Home Blog Page 36

ಗ್ಯಾರಂಟಿ ಯೋಜನೆಗಳು ಅರ್ಹರಿಗೆ ತಲುಪಲಿ: ಪಿ.ಟಿ. ಪರಮೇಶ್ವರ ನಾಯ್ಕ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತಲುಪುವಂತೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸಲಾಗುವುದು ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.

ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಹಗರಿಬೊಮ್ಮನಹಳ್ಳಿಗೆ ಆಗಮಿಸಿದ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲಿನ ನಂತರವೂ ಪಕ್ಷದ ಕೆಲಸ ಮಾಡಲು ಬಯಸಿದ್ದ ನನಗೆ ಪಕ್ಷದ ವರಿಷ್ಠರು ಮಹತ್ವದ ಜವಾಬ್ದಾರಿ ನೀಡಿದ್ದಾರೆ. ಅವರ ನಂಬಿಕೆಗೆ ತಕ್ಕಂತೆ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ವಿಭಾಗ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಿ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯ ತಲುಪಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದರೂ, ಅವರ ಪಕ್ಷದವರೇ ಈ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಟೀಕೆ ಮಾಡುವುದನ್ನು ಬಿಟ್ಟು ಯೋಜನೆಗಳ ಲಾಭ ಪಡೆಯುವುದನ್ನು ನಿಲ್ಲಿಸಲಿ ಎಂದು ಸವಾಲು ಹಾಕಿದರು.

ನೀಟ್ ಪರೀಕ್ಷೆಯ ಅಕ್ರಮವನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿರುವುದು ಖಂಡನೀಯ. ಹೋರಾಟವನ್ನು ಬಲಪ್ರಯೋಗದಿಂದ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ತಮ್ಮ ಜನ್ಮದಿನದ ಅಂಗವಾಗಿ ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳುವ ಮಾರ್ಗಮಧ್ಯೆ ಹಗರಿ ಆಂಜನೇಯ ದೇವಸ್ಥಾನದ ಬಳಿ ನಡೆದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಸೊನ್ನದ ಮಹೇಶ್, ಸಕ್ರಹಳ್ಳಿ ಮಲ್ಲಿಕಾರ್ಜುನ, ಏಣಿಗಿ ಪಕ್ಕೀರ್ ಸಾಬು, ಬೋವಿ ಈರಣ್ಣ, ಬೋವಿ ಹುಲುಗಪ್ಪ, ಕೆ.ಎಸ್. ಉಡುಚಪ್ಪ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ. ಕೊಟ್ರೇಶ್, ಸಿ. ಬಸವರಾಜ್, ದಾದಾಪೀರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

“ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತಲುಪುವಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.”

ಪಿ.ಟಿ. ಪರಮೇಶ್ವರ ನಾಯ್ಕ, ರಾಜ್ಯ ಉಪಾಧ್ಯಕ್ಷ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ

ಮುಖಕ್ಕೆ ಮಾಸ್ಕ್… ಕೈಗೆ ಗ್ಲೌಸ್… ಕೊನೆಗೆ ಜೈಲು!

0

ವಿಜಯಸಾಕ್ಷಿ ಸುದ್ದಿ, ಗದಗ: ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಧರಿಸಿ ಯಾವುದೇ ಸುಳಿವು ಬಿಡದೆ ಲಾಕ್ ಆಗಿದ್ದ ಮನೆಗಳನ್ನು ಟಾರ್ಗೆಟ್ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಸಾಮಾನು ಹಾಗೂ ನಗದು ದೋಚುತ್ತಿದ್ದ ಅಂತರರಾಜ್ಯ ಖತರ್ನಾಕ್ ಮಾಸ್ಕ್ ಗ್ಯಾಂಗ್ ಅನ್ನು ಗದಗ ನಗರ ಪೊಲೀಸರು ಸಿನಿಮೀಯ ರೀತಿಯ ಕಾರ್ಯಾಚರಣೆಯಲ್ಲಿ ಬಂಧಿಸಿ, ₹42.73 ಲಕ್ಷ ಮೌಲ್ಯದ ಕಳುವಾದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.

