Home Blog Page 3452

ಇಸ್ರೇಲ್, ಪ್ಯಾಲಿಸ್ತೇನ್ ಜಗಳದಲ್ಲಿಬಲಿಯಾಗುತ್ತಿದ್ದಾರೆ ಅಮಾಯಕರು

ವಿಜಯಸಾಕ್ಷಿ ಸುದ್ದಿ, ಇಸ್ರೇಲ್

ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ನಡುವಿನ ಸಮರಕ್ಕೆ ಅಲ್ಲಿನ ಜನ ಬಲಿಯಾಗುತ್ತಿದ್ದು, ಇಡೀ ವಿಶ್ವವೂ ಆತಂಕ ವ್ಯಕ್ತಪಡಿಸುತ್ತಿದೆ.
ಈಗಾಗಲೇ ಎರಡೂ ರಾಷ್ಟ್ರಗಳ ವೈಷಮ್ಯಕ್ಕೆ ನೂರಾರು ಅಮಾಯಕರು ಬಲಿಯಾಗಿದ್ದಾರೆ. ಸದ್ಯ ಅಮಾಯಕ ಜನರ ಸಾವಿನ ಸಂಖ್ಯೆ 118ಕ್ಕೆ ಏರಿಕೆಯಾಗಿದೆ. ಸದ್ಯದ ಸ್ಥಿತಿ ನೋಡಿದರೆ ಪ್ಯಾಲೆಸ್ತೇನ್ – ಇಸ್ರೇಲ್ ಮಧ್ಯೆ ಯುದ್ಧದ ಭೀತಿ ಆವರಿಸಿದೆ.

ಗಾಜಾ ಪಟ್ಟಿಗೆ ಇಸ್ರೇಲ್ ರಾಷ್ಟ್ರವು ಭಾರಿ ಪ್ರಮಾಣದ ಸೇನೆ, ಶಸ್ತ್ರಾಸ್ತ್ರ ರವಾನಿಸಿದೆ. ಹೀಗಾಗಿ ಗಲ್ಫ್ ರಾಷ್ಟ್ರಗಳ ನಾಯಕರಲ್ಲಿ ಭಯ ಕಾಣುತ್ತಿದೆ. ಇನ್ನೊಂದೆಡೆ ಹಮಾಸ್ ಉಗ್ರರು ಇಸ್ರೇಲ್‌ ಮೇಲೆ ರಾಕೆಟ್ ದಾಳಿ ನಡೆಸುತ್ತಿದ್ದರೆ, ಇಸ್ರೇಲ್ ಕೂಡ ಪ್ಯಾಲೆಸ್ತೇನ್ ಮೇಲೆ ಪ್ರತಿ ದಾಳಿ ನಡೆಸುತ್ತಿದೆ. ಆದರೆ, ಈ ಜಗಳದಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ.

ಸಾವಿರಾರು ಜನ ನೆಲೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಎಲ್ಲೆಂದರಲ್ಲಿ ರಾಕೆಟ್‌ ಗಳು ಹಾರಿ ಬರುತ್ತಿವೆ. ಗಡಿ ಭಾಗದ ಜನ ಜೀವ ಕೈಲಿಡಿದು ಬದುಕುತ್ತಿದ್ದಾರೆ. ಇಸ್ರೇಲ್ ಮತ್ತು ಮಧ್ಯಪ್ರಾಚ್ಯದ ನಡುವಿನ ಸಮರ ಇದೇ ಮೊದಲಲ್ಲ. ಶತಮಾನಗಳ ಇತಿಹಾಸವೇ ಆ ಯುದ್ಧಕ್ಕೆ ಇದೆ.

