ಪ್ರತಿ ವರ್ಷ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಕೊಡಮಾಡುವ ರಾಷ್ಟ್ರಪತಿ ಪದಕ ಈ ವರ್ಷವೂ ಧಾರವಾಡ ಜಿಲ್ಲೆಯ ನವಲಗುಂದದ ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಡಿ. ಬಿ ಪಾಟೀಲ್ ಸೇರಿದಂತೆ ರಾಜ್ಯದ 18 ಜನ ಪೊಲೀಸ್ ಅಧಿಕಾರಿಗಳಿಗೆ ದೊರೆತಿದೆ.
ಸದ್ಯ ನವಲಗುಂದ ಠಾಣೆಯಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಡಿ.ಬಿ ಪಾಟೀಲ್ ಅವರು ಸುಧೀರ್ಘ ಕಾಲ ಇಲಾಖೆಯಲ್ಲಿ ಸಲ್ಲಿಸಿದ ಗಣನೀಯ ಸೇವೆ ಪರಿಗಣಿಸಿ ರಾಷ್ಟ್ರಪತಿ ಪದಕ ದೊರಕಿದೆ.
ಮೂಲತಃ ಬಾಗಲಕೋಟ ಜಿಲ್ಲೆಯವರಾದ ಡಿ.ಬಿ ಪಾಟೀಲ್, ಗದಗ ಜಿಲ್ಲೆಯ ಮುಂಡರಗಿ, ರೋಣ ಹಾಗೂ ನರಗುಂದದಲ್ಲಿ ಸೇವೆ ಸಲ್ಲಿಸಿದ್ದಾರೆ.
ಸುಧೀರ್ಘ ಕಾಲ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಸೇವೆ ಸಲ್ಲಿಸಿರುವ ಪಾಟೀಲರ ಸೇವೆ ಗುರುತಿಸಿ ದೇಶದ ಅತ್ಯುನ್ನತ ರಾಷ್ಟ್ರಪತಿ ಪದಕ ದೊರತಿದೆ.
ಧಾರವಾಡ ಜಿಲ್ಲೆಯ ಎಸ್ಪಿ ಜೆ ಲೋಕೇಶ್, ಡಿವೈಎಸ್ಪಿ ಎಮ್ ಎಸ್ ಸಂಕದ ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
ಇನ್ಸ್‌ಪೆಕ್ಟರ್ ಡಿ.ಬಿ ಪಾಟೀಲ್ ಅವರಿಗೆ ರಾಷ್ಟ್ರಪತಿ ಪದಕ ದೊರೆತ ಸುದ್ದಿ ತಿಳಿದ ಗದಗ ಜಿಲ್ಲೆಯ ಅವರ ಸಿಬ್ಬಂದಿ ಸಂತಸಗೊಂಡಿದ್ದು, ಸೇವೆಯನ್ನು ಶ್ಲಾಘಿಸಿದ್ದಾರೆ.
ಡಿಕೆಶಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸೇರಿದರೆ ಒಳ್ಳೆಯದು ಎಂದು ಹೇಳುವ ಮೂಲಕ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ಹರಿಹಾಯ್ದಿದ್ದಾರೆ.
ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲಾಪಾನಿ ಶಿಕ್ಷೆ ಅಂದರೆ ಡಿಕೆಶಿಗೆ ಗೊತ್ತಿದೆಯಾ? ಟಿಪ್ಪು ಸುಲ್ತಾನನ ಕೊಡುಗೆ ಏನಿದೆ? ಟಿಪ್ಪುಸುಲ್ತಾನ್ ಭಾವಚಿತ್ರ ಹರಿದವರನ್ನು ಬಂದಿಸಬೇಕಾ? ಸಾವರ್ಕರ್ ಭಾವಚಿತ್ರ ತೆರವು ಮಾಡಿದವರನ್ನು ಮೆರವಣಿಗೆ ಮಾಡಬೇಕಾ? ತುಷ್ಟಿಕರಣಕ್ಕೆ ಇತಿಮಿತಿ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಪ್ರತಿಪಕ್ಷ ನಾಯಕರ ಕೈಗೆ ದೇಶ, ರಾಜ್ಯ ಸಿಕ್ಕರೆ ಏನಾಗುತ್ತದೆ.? ಕೇವಲ ಓಟ್ ಬ್ಯಾಂಕ್‍ಗಾಗಿ ಮತ್ತೊಮ್ಮೆ ಶಾಸಕರಾಗಲು ರಾಜ್ಯ, ದೇಶವನ್ನು ಅಡವಿಡುವ ಕೆಲಸ ಮಾಡಬಾರದು. ಸಾವರ್ಕರ್ ಅವರ ಹೋರಾಟದ ಪ್ರತಿಫಲವಾಗಿಯೇ ಇಂದು ಸಾವಿರಾರು ಕೋಟಿ ಒಡೆಯರಾಗಿ ಮೆರೆಯುತ್ತಿದ್ದಾರೆ ಅಂತ ಡಿಕೆಶಿ ವಿರುದ್ದ ಕಿಡಿಕಾರಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಉಷಾ ದಾಸರ್, ಮಾರ್ಕೆಟಿಂಗ್ ಕಮ್ಯುನಿಕೇಶನ್ ಆ್ಯಂಡ್ ಅಡ್ವರ್ಟೈಸಿಂಗ್ ನಿಗಮದ ಅಧ್ಯಕ್ಷ ಎಮ್ ಎಸ್ ಕರಿಗೌಡ್ರ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿದ್ದು ಪಲ್ಲೆದ, ಬಿಜೆಪಿ ಮುಖಂಡರಾದ ಅನಿಲ ಮೆಣಸಿನಕಾಯಿ, ರಾಜು ಕುರುಡಗಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ವಿಚ್ಛೇದನಕ್ಕಾಗಿ ಕೋರ್ಟ್ ಅಲೆಯುತ್ತಿದ್ದ ದಂಪತಿಗಳ ಪ್ರಕರಣ ಸುಖಾಂತ್ಯ
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಪತಿ-ಪತ್ನಿಯರ ನಡುವೆ ವಿವಿಧ ಕಾರಣಗಳಿಂದ ಉಂಟಾದ ಭಿನ್ನಾಭಿಪ್ರಾಯದಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿ ಕೋರ್ಟ್ ಗೆ ಅಲೆಯುತ್ತಿದ್ದ ಎರಡು ಜೋಡಿಗಳು ಶನಿವಾರ ಲಕ್ಷ್ಮೇಶ್ವರದ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಲೋಕ್ ಅದಾಲತ್ ನಲ್ಲಿ ಒಂದಾಗಿ ಪ್ರಕರಣ ಸುಖಾಂತ್ಯಗೊಂಡ ಘಟನೆ ನಡೆಯಿತು.
