Home Blog Page 35

ನಿಮ್ಮ ರಾಜ್ಯದಲ್ಲಿ ಏನು ಬೇಕಾದ್ರೂ ನೀವೇ ನೋಡಿಕೊಳ್ಳಿ: ಕೇರಳ ಪಕ್ಷಗಳಿಗೆ ಸೋಮಣ್ಣ ತಿರುಗೇಟು

0

ತುಮಕೂರು: ಮಂಗಳೂರು ರೈಲ್ವೆ ಘಟಕವನ್ನು ಮೈಸೂರು ವಲಯಕ್ಕೆ ಸೇರ್ಪಡೆಗೊಳಿಸಿರುವ ವಿಚಾರ ಕೇರಳದಲ್ಲಿ ರಾಜಕೀಯ ಚರ್ಚೆ ಹಾಗೂ ಪ್ರತಿಭಟನೆಗೆ ಕಾರಣವಾಗಿರುವ ಬೆನ್ನಲ್ಲೇ, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಕೇರಳದ ರಾಜಕೀಯ ಪಕ್ಷಗಳಿಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಯಾವುದೇ ತಪ್ಪು ಮಾಡಿಲ್ಲ. ಕೇರಳಕ್ಕೆ ಸಂಬಂಧಿಸಿದಂತೆ ಯಾವುದೇ ಅಪಚಾರ ಎಸಗಿಲ್ಲ. ನಿಮ್ಮ ರಾಜ್ಯದಲ್ಲಿ ಏನು ಬೇಕಾದರೂ ನೀವು ನೋಡಿಕೊಳ್ಳಿ’ ಎಂದು ಹೇಳಿದ್ದಾರೆ. ದಕ್ಷಿಣದ ರಾಜ್ಯಗಳೆಲ್ಲ ಒಗ್ಗೂಡಬೇಕು ಎಂಬ ಅಭಿಪ್ರಾಯ ಕರ್ನಾಟಕ ಸರ್ಕಾರದ ಕಡೆಯಿಂದಲೂ ವ್ಯಕ್ತವಾಗಿರುವ ಸಂದರ್ಭದಲ್ಲೇ ಸೋಮಣ್ಣ ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ.

ಮಂಗಳೂರು ರೈಲ್ವೆ ಘಟಕವನ್ನು ಮೈಸೂರು ವಿಭಾಗಕ್ಕೆ ಸೇರಿಸುವ ನಿರ್ಧಾರದ ಹಿಂದೆ ಯಾವುದೇ ರಾಜಕೀಯ ಅಥವಾ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂದು ಸೋಮಣ್ಣ ಸ್ಪಷ್ಟಪಡಿಸಿದರು. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ವಿಚಾರಕ್ಕೆ ತಾಂತ್ರಿಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಮಂಗಳೂರು ಭಾಗವನ್ನು ಪ್ರತ್ಯೇಕ ರೈಲ್ವೆ ವಿಭಾಗವನ್ನಾಗಿ ಮಾಡಬೇಕು ಎಂಬ ಬೇಡಿಕೆ ಸುಮಾರು 25 ವರ್ಷಗಳಿಂದ ಇತ್ತು ಎಂದು ಸೋಮಣ್ಣ ಹೇಳಿದರು. ಈ ಹಿಂದೆ ಹಲವು ರೈಲ್ವೆ ಸಚಿವರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಕೂಡ ಇದಕ್ಕಾಗಿ ಪ್ರಯತ್ನಿಸಿದ್ದರು ಎಂದೂ, ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ತಮ್ಮನ್ನು ಭೇಟಿಯಾಗಿ ಈ ವಿಚಾರಕ್ಕೆ ಒಂದು ರೂಪ ನೀಡುವಂತೆ ಮನವಿ ಮಾಡಿದ್ದರು ಎಂದೂ ಸೋಮಣ್ಣ ತಿಳಿಸಿದರು.

‘ನಾನು ಸಚಿವನಾಗಿರುವುದರಿಂದ ಈ ವಿಚಾರದ ಸಂಪೂರ್ಣ ಮಾಹಿತಿ ನನಗಿತ್ತು. ಮೂರು ಜನರಲ್ ಮ್ಯಾನೇಜರ್‌ಗಳನ್ನು ಸ್ಥಳಕ್ಕೆ ಕರೆದೊಯ್ದು ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿದ ಏಕೈಕ ಸಚಿವ ನಾನಾಗಿದ್ದೇನೆ. ಅಧಿಕಾರಿಗಳು ತಾಂತ್ರಿಕವಾಗಿ ಪರಿಶೀಲಿಸಿಯೇ ಕೆಲಸ ಮಾಡಿದ್ದಾರೆ. ಇದರಲ್ಲಿ ಯಾವುದೇ ಪಕ್ಷಪಾತ ಇಲ್ಲ’ ಎಂದು ಅವರು ಹೇಳಿದರು.

ಬೆಂಗಳೂರಿನಿಂದ 31 ಬಾಂಗ್ಲಾದೇಶಿ ಪ್ರಜೆಗಳ ಗಡಿಪಾರು; ರೈಲಿನಲ್ಲಿ ಪಶ್ಚಿಮ ಬಂಗಾಳಕ್ಕೆ ರವಾನೆ

0

ಬೆಂಗಳೂರು: ರಾಜಧಾನಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ 31 ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ಗಡಿಪಾರು ಮಾಡುವ ಪ್ರಕ್ರಿಯೆ ಆರಂಭಿಸಿದ್ದಾರೆ.