ಸದ್ಯ ಇಡೀ ವಿಶ್ವ ಕೊರೊನಾ ಅಟ್ಟಹಾಸದಲ್ಲಿ ನಲುಗುತ್ತಿದ್ದರೆ, ಈ ಎರಡೂ ರಾಷ್ಟ್ರಗಳು ಪ್ರತಿಷ್ಠೆಗಾಗಿ ಬಡಿದಾಡುತ್ತಿವೆ.
ದಾಳಿ – ಪ್ರತಿದಾಳಿ ನೋಡಿದರೆ ಮೂರನೇ ಯುದ್ಧದ ಆತಂಕ ಎದುರಾಗುತ್ತಿದೆ. ಇಸ್ರೇಲ್ ಪರವಾಗಿ ಯುರೋಪ್ ಹಾಗೂ ಅಮೆರಿಕ ನಿಂತರೆ, ಪ್ಯಾಲೆಸ್ತೇನ್‌ ನ ಪರವಾಗಿ ಇಸ್ರೇಲ್ ಶತ್ರುಗಳು ಹಾಗೂ ಅಮೆರಿಕ ಶತ್ರು ರಾಷ್ಟ್ರಗಳು ನಿಲ್ಲುವ ಸಾಧ್ಯತೆ ಇದೆ. ಹೀಗಾಗಿ ಮೂರನೇ ಯುದ್ಧದ ಭಯವಾಗುತ್ತಿದೆ.

ಇಸ್ರೇಲ್ ಸಣ್ಣ ದೇಶವಾದರೂ ಅರಬ್‌ ಒಕ್ಕೂಟದ ಹತ್ತಾರು ದೇಶಗಳನ್ನು ಎದುರು ಹಾಕಿಕೊಂಡಿದೆ. ಆದರೆ ಇದೀಗ ದೇಶದೊಳಗೆ ಘರ್ಷಣೆ ಆರಂಭವಾಗಿದೆ. ತನ್ನ ವೈರಿ ಪ್ಯಾಲೆಸ್ತೇನ್ ಬಗ್ಗುಬಡಿಯಲು ಇಸ್ರೇಲ್ ಪಡೆಗಳು ಬಲಪ್ರಯೋಗವನ್ನು ಮುಂದುವರಿಸಿದ್ದಾರೆ.

ಇಸ್ರೇಲ್ ಹಾಗೂ ಗಾಜಾಪಟ್ಟಿ ಕಥೆ ಸಿರಿಯಾಗಿಂತ ಭಯಾನಕವಾಗಿದೆ. ಒಂದುಕಡೆ ಹಮಾಸ್ ಉಗ್ರರು ಅದು ನಮ್ಮ ನೆಲ ಅಂತಾ ಇಸ್ರೇಲ್ ಭೂಮಿ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ತಮ್ಮ ದೇಶದ ಭೂಭಾಗ ಉಳಿಸಿಕೊಳ್ಳಲು ಇಸ್ರೇಲ್ ಬಂಡುಕೋರರ ಮೇಲೆ ದಾಳಿ ನಡೆಸುತ್ತಲೇ ಬಂದಿದೆ.

