Home Blog Page 3223

ಪಗಡೆಯಾಟದ ಮೂಲಕ ವಾರ್ಡ್ ಹಬ್ಬ ಶುರು, 2018ರಲ್ಲಿ ಅಲ್ಲವಾಗಿದ್ದು, 2023ರಲ್ಲಿ ಹೌದಾಗುತ್ತೆ; ಸಿ.ಸಿ.ಪಾಟೀಲ್

ಅದ್ಧೂರಿ “ಗದಗ ಹಬ್ಬ” ಆರಂಭ; ಮನಸುಗಳನ್ನು ಬೆಸೆಯುತ್ತವೆ ಆಟೋಟಗಳು

ವಿಜಯಸಾಕ್ಷಿ ಸುದ್ದಿ, ಗದಗ

ಮನುಷ್ಯ ಸದಾ ಕ್ರಿಯಾಶೀಲನಾಗಿರುವಂತೆ ಮಾಡುವುದು, ಆರೋಗ್ಯವೃದ್ಧಿಗೆ ಸಹಕಾರಿಯಾಗಿರುವುದು ಕ್ರೀಡೆಗಳು. ಮನಸುಗಳನ್ನು ಬೆಸೆಯುತ್ತವೆ ಈ ಆಟೋಟಗಳು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಬೆಟಗೇರಿ ರಂಗಪ್ಪಜ್ಜನ ಮಠದ ಆವರಣದಲ್ಲಿ ಶನಿವಾರ ಗದಗ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಕಾಡೆಮಿ ಆಶ್ರಯದಲ್ಲಿ ಮೂರನೇ ಅವೃತ್ತಿಯ ಜಿಸಿಎಲ್-2022, ಗದಗ ಹಬ್ಬದ ಭಾಗವಾಗಿ ನಡೆದ ವಾರ್ಡ್ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ-ಮತಗಳನ್ನು ಮರೆತು ಒಂದಾಗಿ ಸುಮಧುರ ಕ್ಷಣಗಳನ್ನು ಕಳೆಯುವಂತೆ ಮಾಡುವ ಗದಗ ಹಬ್ಬವನ್ನು ಸಂಘಟಿಸಿರುವ ಅನಿಲ ಮೆಣಸಿನಕಾಯಿ ಅಭಿನಂದನಾರ್ಹರು ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.

ಚುನಾವಣೆ ಹತ್ತಿರ ಬಂದಿರುವ ಕಾರಣಕ್ಕೆ ಗದಗ ಹಬ್ಬ ಮಾಡಲಾಗುತ್ತಿದೆ ಎಂದು ಕೆಲವರು ಟೀಕೆ ಮಾಡುತ್ತಾರೆ. ಅಂಥ ಆರೋಪ, ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವ, ಕಿವಿಗೊಡುವ ಅಗತ್ಯವಿಲ್ಲ. ಕೋವಿಡ್ ಕಾರಣಕ್ಕೆ ಎರಡು ವರ್ಷದಿಂದ ಸ್ಥಗಿತಗೊಂಡಿದ್ದ ಗದಗ ಹಬ್ಬ ಈ ಬಾರಿ ಯಶಸ್ವಿಯಾಗಿ ಜರುಗಲಿ ಎಂದು ಅವರು ಆಶಿಸಿದರು.

ಯಾವುದು ಹೌದು, ಅದು ಅಲ್ಲ. ಯಾವುದು ಅಲ್ಲ, ಅದು ಹೌದು ಎನ್ನುವುದನ್ನು ಸಾಬೀತು ಮಾಡಿದ ಬೆಟಗೇರಿ ರಂಗಪ್ಪಜ್ಜ, ಈ ಭಾಗದಲ್ಲಿ 2018 ರಲ್ಲಿ ಅಲ್ಲ ಆಗಿದ್ದನ್ನು 2023ರಲ್ಲಿ ಹೌದು ಮಾಡಿ ತೋರಿಸಲಿ ಎನ್ನುವ ಮೂಲಕ 2023ರ ವಿಧಾನಸಭೆ ಚುನಾವಣೆಯಲ್ಲಿ ಅನಿಲ ಮೆಣಸಿನಕಾಯಿ ಬೆಂಬಲಿಸಲು ಮನವಿ ಮಾಡಿದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ದೇಶದಲ್ಲಿ ಕ್ರೀಡೆಗಳನ್ನು ಯಾರೂ ವೃತ್ತಿಯಾಗಿ ತೆಗೆದುಕೊಳ್ಳುತ್ತಿದ್ದಿಲ್ಲ. ಆದರೆ ಪ್ರಧಾನಿ ಮೋದಿ ಖೇಲೋ ಇಂಡಿಯಾ ಕಾರ್ಯಕ್ರಮ ಘೋಷಣೆ ನಂತರ ಕ್ರೀಡಾಪಟುಗಳಿಗೆ ಅವಕಾಶಗಳು ಸೃಷ್ಟಿಯಾಗಿವೆ. ಕ್ರೀಡೆಯನ್ನು ವೃತ್ತಿಯಾಗಿ ಪರಿಗಣಿಸುತ್ತಿದ್ದಾರೆ. ಅನಿಲ ಮೆಣಸಿನಕಾಯಿ ಸಂಘಟಿಸಿರುವ ಈ ಕ್ರೀಡಾ ಹಬ್ಬಕ್ಕೆ, ಭವಿಷ್ಯದಲ್ಲಿ ಪ್ರಾಯೋಜಕತ್ವದ ನೆರವು ಸಿಗುವಂತಾಗಲಿ ಎಂದು ಶುಭ ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಸಿಎಲ್ ರೂವಾರಿ ಅನಿಲ ಮೆಣಸಿನಕಾಯಿ, ಗದಗ ಹಬ್ಬ ಸಂಗೀತ, ಸಾಹಿತ್ಯ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಗಮವಾಗಿದೆ. ಜಿಸಿಎಲ್‌ನ ಹಿಂದಿನ ಎರಡು ಆವೃತ್ತಿಗಳು ಯಶಸ್ವಿಯಾಗಿ ನಡೆದಿವೆ. ಕೋವಿಡ್ ಕಾರಣದಿಂದ ಎರಡು ವರ್ಷದಿಂದ ಸ್ಥಗಿತಗೊಂಡಿದ್ದ ಜಿಸಿಎಲ್‌ಗೆ ಮತ್ತೆ ಚಾಲನೆ ನೀಡಲಾಗಿದೆ. ಕ್ರಿಕೆಟ್‌ಗೆ ಸೀಮಿತವಾಗಿದ್ದ ಜಿಸಿಎಲ್‌ನ್ನು ಎಲ್ಲ ಮಾದರಿಯ ಆಟಗಳಿಗೆ ವಿಸ್ತರಿಸಲಾಗಿದೆ. ವಾರ್ಡ್ ಹಬ್ಬ, ಹಳ್ಳಿ ಹಬ್ಬದ ಮೂಲಕ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಯಾವುದೇ ರಾಜಕೀಯ ಉದ್ದೇಶ ಇಲ್ಲದೇ ಮನಸ್ಸುಗಳನ್ನು ಬೆಸೆಯುವ ಉದ್ದೇಶದೊಂದಿಗೆ ಇದನ್ನು ಸಂಘಟಿಸಲಾಗಿದೆ. ಕಳೆದ ಆವೃತ್ತಿಯಲ್ಲಿ ಅಡೆ-ತಡೆಗಳು ಬಂದಿದ್ದವು. ಈ ಸಲ ಅಂಥ ಅಡೆತಡೆಗಳಿಗೆ ಅವಕಾಶ ಇಲ್ಲದಂತೆ ಗದಗ ಹಬ್ಬದ ಆಟೋಟಗಳನ್ನು ಸಂಘಟಿಸಲಾಗಿದೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ, ನಗರಾಭಿವೃದ್ಧಿ ಪ್ರಾಽಕಾರದ ಅಧ್ಯಕ್ಷ ಸಿದ್ದಪ್ಪ ಪಲ್ಲೇದ, ಬಿಜೆಪಿ ಜಿಲ್ಲಾಧ್ಯಕ್ಷ ಮುತ್ತಣ್ಣ ಲಿಂಗನಗೌಡ, ಜಗನ್ನಾಥಸಾ ಭಾಂಡಗೆ, ಮಹೇಶ ದಾಸರ, ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ, ಮುಖಂಡರಾದ ಉಮೇಶಗೌಡ ಪಾಟೀಲ, ರವಿ ದಂಡಿನ, ಮಾಧವ ಗಣಾಚಾರಿ, ಎಂ.ಎ. ಹಿರೇಮಠ, ವಿಜಯಲಕ್ಷ್ಮಿ ಮಾನ್ವಿ, ವಿಜಯಲಕ್ಷ್ಮಿ ದುಂದೂರ, ಸ್ವಾತಿ ಅಕ್ಕಿ, ಚನ್ನಮ್ಮ ಹುಳಕಣ್ಣವರ, ಕಮಲಾಕ್ಷಿ ಬಳ್ಳಿಶೆಟ್ಟರ್, ಚಿತ್ರಸಾಹಿತಿ ಹೃದಯಶಿವ, ಪ್ರಶಾಂತ ನಾಯ್ಕರ್ ಉಪಸ್ಥಿತರಿದ್ದರು. ಅಕಾಡೆಮಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಮೆಣಸಿನಕಾಯಿ ಅಧ್ಯಕ್ಷತೆ ವಹಿಸಿದ್ದರು.

ಭರ್ಜರಿ ಮೆರವಣಿಗೆ

ಜಿಸಿಎಲ್ 2022ರ ಮೂರನೇ ಆವೃತ್ತಿಯ ಗದಗ ಹಬ್ಬದ ಅಂಗವಾಗಿ ನಡೆದ ವಾರ್ಡ್ ಹಬ್ಬಗಳ ಉದ್ಘಾಟನಾ ಸಮಾರಂಭದ ಅಂಗವಾಗಿ ನಡೆದ ಭರ್ಜರಿ ಮೆರವಣಿಗೆ ಶ್ರಾವಣ ಮಾಸದ ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿತು.

ಶನಿವಾರ ಬೆಟಗೇರಿಯ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನಪದ ಕಲಾ ತಂಡಗಳು, 501 ಪೂರ್ಣಕುಂಭ ಹೊತ್ತ ಮಹಿಳೆಯರು ಜಾನಪದ ಲೋಕವನ್ನೆ ಸೃಷ್ಟಿಸಿದ್ದರು. ಹೆಜ್ಜೆ ಮೇಳ, ದೊಡ್ಡ ಮುಖವಾಡದ ಗೊಂಬೆಗಳು, ಹೊಸಗರಡಿ ದೊಡ್ಡಾಟ ಮೇಳ, ಪೌರಾಣಿಕ ಪಾತ್ರಗಳ ವೇಷಧಾರಿಗಳು, ಡೊಳ್ಳು ಕುಣಿತ ತಂಡಗಳು ಹೀಗೆ ಹತ್ತಾರು ಬಗೆಯ ಜನಪದ ಕಲಾವಿದರು ಮೆರವಣಿಗೆಯುದ್ದಕ್ಕೂ ಕಲಾ ಪ್ರದರ್ಶನ ನೀಡಿ ಜನಮನ ರಂಜಿಸಿದರು.

