Home Blog Page 37

ಆರೋಗ್ಯ ಸಿಬ್ಬಂದಿಗೆ ಒಪಿಎಸ್ ಭರವಸೆ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸುವ ನಿಟ್ಟಿನಲ್ಲಿ ಪೂರ್ವಸಿದ್ಧತೆಗಳು ನಡೆಯುತ್ತಿವೆ. ಜೊತೆಗೆ 24×7 ಸೇವೆ ಸಲ್ಲಿಸುವ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಆರೋಗ್ಯ ಸುರಕ್ಷತಾ ಅಧಿಕಾರಿಗಳಿಗೆ ಕೆಎಎಂಎಸ್ (KAAMS) ಆನ್‌ಲೈನ್ ಹಾಜರಾತಿ ವ್ಯವಸ್ಥೆಯಿಂದ ವಿನಾಯಿತಿ ನೀಡುವ ಕುರಿತು ರಾಜ್ಯ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಹೇಳಿದರು.

ನಗರದ ರಾಯಲ್ ವಿಲ್ಲಾ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಕೇಂದ್ರ ಸಂಘ, ಬೆಂಗಳೂರು ಹಾಗೂ ಗದಗ ಜಿಲ್ಲಾ ಶಾಖೆ ವತಿಯಿಂದ ಆಯೋಜಿಸಿದ್ದ ಆರೋಗ್ಯ ಇಲಾಖೆ ನೌಕರರ ಕಾರ್ಯಕ್ಷಮತೆ ವಿಚಾರ ಸಂಕಿರಣ ಮತ್ತು ಪದೋನ್ನತಿ ಪಡೆದ ಅಧಿಕಾರಿಗಳು ಹಾಗೂ ನೌಕರರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯ ಇಲಾಖೆ ಸಿಬ್ಬಂದಿ ಜೀವದ ಹಂಗು ತೊರೆದು ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಸಿಬ್ಬಂದಿಯ ಕಾರ್ಯಕ್ಷಮತೆ ಹೆಚ್ಚಿಸಲು ಕಾಲಕಾಲಕ್ಕೆ ತರಬೇತಿ ನೀಡುವುದು ಅಗತ್ಯವಾಗಿದೆ. ಸರ್ಕಾರಿ ನೌಕರರ ಸಮಸ್ಯೆಗಳ ಪರಿಹಾರ ಹಾಗೂ ಹಿತರಕ್ಷಣೆಗೆ ರಾಜ್ಯ ಸರ್ಕಾರಿ ನೌಕರರ ಸಂಘ ಸದಾ ಬದ್ಧವಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾ ಕಾರ್ಯಾಧ್ಯಕ್ಷ ಸಿದ್ದಪ್ಪ ಎನ್. ಲಿಂಗದಾಳ ಮಾತನಾಡಿ, ಆರೋಗ್ಯ ಸೇವೆಯನ್ನು ದೇವರ ಸೇವೆಯೆಂದು ಭಾವಿಸಿ ಬಡವರು-ಶ್ರೀಮಂತರು ಎಂಬ ಭೇದವಿಲ್ಲದೆ ಸೇವೆ ಸಲ್ಲಿಸಬೇಕು. ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ಪ್ರತಿಯೊಬ್ಬರಿಗೂ ಹೆಮ್ಮೆಯ ಸಂಗತಿ ಎಂದರು.

ಗದಗ ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಡಾ. ರಾಜೇಂದ್ರ ಗಡಾದ ಪ್ರಾಸ್ತಾವಿಕವಾಗಿ ಮಾತನಾಡಿ, ಸಾರ್ವಜನಿಕರಿಗೆ ಕರುಣೆ, ಅಕ್ಕರೆ ಮತ್ತು ಆತ್ಮೀಯತೆಯಿಂದ ಆರೋಗ್ಯ ಸೇವೆ ನೀಡುವುದು ಆರೋಗ್ಯ ಸಿಬ್ಬಂದಿಯ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಡಾ. ಆರ್.ಸಿ. ಬಸರಿಗಿಡದ ಹಾಗೂ ಡಾ. ಜಿ.ಎಸ್. ಪಲ್ಲೇದ ಮಾತನಾಡಿ, ಪದೋನ್ನತಿ, ವರ್ಗಾವಣೆ ಹಾಗೂ ನಿವೃತ್ತಿ ಹೊಂದಿದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಿರುವ ಸಂಘದ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಿಕಾರ್ಜುನ ಎಫ್. ಕಲಕಂಬಿ ವಹಿಸಿದ್ದರು. ಆಹಾರ ಸುರಕ್ಷತಾ ಅಧಿಕಾರಿ ವಿವೇಕ ತಿರುಮಲ್ಲೆ, ಅಜಯಕುಮಾರ ಕಲಾಲ, ಸರೋಜಾ ಕಟ್ಟಿಮನಿ, ವೈ.ಎನ್. ಕಡೇಮನಿ, ಬಿ.ಸಿ. ಹಿರೇಹಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನೂತನ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಜಿ.ಎಸ್. ಪಲ್ಲೇದ, ನಿವೃತ್ತ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಆರ್.ಸಿ. ಬಸರಿಗಿಡದ, ಜೆ.ಡಿ. ಯರಗುಡಿ ಸೇರಿದಂತೆ ಪದೋನ್ನತಿ, ವರ್ಗಾವಣೆ ಹಾಗೂ ನಿವೃತ್ತಿ ಹೊಂದಿದ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು.

ಕೆ.ವಿ. ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಮುತ್ತಪ್ಪ ಹಟ್ಟಿಮನಿ ಸ್ವಾಗತಿಸಿದರು. ಎಸ್.ಬಿ. ಗಡಾದ ವಂದಿಸಿದರು.

