Home Blog Page 3226

ಇಂದು ಗದಗ ಜಿಲ್ಲೆಯ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ : ಡಿಸಿ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಜಿಲ್ಲೆಯಲ್ಲಿ ಶುಕ್ರವಾರ ನಿರಂತರವಾಗಿ ಮಳೆಯಾಗುತ್ತಿದ್ದು, ಶನಿವಾರ ಸಹ ಮಳೆ ಮುಂದುವರಿಯುವದಾಗಿ ಹವಾಮಾನ ಇಲಾಖೆ ವರದಿ ನೀಡಿದೆ. ಮಕ್ಕಳ ಸುರಕ್ಷತೆ ಹಾಗೂ ಮುಂಜಾಗ್ರತೆ ಹಿತದೃಷ್ಟಿಯಿಂದ ನಾಳೆ, ನವೆಂಬರ 20 ರಂದು ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಂ ಸುಂದರೇಶ್ ಬಾಬು ಆದೇಶ ಹೊರಡಿಸಿದ್ದಾರೆ.

ಶಾಲಾ ಕಾಲೇಜುಗಳಿಗೆ ರಜೆ ನೀಡಿರುವ ಕುರಿತು ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳ ಮುಖ್ಯಸ್ಥರಿಗೆ, ವಿದ್ಯಾರ್ಥಿ ಪಾಲಕರಿಗೆ ಮಾಹಿತಿ ನೀಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.

ಎಂಎಲ್‌ಸಿ ಟಿಕೆಟ್‌ಗಾಗಿ ಕಾಂಗ್ರೆಸ್ ಪಾಳೆಯದಲ್ಲಿ ಪೈಪೋಟಿ; ಅಧಿಕಾರ ಅನುಭವಿಸಿದ ಸಲೀಂಗೆ ಬೇಡ, ಇಸ್ಮಾಯಿಲ್‌ಗೆ ಕೊಡಿ

ವಿಜಯಸಾಕ್ಷಿ ಸುದ್ದಿ, ಧಾರವಾಡ/ಗದಗ:

ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಧಾರವಾಡ ಎಂಎಲ್‌ಸಿ ಟಿಕೆಟ್ ಗಿಟ್ಟಿಸಿಕೊಳ್ಳಲು ಆಕಾಂಕ್ಷಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಈಗಾಗಲೇ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪ್ರದೀಪ ಶೆಟ್ಟರ್ ಅವರ ಹೆಸರು ಅಂತಿಮಗೊಂಡಿದ್ದು, ಬಿಜೆಪಿ ಜನ ಸ್ವರಾಜ್ ಯಾತ್ರೆ ಮೂಲಕ ಬಿರುಸಿನ ಪ್ರಚಾರ ನಡೆಸಿದೆ.

ಧಾರವಾಡ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡವುದು ಪಕ್ಕಾ ಆಗಿದೆ. ಅದರಲ್ಲಿ ಕೆಪಿಸಿಸಿ ಕಾಯಾಧ್ಯಕ್ಷ ಸಲೀಂ ಅಹ್ಮದ್ ಅವರಿಗೆ ನೀಡಬೇಕೆಂದು ಹೈಕಮಾಂಡ್ ನಿರ್ಧರಿಸಿದೆಯಾದರೂ ಉತ್ತರ ಕರ್ನಾಟಕ ಭಾಗದ ಅಲ್ಪಸಂಖ್ಯಾತರ ನಾಯಕ ಇಸ್ಮಾಯಿಲ್ ತಮಟಗಾರ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಅಲ್ಲದೇ, ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರೂ ಇಸ್ಮಾಯಿಲ್ ತಮಟಗಾರ ಅವರಿಗೆ ಎಂಎಲ್‌ಸಿ ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಒಟ್ಟು 16 ಜನ ಅಲ್ಪಸಂಖ್ಯಾತರು ಧಾರವಾಡ ಎಂಎಲ್‌ಸಿ ಟಿಕೆಟ್ ಕೇಳಿದ್ದು, ಈಗಾಗಲೇ 25 ಎಂಎಲ್‌ಸಿ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹಿಡಿದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ.

ಡಿಕೆಶಿ ಅವರ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಇಸ್ಮಾಯಿಲ್ ತಮಟಗಾರ ಜೊತೆಗೆ ಸಲೀಂ ಅಹ್ಮದ್ ಅವರ ಹೆಸರೂ ಇದೆ. ಆದರೆ, ಹೈಕಮಾಂಡ್ ಮಾತ್ರ ಸಲೀಂ ಅಹ್ಮದ್‌ಗೆ ಮಣೆ ಹಾಕಿದ್ದು, ಅವರ ಹೆಸರನ್ನೇ ಅಂತಿಮ ಮಾಡಿಕೊಳ್ಳುವಂತೆ ಡಿಕೆಶಿಗೆ ಸೂಚಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲುಂಡಿರುವ ಸಲೀಂ ಅಹ್ಮದ್ ಹೈಕಮಾಂಡ್ ಜೊತೆ ಉತ್ತಮ ನಂಟು ಇಟ್ಟುಕೊಂಡಿದ್ದಾರೆ. ಅಲ್ಲದೇ, ಸೋನಿಯಾ ಗಾಂಧಿ ಅವರ ಕುಟುಂಬ ಸದಸ್ಯರಂತೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಬಹುತೇಕ ಕಾಂಗ್ರೆಸ್ ಟಿಕೆಟ್ ಖಚಿತವಾಗಿದೆ ಎನ್ನಲಾಗಿದೆ.

ಸಲೀಂ ಅಹ್ಮದ್ ಈ ಹಿಂದೆ ರಾಜ್ಯಸಭಾ, ವಿಧಾನ ಪರಿಷತ್ ಸದಸ್ಯರೂ ಆಗಿದ್ದಾರೆ. ಅಲ್ಲದೇ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರಲಿ, ಇರದಿರಲಿ ಸಲೀಂ ಅಹ್ಮದ್‌ಗೆ ಹುದ್ದೆ ಕೊಡುತ್ತಾರೆ. ಹೀಗಾಗಿ ಹೊಸಬರಿಗೆ ಅವಕಾಶ ಕೊಡಬೇಕು. ಅದರಲ್ಲೂ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡುವುದಾದರೆ, ಹುಬ್ಬಳ್ಳಿ-ಧಾರವಾಡ ಅಲ್ಪಸಂಖ್ಯಾತ ನಾಯಕರಾದ ಇಸ್ಮಾಯಿಲ್ ತಮಟಗಾರ, ಎ.ಎಂ.ಹಿಂಡಸಗೇರಿ, ಶಾಕೀರ್ ಸನದಿ ಅವರಿಗೆ ಟಿಕೆಟ್ ನೀಡಬೇಕು ಎಂದು ಅಲ್ಪಸಂಖ್ಯಾತ ಮುಖಂಡರು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಆನಂದಸ್ವಾಮಿ ಗಡ್ಡದ್ದೇವರಮಠ ಅಸಮಾಧಾನ