ರಾಜ್ಯಕ್ಕೆ ಮುಂಗಾರು ಯಾವಾಗ ಪ್ರವೇಶ ಮಾಡಲಿದೆ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ದೇಶಕ್ಕೆ ಮುಂಗಾರು ಮಳೆ ಹೊತ್ತು ತರುವ ನೈಋತ್ಯ ಮಾನ್ಸೂನ್ ಮಾರುತಗಳು ಮೇ. 31ರಂದೇ ಕೇರಳ ಪ್ರವೇಶ ಮಾಡುತ್ತಿವೆ. ಹೀಗಾಗಿ ಬೆಂಗಳೂರಿಗೆ ಜೂನ್ ಮೊದಲ ವಾರದಲ್ಲಿಯೇ ಮುಂಗಾರು ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇರಳ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದ ನಂತರ ಬೆಂಗಳೂರಿಗೆ ಈ ಮುಂಗಾರು ಪ್ರವೇಶಿಸಲು ಕನಿಷ್ಠವೆಂದರೂ ಆರೇಳು ದಿನ ಬೇಕಾಗುತ್ತದೆ. ಹೀಗಾಗಿ ಜೂ. 7ರಂದು ಬೆಂಗಳೂರಿಗೆ ಮುಂಗಾರು ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂಗಾರು ಆಗಮನ ಹವಾಮಾನ ವ್ಯವಸ್ಥೆಗಳ ರಚನೆಯಿಂದ ಕೂಡಿದ್ದು, ಕೆಲವೊಮ್ಮೆ ವಿಳಂಬವಾಗುವ ಸಾಧ್ಯತೆಯೂ ಇದೆ. ಅಲ್ಲದೇ, ಬೇಗನೆ ಪ್ರವೇಶ ಕೂಡ ಮಾಡಬಹುದು. ಪ್ರಸ್ತುತದ ವಾತಾವರಣ ಗಮನಿಸಿದರೆ ನಿಗದಿತ ಸಮಯಕ್ಕೆ ಈ ಬಾರಿ ಮಾನ್ಸೂನ್ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಳಕೊಲ್ಲಿಯಲ್ಲಿ ಮೇ. 20 ರಂದೇ ಮಾನ್ಸೂನ್ ಮಾರುತಗಳು ಬೀಸಲಿದ್ದು, ಮೇ. 21ರಂದು ಅಂಡಮಾನ್ ನಿಕೋಬಾರ್ ದ್ವೀಪ ಪ್ರದೇಶ ಮತ್ತು ಬಂಗಾಳ ಕೊಲ್ಲಿಯ ದಕ್ಷಿಣ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶಗಳಲ್ಲಿ ಮೇ. 21ರಂದೇ ಮಾನ್ಸೂನ್ ಮಾರುತಗಳ ಪ್ರವೇಶವಾಗಲಿದೆ. ಈ ಸಲಹ ಮಾನ್ಸೂನ್ ಮಾರುತಗಳು ಸಾಮಾನ್ಯ ಮಳೆ ತರಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಆಸ್ಪತ್ರೆ ಮುಂದೆ ನರಳಾಡಿದರೂ ಅಮಾನವೀಯತೆ ಮೆರೆದ ಆಸ್ಪತ್ರೆ ಸಿಬ್ಬಂದಿ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಆಸ್ಪತ್ರೆ ಸಿಬ್ಬಂದಿಯ ಅಮಾನವೀಯತೆಯಿಂದಾಗಿ ಮಹಿಳೆಯೊಬ್ಬರು ನರಳಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿಯ ಮಿಷನ್ ಆಸ್ಪತ್ರೆಯ ಸಿಬ್ಬಂದಿ ಅಕ್ಸಿಜನ್ ಮಾಸ್ಕ್ ಇಲ್ಲ ಎಂದು ಸೋಂಕಿತರನ್ನು ದಾಖಲಿಸಿಕೊಳ್ಳದೆ ಅಮಾನವೀಯತೆ ಮೆರೆದಿದೆ. ಹೀಗಾಗಿ ಸೋಂಕಿತೆಯೊಬ್ಬರು ಆಸ್ಪತ್ರೆಯ ಹೊರಗಡೆ ಆಟೋ ರಿಕ್ಷಾದಲ್ಲಿಯೇ ನರಳಾಡಿದ್ದಾರೆ.

ಮಹಿಳೆಯ ಒದ್ದಾಟ ನೋಡಿ ಮರುಕಪಟ್ಟ ಕುಟುಂಬಸ್ಥರು ನೀವು ಕೇಳಿದಷ್ಟು ಹಣ ನೀಡುತ್ತೇವೆ ಆಸ್ಪತ್ರೆಗೆ ದಾಖಲಿಸಿಕೊಳ್ಳಿ ಎಂದು ಅಂಗಲಾಚಿದ್ದಾರೆ. ಆದರೂ ಮರುಗದ ಆಸ್ಪತ್ರೆ ಸಿಬ್ಬಂದಿ ನಮ್ಮ ಆಸ್ಪತ್ರೆಯಲ್ಲಿ ಆಕ್ಸಿಜನ್ ಮಾಸ್ಕ್ ಇಲ್ಲ ಎಂದು ಹೇಳಿದ್ದಾರೆ.

