Home Blog Page 36

ಗೋಲ್ಡ್ ಖರೀದಿಸೋದು ಕಷ್ಟ; ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರಿಕೆ; ಆಭರಣ ಪ್ರಿಯರು ಕಂಗಾಲು

0

ಗೋಲ್ಡ್ ದರ ಕೇಳಿದ್ರೆ ಒಂದು ಕ್ಷಣ ಮೈ ಜುಮ್ ಅನಿಸುತ್ತೆ. ಅದರಂತೆ ಇಂದು ಒಂದೇ ದಿನ ಚಿನ್ನದ ಬೆಲೆ ಬರೋಬ್ಬರಿ 690 ರೂ ಹೆಚ್ಚಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,41,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,54,800 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 32,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,41,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 32,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 34,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 21ಕ್ಕೆ):-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,480 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,190 ರೂ.

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,611 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 325 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,480 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,190 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 325 ರೂ.

ಸಂತಾನಹರಣ ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಣಂತಿ ಸಾವು; ವೈದ್ಯರ ಮೇಲೆ ಬೊಟ್ಟು ಮಾಡಿದ ಕುಟುಂಬಸ್ಥರು!

0

ಬೀದರ್: ಸಂತಾನಹರಣ ಶಸ್ತ್ರಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಣಂತಿಯೊಬ್ಬರು ಮೃತಪಟ್ಟಿರುವ ಘಟನೆ ಬೀದರ್‌ನಲ್ಲಿ ಸಂಭವಿಸಿದೆ.

ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಮೃತಳ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಚಿಮಕೋಡ್ ಗ್ರಾಮದ 26 ವರ್ಷದ ಮೀನಾಕ್ಷಿ ಮೃತಪಟ್ಟ ಬಾಣಂತಿ. ಮಂಗಳವಾರ (ಜ.20) ಅವರು ಸಂತಾನಹರಣ ಶಸ್ತ್ರಚಿಕಿತ್ಸೆಗಾಗಿ ಬೀದರ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಯ ನಂತರ ಶೌಚಾಲಯಕ್ಕೆ ತೆರಳುವ ವೇಳೆ ಮೀನಾಕ್ಷಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಆಸ್ಪತ್ರೆಯ ವೈದ್ಯರು ಇಂಜೆಕ್ಷನ್ ನೀಡಿದ್ದು, ಬಳಿಕ ಅವರ ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾಗಿದೆ ಎನ್ನಲಾಗಿದೆ.

ಸ್ಥಿತಿ ಗಂಭೀರವಾಗುತ್ತಿದ್ದಂತೆ ಅವರನ್ನು ಬ್ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಖಾಸಗಿ ಆಸ್ಪತ್ರೆಯವರು ಸೂಚಿಸಿದ್ದಾರೆ. ಆದರೆ ಬ್ರಿಮ್ಸ್ ಆಸ್ಪತ್ರೆಗೆ ತಲುಪಿದಾಗ ವೈದ್ಯರು ಪರಿಶೀಲನೆ ನಡೆಸಿ ಮೀನಾಕ್ಷಿ ಈಗಾಗಲೇ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡ ಮೃತಳ ಕುಟುಂಬಸ್ಥರು ಖಾಸಗಿ ಆಸ್ಪತ್ರೆಯ ಎದುರು ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಮೀನಾಕ್ಷಿಯ ಸಾವು ಸಂಭವಿಸಿದೆ ಎಂದು ಆರೋಪಿಸಿ, ಪ್ರಕರಣಕ್ಕೆ ನ್ಯಾಯ ಒದಗಿಸಬೇಕು ಹಾಗೂ ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬೆಂಗಳೂರಿನ ಗಾಳಿ ಗುಣಮಟ್ಟ ಮತ್ತೆ ಕುಸಿತ; ಮಕ್ಕಳು, ಹಿರಿಯರ ಆರೋಗ್ಯದಲ್ಲಿ ಆತಂಕ!

