Home Blog Page 3423

ರಾತ್ರಿ ಹೆಣ್ಮಗಳು ಹೊರಗೆ ಬರ್ತಾರಂದ್ರೆ ಹೆಮ್ಮೆ ಪಡಬೇಕು, ಪ್ರಶ್ನಿಸೋದಲ್ಲ; ಬಿಜೆಪಿ ಶಾಸಕ ಗರಂ

0
  • ಗೃಹ ಸಚಿವರಿಗೆ ಪರೋಕ್ಷ ಟಾಂಗ್ ನೀಡಿದ ಶಾಸಕ ರಾಜುಗೌಡ

ವಿಜಯಸಾಕ್ಷಿ ಸುದ್ದಿ, ಯಾದಗಿರಿ

ಯಾದಗಿರಿಯಲ್ಲಿ ಸಾಮೂಹಿಕ‌ ಅತ್ಯಚಾರ ಘಟನೆ ಖಂಡಿಸಿರುವ ಸುರಪುರ ಶಾಸಕ ರಾಜೂಗೌಡ, ಮಹಾತ್ಮ ಗಾಂಧೀಜಿ ರಾತ್ರಿ 12 ಗಂಟೆಗೆ ಹೆಣ್ಣುಮಗಳು ನಿರ್ಭೀತಿಯಿಂದ ಹೊರಗೆ ತಿರುಗಾಡಿದರೆ ರಾಮರಾಜ್ಯ, ಸ್ವಾತಂತ್ರ್ಯ ಸಿಕ್ಕ ಹಾಗೆ ಎಂದು ಹೇಳಿದ್ದರು.

ಆದರೆ, ನಮ್ಮ ಕೆಲಸ ಮಾಡುವುದು ಬಿಟ್ಟು. ಇನ್ನೊಬ್ಬರ ಮೇಲೆ ಬೆರಳು ತೋರುವುದು ಸರಿಯಲ್ಲ ಎಂದು ಗೃಹವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ತಪ್ಪಾಗಿದೇಯಾ ? ಅದಕ್ಕೆ ನಾವು ಏನು ಶಿಸ್ತು ಕ್ರಮ ತೆಗೆದುಕೊಂಡಿದ್ದೇವೆ ಎನ್ನುವುದು ಮುಖ್ಯ. ಅದು ಬಿಟ್ಟು ಅವರು ಅಲ್ಲಿ‌ ಏಕೆ ಹೋಗಿದ್ದರು. ಇವರು ಅಲ್ಲಿ ಏಕೆ ಹೋಗಿದ್ದರು ಎಂದು ಪ್ರಶ್ನಿಸುವುದು ತಪ್ಪು. ನಮ್ಮ ಕರ್ತವ್ಯ ನಾವು ಸರಿಯಾಗಿ ನಿಭಾಯಿಸಬೇಕು ಎಂದು ಕಿವಿಮಾತು ಹೇಳಿದರು.

ರಾತ್ರಿ 12 ಗಂಟೆಗೆ ಹೆಣ್ಣುಮಗಳು ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ತಾಳೆ ಅಂದ್ರೆ ನಾವು ಹೆಮ್ಮೆ ಪಡಬೇಕು. ಅದನ್ನು ಬಿಟ್ಟು ಅಲ್ಲಿ ಏಕೆ ಹೋಗಿದ್ದಳು ಎಂದು ಕೇಳುವುದಲ್ಲ ಎಂದು ಹರಿಹಾಯ್ದರು.

ಹಾಡುಹಗಲೇ ಅನ್ನಭಾಗ್ಯ ಅಕ್ಕಿ ಸಾಗಾಟ; ದಂಧೆಯ ರೂವಾರಿ ಏಕನಾಥ್ ಪರಾರಿ!

0

ವಿಜಯಸಾಕ್ಷಿ ಸುದ್ದಿ, ಗದಗ

ಸರಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳ ಸಾಗಾಟ ಜಿಲ್ಲೆಯಲ್ಲಿ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಕಳೆದ ಹಲವು ದಿನಗಳಿಂದ ರಾತ್ರೋರಾತ್ರಿ ಕದ್ದು ಮುಚ್ಚಿ ನಡೆಯುತ್ತಿದ್ದ ಸಾಗಾಟ ಈಗ ಹಾಡುಹಗಲೇ ಆರಂಭವಾಗಿದೆ.