ಈ ಸೋಂಕಿತ ಮಹಿಳೆಯು ಬೆಡ್ ಸಿಗದ ಕಾರಣಕ್ಕೆ ಮೂರು ಆಸ್ಪತ್ರೆಗಳನ್ನು ಅಲೆದಾಡಿ ಬಂದಿದ್ದರು. ನಗರದ ಭೋಗಾದಿಯ ರಾಜಮ್ಮ ಎಂಬ ಮಹಿಳೆಯ ಈ ದುರ್ದೈವಿ. ಕಣ್ಣ ಮುಂದೆಯೇ ಉಸಿರಾಟದ ಸಮಸ್ಯೆಯಿಂದ ನರಳಾಡಿದರೂ ಆಸ್ಪತ್ರೆ ಸಿಬ್ಬಂದಿ ಮಾತ್ರ ಮರುಕ ಪಡಲಿಲ್ಲ.
ಆ ನಂತರ ಬೇರೆಡೆ ಮಾಸ್ಕ್ ತಂದು ದಾಖಲು ಮಾಡಿಕೊಳ್ಳಿ ಎಂದು ಸಂಬಂಧಿಕರು ಬೇಡಿಕೊಂಡಿದ್ದಾರೆ. ಪ್ರಾರಂಭದಲ್ಲಿ ಇದಕ್ಕೂ ಆಸ್ಪತ್ರೆ ಸಿಬ್ಬಂದಿ ಒಪ್ಪಿಲ್ಲ. ಆನಂತರ ಕುಟುಂಬಸ್ಥರು ಪರಿ ಪರಿಯಾಗಿ ಬೇಡಿಕೊಂಡ ನಂತರ ಒಪ್ಪಿ, ಮಹಿಳೆಯನ್ನು ದಾಖಲಿಸಿಕೊಂಡಿದ್ದಾರೆ.

ಸತ್ತಾಗ ನೋಡಲು ಯಾರು ಬರುತ್ತಾರೆ? ಮನೆಯಲ್ಲಿ ಏನೇನು ನಡೆಯುತ್ತದೆ ಎಂದು ನೋಡಲು ಸತ್ತಂತೆ ನಟಿಸಿದ ಮಹಿಳೆ

ವಿಜಯಸಾಕ್ಷಿ ಸುದ್ದಿ, ಚಿಲಿ

ನಾವು ಸತ್ತ ಮೇಲೆ ನಮಗೆ ಹೆಗಲು ಯಾರು ನೀಡುತ್ತಾರೆಯೋ ಅಷ್ಟೇ ನಾವು ಗಳಿಸಿದ್ದು ಎಂಬ ಮಾತು ಪ್ರತೀತಿಯಲ್ಲಿದೆ. ಇದೇ ಯೋಚನೆ ಮಾಡಿದ್ದ ಮಹಿಳೆಯೊಬ್ಬರು, ತಾನು ಗಳಿಸಿದ್ದ ಜನರು ಯಾರು ಎಂದು ಗುರುತಿಸುವುದಕ್ಕಾಗಿ ಹಾಗೂ ತಾನು ಸತ್ತಾಗ ಯಾರು ಬರುತ್ತಾರೆ. ಪರಿಸ್ಥಿತಿ ಹೇಗಿರುತ್ತದೆ? ಎಂದು ತಿಳಿದುಕೊಳ್ಳಲು ಮಹಿಳೆ ತಾನು ಸತ್ತಂತೆ ನಟಿಸಿದ್ದಾರೆ.

ಈ ಘಟನೆ ಚಿಲಿಯಲ್ಲಿ ನಡೆದಿದೆ. ಮಯಾರಾ ಅಲೋಂಜಾ ಎಂಬ ಮಹಿಳೆಯೇ ಸತ್ತಂತೆ ನಟಿಸಿದ ಮಹಿಳೆ. ತನ್ನ ಸಾವಿನ ಸುದ್ದಿಯನ್ನು ಹೇಗೋ ತನ್ನ ಎಲ್ಲಾ ಬಂಧುಗಳಿಗೆ ತಲುಪಿಸುತ್ತಾರೆ. ಸುದ್ದಿ ತಿಳಿಯುತ್ತಿದ್ದಂತೆ ಎಲ್ಲರೂ ಅಲೋಂಜಾ ನಿವಾಸಕ್ಕೆ ಆಗಮಿಸಿಯೇ ಬಿಟ್ಟಿದ್ದಾರೆ.
ಸುಮಾರು 4 ಗಂಟೆಗಳ ಕಾಲ ಈ ಮಹಿಳೆ ಸತ್ತಂತೆ ಶವಪೆಟ್ಟಿಗೆಯಲ್ಲಿ ಮಲಗಿಕೊಂಡಿದ್ದಾಳೆ. ತನ್ನ ಇಚ್ಛೆಯಂತೆ ಬಹಳಷ್ಟು ಜನ ಸೇರಿದ್ದಾರೆ ಎಂದು ಖಾತ್ರಿಯಾಗುತ್ತಿದ್ದಂತೆ, ಶವಪೆಟ್ಟಿಗೆಯಿಂದ ಎದ್ದಿದ್ದಾರೆ. ಈ ಕೊರೊನಾ ಕಾಲದಲ್ಲಿ ಮೃತದೇಹಕ್ಕೆ ಹೆಗಲು ಕೊಡಲು 4 ಜನ ಸಿಗುತ್ತಿಲ್ಲ. ಹಾಗಾಗಿ ತಾನು ಸತ್ತರೆ ಯಾರೆಲ್ಲಾ ಬರುತ್ತಾರೆ ಎನ್ನುವುದನ್ನು ನೋಡಬೇಕಿತ್ತು. ಹಾಗಾಗಿ ಈ ರೀತಿಯಲ್ಲಿ ಸತ್ತಂತೆ ನಟಿಸಿದ್ದೇನೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.