ಶಿರಹಟ್ಟಿ ತಾಲೂಕಿನ ವಡವಿ ಗ್ರಾಮದ ಸುರೇಶ ಫಕ್ಕೀರಪ್ಪ ತಂಗೋಡ(39) ಮತ್ತು ಹಾನಗಲ್ ತಾಲೂಕಿನ ಕಂಚಿನೆಗಳೂರ ಗ್ರಾಮದ ಗೀತಾ ಸುರೇಶ ತಂಗೋಡ(35) ಶಿಕ್ಷಕ ದಂಪತಿಗಳು ಕೌಟುಂಬಿಕ ಮನಸ್ತಾಪದ ಹಿನ್ನೆಲೆಯಲ್ಲಿ ದಿ.2-8-2021ರಂದು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ದಂಪತಿಗಳಿಗೆ ಒಂದು ಹೆಣ್ಣು ಮಗುವೂ ಇದ್ದು 2 ವರ್ಷದಿಂದ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತ್ತು. ಇವರೀರ್ವರ ಪರವಾಗಿ ಮಧ್ಯಸ್ಥಿಕೆ ವಹಿಸಿದ್ದ ವಕೀಲರಾದ ವಿ.ಎಲ್. ಪೂಜಾರ ಮತ್ತು ಬಿ.ಎಸ್. ಪಾಟೀಲರು ದಂಪತಿಗಳ ನಡುವಿನ ಸಮಸ್ಯೆ, ಮನಸ್ತಾಪ ಬಗೆಹರಿಸಿ, ತಿಳುವಳಿಕೆ ಹೇಳಿ ಶಿಕ್ಷಕರಾದ ನೀವು ಸಮಾಜಕ್ಕೆ ಮಾದರಿಯಾಗಬೇಕು ಮತ್ತು ನಿಮ್ಮ ಮಗುವಿನ ಭವಿಷ್ಯಕ್ಕಾಗಿ ಸಹಜೀವನ ನಡೆಸಬೇಕು ಎಂದು ಇಬ್ಬರನ್ನೂ ಮನಃಪೂರ್ವಕವವಾಗಿ ಒಪ್ಪಿಸಿ ಶನಿವಾರದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ವಿಚ್ಛೇದನ ಪ್ರಕರಣದಿಂದ ಹಿಂದೆ ಸರಿಸುವಲ್ಲಿ ಯಶಸ್ವಿಯಾದರು.
ಇನ್ನೊಂದು ಜೋಡಿ ಲಕ್ಷ್ಮೇಶ್ವರದ ಭೀಮಪ್ಪ ಸೋಮಪ್ಪ ಪಶುಪತಿಹಾಳ(26) ಮತ್ತು ಸವಣೂರ ತಾಲೂಕಿನ ಕುರುಬರ ಮಲ್ಲೂರಿನ ಮಾಲಾಶ್ರೀ ಗಾಳೆಪ್ಪ ದೊಡ್ಡಪೂಜಾರ(22) ಇವರು ತಮ್ಮ ದುಡುಕಿನ ನಿರ್ಧಾರದಿಂದ ಕಳೆದ 4 ತಿಂಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ಇವರಿಬ್ಬರ ಪರವಾಗಿ ಮಧ್ಯಸ್ಥಿಕೆ ವಹಿಸಿದ್ದ ವಕೀಲರಾದ ಬಿ.ಎನ್. ಸಂಶಿ ಮತ್ತು ಬಿ.ಎಸ್. ಪಾಟೀಲರು ಈ ಯುವ ಜೋಡಿಗೆ ಬುದ್ಧಿವಾದ ಹೇಳಿ, ಗುರು-ಹಿರಿಯರಿಗೆ ವಿಧೇಯರಾಗಿ ಹೊಂದಾಣಿಕೆಯಿಂದ ಜೀವನ ನಡೆಸಿ ಎಂದು ತಿಳಿಹೇಳಿದರು. ಹಿರಿಯ ದಿವಾಣಿ ನ್ಯಾಯಾಧೀಶರಾದ ಸರ್ವಮಂಗಳಾ ಕೆ.ಎಂ ಅವರ ಸಮ್ಮುಖ, ಮಾರ್ಗದರ್ಶನದಲ್ಲಿ ಎರಡೂ ಜೋಡಿಗಳನ್ನು ಒಗ್ಗೂಡಿಸಿ ಪರಸ್ಪರ ಹೂವಿನ ಹಾರ ಬದಲಾಯಿಸಿ ಒಂದಾಗಿಸುವಲ್ಲಿ ಯಶಸ್ವಿಯಾದರು.
ಈ ಪ್ರಕರಣಗಳ ಇತ್ಯರ್ಥದಿಂದ ಎರಡೂ ಜೋಡಿ ಮತ್ತು ಕುಟುಂಬದವರಲ್ಲಿ ಮತ್ತೆ ಹರ್ಷ ಕಂಡು ಬಂದಿತು. ಈ ವೇಳೆ ವಕೀಲರಾದ ಬಿ.ಎಸ್. ಬಾಳೇಶ್ವರಮಠ, ಬಿ.ಎಸ್. ಘೋಂಗಡಿ, ಜೆ.ಡಿ. ದೊಡ್ಡಮನಿ, ಎನ್.ಆಯ್. ಬೆಲ್ಲದ, ಎನ್.ಎಂ. ಗದಗ, ಕಮಲಾ ನಾಯಕ, ಉಮಾ ಬಳ್ಳಾರಿ ಸೇರಿ ನ್ಯಾಯಾಂಗ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.