ಗದಗ ನಗರದ ಉದಯನಗರದಲ್ಲಿ ನಡೆದಿದ್ದ ಸುಮಾರು ₹44 ಲಕ್ಷ ಮೌಲ್ಯದ ಮನೆಗಳ್ಳತನ ಪ್ರಕರಣವನ್ನು ಭೇದಿಸಿರುವ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೇ 6ರಿಂದ 8ರ ನಡುವಿನ ಅವಧಿಯಲ್ಲಿ ನಗರದ ಉದಯನಗರ 1ನೇ ಕ್ರಾಸ್, ಕ್ಲರ್ಕ್ಸ್ ಇನ್ ಹಿಂಭಾಗದಲ್ಲಿರುವ ಮಂಜುನಾಥ ತಂದೆ ಷಣ್ಮುಖಸಾ ಬಸವಾ ಅವರ ಮನೆಯನ್ನು ಗುರಿಯಾಗಿಸಿಕೊಂಡಿದ್ದ ಕಳ್ಳರು, ಬೀಗ ಮುರಿದು ಮನೆಯೊಳಗೆ ನುಗ್ಗಿ 342 ಗ್ರಾಂ ಚಿನ್ನಾಭರಣ (₹34.20 ಲಕ್ಷ), 1,970 ಗ್ರಾಂ ಬೆಳ್ಳಿ ಸಾಮಾನು (₹2.20 ಲಕ್ಷ) ಹಾಗೂ ₹8.50 ಲಕ್ಷ ನಗದು ದೋಚಿ ಪರಾರಿಯಾಗಿದ್ದರು. ಒಟ್ಟಾರೆ ಸುಮಾರು ₹44.90 ಲಕ್ಷ ಮೌಲ್ಯದ ಕಳ್ಳತನ ನಡೆದಿತ್ತು.

ಈ ಗ್ಯಾಂಗ್ ಕಾರ್ಯಾಚರಣೆಯ ಶೈಲಿಯೇ ವಿಭಿನ್ನವಾಗಿತ್ತು. ಹಗಲು ವೇಳೆಯಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ, ರಾತ್ರಿ ವೇಳೆ ಮುಖಕ್ಕೆ ಮಾಸ್ಕ್ ಹಾಗೂ ಕೈಗೆ ಗ್ಲೌಸ್ ಧರಿಸಿ ಕಳ್ಳತನ ನಡೆಸುತ್ತಿದ್ದರು. ಯಾವುದೇ ಬೆರಳಚ್ಚು ಅಥವಾ ಸುಳಿವು ಸಿಗದಂತೆ ಎಚ್ಚರಿಕೆ ವಹಿಸುತ್ತಿದ್ದ ಕಾರಣ ಪ್ರಕರಣ ಭೇದಿಸುವುದು ಪೊಲೀಸರಿಗೆ ಸವಾಲಾಗಿತ್ತು.
ಆದರೆ, ಘಟನಾ ಸ್ಥಳದ ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಅನುಮಾನಾಸ್ಪದ ಕಾರಿನ ಚಲನವಲನ ತನಿಖೆಗೆ ಮಹತ್ವದ ಸುಳಿವಾಯಿತು. ಅದನ್ನೇ ಆಧಾರವಾಗಿಟ್ಟುಕೊಂಡು ಗದಗ ಪೊಲೀಸರು ವಿವಿಧ ಜಿಲ್ಲೆಗಳಲ್ಲಿ ತಾಂತ್ರಿಕ ಮಾಹಿತಿ ಕಲೆಹಾಕಿ ಕಾರ್ಯಾಚರಣೆ ನಡೆಸಿ, ಅಂತರರಾಜ್ಯ ಕಳ್ಳರ ಜಾಲವನ್ನು ಭೇದಿಸಿದರು.

ಬಂಧಿತ ಆರೋಪಿಗಳನ್ನು ಮಹಮ್ಮದರಫೀಕ್ (36, ಬಂಟ್ವಾಳ – ದಕ್ಷಿಣ ಕನ್ನಡ), ಇಮ್ರಾನ್ ತಿಗಡಿ (40, ಬೈಲಹೊಂಗಲ – ಬೆಳಗಾವಿ) ಹಾಗೂ ಮೌಲಾಲಿ ದರ್ಗಾ (34, ಹಾನಗಲ್ – ಹಾವೇರಿ) ಎಂದು ಗುರುತಿಸಲಾಗಿದೆ.

