Home Blog Page 3346

ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಮೋಸ ಮಾಡಿದ ಶಿಕ್ಷಕಿಗೆ ಶಿಕ್ಷೆ

ವಿಜಯಸಾಕ್ಷಿ ಸುದ್ದಿ, ಗದಗ

ಸುಳ್ಳು ಜಾತಿ ಪ್ರಮಾಣಪತ್ರವನ್ನು ನೀಡಿ ಅದೇ ಪ್ರಮಾಣಪತ್ರದ ಆಧಾರದಿಂದ ಶಿಕ್ಷಣ ಇಲಾಖೆಯಲ್ಲಿ ಪ.ಪಂಗಡದ ಅಭ್ಯರ್ಥಿಗೆ ಮೀಸಲಾಗಿದ್ದ ಶಿಕ್ಷಕಿ ಹುದ್ದೆಯನ್ನು ಪಡೆದುಕೊಂಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದಲ್ಲಿ ಆರೋಪಿತಳಾದ ಅನೀಸಾಬಾನು ಅಲ್ಲಾಭಕ್ಷ ಬಾಲಸಿಂಗ್ ಮೂಲತಃ ಸುನ್ನಿ ಮುಸಲ್ಮಾನ ಜಾತಿಗೆ ಸೇರಿದವಳಾಗಿದ್ದು, ತಾನು ಚೋಧಾರ ಪರಿಶಿಷ್ಟ ಪಂಗಡ ಜಾತಿಗೆ ಸೇರಿದವಳಿದ್ದೇನೆ ಎಂದು ಸುಳ್ಳು ಮಾಹಿತಿ ಹಾಗೂ ದಾಖಲೆಗಳನ್ನು ಗದಗ ತಹಶೀಲ್ದಾರರಿಗೆ 22-7-1988, 26-5-1989ರಂದು ನೀಡಿ ಗದಗ ತಹಶೀಲ್ದಾರರು ತಮ್ಮ ವಿಧಿಬದ್ಧ ಅಧಿಕಾರ ದುರುಪಯೋಗವಾಗುವಂತೆ ಹಾಗೂ ನಿಜವಾದ ಪರಿಶಿಷ್ಟ ಪಂಗಡದ ಜನರಿಗೆ ಅನ್ಯಾಯವಾಗುವಂತೆ ಚೋಧಾರ ಪರಿಶಿಷ್ಠ ಪಂಗಡದ ಜಾತಿ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದರು.

ಇದನ್ನೂ ಓದಿ  ಬಲಾತ್ಕಾರ ಪ್ರಕರಣ: ಆರೋಪಿಗೆ ದಂಡ, ಜೈಲು ಶಿಕ್ಷೆ

ಇದೇ ಪ್ರಮಾಣಪತ್ರದ ಆಧಾರದ ಮೇಲೆ ಪರಿಶಿಷ್ಟ ಪಂಗಡದ ಜನರಿಗೆ ಮೀಸಲಾಗಿದ್ದ ಶಿಕ್ಷಕಿ ಹುದ್ದೆಯನ್ನು ಪಡೆದುಕೊಂಡು ಶಿಕ್ಷಕಿಯಾಗಿ ಆಯ್ಕೆಯಾಗಿ ನಿಜವಾದ ಪ.ಪಂಗಡದ ಜನರಿಗೆ ಹಾಗೂ ಸರ್ಕಾರಕ್ಕೆ ಮೋಸವೆಸಗಿದ ಅಪರಾಧದ ಕುರಿತಾಗಿ ಪೊಲೀಸ್ ನಿರೀಕ್ಷಕರು, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಬೆಳಗಾವಿಯ ಎ.ಎನ್. ಗಾಳಿ ತನಿಖೆಯನ್ನು ನಡೆಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸಾಕ್ಷಿ ವಿಚಾರಣೆ ನಡೆಸಿದ ಗದಗಿನ ಮಾನ್ಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ನರಸಿಂಹಸಾ. ಎಂ.ವಿ ಅವರು, ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಆರೋಪಿ ಅನೀಸಾಬಾನು ಅಲ್ಲಾಭಕ್ಷ ಬಾಲಸಿಂಗ್ ಇವಳಿಗೆ ಜು.22ರಂದು ಭಾ.ದಂ.ಸಂ ಕಲಂ: 197,198,199 ಮತ್ತು 200ರ ಅಡಿಯಲ್ಲಿ 3 ವರ್ಷ ಸಾದಾ ಶಿಕ್ಷೆ ಹಾಗೂ 5 ಸಾವಿರ.ರೂ ದಂಡ ಮತ್ತು ಕಲಂ: 420 ಅಡಿಯಲ್ಲಿ 5 ವರ್ಷ ಸಾದಾ ಶಿಕ್ಷೆ ಹಾಗೂ 50 ಸಾವಿರ.ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸವಿತಾ.ಎಂ. ಶಿಗ್ಲಿ ಸಾಕ್ಷಿ ವಿಚಾರಣೆ ನಡೆಸಿದ್ದು, ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನಗೌಡ ಬಸವನಗೌಡ ದೊಡ್ಡಗೌಡ್ರ ವಾದ ಮಂಡಿಸಿದ್ದರು.

ಗದಗ ಜಿಲ್ಲಾ ಪೊಲೀಸರ ವಿಶೇಷ ಕಾರ್ಯಾಚರಣೆ; ಗಾಂಜಾ ಮಾರಾಟ ಮಾಡುತ್ತಿದ್ದ ಎಂಟು ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಜು.20ರಿಂದ 26ರವರೆಗೆ ವಿಶೇಷ ಡ್ರೈವ್ ನಡೆಸಿದ ಜಿಲ್ಲಾ ಪೊಲೀಸರು ವರ್ಷಗಳಿಂದಲೂ ಸಮಾಜಕ್ಕ ಧಕ್ಕೆಯಾಗಿರುವ, ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವ ಗಾಂಜಾ ಮಾರಾಟ ಮಾಡುತ್ತಿರುವ ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನಿನಡಿಯಲ್ಲಿ ಕ್ರಮ ಕೈಗೊಂಡಿದ್ದಾರೆ.

