Home Blog Page 3223

ಟ್ರ್ಯಾಕ್ಟರ್‌ನಿಂದ ಬಿದ್ದು ವಿದ್ಯಾರ್ಥಿನಿ ಸ್ಥಳದಲ್ಲಿಯೇ ಸಾವು

ವಿಜಯಸಾಕ್ಷಿ ಸುದ್ದಿ, ಗದಗ:

ಟ್ರ್ಯಾಕ್ಟರ್‌ನಲ್ಲಿ ಶಾಲೆಗೆ ಹೊರಟಿದ್ದ ನಾಲ್ಕನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿರುವ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಜರಗಿದೆ.

ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಸಹಳ್ಳಿ ಕ್ರಾಸ್ ಬಳಿ ನಡೆದ ಈ ದುರ್ಘಟನೆಯಲ್ಲಿ ಮೂಲತಃ ಕಡಕೋಳ ಗ್ರಾಮದ ಸುಧಾ (10) ಮೃತಪಟ್ಟ ದುರ್ಧೈವಿಯಾಗಿದ್ದಾಳೆ.

ತನ್ನ ಅಜ್ಜಿ ಮನೆ ಹೊಸಹಳ್ಳಿಯಲ್ಲಿದ್ದು ಕಡಕೋಳ ಗ್ರಾಮದ ಸರಕಾರಿ ಶಾಲೆಗೆ ಹೋಗಿ ಬರುತ್ತಿದ್ದ ಸುಧಾ ಶುಕ್ರವಾರ ಟ್ರ್ಯಾಕ್ಟರ್‌ನಲ್ಲಿ ಕಡಕೋಳಕ್ಕೆ ಶಾಲೆಗೆ ಹೊರಟಿದ್ದಳು. ಆದರೆ, ಹೊಸಹಳ್ಳಿ ಕ್ರಾಸ್‌ನಲ್ಲಿ ಅತೀ ವೇಗವಾಗಿ ಚಾಲಕ ಟ್ರ್ಯಾಕ್ಟರ್‌ನ್ನು ಚಲಾಯಿಸಿದ್ದರಿಂದ ಟ್ರೇಲರ್‌ನಲ್ಲಿ ನಿಂತಿದ್ದ ವಿದ್ಯಾರ್ಥಿನಿ ಸುಧಾ ಆಯ ತಪ್ಪಿ ಕೆಳಗೆ ಬಿದ್ದಿದ್ದು, ಹಿಂದಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

ಚಾಲಕನ ಅಜಾಗರೂಕತೆಯಿಂದ ಟ್ರ್ಯಾಕ್ಟರ ಚಾಲನೆ ಮಾಡಿದ್ದೇ ಈ ಘಟನೆಗೆ ಕಾರಣ ಎಂದು ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಿವಾನಂದ ಪಟ್ಟಣಶೆಟ್ಟಿ, ಇನ್ಸ್‌ಪೆಕ್ಟರ್ ವಿಕಾಸ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಿಎಸ್‌ಐ ನವೀನ ಜಕ್ಕಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ರಾಜ್ಯದಲ್ಲಿ 16 ಜನರಿಗೆ ಓಮಿಕ್ರಾನ್ ಸೋಂಕು ಧೃಡ?: ಶಾಸಕ ಎಚ್ಕೆ ಪಾಟೀಲ್ ಸ್ಫೋಟಕ ಹೇಳಿಕೆ

0

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿನ ಭೀತಿ ಇದ್ದು, ನಿನ್ನೆ (ಡಿ.೨) ಸಂಜೆ ಇಬ್ಬರಿಗೆ ಓಮಿಕ್ರಾನ್ ಸೋಂಕು ದೃಢಪಟ್ಟಿದೆ. ಆದರೆ, ಗುರುವಾರ ಸಂಜೆಯ ಅನಧಿಕೃತ ವರದಿ ಪ್ರಕಾರ ರಾಜ್ಯದ ಇನ್ನೂ 16 ಜನರಿಗೆ ಓಮಿಕ್ರಾನ್ ಸೋಂಕು ಖಚಿತ ಪಟ್ಟಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ.ಪಾಟೀಲ್ ಸ್ಫೋಟಕ ಹೇಳಿಕೆ ನೀಡಿದರು.

ಶುಕ್ರವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿರುವುದು ಗಂಭೀರ ವಿಷಯವಾಗಿದ್ದು, ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ
ಜನರು ಭಯಪಡದೇ ಜಾಗೃತರಾಗಿರಬೇಕು. ಆದರೆ, ಸರ್ಕಾರ ಭಯದಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಅದರಂತೆ, ಕೊರೊನಾ ಒಂದು ಮತ್ತು ಎರಡನೇ ಅಲೆಗಿಂತ ಮೂರನೇ ಅಲೆಯಾಗಿ ಪರಿವರ್ತನೆಗೊಂಡಿರುವ ಕೊರೊನಾ ಓಮಿಕ್ರಾನ್ ಕೆಟ್ಟ ಪರಿಣಾಮ ಬೀರುತ್ತಿದೆ‌. ಇದು ಅತ್ಯಂತ ವೇಗವಾಗಿ ಹರಡುವ ಸ್ವಭಾವ ಹೊಂದಿದೆ. ನ.20 ರಂದು ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ವೈದ್ಯಕೀಯ ಸಮ್ಮೇಳನದಲ್ಲಿ ಭಾಗವಹಿಸಿದ 250 ಜನರ ಪೈಕಿ ರಾಜ್ಯ ಸರ್ಕಾರದ ವೈದ್ಯರೊಬ್ಬರಿಗೆ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ ಎಂದರು.