ವಿಚಾರಣೆ ವೇಳೆ ಆರೋಪಿಗಳು ಉದಯನಗರದ ಮನೆಯಲ್ಲೇ ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ 330 ಗ್ರಾಂ ಚಿನ್ನಾಭರಣ (₹33.33 ಲಕ್ಷ), 750 ಗ್ರಾಂ ಬೆಳ್ಳಿ ಸಾಮಾನು (₹90 ಸಾವಿರ), ಕಳ್ಳತನಕ್ಕೆ ಬಳಸಿದ್ದ ಮಾರೂತಿ ಸುಜುಕಿ ಎರ್ಟಿಗಾ ಕಾರು (₹8 ಲಕ್ಷ) ಹಾಗೂ ಕಳುವಿನ ಹಣದಿಂದ ಖರೀದಿಸಿದ್ದ ಮಾರೂತಿ ಸುಜುಕಿ ಆಲ್ಟೋ ಎಲ್‌ಎಕ್ಸ್ಐ ಕಾರು (₹50 ಸಾವಿರ) ಸೇರಿದಂತೆ ಒಟ್ಟು ₹42.73 ಲಕ್ಷ ಮೌಲ್ಯದ ಆಸ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳು ಗದಗ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಕೇರಳ, ತಮಿಳುನಾಡಿನಲ್ಲಿಯೂ ಇದೇ ರೀತಿಯ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತನಿಖಾ ತಂಡಕ್ಕೆ ಎಸ್‌ಪಿ ಅಭಿನಂದನೆ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಹಾಗೂ ಡಿವೈಎಸ್‌ಪಿ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂಗಮೇಶ ವಿ. ಶಿವಯೋಗಿ, ಬೆಟಗೇರಿ ವೃತ್ತದ ಇನ್ಸ್‌ಪೆಕ್ಟರ್ ಧೀರಜ್ ಶಿಂಧೆ, ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಲ್.ಕೆ. ಜೂಲಕಟ್ಟಿ, ಪಿಎಸ್‌ಐ ಬಿ.ಟಿ. ರಿತ್ತಿ, ಪಿಎಸ್‌ಐ ರೇಣುಕಾ ಮುಂಡೇವಾಡಗಿ, ಎಆರ್ ಎಸ್ ಐ ಗುರು ಬೂದಿಹಾಳ, ಆನಂದ್ ಸಿಂಗ್ ದೊಡ್ಡಮನಿ, ವಿ.ಎಸ್. ಶೆಟ್ಟೆಣ್ಣವರ, ಎಸ್.ಎಸ್. ಮಾವಿನಕಾಯಿ, ಉಮೇಶ್ ಸುಣಗಾರ, ಶರಣಪ್ಪ ನಾಗೇಂದ್ರಗಡ, ಕುಮಾರ ತಿಗರಿ, ಕಲಂದರ್ ನದಾಫ್, ಲಕ್ಷ್ಮೇಶ್ವರ ಠಾಣೆಯ ಸಿಬ್ಬಂದಿ, ಸಂಜೀವ ಕೊರಡೂರು (ಟೆಕ್ನಿಕಲ್ ಸೆಲ್), ಅಣ್ಣಪ್ಪ ಕವಲೂರು, ಹನುಮಂತ ಯಾಡಿಯಾಪೂರ, ಪ್ರಕಾಶ ಉಮಚಗಿ, ವೀರಪ್ಪ ಗೌಡನಾಯ್ಕರ, ಗಣೇಶ್ ತಳವಾರ, ಕಾರ್ತಿಕ ಮಂಗಳಿ ಸೇರಿದಂತೆ ನಗರ ಠಾಣೆ, ತಾಂತ್ರಿಕ ವಿಭಾಗ, ಸಿಇಎನ್ ಠಾಣೆ ಹಾಗೂ ಇತರ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಅಲ್ಪಾವಧಿಯಲ್ಲೇ ಪ್ರಕರಣವನ್ನು ಭೇದಿಸಿದ ತನಿಖಾ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಎಸ್‌ಪಿ ರೋಹನ್ ಜಗದೀಶ್ ಅಭಿನಂದಿಸಿದರು.

“ಯಾವುದೇ ಸುಳಿವು ಸಿಗದಿದ್ದರೂ ಸಿಸಿ ಕ್ಯಾಮೆರಾದಲ್ಲಿ ಕಂಡುಬಂದ ಕಾರಿನ ಜಾಡು ಹಿಡಿದು ತನಿಖೆ ನಡೆಸಿದ ಪರಿಣಾಮ ಅಂತರರಾಜ್ಯ ಕಳ್ಳರ ಗ್ಯಾಂಗ್ ಬಂಧಿಸಲು ಸಾಧ್ಯವಾಯಿತು. ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ.”

ರೋಹನ್ ಜಗದೀಶ್, ಜಿಲ್ಲಾ ಪೊಲೀಸ್ ಅಧೀಕ್ಷಕರು, ಗದಗ

 

ಮಹಾಲಕ್ಷ್ಮೀ ದೇವಸ್ಥಾನ ಕಳ್ಳತನದ ಆರೋಪಿಯೂ ಬಂಧನ

ಇದೇ ಕಾರ್ಯಾಚರಣೆಯಲ್ಲಿ ಗದಗ ನಗರದ ಹಾತಲಗೇರಿ ನಾಕಾದ ಮಹಾಲಕ್ಷ್ಮೀ ದೇವಸ್ಥಾನ ಕಳ್ಳತನ ಪ್ರಕರಣವನ್ನೂ ಪೊಲೀಸರು ಭೇದಿಸಿದ್ದಾರೆ. ದೇವಿಗೆ ಹಾಕುವ ₹1.25 ಲಕ್ಷ ಮೌಲ್ಯದ ಚಿನ್ನದ ತಾಳಿ, ಬೆಳ್ಳಿಯ ಕಿರೀಟ ಹಾಗೂ ಇತರೆ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಈ ಪ್ರಕರಣದಲ್ಲಿ ಮಂಡ್ಯ ಜಿಲ್ಲೆಯ ಪೃಥ್ವಿರಾಜ್‌ ಎಂಬ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.

