Home Blog Page 3448

ಕುತೂಹಲ ಕೆರಳಿಸಿದ ಬಿಎಸ್ ವೈ ಕುಮಾರಕೃಪಾ ಭೇಟಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಸಿಎಮ್ ಯಡಿಯೂರಪ್ಪ ಬೆಂಗಳೂರಿನ ಕೇಶವ ಕೃಪಾಗೆ ಭೇಟಿ ನೀಡಿ ಆರ್ ಎಸ್ ಎಸ್ ಮುಖಂಡರೊಂದಿಗೆ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯಪಾಲರ ಹುದ್ದೆ ಬೇಡವೆಂದಿರುವ ಯಡಿಯೂರಪ್ಪನವರನ್ನು ಮನವೊಲಿಕೆ ಮಾಡುವ ನಿಟ್ಟಿನಲ್ಲಿ ಮುಖಂಡರು ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗೂ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿಯೂ ಯಡಿಯೂರಪ್ಪ ಆರ್ ಎಸ್ ಎಸ್ ಮುಖಂಡರ ಜೊತೆ ಚರ್ಚಿಸಬಹುದಾದ ಸಾಧ್ಯತೆಯಿದೆ ಎನ್ನಲಾಗುತ್ತದೆ.

ಸಂಪುಟ ವಿಸ್ತರಣೆ: ಮುಖ್ಯಮಂತ್ರಿ ನಿರ್ಧಾರಕ್ಕೆ ಬದ್ಧ


ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸಚಿವ ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟದ್ದು. ಸಿಎಂ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಬದ್ಧ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.
ಬೆಂಗಳೂರಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಬಳಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು,
ಸಂಪುಟ ವಿಸ್ತರಣೆ ವಿಷಯದಲ್ಲಿ ಸಿಎಂ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು ಎಂದರು.

ಶೆಟ್ಟರ್ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರು ಯಾವ ನಿರ್ಧಾರ ಕೈಗೊಳ್ಳುತ್ತಾರೊ ನನಗೆ ಗೊತ್ತಿಲ್ಲ. ಶೆಟ್ಟರ್ ಅವರದು ವೈಯಕ್ತಿಕ ವಿಚಾರ. ಈ ಬಗ್ಗೆ ಹೇಳಿಕೆ ನೀಡಿ ಗೊಂದಲ ಸೃಷ್ಟಿಲಾರೆ ಎಂದು ಹೇಳಿದರು.

ಮೊದಲ ಸಚಿವ ಸಂಪುಟ ಸಭೆಯಲ್ಲೇ ಅತ್ಯುತ್ತಮವಾದ ನಿರ್ಧಾರಗಳನ್ನು ಸಿಎಂ ಬೊಮ್ಮಾಯಿ ತೆಗೆದುಕೊಂಡಿದ್ದಾರೆ. ರೈತರು, ಹಿರಿಯರು, ವಿಧವೆಯರು, ಅಂಗವಿಕಲರಿಗೆ ಆದ್ಯತೆ ನೀಡುವ ನಿರ್ಣಯಗಳನ್ನು ಕೈಗೊಂಡಿರುವುದು ಉತ್ತಮ ನಿರ್ಧಾರ ಎಂದು ಪ್ರಶಂಸಿಸಿದರು.

ಹೈಕಮಾಂಡ್ ನಿರ್ಧಾರಕ್ಕೆ ಬದ್ಧ

  • ಬಳ್ಳಾರಿಯಲ್ಲಿ ಮಾಜಿ ಸಚಿವ ಶ್ರೀರಾಮುಲು ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಬಳ್ಳಾರಿ