“ರಾಜ್ಯ ಸರ್ಕಾರಿ ನೌಕರರಿಗೆ ಒಪಿಎಸ್ ಜಾರಿಗೆ ಪೂರ್ವಸಿದ್ಧತೆ ನಡೆದಿದೆ. ಆರೋಗ್ಯ ಸಿಬ್ಬಂದಿಗೆ ಕೆಎಎಂಎಸ್ ಹಾಜರಾತಿ ವ್ಯವಸ್ಥೆಯಿಂದ ವಿನಾಯಿತಿ ನೀಡುವ ಕುರಿತು ರಾಜ್ಯ ಮಟ್ಟದಲ್ಲಿ ಚರ್ಚಿಸುತ್ತೇನೆ.”

– ಡಾ. ಬಸವರಾಜ ಬಳ್ಳಾರಿ, ರಾಜ್ಯ ಉಪಾಧ್ಯಕ್ಷ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ

ಗ್ರಾಮಗಳ ಅಭಿವೃದ್ಧಿಯಿಂದಲೇ ದೇಶದ ಪ್ರಗತಿ ಸಾಧ್ಯ: ಮಿಥುನ ಜಿ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯೇ ದೇಶದ ಪ್ರಗತಿಗೆ ಭದ್ರ ಅಡಿಪಾಯವಾಗಿದ್ದು, ಜನಪರ ಯೋಜನೆಗಳ ಮೂಲಕ ಗ್ರಾಮೀಣ ಜನರ ಬದುಕನ್ನು ಬಲಪಡಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ರೋಣ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ ಜಿ. ಪಾಟೀಲ ಹೇಳಿದರು.

ಡಂಬಳ ಹೋಬಳಿಯ ಬರದೂರು ಗ್ರಾಮದಲ್ಲಿ ಕಾಶೀಲಿಂಗೇಶ್ವರ ದೇವಸ್ಥಾನ ಸಮೀಪದ ಬೆಳಗಟ್ಟಿಗೆ ಸಂಪರ್ಕಿಸುವ ರಸ್ತೆ ಹಾಗೂ ಎಸ್‌ಸಿ ಕಾಲೋನಿಯಲ್ಲಿ ₹75 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ, ಬಳಿಕ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಡೆಸ್ಕ್, ಶಾಲಾ ಬ್ಯಾಗ್ ಹಾಗೂ ನೋಟ್‌ಬುಕ್ ವಿತರಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಯುವನಿಧಿ ಹಾಗೂ ಗೃಹಜ್ಯೋತಿ ಯೋಜನೆಗಳಿಗೆ ವಾರ್ಷಿಕ ₹56 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಈ ಯೋಜನೆಗಳು ಜನಸಾಮಾನ್ಯರ ಜೀವನಮಟ್ಟ ಸುಧಾರಿಸಲು ನೆರವಾಗುತ್ತಿವೆ ಎಂದು ಹೇಳಿದರು.

ಮುಂಡರಗಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ ಮಾತನಾಡಿ, ಪಂಚಾಯತ್ ರಾಜ್ ವ್ಯವಸ್ಥೆ ಗ್ರಾಮೀಣ ಅಭಿವೃದ್ಧಿಗೆ ಬಲ ನೀಡಿದ್ದು, ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ಮತ್ತು ಸಂಪನ್ಮೂಲ ದೊರೆತಾಗ ಮಾತ್ರ ಗ್ರಾಮಗಳ ಅಭಿವೃದ್ಧಿ ವೇಗ ಪಡೆಯುತ್ತದೆ ಎಂದು ಹೇಳಿದರು.

ಮುಖಂಡ ಪ್ರಕಾಶ ಸಜ್ಜನ ಮಾತನಾಡಿ, ಬರದೂರು ಗ್ರಾಮದ ಅಭಿವೃದ್ಧಿಗೆ ಶಾಸಕ ಜಿ.ಎಸ್. ಪಾಟೀಲ ವಿಶೇಷ ಅನುದಾನ ಒದಗಿಸಿದ್ದು, ರಸ್ತೆ, ಕೆರೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳ ಮೂಲಕ ರೈತರ ಹಿತ ಕಾಪಾಡುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇಒ ವಿಜಯಕುಮಾರ ಬೆಣ್ಣಿ, ಅಭಿಯಂತರರಾದ ನಾಗರಾಜ, ನಿಂಗಪ್ಪ ತೋಟಪ್ಪನವರ, ಗೌಸುಸಾಬ ದೋಟಿಹಾಳ, ಶರಣಪ್ಪ ಕಲ್ಲಹಳ್ಳಿ, ಮಂಜಪ್ಪ ಬೆಳಗಟ್ಟಿ, ಯಮನಪ್ಪ ಚುಂಗಿನ, ಸೋಮು ಹೈತಾಪುರ, ಪ್ರಕಾಶ ನಾಡಗೌಡರ, ಈಶಪ್ಪ ಗೋಡಿ, ಅಮರೇಶ ಹಿರೇಮಠ, ನಾಗರಾಜ ಸಜ್ಜನ, ಯಮನಪ್ಪ ಹಳ್ಳಿಕೇರಿ, ದುರಗವ್ವ ತಳಗೇರಿ, ಮಂಜಪ್ಪ ಕುರಿ, ಶಂಕ್ರಪ್ಪ ಮ್ಯಾಗೇರಿ, ದೇವಪ್ಪ ಶಿರೂರ, ಬಸಪ್ಪ ಮೇಟಿ, ಮಲ್ಲೇಶ ಕಟ್ಟಿಮನಿ, ಶ್ರೀಕಾಂತ ಜನಸೂರ, ನಿಂಗಪ್ಪ ಗೋಡಿ, ನೀಲಪ್ಪ ಶಿರೋಳ, ವೀರೇಶ ರೋಣದ, ಹಂಚಾಳಪ್ಪ ಉಪ್ಪಾರ, ನಿಂಗಪ್ಪ ತಳಗೇರ, ಬಸವರಾಜ ಬಾರಕೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಗ್ರಾಮಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಜನರ ಬದುಕಿನ ಗುಣಮಟ್ಟ ಸುಧಾರಿಸುವುದೇ ಸರ್ಕಾರದ ಯೋಜನೆಗಳ ಮುಖ್ಯ ಉದ್ದೇಶ.”