ಬೆಂಗಳೂರು ಟ್ರಾಫಿಕ್‌ಗೆ ಬ್ರೇಕ್ ಇಲ್ಲ! 5 ವರ್ಷದಲ್ಲಿ 50 ಲಕ್ಷ ಹೊಸ ವಾಹನಗಳ ಸೇರ್ಪಡೆ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ ಐದು ವರ್ಷಗಳಲ್ಲಿ ದಾಖಲೆ ಪ್ರಮಾಣದಲ್ಲಿ ಹೊಸ ವಾಹನಗಳು ರಸ್ತೆಗಿಳಿದಿರುವ ಮಾಹಿತಿ ಬೆಳಕಿಗೆ ಬಂದಿದೆ.

ನಗರದಲ್ಲಿದ್ದ ವಾಹನಗಳ ಸಂಖ್ಯೆ ಸುಮಾರು 98 ಲಕ್ಷದಿಂದ 1.47 ಕೋಟಿಗೆ ಏರಿಕೆಯಾಗಿದ್ದು, ಐದು ವರ್ಷಗಳಲ್ಲಿ ಸುಮಾರು 50 ಲಕ್ಷ ಹೊಸ ವಾಹನಗಳು ಸೇರ್ಪಡೆಯಾಗಿವೆ. ವಾಹನಗಳ ಸಂಖ್ಯೆ ಹೆಚ್ಚಳಕ್ಕೆ ತಕ್ಕಂತೆ ರಸ್ತೆ ಮೂಲಸೌಕರ್ಯ ವಿಸ್ತರಣೆಯಾಗದ ಪರಿಣಾಮ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ.

ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳದವರೆಗೆ, ಮೆಜೆಸ್ಟಿಕ್‌ನಿಂದ ವೈಟ್‌ಫೀಲ್ಡ್‌ವರೆಗೆ ಪ್ರಮುಖ ರಸ್ತೆಗಳಲ್ಲಿ ಪ್ರತಿದಿನ ವಾಹನಗಳ ಉದ್ದನೆಯ ಸಾಲು ಕಾಣಿಸುತ್ತಿದೆ. ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು, ವ್ಯಾಪಾರಸ್ಥರು ಸೇರಿದಂತೆ ಲಕ್ಷಾಂತರ ಜನರು ನಿತ್ಯ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಗಂಟೆಗಟ್ಟಲೆ ಸಮಯ ಕಳೆಯುವಂತಾಗಿದೆ.

ಕೇವಲ 5 ರಿಂದ 10 ಕಿಲೋಮೀಟರ್ ದೂರ ಕ್ರಮಿಸಲು 30 ರಿಂದ 60 ನಿಮಿಷಗಳಿಗೂ ಹೆಚ್ಚು ಸಮಯ ಬೇಕಾಗುತ್ತಿದೆ. ಇದರಿಂದ ಜನರ ಅಮೂಲ್ಯ ಸಮಯ ವ್ಯರ್ಥವಾಗುವುದರ ಜೊತೆಗೆ ವಾಹನಗಳು ಒಂದೇ ಕಡೆ ನಿಲ್ಲುವುದರಿಂದ ಇಂಧನ ಬಳಕೆ ಹೆಚ್ಚಾಗಿ ವಾಯು ಮಾಲಿನ್ಯವೂ ಹೆಚ್ಚುತ್ತಿದೆ.

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪ್ರಮುಖ ಜಂಕ್ಷನ್‌ಗಳ ವೈಜ್ಞಾನಿಕ ನಿರ್ವಹಣೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸುವುದು, ಅಕ್ರಮ ಪಾರ್ಕಿಂಗ್ ತೆರವು, ಸ್ಮಾರ್ಟ್ ಟ್ರಾಫಿಕ್ ಸಿಗ್ನಲ್‌ಗಳ ಸಮರ್ಪಕ ಬಳಕೆ ಹಾಗೂ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿ ಅಗತ್ಯ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೆಂಗಳೂರಿನ ವೇಗದ ಬೆಳವಣಿಗೆಗೆ ಅನುಗುಣವಾಗಿ ರಸ್ತೆ ಹಾಗೂ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಪಡಿಸದಿದ್ದರೆ, ಮುಂದಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರೈಲ್ವೆ ಹಳಿಗಳ ಬಳಿ ಕಸ ಎಸೆದರೆ ಕಠಿಣ ಕ್ರಮ; ಬೆಂಗಳೂರಿನಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ!