ಸಾರೂಟದಲ್ಲಿ ಪಗಡೆ ಆಟಗಾರರು-ಗೌರವ ಅರ್ಪಣೆ

ಪೌರಾಣಿಕ ಹಿನ್ನೆಲೆಯ ದೇಶಿ ಕ್ರೀಡೆ ಪಗಡೆ ಆಟದ ಮೂಲಕ ವಾರ್ಡ್ ಹಬ್ಬ ಆರಂಭವಾಗಲಿರುವ ಹಿನ್ನೆಲೆಯಲ್ಲಿ, ಅಲಂಕೃತ ಸಾರೂಟದಲ್ಲಿ ಹಿರಿಯ ಪಗಡೆ ಆಟಗಾರರನ್ನು ಕೂಡಿಸಿಕೊಂಡು, ಮೆರವಣಿಗೆ ಮೂಲಕ ಕಾರ್ಯಕ್ರಮ ನಡೆದ ರಂಗಪ್ಪಜ್ಜನ ಮಠದ ಆವರಣ ಮುಖ್ಯ ವೇದಿಕೆಗೆ ಕರೆತರಲಾಯಿತು.

ಬೆಟಗೇರಿ ವೀರಭದ್ರೇಶ್ವರ ದೇವಸ್ಥಾನದಿಂದ ಕಾರ್ಯಕ್ರಮ ನಡೆಯುವ ಮುಖ್ಯ ವೇದಿಕೆವರೆಗೂ ರಸ್ತೆಯ ಎರಡೂ ಬದಿಯಲ್ಲಿ ಸ್ವಾಗತ ಕೋರುವ ಫಲಕಗಳು, ತಳಿರು-ತೋರಣಗಳಿಂದ ಅಲಂಕರಿಸಿದ್ದ ಸ್ವಾಗತ ಕಮಾನುಗಳು, ಹಳ್ಳಿಯ ಸೊಗಡನ್ನು ನೆನಪಿಸುವ ಎತ್ತಿನ ಗಾಡಿಯ ಅಲಂಕೃತ ಗಾಲಿಗಳು ಗದಗ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದವು.

ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ ಹಾಗೂ ಬಿಜೆಪಿ ಕಾರ್ಯಕರ್ತರು, ಕಲಾವಿದರು, ಅಭಿಮಾನಿಗಳು, ಮಹಿಳೆಯರು ಭಾಗವಹಿಸಿದ್ದರು.

ಗನ್ ಹಿಡಿದು ಓಡಾಡಿ ಆತಂಕ ಸೃಷ್ಟಿಸಿದ್ದನಾ ಬಿಜೆಪಿ ಮುಖಂಡ?; ಇಡೀ ಪ್ರಕರಣವನ್ನು ಹಳ್ಳ ಹಿಡಿಸಿದ್ರಾ ಪೊಲೀಸರು!

ವಿಜಯಸಾಕ್ಷಿ ಸುದ್ದಿ, ಗದಗ

ಆ ಗ್ರಾಮದಲ್ಲಿ ಅಂದು ಎಲ್ಲರೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದರು. ಆದರೆ ಬಿಜೆಪಿ ಮುಖಂಡನೆನ್ನಲಾದ ವ್ಯಕ್ತಿಯೊಬ್ಬ ಮಾಡಿದ ಅವಘಡದಿಂದ ಇಡೀ ಊರಿಗೆ ಊರಿನ‌ ಜನರೇ ಒಂದು ಕ್ಷಣ ದಂಗಾಗಿಬಿಟ್ಟರು. ಆ ಕ್ಷಣದಲ್ಲಿ ಅದೇನ ಅನಾಹುತ ಆಗುತ್ತೋ ಅಂತ ಉಸಿರು ಬಿಗಿ ಹಿಡಿದಿದ್ದರು. ಆಗ ಪೊಲೀಸರು ಹಾಗೂ ERSS112 ನ ಸಿಬ್ಬಂದಿ ಬಂದು ಬಿಜೆಪಿ ಮುಖಂಡನ ಹಿಡಿದು ನರಗುಂದ ಠಾಣೆಗೆ ಕರೆದೊಯ್ದರು. ಆಗ ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು ಎನ್ನಲಾಗಿದೆ.

ಇಷ್ಟೆಕ್ಕೆಲ್ಲಾ ಕಾರಣವಾಗಿದ್ದು ಬಿಜೆಪಿ ಮುಖಂಡನ ಗನ್ ಪ್ರಹಸನ.

ಇದೆಲ್ಲಾ ನಡೆದಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ‌ ಗ್ರಾಮದಲ್ಲಿ. ಆಗಸ್ಟ್ 15 ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ಪೊಲೀಸರು ಕೂಡ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಬಗ್ಗೆ ಮಾಹಿತಿ ದೊರೆತಿಲ್ಲ. ಈ ಪ್ರಕರಣದ ಕುರಿತು ಡಿವೈಎಸ್ಪಿ ಏಗನಗೌಡರ್, ಇನ್ಸ್‌ಪೆಕ್ಟರ್ ಮಲ್ಲಯ್ಯ ಮಠಪತಿ ಸಾಹೇಬರು ತುಟಿ‌ ಬಿಚ್ಚುತ್ತಿಲ್ಲ. ಡಿವೈಎಸ್ಪಿ ಏಗನಗೌಡರಿಗೆ
ಕರೆ ಮಾಡಿ, ಹದ್ಲಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಗನ್ ಹಿಡಿದು ಓಡಾಡಿದ ಬಗ್ಗೆ ಮಾಹಿತಿ ಕೇಳಿದಾಗ, ಅದು ಗನ್ ಅಲ್ಲ ಆಟಿಕೆ ಸಾಮಾನು ಅಂದ್ರು, ಮತ್ತೆ ಪ್ರಶ್ನೆ ಮಾಡಿದಾಗ ನನಗೆ ಅಷ್ಟೊಂದು ಮಾಹಿತಿ ಇಲ್ಲ. ಇನ್ಸ್‌ಪೆಕ್ಟರ್ ಗೆ ಕೇಳಿ ಎಂದರು.

ಈ ಘಟನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇನ್ಸ್‌ಪೆಕ್ಟರ್ ಮಠಪತಿ ಸಾಹೇಬರ ಸರಕಾರಿ ನಂಬರ್-9480804456 ಕರೆ ಮಾಡಿದಾಗ ಕರೆ ಸ್ವೀಕರಿಸಿ, ಗನ್ ಘಟನೆಯ ಬಗ್ಗೆ ಮಾಹಿತಿ ಕೇಳುತ್ತಿದ್ದಂತೆಯೇ ಕರೆ ಕಟ್ ಮಾಡಿದರು. ಮತ್ತೇರಡು ದಿನ ಇನ್ಸ್‌ಪೆಕ್ಟರ್ ಮಠಪತಿ ಸಾಹೇಬರಿಗೆ,ಪೋನ್ ಕರೆ ಮಾಡಿದಾಗಲೂ ಸ್ವೀಕರಿಸುವ ಸೌಜನ್ಯ ತೋರಿಸಲಿಲ್ಲ. ಇದರಿಂದಾಗಿ ಬಿಜೆಪಿ ಮುಖಂಡನ ಗನ್ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡ್ತಾ ಇದಾರಾ ಅನ್ನೋ ಅನುಮಾನ ಮೂಡುವಂತಾಗಿದೆ. ಆ ಮೂಲಕ ಬಿಜೆಪಿ ಮುಖಂಡನಿಗೆ ನಿಷ್ಠೆ ತೋರಿದರಾ? ಅಥವಾ ಯಾರಾದಾದರೂ ಪ್ರಭಾವಕ್ಕೆ ಒಳಗಾಗಿ‌ ಪ್ರಕರಣ ಮುಚ್ಚಿ ಹಾಕಲು ಮುಂದಾದ್ರಾ ಅನ್ನೋ ಮಾತು ಕೇಳಿ ಬಂದಿದೆ. ಇನ್ನಾದರೂ ಆ ಮುಖಂಡ ಯಾರು? ಯಾವ ಕಾರಣಕ್ಕಾಗಿ ಗನ್ ಹಿಡಿದು ಓಡಾಡಿದ? ಅವತ್ತು ನಿಜವಾಗಿಯೂ ನಡೆದ ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳು ಪತ್ತೆ ಹಚ್ಚಬೇಕಾಗಿದೆ.

ಪ್ರಕರಣದ ಹಿನ್ನೆಲೆ

ಆಗಸ್ಟ್ 15 ರಂದು ಸಮುದಾಯವೊಂದರ ಸಂಘದ ಕಛೇರಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಧ್ವಜಾರೋಹಣ ಇತ್ತು. ಆದರೆ ಬಿಜೆಪಿ ಮುಖಂಡನಿಗೆ ಈ ಬಾರಿ ಕರೆದಿರಲಿಲ್ಲವಂತೆ. ಬೇರೆದವರೊಬ್ಬರಿಂದ ಈ ಧ್ವಜಾರೋಹಣ ಮಾಡಿಸಿದ್ದಕಾಗಿ ಇಡೀ ಗ್ರಾಮಸ್ತರನ್ನ ಒಂದು ಗಂಟೆಗಳ ಕಾಲ ಆತಂಕದಲ್ಲಿ ದೂಡಿದ್ದ ಮುಖಂಡ, ಗನ್ ತಗೊಂಡು ಧ್ವಜಾರೋಹಣ ಮಾಡಲು ಬಂದಿದ್ದ ವ್ಯಕ್ತಿಗೆ ಹೆದರಿಸಿದ್ದಾನೆ. ಅಷ್ಟೇ ಅಲ್ಲದೇ ಆತನ ಮೇಲೆ ಹಲ್ಲೆ ಕೂಡ ಮಾಡಿದ್ದಾನೆ ಎಂದು ಮೂಲಗಳು ಮಾಹಿತಿ ನೀಡಿದ್ದು, ಇದರಿಂದಾಗಿ ಧ್ವಜಾರೋಹಣಕ್ಕೆ ಬಂದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಹೆದರಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇಂದಿನಿಂದ ಬಾಂಧವ್ಯ ಬೆಸೆಯುವ “ಹಬ್ಬ” ಗಳ ಸರಣಿ ಶುರು

-ಗದಗ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಕಾಡೆಮಿ ನೇತೃತ್ವಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿಯವರ ಕನಸಿನ ಕೂಸಿಗೆ ಮೂರರ ಸಂಭ್ರಮ

ವಿಜಯಸಾಕ್ಷಿ ಸುದ್ದಿ, ಗದಗ

ಕ್ರೀಡಾ ಕ್ಷೇತ್ರ ಗಮನದಲ್ಲಿಟ್ಟುಕೊಂಡು ಆರಂಭಗೊಂಡ ಜಿಸಿಎಲ್ ಇದೀಗ ಗದಗ ಹಬ್ಬ, ಹಳ್ಳಿ ಹಬ್ಬ, ವಾರ್ಡ್ ಹಬ್ಬದ ರೂಪು ಪಡೆದು ಶನಿವಾರದಿಂದ ಈ ಹಬ್ಬಗಳ ಸರಣಿಗೆ ಅಧಿಕೃತ ಚಾಲನೆ ದೊರಕಲಿದೆ ಎಂದು ಗದಗ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಹೇಳಿದರು.