ಬೆಟಗೇರಿಯಲ್ಲಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು 220ಗ್ರಾಂ.(ಅಂದಾಜು ಬೆಲೆ 22,200.ರೂ) ಗಾಂಜಾ ಜಪ್ತಿ, ಗದಗ ಗ್ರಾಮೀಣ ಭಾಗದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ 257 ಗ್ರಾಂ.(ಅಂದಾಜು ಬೆಲೆ 25,700.ರೂ) ಗಾಂಜಾ ಜಪ್ತಿ, ಶಿರಹಟ್ಟಿಯಲ್ಲಿ ಇಬ್ಬರು ಆರೋಪಿಗಳಿಂದ 230ಗ್ರಾಂ.( ಅಂದಾಜು ಬೆಲೆ 23,0000.ರೂ) ಗಾಂಜಾ, ಲಕ್ಷ್ಮೇಶ್ವರದಲ್ಲಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು 3.6 ಕೆ.ಜಿ ತೂಕದ ಹಸಿ ಗಾಂಜಾ(ಅಂದಾಜು ಬೆಲೆ 36,000.ರೂ) ಹಾಗೂ ಗಜೇಂದ್ರಗಡದಲ್ಲಿ ಇಬ್ಬರು ಆರೋಪಿತರಿಂದ 202 ಗ್ರಾಂ(ಅಂದಾಜು ಬೆಲೆ 5,000.ರೂ) ಗಾಂಜಾ ವಶಪಡಿಸಿಕೊಡ್ಡಿದ್ದು, ಒಟ್ಟೂ ಎಂಟು ಪ್ರಕರಣಗಳಲ್ಲಿ 1,11,900.ರೂ ಬೆಲೆಬಾಳುವ 4 ಕೆಜಿ 509ಗ್ರಾಂ. ಗಾಂಜಾ ವಶಪಡಿಸಿಕೊಂಡಿದ್ದಾರೆ.

ಬೆಟಗೇರಿ ಠಾಣೆಯ ಪೊಲೀಸರು ಬಾಲಪ್ಪ ಗೋವಿಂದಪ್ಪ ಹರಿಣಶಿಕಾರಿ, ಗದಗ ಗ್ರಾಮೀಣ ಪೊಲೀಸರು ಮೀನಾಕ್ಷಿ ನಾಗರಾಜ್ ಮುತಗಾರ ಹಾಗೂ ಬಬಿತಾ ಶಿವಾಜಿ ಬೈಲಾರಿ, ಶಿರಹಟ್ಟಿ ಪೊಲೀಸರು ಮಾದೇವಕ್ಕ ದೇವಪ್ಪ ಕಂಬಳಿ ದೇವಪ್ಪ ಪುಟ್ಟಪ್ಪ ಕಂಬಳಿ, ಲಕ್ಷ್ಮೇಶ್ವರ ಪೊಲೀಸರು ದಯಾನಂದ ನೀಲಪ್ಪ ಬಸಾಪೂರ, ಗಜೇಂದ್ರಗಡ ಪೊಲೀಸರು ಮಹಾಂತಯ್ಯ ಸಣ್ಣರಾಚಯ್ಯ ಹಿರೇಮಠ ಹಾಗೂ ಚನ್ನವ್ವ ಚಂದಪ್ಪ ಹರಿಣಶಿಕಾರಿ ಎಂಬುವರನ್ನು ಬಂಧಿಸಿದ್ದಾರೆ ಎಂದು ಎಸ್ಪಿ ಶಿವಪ್ರಕಾಶ್ ದೇವರಾಜು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ಇಂಥಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡ ವ್ಯಕ್ತಿಗಳನ್ನು ಗುರುತಿಸಿ ಅವರ ಮೇಲೆ ಹೆಚ್ಚಿನ ನಿಗಾ ಇಟ್ಟು ಗಡಿಪಾರು ಶಿಕ್ಷೆಯಲ್ಲದೇ ಹೆಚ್ಚಿನ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ಶಿವಪ್ರಕಾಶ್ ದೇವರಾಜು ಎಚ್ಚರಿಕೆ ‌ನೀಡಿದ್ದು, ಸದರಿ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಪತ್ತೆಮಾಡಿ ಕ್ರಮ ಜರುಗಿಸಿದ ಇಲಾಖೆಯ ತನಿಖಾಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.

ರಾಜಕೀಯ ಪ್ರೇರಿತ ಕೊಲೆಗಳಿಗೆ ಕೊನೆ ಎಂದು..!; ವೆಲ್ಫೇರ್ ಪಾರ್ಟಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಜಾತ್ಯಾತೀತ ನಾಡು ಎನ್ನುವುದೀಗ ಕೇವಲ ಮಾತಾಗಿ ಉಳಿದಿದೆ. ಸ್ವಾರ್ಥ ರಾಜಕೀಯಕ್ಕೆ ಅಮಾಯಾಕ ಯುವಕರು ಬಲಿಯಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮಸೂದ್ ಮತ್ತು ಪ್ರವೀಣ್ ಎಂಬ ಯುವಕರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ತಪ್ಪಿಸ್ತರನ್ನು ಕೂಡಲೆ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಮತ್ತು ಮುಂದೆ ಇಂತಹ ದುಷ್ಕೃತ್ಯಗಳು ರಾಜ್ಯದಲ್ಲಿ ಮರುಕಳಿಸದಂತೆ ಸರಕಾರವು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬಿಜೆಪಿ ಪಕ್ಷದ ಕೆಲವು ಸಂಸದರು ಮತ್ತು ಶಾಸಕರು ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಸರ್ಕಾರವನ್ನು ಒತ್ತಾಯಿಸಿರುವುದು ಹಾಸ್ಯಾಸ್ಪದವಾಗಿದೆ. ಅಂದಹಾಗೆ ಸಧ್ಯಕ್ಕೆ ರಾಜ್ಯದಲ್ಲಿ ಯಾವ ಪಕ್ಷದ ಸರ್ಕಾರ ಆಡಳಿತದಲ್ಲಿದೆ ಎಂಬುದನ್ನು ಅವರು ದಯಮಾಡಿ ತಿಳಿಸಬೇಕು?