ಹೈಕಮಾಂಡ್ ಏನ್ ತೀರ್ಮಾನ ತೆಗೆದುಕೊಳ್ಳುವುದೋ ಅದಕ್ಕೆ ನಾನು‌ ಬದ್ಧ. ಎಂತಹುದೆ ನಿರ್ಧಾರ ಕೈಗೊಂಡರೂ
ನನಗೆ ಯಾವುದೇ ಬೇಸರವಿಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಸ್ಥಾನ ವಿಚಾರವಾಗಿ ನನ್ನ ಬಗ್ಗೆ ಚರ್ಚೆಯಾಗಿಲ್ಲ. ಈ ಕುರಿತು ಮಾಧ್ಯಮಗಳಲ್ಲಿ‌ ನೋಡಿದ್ದೆ ಅಷ್ಟೇ. ಆದರೆ, ಯಾವುದೇ ಚೆರ್ಚೆಗಳಾಗಿಲ್ಲ. ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಆಯ್ಕೆ ಬಿಟ್ಟರೆ ಏನು ನಡೆದಿಲ್ಲ. ಇನ್ನು ಯಾರ್ಯಾರು ಮಂತ್ರಿಗಳಾಗ್ತಾರೊ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ನೂತನ ಸಿ.ಎಂ.ಬೊಮ್ಮಾಯಿ ಶಾಡೋ ಮುಖ್ಯಮಂತ್ರಿ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ,
ನೂತನ ಸಿ.ಎಂ. ಬೊಮ್ಮಾಯಿ ಒಳ್ಳೆಯವರು, ಅನುಭವಿ ರಾಜಕಾರಣಿ. ಕೋವಿಡ್ ಸಂಧರ್ಭದಲ್ಲಿ ಸರ್ಕಾರ ಯಾವ ರೀತಿ ನಡಸಿದರೋ ಅದೇ ರೀತಿ ನಡೆಸ್ತಾರೆ ಎಂದು ಹೇಳಿದರು.

ಯಡಿಯೂರಪ್ಪ ಸಿಎಂ ಆಗಲು ನಾನೇ ಕಾರಣ

  • ಚಿತ್ರದುರ್ಗದಲ್ಲಿ ದೇವದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ದಕ್ಷಿಣ ಭಾರತದಲ್ಲಿ ಪಕ್ಷ ಬರಲು, ಯಡಿಯೂರಪ್ಪ ಮುಖ್ಯಮಂತ್ರಿಯಾಲು ನಾನೇ ಕಾರಣ ಎಂದು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 2008ರಲ್ಲಿ ಸರ್ಕಾರ ರಚನೆಗೆ ಬಿಜೆಪಿ ಬೆಂಬಲ ನೀಡಲು ಮೊದಲು ಮುಂದೆ ಬಂದವನೇ ನಾನು. ನನಗೆ ಆಗ ಕಾಂಗ್ರೆಸ್ ಪಕ್ಷದಲ್ಲಿ ಅನ್ಯಾಯವಾಗಿತ್ತು. ಬಿಜೆಪಿಗೆ ಮೂವರ ಬೆಂಬಲ ಬೇಕಿತ್ತು. ನಾನೊಬ್ಬನೇ ಪ್ರೀಯಾಗಿ ಬೆಂಬಲ ಕೊಟ್ಟಿದ್ದೆ.

