್ರಗೂ ಇಷ್ಟ ಆಗುತ್ತೆ.. ದೂರದ ಬೆಂಗಳೂರಿನಿಂದ ಬಂದು ನಮ್ಮ ಚಿತ್ರದ ಹಾಡು ಬಿಡುಗಡೆಯಲ್ಲಿ ಪಾಲ್ಗೊಂಡಿರೊ ಧ್ರುವ ಬಾಸ್‌ಗೆ ಥ್ಯಾಂಕ್ಸ್… ಚಿತ್ರದ ಡೈರೆಕ್ಟರ್ ನಂದ ಕಿಶೋರ್ ಸಿನಿಮಾ ರಿಚ್ ಆಗಿ ಬರುವಂತೆ ಚಿತ್ರಿಸಿದ್ದಾರೆ. ಕೆ.ಮಂಜು ಸರ್ ಈ ಸಿನಿಮಾದ ಬೆಂಗಾವಲಾಗಿ ನಿಂತಿದಾರೆ. ಚಂದನ್ ಶೆಟ್ಟಿ ತುಂಬ ಚನ್ನಾಗಿ ಮ್ಯೂಜಿಕ್ ಮಾಡಿದಾರೆ. ಇಮ್ರಾನ್ ಸರ್ ಎರಡು ಹಾಡುಗಳಿಗೆ, ಮುರಳಿ ಸರ್ ಎರಡು ಹಾಡುಗಳಿಗೆ ಕೊರಿಯೊಗ್ರಾಫಿ ಮಾಡಿದಾರೆ ಎಂದು ಏದುಸಿರಿನಿಂದ ಹೇಳಿ ಮಾತು ಮುಗಿಸಿದರು.
ನಿರ್ದೇಶಕ ನಂದ ಕಿಶೋರ್, ಮಾತು ಆರಂಭಿಸುವ ಮುನ್ನ ಅಗಲಿದ ಯುವರತ್ನನಿಗೆ ಒಂದು ನಿಮಿಷ ಮೌನ ಆಚರಿಸುವ ಮೂಲಕ ಜನಸ್ತೋಮ ಪುನೀತ್‌ಗೆ ಗೌರವ ಸಲ್ಲಿಸುವಂತೆ ಸೂಚಿಸಿದರು. ರಾಣಾ ಸಿನಿಮಾ ಎಲ್ರಗೂ ಇಷ್ಟ ಆಗುತ್ತೆ ಅಂತ ಭರವಸೆ ನೀಡಿ ಮಾತಿನ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದರು.
*ಸಿಕ್ಕಿ ಬಿದ್ದ ಕಳ್ಳ* ಧ್ರುವ ಸರ್ಜಾ ಮತ್ತು ಚಿತ್ರತಂಡವನ್ನು ಕಣ್ತುಂಬಿಕೊಳ್ಳಲು ಸೇರಿದ್ದ ಜನಸ್ತೋಮ ಕಂಡು ಕಳ್ಳನೊಬ್ಬ ಮಹಿಳೆಯ ಮಾಂಗಲ್ಯ ಕತ್ತರಿಸಿ ಪರಾರಿಯಾಗುತ್ತಿದ್ದುದನ್ನ ಕಂಡ ಸ್ಥಳೀಯರು ಆತನನ್ನ ಪೊಲೀಸರ ಅತಿಥಿಯನ್ನಾಗಿಸಿದರು.
ಕುಸಿದು ಬಿದ್ದರೂ ಸೆಲ್ಫಿ..! ವೇದಿಕೆ ಮೇಲೆ ಅನುಮತಿ ಇಲ್ಲದೇ ಪ್ರವೇಶಿಸಿದ ಅಭಿಮಾನಿಯೊಬ್ಬ ಧ್ರುವ ಪಕ್ಕದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವಾಗ ಕುಸಿದು ಬಿದ್ದ. ಆದರೂ ಧೃತಿಗೆಡದೆ ಎದ್ದು ನಿಂತು ಸೆಲ್ಫಿ ತಗೊಂಡ. ಪೊಲೀಸರು ಅನಾಮತ್ತಾಗಿ ಎತ್ತಿ ಹೊರಹಾಕಿದರು. ಆತನ ಹುಚ್ಚಾಟ ಕಂಡ ಕೆಲವರು ಪೊಲೀಸರನ್ನೇ ವೇದಿಕೆಯಿಂದ ಕೆಳದಬ್ಬಿ ಹುಚ್ಚಾಟ ಮೆರೆದರು. ಕೊನೆಗೆ ಪೊಲೀಸರು ಬೆತ್ತದ ರುಚಿ ತೋರಿಸಿ ಅವರನ್ನೆಲ್ಲ ವೇದಿಕೆಯಿಂದ ಕೆಳಗಿಳಿಸಿದರು.
