Home Blog Page 3444

ಅಲೆಮಾರಿಗಳ ಹಸಿವು ನೀಗಿಸಿದ ಎಸ್ಪಿ ಯತೀಶ್ ಮಾನವೀಯ ಕಾರ್ಯಕ್ಕೆ ಶ್ಲಾಘನೆ! ಚಿತ್ರ ಸಹಿತ ಪೋಸ್ಟ್ ಪ್ರಕಟಿಸಿ ಹೆಮ್ಮೆ ವ್ಯಕ್ತಪಡಿಸಿದ ಕೇಂದ್ರ ವಾರ್ತಾ ಮತ್ತು ಪ್ರಚಾರ ಇಲಾಖೆ

ವಿಜಯಸಾಕ್ಷಿ ಸುದ್ದಿ, ಗದಗ

ಬೇರೆ ರಾಜ್ಯಗಳಿಂದ ಜಿಲ್ಲೆಗೆ ವಲಸೆ ಬಂದು ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ದುಡಿಮೆಗೆ ಅವಕಾಶ ಸಿಗದೆ, ಊಟಕ್ಕೂ ಪರದಾಡುತ್ತಿರುವ ಸ್ಥಿತಿಯನ್ನು ಗಮನಿಸಿದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಹಾಗೂ ಅವರ ಪೊಲೀಸ್ ತಂಡದವರು ಈ ನಿರಾಶ್ರಿತರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದರು.

#IndiaFightsCorona ಎಂಬ ಹ್ಯಾಷ್ ಟ್ಯಾಗ್‌ನಲ್ಲಿ ಗದಗ ಎಸ್ಪಿ ಯತೀಶ್ ಹಾಗೂ ಸಿಬ್ಬಂದಿ ನಿರಾಶ್ರಿತರಿಗೆ ದಿನಸಿ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸುತ್ತಿರುವ ಫೋಟೋ ಸಹಿತ ಪೋಸ್ಟ್ ಪ್ರಕಟಿಸಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ `Covid-19 Warriors of India’ ಎಂದು ಹೆಮ್ಮೆಯಿಂದ ಹೇಳಿಕೊಂಡಿದೆ.

ಇಂತಹ ಮಾನವೀಯ ಸೇವೆ ಇತರರಿಗೂ ಪ್ರೇರಣೆಯಾಗಿ, ಇನ್ನಷ್ಟು ದಾನಿಗಳು ಸಹಾಯ ಮಾಡಲು ಮುಂದಾಗಲಿ ಎಂಬ ಉದ್ದೇಶ ಈ ಪೋಸ್ಟ್ ಹಿಂದಿದೆ.

ಇದನ್ನೂ ಓದಿ ಸದ್ದಿಲ್ಲದೆ ಅಲೆಮಾರಿಗಳ ಹಸಿವು ನೀಗಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ !


ಯತೀಶ್ ಅವರ ಈ ಮಾನವೀಯ ಕಾರ್ಯವನ್ನು ವಿಜಯಸಾಕ್ಷಿ ವೆಬ್ ‘ ಸದ್ದಿಲ್ಲದೆ ಅಲೆಮಾರಿಗಳ ಹಸಿವು ನೀಗಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶೀರ್ಷಿಕೆಯಲ್ಲಿ ಮೇ 15ರಂದು, ಹಾಗೂ ವಿಜಯಸಾಕ್ಷಿ ದಿನಪತ್ರಿಕೆಯ ಮೇ 16ರ ಸಂಚಿಕೆಯಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ನಿಲ್ಲುತ್ತಿಲ್ಲ ಸೋಂಕಿನ ಸ್ಫೋಟ; 530 ಜನರಿಗೆ ಸೋಂಕು, ಮತ್ತೆ ಐವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಸೋಂಕಿನ ಸ್ಫೋಟ ಮುಂದುವರೆದಿದೆ. ಹಳ್ಳಿ ಹಳ್ಳಿಗೂ ವ್ಯಾಪಿಸುತ್ತಿರುವ ಸೋಂಕು ದಿನದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತದೆ.

