Home Blog Page 37

ಬೆಂಗಳೂರು| ಇಸ್ರೇಲ್ ರಾಯಭಾರಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ!

0

ಬೆಂಗಳೂರು: ನಗರದಲ್ಲಿನ ಹಲಸೂರು ಠಾಣಾ ವ್ಯಾಪ್ತಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಬಂದಿರುವ ಘಟನೆ ವರದಿಯಾಗಿದೆ.

ರಾಯಭಾರಿ ಕಚೇರಿಯ ಅಧಿಕಾರಿಗಳು ಇ-ಮೇಲ್ ಪರಿಶೀಲನೆ ನಡೆಸುವ ವೇಳೆ ಬಾಂಬ್ ಬೆದರಿಕೆ ಮೇಲ್ ಬಂದಿರುವುದು ಗಮನಕ್ಕೆ ಬಂದಿದೆ. ಮೇಲ್‌ನಲ್ಲಿ ಕಚೇರಿ ಹಾಗೂ ಆವರಣದಲ್ಲಿ ಆರ್‌ಡಿಎಕ್ಸ್ ಬಾಂಬ್ ಇಡಲಾಗಿದೆ. ಕೆಲವೇ ಗಂಟೆಗಳಲ್ಲಿ ಸ್ಫೋಟವಾಗಲಿದೆ ಎಂದು ಉಲ್ಲೇಖಿಸಲಾಗಿತ್ತು. ತಕ್ಷಣವೇ ರಾಯಭಾರಿ ಕಚೇರಿ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಂಬ್ ಸ್ಕ್ವಾಡ್ ಹಾಗೂ ಶ್ವಾನ ದಳದ ಸಹಾಯದಿಂದ ಸುದೀರ್ಘ ಪರಿಶೀಲನೆ ನಡೆಸಿದರು. ಆದರೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆದರಿಕೆ ಮೇಲ್ ಕಳುಹಿಸಿದವರ ಪತ್ತೆಗೆ ತನಿಖೆ ಮುಂದುವರಿದಿದೆ.

ಅಕ್ರಮ ಬ್ಯಾನರ್‌ಗಳಿಗೆ ಜಿಬಿಎ ಬಿಗ್ ಬ್ರೇಕ್: ಬೆಂಗಳೂರಿನಾದ್ಯಂತ ತೆರವು ಕಾರ್ಯಾಚರಣೆ!

0

ಬೆಂಗಳೂರು: ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ ಬ್ಯಾನರ್ ಗಲಾಟೆಗಳ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಗರಾದ್ಯಂತ ಅನಧಿಕೃತವಾಗಿ ಅಳವಡಿಸಿದ್ದ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.

ಸ್ಕೈವಾಕ್, ಬಸ್ ಶೆಲ್ಟರ್‌ಗಳು ಹಾಗೂ ಸಾರ್ವಜನಿಕ ಸ್ಥಳಗಳ ಸಮೀಪ ಅಳವಡಿಸಲಾಗಿದ್ದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದ್ದು, ಶಾಂತಿನಗರ, ಸಿ.ವಿ.ರಾಮನ್ ನಗರ, ಶಿವಾಜಿನಗರ, ಚಿಕ್ಕಪೇಟೆ ಹಾಗೂ ಗಾಂಧಿನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹೋರ್ಡಿಂಗ್ಸ್‌ಗಳನ್ನು ತೆಗೆದುಹಾಕಲಾಗಿದೆ. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರವೇ 473 ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ ದಂಡ ವಸೂಲಿ ಮಾಡಲಾಗಿದೆ.

ನಗರ ಸೌಂದರ್ಯ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯಾಗುವ ಇಂತಹ ಅಕ್ರಮಗಳನ್ನು ಇನ್ನು ಮುಂದೆ ಸಹಿಸುವುದಿಲ್ಲ ಎಂದು ಜಿಬಿಎ ಎಚ್ಚರಿಕೆ ನೀಡಿದ್ದು, ಅನುಮೋದನೆ ಇಲ್ಲದೆ ಬ್ಯಾನರ್ ಅಳವಡಿಸುವವರ ವಿರುದ್ಧ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸುವುದಾಗಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.