ಈ ವೇಳೆ ಪ್ರೋಪೇಶನಲ್ ಫೋಟೋಗ್ರಾಫರ್ ನನ್ನು ಕರೆಸಿ, ಮನೆಗೆ ಬಂದಿದ್ದ ಎಲ್ಲಾ ನೆಂಟರಿಷ್ಟ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ನಾಟಕ ಮುಗಿದ ನಂತರ ಮಹಿಳೆ ಎಲ್ಲರ ಜೊತೆ ಸೇರಿ ಪಾರ್ಟಿ ಮಾಡಿದ್ದಾರೆ ಒಟ್ಟಾರೆ ಈ ಸಾವಿನ ನಾಟಕಕ್ಕೆ ಒಂದು ಲಕ್ಷಕ್ಕಿಂತ ಅಧಿಕ ಹಣ ಖರ್ಚು ಮಾಡಿದ್ದಾರೆ ಎಂಬುದು ತಿಳಿದುಬಂದಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಮಹಾಮಾರಿಯ ಅಟ್ಟಹಾಸದೊಂದಿಗೆ ವರುಣನ ಆರ್ಭಟವೂ ಹೆಚ್ಚಾಗುತ್ತಿದೆ. ತೌಕ್ತೆ ಚಂಡಮಾರುತದ ಹಿನ್ನಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಹೀಗಾಗಿ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಮಳೆ ಹೆಚ್ಚಾಗಿ ಸುರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗಗಳ ಜನರು ಎರಡು ದಿನಗಳ ಕಾಲ ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅರಬ್ಬಿ ಸಮುದ್ರದಲ್ಲಿ ಎದ್ದಿರುವ ತೌಕ್ತೆ ಚಂಡಮಾರುತ ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಠಿಸಿದೆ. ಈಗಾಗಲೇ ಕೇರಳದಲ್ಲಿ ಭರ್ಜರಿ ಮಳೆಯಾಗುತ್ತಿದೆ. ತಿರುನಂತಪುರಂ, ವಯನಾಡು, ಕೊಯಿಕ್ಕೋಡ್, ಕಾಸರಗೋಡು ಸೇರಿದಂತೆ ಆ ರಾಜ್ಯದ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಈಗಾಗಲೇ ಪ್ರವಾಹ ಕೂಡ ಉಂಟಾಗಿದೆ. ಸಮುದ್ರದಲ್ಲಿ ಅಲೆಗಳು ಜೋರಾಗಿ ಅಪ್ಪಳಿಸುತ್ತಿವೆ.

ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‍ ರಾಜ್ಯಗಳಲ್ಲಿ ಮಳೆ ಭರ್ಜರಿಯಾಗಿ ಸುರಿಯುವ ಸಾಧ್ಯತೆ ದಟ್ಟವಾಗಿದೆ. ಈ ಚಂಡಮಾರುತದ ಎಫೆಕ್ಟ್ ಈಗಾಗಲೇ ಕರಾವಳಿ ಭಾಗದಲ್ಲಿಯೂ ತೋರಿಸುತ್ತಿದೆ. ಅಲ್ಲಿ ಮಳೆ ಜೋರಾಗಿ ಸುರಿಯುತ್ತಿದೆ. ಮುಂದಿನ 3 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಯಲ್ಲಿಯೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದರೊಂದಿಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಂದು, ಚಿನ್ನು ಖ್ಯಾತಿಯ ಜೋಡಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಭಾಗ್ಯದಲಕ್ಷ್ಮೀ ಬಾರಮ್ಮ ಧಾರಾವಾಹಿಯ ಜೋಡಿ ಇಂದು ದಾಂಪತ್ಯ ಜೀವನಕ್ಕ ಕಾಲಿಟ್ಟಿದ್ದಾರೆ. ನಟ ಚಂದನ್ ಕುಮಾರ್ ಹಾಗೂ ನಟಿ ಕವಿತಾ ಗೌಡ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಏ. 1ರಂದು ಈ ಜೋಡಿಯ ಎಂಗೇಜ್‍ ಮೆಂಟ್ ಕೂಡ ನಡೆದಿತ್ತು. ಕೊರೊನಾ ಹಿನ್ನೆಲೆಯಲ್ಲಿ ಚಂದನ್ ಮತ್ತು ಕವಿತಾ ಸಪ್ತಪದಿ ತುಳಿದು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

ಮಾಸ್ಕ್ ಧರಿಸಿಯೇ ಈ ಜೋಡಿ ಮದುವೆಯಲ್ಲಿ ಭಾಗಿಯಾಗಿದೆ. ಇಲ್ಲಿಯ ಸಹಕಾರ ನಗರದಲ್ಲಿರುವ ಚಂದನ್ ಮನೆಯಲ್ಲಿ ಈ ಮದುವೆ ನೆರವೇರಿದೆ. ಏ. 1ರಂದು ಖಾಸಗಿ ಹೊಟೇಲ್ ನಲ್ಲಿ ಚಂದನ್ ಹಾಗೂ ಕವಿತಾ ಅವರ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿತ್ತು. ಆ ನಂತರ ಸಪ್ತಪದಿ ತುಳಿಯುವ ಕುರಿತು ಈ ಜೋಡಿ ತಿಳಿಸಿತ್ತು.

ಕನ್ನಡ ಕಿರುತೆರೆಯ ಯಶಸ್ವಿ ಧಾರಾವಾಹಿಯಲ್ಲಿ ಚಂದು ಮತ್ತು ಚಿನ್ನು ಪಾತ್ರಗಳಲ್ಲಿ ಇಬ್ಬರೂ ಮಿಂಚಿ ಮನೆ ಮಾತಾಗಿದ್ದರು. ಈ ಜೋಡಿ ಸದ್ಯ ನಿಜ ಜೀವನದಲ್ಲಿಯೂ ಒಂದಾಗಿದೆ.

ರಾಜ್ಯದಲ್ಲಿ ಇಂದು ಮತ್ತೆ ಆತಂಕ ಮೂಡಿಸಿದ ಸೋಂಕಿತರ ಸಂಖ್ಯೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಚೈನ್ ಲಿಂಕ್ ಕಟ್ ಮಾಡಲು ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ್ದರೂ ಅದರ ಹಾವಳಿ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಇಂದು ಮತ್ತೆ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.

ಇಂದು ರಾಜ್ಯದಲ್ಲಿ 41,779 ಹೊಸ ಪ್ರಕರಣಗಳು ವರದಿಯಾಗಿದೆ. ಅಲ್ಲದೇ, ಇಂದು ಮಹಾಮಾರಿಗೆ 373 ಜನ ಬಲಿಯಾಗಿದ್ದಾರೆ. ಈ ಮೂಲಕ ಮಹಾಮಾರಿಗೆ ಬಲಿಯಾದವರ ಸಂಖ್ಯೆ 21,085ಕ್ಕೆ ಏರಿಕೆ ಕಂಡಿದೆ.