ಬೆಂಗಳೂರು: ರೈಲ್ವೆ ಹಳಿಗಳ ಪಕ್ಕದಲ್ಲಿ ಹಾಗೂ ರೈಲ್ವೆಗೆ ಸೇರಿದ ಜಾಗಗಳಲ್ಲಿ ಕಸ ಮತ್ತು ಕಟ್ಟಡ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೈರುತ್ಯ ರೈಲ್ವೆ ಎಚ್ಚರಿಕೆ ನೀಡಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ನಗರದ ಐದು ಪಾಲಿಕೆಗಳ ಸಹಯೋಗದೊಂದಿಗೆ ರೈಲ್ವೆ ಹಳಿಗಳ ಸುತ್ತಮುತ್ತಲಿನ ತ್ಯಾಜ್ಯ ತೆರವುಗೊಳಿಸಲು ಎರಡು ತಿಂಗಳ ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಮಾತನಾಡಿ, ರೈಲ್ವೆ ಜಾಗದಲ್ಲಿ ಅನಧಿಕೃತವಾಗಿ ಕಸ ಎಸೆಯುವವರ ವಿರುದ್ಧ ದಂಡ ವಿಧಿಸುವುದರ ಜೊತೆಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ರೈಲ್ವೆ ಆಸ್ತಿಯ ರಕ್ಷಣೆ, ಹಳಿಗಳ ಸುತ್ತಮುತ್ತ ಸಂಗ್ರಹವಾಗಿರುವ ಕಸದ ರಾಶಿ ತೆರವು ಹಾಗೂ ಭವಿಷ್ಯದಲ್ಲಿ ಮತ್ತೆ ತ್ಯಾಜ್ಯ ಎಸೆಯದಂತೆ ತಡೆಯುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ರೈಲ್ವೆ ಇಲಾಖೆ ಕಠಿಣ ಕಣ್ಗಾವಲು ವ್ಯವಸ್ಥೆ ರೂಪಿಸಲಿದೆ.

ರೈಲ್ವೆ ಅಧಿಕಾರಿಗಳ ಪ್ರಕಾರ, ಹಳಿಗಳ ಪಕ್ಕದಲ್ಲಿ ಅಕ್ರಮವಾಗಿ ಕಸ ಎಸೆಯುವುದರಿಂದ ರೈಲು ಸಂಚಾರದ ಸುರಕ್ಷತೆಗೆ ಅಪಾಯ ಎದುರಾಗುತ್ತಿದೆ. ಹಲವು ಸಂದರ್ಭಗಳಲ್ಲಿ ಕಸದ ರಾಶಿಗೆ ಬೆಂಕಿ ತಗುಲಿ ಸಿಗ್ನಲಿಂಗ್ ವ್ಯವಸ್ಥೆ ಹಾಗೂ ವಿದ್ಯುತ್ ಕೇಬಲ್‌ಗಳು ಹಾನಿಗೊಳಗಾಗಿದ್ದು, ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಇದಲ್ಲದೆ, ಬೆಂಗಳೂರು-ಮೈಸೂರು ಹಾಗೂ ಬೆಂಗಳೂರು-ಹೊಸೂರು ರೈಲು ಮಾರ್ಗಗಳಲ್ಲಿ ಪದೇ ಪದೇ ತ್ಯಾಜ್ಯ ಸಂಗ್ರಹವಾಗುತ್ತಿರುವುದರಿಂದ ರೈಲ್ವೆ ಗಡಿ ಗುರುತುಗಳು ಮರೆಯಾಗುವ ಹಾಗೂ ಅತಿಕ್ರಮಣದ ಭೀತಿ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಹಾಗೂ ಸ್ಥಳೀಯ ಆಡಳಿತಗಳು ಜಂಟಿಯಾಗಿ ಸ್ವಚ್ಛತಾ ಕಾರ್ಯದ ಜೊತೆಗೆ ಅಕ್ರಮ ತ್ಯಾಜ್ಯ ವಿಲೇವಾರಿ ತಡೆಯಲು ಕ್ರಮ ಕೈಗೊಳ್ಳುತ್ತಿವೆ.

₹5 ಸಾವಿರ ಲಂಚ ಪಡೆದ ಆರೋಪ: ಟ್ರಾಫಿಕ್ ಹೆಡ್ ಕಾನ್ಸ್‌ಟೇಬಲ್ ಅಮಾನತು!

ಬೆಂಗಳೂರು: ₹5,000 ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಪುಲಕೇಶಿನಗರ ಟ್ರಾಫಿಕ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಒಬ್ಬರನ್ನು ಅಮಾನತು ಮಾಡಲಾಗಿದೆ.

ಬೆಂಗಳೂರು ಪೂರ್ವ ವಿಭಾಗದ ಟ್ರಾಫಿಕ್ ಡಿಸಿಪಿ ಸಾಹಿಲ್ ಬಾಗ್ಲಾ ಅವರು ಅಮಾನತು ಆದೇಶ ಹೊರಡಿಸಿದ್ದಾರೆ. ಅಮಾನತುಗೊಂಡಿರುವ ಹೆಡ್ ಕಾನ್ಸ್‌ಟೇಬಲ್‌ರನ್ನು ಸೋಮಶೇಖರ್ ಎಂದು ಗುರುತಿಸಲಾಗಿದೆ.