ಹೊಸಬರ ಜೊತೆಗೆ ಹಳೆ ಪಂಟರು ಈ ದಂಧೆಗೆ ರೀ ಎಂಟ್ರಿ ಆಗಿರೋದು ಕಳ್ಳದಂಧೆ ಮತ್ತಷ್ಟು ಬೆಳೆಯಲು ಕಾರಣವಾಗಿದೆ. ಅದಕ್ಕೆ ಉದಾಹರಣೆ ಗುರುವಾರ ಮುಂಜಾನೆ ಹುಡ್ಕೋ ಕಾಲೊನಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ತುಂಬಿದ ಗೂಡ್ಸ್ ವಾಹನ ಸಿಕ್ಕಿಬಿದ್ದಿದ್ದು.

ಹುಡ್ಕೋ ಕಾಲೋನಿಯ ಬಸವೇಶ್ವರ ಸ್ಕೂಲ್ ಬಳಿ ಲೋಡ್ ಮಾಡಿಕೊಂಡು ನಿಂತಿದ್ದ ಗೂಡ್ಸ್ ವಾಹನ ಶಹರ ಠಾಣೆಯ ಪೊಲೀಸರ ಕಣ್ಣಿಗೆ ಬಿದ್ದಿದ್ದೇ ತಡ, ಸೀದಾ ವಾಹನವನ್ನು ಠಾಣೆಗೆ ಹೊರಡಿಸಿದ್ದಾರೆ.

ಆರೋಪಿ ಗೂಡ್ಸ್ ವಾಹನದ ಚಾಲಕ ಬೆಟಗೇರಿಯ ಮಂಜುನಾಥ್ ನಗರ ನಿವಾಸಿ ದಿನೇಶ್ ದಾರಾಸಿಂಗ್ ನವಲಗುಂದ ಎಂಬಾತ ಹುಡ್ಕೋದಿಂದ ಸುಮಾರು 77,625 ರೂಪಾಯಿ ಮೌಲ್ಯದ 33 ಕ್ವಿಂಟಾಲ್ ಅನ್ನಭಾಗ್ಯದ ಅಕ್ಕಿಯನ್ನು ಪ್ಲಾಸ್ಟಿಕ್ ‌ಚೀಲಗಳಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದ.

ಈ ಸಂದರ್ಭದಲ್ಲಿ ಶಹರ ಠಾಣೆಯ ಪೊಲೀಸರು ಪತ್ತೆ ಹಚ್ಚಿ ಗೂಡ್ಸ್ ವಾಹನ ಸಮೇತ ಚಾಲಕ ಬೆಟಗೇರಿಯ ಮಂಜುನಾಥ್ ನಗರದ ನಿವಾಸಿ ದಿನೇಶ್ ನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಎರಡನೇ ಆರೋಪಿ ಏಕನಾಥ್ ಪರಾರಿಯಾಗಿದ್ದಾನೆ.

ದಂಧೆಯ ರೂವಾರಿ ಏಕನಾಥ್ ಪರಾರಿ!

ಪ್ರಕರಣದಲ್ಲಿ ಎರಡನೇ ಆರೋಪಿ ಆಗಿರುವ ಬೆಟಗೇರಿಯ ಸೆಟ್ಲಮೆಂಟ್ ನಿವಾಸಿ ಏಕನಾಥ್ ಎಂಬಾತನೇ ಈ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಖರೀದಿಸಿ ಅದನ್ನು ಸಾಗಾಟ ಮಾಡುತ್ತಿದ್ದ ರೂವಾರಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದ ಹಲವು ದಿನಗಳಿಂದ ಬೆಟಗೇರಿಯ ಸೆಟ್ಲಮೆಂಟ್ ಏರಿಯಾದಲ್ಲಿ ಈ ದಂಧೆ ಜೋರಾಗಿತ್ತು ಎನ್ನಲಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಮನೆಯೊಂದರಲ್ಲಿ ಅಕ್ಕಿ ಸಂಗ್ರಹಿಸಿ ಅಲ್ಲಿಂದ ಬೆಟಗೇರಿಯ ನೇಕಾರ ನಗರದ ಪಳಗಿದ ಅಸಾಮಿ ಮೂಲಕ ಈ ಅಕ್ಕಿ ಬೇರೆ ಕಡೆ ಸಾಗಾಟ ಮಾಡಲಾಗುತ್ತಿದೆ ಎನ್ನಲಾಗಿದೆ.