– ಮಿಥುನ ಜಿ. ಪಾಟೀಲ, ರೋಣ ಗ್ಯಾರಂಟಿ ಸಮಿತಿ ಅಧ್ಯಕ್ಷ

ಅಂಗಾಂಗ ದಾನದಿಂದ ಜೀವದಾನ ಸಾಧ್ಯ: ಡಾ. ಎಚ್.ಕೆ. ಪಾಟೀಲ್

0

ವಿಜಯಸಾಕ್ಷಿ ಸುದ್ದಿ, ಗದಗ: ಅಂಗಾಂಗ ದಾನವು ನಿಸ್ವಾರ್ಥ ಸೇವೆಯ ಪ್ರತೀಕವಾಗಿದ್ದು, ಒಬ್ಬ ದಾನಿಯ ಮೂಲಕ ಎಂಟು ಜನರ ಜೀವ ಉಳಿಸಲು ಸಾಧ್ಯ. ಆದ್ದರಿಂದ ಅಂಗಾಂಗ ದಾನದ ಕುರಿತು ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಮಾಜಿ ಸಚಿವ ಹಾಗೂ ಗದಗ ಶಾಸಕ ಡಾ. ಎಚ್.ಕೆ. ಪಾಟೀಲ್ ಹೇಳಿದರು.

ವಿಶ್ವ ಅಂಗಾಂಗ ದಾನ ದಿನದ ಅಂಗವಾಗಿ ಎಚ್.ಕೆ. ಪಾಟೀಲ್ ಸೇವಾ ತಂಡದ ವತಿಯಿಂದ ಆಯೋಜಿಸಿದ್ದ ಆನ್‌ಲೈನ್ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಮರಣಾನಂತರ ದೇಹವನ್ನು ದಾನ ಮಾಡುವ ಮೂಲಕ ಇನ್ನೊಬ್ಬರ ಬದುಕಿಗೆ ಹೊಸ ಆಶಾಕಿರಣ ನೀಡಬಹುದು. ಅಂಗಾಂಗಗಳ ಕೊರತೆಯಿಂದ ಪ್ರತಿವರ್ಷ ಸಾವಿರಾರು ಮಂದಿ ಜೀವ ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಈ ಕುರಿತು ಜನಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಎಚ್.ಕೆ. ಪಾಟೀಲ್ ಸೇವಾ ತಂಡದ ಅಧ್ಯಕ್ಷ ಪ್ರಭು ಬುರಬುರೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಕ್ತದಾನ ಹಾಗೂ ಅಂಗಾಂಗ ದಾನದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಡಾ. ಎಸ್.ಆರ್. ನಾಗನೂರ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಸಿದ್ದಲಿಂಗೇಶ ಪಾಟೀಲ್, ಡಾ. ವೆಂಕಟೇಶ್ ರಾಠೋಡ್, ದೇವೇಂದ್ರ ಕಳಸಾಪೂರ, ಡಾ. ಪ್ಯಾರಾಅಲಿ ನೂರಾನಿ, ಮಹಮ್ಮದ್ ಝಫರ್ ಖಾಜಿ, ಶಿವಪ್ಪ ಬಳ್ಳಾರಿ, ಡಾ. ಸ್ಟೀಫನ್, ಡಾ. ಬಸಯ್ಯ, ರಾಘವೇಂದ್ರ ಪಾಲನಕರ, ಸಮೀರ್ ಕೊಟ್ಟೂರು, ದಾದಾಪೀರ ಮುಂಡರಗಿ, ವಿಜಯಕುಮಾರ ಹಾಲಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಒಬ್ಬ ಅಂಗಾಂಗ ದಾನಿಯಿಂದ ಎಂಟು ಜನರ ಜೀವ ಉಳಿಯಬಹುದು. ಅಂಗಾಂಗ ದಾನವು ಪರೋಪಕಾರ ಮತ್ತು ನಿಸ್ವಾರ್ಥ ಸೇವೆಯ ಅತ್ಯುನ್ನತ ರೂಪವಾಗಿದೆ.”

– ಡಾ. ಎಚ್.ಕೆ. ಪಾಟೀಲ್, ಶಾಸಕ

ಪತ್ರಿಕಾರಂಗ, ವೈದ್ಯ ವೃತ್ತಿ ಸಮಾಜದ ಎರಡು ಕಣ್ಣುಗಳು: ಆನಂದಯ್ಯ ವಿರಕ್ತಮಠ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪತ್ರಿಕಾರಂಗ ಮತ್ತು ವೈದ್ಯ ವೃತ್ತಿ ಸಮಾಜದ ಎರಡು ಕಣ್ಣುಗಳಿದ್ದಂತೆ. ಪತ್ರಕರ್ತರು ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಿದರೆ, ವೈದ್ಯರು ಜೀವ ಉಳಿಸುವ ಮೂಲಕ ಸಮಾಜದ ಆರೋಗ್ಯ ಕಾಪಾಡುತ್ತಾರೆ ಎಂದು ಜನಶ್ರೀ ಟೈಮ್ಸ್ ವಾಹಿನಿಯ ಸಂಪಾದಕ ಆನಂದಯ್ಯ ವಿರಕ್ತಮಠ ಹೇಳಿದರು.