ಅಚ್ಚುಕಟ್ಟಾಗಿ ನಡೆಯಲಿಲ್ಲ ಕಾರ್ಯಕ್ರಮ ಧ್ರುವ ಸರ್ಜಾ ಆಗಮಿಸುವ ವಿಷಯ ಪೊಲೀಸ್ ಇಲಾಖೆಗೆ ನಾಲ್ಕು ದಿನಗಳ ಮುಂಚೆಯೇ ಗೊತ್ತಿದ್ದು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ ವೇದಿಕೆ ಅಚ್ಚುಕಟ್ಟಾಗಿ ಇರಲಿಲ್ಲ. ಕಾಟಾಚಾರಕ್ಕೆ ಕಾರ್ಯಕ್ರಮ ಎನ್ನುವಂತಾಗಿದ್ದು ಸೌಮ್ಯ ಸ್ವಭಾವದ ಚಿತ್ರಪ್ರೇಮಿಗಳಿಗೆ, ಅಭಿಮಾನಿಗಳಿಗೆ ಬೇಸರದ ಸಂಗತಿ.
ನಿನ್ನೆ ರಾತ್ರಿವರೆಗೂ 26 ವಾರ್ಡ್ ಗಳಿಗೆ ಟಿಕೆಟ್ ಫೈನಲ್ ಮಾಡಿದ್ದ ಕಾಂಗ್ರೆಸ್ ಪಕ್ಷ ಇಂದು ಬೆಳಿಗ್ಗೆ ಉಳಿದ ಒಂಬತ್ತು ವಾರ್ಡ್ ಗಳಿಗೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದಾರೆ.
3ನೇ ವಾರ್ಡ್ ಗೆ ಗಣೇಶ್ ಸಿಂಗ್ ಬ್ಯಾಳಿ, 5ನೇ ವಾರ್ಡ್ ಗೆ ಹಮೀದಾಬೇಗಂ ಬೊದ್ಲೇಖಾನ್ , 6ನೇ ವಾರ್ಡ್ ಗೆ ಲಕ್ಷ್ಮವ್ವ ಭಜಂತ್ರಿ ,13ನೇ ವಾರ್ಡ್ ಗೆ ವಿನಾಯಕ ಆಲೂರ, 14ನೇ ವಾರ್ಡ್ ಗೆ ಪರಶುರಾಮ ನಾಯ್ಕರ್, 21ನೇ ವಾರ್ಡ್ ಗೆ ಪರಪ್ಪ ಕಮತರ , 22ನೇ ವಾರ್ಡ್ ಗೆ ರವಿ ಕಮತರ, 28 ನೇ ವಾರ್ಡ್ ಗೆ ಆನಂದ ಕೊರ್ಲಹಳ್ಳಿ, 33ನೇ ವಾರ್ಡ್ ಗೆ ಚಳಗೇರಿಅಭ್ಯರ್ಥಿಗಳಾಗಿದ್ದಾರೆ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕಾರಟಗಿ ಮಹಿಳಾ ಅದಿಕಾರಿಯೊಬ್ಬರಿಗೆ ಕನಕಗಿರಿ ಶಾಸಕ ಬಸವರಾಜ ದಢೇಸೂಗುರು ಬೆಂಬಲಿಗರು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದು, ಕಿರುಕುಳಕ್ಕೊಳಗಾದ ಮಹಿಳಾ ಅಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲು ಸೋಮವಾರ ರಾತ್ರಿ ಎಸ್‌ಪಿ ಕಚೇರಿಗೆ ಆಗಮಿಸಿದ್ದರೆಂಬ ಸುದ್ದಿ ಸಂಚಲನ ಮೂಡಿಸಿದೆ.