ರಾಜಕೀಯದಲ್ಲಿ ಕಾಲಹರಣ ಮಾಡದೇ ರಾಜ್ಯದಲ್ಲಿ ತಾಂಡವವಾಡುತ್ತಿರುವ ಕೋಮುದ್ವೇಷ ನಿವಾರಣೆಗೆ ಸರಕಾರ ಮುಂದಾಗಬೇಕು ಎಂದು ತಾಹಿರ್ ಹುಸೇನ್ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ರಾತ್ರಿಯಿಡೀ ಸುರಿದ ಭಾರೀ ಮಳೆ; ಮನೆಗೆ ನುಗ್ಗಿದ ಚರಂಡಿ ನೀರು, ಜಲಾವೃತಗೊಂಡ ಬಡಾವಣೆ, ನಗರಸಭೆ ವಿರುದ್ಧ ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ಗದಗ

ಮಧ್ಯರಾತ್ರಿಯಿಂದ ಗದಗ-ಬೆಟಗೇರಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಲವು ಅವಾಂತರ ಸೃಷ್ಟಿ ಆಗಿದ್ದು, ಒಂದು ಕಡೆ ಚರಂಡಿ ನೀರು ಮನೆಗೆ ನುಗ್ಗಿದರೇ, ಇನ್ನೊಂದು ಕಡೆ ರಾಜ ಕಾಲುವೆಯ ನೀರು ಮನೆಗೆ ನುಗ್ಗಿ ಆಹಾರ ಧಾನ್ಯ, ಗೃಹೋಪಯೋಗಿ ವಸ್ತುಗಳು ನೀರಲ್ಲಿ ತೇಲಾಡುತ್ತಿರುವ ಪ್ರಸಂಗ ನಡೆದಿದೆ.

ಗದಗದ ಗಂಗಿಮಡಿ, ಮುಳಗುಂದ ನಾಕಾದ ಕೆಇಬಿ ಬಳಿ ಹಾಗೂ ಬೆಟಗೇರಿಯ ನಾಲ್ಕನೇ ವಾರ್ಡ್ ನ ಮಂಜುನಾಥ್ ನಗರದ ವಾಲ್ಮೀಕಿ ಅಂಬೇಡ್ಕರ್ ಬಡಾವಣೆಯಲ್ಲಿ ರಾತ್ರಿ ಮೂರು ಗಂಟೆಗೆ ‌ಮನೆಗೆ ಏಕಾಏಕಿ ನುಗ್ಗಿದ ರಾಜ ಕಾಲುವೆಯ ನೀರಿನಿಂದಾಗಿ‌ ಗಾಬರಿಬಿದ್ದ ಜ‌ನ ನೀರು ಮನೆಯಿಂದ ಹೊರಗಡೆ ಹಾಕಲು ಹರಸಾಹಸ ನಡೆಸಿದರು. ಆದರೆ ಅಷ್ಟರಲ್ಲೇ ಇಡೀ ಏರಿಯಾ ನೀರಿನಿಂದ ಜಲಾವೃತಗೊಂಡಿತು. ಇದರಿಂದಾಗಿ ಜನ ಸಂಕಷ್ಟ ಎದುರಿಸುವಂತಾಗಿದೆ.

ಕಳೆದ ನಾಲ್ಕು ವರ್ಷಗಳ ಹಿಂದೆಯೂ ಇಡೀ ಬಡಾವಣೆ ಮೊಳಕಾಲುದ್ದದ ನೀರು ನಿಂತ ಹೈರಾಣಾಗಿದ್ದರು. ಆಗೆಲ್ಲಾ ಭೇಟಿ ನೀಡಿದ ಶಾಸಕ‌ ಎಚ್ ಕೆ ಪಾಟೀಲ್ ಹಾಗೂ ನಗರಸಭೆ ಅಧಿಕಾರಿಗಳು, ರಾಜ ಕಾಲುವೆ ದುರಸ್ತಿಗೊಳಿಸಿ ಎತ್ತರಕ್ಕೆ ಕಟ್ಟಿಸಿ ಇಂತಹ ಸಮಸ್ಯೆ ಎದುರಾಗದಂತೆ‌ ನೋಡಿಕೊಳ್ಳುವುದಾಗಿ ಬರವಸೆ ನೀಡಿದ್ದರು.

ಆದರೆ ಇದುವರೆಗೂ ಇಲ್ಲಿ ಯಾವುದೇ ಕಾಮಗಾರಿ ನಡೆಯದೆ ಇರುವುದಕ್ಕೆ ಮತ್ತೊಮ್ಮೆ ಇಂತಹ ಅವಾಂತರ ಸೃಷ್ಟಿ ಮಾಡಿದೆ ಎಂದು ಬಡಾವಣೆಯ ಲಕ್ಷ್ಮಣ್ಣ ವಾಲ್ಮೀಕಿ ಎಂಬುವವರು ಆಕ್ರೋಶ ವ್ಯಕ್ತಪಡಿಸಿದರು.

ನರಸಾಪೂರದ ಪೆಟ್ರೋಲ್ ಬಂಕ್ ಬಳಿಯೂ ಮಳೆ ನೀರು ನಿಂತು ಜಲಾವೃತಗೊಂಡಿದೆ. ಇದರಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದ್ದು, ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗದಗನ ಎಪಿಎಂಸಿ ವಸತಿಗೃಹದ ಮುಂದೆಯೂ ಮಳೆ ನೀರು ನಿಂತಿದೆ. ಅವೈಜ್ಞಾನಿಕ ಚರಂಡಿ ನಿರ್ಮಾಣ ಕಾಮಗಾರಿ ಮಾಡದೇ ಇರುವುದರಿಂದ ನೀರು ಹೊರ ಹೋಗದೆ ಜಲಾವೃತಗೊಂಡಿದೆ. ಮನೆಯಿಂದ ಹೊರಬರಲೂ ಹರಸಾಹಸಪಡಬೇಕಾಗಿದ್ದು, ಗುತ್ತಿಗೆದಾರರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ತಾಯಿ- ಮಗಳನ್ನು ರಕ್ಷಿಸಿದ ERSS 112 ಸಿಬ್ಬಂದಿ

ವಿಜಯಸಾಕ್ಷಿ ಸುದ್ದಿ, ಗದಗ

ಜೀವನದಲ್ಲಿ ಜಿಗುಪ್ಸೆಗೊಂಡು ಮಗಳ ಸಮೇತ ಕಾಲುವೆಯ ನೀರಲ್ಲಿ ಮುಳಗಿ ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆ ಹಾಗೂ ಮಗಳ ಪ್ರಾಣ ERSS 112 ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಉಳಿದಿದೆ.

ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಹಾರೋಗೇರಿ‌ ಗ್ರಾಮದ 38 ವರ್ಷದ ಮಹಿಳೆ ತನ್ನ ಹದಿನಾಲ್ಕು ವರ್ಷದ ಮಗಳನ್ನು ಕರೆದುಕೊಂಡು ಗ್ರಾಮದ ಸಮೀಪದಲ್ಲಿಯೇ ಇರುವ ದೊಡ್ಡ ಕಾಲುವೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಳು. ಮಗಳನ್ನು ನೀರಲ್ಲಿ ಮುಳಗಿಸುತ್ತಿದ್ದಂತೆಯೇ ಕಣ್ಣಾರೆ ಕಂಡ ಗ್ರಾಮಸ್ಥರು ERSS 112 ಕ್ಕೆ ಕರೆ ಮಾಡಿ ಮಾಹಿತಿ ‌ತಿಳಿಸಿದ್ದಾರೆ.

ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ 112 ಸಿಬ್ಬಂದಿ ಮಗಳನ್ನು ಹಾಗೂ ತಾಯಿಯನ್ನು ರಕ್ಷಿಸಿದ್ದಾರೆ. ನೀರಲ್ಲಿ ಮುಳಗಿದ್ದ ಹದಿನಾಲ್ಕು ವರ್ಷ ಮಗಳು ನೀರು ಕುಡಿದಿದ್ದರಿಂದ ತೀವ್ರ ಅಸ್ವಸ್ಥಗೊಂಡಿದ್ದಳು. ತಕ್ಷಣ ಇಬ್ಬರನ್ನೂ ತಮ್ಮ ವಾಹನದಲ್ಲಿ ಗದಗ ಜಿಮ್ಸ್ ಆಸ್ಪತ್ರೆಗೆ ಕರೆ ತಂದು ಸೂಕ್ತ ಚಿಕಿತ್ಸೆ ‌ಕೊಡಿಸಿದರು.

ಚಿಕಿತ್ಸೆ ನೀಡಿದ ವೈದ್ಯರು, ಇಬ್ಬರು ಪ್ರಾಣಾಪಯದಿಂದ ಪಾರಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದು, ಸಕಾಲಕ್ಕೆ ಕರೆತಂದು ಪ್ರಾಣ ಉಳಿಸಿದ ERSS 112 ಸಿಬ್ಬಂದಿಗಳಾದ ಮುಂಡರಗಿ ಠಾಣೆಯ ಹೆಡ್ ಕಾನಸ್ಟೇಬಲ್ ಕಾಸೀಮಸಾಬ್ ಡಿ ಹರಿವಾಣ, ಪೇದೆ ಎಸ್ ಎಮ್ ಸುಂಕದ ಹಾಗೂ ಚಾಲಕ ದಾವಲಸಾಬ್ ಎ ಕಲಯಗಾರ ಅವರ ಸಮಯ ಪ್ರಜ್ಞೆಗೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬಲಾತ್ಕಾರ ಪ್ರಕರಣ: ಆರೋಪಿಗೆ ದಂಡ, ಜೈಲು ಶಿಕ್ಷೆ

ವಿಜಯಸಾಕ್ಷಿ ಸುದ್ದಿ, ಗದಗ

ಮೇ.2ರಂದು ಶಿರಹಟ್ಟಿ ಠಾಣಾ ವ್ಯಾಪ್ತಿಯ ಕಡಕೋಳ ಹೊಸಳ್ಳಿ ರಸ್ತೆಯ ಜಮೀನೊಂದರ ಬಳಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಸತ್ರ ನ್ಯಾಯಾಲಯವು ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿತನಿಗೆ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಘಟನೆಯ ವಿವರ

2017ರ ಮೇ ತಿಂಗಳ 2ರಂದು ಮದ್ಯಾಹ್ನ 2-30ರ ಸುಮಾರಿಗೆ ಆರೋಪಿ ಶಿವಪುತ್ರಪ್ಪ ಉಡಚಪ್ಪ ಗೊಜನೂರು, ಸದರಿ ಪ್ರಕರಣದ ದೂರುದಾರಳಿಗೆ `ನೀನು ನನ್ನೊಟ್ಟಿಗೆ ಮಲಗು, ನಿನಗೆ ಎಷ್ಟು ದುಡ್ಡು ಕೇಳಿದರೂ ಕೊಡುತ್ತೇನೆ, ನಿನ್ನ ಗಂಡ ಸರಿಯಿಲ್ಲ, ನಿಮ್ಮ ಜಾತಿಯವರು ಯಾರು ಕರೆದರೂ ಬರುತ್ತೀರಿ’ ಇತ್ಯಾದಿ ಕೆಟ್ಟ ಶಬ್ಧಗಳಿಂದ ಜಾತಿ ನಿಂದನೆ ಮಾಡಿದ್ದಲ್ಲದೇ ಫಿರ್ಯಾದಿಯ ಕಪಾಳಕ್ಕೆ ಹೊಡೆದು ಕೈ ಹಿಡಿದೆಳೆದು ಬಲಾತ್ಕಾರ ನಡೆಸಿದ್ದಲ್ಲದೇ, ಈ ಸಂಗತಿಯನ್ನು ಗಂಡನಿಗಾಗಲೀ, ಬೇರೆ ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ, ಕೊಲೆ ಮಾಡುತ್ತೇನೆ ಎಂದು ಜೀವಬೆದರಿಕೆ ಹಾಕಿರುವ ಬಗ್ಗೆ ಆರೋಪಿತ ಶಿವಪುತ್ರಪ್ಪ ವಿರುದ್ಧ ಅಂದಿನ ಪೊಲೀಸ್ ಉಪ ಅಧೀಕ್ಷಕ ವಿಜಯಕುಮಾರ್ ತಳವಾರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ಸಾಕ್ಷಿಗಳ ವಿಚಾರಣೆ ನಡೆಸಿದ ಗದಗ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರ. ಎಸ್. ಶೆಟ್ಟಿ ಅವರು ಸದರಿ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದರಿಂದ ಮಂಗಳವಾರ ಅಂತಿಮ ತೀರ್ಪು ನೀಡಿದ್ದು, ಶಿವಪುತ್ರಪ್ಪ ಉಡಚಪ್ಪ ಗೊಜನೂರು ಇವನಿಗೆ ಕಲಂ: 323 ಭಾದಂಸಂ ಅಡಿಯಲ್ಲಿ 6 ತಿಂಗಳ ಸಾದಾ ಸಜೆ, ಮತ್ತು 376(1) ಭಾದಂಸಂ ಅಡಿಯಲ್ಲಿ 7 ವರ್ಷ ಕಠಿಣ ಶಿಕ್ಷೆ ಹಾಗೂ 50.ಸಾವಿರ ರೂ. ದಂಡ, ಕಲಂ: 504 ಭಾದಂಸಂ ಅಡಿಯಲ್ಲಿ 1 ವರ್ಷ ಸಾದಾ ಶಿಕ್ಷೆ, ಕಲಂ: 3(1)(ಆರ್)(ಎಸ್) ಪ.ಜಾ/ಪ.ಪಂ ಕಾಯ್ದೆ ಅಡಿಯಲ್ಲಿ 2 ವರ್ಷ ಶಿಕ್ಷೆ ಹಾಗೂ 10.ಸಾವಿರ ರೂ. ದಂಡ, ಕಲಂ 3(2)(ವಿಎ) ಪ.ಜಾ/ಪ.ಪಂ ಕಾಯ್ದೆ ಅಡಿಯಲ್ಲಿ 1 ವರ್ಷ ಶಿಕ್ಷೆ ಹಾಗೂ 10 ಸಾವಿರ.ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸವಿತಾ. ಎಂ. ಶಿಗ್ಲಿ ಸಾಕ್ಷಿ ವಿಚಾರಣೆ ಮಾಡಿಸಿದ್ದು, ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನಗೌಡ ಬಸವನಗೌಡ ದೊಡ್ಡಗೌಡ್ರ ವಾದ ಮಂಡಿಸಿದ್ದರು.