ಬೆಂಗಳೂರಿನ ವಿವಿಧ 10 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬಂಧಿಸಲಾಗಿದ್ದ ಈ ಆರೋಪಿಗಳನ್ನು ಬಿಗಿ ಪೊಲೀಸ್ ಭದ್ರತೆಯೊಂದಿಗೆ ಪಶ್ಚಿಮ ಬಂಗಾಳದ ಗಡಿ ಭಾಗಕ್ಕೆ ಕರೆದೊಯ್ಯಲಾಗುತ್ತಿದೆ.

ಬೆಳಗಿನ ಜಾವವೇ ಪೊಲೀಸರು 31 ಮಂದಿಯನ್ನು ಬೆಂಗಳೂರಿನ ಎಸ್‌ಎಂವಿಟಿ ರೈಲ್ವೆ ಟರ್ಮಿನಲ್‌ನಿಂದ ರೈಲಿನ ಮೂಲಕ ಕರೆದೊಯ್ದಿದ್ದಾರೆ. ಸುಮಾರು 20 ಪೊಲೀಸ್ ಸಿಬ್ಬಂದಿಯ ಬಿಗಿ ಭದ್ರತೆಯಲ್ಲಿ ಈ ಗಡಿಪಾರು ಕಾರ್ಯಾಚರಣೆ ನಡೆಯುತ್ತಿದೆ.

ನಾಳೆ ಸಂಜೆ ಸುಮಾರು 5 ಗಂಟೆ ವೇಳೆಗೆ ಪೊಲೀಸ್ ತಂಡ ಬಾಂಗ್ಲಾದೇಶ ಗಡಿ ಸಮೀಪದ ಪಶ್ಚಿಮ ಬಂಗಾಳದ ಮಾಲ್ದಾ ತಲುಪುವ ನಿರೀಕ್ಷೆಯಿದೆ. ಅಲ್ಲಿಂದ ನಿಯಮಾನುಸಾರ ಮುಂದಿನ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುವುದು.

ಕೊಹ್ಲಿ, ಧೋನಿ, ಬುಮ್ರಾ, ಕಪಿಲ್ ದೇವ್ʼರನ್ನು ಹಿಂದಿಕ್ಕಿದ ಸಚಿನ್: ಸಾರ್ವಕಾಲಿಕ ಶ್ರೇಷ್ಠ ಆಟಗಾರನನ್ನು ಆಯ್ಕೆ ಮಾಡಿದ ಅಶ್ವಿನ್

0

ಚೆನ್ನೈ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಯಾರು ಎಂಬ ಪ್ರಶ್ನೆಗೆ ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮದೇ ಆದ ಉತ್ತರ ನೀಡಿದ್ದಾರೆ. ದಿಗ್ಗಜ ಆಟಗಾರರ ನಡುವೆ ನಡೆದ ಕುತೂಹಲಕಾರಿ ಹೋಲಿಕೆಯಲ್ಲಿ ಕೊನೆಗೂ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಅಶ್ವಿನ್ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಆಯ್ಕೆ ಮಾಡಿದ್ದಾರೆ.

ಇಎಸ್‌ಪಿಎನ್ ಕ್ರಿಕ್‌ಇನ್ಫೋ ಟಾಕ್ ಶೋನಲ್ಲಿ ಮಾತನಾಡಿದ ಅಶ್ವಿನ್, ಭಾರತದ ಹಲವು ತಲೆಮಾರುಗಳ ಸ್ಟಾರ್ ಕ್ರಿಕೆಟಿಗರನ್ನು ಪರಸ್ಪರ ಹೋಲಿಕೆ ಮಾಡಿ ತಮ್ಮ ಆಯ್ಕೆಯನ್ನು ಅಂತಿಮಗೊಳಿಸಿದರು. ಈ ವೇಳೆ ವಿರಾಟ್ ಕೊಹ್ಲಿ, ಎಂ.ಎಸ್. ಧೋನಿ, ಸುನಿಲ್ ಗವಾಸ್ಕರ್, ಜಸ್ಪ್ರೀತ್ ಬುಮ್ರಾ, ವಿರೇಂದ್ರ ಸೆಹ್ವಾಗ್, ರವೀಂದ್ರ ಜಡೇಜಾ ಸೇರಿದಂತೆ ಹಲವು ದಿಗ್ಗಜರ ಹೆಸರುಗಳು ಚರ್ಚೆಗೆ ಬಂದವು.

ಕೊಹ್ಲಿ ವಿರುದ್ಧ ಬುಮ್ರಾ:

ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ ನಡುವೆ ಒಬ್ಬರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅಶ್ವಿನ್, ಕೊಹ್ಲಿ ಬದಲಿಗೆ ಬುಮ್ರಾ ಅವರನ್ನು ಆಯ್ಕೆ ಮಾಡಿದರು. ತಮ್ಮ ಆಯ್ಕೆಯ ಬಗ್ಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ ಅಶ್ವಿನ್, ತಾವೊಬ್ಬ ಬೌಲರ್ ಆಗಿರುವ ಕಾರಣ ಬುಮ್ರಾ ಅವರನ್ನು ಆಯ್ಕೆ ಮಾಡಿರಬಹುದು ಎಂದು ಹೇಳಿದರು.

ಧೋನಿಗೆ ಮಣೆ ಹಾಕಿದ ಅಶ್ವಿನ್:

ರವೀಂದ್ರ ಜಡೇಜಾ ಮತ್ತು ಮಾಜಿ ನಾಯಕ ಎಂ.ಎಸ್. ಧೋನಿ ನಡುವಿನ ಹೋಲಿಕೆಯಲ್ಲಿ ಅಶ್ವಿನ್, ಧೋನಿ ಅವರನ್ನು ಶ್ರೇಷ್ಠರೆಂದು ಆಯ್ಕೆ ಮಾಡಿದರು. ಆದರೆ ಧೋನಿ ಹಾಗೂ ವಿರೇಂದ್ರ ಸೆಹ್ವಾಗ್ ನಡುವೆ ಆಯ್ಕೆ ಮಾಡುವ ಸಂದರ್ಭ ಬಂದಾಗ ಅಚ್ಚರಿಯ ನಿರ್ಧಾರ ಕೈಗೊಂಡ ಅಶ್ವಿನ್, ಧೋನಿ ಬದಲಿಗೆ ಸೆಹ್ವಾಗ್ ಅವರನ್ನು ಆಯ್ಕೆ ಮಾಡಿದರು.