ಇಂದು ಬೆಂಗಳೂರು ನಗರದಲ್ಲಿ 14,316 ಹೊಸ ಪ್ರಕರಣಗಳು ವರದಿಯಾಗಿವೆ. ಅಲ್ಲದೇ, 121 ಜನ ಬಲಿಯಾಗಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ 3,60,862 ಸಕ್ರಿಯ ಪ್ರಕರಣಗಳಿವೆ. ಅಲ್ಲದೇ, ರಾಜ್ಯದ ಬಾಗಲಕೋಟೆ 773, ಬಳ್ಳಾರಿ 2,421, ಬೆಳಗಾವಿ 1,592, ಬೆಂಗಳೂರು ಗ್ರಾಮಾಂತರ 707, ಬೆಂಗಳೂರು ನಗರ 14,316, ಬೀದರ್ 223, ಚಾಮರಾಜನಗರ 713, ಚಿಕ್ಕಬಳ್ಳಾಪುರ 676, ಚಿಕ್ಕಮಗಳೂರು 435, ಚಿತ್ರದುರ್ಗ 314, ದಕ್ಷಿಣ ಕನ್ನಡ 1,215, ದಾವಣಗೆರೆ 581, ಧಾರವಾಡ 829, ಗದಗ 591, ಹಾಸನ 1,339, ಹಾವೇರಿ 292, ಕಲಬುರಗಿ 929, ಕೊಡಗು 539, ಕೋಲಾರ 306, ಕೊಪ್ಪಳ 495, ಮಂಡ್ಯ 1,385, ಮೈಸೂರು 2,340, ರಾಯಚೂರು 1,063, ರಾಮನಗರ 459,

ಶಿವಮೊಗ್ಗ 1,045, ತುಮಕೂರು 2,668, ಉಡುಪಿ 1,219, ಉತ್ತರ ಕನ್ನಡ 787, ವಿಜಯಪುರ 444 ಮತ್ತು ಯಾದಗಿರಿಯಲ್ಲಿ 683 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಇನ್ನುಳಿದ ಜಿಲ್ಲೆಗಳಲ್ಲಿ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಕಾಬೂಲ್ ನ ಮಸೀದಿಯಲ್ಲಿ ಬಾಂಬ್ ಸ್ಫೋಟ – 12 ಸಾವು

ವಿಜಯಸಾಕ್ಷಿ ಸುದ್ದಿ, ಕಾಬೂಲ್

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿನ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆ ಸಂದರ್ಭದಲ್ಲಿ ಬಾಂಬ್ ಸ್ಫೋಟಗೊಂಡಿದ್ದು, 12 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾತನಾಡಿದ ಕಾಬೂಲ್ ಪೊಲೀಸರ ವಕ್ತಾರ ಫರ್ಡಾವ್ಸ್ ಫ್ರಮುರ್ಜ್, ಕಾಬೂಲ್ ಪ್ರಾಂತ್ಯದ ಶಕರ್ ದಾರಾ ಜಿಲ್ಲಿಯ ಮಸೀದಿಯೊಳಗೆ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಮಸೀದಿಯ ಇಮಾಮ್ ಸೇರಿದಂತೆ 12 ಜನ ಸಾವನ್ನಪ್ಪಿದ್ದು, 15 ಜನ ಗಾಯಗೊಂಡಿದ್ದಾರೆ.

ಗುರುವಾರ ತಾಲಿಬಾನ್ ಉಗ್ರರು ಮತ್ತು ಸರ್ಕಾರಿ ಮಿಲಿಟರಿ ಸೈನಿಕರ ನಡುವೆ ಈದ್ ಅಲ್-ಫಿತರ್ ಹಿನ್ನೆಲೆಯಲ್ಲಿ ಶಾಂತಿ ಮಾತುಕತೆ ನಡೆದಿತ್ತು. ಅಲ್ಲದೇ, ಈ ಸಂದರ್ಭದಲ್ಲಿ ತಾತ್ಕಾಲಿಕ ಒಪ್ಪಂದ ನಡೆದಿತ್ತು. ಆದರೆ ಮಾತುಕತೆಯ ಮರು ದಿನವೇ ಸ್ಫೋಟ ಸಂಭವಿಸಿದೆ.