ಪೊಲೀಸರು ಸಾರ್ವಜನಿಕರ ಮೂಲಕ ಈ ದಂಧೆಗೆ ಕಡಿವಾಣ ಹಾಕಲು ಮುಂದಾದರೂ ಆಹಾರ ಇಲಾಖೆಯ ಅಧಿಕಾರಿಗಳಿಂದ ಸರಿಯಾದ ಸಹಕಾರ ಸಿಗುತ್ತಿಲ್ಲ ಎನ್ನಲಾಗಿದೆ.

ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮವಾಗಿ ಸಾಗಾಟ ಮಾಡುವ ವಾಹನ, ಆರೋಪಿಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದರೂ ಸ್ವಯಂ ಪ್ರಕರಣ ದಾಖಲು ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ.

ಹೀಗಾಗಿ ಆಹಾರ ಇಲಾಖೆಯ ಅಧಿಕಾರಿಗಳೇ ಬಂದು ದೂರು ಕೊಡಬೇಕು. ಅಂದಾಗ ಎಫ್ಐಆರ್ ದಾಖಲಾಗುತ್ತದೆ. ಆದ್ರೆ ಇದು ಪೊಲೀಸರ ಮೇಲೆ ಸಾರ್ವಜನಿಕರಿಗೆ ಅನುಮಾನ ಹುಟ್ಟಲು ಕಾರಣವಾಗಬಹುದು.

ಏನೇ ಆಗಲಿ ಅಕ್ರಮ ಅಕ್ಕಿ ದಂಧೆಕೋರರ ಹೆಡೆಮುರಿ ಕಟ್ಟಲು ಪೊಲೀಸರ ಜೊತೆಗೆ ಆಹಾರ ಇಲಾಖೆಯ ಅಧಿಕಾರಿಗಳು ಮುಂದಾದಾಗ ಇಂತಹ ಅಕ್ರಮಕ್ಕೆ ಕಡಿವಾಣ ಹಾಕಬಹುದು.

ಉಪಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡಲ್ಲ: ಬಿಎಸ್ ವೈ

ವಿಜಯಸಾಕ್ಷಿ ಸುದ್ದಿ, ಮೈಸೂರು

ವಿಜಯೇಂದ್ರ ಸದ್ಯಕ್ಕೆ ಯಾವುದೇ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಮುಂದೆ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂಬುದೂ ನಿರ್ಧಾರವಾಗಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ನಾನು ಮತ್ತು ರಾಜ್ಯಾಧ್ಯಕ್ಷರು ಸೇರಿ ರಾಜ್ಯ ಪ್ರವಾಸ ಮಾಡುತ್ತೇವೆ. ಅಧಿವೇಶನ ಮುಗಿಯಲಿ, 15 ದಿನಗಳ ನಂತರ ಪ್ರವಾಸದ ರೂಪುರೇಷೆ ಸಿದ್ಧಗೊಳ್ಳಲಿದೆ ಎಂದು ತಿಳಿಸಿದರು.

ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆಂಬುದು ನನ್ನ ಅಭಿಪ್ರಾಯ. ರಾಜ್ಯದ ಜನರ ಅಭಿಪ್ರಾಯವೂ ಅದೇ ಆಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಆಡಳಿತ ನೀಡಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ಪರ ಬಿಎಸ್ ವೈ ಬ್ಯಾಟ್ ಬೀಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಲಯ ಆದೇಶ ಪಾಲನೆ ಅಗತ್ಯ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕು‌ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದ್ದಾರೆ. ದೇವಸ್ಥಾನ ತೆರವು ವಿಚಾರವಾಗಿ ಚಿತ್ರದುರ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,‌ ಸುಪ್ರೀಂನಲ್ಲಿ ತಪ್ಪಾದರೆ ಅಮೈಂಡ್ ಮಾಡುವ ಅಧಿಕಾರ ಪಾರ್ಲಿಮೆಂಟ್ ಗೆ ಇದೆ. ಪಾರ್ಲಿಮೆಂಟ್ ನಲ್ಲಿ ತಪ್ಪು ಮಾಡಿದಾಗ ಪ್ರಶ್ನಿಸುವ ಅಧಿಕಾರ ರಾಷ್ಟ್ರಪತಿಗಿದೆ. ಈಡೀ ವಿಶ್ವಕ್ಕೆ ನಮ್ಮ ಪ್ರಜಾಪ್ರಭುತ್ವ ಮಾದರಿಯಾಗಿದೆ ಎಂದರು.