ವಾಹನ ತಪಾಸಣೆ ವೇಳೆ ಕಬ್ಬಿಣ ಸಾಗಿಸುತ್ತಿದ್ದ ಲಾರಿ ಚಾಲಕ ಸಯ್ಯದ್ ಅಪ್ರೋಜ್ ಅವರಿಂದ ₹5,000 ಲಂಚ ಪಡೆದ ಆರೋಪ ಸೋಮಶೇಖರ್ ಅವರ ಮೇಲಿದೆ. ಪ್ರಕರಣ ದಾಖಲಿಸಿದರೆ ನ್ಯಾಯಾಲಯದಲ್ಲಿ ದಂಡ ಪಾವತಿಸಬೇಕಾಗುತ್ತದೆ ಎಂದು ಬೆದರಿಸಿ ಹಣ ಪಡೆದಿದ್ದಾರೆ ಎನ್ನಲಾಗಿದೆ.

ಲಂಚ ನೀಡುವ ವೇಳೆ ಲಾರಿ ಚಾಲಕ ಅಪ್ರೋಜ್ ತನ್ನ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದು, ಬಳಿಕ ಅದನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ವಿಡಿಯೋ ಪರಿಶೀಲಿಸಿದ ಬಳಿಕ ಕರ್ತವ್ಯ ಲೋಪ ಹಾಗೂ ಲಂಚ ಸ್ವೀಕಾರದ ಆರೋಪದಡಿ ಹೆಡ್ ಕಾನ್ಸ್‌ಟೇಬಲ್ ಸೋಮಶೇಖರ್ ಅವರನ್ನು ಅಮಾನತು ಮಾಡಲಾಗಿದೆ.

ಘಟನೆ ಕುರಿತು ಇಲಾಖಾ ಮಟ್ಟದಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ.

NEET ವಿವಾದದ ಬಳಿಕ ಕೇಂದ್ರ ಸಂಪುಟದಲ್ಲಿ ಬದಲಾವಣೆ; ಪ್ರಲ್ಹಾದ್ ಜೋಶಿಗೆ ಶಿಕ್ಷಣ ಖಾತೆ!

0

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೀಡಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದಾರೆ.

ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯ ಮೇರೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ಕುರಿತು ರಾಷ್ಟ್ರಪತಿ ಭವನದಿಂದ ಅಧಿಕೃತ ಆದೇಶ ಹೊರಬಿದ್ದಿದೆ.

ಪ್ರಲ್ಹಾದ್ ಜೋಶಿ ಅವರು ಈಗಾಗಲೇ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರ ಜೊತೆಗೆ ಶಿಕ್ಷಣ ಸಚಿವಾಲಯದ ಜವಾಬ್ದಾರಿಯನ್ನೂ ನಿಭಾಯಿಸಲಿದ್ದಾರೆ.

ಕರ್ನಾಟಕದ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಪ್ರಲ್ಹಾದ್ ಜೋಶಿ ಅವರು ಈ ಹಿಂದೆ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಇದೀಗ ದೇಶದ ಶಿಕ್ಷಣ ಕ್ಷೇತ್ರದ ಮಹತ್ವದ ಜವಾಬ್ದಾರಿ ಅವರ ಹೆಗಲೇರಿದೆ.

ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ! ಬನಶಂಕರಿ ಸಮೀಪದ ಕರಿಯಣ್ಣಪಾಳ್ಯದಲ್ಲಿ ಆತಂಕ!

ಬೆಂಗಳೂರು: ಬೆಂಗಳೂರಿನ ಬನಶಂಕರಿ ಸಮೀಪದ ಕರಿಯಣ್ಣಪಾಳ್ಯದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಶನಿವಾರ ಸಂಜೆ ಸುಮಾರು 7 ಗಂಟೆ ವೇಳೆಗೆ ಕರಿಯಣ್ಣಪಾಳ್ಯದಲ್ಲಿ ಚಿರತೆ ಕಾಣಿಸಿಕೊಂಡಿದೆ. ಚಿರತೆಯನ್ನು ಕಂಡ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯ ಸಂಚಾರದ ಬಗ್ಗೆ ಮಾಹಿತಿ ಕಲೆಹಾಕಲಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಗತ್ಯವಿದ್ದಲ್ಲಿ ಚಿರತೆಯನ್ನು ಸೆರೆಹಿಡಿಯಲು ಬೋನು ಅಳವಡಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಇಎಲ್ ಲೇಔಟ್ ಪ್ರದೇಶದಲ್ಲಿಯೂ ಚಿರತೆ ಕಾಣಿಸಿಕೊಂಡಿತ್ತು. ಅದರ ಸಂಚಾರದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಇದೀಗ ಬನಶಂಕರಿ ಸಮೀಪವೂ ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಚಿರತೆ ಕಂಡುಬಂದರೆ ಅದರ ಸಮೀಪ ಹೋಗದೆ, ತಕ್ಷಣ ಅರಣ್ಯ ಇಲಾಖೆ ಅಥವಾ ಪೊಲೀಸರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿಲ್ಲಾ ವಿಕಾಸ ವೇದಿಕೆ ಸ್ವಾಗತ