ಗದಗ ನಗರದ ಬಂಗಾರದ ಅಂಗಡಿಯಲ್ಲಿ ಐ.ಟಿ ಅಧಿಕಾರಿ ಎಂದು ನಂಬಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಖರೀದಿಸಿ ಹಣ ಆರ ಟಿ ಜಿ ಎಸ್ ಮೂಲಕ ಮಾಡ್ತೀನಿ ಅಂತ ವಂಚನೆ ಮಾಡಿ ಪರಾರಿಯಾಗಿದ್ದ ಯುವಕನನ್ನು ಶಹರ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ ಎಂದು ಎಸ್ಪಿ ಶಿವಪ್ರಕಾಶ್ ದೇವರಾಜು ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಶಿವಪ್ರಕಾಶ್, ಜುಲೈ 20 ರಂದು ಈ ಘಟನೆ ನಡೆದಿತ್ತು. ಪ್ರಕರಣ ದಾಖಲಾದ ನಂತರ ಎಸ್ಪಿ ಶಿವಪ್ರಕಾಶ್ ದೇವರಾಜು ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ ನೇತೃತ್ವದಲ್ಲಿ, ಇನ್ಸ್‌ಪೆಕ್ಟರ್ ಜಯಂತ ಗೌಳಿ, ಪಿಎಸ್ಐಗಳಾದ ಶರಣಬಸಪ್ಪ ಸಂಗಳದ, ಬಿ.ಟಿ ತಳವಾರ, ಎಎಸ್ಐ ವಾಯ್ ಬಿ ಪಾಟೀಲ್, ಸಿಬ್ಬಂದಿಗಳಾದ ಎಸ್ ಎಸ್ ಮಾವಿನಕಾಯಿ,ಯು ಎನ್ ಸುಣಗಾರ, ಕೆ. ಡಿ ಜಮಾದಾರ, ಪಿ ಎಸ್ ಕಲ್ಲೂರ, ಶ್ರೀಮತಿ ಆರ್ ಎನ್ ಬಾಲರಡ್ಡಿ, ಯು. ಎಸ್ ಹೊಸಳ್ಳಿ ತಂಡ ರಚಿಸಲಾಗಿತ್ತು.
ಈ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿ ಬೀದರದ ವಿಶಾಲ್ ತಂದೆ ರಾಜಕುಮಾರ ನೀಲಂ ಎಂಬಾತನನ್ನು ಬಂಧಿಸಿ, ಆತನಿಂದ ವಂಚನೆಗೈದ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಆರೋಪಿ ವಿಶಾಲ್ ನೀಲಂ ಇದೇ ದಂಧೆಯನ್ನಾಗಿ ಹವ್ಯಾಸ ಮಾಡಿಕೊಂಡಿದ್ದು, ಓಡಿಸ್ಸಾದ ಬ್ರಹ್ಮಾಪೂರ, ಮಹಾರಾಷ್ಟ್ರದ ಲಾತೂರ್, ಛತ್ತೀಸ್ ಗಡ ಸೇರಿದಂತೆ ರಾಜ್ಯದ ರಾಯಚೂರು, ಬೆಂಗಳೂರನಲ್ಲೂ ಇಂತಹದ್ದೇ ವಂಚನೆ ಮಾಡಿದ್ದಾನೆ ಎಂದು ಎಸ್ಪಿ ಶಿವಪ್ರಕಾಶ್ ದೇವರಾಜು ಹೇಳಿದರು.
ನಗರದ ಸ್ಟೇಷನ್ ರಸ್ತೆಯಲ್ಲಿ ಇರುವ ಲೀಲಾ ಲೆಹರ್ ಗೋಲ್ಡ್ ಪ್ಯಾಲೇಸ್ ಆಭರಣದ ಅಂಗಡಿಯಲ್ಲಿ ಜುಲೈ 20 ರಂದು ಸಂಜೆ ವ್ಯಕ್ತಿಯೊಬ್ಬ, ನಾನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆಧಾಯ ತೆರಿಗೆ ಅಧಿಕಾರಿ ಎಂದು ಪರಿಚಯ ಮಾಡಿಕೊಂಡು ಚೈನ್, ಕಪಲ್ ರಿಂಗ್ ಸೇರಿದಂತೆ ಒಟ್ಟು 1, 89,220 ರೂ. ಮೌಲ್ಯದ ಆಭರಣಗಳನ್ನು ಖರೀದಿಸಿ, ಹಣ ಆರ್ ಟಿ ಜಿ ಸ್ ಮೂಲಕ ಪಾವತಿ ಮಾಡುವುದಾಗಿ ಬ್ಯಾಂಕ್ ಖಾತೆ ವಿವರ ಪಡೆದು ಖಾತೆಗೆ ಹಣ ಹಾಕದೆ ಮೋಸ ಮಾಡಿದ್ದ ಬಗ್ಗೆ ಅರ್ಪಿತ್ ಜೈನ ಎಂಬುವವರು ದೂರು ನೀಡಿದ್ದರು.
ತಾಲೂಕಿನ ರಾಮಗೇರಿ ಗ್ರಾಮದ, ಸದ್ಯ ಸಿಐಡಿಯಲ್ಲಿ ಡಿವೈಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿರುವ ಶಂಕರಗೌಡ ವೀರನಗೌಡ ಪಾಟೀಲ ಅವರು ಪೊಲೀಸ್ ಅಧಿಕಾರಿಗಳಿಗೆ ನೀಡಲಾಗುವ ಕೇಂದ್ರ ಗೃಹಸಚಿವರ ಪದಕಕ್ಕೆ ಭಾಜನರಾಗಿದ್ದು, ಈ ಭಾಗದ ಜನರಲ್ಲಿ ಹರ್ಷ ತಂದಿದೆ.
ರಾಮಗೇರಿ ಗ್ರಾಮಸ್ಥರು ಪಾಟೀಲರ ಸಾಧನೆಯನ್ನು ಕೊಂಡಾಡುತ್ತಿದ್ದಾರೆ. ಅತ್ಯುತ್ತಮ ತನಿಖೆಗಾಗಿ ರಾಜ್ಯದ ಆರು ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವರ ಪದಕವನ್ನು ನೀಡಲಾಗಿದ್ದು, ಅದರಲ್ಲಿ ವೈಜ್ಞಾನಿಕ ಹಾಗೂ ಕ್ಷಿಪ್ರ ತನಿಖೆ ನಡೆಸಿದ ಸಿಐಡಿ ಡಿವೈಎಸ್ಪಿ ಶಂಕರಗೌಡ ವೀರನಗೌಡ ಪಾಟೀಲ ಅವರು ಭಾಜನರಾಗಿದ್ದಾರೆ.