0

ಬೆಂಗಳೂರು: ಬೆಂಗಳೂರಿನ ಗಾಳಿಯ ಗುಣಮಟ್ಟ ಇಂದು 171ಕ್ಕೆ ದಾಖಲಾಗಿದ್ದು, ಇದು ಅನಾರೋಗ್ಯಕಾರಿ ಹಂತದಲ್ಲೇ ಮುಂದುವರಿದಿದೆ.

ಕಳೆದ ಹಲವು ದಿನಗಳಿಂದ ನಗರದಲ್ಲಿ ಗಾಳಿಯ ಗುಣಮಟ್ಟದಲ್ಲಿ ನಿರಂತರ ಏರುಪೇರಾಗುತ್ತಿದ್ದು, ಕೆಲವೊಮ್ಮೆ AQI 200ರ ಗಡಿ ದಾಟುತ್ತಿರುವುದು ನಗರವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ ಮಕ್ಕಳು, ಹಿರಿಯ ನಾಗರಿಕರು ಹಾಗೂ ಉಸಿರಾಟ ಸಂಬಂಧಿ ಸಮಸ್ಯೆ ಹೊಂದಿರುವವರಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.

ಇಂದಿನ ಅಂಕಿಅಂಶಗಳ ಪ್ರಕಾರ PM2.5 ಪ್ರಮಾಣ 84 ಆಗಿದ್ದು, PM10 109ಕ್ಕೆ ಏರಿಕೆಯಾಗಿದೆ. PM2.5 ಎನ್ನುವುದು ಮಾನವನ ಕೂದಲಿನ ದಪ್ಪದ ಕೇವಲ ಶೇ.3ರಷ್ಟು ಮಾತ್ರ ಇರುವ ಅತಿ ಸೂಕ್ಷ್ಮ ಕಣಗಳು. ಇವು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದೊಳಗೆ ಪ್ರವೇಶಿಸಿ ರಕ್ತವಾಹಿನಿಗಳವರೆಗೆ ತಲುಪುವ ಸಾಮರ್ಥ್ಯ ಹೊಂದಿವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಬೆಂಗಳೂರಿನಲ್ಲಿ ಈ ಸೂಕ್ಷ್ಮ ಕಣಗಳ ಪ್ರಮಾಣವು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಮಿತಿಗಿಂತ ಸುಮಾರು ಐದು ಪಟ್ಟು ಹೆಚ್ಚಿರುವುದು ಗಂಭೀರ ಚಿಂತೆಯ ವಿಷಯವಾಗಿದೆ.

PM10 ಕಣಗಳು ಮಾನವನ ಕೂದಲಿಗಿಂತ ಸುಮಾರು ಏಳು ಪಟ್ಟು ತೆಳುವಾದ ಧೂಳಿನ ಕಣಗಳಾಗಿದ್ದು, ಇವು ಸಹ ಉಸಿರಾಟ ವ್ಯವಸ್ಥೆಗೆ ತೀವ್ರ ಹಾನಿ ಉಂಟುಮಾಡುತ್ತವೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕಿಗಳಲ್ಲಿ ಸಣ್ಣ ಏರುಪೇರು ಕಂಡುಬಂದರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ. ಆರೋಗ್ಯ ತಜ್ಞರು ಮಕ್ಕಳು, ವೃದ್ಧರು ಹಾಗೂ ಶ್ವಾಸಕೋಶ ಸಮಸ್ಯೆ ಇರುವವರು ಹೊರಗೆ ತೆರಳುವಾಗ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ. ಅಗತ್ಯವಿದ್ದರೆ ಮಾಸ್ಕ್ ಬಳಕೆ, ಅನಗತ್ಯ ವಾಹನ ಸಂಚಾರವನ್ನು ಕಡಿಮೆ ಮಾಡುವುದು ಹಾಗೂ ಹಸಿರು ಪ್ರದೇಶಗಳನ್ನು ಹೆಚ್ಚಿಸುವುದು ಈಗ ನಗರಕ್ಕೆ ಅತ್ಯಾವಶ್ಯಕ ಕ್ರಮಗಳಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಇತರ ನಗರಗಳ ಇಂದಿನ ಗಾಳಿಯ ಗುಣಮಟ್ಟ (AQI):
ಬೆಂಗಳೂರು – 171
ಮಂಗಳೂರು – 167
ಮೈಸೂರು – 102
ಬೆಳಗಾವಿ – 104
ಕಲಬುರ್ಗಿ – 69
ಶಿವಮೊಗ್ಗ – 167
ಬಳ್ಳಾರಿ – 170
ಹುಬ್ಬಳ್ಳಿ – 72
ಉಡುಪಿ – 144
ವಿಜಯಪುರ – 62

