Home Blog Page 3227

ತಂಗಡಗಿ ಜೀವಂತಿಕೆ ತೋರಿಸಿಕೊಳ್ಳುವ ಕಾಗದದ ಹುಲಿ: ದೊಡ್ಡನಗೌಡ

0

-ನ.18 ಜನಸ್ವರಾಜ್ ಯಾತ್ರೆಗೆ ಸಿಎಂ ಚಾಲನೆ

 

ವಿಜಯಸಾಕ್ಷಿ ಸುದ್ದಿ,

ಕೊಪ್ಪಳ: ಮಾಜಿ ಸಚಿವ ಶಿವರಾಜ ತಂಗಡಗಿಯವರನ್ನು ಮಾತ್ರವಲ್ಲ, ಅವರ ಹೇಳಿಕೆಗಳನ್ನು ಉದಾಸೀನ ಮಾಡುತ್ತೇವೆ. ಏಕೆಂದರೆ ಅವರೀಗ ಬರೀ ಕಾಗದದ ಹುಲಿ. ಜೀವಂತವಾಗಿದ್ದೇನೆ ಎಂದು ತೋರಿಸಿಕೊಳ್ಳಲು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಾ ಸದಾ ಸುದ್ದಿಯಲ್ಲಿರಲು ಪ್ರಯತ್ನಿಸುತ್ತಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ ಕಿಡಿ ಕಾರಿದರು.

ಕೊಪ್ಪಳ ಮೀಡಿಯಾ ಕ್ಲಬ್‍ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿಯವರು ಸರಕಾರದ ಅವಧಿ ಪೂರ್ಣಗೊಳ್ಳುವವರೆಗೂ ಮುಖ್ಯಮಂತ್ರಿಯಾಗಿ ಇರುತ್ತಾರೆ. ಬಿಜೆಪಿ ಶಿಸ್ತಿನ ಪಕ್ಷ. ಕಾಂಗ್ರೆಸ್ ನಾಯಕರಿಗೆ ಅದರಲ್ಲೂ ಮಾಜಿ ಸಚಿವ ಶಿವರಾಜ ತಂಗಡಗಿಯವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಹಾಗಾಗಿ ಇಂಥ ಹೇಳಿಕೆಗಳನ್ನು ನೀಡುತ್ತಾರೆ. ಅವರ ಹೇಳಿಕೆಗಳಿಗೆ ಬೆಲೆ ನೀಡುವ ಅಗತ್ಯ ಇಲ್ಲ ಎಂದು ಪಾಟೀಲ ಹೇಳಿದರು.

ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನವೆಂಬರ್ 18ರಿಂದ ಜನಸ್ವರಾಜ್ ಯಾತ್ರೆ ಆರಂಭಗೊಳ್ಳುತ್ತದೆ. ಯಾತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಕೊಪ್ಪಳದಿಂದ ಆರಂಭಗೊಳ್ಳುವ ಜನಸ್ವರಾಜ್ ಯಾತ್ರೆಯು ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ನೇತೃತ್ವದಲ್ಲಿ ಮುನ್ನಡೆಯಲಿದೆ ಎಂದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ನ.18 ಗುರುವಾರ ದಂದು ಜನಸ್ವರಾಜ್ ಯಾತ್ರೆಯ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಪಕ್ಷದ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಕೊಪ್ಪಳ ಜಿಲ್ಲಾಧ್ಯಕ್ಷ ದೊಡ್ಡನಗೌಡ ಎಚ್.ಪಾಟೀಲ ಕರೆ ನೀಡಿದರು.

ಕೊಪ್ಪಳದಲ್ಲಿ ಪ್ರಾರಂಭಗೊಳ್ಳುವ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟಿಲ್, ಕೇಂದ್ರ ಸಚಿವ ಭಗವಂತ ಖೂಬಾ, ಸಚಿವರಾದ ಮುರೇಗೇಶ್ ನಿರಾಣಿ, ವಿ.ಸೋಮಣ್ಣ, ಹಾಲಪ್ಪ ಆಚಾರ್, ಬಿಜೆಪಿ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೆದಾರ, ಎನ್.ಮಹೇಶ, ಮೈಸೂರು ಸಂಸದ ಪ್ರತಾಪಸಿಂಹ ಅವರ ಜೊತೆಗೆ ಕೊಪ್ಪಳ ಸಂಸದ ಸಂಗಣ್ಣ ಕರಡಿ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಡೇಸೂಗೂರು ಸೇರಿದಂತೆ ಅನೇಕ ಬಿಜೆಪಿ ಜನಪ್ರತಿನಿಧಿಗಳು, ಮುಖಂಡರು ಭಾಗವಹಿಸುವರು ಎಂದರು.

ವಿಧಾನ ಪರಿಷತ್ ಚುನಾವಣೆಗಾಗಿ ಬಿಜೆಪಿಯಿಂದ ಸ್ಪರ್ಧಿಸಲು ನವೀನ್‍ಕುಮಾರ್ ಗುಳಗಣ್ಣವರ್ ಹಾಗೂ ಸಿ.ವಿ.ಚಂದ್ರಶೇಖರ ಸೇರಿದಂತೆ ಮೂರು ಹೆಸರುಗಳನ್ನು ವರಿಷ್ಠರಿಗೆ ಕಳುಹಿಸಲಾಗಿದೆ. ಹಾಗೆಯೇ ರಾಯಚೂರು ಜಿಲ್ಲೆಯಿಂದ ಐದು ಹೆಸರುಗಳನ್ನು ಕಳುಹಿಸಲಾಗಿದ್ದು, ಇಂದು ನಾಳೆಯೊಳಗಾಗಿ ಪಕ್ಷವು ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಿದೆ ಎಂದರು.

ಕೊಪ್ಪಳದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಜನರಿಗೆ ತಿಳಿಸುವ ಮೂಲಕ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಸಹ ಪ್ರಭಾರಿ ಚಂದ್ರಶೇಖರಗೌಡ ಪಾಟೀಲ ಹಲಗೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ ಗುಳಗಣ್ಣವರ್, ಜಿಲ್ಲಾ ಮಾಧ್ಯಮ ಸಂಚಾಲಕ ಬಿ.ಗಿರೀಶಾನಂದ ಜ್ಞಾನಸುಂದರ, ಸಹ ಸಂಚಾಲಕ ಶ್ರೀನಿವಾಸ್ ಪೂಜಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 

ಶಾಲೆಗಳಲ್ಲಿ ಮಧ್ಯಾಹ್ನದ ಉಪಹಾರ ಯೋಜನೆಗೆ ಅಕ್ಕಿ-ಗೋಧಿ; ತೊಗರಿಬೇಳೆ, ಎಣ್ಣಿ, ಉಪ್ಪಿಲ್ಲದೆ ಊಟಕ್ಕೆಲ್ಲಿ ರುಚಿ?

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ:

ಕೋವಿಡ್-19 ಕಾರಣದಿಂದ ಹಲವು ತಿಂಗಳುಗಳ ಬಳಿಕ ಶಾಲೆಗಳು ಈಗ ಪ್ರಾರಂಭಗೊಂಡಿದ್ದು, ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಉಪಾಹಾರ ಯೋಜನೆಯೂ ಚಾಲ್ತಿಯಲ್ಲಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಆಹಾರ ಪದಾರ್ಥಗಳು ಇಲ್ಲಿಯವರೆಗೂ ಪೂರೈಕೆಯಾಗಿಲ್ಲ.

ಬಿಸಿಯೂಟ ಯೋಜನೆಗೆ ಕೇವಲ ಅಕ್ಕಿ-ಗೋಧಿ ನೀಡಿದರೆ ಸಾಕೆ? ಮುಖ್ಯವಾಗಿ ತೊಗರಿ ಬೆಳೆ, ಎಣ್ಣೆ, ಉಪ್ಪು ಸೇರಿದಂತೆ ಇತರೆ ಪದಾರ್ಥಗಳ ಸರಬರಾಜು ಯಾವಾಗ? ಎಂಬ ಪ್ರಶ್ನೆ ಉದ್ಭವಿಸುತ್ತಿದೆ.

29,207 ವಿದ್ಯಾರ್ಥಿಗಳು

6-10ನೇ ತರಗತಿಗೆ ಅಕ್ಟೋಬರ್ 21ರಂದು ಹಾಗೂ 1-5ನೇ ತರಗತಿಗಳಿಗೆ ನವೆಂಬರ್ 2ನೇ ತಾರೀಖಿನಿಂದ ಶಾಲೆಗಳಲ್ಲಿ ಮಧ್ಯಾಹ್ನದ ಉಪಾಹಾರ ಯೋಜನೆ ಪ್ರಾರಂಭವಾಗಿದ್ದು, ಎರಡೂ ತಾಲೂಕುಗಳಲ್ಲಿ ಬರುವ 167 ಬಿಸಿಯೂಟ ಕೇಂದ್ರಗಳಲ್ಲಿ ಒಟ್ಟು 29,207 ವಿದ್ಯಾರ್ಥಿಗಳ ದಾಖಲಾತಿ ಇದೆ.