ಗೊತ್ತೋ ಗೊತ್ತಿಲ್ಲದೆ ಸಂಸದ ಪ್ರತಾಪ್ ಸಿಂಹ ದೇವಸ್ಥಾನ ತೆರವಿಗೆ ವಿರೋಧ ಮಾಡುತ್ತಿದ್ದಾರೆ.‌ ಈ ಕುರಿತು ಚರ್ಚೆ ಆಗುತ್ತದೆ, ತಪ್ಪುಗಳು ನಡೆದಾಗ ತಿದ್ದಿಕೊಳ್ಳುತ್ತೇವೆ ಎಂದು ಹೇಳಿದರು.

ನಾವು ಹಿಂದೂ ರಾಷ್ಟ್ರ ಕಟ್ಟಲು ಹೊರಟಿದ್ದೇವೆ, ಡೋಂಗಿ ರಾಜಕಾರಣ ಮಾಡಲ್ಲ. ಬಿಜೆಪಿ ಮತ್ತು ಸಂಘ ಹಿಂದು ರಾಷ್ಟ್ರ ನಿರ್ಮಾಣಕ್ಕೆ ಕಟಿಬದ್ಧವಾಗಿವೆ. ಹಾಗಂತ ಬೇರೆ ಧರ್ಮಗಳನ್ನು ವಿರೋಧಿಸಲ್ಲ ಎಂದು ಹೇಳಿದರು.

ಗಜಾನನ ಮಂಟಪದಲ್ಲಿ ಸತ್ಯನಾರಾಯಣ ಪೂಜೆ, ಲಸಿಕಾ‌ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ

ಇಲ್ಲಿನ ಶಿದ್ದಲಿಂಗ ನಗರದಲ್ಲಿ ಶ್ರೀ ಜಾಗೃತ ಗಜಾನನ ಯುವಕ ಮಂಡಳಿ ಪ್ರತಿಷ್ಠಾಪಿಸಿರುವ ಶ್ರೀ ಗಜಾನನ ಮಂಟಪದಲ್ಲಿ ಶುಕ್ರವಾರ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಹಾಗೂ ಕೋವಿಡ್ ಲಸಿಕಾಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಲಸಿಕಾ ಅಭಿಯಾನ ನಿಮಿತ್ತ ಉಚಿತ ಕೋವಿಡ್ ಲಸಿಕೆ ಹಾಕಲಾಯಿತು. ಸುಮಾರು 300 ಜನರಿಗೆ ಲಸಿಕೆ ಹಾಕಲಾಯಿತು. ಇದೇ ಸಮಯದಲ್ಲಿ 104 ಅಜ್ಜಿ ಲಸಿಕೆ ಪಡೆದಿದ್ದು ವಿಶೇಷವಾಗಿತ್ತು.

ಶಿದ್ಧಲಿಂಗ ನಗರ ಶ್ರೀ ಜಾಗೃತ ಗಜಾನನ ಯುವಕ ಮಂಡಳಿಯ ಡಾ. ಜಯಕುಮಾರ ಬ್ಯಾಳಿ, ಸಿದ್ದು ಅಂದಾನಗೌಡರ, ಸೂರಜ್ ಜಿಗಜಿನ್ನಿ, ಮಂಜು ಅಂಗಡಿ, ಸಂತೋಷ ಮಾಳಶೆಟ್ಟಿ, ದೀಪಕ್ ಬೊಮ್ಮನಹಳ್ಳಿ, ಸಂಗಮೇಶ ಗೊಂದಿ, ಸಿದ್ದು ಪುಟಾಣಿ, ಸುನೀಲ್ ಕಲಾಲ, ಬಸವರಾಜ್ ಹೂಗಾರ, ನಿಖಿಲ್ ವರ್ಣೆಕರ ಸೇರಿದಂತೆ ಇತರರು ಇದ್ದರು.