ಪಿಎಸ್‌ಐ ನೇಮಕಾತಿ ಅಕ್ರಮದ ತನಿಖಾಧಿಕಾರಿಯೂ ಆಗಿರುವ ಶಂಕರಗೌಡ 2019ರಲ್ಲಿ ಸೇಡಂ ವೃತ್ತದ ಸಿಪಿಐ ಆಗಿದ್ದ ಸಂದರ್ಭದಲ್ಲಿ ಚಿಂಚೋಳಿ ತಾಲೂಕಿನ ಯಾಕಾಪುರದಲ್ಲಿ ನಡೆದಿದ್ದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡಿದ್ದರು. ಎಫ್ ಐಆರ್ ದಾಖಲಾದ 101 ದಿನಗಳಲ್ಲಿಯೇ ಆರೋಪಿ ಯಲ್ಲಪ್ಪ ಎಂಬಾತನಿಗೆ ಗಲ್ಲು ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಪೂರಕ ದಾಖಲೆಗಳನ್ನು ಸಂಗ್ರಹಿಸಿ ದೋಷಾರೂಪ ಪಟ್ಟಿ ಸಲ್ಲಿಸಿದ್ದರು. ಇದನ್ನು ಆಧರಿಸಿ ಶಂಕರರಗೌಡ ಅವರಿಗೆ ಕೇಂದ್ರ ಸರಕಾರದ ಈ ಪದಕ ನೀಡಲಾಗಿದೆ.
ಶಂಕರಗೌಡ ಪಾಟೀಲ ಅವರು ರಾಜ್ಯದಲ್ಲಿ ನಡೆದ ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಕಿಂಗ್ ಪಿನ್ ಆರ್.ಡಿ. ಪಾಟೀಲ, ಮುಖಂಡ ಮಹಾಂತೇಶ ಪಾಟೀಲ, ನಾಯಕಿ ದಿವ್ಯಾ ಹಾಗರಗಿ, ಮಂಜುನಾಥ ಮೇಳಕುಂದಿ ಸೇರಿದಂತೆ ಇತರ ಆರೋಪಿಗಳನ್ನು ಬಂಧಿಸಿದ ಸಿಐಡಿ ತಂಡದ ಭಾಗವಾಗಿರುವದನ್ನು ಇಲ್ಲಿ ಸ್ಮರಿಸಬಹುದು.
2019ರ ಡಿಸೆಂಬರ್ 2ರಂದು ಘಟನೆ ನಡೆದಿತ್ತು. ಅಂದಿನ ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ನನ್ನ ಮೇಲೆ ವಿಶ್ವಾಸವಿರಿಸಿ ತನಿಖೆಯ ಜವಾಬ್ದಾರಿ ವಹಿಸಿದ್ದರು. 22 ದಿನಗಳಲ್ಲಿಯೇ ಆರೋಪ ಪಟ್ಟಿ ಸಲ್ಲಿಸಿದ್ದೆವು. ಶೀಘ್ರಗತಿಯಲ್ಲಿ ಪ್ರಕರಣದ ತನಿಖೆ ನಡೆಸಿದ್ದರಿಂದ ನ್ಯಾಯಾಲಯವೂ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿತು. ಇದು ನಮ್ಮ ಕಾರ್ಯಕ್ಕೆ ದೊರೆತ ಮನ್ನಣೆಯಾಗಿದ್ದು, ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿ ಗ್ರಾಮದಲ್ಲಿ ಎಲ್ಲ ಜನರ ಹಾರೈಕೆ, ಹಿರಿಯರ ಆಶೀರ್ವಾದ ನಮ್ಮ ಕಾರ್ಯದಕ್ಷತೆಗೆ ಈ ಗೌರವ ದೊರಕಿರುವದು ಸಂತಸ ತಂದಿದೆ.
ಮಲ್ಲಸಮುದ್ರ ಗ್ರಾಮದಲ್ಲಿ ಇಬ್ಬರ ಮೇಲೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ವಿಭಾಗದ ಐಜಿಪಿ ಸತೀಶ್ ಕುಮಾರ್ ಶುಕ್ರವಾರ ಮಲ್ಲಸಮುದ್ರ ಗ್ರಾಮಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿ, ಘಟನೆಯ ಸಂಪೂರ್ಣ ವಿವರ ಪಡೆದುಕೊಂಡರು.
ನಂತರ, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಸ್ಟ್ 9ರಂದು ಸಂಜೆ ಮೊಹರಂ ಹಬ್ಬದ ಮೆರವಣಿಗೆಯ ವೇಳೆ ಗಲಾಟೆಯಾಗಿ ಇಬ್ಬರಿಗೆ ಚೂರಿ ಇರಿತದ ಪ್ರಕರಣ ನಡೆದಿತ್ತು. ಪ್ರಸ್ತುತ ದಾದಾಪೀರ್ ಅಲಿಯಾಸ್ ತೌಶೀಪ್ ಎಂಬಾತನಿಗೆ ಗದಗ ಜಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮುಷ್ತಾಕ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ಇದು ಕೋಮುಗಲಭೆ ಎಂಬರ್ಥದಲ್ಲಿ ಬಿಂಬಿತವಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಲೆಂದು ಬಂದಿದ್ದೇನೆ. ಈಗಾಗಲೇ ಈ ಪ್ರಕರಣ ಯುವಕರ ಮಧ್ಯೆ ವೈಯಕ್ತಿಕ ಕಾರಣಕ್ಕಾಗಿ ನಡೆದಿದ್ದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಸ್ತುತ ಗದಗ ಜಿಲ್ಲೆ ಹಾಗೂ ಮಲ್ಲಸಮುದ್ರದಲ್ಲಿ ಯಾವುದೇ ಗಲಭೆಗಳಾಗುವ ವಾತಾವರಣವಿಲ್ಲ. ಈ ಬಗ್ಗೆ ಇಲಾಖೆಯೂ ನಿಗಾ ವಹಿಸಿದೆ. ಈಗ ವಿವಿಧ ಹಬ್ಬಗಳು ನಡೆಯುತ್ತಿವೆ. ಇನ್ನೇನು ಚುನಾವಣೆಯೂ ಹತ್ತಿರ ಬರುತ್ತಿದೆ.