ರಾಜ್ಯ ಸರ್ಕಾರ ಸಮ್ಮೇಳನದಲ್ಲಿ ಪಾಲ್ಗೊಂಡವರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಪತ್ತೆ ಮಾಡುವಲ್ಲಿ ವಿಫಲವಾಗಿದೆ. ಅಲ್ಲದೇ, ಓಮಿಕ್ರಾನ್ ತಪಾಸಣಾ ವರದಿ ವಿಳಂಬವಾಗುತ್ತಿದ್ದು, ವರದಿಗಾಗಿ ಸುಮಾರು ಹನ್ನೆರಡು ದಿನಗಳವರೆಗೆ ಕಾಯಬೇಕಾಗಿದೆ ಎಂದು ಶಾಸಕ ಎಚ್.ಕೆ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಎಫ್ ಎಚ್ ಜಕ್ಕಪ್ಪನವರ, ಬಸವರಾಜ್ ಕಡೆಮನಿ, ಅಶೋಕ ಮಂದಾಲಿ, ವಾಸಣ್ಣ ಕುರುಡಗಿ ಸೇರಿದಂತೆ ಹಲವರು ಇದ್ದರು.

10 ಕ್ವಿಂಟಲ್ ಈರುಳ್ಳಿಗೆ ಸಿಕ್ಕಿದ್ದು 170 ರೂ.! ಬೆಲೆ ಕುಸಿತ, ಸಾಲದ ಹೊರೆಯೊಂದಿಗೆ ಬಂದ ಅನ್ನದಾತ!

0

ವಿಜಯಸಾಕ್ಷಿ ಸುದ್ದಿ, ಗದಗ

ಸತತ ಮಳೆಯಿಂದ ಬೆಳೆ ನಷ್ಟಕ್ಕೆ ಒಳಗಾಗಿರುವ ರೈತ ಈಗ ಮಾರುಕಟ್ಟೆಗೆ ಬೆಳೆಯನ್ನು ಒಯ್ದರೆ ಸರಿಯಾದ ಬೆಲೆಯೂ ಬರುತ್ತಿಲ್ಲ. 10 ಕ್ವಿಂಟಲ್ ಈರುಳ್ಳಿ ಮಾರಿದ ರೈತರೊಬ್ಬರಿಗೆ ಖರ್ಚು ಕಳೆದು ಕೇವಲ 170 ರೂ. ಪಾವತಿಯಾಗಿದೆ!

ಆದರೆ, ಬೆಂಗಳೂರಿಗೆ ಹೋಗಿ, ಈರುಳ್ಳಿ ಮಾರಾಟ ಮಾಡಲು ಹಾಗೂ ಹಮಾಲಿ ಸೇರಿ 6,000 ರೂ. ಖರ್ಚಾಗಿದ್ದರಿಂದ ಅಷ್ಟೂ ಸಾಲದ ಹೊರೆ ರೈತನ ಮೇಲೆ ಬಿದ್ದಿದೆ.

ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಕ್ಕು ಸ್ವಲ್ಪ ಹಣ ಸಂಪಾದಿಸಬಹುದೆಂಬ ಅಲ್ಪ ಆಸೆಯೊಂದಿಗೆ ಬೆಂಗಳೂರಿಗೆ ಈರುಳ್ಳಿ ಮಾರಲು ಹೋದ ರೈತ ಸಾಲದ ಹೊರೆಯೊಂದಿಗೆ ಮರಳಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

ಸಮಿಪದ ಕೋಟುಮಚಗಿ ಗ್ರಾಮದ ರೈತ ಅಂಬರೀಶ್ ಅಬ್ಬಿಗೇರಿ ತನ್ನ ನಾಲ್ಕೂವರೆ ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದರು. ಈಗಾಗಲೇ ಎರಡು ಹಂತದಲ್ಲಿ ಈರುಳ್ಳಿ ಬೆಳೆ ಮಾರಾಟ ಮಾಡಿದ್ದು, 118 ಮೂಟೆಗಳಿಗೆ ಒಟ್ಟು 76,000 ರೂ. ಬಂದು ತುಸು ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿತ್ತು. ಉಳಿದ 20 ಚೀಲ ಈರುಳ್ಳಿಯನ್ನು ಮಾರಾಟ ಮಾಡಲು ಸೋಮವಾರ (ನ.29) ಬೆಂಗಳೂರಿನ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯ ಶ್ರೀಉಮಾಶಂಕರ ಟ್ರೇಡರ್ಸ್ ದಲಾಲಿ ಅಂಗಡಿಯಲ್ಲಿ ಇರಿಸಿದ್ದರು.

ಕ್ವಿಂಟಲ್‌ಗೆ ಕೇವಲ 400, 300 ಹಾಗೂ 100 ರೂ.ಗೆ ಮಾರಾಟ ಆಗಿದೆ. ಒಟ್ಟು 10 ಕ್ವಿಂಟಲ್ ತೂಗಿದ್ದು, ಒಟ್ಟು ವ್ಯಾಪಾರದಿಂದ 2,420 ರೂ. ಹಣ ಬಂದಿದೆ. ಲಾರಿ ಬಾಡಿಗೆ, ಹಮಾಲಿ ಹಣ ಕಳೆದು 170 ರೂ. ಮರಳಿ ಬಂದಿದೆ. ಇದನ್ನು ನೋಡಿ ರೈತ ಕಂಗಾಲಾಗಿ ಬರಿಗೈಯಲ್ಲಿ ವಾಪಸ್ ಬರುವಂತಾಗಿದೆ.

ಬೆಂಗಳೂರಿನ ಮಾರುಕಟ್ಟೆಗೆ ಒಯ್ದ 20 ಮೂಟೆ ಪೈಕಿ ದೊಡ್ಡ ಈರುಳ್ಳಿಗೆ 200 ರೂ., ಸಣ್ಣದಕ್ಕೆ 150 ರೂ. ಹಾಗೂ ಮಧ್ಯಮ ಗಾತ್ರದ ಉಳ್ಳಾಗಡ್ಡಿ ಕೇವಲ 50 ರೂ.ಗೆ ಮಾರಾಟವಾಗಿದೆ. ಒಂದು ಮೂಟೆ ಮಾರುಕಟ್ಟೆಗೆ ಬಂದು ಬೀಳಬೇಕಾದರೆ, ಸುಮಾರು 500 ರೂ. ಖರ್ಚಾಗುತ್ತದೆ.

