ಮನೆಯಲ್ಲಿದ್ದ ಅಡುಗೆ ಸಿಲಿಂಡರ್ ಸೋರಿಕೆಯಾಗಿ ಬೆಂಕಿಹೊತ್ತಿಕೊಂಡು ಮಹಿಳೆಯೊಬ್ಬರು ಗಾಯಗೊಂಡ ಘಟನೆ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸೋಮವ್ವ ಶೇಖಪ್ಪ ಲಮಾಣಿ ಎಂಬುವವರ ಮನೆಯ ಸಿಲಿಂಡರ್ ಸೋರಿಕೆಯಾಗಿ ಬೆಂಕಿಹೊತ್ತಿಕೊಂಡಿದ್ದು, ಅಡುಗೆ ಮಾಡುತ್ತಿದ್ದ ಸೋಮವ್ವಳ ಹಾಗೂ ಮಗುವಿಗೆ ಸುಟ್ಟ ಗಾಯಗಳಾಗಿವೆ. ಸ್ಥಳೀಯರು ನೀರು ಸುರಿದು ಬೆಂಕಿ ನಂದಿಸಿದ್ದಾರೆ.
ಬೆಂಕಿಯಿಂದಾಗಿ ಸಿಲಿಂಡರ್ ಸ್ಪೋಟಗೊಳ್ಳುವ ಆತಂಕ ಇತ್ತು. ಆದರೆ, ಅದೃಷ್ಟವಶಾತ್ ಅವಘಡ ತಪ್ಪಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಜಿಲ್ಲಾ ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಗದಗ, ತಾಲ್ಲೂಕು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ನರಗುಂದ ಮತ್ತು ಗ್ರಾಮ ಪಂಚಾಯತಿ ಚಿಕ್ಕನರಗುಂದ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ನರಗುಂದ ನ್ಯಾಯಾಲಯದ ನ್ಯಾಯಾಧೀಶೆ ಸಲ್ಮಾ ಎಸ್. ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಪ್ರತಿಯೊಬ್ಬ ಪ್ರಜೆಗೂ ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ಅಗತ್ಯತೆ ಇದೆ. ನಮ್ಮ ದೈನಂದಿನ ಜೀವನ ಯಾವುದೇ ಅಡೆತಡೆಯಿಲ್ಲದೆ ನೆಮ್ಮದಿಯಿಂದ ಸಾಗಲು ಅಲ್ಪ ಪ್ರಮಾಣದಲ್ಲಾದರೂ ಕಾನೂನು ಜ್ಞಾನ ಪಡೆಯಬೇಕು. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮದ ಮೂಲಕ ಆರ್ಥಿಕವಾಗಿ ತೊಂದರೆಗೊಳಗಾದವರಿಗೆ ಉಚಿತ ಕಾನೂನು ನೆರವು ನೀಡಲಾಗುವುದು ಎಂದು ಹೇಳಿದರು.
ಮಹಿಳೆಯರಿಗೆ ಆಸ್ತಿಯಲ್ಲಿ ಪಾಲು, ಬಾಲ್ಯ ವಿವಾಹ ನಿಷೇಧ ಹಾಗೂ ಬಾಲ ಕಾರ್ಮಿಕರಿಗೆ ಸಂಬಂಧಿಸಿದ ಕಾಯ್ದೆಯ ಬಗ್ಗೆ ಜನನ ಮತ್ತು ಮರಣ ನೋಂದಣಿ ಕಾಯ್ದೆಯ ಕುರಿತು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಮುತ್ತು ರಾಯರಡ್ಡಿ ಮಾತನಾಡಿ, ಜನಸಾಮಾನ್ಯರಿಗೆ ಕಾನೂನು ಅರಿವು, ನೆರವು ಮತ್ತು ಪಂಚಾಯಿತಿಯಲ್ಲಿ ಸಿಗುವ ಕಾನೂನಾತ್ಮಕ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನರು ಇದರ ಸದುಪಯೋಗ ಪಡೆಯಬೇಕು ಎಂದರು.