0

ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿರುವುದನ್ನು ಸ್ವಾಗತಿಸಿರುವ ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ, ವಿದ್ಯಾರ್ಥಿಗಳ ಹೋರಾಟಕ್ಕೆ ಇದು ಸಂದ ಜಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಶಿಕ್ಷಣ ಇಲಾಖೆಯ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲ ವ್ಯಕ್ತಿಗೆ ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದ ದೇಶದಾದ್ಯಂತ ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಪರೀಕ್ಷಾ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆಯಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಪಾರದರ್ಶಕ ಹಾಗೂ ವಿಶ್ವಾಸಾರ್ಹ ಪರೀಕ್ಷಾ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ದೇಶದಾದ್ಯಂತ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳು ಎಲ್ಲರಿಗೂ ಕೈಗೆಟುಕುವ ದರದಲ್ಲಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ನೀಟ್ ಅಕ್ರಮ ಖಂಡಿಸಿ ರಾಷ್ಟ್ರಪತಿಗೆ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸ್ವಾಭಿಮಾನಿ ಮಹಿಳಾ ವೇದಿಕೆ ವತಿಯಿಂದ ಶನಿವಾರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಗದಗ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಕರ್ನಾಟಕ ಸ್ವಾಭಿಮಾನಿ ಮಹಿಳಾ ವೇದಿಕೆ ರಾಜ್ಯಾಧ್ಯಕ್ಷೆ ವಿಜಯಲಕ್ಷ್ಮಿ ಅಸೂಟಿ, ದೆಹಲಿಯ ಜಂತರ್‌ಮಂತರ್‌ನಲ್ಲಿ ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದು, ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು.

ವಿದ್ಯಾರ್ಥಿಗಳಿಗೆ ಮರುಪರೀಕ್ಷೆಗೆ ಅವಕಾಶ ಕಲ್ಪಿಸಬೇಕು ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿಗಳ ಮೇಲೆ ನಡೆದಿರುವ ದೌರ್ಜನ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ಕೇಂದ್ರ ಗೃಹ ಸಚಿವ ಅಮಿತ್ ಶಾ ವಿದ್ಯಾರ್ಥಿಗಳ ರಕ್ಷಣೆಯಲ್ಲಿ ವಿಫಲರಾಗಿದ್ದು, ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಬೇಕು. ಸಂವಿಧಾನದ ಮೇಲೆ ಜನರ ವಿಶ್ವಾಸ ಉಳಿಯುವಂತೆ ರಾಷ್ಟ್ರಪತಿಗಳು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ತಕ್ಷಣ ಮಧ್ಯಪ್ರವೇಶಿಸದಿದ್ದರೆ ರಾಜ್ಯದ ವಿದ್ಯಾರ್ಥಿಗಳೊಂದಿಗೆ ಸೇರಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ವಿಜಯಲಕ್ಷ್ಮಿ ಅಸೂಟಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಮಮತಾಜ್ ಕಟ್ಟಿಮನಿ, ರಾಜ್ಯ ಸಂಘಟನಾ ಕಾರ್ಯದರ್ಶಿ ವಂಗೆಮ್ಮ ಎಚ್. ದೊಡ್ಡಮನಿ, ಹುಬ್ಬಳ್ಳಿ–ಧಾರವಾಡ ಜಿಲ್ಲಾಧ್ಯಕ್ಷೆ ಜುಬೇದಾ ನದಾಫ್, ರಾಜ್ಯ ಉಪಾಧ್ಯಕ್ಷೆ ಬೇಗಂ ಹವಾಲ್ದಾರ, ರಾಜ್ಯ ಸಂಘಟನಾ ಕಾರ್ಯದರ್ಶಿ ಚಿನ್ನಮ್ಮ ವಡ್ಡರ, ಸಂಗಮ್ಮ ಅಂಗಡಿ, ನೀಲಮ್ಮ ಗಾಜಿ, ಕಲಾಶ್ರೀ (ಬಾಗಲಕೋಟೆ ಜಿಲ್ಲಾಧ್ಯಕ್ಷೆ), ಬಸೀರಾ, ಸೋಫಿಯಾ, ವಜ್ರೇಶ್ವರಿ, ನಾಗರತ್ನ, ಚಿನ್ನಮ್ಮ, ಮಾಲನಬಿ ಕಣಗಿನಹಾಳ, ಲಾಡಬಿ ಕಲ್ಮನಿ, ಮೈರೂನ, ಗಂಗವ್ವ ವಡ್ಡರ, ವಿದ್ಯಾ, ಶ್ರೇಯಾ, ಶಂಶಾದ್ ಬೇಗಂ, ಪ್ಯಾರಿಜಾನ್, ಭಾರತಿ, ಫರಿದಾ, ಹಮೀದಾ, ದಾವಲಬಿ, ನಿರ್ಮಲಾ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

“ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಮರುಪರೀಕ್ಷೆ ನಡೆಸಬೇಕು ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು.”