ಲೇಡಿ ಫಿಟ್ನೆಸ್ ಇನ್‌ಫ್ಲೂಯೆನ್ಸರ್‌ಗೆ ಅಶ್ಲೀಲ ಮೆಸೇಜ್; ಬೆಂಗಳೂರಿನಲ್ಲಿ ಹರಿಯಾಣ ಯುವಕ ಅರೆಸ್ಟ್

0

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಶುರುವಾದ ಏಕಪಕ್ಷೀಯ ಪ್ರೀತಿಯೊಂದು ಮಹಿಳಾ ಫಿಟ್ನೆಸ್ ಇನ್‌ಫ್ಲೂಯೆನ್ಸರ್‌ಗೆ ಭಾರೀ ಕಿರುಕುಳವಾಗಿ ಪರಿಣಮಿಸಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಇನ್‌ಸ್ಟಾಗ್ರಾಂ ಮೂಲಕ ಅಶ್ಲೀಲ ಸಂದೇಶ ಕಳುಹಿಸಿ, ನಿರಂತರವಾಗಿ ಹಿಂಸಿಸುತ್ತಿದ್ದ ಆರೋಪಿಯೊಬ್ಬ ಯುವತಿಯನ್ನು ಹುಡುಕಿಕೊಂಡು ಹರಿಯಾಣದಿಂದ ಕರ್ನಾಟಕಕ್ಕೆ ಬಂದಿದ್ದು, ಕೊನೆಗೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹರಿಯಾಣ ಮೂಲದ ಸುಧೀರ್ ಕುಮಾರ್ ಬಂಧಿತ ಆರೋಪಿ. ಸಂತ್ರಸ್ತ ಯುವತಿ ಬೆಂಗಳೂರಿನಲ್ಲಿ ಲೇಡಿ ಫಿಟ್ನೆಸ್ ಟ್ರೈನರ್ ಹಾಗೂ ನ್ಯೂಟ್ರಿಷನಿಸ್ಟ್ ಇನ್‌ಫ್ಲೂಯೆನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇನ್‌ಸ್ಟಾಗ್ರಾಂನಲ್ಲಿ ಆಕೆಯ ವಿಡಿಯೋ ಮತ್ತು ಪೋಸ್ಟ್‌ಗಳನ್ನು ನೋಡಿ ಆರೋಪಿಯು ಸಂಪರ್ಕಿಸಿದ್ದಾನೆ.