ನ್ಯಾಯವಾದಿಗಳಾದ ಎಂ.ಬಿ. ಕುಲಕರ್ಣಿ, ಮೋಟಾರು ವಾಹನ ಕಾಯ್ದೆ ಹಾಗೂ ಬಾಲ ಕಾರ್ಮಿಕರ ನಿಷೇಧ ಕಾಯ್ದೆ ಕುರಿತು, ಕೆ.ಎಸ್. ಹೂಲಿ, ಉಚಿತ ಕಾನೂನು ನೆರವು ಅರಿವು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ, ವರದಕ್ಷಿಣೆ ನಿಷೇಧ ಕಾಯ್ದೆ ಕುರಿತು, ಆರ್. ಆರ್. ನಾಯ್ಕರ್, ದಿನನಿತ್ಯದ ಕಾನೂನುಗಳು ಹಾಗೂ ಜೀವನಾಂಶದ ಕಾನೂನು ಕುರಿತು, ಪ್ರಭಾರಿ ಪಿಎಸ್ಐ ಪವಾರ, ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸುವ ಹಾಗೂ ಸ್ವಿಕರಿಸುವ ಬಗ್ಗೆ ಮೋಟಾರು ವಾಹನ ಕಾಯ್ದೆ ಕುರಿತು ಮಾಹಿತಿ ನೀಡಿದರು.
ಡಿಕೆಶಿ ವಿರುದ್ಧದ ಆರೋಪ ಸಿದ್ದರಾಮಯ್ಯ ಅವರ ವ್ಯವಸ್ಥಿತವಾದ ಷಡ್ಯಂತ್ರ್ಯ ಎಂದು ಸಂಸದ ಪ್ರತಾಪ್ ಸಿಂಹ ಹೊಸ ಬಾಂಬ್ ಸಿಡಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿಯವರಿಂದ ಬಿಜೆಪಿ ಬಗ್ಗೆ ಮತ್ತಷ್ಟು ಒಳ್ಳೆಯ ಹೆಸರು ಬಂದಿದೆ. ಎರಡೂ ಉಪಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ಇದಕ್ಕೆ ವಿರೋಧ ಪಕ್ಷದವರೇ ಅನುಕೂಲ ಮಾಡಿಕೊಟ್ಟಿದ್ದಾರೆ. ಮಾಧ್ಯಮದವರ ಮುಂದೆಯೇ ಸಲೀಂ- ಉಗ್ರಪ್ಪ ಮಾತಾಡಿದ್ದಾರೆ. ಡಿಕೆಶಿಯವರನ್ನು ವ್ಯವಸ್ಥಿತವಾಗಿ ರಾಜಕೀಯವಾಗಿ ಮುಗಿಸುವ ಷಡ್ಯಂತ್ರ್ಯ ಎಂದು ದೂರಿದರು.
ಸಲೀಂ ಅವರು ಈಗಿರುವ ಸ್ಥಾನಕ್ಕೆ ಕಾರಣ ಡಿಕೆಶಿ. ಉಗ್ರಪ್ಪ ಸಂಸದರಾಗಲು ಅವರ ಪಾತ್ರ ಮಹತ್ವದ್ದು, ಆದರೆ, ಇಷ್ಟೆಲ್ಲ ಇದ್ದರೂ ಡಿಕೆಶಿಯವರನ್ನು ಟಾರ್ಗೆಟ್ ಮಾಡಲಾಗಿದೆ. ಇದಕ್ಕೆ ಸಿದ್ದರಾಮಯ್ಯ ನೇರ ಕಾರಣ ಎಂದರು.
ಹೀಗಾಗಿಯೇ ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯಗೆ ಬನ್ನಿ ಎಂದು ಹೈಕಮಾಂಡ್ ಹೇಳಿದೆ. ಇದರಿಂದ ಎಲ್ಲಿ ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕೆಂದು ಈ ರೀತಿ ಡಿಕೆಶಿ ಮೇಲೆ ಸಿದ್ದರಾಮಯ್ಯ ಷಡ್ಯಂತ್ರ್ಯ ಮಾಡಿದ್ದಾರೆ. ಇದು ಸಂಪೂರ್ಣ ಸಿದ್ದರಾಮಯ್ಯ ಅವರಿಂದಲೇ ನಡೆದಿರುವ ಷಡ್ಯಂತ್ರ್ಯ ಎಂದು ಪ್ರತಾಪ್ ಸಿಂಹ ಆರೋಪಿಸಿದರು.
ಸಿದ್ದರಾಮಯ್ಯ ಎಲಿಮೆನೆಟರಿ ಆಗಿ ಕೆಲಸ ಮಾಡುತ್ತಿದ್ದಾರೆ. ದೆಹಲಿಗೆ ಬನ್ನಿ ಎಂದಾಗ ಸಿದ್ದರಾಮಯ್ಯ ವಿಚಲಿತರಾಗಿ ಹೀಗೆ ಮಾಡಿಸಿದ್ದಾರೆ. ಇದರಿಂದ ಕಾಂಗ್ರೆಸ್ ಸಂಪೂರ್ಣವಾಗಿ ನಾಶವಾಗುತ್ತದೆ. ಅನಾಯಾಸವಾಗಿ ಇದರ ಲಾಭ ಬಿಜೆಪಿಗೆ ಬರಲಿದೆ ಎಂದು ಹೇಳಿದರು.
ಮನಗೂಳಿ ಅವರು ಇಂದು ನಮ್ಮ ಮಧ್ಯೆ ಇಲ್ಲ, ಅವರ ಮಗ ಇದ್ದಾರೆ. ನಮ್ಮ ಮಗನ ಜವಾಬ್ದಾರಿ ನಿಮ್ಮದು. ನಿಮ್ಮ ಮಡಿಲಿಗೆ ನನ್ನ ಮಗನನ್ನು ಹಾಕಿದ್ದೇನೆ ಎಂದು ಸಾಯುವ ಮುನ್ನ ಸ್ವತಃ ಮನಗೂಳಿ ಅವರೇ ಹೇಳಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಮಾಜಿ ಸಚಿವ ಕುಮಾರಸ್ವಾಮಿ ಅವರು ಸಾಯುವ ಮುನ್ನ ಡಿಕೆಶಿಯನ್ನು ಭೇಟಿ ಮಾಡಿರಲಿಲ್ಲ ಎಂಬ ಹೇಳಿಕೆಗೆ ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಂದಗಿ ಮತ್ತು ಹಾನಗಲ್ ನಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ನಾವು ಜಾತಿ ಮೇಲೆ ಲೆಕ್ಕಾಚಾರ ಇಟ್ಟು ರಾಜಕೀಯ ಮಾಡಲ್ಲ, ನೀತಿ ಮೇಲೆ ರಾಜಕೀಯ ಮಾಡುತ್ತೇವೆ. ಅಲ್ಪಸಂಖ್ಯಾತರು ಪ್ರಜ್ಞಾವಂತರಿದ್ದಾರೆ. ಯಾರಿಗೆ ಮತ ಹಾಕಿದರೆ ಯೋಗ್ಯ ಎಂಬುದು ಅವರಿಗೆ ಗೊತ್ತಿದೆ ಎಂದು ಹೇಳಿದರು.
ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಅವರ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ, ತಿಳಿದುಕೊಂಡು ಮಾತನಾಡುವೆ ಎಂದ ಅವರು, ಸಲೀಂ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ಡಿ.ಕೆ. ಶಿವಕುಮಾರ್ ನಿರಾಕರಿಸಿದರು.
ನಾಳೆಯಿಂದ ಉಪಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ದಿನಗಳ ಕಾಲ ಉಪಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ. ಎರಡು ದಿನ ಹಾನಗಲ್, ಎರಡು ದಿನ ಸಿಂದಗಿಯಲ್ಲಿ ಪ್ರಚಾರ ಮಾಡುತ್ತೇನೆ. ಎರಡೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಸರಾ ಸಂದರ್ಭದಲ್ಲಿ ಟೂರಿಸಂ ಸರ್ಕ್ಯೂಟ್ ಮಾಡುತ್ತೇವೆ. ದಸರಾ ವಸ್ತು ಪ್ರದರ್ಶನವನ್ನು 365 ದಿನ ಬಳಕೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಇದಕ್ಕೆ ಎಲ್ಲರ ಜೊತೆ ಮಾತುಕತೆ ನಡೆಸುತ್ತೇನೆ. ಈ ಬಾರಿಯ ದಸರಾ ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾಗಿದೆ. ಮುಂದಿನ ವರ್ಷ ಅದ್ದೂರಿಯಾಗಿ ದಸರಾ ನಡೆಸುತ್ತೇವೆ ಎಂದು ಹೇಳಿದರು.
ನಾನು ಜಲಸಂಪನ್ಮೂಲ ಇಲಾಖೆ ಜವಾಬ್ದಾರಿ ವಹಿಸಿಕೊಂಡು ಎರಡು ತಿಂಗಳಾಗಿದೆ. ಅವರು ಮಾತನಾಡಿರುವುದು ಸತ್ಯ ಇರಬಹುದು. ನಾನು ಕೋಟೆಗೋಡೆ ಹೊರಗಡೆ ಇದ್ದೆ, ಇದೀಗ ಒಳಗೆ ಬಂದಿದ್ದೇನೆ. ಹೀಗಾಗಿ ಇದರ ಬಗ್ಗೆ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಕಾಂಗ್ರೆಸ್ ಮುಖಂಡರಾದ ಸಲಿಂ ಹಾಗೂ ಉಗ್ರಪ್ಪನವರ ಮಾತುಕತೆ ವಿಚಾರವಾಗಿ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಉಗ್ರಪ್ಪ ಹಾಗೂ ಸಲೀಂ ಅವರು ಈ ಬಗ್ಗೆ ದಾಖಲೆ ನೀಡಿದರೆ ತನಿಖೆ ಮಾಡಿಸಲಾಗುವುದು. ಅವಶ್ಯಕತೆ ಬಿದ್ದಾಗ ಸೊಮೊಟೋ ಕೇಸ್ ದಾಖಲಿಸುತ್ತೇವೆ ಎಂದು ಹೇಳಿದರು.
ಮಾಳಾ ಮಲ್ಲೇಶ್ವರ ಸ್ವಾಮಿ ಜಾತ್ರೆಯಲ್ಲಿ ಭಕ್ತರಲ್ಲಿ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತಕ್ಕೆ 60 ಭಕ್ತರು ಗಂಭೀರ ಗಾಯಗೊಂಡ ಘಟನೆ ರಾಯಚೂರು ಗಡಿಭಾಗದ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆಲೂರು ತಾಲೂಕಿನ ಹೊಳಗುಂದ ಹೋಬಳಿಯ ದೇವರಗಟ್ಲು ಗ್ರಾಮದಲ್ಲಿ ನಡೆದಿದೆ.
ಅಹೋರಾತ್ರಿ ನಡೆಯುವ ಈ ಜಾತ್ರೆ ವೇಳೆ ದೊಣ್ಣೆಯಿಂದ ಭಕ್ತರು ಪರಸ್ಪರ ಹೊಡೆದಾಡುವುದು ಸಂಪ್ರದಾಯ. ಈ ವೇಳೆ ತ್ರಿಶೂಲದ ಹೊಡೆತಕ್ಕೆ ನೆಲಕ್ಕೆ ಬಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದು, ಇದರಿಂದ ಭಕ್ತರ ಮಧ್ಯೆ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಗಿ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಆದೋನಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಕಾರು ಹರಿದು ನಾಲ್ಕು ವರ್ಷದ ಮಗು ಮೃತಪಟ್ಟಿದ್ದು, ಗರ್ಭಿಣಿ ತಾಯಿ ಗಂಭೀರ ಗಾಯಗೊಂಡ ಘಟನೆ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಜರುಗಿದೆ.
ಹರಪನಹಳ್ಳಿ ತಾಲೂಕಿನ ಪಟ್ಟಣಕುಂಚೂರು ಗ್ರಾಮದ ಹನುಮಂತ (4) ಮೃತ ಮಗು. ಗರ್ಭಿಣಿ ರೂಪ (26) ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸರಕಾರಿ ಆಸ್ಪತ್ರೆಯ ನೌಕರ ರವಿ ಎಂಬಾತನ ಅಜಾಗರೂಕತೆಯ ಕಾರು ಚಾಲನೆ ದುರ್ಘಟನೆಗೆ ಕಾರಣವಾಗಿದೆ.
ಘಟನೆ ವಿವರ
ಕುಂಚೂರು ಗ್ರಾಮದ ಕೋಟೆಪ್ಪ ಮತ್ತು ಮಂಜಮ್ಮ ದಂಪತಿಗೆ ಎರಡು ಮಕ್ಕಳಿದ್ದು, ಅನಾರೋಗ್ಯದ ಕಾರಣ 4 ದಿನದ ಹಿಂದೆ 8 ತಿಂಗಳ ಗರ್ಭಿಣಿಯಾಗಿರುವ ರೂಪಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ತಿಂಡಿ ತಿನ್ನಲು ರೂಪ, ತನ್ನಿಬ್ಬರು ಮಕ್ಕಳೊಂದಿಗೆ ಹೊರಗಿರುವ ಕ್ಯಾಂಟೀನ್‌ಗೆ ಬಂದಿದ್ದು, ಮಗುವಿನೊಂದಿಗೆ ಸರ್ಕಾರಿ ಆಸ್ಪತ್ರೆಯ ಆವರಣದ ಸಿಸಿ ರಸ್ತೆ ಬದಿಗೆ ನಿಂತಿದ್ದಾಗ ಆಸ್ಪತ್ರೆಯ ‘ಡಿ’ ಗ್ರೂಪ್ ನೌಕರ ಅಜಾಗರೂಕತೆಯಿಂದ ಕಾರು ಚಲಾಯಿಸಿ ಮಗುವಿಗೆ ತಲೆಯ ಮೇಲೆ ಹರಿಸಿದ್ದಲ್ಲದೆ, ಜೊತೆಗಿದ್ದ ತಾಯಿ ರೂಪ ಗಂಭೀರ ಗಾಯಗೊಂಡಿದ್ದಾರೆ.
ಆರೋಪಿ ಸರ್ಕಾರಿ ಆಸ್ಪತ್ರೆಯ ಡಿ-ಗ್ರೂಪ್ ನೌಕರ ರವಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಗುವಿನ ತಂದೆ ಕೋಟೆಪ್ಪ ಹರಪನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಒಡಹುಟ್ಟಿದ ತಮ್ಮನಿಗೆ ಮೂರು ಎಕರೆ ಜಮೀನು ಬಿಟ್ಟು ಕೊಟ್ಟಿದ್ದಕ್ಕೆ ಸಿಟ್ಟಾದ ಅಣ್ಣನ ಹೆಂಡತಿ, ತನ್ನ ಇಬ್ಬರು ಸಹೋದರರ ಮೂಲಕ ಮೈದುನನ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ನರಗುಂದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ನಡೆದಿದೆ.
ಜಮೀನು ಬಿಟ್ಟುಕೊಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ತಿಗೆ ತಹಸೀಲ್ದಾರ್ ಕಚೇರಿಗೆ ತಕರಾರು ಅರ್ಜಿ ಸಲ್ಲಿಸಿದ್ದಳು. ಮಂಗಳವಾರ ಪ್ರಕರಣದ ವಿಚಾರಣೆಗೆ ಬಂದಿದ್ದ ಮೈದುನನ ಮೇಲೆ ಅತ್ತಿಗೆ ಸಹೋದರರಿಬ್ಬರು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ.
ಘಟನೆ ವಿವರ
ನರಗುಂದ ತಾಲೂಕಿನ ರಡ್ಡೇರನಾಗನೂರು ಗ್ರಾಮದ ಯಲ್ಲಪ್ಪ ಬೀರಗೌಡ್ರ ಅಲಿಯಾಸ್ ಮೆಣಸಗಿ ಎಂಬುವವರು ತಮ್ಮನಾದ ಗದಿಗೆಪ್ಪ ಹನಮಪ್ಪ ಬೀರಗೌಡ್ರಗೆ ಮೂರು ಎಕರೆ ಜಮೀನು ಬಿಟ್ಟು ಕೊಟ್ಟಿದ್ದರು.
ಅದರೆ ಯಲ್ಲಪ್ಪ ಬೀರಗೌಡ್ರ ಅವರ ಪತ್ನಿಯು ಮೂರು ಎಕರೆ ಜಮೀನು ಬಿಟ್ಟುಕೊಟ್ಟಿದ್ದಕ್ಕೆ ಸಿಟ್ಟಾಗಿದ್ದರು. ಅದಕ್ಕಾಗಿ ತಹಸೀಲ್ದಾರ ಕಚೇರಿಯಲ್ಲಿ ತಕರಾರು ಅರ್ಜಿ ಕೊಟ್ಟಿದ್ದರು. ಇದರ ವಿಚಾರಣೆ ಮಂಗಳವಾರ ನರಗುಂದ ತಹಸೀಲ್ದಾರ ಕಚೇರಿಯಲ್ಲಿ ಇತ್ತು.
ಗದಿಗೆಪ್ಪ ಹನಮಪ್ಪ ಬೀರಗೌಡ್ರ ಅಲಿಯಾಸ್ ಮೆಣಸಗಿ ವಿಚಾರಣೆಗೆ ಆಗಮಿಸಿದ್ದ ವೇಳೆ ಅತ್ತಿಗೆಯ ಸಹೋದರರಾದ ಬೈರನಹಟ್ಟಿ ಗ್ರಾಮದ ನಾಗಪ್ಪ ಶಿವಪ್ಪ ಬೆನ್ನೂರು, ಭರಮಪ್ಪ ಶಿವಪ್ಪ ಬೆನ್ನೂರು ಎಂಬುವವರು ಹಲ್ಲೆ ಮಾಡಿದ್ದಾರೆ.
ಹಲ್ಲೆಯಿಂದ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದರೂ ಬಿಡದ ಬೆನ್ನೂರು ಸಹೋದರರು, ಕೊರಳ ಪಟ್ಟಿ ಹಿಡಿದು ಕಚೇರಿಯ ಹೊರಗೆ ಎಳೆದುಕೊಂಡು ಬಂದು ಹಲ್ಲೆ ಮಾಡಿದ್ದಾರೆ.
ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವರಪ್ಪನಿಗೆ ಹುಟ್ಟಿದ್ರೆ ಸೀಡಿ ಬಿಡುಗಡೆ ಮಾಡಲಿ. ಏನೇ ಮಾಡಿದರೂ ಯತ್ನಾಳ್ ನ ಕುಗ್ಗಿಸಲು ಸಾಧ್ಯವಿಲ್ಲ. ನನ್ನ ಬಾಯಿ ಬಂದ್ ಮಾಡಲು ಯಾರಿಂದಲೂ ಸಾಧ್ಯ ಇಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದ್ದಾರೆ.
ಅಶ್ಲೀಲ ಸೀಡಿ ಬಿಡುಗಡೆ ಊಹಾಪೋಹ ವಿಚಾರವಾಗಿ ವಿಜಯಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಜನ ಪರವಾಗಿ ಹೋರಾಟ ಮಾಡುವವನು. ಯಾವ ಭಯವೂ ಇಲ್ಲ. ನೀರಾವರಿ ಇಲಾಖೆಯಲ್ಲಿ ನಡೆದ ಕೋಟ್ಯಾಂತರ ಅವ್ಯವಹಾರ, 12 ಪರ್ಸೆಂಟ್ ವಿಷಯ ಹೇಳಿದ್ದೇ ನಾನು. ಅದನ್ನೇ ಈಗ ಇನಕಂ ಟ್ಯಾಕ್ಸ್ ನವರು ಒಪ್ಪಿಕೊಂಡಿದ್ದಾರೆ.
ಇಂತಹ ಭ್ರಷ್ಟಾಚಾರಗಳನ್ನು ಹೊರ ತೆಗೆದಿದ್ದಕ್ಕೆ ಭಯಪಟ್ಟು ಕೃತಕ ಸೀಡಿ ತಯಾರಿಸಿದ್ದಾರೆ. ಈ ಪಿತೂರಿಯಲ್ಲಿ ನಮ್ಮ ಪಕ್ಷದವರು ಸೇರಿದಂತೆ ಸರ್ವ ಪಕ್ಷದವರು ಇದ್ದಾರೆ. ಇದಕೆಲ್ಲ ನಾನು ಹೆದರಲ್ಲ. ಇದರ ಬಗ್ಗೆ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.