ಐ.ಟಿ ಅಧಿಕಾರಿ ಎಂದು ಸಿನಿಮೀಯ ಶೈಲಿಯಲ್ಲಿ ಚಿನ್ನಾಭರಣ ದೋಚಿ ದೋಖಾ!

ವಿಜಯಸಾಕ್ಷಿ ಸುದ್ದಿ, ಗದಗ

ವ್ಯಕ್ತಿಯೊಬ್ಬ ನಗರದ ಆಭರಣಗಳ ಅಂಗಡಿಗೆ ಹೋಗಿ, ತಾನು ಐ.ಟಿ. ಅಧಿಕಾರಿಯೆಂದು ನಂಬಿಸಿ ಲಕ್ಷಾಂತರ ರೂ. ಮೌಲ್ಯದ ಆಭರಣಗಳನ್ನು ಖರೀದಿಸಿ ದುಡ್ಡು ಕೊಡದೇ ಮೋಸ ಮಾಡಿರುವ ಬಗ್ಗೆ ಗದಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜು.20ರಂದು ಸಂಜೆ 6.30ರ ಸುಮಾರಿಗೆ ನಗರದ ಸ್ಟೇಷನ್ ರಸ್ತೆಯ ಎಸ್ ಬಿ ಐ ಬ್ಯಾಂಕ್ ಎದುರಿಗಿರುವ ಲೀಲಾ ಲೆಹರ್ ಗೋಲ್ಡ್ ಪ್ಯಾಲೇಸ್ ಆಭರಣಗಳ ಅಂಗಡಿಗೆ ಬಂದ ಅಪರಿಚಿತ ವ್ಯಕ್ತಿಯು, ತನ್ನ ಹೆಸರು ಅನುದೀಪ್ ಕುಮಾರ್ ಎಂತಲೂ, ತಾನು ಗದಗ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆದಾಯ ತೆರಿಗೆ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ.

ನಂತರ ತನಗೆ ಬಂಗಾರದ ಆಭರಣಗಳನ್ನು ಖರೀದಿಸಬೇಕಾಗಿದೆ ಎಂದು ತಿಳಿಸಿ 24.070 ಗ್ರಾಂ. ತೂಕದ 1,33,740.ರೂ. ಬೆಲೆಬಾಳುವ ಬಂಗಾರದ ಚೈನ್, 5.61 ಗ್ರಾಂ. ತೂಕದ 31,730 ಬೆಲೆಬಾಳುವ ಕಪಲ್ ರಿಂಗ್, 4.20 ಗ್ರಾಂ. ತೂಕವಿರುವ 23,750 ರೂ.ಬೆಲೆಯ ಒಂದು ಕಪಲ್ ರಿಂಗ್ ಸೇರಿ ಒಟ್ಟೂ 1,89,220ರೂ. ಬೆಲೆಯ 33.880 ಗ್ರಾಂ. ತೂಕದ ಬಂಗಾರದ ಆಭರಣಗಳನ್ನು ಖರೀದಿಸಿದ್ದಾನೆ.

ಬಿಲ್ ಹಣವನ್ನು ನೀಡುವಾಗ ಆರೋಪಿಯು ಆರ್ಟಿಜಿಎಸ್ ಮೂಲಕ ಹಣ ಪಾವತಿಸುವದಾಗಿ ಹೇಳಿ ಅಂಗಡಿ ಮಾಲಕರ ಎಸ್ ಬಿ ಐ ಬ್ಯಾಂಕ್ ಖಾತೆಯ ವಿವರ ಪಡೆದು, ಖಾತೆಗೆ ಹಣ ಹಾಕದೇ ಮೋಸ ಮಾಡಲಾಗಿದೆ ಎಂದು ದೂರಿನಲ್ಲಿ ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಶಹರ ಠಾಣೆಯ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ವಾಸ್ತವ ವರದಿ ಬರೆಯಲು ಹಿಂಜರಿಕೆ ಬೇಡ; ಜಿ. ಎಸ್. ಪಾಟೀಲ್

ವಿಜಯಸಾಕ್ಷಿ ಸುದ್ದಿ, ರೋಣ

ಪತ್ರಕರ್ತರು ವಾಸ್ತವ ವರದಿಯನ್ನು ಬರೆಯಲು ಹಿಂಜರಿಕೆ ಬೇಡ. ನಾಗರಿಕ ಸಮಾಜ ನಿಮ್ಮನ್ನು ನಂಬಿಕೊಂಡಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ತಮ್ಮ ಕಾರ್ಯ ನಿರ್ವಹಿಸಬೇಕು ಎಂದು ಮಾಜಿ ಶಾಸಕ ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್.ಪಾಟೀಲ ಹೇಳಿದರು.

ಅವರು ಸೋಮವಾರ ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಸ್ಥಾಪಕರಾದ ಡಿ.ವಿ.ಗುಂಡಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದ ನಂತರ ಮಾತನಾಡಿದರು.