ವಿಶ್ವಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ: ಮುತ್ತು ರಾಯರಡ್ಡಿ

0

ವಿಜಯಸಾಕ್ಷಿ ಸುದ್ದಿ, ನರಗುಂದ

ವಿಶ್ವಕರ್ಮ ಜಯಂತಿ ಕೇವಲ ಸಾಮಾಜಿಕ ಕಾರ್ಯಕ್ರಮ ಮಾತ್ರವಲ್ಲ, ಧಾರ್ಮಿಕ ಕಾರ್ಯಕ್ರಮವೂ ಆಗಿದೆ ಎಂದು ತಾಲೂಕಿನ ಚಿಕ್ಕ ನರಗುಂದ ಗ್ರಾಪಂ ಅಧ್ಯಕ್ಷ ಮುತ್ತು ರಾಯರಡ್ಡಿ ಹೇಳಿದರು.

ಗ್ರಾಪಂ ವತಿಯಿಂದ ಸಭಾಭವನದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಸ್ತ್ರ, ಸಾಧನ, ಸಲಕರಣೆಗಳು, ಒಡವೆಗಳು, ಶಿಲ್ಪಗಳು ಸೇರಿದಂತೆ ಈ ಜಗತ್ತಿಗೆ ಶಿವ, ವಿಷ್ಣು, ಇಂದ್ರ, ಮತ್ತಿತರ ದೇವರುಗಳಿಗೆ ಅಸ್ತ್ರ, ರಥಗಳನ್ನು ಮಾಡಿಕೊಟ್ಟು ದುಷ್ಟ ರಕ್ಕಸರ ವಧೆಗೆ ಕಾರಣರಾದ ವಿಶ್ವಕರ್ಮರ ಕೊಡುಗೆ ಅಪಾರವಿದೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜದ ಯುವ ಸಮುದಾಯ ಹಾಗೂ ವಿಧ್ಯಾರ್ಥಿಗಳು ಪಾಲ್ಗೊಳ್ಳುವಿಕೆ ಹೆಚ್ಚಿಸಬೇಕು. ಸಮುದಾಯದ ಅಭಿವೃದ್ಧಿಗೆ ಮುಖಂಡರು ಸಂಘಟಿತವಾಗಿ ಶ್ರಮಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಲಕ್ಷ್ಮಣ ಕಂಬಳಿ, ಬಾಪುಗೌಡ‌ ಹಿರೇಗೌಡ್ರ, ಶ್ರುತಿ ಬ್ಯಾಳಿ, ಪಿಡಿಓ ಶೈನಾಜ್ ಮುಜಾವರ, ಹಿರಿಯರಾದ ಅಡಿವೆಪ್ಪ ಮರಿಯಣ್ಣವರ, ಉಮೇಶ ಕೆಂಚನಗೌಡ್ರ, ಮಹೇಶ ಆರೆಬೆಂಚಿ, ಪಡಿಯಪ್ಪ ಬಾಚಿ, ರಮೇಶ ಪತ್ತಾರ, ಕಾಳಪ್ಪ ಬಡಿಗೇರ, ವಿನಾಯಕ ಬಡಿಗೇರ, ಪಂಚಾಯತಿ ಸಿಬ್ಬಂದಿ ಭಾಗವಹಿಸಿದ್ದರು.

ಪರಾರಿಯಾಗಿದ್ದ ರೆವಿನ್ಯೂ ಇನ್‌ಸ್ಪೆಕ್ಟರ್ ಜೈಲುಪಾಲು!

0

-ಜಮೀನು ನೋಂದಣಿಗೆ ಲಂಚ ಕೇಳಿದ್ದ ಎಸ್.ಎಸ್. ಪಾಟೀಲ,
ಜಾಮೀನು ಸಿಗದ ಹಿನ್ನೆಲೆಯಲ್ಲಿ ಶರಣಾಗತಿ!

ವಿಜಯಸಾಕ್ಷಿ ಸುದ್ದಿ, ಗದಗ

ಖರೀದಿಸಿದ್ದ ಜಮೀನು ನೋಂದಣಿ ಮಾಡಲು ಲಂಚ ಕೇಳಿದ ಆರೋಪದ ಹಿನ್ನೆಲೆಯಲ್ಲಿ ಪರಾರಿಯಾಗಿದ್ದ ಗದಗನ ರೆವಿನ್ಯೂ ಇನ್‌ಸ್ಪೆಕ್ಟರ್ ಸುರೇಶ್ ಗೌಡ ಶೇಖರಗೌಡ್ ಪಾಟೀಲ ಗುರುವಾರ ಕೊನೆಗೂ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ.

