Home Blog Page 3222

ಚುನಾವಣೆ ದಾಹ ಇಂಗಿಸುತ್ತಿರುವ 24/7 ಯೋಜನೆ; ಹಳ್ಳ ಹಿಡಿದ ಕುಡಿಯುವ ನೀರಿನ ಕಾಮಗಾರಿ, ಅವಳಿ ನಗರದ ಜನರಿಗೆ ತಪ್ಪದ ಸಂಕಷ್ಟ

0

*ನೀರು ಪೂರೈಕೆಯಲ್ಲ, ಕಾಮಗಾರಿಯೇ ನಿರಂತರ! *ಗದಗ-ಬೆಟಗೇರಿ ಅವಳಿ ನಗರದ ನೀರಿನ ಸಮಸ್ಯೆ ಈಗ ಚುನಾವಣಾ ವಿಷಯ
*ಬಿಜೆಪಿ-ಕಾಂಗ್ರೆಸ್ ಕೆಸರೆರಚಾಟ

ದುರಗಪ್ಪ ಹೊಸಮನಿ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ಅವಳಿ ನಗರದ ಜನರ ನೀರಿನ ಬವಣೆ ನೀಗಿಸಲು ಶಾಶ್ವತ ಕುಡಿಯುವ ನೀರು ಪೂರೈಸುವ ಶಾಸಕ ಎಚ್.ಕೆ. ಪಾಟೀಲರ ಕನಸಿನ 24×7 ಕುಡಿಯುವ ನೀರು ಯೋಜನೆಯು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಂಪೂರ್ಣ ಹಳ್ಳ ಹಿಡಿದಿದೆ. 2017ರಲ್ಲಿ ಪೂರ್ಣಗೊಂಡಿದ್ದ ಯೋಜನೆಯ ಎರಡು ಪ್ಯಾಕೇಜ್‌ಗೆ ಅಂದಿನ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಆದರೆ, ಇಂದಿಗೂ ನಗರದ ಜನರಿಗೆ ಸರಿಯಾಗಿ ನೀರು ಪೂರೈಕೆ ಮಾಡುವಲ್ಲಿ ನಗರಸಭೆ ಹಾಗೂ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಇಲಾಖೆ (ಕೆಯುಐಡಿಎಫ್‌ಸಿ) ಅಧಿಕಾರಿಗಳು ವಿಫಲವಾಗಿದ್ದಾರೆ.

ಅವಳಿ ನಗರದಲ್ಲಿ 24×7 ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿದೆ. ನಗರಸಭೆಯಲ್ಲಿ ಮೂರು ವರ್ಷಗಳಿಂದ ಜನಪ್ರತಿನಿಧಿಗಳು ಇಲ್ಲದೆ ಅಧಿಕಾರಿಗಳದ್ದೇ ಕಾರುಬಾರು ನಡೆದಿದೆ. ನಗರದ ಕೆಲವು ಬಡಾವಣೆಗಳಿಗೆ 2-3 ದಿನಗಳಿಗೊಮ್ಮೆ ನೀರು ನಿಯಮಿತವಾಗಿ ಪೂರೈಕೆಯಾಗುತ್ತಿದೆ. ಆದರೆ, ಮೂಲಸೌಲಭ್ಯಗಳಿಂದ ವಂಚಿತವಾಗಿರುವ ಸ್ಲಂ, ಹಿಂದುಳಿದ ಪ್ರದೇಶಗಳಿಗೆ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಕುಡಿಯುವ ನೀರಿನ ಕಾಮಗಾರಿ ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿ ಉಭಯ ಪಕ್ಷಗಳ ನಾಯಕರು ಕೆಸರೆರಚಾಟದಲ್ಲಿ ತೊಡಗಿದ್ದಾರೆ.

ಮೂರು ಕಡೆ ಸೋರಿಕೆ

ವಿಧಾನಸಭೆ, ಲೋಕಸಭೆ ಹಾಗೂ ಪ್ರಸ್ತುತ ನಡೆಯುತ್ತಿರುವ ವಿಧಾನ ಪರಿಷತ್, ಗದಗ-ಬೆಟಗೇರಿ ನಗರಸಭೆ ಚುನಾವಣೆ ಸೇರಿ ಹಲವು ಚುನಾವಣೆಗಳ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ಕುಡಿಯುವ ನೀರು ಯೋಜನೆಯ ಕಾಮಗಾರಿಯನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿವೆ. ಅದೀಗ ಚುನಾವಣೆ ವಿಷಯವಾಗಿ ಮಾರ್ಪಟ್ಟಿದೆ.

24×7 ಕುಡಿಯುವ ನೀರು ಯೋಜನೆಯ ಲಾಭ ಪಡೆದುಕೊಳ್ಳಲು ಕಾಂಗ್ರೆಸ್, ಬಿಜೆಪಿ ನಾಯಕರು ತುದಿಗಾಗಲಲ್ಲಿ ನಿಂತಿರುವ ಹೊತ್ತಲ್ಲೇ ಅವಳಿ ನಗರದಲ್ಲಿ ನೀರಿನ ಹಾಹಾಕಾರ ಉಂಟಾಗಿದೆ. ಕುಡಿಯುವ ನೀರು ಯೋಜನೆಯ ಎರಡನೇ ಹಂತದ ಕಾಮಗಾರಿಯ ಅಡವಿಸೋಮಾಪುರ ಸಮೀಪದ ಚಿಕ್ಕಟ್ಟಿ ಶಾಲೆಯ ಬಳಿ ಸೇರಿ ಮೂರು ಕಡೆಗಳಲ್ಲಿ ನೀರು ಪೂರೈಕೆಯ ಮುಖ್ಯ ಪೈಪ್‌ಲೈನ್ ಸೋರಿಕೆಯಾಗುತ್ತಿದೆ. ಇದರಿಂದ ಅವಳಿ ನಗರದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ಗದಗ-ಬೆಟಗೇರಿಯಿಂದ 70 ಕಿ.ಮೀ. ದೂರದ ತುಂಗಭದ್ರಾ ನದಿಯ ಹಮ್ಮಿಗಿ ಬ್ಯಾರೇಜ್‌ನಿಂದ ಅವಳಿ ನಗರಕ್ಕೆ ನೀರು ಸರಬರಾಜು ಆಗುತ್ತಿದೆ. ಮಾರ್ಗದುದ್ದಕ್ಕೂ ಅಲ್ಲಲ್ಲಿ ಪೈಪ್‌ಲೈನ್ ಒಡೆದು ನೀರು ಸೋರಿಕೆಯಾಗುತ್ತಿರುವುದರಿಂದ ಅವಳಿ ನಗರಕ್ಕೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ.