ಇದಕ್ಕೂ ಮುನ್ನ ಸುನಿಲ್ ಗವಾಸ್ಕರ್ ಮತ್ತು ವಿರೇಂದ್ರ ಸೆಹ್ವಾಗ್ ನಡುವೆ ನಡೆದ ಹೋಲಿಕೆಯಲ್ಲೂ ಅಶ್ವಿನ್, ಗವಾಸ್ಕರ್ ಅವರನ್ನು ಬದಿಗಿಟ್ಟು ಸೆಹ್ವಾಗ್ ಅವರಿಗೆ ಮಣೆ ಹಾಕಿದ್ದರು.

ಗಂಗೂಲಿ ವಿರುದ್ಧ ಅಶ್ವಿನ್:

ಸೌರವ್ ಗಂಗೂಲಿ ಮತ್ತು ತಮ್ಮ ನಡುವಿನ ಹೋಲಿಕೆಯಲ್ಲಿ ಅಶ್ವಿನ್, ಯಾವುದೇ ಹಿಂಜರಿಕೆಯಿಲ್ಲದೆ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಆಯ್ಕೆ ಮಾಡಿದರು.

ಕೊನೆಗೂ ಸಚಿನ್‌ಗೆ ಅಗ್ರಸ್ಥಾನ:

ಅಂತಿಮ ನಾಲ್ವರ ಪಟ್ಟಿಯಿಂದ ಇಬ್ಬರನ್ನು ಆಯ್ಕೆ ಮಾಡುವ ಹಂತದಲ್ಲಿ ಅಶ್ವಿನ್, ವಿರೇಂದ್ರ ಸೆಹ್ವಾಗ್ ಅವರನ್ನು ಕೈಬಿಟ್ಟು ಸಚಿನ್ ತೆಂಡೂಲ್ಕರ್ ಅವರನ್ನು ಉಳಿಸಿಕೊಂಡರು. ಮತ್ತೊಂದೆಡೆ ಜಸ್ಪ್ರೀತ್ ಬುಮ್ರಾ ಬದಲಿಗೆ 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರನ್ನು ಆಯ್ಕೆ ಮಾಡಿದರು.

ಕೊನೆಯ ಹಂತದಲ್ಲಿ ಕಪಿಲ್ ದೇವ್ ಮತ್ತು ಸಚಿನ್ ತೆಂಡೂಲ್ಕರ್ ನಡುವೆ ಆಯ್ಕೆ ಮಾಡುವ ಸಂದರ್ಭದಲ್ಲಿ ಅಶ್ವಿನ್, ತಮ್ಮ ವೈಯಕ್ತಿಕ ಇಷ್ಟವನ್ನು ಪರಿಗಣಿಸಿ ಸಚಿನ್ ತೆಂಡೂಲ್ಕರ್ ಅವರನ್ನೇ ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಎಂದು ಘೋಷಿಸಿದರು.

ಸಚಿನ್ ತೆಂಡೂಲ್ಕರ್ ಅವರ ಬ್ಯಾಟಿಂಗ್ ದಾಖಲೆ, ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆ ಹಾಗೂ ಹಲವು ತಲೆಮಾರುಗಳ ಅಭಿಮಾನಿಗಳ ಮೇಲೆ ಬೀರಿದ ಪ್ರಭಾವವನ್ನು ಪರಿಗಣಿಸಿದರೆ ಅಶ್ವಿನ್ ಅವರ ಆಯ್ಕೆ ವಿಶೇಷ ಗಮನ ಸೆಳೆದಿದೆ. ಇದೇ ವೇಳೆ ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಮಾಜಿ ದಿಗ್ಗಜ ಎಬಿ ಡಿವಿಲಿಯರ್ಸ್ ಅವರು ಸಚಿನ್ ತೆಂಡೂಲ್ಕರ್‌ಗಿಂತ ವಿರಾಟ್ ಕೊಹ್ಲಿಯೇ ಶ್ರೇಷ್ಠ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ, ಈ ವಿಚಾರ ಮತ್ತೊಮ್ಮೆ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ; ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಭಸ್ಮ!

0

ರಾಮನಗರ: ಕನಕಪುರ ತಾಲೂಕಿನ ಬಂಡೆಬಸಪ್ಪನದೊಡ್ಡಿ ಗ್ರಾಮದಲ್ಲಿ ತಡರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.

ಗ್ರಾಮದ ನಿವಾಸಿ ಪರಮಶಿವಯ್ಯ ಅವರಿಗೆ ಸೇರಿದ ಮನೆಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ತಡರಾತ್ರಿ ದಿಢೀರನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಮನೆಯಾದ್ಯಂತ ಬೆಂಕಿ ವ್ಯಾಪಿಸಿದೆ.

ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು, ದಿನಬಳಕೆಯ ಸಾಮಗ್ರಿಗಳು ಸೇರಿದಂತೆ ಹಲವು ವಸ್ತುಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಘಟನೆಯಿಂದ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ತಿಳಿದುಬಂದಿದೆ.