ಹೀಗಾಗಿ ಎಲ್ಲರಲ್ಲೂ ಉತ್ಸಾಹದ ಮಟ್ಟ ತುಸು ಹೆಚ್ಚಾಗಿಯೇ ಇರುತ್ತದೆ. ಈ ಬಗ್ಗೆ ಎಚ್ಚರವಾಗಿರುವದು ಇಲಾಖೆಯ ಕರ್ತವ್ಯವಾಗಿದೆ. ಇಂತಹ ಘಟನೆಗಳು ಯಾವುದೇ ಧರ್ಮ, ಕೋಮಿನವರಿಂದ ನಡೆದಿದ್ದರೂ ಅಂಥವರ ಚಲನವಲನಗಳ ಬಗ್ಗೆ ಗಮನವಿಟ್ಟು ಅಹಿತಕರ ಘಟನೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಬೇಕಾಗುತ್ತದೆ. ಮತ್ತು ಅಪರಾಧ ಎಸಗಿದಲ್ಲಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ವಿಷಯಗಳ ಬಗ್ಗೆ ಎಸ್.ಪಿ ಹಾಗೂ ಡಿಎಸ್ಪಿ ಅವರ ಬಳಿ ಚರ್ಚಿಸಿದ್ದೇವೆ ಎಂದು ಹೇಳಿದರು.
ಪ್ರಸ್ತುತ ಮಲ್ಲಸಮುದ್ರದಲ್ಲಿಯೂ ಯಾವುದೇ ಭಯದ ವಾತಾವರಣವಿಲ್ಲ. ಗ್ರಾಮಸ್ಥರೊಂದಿಗೆ ಚರ್ಚಿಸಿದಾಗ, ಹುಡುಗರು ಅವರವರೇ ಜಗಳ ಮಾಡಿಕೊಂಡಿದ್ದಷ್ಟೇ, ಹೊರತಾಗಿ ಇದರಲ್ಲಿ ಕೋಮುಗಳಿಗೆ ಸಂಬಂಧಿಸಿದ ಯಾವುದೇ ಹಿನ್ನೆಲೆಯಿಲ್ಲ ಎಂದಿದ್ದಾರೆ. ಉತ್ತರ ಕರ್ನಾಟಕ, ಗದಗ ಭಾಗಗಳಲ್ಲಿ ಮೊಹರಂ ಹಬ್ಬವನ್ನು ಎಲ್ಲಾ ಕೋಮು, ಸಮುದಾಯದವರೂ ಸೇರಿ ಒಟ್ಟಾಗಿಯೇ ಆಚರಿಸುತ್ತಾರೆ. ಸುಮ್ಮನೇ ವದಂತಿಗಳಿಗೆ ಕಿವಿಗೊಟ್ಟು ಇಂಥ ಪ್ರಕರಣಗಳಿಗೆ ಬೇರಾವುದೇ ಬಣ್ಣ ಹಚ್ಚುವ ಅಗತ್ಯ ಇಲ್ಲ ಎಂದರು.
ಪ್ರಸ್ತುತ ಪ್ರಕರಣದಲ್ಲಿ ಕೇವಲ ಒಂದು ಕೋಮಿನವರ ದೂರನ್ನು ಮಾತ್ರ ಪರಿಗಣಿಸಲಾಗಿದೆ ಎಂಬ ಸುದ್ದಿಗಳು ಹರಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಐಜಿಪಿ ಸತೀಶ್ ಕುಮಾರ್, ಪೊಲೀಸ್ ಇಲಾಖೆಯವರು ಎಂದಿಗೂ ದೂರು ನೀಡಲು ಬಂದವರು ಯಾವ ಸಮಾಜದವರು, ಯಾವ ಧರ್ಮದವರು ಎಂಬುದನ್ನು ನೋಡುವದಿಲ್ಲ. ಯಾರು ದೂರು ದಾಖಲಿಸಿದರೂ ನಾವು ಸ್ವೀಕರಿಸುತ್ತೇವಷ್ಟೆ.
ಇಂಥಹ ವಿಷಯಗಳನ್ನಿಟ್ಟುಕೊಂಡು ಯಾರೂ ಅಡ್ವಾಂಟೆಜ್ ಪಡೆದುಕೊಳ್ಳುವ ವಿಚಾರ ಮಾಡಬಾರದು ಎಂದು ಸ್ಪಷ್ಟಪಡಿಸಿದರು.
ಐಜಿಪಿ ಸತೀಶ್ ಕುಮಾರ್ ಅವರೊಂದಿಗೆ ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಜೆಗೆಂದು ಊರಿಗೆ ಬಂದಿದ್ದ ಭಾರತೀಯ ಸೇನೆಯ ಯೋಧನನ್ನು ಆತನ ಭಾವನೇ ( ಪತ್ನಿಯ ಸಹೋದರ) ಚಾಕು ಇರಿದು ಕೊಲೆ ಮಾಡಿರುವ ಅಮಾನುಷ ಘಟನೆ ಬಾಗಲಕೋಟ ಜಿಲ್ಲೆಯಲ್ಲಿ ನಡೆದಿದೆ.
ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದ ಕರಿಸಿದ್ಧಪ್ಪ ಕಳಸದ(೨೫ ವರ್ಷ) ಕೊಲೆಗೀಡಾದ ದುರ್ದೈವಿ ಸೈನಿಕನಾಗಿದ್ದು, ಧರಿಗೌಡ ಧೂಳಪ್ಪನವರ್ ಕೃತ್ಯ ನಡೆಸಿದ ಆರೋಪಿಯಾಗಿದ್ದಾನೆ.
ಘಟನೆಯ ವಿವರ
ಯೋಧ ಕರಿಸಿದ್ಧಪ್ಪ ರಾಜಸ್ಥಾನದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ನಾಲ್ಕು ದಿನಗಳ ಹಿಂದೆ ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಿದ್ದ. ಎರಡು ವರ್ಷಗಳ ಹಿಂದೆ ವಿದ್ಯಾ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದ ಕರಿಸಿದ್ಧಪ್ಪ, ಗುರುವಾರ ರಾತ್ರಿ ಊಟ ಮಾಡುವ ಸಮಯದಲ್ಲಿ ಹೆಂಡತಿಯೊಂದಿಗೆ ಯಾವುದೋ ವಿಷಯಕ್ಕೆ ಜಗಳವಾಡಿದ್ದರು ಎನ್ನಲಾಗಿದೆ.