ವರ್ತೂರ್ ಪ್ರಕಾಶ್, ನರೇಂದ್ರ ಸ್ವಾಮಿ, ಸುಧಾಕರ್, ವೆಂಕಟರಮಣಪ್ಪ ಎಲ್ಲರೂ ಕಾಂಗ್ರೆಸ್ ಹಿನ್ನಲೆಯವರು. ಅಂದು ಇವರಾರೂ ಮುಂದೆ ಬರಲಿಲ್ಲ. ಶಾಸಕಾಂಗ ಸಭೆಯಲ್ಲಿ ನಾನೇ ಮೊದಲು ಬಿಜೆಪಿ ಬೆಂಬಲಿಸಿದ್ದು.
ನನ್ನ ಕರೆದುಕೊಂಡು ಹೋಗಿ ಬಳ್ಳಾರಿಯ ಜನಾರ್ಧನ ರೆಡ್ಡಿ, ರಾಮುಲು, ಕರುಣಾಕರ ರೆಡ್ಡಿ ಪವರ್ ಪುಲ್ ಮಂತ್ರಿಯಾದರು.
ಹೊರಗಡೆ ಗೂಳಿಹಟ್ಟಿ ಶೇಖರ್ ನೂರು ಕೋಟಿ ತಕೊಂಡರು ಎಂದು ಬಿಂಬಿಸಿದರು.
ಈ ರೀತಿ ಹೈಪ್ ಮಾಡಿ ಮಂತ್ರಿಯಾದರು. ನಾನು ಒಂದು ರೂಪಾಯಿ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಬಂದ ನಂತರವೇ ಉಳಿದವರು ಬೆಂಬಲಕ್ಕೆ ಮುಂದೆ ಬಂದರೂ, ಅವರಿಗೆ ಪವರ್ ಪುಲ್ ಖಾತೆ ನೀಡಿ ನನಗೆ ಅನ್ಯಾಯ ಮಾಡಿದರು. ನಮ್ಮ ಹಿಂದೆ ಬಂದವರಿಗೆ ಉತ್ತಮ ಸ್ಥಾನಮಾನ ನೀಡಿದರು. ಬಿಜೆಪಿ ಸರ್ಕಾರ ಬರಲು, ಯಡಿಯೂರಪ್ಪರನ್ನ ಸಿಎಂ ಮಾಡಲು ನಾನೇ ಕಾರಣ ಎಂದು ಎದೆತಟ್ಟಿಕೊಂಡು ಹೇಳುವೆ. ಇದು ಯಡಿಯೂರಪ್ಪ ಅವರಿಗೆ ಗೊತ್ತು, ಹೇಳಿದರೆ ಘನತೆಗೆ ಧಕ್ಕೆ ಬರುತ್ತದೆ ಎಂದು ಹೇಳಲ್ಲ ಎಂದರು.

ಜಿಲ್ಲೆಯಲ್ಲಿ ನನ್ನ ಕೆಪಾಸಿಟಿ ಏನೆಂದು ಬಿಜೆಪಿ ವರಿಷ್ಠರಿಗೂ ಗೊತ್ತಿದೆ. 2014 ರಲ್ಲಿ ದೇಶದಲ್ಲಿ ಮೋದಿ ಅಲೆ ಇದ್ದಾಗಲೂ ಚಿತ್ರದುರ್ಗದಲ್ಲಿ ಬಿಜೆಪಿ ಸೋಲು ಕಂಡಿತ್ತು. ನಾನು ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ್ದರಿಂದ ಸೋತಿತ್ತು. ಬೇರೆ ಜಿಲ್ಲೆಯವರಾದ ರಘು ಆಚಾರ್ ಅವರನ್ನು ಕರೆತಂದು ಎಂಎಲ್ಸಿ ಮಾಡಿದ್ದೇನೆ.

ನಾನು ಯಾವುದೇ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ, ನಮ್ಮ ಮಾತು ಯಾರೂ ಕೇಳಲ್ಲ. ನಮಗೆ ಯಾರು ಗಾಡ್ ಫಾದರ್ ಇಲ್ಲ .ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಇರುತ್ತೇನೆ ಎಂದು ಹೇಳಿದರು.

ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆ‌ ಸ್ವಾಗತಾರ್ಹ

  • ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಯಡಿಯೂರಪ್ಪ ಪದತ್ಯಾಗದಿಂದ‌ ಬಹುಸಂಖ್ಯಾತ ವೀರಶೈವ ಲಿಂಗಾಯತ ಸಮುದಾಯದವರು ಬೇಸರದಲ್ಲಿದ್ದರು. ಅದನ್ನು ಸರಿದೂಗಿಸಲು ಅದೇ ಸಮುದಾಯದ ನಾಯಕನನ್ನು ಸಿಎಂ ಮಾಡಿರುವುದು ಸ್ವಾಗತಾರ್ಹ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಜಗದ್ಗುರುಗಳು ಹೇಳಿದರು.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನಕ್ಕೆ ನಾಲ್ಕೈದು ಜನರ ಹೆಸರು ಕೇಳಿ ಬಂದಿದ್ದವಾದರೂ ಬಸವರಾಜ ಬೊಮ್ಮಾಯಿ ಸರ್ವಾನುಮತದಿಂದ ಆಯ್ಕೆ ಮಾಡಿರುವುದು, ಬಿಜೆಪಿಯ ಒಗ್ಗಟ್ಟು, ದೂರದೃಷ್ಟಿಗೆ ಸಾಕ್ಷಿ ಎಂದರು.