ಅದೃಷ್ಟವಶಾತ್ ಮನೆಯಲ್ಲಿದ್ದ ಎಲ್ಲರೂ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಬೀದಿ ನಾಯಿಗಳ ಅಟ್ಟಹಾಸಕ್ಕೆ 5 ಕುರಿಗಳು ಬಲಿ; 3 ಗಂಭೀರ, ರೈತ ಕಂಗಾಲು!

0

ಮಂಡ್ಯ: ಬೀದಿ ನಾಯಿಗಳ ಹಾವಳಿಗೆ ಐದು ಕುರಿಗಳು ಬಲಿಯಾಗಿದ್ದು, ಮೂರು ಕುರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕುದುರಗುಂಡಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ಕುದುರಗುಂಡಿ ಗ್ರಾಮದ ಪಾಪಣ್ಣ ಎಂಬುವವರಿಗೆ ಸೇರಿದ ಕೊಟ್ಟಿಗೆಗೆ ರಾತ್ರಿ ವೇಳೆ ಬೀದಿ ನಾಯಿಗಳು ನುಗ್ಗಿವೆ. ಬಳಿಕ ಕೊಟ್ಟಿಗೆಯಲ್ಲಿದ್ದ ಕುರಿಗಳ ಮೇಲೆ ದಾಳಿ ನಡೆಸಿವೆ. ಏಕಾಏಕಿ ನಡೆದ ದಾಳಿಯಿಂದ ಕುರಿಗಳು ತಪ್ಪಿಸಿಕೊಳ್ಳಲು ಸಾಧ್ಯವಾಗದೆ, ಐದು ಕುರಿಗಳು ಮೃತಪಟ್ಟಿವೆ. ಇನ್ನೂ ಮೂರು ಕುರಿಗಳು ಗಂಭೀರವಾಗಿ ಗಾಯಗೊಂಡಿವೆ.

ಪಾಪಣ್ಣ ಅವರು ಒಟ್ಟು ಎಂಟು ಕುರಿಗಳನ್ನು ಸಾಕಿಕೊಂಡು ಜೀವನ ನಡೆಸುತ್ತಿದ್ದರು. ಕುರಿಗಳ ಸಾಕಾಣಿಕೆಯನ್ನೇ ಅವಲಂಬಿಸಿದ್ದ ರೈತನಿಗೆ ಒಂದೇ ರಾತ್ರಿ ಐದು ಕುರಿಗಳನ್ನು ಕಳೆದುಕೊಂಡಿರುವುದು ದೊಡ್ಡ ಆರ್ಥಿಕ ನಷ್ಟವನ್ನುಂಟು ಮಾಡಿದೆ. ಘಟನೆಯಿಂದ ಪಾಪಣ್ಣ ಹಾಗೂ ಅವರ ಕುಟುಂಬ ಕಂಗಾಲಾಗಿದೆ.

ಬೀದಿ ನಾಯಿಗಳ ಹಾವಳಿ ಗ್ರಾಮದಲ್ಲಿ ಹೆಚ್ಚಾಗಿದ್ದು, ಸಾಕುಪ್ರಾಣಿಗಳು ಹಾಗೂ ಜಾನುವಾರುಗಳಿಗೆ ಆತಂಕ ಎದುರಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ರಾತ್ರಿ ವೇಳೆ ಕೊಟ್ಟಿಗೆಗಳಿಗೆ ನುಗ್ಗುವ ನಾಯಿಗಳಿಂದ ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪರಿಹಾರಕ್ಕೆ ಆಗ್ರಹ:

ಕುರಿಗಳನ್ನು ಕಳೆದುಕೊಂಡಿರುವ ರೈತ ಪಾಪಣ್ಣ ಅವರಿಗೆ ಸಂಬಂಧಪಟ್ಟ ಇಲಾಖೆ ವತಿಯಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗಾಯಗೊಂಡಿರುವ ಮೂರು ಕುರಿಗಳಿಗೆ ಅಗತ್ಯ ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಇದೇ ವೇಳೆ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ನಾಯಿಗಳನ್ನು ನಿಯಂತ್ರಿಸಿ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬಾಗಲಕೋಟೆಯಲ್ಲಿ ಭೀಕರ ಅಗ್ನಿ ಅವಘಡ; ಪ್ರವಾಹ ಸಂತ್ರಸ್ತರ 20ಕ್ಕೂ ಹೆಚ್ಚು ಶೆಡ್‌ಗಳು ಸುಟ್ಟು ಕರಕಲು

0

ಬಾಗಲಕೋಟೆ: ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ನಾರಾಯಣಪುರ ಜಲಾಶಯದ ಪ್ರವಾಹ ಸಂತ್ರಸ್ತರ ತಾತ್ಕಾಲಿಕ ಶೆಡ್‌ಗಳು ಸುಟ್ಟು ಕರಕಲಾದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ನಡೆದಿದೆ.

ನಿನ್ನೆ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ 20ಕ್ಕೂ ಹೆಚ್ಚು ಶೆಡ್‌ಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಸಂತ್ರಸ್ತರು ಪುರಾಣ ಕೇಳಲು ತೆರಳಿದ್ದ ವೇಳೆ ಶೆಡ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸಂತ್ರಸ್ತರು ಶೆಡ್‌ಗಳಲ್ಲೇ ಇದ್ದಿದ್ದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಕಿಯ ತೀವ್ರತೆಗೆ ಶೆಡ್‌ಗಳಲ್ಲಿದ್ದ ದವಸ-ಧಾನ್ಯ, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹಲವು ಸಾಮಗ್ರಿಗಳು ಸುಟ್ಟುಹೋಗಿವೆ. ಶೆಡ್‌ಗಳ ತಗಡುಗಳು ರಾಶಿ ರಾಶಿಯಾಗಿ ನೆಲಕ್ಕೆ ಬಿದ್ದಿದ್ದು, ಸಂತ್ರಸ್ತರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹುನಗುಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.