ಗದಗ ತಾಲೂಕಿನ ಅಂತೂರ- ಬೆಂತೂರ ಗ್ರಾಮದ ಗುರಯ್ಯ ಲಗ್ಮಯ್ಯನವರ ಎಂಬುವವರು ಜಮೀನು ಖರೀದಿ ಮಾಡಿದ್ದರು. ಆ ಜಮೀನು ಗುರಯ್ಯ ಲಗ್ಮಯ್ಯನವರ ಹೆಸರಲ್ಲಿ ನೋಂದಣಿ ಮಾಡಲು ಆರ್‌ಐ ಎಸ್.ಎಸ್. ಪಾಟೀಲ 8,000 ರೂ. ಲಂಚ ಕೇಳಿದ್ದರು ಎನ್ನಲಾಗಿದೆ.

ಈ ಬಗ್ಗೆ ಎಸಿಬಿ ಕಚೇರಿಗೆ ರೈತ ಗುರಯ್ಯ ದೂರು ನೀಡಿದ್ದರು. ಆ. 1ರಂದು ರೈತ ಗುರಯ್ಯ ಲಗ್ಮಯ್ಯನವರ ಹಣ ಕೊಡಲು ಬಂದಾಗ ಕಚೇರಿಯಲ್ಲಿ ಆರ್‌ಐ ಇರಲಿಲ್ಲ. ಮಧ್ಯವರ್ತಿ ದಾವಲ್ ಎಂಬಾತನ ಕೈಯಲ್ಲಿ ಹಣ ಕೊಡುವಾಗ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ದಾವಲ್‌ನನ್ನು ವಶಕ್ಕೆ ಪಡೆದಿದ್ದರು.

ಎಸಿಬಿ ಅಧಿಕಾರಿಗಳು ಕಛೇರಿ ಮೇಲೆ ದಾಳಿ ಮಾಡಿದ ಸುದ್ದಿ ಕೇಳಿ ಆರ್‌ಐ, ಎಸ್.ಎಸ್. ಪಾಟೀಲ ಕಚೇರಿಯತ್ತ ತಲೆ ಹಾಕದೆ, ಎಸಿಬಿ ಅಧಿಕಾರಿಗಳ ಕೈಗೂ ಸಿಗದೆ ಪರಾರಿಯಾಗಿದ್ದರು.

ಇದನ್ನೂ ಓದಿ ಕಂದಾಯ ಇಲಾಖೆ ಮೇಲೆ ಎಸಿಬಿ ಅಧಿಕಾರಿಗಳ ದಾಳಿ; ರೆವಿನ್ಯೂ ಇನ್ಸ್‌ಪೆಕ್ಟರ್ ಪಾಟೀಲ್ ಪರಾರಿ!

ಬಂಧನದಿಂದ ತಪ್ಪಿಸಿಕೊಳ್ಳಲು ಜಾಮೀನು ಪಡೆಯುವುದಕ್ಕಾಗಿ ಜಿಲ್ಲಾ ನ್ಯಾಯಲಯ, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರೂ ತಿರಸ್ಕೃತವಾಗಿದ್ದರಿಂದ ಗುರುವಾರ ಅನಿವಾರ್ಯವಾಗಿ ಜಿಲ್ಲಾ ನ್ಯಾಯಾಲಯದ ಮುಂದೆ ಶರಣಾದರೆಂದು ಮೂಲಗಳು ತಿಳಿಸಿವೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಎಸಿಬಿ ಅಧಿಕಾರಿಗಳ ತಾತ್ಸಾರ!