ಬಸವರಾಜ ಬೊಮ್ಮಾಯಿ ಚಾಣಾಕ್ಷ ರಾಜಕಾರಣಿ, ದಕ್ಷ ಆಡಳಿತಗಾರ, ಯಾವುದೇ ಆರೋಪಗಳಿಲ್ಲ. ಹೀಗಾಗಿ, ಬಿಜೆಪಿಯ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಸಾಮರ್ಥ್ಯ ಅವರಲ್ಲಿದೆ. ಯಡಿಯೂರಪ್ಪ ಅವರ ಮಾತಿಗೆ ರಾಷ್ಟ್ರೀಯ ನಾಯಕರು ಗೌರವ ಕೊಟ್ಟಿದ್ದಾರೆ ಎಂದು ಭಾವಿಸಿದ್ದೇವೆ ಎಂದರು.

ಮೈಸೂರು ಪ್ರಾಂತ್ಯದಲ್ಲಿ ಆಗುತ್ತಿದ್ದ ಅಭಿವೃದ್ಧಿ ಕಾರ್ಯಗಳು ಉತ್ತರ ಕರ್ನಾಟಕದಲ್ಲಿ ಆಗುತ್ತಿಲ್ಲವೆಂಬ ಕೂಗು ಕೇಳಿ ಬರುತ್ತಿದೆ.
ಇದರ ಕಡೆ ಬೊಮ್ಮಾಯಿ ಹೆಚ್ಚಿನ ಮುತುವರ್ಜಿ ವಹಿಸಿವ ಉ.ಕ. ಭಾಗದ ಅಭಿವೃದ್ಧಿಗಳು ಕಾರ್ಯ ಕುಂಠಿತವಾಗಿದ್ದು, ಅವುಗಳಿಗೆ ವೇಗ ತರಬೇಕು.‌ ಈ ಭಾಗದ ರೈತ ಸಮುದಾಯಕ್ಕೆ ನೀರಾವರಿ ಸೌಲಭ್ಯ ಒದಗಿಸಬೇಕು. ಮೌಲ್ಯಾಧರಿತ ಶಿಕ್ಷಣಕ್ಕೆ ಒತ್ತು ನೀಡಿ ಜಾತಿ-ಮತ-ವರ್ಗಗಳನ್ನು ಮರೆತು ಕೆಲಸ ಮಾಡಬೇಕು ಎಂದರು.

ಈವರೆಗೂ ಬಿಜೆಪಿಯಲ್ಲಿ ಗುಂಪುಗಳಾಗಿ ಕೆಲಸ ಮಾಡುತ್ತಿದ್ದರು. ಸಿಎಂ ಬೊಮ್ಮಾಯಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಬೇಕು. ಬಿಎಸ್‌ವೈ ದೂರದೃಷ್ಟಿ, ಸಂಕಲ್ಪ ಸಾಕಾರಗೊಳಿಸುವ ನಿಟ್ಟಿನಲ್ಲಿ ಬೊಮ್ಮಾಯಿ ಕೆಲಸ ಮಾಡಲಿ ಎಂದರು.

