Home Blog Page 3224

ಮೂರು ದಿನ ಎಸ್‌ಡಿಎಂ ಓಪಿಡಿ , ಸುತ್ತಲಿನ ಶಾಲಾ- ಕಾಲೇಜ್‌ಗೆ ರಜೆ

0

ವಿಜಯಸಾಕ್ಷಿ ಸುದ್ದಿ, ಧಾರವಾಡ:

ಇಲ್ಲಿನ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿರುವ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಬಿಗಿ ಕ್ರಮಗಳನ್ನು ಮುಂದುವರೆಸಲಾಗಿದ್ದು. ಬುಧವಾರ ಡಿಸೆಂಬರ್ 1 ರವರೆಗೆ ಎಸ್‌ಡಿಎಂ ಆಸ್ಪತ್ರೆಯ ಓಪಿಡಿ ಹಾಗೂ ಹೊಸ ರೋಗಿಗಳ ಪ್ರವೇಶ ನಿರ್ಬಂಧಿಸಲಾಗಿದೆ.

ಧಾರವಾಡ ಹಾಗೂ ಸುತ್ತಲಿನ ಜಿಲ್ಲೆಗಳಿಂದ ಹುಬ್ಬಳ್ಳಿ ಧಾರವಾಡಕ್ಕೆ ಚಿಕಿತ್ಸೆಗಾಗಿ ಬರುವ ರೋಗಿಗಳು ಇದನ್ನು ಗಮನಿಸಿ ಯೋಜನೆಗಳನ್ನು ಮರು ರೂಪಿಸಿಕೊಳ್ಳಬೇಕು ಅಥವಾ ಹುಬ್ಬಳ್ಳಿಯ ಕಿಮ್ಸ್, ಧಾರವಾಡ ಜಿಲ್ಲಾ ಆಸ್ಪತ್ರೆ ಅಥವಾ ಅವಳಿ ನಗರದ ಯಾವುದಾದರೂ ಆಸ್ಪತ್ರೆಗಳಿಗೆ ಭೇಟಿ ನೀಡಬಹುದು.

ಕೋವಿಡ್ ವೈರಾಣುವಿನ ಜಿನೋಮ್ ಸಿಕ್ವೆನ್ಸ್ ವರದಿಗಳು ಬುಧವಾರ ಕೈಸೇರುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ಮೂರು ದಿನ ಶಾಲಾ- ಕಾಲೇಜು ರಜೆ

ಧಾರವಾಡ ಸತ್ತೂರಿನ ಎಸ್ ಡಿ ಎಂ ಸುತ್ತಲಿನ 500 ಮೀಟರ್ ವ್ಯಾಪ್ತಿಯ ಶಾಲೆ ಕಾಲೇಜುಗಳಿಗೆ ನಾಳೆಯಿಂದ ಡಿಸೆಂಬರ್ 1 ರವರೆಗೆ ಮೂರು ದಿನಗಳ ಕಾಲ ರಜೆ ಮುಂದುವರಿಸಲಾಗಿದೆ.

ಎಸ್ ಡಿ ಎಂ ಆವರಣದಲ್ಲಿ ಕೋವಿಡ್ ಸೋಂಕು ಪತ್ತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿ ಅವರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಾವು ಹಿಡಿದು ಕಚ್ಚಿಸಿಕೊಂಡ ವೃದ್ಧ; ಸಾವನ್ನಪ್ಪಿದ ಬಳಿಕವಷ್ಟೇ ಕೈಯಿಂದ ಹಾವು ಬಿಟ್ಟ

0

ವಿಜಯಸಾಕ್ಷಿ ಸುದ್ದಿ, ಯಾದಗಿರಿ:

ಇತ್ತೀಚೆಗೆ ಕೆಲವರು ಸಾಹಸಕ್ಕೋ.. ಪ್ರಚಾರಕ್ಕೋ.. ಹುಚ್ಚುತನಕ್ಕೋ.. ಅಥವಾ ಬಂಡ ಧೈರ್ಯ ಪ್ರದರ್ಶಿಸಲಿಕ್ಕೋ.. ಗೊತ್ತಿಲ್ಲ. ಸರಿಸೃಪಗಳನ್ನು ಕೈಯಲ್ಲಿ ಹಿಡಿದು ಅಲೆದಾಡುವುದು, ಮೈಮೇಲೆ ಹಾಕಿಕೊಂಡು, ಕೊರಳಲ್ಲಿ ಸುತ್ತಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಹೀಗೆ ಮಾಡಲು ಹೋಗಿ ಕೆಲವರು ಪ್ರಾಣ ಕಳೆದುಕೊಂಡದ್ದು ಉಂಟು. ಅಂತಹದ್ದೇ ಒಂದು ಘಟನೆ ಯಾದಗಿರಿ ಜಿಲ್ಲೆಯ ಗೋಡಿಹಾಳ ಗ್ರಾಮದಲ್ಲಿ ನಡೆದಿದೆ.

ವಡಿಗೇರಾ ತಾಲೂಕಿನ ಗೋಡಿಹಾಳ ಗ್ರಾಮದ ಮನೆಯೊಂದರಲ್ಲಿ ಹೋಗುತ್ತಿದ್ದ ಹಾವನ್ನು ಹಿಡಿದು ಕಚ್ಚಿಸಿಕೊಂಡ ಪರಿಣಾಮ ಬಸವರಾಜ್ ಪೂಜಾರ್ ಎಂಬ ವೃದ್ಧ ಸಾವನ್ನಪ್ಪಿದ್ದಾನೆ. ಬಸವರಾಜ್ ವಯಸ್ಸಾಗಿದ್ದರೂ, ಹಾವು ಹಿಡಿಯುವ ಕಾಯಕ ಬಿಟ್ಟಿರಲಿಲ್ಲ. ಆದರೆ, ಈ ಬಾರಿ ಹಾವಿನ ಗಾತ್ರ ದೊಡ್ಡದಿರುವ ಕಾರಣಕ್ಕೆ ಕಚ್ಚಿಸಿಕೊಂಡಿದ್ದು, ಮೃತಪಟ್ಟ ಬಳಿಕವಷ್ಟೇ ಹಾವನ್ನು ಕೈ ಬಿಟ್ಟಿದ್ದಾನೆ. ಬಳಿಕ ಗ್ರಾಮಸ್ಥರು ಹಾವನ್ನು ಹೊಡೆದು ಕೊಂದಿದ್ದಾರೆ.

ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಯಾರದ್ದೇ ಮನೆಯಲ್ಲಿ ಹಾವು ಬಂದಿದೆ ಅಂದರೆ‌‌ ಸಾಕು ಅದನ್ನು ಹಿಡಿದು‌ ಊರಿಂದಾಚೆಗೆ ಬಿಟ್ಟು ಬರುತ್ತಿದ್ದ. ಹೀಗೆ ಹಾವು ಹಿಡಿಯುವ ಕಾಯಕದಲ್ಲಿ ತೊಡಗಿದ್ದ ವೃದ್ಧ
ಗ್ರಾಮದಲ್ಲಿ 300ಕ್ಕೂ ಹೆಚ್ಚು ಹಾವುಗಳನ್ನ ಹಿಡಿದು ಬಿಟ್ಟು ಬಂದಿದ್ದ.