ಪೂರ್ಣ ಪ್ರಮಾಣದಲ್ಲಿ ಆಹಾರ ಪೂರೈಕೆಯಾಗದೇ ಇರುವುದರಿಂದ ಸರ್ಕಾರ ಪರಿವರ್ತನಾ ವೆಚ್ಚವೆಂದು 6-10ನೇ ತರಗತಿಯ ವಿದ್ಯಾರ್ಥಿಗಳಿಗೆ 7.45 ರೂ. ಹಾಗೂ 1-5ನೇ ತರಗತಿಯ ವಿದ್ಯಾರ್ಥಿಗಳಿಗೆ 4.97 ರೂ.ಗಳನ್ನು ಖರ್ಚು ಮಾಡಲು ಅವಕಾಶವನ್ನು ಕಲ್ಪಿಸಿದೆ. ಆದರೆ ಈ ಅನುದಾನ ಶಾಲೆಗಳಲ್ಲಿ ಇದನ್ನು ಎಷ್ಟರ ಮಟ್ಟಿಗೆ ಸದ್ಬಳಕೆಯಾಗುತ್ತಿದೆ ಎಂಬುದನ್ನು ಇಲಾಖೆಯ ಅಧಿಕಾರಿಗಳು ಪರಿಶೀಲಿಸುವುದು ಅವಶ್ಯವಿದೆ.

ಗುಣಮಟ್ಟದ ಆಹಾರ ಪೂರೈಸುತ್ತಿಲ್ಲ?:

ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವ ಉದ್ದೇಶದಿಂದ ಜಾರಿಯಾದಂತಹ ಮಧ್ಯಾಹ್ನದ ಬಿಸಿಯೂಟ ಯೋಜನೆ ಪೂರ್ಣ ಪ್ರಮಾಣದಲ್ಲಿ ಆಹಾರ ಪದಾರ್ಥಗಳು ಸರಬರಾಜು ಆಗದೇ ಇರುವುದರಿಂದ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಸಲು ಸಾಧ್ಯವಾಗುತ್ತಿಲ್ಲ, ಶಾಲಾ ಸಂಚಿತ ನಿಧಿಯಿಂದ ಹಣ ಉಪಯೋಗಿಸಿಕೊಂಡು ವಸ್ತುಗಳ ಖರೀದಿಗೆ ಸರ್ಕಾರ ಆದೇಶ ನೀಡಿದೆ.

ಆದರೆ ಮಾರುಕಟ್ಟೆಗಳಲ್ಲಿ ದಿನಸಿ ವಸ್ತುಗಳು ದುಬಾರಿಯಾಗಿರುವುದರಿಂದ ಈ ಅನುದಾನ ಸಾಕಾಗುತ್ತಿಲ್ಲ ಎಂದು ಶಾಲಾ ಮುಖ್ಯೋಪಾಧ್ಯಾಯರು ಹೇಳುತ್ತಿದ್ದು, ಕೆಲವು ಶಾಲೆಗಳಲ್ಲಿ ಹಳೆಯ ದಾಸ್ತಾನಿನಲ್ಲಿದ್ದ ಪದಾರ್ಥಗಳನ್ನೇ ಬಳಸಿ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುತ್ತಿದ್ದಾರೆ. ಇನ್ನೂ ಕೆಲವು ಶಾಲೆಗಳಲ್ಲಿ ಮಾರುಕಟ್ಟೆಯಿಂದ ತಂದು ಗುಣಮಟ್ಟದ ಆಹಾರ ಪೂರೈಕೆ ಮಾಡಲು ಮೀನ-ಮೇಷ ನಡೆಸುತ್ತಿರುವುದು ಕಂಡು ಬರುತ್ತಿದೆ.

ಅಧಿಕಾರಿಗಳ ಭೇಟಿಯೇ ಇಲ್ಲ?:

ಬಿಸಿಯೂಟ ಯೋಜನೆಗೆ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಆಹಾರ ಪದಾರ್ಥಗಳನ್ನು ಸರಬರಾಜು ಮಾಡದೇ ಇರುವುದರಿಂದ ಪರಿವರ್ತನಾ ವೆಚ್ಚ ವಿನಿಯೋಗಿಸಿಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರವನ್ನು ಪೂರೈಸಲು ಸರಕಾರ ನಿರ್ದೆಶನ ನೀಡಿದೆ. ಈ ಕೆಲಸ ಶಾಲೆಗಳಲ್ಲಿ ಹೇಗೆ ನಿಭಾಯಿಸಲಾಗುತ್ತಿದೆ? ಮಕ್ಕಳಿಗೆ ಸಮರ್ಪಕವಾಗಿ ಬಿಸಿಯೂಟ ಸಿಗುತ್ತಿದೆಯೇ? ಎಂಬುದನ್ನು ಪರಿಶೀಲಿಸಬೇಕಾದ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡದೇ ಇರುವುದರಿಂದ ಶಾಲೆಗಳಲ್ಲಿ ವಿತರಣೆ ಮಾಡುವಂತಹ ಊಟವನ್ನು ಸವಿದು ತರಗತಿಗಳಲ್ಲಿ ಹಾಜರಾಗುತ್ತಿದ್ದಾರೆ.

ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕಿ ಆರ್.ಪಿ. ತಳಗೇರಿ ಅವರು ಪ್ರತಿಕ್ರಿಯಿಸಿ, ರಾಜ್ಯ ಹಂತದಲ್ಲಿಯೇ ತೊಗರಿಬೇಳೆ, ಎಣ್ಣೆ, ಉಪ್ಪು ಸರಬರಾಜಾಗಿಲ್ಲ. ಸರಕಾರದ ನಿರ್ದೆಶನದಂತೆ ಎಲ್ಲ ಮುಖ್ಯೋಪಾಧ್ಯಾಯರಿಗೆ ಪರಿವರ್ತನಾ ವೆಚ್ಚದಿಂದ ಆಹಾರ ಧಾನ್ಯ ಮತ್ತು ತರಕಾರಿ ಖರೀದಿ ಮಾಡಲು ಸೂಚಿಸಿದೆ. ಎಲ್ಲ ಶಾಲೆಗಳಲ್ಲಿಯೂ ಮಧ್ಯಾಹ್ನದ ಉಪಾಹಾರ ಯೋಜನೆ ನಡೆಯುತ್ತಿದೆ. ಆಹಾರ ಧಾನ್ಯಗಳು ಬಂದ ತಕ್ಷಣ ಶಾಲೆಗಳಿಗೆ ಸರಬರಾಜು ಮಾಡಲಾಗುವುದು ಎಂದರು.

ಸೋಮವಾರ ಸಿಹಿಯೂಟ

ಮುಖ್ಯೋಪಾಧ್ಯಾಯ ಎಚ್.ಬಿ. ಸಣ್ಣಮನಿ ಅವರನ್ನು ಪ್ರಶ್ನಿಸಿದಾಗ, ಪೂರ್ಣ ಪ್ರಮಾಣದಲ್ಲಿ ಆಹಾರ ಪದಾರ್ಥಗಳು ಸರಬರಾಜಾದರೆ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡಲು ಸಾಧ್ಯವಾಗುತ್ತದೆ. ಸೋಮವಾರ ಮಕ್ಕಳಿಗೆ ಸಿಹಿಯೂಟ ನೀಡಿದೆ. ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಆಹಾರ ಪೂರೈಸಬೇಕು ಎಂದರು.

ಕೊಪ್ಪಳದಲ್ಲಿ ಜ್ಯೂನಿಯರ್ ಅಪ್ಪು!

0

ಮಗುವಿಗೆ ಅಪ್ಪು ಎಂದು ನಾಮಕರಣ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ;
ಅಪ್ಪು ಅಗಲಿಕೆಯ ನಂತರ ರಾಜ್ಯದ ಮನೆ ಮನೆಯಲ್ಲೂ ಅಪ್ಪು ಮೇಲಿನ ಅಭಿಮಾನ ರಾರಾಜಿಸುತ್ತಿದೆ. ಅಪ್ಪು ಅಗಲಿದ ದಿನ ಅಪ್ಪು‌ ನೆನೆದು‌ ಕಣ್ಣೀರು ಹಾಕಿದ ಕಂದಮ್ಮಗಳ ಸಂಖ್ಯೆ ಅಗಣಿತ.

ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಬಸ್‌ಗೆ ಅಂಟಿಸಿದ್ದ ಅಪ್ಪು ಚಿತ್ರ ಕಂಡು ಬಿಕ್ಕಿ‌ ಬಿಕ್ಕಿ ಅತ್ತ ಅಜ್ಜಿಯ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಅಪ್ಪು ಸುದ್ದಿಗೆ ಸಂಬಂಧಿಸಿದಂತೆ ಮತ್ತೊಮ್ಮೆ ಕೊಪ್ಪಳ ಜಿಲ್ಲೆ ಸದ್ದು ಮಾಡುತ್ತಿದೆ.