ಪಟ್ಟಣದ ಎಸ್‌ಜೆಜೆಎಂ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಮುಳಗುಂದ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬಾಲಲೀಲಾ ಮಹಾಂತ ಶಿವಯೋಗಿ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ವೈದ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಮಾತನಾಡಿ, ಪ್ರಾಚೀನ ಕಾಲದಿಂದಲೂ ಸಂದೇಶ ರವಾನಿಸುವ ಮಾಧ್ಯಮವಾಗಿ ಪತ್ರಿಕಾರಂಗದ ಪರಿಕಲ್ಪನೆ ಇತ್ತು. ಇಂದಿನ ದಿನಗಳಲ್ಲಿ ಪತ್ರಿಕೆಗಳು ಸಮಾಜಕ್ಕೆ ಜ್ಞಾನ ನೀಡುವ ಪ್ರಮುಖ ಮಾಧ್ಯಮವಾಗಿದ್ದು, ಮಕ್ಕಳು ಪ್ರತಿದಿನ ಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಡಾ. ಎಸ್.ಸಿ. ಚವಡಿ ಮಾತನಾಡಿ, ಪತ್ರಕರ್ತರು ವಸ್ತುನಿಷ್ಠ ಮತ್ತು ನಿಖರ ಮಾಹಿತಿಯನ್ನು ಸಮಾಜಕ್ಕೆ ತಲುಪಿಸುವ ಜವಾಬ್ದಾರಿ ಹೊಂದಿದ್ದಾರೆ. ವೈದ್ಯರನ್ನು ಸಮಾಜ ದೇವರ ಸಮಾನವಾಗಿ ಕಾಣುವುದರಿಂದ ವೈದ್ಯರು ತಮ್ಮ ವೃತ್ತಿಯ ಘನತೆಯನ್ನು ಕಾಪಾಡಿಕೊಂಡು ಸೇವೆ ಸಲ್ಲಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಡಿ. ಬಟ್ಟೂರ ವಹಿಸಿದ್ದರು. ಶರಣು ದೊಡ್ಡೂರ, ಸಿಪಿಐ ಬಿ.ಜಿ. ಸುಬ್ಬಾಪೂರಮಠ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ರಾಜು ಹೆಬ್ಬಳ್ಳಿ, ಮುಳಗುಂದ ಘಟಕದ ಅಧ್ಯಕ್ಷ ಮಹೇಶ ಛಬ್ಬಿ, ಪ್ರಾಚಾರ್ಯ ಎ.ಎಂ. ಅಂಗಡಿ, ಮುತ್ತು ಕುರಬಗೌಳಿ, ವಿ.ಡಿ. ಕಣವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

“ಪತ್ರಿಕಾರಂಗ ಸಮಾಜದ ಅಂಕುಡೊಂಕು ತಿದ್ದುವ ಶಕ್ತಿಯಾಗಿದ್ದರೆ, ವೈದ್ಯ ವೃತ್ತಿ ಜೀವ ಉಳಿಸುವ ಸೇವೆಯಾಗಿದೆ. ಇವೆರಡೂ ಸಮಾಜದ ಎರಡು ಕಣ್ಣುಗಳಂತೆ ಕಾರ್ಯನಿರ್ವಹಿಸುತ್ತವೆ.”

ಆನಂದಯ್ಯ ವಿರಕ್ತಮಠ, ಸಂಪಾದಕರು, ಜನಶ್ರೀ ಟೈಮ್ಸ್

ಗದಗದ ₹44 ಲಕ್ಷ ಮನೆಗಳ್ಳತನ ಮಿಸ್ಟರಿ ಬಯಲು; ಮೂವರು ಅಂತರ ಜಿಲ್ಲಾ ಕಳ್ಳರ ಬಂಧನ- ಎಸ್ಪಿ ರೋಹನ್ ಜಗದೀಶ್ ಮಾಹಿತಿ

ಗದಗ: ನಗರದ ಉದಯನಗರದಲ್ಲಿ ನಡೆದಿದ್ದ ಸುಮಾರು ₹44 ಲಕ್ಷ ಮೌಲ್ಯದ ಮನೆಗಳ್ಳತನ ಪ್ರಕರಣವನ್ನು ಗದಗ ನಗರ ಪೊಲೀಸರು ಭೇದಿಸಿ, ಅಂತರ ಜಿಲ್ಲಾ ಕಳ್ಳರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ₹42.73 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಸಾಮಾನು ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ತಿಳಿಸಿದರು.

ನಗರದ ಉದಯನಗರ 1ನೇ ಕ್ರಾಸ್‌ನ ಕ್ಲರ್ಕ್ಸ್ ಇನ್ ಹಿಂಭಾಗದಲ್ಲಿರುವ ಮಂಜುನಾಥ ತಂದೆ ಷಣ್ಮುಖಸಾ ಬಸವಾ ಅವರ ಮನೆಯಲ್ಲಿ ಮೇ 6ರಿಂದ 8ರ ನಡುವಿನ ಅವಧಿಯಲ್ಲಿ ಕಳ್ಳರು ಬೀಗ ಮುರಿದು ನುಗ್ಗಿ, 342 ಗ್ರಾಂ ಚಿನ್ನಾಭರಣ, 1,970 ಗ್ರಾಂ ಬೆಳ್ಳಿ ಸಾಮಾನು ಹಾಗೂ ₹8.50 ಲಕ್ಷ ನಗದು ದೋಚಿ ಪರಾರಿಯಾಗಿದ್ದರು. ಈ ಕುರಿತು ಗದಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್‌ಪಿ ರೋಹನ್ ಜಗದೀಶ್ ಹಾಗೂ ಡಿವೈಎಸ್‌ಪಿ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಯಿತು. ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂಗಮೇಶ ವಿ. ಶಿವಯೋಗಿ, ಬೆಟಗೇರಿ ವೃತ್ತದ ಇನ್ಸ್‌ಪೆಕ್ಟರ್ ಧೀರಜ್ ಶಿಂಧೆ, ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಲ್.ಕೆ. ಜೂಲಕಟ್ಟಿ, ಪಿಎಸ್‌ಐ ಬಿ.ಟಿ. ರಿತ್ತಿ, ಪಿಎಸ್‌ಐ ರೇಣುಕಾ ಮುಂಡೇವಾಡಗಿ ಸೇರಿದಂತೆ ನಗರ ಠಾಣೆ, ತಾಂತ್ರಿಕ ವಿಭಾಗ, ಸಿಇಎನ್ ಠಾಣೆ ಹಾಗೂ ಇತರ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿದರು.