ಧಾರವಾಡ ವಿಧಾನ ಪರಿಷತ್ ಟಿಕೆಟ್‌ಗಾಗಿ ಕಾಂಗ್ರೆಸ್‌ನ ಗದಗ ಜಿಲ್ಲಾ ಮಾಜಿ ಅಧ್ಯಕ್ಷ ಜಿ.ಎಸ್.ಗಡ್ಡದ್ದೇವರಮಠ ಅವರ ಪುತ್ರ ಆನಂದಸ್ವಾಮಿ ಗಡ್ಡದ್ದೇವರಮಠ ಲಾಭಿ ನಡೆಸಿದ್ದರು. ಆದರೆ, ಹೈಕಮಾಂಡ್ ಟಿಕೆಟ್ ನೀಡದ್ದಕ್ಕೆ ಸದ್ಯ ಅಸಮಾಧಾನಗೊಂಡಿದ್ದಾರೆ. ಆದರೆ, ಮುಂಬರುವ ಲೋಕಸಭಾ ಚುನಾವಣೆಯ ವೇಳೆ ಹೊಸಬರಿಗೆ ಮಣೆ ಹಾಕಲಿದ್ದು, ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್‌ನ್ನು ಆನಂದಸ್ವಾಮಿ ಗಡ್ಡದ್ದೇವರಮಠ ಅವರಿಗೆ ನೀಡುತ್ತಾರೆ. ಈ ಕಾರಣಕ್ಕಾಗಿಯೇ ಅವರಿಗೆ ಎಂಎಲ್‌ಸಿ ಟಿಕೆಟ್ ಕೈತಪ್ಪಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಒಟ್ನಲ್ಲಿ ಸದಾ ಹೈ ಪೈ ರಾಜಕಾರಣಿಯಾಗಿರುವ ಸಲೀಂ ಅಹ್ಮದ್ ಅವರಿಗೆ ಟಿಕೆಟ್ ಸಿಕ್ಕಲ್ಲಿ ಆಯಾಸ ಪಡದೇ ಎಮ್ ಎಲ್ ಸಿ ಆಗೋದು ಪಕ್ಕಾ ಎನ್ನಲಾಗುತ್ತದೆ.

ಮೋದಿ, ಅಮಿತ್ ಶಾ ರೈತರ ಪಾದಮುಟ್ಟಿ ಕ್ಷಮೆಯಾಚಿಸಬೇಕು; ಪಾಟೀಲ್

‘ಕೇಂದ್ರ ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ಧಿ ಬಂತು

ವಿಜಯಸಾಕ್ಷಿ ಸುದ್ದಿ, ಗದಗ:

ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆದಿರುವುದು ರೈತಾಪಿ ಸಮುದಾಯಕ್ಕೆ ಸಮಾಧಾನ ಮೂಡಿಸಿದೆ. ನನಗಂತೂ ಸಂತೋಷ ತಂದಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ.ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ವಿಡಿಯೋ ಮೂಲಕ ಸಂತಸ ವ್ಯಕ್ತಪಡಿಸಿರುವ ಅವರು, ‘ಕೇಂದ್ರ ಸರ್ಕಾರದ ನೀತಿ ಕೆಟ್ಟ ಮೇಲೆ ಮತಿ ಬಂತು ಎಂಬ ಹಾಗಾಗಿದೆ. ಕೇಂದ್ರ ಸರ್ಕಾರ ಕೆಟ್ಟ ಕಾನೂನುಗಳನ್ನು ಮಾಡುವ ಮೂಲಕ ಸಿರಿವಂತರಿಗೆ ಸಹಾಯ ಮಾಡುವ ದುರಾಲೋಚನೆ ಇಟ್ಟುಕೊಂಡಿದ್ದರು. ರೈತರನ್ನು ಬಗ್ಗು ಬಡಿಯಬೇಕೆಂಬ ಆಲೋಚನೆಗೆ ಪೂರ್ಣ ವಿರಾಮ ಸಿಕ್ಕಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರ ಮಾಡಿದಂತಹ ತಪ್ಪಿನಿಂದಾಗಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ನಿರಂತರ ಹೋರಾಟ, ಸತ್ಯಾಗ್ರಹ ನಡೆದಾಗ ರೈತರ ಮೇಲೆ ಜೀಪ್ ಹಾಯಿಸಿ ಕೊಲ್ಲುವ ಮಟ್ಟಕ್ಕೆ ಹೋದ ರಾಜಕೀಯ ನಾಯಕರು, ಬಿಜೆಪಿ ಕಾರ್ಯಕರ್ತರು ಉತ್ತರಿಸಬೇಕು. ಅಡುಗೆ ಆದ ಮೇಲೆ ಒಲೆ ಹತ್ತಿದ ಹಾಗೆ, ಪರವಾಗಿಲ್ಲ ಇಷ್ಟೆಲ್ಲಾ ಗಲಾಟೆಗಳಾದ ಮೇಲಾದರೂ ವಾಪಸ್ ಪಡೆದರಲ್ಲ. ಪಶ್ಚಾತ್ತಾಪದ ಮೊದಲ ಹೆಜ್ಜೆ ಇದಾಗಿದೆ ಎಂದರು.

ಕೇಂದ್ರ ಸರ್ಕಾರ, ಹೋರಾಟದಲ್ಲಿ ಮರಣ ಹೊಂದಿದ ರೈತರಿಗೆ ಪರಿಹಾರ ಕೊಡಬೇಕು. ಪ್ರತಿಭಟನೆ ಮಾಡುತ್ತಿರುವ ರೈತರನ್ನು ನಕಲಿ ರೈತರು, ದೇಶದ್ರೋಹಿಗಳು, ಭಯೋತ್ಪಾದಕರು ಎಂದಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ರೈತರ ಪಾದಮುಟ್ಟಿ ಕ್ಷಮೆಯಾಚಿಸಬೇಕು ಎಂದಿರುವ ಅವರು, ಇದು ಕಾಂಗ್ರೆಸ್ ಪಕ್ಷದ ನಾಯಕರ ದಿಟ್ಟ ನಿಲುವಿಗೆ ಸಿಕ್ಕ ಜಯ ಇದಾಗಿದೆ ಎಂದು ಎಚ್.ಕೆ.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲಕ್ಷಾಂತರ ರೂ. ಮೌಲ್ಯದ ಅನ್ನಭಾಗ್ಯ ಅಕ್ಕಿ ವಶ; ದಂಧೆಕೋರ ವೀರೇಶ್ ಬಡಿಗೇರನಿಗೆ ಬಿಸಿ!

ಮುಂಡರಗಿ ಪೊಲೀಸರಿಗೆ ಕಾಣಿಸದ್ದು; ಕೊಟ್ಟೂರ ಪೊಲೀಸರಿಗೆ ಕಾಣಿಸಿತು!

ವಿಜಯಸಾಕ್ಷಿ ಸುದ್ದಿ, ಗದಗ/ಕೊಟ್ಟೂರು:

ಗದಗ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಗೆ ಕನ್ನ ಹಾಕುತ್ತಿರುವುದು ಹೊಸತೇನಲ್ಲ. ನಿತ್ಯ ಜನರಿಂದ ಕಾಳಸಂತೆಯಲ್ಲಿ ಪಡಿತರ ಅಕ್ಕಿ ಖರೀದಿಸಿ ಬೇರೆಡೆ ಸಾಗಿಸುತ್ತಿದ್ದಾರೆ. ಇದು ಆಹಾರ ಮತ್ತು ಪೊಲೀಸ್ ಇಲಾಖೆಗೆ ಚೆನ್ನಾಗಿಯೇ ಗೊತ್ತಿದೆ. ಆದರೂ, ಅಕ್ಕಿ ದಂಧೆಗೆ ಕಡಿವಾಣ ಹಾಕಲು ಮುಂದಾಗುತ್ತಿಲ್ಲ.

ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುವ ವಾಹನಗಳು ರಾಜಾರೋಷವಾಗಿ ಸಂಚರಿಸುತ್ತಿದ್ದು, ಗದಗ ಜಿಲ್ಲಾ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಅದರಲ್ಲೂ ಜಿಲ್ಲೆಯ ಮುಂಡರಗಿ ಪೊಲೀಸರ ಕಾರ್ಯವೈಖರಿ ಎದ್ದು ಕಾಣುತ್ತದೆ.

ಹೌದು, ಅಕ್ರಮವಾಗಿ ಪಡಿತರ ಅಕ್ಕಿ ದಂಧೆ ನಡೆಸುತ್ತಿದ್ದ ಗದಗ ಜಿಲ್ಲೆಯ ಅಕ್ಕಿ ದಂಧೆಕೋರನಿಗೆ, ವಿಜಯನಗರ ಜಿಲ್ಲೆಯ ಕೊಟ್ಟೂರ ಪೊಲೀಸರು ಹೆಡಿಮುರಿ ಕಟ್ಟಿದ್ದಾರೆ. ಕಾಳಸಂತೆಯಲ್ಲಿ ಪಡಿತರ ಅಕ್ಕಿ ಖರೀದಿಸಿ ಅದನ್ನು ಬೇರೆ ಜಿಲ್ಲೆಗೆ ಸಾಗಿಸುತ್ತಿದ್ದ ಮುಂಡರಗಿಯ ಮೈಲಾರಲಿಂಗೇಶ್ವರ ಟ್ರೇಡರ್‌ನ ಮಾಲೀಕ ವೀರೇಶ್ ಬಡಿಗೇರ ಎಂಬುವವನಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಹಲವು ವರ್ಷಗಳಿಂದ ಅಕ್ಕಿ ದಂಧೆ ಮಾಡುತ್ತಾ ಬಂದಿರುವ ವಿರೇಶ್ ಮುಂಡರಗಿಯಿಂದ ಮಂಡ್ಯ ಜಿಲ್ಲೆಯ ಹುಲಿವಾಹನ ಗ್ರಾಮಕ್ಕೆ ಅಕ್ಕಿ ಸರಬರಾಜು ಮಾಡುತ್ತಿದ್ದ ಗೂಡ್ಸ್ ವಾಹನದ ಮೇಲೆ ದಾಳಿ ನಡೆಸಿರುವ ಕೊಟ್ಟೂರ ಪೊಲೀಸರು, ಪಟ್ಟಣದ ಹೊರವಲಯದ ಇಟ್ಟಿಗಿ ರಸ್ತೆಯಲ್ಲಿ ವೀರೇಶ್ ಬಡಿಗೇರನಿಗೆ ಸೇರಿರುವ ಒಟ್ಟು 5,15,160 ರೂ. ಮೌಲ್ಯದ 50 ಕೆ.ಜಿ.ಯ ಒಟ್ಟು 360 ಮೂಟೆಗಳನ್ನು ಜಪ್ತಿ ಮಾಡಿದ್ದಾರೆ. ಚಾಲಕ ಪಾಲಾಕ್ಷ್ ಎಂಬಾತನನ್ನು ಬಂಧಿಸಲಾಗಿದೆ.

ಈ ಹಿಂದೆಯೂ ವೀರೇಶ್ ಬಡಿಗೇರನಿಗೆ ಸೇರಿದ್ದು ಎನ್ನಲಾದ ಅನ್ನಭಾಗ್ಯ ಅಕ್ಕಿ ತುಂಬಿದ ಲಾರಿಯೊಂದು ಮುಂಡರಗಿ-ಮುರ್ಲಾಪುರ ರಸ್ತೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಮಾಹಿತಿದಾರರು ನೀಡಿದ ಮಾಹಿತಿ ಮೇರೆಗೆ ಮುಂಡರಗಿ ಪೊಲೀಸರು ದಾಳಿ ನಡೆಸಿ ವಾಹನ ಸಮೇತ ಲಕ್ಷಾಂತರ ರೂ. ಮೌಲ್ಯದ ಅನ್ನಭಾಗ್ಯ ಅಕ್ಕಿ ವಶಪಡಿಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಪೊಲೀಸ್ ದಾಖಲೆಗಳ ಪ್ರಕಾರ ವೀರೇಶ್ ಮುಂಡರಗಿಯಿಂದ ಮಂಡ್ಯದ ಹುಲಿವಾಹನ ಗ್ರಾಮಕ್ಕೆ ಅಕ್ಕಿ ಸರಬರಾಜು ಮಾಡುತ್ತಿದ್ದ ಎಂದು ಗೊತ್ತಾಗಿದೆ. ಆದರೆ, ಮುಂಡರಗಿ ಪೊಲೀಸರಿಗೆ ಕಾಣಿಸದ ಅಕ್ಕಿ ಸಾಗಾಟ ವಾಹನ, ವಿಜಯನಗರ ಜಿಲ್ಲೆಯ ಕೊಟ್ಟೂರ ಪೊಲೀಸರಿಗೆ ಕಾಣಿಸಿದ್ದು ಹೇಗೆ? ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

ಇನ್ನು ಅಷ್ಟೊಂದು ಪ್ರಮಾಣದ ಪಡಿತರ ಅಕ್ಕಿ ತುಂಬಿಕೊಂಡ ಗೂಡ್ಸ್ ವಾಹನ ಮುಂಡರಗಿ ಪಟ್ಟಣದಿಂದ ಹೊರ ಹೋಗಿದ್ದು ಹೇಗೆ? ಇದು ಪೊಲೀಸ್ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿರಲಿಲ್ಲವೇ? ಅಥವಾ ಗೊತ್ತಿದ್ದರೂ ಜಾಣ ಕುರುಡುತನ ಪ್ರದರ್ಶಿಸಿದ್ದು ಏಕೆ? ಎಂಬ ಸಂಶಯ ಜಿಲ್ಲೆಯ ಜನರಲ್ಲಿ ವ್ಯಕ್ತವಾಗುತ್ತದೆ.

ಅಲೆ, ಬಿರುಗಾಳಿ, ಸುನಾಮಿಯಲ್ಲಿ ಕಾಂಗ್ರೆಸ್ ಪಕ್ಷ ಕೊಚ್ಚಿಕೊಂಡು ಹೋಗಲಿದೆ

ವಿಜಯಸಾಕ್ಷಿ ಸುದ್ದಿ, ಗದಗ:

ರಾಜ್ಯ ಸರ್ಕಾರದ ವಿರುದ್ಧ ಅಲೆ ಎದ್ದಿದೆ, ಇದರಲ್ಲಿ ಸರ್ಕಾರ ಕೊಚ್ಚಿಕೊಂಡು ಹೋಗುತ್ತದೆ ಎಂದು ಸಿದ್ರಾಮಯ್ಯ ಹೇಳುತ್ತಿದ್ದು, ಅಲೆ, ಬಿರುಗಾಳಿ, ಸುನಾಮಿ ಎಂಬ ಶಬ್ದಗಳು ಕಾಂಗ್ರೆಸ್ ಪಕ್ಷಕ್ಕೆ ಸೇರಿವೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ಇಂದು ಗದಗ ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, 2023ರ ವಿಧಾನಸಭಾ ಚುನಾವಣೆವರೆಗೂ ಕಾಯಬೇಕಿಲ್ಲ. ಅವರು ಹೇಳಿದಂತೆ, ಸದ್ಯ ನಡೆಯುತ್ತಿರುವ ಎಂಎಲ್ಸಿ ಚುನಾವಣೆಯಲ್ಲಿ ಸೋಲುನ್ನುವ ಮೂಲಕ ಅಲೆ, ಬಿರುಗಾಳಿ, ಸುನಾಮಿಯಲ್ಲಿ ಕಾಂಗ್ರೆಸ್ ಕೊಚ್ಚಿಕೊಂಡು ಹೋಗುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.