ಆರಂಭದಲ್ಲಿ ಇನ್‌ಸ್ಟಾಗ್ರಾಂ ಮೂಲಕ ಲೈಂಗಿಕವಾಗಿ ಪ್ರಚೋದಿಸುವ ರೀತಿಯಲ್ಲಿ ಸಂದೇಶ ಕಳುಹಿಸಿದ್ದ ಆರೋಪಿ, ಬಳಿಕ ಯುವತಿಯ ವಾಟ್ಸಪ್ ನಂಬರ್ ಪಡೆದು ಅಶ್ಲೀಲ ಸಂದೇಶಗಳ ಮೂಲಕ ಕಿರುಕುಳ ನೀಡುತ್ತಿದ್ದ. ದಿನಗಳು ಕಳೆದಂತೆ ಕಾಟ ಮಿತಿಮೀರಿದ್ದು, ಯುವತಿಯನ್ನು ಬೆಂಬಿಡದೇ ಹಿಂಬಾಲಿಸಲು ಆರಂಭಿಸಿದ್ದಾನೆ. ಇಷ್ಟಕ್ಕೂ ತೃಪ್ತಿಯಾಗದ ಆರೋಪಿ, ಯುವತಿಯನ್ನು ನೇರವಾಗಿ ಭೇಟಿಯಾಗಲು ಹರಿಯಾಣದಿಂದ ಬೆಂಗಳೂರಿಗೆ ಬಂದಿದ್ದ. ನಗರದಲ್ಲಿ ಆಕೆ ಕೆಲಸ ಮಾಡುತ್ತಿದ್ದ ಜಿಮ್‌ಗೆ ತೆರಳಿ ಸಹೋದ್ಯೋಗಿಗಳ ಬಳಿ ವಿಚಾರಿಸಿದ ವಿಷಯ ತಿಳಿದ ಕೂಡಲೇ ಆತಂಕಗೊಂಡ ಯುವತಿ ಪೊಲೀಸರ ಮೊರೆ ಹೋಗಿದ್ದಾಳೆ.

ಯುವತಿಯ ದೂರಿನ ಆಧಾರದ ಮೇಲೆ ದಕ್ಷಿಣ ವಿಭಾಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ಕಿರುಕುಳ ಪ್ರಕರಣಗಳಿಗೆ ಇದು ಮತ್ತೊಂದು ಎಚ್ಚರಿಕೆಯ ಘಟನೆ ಆಗಿದೆ.

ಮಾಗಡಿಯಲ್ಲಿ ಘನಘೋರ ಕೃತ್ಯ| ಬೆನ್ನುಮೂಳೆ ಮುರಿದು ನರಳುತ್ತಿದ್ದ ಸ್ನೇಹಿತನನ್ನೇ ಕೊಲೆಗೈದ ಸ್ನೇಹಿತರು!

0

ರಾಮನಗರ:- ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ ಮಾಗಡಿ ತಾಲೂಕಿನ ವಾಜರಹಳ್ಳಿ ಗ್ರಾಮದಲ್ಲಿ ಘನಘೋರ ಕೃತ್ಯ ಬೆಳಕಿಗೆ ಬಂದಿದೆ.

ತಮ್ಮ ಸ್ವಾರ್ಥಕ್ಕೆ ಸ್ನೇಹಿತನನ್ನು ತೆಂಗಿನ ಮರ ಹತ್ತಿಸಿ ಆತ ಬಿದ್ದು ಬೆನ್ನು ಮೂಳೆಗೆ ಏಟು ಮಾಡಿಕೊಂಡಾಗ ಚಿಕಿತ್ಸೆಗೆ ಹತ್ತಾರು ಲಕ್ಷ ರೂ. ಖರ್ಚಾಗುತ್ತದೆಂದು ಸ್ನೇಹಿತರೇ ಆತನನ್ನು ಕೊಲೆ ಮಾಡಿದ್ದಾರೆ. ಕೊಲೆಯಾದ ಯುವಕನನ್ನು ವಿನೋದ್ ಕುಮಾರ್ (26) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಸುದೀಪ್ ಮತ್ತು ಪ್ರಜ್ವಲ್ ಎನ್ನಲಾಗಿದೆ. ಮೂವರೂ ಮಾಗಡಿ ತಾಲೂಕಿನ ಕಲ್ಯಾಣಪುರ ಗ್ರಾಮದ ನಿವಾಸಿಗಳಾಗಿದ್ದಾರೆ. ಜನವರಿ 1ರಂದು ಹೊಸವರ್ಷ ಆಚರಣೆಗಾಗಿ ಐವರು ಸ್ನೇಹಿತರು ಒಟ್ಟಾಗಿ ಪಾರ್ಟಿಗೆ ತೆರಳಿದ್ದರು. ಈ ವೇಳೆ ಮದ್ಯಕ್ಕೆ ಎಳನೀರು ಬೆರೆಸಲು ತೀರ್ಮಾನಿಸಿದ ಅವರು, ವಿನೋದ್ ಕುಮಾರ್​​ನನ್ನು ತೆಂಗಿನ ಮರ ಹತ್ತುವಂತೆ ಮಾಡಿದ್ದರು ಎನ್ನಲಾಗಿದೆ.