ಮೂರೇ ದಿನದಲ್ಲಿ ವಿದ್ಯಾರ್ಥಿಗಳು, ವೈದ್ಯರೂ ಸೇರಿ 281 ಜನರಿಗೆ ಸೋಂಕು; ರೂಪಾಂತರಿ ವೈರಸ್ ಶಂಕೆ

0

ಎಸ್ ಡಿ ಎಂ ಹೊಸ 77 ಕೋವಿಡ್ ಪ್ರಕರಣಗಳು ದೃಢ

ವಿಜಯಸಾಕ್ಷಿ ಸುದ್ದಿ, ಧಾರವಾಡ:

ಇಲ್ಲಿನ ಎಸ್ ಡಿ ಎಂ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿರುವ ಕೋವಿಡ್ ಸೋಂಕು ಇಂದು ಮತ್ತೆ 77 ಜನರಲ್ಲಿ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ತಿಳಿಸಿದ್ದಾರೆ.

ಕಳೆದ ಎರಡು ದಿನಗಳಲ್ಲಿ 204 ಜನರಲ್ಲಿ ಹಾಗೂ ಇಂದು 77 ಪ್ರಕರಣಗಳು ಸೇರಿ ಒಟ್ಟು 281 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ವಿದ್ಯಾರ್ಥಿಗಳು, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸೇರಿದ್ದಾರೆ. ಸೋಂಕಿತರು ಆಸ್ಪತ್ರೆಗೆ ಬಂದಿರುವ ರೋಗಿಗಳ ಸಂಪರ್ಕಕ್ಕೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ರೋಗಿಗಳು ಕೂಡ ಆತಂಕಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

ಸೋಂಕಿತರಿಗೆ ಔಷಧೋಪಚಾರ ನಡೆಯುತ್ತಿದ್ದ, ಕ್ವಾರಂಟೈನ್ ಮಾಡಲಾಗಿದೆ. ತಪಾಸಣೆಗೆ ಒಳಪಟ್ಟವರು ಪ್ರತ್ಯೇಕವಾಗಿ ಇರಲು ಸೂಚಿಸಲಾಗಿದೆ. ರೂಪಾಂತರಿ ವೈರಸ್ ಶಂಕೆ ಮೂಡಿದೆ.

ಇನ್ನೂ 1822 ಜನರ ತಪಾಸಣಾ ವರದಿಗಳು ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುದ್ರಣ ಕಾಶಿಗೆ ವಿದೇಶಿ ಅತಿಥಿಗಳ ಆಗಮನ; ಮಾಗಡಿ ಕೆರೆಯಲ್ಲಿ ಬೀಡು ಬಿಟ್ಟಿವೆ 4,000ಕ್ಕೂ ಅಧಿಕ ಪಕ್ಷಿಗಳು

ವಿದೇಶಿ ಪಕ್ಷಿಗಳ ಕಲರವ ಕಣ್ತುಂಬಿಕೊಳ್ಳಲು ಪ್ರವಾಸಿಗರ ಭೇಟಿ| ಯಾತ್ರಿಕರಿಗಾಗಿ ಕೆರೆಯ ಆವರಣದಲ್ಲಿ ಮೂಲಸೌಲಭ್ಯ

ದುರಗಪ್ಪ ಹೊಸಮನಿ

ವಿಜಯಸಾಕ್ಷಿ ವಿಶೇಷ, ಲಕ್ಷ್ಮೇಶ್ವರ

ತಾಲೂಕಿನ ಸಂರಕ್ಷಣಾ ಮೀಸಲು ಪ್ರದೇಶವಾಗಿರುವ ಮಾಗಡಿ ಕೆರೆಗೆ ವಿದೇಶಿ ಅತಿಥಿಗಳ ಆಗಮನವಾಗಲು ಶುರುವಾಗಿದೆ. ಪರದೇಶದಿಂದ ವಿವಿಧ ಜಾತಿಯ ಪಕ್ಷಿಗಳು ಬಲಾರಂಭಿಸಿದ್ದು, ನಾಲ್ಕೈದು ತಿಂಗಳವರೆಗೆ ಪಕ್ಷಿ ಪ್ರೇಮಿಗಳ ಕಣ್ಣು ತಣಿಸಲಿವೆ.

ಪ್ರತಿ ವರ್ಷ ಚಳಿಗಾಲ ಪ್ರಾರಂಭದ ನವೆಂಬರ್ ತಿಂಗಳ ಮೊದಲ ವಾರದಿಂದ ಸಾವಿರಾರು ಕಿ.ಮೀ. ಸಂಚರಿಸಿ ಮಾಗಡಿ ಕೆರೆಗೆ ವಲಸೆ ಬರುವ ವಿದೇಶಿ ಪಕ್ಷಿಗಳು ಮಾರ್ಚ್‌ವರೆಗೂ ಕೆರೆಯಲ್ಲಿಯೇ ಬೀಡು ಬಿಟ್ಟಿರುತ್ತವೆ. ನವೆಂಬರ್ ಆರಂಭದಿಂದ ಮಾರ್ಚ್ ಅಂತ್ಯದವರೆಗೆ ಲಕ್ಷಾಂತರ ವಿದೇಶಿ ಪಕ್ಷಿಗಳು ಲಗ್ಗೆಯಿಡುತ್ತವೆ. ಸುಮಾರು ೧೩೪ ಎಕರೆ ವೀಸ್ತಿರ್ಣವಿರುವ ಕೆರೆಯಲ್ಲಿ ವಾಸ್ತವ್ಯ ಮಾಡಲಿದ್ದು, ಜಿಲ್ಲೆಯ ಮಾಗಡಿ ಕೆರೆ ವಲಸೆ ಪಕ್ಷಿಗಳ ‘ಹಾರ್ಟ್ ಫೆವರೀಟ್’ ವಾಸಸ್ಥಳವಾಗಿ ಮಾರ್ಪಟ್ಟಿದೆ.

ಈಗಾಗಲೇ ಮಂಗೋಲಿಯಾದ ಬಾರ್ ಹೆಡ್ಡೆಡ್ ಗೂಜ್ ಹಾಗೂ ಕಾಶ್ಮೀರದ ಬ್ರಾಹ್ಮಿಣಿ ಡಕ್ ಕೆರೆಯಲ್ಲಿ ಬೀಡು ಬಿಟ್ಟಿದೆ. ಅದರಂತೆ, ನಾರ್ಥನ್ ಪಿಂಟೆಲ್, ಕೋಮ್ ಡಕ್, ಡೆಮೋಸಿಲ್ ಕ್ರೇನ್, ಗಾರ್ಗಿನಿ, ನಾರ್ಥನ್ ಸೂವೆಲ್ಲರ್, ಕಾಮನ್ ಪೋಚಾರ್ಡ್ ಸೇರಿ ಎಂಟಕ್ಕೂ ಹೆಚ್ಚು ಜಾತಿಯ ವಿದೇಶಿ ಪಕ್ಷಿಗಳು, ಅದರಂತೆ, ಪೆಂಟೆಡ್ ಸ್ಟಾರ್ಕ್, ಗ್ರೇ ಹೆರಾನ್, ಫರ್‌ಫಲ್ ಮೂರ್ ಹೆನ್ನ, ಕಾಮನ್ ಕೂಟ್, ಸ್ಪಾಟ್ ಬಿಲ್ಲಿಡ್ ಡಕ್, ಕಾರ್ಮೊರೆಂಟ್, ಡಾಟರ್, ವೈಟ್ ಬ್ರೇಸ್ಟೆಡ್ ವಾಟರ್ ಹೆನ್, ವೈಟ್ ಐಬಿಸ್, ಬ್ಲಾಕ್ ಐಬಿಸ್, ವೈಟ್ ನೆಕ್ಟ ಸ್ಟಾರ್ಕ್ ಜಾತಿಯ ಸ್ವದೇಶಿ ಪಕ್ಷಿಗಳು ಇನ್ನಷ್ಟೇ ಬರಬೇಕಿದೆ. ಅಲ್ಲದೇ, ಇವುಗಳ ಜೊತೆಗೆ ಸ್ವದೇಶದ ರೋಜಿಸ್ಟಾರ್ಲಿಂಗ್ ಪಕ್ಷಿಗಳ ಹಿಂಡು ನೋಡುಗರಿಗೆ ಕಾಣಸಿಗಲಿದೆ.

ಪ್ರತಿವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆ ಮಾಗಡಿ ಕೆರೆಗೆ ಮಂಗೋಲಿಯಾ, ಸೈಬಿರಿಯಾ, ಚೀನಾ, ಪಾಕಿಸ್ತಾನ, ಆಸ್ಟ್ರೇಲಿಯಾ, ಕಾಶ್ಮೀರದಿಂದ ಸಾವಿರಾರು ಪಕ್ಷಿಗಳ ಗುಂಪು ವಲಸೆ ಬರಲಿವೆ. ಸ್ವದೇಶಿಯ ೧೨ ಹಾಗೂ ವಿದೇಶಿಯ ೮ ಸೇರಿ ಒಟ್ಟು ೨೦ ವಿವಿಧ ಜಾತಿಯ ಪಕ್ಷಿಗಳು ಆಗಮಿಸುತ್ತವೆ.
ನೀರಿನಲ್ಲಿ ತೇಲುತ್ತಾ ರೆಕ್ಕೆ ಬಡೆಯುತ ವಿಹರಿಸುವ ಪಕ್ಷಿಗಳು ಆಹಾರ ಹುಡುಕಿಕೊಂಡು ರಾತ್ರಿ ಹತ್ತಾರು ಕಿ.ಮೀ. ದೂರ ಹೋಗುತ್ತವೆ. ಮರಳಿ ಮುಂಜಾನೆ ಕೆರೆಗೆ ಧಾವಿಸುವ ಅವುಗಳು ನೀರಿನಲ್ಲಿ ವಿಹರಿಸುತ್ತವೆ. ಇಳಿ ಹೊತ್ತಿನ ಬಾನಂಗಳದಲ್ಲಿ ವಿದೇಶಿ ಅತಿಥಿಗಳ ಸ್ವಚ್ಛಂದ ಹಾರಾಟ ನೋಡುಗರ ಹೃನ್ಮನ ಸೆಳೆಯುತ್ತಿದೆ.

‘ಪ್ರತಿವರ್ಷ ಮಾಗಡಿ ಕೆರೆಗೆ ವಲಸೆ ಬರುವ ವಿದೇಶಿ ಮತ್ತು ಸ್ವದೇಶಿಯ ವಿವಿಧ ಜಾತಿಯ ಪಕ್ಷಿಗಳನ್ನು ವೀಕ್ಷಿಸಲು ಸಾಕಷ್ಟು ಜನ ಬರುತ್ತಿದ್ದಾರೆ. ಈಗಾಗಲೇ ಪಕ್ಷಿಗಳು ಆಗಮಿಸುತ್ತಿದ್ದು, ಶೇ.೧ರಷ್ಟು ಪಕ್ಷಿಗಳು ಕೆರೆಯಲ್ಲಿ ಬೀಡುಬಿಟ್ಟಿವೆ. ಇನ್ನೂ
ವಿವಿಧ ಜಾತಿಯ ಸಾವಿರಾರು ಪಕ್ಷಿಗಳು ಬರಬೇಕಿದೆ. ಸೋಮಣ್ಣ, ಪಕ್ಷಿ ಸಂರಕ್ಷಕ

ಇನ್ನು ಕಿತ್ತೂರ ಕರ್ನಾಟಕ ಭಾಗದಲ್ಲಿ ಮಾಗಡಿ ಕೆರೆ ವಲಸೆ ಪಕ್ಷಿಗಳ ಪ್ರಸಿದ್ಧ ತಾಣವಾಗಿದ್ದು, ಪಕ್ಷಿ ವೀಕ್ಷಣೆಗಾಗಿ ಅನೇಕ ಕಡೆಗಳಿಂದ ಆಗಮಿಸುತ್ತಾರೆ. ಅಲ್ಲದೇ, ಇಲ್ಲಿಗೆ ಬರುವ ಯಾತ್ರಿಕರಿಗಾಗಿ ಅರಣ್ಯ ಇಲಾಖೆ ಕುಡಿಯುವ ನೀರು, ಶೌಚಾಲಯ, ಆಸನದ ವ್ಯವಸ್ಥೆ, ಊಟದ ಹಾಲ್ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದೆ.

10 ಸಾವಿರಕ್ಕೂ ಅಧಿಕ ಪಕ್ಷಿಗಳು ವಲಸೆ!

ಪ್ರತಿ ಚಳಿಗಾಲದಲ್ಲಿ ಮಾಗಡಿ ಕೆರೆಗೆ ಬಾರ್ ಹೆಡ್ಡೆಡ್ ಗೂಜ್ ಜಾತಿಯ ಪಕ್ಷಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಸುಮಾರು 10,000ಕ್ಕೂ ಅಧಿಕ ಪಕ್ಷಿಗಳು ಮಂಗೋಲಿಯಾದಿಂದ ವಲಸೆ ಬರುತ್ತವೆ. ಈಗಾಗಲೇ ನಾಲ್ಕು ಸಾವಿರಕ್ಕೂ ಅಧಿಕ ಮಂಗೋಲಿಯಾದ ಬಾರ್ ಹೆಡ್ಡೆಡ್ ಗೂಜ್ ಪಕ್ಷಿಗಳು ಕೆರೆಯಲ್ಲಿ ಬೀಡುಬಿಟ್ಟಿದ್ದು, ಇನ್ನು 6,000ಕ್ಕೂ ಹೆಚ್ಚು ಪಕ್ಷಿಗಳು ಇನ್ನಷ್ಟೇ ಬರಬೇಕಿದೆ.

  • ಸೋಮಣ್ಣ, ಪಕ್ಷಿ ಸಂರಕ್ಷಕ

ಕೋವಿಡ್ ಲಸಿಕೆ; ಉತ್ತರ ಕರ್ನಾಟಕದಲ್ಲಿಯೇ ಗದಗ ಜಿಲ್ಲೆ ಪ್ರಥಮ

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯ ಕೋವಿಡ್ ಲಸಿಕೆಯ ಅಂಕಿ ಅಂಶಗಳಲ್ಲಿ ಅನುಮಾನ ಹುಟ್ಟಿಸಿರುವ ಬೆನ್ನಲ್ಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರ ನಿಗದಿ ಪಡಿಸಿರುವ ಗುರಿ ತಲುಪುವ ಮೂಲಕ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿಯೇ ಗದಗ ಶೇ.100ರಷ್ಟು ಗುರಿ ಸಾಧಿಸಿದೆ.

ರಾಜ್ಯ ಸರ್ಕಾರ ಗದಗ ಜಿಲ್ಲೆಗೆ ಒಟ್ಟು 7,75,000 ಕೊವೀಡ್ ಮೊದಲ ಲಸಿಕೆಯ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಆರೋಗ್ಯ ಇಲಾಖೆ ಹಾಗೂ ಸಿಬ್ಬಂದಿ ಕೊರೊನಾ ಲಸಿಕಾ ಅಭಿಯಾನ ಪ್ರಾರಂಭದ ದಿನವಾದ ಜ. 16ರಿಂದ ನ. 25ರವರೆಗೆ 11 ತಿಂಗಳ ಕಾಲಾವಧಿಯಲ್ಲಿ ಮನೆ ಮನೆಗಳ ಭೇಟಿ, ಲಸಿಕಾ ಮೇಳದಂತಹ ಕಾರ್ಯಕ್ರಮಗಳ ಮೂಲಕ ಗುರಿ ತಲುಪಿದೆ.

ಆರೋಗ್ಯ ಇಲಾಖೆ ಶೇ. 100ರಷ್ಟು ಗುರಿ ಮುಟ್ಟಿದ್ದರೂ, ಜಿಲ್ಲೆಯಲ್ಲಿ ಇನ್ನೂ ಕೋವಿಡ್ ಮೊದಲ ಲಸಿಕೆ ಪಡೆಯಲು ಬಾಕಿ ಇರುವವರ ಸಂಖ್ಯೆ ಅಧಿಕವಾಗಿದೆ. ಜಿಲ್ಲೆಯಲ್ಲಿ ಒಟ್ಟು 4,27,696 ಜನರು ಕೋವಿಡ್ ಎರಡನೇ ಲಸಿಕೆ ಪಡೆದುಕೊಂಡಿದ್ದು, ಉಳಿದವರಿಗೆ ಕರೆ ಮಾಡಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 5,76,395 ಪುರುಷರು, 6,25,675 ಮಹಿಳೆಯರು ಮೊದಲ ಮತ್ತು ಎರಡನೇ ಹಂತದ ಕೋವಿಡ್ ಲಸಿಕೆ ಪಡೆದಿದ್ದಾರೆ.

ಮೂರು ಕೇಸ್


ಧಾರವಾಡದ ಎಸ್‌ಡಿಎಂ ಮೆಡಿಕಲ್ ಕಾಲೇಜಿನ 182 ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲೂ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ 39 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ಸಿಬ್ಬಂದಿಗೆ ಸೂಚಿಸಲಾಗಿದೆ.

ಪ್ರತಿದಿನ 1,200 ಜನರ ಸ್ವ್ಯಾಬ್ ಸಂಗ್ರಹಿಸಲಾಗುತ್ತಿದ್ದು, ಸಂಖ್ಯೆ ಹೆಚ್ಚಿಸುವಂತೆ ಸೂಚಿಸಲಾಗಿದೆ. ಸದ್ಯ ಜಿಲ್ಲೆಯಲ್ಲಿ ಮೂರು ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿದಿನ 6ರಿಂದ 7 ಸಾವಿರ ಜನರಿಗೆ ಲಸಿಕೆ ಹಾಕಲಾಗುತ್ತಿದೆ ಎಂದು ಪ್ರಭಾರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಜಗದೀಶ್ ನುಚ್ಚಿನ್ ತಿಳಿಸಿದರು.

ಡಾ| ನುಚ್ಚಿನ್ ಕಾರ್ಯವೈಖರಿಗೆ ಮೆಚ್ಚುಗೆ

ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ಹಾಕುವಲ್ಲಿ ಶೇ. 100ರಷ್ಟು ಗುರಿ ಸಾಧಿಸಿರುವ ಗದಗ ಜಿಲ್ಲೆಯ ಸಾಧನೆಯಲ್ಲಿ ಇಬ್ಬರು ಡಿಎಚ್‌ಒಗಳ ಪಾತ್ರವಿದ್ದು, ಇಬ್ಬರೂ ಅಧಿಕಾರಿಗಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಇತರ ಇಲಾಖೆ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಡಿಎಚ್‌ಒ ಡಾ.ಸತೀಶ್ ಬಸರಿಗಿಡದ ಅವರು ರಜೆಗೆ ಹೋಗುವ ಮುನ್ನ ಗದಗ ಜಿಲ್ಲೆ ಶೇ. 80ರಷ್ಟು ಗುರಿ ಸಾಧಿಸಿತ್ತು. ಇಲಾಖೆಯ ಪ್ರಭಾರಿ ಡಿಎಚ್‌ಒ ಆಗಿ ಡಾ| ಜಗದೀಶ್ ನುಚ್ಚಿನ್ ಪ್ರಭಾರ ವಹಿಸಿಕೊಂಡು (ಅ. 26) ಒಂದೇ ತಿಂಗಳಲ್ಲಿ ಶೇ. 20ರಷ್ಟು ಜನರಿಗೆ ಲಸಿಕೆ ನೀಡುವ ಮೂಲಕ ಸರ್ಕಾರದ ಗುರಿ ತಲುಪಿದ್ದು, ನುಚ್ಚಿನ್ ಅವರ ಕಾರ್ಯವೈಖರಿಗೆ ಜಿಲ್ಲೆಯಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಆರೋಗ್ಯ ಇಲಾಖೆ ಕೆಲಸ ಮಾಡಿದರೂ ಇನ್ನುಳಿದ ಇಲಾಖೆಗಳ ಸಹಕಾರದಿಂದಾಗಿ ಶೇ. 100ರಷ್ಟು ನಿಗದಿತ ಗುರಿ ತಲುಪವಲ್ಲಿ ಸಾಧ್ಯವಾಯಿತು. ಜಿಲ್ಲೆಯ ಪ್ರತಿಯೊಬ್ಬ ಸಾರ್ವಜನಿಕರು ಒಂದು ಮತ್ತು ಎರಡನೇ ಹಂತದ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು.

ಡಾ| ಜಗದೀಶ್ ನುಚ್ಚಿನ್, ಪ್ರಭಾರಿ ಡಿಎಚ್‌ಒ

ಸಿನಿಮಾ ವಿಮರ್ಶೆ
ಒಂಚೂರು ಸಸ್ಪೆನ್ಸು, ಒಂಚೂರು ಸಖತ್

0

ಬಸವರಾಜ ಕರುಗಲ್
ಸುನಿ ಸಿಂಪಲ್ಲಾಗಿರೊ ಸ್ಟೋರಿಯನ್ನ, ಎಕ್ಸ್ಟಾರ್ಡಿನರಿ ಸ್ಟೋರಿ ಮಾಡೋದ್ರಲ್ಲಿ ಎತ್ತಿದ ಕೈ ಎಂಬುದನ್ನು ಈಗಾಗಲೇ ನಿರೂಪಿಸಿದ್ದಾರೆ. ಸಖತ್‌ನ ಜಾಡು ಅದೇ ಹಾದಿಯಲ್ಲಿದ್ದರೂ  ಆರ್ಡಿನರಿಯಾಗಿದೆಯಷ್ಟೇ. ಮಧ್ಯಂತರದಿಂದ ಆರಂಭವಾಗುವ ಸಿನಿಮಾ ವಿರಾಮದ ಬಳಿಕ ಪುಟಿದೇಳುತ್ತದೆ. ಕಚಗುಳಿ ಇಡುತ್ತದೆ. ಭಾವುಕತೆ ಉಕ್ಕಿ ಕಣ್ಣಂಚು ಒದ್ದೆಯಾಗುತ್ತದೆ.

ಸಿನಿಮಾದ ಕಥೆ ಗಣೇಶ್‌ಗೆ ಹೊಂದಿಕೆಯಾಗಿದ್ದಂತು ಸತ್ಯ, ಆದರೆ ಸಖತ್ ಆಗಿರಬೇಕಿದ್ದ ಮರ್ಡರ್ ಸಸ್ಪೆನ್ಸ್ ಅನಗತ್ಯ ದೃಶ್ಯಗಳಿಂದಾಗಿ ಸಪ್ಪೆ ಎನಿಸುತ್ತಲೇ‌ ಇರುವಾಗ ಕ್ಲೈಮ್ಯಾಕ್ಸ್‌ನಲ್ಲಿ ಬರುವ ತಿರುವು ವಾಹ್!, ಓಹೋ! ಎನಿಸುತ್ತದೆ.

ಟೈಟಲ್ ಕಾರ್ಡ್ ತೋರಿಸುವಾಗ ಇರುವ ಹೊಸತನದ ಹುಮ್ಮಸ್ಸು ಚಿತ್ರದ ಕೊನೇತನಕ ಇದ್ದಿದ್ದರೆ ಸಖತ್ ಸೂಪರ್ ಎನಿಸುತ್ತಿತ್ತು. ರಿಯಾಲಿಟಿ ಶೋವೊಂದನ್ನು ಅಣುಕಿಸುವ ಭರದಲ್ಲಿ ಮರ್ಡರ್ ಮಿಸ್ಟ್ರಿ ಸ್ಟೋರಿ ತಾಳ ತಪ್ಪಿದ ರಾಗದಂತೆ ಭಾಸವಾಗುತ್ತದೆ.

ಸಾಂದರ್ಭಿಕ ಅಂಧತ್ವ ಎನ್ನುವುದು ಇಡೀ ಸಿನಿಮಾದ ಹೈಲೈಟ್. ಅದು ಹೇಗೆ ಅನ್ನೋದನ್ನ ಸಿನಿಮಾ ನೋಡಿ ತಿಳ್ಕೋಬೇಕು. ಕೋರ್ಟ್ ಡ್ರಾಮಾದ ಒಂದು ಸನ್ನಿವೇಶದಲ್ಲಿ ಸುನಿ ಡಿಫರೆಂಟ್ ಆಗಿ ಥಿಂಕ್ ಮಾಡಿದ್ದಾರೆ. ಅದೇನೆಂದರೆ ಅಪಘಾತವೆಂದು ದಾಖಲಾದ ಕೊಲೆಯ ಘಟನೆಯನ್ನು ಪಾತ್ರದಾರಿಗಳಲ್ಲದೇ ಪ್ರೇಕ್ಷಕರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಇಮ್ಯಾಜಿನ್ ಮಾಡಿಕೊಳ್ಳುವ ಪ್ರಸಂಗ. ಇದು ನೋಡುಗರಿಗೂ ಹೊಸ ಅನುಭವ ನೀಡುತ್ತಾ ಚಮಕ್ ಮಾಡುತ್ತೆ.

ಕಥೆಯ ಎಳೆ ತೀರಾ ಸಿಂಪಲ್. ಕಣ್ಣಿಲ್ಲದವರ ಶಾಲೆಯ ಜಾಗದ ಮೇಲೆ ಖಳರ ಕಣ್ಣು. ಅದಕ್ಕಾಗಿ ಜಾಗದ ಮಾಲಕನ ಕೊಲೆ ಸಾಂದರ್ಭಿಕ ಸಾಕ್ಷಿಯಾಗಿ ಕೋರ್ಟ್ ಕಟಕಟೆಗೆ ಬರುವ ನಾಯಕ ವಕೀಲರಿಗೆ ಚಮಕ್ ಕೊಡುತ್ತಾ, ಅಂಧರ ಶಾಲೆ ರಕ್ಷಿಸಿಕೊಳ್ಳುವ ತೀರ್ಪು ಬರುವಂತೆ ಪ್ಲ್ಯಾನ್…‌ ಇದಿಷ್ಟು‌ ಸಖತ್‌ನ ತಿರುಳು.

ಸಸ್ಪೆನ್ಸ್ ಸ್ಕ್ರಿಪ್ಟ್‌ಗೆ ಕಾಮಿಡಿ‌ ಲೇಪ ಹಾಕಲು ಹೊರಟ ಸುನಿ ಆರಂಭದಲ್ಲಿ ಪ್ರೀತಿಯ ಹಿಂದೆ ಬಿದ್ದು ಕಥೆ ಎಳೆದಿದ್ದಾರೆ. ಇಲ್ಲಿ ಹೇಳಿಕೊಳ್ಳುವ ಹಾಸ್ಯವೂ ಇಲ್ಲ, ಚಿತ್ರಕ್ಕೆ ವೇಗವೂ ದಕ್ಕುವುದಿಲ್ಲ. ಸಖತ್ ಸಿನಿಮಾ ಸಖತ್ ಎನಿಸೋದೇ ದ್ವಿತೀಯಾರ್ಧದಲ್ಲಿ. ಒಟ್ಟಾರೆ ಫ್ಯಾಮಿಲಿ ಸಮೇತ ಮುಜುಗರ ಇಲ್ಲದೇ ಸಿನಿಮಾ ನೋಡಲಡ್ಡಿಯಿಲ್ಲ.

ಶಾಲಾ ಜಾಗದ ಮಾಲಕನನ್ನು ಕೊಂದವರು ಯಾರು? ಸಾಂದರ್ಭಿಕ ಅಂಧನ ಪ್ರೀತಿ ಏನಾಯ್ತು? ಗಣೇಶ್‌ಗೆ ದೃಷ್ಟಿ ಇತ್ತಾ? ಇಲ್ವಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದರೆ ಒಂದು ಸಾರಿ ಸಖತ್ ನೋಡಿ..

ಗಣೇಶ್ ಅಭಿನಯ ಲೀಲಾಜಾಲ. ಜಡ್ಜ್ ಆಗಿರೊ ಮಾಳವಿಕಾ ಸಿರಿಯಸ್ಸಾಗಿದ್ದು ಕೆಲ ಡೈಲಾಗ್‌ಗಳ ಮೂಲಕ ಕಿರುನಗೆ ಬೀರುವಂತೆ ಮಾಡುತ್ತಾರೆ. ಮಾಸ್ಟರ್ ಗಣೇಶ್ ಇನ್ನಷ್ಟು ಪಳಗಿದರೆ ಥೇಟ್ ಅಪ್ಪನ ಪಡಿಯಚ್ಚು. ನಾಯಕಿರಾದ ಸುರಭಿ, ನಿಶ್ಚಿಕಾ ಪರವಾಗಿಲ್ಲ. ರಂಗಾಯಣ ರಘು,  ಶೋಭರಾಜ್, ಧರ್ಮಣ್ಣ, ಸಾಧು ಕೋಕಿಲ ಕೊಟ್ಟ ಪಾತ್ರವನ್ನು ನಿರ್ವಹಿಸಿದ್ದಾರೆ. ಇಡೀ ಸಿನಿಮಾದ ಹೈಲೈಟ್ ರಾಮಕೃಷ್ಣ ಅವರ ಪಾತ್ರ. ಪಾತ್ರ ಚಿಕ್ಕದಾದರೂ, ಸಿನಿಮಾದ ಕೊನೆಯವರೆಗೂ ಕಾಡುತ್ತದೆ. ಜ್ಯೂಡಾ ಸ್ಯಾಂಡಿ ಸಂಗೀತದಲ್ಲಿ ಕಾಲು ಕಂಪಿಸುವ ಹಾಡುಗಳಿವೆಯೇ ಹೊರತು ಇಂಪಿಲ್ಲ, ಸಂತೋಷ್ ಪಾತಾಜೆ ಕ್ಯಾಮೆರಾ ವರ್ಕ್ ಬಗ್ಗೆ ನೋ ನೆಗೆಟಿವ್ ಕಾಮೆಂಟ್ಸ್. ವೃತ್ತಿನೈಪುಣ್ಯತೆ ಎದ್ದು ಕಾಣುತ್ತದೆ. ಪ್ರೊಡ್ಯೂಸರ್ ನಿಶಾ ವೆಂಕಟ್ ಕೋಣಂಕಿ ಬಂಡವಾಳವನ್ನು ಮಾತ್ರ ಈ ಚಿತ್ರದಿಂದ ನಿರೀಕ್ಷಿಸಬಹುದು.

ಕುರುಡುತನದ ಹಿನ್ನೆಲೆಯಲ್ಲಿ ಸಾಗಿ ಬಂದ ನನ್ನ ಪ್ರೀತಿಯ ರಾಮು, ಕವಚ ಸಿನಿಮಾಗಳಿಗೆ ಹೋಲಿಸಿದರೆ ಸಖತ್ ಸಿನಿಮಾ ಸುಮಾರಾಗಿದೆ ಎನ್ನಬಹುದು.

ವೀಕ್ಷಣಾ ಸಹಕಾರ: ಶಾರದಾ ಚಿತ್ರಮಂದಿರ, ಕೊಪ್ಪಳ.

ರೇಟಿಂಗ್: ***
———————
ರೇಟಿಂಗ್ ಡಿಟೇಲ್ಸ್:

* –      ಚನ್ನಾಗಿಲ್ಲ
** –    ಸುಮಾರಾಗಿದೆ
*** –  ನೋಡಬಹುದು
**** –  ನೋಡಬೇಕು
***** – ನೋಡಲೇಬೇಕು

ಮತ್ತೆ 116 ವಿದ್ಯಾರ್ಥಿಗಳಿಗೆ ಸೋಂಕು; ಪಾಲಕರಲ್ಲೂ ಕೊರೊನಾ ಆತಂಕ!

0

ನ.17 ರ ಕಾರ್ಯಕ್ರಮದಲ್ಲಿ ಭಾಗಿಯಾದವರೆಲ್ಲರ ತಪಾಸಣೆಗೆ ಸೂಚನೆ

ವಿಜಯಸಾಕ್ಷಿ ಸುದ್ದಿ, ಧಾರವಾಡ:

ಇಲ್ಲಿನ ಎಸ್ ಡಿ ಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡಿರುವ ಕೋವಿಡ್ ಸೋಂಕು ನಿನ್ನೆ (ನ.25) ಮಧ್ಯರಾತ್ರಿ ಮತ್ತೆ 116 ಜನರಲ್ಲಿ ದೃಢಪಟ್ಟಿದೆ. ಇದರಿಂದಾಗಿ 182 ವಿದ್ಯಾರ್ಥಿಗಳಿಗೆ ಸೋಂಕು ಧೃಡಪಟ್ಟಂತಾಗಿದೆ.

ನ.17 ರಂದು ಕಾಲೇಜಿನ ಡಿ.ವಿರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲವು ಪಾಲಕರು ಕೂಡ ಭಾಗಿಯಾಗಿದ್ದರು ಎಂದು ತಿಳಿದು ಬಂದಿದ್ದು, ಅಂತಹ ವ್ಯಕ್ತಿಗಳು ಕೂಡ ಕೋವಿಡ್ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ತಿಳಿಸಿದ್ದಾರೆ.

ನಿನ್ನೆ (ನ.25) ಸಂಜೆಯವರೆಗೆ ಮತ್ತೆ ಎಸ್ ಡಿ ಎಂ ಆವರಣದ 690 ಜನರನ್ನು ಆರ್ ಟಿ ಪಿ ಸಿ ಆರ್ ಹಾಗೂ ಆರ್ ಎ ಟಿ ತಪಾಸಣೆಗೆ ಒಳಪಡಿಸಲಾಗಿದೆ. ಕಿಮ್ಸ್, ಡಿಮ್ಹಾನ್ಸ್ ಹಾಗೂ ಎಸ್ ಡಿ ಎಂ ನ ಕೋವಿಡ್ ಪ್ರಯೋಗಾಲಯಗಳಲ್ಲಿ ಈ ಮಾದರಿಗಳನ್ನು ಪರೀಕ್ಷಿಸಲಾಗಿದೆ. 116 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಮಧ್ಯರಾತ್ರಿಯ ನಂತರ ಈ ವರದಿಗಳು ಲಭ್ಯವಾಗಿವೆ. ಎಲ್ಲರೂ ಕೋವಿಡ್ ನಿರೋಧಕ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿರುವುದರಿಂದ ಯಾರಲ್ಲಿಯೂ ರೋಗದ ಗಂಭೀರ ಸ್ವರೂಪದ ಲಕ್ಷಣಗಳಿಲ್ಲ..

ಪಾಲಕರ ತಪಾಸಣೆಗೂ ಸೂಚನೆ

ನ.17 ರಂದು ಎಸ್ ಡಿ ಎಂ ಆಸ್ಪತ್ರೆ ಬಳಿಯ ಡಿ.ವಿರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆದ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಕೆಲವು ಪಾಲಕರೂ ಕೂಡ ಭಾಗವಹಿಸಿದ್ದರೆಂದು ತಿಳಿದು ಬಂದಿದೆ.ಅಂತಹ ವ್ಯಕ್ತಿಗಳೂ ಕೂಡ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಬೇಕು. ಇದುವರೆಗೆ ಎಸ್ ಡಿ ಎಂ ಆವರಣದಿಂದ ಹೊರಗೆ ಎಲ್ಲಿಯೂ ಪ್ರಕರಣಗಳೂ ವರದಿಯಾಗಿಲ್ಲ.

ಹುಬ್ಬಳ್ಳಿ ಧಾರವಾಡ ಅವಳಿನಗರ ಹಾಗೂ ಜಿಲ್ಲೆಯ ಸಾರ್ವಜನಿಕರಲ್ಲಿ ರೋಗದ ಲಕ್ಷಣಗಳು ಕಂಡು ಬಂದರೆ ಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಸ್ವ್ಯಾಬ್ ನೀಡಿ, ಕೋವಿಡ್ ತಪಾಸಣೆ ಮಾಡಿಸಿಕೊಳ್ಳಬೇಕು. ಕೋವಿಡ್ ನಿಯಂತ್ರಣಕ್ಕೆ ಈ ಮುನ್ನೆಚ್ಚರಿಕೆಯನ್ನು ಪ್ರತಿಯೊಬ್ಬರೂ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಎಸ್ಡಿ‌ಎಂ ಮೆಡಿಕಲ್ ಕಾಲೇಜಿನ 66 ವಿದ್ಯಾರ್ಥಿಗಳಲ್ಲಿ ಕೋವಿಡ್ ದೃಢ : ಎರಡು ಹಾಸ್ಟೆಲ್ ಸೀಲ್ಡೌನ್

0

ವಿಜಯಸಾಕ್ಷಿ ಸುದ್ದಿ, ಧಾರವಾಡ:

ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್ ಡಿ ಎಂ) ವೈದ್ಯಕೀಯ ಮಹಾವಿದ್ಯಾಲಯದ 66 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಎಲ್ಲ 400 ವಿದ್ಯಾರ್ಥಿಗಳು ಹಾಗೂ 3 ಸಾವಿರ ಸಿಬ್ಬಂದಿಯ ಸ್ವ್ಯಾಬ್ ಸಂಗ್ರಹಿಸಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಎರಡು ಹಾಸ್ಟೇಲ್ ಗಳನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕಿತರು ಎರಡು ಡೋಸ್ ಲಸಿಕೆ ಪಡೆದಿರುವುದರಿಂದ ತೀವ್ರತರ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಹೀಗಾಗಿ ಔಷಧೋಪಚಾರ, ಚಿಕಿತ್ಸೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಹೇಳಿದರು.

ಸತ್ತೂರಿನ ಎಸ್.ಡಿ.ಎಂ‌.ವೈದ್ಯಕೀಯ ಕಾಲೇಜು ಆವರಣಕ್ಕೆ ಭೇಟಿ ನೀಡಿ, ಹಾಸ್ಟೇಲು ಸೀಲ್ ಡೌನ್ ಪ್ರದೇಶ ಪರಿಶೀಲಿಸಿ, ಸಂಸ್ಥೆಯ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕಳೆದ 17 ನೇ ತಾರೀಖಿನಂದು ಕಾಲೇಜಿನ ಆವರಣದ ಕಲಾಕ್ಷೇತ್ರದಲ್ಲಿ ನಡೆದ ವಿದ್ಯಾರ್ಥಿಗಳ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಹಲವರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ
ಸಂಸ್ಥೆಯ 400 ಪದವಿ ವಿದ್ಯಾರ್ಥಿಗಳಲ್ಲಿ ಈಗಾಗಲೇ 300 ವಿದ್ಯಾರ್ಥಿಗಳ ಕೋವಿಡ್ ತಪಾಸಣೆ ವರದಿ ಬಂದಿದ್ದು 66 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ಉಳಿದ 100 ವಿದ್ಯಾರ್ಥಿಗಳ ಸ್ವ್ಯಾಬ್ ಸಂಗ್ರಹಿಸಿ ತಪಾಸಣೆಗೊಳಪಡಿಸಲಾಗುತ್ತಿದೆ.

ಎರಡು ಹಾಸ್ಟೇಲುಗಳನ್ನು ಸೀಲ್ ಡೌನ್ ಮಾಡಿ,ಸೋಂಕಿತರನ್ನು ಪ್ರತ್ಯೇಕವಾಗಿ ಇಡಲಾಗಿದೆ.ತಪಾಸಣೆಗೆ ಒಳಪಟ್ಟವರನ್ನು ಕೂಡ ಕ್ವಾರಂಟೈನ್ ಮಾಡಲಾಗಿದೆ. ಆವರಣದಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 3 ಸಾವಿರ ಸಿಬ್ಬಂದಿಯನ್ನೂ ಕೂಡ ತಪಾಸಣೆಗೆ ಒಳಪಡಿಸಲಾಗುವುದು ಎಂದರು.

ಕಾಲೇಜಿನ ಅವರಣದ ಕಲಾಕ್ಷೇತ್ರದಲ್ಲಿ ಕಳೆದ ನ.17 ರಂದು ನಡೆದ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ ವ್ಯಕ್ತಿಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದ ಎಲ್ಲರೂ ಕೋವಿಡ್ ತಪಾಸಣೆಗೆ ಒಳಪಟ್ಟು ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಮನವಿ ಮಾಡಿದ್ದಾರೆ.

ಈ ವೇಳೆ ಎಸ್ ಡಿ ಎಂ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ.ರತ್ನಮಾಲಾ ದೇಸಾಯಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ ಮತ್ತಿತರರು ಇದ್ದರು.

ಆ್ಯಂಬುಲೆನ್ಸ್ ಸಿಬ್ಬಂದಿಗಳ ಸಮಯಪ್ರಜ್ಞೆ ; ಮಗುವಿನ ಕುತ್ತಿಗೆಗೆ ಕರುಳ ಬಳ್ಳಿ ಸಿಕ್ಕು ನರಳುತ್ತಿದ್ದ ಮಹಿಳೆಗೆ ಮಾರ್ಗ ಮಧ್ಯೆದಲ್ಲೇ ಹೆರಿಗೆ

0

ವಿಜಯಸಾಕ್ಷಿ ಸುದ್ದಿ, ಗದಗ:

ಗದಗನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಬುಧವಾರ(ನ.೨೩) ರಾತ್ರಿ ಗರ್ಭಿಣಿಯೋರ್ವರನ್ನು ಹುಬ್ಬಳ್ಳಿಗೆ ಕರೆದೋಯ್ಯುತ್ತಿದ್ದ ವೇಳೆ ಮಾರ್ಗ ಮಧ್ಯೆ ಆ್ಯಂಬುಲೆನ್ಸ್ ನಲ್ಲೇ ಹೆರಿಗೆಯಾಗಿದ್ದು, ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ.

ಗಜೇಂದ್ರಗಡ ತಾಲೂಕಿನ ನಿಡಗುಂದಿಕೊಪ್ಪ ಗ್ರಾಮದಿಂದ ಹೆರಿಗೆಗೆ ಬಂದಿದ್ದ ಕವಿತಾ ಪೂಜಾರಿ ಎಂಬ ಮಹಿಳೆಗೆ 108 ವಾಹನದ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ನಗರದ ಹೃದಯಭಾಗ ಮುಳಗುಂದ ನಾಕಾ ಬಳಿ ಸುಸೂತ್ರವಾಗಿ ಹೆರಿಗೆ ಆಗಿದ್ದು, ಸದ್ಯ ಹೆರಿಗೆ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ರಕ್ತ ಕಡಿಮೆ ಇದ್ದ ಕಾರಣ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಇಲ್ಲಿನ ವೈದ್ಯರು ಸೂಚಿಸಿದ್ದರು. ಆದರೆ, ಕುಟುಂಬಸ್ಥರು
ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಕರೆದೋಯ್ದಾಗಲೂ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಅಲ್ಲಿನ ವೈದ್ಯರು ಸಲಹೆ ನೀಡಿದ್ದರು.

ಮಗುವಿನ ಕುತ್ತಿಗೆಗೆ ಕರುಳ ಬಳ್ಳಿ ಸಿಕ್ಕು ಪರದಾಟ ನಡೆಸುತ್ತಿದ್ದ ಮಹಿಳೆಯ ಹೆರಿಗೆಯನ್ನು
ತುರ್ತು ತಜ್ಞ ರವಿ ಬಡಿಗೇರ್, 108 ಪೈಲೆಟ್ ದಸ್ತಗೀರ್ ಸಾಬ್ ಹುಡೇದ್, ಆಶಾ ಕಾರ್ಯಕರ್ತೆ ಮುತ್ತವ್ವ ಮಾಡಿಸಿಕೊಂಡಿದ್ದಾರೆ.

ಗದಗ ಕೃಷಿ ಅಧಿಕಾರಿ ಮನೆ, ಕಚೇರಿ ಮೇಲೆ ಎಸಿಬಿ ದಾಳಿ; ಇನ್ನೋವಾ ಕಾರು, ದಾಖಲೆ ವಶ

ವಿಜಯಸಾಕ್ಷಿ ಸುದ್ದಿ, ಗದಗ:

ಬೆಳ್ಳಂಬೆಳಗ್ಗೆ ಗದಗ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ದಾಖಲೆಗಳ ತಲಾಶ್ ನಡೆಸಿದ್ದಾರೆ.

ಮಂಗಳವಾರ (ನ.23) ಮಧ್ಯಾಹ್ನವೇ ಗದಗ ನಗರದಲ್ಲಿ ಬೀಡು ಬಿಟ್ಟಿದ್ದ ಎಸಿಬಿ ಅಧಿಕಾರಿಗಳು ಇಂದು ಮುಂಜಾವಿನಲ್ಲಿ ನಗರದ ಹುಡ್ಕೋ ಕಾಲನಿಯಲ್ಲಿರುವ ಅವರ ನಿವಾಸ ಹಾಗೂ ನೌಕರರ ಭವನದ ಪಕ್ಕವಿರುವ ಕೃಷಿ ಇಲಾಖೆಯ ಕಚೇರಿ ಮೇಲೆ ಹಾವೇರಿ ಎಸಿಬಿ ಇನ್ಸ್ ಪೆಕ್ಟರ್ ಬಸವರಾಜ್ ಬುದ್ನಿ ಹಾಗೂ ದಾವಣಗೆರೆ ಎಸಿಬಿ ಇನ್ಸ್‌ಪೆಕ್ಟರ್ ರವೀಂದ್ರ ಕುರಬಗಟ್ಟಿ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

ರುದ್ರೇಶಪ್ಪ ಟಿ. ಎಸ್. ಅವರಿಗೆ ಸಂಬಂಧಿಸಿದ ಗದಗ ನಗರ ಸೇರಿದಂತೆ ದಾವಣಗೆರೆಯ ಚೆಳ್ಳಕೆರೆಯಲ್ಲಿರುವ ನಿವಾಸ ಮತ್ತು ತೋಟ, ಶಿವಮೊಗ್ಗ ಚಾಲುಕ್ಯ ಬಡಾವಣೆ ಹಾಗೂ ಗೋಪಾಳದ ನಿವಾಸ, ಹಾವೇರಿ ಸೇರಿ ಐದು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, ಒಂದು ಇನ್ನೋವಾ ಕಾರು ಹಾಗೂ ನಗದು ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಅಧಿಕವಾಗಿ ಅಕ್ರಮ ಆಸ್ತಿ ಗಳಿಕೆ ಮಾಡಿರುವ ಶಂಕೆ ಇದ್ದು, ಅಧಿಕಾರಿಗಳು ಕಳೆದ ನಾಲ್ಕು ಗಂಟೆಯಿಂದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅಧಿಕಾರಿ ರುದ್ರೇಶಪ್ಪ ಅವರನ್ನು ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಪಡೆದಿದ್ದಾರೆ.

error: Content is protected !!