ಸಿಎಂ ಆಗಿ ಬಸವರಾಜ ಬೊಮ್ಮಾಯಿ ಉತ್ತಮ ಆಯ್ಕೆ; ಜೋಶಿ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಸಿಎಂ ಆಗಿ ಬಸವರಾಜ ಬೊಮ್ಮಾಯಿ ಉತ್ತಮ ಆಯ್ಕೆ. ಪ್ರಧಾನಿ ನರೇಂದ್ರ ಮೋದಿ, ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ನಡ್ಡಾ ಉತ್ತಮ ನಿರ್ಧಾರ ಕೈಗೊಂಡಿದ್ದಾರೆ. ಬೊಮ್ಮಾಯಿ ಒಳ್ಳೆಯ ಮನುಷ್ಯ. ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಉತ್ತಮ ಆಡಳಿತ ನೀಡಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ಹೇಳಿದರು.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಸ್ವಭಾವದಿಂದ ಒಳ್ಳೆಯ ವ್ಯಕ್ತಿ. ನನ್ನ ಆತ್ಮೀಯ ಸ್ನೇಹಿತರೂ ಸಹ ಎಂದು ಹೇಳಿದರು. ಬಿಜೆಪಿಗೆ ಯಡಿಯೂರಪ್ಪ ಕೊಡುಗೆ ದೊಡ್ಡದು. ಕರ್ನಾಟಕದಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸರಕಾರ ಸುಗಮವಾಗಿ ನಡೆಯಲಿದ್ದು, ಉತ್ತಮ ಆಡಳಿತ ನೀಡಲಿದೆ ಎಂದು ಸಚಿವ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಲ್ಲಿ ಎಲ್ಲ ಸರಿಯಿದೆ. ಏನೇ ಸಮಸ್ಯೆಗಳಿದ್ದರೂ ಚರ್ಚಿಸಿ ಪರಿಹರಿಸಲಾಗುವುದು ಎಂದರು. ರೈತ ಪರ ಕಾನೂನು ವಿರೋಧಿಸಿ ಪ್ರತಿಪಕ್ಷಗಳು ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ನಡೆ ಅಪ್ರಬುದ್ಧವಾದದು. ರೈತರ ಹಿತಕ್ಕಾಗಿ ಈ ಕಾನೂನುಗಳು ಎರಡೂ ಸದನಗಳಲ್ಲಿ ಅಂಗೀಕಾರವಾಗಿವೆ. ಕೃಷಿ ಕಾನೂನು ಜಾರಿಗೊಂಡ ಬಳಿಕ‌ ದೇಶದ ಅನೇಕ ಕಡೆ ಚುನಾವಣೆ ಆಗಿವೆ. ಜನರು ಸರ್ಕಾರದ ನೀತಿ ಸ್ವೀಕರಿಸಿ ಮತಗಳನ್ನು ನೀಡಿದ್ದಾರೆ. ಪ್ರತಿಪಕ್ಷಗಳ ನಡೆಯನ್ನು ದೇಶದ ಜನ ನೋಡುತ್ತಿದ್ದಾರೆ ಎಂದು ಹೇಳಿದರು.

ಮಹತ್ಮಾ ಗಾಂಧಿ ಮಗ ಕುಡಕನಾದ, ಬೊಮ್ಮಾಯಿ ಮಗ ತಂದೆಯಂತಾಗುತ್ತಾರೆ ಅನ್ನೋದು ಏನು ಗ್ಯಾರಂಟಿ ?

  • ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಮೈಸೂರು

ಮಹಾತ್ಮ ಗಾಂಧಿ ಮಗ ಅವರಂತಾಗಲಿಲ್ಲ,
ಕುಡುಕನಾದ. ಅದೇ ರೀತಿ ಬೊಮ್ಮಾಯಿ ಮಗ ತಂದೆಯಂತೆ ಆಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಂದೆಯ ಗುಣ ಕೆಲವು ಮಕ್ಕಳಿಗೆ ಬರುವುದಿಲ್ಲ. ಎಸ್.ಆರ್. ಬೊಮ್ಮಾಯಿ ಗುಣ ಮಗನಿಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.

ಮುಖ್ಯಮಂತ್ರಿ ಬದಲಾದ್ರೆ ಎಲ್ಲವೂ ಬದಲಾಗುತ್ತಾ..?

