Home Blog Page 36

ಕೊಪ್ಪಳ ವಿವಿ ಹಂಗಾಮಿ ಕುಲಪತಿಗೆ ಅತಿಥಿ ಉಪನ್ಯಾಸಕರಿಂದ ಸತ್ಕಾರ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಯಾಗಿ ನೇಮಕಗೊಂಡಿರುವ ವಾಣಿಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಟಿ.ವಿ. ವಾರುಣಿ ಅವರನ್ನು ಕೊಪ್ಪಳ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಸತ್ಕರಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಡಾ. ವೀರಣ್ಣ ಸಜ್ಜನರ್, ಡಾ. ಸಣ್ಣದೇವೇಂದ್ರಸ್ವಾಮಿ, ಡಾ. ತುಕಾರಾಂ, ಡಾ. ಶಿವಬಸಪ್ಪ ಮಸ್ಕಿ, ಡಾ. ಮಹಾಂತೇಶ ನೆಲಾಗಣಿ, ಬಸವರಾಜ ಕರುಗಲ್, ಜ್ಞಾನೇಶ್ವರ ಪತ್ತಾರ, ಸೋಮೇಶ್, ವಿಜಯಕುಮಾರ್ ಕೆ., ಡಾ. ಗಿರಿಜಾ ತುರಮುರಿ ಹಾಗೂ ಡಾ. ಸಾವಿತ್ರಿ ಕಣವಿ ಉಪಸ್ಥಿತರಿದ್ದರು.

ತಿಮ್ಮಾಪುರ ಅಭಿವೃದ್ಧಿಗೆ ರೈತ ಸಂಘದ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ತಾಲೂಕಿನ ತಿಮ್ಮಾಪುರ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಮ ಕೈಗೊಳ್ಳಬೇಕು ಹಾಗೂ ರೈತರು ಮತ್ತು ಗ್ರಾಮಸ್ಥರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಅವರು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಸಂಸದರಿಗೆ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿರುವ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ ಲೋಕಸಭಾ ಸಂಸದರ ನಿವಾಸಕ್ಕೆ ಭೇಟಿ ನೀಡಿದ ಅವರು, ತಿಮ್ಮಾಪುರ ಗ್ರಾಮ ಮತ್ತು ಸುತ್ತಮುತ್ತಲಿನ ಜನರ ಹಿತದೃಷ್ಟಿಯಿಂದ ವಿವಿಧ ಬೇಡಿಕೆಗಳನ್ನು ಸಂಸದರ ಅನುದಾನ ಹಾಗೂ ಸಂಬಂಧಪಟ್ಟ ಇಲಾಖೆಗಳ ಮೂಲಕ ಈಡೇರಿಸುವಂತೆ ಒತ್ತಾಯಿಸಿದರು.

ತಿಮ್ಮಾಪುರ-ಕೊಟುಮಚಗಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಕೂಡಲೇ ಡಾಂಬರೀಕರಣಗೊಳಿಸಬೇಕು. ಅಲ್ಲದೆ ಮಾರ್ಗ ಮಧ್ಯದಲ್ಲಿರುವ ಕಣಿ ಹಳ್ಳಕ್ಕೆ ಮೇಲ್ಸೇತುವೆ ನಿರ್ಮಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ತಿಮ್ಮಾಪುರ ಗ್ರಾಮದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಶಾಖೆ ಇಲ್ಲದಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಕೂಡಲೇ ಗ್ರಾಮದಲ್ಲಿ ಬ್ಯಾಂಕ್ ಶಾಖೆ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಗದಗ ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದು, ಸರ್ಕಾರ ಕೇವಲ ಒಂದು ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಿದೆ. ಜಿಲ್ಲೆಯ ಎಲ್ಲ ೭ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಟ್ಟದಲ್ಲಿ ಒತ್ತಡ ತರಬೇಕು ಎಂದು ಆಗ್ರಹಿಸಲಾಗಿದೆ.

ತಿಮ್ಮಾಪುರ-ಹರ್ಲಾಪುರ ಸಂಪರ್ಕ ರಸ್ತೆಯನ್ನು ಡಾಂಬರೀಕರಣಗೊಳಿಸಲು ಅಗತ್ಯ ಅನುದಾನ ಮಂಜೂರು ಮಾಡಬೇಕು ಎಂಬ ಬೇಡಿಕೆಯನ್ನೂ ಸಲ್ಲಿಸಲಾಗಿದೆ.

ಹರ್ಲಾಪುರ ರೈಲ್ವೆ ನಿಲ್ದಾಣದಲ್ಲಿ ಹಂಪಿ ಎಕ್ಸ್‌ಪ್ರೆಸ್ ಹಾಗೂ ತಿರುಪತಿ ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ನೀಡುವಂತೆ ರೈಲ್ವೆ ಸಚಿವಾಲಯಕ್ಕೆ ಶಿಫಾರಸು ಮಾಡಬೇಕು. ಇದರಿಂದ ಸುತ್ತಲಿನ ೨೦ಕ್ಕೂ ಹೆಚ್ಚು ಹಳ್ಳಿಗಳ ಜನರಿಗೆ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮೇಲ್ಕಂಡ ಬೇಡಿಕೆಗಳು ರೈತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದ್ದು, ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಮನವಿಯನ್ನು ಸ್ವೀಕರಿಸಿದ ಸಂಸದರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಯಲ್ಲಪ್ಪ ಎಚ್. ಬಾಬರಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಅಂದಪ್ಪ ಕೊಳೂರು, ರಾಮಣ್ಣ ಖಂಡ್ರೆ ಹಾಗೂ ಶಿವಕುಮಾರ ಯತ್ನಟ್ಟಿ ಉಪಸ್ಥಿತರಿದ್ದರು.

ವಿದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ: ಸೆ.6ರಂದು ಬೆಂಗಳೂರಿನಲ್ಲಿ ‘Study Abroad-2026’

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶಗಳ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ‘ವಿದೇಶದಲ್ಲಿ ಅಧ್ಯಯನ-2026’ (Study Abroad-2026) ಕಾರ್ಯಕ್ರಮವನ್ನು ಸೆಪ್ಟೆಂಬರ್ 6ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ನಿಗಮವು ಅಂತರರಾಷ್ಟ್ರೀಯ ಏಜೆನ್ಸಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ.