ಇಂದಿನ 530 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 20315 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -217, ಮುಂಡರಗಿ-60, ನರಗುಂದ-38, ರೋಣ-104, ಶಿರಹಟ್ಟಿ-106, ಹೊರಜಿಲ್ಲೆಯ-05 ಸೇರಿದಂತೆ 530 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಐವರು ಮೃತಪಟ್ಟಿದ್ದು, ಮೃತರ ಸಂಖ್ಯೆ 207 ಕ್ಕೇರಿದೆ.

ರೋಣ ತಾಲೂಕಿನ ನರೇಗಲ್ ನಿವಾಸಿ 55 ವರ್ಷದ ಮಹಿಳೆ ಮೇ-13 ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 15 ರಂದು ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ಮುದೇನಗುಡಿ ನಿವಾಸಿ 63 ವರ್ಷದ ಮಹಿಳೆ ಮೇ -16 ರಂದು ರೋಣ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಮೇ 17 ರಂದು ಮೃತಪಟ್ಟಿದ್ದಾರೆ.

ಮುಂಡರಗಿ ತಾಲೂಕಿನ ಸಿಂಗಟಾಲೂರ ನಿವಾಸಿ 77 ವರ್ಷದ ವ್ಯಕ್ತಿ ಮೇ 15 ರಂದು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಮೇ 18 ರಂದು ಮೃತಪಟ್ಟಿದ್ದಾರೆ.

ಲಕ್ಷ್ಮೇಶ್ವರ ನಿವಾಸಿ 51 ವರ್ಷದ ವ್ಯಕ್ತಿ ಮೇ 18 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 19 ರಂದು ಮೃತಪಟ್ಟಿದ್ದಾರೆ.

ನರಗುಂದ ತಾಲೂಕಿನ ಚಿಕ್ಕ ನರಗುಂದ ನಿವಾಸಿ 68 ವರ್ಷದ ವ್ಯಕ್ತಿ ತಾಲೂಕು ಆಸ್ಪತ್ರೆಗೆ ಮೇ-18 ರಂದು ದಾಖಲಾಗಿದ್ದರು. ಇವರು ಮೇ -19 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 400 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 16681 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 3427 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ.

ಇನ್ನೂ 192 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ವಿಜಯಪುರದಲ್ಲಿ ಹೆಚ್ಚುಗುತ್ತಿದೆ ಬ್ಲ್ಯಾಕ್ ಫಂಗಸ್ ಹಾವಳಿ

ವಿಜಯಸಾಕ್ಷಿ ಸುದ್ದಿ, ವಿಜಯಪುರ

ಜಿಲ್ಲೆಯಲ್ಲಿ ಕೊರೊನಾದೊಂದಿಗೆ ಬ್ಲ್ಯಾಕ್ ಫಂಗಸ್ ನ ಹಾವಳಿ ಹೆಚ್ಚಾಗುತ್ತಿದೆ. ಇಂದು ಒಂದೇ ದಿನ 14 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿಯವರೆಗೆ ಬರೋಬ್ಬರಿ 50ಕ್ಕೆ ಈ ಸಂಖ್ಯೆ ಏರಿಕೆ ಕಂಡಿದೆ.

ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಬ್ಲ್ಯಾಕ್ ಫಂಗಸ್ ಪ್ರಕರಣ ಮತ್ತೆಯಾದಲ್ಲಿ ಖಾಸಗಿ ಆಸ್ಪತ್ರೆಯವರು ಮುಚ್ಚಿಟ್ಟು ಚಿಕಿತ್ಸೆ ಕೊಡಬಾರದು ಎಂದು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಬ್ಲ್ಯಾಕ್ ಫಂಗಸ್ ಪತ್ತೆ ಹಚ್ಚಿದ ಆಸ್ಪತ್ರೆಯವರೇ ಜನರಿಗೆ ಚಕಿತ್ಸೆ ನೀಡಬೇಕು. ಅದರ ಔಷಧಿ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಜಿಲ್ಲೆಯಲ್ಲಿ ಪ್ರಕರಣ ಹೆಚ್ಚಾಗಿರುವ ಕಾರಣ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ.