20 ಮೂಟೆಗಳಿಗೆ 1008 ಕೆ.ಜಿ. ತೂಕ ಬಂದಿದ್ದು, ಒಟ್ಟು 2,425 ರೂ. ಪಟ್ಟಿಯಾಗಿದೆ. ಅದರಲ್ಲಿ ಹಮಾಲಿ 141 ರೂ. ಹಾಗೂ ಸರಕು ಸಾಗಾಣೆ ವೆಚ್ಚ 2,113 ರೂ. ಕಡಿತಗೊಂಡು ರೈತನ ಕೈಗೆ ಕೇವಲ 170 ರೂ. ಮಾತ್ರ ಸಿಕ್ಕಿದೆ. ಇದು ರೈತನಿಗೆ ಆಶ್ಚರ್ಯವನ್ನುಂಟು ಮಾಡಿದ್ದಲ್ಲದೇ, ನೆಲಕ್ಕೆ ಕುಸಿಯುವಂತೆ ಮಾಡಿದೆ.

ಬೆಲೆಗಿಂತ ಕೂಲಿ ಹಣವೇ ಅಧಿಕ!

ಹವಾಮಾನ ವೈಪರೀತ್ಯದಿಂದಾಗಿ ಹಲವು ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದಾಗಿ ಈರುಳ್ಳಿ ಕೊಳೆಯುವ ಸ್ಥಿತಿಗೆ ಬಂದಿದ್ದು, ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಬೆಲೆಯೂ ಕುಸಿದಿದೆ. ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತೆ ಆಗಬಾರದು ಎಂಬ ಕಾರಣಕ್ಕೆ ಸಿಕ್ಕ ಬೆಲೆ ಮಾರಾಟ ಮಾಡುತ್ತಿದ್ದಾರೆ.

ಜಮೀನಿನಲ್ಲಿರುವ ಈರುಳ್ಳಿ ಕಿತ್ತು ಹಾಕಲು ಒಬ್ಬ ಕೂಲಿ ಕಾರ್ಮಿಕರಿಗೆ 300 ರೂ. ಕೂಲಿ ಇದ್ದು, ಒಂದು ಬುಟ್ಟಿ ಉಳ್ಳಾಗಡ್ಡಿ ಹೆಚ್ಚಲು (ಕೊಯ್ಯಲು) 20 ರೂ. ನೀಡಬೇಕು. ಕೆಲಸಕ್ಕೆ ಇದ್ದೂರಲ್ಲಿ ಕೂಲಿ ಕಾರ್ಮಿಕರು ಸಿಗದ ಕಾರಣ 2,000 ಸಾವಿರ ರೂ. ವಾಹನ ಬಾಡಿಗೆ ಕೊಟ್ಟು 30 ಕಿ.ಮೀ.ನಿಂದ ತರಿಸಬೇಕು. ರೈತನಿಗೆ ಈರುಳ್ಳಿ ಬೆಲೆಗಿಂತ ಕೂಲಿ ಹಣವೇ ಜಾಸ್ತಿ ಹೊರೆಯಾಗುತ್ತಿದೆ.

ಸರ್ಕಾರ ಬೇಗನೆ ಮಧ್ಯೆ ಪ್ರವೇಶಿಸಿ, ಬೆಂಬಲ ಬೆಲೆಗೆ ಈರುಳ್ಳಿ ಹಾಗೂ ಇತರ ಬೆಳೆಗಳನ್ನು ಖರೀದಿಸಿ ರೈತರಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಆಗ್ರಹಿಸಿದ್ದಾರೆ.

ಬೆಂಗಳೂರಿಗೆ ಹೋಗಲು ಕಾರಣ…

ರಾಜ್ಯದಲ್ಲಿ ಬೆಂಗಳೂರು ಮಾರುಕಟ್ಟೆ ದೊಡ್ಡದಾಗಿದ್ದು, ಇಲ್ಲಿ ಖರೀದಿದಾರರು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ ಎಂಬ ನಂಬಿಕೆಯಿಂದ ರೈತರು ಅಲ್ಲಿಗೆ ಹೋಗುತ್ತಿದ್ದಾರೆ. ಗದಗ ಮಾರುಕಟ್ಟೆಯಂತೆ, ಇಲ್ಲಿ ರೈತರಿಂದ ಹೆಚ್ಚು ದಲ್ಲಾಳಿ (ಕಮಿಷನ್) ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಹತ್ತಿರದ ಗದಗ, ಹುಬ್ಬಳ್ಳಿ ಮಾರುಕಟ್ಟೆಗಳನ್ನು ಬಿಟ್ಟು ಬೆಂಗಳೂರಿಗೆ ಈರುಳ್ಳಿ ಮೂಟೆ ತೆಗೆದುಕೊಂಡು ಹೋಗಲು ಆರ್ಥಿಕ ಹೊರೆಯಾಗುತ್ತಿದ್ದರೂ ಲಾಭದಾಸೆಗೆ ಹೋಗಲಾಗುತ್ತಿದೆ. ಆದರೆ, ಸದ್ಯದ ಮಾರುಕಟ್ಟೆಯ ಬೆಲೆಯಿಂದಾಗಿ ರೈತ ವರ್ಷಾನುಗಟ್ಟಲೆ ದುಡಿದ ಸಂಬಳವೂ ಸಿಗದಂತಾಗಿದೆ.

ರೈತ ಮಾರುಕಟ್ಟೆಗೆ ಬೆಳೆ ಮಾರಾಟ ಮಾಡಲು ಹೋದರೆ ಖರೀದಿದಾರರು, ವರ್ತಕರಾಗಲಿ ಯಾರೂ ಸರಿಯಾಗಿ ಸ್ಪಂದಿಸುವುದಿಲ್ಲ. ಇನ್ನು ಈರುಳ್ಳಿ ಬೆಲೆ ಕುಸಿತದಿಂದಾಗಿ ಈರುಳ್ಳಿ ಬೆಳೆಗಾರರು ಸೂಕ್ತ ಬೆಲೆ ಸಿಗದೆ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಮಾರುಕಟ್ಟೆಗೆ ಬೆಳೆ ಮಾರಾಟ ಮಾಡಲು ಹೋದರೂ ಒಂದು ರೂ. ಲಾಭಾಂಶ ಪಡೆಯದೇ ಬರಿಗೈಯಲ್ಲೇ ವಾಪಾಸ್ ಆಗುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ರಾಜ್ಯ ಸರ್ಕಾರ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸುವ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು.