ಕಾರ್ಯಕ್ರಮವು ಬೆಂಗಳೂರಿನ ಗೇಟ್ ನಂ. 4, ಗಾಯತ್ರಿ ಗ್ರೌಂಡ್, ಗಾಯತ್ರಿ ವಿಹಾರ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆಯಲಿದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರಳಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಕಾರ್ಯಕ್ರಮದಲ್ಲಿ 10ಕ್ಕೂ ಹೆಚ್ಚು ವಿದೇಶಗಳ 75ಕ್ಕೂ ಹೆಚ್ಚು ಜಾಗತಿಕ ವಿಶ್ವವಿದ್ಯಾಲಯಗಳು ಭಾಗವಹಿಸಲಿವೆ. ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಗಳ ಪ್ರವೇಶ ಪ್ರಕ್ರಿಯೆ, ವಿದ್ಯಾರ್ಥಿ ವೀಸಾ, ಹಣಕಾಸು ಯೋಜನೆ, ಅರ್ಜಿ ಸಲ್ಲಿಕೆ, ಆರೋಗ್ಯ ವಿಮೆ ಹಾಗೂ ಭಾಷಾ ಪ್ರಾವೀಣ್ಯತೆ ಕುರಿತು ಒಂದೇ ವೇದಿಕೆಯಲ್ಲಿ ಮಾರ್ಗದರ್ಶನ ನೀಡಲಾಗುವುದು.

ಹಾಗೆಯೇ, ವಿದ್ಯಾರ್ಥಿಗಳಿಗೆ ವೈಯಕ್ತಿಕ ಸಮಾಲೋಚನೆ (One-on-One Sessions), ಸ್ಥಳದಲ್ಲೇ ವಿದ್ಯಾರ್ಥಿವೇತನ ಹಾಗೂ ಅರ್ಹತಾ ಮೌಲ್ಯಮಾಪನ (Spot Scholarship & Eligibility Assessment), ವಿಶ್ವವಿದ್ಯಾಲಯ ಪ್ರವೇಶ ಮಾರ್ಗದರ್ಶನ, ವೀಸಾ ಮಾರ್ಗದರ್ಶನ, ಹಣಕಾಸು ಯೋಜನೆ, ಅರ್ಜಿ ಸಲ್ಲಿಕೆಗೆ ನೆರವು, ಆರೋಗ್ಯ ವಿಮೆ ಮಾರ್ಗದರ್ಶನ ಹಾಗೂ ಭಾಷಾ ಪ್ರಾವೀಣ್ಯತೆಗಾಗಿ ಅಗತ್ಯ ಸಹಕಾರ ಸೇರಿದಂತೆ ಎಂಟು ಪ್ರಮುಖ ಅಂಶಗಳ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುವುದು.

ವಿದ್ಯಾರ್ಥಿಗಳಿಗೆ ಶೇ. 50ರವರೆಗೆ ವಿದ್ಯಾರ್ಥಿವೇತನ ಪಡೆಯುವ ಅವಕಾಶಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು. ಪದವಿ (Under Graduate), ಸ್ನಾತಕೋತ್ತರ (Post Graduate), ಡಾಕ್ಟರೇಟ್, ಡಿಪ್ಲೊಮಾ, ವೃತ್ತಿಪರ ಹಾಗೂ ಇತರ ಉನ್ನತ ಶಿಕ್ಷಣ ಕೋರ್ಸ್‌ಗಳಿಗಾಗಿ ವಿದೇಶಗಳ ಜಾಗತಿಕ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಮಹತ್ವದ ಅವಕಾಶವಾಗಿದೆ.

ಆಸಕ್ತ ವಿದ್ಯಾರ್ಥಿಗಳು studyabroad.ksdckarnataka.com ವೆಬ್‌ಸೈಟ್ ಅಥವಾ ಕ್ಯೂಆರ್ ಕೋಡ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ, ಕೊಠಡಿ ಸಂಖ್ಯೆ 106, ಜಿಲ್ಲಾಧಿಕಾರಿ ಕಚೇರಿ, ಗದಗ ಅಥವಾ ಮೊಬೈಲ್ ಸಂಖ್ಯೆ 8618650935, 9481856181, 9481008754, 8722762768, 9686352815 ಹಾಗೂ 9008234012ಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂರು ತಿಂಗಳಿಗೊಮ್ಮೆ ಕುಂದುಕೊರತೆ ಸಭೆ: ಸಿಇಎ ಭರವಸೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಪಂಚಾಯಿತಿಗೆ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ಆಗಮಿಸಿರುವ ಮುಕುಲ್ ಜೈನ್ ಅವರನ್ನು ವಿಬಿಜಿ-ರಾಮ್-ಜಿ ಯೋಜನೆಯ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬುಧವಾರ ಭೇಟಿ ಮಾಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಸುರೇಶ್ ಬಾಳಿಕಾಯಿ ಅವರು, ನೌಕರರ ಹಿತದೃಷ್ಟಿಯಿಂದ ಪ್ರತಿ ಮೂರು ತಿಂಗಳಿಗೊಮ್ಮೆ ವಿಬಿಜಿ-ರಾಮ್-ಜಿ ಯೋಜನೆಯ ನೌಕರರ ಕುಂದುಕೊರತೆ ಸಭೆ ನಡೆಸುವಂತೆ ಸಿಇಒ ಮುಕುಲ್ ಜೈನ್ ಅವರಿಗೆ ಮನವಿ ಸಲ್ಲಿಸಿದರು.

ಮನವಿಗೆ ಸ್ಪಂದಿಸಿದ ಸಿಇಒ ಮುಕುಲ್ ಜೈನ್ ಅವರು, ವಿಬಿಜಿ-ರಾಮ್-ಜಿ ಯೋಜನೆಯ ಎಲ್ಲ ನೌಕರರನ್ನು ಕರೆದು ಸಭೆ ನಡೆಸಿ, ಅವರ ಸಮಸ್ಯೆಗಳು ಹಾಗೂ ಕುಂದುಕೊರತೆಗಳನ್ನು ಆಲಿಸುವುದಾಗಿ ಭರವಸೆ ನೀಡಿದರು.

ನೌಕರರ ಸಮಸ್ಯೆಗಳನ್ನು ಕಾಲಕಾಲಕ್ಕೆ ಆಲಿಸುವ ಮೂಲಕ ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಎದುರಾಗುವ ತೊಂದರೆಗಳನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರತಿನಿಧಿ ಕಿರಣಕುಮಾರ್, ನರಗುಂದ ತಾಲೂಕು ಅಧ್ಯಕ್ಷ ಹನುಮಂತ ಡಂಬಳ, ರೋಣ ತಾಲೂಕು ಅಧ್ಯಕ್ಷೆ ಶಾಂತಾ ತಿಮ್ಮರಡ್ಡಿ, ಮುಂಡರಗಿ ತಾಲೂಕು ಪ್ರತಿನಿಧಿ ಬಸವರಾಜ ಮನ್ನಮ್ಮನವರ, ಗದಗದ ನವೀನ ಬಸರಿ, ಶಿರಹಟ್ಟಿಯ ವೀರೇಶ ಪಟ್ಟಣಶೆಟ್ಟಿ, ಲಕ್ಷ್ಮೇಶ್ವರದ ಶ್ರೀನಿವಾಸ ಕಲಾಲ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳಾದ ಪಕ್ಕೀರೇಶ ನಿಟ್ಟಾಲಿ, ಅರುಣ ಸಿಂಗ್ರಿ, ಹರೀಶ್ ಸೊಬರದ, ಲಿಂಗರಾಜ ಮುದಿಗೌಡರ, ಮಲ್ಲಿಕಾರ್ಜುನ ಸರ್ವಿ, ವೀರಭದ್ರಪ್ಪ ಸಜ್ಜನ, ಲಿಂಗರಾಜ ಅರಿಶಿಣದ, ಮಂಜುನಾಥ ತಳವಾರ, ಅಜಯ್ ಅಬ್ಬಿಗೇರಿ ಹಾಗೂ ವಿವಿಧ ತಾಲೂಕುಗಳ ನೌಕರರು ಉಪಸ್ಥಿತರಿದ್ದರು.