ಈ ಕಾರ್ಯಾಚರಣೆಯಲ್ಲಿ ಗುರು ಬೂದಿಹಾಳ, ಆನಂದ್ ಸಿಂಗ್ ದೊಡ್ಡಮನಿ, ವಿ.ಎಸ್. ಶೆಟ್ಟೆಣ್ಣವರ, ಎಸ್.ಎಸ್. ಮಾವಿನಕಾಯಿ, ಉಮೇಶ್ ಸುಣಗಾರ, ಶರಣಪ್ಪ ನಾಗೇಂದ್ರಗಡ, ಕುಮಾರ ತಿಗರಿ, ಕಲಂದರ್ ನದಾಫ್, ಲಕ್ಷ್ಮೇಶ್ವರ ಠಾಣೆಯ ಸಿಬ್ಬಂದಿ, ಸಂಜೀವ ಕೊರಡೂರು (ಟೆಕ್ನಿಕಲ್ ಸೆಲ್), ಅಣ್ಣಪ್ಪ ಕವಲೂರು, ಹನುಮಂತ ಯಾಡಿಯಾಪೂರ, ಪ್ರಕಾಶ ಉಮಚಗಿ, ವೀರಪ್ಪ ಗೌಡನಾಯ್ಕರ, ಗಣೇಶ್ ತಳವಾರ, ಕಾರ್ತಿಕ ಮಂಗಳಿ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಶೇಷ ತನಿಖಾ ತಂಡವು, ತಾಂತ್ರಿಕ ಮಾಹಿತಿ ಹಾಗೂ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಹಮ್ಮದರಫೀಕ್ ತಂದೆ ಇಸ್ಮಾಯಿಲ್ (36) – ಬಂಟ್ವಾಳ (ದಕ್ಷಿಣ ಕನ್ನಡ), ಇಮ್ರಾನ್ ತಂದೆ ಕುತುಬುದ್ದೀನ್ ತಿಗಡಿ (40) – ಬೈಲಹೊಂಗಲ (ಬೆಳಗಾವಿ) ಹಾಗೂ ಮೌಲಾಲಿ ತಂದೆ ಅಲ್ಲಿಸಾಬ್ ದರ್ಗಾ (34) – ಹಾನಗಲ್ (ಹಾವೇರಿ) ಎಂದು ಗುರುತಿಸಲಾಗಿದೆ. ಎರಡನೇ ಆರೋಪಿಯನ್ನು ಮೇ 24ರಂದು ಹಾಗೂ ಮೊದಲ ಮತ್ತು ಮೂರನೇ ಆರೋಪಿಗಳನ್ನು ಮೇ 28ರಂದು ಬಂಧಿಸಲಾಗಿದೆ.

ವಿಚಾರಣೆ ವೇಳೆ ಆರೋಪಿಗಳು ಉದಯನಗರದ ಮನೆಯಲ್ಲೇ ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ 330 ಗ್ರಾಂ ಚಿನ್ನಾಭರಣ (₹33.33 ಲಕ್ಷ), 750 ಗ್ರಾಂ ಬೆಳ್ಳಿ ಸಾಮಾನು (₹90 ಸಾವಿರ), ಕಳ್ಳತನಕ್ಕೆ ಬಳಸಿದ್ದ ಮಾರೂತಿ ಸುಜುಕಿ ಎರ್ಟಿಗಾ ಕಾರು (₹8 ಲಕ್ಷ) ಹಾಗೂ ಕಳವು ಹಣದಿಂದ ಖರೀದಿಸಿದ್ದ ಮಾರೂತಿ ಸುಜುಕಿ ಆಲ್ಟೋ ಎಲ್‌ಎಕ್ಸ್ಐ ಕಾರು (₹50 ಸಾವಿರ) ಸೇರಿ ಒಟ್ಟು ₹42.73 ಲಕ್ಷ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

ಅಲ್ಪಾವಧಿಯಲ್ಲೇ ಪ್ರಕರಣವನ್ನು ಭೇದಿಸಿ ಅಂತರ ಜಿಲ್ಲಾ ಕಳ್ಳರ ಜಾಲವನ್ನು ಪತ್ತೆಹಚ್ಚಿದ ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಪತ್ರಿಕಾಗೋಷ್ಠಿಯಲ್ಲಿ ಅಭಿನಂದಿಸಿದರು.

ಕೌಟುಂಬಿಕ ಕಲಹಕ್ಕೆ ಬಲಿಯಾದ ಮೂವರು: ಇಬ್ಬರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ಮಹಿಳೆ ಆತ್ಮಹತ್ಯೆ!

0

ಕೋಲಾರ: ಹಣಕಾಸಿನ ಸಮಸ್ಯೆ ಹಾಗೂ ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿ ಸಮೀಪ ನಡೆದಿದೆ.