17 ವರ್ಷಗಳಿಂದ ತಾತ್ಕಾಲಿಕ ಶೆಡ್‌ನಲ್ಲೇ ಜೀವನ:

2007-09ರ ಅವಧಿಯಲ್ಲಿ ನಾರಾಯಣಪುರ ಜಲಾಶಯದ ಹಿನ್ನೀರಿನ ಪ್ರವಾಹದಿಂದ ಇದ್ದಲಗಿ ಗ್ರಾಮದ ಹಲವು ಕುಟುಂಬಗಳು ಮನೆ ಕಳೆದುಕೊಂಡಿದ್ದವು. ಬಳಿಕ ಸಂತ್ರಸ್ತರಿಗಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್‌ಗಳಲ್ಲೇ ಹಲವು ಕುಟುಂಬಗಳು ಇಂದಿಗೂ ವಾಸಿಸುತ್ತಿವೆ.

ಸಂತ್ರಸ್ತರಿಗೆ ಶಾಶ್ವತವಾಗಿ ವಾಸಿಸಲು ಜಾಗ ಗುರುತಿಸಲಾಗಿದ್ದರೂ, ನೀರು, ವಿದ್ಯುತ್‌, ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಇನ್ನೂ ಕಲ್ಪಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಶಾಶ್ವತ ಸೂರು ಕಲ್ಪಿಸುವಂತೆ ಆಗ್ರಹಿಸಿ ಸಂತ್ರಸ್ತರು ಕಳೆದ 117 ದಿನಗಳಿಂದ ನಿರಂತರ ಧರಣಿ ನಡೆಸುತ್ತಿದ್ದಾರೆ. ಇದರ ನಡುವೆಯೇ ಬೆಂಕಿ ಅವಘಡ ಸಂಭವಿಸಿದ್ದು, ಒಂದೊಂದು ಶೆಡ್‌ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಷ್ಟವಾಗಿವೆ.

ತಾತ್ಕಾಲಿಕ ಶೆಡ್‌ಗಳಲ್ಲೇ ಹಲವು ವರ್ಷಗಳಿಂದ ಜೀವನ ನಡೆಸುತ್ತಿರುವ ಸಂತ್ರಸ್ತರಿಗೆ ಇದೀಗ ಅಗ್ನಿ ಅವಘಡ ಮತ್ತೊಂದು ಸಂಕಷ್ಟ ತಂದೊಡ್ಡಿದೆ.

ಒಂದು ಕರೆಗೆ ಸಾವಿರಾರು ಮಹಿಳೆಯರ ಸ್ಪಂದನೆ: ಅನಿಲ ಮೆಣಸಿನಕಾಯಿಗೆ ರಾಖಿ ಕಟ್ಟಿ ವಿಶಿಷ್ಟ ರಕ್ಷಾ ಬಂಧನ ಆಚರಣೆ

0

ಗದಗ: ಸಹೋದರ-ಸಹೋದರಿಯರ ಪ್ರೀತಿ, ವಿಶ್ವಾಸ, ಆತ್ಮೀಯತೆ ಹಾಗೂ ರಕ್ಷಣೆಯ ಪವಿತ್ರ ಬಾಂಧವ್ಯವನ್ನು ಸಾರುವ ರಕ್ಷಾ ಬಂಧನ ಹಬ್ಬವನ್ನು ಯುವ ಮುಖಂಡ ಅನಿಲ ಮೆಣಸಿನಕಾಯಿ ಅವರ ನೇತೃತ್ವದಲ್ಲಿ ವಿಶಿಷ್ಟ ಹಾಗೂ ಅದ್ಧೂರಿಯಾಗಿ ಆಚರಿಸಲಾಯಿತು.

ಅನಿಲ ಮೆಣಸಿನಕಾಯಿ ಅವರ ಒಂದು ಕರೆಗೆ ಅಪಾರ ಸ್ಪಂದನೆ ವ್ಯಕ್ತವಾಗಿದ್ದು, ಸಾವಿರಾರು ಮಹಿಳೆಯರು ಕಾರ್ಯಕ್ರಮಕ್ಕೆ ಆಗಮಿಸಿ ಅವರಿಗೆ ರಾಖಿ ಕಟ್ಟಿ ಶುಭಾಶಯ ಕೋರಿದರು.

ಅವಳಿ ನಗರದ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳೆಯರು ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅನಿಲ ಮೆಣಸಿನಕಾಯಿ ಅವರ ಕೈಗೆ ರಾಖಿ ಕಟ್ಟಿ ಸಹೋದರತ್ವದ ಬಾಂಧವ್ಯವನ್ನು ಗಟ್ಟಿಗೊಳಿಸಿದರು.

ಅವಳಿ ನಗರದ ಪ್ರಜ್ಞಾವಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅನಿಲ ಮೆಣಸಿನಕಾಯಿ ಅವರಿಗೆ ರಾಖಿ ಕಟ್ಟಿ ಶುಭ ಹಾರೈಸಿದರು. ಮಹಿಳೆಯರ ಅಭೂತಪೂರ್ವ ಸ್ಪಂದನೆ ಹಾಗೂ ಬಿಜೆಪಿ ಕಾರ್ಯಕರ್ತರ ಉತ್ಸಾಹಭರಿತ ಪಾಲ್ಗೊಳ್ಳುವಿಕೆ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಪರಿಣಮಿಸಿತು.

ಒಂದೇ ವೇದಿಕೆಯಲ್ಲಿ ಸಾವಿರಾರು ಮಹಿಳೆಯರು ಸೇರಿ ರಾಖಿ ಕಟ್ಟುವ ಮೂಲಕ ಯುವ ಮುಖಂಡನ ಮೇಲಿನ ತಮ್ಮ ಪ್ರೀತಿ, ವಿಶ್ವಾಸ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಬಿಜೆಪಿ ಕಾರ್ಯಕರ್ತರು ಮತ್ತು ಮಹಿಳೆಯರ ಸಂಭ್ರಮದ ಪಾಲ್ಗೊಳ್ಳುವಿಕೆಯಿಂದ ರಕ್ಷಾ ಬಂಧನ ಆಚರಣೆ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಈ ಸಂದರ್ಭದಲ್ಲಿ ಮಹಿಳೆಯರ ಪ್ರೀತಿ ಮತ್ತು ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿದ ಯುವ ಮುಖಂಡ ಅನಿಲ ಮೆಣಸಿನಕಾಯಿ, ರಾಖಿ ಎಂಬುದು ಕೇವಲ ದಾರದ ಬಂಧನವಲ್ಲ, ಅದು ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ ಹಾಗೂ ರಕ್ಷಣೆಯ ಪವಿತ್ರ ಸಂಕೇತವಾಗಿದೆ. ಸಾವಿರಾರು ತಾಯಂದಿರು ಮತ್ತು ಸಹೋದರಿಯರು ನೀಡಿರುವ ಈ ಪ್ರೀತಿ ಹಾಗೂ ಆಶೀರ್ವಾದವನ್ನು ಸದಾ ಗೌರವದಿಂದ ಕಾಣುತ್ತೇನೆ. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಸ್ನೇಹಿತರ ಹಾಗೂ ಅಭಿಮಾನಿಗಳ ಪ್ರೀತಿ ಮತ್ತು ಸಹಕಾರವೂ ಅವಿಸ್ಮರಣೀಯ ಎಂದು ಹೇಳಿದರು.

ಅರಬ್ಬೀ ಸಮುದ್ರದಲ್ಲಿ ಬೋಟ್‌ ಮುಳುಗಡೆ; 24 ಮಂದಿ ಮೀನುಗಾರರ ರಕ್ಷಣೆ!

0

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅಂಜದೀವ್ ದ್ವೀಪದ ಸಮೀಪ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್‌ವೊಂದು ಮುಳುಗಿದ್ದು, ಅದರಲ್ಲಿದ್ದ 24 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಬೆಳಂಬಾರ ಮೂಲದ ನೀಲಕಂಠ ಖಾರ್ವಿ ಅವರಿಗೆ ಸೇರಿದ ‘ಶ್ರೀ ಮಾತಾ’ ಹೆಸರಿನ ಮೀನುಗಾರಿಕಾ ಬೋಟ್‌ ಸಮುದ್ರದಲ್ಲಿ ಅವಘಡಕ್ಕೀಡಾಗಿ ಮುಳುಗಿದೆ ಎನ್ನಲಾಗಿದೆ.

ಬೋಟ್‌ ಅಪಾಯಕ್ಕೆ ಸಿಲುಕಿರುವುದನ್ನು ಗಮನಿಸಿದ ಸಮೀಪದಲ್ಲಿದ್ದ ಐದಾರು ಮೀನುಗಾರಿಕಾ ಬೋಟ್‌ಗಳ ಸಿಬ್ಬಂದಿ ತಕ್ಷಣ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಸಮಯೋಚಿತವಾಗಿ ನಡೆಸಿದ ರಕ್ಷಣಾ ಕಾರ್ಯಾಚರಣೆಯಿಂದ ಬೋಟ್‌ನಲ್ಲಿದ್ದ 24 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ದಡಕ್ಕೆ ಕರೆತರಲಾಗಿದೆ.

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

80 ಲಕ್ಷಕ್ಕೂ ಅಧಿಕ ನಷ್ಟ:

ಬೋಟ್‌ ಮುಳುಗಡೆಯಿಂದ ಮೀನುಗಾರಿಕಾ ಬೋಟ್‌ ಹಾಗೂ ಅದರಲ್ಲಿದ್ದ ಮೀನುಗಾರಿಕಾ ಪರಿಕರಗಳು ಸೇರಿದಂತೆ ₹80 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸಮುದ್ರದಲ್ಲಿ ಅವಘಡ ಸಂಭವಿಸಿದ ವೇಳೆ ತಕ್ಷಣ ನೆರವಿಗೆ ಧಾವಿಸಿದ ಇತರೆ ಮೀನುಗಾರಿಕಾ ಬೋಟ್‌ಗಳ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ಭಾರಿ ಅನಾಹುತವೊಂದು ತಪ್ಪಿದೆ.

ಬೆಂಗಳೂರು ಫ್ಲೈಓವರ್‌ಗಳಲ್ಲಿ ಹೊಸ ರೂಲ್ಸ್; ಸೆ.4ರಿಂದ ಈ ವಾಹನಗಳಿಗೆ ಸಂಚಾರ ನಿರ್ಬಂಧ!

0

ಬೆಂಗಳೂರು: ನಗರದ ಪ್ರಮುಖ ಫ್ಲೈಓವರ್‌ಗಳು ಹಾಗೂ ಎಲಿವೇಟೆಡ್‌ ಕಾರಿಡಾರ್‌ಗಳಲ್ಲಿ ನಿರ್ದಿಷ್ಟ ವಾಹನಗಳ ಸಂಚಾರಕ್ಕೆ ಸಂಚಾರ ಪೊಲೀಸ್‌ ಇಲಾಖೆ ನಿರ್ಬಂಧ ವಿಧಿಸಿದೆ.