ಆ. 1ರಂದೇ ಈ ಪ್ರಕರಣ ನಡೆದಿದ್ದರೂ ಆರ್‌ಐ ಎಸ್.ಎಸ್. ಪಾಟೀಲರನ್ನು ಬಂಧಿಸದ ಎಸಿಬಿ ಅಧಿಕಾರಿಗಳ ಕುರಿತು ಹಲವು ರೀತಿಯ ಮಾತುಗಳು ಕೇಳಿ ಬಂದಿವೆ. ಬಂಧನ ಮಾಡದಂತೆ ಯಾವ ರಾಜಕಾರಣಿ ಒತ್ತಡ ಹಾಕಿದ್ದರು ಎಂಬುದೂ ಚರ್ಚೆಯಾಗಿದೆ. ಮುಂದಾದರೂ ಎಸಿಬಿ ಅಧಿಕಾರಿಗಳು ಈ ರೀತಿ ತಾರತಮ್ಯ ಮಾಡದೆ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಲಿ ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ನನಗೆ ಸ್ಥಾನಮಾನ ನೀಡುವ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ: ಬಿ.ವೈ.ವಿಜಯೇಂದ್ರ

-ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಶಿವಮೊಗ್ಗ

ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಯಾವ ಸ್ಥಾನಮಾನ ಕೊಡಬೇಕು ಎಂದು ನಿರ್ಧರಿಸುತ್ತಾರೆ. ನಾನು ಯಾವುದೇ ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಸಚಿವ ಸ್ಥಾನದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಷಯದಲ್ಲಿ ಬಿ.ಎಸ್. ಯಡಿಯೂರಪ್ಪನವರ ಪ್ರಶ್ನೆ ಉದ್ಭವಿಸಲ್ಲ. ಬಿಜೆಪಿಯ ಕಾರ್ಯಕರ್ತನಾಗಿ ಪಕ್ಷದ ಉಪಾಧ್ಯಕ್ಷ ನಾಗಿ ನನ್ನ ಕೆಲಸ ನಾನು ಮಾಡುತ್ತಿದ್ದೇನೆ.

ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ? ಬೇಡವೋ? ಎಲ್ಲಿಂದ ಸ್ಪರ್ಧಿಸಬೇಕು ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ದೇಗುಲಗಳ ಒಡೆಯುವ ಕೆಲಸ ಮಾಡುವ ಮೊದಲು ಅಧಿಕಾರಿಗಳು ಯೋಚನೆ ಮಾಡಬೇಕಿತ್ತು. ಜನರ ಭಾವನೆಗಳನ್ನು ಗೌರವಿಸಿ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರವು ಮಾಡಲಾಗುತ್ತಿದೆ. ಇದಕ್ಕೆ ಅವಕಾಶ ನೀಡಲ್ಲ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಇದು ಆದಷ್ಟು ಬೇಗ ಸರಿ ಹೋಗುವ ವಿಶ್ವಾಸವಿದೆ ಎಂದರು.

ತಾಯಿ ಕೊಂದ ದ್ವೇಷ; ತಮ್ಮನಿಂದ ಅಣ್ಣನ ಭೀಕರ ಹತ್ಯೆ

0

ವಿಜಯಸಾಕ್ಷಿ ಸುದ್ದಿ, ಹೂವಿನಹಡಗಲಿ

ಹಣಕಾಸಿನ ವ್ಯವಹಾರ ಹಾಗೂ ತಾಯಿಯನ್ನು ಕೊಲೆಗೈದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಅಣ್ಣನನ್ನೇ ಸಹೋದರ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ ನಡೆದಿದೆ.

ಕುರಿ ಶಿವಪ್ಪ (40) ಹತ್ಯೆಯಾದ ವ್ಯಕ್ತಿ. ಕುರಿ ಪಕ್ಕೀರಸ್ವಾಮಿ(35) ಕೊಲೆ ಮಾಡಿದ ಆರೋಪಿ.

ಘಟನೆಯ ವಿವರ

ಕೊಲೆಯಾದ ಶಿವಪ್ಪ 8 ವರ್ಷಗಳ ಹಿಂದೆ ತಾಯಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಜೈಲಿಗೆ ಹೋಗಿ ಹೊರಬಂದಿದ್ದ. ಜೈಲಿನಿಂದ ಬಂದಾಗಿನಿಂದ ತಮ್ಮ ಪಕ್ಕೀರಸ್ವಾಮಿ ಜೊತೆಗೆ ಹಣಕಾಸಿನ ವಿಚಾರಕ್ಕೆ ಪದೇ ಪದೆ ಜಗಳ ತೆಗೆಯುತ್ತಿದ್ದನಲ್ಲದೆ, ಕೊಲೆ ಬೆದರಿಕೆ ಹಾಕುತ್ತಿದ್ದ.