ಬೆಗ್ಲಿಬೆಣಜೇನಹಳ್ಳಿ ಗ್ರಾಮದ ಸುರೇಶ್ ಅವರ ಪತ್ನಿ ಪ್ರಮೀಳಾ (36), ಪುತ್ರಿ ಸ್ವಪ್ನ (22) ಹಾಗೂ ಪುತ್ರ ಚರಣ್ (18) ಮೃತರಾಗಿದ್ದಾರೆ. ಒಂದೇ ಕುಟುಂಬದ ಮೂವರು ಒಂದೇ ವೇಳೆ ಸಾವನ್ನಪ್ಪಿರುವ ಘಟನೆ ಗ್ರಾಮದಲ್ಲಿ ತೀವ್ರ ದುಃಖದ ವಾತಾವರಣ ನಿರ್ಮಿಸಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಮನೆಯಲ್ಲಿನ ಹಣಕಾಸಿನ ಸಮಸ್ಯೆ ಹಾಗೂ ಸಾಲದ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಕುಟುಂಬದಲ್ಲಿ ಮನಸ್ತಾಪ ಉಂಟಾಗಿತ್ತು. ಸಾಲದ ಒತ್ತಡ ಮತ್ತು ಕೌಟುಂಬಿಕ ಕಲಹದಿಂದ ಮನನೊಂದ ಪ್ರಮೀಳಾ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಮನೆಯಿಂದ ಹೊರಬಂದು ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದು, ಎಲ್ಲಾ ಆಯಾಮಗಳಿಂದ ಪ್ರಕರಣವನ್ನು ಪರಿಶೀಲಿಸುತ್ತಿದ್ದಾರೆ.

ಇನ್ನೂ ಎರಡು ಬೇಡಿಕೆ ಈಡೇರಲಿ, ಬಳಿಕ ಮೋದಿ ಕ್ಷಮೆಯಾಚಿಸಲಿ: ವಿದ್ಯಾರ್ಥಿಗಳ ಹೋರಾಟಕ್ಕೆ ರಾಹುಲ್ ಗಾಂಧಿ ಶ್ಲಾಘನೆ

0

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇನ್ನೂ ಎರಡು ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕಿದ್ದು, ಬಳಿಕ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿರುವ ರಾಹುಲ್ ಗಾಂಧಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ದೇಶದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

ಆದರೆ ಇದೊಂದೇ ಸಾಕಾಗುವುದಿಲ್ಲ. ಇನ್ನೂ ಎರಡು ಪ್ರಮುಖ ಬೇಡಿಕೆಗಳು ಈಡೇರಬೇಕಿದ್ದು, ಅದರ ಬಳಿಕ ಪ್ರಧಾನಿ ಮೋದಿ ವಿದ್ಯಾರ್ಥಿಗಳ ಕ್ಷಮೆಯಾಚಿಸಬೇಕು. ಅಲ್ಲದೆ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ರಾಹುಲ್ ಗಾಂಧಿ ದೇಶದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, “ನಿಮ್ಮ ಬಗ್ಗೆ ನನಗೆ ಹೆಮ್ಮೆಯಿದೆ. ಪ್ರಜಾಪ್ರಭುತ್ವ, ಸಂವಿಧಾನ ಮತ್ತು ನಿಮ್ಮ ಭವಿಷ್ಯಕ್ಕಾಗಿ ರಸ್ತೆಗಿಳಿದು ಹೋರಾಟ ನಡೆಸಿದ ಎಲ್ಲ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಅಭಿನಂದನೆಗಳು” ಎಂದು ಹೇಳಿದ್ದಾರೆ.

ರೈತರು, ಕಾರ್ಮಿಕರು, ಬಡವರು ಸೇರಿದಂತೆ ಸರ್ಕಾರದಿಂದ ದಬ್ಬಾಳಿಕೆಗೆ ಒಳಗಾದ ಪ್ರತಿಯೊಬ್ಬರೂ ತಮ್ಮ ಗೌರವಕ್ಕಾಗಿ ಸಂವಿಧಾನಾತ್ಮಕ ರೀತಿಯಲ್ಲಿ ಒಗ್ಗೂಡಿ ಹೋರಾಡುವುದು ನಿಜವಾದ ಧೈರ್ಯ ಎಂದು ಅವರು ಹೇಳಿದ್ದಾರೆ.

“ಭಯಪಡಬೇಡಿ. ಈ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಸಮಯ ಬಂದಿದೆ” ಎಂದು ರಾಹುಲ್ ಗಾಂಧಿ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2ನೇ ಟಿ20ಗೆ ಟಾಸ್ ಸೋತ ಟೀಂ ಇಂಡಿಯಾ: ಮೊದಲು ಬ್ಯಾಟಿಂಗ್, ಯಶ್ ಠಾಕೂರ್ʼಗೆ ಚೊಚ್ಚಲ ಪಂದ್ಯ ಅವಕಾಶ

0

ಹರಾರೆ: ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಶನಿವಾರ (ಜುಲೈ 25) ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಗೆದ್ದು 1-0 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ, ಈ ಪಂದ್ಯವನ್ನು ಗೆದ್ದು ಸರಣಿಯನ್ನು ತನ್ನದಾಗಿಸಿಕೊಳ್ಳುವ ಉದ್ದೇಶದೊಂದಿಗೆ ಕಣಕ್ಕಿಳಿದಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ತಂಡದ ನಾಯಕ ಸಿಕಂದರ್ ರಝಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ ತಂಡ ಮೊದಲು ಬ್ಯಾಟಿಂಗ್ ನಡೆಸುತ್ತಿದೆ.

ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್ ಪ್ರಕಟವಾಗಿದ್ದು, ಜಿಂಬಾಬ್ವೆ ಮೊದಲ ಪಂದ್ಯದಲ್ಲಿ ಆಡಿದ ತಂಡವನ್ನೇ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿಸಿದೆ. ಭಾರತ ತಂಡದಲ್ಲಿ ಮಾತ್ರ ಒಂದು ಬದಲಾವಣೆ ಮಾಡಲಾಗಿದೆ. ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ವೇಗಿ ಅಶೋಕ್ ಶರ್ಮಾ ಅವರನ್ನು ಹೊರಗಿಟ್ಟು, ಯುವ ವೇಗಿ ಯಶ್ ಠಾಕೂರ್‌ಗೆ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಪಂದ್ಯ ಆಡುವ ಅವಕಾಶ ನೀಡಲಾಗಿದೆ.

ಹರಾರೆ ಮೈದಾನದಲ್ಲಿ ಭಾರತ ಮತ್ತು ಜಿಂಬಾಬ್ವೆ ಇದುವರೆಗೆ 13 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಜಿಂಬಾಬ್ವೆ ಮೂರು ಪಂದ್ಯಗಳಲ್ಲಿ ಮಾತ್ರ ಜಯ ದಾಖಲಿಸಿದೆ. ಅಲ್ಲದೆ, ಕಳೆದ ಐದು ಮುಖಾಮುಖಿಗಳಲ್ಲೂ ಭಾರತವೇ ಮೇಲುಗೈ ಸಾಧಿಸಿರುವುದರಿಂದ ಈ ಪಂದ್ಯದಲ್ಲೂ ಗೆಲುವಿನ ನೆಚ್ಚಿನ ತಂಡವಾಗಿ ಕಣಕ್ಕಿಳಿದಿದೆ.

ಪ್ಲೇಯಿಂಗ್ XI

ಭಾರತ: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಮಯಾಂಕ್ ಯಾದವ್.

ಜಿಂಬಾಬ್ವೆ: ಬ್ರಿಯಾನ್ ಬೆನೆಟ್, ಬೆನ್ ಕರ್ರನ್, ಡಿಯೋನ್ ಮೈಯರ್ಸ್, ಸಿಕಂದರ್ ರಝಾ (ನಾಯಕ), ರಿಯಾನ್ ಬರ್ಲ್, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಾನಿ (ವಿಕೆಟ್ ಕೀಪರ್), ಬ್ರಾಡ್ ಇವಾನ್ಸ್, ನ್ಯೂಮನ್ ನ್ಯಾಮ್ಹುರಿ, ರಿಚರ್ಡ್ ಎನ್‌ಗರಾವಾ, ಬ್ಲೆಸ್ಸಿಂಗ್ ಮುಜರಬಾನಿ.

ರಾಜೀನಾಮೆಯಿಂದ ಹೋರಾಟ ಮುಗಿದಿಲ್ಲ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮುಂದುವರಿಕೆ ಘೋಷಿಸಿದ ಸಿಜೆಪಿ

0

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿರುವುದನ್ನು ಸ್ವಾಗತಿಸಿರುವ ಕಾಕ್ರೋಚ್ ಜನತಾ ಪಾರ್ಟಿ (CJP), ಇದು ತಮ್ಮ ಹೋರಾಟದ ಮೊದಲ ಗೆಲುವು ಮಾತ್ರ ಎಂದು ಘೋಷಿಸಿದೆ. ಉಳಿದ ಪ್ರಮುಖ ಬೇಡಿಕೆಗಳು ಈಡೇರುವವರೆಗೂ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಿರಂತರವಾಗಿ ಮುಂದುವರಿಯಲಿದೆ ಎಂದು ಪಕ್ಷ ಸ್ಪಷ್ಟಪಡಿಸಿದೆ.

ಸಿಜೆಪಿ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ನವೀಕರಿಸಿದ ಬೇಡಿಕೆಗಳ ಪಟ್ಟಿಯನ್ನು ಪ್ರಕಟಿಸಿದ್ದು, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೇಡಿಕೆ ಈಡೇರಿರುವುದಕ್ಕೆ ಗುರುತು ಹಾಕಿದೆ. ಆದರೆ ಇನ್ನೂ ಮೂರು ಪ್ರಮುಖ ಬೇಡಿಕೆಗಳು ಬಾಕಿಯಿದ್ದು, ಅವುಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಮತ್ತೊಮ್ಮೆ ಒತ್ತಾಯಿಸಿದೆ.

ಪಕ್ಷದ ಪ್ರಮುಖ ಬೇಡಿಕೆಗಳೆಂದರೆ ಆತ್ಮಹತ್ಯೆ ಮಾಡಿಕೊಂಡ ಎಲ್ಲಾ ವಿದ್ಯಾರ್ಥಿಗಳ ಕುಟುಂಬಗಳಿಗೆ ₹1 ಕೋಟಿ ಪರಿಹಾರ ನೀಡುವುದು, ಪ್ರತಿಭಟನೆಯಲ್ಲಿ ಭಾಗವಹಿಸಿದ ಯಾವುದೇ ವಿದ್ಯಾರ್ಥಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿರುವುದು ಹಾಗೂ ಆರ್‌ಎಎಫ್‌ ಮತ್ತು ದೆಹಲಿ ಪೊಲೀಸರು ಸಾರ್ವಜನಿಕವಾಗಿ ಕ್ಷಮೆಯಾಚಿಸುವುದು.