ಮಾಜಿ ಸಿಎಂ ಸಿದ್ರಾಮಯ್ಯ ಬೂಟಾಟಿಕೆ ನಡೆಸುತ್ತಿದ್ದು, ಅವರ ನಡೆ ನುಡಿ ನೋಡಿದರೆ ಹೊಸ ಟ್ರೆಂಡ್ ಆರಂಭಿಸಿದ್ದಾರೆ. ಅವರು ಹಾವಾಡಿಗರಂತೆ ಮಾತನಾಡುತ್ತಿದ್ದಾರೆ ಎಂದ ಅವರು, ಸಿದ್ರಾಮಯ್ಯ ಅವರ ನಾಯಕತ್ವವನ್ನು ಸ್ವಪಕ್ಷದವರೇ ಸ್ವೀಕರಿಸಲು ತಯಾರಿಲ್ಲ. ನಿನ್ನೆ ಯಾವುದೋ ಒಂದು ಕಾಂಗ್ರೆಸ್ ಸಮಾರಂಭದಲ್ಲಿ ಜಮೀರ್ ಅಹ್ಮದ್ ಗೆ ಜೈಕಾರ ಹಾಕಿದ್ದಕ್ಕೆ ಮಾಜಿ ಸಿಎಂ ಸಿದ್ರಾಮಯ್ಯ ಅವರು ತಮ್ಮ ಭಾಷಣ ಮೊಟಕುಗೊಳಿಸಬೇಕಾಯಿತು. ಹೀಗಾಗಿ ಅವರಲ್ಲಿಯೇ ಹೊಂದಾಣಿಕೆ ಇಲ್ಲ. ಸಿದ್ರಾಮಯ್ಯ, ಡಿಕೆಶಿ, ಪರಮೇಶ್ವರ ಎಂಬ ಮೂರು ಬಣಗಳಿದ್ದು, ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲಾಗಿದೆ ಎಂದು ವ್ಯಂಗ್ಯವಾಡಿದರು.

ರಾಜ್ಯದ 25 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಜನಸ್ವರಾಜ್ ಯಾತ್ರೆ ಮೂಲಕ ಬಿಜೆಪಿ ನಾಲ್ಕು ತಂಡಗಳಾಗಿ ಪ್ರಚಾರ ನಡೆಸಲಿದೆ. ಇಂದು ಮಾಜಿ ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಯಲ್ಲಾಪುರದಿಂದ, ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೊಪ್ಪಳದಿಂದ ಪ್ರಚಾರ ಕಾರ್ಯ ಆರಂಭಿಸಲಾಗುತ್ತಿದೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಬಿಟ್ ಕಾಯಿನ್ ಪ್ರಕರಣವನ್ನು ಸಿಬಿಐ, ಇಡಿಗೆ, ಎನ್ಪೋರ್ಸ್ ಮೆಂಟ್ ಗೆ ಕೊಡಬೇಕೋ ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಇದಕ್ಕೆ ಸರ್ಕಾರವೂ ಒಪ್ಪಿಗೆ ನೀಡಲಿದೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯಾಕರ್ ನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಗಳಿದ್ದರೂ ಅವರಿಗೆ ತಕ್ಕ ಶಾಸ್ತಿ ಆಗಲಿದೆ. ತಪ್ಪಿತಸ್ಥರು ಪಾತಾಳದಲ್ಲಿ ಅಡಗಿದ್ದರೂ ಅಂತವರನ್ನು ಕರೆ ತರುವ ಶಕ್ತಿ ಸರ್ಕಾರಕ್ಕೆ ಇದೆ.

ಆದ್ರೆ, ಕಾಂಗ್ರೆಸ್ ನಾಯಕರು ಇದನ್ನು ಹೇಳಲು ತಯಾರಿಲ್ಲ. ಬಿಟ್ ಕಾಯಿನ್ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲೆಗಳಿದ್ದರೆ ಸಿದ್ರಾಮಯ್ಯ ಅವರು ಬಿಡುಗಡೆ ಮಾಡಬೇಕು. ವಿನಾಕಾರಣ ಬಿಜೆಪಿ ಮೇಲೆ ಆರೋಪ ಹೊರಿಸುವುದು ಸರಿಯಲ್ಲ. ಕಾಂಗ್ರೆಸ್ ಬಿಜೆಪಿ ಮೇಲೆ ಕೆಸರೆರಚಲು ಮುಂದಾಗುತ್ತಿದೆ. ಮಾಜಿ ಸಿಎಂ ಬಳಕೆ ಮಾಡದ ಪದಗಳನ್ನು ಸಿದ್ರಾಮಯ್ಯ ಬಳಸುತ್ತಿದ್ದಾರೆ. ಕಾಂಗ್ರೆಸ್ ನವರು ಸತ್ಯಕ್ಕೆ ದೂರವಾದದ್ದನ್ನೇ ಮಾತನಾಡುತ್ತಿದ್ದು, ಕಾಂಗ್ರೆಸ್ ವೊಂದು ಸುಳ್ಳಿನ ಪ್ಯಾಕ್ಟರಿ ಇದ್ದಂತೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಈ ಸಂದರ್ಭದಲ್ಲಿ ಎಸ್ ಎಚ್ ಶಿವನಗೌಡರ ಉಪಸ್ಥಿತರಿದ್ದರು.

ಕೆಪಿಎಸ್‌ಗೆ ಮೂರು ಕೊಠಡಿ ಬಳಸಿಕೊಳ್ಳುವಂತೆ ಬಿಇಒ ಆದೇಶ

0

ವಿಜಯಸಾಕ್ಷಿ ಸುದ್ದಿ, ನರಗುಂದ:

ತಾಲೂಕಿನ ಚಿಕ್ಕನರಗುಂದ ಗ್ರಾಮದ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಹಾಗೂ ಪ್ರೌಢಶಾಲೆಗೆ ಬುಧವಾರ ಬಿಇಒ ಆರ್.ಎಸ್.ಕುಡಚಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇದೇ ವೇಳೆ ಪ್ರಾಥಮಿಕ ಶಾಲೆಯ ಕೊಠಡಿಗಳನ್ನು ಪರಿಶೀಲಿಸಿದ ಅವರು, ಕರ್ನಾಟಕ ಪಬ್ಲಿಕ್ ಶಾಲೆಯ ತರಗತಿಗಳಿಗೆ ಯೋಗ್ಯವಾಗಿರುವ ಮೂರು ಕೊಠಡಿಗಳನ್ನು ಬಳಸಿಕೊಳ್ಳುವಂತೆ ಆದೇಶಿಸಿದರು.