ಇದಾದ ಬಳಿಕ ವಿದ್ಯಾ ತನ್ನ ಸಹೋದರ ಧರಿಗೌಡನಿಗೆ ಫೋನ್ ಮಾಡಿ ತನ್ನ ಗಂಡ ಜಗಳವಾಡುತ್ತಿರುವ ಬಗ್ಗೆ ತಿಳಿಸಿ ಕೂಡಲೇ ಮನೆಗೆ ಬರುವಂತೆ ತಿಳಿಸಿದ್ದಾಳೆ. ಕೋಪದಲ್ಲಿಯೇ ಸಹೋದರಿಯ ಮನೆಗೆ ಬಂದ ಆರೋಪಿ ಧರಿಗೌಡ, ಅದೇ ಸಿಟ್ಟಿನಲ್ಲಿ ಚಾಕುವಿನಿಂದ ಭಾವನಾದ ಕರಿಸಿದ್ಧಪ್ಪನಿಗೆ ಇರಿದಿದ್ದಾನೆ ಎನ್ನಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಯೋಧ ಕರಿಸಿದ್ಧಪ್ಪ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಸ್ಥಳಕ್ಕೆ ಕೆರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣದ ತನಿಖೆ ನಡೆಸಿದ್ದಾರೆ.
ಹಾದೀ ಬೀದಿಯಲ್ಲಿ ಹೊಡೆದಾಟ ಮಾಡುವ ಪುಂಡ ಪೋಕರಿಗಳಿಗೆ ಇನ್ಮುಂದೆ ಬಿಸಿ ತಟ್ಟಲಿದೆ. ಗದಗ ಜಿಲ್ಲಾ ಪೊಲೀಸರು, ಇಂತಹ ಪುಂಡಾಟಿಕೆ ಮಾಡುವ ಜನರ ಮೇಲೆ ಕೇಸ್ ಹಾಕಿ ಅವರ ಮೇಲೆ ನಿಗಾ ಇರಿಸಲಿದ್ದಾರೆ.
ಇಂತಹದ್ದೇ ಪ್ರಕರಣವೊಂದು ಮೊನ್ನೆ ರಾಜೀವಗಾಂಧಿ ನಗರದ ಗ್ರಂಥಾಲಯದ ಬಳಿ ಅದೂ ಕೂಗಳತೆಯಲ್ಲಿಯೇ ಪೊಲೀಸ್ ಠಾಣೆ ಇದ್ದರೂ ಅದರ ಅರಿವೇ ಇಲ್ಲದ ಇಬ್ಬರು ರೌಡಿ ಶೀಟರ್ ಸೇರಿದಂತೆ ಏಳು ಜನ ಯುವಕರು, ಪರಸ್ಪರ ಹೊಡೆದಾಟ, ಚೀರಾಟ ಮಾಡುತ್ತಾ, ಸಾರ್ವಜನಿಕರಿಗೆ ತೊಂದರೆ ಮಾಡಿದ ಆರೋಪದಲ್ಲಿ ಬಡಾವಣೆ ಪೊಲೀಸರು ಕೇಸ್ ಬುಕ್ ಮಾಡಿದ್ದಾರೆ.
ರಾಜೀವ್ ಗಾಂಧಿ ನಗರದ ನಿವಾಸಿಗಳಾದ ಹನಮಂತ ಫಕ್ಕೀರಪ್ಪ ಚಿಮ್ಮಲಗಿ, ಶಶಿಕುಮಾರ್ ಮಾರುತೆಪ್ಪ ಹಕ್ಕರಕಿ, ಕಿಶೋರಕುಮಾರ್ ವಿಠ್ಠಲರಾವ್ ಶಿಂಧೆ, ಅಶೋಕ್ ಹುಲಗೆಪ್ಪ ಚಿಮ್ಮಲಗಿ, ಭರತ್ ಗಿರೀಶ್ ಪೂಜಾರ್, ಸೆಟ್ಲಮೆಂಟ್ ಏರಿಯಾದ ಯುವರಾಜ್ ಯಲ್ಲಪ್ಪ ಕೊರವರ್ ಹಾಗೂ ಅನಿಲ ಹನಮಂತಪ್ಪ ಮುಟಗಾರ ಎಂಬುವವರೇ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಹೊಡೆದಾಡಿಕೊಳ್ಳುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕುರಿತು ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ಉಮಾ ವಗ್ಗರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಶ್ರೀರಾಮ ಸೇನೆಯ ರಾಜ್ಯ ಸಂಚಾಲಕರಾದ ಪ್ರಮೋದ್ ಮುತಾಲಿಕ್ ಅವರ ಗದಗ ಜಿಲ್ಲೆಯ ಪ್ರವೇಶವನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳಾದ ವೈಶಾಲಿ ಎಮ್ ಎಲ್ ಅವರು, ಕಲಂ ೧೪೪ ರ ಅಡಿ ಗುರುವಾರ ಪ್ರತಿಬಂಧಕಾಜ್ಞೆ ಜಾರಿಗೊಳಿಸಿದ್ದಾರೆ.
ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಮಂಗಳವಾರ ನಡೆದ ಗಲಾಟೆ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಸೋಮಪ್ಪ ಹನುಮಪ್ಪ ಗುಡಿ ಎಂಬ ವ್ಯಕ್ತಿ ಹಾಗೂ ಆತನ ಸಂಬಂಧಿಗಳನ್ನು ಭೇಟಿಯಾಗಲು ಪ್ರಮೋದ್ ಮುತಾಲಿಕ್ ಅವರು ಶುಕ್ರವಾರ ಮಲ್ಲಸಮುದ್ರ ಗ್ರಾಮಕ್ಕೆ ಹಾಗೂ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಹೀಗಾಗಿ ಈ ಸಂದರ್ಭದಲ್ಲಿ ಸಹಜವಾಗಿ ನಗರದಲ್ಲಿ ಹಿಂದೂ ಸಂಘಟನೆಗಳು ಕಾನೂನು ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆಗಳಿರುವುದರಿಂದ ಶಾಂತಿ, ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ದಂಡ ಪ್ರಕ್ರಿಯಾ ಸಂಹಿತೆ ೧೯೭೩ರ ಕಲಂ ೧೪೪ ರಡಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಈ ಗಾಗಲೇ ಮಲ್ಲಸಮುದ್ರ ಗ್ರಾಮದಲ್ಲಿ ತ್ವೇಷಮಯ ಹಾಗೂ ಪ್ರಕ್ಷುಬ್ಧ ವಾತಾವರಣ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಮೋದ ಮುತಾಲಿಕ್ ನಗರ ಪ್ರವೇಶ ಮಾಡಿದಾಗ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಆದೇಶ ನೀಡಲಾಗಿದ್ದು, ಶುಕ್ರವಾರ ಬೆಳಿಗ್ಗೆ ೭ ಗಂಟೆಯಿಂದ ಭಾನುವಾರ ಮಧ್ಯರಾತ್ರಿ ೧೨ ಗಂಟೆಯವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾ ದಂಡಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.
ಈ ಆದೇಶವನ್ನು ಉಲ್ಲಂಘಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಶ್ರೀ ರಾಮ ಸೇನೆ ಖಂಡನೆ
ಶ್ರೀ ರಾಮ ಸೇನೆಯ ರಾಜ್ಯ ಸಂಚಾಲಕರಾದ ಪ್ರಮೋದ್ ಮುತಾಲಿಕ್ ಅವರ ಗದಗ ಜಿಲ್ಲಾ ಪ್ರವೇಶಕ್ಕೆ ಸರಕಾರ ನಿರ್ಬಂಧ ವಿಧಿಸಿದ್ದನ್ನು ಶ್ರೀ ರಾಮ ಸೇನಾದ ಉತ್ತರ ಕರ್ನಾಟಕ ಉಸ್ತುವಾರಿ ರಾಜು ಖಾನಪ್ಪನವರ ಖಂಡಿಸಿದ್ದಾರೆ. ಸರಕಾರ ಹಿಂದೂಗಳ ಭಾವನೆಗಳ ಜೊತೆಗೆ ಚೆಲ್ಲಾಟವಾಡುತ್ತಿದ್ದು, ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದು ಕುಟುಂಬವೊಂದರ ಸದಸ್ಯರು 12 ವರ್ಷಗಳ ನಂತರವೂ ದ್ವೇಷ ಸಾಧಿಸಿದ ಘಟನೆ. ಸಾವು ಘಟಿಸಿದ ಸೂತಕದ ಮನೆಯಲ್ಲೂ ಅಸಹನೆ, ಪ್ರತಿಷ್ಠೆಗಾಗಿ ತನ್ನ ಒಡ ಹುಟ್ಟಿದವಳನ್ನೇ ಮೃತರಾದ ತನ್ನ ತಂದೆಯ ಅಂತಿಮ ದರ್ಶನಕ್ಕೆ ಅವಕಾಶ ನೀಡದೇ ಅಮಾನವೀಯವಾಗಿ ನಡೆದುಕೊಂಡವರ ಕರಾಳ ಮುಖದ ಕತೆ.
ಮಂಗಳನ ಅಂಗಳಕ್ಕೆ ಕಾಲಿಟ್ಟು, ಅಲ್ಲಿ ಬದುಕು ಕಟ್ಟಿಕೊಳ್ಳಲು ಮನುಷ್ಯ ಹವಣಿಸುತ್ತಿರುವ ಹೊತ್ತಲ್ಲೇ ಭೂಮಿ ಮೇಲಿರುವ ಮನುಷ್ಯ ಸಮಾಜದ ಕೆಲವು ಜನರು ತಮ್ಮ ಮನದ ಅಂಗಳದ ಮೇಲೆ ದ್ವೇಷವನ್ನೇ ಬಿತ್ತಿ ಬೆಳೆದುಕೊಂಡಿದ್ದಾರೆಂದರೆ ತಪ್ಪಾಗದು.
ಇದು ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ನಡೆದ ಘಟನೆ. ಅನಾರೋಗ್ಯಕ್ಕೀಡಾಗಿದ್ದ ವ್ಯಕ್ತಿಯೊಬ್ಬರು ಎರಡು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗಿದ್ದ ಹಲವು ಜನ ಮಕ್ಕಳಲ್ಲಿ ಕೊನೆಯ ಪುತ್ರಿಗೆ ಅಂತಿಮ ದರ್ಶನಕ್ಕೂ ಕುಟುಂಬದ ಸದಸ್ಯರು ಅವಕಾಶ ನೀಡಲಿಲ್ಲ. ಪರವೂರಿನಲ್ಲಿರುವ ಆ ಮಗಳು ಫೋನ್ ಮಾಡಿ, ಅಂತಿಮ ದರ್ಶನಕ್ಕೆ ಅವಕಾಶ ನೀಡಿ ಎಂದು ಎಷ್ಟು ಗೋಗರದೆದರೂ ಕುಟುಂಬಸ್ಥರ ಕಲ್ಲು ಹೃದಯ ಕರಗಲೇ ಇಲ್ಲ. ಹೀಗೆ ಆ ಹೆಣ್ಣುಮಗಳನ್ನು ತನ್ನದೇ ತಂದೆಯ ಅಂತಿಮ ದರ್ಶನಕ್ಕೆ ಅವಕಾಶ ನೀಡದಿರುವುದಕ್ಕೆ ಕಾರಣ ಆಕೆ 12 ವರ್ಷಗಳ ಹಿಂದೆ ಪರಧರ್ಮೀಯನನ್ನು ಪ್ರೀತಿಸಿ, ಮದುವೆ ಆದದ್ದು.
ಪರಧರ್ಮದವನನ್ನು ಪ್ರೀತಿಸಿ ಮದುವೆಯಾದಳು ಎಂಬ ಕಾರಣಕ್ಕೆ 12 ವರ್ಷಗಳ ಕಾಲ ತಂದೆ ಮಗಳೊಂದಿಗೆ ಮಾತು ಬಿಟ್ಟ. ಆದರೆ ಕುಟುಂಬದ ಕೆಲ ಸದಸ್ಯರು ಸಂಪರ್ಕದಲ್ಲಿದ್ದರು. ಅವರ ಮೂಲಕ ತಂದೆ ತಾಯಿಯನ್ನು ಭೇಟಿ ಮಾಡಲು ಆ ಹೆಣ್ಣುಮಗಳು 12 ವರ್ಷ ನಡೆಸಿದ ಪ್ರಯತ್ನವೂ ವಿಫಲ ಆಗಿತ್ತು. ಆದರೆ ಎಂದಿಗೂ ಕೂಡ ತನ್ನ ತವರುಮನೆಯವರಿಗೆ ಯಾವ ತೊಂದರೆಯನ್ನೂ ನೀಡಲಿಲ್ಲ, ತನ್ನ ವೈವಾಹಿಕ ಬದುಕಿನಲ್ಲಿ ಏನೇ ಕಷ್ಟ ಬಂದರೂ ಒಂದು ದಿನ ತಂದೆ ತಾಯಿಗೆ ದೂರು ಹೇಳಲಿಲ್ಲ. ಹೀಗಿರುವಾಗ ಇತ್ತೀಚೆಗೆ ಆ ಹೆಣ್ಣುಮಗಳ ತಂದೆ ಅನಾರೋಗ್ಯಕ್ಕೆ ಈಡಾಗಿ ಆಸ್ಪತ್ರೆ ಸೇರಿದರು. ಕೆಲ ಸಂಬಂಧಿಕರಿಂದ ವಿಷಯ ತಿಳಿದು, ಆಸ್ಪತ್ರೆಗೆ ಭೇಟಿ ನೀಡಲು ಆ ಹೆಣ್ಣುಮಗಳು ಪ್ರಯತ್ನಿಸಿದರೂ ಕುಟುಂಬಸ್ಥರು ಅವಕಾಶ ನೀಡಲಿಲ್ಲ.