– ವಿಜಯಲಕ್ಷ್ಮಿ ಅಸೂಟಿ, ರಾಜ್ಯಾಧ್ಯಕ್ಷೆ, ಕರ್ನಾಟಕ ಸ್ವಾಭಿಮಾನಿ ಮಹಿಳಾ ವೇದಿಕೆ

ಆಷಾಢ ಏಕಾದಶಿಗೆ 108 ಪೂರ್ಣಕುಂಭ ಜಲಾಭಿಷೇಕ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಆಷಾಢ ಶುದ್ಧ ಏಕಾದಶಿ ಅಂಗವಾಗಿ ಶನಿವಾರ ಸೊರಟೂರಿನ ಆರಾಧ್ಯದೈವ ಶ್ರೀ ಕಾಲಭೈರವೇಶ್ವರ ದೇವರಿಗೆ 108 ಪೂರ್ಣಕುಂಭ ಜಲಾಭಿಷೇಕ ಹಾಗೂ ಮಹಾರುದ್ರಾಭಿಷೇಕ ಭಕ್ತಿಭಾವದಿಂದ ನೆರವೇರಿತು.

ಬೆಳಿಗ್ಗೆ ಗ್ರಾಮದ ಸದ್ಭಕ್ತರು ಹಾಗೂ ಮುತ್ತೈದೆಯರು ಸಕಲ ವಾದ್ಯಮೇಳಗಳೊಂದಿಗೆ ಕಾಲಭೈರವೇಶ್ವರ ಗುಡ್ಡಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗಂಗಾಜಲವನ್ನು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತಂದು 108 ಪೂರ್ಣಕುಂಭ ಜಲಾಭಿಷೇಕ ಹಾಗೂ ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ಇತಿಹಾಸದ ಪ್ರಕಾರ, ಸೊರಟೂರಿನಲ್ಲಿ ಸುಮಾರು 9ನೇ ಶತಮಾನದಲ್ಲಿ ಬೃಹತ್ ಏಕಶಿಲೆಯ ಶ್ರೀ ಕಾಲಭೈರವೇಶ್ವರ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವ ಗ್ರಾಮದ ಅಧಿದೇವತೆಯಾಗಿ ಕಾಲಭೈರವೇಶ್ವರ ನೆಲೆಸಿದ್ದಾನೆ ಎಂಬ ನಂಬಿಕೆ ಭಕ್ತರಲ್ಲಿದೆ.

ಹಿಂದೆ ಗ್ರಾಮದಲ್ಲಿ ಪ್ಲೇಗ್ ಮಹಾಮಾರಿ ಕಾಣಿಸಿಕೊಂಡ ಸಂದರ್ಭದಲ್ಲಿ ದೇವರ ಕೃಪೆಯಿಂದ ಪ್ರತಿ ವರ್ಷ ಆಷಾಢ ಶುದ್ಧ ಏಕಾದಶಿಯಂದು 108 ಪೂರ್ಣಕುಂಭ ಜಲಾಭಿಷೇಕ ನೆರವೇರಿಸುವ ಸಂಪ್ರದಾಯ ಆರಂಭವಾಗಿದ್ದು, ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ದೇವಸ್ಥಾನದ ಅರ್ಚಕ ಪರಶುರಾಮ ಹೂಗಾರ ತಿಳಿಸಿದರು.

ದೇವರ ಕೈಯಲ್ಲಿರುವ ಕವಣಿಗೆ ಸಂಬಂಧಿಸಿದ ಹಲವು ಐತಿಹ್ಯಗಳು ಇಂದಿಗೂ ಗ್ರಾಮದಲ್ಲಿ ಪ್ರಚಲಿತದಲ್ಲಿದ್ದು, ಪ್ರತಿವರ್ಷ ಹೊಸ ಕವಣಿಯನ್ನು ಅಳವಡಿಸುವ ಸಂಪ್ರದಾಯವೂ ಮುಂದುವರಿದಿದೆ.

“ಆಷಾಢ ಶುದ್ಧ ಏಕಾದಶಿಯಂದು 108 ಪೂರ್ಣಕುಂಭ ಜಲಾಭಿಷೇಕ ನಡೆಸುವ ಸಂಪ್ರದಾಯ ಹಲವು ದಶಕಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಇದು ಗ್ರಾಮಸ್ಥರ ಭಕ್ತಿ ಮತ್ತು ನಂಬಿಕೆಯ ಸಂಕೇತವಾಗಿದೆ.”

– ಪರಶುರಾಮ ಹೂಗಾರ, ಅರ್ಚಕರು