ಆ ಸಂದರ್ಭದಲ್ಲಿ ವಿನೋದ್ ಕುಮಾರ್ ಮರದಿಂದ ಕೆಳಗೆ ಬಿದ್ದಿದ್ದ. ಪರಿಣಾಮವಾಗಿ ಆತನ ಬೆನ್ನುಮೂಳೆ ಮುರಿದು ಗಂಭೀರವಾಗಿ ಗಾಯಗೊಂಡಿದ್ದ. ಚಿಕಿತ್ಸೆಗೆ ಹತ್ತಾರು ಲಕ್ಷ ರೂಪಾಯಿ ಖರ್ಚಾಗಬಹುದು ಎಂಬ ಆತಂಕದಿಂದ ಆರೋಪಿಗಳು ಭೀತಿಗೊಂಡಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ವಿನೋದ್​ನನ್ನು ಮನೆಗೆ ಬಿಡುತ್ತೇವೆ ಎಂದು ನಂಬಿಸಿ, ಮಾರ್ಗಮಧ್ಯೆ ವಾಜರಹಳ್ಳಿ ಸಮೀಪದ ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾರೆ ಎಂಬುದು ಇದೀಗ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

ವಿನೋದ್ ಕುಮಾರ್ ನಾಪತ್ತೆಯಾಗಿರುವ ಬಗ್ಗೆ ಅವರ ಪೋಷಕರು ಕುದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸೂಕ್ಷ್ಮವಾಗಿ ತನಿಖೆ ನಡೆಸಿದ್ದು, ಸ್ನೇಹಿತರಿಂದಲೇ ಕೊಲೆಯಾಗಿರುವ ರಹಸ್ಯ ಬಯಲಾಗಿದೆ. ಇದೀಗ ಸುದೀಪ್ ಮತ್ತು ಪ್ರಜ್ವಲ್​ನನ್ನು ಬಂಧಿಸಿರುವ ಪೊಲೀಸರು, ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರು| ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ ಕೇರಳ ಮೂಲದ ವಿಕೃತ ಕಾಮಿ ಅರೆಸ್ಟ್!

0

ಬೆಂಗಳೂರು:- ಹೆಬ್ಬಗೋಡಿಯ ವಿದ್ಯಾನಗರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ ವಿಕೃತ ಕಾಮಿಯನ್ನು ಅರೆಸ್ಟ್ ಮಾಡಿದ್ದಾರೆ.

ಅಮಲ್ (23) ಬಂಧಿತ ಆರೋಪಿ. ಈತ ಕೇರಳ ಮೂಲದವನಾಗಿದ್ದು, ಮನೆ ಮಹಡಿ, ಹಾಗೂ ಆಚೆ ಒಣಹಾಕಿದ್ದ ಮಹಿಳೆಯರ ಒಳ ಉಡುಪುಗಳನ್ನ ಕದಿಯುತ್ತಿದ್ದ. ಹೊರಗಡೆ ಸುತ್ತಾಡಿ ಮನೆಗಳನ್ನು ದೂರದಿಂದಲೇ ಪರಿಶೀಲನೆ ಮಾಡುತ್ತಿದ್ದ. ನಂತರ ಯಾರು ಇಲ್ಲದ ವೇಳೆ ನುಗ್ಗಿ ಒಳ ಉಡುಪುಗಳನ್ನ ಕದ್ದೊಯ್ಯುತ್ತಿದ್ದ. ಬಳಿಕ ಅವುಗಳನ್ನು ತಾನು ಧರಿಸಿಕೊಂಡು ಫೋಟೋ ತೆಗೆದುಕೊಂಡು ವಿಕೃತ ಆನಂದ ಪಡುತ್ತಿದ್ದ ಎಂದು ತಿಳಿದುಬಂದಿದೆ.

ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ವಿದ್ಯಾನಗರದಲ್ಲಿ ವಿಕೃತ ಕಾಮಿ ಅಮಲ್ ನನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಕದ್ದ ಒಳ ಉಡುಪುಗಳನ್ನು ಧರಿಸಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿರುವುದು ಮೊಬೈಲ್​​ನಲ್ಲಿ ಪತ್ತೆಯಾಗಿವೆ. ಸದ್ಯ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ತೆರಿಗೆ ವಂಚನೆ; ಸರ್ಕಾರಕ್ಕೆ ಯಾಮರಿಸುತ್ತಿದ್ದ ನೂರಾರು ಖಾಸಗಿ ಬಸ್‌ಗಳು ಸೀಜ್!

0

ಬೆಂಗಳೂರು: ತೆರಿಗೆ ವಂಚಿಸಿ ಓಡಾಡುತ್ತಿದ್ದ ನೂರಾರು ಖಾಸಗಿ ಬಸ್‌ಗಳನ್ನು ಸೀಜ್ ಮಾಡಲಾಗಿದೆ.

ನಗರದಲ್ಲಿ ಖಾಸಗಿ ಬಸ್ ಹಾಗೂ ಇತರೆ ವಾಹನಗಳು ಟ್ಯಾಕ್ಸ್ ಕಟ್ಟುತ್ತಿಲ್ಲ. ಇದರಿಂದ ಸಾರಿಗೆ ಇಲಾಖೆಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗ್ತಿದೆ. ಇದೀಗ ಸಾರಿಗೆ ಇಲಾಖೆ ಅಪರ ಆಯುಕ್ತ ಎಂ.ಪಿ ಓಂಕಾರೇಶ್ವರಿ ನೇತೃತ್ವದ ತಂಡ ಫೀಲ್ಟ್‌ಗೆ ಇಳಿದಿದೆ. ತೆರಿಗೆ ವಂಚಕರ ವಿರುದ್ಧ ಸಮರ ಸಾರಿದೆ. ಟ್ಯಾಕ್ಸ್ ವಂಚನೆ ಮಾಡಿದವ್ರನ್ನ ಪತ್ತೆ ಹಚ್ಚಿ ನೂರಾರು ಬಸ್‌ಗಳನ್ನ ಸೀಜ್ ಮಾಡಲಾಗಿದೆ.

ಕಳೆದ 5-6 ತಿಂಗಳಲ್ಲಿ 2 ಕೋಟಿಯಷ್ಟು ಟ್ಯಾಕ್ಸ್ ಹಣವನ್ನ ವಸೂಲಿ ಮಾಡಲಾಗಿದೆ. ಸುಮಾರು ದಿನಗಳಿಂದ ಟ್ಯಾಕ್ಸ್ ಕಟ್ಟದೇ ಕಾರ್ಯಾಚರಣೆ ಮಾಡ್ತಿದ್ದ ಬಸ್‌ಗಳನ್ನ ಸೀಜ್ ಮಾಡಲಾಗಿದೆ. ಸೀಜ್ ಮಾಡಿದ ಕೆಲ ಬಸ್‌ಗಳನ್ನ ಆರ್‌ಟಿಓ ಕಚೇರಿ, ಪೊಲೀಸ್ ಠಾಣೆಗಳ ಆವರಣದಲ್ಲಿ ಪಾರ್ಕ್ ಮಾಡಲಾಗಿದೆ. ಇನ್ನೂ ಸೀಜ್ ಮಾಡಿದ ನೂರಾರು ವಾಹನಗಳನ್ನು ನಿಲ್ಲಿಸೋಕೆ ದೇವನಹಳ್ಳಿ ಸಮೀಪ ಇಲಾಖೆಯಿಂದ ಸೀಜರ್ ಯಾರ್ಡ್ ಎಂಬ ಪ್ರತ್ಯೇಕ ವ್ಯವಸ್ಥೆಯನ್ನೇ ಮಾಡಲಾಗಿದೆ.