ಮಹಾಮಾರಿಗೆ ರಾಜ್ಯದಲ್ಲಿ ಎಷ್ಟು ಜನ ಮಕ್ಕಳು ಬಲಿಯಾಗಿದ್ದಾರೆ? ಎಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಮಹಾಮಾರಿ ದೊಡ್ಡ ಪೀಡುಗಾಗಿದೆ. ವಯಸ್ಸಾದವರನ್ನೇ ಹೆಚ್ಚಾಗಿ ಕಾಡುತ್ತಿದ್ದ ಇದು ಮಕ್ಕಳಲ್ಲಿಯೂ ಹೊಕ್ಕುತ್ತಿದೆ. ಹೀಗಾಗಿ ಆತಂಕ ಎಲ್ಲೆಡೆ ಮನೆ ಮಾಡಿದೆ. ಕಳೆದ ಎರಡು ತಿಂಗಳಲ್ಲಿನ 40 ಸಾವಿರಕ್ಕೂ ಹೆಚ್ಚು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ.
ಮಾರ್ಚ್ 18 ರಿಂದ ಮೇ. 18ರ ವರೆಗೆ ಎರಡು ತಿಂಗಳಿನಲ್ಲಿ 0-9 ವಯೋಮಾನದ ಶೇ. 143ರಷ್ಟು ಮಕ್ಕಳಲ್ಲಿ ಕೊರೊನಾ ವೈರಸ್ ಸೋಂಕು ತಗುಲಿದೆ.

10-19 ವಯೋಮಾನದ ಮಕ್ಕಳಲ್ಲಿ ಶೇ.160ರಷ್ಟು ಮಕ್ಕಳಲ್ಲಿ ಸೋಂಕು ಕಂಡು ಬಂದಿದೆ. ಕೊರೊನಾ ವಾರ್ ರೂಂನ ಅಂಕಿ – ಅಂಶಿಗಳಂತೆ 0-9 ವರ್ಷದ 39,846 ಮಕ್ಕಳಿಗೆ ಸೋಂಕು ತಗುಲಿದೆ. 10-19 ವರ್ಷದ 1,05,044 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಹಿಡಿದು ಮಾ. 18ರ ವರೆಗೆ 0-9 ವರ್ಷದ 27,841 ಹಾಗೂ 10-19 ವರ್ಷದ 65,551 ಮಕ್ಕಳಿಗೆ ಕೊರೊನಾವೈರಸ್ ಸೋಂಕು ತಗುಲಿತ್ತು ಎಂದು ವೈದ್ಯಕೀಯ ತಪಾಸಣೆಯಿಂದ ತಿಳಿದಿತ್ತು.

ಒಂದನೇ ಅಲೆಯಲ್ಲಿ ರಾಜ್ಯದಲ್ಲಿ 46 ಮಕ್ಕಳು ಮಹಾಮಾರಿಗೆ ಬಲಿಯಾಗಿದ್ದರು. ಸದ್ಯ ಈ ಸಂಖ್ಯೆ 62ಕ್ಕೆ ಏರಿಕೆ ಕಂಡಿದೆ. 2ನೇ ಅಲೆಯಲ್ಲಿ ಮಕ್ಕಳ ಸಾವಿನ ಸಂಖ್ಯೆ ಕೂಡ ಮೂರು ಪಟ್ಟು ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೇ, ಮೂರನೇ ಅಲೆಯಲ್ಲಿ ಸೋಂಕು ಹೆಚ್ಚಾಗಿ ಮಕ್ಕಳನ್ನೇ ಬಾಧಿಸುತ್ತಿದೆ ಎಂದು ತಜ್ಞರು ಹೇಳಿದ್ದು, ಆತಂಕ ಇನ್ನಷ್ಟು ಹೆಚ್ಚಾಗುತ್ತಿದೆ.

ಗೋವಾದಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆ!

ವಿಜಯಸಾಕ್ಷಿ ಸುದ್ದಿ, ಪಣಜಿ

ಕೊರೊನಾ ಎರಡನೇ ಅಲೆ ಇಡೀ ರಾಷ್ಟ್ರವನ್ನೇ ಕಂಗೆಡಿಸಿದೆ. ಹೀಗಾಗಿ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಆದರೂ ಸಂಪೂರ್ಣವಾಗಿ ಸೋಂಕು ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಹಲವೆಡೆ ಲಾಕ್ ಡೌನ್ ವಿಸ್ತರಿಸಲಾಗುತ್ತಿದೆ. ಸದ್ಯ ಗೋವಾದಲ್ಲಿ ಮೇ. 31ರ ವರೆಗೆ ಲಾಕ್ ಡೌನ್ ಘೋಷಿಸಲಾಗಿದೆ.