ಇದರಿಂದ ತೀವ್ರವಾಗಿ ನೊಂದಿದ್ದ ಫಕೀರಸ್ವಾಮಿ ಗುರುವಾರ ಬೆಳಿಗ್ಗೆ ಅಣ್ಣನ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದು, ತಲೆ, ಕೈಗೆ ಬಿದ್ದ ಬಲವಾದ ಏಟಿಗೆ ಶಿವಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಪಿಐ ರಮೇಶ್ ಕುಲಕರ್ಣಿ, ಹಿರೇಹಡಗಲಿ ಪಿಎಸ್ಐ ದಾದಾವಲಿ ಕೆ.ಎಚ್, ಸಿಬ್ಬಂದಿ ಅಂಜಿನಪ್ಪ ಮಾಗಳ, ಕಲ್ಲೇಶ್ ಗೌಡ, ಹಾಲೇಶ, ಮಾಬು ಸ್ಥಳ ಮಹಜರು ನಡೆಸಿ, ಬಳಿಕ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ ಎಂದು ಕರೆ ಮಾಡಿ ಶಿಕ್ಷಕಿಗೆ ಲಕ್ಷ ರೂ. ಟೋಪಿ!

0

ವಿಜಯಸಾಕ್ಷಿ ಸುದ್ದಿ, ಗದಗ

ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ ಎಂದು ಕರೆ ಮಾಡಿದ ಖದೀಮನೊಬ್ಬ ಶಿಕ್ಷಕಿಯೊಬ್ಬರ ಸುಮಾರು 1 ಲಕ್ಷ ರೂ. ಹಣವನ್ನು ಖಾತೆಯಿಂದ ಎಗರಿಸಿದ್ದಾನೆ.

ಗದಗ ತಾಲೂಕಿನ ಹುಲಕೋಟಿಯ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುವ ಮಹಿಳೆಗೆ ಈ ರೀತಿಯ ವಂಚನೆ ಆಗಿದೆ.
ಸೆ. 1ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ, ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ. ಸರಿಪಡಿಸಲು ಅದರ ಸಂಖ್ಯೆ, ಪಿವಿವಿ ನಂಬರ್ ಹಾಗೂ ಸದ್ಯ ಬಳಸುತ್ತಿರುವ ಎಟಿಎಂ ಪಿನ್ ನೀಡುವಂತೆ ಕೇಳಿದ್ದಾನೆ.

ಶಿಕ್ಷಕಿಗೆ ಅನುಮಾನ ಬಂದಿದೆ. ನಿಮ್ಮ ಅಕೌಂಟ್ ಹುಲಕೋಟಿ ಶಾಖೆಯಲ್ಲಿಯೇ ಇರುವುದು ಎಂದು ಆ ವ್ಯಕ್ತಿ ಕನ್ನಡದಲ್ಲಿ ಹೇಳಿದಾಗ ಒಂದಿಷ್ಟು ವಿಶ್ವಾಸ ಮೂಡಿದೆ. ಎಟಿಎಂ ಕಾರ್ಡ್ ಮೇಲಿರುವ ನಂಬರ್ ಹೇಳಿದ ಮೇಲೆ, ಒಟಿಪಿ ನಂಬರ್ ಕೇಳಿದ ಆ ವ್ಯಕ್ತಿ ಒಡನೆಯೇ ತಲಾ 49,999 ರೂ.ಗಳಂತೆ ಎರಡು ಬಾರಿ ಹಣ ಡ್ರಾ ಮಾಡಿಕೊಂಡಿದ್ದಾನೆ.

ಹಣ ಖಾತೆಯಿಂದ ಹಿಂಪಡೆದಿರುವ ಬಗ್ಗೆ ಮೊಬೈಲ್‌ಗೆ ಎಸ್ಸೆಮ್ಮೆಸ್ ಬಂದಾಗ ಟೀಚರಮ್ಮನಿಗೆ ತಾವು ಮೋಸ ಹೋಗಿದ್ದು ಅರಿವಾಗಿದೆ. ಕುಟುಂಬಸ್ಥರೊಂದಿಗೆ ಚರ್ಚಿಸಿ ತಡವಾಗಿ ದೂರು ನೀಡಿದ್ದಾರೆ. ಈ ಕುರಿತು ಗದಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್‌ಸ್ಪೆಕ್ಟರ್ ಟಿ ಮಹಾಂತೇಶ್ ತನಿಖೆ ಕೈಗೊಂಡಿದ್ದಾರೆ.