ಕೊಪ್ಪಳ ತಾಲೂಕಿನ ಇರಕಲ್‌ಗಡಾದ ಮಂಜುನಾಥ್ ಗುತ್ತೂರ್ ಮತ್ತು ಮೀನಾಕ್ಷಿ ದಂಪತಿ ಈಚೆಗೆ ಜನಿಸಿದ ತಮ್ಮ ಮಗುವಿಗೆ ಅಪ್ಪು ಎಂದು‌ ನಾಮಕರಣ ಮಾಡಿ
ಪುನೀತ್ ರಾಜಕುಮಾರ್ ಮೇಲಿನ ಅಭಿಮಾನವನ್ನು ಶಾಶ್ವತವಾಗಿಸಿಕೊಂಡಿದ್ದಾರೆ. ಇಂಥ ಕೋಟ್ಯಾನುಕೋಟಿ ಕುಟುಂಬಗಳಲ್ಲಿ ಅಪ್ಪು ಸದಾ ಅಜರಾಮರ.

ತಿಮ್ಮಕ್ಕ ಉದ್ಯಾನದ ‘ಜಿಪ್ಲೈನ್ ದರ ‘ಜಂಪ್!
100 ರೂ. ಇದ್ದ ಟಿಕೆಟ್ ಬೆಲೆ 300 ರೂ.ಗೆ ಏರಿಕೆ

0

ವಿಜಯಸಾಕ್ಷಿ ಸುದ್ದಿ, ಗದಗ;

ತಾಲ್ಲೂಕಿನ ಬಿಂಕದಕಟ್ಟಿ ಬಳಿಯ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಸುಮಾರು 32 ಲಕ್ಷ ರೂ. ವೆಚ್ಚದಲ್ಲಿ 370 ಮೀ. ಉದ್ದದವರೆಗೆ ನಿರ್ಮಿಸಲಾಗಿರುವ ಹೊಸ ಸಾಹಸ ಕ್ರೀಡೆ ಜಿಪ್‌ಲೈನ್ ದರದಲ್ಲಿ ಭಾರೀ ಏರಿಕೆಯಾಗಿದ್ದು, ಜನರು ಜಿಪ್‌ಲೈನ್‌ನತ್ತ ಸುಳಿಯಲು ಹಿಂದೇಟು ಹಾಕುತ್ತಿದ್ದಾರೆ.

ಕಪ್ಪತಗುಡ್ಡದ ಸೆರಗಿನಂಚಿನಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಜಿಪ್‌ಲೈನ್ ಕ್ರೀಡೆ ನಾಲ್ಕು ತಿಂಗಳ ಹಿಂದಷ್ಟೇ ಪ್ರಾರಂಭವಾಗಿತ್ತು. ಇದು ಜನರನ್ನು ಆಕರ್ಷಿತರನ್ನಾಗಿಸಿತ್ತು. ಇದರಿಂದ ಲಾಕ್‌ಡೌನ್ ವೇಳೆ ಆದಾಯವಿಲ್ಲದೆ ಸೊರಗಿದ್ದ ಉದ್ಯಾನವನಕ್ಕೆ ಹೆಚ್ಚು ಆದಾಯ ತಂದು ಕೊಡುವ ಮೂಲಕ ತುಸು ಚೇತರಿಕೆ ನೀಡಿತ್ತು. ಅಲ್ಲದೆ, ಅಲ್ಲಿನ ಸಿಬ್ಬಂದಿ ಸಂಬಳ ಸೇರಿ ಉದ್ಯಾನವನದ ಹಲವು ಖರ್ಚುಗಳನ್ನು ನಿಭಾಯಿಸಲು ಸಹಕಾರಿಯಾಗಿತ್ತು. ಕಡಿಮೆ ದರದಲ್ಲಿ ಜನರಿಗೆ ಮಜಾ ನೀಡುತ್ತಿದ್ದ ಜಿಪ್‌ಲೈನ್ ಸಾಹಸ ಕ್ರೀಡೆ ಇದೀಗ ಬಲು ದುಬಾರಿಯಾಗಿದೆ.

ಕೆಲ ದಿನಗಳಿಂದಾಚೆಗೆ ಒಬ್ಬರಿಗೆ 100 ರೂ. ನಿಗದಿ ಮಾಡಿತ್ತು. ಇದರಿಂದ ದಿನವೊಂದಕ್ಕೆ 50ಕ್ಕೂ ಹೆಚ್ಚು ಜನ ಕ್ರೀಡಾಸಕ್ತರು ಜಿಪ್‌ಲೈನ್ ಸಾಹಸ ಕ್ರೀಡೆಯ ಮಜಾ ತೆಗೆದುಕೊಳ್ಳಲು ಬರುತ್ತಿದ್ದರು. ಆದರೆ, ಅ.1ರಿಂದ ಅರಣ್ಯ ಇಲಾಖೆ ಒಬ್ಬರಿಗೆ 300 ರೂ. ದರ ನಿಗದಿ ಪಡಿಸಿದೆ. ಇದರಿಂದ ಜಿಪ್‌ಲೈನ್ ಕಡೆ ಬರುವವರ ಸಂಖ್ಯೆ ಕಡಿಮೆಯಾಗುತ್ತಿದೆ.

ನಿರ್ವಹಣೆಗಾಗಿ ದರ ಏರಿಕೆ ಅನಿವಾರ್ಯ

ರಾಜ್ಯದಲ್ಲಿಯೇ ಅತೀ ಉದ್ದವಾಗಿರುವ ಸಾಹಸ ಕ್ರೀಡೆಯ ಜಿಪ್‌ಲೈನ್ ತಂತಿ ಗದಗನ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ನಿರ್ಮಿಸಲಾಗಿದ್ದು, ಇಲ್ಲಿಗೆ ರಾಜ್ಯದ ಮೂಲೆ ಮೂಲೆಗಳಿಂದ ಜನರು ಆಗಮಿಸುತ್ತಿದ್ದಾರೆ. ಜಿಪ್‌ಲೈನ್ ನೋಡಿಕೊಳ್ಳಲು ನಿತ್ಯ 10 ಜನರು ಕೆಲಸ ಮಾಡುತ್ತಿದ್ದು, ಅವರಿಗೆ ಜಿಪ್‌ಲೈನ್‌ದಿಂದ ಬರುವ ಆದಾಯದಿಂದಲೇ ಪ್ರತಿ ತಿಂಗಳು ಸಂಬಳ ನೀಡಲಾಗುತ್ತಿದೆ. ಅಲ್ಲದೇ, ಅರಣ್ಯ ಇಲಾಖೆಗೆ ಜಿಪ್‌ಲೈನ್ ನಿರ್ವಹಣೆ ಕಷ್ಟ ಸಾಧ್ಯವಾಗುತ್ತಿರುವುದರಿಂದ ದರ ಪರಿಷ್ಕರಣೆ ಮಾಡಲಾಗಿದೆ. ಸದ್ಯ ಒಬ್ಬರಿಗೆ 100 ರೂ. ಇದ್ದಿದ್ದನ್ನು 300 ರೂ.ಗೆ ಏರಿಸಲಾಗಿದೆ. ದರ ಏರಿಕೆಯಿಂದ ಜನರ ಬರುವಿಕೆ ಕಡಿಮೆ ಆಗಿದ್ದರೂ, ಸಾಹಸ ಕ್ರೀಡೆಗಳಲ್ಲಿ ಆಸಕ್ತಿ ಇರುವವರು ಬರುತ್ತಿದ್ದಾರೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಅಮೀನ್ ತಿಳಿಸಿದರು.

ಹೃದಯಾಘಾತವಾದರೂ ಮಾಡ್ತಾರೆ ಮರಣೋತ್ತರ ಪರೀಕ್ಷೆ! ಸಂತೋಷ್ ಅಸಹಜ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್

ಅನುಮಾನ ಹೆಚ್ಚಿಸಿದ ಪೊಲೀಸರ ನಡೆ

ವಿಜಯಸಾಕ್ಷಿ ಸುದ್ದಿ, ಗದಗ:

ಅವಳಿ ನಗರದಲ್ಲಿ ಸಂಚಲನ ಮೂಡಿಸಿರುವ ಸಂತೋಷ ಕರಿಕಿಕಟ್ಟಿ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿರುವ ಮರಣೋತ್ತರ ಪರೀಕ್ಷೆ ಹೊಸ ಅನುಮಾನ ಮೂಡಿಸಿದ್ದು, ಪ್ರಕರಣ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಮನೆಯ ಕಬ್ಜಾವತ್ತಿ ವಿವಾದಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಸಂತೋಷ ಶಹರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡಿದೆ. ನಾವೇ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಎನ್ನುತ್ತಾರೆ ಪೊಲೀಸರು. ಹಾಗಾದರೆ ಹೃದಯಾಘಾತದಿಂದ ಮೃತಪಟ್ಟವನ ಮರಣೋತ್ತರ ಪರೀಕ್ಷೆ ನಡೆಸುವ ಅನಿವಾರ್ಯ ಏನಿತ್ತು ಎನ್ನುವುದು ಸದ್ಯದ ಪ್ರಶ್ನೆ.