ಈ ಕುರಿತು ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಹೇಳಿದ್ದಾರೆ. ನಾವು ರಾಜ್ಯದಲ್ಲಿ ಕರ್ಫ್ಯೂವನ್ನು ಮೇ. 31ರವರೆಗೂ ವಿಸ್ತರಿಸುತ್ತಿದ್ದೇವೆ. ಈ ಮುನ್ನ ಇದ್ದ ನಿಯಮಗಳು ಇದ್ದಂತೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಅಗತ್ಯ ವಸ್ತುಗಳು, ದಿನಸಿ ಅಂಗಡಿ, ಮದ್ಯದಂಗಡಿಗಳನ್ನು ಬೆಳಿಗ್ಗೆ 7 ರಿಂದ ಮಧ್ಯಾಹ್ನ 1ರ ವರೆಗೆ ಮಾತ್ರ ತೆರೆಯಲಾಗಿರುತ್ತದೆ. ಮೆಡಿಕಲ್ ಶಾಪ್ ಮತ್ತು ರೆಸ್ಟೋರೆಂಟ್‍ ಗಳು ಬೆಳಿಗ್ಗೆ 7 ರಿಂದ ಸಂಜೆ 7ರ ವರೆಗೂ ಕಾರ್ಯ ನಿರ್ವಹಿಸಲಿವೆ.

ಚಿಪ್ಕೋ ಚಳುವಳಿಯ ನಾಯಕನನ್ನೂ ಬಿಡಲಿಲ್ಲ ಮಹಾಮಾರಿ!

ವಿಜಯಸಾಕ್ಷಿ ಸುದ್ದಿ, ಡೆಹ್ರಾಡೂನ್

ಚಿಪ್ಕೋ ಚಳುವಳಿಯ ನಾಯಕ ಸುಂದರ್ ಲಾಲ್(94) ಬಹುಗುಣ ಅವರನ್ನು ಮಹಾಮಾರಿ ಬಲಿ ಪಡೆದಿದೆ.
ಸುಂದರ್ ಲಾಲ್ ಅವರು ಇಂದು ಉತ್ತರಾಖಂಡದ ರಿಷಿಕೇಶ್ ನಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಅವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ರಿಷಿಕೇಶ್‍ ನ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ತಮ್ಮ ಜೀವಮಾನವಿಡಿ ಪರಿಸರವಾದಿಯಾಗಿ ಗುರಿತಿಸಿಕೊಂಡಿದ್ದ ಸುಂದರ್ ಲಾಲ್ ಅವರು ಚಿಪ್ಕೋ ಚಳುವಳಿ ಮೂಲಕ ಮರಗಳನ್ನು ಕಡಿಯದಂತೆ ಆಂದೋಲನ ಪ್ರಾರಂಭಿಸಿದ್ದರು. 1990ರಲ್ಲಿ ತೇರಿ ಡ್ಯಾಮ್ ಆಂದೋಲನ ಪ್ರಾರಂಭಿಸಿದ್ದರು. ಇದರ ಭಾಗವಾಗಿ ಅವರು 1995ರಲ್ಲಿ ಜೈಲುವಾಸ ಅನುಭವಿಸಿದ್ದರು. ಅವರ ಪರಿಸರ ಆಂದೋಲನ ಗುರುತಿಸಿದ್ದ ಸರ್ಕಾರ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ಕೇರಳ ಸಂಪುಟದಲ್ಲಿ ಪತ್ರಕರ್ತೆಗೆ ಒಲಿದ ಅದೃಷ್ಟ!

ವಿಜಯಸಾಕ್ಷಿ ಸುದ್ದಿ, ತಿರುವನಂತಪುರ

ಎಲ್ ಡಿಎಫ್ ಸಚಿವ ಸಂಪುಟದಲ್ಲಿ ಆರೋಗ್ಯ ಖಾತೆಗೆ ಸಚಿವರನ್ನು ನೇಮಿಸುವ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ಆದರೆ ಇದೀಗ ಪತ್ರಕರ್ತೆ ವೀಣಾ ಜಾರ್ಜ್ ಅವರನ್ನು ಕೇರಳದ ಆರೋಗ್ಯ ಸಚಿವೆಯಾಗಿ ಆಯ್ಕೆ ಮಾಡಲಾಗಿದೆ.