ಅಂಬರೀಶ್ ಅಬ್ಬಿಗೇರಿ, ರೈತ

ಪೊಲೀಸರಿಂದಲೇ ‘ಕಳ್ಳ-ಪೊಲೀಸ್’ ಆಟ! ಠಾಣೆಯ ಕಪಾಟಿಗೆ ಕೈ ಹಾಕಿ ಹಣ ಕದ್ದನೇ ಪೊಲೀಸ್ ಪೇದೆ?

ವಿಜಯಸಾಕ್ಷಿ ಸುದ್ದಿ, ಗದಗ

ರೈಲು, ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಜೇಬುಗಳ್ಳರಿದ್ದಾರೆ, ಮೊಬೈಲ್ ಕಳ್ಳರಿದ್ದಾರೆ ಎಚ್ಚರಿಕೆ ಎಂಬ ಸಂದೇಶಗಳ ಮೂಲಕ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೇ, ಕಳ್ಳ ಕಾಕಾರ ಮೇಲೆ ನಿಗಾವಹಿಸುವ ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗುತ್ತಿರುವುದು ಪ್ರತಿಯೊಬ್ಬರಿಗೂ ತಿಳಿದಿರುವ ಸಂಗತಿ. ಆದರೆ, ರಾತ್ರಿ ಹೊತ್ತು ಗಸ್ತು ತಿರುಗಲು ಕರ್ತವ್ಯದ ಮೇಲೆ ಹೊರಗೆ ಹೋದ ಪೊಲೀಸರೊಬ್ಬರ ಕಪಾಟಿಗೆ (ಟ್ರಜರಿ) ಪೊಲೀಸ್ ಪೇದೆಯೊಬ್ಬ ಕನ್ನ ಹಾಕಿರುವ ಅಪರೂಪದ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಮೊನ್ನೆ ಅಂದರೆ ಡಿಸೆಂಬರ್ 1 ಬೆಳಗಿನ ಜಾವ ನೈಟ್ ಪಾಳೆಯದಲ್ಲಿದ್ದ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಮಂಜುನಾಥ್ ಎಂಬ ಪೊಲೀಸ್ ಪೇದೆ, ಗದಗ ಗ್ರಾಮೀಣ ಪೊಲೀಸ್ ಠಾಣೆಯ ಟ್ರಜರಿಯಲ್ಲಿ ಇದ್ದ ಸುಮಾರು 45 ಸಾವಿರಕ್ಕೂ ಹೆಚ್ಚಿನ ಹಣ ಕಳ್ಳತನ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಸದ್ಯ ಪೊಲೀಸ್ ಠಾಣೆಯ ಕಪಾಟಿನಲ್ಲಿಟ್ಟಿದ್ದ ಹಣ ದೋಚಿದ್ದಾನೆ ಎನ್ನಲಾಗುತ್ತಿರುವ ಪೊಲೀಸ್ ಪೇದೆ ಬುಧವಾರ ರಾತ್ರಿ ಠಾಣೆಯಲ್ಲೆ ಮೂರ್ಛೆರೋಗ ಬಂದು ಬಿದ್ದಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿ ಬಿಗಿ ಭದ್ರತೆಯೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.

ಕಳ್ಳ ಕಾಕರಿಂದ ಜನರಿಗೆ ರಕ್ಷಣೆ ಕೊಡಬೇಕಾದ ಪೊಲೀಸರೇ ಕಳ್ಳರಾದರೆ ಹೇಗೆ ಎಂಬ ಭೀತಿ ಸದ್ಯ ಅವಳಿ ನಗರದ ಜನರನ್ನು ಕಾಡುತ್ತಿದೆ.

ಗದುಗಿಗೆ ‘ಓಮಿಕ್ರಾನ್’’ ವೈರಸ್ ಭೀತಿ; ಜಿಲ್ಲಾಡಳಿತ ಕಟ್ಟೆಚ್ಚರ!

*ಮಹಾರಾಷ್ಟ್ರದಿಂದ ಬರುವ ಪ್ರಯಾಣಕರ ತಪಾಸಣೆ..
*ಕೊರೊನಾ ತಪಾಸಣೆ ಮಾಡಿಸಿಕೊಳ್ಳದೆ ಕಳ್ಳಮಾರ್ಗದಿಂದ ಪರಾರಿ.

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾ ರೂಪಾಂತರಿ ವೈರಸ್ ‘ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ರೈಲು ಮೂಲಕ ಗದಗ-ಬೆಟಗೇರಿ ಅವಳಿ ನಗರಕ್ಕೆ ಆಗಮಿಸುವ ಪ್ರಯಾಣಿಕರ ಮೇಲೆ ಜಿಲ್ಲಾಡಳಿತ ನಿಗಾವಹಿಸಿದೆ.
ರೈಲು ನಿಲ್ದಾಣದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರತಿ ಪ್ರಯಾಣಿಕರ ಆರ್‌ಟಿಪಿಸಿಆರ್ ವರದಿ ಪರಿಶೀಲಿಸುತ್ತಿದ್ದು, ಆರ್‌ಟಿಪಿಸಿಆರ್ ವರದಿ ಇಲ್ಲದಿರುವ ಪ್ರಯಾಣಿಕರಿಗೆ ರ‍್ಯಾಟ್ ಟೆಸ್ಟ್ ಮಾಡುತ್ತಿದ್ದ ದೃಶ್ಯ ಬುಧವಾರ ಗದಗ ರೈಲು ನಿಲ್ದಾಣದಲ್ಲಿ ಕಂಡು ಬಂದಿತು.