ಸೀಜ್ ಮಾಡಿದ ವಾಹನಗಳನ್ನು ನಿಲ್ಲಿಸೋಕೆ ಸಾರಿಗೆ ಇಲಾಖೆಗೆ ಜಾಗದ ಕೊರತೆ ಇತ್ತು. ಹೀಗಾಗಿ ಎರಡು ಸೀಜರ್ ಯಾರ್ಡ್ ಸ್ಥಳಗಳನ್ನ ಮಾಡಿಕೊಳ್ಳಲಾಗಿದೆ. ಒಟ್ಟಾರೆ ನಗರದಲ್ಲಿ ಖಾಸಗಿ ಬಸ್ ಆಟಾಟೋಪ ಹೆಚ್ಚಾಗಿದೆ. ಸಾರಿಗೆ ಇಲಾಖೆಗೆ ಲಕ್ಷ ಲಕ್ಷ ಟ್ಯಾಕ್ಸ್ ವಂಚನೆ ಮಾಡಿದ ಖಾಸಗಿ ವಾಹನಗಳ ಮಾಲೀಕರು ಸರ್ಕಾರಕ್ಕೆ ಯಾಮಾರಿಸ್ತಿದ್ರು. ಇದೀಗ ಸಾರಿಗೆ ಇಲಾಖೆ ವಾಹನಗಳನ್ನು ಸೀಜ್ ಮಾಡ್ತಿದೆ.

ಮಾದಕವಸ್ತು ಕಳ್ಳಸಾಗಣೆ ಜಾಲ ಭೇದಿಸಿದ ಸಿಸಿಬಿ; 5.15 ಕೋಟಿ ರೂ. ಮೌಲ್ಯದ ಡ್ರಗ್ಸ್​ ಸೀಜ್, ನೈಜೀರಿಯಾ ಪ್ರಜೆ ಅರೆಸ್ಟ್

0

ಬೆಂಗಳೂರು: ಬೆಂಗಳೂರಿನಲ್ಲಿ ಮಾದಕವಸ್ತು ಕಳ್ಳಸಾಗಣೆ ಜಾಲದ ಮೇಲೆ ಕೇಂದ್ರ ಅಪರಾಧ ವಿಭಾಗ ಪೊಲೀಸರು ದಾಳಿ ನಡೆಸಿ ನೈಜೀರಿಯಾ ಮೂಲದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ಅರ್ನೆಸ್ಟ್ ಒನ್ಯೆಕಾಚಿ ಉಗಾ (45) ಬಂಧಿತ ಆರೋಪಿ. ಮಾರತ್ತಹಳ್ಳಿ ಸಮೀಪದ ಮುನೆಕೊಳಲುವಿನ ಬಾಡಿಗೆ ಮನೆಯಿಂದ 5.15 ಕೋಟಿ ರೂ. ಮೌಲ್ಯದ 2.5 ಕೆಜಿ ಎಂಡಿಎಂಎ ಹಾಗೂ 300 ಎಕ್ಸ್ಟಸಿ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಮಾದಕ ದ್ರವ್ಯ ನಿಗ್ರಹ ವಿಭಾಗ, ಈತನ ಚಲನವಲನಗಳ ಮೇಲೆ ನಿಗಾ ಇಟ್ಟು ದಾಳಿ ನಡೆಸಿದೆ. ಆರೋಪಿ, ಈ ಹಿಂದೆ ಕಾಡುಗೋಡಿ ಹಾಗೂ ಹೆಣ್ಣೂರು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿದ್ದ. ಜೈಲಿನಿಂದ ಬಿಡುಗಡೆಯಾದ ಬಳಿಕ ಮತ್ತೆ ಅಕ್ರಮ ಚಟುವಟಿಕೆ ಆರಂಭಿಸಿದ್ದಾನೆ ಎನ್ನಲಾಗಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಡ್ರಗ್ಸ್ ಪೂರೈಕೆ ಜಾಲ ಮತ್ತು ಇತರ ಆರೋಪಿಗಳ ಕುರಿತು ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು| ಇಸ್ರೇಲ್ ರಾಯಭಾರಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ!