ತಹಶೀಲ್ದಾರ್ ಕಚೇರಿ ಸ್ಥಳಾಂತರ ನಿರ್ಧಾರ ಕೈಬಿಡಿ : ರೈತ ಸಂಘ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ತಾಲೂಕು ದಂಡಾಧಿಕಾರಿಗಳ (ತಹಸೀಲ್ದಾರ್) ಕಚೇರಿ ಶಿಥಿಲಾವಸ್ಥೆಯಲ್ಲಿರುವ ಹಿನ್ನೆಲೆಯಲ್ಲಿ, ನೂತನ ಕಟ್ಟಡ ನಿರ್ಮಾಣವಾಗುವವರೆಗೆ ಜಿಲ್ಲಾಧಿಕಾರಿ ಕಚೇರಿ ಎದುರಿನ ನಿಸರ್ಗ ಬಡಾವಣೆಯಲ್ಲಿರುವ ಜಿಲ್ಲಾ ಸಾಹಿತ್ಯ ಭವನಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸುವ ನಿರ್ಧಾರವನ್ನು ಕೈಬಿಡಬೇಕು ಎಂದು ಶ್ರೀ ಡಾ. ಪಂಡಿತ ಪುಟ್ಟರಾಜ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಶಾಂತಯ್ಯ ಮುತ್ತಿನಪೆಂಡಿಮಠ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಹೃದಯಭಾಗದಲ್ಲಿರುವ ಗದಗ ತಾಲೂಕು ತಹಸೀಲ್ದಾರ್ ಕಚೇರಿಯನ್ನು ದೂರದ ಪ್ರದೇಶಕ್ಕೆ ಸ್ಥಳಾಂತರಿಸಿದರೆ ರೈತರು ಹಾಗೂ ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ತೆರಳಲು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಗದಗ ನಗರದಲ್ಲಿ ಸಮರ್ಪಕ ನಗರ ಸಾರಿಗೆ ವ್ಯವಸ್ಥೆ ಇಲ್ಲ. ಇಂತಹ ಸಂದರ್ಭದಲ್ಲಿ ಕಚೇರಿಯನ್ನು ದೂರದ ಪ್ರದೇಶಕ್ಕೆ ಸ್ಥಳಾಂತರಿಸಿದರೆ ಸಾರ್ವಜನಿಕರು ಖಾಸಗಿ ಆಟೊಗಳನ್ನು ಅವಲಂಬಿಸಬೇಕಾಗುತ್ತದೆ. ಇದರಿಂದ ಪ್ರಯಾಣ ವೆಚ್ಚ ಹಾಗೂ ಸಮಯ ಎರಡೂ ಹೆಚ್ಚಲಿದ್ದು, ಗ್ರಾಮೀಣ ಭಾಗದಿಂದ ಬರುವ ರೈತರಿಗೆ ಮತ್ತಷ್ಟು ಹೊರೆಯಾಗಲಿದೆ ಎಂದು ಹೇಳಿದರು.

ಸಾರ್ವಜನಿಕರ ಅನುಕೂಲಕ್ಕಾಗಿ ನಗರದಲ್ಲಿಯೇ ಸಾಕಷ್ಟು ಸರ್ಕಾರಿ ಕಟ್ಟಡಗಳು ಲಭ್ಯವಿದ್ದರೂ ತಹಶೀಲ್ದಾರ್ ಕಚೇರಿಯನ್ನು ದೂರದ ಸ್ಥಳಕ್ಕೆ ಸ್ಥಳಾಂತರಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.

ಈ ನಿರ್ಧಾರದಿಂದ ಅಧಿಕಾರಿಗಳ ಸ್ವಹಿತಾಸಕ್ತಿ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಆರೋಪಿಸಿದ ಅವರು, ರೈತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ಸ್ಥಳಾಂತರದ ನಿರ್ಧಾರವನ್ನು ಹಿಂಪಡೆದು, ಜನರಿಗೆ ಸುಲಭವಾಗಿ ತಲುಪಬಹುದಾದ ಸ್ಥಳದಲ್ಲಿಯೇ ತಾತ್ಕಾಲಿಕ ಕಚೇರಿ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಪ್ರಭು ಜುಟ್ಟದ, ದಾವಲಸಾಬ ನಾಗನೂರ, ಶಿವಯೋಗಯ್ಯ ಶಶಿಮಠ, ಅಜಾಜ್ ಧಾ ಹಾಗೂ ವೆಂಕಟೇಶ ಜುಂಜಣಿ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಹಸೀಲ್ದಾರ್ ಕಚೇರಿ ಜನಸಾಮಾನ್ಯರಿಗೆ ಸುಲಭವಾಗಿ ತಲುಪುವ ಸ್ಥಳದಲ್ಲಿರಬೇಕು. ನಗರ ಸಾರಿಗೆ ವ್ಯವಸ್ಥೆಯೇ ಸಮರ್ಪಕವಾಗಿಲ್ಲದ ಸಂದರ್ಭದಲ್ಲಿ ದೂರದ ಪ್ರದೇಶಕ್ಕೆ ಕಚೇರಿ ಸ್ಥಳಾಂತರಿಸುವುದರಿಂದ ರೈತರು ಹಾಗೂ ಸಾರ್ವಜನಿಕರಿಗೆ ಅನಗತ್ಯ ತೊಂದರೆ ಮತ್ತು ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗಲಿದೆ. ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು.