ಕಳೆದ ಬಾರಿ ಕೇರಳದ ಆರೋಗ್ಯ ಸಚಿವೆಯಾಗಿದ್ದ 64 ವರ್ಷದ ಕೆಕೆ ಶೈಲಜಾ ಅವರು ಕೋವಿಡ್-19 ನಿರ್ವಹಣೆಯಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದರು. ಅದಕ್ಕೂ ಮುಂಚಿತವಾಗಿ ಅಂದರೆ 2018 ರಲ್ಲಿ ನಿಫಾ ವೈರಸ್ ಹರಡುವಿಕೆಯ (2018) ಸವಾಲುಗಳನ್ನು ಎದುರಿಸುವಲ್ಲಿ ಆರೋಗ್ಯ ಸಚಿವೆಯಾಗಿ ಕೆಕೆ ಶೈಲಜಾ ಅವರು ಉತ್ತಮ ಸಾಧನೆ ಮಾಡಿದ್ದರು. ಆದರೆ ಈ ಬಾರಿಯ ಸಚಿವ ಸಂಪುಟದಿಂದ ಅವರನ್ನ ಕೈಬಿಡಲಾಗಿದೆ.

ಕೇರಳ ರಾಜ್ಯವು ಕಳೆದ ಬಾರಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮಾದರಿ ರಾಜ್ಯ ಎನಿಸಿಕೊಳ್ಳಲು ಶೈಲಜಾ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆದರೂ ಈ ಬಾರಿ ಶೈಲಜಾ ಅವರ ಆಯ್ಕೆಯಾಗದಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಶೈಲಜಾ ಅವರ ಜನಪ್ರಿಯತೆ ಹೆಚ್ಚುತ್ತಿರುವುದೇ ಕಾರಣ ಎಂದು ಹೇಳಲಾಗುತ್ತಿದೆ.

ಇದೀಗ ಕೇರಳದ ಸಚಿವೆಯಾಗಲಿರುವ ವೀಣಾ ಜಾರ್ಜ್ ಅವರು ಎರಡು ಬಾರಿ ಶಾಸಕಿಯಾಗಿದ್ದು, ಕೇರಳ ವಿಧಾನಸಭೆಯಲ್ಲಿ ಅರನ್ಮುಲಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಇವರಿಗೆ ನಾಯಕತ್ವದ ಗುಣಗಳು, ಪ್ರಬುದ್ಧ ಸಂವಹನ ಮತ್ತು ಉತ್ತಮ ಅಭಿವ್ಯಕ್ತಿ ಭಾಷಣ ಕಲೆ ಇದೆ.

ವೀಣಾ ಜಾರ್ಜ್ ಅವರು 2016 ರಲ್ಲಿ ಚುನಾವಣಾ ಕಣದಲ್ಲಿ ಅಚ್ಚರಿಯ ಪ್ರವೇಶ ಪಡೆದಿದ್ದರೂ, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಶಿವಡಾಸನ್ ನಾಯರ್ ಅವರನ್ನು 7,646 ಮತಗಳ ಅಂತರದಲ್ಲಿ ಸೋಲಿಸಿದ್ದರು.

ಸೋಂಕಿತನ ಶವ ಸಂಸ್ಕಾರಕ್ಕೆ ವಿರೋಧಿಸಿದ ಗ್ರಾಮಸ್ಥರು!

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಕೊರೊನಾ ಸೋಂಕಿತನ ಶವ ಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ ಅಮಾನವೀಯ ಘಟನೆ ಕಂಡು ಬಂದಿದೆ. ಜಿಲ್ಲೆಯ ರೋಣ ತಾಲೂಕಿನ ಅಮರಗೋಳದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಮೂಲತಃ ಅಮರಗೋಳ ಗ್ರಾಮದ 72 ವರ್ಷದ ವ್ಯಕ್ತಿಯೊಬ್ಬರು ಮಹಾಮಾರಿಗೆ ಬಲಿಯಾಗಿದ್ದರು. ಆದರೆ, ಈ ವ್ಯಕ್ತಿ ಬಾಗಲಕೋಟೆ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು.

ಕೊರೊನಾದಿಂದಾಗಿ ಬಾಗಲಕೋಟೆ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದರು. ಆದರೆ, ಅಂತ್ಯ ಸಂಸ್ಕಾರ ಮಾಡಲು ಕುಟುಂಬಸ್ಥರು ಮಾತ್ರ ಹುಟ್ಟೂರಿಗೆ ಶವ ತಂದಿದ್ದರು.