ಕಾರು ಕೊಳ್ಳಲು ಮಗುವನ್ನೇ ಮಾರಿದ ಪಾಪಿ ದಂಪತಿ

ವಿಜಯಸಾಕ್ಷಿ ಸುದ್ದಿ, ಲಕ್ನೋ

ಕಾರಿನ ಆಸೆಗೆ ಬಿದ್ದ ದಂಪತಿ ನವಜಾತ ಶಿಶುವನ್ನೇ ಮಾರಾಟ ಮಾಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯಲ್ಲಿ ನಡೆದಿದೆ. ಈ ದಂಪತಿ ತಮ್ಮ ನವಜಾತ ಶಿಶುವನ್ನು ಉದ್ಯಮಿಗಳಿಗೆ ರೂ. 1.5 ಲಕ್ಷಕ್ಕೆ ಮಾರಾಟ ಮಾಡಿದೆ. ಅದೂ ಇವರು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ತಮ್ಮ ಮುದ್ದು ಮಗುವನ್ನು ಮಾರಾಟ ಮಾಡಿದ್ದಾರೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಮಗುವಿನ ಅಜ್ಜ, ಅಜ್ಜಿ ಗುರುವಾರ ಪೊಲೀಸರನ್ನು ಸಂಪರ್ಕಿಸಿ ಪೋಷಕರ ವಿರುದ್ಧ ದೂರು ದಾಖಲಿಸಿದ್ದಾರೆ. ಆ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ತಿರ್ವಾ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪಾಪಿ ದಂಪತಿಗೆ ಮೂರು ತಿಂಗಳ ಹಿಂದೆ ಮಗು ಜನಿಸಿತ್ತು. ಮಗಳು ಮತ್ತು ಅಳಿಯ ಮಗುವನ್ನು, ಗುರ್ಸಹೈಗಂಜ್ ಮೂಲದ ಉದ್ಯಮಿಯೊಬ್ಬರಿಗೆ ರೂ. 1.5 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಸದ್ಯ ಮಗು ಉದ್ಯಮಿಯ ಬಳಿಯಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಈಗಾಗಲೇ ದಂಪತಿ ಕಾರು ಖರೀದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಲ್ಲುತ್ತಿಲ್ಲ ಸೋಂಕಿನ ಆರ್ಭಟ; 447 ಜನರಿಗೆ ಸೋಂಕು, ಮತ್ತೆ ನಾಲ್ವರು ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಮೇ 14 ಶುಕ್ರವಾರವೂ ಸೋಂಕಿನ ಆರ್ಭಟ ಮುಂದುವರೆದಿದೆ. ಸತತವಾಗಿ ನಾಲ್ಕು ‌ನೂರರ ಗಡಿ ದಾಟಿ ‌ಮುನ್ನುಗ್ಗುತ್ತಿದೆ.

ಇವತ್ತಿನ ವರದಿಯಂತೆ ಮತ್ತೆ ನಾಲ್ವರು ಸೋಂಕಿಗೆ ಬಲಿಯಾಗಿದ್ದಾರೆ.

ಇಂದಿನ 447 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 16900 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -203, ಮುಂಡರಗಿ-94, ನರಗುಂದ-26, ರೋಣ-81, ಶಿರಹಟ್ಟಿ-37 ಹೊರಜಿಲ್ಲೆಯ-06 ಸೇರಿದಂತೆ 447 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 175 ಕ್ಕೇರಿದೆ.

ಗದಗ ಶಹರದ ನಿವಾಸಿ 38 ವರ್ಷದ ಮಹಿಳೆ ಮೇ 09 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ದೃಢಪಟ್ಟಿತ್ತು, ಮೇ 10 ರಂದು ಮೃತಪಟ್ಟಿರುತ್ತಾರೆ.

ಗದಗನ 57 ವರ್ಷದ ಮಹಿಳೆ ಮೇ 11 ರಂದು ಜಿಮ್ಸ್ ಗೆ ದಾಖಲಾಗಿದ್ದು, ಕೋವಿಡ್ ದೃಢಪಟ್ಟಿತ್ತು, ಮೇ 12 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

68 ವರ್ಷದ ಮಹಿಳೆ ಮೇ 5 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಮೇ 12 ರಂದು ಮೃತಪಟ್ಟಿದ್ದಾರೆ.

ಗಜೇಂದ್ರಗಡ ಪಟ್ಟಣದ 68 ವರ್ಷದ ಮಹಿಳೆ ಮೇ,08 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 13 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 291 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 14496 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 2229 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 193 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

error: Content is protected !!