ರಸ್ತೆ ಸುರಕ್ಷತೆ ಹೆಚ್ಚಿಸುವುದು, ಸಂಚಾರ ದಟ್ಟಣೆ ನಿಯಂತ್ರಿಸುವುದು ಹಾಗೂ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಹೊಸ ನಿಯಮಗಳು ಸೆಪ್ಟೆಂಬರ್‌ 4ರಿಂದ ಜಾರಿಗೆ ಬರಲಿದ್ದು, ಎಲೆಕ್ಟ್ರಾನಿಕ್‌ ಸಿಟಿ ಎಲಿವೇಟೆಡ್‌ ಕಾರಿಡಾರ್‌ನಲ್ಲಿ ಸೆಪ್ಟೆಂಬರ್‌ 11ರಿಂದ ಅನ್ವಯವಾಗಲಿದೆ.

ಬಿಜಿಎಸ್ ಫ್ಲೈಓವರ್‌, ಮೈಸೂರು ರಸ್ತೆ:

ಬಿಜಿಎಸ್ ಫ್ಲೈಓವರ್‌ನಲ್ಲಿ 24 ಗಂಟೆಯೂ ಭಾರಿ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ.

ಬೆಳಗ್ಗೆ 7ರಿಂದ 11 ಗಂಟೆವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 10 ಗಂಟೆವರೆಗೆ ಮೂರು ಚಕ್ರದ ಗೂಡ್ಸ್‌ ಆಟೋ ಸೇರಿದಂತೆ ಇತರೆ ಸರಕು ಸಾಗಣೆ ವಾಹನಗಳಿಗೂ ನಿರ್ಬಂಧ ಹೇರಲಾಗಿದೆ.

ಪೀಣ್ಯ ಎಲಿವೇಟೆಡ್‌ ಕಾರಿಡಾರ್:

ಪೀಣ್ಯ ಎಲಿವೇಟೆಡ್‌ ಕಾರಿಡಾರ್‌ನಲ್ಲಿ ಪ್ರಯಾಣಿಕರ ಆಟೋರಿಕ್ಷಾ ಹಾಗೂ ತ್ರಿಚಕ್ರ ಗೂಡ್ಸ್‌ ಆಟೋಗಳ ಸಂಚಾರಕ್ಕೆ 24 ಗಂಟೆಯೂ ನಿಷೇಧವಿದೆ.

ಬೆಳಗ್ಗೆ 7ರಿಂದ 11 ಗಂಟೆ ಹಾಗೂ ಸಂಜೆ 4ರಿಂದ ರಾತ್ರಿ 10 ಗಂಟೆವರೆಗೆ ಭಾರಿ ಮತ್ತು ಮಧ್ಯಮ ಸರಕು ಸಾಗಣೆ ವಾಹನಗಳ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿದೆ.

ಎಲೆಕ್ಟ್ರಾನಿಕ್‌ ಸಿಟಿ ಎಲಿವೇಟೆಡ್‌ ಕಾರಿಡಾರ್:

ಈ ಕಾರಿಡಾರ್‌ನಲ್ಲಿ ಬೆಳಗ್ಗೆ 6ರಿಂದ ರಾತ್ರಿ 10 ಗಂಟೆವರೆಗೆ ಭಾರಿ, ಮಧ್ಯಮ ಹಾಗೂ ಲಘು ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ.

ಇದಲ್ಲದೆ, ದ್ವಿಚಕ್ರ ವಾಹನಗಳು, ಪ್ರಯಾಣಿಕರ ಆಟೋರಿಕ್ಷಾ ಹಾಗೂ ತ್ರಿಚಕ್ರ ಗೂಡ್ಸ್‌ ಆಟೋಗಳಿಗೆ 24 ಗಂಟೆಯೂ ಸಂಚಾರ ನಿಷೇಧಿಸಲಾಗಿದೆ. ಈ ನಿಯಮ ಸೆಪ್ಟೆಂಬರ್‌ 11ರಿಂದ ಜಾರಿಗೆ ಬರಲಿದೆ.

ಡಬಲ್‌ ಡೆಕ್ಕರ್‌ ಫ್ಲೈಓವರ್‌:

ಸಿಲ್ಕ್‌ ಬೋರ್ಡ್‌ನಿಂದ ರಾಗಿಗುಡ್ಡದವರೆಗೆ ಇರುವ ಡಬಲ್‌ ಡೆಕ್ಕರ್‌ ಫ್ಲೈಓವರ್‌ನಲ್ಲಿ ಭಾರಿ ಸರಕು ಸಾಗಣೆ ವಾಹನಗಳಿಗೆ 24 ಗಂಟೆಯೂ ಸಂಚಾರ ನಿರ್ಬಂಧಿಸಲಾಗಿದೆ.

ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್‌ ಕಾರಿಡಾರ್:

ಸಂಜೀವ ನಗರ ಕ್ರಾಸ್‌ನಿಂದ ವಿದ್ಯಾಶಿಲ್ಪ ಜಂಕ್ಷನ್‌ವರೆಗೆ ಇರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಎಲಿವೇಟೆಡ್‌ ಕಾರಿಡಾರ್‌ನಲ್ಲಿ ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾಗಳಿಗೆ 24 ಗಂಟೆಯೂ ನಿರ್ಬಂಧವಿದೆ.

ಬೆಳಗ್ಗೆ 6ರಿಂದ ರಾತ್ರಿ 10 ಗಂಟೆವರೆಗೆ ಎಲ್ಲಾ ರೀತಿಯ ಸರಕು ಸಾಗಣೆ ವಾಹನಗಳ ಸಂಚಾರಕ್ಕೂ ನಿಷೇಧ ಹೇರಲಾಗಿದೆ.