ಈ ನಿರ್ಧಾರಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ನಂತರ ಜೆಸಿಬಿಯ ಮೂಲಕ ತಮ್ಮ ಸ್ವಂತ ಜಮೀನಿನಲ್ಲಿಯೇ ಸಂಬಂಧಿಕರು ಅಂತ್ಯ ಸಂಸ್ಕಾರ ಮಾಡಿದ್ದಾರೆ. ಹೆಚ್ಚು ಮಳೆ ಸುರಿದಿದ್ದರಿಂದಾಗಿ ಆಂಬುಲೆನ್ಸ್ ವಾಹನ ಹೊಲಕ್ಕೆ ತೆರಳಲು ಪರದಾಟ ನಡೆಸಿತು. ಕೊನೆಗೆ ಜೆಸಿಬಿಯಲ್ಲಿಯೇ ಶವ ಹಾಕಿಕೊಂಡು ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

ಕುಂಭ ಮೇಳಕ್ಕೆ ಅವಕಾಶ ನೀಡಿದ್ದಕ್ಕೆ ಸರ್ಕಾರಕ್ಕೆ ಛೀಮಾರಿ ಹಾಕಿದ ಕೋರ್ಟ್!

ವಿಜಯಸಾಕ್ಷಿ ಸುದ್ದಿ, ಡೆಹ್ರಾಡೂನ್

ದೇಶದಲ್ಲಿ ಕೊರೊನಾ ಹೆಚ್ಚಳವಾಗಲು ಧಾರ್ಮಿಕ ಕಾರ್ಯಕ್ರಮಗಳೇ ಕಾರಣ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲೂ ಈ ಕುಂಭಮೇಳವನ್ನು ಕೋವಿಡ್ ಪ್ರೋಟೋಕಾಲ್ ಉಲ್ಲಂಘಿಸಿ ನಡೆಸಿತ್ತು. ಈಗ ಇದರ ವಿರುದ್ಧ ಉತ್ತರಾಖಂಡ ಹೈಕೋರ್ಟ್ ಆಕ್ರೋಶ ಹೊರಹಾಕಿದ್ದು, ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ.

ಕೋವಿಡ್ ಹರಡಲು ಮೂಲ ಕಾರಣವಾದ ಕುಂಭಮೇಳದ ವಿಚಾರದಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಆರ್.ಎಸ್. ಚೌಹಾಣ್ ಮತ್ತು ನ್ಯಾಯಮೂರ್ತಿ ಅಲೋಕ್ ವರ್ಮಾ ಅವರು, “ರಾಜ್ಯದಲ್ಲಿ ಈ ಕುಂಭಮೇಳ ಮತ್ತು ಚಾರ್ ಧಾಮ್ ಯಾತ್ರೆಯಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವಾಗ ಕೋವಿಡ್ ನಿಯಮಗಳನ್ನು ಅನುಸರಿಸಲಾಗಿದೆಯೇ..? ನಾವು ಮೊದಲು ಕುಂಭಮೇಳ ನಡೆಸಿ ತಪ್ಪುಮಾಡಿದ್ದೇವೆ, ಬಳಿಕ ಚಾರ್ ಧಾಮ್ ಯಾತ್ರೆ.. ಯಾಕೆ ನಾವು ಪದೇ ಪದೇ ಮುಜುಗರಕ್ಕೆ ಒಳಗಾಗುವ ಕೆಲಸ ಮಾಡುತ್ತೇವೆ..?” ಎಂದು ಉತ್ತರಾಖಂಡ ಸರ್ಕಾರವನ್ನು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.