ಇನ್ನು ಗ್ರಾಪಂ ಅಧ್ಯಕ್ಷ ಮುತ್ತು ರಾಯರೆಡ್ಡಿಯವರು ವಲಯ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಅವ್ಯವಸ್ಥೆಯ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರು.

ಸ್ಥಳದಲ್ಲಿದ್ದ ಬಿಆರ್‌ಪಿ ಹಾಗೂ ಸಿಆರ್‌ಪಿಗಳಿಗೆ ಶೀಘ್ರವೇ ಸರಿಪಡಿಸುವಂತೆ ಬಿಇಒ ಸೂಚಿಸಿದರಲ್ಲದೇ, ಮಧ್ಯಾಹ್ನದ ಬಿಸಿಯೂಟದ ಆಹಾರ ಧಾನ್ಯಗಳ ದಾಸ್ತಾನು ಕೊಠಡಿಯ ಅವ್ಯವಸ್ಥೆ ಕಂಡು ಶಿಕ್ಷಕ ಎಫ್.ಜಿ.ಆಯಟ್ಟಿಯವರನ್ನು ತರಾಟೆಗೆ ತೆಗೆದುಕೊಂಡರು. ‘ಈಗಾಗಲೇ ನಮ್ಮ ಶಾಲೆಯಲ್ಲಿ ಪಿಂಕ್ ಶೌಚಾಲಯ ಕಾಮಗಾರಿ ಪ್ರಗತಿಯಲ್ಲಿದೆ.

ಮಕ್ಕಳ ಸಂಖ್ಯೆ ಹೆಚ್ಚಾಗಿರುವುದರಿಂದ ಎಲ್ಲಾ ಮಕ್ಕಳಿಗೆ ಶೌಚಾಲಯದ ಕೊರತೆ ಉಂಟಾಗುತ್ತದೆ. ಹೀಗಾಗಿ ಹೆಚ್ಚುವರಿ ಶೌಚಾಲಯ ಕಲ್ಪಿಸಬೇಕು ಎಂದು ಪ್ರೌಢಶಾಲೆಯ ಮುಖ್ಯ ಶಿಕ್ಷಕ ವ್ಹಿ.ಎನ್.ಬೋಸ್ಲೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಬಾಪು ಹಿರೇಗೌಡ್ರ, ಶರಣಬಸಪ್ಪ ಹಳೇಮನಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಎಸ್‌ಡಿಎಂಸಿ ಅಧ್ಯಕ್ಷ ಹನಮರಡ್ಡಿ ರಾಯರಡ್ಡಿ, ಬಿಆರ್‌ಪಿ ಎಂ.ಬಿ.ಪಾಟೀಲ್, ಸಿಆರ್‌ಪಿ ಡಿ.ಎಸ್.ಕಾನಣ್ಣವರ್, ಮುಖ್ಯ ಶಿಕ್ಷಕ ವ್ಹಿ.ಜಿ.ಬೋಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

‘ದವಾಖಾನಿ ಇದು, ಗಪ್ ನಿಲ್ಲು, ಇಲ್ಲ ಹೊರಗ್ ಬಾ…!’ ಶವದ ಮುಂದೆ ತಾಯಿಯನ್ನು ಬೆದರಿಸಿದ ಪೊಲೀಸರು!

*ವಿಡಿಯೋ ವೈರಲ್

ವಿಜಯಸಾಕ್ಷಿ ಸುದ್ದಿ, ಗದಗ:

‘ದವಾಖಾನಿ ಇದು, ಗಪ್ ನಿಲ್ಲು, ಇಲ್ಲ ಹೊರಗ್ ಬಾ…!’ ಮಗನ ಶವದ ಮುಂದೆ ಕಣ್ಣೀರು ಹಾಕುತ್ತಾ ನಿಂತಿದ್ದ ಸಂತೋಷನ ಅಮಾಯಕ ತಾಯಿಗೆ ಪೊಲೀಸರು ಈ ರೀತಿ ಬೆದರಿಸಿದ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.

ಮೃತ ಸಂತೋಷನದ್ದು ಸಹಜ ಸಾವಾಗಿದ್ದರೆ, ಪೊಲೀಸರು ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದ ತಾಯಿಯ ಜತೆಗೆ ದುರ್ವರ್ತನೆ ತೋರುತ್ತಿರಲಿಲ್ಲ. ಅಲ್ಲದೆ, ಪೊಲೀಸರ ಈ ನಡವಳಿಕೆ, ಸಂತೋಷ ಪೊಲೀಸರ ಹೊಡೆತದಿಂದಲೇ ಸತ್ತಿದ್ದಾನೆ ವಿನಾ ಹೃದಯಾಘಾತದಿಂದ ಅಲ್ಲ. ಸಂತೋಷನದು ಸಹಜ ಸಾವಲ್ಲ ಎಂಬುದನ್ನು ಸಾಕ್ಷೀಕರಿಸಿದಂತಿದೆ ಎಂದು ಮೂಲಗಳು ಹೇಳುತ್ತಿವೆ.

ಹೋದವನು ಬಂದಿದ್ದು ಹೆಣವಾಗಿ:

ಸಂತೋಷ ಕರ್ಕಿಕಟ್ಟಿ ನ. 4 ರಂದು ದೀಪಾವಳಿ ಅಮಾವಾಸ್ಯೆಯಂದು ತಾನೇ 112ಗೆ ಕರೆ ಮಾಡಿ ಅದೇ ವಾಹನದಲ್ಲಿ ಪೊಲೀಸ್ ಠಾಣೆಗೆ ಹೋಗಿದ್ದ ಎನ್ನಲಾಗುತ್ತದೆ. ಹಾಗೆ ಹೋದವನು ಅರ್ಧ ಗಂಟೆಯಲ್ಲಿಯೇ ವಾಪಸ್ ಮನೆಗೆ ಬಂದಿದ್ದಾನೆ. ಬಂದ ಒಂದು ಗಂಟೆಯಲ್ಲಿ ಶಹರ ಠಾಣೆಯಿಂದ ಪೊಲೀಸರು ಕರೆ ಮಾಡಿದ್ದಾರೆ. ಆ ಕಡೆಯಿಂದ ಮಾತಾಡಿದ್ದು ಯಾರು ಅಂತ ಗೊತ್ತಾಗಿಲ್ಲ. ಸಂತೋಷ ಮಾತ್ರ ‘ಬಂದೆ ಸರ್’ ಅಂದವನೇ, ಮನೆಯಲ್ಲಿ ಪೊಲೀಸ್ ಸ್ಟೇಶನ್‌ಗೆ ಹೋಗಿ ಬರ್ತೀನಿ ಅಂತ ಹೇಳಿ ಹೋಗಿದ್ದಾನೆ.

ಮೊದಲ ಬಾರಿಗೆ ಹೋಗಿ ವಾಪಸ್ ಬಂದ ಸಂತೋಷ್, ಎರಡನೇ ಸಾರಿ ಆಚೆ ಹೋಗಿ ಮರಳಿ ಮನೆಗೆ ಬಂದಿದ್ದು ಮಾತ್ರ ಹೆಣವಾಗಿ! ಹಾಗಿದ್ದರೆ, ಪೊಲೀಸ್ ಠಾಣೆಗೆ ಬರುವಂತೆ ಸಂತೋಷನಿಗೆ ಕರೆ ಮಾಡಿದ್ದು ಯಾರು? ಅಲ್ಲದೆ, ಸಂತೋಷ ಪೊಲೀಸ್ ಠಾಣೆಗೆ ಬಂದಾಗ ಕರ್ತವ್ಯದಲ್ಲಿದ್ದವರು ಯಾರ್ಯಾರು? ಎಂಬ ಸಾರ್ವಜನಿಕರ ಪ್ರಶ್ನೆಗಳಿಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉತ್ತರಿಸಬೇಕಾಗಿದೆ.