ಈ ಬೆಳವಣಿಗೆ ನಿಜವೋ? ಸುಳ್ಳೋ? ಎಂಬುದಿನ್ನು ಖಚಿತವಾಗಿಲ್ಲ. ಈ ಕುರಿತು ಮಾಹಿತಿ ಪಡೆಯಲು ಎಸ್ಪಿ ಹಾಗೂ ಮಹಿಳಾ ಅಧಿಕಾರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.
ಮೂಲಗಳ ಪ್ರಕಾರ ಇತ್ತಿಚೆಗೆ ಮಹಿಳಾ ಅಧಿಕಾರಿಯ ವರ್ಗಾವಣೆಗೆ ಸಂಬಂಧಿಸಿದಂತೆ ಶಾಸಕರ ಜೊತೆ ವಾಗ್ವಾದ ನಡೆದಿದ್ದು ಆಕ್ರೋಶಗೊಂಡ ಬೆಂಬಲಿಗರು ಅಧಿಕಾರಿಯ ಕೈ ಹಿಡಿದು ಎಳೆದಾಡಿದ್ದಾರೆ ಎನ್ನಲಾಗಿದೆ. ಶಾಸಕರಿಗೂ ಮತ್ತು ಮಹಿಳಾ ಅಧಿಕಾರಿಗೂ ಇಷ್ಟರಮಟ್ಟಿಗೆ ಸಲುಗೆ ಬೆಳೆದಿದ್ದಾರೂ ಹೇಗೆ ಎಂಬ ಪ್ರಶ್ನೆ ಈಗ ಕ್ಷೇತ್ರದಾದ್ಯಂತ ಕೇಳಿ ಬರುತ್ತಿದೆ.
ಈ ಕುರಿತು ವಿಜಯಸಾಕ್ಷಿಯೊಂದಿಗೆ ಮಾತನಾಡಿದ ಶಾಸಕ ಬಸವರಾಜ ದಢೇಸೂಗುರು ಅವರು, ಪಟ್ಟಣ ಪಂಚಾಯಿತಿ ಚುನಾವಣೆ ಗದ್ದಲದಲ್ಲಿ ಇದ್ದೇವೆ. ಈ ಬಗ್ಗೆ ನನಗೇನೂ ಗೊತ್ತಿಲ್ಲ. ಸದ್ಯಕ್ಕೆ ಚುನಾವಣಾ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದರು.
ಗದಗ-ಬೆಟಗೇರಿ ಅವಳಿ ನಗರದ ಜನರ ಸಮಸ್ಯೆಗಳನ್ನು ಅರಿಯಲು ಪ್ರತಿ ಮನೆ ಮನೆಗಳಿಗೂ ಭೇಟಿ ನೀಡಿ ಅವರು ನೀಡುವ ಸಲಹೆಗಳನ್ನು ಅರ್ಥೈಯಿಸಿಕೊಂಡು ಕನಿಷ್ಠ 6 ತಿಂಗಳ ಕಾಲಾವಕಾಶದೊಳಗೆ ಸಮಸ್ಯೆಗಳನ್ನು ಪರಿಹರಿಸಿ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗುವುದು. ಅಲ್ಲದೇ, ಪುನಃ ಅವರ ಮನೆಗಳಿಗೆ ತಿಳಿಸಲಾಗುವುದು’ ಎಂದು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಹೇಳಿದರು.
ಸೋಮವಾರ ಹುಡ್ಕೋ ಕಾಲನಿಯ ಬಯಲು ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಮತಭಿಕ್ಷೆ ಅಭಿಯಾನ ಪ್ರಾರಂಭಿಸಿದ ಅವರು 35ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಉಷಾ ಮಹೇಶ್ ದಾಸರ ಅವರ ಪರವಾಗಿ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಕೈಗೊಂಡು ಬಳಿಕ ಮಾತನಾಡಿದರು.
ಅವಳಿ ನಗರದಲ್ಲಿ ಸುಮಾರು 36 ಸಾವಿರ ಮನೆಗಳಿದ್ದು, ಪ್ರತಿನಿತ್ಯ 2000ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಮತಭಿಕ್ಷೆ ಕೇಳಬೇಕೆಂದು ತೀರ್ಮಾನಿಸಲಾಗಿದೆ. ಅಲ್ಲದೇ, ಈ ಬಾರಿ ಬಿಜೆಪಿ ನಗರಸಭೆ ಅಧಿಕಾರಕ್ಕೆ ಬರುತ್ತದಲ್ಲದೇ, ಅವಳಿ ನಗರದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬ ವಿಶ್ವಾಸವಿದೆ’ ಎಂದರು.
ಈ ಹಿಂದೆ ನಗರಸಭೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ದುರಾಡಳಿತ ನಡೆಸಿದೆ. ಅಲ್ಲದೇ, ಕಾಂಗ್ರೆಸ್‌ನದ್ದು ಭ್ರಷ್ಟಚಾರ ಸಿದ್ಧಾಂತವಾಗಿದೆ. ಹೀಗಾಗಿ ಪ್ರತಿ 10 ತಿಂಗಳಿಗೊಮ್ಮೆ ನಗರಸಭೆ ಅಧ್ಯಕ್ಷರನ್ನು ಬದಲಾಯಿಸಿ ಭ್ರಷ್ಟಾಚಾರ ನಡೆಸಿದರು. ಇದರಿಂದ ಅವಳಿ ನಗರದ ಅಭಿವೃದ್ಧಿ ಕುಂಠಿತಗೊಂಡಿದೆ. ಕುಡಿಯುವ ನೀರು ಯೋಜನೆಯಡಿ ಇಲ್ಲಿಯವರೆಗೆ ಅವಳಿ ನಗರದ ಎಷ್ಟು ಮನೆಗಳಿಗೆ ಪೈಪ್‌ಲೈನ್ ಅವಳವಡಿಸಲಾಗಿದೆ ಎಂಬುವುದು ಅಧಿಕಾರಿಗಳಿಗೆ ಸ್ಪಷ್ಟತೆ ಇಲ್ಲ.
ನಗರದೆಲ್ಲೆಡೆ ಅವೈಜ್ಞಾನಿಕವಾಗಿ ಯುಜಿಡಿ, ಕುಡಿಯುವ ನೀರು ಯೋಜನೆಯ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ರಸ್ತೆಗಳು ಹಾಳಾಗಿವೆ. ಸುಮಾರು 150 ಕೋಟಿ ರೂ. ಯುಜಿಡಿ ಕಾಮಗಾರಿಗೆ ನೀಡಲಾಗಿದೆ. ಆದರೆ, ಯುಜಿಡಿ ಕಾಮಗಾರಿಯ ಪರಿಸ್ಥಿತಿ ಏನಾಗಿದೆ ಎಂಬುವುದು ಜನರಿಗೆ ಗೊತ್ತಿದೆ’ ಎಂದು ಅನಿಲ್ ಮೆಣಸಿನಕಾಯಿ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ಸಂಗಮೇಶ್ ದುಂದೂರ, ಎಂ.ಎಸ್.ಕರೀಗೌಡ್ರ, 35ನೇ ವಾರ್ಡ್ ಅಭ್ಯರ್ಥಿ ಉಷಾ ದಾಸರ, ಮಹೇಶ್ ದಾಸರ, ಪ್ರಶಾಂತ್ ನಾಯ್ಕರ, ಸಿದ್ದು ಪಲ್ಲೇದ, ಪರಮೇಶ್ ನಾಯಕ್, ಜಯಣ್ಣ ಶೆಟ್ಟರ್, ಕೆ ಕೆ ಮಳಗೌಡರ, ಮೋಹನ ಮಾಳಗಿಮನಿ, ಬಸವರಾಜ್ ಗಡ್ಡೆಪ್ಪನವರ್, ಪ್ರಕಾಶ್ ಕೋಟಿ, ರಾಹುಲ್ ಸುಗಂಧಿ, ಮಲ್ಲಿಕಾರ್ಜುನಗೌಡ ಹೊಳೆಯಣ್ಣವರ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.