ಇದನ್ನೂ ಓದಿ  ಹೃದಯಾಘಾತವೋ? ಮೂರ್ಚೆ ರೋಗವೋ? ಲಾಕಪ್ ಡೆತ್ತೋ?; ತಾಯಿ ಮಗನ ಜಗಳದಲ್ಲಿ ಖಾಕಿ ಹೊಡೆತಕ್ಕೆ ಪೊಲೀಸ್ ಠಾಣೆಯಲ್ಲೇ ವ್ಯಕ್ತಿ ಸಾವು?

ಹೊಸ ಸಂಪ್ರದಾಯ?:

ಪೊಲೀಸ್ ಠಾಣೆಗೆ ಭೇಟಿ ನೀಡುವ ವ್ಯಕ್ತಿಗೆ ಒಂದು ವೇಳೆ ಹೃದಯಾಘಾತವಾದರೆ ಅಂಥವರ ಮರಣೋತ್ತರ ಪರೀಕ್ಷೆ ನಡೆಸುವ ಹೊಸ ಸಂಪ್ರದಾಯವನ್ನು ಗದಗ ಪೊಲೀಸರು ಹುಟ್ಟುಹಾಕಿದ್ದಾರೆಯೆ ಎನ್ನುವ ಅನುಮಾನ ಶುರುವಾಗಿದೆ.

ಪೊಲೀಸರು ಹೇಳುವ ಪ್ರಕಾರ ಸಂತೋಷ ಎದೆನೋವಿನಿಂದ ಅಥವಾ ಪಿಟ್ಸ್ ಬಂದಿದ್ದರಿಂದ ಮೃತಪಟ್ಟಿದ್ದಾನೆ. ಆದರೆ, ಹಾಗೆ ಅನಾರೋಗ್ಯ ಅಥವಾ ಸಹಜವಾಗಿ ಮೃತಪಟ್ಟಿದ್ದರೂ ಕುಟುಂಬದವರ ಒಪ್ಪಿಗೆ ಪಡೆಯದೆ ತರಾತುರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದೇಕೆ? ಸಂತೋಷನ ಮೃತದೇಹವನ್ನು ಹೂಳದೆ ಸುಟ್ಟು ಹಾಕುವಂತೆ ಕುಟುಂಬಸ್ಥರ ಮೇಲೆ ಬಾಹ್ಯ ಒತ್ತಡ ತಂದಿದ್ದೇಕೆ ಎನ್ನುವ ಪ್ರಶ್ನೆಗಳು, ಆರೋಪಗಳು ಕೇಳಿಬರುತ್ತಿವೆ.

ತಾಯಿ ಸಹಿ ಪಡೆಯಲೂ ಆತುರ

ಅಲ್ಲದೆ, ಪ್ರಕರಣಕ್ಕೆ ತೆರೆ ಎಳೆಯಲು ಸಂತೋಷ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂಬುದಕ್ಕೆ ಆತುರಾತುರವಾಗಿ ಗ್ರೇಡ್ -2 ತಹಸೀಲ್ದಾರ ಅವರ ಸಮ್ಮುಖದಲ್ಲಿ ಅ. 5ರ ಬೆಳಗ್ಗೆ ಸಾಕ್ಷಿದಾರರ ಹೇಳಿಕೆ ಎಂಬ ಪತ್ರದಲ್ಲಿ ಮೃತನ ತಾಯಿ ಅನಸಮ್ಮಳ ಸಹಿ ಪಡೆದುಕೊಂಡಿರುವ ಗದಗ ಶಹರ ಪೊಲೀಸರ ನಡೆ ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ  ‘ಪೊಲೀಸ್ ಸ್ಟೇಶನ್’ಗೆ ಹೋದ ಮಗ, ಮನೆಗೆ ಹೆಣವಾಗಿ ಬಂದ್ನೋ ಎಪ್ಪಾ!’ ನ್ಯಾಯಕ್ಕಾಗಿ ಅಂಗಲಾಚುತ್ತಿರುವ ತಾಯಿ

ಸಂತೋಷನ ಕುಟುಂಬದವರ ಪ್ರಕಾರ ಮನೆಯಿಂದ ಹೋಗುವಾಗ ಆರೋಗ್ಯವಾಗಿಯೇ ಇದ್ದ. ಪೊಲೀಸ್ ಠಾಣೆಗೆ ಹೋಗಿ ಸ್ವಲ್ಪ ಹೊತ್ತಿನಲ್ಲೇ ಎದೆನೋವು ಕಾಣಿಸಿಕೊಂಡಿದೆ ಎಂದು ಪೊಲೀಸ್ ದಾಖಲೆಗಳು ಹೇಳುತ್ತವೆ. ಮತ್ತೊಂದೆಡೆ ಸಂತೋಷನದ್ದೇ ಎನ್ನಲಾದ ಪೋನ್ ಸಂಭಾಷಣೆಯಲ್ಲಿ ಪೊಲೀಸರು ಹೊಡೆದಿರುವ ಏಟಿಗೆ ಎದೆ ನೋಯಿಸುತ್ತಿದೆ, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಗೋಗರೆಯುತ್ತಿರುವ ಆಡಿಯೋ ಕೂಡ ವೈರಲ್ ಆಗಿದೆ.

20 ನಿಮಿಷ ವಿಳಂಬವೇಕೆ?

ಈ ಪ್ರಕರಣದಲ್ಲಿ ಪೊಲೀಸ್ ಮೂಲಗಳನ್ನೇ ಒಪ್ಪಿಕೊಳ್ಳುವುದಾದರೆ, ‘ಸಂತೋಷನಿಗೆ ಹೃದಯಾಘಾತ ಆಗಿದ್ದು ಎಷ್ಟು ಹೊತ್ತಿಗೆ?, ಪೊಲೀಸರ ಮತ್ತು ವೈದ್ಯರ ಹೇಳಿಕೆ ಪ್ರಕಾರ ಸಂತೋಷ ಸಾವನ್ನಪ್ಪಿದ್ದು 6.40ಕ್ಕೆ. ಆದರೆ, ಪೊಲೀಸರು ಆತನ ಕುಟುಂಬದವರಿಗೆ ಕರೆ ಮಾಡಿ ಸಾವಿನ ಸುದ್ದಿ ತಿಳಿಸಿದ್ದು 7 ಗಂಟೆಗೆ.

ಇದನ್ನೂ ಓದಿ ಪ್ಲೀಸ್, ಇಲ್ಲಿಂದ ನನ್ನ ಬಿಡಿಸಿಕೊಂಡು ಹೋಗಿ; ಪೊಲೀಸರ ಕ್ರೌರ್ಯದ ಬಗ್ಗೆ ನೋವು ತೋಡಿಕೊಂಡಿರುವ ಸಂತೋಷ್!

ಹೃದಯಾಘಾತದಿಂದಲೇ ಸಂತೋಷ ಸಾವನ್ನಪ್ಪಿದ್ದ ಎಂದ ಮೇಲೆ, ಮೃತನ ತಾಯಿ ಹೇಳುವಂತೆ, ಸಾವಿನ ಸುದ್ದಿ ತಿಳಿಸಲು 20 ನಿಮಿಷ ಕಾಲಾವಕಾಶ ತೆಗೆದುಕೊಂಡಿದ್ದು ಏಕೆ? ಎಂಬಿತ್ಯಾದಿ ಸಂಶಯಾತ್ಮಕ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ.

ಗೋಲ್ಡನ್ ಅವರ್’ ಗೊತ್ತಿಲ್ಲವೇ?

ಇನ್ನು ಹೃದಯಾಘಾತವಾದ ಅರ್ಧಗಂಟೆ ‘ಗೋಲ್ಡನ್ ಟೈಂ ಅಂತಾ ಹೇಳುತ್ತಾರೆ. ಮೊನ್ನೆಯಷ್ಟೇ ಹೃದಯಾಘಾತದಿಂದ ನಟ ಪುನೀತ್ ರಾಜ್‌ಕುಮಾರ ಅವರನ್ನು ಕಳೆದುಕೊಂಡ ಉದಾಹರಣೆ ನಮ್ಮೆದುರಿಗೆ ಇದೆ. ಇವೆಲ್ಲ ಪೊಲೀಸರ ಗಮನಕ್ಕಿದ್ದರೂ ಸಂತೋಷನಿಗೆ ಹೃದಯಾಘಾತ ಸಂಭವಿಸಿದಾಗ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗದೆ ದೂರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು ಏಕೆ? ಎಂಬ ಜನರ ಪ್ರಶ್ನೆಗಳಿಗೆ ಪೊಲೀಸರೇ ಉತ್ತರಿಸಬೇಕಿದೆ.