ವರ್ಷಪೂರ್ತಿ ಅಧಿಕಾರಿಗಳು ಪೈಪ್‌ಲೈನ್ ದುರಸ್ತಿಯಲ್ಲಿಯೇ ಕಾಲಹರಣ ಮಾಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಒಂದು ಮತ್ತು ಎರಡನೇ ಪ್ಯಾಕೇಜ್‌ನ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ಮೂರನೇ ಪ್ಯಾಕೇಜ್ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಕಳಪೆ ಗುಣಮಟ್ಟದ ಕಾಮಗಾರಿಯಿಂದಾಗಿ ಮುಖ್ಯ ಪೈಪ್‌ಲೈನ್‌ಗಳು ಒಡೆದು ನೀರು ಪೋಲಾಗುತ್ತಿದೆ.

ಮೂರು ಪ್ಯಾಕೇಜ್ ಕಾಮಗಾರಿಗೆ 211 ಕೋಟಿ ರೂ. ವೆಚ್ಚ

ಗದಗ-ಬೆಟಗೇರಿ ಕುಡಿಯುವ ನೀರು ಯೋಜನೆಯ ಮೂರು ಪ್ಯಾಕೇಜ್‌ಗಳಲ್ಲಿ ಮೊದಲ ಹಾಗೂ ಎರಡನೇ ಪ್ಯಾಕೇಜ್‌ನಲ್ಲಿ ಒಟ್ಟು 126 ಕೋಟಿ ರೂ. ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿ 2017 ಡಿಸೆಂಬರ್‌ನಲ್ಲಿ ಪೂರ್ಣಗೊಂಡಿದೆ. ಇವೆರಡೂ ಪ್ಯಾಕೇಜ್‌ನಲ್ಲಿ ಹಮ್ಮಿಗಿ ಡ್ಯಾಂನಿಂದ ಪಾಪನಾಶಿ ಗ್ರಾಮದ ಹತ್ತಿರ ನಿರ್ಮಿಸಿರುವ ಡಬ್ಲ್ಯೂಟಿಪಿಯಿಂದ ತೋಂಟದಾರ್ಯ ಕಾಲೇಜ್‌ವರೆಗೆ ನೀರು ಪೂರೈಸಲು ಪೈಪ್‌ಲೈನ್ ಅಳವಡಿಸಿ, ನಗರಸಭೆಗೆ ಹಸ್ತಾಂತರ ಮಾಡಲಾಗಿದೆ. ನಗರದ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನಿಂದ ಒಟ್ಟು 85 ಕೋಟಿ ರೂ. ವೆಚ್ಚದ ಮೂರನೇ ಪ್ಯಾಕೇಜ್ ಕಾಮಗಾರಿ 2014ರಲ್ಲಿಯೇ ಆರಂಭಗೊಂಡಿದೆ. ಈ ಮೊದಲು 300 ಕಿ.ಮೀ. ಅಷ್ಟೇ ಮನೆಗಳಿಗೆ ಪೈಪ್‌ಲೈನ್ ಅಳವಡಿಸಬೇಕಿತ್ತು. ಆದರೆ, ಹೆಚ್ಚುವರಿಯಾಗಿ 168 ಕಿ.ಮೀ. ಸೇರಿದ್ದರಿಂದಾಗಿ ಪೈಪ್‌ಲೈನ್ ಕಾಮಗಾರಿ ವಿಳಂಬವಾಗಿದೆ. ಶೇ.12ರಷ್ಟು ಕೆಲಸ ಬಾಕಿ ಉಳಿದಿದೆ. ಅವಳಿ ನಗರದ 40,578 ಮನೆಗಳ ಪೈಕಿ ಈವರೆಗೆ 36,646 ಮನೆಗಳಿಗೆ ಪೈಪ್‌ಲೈನ್ ಅಳವಡಿಸಲಾಗಿದೆ. ಇನ್ನೂ 844 ವಾಲ್ವ್ಗಳನ್ನು ಅಳವಡಿಸಬೇಕಿದೆ. ಸುಮಾರು 17 ಕಿ.ಮೀ.ನಷ್ಟು ಪೈಪ್‌ಲೈನ್ ಹಾಕಬೇಕಿದೆ. ಸಂಜಯ್ ನಗರದ ಟ್ಯಾಂಕ್ ಕೆಲಸ ಇನ್ನೂ ಬಾಕಿ ಇದೆ ಎಂದು ಕೆಯುಐಡಿಎಫ್‌ಸಿ ಎಂಜಿನಿಯರ್ ಸುಭಾಷ್ ಬಾಜಣ್ಣವರ `ವಿಜಯಸಾಕ್ಷಿ’ಗೆ ತಿಳಿಸಿದರು.

ಗದಗ-ಬೆಟಗೇರಿ ಅವಳಿ ನಗರಕ್ಕೆ ಡಿ.೫ರಂದು ಕೆಯುಐಡಿಎಫ್‌ಸಿ ಎಂಡಿ ಎಂ.ಟಿ.ರೇಜು ಹಾಗೂ ಸೂಪರಿಟೆಂಡೆಂಟ್ ಎಂಜಿನಿಯರ್ ಭೇಟಿ ನೀಡಿ ಕುಡಿಯುವ ನೀರು ಯೋಜನೆಯ ಮೂರನೇ ಪ್ಯಾಕೇಜ್ ಕಾಮಗಾರಿ ಪರಿಶೀಲಿಸಿದ್ದಾರೆ. ಬಾಕಿ ಉಳಿದಿರುವ ಕಾಮಗಾರಿಯನ್ನು 2022 ಜನವರಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಶೀಘ್ರಗತಿಯಲ್ಲಿ ಕೆಲಸ ಮಾಡಲಾಗುತ್ತಿದೆ.