ಬೆಟಗೇರಿಯ ರಂಗಪ್ಪಜ್ಜನಮಠದ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಸಿಎಲ್‌ನ ಎರಡು ಆವೃತ್ತಿಗಳು ಯಶಸ್ಸು ಕಂಡಿವೆ. ಎರಡನೇ ಆವೃತ್ತಿಯಲ್ಲಿ ಸ್ವಲ್ಪ ಅಡೆತಡೆಗಳ ಬಂದರೂ ಯಾವ ತೊಂದರೆ ಇಲ್ಲದೇ ಜಿಸಿಎಲ್ ಯಶಸ್ವಿಯಾಗಿ ಮುಗಿದಿತ್ತು. 2019ರಲ್ಲೇ ಕ್ರೀಡಾಕ್ಷೇತ್ರಕ್ಕೆ ಮೀಸಲಾಗಿದ್ದ ಜಿಸಿಎಲ್‌ಗೆ ವಿವಿಧ ಕ್ಷೇತ್ರಗಳಲ್ಲೂ ತೊಡಗಿ ಹಬ್ಬದ ರೂಪ ಕೊಡಲು ನಿರ್ಧರಿಸಲಾಗಿತ್ತು. ಕೊರೋನಾ ಕಾರಣದಿಂದ ಅನುಷ್ಠಾನಕ್ಕೆ ತರಲು ಆಗಿರಲಿಲ್ಲ. ಇದೀಗ ಮೂರನೇ ಆವೃತ್ತಿಗೆ ಪದಾರ್ಪಣೆ ಮಾಡಿರುವ ಜಿಸಿಎಲ್, ಹಬ್ಬದ ರೂಪ ಪಡೆದಿದೆ ಎಂದರು.

ಬೆಟಗೇರಿಯ 5 ವಾರ್ಡ್‌ಗಳಲ್ಲಿ ಮಹಿಳೆಯರು, ಮಕ್ಕಳು, ಕ್ರೀಡಾಪಟುಗಳನ್ನು, ಸಂಗೀತಗರಾರನ್ನು ಒಳಗೊಂಡು ವಾರ್ಡ್ ಹಬ್ಬ ಆಯೋಜಿಸಲಾಗಿದೆ ಎಂದು ಅವರು ಹೇಳಿದರು

ಗದಗ ಹಬ್ಬದ 3 ನೇ ಜಿಸಿಎಲ್ ಆವೃತ್ತಿ ಆಗಸ್ಟ್ 20ರಿಂದ ಪಗಡೆ ಆಟದೊಂದಿಗೆ ಬೆಟಗೇರಿಯ 5 ರಿಂದ 9 ನೇ ವಾರ್ಡ್‌ಗಳಲ್ಲಿ ಆರಂಭವಾಗಲಿದೆ. ಈ ಹಬ್ಬ
ರಾಜಕೀಯ, ಜಾತಿ, ಧರ್ಮ, ವಯಸ್ಸಿನ ಯಾವುದೇ ತಾರತಮ್ಯ ಇಲ್ಲದೆ ಮುಖ್ಯವಾಗಿ ಹಿರಿಯರಿಂದ ಬಂದ ಕಲೆ, ಸರಸ್ವತಿ, ಪರಂಪರೆಯನ್ನು ಎತ್ತಿ ಹಿಡಿಯುವ ಧೈಯೋದ್ದೇಶದೊಂದಿಗೆ ಗದಗ ಹಬ್ಬದ ಕಾರ್ಯ ಯೋಜನೆ ಮಾಡಲಾಗಿದೆ. ಎಲ್ಲರೂ ಸೇರಿಕೊಂಡು ಯಶಸ್ವಿಗೊಳಿಸುವ ಸಂಕಲ್ಪವನ್ನು ಗದಗ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಕಾಡೆಮಿ ಹೊಂದಿದೆ ಎಂದು ವಿವರಿಸಿದರು.

ಈಗಾಗಲೇ ಗದಗ ಹಬ್ಬದ ಲೋಗೋವನ್ನು ಬೆಳಧಡಿ ತಾಂಡಾದಲ್ಲಿ ಬಂಜಾರಾ ಹಬ್ಬದ ಲೋಗೋ, ಬಿಂಕದಕಟ್ಟಿಯಲ್ಲಿ ವಾಲಿಬಾಲ್, ಮುಳಗುಂದದಲ್ಲಿ ಕಬಡ್ಡಿ, ಗದುಗಿನ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ವಿವಿಧ ಕ್ರೀಡೆಗಳ ಲೋಗೋವನ್ನು ಲೋಕಾರ್ಪಣೆ ಮಾಡಲಾಗಿದೆ. ಆಧುನಿಕತೆಯಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ಟಿವಿ, ಕಂಪ್ಯೂಟರ್ , ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ನಮ್ಮ ದೇಶಿಯ ಕ್ರೀಡೆಗಳು, ಕಲೆಗಳು, ಸಾಹಿತ್ಯ, ಚಿತ್ರಕಲೆ, ರಂಗಕಲೆಗೆ ಪೋಷಣೆ ಇಲ್ಲದಂತಾಗಿದೆ. ಈ ಎಲ್ಲ ಕಲೆಗಳಿಗೆ ಮರುಜೀವ ತುಂಬುವ ಸಲುವಾಗಿ ಗದಗ ಹಬ್ಬ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕೃತಪುರದ ಶಿಖರ 2022 ಬೆಟಗೇರಿಯಲ್ಲಿ ಕಲೆ, ಕ್ರೀಡೆ, ಸಂಗೀತ,ಸಾಹಿತ್ಯದಲ್ಲಿ ಆಮೋಘ ಸಾಧನೆ ಮಾಡಿದ ಮಾಡಿದ ಸಾಧಕ ಮಹನೀಯರನ್ನು ಒಳಗೊಂಡ ಮೆರವಣಿಗೆ ಬೆಟಗೇರಿ ರಂಗಪ್ಪಜ್ಜನ ಮಠದವರೆಗೆ ಸಾಗಿ ಬರಲಿದೆ. ರಂಗಪ್ಪಜ್ಜನ ಮಠದ ಆವರಣದಲ್ಲಿ ಪಗಡೆ ಸ್ಪರ್ಧೆ ಏರ್ಪಡಿಸುವ ಮೂಲಕ ಗದಗ ಬೆಟಗೇರಿ ಅವಳಿ ನಗರದಲ್ಲಿ ‘ಗದಗ ಹಬ್ಬ’ಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಬೆಟಗೇರಿ 3 ರಿಂದ 9ನೇ ವಾರ್ಡ್‌ಗಳಲ್ಲಿ ಆರಂಭವಾಗುವ ‘ಗದಗ ಹಬ್ಬ’ ಮಹಿಳೆಯರಿಗಾಗಿ ವಿಶೇಷ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ಸ್ಪರ್ಧೆ, ಸೂಜಿಯಲ್ಲಿ ದಾರ ಪೋಣಿಸುವುದು, ಬಕೆಟ್‌ನ ನೀರನ್ನು ಬೊಗಸೆಯಿಂದ ಗ್ಲಾಸ್‌ನಲ್ಲಿ ಸಂಗ್ರಹಿಸುವುದು, ಸಿರಿಧಾನ್ಯದಿಂದ ತಯಾರಿಸಿದ ಆಹಾರ ಪದಾರ್ಥಗಳ ಸ್ಪರ್ಧೆ, ಸೇವಂತಿಗೆ ಹೂ ಕೈಯಿಂದ ಕಟ್ಟಿ ಮಾಲೆ ಮಾಡುವುದು, ಹಾಡಿನ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಆದರ್ಶ ದಂಪತಿ ಸ್ಪರ್ಧೆ, ಲಿಂಬೂ ಸ್ಪೂನ್, ಗೋಣಿ ಚೀಲದ ಓಟ, ಮ್ಯೂಜಿಕಲ್ ಚೇರ್, ಹಗ್ಗ ಜಗ್ಗಾಟ,ಹಾಗೂ ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆ, ಹಗ್ಗದಾಟ (ಸ್ಕಿಪ್ಪಿಂರ್ಗ), ನೃತ್ಯ ಸ್ಪರ್ಧೆ (ದೇಶಿಯ ಹಾಗೂ ವಿದೇಶಿ), ಮಕ್ಕಳು ಸಿದ್ದಪಡಿಸಿದ ಕಲಾಕೃತಿ ಪ್ರದರ್ಶನ ಹಾಗೂ ಸ್ಪರ್ಧೆ, ಮಾಡಲಿಂಗ್, ಲಗೋರಿ ಸ್ಪರ್ಧೆ, ಆಗ್ನಿಪಥ (ರಿಲ್ಸ್ ಸಿದ್ದ ಪಡಿಸುವಿಕೆ),ಕಪ್ಪೆ ಜಿಗಿತ, ಏಕಪಾತ್ರಭಿನಯ, ಭಾಷಣ ಸ್ಪರ್ಧೆ (ಸ್ವಾತಂತ್ರ್ಯ ಹೋರಾಟಗಾರರ ಕುರಿತು) ಆಟಗಳನ್ನು ಏರ್ಪಡಿಸಲಾಗಿದೆ ಎಂದರು.