ಕೇದಾರನಾಥ ಮತ್ತು ಬದ್ರಿನಾಥ್ ದೇವಾಲಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹಾರಿದಾಡುತ್ತಿವೆ ಅವುಗಳನ್ನು ನೋಡಿ. ಅಲ್ಲಿ ಪುರೋಹಿತರೇ ದೈಹಿಕ ಅಂತರ ಕಾಪಾಡಿಕೊಂಡಿಲ್ಲ. ಇವುಗಳನ್ನೆಲ್ಲಾ ಬಗ್ಗೆ ನಿರ್ಧರಿಸುವುದು ನಮ್ಮ ಕೆಲಸವಲ್ಲ, ಸರ್ಕಾರದ ಕೆಲಸ. ನೀವು ನ್ಯಾಯಾಲಯವನ್ನು ಮೂರ್ಖರಾಗಿಸಬಹುದು, ಆದರೆ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ. ಸರ್ಕಾರ ಲಕ್ಷಾಂತರ ಜನರ ಜೀವದೊಂದಿಗೆ ಆಟವಾಡುತ್ತಿದೆ. ಇದೊಂದು ನಿರ್ಲಕ್ಷ್ಯ ಸರ್ಕಾರ” ಎಂದು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್ ಇನ್ನಿಲ್ಲ!

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಕೇಂದ್ರದ ಮಾಜಿ ಸಚಿವ ಹಾಗೂ ರೈತ ನಾಯಕ ಬಾಬಾಗೌಡ ಪಾಟೀಲ(78) ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಇತ್ತೀಚೆಗಷ್ಟೇ ನಗರದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು ಎಳೆದಿದ್ದಾರೆ.

ಬಾಬಾಗೌಡ ಅವರು ರೈತ ಹೋರಾಟದ ಮೂಲಕ ರಾಜಕೀಯ ರಂಗ ಪ್ರವೇಶಿಸಿದ್ದರು. 80-90 ದಶಕದಲ್ಲಿ ಸರ್ಕಾರದ ವಿರುದ್ಧ ಸಿಡಿದೆದ್ದು, ರೈತ ಸಂಘ ಕಟ್ಟಿದ ಪ್ರಮುಖರಲ್ಲಿ ಇವರೊಬ್ಬರು. ಆ ನಂತರ ರಾಜ್ಯದಾದ್ಯಂತ ರೈತ ಸಂಘದ ಮೂಲಕ ರೈತರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ತೊಡೆತಟ್ಟಿ ನಿಂತಿದ್ದರು. ಉತ್ತರ ಕರ್ನಾಟಕವಷ್ಟೆ ಅಲ್ಲದೇ, ದಕ್ಷಿಣ ಕರ್ನಾಟಕದಲ್ಲಿಯೂ ಇವರು ರೈತರಿಗೆ ನಾಯಕರಾಗಿದ್ದರು.

1989ರಲ್ಲಿ ರೈತ ಸಂಘದ ಮೂಲಕ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ ಹಾಗೂ ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಏಕಕಾಲದಲ್ಲಿ ಸ್ಪರ್ಧಿಸಿ, ಎರಡೂ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದರು. ಆ ಸಮಯದಲ್ಲಿ ರಾಜ್ಯದ ಇನ್ನಿತರ ಕ್ಷೇತ್ರಗಳಲ್ಲಿ ರೈತ ಸಂಘದ ಸದಸ್ಯರು ತೀವ್ರ ಹೋರಾಟ ನಡೆಸಿ, ಸೋಲು ಕಂಡಿದ್ದರು. ರೈತ ಸಂಘಧ ಇನ್ನೊಬ್ಬ ನಾಯಕ ನಂಜುಂಡಸ್ವಾಮಿ ಕೂಡ ಸೋಲು ಕಂಡಿದ್ದರು. ಆಗ ಬಾಬಾಗೌಡ ಪಾಟೀಲ್ ಮಾತ್ರ ರೈತ ಸಂಘದಿಂದ ಗೆದ್ದ ಏಕೈಕ ವ್ಯಕ್ತಿಯಾಗಿದ್ದರು. ಆ ನಂತರ ಬಾಬಾಗೌಡ ಅವರು ಕಿತ್ತೂರ ಕ್ಷೇತ್ರವನ್ನು ಉಳಿಸಿಕೊಂಡು, ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ರಾಜೀನಾಮೆ ನೀಡಿದರು. ನಂಜುಂಡಸ್ವಾಮಿ ಅವರನ್ನು ಧಾರವಾಡ ಗ್ರಾಮೀಣ ಅಖಾಡಕ್ಕೆ ಇಳಿಸಿ, ತಾವೇ ಸ್ವಂತ ಪ್ರಚಾರದ ಹೊಣೆ ಹೊತ್ತು ಅವರನ್ನೂ ಕೂಡ ಗೆಲ್ಲಿಸಿಕೊಂಡು ವಿಧಾನಸಭೆ ಪ್ರವೇಶಿದ್ದರು. ಅಂದು ಬಾಬಾಗೌಡ ಹಾಗೂ ನಂಜುಂಡಸ್ವಾಮಿ ಅವರು ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತಿದ್ದರೆಂದರೆ, ಇಡೀ ಸದನವೇ ಮೌನ ವಹಿಸುತ್ತಿತ್ತು. ಅಷ್ಟೊಂದು ಆಳ ಅಧ್ಯಯನದ ಮೂಲಕ ಇವರು ಮಾತನಾಡುತ್ತಿದ್ದರು. ರೈತರಿಗೆ ಎಲ್ಲಿಯೇ ಅನ್ಯಾಯವಾದರೂ ಸರ್ಕಾರವನ್ನೇ ತರಾಟೆಗೆ ತೆಗೆದುಕೊಂಡು ಬಗೆ ಹರಿಸುತ್ತಿದ್ದರು.
ಆನಂತರ ರೈತ ಸಂಘದಲ್ಲಿ ಭಿನ್ನಾಭಿಪ್ರಾಯ ತಲೆದೋರಿ, ಬಾಬಾಗೌಡ ಅವರು ಬಿಜೆಪಿ ಸೇರಿದರು.