ಯಡಿಯೂರಪ್ಪ ಇಳಿದ್ದಿದ್ದಾರೆ.
ಬೊಮ್ಮಾಯಿ ಸಿಎಂ ಆಗಿದ್ದಾರೆ ಎಂದ ಮಾತ್ರಕ್ಕೆ ಬಿಜೆಪಿಯ ಐಡಿಯಾಲಜಿ ಬದಲಾಗುತ್ತಾ.? ಎಂದವರು ಪ್ರಶ್ನಿಸಿದ್ದಾರೆ. ಕೋಮುವಾದ ಹೊರಟು ಹೋಗುತ್ತಾ ? ಹಿಂದುತ್ವದ ಅಜೆಂಡಾ ಬದಲಾಗುತ್ತಾ ? ಬಿಜೆಪಿಯವರು ಯಾವತ್ತಿಗೂ ಅಲ್ಪಸಂಖ್ಯಾತರು, ದಲಿತರು, ಬಡವರ ಪರವಾಗಿ ಇಲ್ಲ. ಹಾಗಾಗಿ ಈ ಸರ್ಕಾರದಿಂದ ಯಾವುದೇ ನೀರೀಕ್ಷೆ ಮಾಡೋದಿಲ್ಲ ಎಂದರು.

ಬಸವರಾಜ ಬೊಮ್ಮಾಯಿಗೆ ಒಂದು ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಒಳ್ಳೆಯ ಆಡಳಿತ ನೀಡಲಿ ಎಂದಷ್ಟೆ ನಾ ಹೇಳಬಲ್ಲೆ ಎಂದರು.

ನಾನು ಬೊಮ್ಮಾಯಿ ಸಚಿವ ಸಂಪು‌ಟ ಸೇರಲ್ಲ

  • ಮಾಜಿ ಸಿಎಂ ಜಗದೀಶ ಶೆಟ್ಟರ್ ಅಚ್ಚರಿಯ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟಕ್ಕೆ ನಾನು ಸೇರುವುದಿಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಖಾಸಗಿ ಮಾಧ್ಯಮ ವಾಹಿನಿಯೊಂದರ ಜೊತೆಗೆ ಮಾತನಾಡಿರುವ ಅವರು, ನಾನು ಮಾಜಿ ಸಿಎಂ, ಪಕ್ಷದ ಹಿರಿಯ ನಾಯಕ. ಹೀಗಾಗಿ ನೈತಿಕ ಕಾರಣದಿಂದ ಸಂಪುಟಕ್ಕೆ ಸೇರಲ್ಲ.

ನಳೀನ್ ಕುಮಾರ್ ಕಟೀಲ್ ಅವರದ್ದೆನ್ನಲಾದ ಆಡಿಯೋಗೂ ನನ್ನ ನಿರ್ಧಾರಕ್ಕೂ ಸಂಬಂಧ ಇಲ್ಲ. ಇದು ನನ್ನ ವಯಕ್ತಿಕ ನಿರ್ಧಾರ. ಈಗಾಗಲೇ ನನ್ನ ನಿರ್ಧಾರದ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಗಮನಕ್ಕೂ ತಂದಿದ್ದೇನೆ. ಪಕ್ಷ ಹಾಗೂ ಸರ್ಕಾರದಲ್ಲಿ ತಳಮಟ್ಟದಿಂದ ಮೇಲ್ಮಟ್ಟದವರೆಗೂ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.

ನೀರು ಕುಡಿಯಲು ಹೋದ ಅತ್ತೆ- ಸೊಸೆ ಕೃಷ್ಣೆಯ ಪಾಲು

  • ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹುನಕುಂಟಿ ಗ್ರಾಮದಲ್ಲಿ ದುರ್ಘಟನೆ

ವಿಜಯಸಾಕ್ಷಿ ಸುದ್ದಿ, ವಿಜಯಪುರ

ನೀರು ಕುಡಿಯಲು ಕೃಷ್ಣಾ ನದಿಯ ಹಿನ್ನೀರಿಗೆ ಇಳಿದಾಗ ಕಾಲುಜಾರಿ ಗುಂಡಿಯಲ್ಲಿ ಬಿದ್ದ ಸೊಸೆಯನ್ನು ರಕ್ಷಿಸಲು ಹೋಗಿ ಅತ್ತೆಯೂ ನೀರುಪಾಲಾದ ಘಟನೆ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ಹುನಕುಂಟಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಹುನಕುಂಟಿ ಗ್ರಾಮದ ಶಾಂತಮ್ಮ ಭೀಮನಗೌಡ ನಾಗೋಡ (20), ಗುರುಸಂಗಮ್ಮ ಭೀಮಪ್ಪ ಮುದೂರ(8) ಮೃತರು.