ಗದಗ ಹಬ್ಬದ ಭಾಗವಾಗಿ ಬೆಟಗೇರಿ ವಾರ್ಡ್ ಹಬ್ಬ ಕಾರ್ಯಕ್ರಮವನ್ನು ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ ಹಾಗೂ ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ, ಸಂಜೆ 4.30 ಕ್ಕೆ ಉದ್ಘಾಟಿಸುವರು. ಈ ಸಂದರ್ಭದಲ್ಲಿ ವಿಧಾನ‌ ಪರಿಷತ್ ಸದಸ್ಯ ಎಸ್.ವಿ‌.ಸಂಕನೂರು, ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಆಗಮಿಸುತ್ತಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅನಿಲ ಅಬ್ಬಿಗೇರಿ, ಸಿದ್ದು ಪಲ್ಲೇದ, ಪ್ರೇಮನಾಥ ಬಣ್ಣದ, ಪ್ರಶಾಂತ ನಾಯ್ಕರ, ಅಂಬರೀಶ ಹಿರೇಮಠ, ಮಂಜುನಾಥ ಮ್ಯಾಗೇರಿ, ಮನೋಹರ್ ಮುನವಳ್ಳಿ, ಶ್ರೀನಿವಾಸ ಹುಬ್ಬಳ್ಳಿ, ಶಿವರಾಜಗೌಡ ಹಿರೇಮನಿ ಪಾಟೀಲ, ರಾಘವೇಂದ್ರ ಯಳವತ್ತಿ, ರಮೇಶ ಹತ್ತಿಕಾಳ, ಜಗನ್ನಾಥ ಸಾ ಬಾಂಡಗೆ, ವಿಜಯಲಕ್ಷ್ಮಿ ಮಾನ್ವಿ, ಅಶ್ವಿನಿ ಜಗತಾಪ್ ಮತ್ತಿತರರು ಇದ್ದರು.

ಪಗಡೆಯಾಟದ ಮೂಲಕ ಚಾಲನೆ

ಮಹಾಭಾರತ, ಪೌರಾಣಿಕ ಮಹತ್ವದ ದೇಶೀ ಕ್ರೀಡೆ ಪಗಡೆಯಾಟಕ್ಕೆ ಪಾಂಚಜನ್ಯ ಮೊಳಗಿಸುವ ಮೂಲಕ ಗದಗ ಹಬ್ಬ ಅದ್ದೂರಿಯಾಗಿ ಚಾಲನೆಗೊಳ್ಳಲಿದೆ. ಈಗಾಗಲೇ ಪಗಡೆಯಾಟಕ್ಕೆ‌ ಸುಮಾರು 60 ತಂಡಗಳು ನೋಂದಣಿಯಾಗಿದ್ದು, ಇನ್ನೂ 10-12 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಬೆಟಗೇರಿಯ ವೀರಭದ್ರೇಶ್ವರ ದೇವಸ್ಥಾನದಿಂದ 501 ಕುಂಭಮೇಳದೊಂದಿಗೆ ಬೆಟಗೇರಿಯ ಪ್ರತಿ ವಾರ್ಡ್‌ನ ಇಬ್ಬರು ಹಿರಿಯರನ್ನು ರಥದಲ್ಲಿ‌ ಮೆರವಣಿಗೆ ಮೂಲಕ ರಂಗಪ್ಪಜ್ಜಮಠಕ್ಕೆ ಕರೆ ತರಲಾಗುವುದು. ಆನಂತರ ಹಬ್ಬ ಆರಂಭಗೊಳ್ಳಲಿದೆ ಎಂದು ಅನಿಲ್ ಮೆಣಸಿನಕಾಯಿ ಹಬ್ಬದ ಚಾಲನೆಯ ಸ್ವರೂಪವನ್ನು ವಿವರಿಸಿದರು.

“ಈ ಸಲದ ಜಿಸಿಎಲ್‌ನ ಹಬ್ಬಗಳ ಸರಣಿಗೆ ಯಾವ ಅಡೆತಡೆ ಬರದಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜನತೆ ಸಹ ಕಲೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಕ್ರೀಡೆಗಳ ಬಗ್ಗೆ ಆಸಕ್ತಿ, ಪಾಲ್ಗೊಳ್ಳುವಿಕೆಯಲ್ಲಿ ಉತ್ಸಾಹ ಹೊಂದಿದ್ದಾರೆ. ಜನಮನ ತಣಿಸುವ ಉದ್ದೇಶದಿಂದ ಗದಗ ಹಬ್ಬ ಆಯೋಜಿಸಲಾಗುತ್ತಿದೆಯೇ ಹೊರತು‌ ಬೇರೆ ಯಾವ ಕಾರಣಗಳು ಇಲ್ಲ.”

-ಅನಿಲ್ ಮೆಣಸಿನಕಾಯಿ, ಗದಗ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಕಾಡೆಮಿ ಸಂಸ್ಥಾಪಕರು ಅಧ್ಯಕ್ಷರು.

ಮುಸ್ಲಿಂ ಬಾಂಧವರ ಮನೆಯಲ್ಲಿ ಶ್ರೀಗಳಿಗೆ ಪಾದಪೂಜೆ; ಮತ್ತೊಮ್ಮೆ ಕೋಮು ಸೌಹಾರ್ದಕ್ಕೆ ಸಾಕ್ಷಿಯಾದ ಮುದ್ರಣ ಕಾಶಿ

ವಿಜಯಸಾಕ್ಷಿ ಸುದ್ದಿ, ಗದಗ

ಗದುಗಿನ ಆ ಮನೆಯ ಒಳಾಂಗಣದಲ್ಲಿ ಸ್ವಾಮೀಜಿಗಳು ಆಸೀನರಾಗಿದ್ದರು. ಶಿವ ಭಜನೆಯ ಆಲಾಪ ಕೇಳಿಬರುತ್ತಿತ್ತು. ಸ್ವಾಮೀಜಿಗಳೆದುರು ಪೂಜಾ ಸಾಮಗ್ರಿಗಳು ಒಪ್ಪವಾಗಿ ಜೋಡಿಸಲ್ಪಟ್ಟಿದ್ದವು. ವಿವಿಧ ಹಣ್ಣು-ಹಂಪಲುಗಳು, ನಾನಾ ವಿಧದ ಹೂಪತ್ರೆಗಳನ್ನು ಜೋಡಿಸಿಕೊಂಡು ದಂಪತಿಗಳು ಪಾದಪೂಜೆ ನೆರವೇರಿಸುತ್ತಿದ್ದರು. ಇದರಲ್ಲೇನು ವಿಶೇಷತೆಯೆನ್ನಬೇಡಿ. ವಿಶೇಷವಿದೆ. ಇಲ್ಲಿ ಮಠಾಧೀಶರ ಪಾದಪೂಜೆ ನೆರವೇರಿಸಿ ಪುನೀತರಾಗಿದ್ದು ಮುಸ್ಲಿಂ ಕುಟುಂಬವೊಂದರ ಸದಸ್ಯರು!

ನಾಡಿನಾದ್ಯಂತ ಧರ್ಮ ದಂಗಲ್ ಎದ್ದಿದ್ದು, ಕೋಮು ಸೌಹಾರ್ದತೆ ಕದಡುತ್ತಿದೆ. ಇತ್ತಿಚೆಗೆ ಹಿಜಾಬ್, ಹಲಾಲ್ ಕಟ್, ಅಜಾನ್ ಸಮರ ಎಲ್ಲವೂ ಮುಗಿದು ಗಣೇಶನ ದಂಗಲ್ ಆರಂಭವಾಗಿದೆ. ತಿಳಿನೀರ ಕೊಳದಲ್ಲಿ ಕಲ್ಲೆಸೆದಂತೆ ಕೋಮು ಸಾಮರಸ್ಯ ಹಾಳಾಗುತ್ತಿದೆ. ಇವೆಲ್ಲವುಗಳ ಮಧ್ಯೆ ಮುಸ್ಲಿಂ ಮನೆಯೊಂದರಲ್ಲಿ ಓಂ ನಮಃ ಶಿವಾಯ ಮಂತ್ರಘೋಷ ಮೊಳಗಿದೆ. ಮುಸ್ಲಿಂ ಕುಟುಂಬವೊಂದು ಸ್ವಾಮೀಜಿಗಳನ್ನು ಮನೆಗೆ ಕರೆಯಿಸಿ, ಪಾದಪೂಜೆ ಮಾಡುವ ಮೂಲಕ ಕೋಮು ಸಾಮರಸ್ಯ ಮೆರೆದಿದ್ದಾರೆ. ಇಂಥದೊಂದು ಅಪರೂಪದ ಘಟನೆ ನಡೆದಿದ್ದು, ಮುದ್ರಣ ಕಾಶಿ ಗದಗ ನಗರದಲ್ಲಿ.

ಕೋಮು ಸೌಹಾರ್ದತೆಗೆ ಹೆಸರಾಗಿದ್ದು ನಮ್ಮ ಗದಗ. ಇಲ್ಲಿ ಈಶ್ವರ-ಅಲ್ಲಾ ಬೇರೆಯಲ್ಲ. ಮುಸ್ಲಿಮರು ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ, ಹಿಂದೂ ಬಾಂಧವರು ರಂಜಾನ್ ಹಬ್ಬಕ್ಕೆ ಮಸೀದಿಗೆ ಸ್ವತಃ ಬಣ್ಣವನ್ನೂ ಬಳಿಯುತ್ತಾರೆ. ಒಂದೇ ಮನೆಯಲ್ಲಿ ಹಿಂದು ಹಾಗೂ ಮುಸ್ಲಿಂ ಸಂಪ್ರದಾಯದ ಆರಾಧನೆಯೂ ನಡೆಯುತ್ತದೆ. ಈಗೀಗ ನಾಡಿನಲ್ಲಿ ಕೋಮು ಸೌಹಾರ್ದ ಕದಡುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಇದರ ಮಧ್ಯೆ ಮುದ್ರಣ ಕಾಶಿ ಗದಗನಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡುವ ಕೆಲಸವಾಗಿದೆ.

ಗದಗ ನಗರದ ಹುಡ್ಕೋ ಕಾಲೋನಿಯ ನಿವಾಸಿ ಸಿಕಂದರ್ ಬಡೇಖಾನರ ಮನೆಗೆ ಧಾರವಾಡದ ಸ್ವರೂಪಾನಂದ ಭಾರತಿ ಸ್ವಾಮೀಜಿಗಳು ಆಗಮಿಸಿ ಪಾದಪೂಜೆಯನ್ನು ಮಾಡಿಸಿಕೊಂಡಿದ್ದಾರೆ. ಬಡೆಖಾನ್ ದಂಪತಿಗಳು ಸ್ವಾಮೀಜಿಗಳಿಗೆ ಪಾದಪೂಜೆ ನೆರವೇರಿಸಿದ್ದಾರೆ. ಹಿಂದೂ ಸಂಪ್ರದಾಯದಂತೆ ಹತ್ತು ವರ್ಷಗಳಿಂದಲೂ ಈ ಮುಸ್ಲಿಂ ಮನೆಯಲ್ಲಿ ಶ್ರೀಗಳಿಗೆ ಪಾದಪೂಜೆ ನೆರವೇರಿಸುತ್ತ ಬಂದಿದ್ದಾರೆ. ಮುಸ್ಲಿಂ ಮನೆಯಲ್ಲಿ ಓಂಕಾರ ಮಂತ್ರವನ್ನು ಹೇಳುತ್ತಾ, ಹಿಂದು-ಮುಸ್ಲಿಂ ಒಂದೇ ಎನ್ನುವ ಸಂದೇಶವನ್ನು ಸಾರಿದ್ದಾರೆ.

ಸಿಕಂದರ್ ಬಡೆಖಾನ್ ಮೂಲತಃ ಉಪನ್ಯಾಸಕರಾಗಿದ್ದು, ಸಧ್ಯ ನಿವೃತ್ತಿ ಹೊಂದಿದ್ದಾರೆ. ಇವರು ಹಲವಾರು ವರ್ಷಗಳಿಂದ ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದ ಓಂಕಾರ ಆಶ್ರಮದ ಸ್ವಾಮಿಗಳ ಭಕ್ತರಾಗಿದ್ದಾರೆ. ಜಾತಿಗಳ ನಡುವಿನ ಸಂಕೋಲೆಯನ್ನು ಕಳಚಿದ್ದಾರೆ. ಎಲ್ಲರೂ ಒಂದೇ ಎನ್ನುವ ಸಂದೇಶವನ್ನು ಸಾರಿದ್ದಾರೆ. ಅವರ ಆದರ್ಶಗಳಿಗೆ ಮಾರುಹೋಗಿ ಸಿಕಂದರ್ ಬಡೆಖಾನ್ ಅವರು ಸ್ವಾಮೀಜಿಗಳ ಭಕ್ತರಾಗಿದ್ದಾರೆ. ಸಿಕಂದರ್ ಬಡೆಖಾನ್ರ ಮನೆಯಲ್ಲಿ ಶಿವ, ಸಿದ್ದಾರೂಢ ಸೇರಿದಂತೆ ಹಲವು ಹಿಂದೂ ದೇವರ ಪೋಟೋಗಳು, ಮುಸ್ಲಿಂ ಧರ್ಮದ ಕುರಾನ್ ಪೋಟೋಗಳೂ ಇವೆ. ಮುಸ್ಲಿಂ ಪದ್ಧತಿಯಂತೆ ನಮಾಜ್ ಮಾಡುತ್ತಾರೆ, ಹಿಂದು ಸಂಪ್ರದಾಯ ಪ್ರಕಾರ ಪೂಜೆಯನ್ನೂ ಕೈಗೊಳ್ಳುತ್ತಾರೆ. ಇವರ ಮನೆಯಲ್ಲಿ ನಡೆಯುವ ಶ್ರೀಗಳ ಪಾದಪೂಜೆ ಕಾರ್ಯಕ್ರಮಕ್ಕೆ ಅಕ್ಕಪಕ್ಕದ ಹಿಂದು-ಮುಸ್ಲಿಂ ಸಮಾಜದವರು ಆಗಮಿಸುತ್ತಾರೆ.

ಸಿಕಂದರ್ ಬಡೇಖಾನ್ ಸ್ವರೂಪಾನಂದ ಸ್ವಾಮಿಗಳ ಪಾದಪೂಜೆ ನೆರವೇರಿಸಿ ಪುನೀತರಾದರು.

ಒಟ್ಟಿನಲ್ಲಿ, ಗದಗದಲ್ಲಿನ ಈ ಕೋಮು ಸೌಹಾರ್ದ ಇಡೀ ಸಮಾಜಕ್ಕೇ ಉತ್ತಮ ಸಂದೇಶ ನೀಡುವಂತಿದೆ. ಆ ಜಾತಿ- ಈ ಮತವೆಂದು ಇಲ್ಲಸಲ್ಲದ ಸಮಸ್ಯೆ ಸೃಷ್ಟಿಸುವದಕ್ಕಿಂತ, ಎಲ್ಲರೂ ಒಂದೇ ಎಂಬ ಭಾವದಿಂದ ಜೀವನ ನಡೆಸಿದರೆ, ಎಲ್ಲರೂ ಸಾಮರಸ್ಯದಿಂದ ಬಾಳಬಹುದೆಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ, ಅಲ್ಲವೇ.

ಅನಾದಿಕಾಲದಿಂದಲೂ ಈ ವಿಷಯಕ್ಕೆ ಸಂಬಂಧಿಸಿ ಸಮಾಜದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಈಗಲೂ ಇದೆ. ಗುರುವಿನ ಮಾರ್ಗದರ್ಶನವಿಲ್ಲದಿದ್ದರೆ, ಗುರಿ ಸೇರುವ ದಾರಿ ದುಸ್ತರವಾಗುತ್ತದೆ. ನಾವು ಯಾರು, ನಮ್ಮ ಕರ್ತವ್ಯವೇನು ಎಂಬುದನ್ನು ಅರಿತರೆ, ಜೀವನದಲ್ಲಿ ಗೊಂದಲಗಳಿರುವದಿಲ್ಲ. ಈ ಹೊಡೆದಾಟ-ಬಡಿದಾಟ, ಸಂಘರ್ಷಗಳು ಇರುವದಿಲ್ಲ. ಎಲ್ಲರ ಜೀವನವೂ ಪ್ರೀತಿಯಿಂದಿರುತ್ತದೆ. ಪ್ರೀತಿಯನ್ನು ಹಂಚಿ, ಸಂತೋಷದಿಂದ ಬಾಳಿ. ಮುಖ್ಯವಾಗಿ ಮನುಷ್ಯನಲ್ಲಿ ಸಂಸ್ಕಾರಗಳು ಬೇಕು. ಸಿಕಂದರ್ ಜನ್ಮತಃ ಮುಸ್ಲಿಮರಾಗಿದ್ದರೂ, ಎಲ್ಲರಲ್ಲಿರುವ ಆತ್ಮಚೈತನ್ಯ ಒಂದೇ. ಮಾನವ ಕುಲ ಒಂದೇ ಎಂಬ ಸಂದೇಶ ನೀಡಿದರು.

-ಸ್ವರೂಪಾನಂದ ಭಾರತಿ ಸ್ವಾಮಿಗಳು

 

ನಮ್ಮ ಬಂಧು-ಬಳಗದವರೆಲ್ಲರೂ ಶ್ರಾವಣ ಮಾಸದ ಶುಭ ಸಮಯದಲ್ಲಿ ಪಾದಪೂಜೆ ನೆರವೇರಿಸಿದ್ದೇವೆ. ನಮ್ಮ ರಕ್ತ ಶುದ್ಧಿಯಾಗಿ ಕಣಕಣದಲ್ಲೂ ಹುಮ್ಮಸ್ಸು ಹರಿಯಬೇಕೆಂದರೆ, ಅದು ಗುರುವಿನ ಅನುಗ್ರಹದಿಂದ ಮಾತ್ರ ಸಾಧ್ಯ. ಈ ಜಗತ್ತು ನಮ್ಮದು. ಎಲ್ಲರೂ ನಮ್ಮವರೇ ಇದ್ದಾರೆ, ಅವುಗಳ ನಡುವೆ ಬೇಧಭಾವ ಸಲ್ಲದು ಎಂಬ ಗುರುಗಳ ಮಾತು ಎಂದಿಗೂ ನಮ್ಮ ಮನಸ್ಸಿನಲ್ಲಿರುತ್ತದೆ. ನಮಗೆ ಆಧ್ಯಾತ್ಮ-ಪುರಾಣಗಳ ಬಗ್ಗೆ ಯಾವುದೇ ಕಲ್ಪನೆಗಳಿರಲಿಲ್ಲ. ಸ್ವಾಮೀಜಿಗಳು ನಮಗೆ ಸನ್ಮಾರ್ಗ ತೋರಿಸಿದ್ದಾರೆ. ಪ್ರತೀ ವರ್ಷ ಗದುಗಿಗೆ ಶಿಷ್ಯರ ಮನೆಗೆ ಬಂದಾಗ ನಮ್ಮ ಮನೆಗೂ ಬಂದು ಪಾದಪೂಜೆ ಸ್ವೀಕರಿಸುತ್ತಾರೆ. ಇದಕ್ಕಿಂತ ಪುಣ್ಯ ನಮಗೇನಿದೆ ಎಂದರು.

-ಸಿಕಂದರ್ ಬಡೆಖಾನ್, ನಿವೃತ್ತ ಉಪನ್ಯಾಸಕರು.

ಸರಕಾರಿ ಜಾಗೆ ಖಾಸಗಿ ವ್ಯಕ್ತಿಗಳಿಗೆ ಪರಭಾರೆ; ಪಿಡಿಓ ವಿರುದ್ಧ ತನಿಖೆಗೆ ‌ಆದೇಶ

0

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಾಬುದ್ದೀನ ಕವಡೇಲಿ ಅವರನ್ನು ವರ್ಗಾವಣೆ ಮಾಡಿ, ಅವರ ಅಧಿಕಾರಾವಧಿಯಲ್ಲಿ ಸರ್ಕಾರದ ಜಾಗವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ದಾಖಲು ಮಾಡಿ ಅವ್ಯವಹಾರ ನಡೆಸಿದ್ದರ ಕುರಿತು ಸಮಗ್ರ ತನಿಖೆ ಕೈಗೊಳ್ಳುವಂತೆ ಗದಗ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆದೇಶಿಸಿದ್ದಾರೆ.