ಸಂತೋಷ್ ಶಹರ ಪೊಲೀಸ್ ಠಾಣೆಗೆ ಬಂದಿದ್ದ ವೇಳೆ ಅಲ್ಲಿದ್ದ ಸಾರ್ವಜನಿಕರು ಯಾರು? ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರೇ ಹೇಳುವ ಹಾಗೆ, ಪಿಟ್ಸ್ ಅಥವಾ ಎದೆನೋವು ಕಾಣಿಸಿಕೊಂಡಾಗ ವಾಹನದಲ್ಲಿ ಜನರು ಎತ್ತಿ ಹಾಕಿದ್ದಾರೆ ಅಂತೆ. ಹಾಗಿದ್ದರೆ, ಆ ಜನ ಯಾರು?.

ಜೂಜಾಟದಲ್ಲಿ ಸಿಕ್ಕಿಬಿದ್ದವರು ಯಾರು?:

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ ಹಲವರನ್ನು ಠಾಣೆಗೆ ಕರೆ ತರಲಾಗಿತ್ತು ಅಂತೆ. ಈ ವೇಳೆ ಸಂತೋಷನಿಗೆ ಪೊಲೀಸರು ಹೊಡೆದಿದ್ದು, ಹೊಡೆತದ ರಭಸಕ್ಕೆ ಅಲ್ಲೇ ಕುಸಿದು ಬಿದ್ದ ಸಂತೋಷನನ್ನು ಅಲ್ಲಿಯೇ ಇದ್ದ ಇಸ್ಟೀಟು ಜೂಜುಕೋರರೇ ವಾಹನದಲ್ಲಿ ಎತ್ತಿ ಹಾಕಿದ್ದಾರೆ ಎನ್ನಲಾಗಿದೆ. ಅದಾಗಲೇ ಸಂತೋಷನ ಪ್ರಾಣಪಕ್ಷಿ ಹಾರಿ ಹೋಗಿತ್ತಾ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಇದನ್ನು ಕಣ್ಣಾರೇ ಕಂಡ ಇಸ್ಪೀಟು ಜೂಜಾಟದಲ್ಲಿ ಸಿಕ್ಕಿಬಿದ್ದವರ ಮೇಲೆ ಪ್ರಕರಣ ದಾಖಲಾಯಿತೇ? ಅಥವಾ ಪೊಲೀಸರೇ ಹೆದರಿ ಹಾಗೆ ಬಿಟ್ಟು ಕಳುಹಿಸಿದರೇ ಎಂಬುದು ಕೂಡ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಲಾಕಪ್ ಡೆತ್ ಸುದ್ದಿ ಹರಿದಾಡಿದ್ದು ಹೇಗೆ?:

ಠಾಣೆಯಲ್ಲಿ ನಡೆದ ಈ ಪ್ರಕರಣ ಅಷ್ಟು ಬೇಗ ಹೊರಬರುತ್ತಿರಲಿಲ್ಲ. ಸುಮಾರು ಕೇಸ್‌ಗಳು ಠಾಣೆಯಿಂದ ಆಚೆಗೆ ಬರೋದೇ ಇಲ್ಲ. ಹಾಗಿದ್ದರೆ ಈ ಪ್ರಕರಣ ಹರಡಲು ಅಂದು ಸಿಕ್ಕಿ ಬಿದ್ದಿದ್ದ ಜೂಜುಕೋರರು ಕಾರಣವಾದರೇ? ಸಂಜೆ ನಡೆದ ಈ ಘಟನೆ ಎರಡೇ ಗಂಟೆಯಲ್ಲಿ ಅವಳಿ ನಗರದ ತುಂಬೆಲ್ಲ ಲಾಕಪ್ ಡೆತ್ ಆಗಿದೆ ಎಂದು ಹರಡಿದ್ದು ಹೀಗೆ ಎಂಬ ಮಾಹಿತಿಯನ್ನು ಬಲ್ಲ ಮೂಲಗಳು ತಿಳಿಸಿವೆ.

ಇನ್ನಾದರೂ ಹಿರಿಯ ಪೊಲೀಸ್ ಅಧಿಕಾರಿಗಳು ಕಾಗಕ್ಕ, ಗುಬ್ಬಕ್ಕನ ಕಥೆ ಹೇಳಿದ ಶಹರ ಠಾಣೆಯ ಪೊಲೀಸರ ಬಗ್ಗೆ ಪ್ರಾಥಮಿಕ ತನಿಖೆಯಾದರೂ ಮಾಡಲು ಮುಂದಾಗ್ತಾರಾ? ಘಟನೆಗೆ ಕಾರಣವೆನ್ನಲಾಗುವ ಒಂದಿಬ್ಬರು ಪೊಲೀಸರ ರಕ್ಷಣೆ ಮಾಡ್ತಾರಾ ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರ ನೀಡಬೇಕಿದೆ.

23.30ಲಕ್ಷ ರೂ.ಮೌಲ್ಯದ ಅಕ್ರಮ ಮದ್ಯ ವಶ

0

-ನಾಲ್ವರ ವಿರುದ್ಧ ಪ್ರಕರಣ ದಾಖಲು

-ಇಬ್ಬರುಆರೋಪಿಗಳು ಅಂದರ್

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ತಾಲೂಕಿನ ಅಳವಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹೈದರ್‌ನಗರದಲ್ಲಿ ಮಂಗಳವಾರ ರಾತ್ರಿ ಮದ್ಯ ಅಕ್ರಮ ಸಾಗಾಟ ಮಾಡುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು ಸುಮಾರು 23.30ಲಕ್ಷ ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಕೊಪ್ಪಳ ಗ್ರಾಮೀಣ ವೃತ್ತದ ಪಿಐ ವಿಶ್ವನಾಥ ಹಿರೇಗೌಡರ್ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದು ಇಬ್ಬರು ಆರೋಪಿಗಳನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ.

ಚಪ್ಪಲಿಯಲ್ಲಿ ಹೊಡೆದು ಕ್ಷಮೆ ಕೇಳೋದು ಸರಿಯಲ್ಲ

0

ವಿಜಯಸಾಕ್ಷಿ ಸುದ್ದಿ, ಗದಗ:

ಅಸ್ಪೃಶ್ಯತೆ ನಮ್ಮ ದೇಶಕ್ಕೆ ದೊಡ್ಡ ಕಳಂಕ.
ಅಂಬೇಡ್ಕರ್ ಇದಕ್ಕಾಗಿಯೇ ಜೀವನ ಸಮರ್ಪಿಸಿದ ಮಹಾನ್ ವ್ಯಕ್ತಿ. ಅದರಂತೆ, ಅಸ್ಪೃಶ್ಯತೆ ಹೊಡೆದೋಡಿಸಲು ಬ್ರಾಹ್ಮಣ ಸ್ವಾಮಿಜೀಗಳಾದ ಪೇಜಾವರ ಶ್ರೀಗಳು ಮುಂದಾಗಿದ್ದರು. ಆದರೆ, ಹಂಸಲೇಖ ಸ್ವರ್ಗಸ್ತರಾದ ಪೇಜಾವರ ಶ್ರೀಗಳ ಬಗ್ಗೆ ಮಾತನಾಡಿರುವುದು ಎಷ್ಟು ಸರಿ? ಸ್ವಾಮಿಗಳು ಮಾಂಸ ತಗೋಬೇಕೆಂದು ಹೇಳಿದ್ದು ಅಂತ್ಯಂತ ಹೀನವಾದದ್ದು.
ಅಲ್ಲದೇ, ಹಂಸಲೇಖ ವಿಕೃತಿಯಿಂದ ಮಾತನಾಡಿರುವುದನ್ನು ನೋಡಿದರೆ ಒಳಗೆ ಏನೇನೋ ತುಂಬಿಕೊಂಡಿದ್ದಾರೆ ಎಂದು ಹಂಸಲೇಖ ವಿರುದ್ಧ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹರಿಹಾಯ್ದರು.

ಇಂದು ಗದಗ ನಗರಕ್ಕೆ ಭೇಟಿ‌ ನೀಡಿದ ಸಂದರ್ಭದಲ್ಲಿ ಹಂಸಲೇಖ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಕ್ಷೇತ್ರ ಏನು? ನೀವು ಮಾತನಾಡಿದ ವಿಷಯ ಏನು? ನಿಮ್ಮ ಹೇಳಿಕೆ ನಂತರ ನಿಮ್ಮ ಹೆಂಡತಿ ಬೈದರೆಂದು ಹೇಳಿದಿರಿ. ಅವರು ನಿಮ್ಮನ್ನ ಒದ್ದು ಹೊರಗೆ ಹಾಕಬೇಕಿತ್ತು. ಇಷ್ಟು ವಯಸ್ಸಾಗಿದೆ ಏನು ಮಾತನಾಡಬೇಕೆಂಬ ಬಗ್ಗೆ ಬುದ್ಧಿ ಇಲ್ವಾ? ಎಂದು ಪ್ರಶ್ನಿಸಿದ ಅವರು ಚಪ್ಪಲಿಯಲ್ಲಿ ಹೊಡೆದು ಕ್ಷಮೆ ಕೇಳೋದು ಸರಿಯಲ್ಲ ಎಂದು ಕಿಡಿಕಾರಿದರು.

ನಿಮ್ಮ ಮನಸ್ಸಲ್ಲಿ ಕಸ, ಕಲ್ಮಶ ತುಂಬಿಕೊಂಡಿದೆ.
ಕಸ ತೆಗೆದು ಹಾಕಿ ಸ್ವಾಮೀಜಿಗಳ ಕೆಲಸವನ್ನು ಸ್ವಾಗತ ಮಾಡಬೇಕು. ಈ ರೀತಿ ಇನ್ನಷ್ಟು ಗೊಂದಲ ಸೃಷ್ಟಿಸುವುದು ಶೋಭೆ ತರುವುದಿಲ್ಲ. ಈ ರೀತಿ ಇನ್ನೊಮ್ಮೆ ಹೇಳಿಕೆ ನೀಡಿದರೆ ತಕ್ಕ ಉತ್ತರ ಕೊಡಬೇಕಾಗುತ್ತೆ ಎಂದು ಪ್ರಮೋದ್ ಮುತಾಲಿಕ್ ಹಂಸಲೇಖ ಅವರಿಗೆ ಎಚ್ಚರಿಕೆ ನೀಡಿದರು.

ಮರಳು ದಂಧೆ: ಗ್ರಾ.ಪಂ. ಅಧ್ಯಕ್ಷರ ಪುತ್ರನಿಗೆ ದಂಡ!

0
  • ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದ ಗ್ರಾಪಂ ಅಧ್ಯಕ್ಷರ ಟ್ರ್ಯಾಕ್ಟರ್ ವಶ
  • ಗಣಿ ಇಲಾಖೆಗೆ ಅಧ್ಯಕ್ಷರಿಂದ ದಂಡ ಕಟ್ಟಿಸಿ ಬಿಸಿ ಮುಟ್ಟಿಸಿದ ಪೊಲೀಸರು

ವಿಜಯಸಾಕ್ಷಿ ಸುದ್ದಿ, ಗದಗ:

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹೊಸ ಮರಳು ನೀತಿಯನ್ನೇ ಬಂಡವಾಳವಾಗಿ ಇಟ್ಟುಕೊಂಡು ಗ್ರಾಮ ಪಂಚಾಯತಿ ಬೊಕ್ಕಸಕ್ಕೆ ಕನ್ನ ಹಾಕಿ ಕೆಲವು ದಿನಗಳಿಂದ ಅವ್ಯಾಹತವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದ ಗದಗ ತಾಲೂಕಿನ ಚಿಂಚಲಿ ಗ್ರಾಮ ಪಂಚಾಯತಿ ಅಧ್ಯಕ್ಷರ ಪುತ್ರನಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಸೋಮವಾರ ಪುರದಹಳ್ಳದಲ್ಲಿ ಮರಳು ತುಂಬಿಕೊಂಡು ಚಿಂಚಲಿ-ಹುಬ್ಬಳ್ಳಿ ರಸ್ತೆಯ ಹೊನ್ನಿಗುಡ್ಡದ ಹತ್ತಿರ ಹೋಗುತ್ತಿದ್ದ ಟ್ರ್ಯಾಕ್ಟರ್ ವಶಪಡಿಸಿಕೊಂಡ ಮುಳಗುಂದ ಠಾಣೆಯ ಪೊಲೀಸರು 19,240 ರೂ. ದಂಡ ವಿಧಿಸಿದ್ದಲ್ಲದೆ, ಅಕ್ರಮ ಮರಳು ದಂಧೆ ಮಾಡದಂತೆ ಅಧ್ಯಕ್ಷರ ಮಗನಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ಹಲವು ವರ್ಷಗಳಿಂದ ಅಕ್ರಮ ಮರಳು ದಂಧೆ ನಡೆಸುತ್ತಿದ್ದ ಅಧ್ಯಕ್ಷರ ಮಗ ಕೋಳಿವಾಡ ರಸ್ತೆಯಲ್ಲಿರುವ ತಮ್ಮ ಜಮೀನಿನಲ್ಲಿ ಪ್ರತಿವರ್ಷ ನೂರಾರು ಟ್ರ್ಯಾಕ್ಟರ್ ಮರಳು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ. ಈ ಹಿಂದೆಯೂ ಈತನಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರೂ ನಿರಂತರವಾಗಿ ಮರಳು ದಂಧೆ ನಡೆಸುತ್ತಿದ್ದ. ಅಲ್ಲದೆ, ಅಧ್ಯಕ್ಷರ ಮಗನ ಮರಳು ದಂಧೆಗೆ ಸುತ್ತಮುತ್ತಲಿನ ಗ್ರಾಮಗಳ ಹಲವು ಕುಳಗಳು ಸಾಥ್ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

ಇನ್ನು ಅಧ್ಯಕ್ಷ ಹುದ್ದೆಯನ್ನೇ ದುರುಪಯೋಗ ಪಡಿಸಿಕೊಂಡು ಅಕ್ರಮ ಮರಳು ದಂಧೆ ನಡೆಸುತ್ತಿರುವುದಷ್ಟೇ ಅಲ್ಲದೆ, ಗ್ರಾ.ಪಂ.ನ ಲಕ್ಷಾಂತರ ರೂ. ಹಣ ಲೂಟಿ ಹೊಡೆದಿದ್ದಾರೆ. ಇದಕ್ಕೆ ಕಲ್ಲೂರ ಗ್ರಾಮದ ಎರಡನೇ ವಾರ್ಡ್‌ನ ಗ್ರಾಪಂ ಸದಸ್ಯನೂ ಸಾಥ್ ನೀಡುತ್ತಿದ್ದಾನೆ. ಇದೆಲ್ಲ ಅಧಿಕಾರಿಗಳಿಗೆ ಗೊತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥ ಪ್ರಕಾಶ್ ನೀಲಣ್ಣವರ ಆರೋಪಿಸಿದರು.

ಹೊಸ ಮರಳು ನೀತಿ ಹೇಳುವುದೇನು?

ಜನಸಾಮಾನ್ಯರಿಗೂ ಮರಳು ಸುಲಭವಾಗಿ ಹಾಗೂ ಕೈಗೆಟಕುವ ದರದಲ್ಲಿ ಲಭ್ಯವಾಗಲೆಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ಹೊಸ ಮರಳು ನೀತಿಗೆ ಅನುಮೋದನೆ ನೀಡಿದೆ. 1, 2 ಮತ್ತು 3ನೇ ಶ್ರೇಣಿಯ ಹಳ್ಳ/ಹೊಳೆ ಕೆರೆಗಳಲ್ಲಿ ಲಭ್ಯವಿರುವ ಮರಳನ್ನು ಗ್ರಾ.ಪಂ. ಮೂಲಕ ವಿಲೇವಾರಿ ಹಾಗೂ ನಿಯಂತ್ರಣಕ್ಕೆ ಹೊಸ ಮರಳು ನೀತಿ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾ.ಪಂ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ರಾಯಧನ ಶುಲ್ಕ (ರಾಯಲ್ಟಿ) 80 ರೂ., ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್) ಶುಲ್ಕ 8 ರೂ. (ಪ್ರತಿ ಟನ್‌ಗೆ) ಹಾಗೂ 1.6 ರೂ. ತೆರಿಗೆ ಹಣ ಸೇರಿ 90 ರೂ. ಪಾವತಿಸಿಬೇಕು. ಆಗ ಜಿಲ್ಲಾಧಿಕಾರಿಗಳು ಒಂದು ವರ್ಷದವರೆಗೆ ಮರಳು ವಿಲೇವಾರಿ ಮಾಡಲು ಕಾರ್ಯಾದೇಶ ನೀಡುತ್ತಾರೆ. ಬಳಿಕ ಗ್ರಾ.ಪಂ. ಪ್ರತಿ ಟನ್‌ಗೆ 300 ರೂ.ನಂತೆ ಮರಳು ಮಾರಾಟ ಮಾಡಬಹುದು. ಗಣಿ ಇಲಾಖೆಗೆ ಪಾವತಿಸಿ ಉಳಿಯುವ ಹಣವನ್ನು ಗ್ರಾ.ಪಂ. ತನ್ನ ವ್ಯಾಪ್ತಿಯ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಬಹುದು ಎಂದು ಗದಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವ್ಯವಸ್ಥಾಪಕ ವೀರನಗೌಡ ತಿಳಿಸಿದರು.

ಗದಗ ತಾಲೂಕು ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿಲ್ಲ. ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯ ಪುರದಹಳ್ಳದಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಈಗಾಗಲೇ ಅಲ್ಲಿನವರಿಗೆ ಮಾಹಿತಿ ನೀಡಲಾಗಿದೆ. ನಮ್ಮ ಆರ್‌ಐ ಅವರಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸುತ್ತೇನೆ. ಅವರು ವರದಿ ನೀಡಿದ ಬಳಿಕ ಅಕ್ರಮವಾಗಿ ಸಂಗ್ರಹಿಸಿದ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.

ಕಿಶನ್ ಕಲಾಲ್, ತಹಸೀಲ್ದಾರ್

ಸ್ಥಳಕ್ಕೆ ಭೇಟಿ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗುವುದು. ಗದಗ ಹಾಗೂ ಲಕ್ಷ್ಮೇಶ್ವರ ತಹಸೀಲ್ದಾರರ ಗಮನಕ್ಕೆ ತರುವುದಲ್ಲದೆ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು.

ರಾಯಪ್ಪ ಹುಣಸಗಿ, ಉಪವಿಭಾಗಾಧಿಕಾರಿ

ಹೊಸ ಮರಳು ನೀತಿಯು ಗ್ರಾ.ಪಂ.ಗಳು ಆರ್ಥಿಕವಾಗಿ ಸದೃಢವಾಗಲು ಸಹಕಾರಿಯಾಗಲಿದೆ. ಆದರೆ, ಸರ್ಕಾರದ ನಿಯಮಾನುಸಾರ ಹಣ ಪಾವತಿಸಿ ಜನಸಾಮಾನ್ಯರಿಗೆ ಮರಳು ಕೊಡಿಸುವ ಮೂಲಕ ಗ್ರಾ.ಪಂ. ಬೊಕ್ಕಸ ತುಂಬಿಸಬೇಕಿರುವ ಗ್ರಾ.ಪಂ. ಅಧ್ಯಕ್ಷರೇ ತಮ್ಮ ಮಗನನ್ನು ಅಕ್ರಮ ಮರಳು ದಂಧೆಗೆ ಇಳಿಸಿರುವುದು ದುರಂತ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕಲ್ಲೂರ, ಚಿಂಚಲಿ ವ್ಯಾಪ್ತಿಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಮರಳನ್ನು ವಶಪಡಿಸಿಕೊಳ್ಳುವ ಮೂಲಕ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.

ಚಂದ್ರಶೇಖರ್ ಆರ್.ಹರಿಜನ, ಗ್ರಾಪಂ ಸದಸ್ಯ

ನನ್ನ ಹೆಸರು ಯಲ್ಲಪ್ಪ ಅಲ್ಲ!
ಈ ಬಗ್ಗೆ ಅಧ್ಯಕ್ಷರ ಮಗನನ್ನು ಸಂಪರ್ಕಿಸಿದಾಗ, ‘ನನ್ನ ಹೆಸರು ಯಲ್ಲಪ್ಪ ಅಲ್ಲ. ಅದು ನನ್ನ ಚಿಕ್ಕಪ್ಪನ ಮಗನ ಹೆಸರು. ನನ್ನ ಹೆಸರು ಪ್ರವೀಣ್’ ಎಂದು ಚಿಂಚಲಿ ಗ್ರಾ.ಪಂ. ಅಧ್ಯಕ್ಷರ ಮಗನಾಗಿರುವ ಯಲ್ಲಪ್ಪ ಫಕ್ಕೀರಪ್ಪ ನೀಲಣ್ಣವರ ಅಲಿಯಾಸ್ ಪ್ರವೀಣ್ ಫಕ್ಕೀರಪ್ಪ ನೀಲಣ್ಣವರ ಹೇಳಿದರು.

error: Content is protected !!