ದನ ಮೇಯಿಸಲೆಂದು ನದಿ ತೀರಕ್ಕೆ ಹೋಗಿದ್ದರು. ಬಾಯಾರಿಕೆ‌ ಆಗಿದ್ದರಿಂದ ಸೊಸೆ ಗುರುಸಂಗಮ್ಮ ನೀರು ಕುಡಿಯಲೆಂದು ಹಿನ್ನೀರಿಗೆ ಇಳಿದಿದ್ದಾಳೆ. ನದಿ ತೀರದಲ್ಲಿ ಅಲ್ಲಲ್ಲಿ ಮಣ್ಣು ಅಗೆದ ಕಾರಣ ಆಳವಾದ ಗುಂಡಿಗಳಿದ್ದು, ಹಿನ್ನೀರಿನಿಂದ ಗುಂಡಿಗಳಲ್ಲಿ ನೀರು ಭರ್ತಿಯಾಗಿದೆ. ಇದನ್ನು ಅರಿಯದ ಗುರುಸಂಗಮ್ಮ ಕಾಲು ಜಾರಿ ಗುಂಡಿಯಲ್ಲಿ ಬಿದ್ದಿದ್ದಾಳೆ. ಇದನ್ನು ಗಮನಿಸಿದ ಅತ್ತೆ ಶಾಂತಾ ರಕ್ಷಣೆಗೆ ಓಡಿ ಬಂದಿದ್ದು, ಆಕೆಯೂ ಆಳವಾದ ಗುಂಡಿಯಲ್ಲಿ ಬಿದ್ದು ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಗುಂಡಿಯಲ್ಲಿ ಮುಳುಗಿದ್ದ ಇಬ್ಬರ ಶವ ಹೊರ ತೆಗೆದರು. ಮುದ್ದೆಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಕ್ಷ ನಮಗೆ ಅನ್ಯಾಯ ಮಾಡಲ್ಲ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ನಾವು ಪಕ್ಷ ಹಾಗೂ ಯಡಿಯೂರಪ್ಪನವರನ್ನು ನಂಬಿ ಬಿಜೆಪಿಗೆ ಬಂದವರು. ಹೀಗಾಗಿ ಪಕ್ಷದಿಂದ ನಮಗೆ ಯಾವುದೇ ರೀತಿ ಅನ್ಯಾಯ ಆಗಲ್ಲ ಎಂದು ಮಾಜಿ ಸಚಿವ ಶಿವರಾಮ್ ಹೆಬ್ಬಾರ ವಿಶ್ವಾಸ ವ್ಯಕ್ತಪಡಿಸಿದರು.

ನೂತನ ಸಿಎಂ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹೆಬ್ಬಾರ, ನೂತನ ಸಿಎಂ ಬೊಮ್ಮಾಯಿ ಹಾಗೂ ಯಡಿಯೂರಪ್ಪನವರು ಹೇಗೆ ತೀರ್ಮಾನ ಮಾಡುತ್ತಾರೋ ಅದರ ಮೇಲೆ ನಮ್ಮ ಸಚಿವ ಸ್ಥಾನ ನಿರ್ಧಾರವಾಗುತ್ತದೆ. ಆದರೆ ಪಕ್ಷ ನಮಗೆ ತೊಂದರೆ ಕೊಡುವುದಿಲ್ಲ ಎಂಬ ನಂಬಿಕೆ ಇದೆ ಎಂದರು.