ನಗರದ ಪ್ರಮುಖ ಮೇಲ್ಸೇತುವೆಗಳಲ್ಲಿ ಸಂಚಾರ ಸುರಕ್ಷತೆ ಹಾಗೂ ಸುಗಮ ವಾಹನ ಸಂಚಾರಕ್ಕೆ ಒತ್ತು ನೀಡುವ ಉದ್ದೇಶದಿಂದ ಈ ಹೊಸ ನಿರ್ಬಂಧಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಸಂಚಾರ ಪೊಲೀಸ್‌ ಇಲಾಖೆ ತಿಳಿಸಿದೆ.

ಯುವಕನ ಹೊಟ್ಟೆಯಲ್ಲಿ ಲೈಟರ್, ಬ್ಯಾಟರಿ, ಕೀಗಳು! ಮರಣೋತ್ತರ ಪರೀಕ್ಷೆಯಲ್ಲಿ ಹೊರಬಿತ್ತು ಅಚ್ಚರಿಯ ಸಂಗತಿ

0

ಚಿಕ್ಕಬಳ್ಳಾಪುರ: ಅನುಮಾನಾಸ್ಪದವಾಗಿ ಮೃತಪಟ್ಟ ಯುವಕನ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರೇ ಬೆಚ್ಚಿಬಿದ್ದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ.

28 ವರ್ಷದ ಯುವಕನ ಹೊಟ್ಟೆಯಲ್ಲಿ ಲೈಟರ್, ಬ್ಯಾಟರಿ ಸೆಲ್, ಬೀಗದ ಕೀಗಳು ಸೇರಿದಂತೆ ಹಲವು ಲೋಹದ ವಸ್ತುಗಳು ಪತ್ತೆಯಾಗಿವೆ.

ಗುಡಿಬಂಡೆ ಪಟ್ಟಣದ ಬಾಪೂಜಿನಗರದಲ್ಲಿ ಮಹೇಶ್ ಎಂಬ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಮೂಲತಃ ಚಿಕ್ಕಬಳ್ಳಾಪುರ ತಾಲೂಕಿನ ನಲ್ಲಕದಿರೇನಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಮಹೇಶ್, ಕಳೆದ ಕೆಲವು ದಿನಗಳಿಂದ ಅಕ್ಕನ ಮನೆಯಲ್ಲಿ ವಾಸವಾಗಿದ್ದರು.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಹೇಶ್ ನೇಣು ಬಿಗಿದುಕೊಂಡಿದ್ದರು ಎನ್ನಲಾಗಿದೆ. ಆದರೆ ಮೃತದೇಹ ನೆಲದ ಮೇಲೆ ಪತ್ತೆಯಾಗಿರುವುದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಇದು ಆತ್ಮಹತ್ಯೆಯೋ ಅಥವಾ ಸಾವಿನ ಹಿಂದೆ ಬೇರೆ ಕಾರಣವಿದೆಯೇ ಎಂಬುದನ್ನು ಪತ್ತೆಹಚ್ಚಲು ಮೃತದೇಹವನ್ನು ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು.

ಹೊಟ್ಟೆಯಲ್ಲಿ ಲೈಟರ್, ಬ್ಯಾಟರಿ ಸೆಲ್, ಕೀಗಳು!

ಮರಣೋತ್ತರ ಪರೀಕ್ಷೆ ವೇಳೆ ವೈದ್ಯರು ಮೃತನ ಹೊಟ್ಟೆಯನ್ನು ಪರಿಶೀಲಿಸಿದಾಗ ಲೈಟರ್, ಬ್ಯಾಟರಿ ಸೆಲ್, ಬೀಗದ ಕೀಗಳು, ಹೇರ್‌ಪಿನ್, ಔಷಧಿ ಟ್ಯೂಬ್‌ಗಳು ಹಾಗೂ ಕಬ್ಬಿಣದ ಚೂರುಗಳು ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ ಎನ್ನಲಾಗಿದೆ.

ಇಷ್ಟೊಂದು ವಸ್ತುಗಳು ಯುವಕನ ಹೊಟ್ಟೆಯೊಳಗೆ ಹೇಗೆ ಸೇರಿದವು ಎಂಬುದು ಇದೀಗ ಪೊಲೀಸರ ತನಿಖೆಯ ಪ್ರಮುಖ ಅಂಶವಾಗಿದೆ. ಪತ್ತೆಯಾದ ವಸ್ತುಗಳನ್ನು ಹೊರತೆಗೆಯಲಾಗಿದೆ.

ಸಾಲದ ಸಮಸ್ಯೆ ಇತ್ತಾ?

ಮಹೇಶ್‌ಗೆ ಸಾಲದ ಸಮಸ್ಯೆ ಇತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಹಿಂದೆಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಕುಟುಂಬದವರು ಹೇಳಿದ್ದಾರೆ. ಆದರೆ ತಮ್ಮ ಎದುರು ಮಹೇಶ್ ಯಾವುದೇ ವಸ್ತುಗಳನ್ನು ನುಂಗಿರುವುದನ್ನು ನೋಡಿಲ್ಲ ಎಂದು ಅವರು ತಿಳಿಸಿದ್ದಾರೆ.

ಸದ್ಯ ಗುಡಿಬಂಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮಹೇಶ್‌ ಸಾವಿನ ಹಿಂದೆ ಆತ್ಮಹತ್ಯೆಯೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದನ್ನು ಪೊಲೀಸರು ವಿವಿಧ ಆಯಾಮಗಳಲ್ಲಿ ಪರಿಶೀಲಿಸುತ್ತಿದ್ದಾರೆ.