“ಜಂತರ್ ಮಂತರ್ ಮಾತ್ರವಲ್ಲ, ಇಡೀ ದೇಶವೇ ಈ ಬೇಡಿಕೆಗಳು ಈಡೇರುವುದನ್ನು ಕಾಯುತ್ತಿದೆ. ಎಲ್ಲ ಬೇಡಿಕೆಗಳು ಈಡೇರುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ” ಎಂದು ಸಿಜೆಪಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪಕ್ಷದ ಸಂಸ್ಥಾಪಕ ಅಭೀಜಿತ್ ದೀಪ್ಕೆ, “ಈ ಸರ್ಕಾರದಲ್ಲಿ ರಾಜೀನಾಮೆ ಆಗುವುದೇ ಇಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ನಾವು ಅದನ್ನು ಸಾಧ್ಯ ಮಾಡಿದ್ದೇವೆ. ಇದು ಮೋದಿ ಸರ್ಕಾರದ ಮೊದಲ ರಾಜೀನಾಮೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸುದ್ದಿ ಹೊರಬಿದ್ದ ತಕ್ಷಣ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಹಾಗೂ ಬೆಂಬಲಿಗರು ಸಂಭ್ರಮಾಚರಣೆ ನಡೆಸಿ, ಇದನ್ನು ತಮ್ಮ ಹೋರಾಟದ ಮೊದಲ ಮಹತ್ವದ ಗೆಲುವು ಎಂದು ಬಣ್ಣಿಸಿದರು.

ಇದೇ ವೇಳೆ ಧರ್ಮೇಂದ್ರ ಪ್ರಧಾನ್ ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದ್ದು, ದೇಶದ ಯುವಜನರು ಗೊಂದಲದ ವಾತಾವರಣಕ್ಕೆ ಒಳಗಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಎಂ.ಜೆ. ಅಕ್ಬರ್ ಬಳಿಕ ಮತ್ತೊಬ್ಬ ಕೇಂದ್ರ ಸಚಿವರ ರಾಜೀನಾಮೆ: ವಿದ್ಯಾರ್ಥಿ ಹೋರಾಟದ ಒತ್ತಡಕ್ಕೆ ಧರ್ಮೇಂದ್ರ ಪ್ರಧಾನ್ ಹುದ್ದೆ ತ್ಯಾಗ

0

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ದೇಶಾದ್ಯಂತ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸಲ್ಲಿಸಿದ್ದಾರೆ. ಪ್ರತಿಭಟನೆಯ ಒತ್ತಡದ ನಡುವೆ ಕೇಂದ್ರ ಸಚಿವರೊಬ್ಬರು ಹುದ್ದೆ ತ್ಯಜಿಸಿರುವುದು ಕಳೆದ ಎಂಟು ವರ್ಷಗಳಲ್ಲೇ ಇದೇ ಮೊದಲ ಬಾರಿಯಾಗಿದ್ದು, ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದೆ.

ಧರ್ಮೇಂದ್ರ ಪ್ರಧಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿರುವ ಎರಡು ಪುಟಗಳ ರಾಜೀನಾಮೆ ಪತ್ರವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ದೇಶದ ಹಿತಾಸಕ್ತಿ ಹಾಗೂ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ರಾಜೀನಾಮೆ ಪತ್ರದಲ್ಲಿ, “ಪ್ರತಿಭಟನೆಯನ್ನು ರಾಷ್ಟ್ರವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಂಡು ಗೊಂದಲ ಸೃಷ್ಟಿಸದಂತೆ ತಡೆಯುವ ಉದ್ದೇಶದಿಂದ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ. ದೇಶದ ಹಿತಾಸಕ್ತಿಯೇ ನನಗೆ ಮುಖ್ಯ” ಎಂದು ಉಲ್ಲೇಖಿಸಿದ್ದಾರೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿದ್ದು, ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP) ನಡುವೆ ಮೂರನೇ ಸುತ್ತಿನ ಮಾತುಕತೆ ನಡೆಯುವ ಮುನ್ನವೇ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಘೋಷಿಸಿದ್ದಾರೆ. ಈ ಬೆಳವಣಿಗೆಯನ್ನು ವಿದ್ಯಾರ್ಥಿ ಸಮೂಹ ತಮ್ಮ ಹೋರಾಟದ ಮಹತ್ವದ ಗೆಲುವು ಎಂದು ಬಣ್ಣಿಸಿದೆ.

ಪ್ರತಿಭಟನೆಯ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ ಕೇಂದ್ರ ಸಚಿವರ ಪಟ್ಟಿಯಲ್ಲಿ ಧರ್ಮೇಂದ್ರ ಪ್ರಧಾನ್ ಹೆಸರು ಸೇರ್ಪಡೆಯಾಗಿದೆ. ಇದಕ್ಕೂ ಮೊದಲು 2018ರ ಅಕ್ಟೋಬರ್ 17ರಂದು ಲೈಂಗಿಕ ಕಿರುಕುಳ ಆರೋಪ ಹಾಗೂ ಮೀಟೂ ಅಭಿಯಾನದ ಒತ್ತಡದ ಹಿನ್ನೆಲೆಯಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂ.ಜೆ. ಅಕ್ಬರ್ ರಾಜೀನಾಮೆ ಸಲ್ಲಿಸಿದ್ದರು.

ಅಂದು ಎಂ.ಜೆ. ಅಕ್ಬರ್ ವಿರುದ್ಧ 20ಕ್ಕೂ ಹೆಚ್ಚು ಮಹಿಳಾ ಪತ್ರಕರ್ತೆಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ರಾಜೀನಾಮೆಯನ್ನು ಕಾಂಗ್ರೆಸ್ “ಸತ್ಯದ ಗೆಲುವು” ಎಂದು ಬಣ್ಣಿಸಿತ್ತು. ಆಮ್ ಆದ್ಮಿ ಪಕ್ಷವು ಅವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು.