ವಿಜಯಸಾಕ್ಷಿ ಸುದ್ದಿ, ಗದಗ: ಅಂಗಾಂಗ ದಾನವು ನಿಸ್ವಾರ್ಥ ಸೇವೆಯ ಪ್ರತೀಕವಾಗಿದ್ದು, ಒಬ್ಬ ದಾನಿಯ ಮೂಲಕ ಎಂಟು ಜನರ ಜೀವ ಉಳಿಸಲು ಸಾಧ್ಯ. ಆದ್ದರಿಂದ ಅಂಗಾಂಗ ದಾನದ ಕುರಿತು ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಮಾಜಿ ಸಚಿವ ಹಾಗೂ ಗದಗ ಶಾಸಕ ಡಾ. ಎಚ್.ಕೆ. ಪಾಟೀಲ್ ಹೇಳಿದರು.
ವಿಶ್ವ ಅಂಗಾಂಗ ದಾನ ದಿನದ ಅಂಗವಾಗಿ ಎಚ್.ಕೆ. ಪಾಟೀಲ್ ಸೇವಾ ತಂಡದ ವತಿಯಿಂದ ಆಯೋಜಿಸಿದ್ದ ಆನ್ಲೈನ್ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಮರಣಾನಂತರ ದೇಹವನ್ನು ದಾನ ಮಾಡುವ ಮೂಲಕ ಇನ್ನೊಬ್ಬರ ಬದುಕಿಗೆ ಹೊಸ ಆಶಾಕಿರಣ ನೀಡಬಹುದು. ಅಂಗಾಂಗಗಳ ಕೊರತೆಯಿಂದ ಪ್ರತಿವರ್ಷ ಸಾವಿರಾರು ಮಂದಿ ಜೀವ ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಈ ಕುರಿತು ಜನಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಎಚ್.ಕೆ. ಪಾಟೀಲ್ ಸೇವಾ ತಂಡದ ಅಧ್ಯಕ್ಷ ಪ್ರಭು ಬುರಬುರೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಕ್ತದಾನ ಹಾಗೂ ಅಂಗಾಂಗ ದಾನದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಡಾ. ಎಸ್.ಆರ್. ನಾಗನೂರ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಸಿದ್ದಲಿಂಗೇಶ ಪಾಟೀಲ್, ಡಾ. ವೆಂಕಟೇಶ್ ರಾಠೋಡ್, ದೇವೇಂದ್ರ ಕಳಸಾಪೂರ, ಡಾ. ಪ್ಯಾರಾಅಲಿ ನೂರಾನಿ, ಮಹಮ್ಮದ್ ಝಫರ್ ಖಾಜಿ, ಶಿವಪ್ಪ ಬಳ್ಳಾರಿ, ಡಾ. ಸ್ಟೀಫನ್, ಡಾ. ಬಸಯ್ಯ, ರಾಘವೇಂದ್ರ ಪಾಲನಕರ, ಸಮೀರ್ ಕೊಟ್ಟೂರು, ದಾದಾಪೀರ ಮುಂಡರಗಿ, ವಿಜಯಕುಮಾರ ಹಾಲಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಒಬ್ಬ ಅಂಗಾಂಗ ದಾನಿಯಿಂದ ಎಂಟು ಜನರ ಜೀವ ಉಳಿಯಬಹುದು. ಅಂಗಾಂಗ ದಾನವು ಪರೋಪಕಾರ ಮತ್ತು ನಿಸ್ವಾರ್ಥ ಸೇವೆಯ ಅತ್ಯುನ್ನತ ರೂಪವಾಗಿದೆ.”
– ಡಾ. ಎಚ್.ಕೆ. ಪಾಟೀಲ್, ಶಾಸಕ