ಸದರಿ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ರೈತ ಸೇನಾ(ರಿ)ಕರ್ನಾಟಕ ಸಂಘಟನೆಯ ಜಿಲ್ಲಾ ಸಂಚಾಲಕ, ಡಂಬಳ ಗ್ರಾಮದ ಮಂಜಯ್ಯಸ್ವಾಮಿ ಅರವಟಗಿಮಠ ಜಿಲ್ಲಾ ಪಂಚಾಯತಕ್ಕೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಪರಿಶೀಲಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಹಾಲಿ ಕಾರ್ಯನಿರ್ವಹಿಸುತ್ತಿದ್ದ ಶಾಬುದ್ದೀನ ಕವಡೇಲಿ ಅವರನ್ನು ಶಿಂಗಟಾಲೂರಿನ ಗ್ರಾ.ಪಂ. ಕಾರ್ಯದರ್ಶಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುವಂತೆ ಹಾಗೂ ಸದರಿ ಡಂಬಳ ಪಂಚಾಯತ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಬಾಗೇವಾಡಿ ಗ್ರಾ.ಪಂ ಪಿಡಿಓ ಅನಿಲಗೌಡ್ರ ಮಲ್ಲನಗೌಡ್ರ ಇವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಪ್ರಸ್ತುತ ವಿಷಯದ ಬಗ್ಗೆ ಪರಿಶೀಲಿಸಿ, ತಾಲೂಕು ಪಂಚಾಯತ ಹಂತದಲ್ಲಿ ಒಬ್ಬ ಅಧಿಕಾರಿಯನ್ನು ನೇಮಿಸಿ ಅವರಿಂದ ತನಿಖಾ ವರದಿ ಪಡೆದು, ಸ್ಪಷ್ಟ ಅಭಿಪ್ರಾಯದೊಂದಿಗೆ ಕಛೇರಿಗೆ ವರದಿ ನೀಡುವಂತೆ ಮುಂಡರಗಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆದೇಶಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಂಜಯ್ಯಸ್ವಾಮಿ ಅರವಟಗಿಮಠ, ನಮ್ಮ ಹೋರಾಟಕ್ಕೆ ಸ್ಪಂದಿಸಿ ಕಳೆದ ಒಂಬತ್ತು ವರ್ಷಗಳಿಂದ ಡಂಬಳ ಗ್ರಾ.ಪಂ.ನಲ್ಲಿ ಬೀಡು ಬಿಟ್ಟು ಸರಕಾರದ ಅನುದಾನ ಲೂಟಿ ಮಾಡಿ, ಸರ್ಕಾರದ ಜಾಗೆಯನ್ನ ಖಾಸಗಿ ವ್ಯಕ್ತಿಗಳಿಗೆ ದಾಖಲು ಮಾಡಿದಂತಹ ಭ್ರಷ್ಟ ಅಧಿಕಾರಿಯನ್ನು ವರ್ಗಾವಣೆ ಮಾಡಿ, ತನಿಖೆ ನಡೆಸಲು ಆದೇಶಿಸಿದ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ರೈತ ಸೇನಾ ಕರ್ನಾಟಕ ಹಾಗೂ ಡಂಬಳ ಜನತೆಯ ಪರವಾಗಿ ಧನ್ಯವಾದ ಸಲ್ಲಿಸಿದ್ದಾರೆ.

ಕಪ್ಪತಗುಡ್ಡದಲ್ಲಿ ಅಪರೂಪದ ಘಟನೆ, ಮಾನವೀಯತೆ ಮೆರೆದ ಪೊಲೀಸರು; ಇದಲ್ಲವೇ ಮನುಷ್ಯತ್ವವೆಂದರೆ?!

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ/ಲಕ್ಷ್ಮೇಶ್ವರ

ಪ್ರಾಣಿಗಳೂ ಕೂಡ ಮನುಷ್ಯರಂತೆಯೇ ತಮ್ಮದೇ ಆದ ಹಲವು ಭಾವನೆಗಳನ್ನು, ಆಕಾಂಕ್ಷೆಗಳನ್ನು ಹೊಂದಿರುತ್ತವೆ. ಮಂಗಗಳೂ ಇದಕ್ಕೇನೂ ಹೊರತಾಗಿಲ್ಲ. ಅಂಥ ವಾನರಗಳೇನಾದರೂ ನಮ್ಮ ಬಳಿ ಬಂದು ನಾವು ಉಣ್ಣುತ್ತಿರುವ ತಟ್ಟೆಗೇ ಕೈಹಾಕಿ ತಿನ್ನಲು ಬಂದರೆ `ಹಚ್ಯಾ…’ ಎಂದು ದೂರ ಓಡಿಸುವವರೇ ಹೆಚ್ಚು. ಆದರೀಗ ಹೇಳುತ್ತಿರುವ ವಿಷಯ ಇಂಥ ಘಟನೆಗಳಿಗೆ ಅಪವಾದವೆಂಬಂತಿದೆ.

ಪ್ರತಿವರ್ಷದಂತೆ ಶ್ರಾವಣ ಮಾಸದಲ್ಲಿ ನಡೆಯುವ ಕಪ್ಪತಗುಡ್ಡದ ಕಪ್ಪತ ಮಲ್ಲೆಶ್ವರ ಜಾತ್ರಾ ಮಹೋತ್ಸವ ಬಂದೋಬಸ್ತಿಗೆಂದು ಶಿರಹಟ್ಟಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ತೆರಳಿದ್ದರು.

ಗುರುವಾರ ಮದ್ಯಾಹ್ನ ಊಟ ಮಾಡುವ ಸಮಯಕ್ಕೆ ಜಾಗವರಸುತ್ತ ಸಮೀಪವೇ ಇದ್ದ ದೈವಿ ಉದ್ಯಾನದ ಬಳಿ ತಾವು ತಂದ ಬುತ್ತಿಯನ್ನು ಬಿಚ್ಚಿ ನಾಲ್ವರು ಪೊಲೀಸ್ ಸಿಬ್ಬಂದಿಗಳು ಊಟ ಪ್ರಾರಂಭಿಸಿದರು. ಅಲ್ಲಿಯೇ ಸುತ್ತಾಡುತ್ತಿದ್ದ ಮಂಗವೊಂದು ಇವರ ಬಳಿ ಬಂದು ಸೀದಾ ತಟ್ಟೆಗೇ ಕೈ ಹಾಕಿ ತುತ್ತು ತಿನ್ನತೊಡಗಿತು!

ಈ ಬಗ್ಗೆ ಸಿಬ್ಬಂದಿ ಶ್ರೀಕಾಂತ್ ಜಂಗಣ್ಣವರ್ ಹೇಳಿದ್ದು ಹೀಗೆ. ` ಊಟ ಮಾಡುತ್ತಿದ್ದಾಗ ಹತ್ತಿರವೇ ಬಂದು ಕುಳಿತುಕೊಂಡಾಗ, ನಾನೂ ಸ್ವಲ್ಪ ಸಿಹಿ ತಿನ್ನಿಸಿದೆ. ಅದಕ್ಕೇನು ರುಚಿಯೆನಿಸಿತೇನೋ, ಮತ್ತೆ ಪಕ್ಕವೇ ಕುಳಿತು ತಟ್ಟೆಗೆ ಕೈಹಾಕಿ ಊಟ ಮಾಡತೊಡಗಿತು. ನಾನೂ ಅದೇ ತಟ್ಟೆಯಲ್ಲಿ ಒಟ್ಟಿಗೇ ಊಟ ಮಾಡಿದೆ. ವೈಯಕ್ತಿಕವಾಗಿ ಆಂಜನೇಯಸ್ವಾಮಿಯೆಂದರೆ ನನಗೆ ಬಹಳ ಭಕ್ತಿ. ಪ್ರತೀ ಶನಿವಾರವೂ ಆಂಜನೇಯ ದೇವಸ್ಥಾನಕ್ಕೆ ಹೋಗುತ್ತೇನೆ. ಪ್ರಾಣಿಗಳೆಂದರೂ ಅಷ್ಟೇ ಪ್ರೀತಿ. ಅವೂ ಕೂಡ ನಮ್ಮಂತೆಯೇ ಭಾವನೆಗಳನ್ನು ಹೊಂದಿರುವಾಗ ಬೇಧಭಾವವೇಕೆ? ನನ್ನೊಟ್ಟಿಗಿದ್ದ ಸಿಬ್ಬಂದಿಗಳಾದ ಮುಲ್ಲಾ, ರಾಮಗಿರಿ, ರಾಜೇಶ್ ಕೂಡ ಅಷ್ಟೇ ಪ್ರೀತಿಯಿಂದ ಊಟ ಹಂಚಿಕೊಂಡರು’ ಎಂದಿದ್ದಾರೆ.

ಸಿಬ್ಬಂದಿಯ ಈ ಮಾನವೀಯತೆ ಮೆಚ್ಚಿ ಪಿಎಸ್ಐ ಪ್ರವೀಣ್ ಗಂಗೋಳ ಸಾಮಾಜಿಕ ತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು ಪ್ರಶಂಸೆ ವ್ಯಕ್ತವಾಗಿದೆ.

ಕೊಲೆ ಆರೋಪಿಗೆ 11 ವರ್ಷ ಜೈಲು, 12 ಸಾವಿರ.ರೂ ದಂಡ ಶಿಕ್ಷೆ

ವಿಜಯಸಾಕ್ಷಿ ಸುದ್ದಿ, ಗದಗ

ಹಳೆಯ ದ್ವೇಷದ ಉದ್ದೇಶಕ್ಕೆ ಮಹಿಳೆಯನ್ನು ಕೊಲೆ ಮಾಡಿ, ಸಾಕ್ಷ್ಯಗಳನ್ನು ನಾಶ ಮಾಡಲು ಪ್ರಯ್ನಿಸಿದ ಆರೋಪದ ಮೇಲೆ ಬಂಧಿತನಾಗಿದ್ದ ಆರೋಪಿಗೆ ನ್ಯಾಯಾಲಯವು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ತಮ್ಮ ಕಛೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಘಟನೆಯ ವಿವರ

ಆರೋಪಿ ಹನುಮಂತಪ್ಪ ದುರಗಪ್ಪ ಬಂಡಿವಡ್ಡರ ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಹರ್ತಿ ಗ್ರಾಮದಲ್ಲಿ ಹಳೆಯ ದ್ವೇಷದಿಂದ 02-10-2015ರಂದು ರಾತ್ರಿ 11-30ರ ಸಮಯಕ್ಕೆ ಲಕ್ಷ್ಮವ್ವ ಎಂಭುವಳ ಮನೆಗೆ ಹೋಗಿ ಹಗ್ಗದಿಂದ ಕುತ್ತಿಗೆಗೆ ಉರುಳು ಹಾಕಿ ಕೊಲೆ ಮಾಡಲು ಪ್ರಯತ್ನಿಸಿದ್ದಲ್ಲದೇ, ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಉದ್ದೇಶದಿಂದ ಕೊಲೆ ಪ್ರಯತ್ನಕ್ಕೆ ಬಳಸಿದ ಹಗ್ಗವನ್ನು ಹರ್ತಿ ಗ್ರಾಮದ ಜನರು ಬಯಲು ಕಡೆಗೆ ಹೋಗುವ ಗಾಂವಠಾಣಾ ಜಾಗದ ಪಾಳುಬಾವಿಯ ಬಳಿ ಪೊದೆಯಲ್ಲಿ ಎಸೆದು ಬಂದಿದ್ದ.

ಇತ್ತ ಲಕ್ಷ್ಮವ್ವ ಆಸ್ಪತ್ರೆಯಲ್ಲಿ ಉಪಚಾರ ಸಫಲವಾಗದೇ ದಿ. 24.10.2015ರ ಸಂಜೆ 5.30ರ ಹೊತ್ತಿಗೆ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಆರೋಪಿ ಹನುಮಂತಪ್ಪನ ವಿರುದ್ಧ ಗದಗ ಗ್ರಾಮೀಣ ವೃತ್ತದ ವೃತ್ತ ಆರಕ್ಷಕ ಅಂದಿನ ಅಧೀಕ್ಷಕ ಸೋಮಶೇಖರ.ಜಿ. ಜುಟ್ಟಲ್ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ಗದಗಿನ ಮಾನ್ಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಶ್ವರ.ಎಸ್. ಶೆಟ್ಟಿ ಸಾಕ್ಷಿ ವಿಚಾರಣೆ ನಡೆಸಿ, ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದರಿಂದ ಆರೋಪಿಗೆ 26.7.2022ರಂದು ಭಾ.ದಂ.ಸಂ ಕಲಂ: 304(2) ರಂತೆ 10 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ ದಂಡ, ಸಾ.ದಂ.ಸಂ. 201 ಅನ್ವಯ 1 ವರ್ಷ ಸಾದಾ ಶಿಕ್ಷೆ ಮತ್ತು 2 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸವಿತಾ.ಎಂ. ಶಿಗ್ಲಿ ಸಾಕ್ಷಿ ವಿಚಾರಣೆ ನಡೆಸಿದ್ದು, ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನಗೌಡ ಬಸವನಗೌಡ ದೊಡ್ಡಗೌಡ್ರ ವಾದ ಮಂಡಿಸಿದ್ದರು.

ಅಪ್ರಾಪ್ತೆಯ ಅತ್ಯಾಚಾರಿ ವಿಜಯ ಹಿರೇಮಠಗೆ 28 ವರ್ಷ ಶಿಕ್ಷೆ, 1.45 ಲಕ್ಷ ರೂ. ದಂಡ

ವಿಜಯಸಾಕ್ಷಿ ಸುದ್ದಿ, ಗದಗ

ಅಪ್ರಾಪ್ತೆ ಯುವತಿಯನ್ನು ಬಲಾತ್ಕಾರ ಮಾಡಿ, ನಂತರ ಮದುವೆಯಾಗುವದಾಗಿ ನಂಬಿಸಿ, ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಿ ಗೃಹಬಂಧನದಲ್ಲಿ ಇರಿಸಿದ ಆರೋಪದ ಮೇಲೆ ಬಂಧಿತ ಅಪರಾಧಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ಹೊರಡಿಸಿದೆ. ಈ ಕುರಿತು ಎಸ್ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದರು.

ಘಟನೆಯ ವಿವರ

ಆರೋಪಿ ವಿಜಯ ಮಹಾಲಿಂಗಯ್ಯ ಹಿರೇಮಠ ದಿ. 17-5-2016ರಂದು ಮದ್ಯಾಹ್ನ 12ರ ಸಮಯಕ್ಕೆ ಗದಗದ ಮಲ್ಲಸಮುದ್ರ ಗ್ರಾಮದ ಹೊರವಲಯದಲ್ಲಿ ಹೊಸದಾಗಿ ಕಟ್ಟಿಸುತ್ತಿದ್ದ ಅನಾಥಾಶ್ರಮ ಕಟ್ಟಡದಲ್ಲಿ ದೂರುದಾರರ ಅಪ್ರಾಪ್ತಳ ಪುತ್ರಿಯ ಮೇಲೆ ಬಲಾತ್ಕಾರ ನಡೆಸಿದ್ದ. ನಂತರ 13-09-2017ರಂದು ಸಂಜೆ 5 ಗಂಟೆಯ ಸಮಯಕ್ಕೆ ಅವಳನ್ನು ಮದುವೆಯಾಗುವದಾಗಿ ನಂಬಿಸಿ ಗದಗ ಹುಡ್ಕೋ ಕಾಲನಿಯಲ್ಲಿರುವ ನಿಸರ್ಗ ಕಿರಾಣಿ ಅಂಗಡಿಯ ಬಳಿಯಿಂದ ಅಪಹರಿಸಿ ತನ್ನ ಟಂಟಂ ರಿಕ್ಷಾದಲ್ಲಿ ಅಪಹರಿಸಿ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದವರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ರೈಲ್ವೇ ಹಾಗೂ ಬಸ್ ನಲ್ಲಿ ಆಕೆಯನ್ನು ಕರೆದುಕೊಂಡು ಹೋಗಿ ತುಮಕೂರಿನ ಕ್ಯಾತಸಂದ್ರದಲ್ಲಿ ರಘು ಜುಮ್ಮಣ್ಣವರ ಎಂಬುವರ ವಾಸದ ಮನೆಯಲ್ಲಿ ಇರಿಸಿ ಅವಳು ಎಲ್ಲಿಯೂ ಹೋಗದಂತೆ ಗೃಹ ಬಂಧನದಲ್ಲಿರಿಸಿದ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿತನ ವಿರುದ್ಧ ಗದಗ ಉಪವಿಭಾಗದ ಪೊಲೀಸ್ ಅಧಿಕ್ಷಕ ವಿಜಯಕುಮಾರ್ ತಳವಾರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ಸಾಕ್ಷಿ ವಿಚಾರಣೆ ನಡೆಸಿದ ಗದಗ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಶ್ವರ.ಎಸ್. ಶೆಟ್ಟಿ, ಪ್ರಕರಣದಲ್ಲಿ ಆರೋಪ ಸಾಬೀತಾದ ಕಾರಣ, ಆರೋಪಿ ವಿಜಯ ಮಹಾಲಿಂಗಯ್ಯ ಹಿರೇಮಠನಿಗೆ ಆಗಸ್ಟ್ 8ರಂದು ಭಾ.ದಂ.ಸಂ ಕಲಂ: 365ರ ಅಡಿಯಲ್ಲಿ 3 ವರ್ಷ ಕಠಿಣ ಶಿಕ್ಷೆ,10 ಸಾವಿರ ರೂ. ದಂಡ, ಕಲಂ: 366ರ ಅನ್ವಯ 5 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ, ಕಲಂ:376(2)(ಐ)(ಎನ್) ಮತ್ತು ಕಲಂ:5(1) ರೇ:ವಿ 6 ಪೋಕ್ಸೋ ಕಾಯ್ದೆಯಡಿಯಲ್ಲಿ 20 ವರ್ಷ ಕಠಿಣ ಶಿಕ್ಷೆ, 1 ಲಕ್ಷ.ರೂ ದಂಡ, ಕಲಂ: 3(2)(ವಿ.ಎ) ಪ.ಜಾ/ಪ.ಪಂ ಕಾಯ್ದೆಯ ಅನ್ವಯ ಕಠಿಣ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ.ರೂ ದಂಡ, ಕಲಂ: 3(2)(ವಿ.ಎ) ಪ.ಜಾ/ಪ.ಪಂ ಕಾಯ್ದೆಯಂತೆ 10 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಸ್ತುತ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸವಿತಾ.ಎಂ. ಶಿಗ್ಲಿ ಸಾಕ್ಷಿ ವಿಚಾರಣೆ ನಡೆಸಿದ್ದು, ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನಗೌಡ ಬಸವನಗೌಡ ದೊಡ್ಡಗೌಡ್ರ ವಾದ ಮಂಡಿಸಿದ್ದರು.

ಕೋಟಿ ವಂಚನೆಯ ವೀರ ವಿಜಯ್ ಶಿಂಧೆ ಪ್ರಕರಣ ಸಿಐಡಿಗೆ; ಎಸ್ಪಿ ಶಿವಪ್ರಕಾಶ್ ದೇವರಾಜು

ಶಿಂಧೆಯಿಂದ ಎಷ್ಟೇ ಹಣ ಕಳೆದುಕೊಂಡವರಿದ್ದರೂ ಸಾಕ್ಷ್ಯಗಳೊಂದಿಗೆ ಪ್ರಕರಣ ದಾಖಲಿಸಿ

ವಿಜಯಸಾಕ್ಷಿ ಸುದ್ದಿ, ಗದಗ

ದೊಡ್ಡ ದೊಡ್ಡ ಕುಳಗಳಿಂದ ಹಿಡಿದು ಸಣ್ಣ ಪುಟ್ಟ ವ್ಯವಹಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಡಪಾಯಿ ವ್ಯಕ್ತಿಗಳನ್ನೂ ಒಳಗೊಂಡು ಕೋಟ್ಯಂತರ ರೂಪಾಯಿಗಳ ವಂಚನೆ ಆರೋಪ ಹೊತ್ತು ಜೈಲು ಸೇರಿದ್ದ ಶ್ರೀ ಪುಟ್ಟರಾಜ ಫೈನಾನ್ಸ್ ಕಾರ್ಪೊರೇಷನ್ ಮಾಲೀಕ, ರಾಜೀವ್ ಗಾಂಧಿ ನಗರದ ನಿವಾಸಿ ವಿಜಯ್ ರಾಘವೇಂದ್ರ ಶಿಂಧೆಯ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾಹಿತಿ ನೀಡಿದ್ದಾರೆ.

ಈ ಕುರಿತು ಬುಧವಾರ ತಮ್ಮ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರಿಗೆ ಮಾಹಿತಿ ನೀಡಿದ ಎಸ್ಪಿ ಶಿವಪ್ರಕಾಶ ದೇವರಾಜು, ಪ್ರಸ್ತುತ ಪ್ರಕರಣವನ್ನು ಸಿಐಡಿಗೆ ಒಪ್ಪಿಸಬೇಕೆಂದು ನಾವು ಮನವಿಯನ್ನು ಕಳಿಸಿದ್ದೆವು. ಅದರಂತೆ ಆಗಸ್ಟ್ 10ರಂದು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ಮಾನ್ಯ ಡಿಐಜಿಯವರು ತಿಳಿಸಿದ್ದಾರೆ.

ಆರೋಪಿ ಶಿಂಧೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಸುಮಾರು 36 ಹೂಡಿಕೆದಾರರಿಂದ 10 ಕೋಟಿ.ರೂ.ಗಳಿಗೂ ಮೀರಿ ಮೋಸ ನಡೆಸಿರುವ ವಿಚಾರ ತಿಳಿದುಬಂದಿತ್ತು. ಬಡ್ಸ್ ಕಾಯ್ದೆಯ ಪ್ರಕಾರ ತನಿಖೆ ನಡೆಸಿ, ಮೋಸ ಮಾಡಿ ಸಂಗ್ರಹಿಸಿದ ಹಣವನ್ನು ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಿ ವಿವರವನ್ನು ಸಲ್ಲಿಸಲಾಗಿತ್ತು.