– ಶಾಂತಯ್ಯ ಮುತ್ತಿನಪೆಂಡಿಮಠ, ರಾಜ್ಯ ಗೌರವಾಧ್ಯಕ್ಷರು, ಶ್ರೀ ಡಾ. ಪಂಡಿತ ಪುಟ್ಟರಾಜ ರೈತ ಸಂಘ

ಮುಕ್ತಿಮಂದಿರ ನನ್ನ ನಂಬಿಕೆಯ, ಹೃದಯಕ್ಕೆ ಹತ್ತಿರವಾದ ಪವಿತ್ರ ಕ್ಷೇತ್ರ : ಡಿ.ಕೆ. ಶಿವಕುಮಾರ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಕ್ತಿಮಂದಿರ ಧರ್ಮಕ್ಷೇತ್ರವು ನನ್ನ ನಂಬಿಕೆಯ ಹಾಗೂ ಹೃದಯಕ್ಕೆ ಹತ್ತಿರವಾದ ದೈವಿಕ ಮತ್ತು ಪವಿತ್ರ ಕ್ಷೇತ್ರವಾಗಿದೆ. ಈ ಹಿಂದೆ ಲಿಂ. ವೀರಗಂಗಾಧರ ಜಗದ್ಗುರುಗಳ (ಅಜ್ಜಯ್ಯ) ಕರ್ತೃಗದ್ದುಗೆಯ ಮುಂದೆ ಸಲ್ಲಿಸಿದ್ದ ಪ್ರಾರ್ಥನೆ ಮತ್ತು ಸಂಕಲ್ಪ ಈಡೇರಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ದರ್ಶನ ಪಡೆದು ಪೂಜೆ ಸಲ್ಲಿಸಿದ್ದೇನೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿ, ಸಮೃದ್ಧ ಬೆಳೆ ಬರಲಿ, ರೈತರು ಹಾಗೂ ಜನರು ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು.

ಗದಗ ಜಿಲ್ಲೆಯ ಬರ ಪರಿಸ್ಥಿತಿ ಪರಿಶೀಲನೆ ನಡೆಸಿದ ಬಳಿಕ ಮಂಗಳವಾರ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಭೇಟಿ ನೀಡಿದ ಅವರು, ಲಿಂ. ವೀರಗಂಗಾಧರ ಜಗದ್ಗುರುಗಳ ಕರ್ತೃಗದ್ದುಗೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹಾಗೂ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಶಿವಾಚಾರ್ಯರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅಭಿಷೇಕ, ಅಷ್ಟೋತ್ತರ ಹಾಗೂ ಮಹಾಮಂಗಳಾರತಿ ನೆರವೇರಿಸಿದರು. ಬಳಿಕ ಕೆಲಕಾಲ ಕರ್ತೃಗದ್ದುಗೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಮಾನವ ಧರ್ಮಕ್ಕೆ ಜಯವಾಗಲಿ ಹಾಗೂ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಸಾರಿದ ಲಿಂ. ವೀರಗಂಗಾಧರ ಜಗದ್ಗುರುಗಳ ಪಾವನ ಕ್ಷೇತ್ರ ಇದಾಗಿದೆ. ಈ ಕ್ಷೇತ್ರದ ಮೇಲೆ ನನಗೆ ಅಪಾರವಾದ ಶ್ರದ್ಧೆಯಿದೆ. ಭಕ್ತ ಮತ್ತು ಭಗವಂತನ ನಡುವೆ ಪವಿತ್ರ ಬಂಧವನ್ನು ಬೆಸೆಯುವ ಶಕ್ತಿ ಇಂತಹ ಧರ್ಮಕ್ಷೇತ್ರಗಳಿಗೆ ಇದೆ ಎಂದು ಹೇಳಿದರು.

ಬಳಿಕ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರೊಂದಿಗೆ ಕ್ಷೇತ್ರದಲ್ಲಿ ನಡೆಯುತ್ತಿರುವ ತ್ರಿಕೋಟಿ ಶಿವಲಿಂಗ ಸ್ಥಾಪನೆ, ಸಮುದಾಯ ಭವನ, ಅನ್ನದಾಸೋಹ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ಪಡೆದ ಮುಖ್ಯಮಂತ್ರಿ, ಮುಕ್ತಿಮಂದಿರ ಧರ್ಮಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಸಕಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಗದಗ ಜಿಲ್ಲೆಯ ಬರ ಪರಿಸ್ಥಿತಿಯನ್ನು ಖುದ್ದಾಗಿ ಅರಿಯುವ ಉದ್ದೇಶದಿಂದ ಜಿಲ್ಲೆಗೆ ಭೇಟಿ ನೀಡಿದ್ದೇನೆ. ಜಿಲ್ಲೆಯ ಏಳು ತಾಲೂಕುಗಳ ಪೈಕಿ ಗಜೇಂದ್ರಗಡ ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ನೆಲದ ಮೇಲಿನ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.

ಜಿಲ್ಲೆಯಲ್ಲಿ ಶೇ. ೪೦ರಿಂದ ೪೪ರಷ್ಟು ಮಳೆ ಕೊರತೆಯಾಗಿದ್ದು, ಬರ ಪರಿಸ್ಥಿತಿ ಗಂಭೀರವಾಗಿದೆ ಎಂಬುದು ಮನವರಿಕೆಯಾಗಿದೆ. ರೈತರ ಜಮೀನುಗಳಿಗೆ ತೆರಳಿ ಹತ್ತಿ, ಕಡಲೆಕಾಯಿ, ಜೋಳ ಹಾಗೂ ಸೂರ್ಯಕಾಂತಿ ಬೆಳೆಗಳ ಸ್ಥಿತಿಯನ್ನು ಕಣ್ಣಾರೆ ಕಂಡಿದ್ದೇನೆ. ರೈತರು ಎದುರಿಸುತ್ತಿರುವ ಸಂಕಷ್ಟದ ಪ್ರಮಾಣವೂ ತಿಳಿದುಬಂದಿದೆ ಎಂದರು.

ಬರಪೀಡಿತ ತಾಲೂಕುಗಳನ್ನು ಘೋಷಿಸಲು ಸರ್ಕಾರದ ನಿಗದಿತ ಮಾರ್ಗಸೂಚಿಗಳಿವೆ. ಅದರಂತೆ ಸಮಗ್ರ ಅಧ್ಯಯನ ನಡೆಸಿ ಶೀಘ್ರದಲ್ಲೇ ಎರಡನೇ ಹಂತದ ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಡಿ.ಕೆ. ಶಿವಕುಮಾರ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಮನವಿ ಸಲ್ಲಿಸಿದ್ದಾರೆ. ಮನವಿಯ ಜತೆಗೆ ವಾಸ್ತವ ಪರಿಸ್ಥಿತಿಯನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಹೇಳಿದರು.

ವಿಧಾನಸಭೆಯಲ್ಲಿ ಬರ ಪರಿಸ್ಥಿತಿ ಕುರಿತು ಸಮಗ್ರವಾಗಿ ಚರ್ಚಿಸಿ, ಸರ್ಕಾರ ನೂರು ದಿನಗಳಲ್ಲಿ ಕೈಗೊಂಡಿರುವ ಕ್ರಮಗಳು ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ವಿವರಿಸಲು ಉದ್ದೇಶಿಸಿದ್ದೆ. ಆದರೆ ಪ್ರತಿಪಕ್ಷದವರು ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಮುಖ್ಯಮಂತ್ರಿ ಟೀಕಿಸಿದರು.

ಈ ಸಂದರ್ಭದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕರಾದ ಡಾ. ಚಂದ್ರು ಲಮಾಣಿ, ಎನ್.ಎಚ್. ಕೋನರಡ್ಡಿ, ಯಾಸೀರ್ ಖಾನ್ ಪಠಾಣ, ಆನಂದಸ್ವಾಮಿ ಗಡ್ಡದೇವರಮಠ, ಶ್ರೀನಿವಾಸ ಮಾನೆ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ ಸೇರಿದಂತೆ ಹಲವು ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಡಿ.ಕೆ. ಶಿವಕುಮಾರ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.

ಕೋಟ್

ಮುಕ್ತಿಮಂದಿರ ನನ್ನ ನಂಬಿಕೆಯ ಹಾಗೂ ಹೃದಯಕ್ಕೆ ಹತ್ತಿರವಾದ ಪವಿತ್ರ ಕ್ಷೇತ್ರ. ರಾಜ್ಯದಲ್ಲಿ ಉತ್ತಮ ಮಳೆಯಾಗಿ, ಸಮೃದ್ಧ ಬೆಳೆ ಬರಲಿ; ರೈತರು ಮತ್ತು ಜನರು ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಅಜ್ಜಯ್ಯನ ಕರ್ತೃಗದ್ದುಗೆಯಲ್ಲಿ ಪ್ರಾರ್ಥಿಸಿದ್ದೇನೆ.

— ಡಿ.ಕೆ. ಶಿವಕುಮಾರ, ಮುಖ್ಯಮಂತ್ರಿ

ರಾಹುಲ್ ವಿರುದ್ಧದ ಎಫ್‌ಐಆರ್ ಖಂಡಿಸಿ ಸೆ.7ರಂದು ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರಾಖಂಡದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನವಾಗಿದೆ ಎಂದು ಆರೋಪಿಸಲಾದ ಘಟನೆ ಕುರಿತು ಪ್ರಶ್ನಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಅನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಸೆಪ್ಟೆಂಬರ್ 7ರಂದು ಸಂಜೆ 4 ಗಂಟೆಗೆ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಯೂಥ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪು ವೃತ್ತದಿಂದ ಜಿಲ್ಲಾಡಳಿತ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಜಿಲ್ಲಾ ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಶಕುಂತಲಾ ಅಕ್ಕಿ, ಬಸವರಾಜ ಕಡೆಮನಿ ಸೇರಿದಂತೆ ಜಿಲ್ಲಾ ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಹಬ್ಬದ ಪ್ರಯಾಣಿಕರಿಗೆ ಗುಡ್‌ನ್ಯೂಸ್: ಹುಬ್ಬಳ್ಳಿ–ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು!

0

ಹುಬ್ಬಳ್ಳಿ: ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಾಗೂ ಛತ್ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ಹುಬ್ಬಳ್ಳಿ–ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

ರೈಲು ಸಂಖ್ಯೆ 07341 ಎಸ್‌ಎಸ್‌ಎಸ್ ಹುಬ್ಬಳ್ಳಿ–ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 5ರಿಂದ ಅಕ್ಟೋಬರ್ 31ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರ ಸಂಚರಿಸಲಿದೆ. ಬೆಳಗ್ಗೆ 5 ಗಂಟೆಗೆ ಹುಬ್ಬಳ್ಳಿಯಿಂದ ಹೊರಡುವ ರೈಲು ಬೆಳಗ್ಗೆ 11.15ಕ್ಕೆ ಚಿಕ್ಕಮಗಳೂರು ತಲುಪಲಿದೆ.

ಹಿಂತಿರುಗುವ ರೈಲು ಸಂಖ್ಯೆ 07342 ಚಿಕ್ಕಮಗಳೂರು–ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ಇದೇ ಅವಧಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸಂಚರಿಸಲಿದೆ. ಈ ರೈಲು ಸಂಜೆ 5.30ಕ್ಕೆ ಚಿಕ್ಕಮಗಳೂರಿನಿಂದ ಹೊರಟು ರಾತ್ರಿ 11.20ಕ್ಕೆ ಹುಬ್ಬಳ್ಳಿ ತಲುಪಲಿದೆ.

ಹಲವು ನಿಲ್ದಾಣಗಳಲ್ಲಿ ನಿಲುಗಡೆ:

ವಿಶೇಷ ರೈಲು ಕುಂದಗೋಳ, ಸಂಶಿ, ಯಲವಿಗಿ, ಹಾವೇರಿ, ಬ್ಯಾಡಗಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಅಜ್ಜಂಪುರ, ಬೀರೂರು, ಕಡೂರು, ಸಖರಾಯಪಟ್ಟಣ ಸೇರಿದಂತೆ ಮಾರ್ಗಮಧ್ಯದ ಹಲವು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

ರೈಲಿನಲ್ಲಿ ಏನೆಲ್ಲ ಸೌಲಭ್ಯ?

ವಿಶೇಷ ರೈಲಿನಲ್ಲಿ ಒಂದು ಸ್ಲೀಪರ್ ಕ್ಲಾಸ್, 7 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಹಾಗೂ 2 ಲಗೇಜ್-ಕಮ್-ಬ್ರೇಕ್/ದಿವ್ಯಾಂಗಜನ ಬೋಗಿಗಳು ಇರಲಿವೆ.

ಹಬ್ಬದ ಸಂದರ್ಭದಲ್ಲಿ ಹುಬ್ಬಳ್ಳಿ–ಚಿಕ್ಕಮಗಳೂರು ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಈ ವಿಶೇಷ ರೈಲು ಹೆಚ್ಚುವರಿ ಸಾರಿಗೆ ಸೌಲಭ್ಯ ಒದಗಿಸಲಿದೆ. ಇದರಿಂದ ಹಬ್ಬದ ವೇಳೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಜಿಲ್ಲಾ ಕ್ರೀಡಾಂಗಣದಲ್ಲಿ ಅವೈಜ್ಞಾನಿಕ ಸಿಂಥೆಟಿಕ್ ಮೈದಾನ ನಿರ್ಮಾಣ ಖಂಡನೀಯ: ರಾಜು ಖಾನಪ್ಪನವರ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಷ್ಟ್ರೀಯ ಹಬ್ಬಗಳು, ದಸರಾ ಕ್ರೀಡೆಗಳು ಸೇರಿದಂತೆ ವಿವಿಧ ಕ್ರೀಡಾಕೂಟಗಳಿಗೆ ವೇದಿಕೆಯಾಗಿರುವ ನಗರದ ಜಿಲ್ಲಾ ಕ್ರೀಡಾಂಗಣವನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವ ಬದಲು ಅವೈಜ್ಞಾನಿಕವಾಗಿ ಸಿಂಥೆಟಿಕ್ ಫುಟ್‌ಬಾಲ್ ಮೈದಾನ ನಿರ್ಮಾಣಕ್ಕೆ ಮುಂದಾಗಿರುವುದು ಖಂಡನೀಯ ಎಂದು ಹಿಂದೂ ಸಂಘಟನೆಯ ಮುಖಂಡ ರಾಜು ಖಾನಪ್ಪನವರ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾರಂಭಿಸಿರುವ ಸಿಂಥೆಟಿಕ್ ಫುಟ್‌ಬಾಲ್ ಮೈದಾನದ ಕಾಮಗಾರಿಗೆ ಕ್ರೀಡಾಪಟುಗಳ ವಿರೋಧವಿದ್ದು, ಕೂಡಲೇ ಕಾಮಗಾರಿ ಸ್ಥಗಿತಗೊಳಿಸಿ ಕ್ರೀಡಾಪಟುಗಳ ಅಗತ್ಯಕ್ಕೆ ತಕ್ಕಂತೆ ಕ್ರೀಡಾಂಗಣ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಬಾಸ್ಕೆಟ್‌ಬಾಲ್ ಹಾಗೂ ಸ್ಕೇಟಿಂಗ್‌ಗೆ ಒಂದೇ ಮೈದಾನವನ್ನು ಬಳಸುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾ ಚಟುವಟಿಕೆಗಳ ಬಗ್ಗೆ ಸಮರ್ಪಕ ಅರಿವು ಹೊಂದಿರುವ ಅಧಿಕಾರಿಗಳು ಇಂತಹ ಯೋಜನೆಗಳನ್ನು ರೂಪಿಸಬೇಕಿತ್ತು. ಆದರೆ, ಕ್ರೀಡಾಪಟುಗಳಿಗೆ ಅನುಕೂಲವಾಗುವ ಬದಲು ತೊಂದರೆ ಉಂಟುಮಾಡುವ ರೀತಿಯಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ದೂರಿದರು.

ಸಿಂಥೆಟಿಕ್ ಫುಟ್‌ಬಾಲ್ ಮೈದಾನ ನಿರ್ಮಿಸಿದರೆ ಅದರೊಳಗೆ ಇತರರು ಓಡಾಡಲು ಸಾಧ್ಯವಾಗುವುದಿಲ್ಲ. ಜತೆಗೆ ಸಿಂಥೆಟಿಕ್ ಮೈದಾನದ ನಿರ್ವಹಣೆಯೂ ಕಷ್ಟಕರವಾಗಿದೆ. ಹೀಗಿರುವಾಗ ಜಿಲ್ಲಾ ಕ್ರೀಡಾಂಗಣದಂತಹ ಬಹುಪಯೋಗಿ ಮೈದಾನದಲ್ಲಿ ಇಂತಹ ಕಾಮಗಾರಿಗೆ ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.

ಈಗಾಗಲೇ ಅಥ್ಲೆಟಿಕ್ಸ್ ಟ್ರ್ಯಾಕ್‌ನಲ್ಲಿಯೂ ಸಮರ್ಪಕ ವ್ಯವಸ್ಥೆ ಇಲ್ಲ. ಕೇವಲ ನಾಲ್ಕು ಮಂದಿ ಏಕಕಾಲಕ್ಕೆ ಓಡುವಷ್ಟು ಮಾತ್ರ ಅವಕಾಶವಿದೆ. ಇಂತಹ ಸಮಸ್ಯೆಗಳನ್ನು ಪರಿಹರಿಸುವ ಬದಲು ಮತ್ತೊಂದು ಸಿಂಥೆಟಿಕ್ ಗ್ರೌಂಡ್ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ. ಸ್ಥಳೀಯ ಕ್ರೀಡಾಪಟುಗಳು ಹಾಗೂ ಮಕ್ಕಳಿಗೆ ಆಟವಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಈಗಿರುವ ಸಿಂಥೆಟಿಕ್ ಟ್ರ್ಯಾಕ್‌ಗೆ ಸುಮಾರು 18 ವರ್ಷಗಳಾಗಿದ್ದು, ಅದರ ಬಳಕೆಯ ಅವಧಿಯೂ ಮುಗಿದಿದೆ. ಹೀಗಾಗಿ ಅದರ ಸ್ಥಿತಿಗತಿ ಪರಿಶೀಲಿಸಿ, ಕ್ರೀಡಾಪಟುಗಳ ಅಗತ್ಯಕ್ಕೆ ಅನುಗುಣವಾಗಿ ಹೊಸ ವ್ಯವಸ್ಥೆ ರೂಪಿಸಬೇಕು. ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಈ ಕುರಿತು ತಕ್ಷಣ ಗಮನಹರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟದ ರೂಪುರೇಷೆ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಕ್ರೀಡಾ ಇಲಾಖೆಯ ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕ್ರೀಡಾಪಟುಗಳ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಬೇಕು. ಫುಟ್‌ಬಾಲ್ ಮೈದಾನ ನಿರ್ಮಾಣದ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಕೂಡಲೇ ನಿಲ್ಲಿಸಿ, ಜಿಲ್ಲೆಯ ವಿವಿಧ ಕ್ರೀಡೆಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ರವಿಕಾಂತ ಅಂಗಡಿ ಮಾತನಾಡಿ, ಕ್ರೀಡಾ ಇಲಾಖೆಯಲ್ಲಿ ಕ್ರೀಡೆ ಬಗ್ಗೆ ಸಂಪೂರ್ಣ ಜ್ಞಾನ ಹಾಗೂ ಅನುಭವ ಹೊಂದಿರುವ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಹಲವು ಇಲಾಖೆಗಳ ಜವಾಬ್ದಾರಿಯನ್ನು ಒಬ್ಬರೇ ಅಧಿಕಾರಿಗಳು ನಿರ್ವಹಿಸುತ್ತಿರುವುದರಿಂದ ಕ್ರೀಡಾ ಕ್ಷೇತ್ರದ ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ದೊರೆಯುತ್ತಿಲ್ಲ ಎಂದು ಹೇಳಿದರು.

ಪ್ರಭಾರಿ ಅಧಿಕಾರಿಗಳ ಮೂಲಕ ಈ ರೀತಿಯ ಮಹತ್ವದ ಕಾಮಗಾರಿಗಳನ್ನು ನಿರ್ವಹಿಸುವುದು ಕ್ರೀಡಾಪಟುಗಳಿಗೆ ತೊಂದರೆ ಉಂಟುಮಾಡುತ್ತಿದೆ. ಈಗಿರುವ ಮೈದಾನವನ್ನು ಅದರ ಮೂಲ ಸ್ವರೂಪದಲ್ಲಿಯೇ ಸಮರ್ಪಕವಾಗಿ ಅಭಿವೃದ್ಧಿಪಡಿಸಬೇಕು. ಕ್ರೀಡಾಪಟುಗಳಿಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸದೆ ಹೊಸ ಕಾಮಗಾರಿಗಳಿಗೆ ಮುಂದಾಗುವುದು ಸರಿಯಲ್ಲ ಎಂದರು.

ವೆಂಕನಗೌಡ ಗೋವಿಂದಗೌಡ್ರ ಮಾತನಾಡಿ, ಕ್ರೀಡಾ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆಯಿದೆ. ಮೂರು-ನಾಲ್ಕು ಇಲಾಖೆಗಳ ಜವಾಬ್ದಾರಿಯನ್ನು ಒಬ್ಬ ಅಧಿಕಾರಿಗೆ ವಹಿಸುವುದರಿಂದ ಕ್ರೀಡಾ ಚಟುವಟಿಕೆಗಳ ಮೇಲ್ವಿಚಾರಣೆಗೆ ತೊಂದರೆಯಾಗುತ್ತಿದೆ. ಕ್ರೀಡಾ ಕ್ಷೇತ್ರದ ಬಗ್ಗೆ ಜ್ಞಾನ ಹೊಂದಿರುವ ಅಧಿಕಾರಿಗಳನ್ನು ನೇಮಕ ಮಾಡಬೇಕು. ಫುಟ್‌ಬಾಲ್ ಮೈದಾನ ನಿರ್ಮಾಣಕ್ಕೆ ಕ್ರೀಡಾಂಗಣದ ಹೃದಯಭಾಗದಲ್ಲಿರುವ ವಾಕಿಂಗ್ ಸಾಲನ್ನು ಬಳಸಬೇಕು ಎಂದು ಒತ್ತಾಯಿಸಿದರು.

ಅರವಿಂದ ಹುಲ್ಲೂರು ಮಾತನಾಡಿ, ಸಿಂಥೆಟಿಕ್ ಟ್ರ್ಯಾಕ್‌ಗೆ ಪ್ರತಿದಿನ ನೀರುಣಿಸುವ ಅಗತ್ಯವಿದೆ. ಆದರೆ, ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ಸೌಲಭ್ಯವೇ ಸಮರ್ಪಕವಾಗಿಲ್ಲ. ಮೂಲಸೌಲಭ್ಯಗಳನ್ನೇ ಕಲ್ಪಿಸದೆ ದುಬಾರಿ ಕಾಮಗಾರಿಗಳಿಗೆ ಆದ್ಯತೆ ನೀಡುವುದು ಎಷ್ಟರ ಮಟ್ಟಿಗೆ ಸೂಕ್ತ ಎಂದು ಪ್ರಶ್ನಿಸಿದರು.

ಕ್ರೀಡಾ ಕ್ಷೇತ್ರದ ಬಗ್ಗೆ ಜ್ಞಾನ ಹೊಂದಿರುವ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಜಿಲ್ಲಾ ಕ್ರೀಡಾಂಗಣವನ್ನು ರಾಜಕೀಯ ಹಸ್ತಕ್ಷೇಪದಿಂದ ಮುಕ್ತಗೊಳಿಸಿ, ಕ್ರೀಡಾಪಟುಗಳ ಅಗತ್ಯಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪರಮೇಶ ನಾಯಕ್, ಮಹಾಂತೇಶ ಪಾಟೀಲ, ದೇವರಾಜ ದೊಡ್ಡಮನಿ, ನಾಗರಾಜ ಬಂಡಿವಡ್ಡರ, ಮಲ್ಲಿಕಾರ್ಜುನ ಬನ್ನಿಗಿಡದ, ಸಾಗರ, ಪ್ರಭು ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜಿಲ್ಲಾ ಕ್ರೀಡಾಂಗಣವು ಎಲ್ಲ ಕ್ರೀಡಾಪಟುಗಳಿಗೂ ಉಪಯೋಗವಾಗುವಂತಿರಬೇಕು. ಅವೈಜ್ಞಾನಿಕ ಕಾಮಗಾರಿಗಳ ಮೂಲಕ ಅದರ ಮೂಲ ಸ್ವರೂಪಕ್ಕೆ ಧಕ್ಕೆ ತರಬಾರದು. ಸಿಂಥೆಟಿಕ್ ಫುಟ್‌ಬಾಲ್ ಮೈದಾನ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಿ, ಸ್ಥಳೀಯ ಕ್ರೀಡಾಪಟುಗಳು ಹಾಗೂ ಮಕ್ಕಳ ಅಗತ್ಯಕ್ಕೆ ತಕ್ಕ ಮೂಲಸೌಕರ್ಯ ಕಲ್ಪಿಸಬೇಕು.

– ರಾಜು ಖಾನಪ್ಪನವರ

ಸಾಮರಸ್ಯ, ಸಹಬಾಳ್ವೆ ಬೆಳೆಸುವುದೇ ನಿಜವಾದ ಅಭಿವೃದ್ಧಿ: ಯಳವತ್ತಿಯಲ್ಲಿ ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗ್ರಾಮದ ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡ ಹಾಗೂ ಮೂಲಸೌಕರ್ಯಗಳ ನಿರ್ಮಾಣವಲ್ಲ, ಜನರಲ್ಲಿ ಪ್ರೀತಿ, ಸಹಕಾರ, ಸಾಮರಸ್ಯ ಹಾಗೂ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವುದೂ ನಿಜವಾದ ಅಭಿವೃದ್ಧಿಯ ಭಾಗವಾಗಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.

ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗುಂಡೇಶ್ವರ ಸಮುದಾಯ ಭವನವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮಗಳ ಅಭಿವೃದ್ಧಿಯು ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಕೃಷಿಯನ್ನೇ ಬದುಕಾಗಿಸಿಕೊಂಡಿರುವ ಗ್ರಾಮೀಣ ಜನರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ, ಧರ್ಮನಿಷ್ಠೆ ಹಾಗೂ ಮಾನವೀಯ ಮೌಲ್ಯಗಳನ್ನು ನೀಡಬೇಕು ಎಂದು ಉಜ್ಜಯಿನಿ ಪೀಠದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಜಗದ್ಗುರುಗಳು ಆಶೀರ್ವಚನ ನೀಡಿದರು.

