ಮಹಾತ್ಮ ಗಾಂಧಿ ಮಗ ಅವರಂತಾಗಲಿಲ್ಲ, ಕುಡುಕನಾದ. ಅದೇ ರೀತಿ ಬೊಮ್ಮಾಯಿ ಮಗ ತಂದೆಯಂತೆ ಆಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಂದೆಯ ಗುಣ ಕೆಲವು ಮಕ್ಕಳಿಗೆ ಬರುವುದಿಲ್ಲ. ಎಸ್.ಆರ್. ಬೊಮ್ಮಾಯಿ ಗುಣ ಮಗನಿಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.
ಮುಖ್ಯಮಂತ್ರಿ ಬದಲಾದ್ರೆ ಎಲ್ಲವೂ ಬದಲಾಗುತ್ತಾ..?
ಯಡಿಯೂರಪ್ಪ ಇಳಿದ್ದಿದ್ದಾರೆ. ಬೊಮ್ಮಾಯಿ ಸಿಎಂ ಆಗಿದ್ದಾರೆ ಎಂದ ಮಾತ್ರಕ್ಕೆ ಬಿಜೆಪಿಯ ಐಡಿಯಾಲಜಿ ಬದಲಾಗುತ್ತಾ.? ಎಂದವರು ಪ್ರಶ್ನಿಸಿದ್ದಾರೆ. ಕೋಮುವಾದ ಹೊರಟು ಹೋಗುತ್ತಾ ? ಹಿಂದುತ್ವದ ಅಜೆಂಡಾ ಬದಲಾಗುತ್ತಾ ? ಬಿಜೆಪಿಯವರು ಯಾವತ್ತಿಗೂ ಅಲ್ಪಸಂಖ್ಯಾತರು, ದಲಿತರು, ಬಡವರ ಪರವಾಗಿ ಇಲ್ಲ. ಹಾಗಾಗಿ ಈ ಸರ್ಕಾರದಿಂದ ಯಾವುದೇ ನೀರೀಕ್ಷೆ ಮಾಡೋದಿಲ್ಲ ಎಂದರು.
ಬಸವರಾಜ ಬೊಮ್ಮಾಯಿಗೆ ಒಂದು ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಒಳ್ಳೆಯ ಆಡಳಿತ ನೀಡಲಿ ಎಂದಷ್ಟೆ ನಾ ಹೇಳಬಲ್ಲೆ ಎಂದರು.
ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟಕ್ಕೆ ನಾನು ಸೇರುವುದಿಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಖಾಸಗಿ ಮಾಧ್ಯಮ ವಾಹಿನಿಯೊಂದರ ಜೊತೆಗೆ ಮಾತನಾಡಿರುವ ಅವರು, ನಾನು ಮಾಜಿ ಸಿಎಂ, ಪಕ್ಷದ ಹಿರಿಯ ನಾಯಕ. ಹೀಗಾಗಿ ನೈತಿಕ ಕಾರಣದಿಂದ ಸಂಪುಟಕ್ಕೆ ಸೇರಲ್ಲ.
ನಳೀನ್ ಕುಮಾರ್ ಕಟೀಲ್ ಅವರದ್ದೆನ್ನಲಾದ ಆಡಿಯೋಗೂ ನನ್ನ ನಿರ್ಧಾರಕ್ಕೂ ಸಂಬಂಧ ಇಲ್ಲ. ಇದು ನನ್ನ ವಯಕ್ತಿಕ ನಿರ್ಧಾರ. ಈಗಾಗಲೇ ನನ್ನ ನಿರ್ಧಾರದ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಗಮನಕ್ಕೂ ತಂದಿದ್ದೇನೆ. ಪಕ್ಷ ಹಾಗೂ ಸರ್ಕಾರದಲ್ಲಿ ತಳಮಟ್ಟದಿಂದ ಮೇಲ್ಮಟ್ಟದವರೆಗೂ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹುನಕುಂಟಿ ಗ್ರಾಮದಲ್ಲಿ ದುರ್ಘಟನೆ
ವಿಜಯಸಾಕ್ಷಿ ಸುದ್ದಿ, ವಿಜಯಪುರ
ನೀರು ಕುಡಿಯಲು ಕೃಷ್ಣಾ ನದಿಯ ಹಿನ್ನೀರಿಗೆ ಇಳಿದಾಗ ಕಾಲುಜಾರಿ ಗುಂಡಿಯಲ್ಲಿ ಬಿದ್ದ ಸೊಸೆಯನ್ನು ರಕ್ಷಿಸಲು ಹೋಗಿ ಅತ್ತೆಯೂ ನೀರುಪಾಲಾದ ಘಟನೆ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ಹುನಕುಂಟಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಹುನಕುಂಟಿ ಗ್ರಾಮದ ಶಾಂತಮ್ಮ ಭೀಮನಗೌಡ ನಾಗೋಡ (20), ಗುರುಸಂಗಮ್ಮ ಭೀಮಪ್ಪ ಮುದೂರ(8) ಮೃತರು.
ದನ ಮೇಯಿಸಲೆಂದು ನದಿ ತೀರಕ್ಕೆ ಹೋಗಿದ್ದರು. ಬಾಯಾರಿಕೆ ಆಗಿದ್ದರಿಂದ ಸೊಸೆ ಗುರುಸಂಗಮ್ಮ ನೀರು ಕುಡಿಯಲೆಂದು ಹಿನ್ನೀರಿಗೆ ಇಳಿದಿದ್ದಾಳೆ. ನದಿ ತೀರದಲ್ಲಿ ಅಲ್ಲಲ್ಲಿ ಮಣ್ಣು ಅಗೆದ ಕಾರಣ ಆಳವಾದ ಗುಂಡಿಗಳಿದ್ದು, ಹಿನ್ನೀರಿನಿಂದ ಗುಂಡಿಗಳಲ್ಲಿ ನೀರು ಭರ್ತಿಯಾಗಿದೆ. ಇದನ್ನು ಅರಿಯದ ಗುರುಸಂಗಮ್ಮ ಕಾಲು ಜಾರಿ ಗುಂಡಿಯಲ್ಲಿ ಬಿದ್ದಿದ್ದಾಳೆ. ಇದನ್ನು ಗಮನಿಸಿದ ಅತ್ತೆ ಶಾಂತಾ ರಕ್ಷಣೆಗೆ ಓಡಿ ಬಂದಿದ್ದು, ಆಕೆಯೂ ಆಳವಾದ ಗುಂಡಿಯಲ್ಲಿ ಬಿದ್ದು ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಗುಂಡಿಯಲ್ಲಿ ಮುಳುಗಿದ್ದ ಇಬ್ಬರ ಶವ ಹೊರ ತೆಗೆದರು. ಮುದ್ದೆಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾವು ಪಕ್ಷ ಹಾಗೂ ಯಡಿಯೂರಪ್ಪನವರನ್ನು ನಂಬಿ ಬಿಜೆಪಿಗೆ ಬಂದವರು. ಹೀಗಾಗಿ ಪಕ್ಷದಿಂದ ನಮಗೆ ಯಾವುದೇ ರೀತಿ ಅನ್ಯಾಯ ಆಗಲ್ಲ ಎಂದು ಮಾಜಿ ಸಚಿವ ಶಿವರಾಮ್ ಹೆಬ್ಬಾರ ವಿಶ್ವಾಸ ವ್ಯಕ್ತಪಡಿಸಿದರು.
ನೂತನ ಸಿಎಂ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹೆಬ್ಬಾರ, ನೂತನ ಸಿಎಂ ಬೊಮ್ಮಾಯಿ ಹಾಗೂ ಯಡಿಯೂರಪ್ಪನವರು ಹೇಗೆ ತೀರ್ಮಾನ ಮಾಡುತ್ತಾರೋ ಅದರ ಮೇಲೆ ನಮ್ಮ ಸಚಿವ ಸ್ಥಾನ ನಿರ್ಧಾರವಾಗುತ್ತದೆ. ಆದರೆ ಪಕ್ಷ ನಮಗೆ ತೊಂದರೆ ಕೊಡುವುದಿಲ್ಲ ಎಂಬ ನಂಬಿಕೆ ಇದೆ ಎಂದರು.
ನಾವು ದೆಹಲಿ ನಂಬಿ ಬಂದವರಲ್ಲ. ಬೆಂಗಳೂರು ನಂಬಿ ಬಂದವರು. ಯಡಿಯೂರಪ್ಪನವರೇ ಈಗಲೂ ನಮ್ಮ ಮಾರ್ಗದರ್ಶಕರು ಎಂದು ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ.
ನೂತನ ಸಿಎಂ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪನವರು ಅಧಿಕಾರ ಬಿಟ್ಡಿದ್ದಾರೆ ಹೊರತು ಪಕ್ಷವನ್ನಲ್ಲ. ನೂತನ ಸಿಎಂ ಸಹ ಯಡಿಯೂರಪ್ಪನವರ ಮಾರ್ಗದರ್ಶನದಲ್ಲೇ ಕಾರ್ಯನಿರ್ವಹಿಸುತ್ತಾರೆ.
ನಾವು ಡೆಲ್ಲಿ ನಂಬಿ ಬಂದವರಲ್ಲ, ಬೆಂಗಳೂರು ನಂಬಿ ಬಂದವರು. ಹೀಗಾಗಿ ದೆಹಲಿ ವರಿಷ್ಠರು ನಮಗೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ನಾನು ಸಿಎಂ ಎನ್ನುವುದಕ್ಕಿಂತ, ಟೀಂ ವರ್ಕ ಮಾಡುತ್ತೇವೆ. ಎಲ್ಲರಂತೆ ನಾನು ಒಬ್ಬ ಎಂಬಂತೆ ಜನಪರ ಆಡಳಿತ ನೀಡುವುದೇ ನಮ್ಮ ಗುರಿ ಎಂದು ನೂತನ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಮ್ಮ ಮುಂದೆ ಆರ್ಥಿಕ, ಸಾಮಾಜಿಕ ಸವಾಲುಗಳಿವೆ. ಸಂಪುಟ ಸಹೋದ್ಯೋಗಿಗಳು, ಎಲ್ಲರ ನೆರವು ಪಡೆದು ಸವಾಲುಗಳನ್ನು ಎದುರಿಸುತ್ತೇವೆ ಎಂದವರು ಹೇಳಿದರು.
ಕಳೆದ ಒಂದೂವರೆ ವರ್ಷದಿಂದ ಕೊರೊನಾ ಸಂಕಷ್ಟವಿದೆ. ಕಳೆದ 2 ಬಾರಿಯಿಂದ ಪ್ರವಾಹದ ಸಂಕಷ್ಟವನ್ನು ರಾಜ್ಯದ ಜನ ಅನುಭವಿಸುತ್ತಿದ್ದಾರೆ. ಹೀಗಾಗಿ ರಾಜ್ಯದ ಜನರ ಸಂಕಷ್ಟಗಳಿಗೆ ನಮ್ಮ ಸರ್ಕಾರ ಸ್ಪಂದಿಸುತ್ತದೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಶ್ರಮಿಸುತ್ತದೆ. ಬಡವರು, ರೈತರ ಕಣ್ಣೀರು ಒರೆಸುವ ಕೆಲಸ ಮಾಡುತ್ತೇವೆ ಎಂದು ನೂತನ ಸಿಎಂ ಭರವಸೆ ನೀಡಿದ್ದಾರೆ.
15 ಲಕ್ಷ ರೂ. ಲಂಚ ಪಡೆಯುವಾಗ ಬೀದರ್ ತಹಸೀಲ್ದಾರ ಗಂಗಾದೇವಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ನಗರದ ಚಿದ್ರಿ ಸರ್ವೇ ನಂಬರ್ 15ರ ಭೂಮಿ ಮುಟೆಷನ್ ಮಾಡಲು ಲಿಲಾಧರ ಎಂಬುವವರು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಲೇವಾರಿಗೆ ತಹಸೀಲ್ದಾರ್ 20 ಲಕ್ಷ ರೂ.ಡಿಮ್ಯಾಂಡ್ ಮಾಡಿದ್ದರು. ಈ ಕುರಿತು ಲೀಲಾಧರ್ ಎಸಿಬಿಗೆ ದೂರು ನೀಡಿದ್ದರು.
ತಮ್ಮ ಮನೆಯಲ್ಲಿ 15 ಲಕ್ಷ ರೂ. ಲಂಚ ಪಡೆಯುವಾಗ ಎಸಿಬಿ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ತಹಸೀಲ್ದಾರ್ ಗಂಗಾದೇವಿ ಹಲವಾರು ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದರು. ಎಸಿಬಿ ಎಸ್ಪಿ ಸೇರಿದಂತೆ ಹಲವು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಇಂದು ಪ್ರಮಾಣವಚನ ಸ್ವೀಕರಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರು ಬಸವರಾಜ ಬೊಮ್ಮಾಯಿ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರದ ವೀಕ್ಷಕರಾದ ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಬಸವರಾಜಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತ ಬಸವರಾಜಯ್ಯ ಬೂದಿಹಾಳ ಗ್ರಾಮದ ನಿವಾಸಿ. ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಗಾಯಗೊಂಡಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎರಡು ವರ್ಷಗಳ ಆಡಳಿತ ನಡೆಸಿ ಸಾಧನಾ ಪರ್ವ ಸಮಾವೇಶದಲ್ಲೇ ತಮ್ಮ ನಿರ್ಗಮನವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಣ್ಣೀರಿಡುತ್ತಲೇ ಪ್ರಕಟಿಸಿದ ಮರುದಿನವೇ ಅವರ ಉತ್ತರಾಧಿಕಾರಿಯಾಗಿ, ಬಿಎಸ್‌ವೈ ಸಂಪುಟದಲ್ಲಿ ಗೃಹಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ.
ಕೆಲವು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮುಖ್ಯಮಂತ್ರಿ ಹುದ್ದೆಯ ಕುತೂಹಲಕ್ಕೆ ಮಂಗಳವಾರ ಸಂಜೆಯೇ ತೆರೆಬಿದ್ದಿದೆ. ಮುಂದಿನ ಮುಖ್ಯಮಂತ್ರಿಯಾಗಿ ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿದೆ. ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ಪರಮಾಪ್ತ ಬಳಗದವರು ಎನ್ನುವುದು ವಿಶೇಷ. ಹೀಗಾಗಿ, ಯಡಿಯೂರಪ್ಪ ಇಂಗಿತಕ್ಕೆ ಬಿಜೆಪಿ ಹೈಕಮಾಂಡ್ ಮನ್ನಣೆ ನೀಡಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಹೆಸರು ಪ್ರಸ್ತಾವವಾಯಿತು. ಯಡಿಯೂರಪ್ಪನವರ ಪ್ರಸ್ತಾಪವನ್ನು ಅನುಮೋದಿಸಿದ ಗೋವಿಂದ ಕಾರಜೋಳ ಅವರು, ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಒಮ್ಮತದಿಂದ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು.
ಕೇಂದ್ರದಿಂದ ಆಗಮಿಸಿದ್ದ ವೀಕ್ಷಕರಾದ ಧಮೇಂದ್ರ ಪ್ರಧಾನ್, ಕಿಶನ್ ಸಿಂಗ್, ನಿರ್ಗಮಿತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿಗಳಾದ ಅರುಣ್ ಸಿಂಗ್, ಅರುಣಾ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೇರಿದಂತೆ ಬಿಜೆಪಿಯ ಎಲ್ಲ ಶಾಸಕರ ಸಮ್ಮುಖದಲ್ಲಿ ಹೊಸ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಯಿತು.
ನಿಜವಾಯ್ತು ವಿಜಯಸಾಕ್ಷಿ ವಿಶ್ಲೇಷಣೆ
ಜು. 18ರಂದು ವಿಜಯಸಾಕ್ಷಿ ಪ್ರಕಟಿಸಿದ ವಿಶೇಷ ವರದಿಯಲ್ಲಿ ಯಡಿಯೂರಪ್ಪ ಪದತ್ಯಾಗ ಖಚಿತವಾಗಿದೆ. ವರಿಷ್ಠರ ಜೊತೆಗಿನ ಮಾತುಕತೆಯಲ್ಲಿ ಯಡಿಯೂರಪ್ಪ ಪದತ್ಯಾಗಕ್ಕೆ ಸಿದ್ದರಾಗಿದ್ದು, ಆದರೆ, ಕೆಲವು ಷರತ್ತಗಳನ್ನು ವರಿಷ್ಠರ ಮುಂದಿಟ್ಟಿದ್ದಾರೆ ಎಂದು ಹೇಳಲಾಗಿತ್ತು. ಅದರಲ್ಲಿ ಪ್ರಮುಖ ಬೇಡಿಕೆ ತಾವು ಹೇಳಿದವರಿಗೆ ಸಿಎಂ ಸ್ಥಾನ ನೀಡಬೇಕು. ತಮ್ಮ ಪುತ್ರ ವಿಜಯೇಂದ್ರ ಅವರಿಗೆ ಪಕ್ಷ ಅಥವಾ ಸರಕಾರದಲ್ಲಿ ಪ್ರಮುಖ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು. ಯಡಿಯೂರಪ್ಪ ಅವರು ತಮ್ಮ ನೆಚ್ಚಿನ ಶಿಷ್ಯ ಬಸವರಾಜ ಬೊಮ್ಮಾಯಿ ಅವರಿಗೆ ಸಿಎಂ ಪಟ್ಟ ಕಟ್ಟಲು ಮುಂದಾಗಿದ್ದಾರೆ ಎಂದು ಹೇಳಲಾಗಿತ್ತು. ನಮ್ಮ ವಿಶ್ಲೇಷಣೆ ಈಗ ನಿಜವಾಗಿದ್ದು, ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.
ಅಪ್ಪನ ಹಾದಿಯಲ್ಲಿ ಮಗ!
ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವುಗೊಂಡಿದ್ದ ಮುಖ್ಯಮಂತ್ರಿಯ ಸ್ಥಾನಕ್ಕೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದ ಶಾಸಕ, ಮಾಜಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಆಯ್ಕೆಯಾಗುವ ಮೂಲಕ ಹೋರಾಟದ ಹಾದಿಯಲ್ಲಿ ಹೂವು ಅರಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಹಾಗೂ ಚೆನ್ನಮ್ಮ ದಂಪತಿಯ ಪುತ್ರರಾಗಿ 1960ರ ಜನವರಿ 28ರಂದು ಜನಿಸಿದ ಬಸವರಾಜ ಬೊಮ್ಮಾಯಿ ಅವರ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಹುಬ್ಬಳ್ಳಿ ದೇಶಪಾಂಡೆ ನಗರದ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯಿತು. ಪಿ.ಸಿ. ಜಾಬಿನ ವಿಜ್ಞಾನ ಕಾಲೇಜಿನಲ್ಲಿ ಓದು ಮುಂದುವರಿಸಿ, ಬಿ.ವಿ. ಭೂಮರಡ್ಡಿ ತಾಂತ್ರಿಕ ಮಹಾವಿದ್ಯಾಲಯ ಎಂಜಿನಿಯರಿಂಗ್ ಪದವಿ ಪಡೆದರು. 1983ರಿಂದ ಪುಣೆಯ ಟೆಲ್ಕೋ ಕಂಪನಿಯಲ್ಲಿ ಎರಡು ವರ್ಷಗಳ ತಾಂತ್ರಿಕ ತರಬೇತಿ ಪಡೆದು, ಸ್ವಂತ ಕೈಗಾರಿಕೆ ಸ್ಥಾಪಿಸಿದರು. ವೈಜ್ಞಾನಿಕ ಮನೋಭಾವ ಹೊಂದಿರುವ ಬೊಮ್ಮಾಯಿ, ತಮ್ಮ ಕ್ಷೇತ್ರ ಹಾಗೂ ರಾಜ್ಯದಲ್ಲಿ ಹಲವು ನೀರಾವರಿ ಯೋಜನೆಗಳಿಂದ ಹೆಸರಾದವರು.
1995ರಲ್ಲಿ ಹುಬ್ಬಳ್ಳಿ ನಗರದ ಈದ್ಗಾ ಮೈದಾನದ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ರಾಜ್ಯ ಸರ್ಕಾರದ ಮೂಲಕ ನಡೆಸಿದ ಪ್ರಯತ್ನದ ನೇತೃತ್ವ ವಹಿಸಿದ್ದರು. ಅದೇ ವರ್ಷ ರಾಜ್ಯ ಜನತಾದಳ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. 1996ರಿಂದ 1997ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಜೆ.ಎಚ್. ಪಟೇಲ್ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.
2007ರ ಜುಲೈನಲ್ಲಿ ಧಾರವಾಡದಿಂದ ನರಗುಂದವರೆಗೆ 21 ದಿನಗಳ ಕಾಲ 232 ಕಿ.ಮೀ. ದೂರ ರೈತರೊಂದಿಗೆ ಬೃಹತ್ ಪಾದಯಾತ್ರೆ ಕೈಗೊಂಡಿದ್ದರು. 1993ರಲ್ಲಿ ಹುಬ್ಬಳ್ಳಿ ನಗರದಲ್ಲಿ ನಡೆದ ರಾಜ್ಯ ಯುವಜನತಾ ದಳದ ಐತಿಹಾಸಿಕ ಬೃಹತ್ ರ‌್ಯಾಲಿಯ ನೇತೃತ್ವ ವಹಿಸಿದ್ದರು. 1997 ಹಾಗೂ 2003ರಲ್ಲಿ ವಿಧಾನ ಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ (ಧಾರವಾಡ- ಹಾವೇರಿ- ಗದಗ) ನಡೆದ ಚುನಾವಣೆಯಲ್ಲಿ ಸತತ ಎರಡು ಬಾರಿ ಆಯ್ಕೆಯಾದರು.
2008ರ ವಿಧಾನಸಭೆ ಚುನಾವಣೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವ ಮತಕ್ಷೇತ್ರದಿಂದ ಆಯ್ಕೆಯಾದರು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್ ಸಚಿವ ಸಂಪುಟದಲ್ಲಿ ಸತತ ಐದು ವರ್ಷಗಳವರೆಗೆ ಜಲ ಸಂಪನ್ಮೂಲ ಸಚಿವರಾಗಿ ಸೇವೆ ಸಲ್ಲಿಸಿದರು. 2013, 2018ರಲ್ಲೂ ಇದೇ ಕ್ಷೇತ್ರದಿಂದ ಆಯ್ಕೆಯಾಗಿ ಹ್ಯಾಟ್ರಿಕ್ ಗೆಲುವು ದಾಖಲಿಸಿದರು. ಯಡಿಯೂರಪ್ಪನವರ ಸಂಪುಟದಲ್ಲಿ ಗೃಹ ಸಚಿವರಾಗಿ ಸೇವೆ ಸಲ್ಲಿಸಿದರು. ಸರಳ ವ್ಯಕ್ತಿತ್ವ. ಭ್ರಷ್ಟಾಚಾರ ರಹಿತ ಆಡಳಿತದ ಇಮೇಜ್ ವರಿಷ್ಠರು ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ವಿಶ್ಲೇಷಿಸಲಾಗಿದೆ.
ಮೂವರು ಡಿಸಿಎಂಗಳು
ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿದ ಬೆನ್ನಲ್ಲೇ ಮೂವರು ಉಪಮುಖ್ಯಮಂತ್ರಿಗಳನ್ನೂ ಆಯ್ಕೆ ಮಾಡಲಾಗಿದೆ. ಯಡಿಯೂರಪ್ಪ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಗೋವಿಂದ ಕಾರಜೋಳ ಅವರನ್ನು ಡಿಸಿಎಂ ಆಗಿ ಮುಂದುವರಿಸಿ, ದಲಿತ ಸಮುದಾಯಕ್ಕೆ ಆದ್ಯತೆ ನೀಡಲಾಗಿದೆ. ಜತೆಗೆ, ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಆರ್. ಅಶೋಕ್ ಹಾಗೂ ವಾಲ್ಮೀಕಿ ಸಮುದಾಯದ ಜನಪ್ರಿಯ ನಾಯಕ ಬಿ. ಶ್ರೀರಾಮುಲು ಅವರನ್ನು ಕೂಡ ಉಪಮುಖ್ಯಮಂತ್ರಿಯಾಗಿ ನೇಮಿಸಲಾಗಿದ್ದು, ಎಲ್ಲರೂ ಬುಧವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.