ನಾಡಿನ ಜನರು ಮಾಧ್ಯಮಗಳ ಮೆಲೆ ಅತ್ಯಂತ ವಿಶ್ವಾಸ ಇಟ್ಟುಕೊಂಡಿದ್ದಾರೆ. ಅಲ್ಲದೆ ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಪ್ರತಿಪಾದಿಸಿದ್ದಾರೆ. ಹೀಗಿರುವಾಗ ವರದಿಗಾರರು ಹೆದರುವ ಅಗತ್ಯವಿಲ್ಲ. ಆಡಳಿತ ವ್ಯವಸ್ಥೆ ವಿಫಲಗೊಂಡಾಗ ಎಚ್ಚರಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ಸಮಾಜವನ್ನು ಎಚ್ಚರಿಸುವ ಕಾರ್ಯವನ್ನು ಪತ್ರಕರ್ತರು ಮಾಡುವ ಜೊತೆಗೆ ಸಮಾಜದಲ್ಲಿ ಗೌರವವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಪತ್ರಕರ್ತರಿಂದ ಮಾಜಿ ಶಾಸಕ ಜಿ.ಎಸ್.ಪಾಟೀಲರನ್ನು ಸನ್ಮಾನಿಸಲಾಯಿತು.
ಗುಲಗಂಜಿ ಮಠದ ಗುರುಪಾದ ದೇವರು, ಹಜರತ ಸುಲೇಮಾನ ಶಾವಲಿ ಅಜ್ಜನವರು ಸಾನ್ನಿದ್ಯ ವಹಿಸಿದ್ದರು. ತಹಸೀಲ್ದಾರ ವಾಣಿ ಉಂಕಿ, ಇಒ ಸಂತೋಷ ಪಾಟೀಲ, ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ, ತಾಲೂಕಾಧ್ಯಕ್ಷ ಯಲ್ಲಪ್ಪ ತಳವಾರ, ಜಿಲ್ಲಾ ಪಧಾನ ಕಾರ್ಯದರ್ಶಿ ಶಾಂತಕುಮಾರ ಹಂಪಿ, ಜಿಲ್ಲಾ ಗ್ರಾಮೀಣ ಕಾರ್ಯದರ್ಶಿ ಮೆಹೆಬೂಬ ಮೋತೆಖಾನ್, ಸೋಮು ಲದ್ದಿಮಠ, ವಿ.ಬಿ.ಸೋಮನಕಟ್ಟಿಮಠ, ಮುತ್ತಣ್ಣ ಸಂಗಳದ, ರಾಜಣ್ಣ ಸುಂಕದ ಉಪಸ್ಥಿತರಿದ್ದರು.

ಶಕ್ತಿ ಶಾಲಿ ಭಾರತ ನಿರ್ಮಾಣವಾದ್ರೆ ಆತ್ಮ ನಿರ್ಭರ ಭಾರತ; ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಎಂಡ್ ಸ್ಟ್ಯಾಂಡ್ ಅಪ್ ಮುಂತಾದ ಮಹತ್ವದ ಯೋಜನೆಗಳ ಸಹಾಯದಿಂದ ಶಕ್ತಿಶಾಲಿ ಭಾರತವನ್ನು ಕಟ್ಟಲು ಸಾಧ್ಯವಿದೆ. ಇದರ ಒಟ್ಟು ಫಲಿತಾಂಶವೇ ಆತ್ಮನಿರ್ಭರ ಭಾರತ ಎಂದು ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಯಲಚಗುಪ್ಪೆ ಗ್ರಾಮದಲ್ಲಿ ಬೆಂಗಳೂರು ಬಂಟರ ಸಂಘ ನೂತನವಾಗಿ ನಿರ್ಮಿಸಿದ್ದ ಬಿಎಸ್ ಆರ್ ಎನ್ ಎಸ್ ವಿದ್ಯಾನಿಕೇತನ -2 ಶಾಲಾ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭವಿಷ್ಯದಲ್ಲಿ ಉದ್ಯೋಗ ಸೃಷ್ಠಿ, ಮಹಿಳಾ ಸಶಕ್ತಿಕರಣ ಹಾಗೂ ಪರಸ್ಪರ ಸಹಭಾಗಿತ್ವದ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.

ಬಿಎಸ್ ಆರ್ ಎನ್ ಎಸ್ ವಿದ್ಯಾಸಂಸ್ಥೆ ಒಂಬತ್ತು ಎಕರೆ ವಿಸ್ತೀರ್ಣದಲ್ಲಿ ಅದ್ಭುತ ವ್ಯವಸ್ಥೆಯ ಶೈಕ್ಷಣಿಕ ಸಂಕೀರ್ಣವಾಗಿ ನಿರ್ಮಾಣಗೊಂಡಿದೆ. ನಗರದ ಜಂಜಾಟಗಳಿಂದ ದೂರವಿರುವ ಈ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಅನುಕೂಲಕರ ಪ್ರಶಾಂತ ವಾತಾವರಣ ಸೃಷ್ಟಿಸಿಕೊಟ್ಟಿದೆ. ಇಂತದ್ದೊಂದು ಪ್ರಯತ್ನ ಮಾಡಿರುವ ಈ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಗೆ ನಾನು ಅಭಿನಂದನೆ ತಿಳಿಸುತ್ತೇನೆ ಎಂದರು.

ಈ ವಿದ್ಯಾಸಂಸ್ಥೆ ಶಿಕ್ಷಣದ ಜೊತೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ ನೀಡುವಂತಾಗಲಿ ಎಂದು ನಾನು ಬಯಸುತ್ತೇನೆ. ಇದರಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ಬಲಾಢ್ಯರಾಗುತ್ತಾರೆ. ವಿದ್ಯಾರ್ಥಿಗಳು ಈ ದೇಶದ ಭವಿಷ್ಯ. ದೇಶದ ಉನ್ನತಿಗೆ ಹೆಚ್ಚಿನ ಮಹತ್ವಪೂರ್ಣ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಹೊಸ ಶಿಕ್ಷಣ ವ್ಯವಸ್ಥೆಯಲ್ಲಿ ಆಧುನಿಕ ಶಿಕ್ಷಣದ ಜೊತೆ ನಮ್ಮ ಪಾರಂಪರಿಕ ಪ್ರತಿಭೆ-ಕೌಶಲ್ಯಗಳೂ ನಿರ್ಣಾಯಕ ಪಾತ್ರ ವಹಿಸುತ್ತವೆ. ಹೊಸ ಶಿಕ್ಷಣ ವ್ಯವಸ್ಥೆಯ ಸಹಾಯದಿಂದ ನಮ್ಮ ಶಿಕ್ಷಣ ವ್ಯವಸ್ಥೆಗೆ ಹೊಸ ದಿಶೆ ದೊರಕಲಿದೆ. ಬಂಟರ ಸಂಘದ ಆರ್ ಎನ್ ಎಸ್ ವಿದ್ಯಾನಿಕೇತನ ಸಂಸ್ಥೆಯೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದೆ ಎಂಬ ನಂಬಿಕೆ ನನಗಿದೆ ಎಂದು ಗೌರವಾನ್ವಿತ ರಾಜ್ಯಪಾಲರು ಭರವಸೆ ವ್ಯಕ್ತಪಡಿಸಿದರು.