ಕೊನೆಗೆ ಇದೇ ಸೋಮವಾರ ಸಂಜೆ ಆ ವ್ಯಕ್ತಿ ನಿಧನರಾದರು. 12 ವರ್ಷಗಳಿಂದ ಮಾತೇ ಆಡದ ಹಡದಪ್ಪನನ್ನು ಕಳೆದುಕೊಂಡ ಆ ಹೆಣ್ಣುಮಗಳು ಕೊನೆಯ ದರ್ಶನವಾದರೂ ಪಡೆಯೋಣವೆಂದು ಗಜೇಂದ್ರಗಡಕ್ಕೆ ಬರಲು ಪತಿಯೊಂದಿಗೆ ಸಜ್ಜಾದಳು. ಆದರೆ ಅಷ್ಟರಲ್ಲಿ ಕುಟುಂಬದ ಸದಸ್ಯರು ಫೋನ್ ಕರೆ ಮಾಡಿ “ನೀವು ಮಣ್ಣಿಗೆ ಬರಬೇಡಿ, ನೀವು ಬಂದರೆ ನಮಗೆ ತೊಂದರೆ ಆಗುತ್ತದೆ, ಅಪ್ಪ ನೀನಿದ್ದಾಗ ನನ್ನ ಮಣ್ಣಿಗೂ ಕರೆಯಬೇಡಿ ಎಂದು ಹೇಳಿದ್ದ, ಹೀಗಾಗಿ ಬರಬೇಡಿ, ಬಂದರೆ ತೊಂದರೆ ಆಗುತ್ತದೆ, ಜಗಳ ಆಗುತ್ತದೆ, ನೀನು 12 ವರ್ಷಗಳ ಹಿಂದೆ ನಮ್ಮ ಪಾಲಿಗೆ ಇಲ್ಲ ಅಂತ ಅಂದ್ಕೊಂಡಿದ್ದೇವೆ” ಎಂದು ಆ ಹೆಣ್ಣುಮಗಳ ಸೋದರ ರಂಪ ಮಾಡಿದ್ದಾನೆ.
ದೂರದಿಂದ ನಿಂತು ತನ್ನ ತಂದೆಯ ಮೃತದೇಹ ನೋಡಲು ಅವಕಾಶ ನೀಡಿ ಎಂದು ಗೋಗರೆದು ಆ ಹೆಣ್ಣುಮಗಳು ಅಂಗಲಾಚಿದರೂ ಕೂಡ ಕಲ್ಲು ಹೃದಯಗಳು ಕರಗಿಲ್ಲ.
ಗಜೇಂದ್ರಗಡದಲ್ಲೇ ಇರುವ ಆ ಹೆಣ್ಣುಮಗಳ ಪತಿಯ ಸೋದರ ಆ ಸಮುದಾಯದ ಮುಖಂಡರಿಗೆ ಭೇಟಿ ಆಗಿ, ಅಂತಿಮ ದರ್ಶನಕ್ಕೆ ಅವಕಾಶ ನೀಡಿ ಎಂದು ಕೇಳಿದ್ದಾರೆ. ಚರ್ಚೆ ಮಾಡಿ ಹೇಳುವುದಾಗಿ ಮುಖಂಡರು ತಿಳಿಸಿದ್ದಾರೆ. ಆದರೆ ಮುಖಂಡರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆ ಹೆಣ್ಣುಮಗಳ ಪತಿ ಕೂಡ ಕುಟುಂಬದ ಸದಸ್ಯರಿಗೆ ಫೋನ್ ಮಾಡಿ ತನ್ನ ಪತ್ನಿಗೆ ಇದೊಂದು ಅವಕಾಶ ನೀಡಿ ಎಂದು ಕೇಳಿದ್ದಾನೆ. ಆದರೆ ಅವಕಾಶ ನೀಡಲೇ ಇಲ್ಲ.
ಕೊನೆಗೆ ಮಂಗಳವಾರ ಮಧ್ಯಾಹ್ನ ಆ ವ್ಯಕ್ತಿಯ ಅಂತಿಮ ಸಂಸ್ಕಾರ ಪೂರ್ಣಗೊಂಡಿದೆ. ತನ್ನ ತಂದೆಯನ್ನು ನೆನೆದು ಆ ಹೆಣ್ಣುಮಗಳು ಸಾಮಾಜಿಕ ಜಾಲತಾಣದಲ್ಲಿ ತನ್ನ ನೋವು ಹಂಚಿಕೊಂಡಿದ್ದಾರೆ.
ಈ ನಿರಾಕರಣೆಗೆ, ಈ ದ್ವೇಷಕ್ಕೆ ಪರಧರ್ಮದ ವ್ಯಕ್ತಿಯನ್ನು ಪ್ರೀತಿಸಿ ಮದುವೆ ಆದದ್ದೇ ಕಾರಣ. ಗಜೇಂದ್ರಗಡ ಸೌಹಾರ್ದತೆಗೆ ಹೆಸರಾದ ಊರು. ಇಲ್ಲಿನ ಶರಣ, ಸೂಫಿ ಪರಂಪರೆ ಇಡೀ ಜಿಲ್ಲೆಗೆ ಮಾದರಿ. ಎಲ್ಲ ಸಮುದಾಯ, ಧರ್ಮ ಜಾತಿಗಳ ಜನರು ಭಾತೃತ್ವದಿಂದಲೇ ಬದುಕುತ್ತಿದ್ದಾರೆ. ಆದರೆ ಇಂತಹ ಹೆಸರು ಮಾಡಿದ ಪಟ್ಟಣದಲ್ಲೇ ಇಂತಹ ಅಮಾನವೀಯ ಘಟನೆ ನಡೆದಿರುವುದು ಖಂಡನೀಯ ಎಂದು ಪ್ರಜ್ಞಾವಂತರು ಅಭಿಪ್ರಾಯ ಪಟ್ಟಿದ್ದಾರೆ.