1998ರಲ್ಲಿ ಬೆಳಗಾವಿ ಲೋಕಸಭೆಯಿಂದ ಸ್ಪರ್ಧಿಸಿ ಜಯಗಳಿಸಿ, ಸಂಸತ್ ಕೂಡ ಪ್ರವೇಶಿಸಿದರು. ಆಗ ಅಟಲ್ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಸಾಕಷ್ಟು ಜನಸೇವೆ ಮಾಡಿದ್ದಾರೆ. ಗ್ರಾಮ ಸಡಕ್ ಯೋಜನೆ ಸೇರಿದಂತೆ ಹತ್ತಾರು ಯೋಜನೆಗಳ್ನು ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಕೊನೆಗೆ ಬಿಜೆಪಿಯಲ್ಲಿನ ಕೆಲವು ಗುಂಪುಗಾರಿಕೆಯಿಂದ ಬೇಸತ್ತ ಅವರು, ಬಿಜೆಪಿ ತೊರೆದರು.
ಆ ನಂತರ ರೈತ ಸೇವೆ ಮಾಡುತ್ತ, ರೈತರ ಅನ್ಯಾಯದ ವಿರುದ್ಧ ಧ್ವನಿ ಹಾಕುತ್ತ ರೈತ ಸೇವೆಯಲ್ಲಿಯೇ ತೊಡಗಿದ್ದರು.

ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದು ರೈತರಿಗೆ ಮರಣಶಾಸನವಾಗಿದೆ ಎಂದು ಮೋದಿ ವಿರುದ್ಧ ಇತ್ತೀಚೆಗಷ್ಟೇ ಗುಡುಗಿದ್ದರು.

ಸದ್ಯ ಅವರ ನಿಧನಕ್ಕೆ ರಾಜ್ಯದ ರೈತರು ಕಂಬನಿ ಮಿಡಿಯುತ್ತಿದ್ದಾರೆ. ವೀರಶೈವ ಮಹಾಸಭೆಯ ಧಾರವಾಡ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ಕಾಂಗ್ರೆಸ್ ನಾಯಕ ಮಲ್ಲನಗೌಡ ಸೋ.ಪಾಟೀಲ, ಬಿಜೆಪಿ ನಾಯಕ ಹಾಗೂ ನ್ಯಾಯವಾದಿ ಮಂಜುನಾಥ ಮುಗ್ಗನವರ, ವೀರಶೈವ ಮಹಾಸಭೆಯ ಕಾರ್ಯದರ್ಶಿ ಸಿದ್ದಣ್ಣ ಕಂಬಾರ, ನ್ಯಾಯವಾದಿ ಸೋಮಶೇಖರ ಹೂಗಾರ ಸೇರಿದಂತೆ ಹಲವು ಗಣ್ಯರು ಬಾಬಾಗೌಡ ಅವರ ನಿಧನಕ್ಕೆ ಕಣ್ಣೀರು ಸುರಿಸಿದ್ದಾರೆ.

error: Content is protected !!