ಶಿಕ್ಷಣ ಸಂಸ್ಥೆಗಳು ದೇಶದ ಪ್ರಗತಿಯ ಮಾಧ್ಯಮ – ಶ್ರೀ ಶ್ರೀ ಶ್ರೀ ಸುಭುದೇಂದ್ರ ತೀರ್ಥ ಸ್ವಾಮಿಜಿ

ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿದ್ರು. ದೇಶದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿವೆ. ಶಿಕ್ಷಣಸಂಸ್ಥೆಗಳು ದೇಶದ ಪ್ರಗತಿಯ ಮಾಧ್ಯಮವಾಗಿದೆ. ಯಾರು ಅಕ್ಷರದಿಂದ ದೂರ ಆಗಿರುತ್ತಾರೆ, ಅವರು ಲೋಕ ಕಂಟಕರಾಗಿ ಜನರನ್ನು ಪೀಡಿಸುತ್ತಾರೆ. ಹೀಗಾಗಿ ದೇಶದ ಉನ್ನತಿಗೆ ಶಿಕ್ಷಣ ಅತ್ಯಗತ್ಯವಾಗಿದೆ ಎಂದರು.

ಈ ನಡುವೆ, ಶಿಕ್ಷಣ ನೀಡುವ ನಿಟ್ಟಿನಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿವೆ. ಶಿಕ್ಷಣ ಸಂಸ್ಥೆಗಳ ಹೆಸರಲ್ಲಿ ಹಣವನ್ನ ಗಳಿಸುವ ಶಿಕ್ಷಣ ಸಂಸ್ಥೆಗಳಿದ್ದಾವೆ. ಜೊತೆಗೆ ಶಿಕ್ಷಣ ಸಂಸ್ಥೆಯನ್ನೇ ಹಿಡನ್ ಅಜೆಂಡ್ ಇಟ್ಟುಕೊಂಡು ಸಮಾಜಕ್ಕೆ ಕಂಟಕವಾಗುವಂತ ಸಂಸ್ಥೆಗಳೂ ಇದ್ದಾವೆ. ಆದರೆ ಶಿಕ್ಷಣ ಸಂಸ್ಥೆಗಳು ಹೇಗಿರಬೇಕು ಅಂದರೆ, ಜಗತ್ತಿನ ಸಮಾಜದ ಉನ್ನತಿಗೆ ಉತ್ತಮವಾದ ವ್ಯಕ್ತಿತ್ವನ್ನ ರೂಪಿಸುವಂತೆ ಇರಬೇಕು. ಅಂಥಹ ಶಿಕ್ಷಣ ನೀಡುವ ನಿಟ್ಟಿನಲ್ಲಿ ಬೆಂಗಳೂರು ಬಂಟ ಸಂಘದ ಮೊದಲನೆ ಘಟಕ ಬೆಳೆÀದು ನಿಂತಿದೆ. ಅದರ ಭಾಗವಾಗಿ ಇಂದು ಎರಡನೇ ಘಟಕ ಲೋಕಾರ್ಪಣೆಗೊಂಡಿದೆ. ಶಿಕ್ಷಣ ಸಂಸ್ಥೆ ಬೆಳೆದು ನಿಂತರೇ ಲೋಕಕ್ಕೆ ಉತ್ತಮ ಪೌರರನ್ನ ಕೊಡುಗೆಯಾಗಿ ನೀಡುತ್ತದೆ ಎಂದು ಹೇಳಿದ್ರು.

ದಕ್ಷಿಣ ಕನ್ನಡ ಭಾಗದಲ್ಲಿ ಬಂಟ ಸಮುದಾಯದವರು ಕೃಷಿಯನ್ನ ಪ್ರಧಾನವಾಗಿಟ್ಟುಕೊಂಡವರು. ಕೃಷಿ ಕ್ಷೇತ್ರದಿಂದ ದೇಶಕ್ಕೆ ಅನ್ನದಾತರಾಗಿ ಬೆಳೆದಂತಹ ಈ ಸಮುದಾಯ, ಇಂದು ಶಿಕ್ಷಣ ಕ್ಷೇತ್ರದಲ್ಲಿ ಹೆಜ್ಜೆ ಇಡುತ್ತಿದೆ. ಅದೇ ರೀತಿ ಈ ಶಿಕ್ಷಣ ಸಂಸ್ಥೆ ರಾಜ್ಯಕ್ಕೆ ದೇಶಕ್ಕೆ ಅಷ್ಟೆ ಅಲ್ಲದೆ ಇಡೀ ವಿಶ್ವಕ್ಕೆ ಮಾದರಿಯಾಗಿ ಬೆಳಿಯಲಿ ಎಂದು ಆಶೀರ್ವದಿಸಿದರು.

ಶೀಲ, ಚಾರಿತ್ರ್ಯ, ಸೇವೆ, ತ್ಯಾಗದ ಮನೋಭಾವನೆಯ ಶಿಕ್ಷಣ ನೀಡಬೇಕು – ಸಿ.ಟಿ. ರವಿ
ಬಳಿಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಮಾತನಾಡಿ, ಶಿಕ್ಷಣ ಅನ್ನೋದು ಬದುಕನ್ನ ಬದಲಾಯಿಸುವಂತಹ ಸಾಧನ. ಬಂಟರ ಸಂಘ ತಾನು ಮಾಡುತ್ತಿರುವ ಹತ್ತಾರು ಕಾರ್ಯಗಳ ನಡುವೆ ಶಿಕ್ಷಣ ಕ್ಷೇತ್ರವನ್ನ ಆದ್ಯತೆಯಾಗಿ ತೆಗೆದುಕೊಂಡು ಸಮಾಜದಲ್ಲಿ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ರು.