ದಿನವೊಂದಕ್ಕೆ ಮಹಾರಾಷ್ಟ್ರದಿಂದ ಗದಗ ನಗರಕ್ಕೆ 50ಕ್ಕೂ ಅಧಿಕ ಪ್ರಯಾಣಿಕರು ಆಗಮಿಸುತ್ತಿದ್ದು, ಅದರಲ್ಲಿ ಕೇವಲ 20ರಿಂದ 30 ಜನರು ಮಾತ್ರ ಆರೋಗ್ಯ ಇಲಾಖೆಯ ಸಿಬ್ಬಂದಿ ಕೈಗೆ ಸಿಗುತ್ತಿದ್ದಾರೆ. ಪ್ರಯಾಣಿಕರು ಬರುವ ವೇಳೆ ಪೊಲೀಸ್ ಇಲಾಖೆಯ ಸಿಬ್ಬಂದಿ ಇಲ್ಲದಿರುವುದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಜತೆಗೆ ಪ್ರಯಾಣಿಕರು ಗಲಾಟೆ ಮಾಡುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಪ್ರಯಾಣಿಕರ ಮನವೊಲಿಸುವುದು ಸವಾಲಿನ ಕೆಲಸವಾಗಿದೆ.

ಕೊರೊನಾ ತಪಾಸಣೆ ಮಾಡುತ್ತಾರೆ ಎಂಬ ಕಾರಣಕ್ಕೆ ಕೆಲವು ಪ್ರಯಾಣಿಕರು ನಿಲ್ದಾಣದ ಮುಖ್ಯದ್ವಾರದಲ್ಲಿ ಬಾರದೆ ವಿವಿಧ ಮಾರ್ಗಗಳಿಂದ ರೈಲು ನಿಲ್ದಾಣದಿಂದ ಹೊರಗೆ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇನ್ನು ಮಹಾರಾಷ್ಟ್ರದಿಂದ ಬಹುತೇಕ ಪ್ರಯಾಣಿಕರು ಕೊರೊನಾ ನಕಾರಾತ್ಮಕ ವರದಿ ಇಲ್ಲದೆ ಅವಳಿ ನಗರಕ್ಕೆ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರಯಾಣಿಕರು ಆರ್‌ಎಟಿ ಟೆಸ್ಟ್ ಮಾಡಿಸಿಕೊಳ್ಳದೆ, ನಗರದೊಳಗೆ ಪ್ರವೇಶಿಸುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಲಕ್ಷಣ ಇದ್ದಲ್ಲಿ ಪರೀಕ್ಷೆ

ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಬರುವ ಪ್ರತಿ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗಿದೆ. ಇದಕ್ಕಾಗಿ ರೈಲು ನಿಲ್ದಾಣದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೋವಿಡ್ ಎರಡೂ ಹಂತದ ಲಸಿಕೆ ಪಡೆದಿದ್ದರೂ ಪ್ರತಿ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲಾಗುತ್ತಿದೆ. ಕೊರೊನಾ ರೋಗದ ಲಕ್ಷಣಗಳು ಕಂಡುಬಂದಲ್ಲಿ ಅಂಥವರಿಗೆ ಸ್ಥಳದಲ್ಲಿಯೇ ಆರ್‌ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆ. ಇನ್ನು ಎಸ್‌ಡಿಎಂ ಆಸ್ಪತ್ರೆಯಲ್ಲಿ ೧೫ ದಿನಗಳ ಒಳಗಾಗಿ ಚಿಕಿತ್ಸೆ ಪಡೆದಿರುವ ಗದಗ ಜಿಲ್ಲೆಯವರ ಬಗ್ಗೆ ಎಸ್‌ಡಿಎಂನ ವೈದ್ಯಕೀಯ ಅಧೀಕ್ಷಕರ ಬಳಿ ಮಾಹಿತಿ ಕೇಳಲಾಗಿದೆ. ಗುರುವಾರ ಸಂಜೆ ವೇಳೆಗೆ ಆರೋಗ್ಯ ಇಲಾಖೆಗೆ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ. ಒಂದು ವೇಳೆ ಜಿಲ್ಲೆಯಲ್ಲಿ ಎಂಡಿಎಂ ಸಂಪರ್ಕ ಹೊಂದಿರುವವರು ಇದ್ದರೆ, ಅಂಥವರಿಗೆ ಕೋವಿಡ್ ಟೆಸ್ಟ್ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಸತೀಶ್ ಬಸರಿಗಿಡದ ‘ವಿಜಯಸಾಕ್ಷಿ’ಗೆ ತಿಳಿಸಿದರು.

ಮೊದಲು ಮಾಸ್ಕ್ ಹಾಕ್ಕೊಳ್ಳಿ

ಬುಧವಾರ ಮಹಾರಾಷ್ಟ್ರದಿಂದ ಗದಗ ರೈಲು ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರೊಬ್ಬರ ಟಿಕೆಟ್ ಪರಿಶೀಲಿಸಲು ಮುಂದೆ ಬಂದ ಟಿಕೆಟ್ ಕಲೆಕ್ಟರ್ ಒಬ್ಬರಿಗೆ ‘ಮೊದಲು ಮಾಸ್ಕ್ ಹಾಕಿಕೊಳ್ಳಿ ಬಳಿಕ ಟಿಕೆಟ್ ಪರಿಶೀಲಿಸಿ’ ಎಂದು ಪ್ರಯಾಣಿಕರೊಬ್ಬರು ಬುದ್ಧಿಮಾತು ಹೇಳಿದ ಪ್ರಸಂಗ ನಡೆಯಿತು.