ಪ್ಲೀಸ್, ಇಲ್ಲಿಂದ ನನ್ನ ಬಿಡಿಸಿಕೊಂಡು ಹೋಗಿ; ಪೊಲೀಸರ ಕ್ರೌರ್ಯದ ಬಗ್ಗೆ ನೋವು ತೋಡಿಕೊಂಡಿರುವ ಸಂತೋಷ್!

0

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಬೆಟಗೇರಿ ಅವಳಿ ನಗರದಲ್ಲಿ ಸಂಚಲನ ಸೃಷ್ಟಿಸಿರುವ ಆದರ್ಶ ನಗರದ ನಿವಾಸಿ ಸಂತೋಷ (ಕರಿಕಿಕಟ್ಟಿ) ಸಾವಿನ ಪ್ರಕರಣಕ್ಕೆಈಗ ಹೊಸ ತಿರುವು ಸಿಕ್ಕಿದೆ. ಪೊಲೀಸರು ಕೊಟ್ಟ ಹೊಡೆತವೇ ಸಂತೋಷ ಸಾವಿಗೆ ಕಾರಣ ಎನ್ನುವುದಕ್ಕೆ ಪುಷ್ಟಿ ನೀಡುವಂಥ ಎರಡು ಆಡಿಯೋ ಕ್ಲಿಪ್ಪಿಂಗ್ (ಫೋನ್ ಸಂಭಾಷಣೆ) ವಿಜಯಸಾಕ್ಷಿ'ಗೆ ಲಭ್ಯವಾಗಿದ್ದು, ಸಾವಿನ ಬಗ್ಗೆ ಮತ್ತಷ್ಟು ಅನುಮಾನಗಳು ಹುಟ್ಟಿಕೊಳ್ಳುತ್ತಿವೆ.

ಇದನ್ನೂ ಓದಿ ‘ಪೊಲೀಸ್ ಸ್ಟೇಶನ್’ಗೆ ಹೋದ ಮಗ, ಮನೆಗೆ ಹೆಣವಾಗಿ ಬಂದ್ನೋ ಎಪ್ಪಾ!’ ನ್ಯಾಯಕ್ಕಾಗಿ ಅಂಗಲಾಚುತ್ತಿರುವ ತಾಯಿ

ಮೃತ ಸಂತೋಷ ತನ್ನ ಆಪ್ತನ ಜೊತೆ ನಡೆಸಿದ್ದೆನ್ನಲಾಗುತ್ತಿರುವ ಆಡಿಯೋ ಕ್ಲಿಪಿಂಗ್ ಪೊಲೀಸರತ್ತ ಬೊಟ್ಟು ಮಾಡಿ ತೋರಿಸಿದಂತಿದೆ.

ಸಾಯುವುದಕ್ಕೂ ಮುನ್ನ ಆಪ್ತರೊಬ್ಬರ ಜೊತೆ ಮಾತನಾಡಿರುವ ಸಂಭಾಷಣೆಯಲ್ಲಿ ಪೊಲೀಸರು ಕ್ರೌರ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಪೊಲೀಸರು ತುಂಬಾ ಹೊಡೆದ್ರು! ಹೊಡೆದಿದ್ದಕ್ಕೆ ಎದೆ ನೋಯಿಸುತ್ತಿದೆ. ಸ್ಟೇಶನ್ ಕಟ್ಟಿ ಮೇಲೆ ಮಲಕೊಂಡಿದ್ದೀನಿ. ದವಾಖಾನೆಗೆ ಹೋಗಬೇಕ್ರಿ. ಯಾರಾದ್ರೂ ಇದ್ರೆ ಕಳುಹಿಸಿರಿ. ಬಹಳ ಸಮಸ್ಯೆ ಆಗ್ತಿದೆ ರೀ. ಮಾತಾಡೋಕೆ ಆಗ್ತಿಲ್ರಿ’ ಎಂದು ಸಂತೋಷ ನರಳಾಟದ ಮಾತುಗಳು ಪೊಲೀಸರು ನಡೆಸಿದ ಕ್ರೌರ್ಯಕ್ಕೆ ಉದಾಹರಣೆಯಾಗಿದೆ.

ಕೋಲು ತಗೊಂಡು ಹೊಡೆದಿದ್ದಾರೆ

ಕರ್ತವ್ಯದ ಮೇಲಿರುವ ಪಿಸಿಗಳು ಕೋಲು ತಗೊಂಡು ಹೊಡೆದಿದ್ದಾರೆ. ಅವ್ರಿಗೆ ಮಾತಾಡೋಕೆ ಫೋನ್ ಕೊಟ್ರೆ ವಾಪಾಸ್ ಕೊಡೋದಿಲ್ಲ ರೀ ಅವ್ರು. ಏನ್ ಮಾಡ್ಬೇಕು ಅಂತಾ ಗೊತ್ತಾಗುತ್ತಿಲ್ಲ. ಅವರು (ಕಬ್ಜಾದಾರರು) ಇನ್ನೂ ದೂರು ಕೊಡೋಕೆ ಬರ್ತಿದ್ದಾರೆ, ಅಷ್ಟರಲ್ಲೇ ಪೊಲೀಸರು ಹೊಡೆದಿದ್ದಾರೆ.

ಕೈ, ಕಾಲಿಗೆ ಹೊಡೆದಿದ್ದಾರೆ. ಅವರು ಹೊಡೆದ ರಭಸಕ್ಕೆ ಕೈ ನೋವಾಗಿದೆ. ದಯವಿಟ್ಟು ಈಗಲೇ ಬಂದು ಬಿಡಿ ಸರ್' ಅಂತಾ ಸಂತೋಷ ತನ್ನ ಆಪ್ತರೆದುರು ಅಸಹಾಯಕತೆ ತೋಡಿಕೊಂಡಿದ್ದಾನೆ. ಆಡಿಯೋ ಲಭ್ಯ: ಹೀಗೆ ಆಪ್ತರ ಜೊತೆ ಅಂದು ಅಮವಾಸ್ಯೆ ದಿನ ಅ.4 ರಂದು ಮಾತಾಡಿರುವ ಎರಡುವಿಜಯಸಾಕ್ಷಿ’ಗೆ ಲಭ್ಯವಾಗಿದೆ. ಆದರೂ ಪೊಲೀಸ್ ದಾಖಲೆಗಳ ಪ್ರಕಾರ ಸಂತೋಷ್ ಹೊಡೆತದಿಂದ ಸತ್ತಿಲ್ಲ. ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದೇ ದಾಖಲಾಗಿದೆ.

ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರೂ, ಇದು ಲಾಕಪ್ ಡೆತ್ ಅಲ್ಲ. ಸಂತೋಷ ಪೊಲೀಸ್ ಠಾಣೆಗೆ ಬಂದಾಗ ಮೂರ್ಚೆ ಬಂದು ಬಿದ್ದಿದ್ದಾನೆ. ನಮ್ಮವರೇ (ಪೊಲೀಸರು) ಅವನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನುವ ಉತ್ತರ ನೀಡುತ್ತಿದ್ದಾರೆ.

ಆದರೆ, ಸಂತೋಷನದ್ದೇ ಧ್ವನಿ ಎನ್ನಲಾದ ಆಡಿಯೋ ಕ್ಲಿಪ್ಪಿಂಗ್ ಕೇಳಿದಾಗಲೂ ಎಸ್ಪಿ ಶಿವಪ್ರಕಾಶ್ ದೇವರಾಜು ಅವರಿಗೆ ಸಂತೋಷ ಸಾವಿನ ಬಗ್ಗೆ ಅನುಮಾನ ಮೂಡದಿರುವುದು ಅಚ್ಚರಿ ಮೂಡಿಸಿದೆ.
ಎಲ್ಲ ಗೊತ್ತಿದ್ದೂ ಸುಮ್ಮನೆ ಇರುವ ಕೆಲವು ಪೊಲೀಸ್ ಅಧಿಕಾರಿಗಳು ಪ್ರಕರಣ ಮುಚ್ಚಿ ಹಾಕಿ ಪೊಲೀಸರನ್ನು ರಕ್ಷಿಸುವ ದೊಡ್ಡ ಕೆಲಸಕ್ಕೆ ಮುಂದಾಗಿದ್ದಾರೆ ಎನ್ನುವ ಸಂಶಯವೂ ಸಾರ್ವಜನಿಕರಲ್ಲಿ ಹೆಚ್ಚಾಗುತ್ತಿದೆ.