0

ಬೆಂಗಳೂರು: ನಗರದಲ್ಲಿನ ಹಲಸೂರು ಠಾಣಾ ವ್ಯಾಪ್ತಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಬಂದಿರುವ ಘಟನೆ ವರದಿಯಾಗಿದೆ.

ರಾಯಭಾರಿ ಕಚೇರಿಯ ಅಧಿಕಾರಿಗಳು ಇ-ಮೇಲ್ ಪರಿಶೀಲನೆ ನಡೆಸುವ ವೇಳೆ ಬಾಂಬ್ ಬೆದರಿಕೆ ಮೇಲ್ ಬಂದಿರುವುದು ಗಮನಕ್ಕೆ ಬಂದಿದೆ. ಮೇಲ್‌ನಲ್ಲಿ ಕಚೇರಿ ಹಾಗೂ ಆವರಣದಲ್ಲಿ ಆರ್‌ಡಿಎಕ್ಸ್ ಬಾಂಬ್ ಇಡಲಾಗಿದೆ. ಕೆಲವೇ ಗಂಟೆಗಳಲ್ಲಿ ಸ್ಫೋಟವಾಗಲಿದೆ ಎಂದು ಉಲ್ಲೇಖಿಸಲಾಗಿತ್ತು. ತಕ್ಷಣವೇ ರಾಯಭಾರಿ ಕಚೇರಿ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಂಬ್ ಸ್ಕ್ವಾಡ್ ಹಾಗೂ ಶ್ವಾನ ದಳದ ಸಹಾಯದಿಂದ ಸುದೀರ್ಘ ಪರಿಶೀಲನೆ ನಡೆಸಿದರು. ಆದರೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆದರಿಕೆ ಮೇಲ್ ಕಳುಹಿಸಿದವರ ಪತ್ತೆಗೆ ತನಿಖೆ ಮುಂದುವರಿದಿದೆ.

ಅಕ್ರಮ ಬ್ಯಾನರ್‌ಗಳಿಗೆ ಜಿಬಿಎ ಬಿಗ್ ಬ್ರೇಕ್: ಬೆಂಗಳೂರಿನಾದ್ಯಂತ ತೆರವು ಕಾರ್ಯಾಚರಣೆ!

0

ಬೆಂಗಳೂರು: ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ ಬ್ಯಾನರ್ ಗಲಾಟೆಗಳ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಗರಾದ್ಯಂತ ಅನಧಿಕೃತವಾಗಿ ಅಳವಡಿಸಿದ್ದ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.

ಸ್ಕೈವಾಕ್, ಬಸ್ ಶೆಲ್ಟರ್‌ಗಳು ಹಾಗೂ ಸಾರ್ವಜನಿಕ ಸ್ಥಳಗಳ ಸಮೀಪ ಅಳವಡಿಸಲಾಗಿದ್ದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದ್ದು, ಶಾಂತಿನಗರ, ಸಿ.ವಿ.ರಾಮನ್ ನಗರ, ಶಿವಾಜಿನಗರ, ಚಿಕ್ಕಪೇಟೆ ಹಾಗೂ ಗಾಂಧಿನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹೋರ್ಡಿಂಗ್ಸ್‌ಗಳನ್ನು ತೆಗೆದುಹಾಕಲಾಗಿದೆ. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರವೇ 473 ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ ದಂಡ ವಸೂಲಿ ಮಾಡಲಾಗಿದೆ.

ನಗರ ಸೌಂದರ್ಯ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯಾಗುವ ಇಂತಹ ಅಕ್ರಮಗಳನ್ನು ಇನ್ನು ಮುಂದೆ ಸಹಿಸುವುದಿಲ್ಲ ಎಂದು ಜಿಬಿಎ ಎಚ್ಚರಿಕೆ ನೀಡಿದ್ದು, ಅನುಮೋದನೆ ಇಲ್ಲದೆ ಬ್ಯಾನರ್ ಅಳವಡಿಸುವವರ ವಿರುದ್ಧ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸುವುದಾಗಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.

error: Content is protected !!