ಮಹಾರಾಷ್ಟ್ರದಿಂದ ದಿನಕ್ಕೆ 40ಕ್ಕೂ ಅಧಿಕ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಆದರೆ, ನಮ್ಮ ಕೈಗೆ ಸಿಗುತ್ತಿರುವವರು, 20ರಷ್ಟು ಜನ ಮಾತ್ರ. ಇನ್ನುಳಿದವರು ಕೊರೊನಾ ಲಸಿಕೆ ಪಡೆದಿದ್ದರೂ, ಏಕೆ ಕೊರೊನಾ ಟೆಸ್ಟ್ ಮಾಡುತ್ತಿದ್ದಾರೆ ಅಂತಾ ಹೆದರಿ ಬೇರೆ ಮಾರ್ಗಗಳಿಂದ ರೈಲು ನಿಲ್ದಾಣದಿಂದ ಹೊರಗೆ ಹೋಗುತ್ತಿದ್ದಾರೆ.

ಆರೋಗ್ಯ ಇಲಾಖೆಯ ಸಿಬ್ಬಂದಿ

‘ಬಂಡಾಯ’ದ ನೆಲದಲ್ಲಿ ‘ಗೂಂಡಾ’ಗಿರಿ!?; ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ

ಹಲ್ಲೆಕೋರರ ವಿರುದ್ಧ ಕ್ರಮಕೈಗೊಳ್ಳುವಂತೆ ಮುಸ್ಲಿಂ ಒಕ್ಕೂಟ ಪ್ರತಿಭಟನೆ

ವಿಜಯಸಾಕ್ಷಿ ಸುದ್ದಿ, ನರಗುಂದ

ಇಲ್ಲಿನ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿಗಳ ಮೇಲೆ ಮೂರ್ನಾಲ್ಕು ದಿನಗಳಿಂದ ಒಂದು ಕೋಮಿನ ಯುವಕರಿಂದ ನಿರಂತರವಾಗಿ ಹಲ್ಲೆ ನಡೆಯುತ್ತಿರುವುದನ್ನು ಖಂಡಿಸಿ ಮುಸ್ಲಿಂ ಒಕ್ಕೂಟದ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪಾಲಕರು ಬುಧವಾರ ಪಟ್ಟಣದ ಶಿವಾಜಿ ವೃತ್ತ ಹಾಗೂ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಪಟ್ಟಣದ ಕೆಲವು ಗೂಂಡಾಗಳು ಉರ್ದು ಪ್ರೌಢಶಾಲೆಯ ವಿದ್ಯಾರ್ಥಿಗಳು ಶಾಲೆಗೆ ಬರುವ ಸಂದರ್ಭದಲ್ಲಿ ದಾರಿ ಮಧ್ಯೆ ನಿಲ್ಲಿಸಿ ಸುಖಾಸುಮ್ಮನೆ ಹಲ್ಲೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಮೈಮೇಲಿನ ಬುರ್ಕಾ, ಮುಖದ ಮೇಲಿನ ನಕಾಬ್ ತೆಗೆಯಿರಿ ಎಂದು ಅಶ್ಲೀಲ ಪದ ಬಳಕೆ ಮಾಡುವ ಮೂಲಕ ಚುಡಾಯಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳ ಪಾಲಕರು ಆರೋಪಿಸಿದರು. ಬಳಿಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನರಗುಂದ ಉಪವಿಭಾಗ ಪೊಲೀಸ್ ಉಪಾಧೀಕ್ಷಕರಿಗೆ ಅಂಜುಮನ್ ಇಸ್ಲಾಂ ಸಮಿತಿಯ ಸದಸ್ಯರು ಮನವಿ ಸಲ್ಲಿಸಿದರು.

ಘಟನೆ ವಿವರ

ಬುಧವಾರ (ಡಿ.1) ಬೆಳಗ್ಗೆ ಸರ್ಕಾರಿ ಉರ್ದು ಶಾಲೆಯ ಪ್ರಾರ್ಥನಾ ಸಮಯದಲ್ಲಿ 7 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ಮೇಲೆ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬಿಡಿಸಲು ಬಂದ ಇಬ್ಬರು ಶಿಕ್ಷಕರನ್ನು ಹೊಡೆದಿದ್ದಲ್ಲದೆ, ಶಾಲೆಯ ಕ್ಯಾಂಪಸ್ ಒಳಗಡೆ ಕಲ್ಲು ತೂರಾಡಿದ್ದಾರೆ. ಇದರಿಂದ ಇಬ್ಬರು ವಿದ್ಯಾರ್ಥಿಗಳ ತಲೆಗೆ ಗಾಯಗಳಾಗಿವೆ. ಬಿಡಿಸಲು ಶಿಕ್ಷಕರು ಎಷ್ಟೇ ಪ್ರಯತ್ನಿಸಿದರೂ ಹೊಡೆಯುವುದನ್ನು ನಿಲ್ಲಿಸದ ದುಷ್ಕರ್ಮಿಗಳು ಪೊಲೀಸರು ಬಂದ ಮೇಲಷ್ಟೇ ಬಿಟ್ಟು ಓಡಿ ಹೋಗಿದ್ದಾರೆ ಎನ್ನಲಾಗಿದೆ.

ಹಲ್ಲೆಗೈದವರು ಯಾರು?

ಕೆಲವು ದಿನಗಳಿಂದ ಸರ್ಕಾರಿ ಉರ್ದು ಶಾಲೆಯ ವಿದ್ಯಾರ್ಥಿಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಲೇ ಇದೆ. ಆದರೆ, ಈ ಹಲ್ಲೆಗೆ ಕಾರಣವೇನು ಎಂಬುವುದು ತಿಳಿದು ಬಂದಿಲ್ಲ. ಇನ್ನು ಹಲ್ಲೆ ಮಾಡಿರುವ ಹುಡುಗರು ಹಿಂದೂ ಸಂಘಟನೆಯೊಂದಕ್ಕೆ ಸೇರಿದವರು ಎನ್ನಲಾಗುತ್ತಿದೆ. ಏಕೆಂದರೆ, ಅವರು ಹಲ್ಲೆ ಮಾಡುವ ವೇಳೆ ಹೆಗಲ ಮೇಲೆ ಕೇಸರಿ ಶಾಲು ಹಾಕಿದ್ದರು ಎಂದು ಶಾಲೆಯ ಸಿಬ್ಬಂದಿಯೊಬ್ಬರು ಹೇಳುತ್ತಿದ್ದು, ನಿಜಕ್ಕೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದವರು ಯಾರು ಎಂಬುವುದು ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.