ಸಮುದಾಯ ಭವನವು ಗ್ರಾಮದ ಸಾಮಾಜಿಕ ಬದುಕಿನ ಕೇಂದ್ರವಾಗಿ ರೂಪುಗೊಳ್ಳಬೇಕು. ಎಲ್ಲ ಸಮುದಾಯದವರು ಭವನವನ್ನು ಸಮಾನವಾಗಿ ಬಳಸಿಕೊಂಡು ಸೌಹಾರ್ದತೆ ಹಾಗೂ ಸಹಬಾಳ್ವೆಗೆ ಮಾದರಿಯಾಗಬೇಕು ಎಂದು ಹೇಳಿದರು.

ಇಂದು ತಂತ್ರಜ್ಞಾನ, ಸಂಪರ್ಕ ಸಾಧನಗಳು, ರಾಜಕೀಯ ಸೇರಿದಂತೆ ವಿವಿಧ ಕಾರಣಗಳಿಂದ ಸಮಾಜದಲ್ಲಿ ಸೌಹಾರ್ದತೆ ಹಾಗೂ ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಎಲ್ಲ ಜಾತಿ-ಜನಾಂಗದವರು ಸಹೋದರತ್ವದ ಭಾವನೆಯಿಂದ ಬದುಕು ಸಾಗಿಸುತ್ತಿರುವ ಪರಂಪರೆ ಇಂದಿಗೂ ಜೀವಂತವಾಗಿದ್ದು, ಅದು ಮುಂದುವರಿಯಬೇಕು ಎಂದರು.

ದೇವರು, ಧರ್ಮ, ಶಿಕ್ಷಣ ಹಾಗೂ ಸಮಾಜಕ್ಕಾಗಿ ನಿತ್ಯದ ಬದುಕಿನಲ್ಲಿ ಕೈಲಾದಷ್ಟು ಸಹಾಯ-ಸಹಕಾರ ಮಾಡುವ ಮೂಲಕವೇ ಬದುಕಿಗೆ ಸಾರ್ಥಕತೆ ದೊರೆಯುತ್ತದೆ ಎಂದು ಜಗದ್ಗುರುಗಳು ತಿಳಿಸಿದರು.

ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ ಹಾಗೂ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಯಾವುದೇ ಗ್ರಾಮದ ಪ್ರಗತಿಗೆ ಸರ್ಕಾರದ ಯೋಜನೆಗಳ ಜತೆಗೆ ಸ್ಥಳೀಯ ಜನರ ಸಹಕಾರ ಹಾಗೂ ಸಂಘಟಿತ ಪ್ರಯತ್ನವೂ ಅಗತ್ಯವಾಗಿದೆ. ಗ್ರಾಮಸ್ಥರ ಸಹಭಾಗಿತ್ವದಿಂದ ನಿರ್ಮಾಣಗೊಂಡಿರುವ ಇಂತಹ ಜನೋಪಯೋಗಿ ಕಟ್ಟಡಗಳು ಮುಂದಿನ ಪೀಳಿಗೆಗೂ ಪ್ರಯೋಜನಕಾರಿಯಾಗಲಿವೆ ಎಂದರು.

ಭವನ ನಿರ್ಮಾಣಕ್ಕೆ ಶ್ರಮಿಸಿದ ಶ್ರೀ ಗುಂಡೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ, ಗುರುಹಿರಿಯರು, ದಾನಿಗಳು ಹಾಗೂ ಗ್ರಾಮಸ್ಥರ ಕಾರ್ಯವನ್ನು ಗಣ್ಯರು ಶ್ಲಾಘಿಸಿದರು.

ಶ್ರೀ ಗುಂಡೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಗುಂಡಪ್ಪಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಟಿ. ಈಶ್ವರ, ಸುನೀಲ ಮಹಾಂತಶೆಟ್ಟರ, ಈರಪ್ಪ ಶಿಗ್ಲಿ, ಬೂದನಗೌಡ ನಿಂಗನಗೌಡ್ರ, ಜೋಗೆಪ್ಪ ಶಿರಬಡಗಿ, ಮೃತ್ಯುಂಜಯ ಹಿರೇಮಠ, ಫಕೀರೇಶ ಜವಳಿ, ವಿರೂಪಾಕ್ಷ ಮೇಟಿ, ಎಸ್.ಜಿ. ಪಾಟೀಲ, ಎಸ್.ಜಿ. ಕಲ್ಮೇಶ್ವರಮಠ, ಜಿ.ಬಿ. ಪೂಜಾರ, ವಿ.ಜಿ. ಪಾಟೀಲ, ಆರ್.ಬಿ. ಮಲ್ಲರಡ್ಡಿ, ಆರ್.ಎಸ್. ನಿಂಗನಗೌಡ್ರ, ವಿಶ್ವನಾಥ ಚಿಂಚಲಿ, ಸಿ.ಬಿ. ಪಾಟೀಲ ಸೇರಿದಂತೆ ಶ್ರೀ ಗುಂಡೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಸದಸ್ಯರು, ಗ್ರಾಮದ ಗುರುಹಿರಿಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಂಗವಾಗಿ ಮುಂಡರಗಿಯ ಕರ್ನಾಟಕ ಜಾನಪದ ಕಲಾ ಸಂಘದಿಂದ ಜಾನಪದ ಸಂಭ್ರಮ ಕಾರ್ಯಕ್ರಮ ನಡೆಯಿತು. ಜಾನಪದ ಕಲಾವಿದರು ವಿವಿಧ ಕಲಾ ಪ್ರಕಾರಗಳ ಮೂಲಕ ಗ್ರಾಮೀಣ ಸಂಸ್ಕೃತಿ, ಪರಂಪರೆ ಹಾಗೂ ಜನಜೀವನವನ್ನು ಅನಾವರಣಗೊಳಿಸಿದರು. ಜಾನಪದ ಗೀತೆ, ನೃತ್ಯ ಹಾಗೂ ವಿವಿಧ ಕಲಾ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮೆರುಗು ತಂದವು.

ಗ್ರಾಮದ ಅಭಿವೃದ್ಧಿ ಎಂದರೆ ಕೇವಲ ರಸ್ತೆ ಮತ್ತು ಕಟ್ಟಡಗಳ ನಿರ್ಮಾಣವಲ್ಲ. ಜನರ ನಡುವೆ ಪ್ರೀತಿ, ಸಹಕಾರ, ಸಾಮರಸ್ಯ ಮತ್ತು ಸಾಮಾಜಿಕ ಪ್ರಜ್ಞೆ ಬೆಳೆಯಬೇಕು. ಸಮುದಾಯ ಭವನಗಳು ಎಲ್ಲ ವರ್ಗದ ಜನರನ್ನು ಒಂದುಗೂಡಿಸುವ ಕೇಂದ್ರಗಳಾಗಿ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ವೇದಿಕೆಗಳಾಗಿ ರೂಪುಗೊಳ್ಳಬೇಕು.

– ಜಿ.ಎಸ್. ಪಾಟೀಲ, ವಿಧಾನಸಭೆ ಸಭಾಧ್ಯಕ್ಷರು