ಸುಭಾಷ್ ಬಾಜಣ್ಣವರ, ಕೆಯುಐಡಿಎಫ್ಸಿ, ಎಇಇ

ತುಂಗಭದ್ರಾ ನದಿಯ ಹಮ್ಮಿಗಿ ಬ್ಯಾರೇಜ್‌ನಿಂದ ಗದಗ-ಬೆಟಗೇರಿಗೆ ನೀರು ಪೂರೈಸುತ್ತಿರುವ ಮುಖ್ಯ ಪೈಪ್‌ಲೈನ್ ಅಡವಿಸೋಮಾಪುರದ ಹತ್ತಿರ ಮೂರು ಕಡೆಗಳಲ್ಲಿ ಒಡೆದು ನೀರು ಪೋಲಾಗುತ್ತಿತ್ತು. ನೀರು ವಿನಾಕಾರಣ ಪೋಲಾಗದಂತೆ ತಡೆಯಲು ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದ್ದು, ಅವಳಿ ನಗರದ ಜನರು ಸಹಕರಿಸಬೇಕು.

ಗುರುಪ್ರಸಾದ್, ಪ್ರಭಾರಿ ಪೌರಾಯುಕ್ತರು

ಖಾಕಿಪಡೆ ಇರುವ ಗ್ರುಪ್ ನಲ್ಲೇ ರಾಸಲೀಲೆಯ ಅಶ್ಲೀಲ ವಿಡಿಯೋ ಹರಿಬಿಟ್ಟ ರಾಜಕೀಯ ನಾಯಕ; ಪೊಲೀಸರೆ ಶೇಮ್ ಶೇಮ್!

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯ ಕೆಲ ರಾಜಕೀಯ ನಾಯಕರು, ಜಿಲ್ಲಾ ಪೊಲೀಸರಿರುವ ವಾಟ್ಸ್ ಆ್ಯಪ್ ಗ್ರುಪ್ ವೊಂದರಲ್ಲಿ ರಾಜಕೀಯ ನಾಯಕನೊಬ್ಬ ಹರಿಬಿಟ್ಟ ತನ್ನದೇ ರಾಸಲೀಲೆಯ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಇಡೀ ದೇಶಕ್ಕೆ ರಾಜಕೀಯ ಮೌಲ್ಯಗಳನ್ನು ಸಾರಿದ ರಾಜ್ಯದಲ್ಲಿ ಈಚೆಗೆ ರಾಜಕೀಯ ನಾಯಕರ ರಾಸಲೀಲೆಯ ಅಶ್ಲೀಲ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇದೀಗ ಅಂತಹದ್ದೇ ಒಂದು ವಿಡಿಯೋ ಜಿಲ್ಲೆಯಲ್ಲಿಯೂ ಸಂಚಲನ ಮೂಡಿಸಿದೆ.

ಗದಗ-ಬೆಟಗೇರಿ ನಗರದ ಜಿಲ್ಲಾ ಕೈಮಗ್ಗ ನೇಕಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ ಜೇರಬಂಡಿ ಎನ್ನಲಾಗುತ್ತಿರುವ ರಾಜಕೀಯ ನೇತಾರ, ಪರಿಚಿತ ಮಹಿಳೆಯೊಂದಿಗೆ ನಡೆಸಿದ ತನ್ನದೇ ರಾಸಲೀಲೆಯ ವಿಡಿಯೊವೊಂದನ್ನು ಹರಿಬಿಟ್ಟಿದ್ದಾನೆ.

ಸೋಮವಾರ (ಡಿ.6) ರಂದು ಮಧ್ಯಾಹ್ನ 2 ಗಂಟೆಗೆ ರಮೇಶ ಜೇರಬಂಡಿ ಎಂಬಾತನ ವಾಟ್ಸ್ ಅಪ್ ನಂಬರ್ ನಿಂದ ರಾಸಲೀಲೆಯ ವಿಡಿಯೋ ಹಂಚಿಕೊಳ್ಳಲಾಗಿದೆ. ಆ ನಂಬರ್ ನಿಂದ ವಿಡಿಯೋ ಶೇರ್ ಮಾಡಿದ 20 ನಿಮಿಷಗಳ ನಂತರ ಅದನ್ನು ಡಿಲೀಟ್ ಮಾಡಲಾಗಿದೆ. ಆದರೆ ಅಷ್ಟರಲ್ಲಾಗಲೇ ಅದನ್ನು ಗ್ರುಪ್ಪಿನ ಇತರ ಸದಸ್ಯರು ನೋಡಿದ್ದಾರೆ. ಕೆಲವೇ ಗಂಟೆಗಳಲ್ಲಿ ವಿಡಿಯೊ ಅವಳಿ ನಗರದಲ್ಲಿ ಸಾಕಷ್ಟು ವೈರಲ್ ಸಹ ಆಗಿದೆ.

ಜಿಲ್ಲೆಯ ಹಾಲಿ ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಗದಗ ಹಾಗೂ ನರಗುಂದ ಡಿವೈಎಸ್‌ಪಿ, ಜಿಲ್ಲೆಯ ಬೇರೆ ಬೇರೆ ಠಾಣೆಯ ಕೆಲ ಇನ್ಸ್‌ಪೆಕ್ಟರ್‌ಗಳು, ಬೇರೆ ಜಿಲ್ಲೆಯ ಇನ್ಸ್‌ಪೆಕ್ಟರ್‌ಗಳು ಹಾಗೂ ಗಣ್ಯಾತಿ ಗಣ್ಯರಿರುವ ವಾಟ್ಸಾಪ್ ಗ್ರುಪ್‌ವೊಂದರಲ್ಲಿ ಈ ಅಶ್ಲೀಲ ವಿಡಿಯೋ ಶೇರ್ ಆಗಿದೆ. ಆದರೂ ಪೊಲೀಸರು ಕ್ರಮ ಕೈಗೊಳ್ಳದಿರುವುದಕ್ಕೆ ಜನ ಶೇಮ್ ಶೇಮ್ ಎನ್ನುವಂತಾಗಿದೆ.

ಗದಗ-ಬೆಟಗೇರಿಯ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡ ಎಂದು ಮೂಲಗಳು ಹೇಳುವ ಹಾಗೆ ರಮೇಶ ಜೇರಬಂಡಿ, ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ. ಕೆಲ ವರ್ಷಗಳ ಬಳಿಕ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದನಂತೆ. ಬಿಜೆಪಿಯಲ್ಲಿ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಿದ್ದನಂತೆ. ಅಲ್ಲಿ ಸೂಕ್ತ ಸ್ಥಾನಮಾನ ಸಿಗದಿದ್ದಾಗ ಪುನಃ ಮಾತೃಪಕ್ಷ ಕಾಂಗ್ರೆಸ್‌ಗೆ ಬರಲು ಉತ್ಸಾಹ ತೋರಿದ್ದನಾದರೂ, ಸದ್ಯ ತಟಸ್ಥನಾಗಿ ಉಳಿದಿದ್ದಾನೆ ಎನ್ನಲಾಗುತ್ತಿದೆ.

ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ ಪೊಲೀಸರು ಆತನನ್ನು ವಶಕ್ಕೆ ಪಡೆದು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಕಾಮುಕನಿಗೆ ಬಿಸಿ ಮುಟ್ಟಿಸಬೇಕಾದಿದ್ದು ಪೊಲೀಸರ ಕರ್ತವ್ಯ ಅಲ್ವೇ? ಹಾಗಾಂತ ಗದಗ-ಬೆಟಗೇರಿ ಅವಳಿ ನಗರದ ಜನರ ಮಾತಾಗಿದೆ.

ಓಮಿಕ್ರಾನ್ ಹಿನ್ನೆಲೆ; ಜಿಮ್ಸ್ ನಲ್ಲಿ `ಹೈಟೆಕ್’ ಆಸ್ಪತ್ರೆ!

*ಕೊರೊನಾ ರೂಪಾಂತರಿ ವೈರಸ್ ವಿರುದ್ಧ ಹೋರಾಟಕ್ಕೆ ಜಿಲ್ಲಾಡಳಿತ ಸನ್ನದ್ಧ
*100 ಹಾಸಿಗೆ ಸಾಮರ್ಥ್ಯದ ಅತ್ಯಾಧುನಿಕ ಸೌಲಭ್ಯವುಳ್ಳ ಆಸ್ಪತೆ ನಿರ್ಮಾಣ
*ವೈದ್ಯಕೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆನ್ನಲಾದ ವೈದ್ಯ ಸುಳ್ಳು ಹೇಳಿದ್ದೇಕೆ?

ದುರಗಪ್ಪ ಹೊಸಮನಿ

ವಿಜಯಸಾಕ್ಷಿ ವಿಶೇಷ, ಗದಗ:

ಐದಾರು ತಿಂಗಳಿನಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟು ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದ ರಾಜ್ಯದ ಜನರಿಗೆ ಕೊರೊನಾ ರೂಪಾಂತರಿ ತಳಿ ಡೆಲ್ಟಾ ಹಾಗೂ ಓಮಿಕ್ರಾನ್ ಭೀತಿ ಶುರುವಾಗಿದೆ. ಈ ಬೆನ್ನಲ್ಲೆ ಗದಗ ಜಿಲ್ಲಾಡಳಿತ ಡೆಲ್ಟಾ, ಓಮಿಕ್ರಾನ್ ಎದುರಿಸಲು ಸನ್ನದ್ಧಗೊಳ್ಳುತ್ತಿದೆ. ಇದಕ್ಕಾಗಿ ಜಿಮ್ಸ್ ಆವರಣದಲ್ಲಿ ನೂರು ಹಾಸಿಗೆಯ ಸಾಮರ್ಥ್ಯದ ಅತ್ಯಾಧುನಿಕ ಸೌಲಭ್ಯವುಳ್ಳ ಆಸ್ಪತ್ರೆಯೊಂದನ್ನು ನಿರ್ಮಿಸಿದೆ.

ಗದಗ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಾಣವಾಗಿರುವ ಅತ್ಯಾಧುನಿಕ ಮಾಡ್ಯುಲರ್ ಆಸ್ಪತ್ರೆ ಗದಗ ಜಿಲ್ಲೆ ಹೊರತುಪಡಿಸಿದರೆ ಮೈಸೂರಲ್ಲಿ ಮಾತ್ರವೇ ಇದೆ. ಕೊರೊನಾ ಒಂದು ಮತ್ತು ಎರಡನೇ ಅಲೆಗಳಿಂದ ಪಾಠ ಕಲಿತಿರುವ ಜಿಲ್ಲಾಡಳಿತ ಓಮಿಕ್ರಾನ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಭರ್ಜರಿ ತಯಾರಿ ನಡೆಸಿದೆ. ಜಿಮ್ಸ್ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಹಾಸಿಗೆಗಳು, ವೆಂಟಿಲೇಟರ್, ಆಕ್ಸಿಜನ್, ವೈದ್ಯರು ಹಾಗೂ ಸಿಬ್ಬಂದಿಯ ಕೊರತೆಯಾಗದಂತೆ ನಿಗಾ ವಹಿಸುತ್ತಿದೆ. ವೈದ್ಯರಿಗೆ ಕೋವಿಡ್ ಚಿಕಿತ್ಸೆ ಕುರಿತು ಸೂಕ್ತ ತರಬೇತಿ ನೀಡಿದೆ.

ಹೇಗಿದೆ ಸಿದ್ಧತೆ?:

ಜಿಮ್ಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್, ಆಕ್ಸಿಜನ್ ಸಾಂದ್ರಕ, ಆಕ್ಸಿಜನ್ ಬೆಡ್, ಲಿಕ್ವಿಡ್ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ನಿರ್ಮಿಸಿದೆ. ಆಯುಷ್ ಆಸ್ಪತ್ರೆಯ 93 ಸೇರಿದಂತೆ ಜಿಮ್ಸ್ ಆಸ್ಪತ್ರೆಯಲ್ಲಿ 500 ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. 100ಕ್ಕೂ ಅಧಿಕ ವೆಂಟಿಲೇಟರ್ ವ್ಯವಸ್ಥೆ ಮಾಡಿಕೊಂಡಿರುವ ಜಿಮ್ಸ್ ರಾಜ್ಯದಲ್ಲಿ ಮಕ್ಕಳಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರತ್ಯೇಕ ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಜಿಮ್ಸ್ ನಲ್ಲಿ ಒಟ್ಟು 200 ಸಿಲಿಂಡರ್, 75 ಆಕ್ಸಿಜನ್ ಸಾಂದ್ರಕ, 13 ಕೆಎಲ್, 20 ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಸಂಗ್ರಹಣಾ ಘಟಕಗಳಿವೆ ಎಂದು ಜಿಮ್ಸ್ ನಿರ್ದೇಶಕ ಡಾ| ಪಿ.ಎಸ್. ಭೂಸರೆಡ್ಡಿ ಹೇಳಿದರು.

ಮಾಡ್ಯುಲರ್ ಆಸ್ಪತ್ರೆಯ ವಿಶೇಷತೆ…
ಬೆಂಗಳೂರು ಮೂಲದ `ಯುನೈಟೆಡ್ ವೇ’ ಎಂಬ ಎನ್‌ಜಿಒ ಪ್ರಾಯೋಜಿತ ಮಾಡ್ಯುಲರ್ ಆಸ್ಪತ್ರೆ ನಿರ್ಮಾಣದ ಹೊಣೆಯನ್ನು ಚೆನ್ನೆöÊ ಮೂಲದ ಮಾಡ್ಯುಲಸ್ ಎಂಬ ಕಂಪನಿಗೆ ವಹಿಸಲಾಗಿದೆ. ಸಿದ್ಧ ಉಪಕರಣಗಳ ಮೂಲಕ ನೂರು ಹಾಸಿಗೆಯುಳ್ಳ ಅತ್ಯಾಧುನಿಕ ಸೌಲಭ್ಯದ ಆಸ್ಪತ್ರೆಯ ಕಾಮಗಾರಿ ಶೇ. 90ರಷ್ಟು ಮುಕ್ತಾಯಗೊಂಡಿದೆ. ಕಡಿಮೆ ಅವಧಿಯಲ್ಲಿ 10 ಹವಾನಿಯಂತ್ರಿತ ಕೊಠಡಿಗಳನ್ನು ನಿರ್ಮಿಸಿದೆ. ಪ್ರತಿಯೊಂದು ಕೊಠಡಿಯಲ್ಲೂ ಆಕ್ಸಿಜನ್ ಬೆಡ್ ಸೌಲಭ್ಯ ಕಲ್ಪಿಸಲಾಗಿದೆ. ಮಾಡ್ಯುಲರ್ ಆಸ್ಪತ್ರೆಯನ್ನು ಸಂಚಾರಿ ಘಟಕದಂತೆ ಸ್ಥಳಾಂತರಿಸಬಹುದಾಗಿದೆ.

ಜಿಲ್ಲೆಯ ವೈದ್ಯರೊಬ್ಬರಿಗೆ ಓಮಿಕ್ರಾನ್?

ನ.20ರಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ವೈದ್ಯಕೀಯ ಸಮ್ಮೇಳನದಲ್ಲಿ ಭಾಗವಹಿಸಿದ 250 ಜನರ ಪೈಕಿ ಸರ್ಕಾರಿ ವೈದ್ಯರೊಬ್ಬರಿಗೆ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ. ಅದರಂತೆ, ವೈದ್ಯಕೀಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು ಎನ್ನಲಾದ ಮುಂಡರಗಿ ತಾಲೂಕಿನ ವೈದ್ಯರೊಬ್ಬರಿಗೆ ಡಿ.1ರಂದು ಕೊರೊನಾ ಸೋಂಕು ದೃಢಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸೋಂಕು ದೃಢಪಡುವ ಮುನ್ನ ಅವರು ರೋಗಿಗಳ ತಪಾಸಣೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಹೀಗಾಗಿ ಆರೋಗ್ಯ ಇಲಾಖೆ ಸುಮಾರು 80 ಜನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಪರೀಕ್ಷೆಗೊಳಪಡಿಸಿದ್ದು, ಎಲ್ಲ ವರದಿಗಳೂ ನೆಗೆಟಿವ್ ಬಂದಿವೆ. ಆದರೆ, ವೈದ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ ಎಂದು ವೈದ್ಯಕೀಯ ಮೂಲಗಳೇ ತಿಳಿಸಿವೆ. ಹೀಗಿದ್ದಾಗ್ಯೂ ವೈದ್ಯರು ಸಮ್ಮೇಳನದಲ್ಲಿ ಭಾಗವಹಿಸಿಲ್ಲವೆಂದು ಆರೋಗ್ಯ ಇಲಾಖೆಗೆ ಸುಳ್ಳು ಮಾಹಿತಿ ನೀಡಿದ್ದೇಕೆ? ಎಂಬುದನ್ನು ಸ್ಪಷ್ಟಪಡಿಸಬೇಕಿದೆ.

ಓಮಿಕ್ರಾನ್ ಸೋಂಕು ಹಿನ್ನೆಲೆ ಜಿಲ್ಲೆಯ ತಾಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 315 ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಮಾಡಿಕೊಂಡಿದೆ. ಮುಂಜಾಗ್ರತವಾಗಿ ಕೋವಿಡ್‌ಗೆ ಸಂಬAಧಿಸಿದ ಔಷಧಿಗಳ ದಾಸ್ತಾನು ಮಾಡಲಾಗಿದೆ. ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಬಹಳಷ್ಟಿದ್ದು, ಯಾವುದೇ ಕೊರತೆ ಇಲ್ಲ. ಪ್ರತಿದಿನ 900 ಜನರ ಮಾದರಿ ಸಂಗ್ರಹಿಸಲಾಗುತ್ತಿದೆ. ಶೇ. 100ರಷ್ಟು ಮೊದಲನೇ ಹಾಗೂ ಶೇ. 63ರಷ್ಟು ಕೋವಿಡ್ ಎರಡನೇ ಹಂತದ ಲಸಿಕೆ ನೀಡಲಾಗಿದೆ. ಜನರಿಗೆ ಕೋವಿಡ್ ಸೋಂಕು ಹಾಗೂ ಲಸಿಕೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಡಾ|ಸತೀಶ್ ಬಸರಿಗಿಡದ, ಡಿಎಚ್ಒ

ಕೊರೊನಾ ಸೋಂಕು ದೃಢಪಟ್ಟಿರುವ ಮುಂಡರಗಿ ವೈದ್ಯರು ವೈದ್ಯಕೀಯ ಸಮ್ಮೇಳನದಲ್ಲಿ ಭಾಗವಹಿಸಿಲ್ಲ. ಆದರೆ, ಬೇರೆ ವೈಯಕ್ತಿಕ ಕಾರ್ಯಕ್ರಮಕ್ಕೆ ಹೋಗಿದ್ದೆ ಎಂದು ಹೇಳಿದ್ದಾರೆ. ವೈದ್ಯರ ಸಂಪರ್ಕಕ್ಕೆ ಬಂದಿರುವ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿರನ್ನು ಪತ್ತೆ ಮಾಡಿದ್ದು, ಅವರಲ್ಲಿ ಯಾವುದೇ ಸೋಂಕು ಕಂಡು ಬಂದಿಲ್ಲ. ಸೋಂಕಿತರ ಸಿಟಿ ವ್ಯಾಲ್ಯೂ ಶೇ. 25ಕ್ಕಿಂತ ಕಡಿಮೆ ಇದ್ದರೆ ಮಾತ್ರವೇ ಓಮಿಕ್ರಾನ್ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಆದರೆ, ಗದಗ ಜಿಲ್ಲೆಯಿಂದ ಓಮಿಕ್ರಾನ್ ಪರೀಕ್ಷೆಗೆ ಯಾವುದೇ ಮಾದರಿಗಳನ್ನು ಕಳುಹಿಸಿಲ್ಲ.

ಡಾ| ಜಗದೀಶ್ ನುಚ್ಚಿನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ

ಠಾಣೆಯ ಹಣ ಕದ್ದ ಆರೋಪ; ಪೊಲೀಸ್ ಪೇದೆ ವಿರುದ್ಧ ಕೇಸ್

ವಿಜಯಸಾಕ್ಷಿ ಸುದ್ದಿ, ಗದಗ:

ತಾನು ಕರ್ತವ್ಯ ನಿರ್ವಹಿಸುವ ಪೊಲೀಸ್ ಠಾಣೆಯಲ್ಲಿ ಹಣ ಕದ್ದಿರುವ ಆರೋಪದಲ್ಲಿ ಪೇದೆಯ ವಿರುದ್ಧ ಪ್ರಕರಣ ದಾಖಲಾಗಿದೆ.

ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್ ಕರಿಗಾರ ಎಂಬಾತನ ವಿರುದ್ಧ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗದಗ ಗ್ರಾಮೀಣ ಠಾಣೆಯಲ್ಲಿ ಡಿಸೆಂಬರ್ 1ರ ಬೆಳಗಿನ ಜಾವ ಕೇಸ್ ವರ್ಕರ್ ಅವರಿಗೆ ಸೇರಿದ ಕಪಾಟಿನಲ್ಲಿದ್ದ ಕೆ.ಪಿ. ಆ್ಯಕ್ಟ್ನಲ್ಲಿ ಅಂದರೆ ಜೂಜಾಟದಲ್ಲಿ ವಶಕ್ಕೆ ಪಡೆದಿದ್ದ ಸುಮಾರು 49 ಸಾವಿರ ಹಣವನ್ನು ಪೇದೆ ಮಂಜುನಾಥ್ ಕರಿಗಾರ ಎಂಬಾತನೇ ಕಳ್ಳತನ ಮಾಡಿರಬಹುದು ಎಂದು ಅದೇ ಠಾಣೆಯ ಸಿಬ್ಬಂದಿ ಶಹರ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಶಹರ ಪೊಲೀಸರು ಆರೋಪಿ ಮಂಜುನಾಥ್ ಕರಿಗಾರನನ್ನು ಇನ್ನೂ ವಶಕ್ಕೆ ಪಡೆದಿಲ್ಲ.

ಅನಾರೋಗ್ಯದ ನೆಪ: ಕಳೆದ ಆರು ದಿನಗಳಿಂದಲೂ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ನಾನಾ ಆಟಗಳನ್ನು ಆಡುತ್ತಿರುವ ಪೊಲೀಸ್ ಪೇದೆ ಮಂಜುನಾಥ್ ಇನ್ನೂ ಗದಗನ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕಥೆ ಕಟ್ಟಿದ ಪೊಲೀಸರು!

ಪೊಲೀಸ್ ಮಂಜುನಾಥ್‌ನ ಕಳ್ಳತನದ ಪ್ರಕರಣ ತಿಳಿಯುತ್ತಿದ್ದಂತೆಯೇ ಜಿಮ್ಸ್ಗೆ ಮಾಹಿತಿ ಪಡೆಯಲು ತೆರಳಿದ್ದ ಮಾಧ್ಯಮದ ಸ್ನೇಹಿತರಿಗೆ ಗ್ರಾಮೀಣ ಠಾಣೆಯ ಪಿಎಸ್‌ಐ ಸಮೇತ ಕೆಲ ಪೊಲೀಸರು, ನೈಟ್ ಡ್ಯೂಟಿ ಮಾಡುವಾಗ ಶೌಚಾಲಯದಲ್ಲಿ ತಲೆ ತಿರುಗಿ ಬಿದ್ದಾನರೀ. ಸಿಪಿಐ ಸಾಹೇಬ್ರು ನೋಡಿ ಆಸ್ಪತ್ರೆಗೆ ಕಳುಹಿಸ್ಯಾರ ರೀ ಅಂತ ಕಥೆ ಕಟ್ಟಿದ್ದರು.

ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

ವಿದ್ಯಾರ್ಥಿಗಳಲ್ಲಿ ಸೋಂಕು ಹೆಚ್ಚಳ; ತಜ್ಞರ ಸಲಹೆ ಪಡೆದು ಮುಂದಿನ ಕ್ರಮ

ವಿಜಯಸಾಕ್ಷಿ ಸುದ್ದಿ, ಗದಗ:

ರಾಜ್ಯದಲ್ಲಿ ಓಮಿಕ್ರಾನ್ ಅಷ್ಟೇ ಅಲ್ಲ, ಡೆಲ್ಟಾನೂ ಇದೆ. ಅಲ್ಲದೇ, ಶಾಲಾ ಕಾಲೇಜು ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ತೀವ್ರ ನಿಗಾವಹಿಸಲಾಗುತ್ತಿದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.

ಸೋಮವಾರ ಗದಗನಲ್ಲಿ ಬಿಜೆಪಿ ಪ್ರಚಾರ ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಚಿಕ್ಕಮಗಳೂರಿನಲ್ಲಿ ಓರ್ವ ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ 400 ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 68 ಮಕ್ಕಳಿಗೆ ಸೋಂಕು ದೃಢವಾಗಿದೆ ಎಂದರು.

ಶಾಲಾ ಕಾಲೇಜಿನಲ್ಲಿ ಯಾರಿಗಾದರೂ ಕೋವಿಡ್ ಲಕ್ಷಣಗಳಿದ್ದರೆ ಕೂಡಲೇ ಪರೀಕ್ಷಿಸಲು ಸೂಚಿಸಲಾಗಿದೆ. ಎಲ್ಲೆಲ್ಲಿ ವಸತಿ ನಿಲಯಗಳಿವೆ, ಎಲ್ಲಿ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದಾರೋ ಅಲ್ಲಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ನಿಗಾವಹಿಸಲಿದೆ. ಈ ಬಗ್ಗೆ ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು‌ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.

ಈ ಸಂದರ್ಭದಲ್ಲಿ ಸಚಿವ ಸಿ.ಸಿ ಪಾಟೀಲ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಂಸದ ಶಿವಕುಮಾರ್ ಉದಾಸಿ, ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್ ಸೇರಿದಂತೆ ಅನೇಕರು ಇದ್ದರು.

ಯೋಧ ದೆಹಲಿಯ ಮೀರಟ್ ಕ್ಯಾಂಪ್‍ನಲ್ಲಿ ಆತ್ಮಹತ್ಯೆ

ವಿಜಯಸಾಕ್ಷಿ ಸುದ್ದಿ, ಮುದ್ದೆಬಿಹಾಳ

ತಾಲೂಕಿನ ಜಟ್ಟಗಿ ಗ್ರಾಮದ ಯುವ ಯೋಧ ಮಂಜುನಾಥ ಯಲ್ಲಪ್ಪ ಹೂಗಾರ (21) ದೇಶದ ರಾಜಧಾನಿ ದೆಹಲಿಯ ಮಿರಟ್ ಬಳಿ ಇರುವ ಎಂಇಜಿ ಯೂನಿಟ್-9ರ ಭಾರತೀಯ ಸೇನಾ ಕ್ಯಾಂಪ್‍ನಲ್ಲಿ ಕರ್ತವ್ಯದಲ್ಲಿದ್ದ ಸಮಯದಲ್ಲೇ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸೇನಾ ಅಧಿಕಾರಿಗಳು ಈ ವಿಷಯವನ್ನು ಇಲ್ಲಿನ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ, ಕುಟುಂಬ ವರ್ಗಕ್ಕೆ ಮಾಹಿತಿ ನೀಡಿದ್ದಾರೆ.

ಮೃತ ಯೋಧನಿಗೆ ತಂದೆ, ತಾಯಿ, ಇಬ್ಬರು ಸಹೋದರ, ಸಹೋದರಿಯರು ಸೇರಿ ಅಪಾರ ಬಂಧು ಬಳಗ ಇದೆ.

ಮಂಜುನಾಥ ಹೂಗಾರ ಈತ ಸೇನೆಗೆ ಆಯ್ಕೆಯಾಗಿ ತರಬೇತಿ ಪಡೆದು ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಎಂಇಜಿ ಯುನಿಟ್-9ನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ.

ಆತನ ಆತ್ಮಹತ್ಯೆಗೆ ಕಾರಣ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.

ದೆಹಲಿಯ ಸೇನಾ ಆಸ್ಪತ್ರೆಗೆ ಪಾರ್ಥೀವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಮಂಗಳವಾರ ಅಥವಾ ಬುಧವಾರ ಪಾರ್ಥೀವ ಶರೀರ ಗ್ರಾಮಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ವರದಿ : ಡಾ. ಅಬ್ದುಲ್ ರಜಾಕ್

ಗ್ರೇನ್ ಮಾರ್ಕೆಟ್’ನಲ್ಲಿ ಆಕಸ್ಮಿಕ ಬೆಂಕಿ ; 10 ಲಕ್ಷ ರೂ. ಮೌಲ್ಯದ ಸಾಮಾಗ್ರಿ ಸುಟ್ಟು ಭಸ್ಮ

ವಿಜಯಸಾಕ್ಷಿ ಸುದ್ದಿ, ಗದಗ:

ವೆಲ್ಡಿಂಗ್ ಕೆಲಸ ಮಾಡುವ ವೇಳೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ‌ ಪರಿಣಾಮ ಅಂಗಡಿಯಲ್ಲಿದ್ದ ಸುಮಾರು 10 ಲಕ್ಷ ರೂ. ಮೌಲ್ಯದ ಕುರುಕಲು ತಿಂಡಿಗಳು ಸುಟ್ಟು ಭಸ್ಮವಾಗಿರುವ ಘಟನೆ ಗದಗನ ಗ್ರೇನ್ ಮಾರುಕಟ್ಟೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಎಂ.ಎಂ.ನರೇಗಲ್ ಎಂಬುವವರಿಗೆ ಸೇರಿದ ಕಿರಾಣಿ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ರಾತ್ರಿ 12 ಗಂಟೆ ಸುಮಾರಿಗೆ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವೇಳೆ ಅಂಗಡಿಗೆ ಬೆಂಕಿ ತಗುಲಿದೆ. ಇದರಿಂದ ಅಂಗಡಿಯಲ್ಲಿದ್ದ ಕುರುಕಲು ತಿಂಡಿಗಳು, ಗುಟ್ಕಾ ಪ್ಯಾಕೆಟ್, ಪಾನ್ ಸುಪಾರಿಗಳು ಸೇರಿದಂತೆ ಅಪಾರ ಪ್ರಮಾಣದ ಸಾಮಾಗ್ರಿಗಳು ಸುಟ್ಟು ಕರಕಲಾಗಿವೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಗದಗನಲ್ಲಿ ಎಗ್ಗಿಲ್ಲದೇ ಸಾಗಿದ ಇಸ್ಪೀಟು, ಮಟ್ಕಾದಂಧೆ: ಜಿ.ಎಸ್.ಪಾಟೀಲ್ ವಿಷಾದ

0

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ನನ್ನ ಜೀವನದಲ್ಲಿಯೇ ಇಂತಹ ಅವ್ಯವಸ್ಥೆ ನಾನೆಂದಿಗೂ ನೋಡಿರಲಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್.ಪಾಟೀಲ್ ವಿಷಾದ ವ್ಯಕ್ತಪಡಿಸಿದರು.

ಶನಿವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಾದ್ಯಂತ ಎಲ್ಲೆಂದರಲ್ಲಿ ಇಸ್ಪೀಟು ಅಡ್ಡೆಗಳು ತಲೆ ಎತ್ತಿವೆ. ಅಲ್ಲದೇ, ಮಟ್ಕಾದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಇದರಿಂದ ಗ್ರಾಮೀಣ, ನಗರ ಪ್ರದೇಶದ ಬಹುತೇಕ ಜನರು ಜೂಜಾಟಕ್ಕೆ ಬಲಿಯಾಗುತ್ತಿದ್ದಾರೆ ಎಂದರು.

ಅದರಂತೆ, ಕಿರಾಣಿ, ಹೋಟೆಲ್ ಸೇರಿದಂತೆ ಇನ್ನಿತರ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದರೂ
ಅಬಕಾರಿ ಇಲಾಖೆ ಅಕ್ರಮ ಸಾರಾಯಿ ಮಾರಾಟ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.
ಇನ್ನು ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸರ್ಕಾರ ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಜಿ.ಎಸ್.ಪಾಟೀಲ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಶಹರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರಣ್ಣ ಬಳಗಾನೂರ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ ಮಂದಾಲಿ, ಎಸ್ ಸಿ ಘಟಕದ ಜಿಲ್ಲಾಧ್ಯಕ್ಷ ಬಸವರಾಜ್ ಕಡೆಮನಿ, ಬಸವರಾಜ್ ಶೀಲವಂತರ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಉಮರ್ ಪಾರೂಕ್ ಹುಬ್ಬಳ್ಳಿ ಉಪಸ್ಥಿತರಿದ್ದರು.

ಈರುಳ್ಳಿ ಮಾರಲು ಹೋದ ರೈತ ಸೇರಿ ನಾಲ್ವರ ಸಾವು!

0

ಬೆಳ್ಳಂಬೆಳಗ್ಗೆ ಯಮರೂಪಿಯಾದ ಟ್ಯಾಂಕರ್

ವಿಜಯಸಾಕ್ಷಿ ಸುದ್ದಿ,
ಗದಗ/ಕೊಪ್ಪಳ: ಈರುಳ್ಳಿ ಮಾರಲು ಗದಗ ಜಿಲ್ಲೆಯ ರೋಣ ತಾಲೂಕಿನ ಅರಹುಣಸಿಯಿಂದ ಬೆಂಗಳೂರಿಗೆ ಹೊರಟಿದ್ದ ರೈತ ಸೇರಿದಂತೆ ನಾಲ್ವರ ಮೇಲೆ ಟ್ಯಾಂಕರ್ ಹರಿದು ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಶನಿವಾರ ಬೆಳಗ್ಗೆ ಚಿತ್ರದುರ್ಗದ ಬಳಿ ಸಂಭವಿಸಿದೆ.

ಮೃತರನ್ನು ರೋಣ ತಾಲೂಕಿನ ಅರಹುಣಸಿಯ ರೈತ ಶರಣಪ್ಪ ಅಳವಂಡಿ, ವಿಜಯಪುರ ಮೂಲದ ಲಾರಿ ಕ್ಲೀನರ್ ಸಂಜಯ್, ಲಿಂಗಸೂಗುರು ತಾಲೂಕಿನ ಬಯಲುಗುಡ್ಡ ಮೂಲದ ಹುಲಗಪ್ಪ ಹಾಗೂ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೆನಕನಾಳ ಮೂಲದ ಲಾರಿ ಚಾಲಕ ಮಂಜುನಾಥ್ ಬಾದವಾಡಗಿ ಎಂದು ಗುರುತಿಸಲಾಗಿದೆ.

ಲಾರಿಯಲ್ಲಿ ಈರುಳ್ಳಿ ಹಾಕಿಕೊಂಡು ಬೆಂಗಳೂರಿನತ್ತ ಹೋಗುತ್ತಿರುವಾಗ ನಸುಕಿನ‌ ಜಾವ ಟೈರ್ ಪಂಕ್ಚರ್ ಆಗಿದೆ. ಹೆದ್ದಾರಿಯ ಪಕ್ಕದಲ್ಲಿ ಲಾರಿ ನಿಲ್ಲಿಸಿ ಪಂಕ್ಚರ್ ಸರಿಪಡಿಸುವ ಕೆಲಸದಲ್ಲಿ ಲಾರಿಯಲ್ಲಿದ್ದ ಐದು ಜನ ನಿರತರಾಗಿರುವಾಗ ಹಿಂಬದಿಯಿಂದ ಯಮರೂಪಿಯಾಗಿ ಬಂದ ಟ್ಯಾಂಕರ್ ಐವರ ಮೇಲೂ ಹರಿದಿದೆ. ನಾಲ್ವರು ಸ್ಥಳದಲ್ಲೇ ಅಸು ನೀಗಿದ್ದಾರೆ. ಓರ್ವನ ಸ್ಥಿತಿ ತೀರಾ ಗಂಭೀರವಾಗಿದೆ. ಈ ಕುರಿತು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕನರಗುಂದ; ಓದುವ ಬೆಳಕಿನಡಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

0

ವಿಜಯಸಾಕ್ಷಿ ಸುದ್ದಿ, ನರಗುಂದ:

ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿ ಆವರಣದಲ್ಲಿರುವ ಗ್ರಂಥಾಲಯ ಕಟ್ಟಡದಲ್ಲಿ ಶುಕ್ರವಾರ ಶಾಲಾ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶೈನಾಜ್ ಮುಜಾವರ್ ಹಾಗೂ ಗ್ರಂಥಾಲಯ ಮೇಲ್ವಿಚಾರಕಿ ಬಸಮ್ಮ ಹಿರೇಗೌಡ್ರ ಅವರು
ಓದುವ ಬೆಳಕು ಕಾರ್ಯಕ್ರಮದಡಿ ಓದಿನ ಕಡೆಗೆ ಆಸಕ್ತಿ, ಸಾಮಾನ್ಯ ಜ್ಞಾನ ಹೆಚ್ಚಿಸುವ ಸಲುವಾಗಿ
ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದರು.

ಈ ಸಂದರ್ಭದಲ್ಲಿ ಪಿಡಿಒ ಶೈನಾಜ್ ಮುಜಾವರ್ ಮಾತನಾಡಿ, ‘ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಿದ್ದಿರುವುದರಿಂದ ಓದಿನಿಂದ ವಿಮುಕ್ತರಾಗುತ್ತಿದ್ದಾರೆ. ಅಲ್ಲದೇ, ತಂತ್ರಜ್ಞಾನಗಳ ಬಳಕೆಯಿಂದಾಗಿ ಪುಸ್ತಕಗಳ ಬಗೆಗಿನ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ, ಮಕ್ಕಳು ಓದಿನ ಕಡೆ ಹೆಚ್ಚು ಗಮನಹರಸಲಿ ಎಂಬ ಸದುದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಮಕ್ಕಳಿಗಾಗಿ ‘ಓದುವ ಬೆಳಕು’ ಎಂಬ ಯೋಜನೆ ಜಾರಿಗೊಳಿಸಿದೆ ಎಂದು ತಿಳಿಸಿದರು.

error: Content is protected !!