ನಮ್ಮ ತಂದೆ ಬಂದು ಹೈಸ್ಕೂಲ್‌ಗೆ ಬಿಟ್ಟು ಹೋದ ಬಳಿಕ ಉಪಾಹಾರ ಮಾಡಬೇಕೆಂದು ಬಂದಾಗ ಯಾರೋ ಕೆಲವರು ಏಕಾಏಕಿ ಬಂದು ಹೊಡೆಯಲು ಪ್ರಾರಂಭಿಸಿದರು. ಹೆದರಿ ಓಡಿ ಶಾಲೆಯೊಳಗೆ ಬಂದರೆ, ಅಲ್ಲಿಯೂ ಬಂದು ಹೊಡೆದರು. ಆಗ ಶಿಕ್ಷಕರು ಬಿಡಿಸಲು ಬಂದಾಗ ಅವರಿಗೂ ಹೊಡೆದಿದ್ದಾರೆ. ಆದರೆ, ಹೊಡೆದವರು ಯಾರು ಎಂಬುವುದು ಗೊತ್ತಿಲ್ಲ.

ಹಲ್ಲೆಗೊಳಗಾದ ವಿದ್ಯಾರ್ಥಿ

ನಮ್ಮ ಶಾಲೆಯ ವಿದ್ಯಾರ್ಥಿಯನ್ನು ಏಳೆಂಟು ಹುಡುಗರು ಹೊಡೆಯುತ್ತಾ ಬಂದರು. ಹಿಂದು ಮುಂದೆ ಗೊತ್ತಿಲ್ಲದೆ ನಾವು ಯಾಕೆ ಹೊಡೆಯುತ್ತಿದ್ದೀರಿ ಅಂತಾ ಬಿಡಿಸಲು ಹೋದೆವು. ಕಲ್ಲು ತೂರಿದ್ದಕ್ಕೆ ನಮ್ಮ ವಿದ್ಯಾರ್ಥಿ ತಲೆಗೆ ಬಿದ್ದಿದೆ. ಆದರೆ, ಅವರು ಯಾರು, ಯಾವ ಧರ್ಮದವರು ಎಂದು ಗೊತ್ತಿಲ್ಲ.

ಉರ್ದು ಶಾಲೆಯ ಶಿಕ್ಷಕ

ವಿದ್ಯಾರ್ಥಿಗಳ ಮೇಲೆ ಹಲ್ಲೆಯಾಗಿರುವ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಲ್ಲೆ ಮಾಡಿದವರು ಯಾರು ಎಂಬುವುದು ಗೊತ್ತಾಗಿಲ್ಲ. ಪ್ರಕರಣದ ಕುರಿತು ತನಿಖೆ ಕೈಗೊಳ್ಳಲಾಗಿದೆ.

ಶಂಕರ್ ರಾಗಿ, ಡಿವೈಎಸ್ಪಿ

ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ: ಇಬ್ಬರು ಸಾವು, ನಾಲ್ವರಿಗೆ ಗಾಯ

ವಿಜಯಸಾಕ್ಷಿ ಸುದ್ದಿ, ನರಗುಂದ:

ಚಾಲಕನ ನಿಯಂತ್ರಣ ತಪ್ಪಿ ಈರುಳ್ಳಿ ಹೇರಿದ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ನಾಲ್ವರಿಗೆ ಗಾಯಗಳಾಗಿರುವ ಘಟನೆ ತಾಲೂಕಿನ ರಡ್ಡೆರ ನಾಗನೂರು ಗ್ರಾಮದಲ್ಲಿ ನಡೆದಿದೆ.

ಇದೇ ಗ್ರಾಮದ ಲಕ್ಷ್ಮವ್ವ (45) ಹಾಗೂ ಯಮನಮ್ಮ(60) ಮೃತ ದುರ್ದೈವಿಗಳಾಗಿದ್ದಾರೆ. ಇನ್ನು ಗಾಯಗೊಂಡಿರುವ ನಾಲ್ವರು ನರಗುಂದ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮದ ಮುದ್ದಿಗೌಡ ಗದ್ದಿಗೌಡ್ರ ಎಂಬ ರೈತರ ಜಮೀನಿನಲ್ಲಿ ಕೆಲಸಕ್ಕೆ ಹೋಗಿದ್ದ ಕೂಲಿ ಕಾರ್ಮಿಕರು ಈರುಳ್ಳಿ ಕಟಾವು ಮಾಡಿ ಹೇರಿಕೊಂಡು ಮರಳಿ ಮನೆಗೆ ಬರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಕಂದಕಕ್ಕೆ ಉರುಳಿದೆ.

ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಮಿತ್ ಶಾಗಿಂತ ನಾವ್ಯಾರು ದೊಡ್ಡವರಲ್ಲ! : ಸಚಿವ ಸಿ.ಸಿ.ಪಾಟೀಲ್

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ:

ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗಿಂತ ರಾಜ್ಯದಲ್ಲಿರುವ ನಾವ್ಯಾರು ದೊಡ್ಡವರಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಸೋಮವಾರ (ನ.29) ಶಿರಹಟ್ಟಿ ತಾಲೂಕಿನ ವರವಿ ಗ್ರಾಮದಲ್ಲಿ ಸಚಿವ ಮುರುಗೇಶ್ ನಿರಾಣಿ ಅವರು ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ರಾಷ್ಟ್ರಾಧ್ಯರಾಗಿ ಸೇವೆ ಸಲ್ಲಿಸಿದ ಅಮಿತ್ ಶಾ ಹಾಗೂ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಬಸವರಾಜ್ ಬೊಮ್ಮಾಯಿ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದು, ಅದರಂತೆ ಶಾಸಕಾಂಗ ಪಕ್ಷದ ಸರ್ವ ಸದಸ್ಯರು ಒಕ್ಕೋರಲಿನಿಂದ ಒಪ್ಪಿಗೆ ಸೂಚಿಸಿದ್ದೇವೆ ಎಂದರು.

ಅದರಂತೆ,‌ ಇತ್ತೀಚಿಗೆ ದಾವಣಗೆರೆಯ ಕಾರ್ಯಕ್ರಮವೊಂದರಲ್ಲಿ ಬೊಮ್ಮಾಯಿ ಅವರೇ ಇನ್ನುಳಿದ ಅವಧಿಗೆ ಸಿಎಂ ಆಗಿ ಮುಂದುವರೆಯಲಿದ್ದು, ಮುಂಬರುವ ವಿಧಾನಸಭಾ ಚುನಾವಣೆ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಅಭಯ ನೀಡಿದ್ದಾರೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಗದಗ-ಬೆಟಗೇರಿ ನಗರಸಭೆಗೆ ಚುನಾವಣೆ ಘೋಷಣೆ; ಡೇಟ್ ಫಿಕ್ಸ್ ಮಾಡಿದ ಚುನಾವಣಾ ಆಯೋಗ

0

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಬೆಟಗೇರಿ ನಗರಸಭೆಗೆ ಎಂಟು ವರ್ಷಗಳ ಬಳಿಕ ಚುನಾವಣಾ ದಿನಾಂಕ ನಿಗದಿಯಾಗಿದ್ದು, ಈ ಕುರಿತು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಇದು ನಗರಸಭೆ ಸದಸ್ಯರಾಗಬೇಕೆಂದು ಜಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿರುವ ಆಕಾಂಕ್ಷಿಗಳಲ್ಲಿ, ಸ್ಪರ್ಧಿಗಳಲ್ಲಿ ಮಂದಹಾಸ ಮೂಡಿಸಿದೆ.

ಚುನಾವಣಾ ಪ್ರಕ್ರಿಯೆ ಈ ಕೆಳಗಿನಂತೆ ಇದೆ.

ರಾಜ್ಯ ಸರ್ಕಾರ ಕಳೆದ ಸೆಪ್ಟೆಂಬರ್‌ನಲ್ಲಿ ಗದಗ-ಬೆಟಗೇರಿ ನಗರಸಭೆಯ ಪರಿಷ್ಕೃತ ಮೀಸಲಾತಿ ಬಿಡುಗಡೆ ಮಾಡಿತ್ತಾದರೂ, ಮೀಸಲಾತಿ ಹಂಚಿಕೆ ಅವೈಜ್ಞಾನಿಕವಾಗಿದೆ ಎಂದು ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು. ಇದರಿಂದ ಚುನಾವಣೆಗೆ ಹಿನ್ನಡೆಯಾಗುತ್ತಾ ಬಂದಿತ್ತು.ಈಗ ಚುನಾವಣಾ ಆಯೋಗ ಡಿಸೆಂಬರ್ 27 ರಂದು ಚುನಾವಣೆ ನಡೆಸಲು ಡೇಟ್ ಘೋಷಣೆ ಮಾಡಿದೆ.

ಸರ್ಕಾರಿ ಬಸ್, ಕಾರು ಮಧ್ಯೆ ಭೀಕರ ಅಪಘಾತ : ಶಾಸಕನ ಅಳಿಯ ಸೇರಿ ನಾಲ್ವರ ದುರ್ಮರಣ

ವಿಜಯಸಾಕ್ಷಿ ಸುದ್ದಿ, ವಿಜಯಪುರ:

ಕೆ ಎಸ್ ಆರ್ ಟಿಸಿ ಬಸ್ ಮತ್ತು ಫಾರ್ಚೂನರ್ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ವಿಜಯಪುರ ನಾಗಠಾಣ ಶಾಸಕರ ಅಳಿಯ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ವಿಜಯಪುರ ತಾಲೂಕಿನ ಜುಮನಾಳ ಕ್ರಾಸ್ ಬಳಿ ನಡೆದಿದೆ.

ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆ ನಾಂದೇಡದ ವಿಜಯಕುಮಾರ್ ಕಾಶೀನಾಥ್ ದೊಡ್ಡಮನಿ, ಚಿದಾನಂದ ನಾಗೇಶ್ ಸೂರ್ಯವಂಶಿ (45), ಸೋಲಾಪೂರ ರಾಜೂರಿನ ಸೋಮನಾಥ ಕಾಳೆ (43) ಬಸವನಗರದ ಸಂದೀಪ್ ಪವಾರ್ (40) ಸೇರಿ ನಾಲ್ವರು ಮೃತಪಟ್ಟಿದ್ದಾರೆ.

ಕೆಎಸ್ಆರ್ಟಿಸಿ ಬಸ್ ಗದಗ ಜಿಲ್ಲೆಯ ನರಗುಂದದಿಂದ ವಿಜಯಪುರಕ್ಕೆ ನಿಶ್ಚಿತಾರ್ಥ ಕಾರ್ಯಕ್ಕೆ ಹೋಗಿತ್ತು. ನಿಶ್ಚಿತಾರ್ಥ ಮುಗಿಸಿ ವಾಪಸ್ ಬರುವಾಗ ಈ ಅವಘಡ ಸಂಭವಿಸಿದೆ. ವೇಗವಾಗಿ ಬಂದ ಎಂಎಚ್ 13 ಸಿಎಸ್ 3330 ನಂಬರಿನ ಪಾರ್ಚ್ಯೂನರ್ ಕಾರ್ ಕೆಎ 22 ಎಫ್ 2198 ನಂಬರ್ ನ‌ ಬಸ್ ಗೆ ಡಿಕ್ಕಿ ಹೊಡೆದಿದೆ.

ಪಾರ್ಚ್ಯೂನರ್ ಕಾರಿನ ಅತಿವೇಗ ಹಾಗೂ ಚಾಲಕನ ಆಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಬಸ್ ನನಲ್ಲಿರುವವರು ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!