ಶಿಕ್ಷಣವನ್ನ ಬಿಟ್ಟು ದೇಶ ಕಟ್ಟೋಕೆ ಸಾಧ್ಯ ಇಲ್ಲ. ದುರ್ದೈವದ ಸಂಗತಿ ಹತ್ತಾರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಸುಸಂಸ್ಕೃತ ಸಭ್ಯ ರಾಷ್ಟ್ರವಾಗಿದ್ದ ಭಾರತವನ್ನ ಪರಕೀಯರ ಆಕ್ರಮಣದಿಂದ ನಮ್ಮ ಸಂಪತ್ತು ಮತ್ತು ಸಭ್ಯತೆಗಳನ್ನು ಕಳೆದುಕೊಂಡಿದ್ದೇವು. ಸಾತಂತ್ರ್ಯದ ನಂತವರೂ ನಮಗೆ ಭೋಧನೆ ಮಾಡಿದ್ದು ಭಾರತದ ಸೋಲಿನ ಇತಿಹಾಸವನ್ನು. ಆದ್ರೆ ಈಗ ಭಾರತ ಬದಲಾಗಿದೆ. ಶಿಕ್ಷಣದ ಮೂಲಕ ಭಾರತವನ್ನ ಮತ್ತೆ ಕಟ್ಟಬೇಕು ಅನ್ನುವಂತಹ ಸಂಕಲ್ಪದೊಂದಿಗೆ ನಾವು ಜಗತ್ತಿನ ಸವಾಲನ್ನ ಎದುರಿಸುವುದಕ್ಕೆ ತಯಾರಾಗಿದ್ದೇವೆ ಎಂದರು.
ಈ ನಿಟ್ಟಿನಲ್ಲಿ ಬಿಎಸ್ ಆರ್ ಎನ್ ಎಸ್ ವಿದ್ಯಾನಿಕೇತನ ಸಂಸ್ಥೆ ಕೇವಲ ಶಿಕ್ಷಣ ಮಾತ್ರ ಕೊಡೋದಲ್ಲ. ಶೀಲವಂತ ಮತ್ತು ಚಾರಿತ್ರ್ಯವಂತ ಸಮಾಜವನ್ನ ನಿರ್ಮಾಣ ಮಾಡುವುದಕ್ಕೆ ಬೇಕಾದಂತಹ ಶಿಕ್ಷಣವನ್ನ ನೀಡಬೇಕು. ಯಾಕೆ ಅಂದ್ರೆ ಭಾರತೀಯರು ಗೌರವಿಸಿದ್ದು ಪೂಜಿಸಿದ್ದು ಸಂಪತ್ತನ್ನಲ್ಲ, ಚಾರಿತ್ರ್ಯವಂತರನ್ನ, ಶೀಲವನ್ನ ತ್ಯಾಗವನ್ನ ಸೇವೆಯನ್ನ. ಈ ರೀತಿಯ ಮನೋಭಾವೆನೆಯನ್ನ ಬೆಳೆಸುವಂತಹ ಶಿಕ್ಷಣವನ್ನ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಲೋಕಾಯುಕ್ತ ಜಸ್ಟೀಸ್ ಪಿ. ವಿಶ್ವನಾಥ ಶೆಟ್ಟಿ, ಬಿ.ಎಸ್.ಆರ್.ಎನ್.ಎಸ್ ವಿದ್ಯಾನಿಕೇತನದ ಆಡಳಿತ ಮಂಡಳಿ ಚೇರ್ ಮೆನ್ ಕೆ. ಪ್ರಕಾಶ್ ಶೆಟ್ಟಿ, ಗೌರವ ಆತಿಥಿಗಳಾಗಿ ಬೆಂಗಳೂರು ವಿವಿ ಉಪಕುಲಪತಿ ಡಾ. ಜಯಕರ ಶೆಟ್ಟಿ ಎಂ, ಉದ್ಯಮಿ ಶಶಿಕಿರಣ್ ಶೆಟ್ಟಿ, ಹಾಗೂ ಮಿಸ್ ಇಂಡಿಯಾ ಸಿನಿ ಶೆಟ್ಟಿ ಅವರು ಉಪಸ್ಥಿತರಿದ್ದರು. ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಂಟರ ಸಂಘದ ಕಾರ್ಯದರ್ಶಿ ಮಧುಕರ ಶೆಟ್ಟಿ, ಕೋಶಾಧಿಕಾರಿ ದೀಪಕ್ ಶೆಟ್ಟಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಅಂದರ್‌ಬಾಹರ್ ಜೂಜಾಟ; 11 ಜನರ ಬಂಧನ, ಐವರು ಪರಾರಿ

ವಿಜಯಸಾಕ್ಷಿ ಸುದ್ದಿ, ಗದಗ

ವೈಯಕ್ತಿಕ ಲಾಭಕ್ಕೋಸ್ಕರ ಸಾರ್ವಜನಿಕ ಸ್ಥಳದಲ್ಲಿ ಅಂದರ್‌ಬಾಹರ್ ಆಟದಲ್ಲಿ ತೊಡಗಿಕೊಂಡಿದ್ದ 11 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಉಳಿದ ಐವರು ಆರೋಪಿಗಳು ಪರಾರಿಯಾಗಿದ್ದಾರೆ.

ಜಿಲ್ಲೆಯ ರೋಣ ತಾಲ್ಲೂಕಿನ ಅಬ್ಬಿಗೇರಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಹತ್ತಿರದ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತರಾದ ಭೀಮಪ್ಪ ಯಲ್ಲಪ್ಪ ಕಟ್ಟಿಮನಿ, ವೀರೇಶ ಆನಂದಪ್ಪ ಮಲ್ಲಾಪುರ, ಪ್ರಕಾಶ ತಿಪ್ಪಣ್ಣ ಹಾವನೂರ, ಶರಣಪ್ಪ ಸಂಗಪ್ಪ ಮೆಂಟಗೇರಿ, ಸುರೇಶ ಭೀಮಪ್ಪ ಮಲ್ಲಾಪೂರ, ಈಶಪ್ಪ ಶಿವಪ್ಪ ಐಹೊಳಿ, ದಾವಲಸಾಬ ಟಿಪ್ಪುಸಾಬ ಇಬ್ರಾಹಿಂಪೂರ, ಯಲ್ಲಪ್ಪ ಶಂಕ್ರಪ್ಪ ಆರೇರ, ಸಹದೇವ ಹನಮಪ್ಪ ಹಿರೇಮನಿ, ರಾಜು ಶಿವಪ್ಪ ಕೆಂಗಾರ ಹಾಗೂ ಶಿವಪ್ಪ ಈರಪ್ಪ ಕಂಬಳಿ‌ ಎಂಬುವವರು ಇಸ್ಪೇಟ್ ಆಟದಲ್ಲಿ ತೊಡಗಿದ್ದಾಗ ರೋಣ ಪೊಲೀಸ್ ಠಾಣೆಯ ಪಿಎಸ್ಐ ಕಿರಣಕುಮಾರ ಎಸ್.ಕೆ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿತರನ್ನು ಬಂಧಿಸಿ ಆಟದಲ್ಲಿ ತೊಡಗಿಸಿದ್ದ 15,530ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.

ಇನ್ನೂ 5 ಜನರು ಓಡಿಹೋಗಿ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.