ಸದ್ಯ ಸಂತೋಷನದ್ದೇ ಎನ್ನಲಾದ ಆಡಿಯೋ ಸಾಕಷ್ಟು ಸದ್ದು ಮಾಡುತ್ತಿದ್ದು, ಸಂತೋಷನದ್ದು ಲಾಕಪ್ ಡೆತ್ತೋ..? ಮೂರ್ಚೆ ರೋಗವೋ..? ಹೃದಯಾಘಾತವೋ..? ಎಂಬ ಗದಗ-ಬೆಟಗೇರಿ ಅವಳಿ ನಗರದ ಜನರ ಪ್ರಶ್ನೆಗಳಿಗೆ ಜಿಲ್ಲಾ ಪೊಲೀಸ್ ಸ್ಪಷ್ಟನೆ ನೀಡಬೇಕಿದೆ.

ಎದೆ ನೋಯ್ತೈತಿ

ಆಪ್ತರಿಗೆ ಎರಡನೇ ಬಾರಿ ಕರೆ ಮಾಡಿದ ಸಂತೋಷದ ಧ್ವನಿಯಲ್ಲಿ ನೋವು ಸ್ಪಷ್ಟವಾಗಿ ಅರಿವಿಗೆ ಬರುವಂತಿದೆ. ನರಳುತ್ತ ಕರೆ ಮಾಡಿರುವ ಆತ, `… ಹೊಡದ್ರು, ಎದೆ ನೋಯ್ತೈತಿ, ಸ್ಟೇಷನ್ ಕಟ್ಟಿ ಮ್ಯಾಲೆ ಮಲ್ಕೊಂಡೀನಿ. ದವಾಖಾನಿಗೆ ಹೋಗ್ಬೇಕು… ಲೋಕಲ್ ಯಾರಾದ್ರೂ ಇದ್ರೆ ಕಳಿಸು ಮಾರಾಯಾ… ಅಲ್ರೀ… ಮಾತಾಡೋಕೆ ಆಗವಲ್ತು ರೀ…’ ಎಂದು ಅಸಹಾಯಕತೆ ತೋಡಿಕೊಂಡಿದ್ದಾನೆ.

ಚುನಾವಣೆ ವೇಳೆಗೆ ಮೂವರು ಸಿಎಂ ಆಗಬಹುದು

0

ಜನೆವರಿ ವೇಳೆಗೆ ಬಸವರಾಜ್ ಬೊಮ್ಮಾಯಿ ಸಿಎಂ ಸ್ಥಾನದಿಂದ ಇಳಿತಾರೆ- ಶಿವರಾಜ್ ತಂಗಡಗಿ

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ : ಬಿಟ್ಕಾಯಿನ್ ವಿಚಾರದಲ್ಲಿ ಬಿಜೆಪಿಯವರು‌ ಬಹಳ‌ ಜನ ಇದ್ದಾರೆ. ಅದನ್ನ ಡೈವರ್ಟ್ ಮಾಡಲು ಸಿದ್ದರಾಮಯ್ಯ ದಲಿತ ವಿರೋಧಿ ಅಂತ ಬೊಬ್ಬೆ ಹಾಕ್ತಿದ್ದಾರೆ. ಬಿಟ್ಕಾಯಿನ್ ವಿಚಾರವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ಜನವರಿ ವೇಳೆಗೆ ಅಧಿಕಾರದಿಂದ ಕೆಳಗೆ ಇಳೀತಾರೆ ಎಂದು‌ ಮಾಜಿ ಸಚಿವ ಶಿವರಾಜ್ ತಂಗಡಗಿ ಹೊಸ ಬಾಂಬ್ ಸಿಡಿಸಿದರು.

ನಗರದ ಸ್ಥಳೀಯ ಶಾಸಕರ ನಿವಾಸದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಟ್ಕಾಯಿನ್ ಹಗರಣದಲ್ಲಿ ಸಾಕಷ್ಟು ಜನ ಬಿಜೆಪಿಯವರು ಭಾಗಿಯಾಗಿದ್ದಾರೆ. ಸಮಯ ಬಂದಾಗ ಎಲ್ಲಾ ದಾಖಲೆಗಳನ್ನು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಲಿದೆ. ಚುನಾವಣೆ ವೇಳೆಗೆ ರಾಜ್ಯಕ್ಕೆ ಇನ್ನು ಇಬ್ಬರು ಸಿಎಂ ಆಗಬಹುದು. ಬಿಜೆಪಿಯವರು ಅಧಿಕಾರ ಮಾಡುವಷ್ಟು ಶಕ್ತರಾಗಿಲ್ಲ ಎಂದರು. ‌

ಇನ್ನು ಸಿದ್ದರಾಮಯ್ಯ ಬಗ್ಗೆ ಮಾತನಾಡುವ ಸಚಿವ ಕೆ.ಎಸ್ ಈಶ್ವರಪ್ಪನವರೇ ಅಪವಿತ್ರರಿದ್ದಾರೆ.ಇಷ್ಟೇ ಅಲ್ಲದೆ
ಬಿಜೆಪಿಯವರು ಎಲ್ಲರೂ ಎಲ್ಲಾ ವಿಚಾರದಲ್ಲೂ ಅಪವಿತ್ರರು ಎಂದು ವ್ಯಂಗ್ಯವಾಡಿದರು.

ಬಿಜೆಪಿ ಎಸ್ ‌ಸಿ ಮೋರ್ಚಾದವರು ಸಿದ್ದರಾಮಯ್ಯ ಬಗ್ಗೆ ಕೆಟ್ಟದಾಗಿ ಮಾತಾಡ್ತಿದಾರೆ. ಕಾರಜೋಳ, ಜಿಗಜಿಣಗಿ ಸ್ವಾರ್ಥಕ್ಕಾಗಿ ಬಿಜೆಪಿಗೆ‌ ಹೋಗಿದ್ದಾರೆ.
ದಲಿತ ಸಮಾಜಕ್ಕೆ ಇವರು ಕೊಟ್ಟಿರುವ ಕೊಡುಗೆ ಏನು..?
ಗಂಜಿ ಗಿರಾಕಿಗಳು ಹೊಟ್ಟೆಪಾಡಿಗಾಗಿಯೇ ದಲಿತ ಹೆಸರಿನಲ್ಲಿ ಬಿಜೆಪಿಗೆ ಹೋಗಿದ್ದಾರೆ ಎಂದು ಸಿದ್ದರಾಮಯ್ಯನವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಗೂಳಪ್ಪ ಹಲಗೇರಿ ಕಾಂಗ್ರೆಸ್ ಮುಖಂಡರಾದ ಕೃಷ್ಣ ಇಟ್ಟಂಗಿ, ರವಿ ಕುರಗೋಡ, ಕೃಷ್ಣಾ ಗಲಭಿ, ಎಸ್.ಬಿ.ನಾಗರಳ್ಳಿ, ಗಾಳೆಪ್ಪ ಪೂಜಾರ, ಮಲ್ಲು ಪೂಜಾರ, ಸಿದ್ದನಗೌಡರು, ತಮೇಶ್ ನಾಯ್ಕ ನಿಂಗಜ್ಜ ಶಹಪುರ ಮತ್ತಿತರರು ಇದ್ದರು.

ಆಸ್ಪತ್ರೆಗೆ ಬಂದ ಮಗುವಿಗೆ ಚಿಕಿತ್ಸೆ ನೀಡದೇ ಅಮಾನೀಯವಾಗಿ ನಡೆಸಿಕೊಂಡ ಹೆರಿಗೆ ಆಸ್ಪತ್ರೆ ಸಿಬ್ಬಂದಿಗಳು!

0

ವಿಜಯಸಾಕ್ಷಿ ಸುದ್ದಿ, ಗದಗ

‘ಒಂದು ಕೈಯಲ್ಲಿ ಮಗು, ಮತ್ತೊಂದು ಕೈಯಲ್ಲಿ ಗ್ಲುಕೋಸ್ ಬಾಟಲು, ಮಗುವಿನ ಪ್ರಾಣ ಉಳಿಸಲು ಹೆತ್ತವರು ವಾರ್ಡ್ನಿಂದ ವಾರ್ಡ್ ಗೆ ಅಲಿಯುತ್ತಿದ್ದ ಮನಕಲಕುವ ದೃಶ್ಯ ನಗರದ ದುಂಡಪ್ಪ ಮಾನ್ವಿ ಸರ್ಕಾರಿ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ಬುಧವಾರ ಕಂಡು ಬಂದಿತು’.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮೂಲದ ಮಹಾಂತೇಶ ಮತ್ತು ಸಂಗೀತಾ ದಂಪತಿಗಳ ಎರಡೂವರೆ ವರ್ಷದ ದೃವಂತ ಎಂಬ ಮಗುವಿಗೆ ಮೂರ್ಛೆ (ಪಿಟ್ಸ್) ರೋಗ ಬಂದಿತ್ತು. ಹೀಗಾಗಿ ಮಗನ ಚಿಕಿತ್ಸೆಗಾಗಿ ಕೊಪ್ಪಳದಲ್ಲಿರುವ ಜಿಲ್ಲಾ ಆಸ್ಪತ್ರೆಗಿಂತ ಗದಗನ ಜಿಲ್ಲಾಸ್ಪತ್ರೆಯಲ್ಲಿ ಸೌಕರ್ಯ ಇದೆ ಎಂದು ಕೊಪ್ಪಳಕ್ಕೆ ಹೋಗದೇ ನೇರವಾಗಿ ಗದಗ ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಬಂದಿದ್ದಾರೆ. ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದರೂ ಯಾವೊಬ್ಬ ವೈದ್ಯರು ಸರಿಯಾಗಿ ಸ್ಪಂದಿಸಲಿಲ್ಲ. ಆ್ಯಂಬುಲೆನ್ಸ್ನಿಂದ ಮಗುವನ್ನು ಆಸ್ಪತ್ರೆ ಒಳಗೆ ಕರೆದೊಯ್ಯಲು ವ್ಹೀಲ್ ಚೇರ್ ಸ್ಟ್ರಚ್ಚರ್ ಸಹಿತ ಕೊಡದೇ ಅಮಾನವೀಯವಾಗಿ ನಡೆಸಿಕೊಂಡರು.

ಅಲ್ಲದೇ, ಎರಡೂವರೆ ವರ್ಷದ ಮಕ್ಕಳನ್ನು ಇಲ್ಲಿ ನೋಡುವುದಿಲ್ಲ. ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂತಾ ಹೇಳಿದ್ದಾರೆ. ಸದ್ಯ ಮಗು ನಗರದ ಜಿಮ್ಸ್ ಆಸ್ಪತ್ರೆಯ ಮಕ್ಕಳ ತುರ್ತು ಚಿಕಿತ್ಸಾ ವಿಭಾಗ(ಪಿಐಸಿಯು) ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದೆ.

ಯಲಬುರ್ಗಾದಿಂದ ಆಂಬ್ಯುಲೆನ್ಸ್ ಮೂಲಕ ಮೊದಲು ನಗರದ ಜರ್ಮನಿ ಆಸ್ಪತ್ರೆಗೆ ಬಂದಿದ್ದೇವೆ. ಅವರು ಹೆರಿಗೆ ಆಸ್ಪತ್ರೆಗ ಹೋಗಿ ಅಂತಾ ಹೇಳಿದರು. ಅಲ್ಲಿಂದ ಹೆರಿಗೆ ಆಸ್ಪತ್ರೆಗೆ ಹೋದರೆ ಅಲ್ಲಿ ಯಾರೂ ಮಗು ನೋಡಲಿಲ್ಲ. ಒಂದು ಕೈಯಲ್ಲಿ ಸಲಾಯನ್ ಮತ್ತೊಂದು ಕೈಯಲ್ಲಿ ಮಗುವನ್ನು ಹೊತ್ಕೊಂಡು ಅಲೆದಾಡಿದರೂ ಮಗುವಿಗೆ ಚಿಕಿತ್ಸೆ ನೀಡುವುದಿರಲಿ, ಮುಟ್ಟಿ ಸಹಿತ ಏನಾಗಿದೆ ಎಂದು ಯಾರೊಬ್ಬರೂ ಕೇಳಲಿಲ್ಲ. ಅವರು ಚಿಕಿತ್ಸೆ ನೀಡದೇ ಜಿಮ್ಸ್ ಆಸ್ಪತ್ರೆಗೆ ಹೋಗಿ ಅಂತಾ ಸಾರಾಸಗಟವಾಗಿ ಹೇಳಿ ಕಳುಹಿಸಿದರು. ಅಲ್ಲದೇ, ಸರಿಯಾಗಿಯೂ ಸ್ಪಂದಿಸಲಿಲ್ಲ ಎಂದು ಮಗುವಿನ ತಾಯಿ ಸಂಗೀತಾ ಕಣ್ಣೀರು ಹಾಕಿದರು.

ಮದುವೆಯಾಗಿ ಬಹಳ ವರ್ಷಗಳ ಬಳಿಕ ಮಕ್ಕಳಾಗಿವೆ. ಅದರಲ್ಲಿ ಹಿರಿಯ ಮಗನಿಗೆ ಪಿಟ್ಸ್ ಬಂದಿದ್ದು, ಚಿಕಿತ್ಸೆಗಾಗಿ ಗದಗ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ. ಆದರೆ,
ಹೆರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದಿರುವುದು ತುಂಬಾ ಬೇಸರವಾಯಿತು. ಮಗುವನ್ನು ಇಲ್ಲಿಗೆ ಕರೆದುಕೊಂಡು ಬಂದ ಮೇಲೆ ಜಿಮ್ಸ್ ಆಸ್ಪತ್ರೆ ವೈದ್ಯರು ಕಾಳಜಿ ವಹಿಸಿ ಚಿಕಿತ್ಸೆ ನೀಡಿದರು. ಸದ್ಯ ಮಗು ಆರಾಮವಾಗಿದೆ ಎಂದು ಮಗುವಿನ ತಂದೆ ಮಹಾಂತೇಶ ಹೇಳಿದರು.

ದುಂಡಪ್ಪ ಮಾನ್ವಿ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ಇದೊಂದೇ ಘಟನೆ ಅಲ್ಲ, ಇಂತಹ ಅನೇಕ ಘಟನೆಗಳು ನಡೆದಿರುವ ನಿದರ್ಶನಗಳಿವೆ. ಅಲ್ಲದೇ, ಅಲ್ಲಿನ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಹೇಳುವವರು ಕೇಳುವವರು ಯಾರು ಇಲ್ಲದಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಏಳು ತಿಂಗಳಾದರೂ ಸಭೆ ನಡೆಸದ ಶಾಸಕ ರಾಮಣ್ಣ ಲಮಾಣಿ; ಅಧಿಕಾರಿಗಳಿಗೆ ಸಭೆಗಳಂದ್ರೆ ಆಲಸ್ಯ!

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ;

ಶಿರಹಟ್ಟಿ ಮೀಸಲು ಮತಕ್ಷೇತ್ರಕ್ಕೆ ಸರ್ಕಾರದಿಂದ ವಿವಿಧ ಇಲಾಖೆಗಳ ಮೂಲಕ ಹಲವಾರು ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಆದರೆ ಇವುಗಳ ಪ್ರಗತಿ ನಡೆಸುವುದಕ್ಕಾಗಿ ತಾಲೂಕು ಪಂಚಾಯಿತಿಯಲ್ಲಿ ಆಗಾಗ್ಗೆ ನಡೆಯಬೇಕಿದ್ದ ಪ್ರಗತಿ ಪರಿಶೀಲನಾ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಪದೇಪದೇ ಗೈರಾಗುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತನ ತಾಲೂಕಿನ ಅಭಿವೃದ್ಧಿಗೆ ಮಾರಕವಾಗುತ್ತಿದೆ ಅಲ್ಲದೇ, ಸಭೆಗಳು ನಾಮಕೆವಾಸ್ತೆ ನಡೆಯುತ್ತಿವೆ.

ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಹಾಗೂ ತಾಲೂಕು ಪಂಚಾಯತಿ ಆಡಳಿತಾಧಿಕಾರಿ ವಾಗೀಶ್ ಶಿವಾಚಾರ್ಯ ಇವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಾಮಾನ್ಯ ಸಭೆ ಜರುಗಿತು.

ಸಭೆಯಲ್ಲಿ ಸಣ್ಣ ನೀರಾವರಿ, ಕೆಆರ್‌ಡಿಎಲ್, ನಿರ್ಮಿತಿ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಬಕಾರಿ, ಕೆಎಸ್‌ಆರ್‌ಟಿಸಿ, ಆಹಾರ ಶಿರಸ್ತೆದಾರ, ಪ್ರಾದೇಶಿಕ ಅರಣ್ಯ, ಭೂಮಾಪನ, ಉಪನೋಂದಣಾಧಿಕಾರಿ, ಕಾರ್ಮಿಕ, ಡಾ.ಬಿ.ಆರ್.ಅಂಬೇಡ್ಕರ್ ನಿಗಮ, ಅಲ್ಪಸಂಖ್ಯಾತ, ಮೀನುಗಾರಿಕೆ ಇಲಾಖೆ ಹೀಗೆ 16 ಇಲಾಖೆಯ ಅಧಿಕಾರಿಗಳು ಗೈರಾಗಿದ್ದಾರೆ. ಕೇವಲ 15 ಇಲಾಖೆಯ ಅಧಿಕಾರಿಗಳು ಮಾತ್ರ ಸಭೆಗೆ ಹಾಜರಿದ್ದರು. ಅಲ್ಲದೇ, ಮಂಗಳವಾರ ಹಾಲಕೆರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳು ಸಹ ಸಭೆಯಿಂದ ಬೇಗನೆ ನಿರ್ಗಮಿಸಿದರು.

ಅಧಿಕಾರಿಗಳ ಸಭೆ ನಡೆಸದ ಶಾಸಕರು!

ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಜಿಡ್ಡು ಹಿಡಿಯುತ್ತಿರುವಂತಹ ಅಧಿಕಾರಿ ವರ್ಗಕ್ಕೆ ಬಿಸಿ ಮುಟ್ಟಿಸಬೇಕಾಗಿರುವ ಶಾಸಕ ರಾಮಣ್ಣ ಲಮಾಣಿ ಏ.8 ರಂದು ತ್ರೈಮಾಸಿಕ ಸಭೆ ಏರ್ಪಡಿಸಿದ್ದನ್ನು ಬಿಟ್ಟರೆ ಬಳಿಕ ಯಾವುದೇ ಸಭೆ ನಡೆಸಿಲ್ಲ. ಏಳು ತಿಂಗಳಾದರೂ ಯಾವುದೇ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸದಿರುವುದು ಖೇದಕರ. ಅಲ್ಲದೇ, ಶಾಸಕರ ಈ ನಡೆ ಅಧಿಕಾರಿಗಳಿಗೆ ವರದಾನವಾಗಿದೆ.

ಇಒ ಅವರ ನಿರ್ದೇಶನಕ್ಕಿಲ್ಲ ಕಿಮ್ಮತ್ತು

ಸಭೆಗಳಿಗೆ ಅಧಿಕಾರಿಗಳು ಪದೇಪದೇ ಗೈರು ಉಳಿಯುತ್ತಿರುವುದಕ್ಕೆ ತಾಪಂ ಇಒ ಡಾ.ಎನ್.ಎಚ್.ಓಲೇಕಾರ್ ಅವರು ಸಾಕಷ್ಟು ಬಾರಿ ನಿರ್ದೇಶನ ನೀಡಿದರೂ ಇಒ ಅವರಿಗೆ ಕವಡಿ ಕಾಸಿನಷ್ಟು ಕಿಮ್ಮತ್ತಿಲ್ಲದಂತಾಗಿದೆ. ಇಒ ಅವರು ಈ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಲೇ ಬರುತ್ತಿದ್ದಾರೆ.

ಡಿಸಿ ಮತ್ತು ಜಿಲ್ಲಾ ಪಂಚಾಯತ್ ಸಿಇಒ ಗಮನಹರಿಸುವರೇ?

ಶಿರಹಟ್ಟಿ ತಾಲೂಕು ಕೇಂದ್ರದ ಜೊತೆಗೆ ವಿಧಾನಸಭಾ ಮತಕ್ಷೇತ್ರವಾಗಿದ್ದು, ಸರ್ಕಾರದ ಅನುದಾನ ಸದ್ಭ್ಬಳಕೆ ಆಗುತ್ತಿದೆಯೋ.. ಇಲ್ಲವೋ ಎಂಬುದನ್ನು ತಿಳಿಯಲು ನಡೆಸುವ ಪ್ರಗತಿ ಪರಿಶೀಲನಾ ಸಭೆಗಳಿಗೆ ಅಧಿಕಾರಿಗಳು ಗೈರಾಗುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಗಳು ಗಮನಹರಿಸಬೇಕಿದೆ.

ಅಧಿಕಾರಿಗಳು ಸಭೆಗಳಿಗೆ ಪದೇಪದೇ ಗೈರು ಉಳಿಯುತ್ತಿರುವುದು ಕ್ಷೇತ್ರದ ಅಭಿವೃದ್ಧಿಗೆ ಮಾರಕವಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಜಿಪಂ ಸಿಇಒ ಅವರ ಗಮನಕ್ಕೆ ತರುವ ಮೂಲಕ ಶಿಸ್ತುಕ್ರಮ ಜರುಗಿಸುವಂತೆ ಸೂಚಿಸಲಾಗುವುದು. ನವೆಂಬರ್ 15ರ ನಂತರ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು.

ರಾಮಣ್ಣ ಲಮಾಣಿ, ಶಾಸಕರು

ಸಭೆಗೆ ಗೈರು ಉಳಿದಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಿಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ವರದಿ ಸಲ್ಲಿಸಲಾಗುವುದು. ಕ್ರಮ ತೆಗೆದುಕೊಂಡರೆ ಮಾತ್ರ ಮುಂದಿನ ಸಭೆ ನಡೆಸಲಾಗುವುದು.

ಡಾ.ಎನ್.ಎಚ್.ಓಲೆಕಾರ್, ತಾಪಂ ಇಒ

ನೂರಾರು ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ; ಡಿಪೋ ಮ್ಯಾನೇಜರ್ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ನರಗುಂದ

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಅವರ ನರಗುಂದ ಮತಕ್ಷೇತ್ರದ ಹಲವು ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಮಂಗಳವಾರ ಸೂಕ್ತ ಬಸ್ಸಿನ ವ್ಯವಸ್ಥೆ ಕಲ್ಪಿಸಿ‌ಕೊಡುವಂತೆ ಆಗ್ರಹಿಸಿ ರೋಣ-ಬೆಳಗಾವಿ ಬಸ್ ತಡೆದು ಶಿರೋಳದಲ್ಲಿ ಪ್ರತಿಭಟನೆ ನಡೆಸಿದರು.

ತಾಲೂಕಿನ ಹೊಳೆಆಲೂರು, ಮೆಣಸಗಿ, ಕಪ್ಪಲಿ, ಕಲ್ಲಾಪುರ, ಶಿರೋಳ, ಗೊಳಗಂದಿ ಗ್ರಾಮಗಳ ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಸರಿಯಾದ ಬಸ್ಸಿನ ಸೌಲಭ್ಯವಿಲ್ಲದೇ ದಿನನಿತ್ಯ ಪರದಾಡುತ್ತಿದ್ದಾರೆ.

ರೋಣದಿಂದ ಬೆಳಗಾವಿ ಹೋಗುವ ಒಂದೇ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಬೆಳಿಗ್ಗೆ ಬರುವ ಇದೊಂದೇ ಬಸ್ಸಿನಲ್ಲಿ ಸುಮಾರು ೧೫೦ ವಿದ್ಯಾರ್ಥಿಗಳು ಪ್ರಯಾಣಿಸಿ ಕಾಲೇಜಿಗೆ ಹೋಗುವಂತಹ ಅನಿವಾರ್ಯ ಪರಿಸ್ಥಿತಿ ಇದೆ. ಒಂದು ವೇಳೆ ಪ್ರಯಾಣಿಕರಿಂದ ಬಸ್ ತುಂಬಿದರೆ, ವಿದ್ಯಾರ್ಥಿಗಳು ಖಾಸಗಿ ವಾಹನಗಳ ಮೊರೆ ಹೋಗಬೇಕಾದ ದುಸ್ಥಿತಿ ಉಂಟಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಇನ್ನೊಂದು ಬಸ್ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಹಲವು ಬಾರಿ ಡಿಪೋ ವ್ಯವಸ್ಥಾಪಕರಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಬಾರಿಯೂ ಬಸ್ ಬಿಡುವಂತೆ ಪ್ರತಿಭಟಿಸಲಾಗಿತ್ತು. ಇದು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ್ ಅವರ ಗಮನಕ್ಕೂ ಬಂದಿತ್ತು. ಆದರೂ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅನುಕೂಲವಾಗಿಲ್ಲ. ಸಚಿವರು ಹೇಳಿದರೆಂದು ಒಂದು ತಿಂಗಳವರೆಗೆ ಬಸ್ ಬಿಟ್ಟಂತೆ ಮಾಡುವ ನರಗುಂದ ಡಿಪೋ ವ್ಯವಸ್ಥಾಪಕರು ಪುನಃ ಈ ಮಾರ್ಗದ ಬಸ್ ಸಂಚಾರ ಬಂದ್ ಮಾಡುತ್ತಿದ್ದಾರೆ. ಬಸ್ ಯಾಕೆ ಬಂದ್ ಮಾಡಿದ್ದೀರಿ ಎಂದು ವಿದ್ಯಾರ್ಥಿಗಳು ಕೇಳಿದರೆ ‘ನಮಗೆ ಬಸ್ ಬಿಡುವುದು ಆಗುವುದಿಲ್ಲ. ನೀವು ಏನು ಮಾಡಿಕೊಳ್ಳುತ್ತಿರೋ ಮಾಡಿಕೊಳ್ಳಿ’ ಎಂದು ವಿದ್ಯಾರ್ಥಿಗಳ ಜೊತೆ ಅಸಭ್ಯ ವರ್ತನೆ ತೋರುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಅಲ್ಲದೇ, ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬೆ. 7.45 ಕ್ಕೆ ಶಿರೋಳ ಮಾರ್ಗವಾಗಿ ಕೊಣ್ಣೂರ ಹಾಗೂ ಮ. 2.45 ಕ್ಕೆ ಕೊಣ್ಣೂರದಿಂದ ಶಿರೋಳಕ್ಕೆ ಬಸ್ ಸೌಲಭ್ಯದ ಅವಶ್ಯಕತೆ ಇದ್ದು, ಕೂಡಲೇ ಈ ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸುವಂತೆ ಆಗ್ರಹಿಸಿದರು.

error: Content is protected !!