ಈ ತನಿಖೆಯಲ್ಲಿ ಸುಮಾರು 4 ಕೋಟಿ.ರೂ ಸರ್ಕಾರಿ ಮೌಲ್ಯವಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಮುಂದಿನ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಈವರೆಗಿನ ತನಿಖೆಯ ವಿವರಗಳನ್ನೂ ಸಿಐಡಿಗೆ ಒದಗಿಸಿದ್ದೇವೆ ಎಂದರು.

ಹತ್ತು ಕೋಟಿ.ರೂ ಮೇಲ್ಪಟ್ಟ ಈ ವಿಧದ ಮೋಸದ ಪ್ರಕರಣಗಳನ್ನು ಸಿಐಡಿಗೆ ವಹಿಸಬೇಕೆಂಬ ಕಾನೂನಿದೆ. ಶಿಂಧೆ ಪ್ರಕರಣದಲ್ಲಿ ತನಿಖೆ ನಡೆಸಿದಷ್ಟೂ ಮೋಸದ ವ್ಯವಹಾರಗಳು ಹೊರಬರುತ್ತಿದ್ದು, ಮೋಸವಾದ ಹಣದ ಮೊತ್ತ ಇನ್ನೂ ಹೆಚ್ಚಾಗುತ್ತಲೇ ಇದೆ. ಸ್ಪಷ್ಟ ಲೆಕ್ಕಾಚಾರ ಇನ್ನಷ್ಟೇ ಸಿಗಬೇಕಿದೆ. 2-3 ಲಕ್ಷದಂತೆ ಬಹಳಷ್ಟು ಜನ ಈತನಲ್ಲಿ ಹಣ ಹೂಡಿದವರಿದ್ದಾರೆ.

ಈ ಪ್ರಕರಣದಲ್ಲಿ ಇನ್ನೂ ಹಲವಾರು ಜನ ಹಣ ಕಳೆದುಕೊಂಡು ಮೋಸ ಹೋಗಿದ್ದು ಗೊತ್ತಾಗಿದೆ. ಆದರೆ ಅವರು ಯಾರೂ ಮುಂದೆ ಬಂದು ದೂರು ಕೊಡುತ್ತಿಲ್ಲ. ಮೋಸ ಹೋದವರು ಸಾಕ್ಷಿ ಸಮೇತ ದೂರು ನೀಡಬೇಕು. ಅವರಲ್ಲಿ ಸೂಕ್ತ ಸಾಕ್ಷಾಧಾರಗಳಿದ್ದರೆ, ದಾಖಲೆಗಳಿದ್ದರೆ ಧೈರ್ಯದಿಂದ ಮುಂದೆ ಬಂದು ದೂರು ಸಲ್ಲಿಸಬಹುದು. ಯಾವ ಕಾರಣಕ್ಕಾಗಿ ಹಣ ಕೊಟ್ಟಿದ್ದಾರೆ ಎಂಬುದಕ್ಕೆ ಅಗ್ರಿಮೆಂಟ್ ಏನಾದರೂ ಕೊಟ್ಟಿದ್ದಾರೆಯೇ ಎಂಬ ಬಗ್ಗೆ ದೂರು ಕೊಟ್ಟರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮೋಸ ಆಗಿದ್ದು ನಿಜವೇ ಎಂಬುದನ್ನು ಕನ್ಫರ್ಮ್ ಮಾಡಿಕೊಂಡು ಸಿಐಡಿ ತನಿಖೆಯಲ್ಲಿ ಗಮನಕ್ಕೆ ತರಲಾಗುವುದು. ಒಟ್ಟಾರೆ ಎಲ್ಲದಕ್ಕೂ ಸಾಕ್ಷಿಗಳು ಮುಖ್ಯ.

ಶಿವಪ್ರಕಾಶ ದೇವರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗದಗ

ಈತನಿಂದ ಎಷ್ಟೇ ಹಣ, ಬಂಗಾರ ಕಳೆದುಕೊಂಡವರಿದ್ದರೂ ಸಾಕ್ಷ್ಯಗಳೊಂದಿಗೆ ಪ್ರಕರಣ ದಾಖಲಿಸಿ. ನಗದು ವ್ಯವಹಾರವಷ್ಟೇ ಅಲ್ಲದೆ ಬ್ಯಾಂಕ್, ಆನ್‌ಲೈನ್‌ನಲ್ಲಿ ಹಣ ವರ್ಗಾವಣೆಗಳಾಗಿದ್ದರೂ, ಬೇರೆ ಯಾರಾದರೂ ವ್ಯಕ್ತಿಗಳ ಸಮ್ಮುಖದಲ್ಲಿ ಈತನಿಗೆ ಹೂಡಿಕೆಯ ಹಣ ನೀಡಿದ್ದರೂ ನಮ್ಮ ಗಮನಕ್ಕೆ ತನ್ನಿ. ದೂರುದಾರರಿಂದ ಸಂಪೂರ್ಣ ವಿವರ, ದಾಖಲೆಗಳು ಇನ್ನೂ ಬರಬೇಕಿದೆ ಎಂದು ಶಿವಪ್ರಕಾಶ ದೇವರಾಜು ಮಾಹಿತಿ ನೀಡಿದರು.

ವಿಚಾರಣೆ ನಡೆಸಿದಾಗ ಇನ್ನೂ ಬಹಳಷ್ಟು ಜನರಿಗೆ ನಿವೇಶನ, ಮನೆ ಕೊಡಿಸುತ್ತೇನೆ, ಅದು ಬೇಡವಾದರೆ ಅಧಿಕ ಬಡ್ಡಿಯೊಂದಿಗೆ ನಿಮ್ಮ ಹಣವನ್ನು ಮರಳಿಸುತ್ತೇನೆ ಎಂದು ಮೋಸ ಮಾಡಿರುವ ಬಗ್ಗೆ ತಿಳಿದುಬಂದಿತ್ತು. ಶಿಂಧೆಯ ವಿರುದ್ಧ ನ್ಯಾಯಾಲಯದ ಪರವಾನಗಿಯೊಂದಿಗೆ 21 ಬಡ್ಸ್ ಕಲಂನ್ನು ಜಾರಿಗೊಳಿಸಿ ವಿಚಾರಣೆ ನಡೆಸಲಾಗುತ್ತಿತ್ತು. ಕಾನೂನಿನಂತೆ ಸದರಿ ಪ್ರಕರಣದಲ್ಲಿ ಮೋಸವಾದ ಹಣ, ಆಸ್ತಿ-ಪಾಸ್ತಿಯ ಮೌಲ್ಯ 10 ಕೋಟಿ.ರೂ ಮೀರಿರುವದರಿಂದ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಯಿಸಲಾಗಿದೆ.

ನಗರದ ಸ್ಟೇಷನ್ ರಸ್ತೆಯ ನಗರಸಭೆ ಎದುರು ಕಚೇರಿ ತೆರದು ಫೈನಾನ್ಸ್ ದಂಧೆ ನಡೆಸುತ್ತಿದ್ದ ವಿಜಯ ಶಿಂಧೆ, ಅವಳಿ ನಗರದ ದೋ ನಂಬರ್ ದಂಧೆಕೋರರನ್ನು ಟಾರ್ಗೆಟ್ ಮಾಡಿಕೊಂಡು ಅವರಿಗೆ ಬಡ್ಡಿಹಣ, ನಿವೇಶನ ಹಾಗೂ ಜಮೀನು ನೀಡುವ ದುರಾಸೆ ಹುಟ್ಟಿಸಿ ಹಣ ಹೂಡಿಕೆ ಮಾಡಿಕೊಳ್ಳುತ್ತಿದ್ದ. ಚಿಟ್ ಫಂಡ್, ಬಂಗಾರದ ವ್ಯಾಪಾರ, ಪಿಗ್ಮಿ ಹೆಸರಲ್ಲಿ ವಿಜಯ ಶಿಂಧೆ ಫೈನಾನ್ಸ್ ನಡೆಸುತ್ತಿದ್ದ. 2020ರ ಅಕ್ಟೋಬರ್‌ನಿಂದ 2022ರ ಏಪ್ರಿಲ್ 23ರವರೆಗೆ ಈತ ಭಾರೀ ವಂಚನೆ ನಡೆಸಿದ್ದ. ಕಳಸಾಪೂರ ರಸ್ತೆಯ ಸಂತೋಷ ಪ್ರಭಾಕರ್ ಮುತಗಾರ ಎಂಬುವವರು ಸೈಬರ್ ಠಾಣೆಗೆ ವಂಚನೆಯ ದೂರು ದಾಖಲಿಸಿದಾಗ, ಜುಲೈ 17ರಂದು ಶಿಂಧೆಯನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದರು.

ಹುಲಕೋಟಿಯಲ್ಲಿ ಮಗನಿಂದಲೇ ತಂದೆ ಹತ್ಯೆ; ಕೊಡಲಿಯಿಂದ ಕೊಚ್ಚಿ ಪೊಲೀಸರಿಗೆ ಶರಣಾದ ಪಾಪಿ ಮಗ!

ವಿಜಯಸಾಕ್ಷಿ ಸುದ್ದಿ, ಗದಗ

ಕುಟುಂಬ ಕಲಹದಿಂದ ಮಗನೇ ಹೆತ್ತ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ನಡೆದಿದೆ.

58 ವರ್ಷದ ಗಣೇಶ್ ಚಿಕ್ಕನಟ್ಟಿ ಮೃತ ತಂದೆ. ಮಗ ವಿಜಯ ಎಂಬಾತ ಕೊಲೆಗೈದು ಪೊಲೀಸರಿಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಹುಲಕೋಟಿ ಗ್ರಾಮದ ಗಣೇಶ್ ನಗರದಲ್ಲಿ ಮಲಗಿದ್ದ ತಂದೆ ಗಣೇಶ್ ಚಿಕ್ಕನಟ್ಟಿ ಎಂಬುವರನ್ನು ಮಗ ವಿಜಯ ಕೊಡಲಿಯಿಂದ ಕತ್ತುಗೆಗೆ ಬಲವಾಗಿ ಕೊಚ್ಚಿದ ಪರಿಣಾಮ ಸ್ಥಳದಲ್ಲಿಯೇ ತಂದೆ‌ ಮೃತಪಟ್ಟಿದ್ದಾನೆ.

ಕೊಲೆಗೈದು ಪೊಲೀಸರಿಗೆ ಮಾಹಿತಿ ನೀಡಿದ ಪರಿಣಾಮ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸುದ್ದಿ ತಿಳಿದ ಎಸ್ಪಿ ಶಿವಪ್ರಕಾಶ್ ದೇವರಾಜು, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

error: Content is protected !!