ರಾಯಚೂರು| ಲಾರಿ-2 ಗೂಡ್ಸ್ ವಾಹನಗಳ ಮಧ್ಯೆ ಸರಣಿ ಅಪಘಾತ: ಐವರು ದುರ್ಮರಣ

0

ರಾಯಚೂರು:- ಜಿಲ್ಲೆಯ ಸಿಂಧನೂರು ತಾಲೂಕಿನ ಕನ್ನಾರಿ ಕ್ರಾಸ್ ಬಳಿ ಲಾರಿ ಮತ್ತು ಎರಡು ಗೂಡ್ಸ್ ವಾಹನ ಮಧ್ಯೆ ಸರಣಿ ಅಪಘಾತ ಸಂಭವಿಸಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜರುಗಿದೆ.

ಸಣ್ಣ ಯಲ್ಲಪ್ಪ(45), ಹರಿ(25), ರಂಗನಾಥ(12) ಬಸವರಾಜ್(40) ಹಾಗೂ ಟಾಟಾ ಏಸ್‌ ವಾಹನದ ಚಾಲಕ ಮೃತರು. ಇವರು ಆಂಧ್ರ ಮೂಲದವರು. ಭೀಕರ ಅಪಘಾತದಲ್ಲಿ ಕೆಲ ಕುರಿಗಳು ಕೂಡ ಸಾವನ್ನಪ್ಪಿವೆ. ಸಿಂಧನೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಟಾಟಾ ಏಸ್‌ ಮತ್ತು ಬೊಲೆರೊ ಪಿಕಪ್ ವಾಹನದಲ್ಲಿ ಕುರಿಗಳನ್ನು ತುಂಬಿಕೊಂಡು ಒಟ್ಟು ಎಂಟು ಜನರು ಹೊರಟಿದ್ದರು. ಬಳ್ಳಾರಿಯಿಂದ ಸಿಂಧನೂರು ಕಡೆಗೆ ಕುರಿ ತುಂಬಿಕೊಂಡು ಒಂದರ ಹಿಂದೆ ಒಂದರಂತೆ 2 ವಾಹನ ಹೊರಟಿದ್ದವು. ಅತೀ ವೇಗದಲ್ಲಿದ್ದ ಹಿನ್ನೆಲೆ ನಿಯಂತ್ರಣ ತಪ್ಪಿ ಎರಡು ವಾಹನಗಳಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಟಾಟಾ ಏಸ್ ವಾಹನದಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡಿದ್ದ ಮೂವರನ್ನು ಸ್ಥಳೀಯ ಸಿಂಧನೂರು ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.

ಅಪರ ಜಿಲ್ಲಾಧಿಕಾರಿಗಳಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಚುನಾವಣಾ ಕಾರ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಬೆಳಗಾವಿ ವಿಭಾಗ ಮಟ್ಟದಲ್ಲಿ ಗದಗ ಜಿಲ್ಲೆಯ ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳಾದ ಡಾ. ದುರಗೇಶ್ ಕೆ.ಆರ್ ಅವರು ರಾಜ್ಯ ಮಟ್ಟದ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಉತ್ತಮ ಸಹಾಯಕ ಚುನಾವಣಾಧಿಕಾರಿ ಕರ್ತವ್ಯ ನಿರ್ವಹಣೆಗೆ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ಅವರನ್ನು ರಾಜ್ಯ ಸರ್ಕಾರಿ ನೌಕರರ ಗದಗ ಜಿಲ್ಲಾ ಸಂಘದಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನೌಕರರ ಸಂಘದ ಗದಗ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಪದಾಧಿಕಾರಿಗಳಾದ ರಾಜು ಸೊಪಡ್ಲ, ರಾಜು ಕಂತಿಗೊಣ್ಣವರ, ಶ್ರೀಧರ ಚಿನಗುಡಿ, ವಾರ್ತಾಧಿಕಾರಿ ವಸಂತ ಮಡ್ಲೂರ ಮುಂತಾದವರಿದ್ದರು.

ವಿಜ್ಞಾನ ಹಿಂದೂ ಧರ್ಮದ ತುಣುಕಷ್ಟೇ: ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸನಾತನ ಹಿಂದೂ ಧರ್ಮ ಅತ್ಯಂತ ಶ್ರೇಷ್ಠವಾದ ಪರಂಪರೆಯನ್ನು ಹೊಂದಿದ್ದು, ನಮ್ಮ ಧರ್ಮದ ಧೀಶಕ್ತಿಯನ್ನರಿತು ನಾನು ಹಿಂದೂ ಎಂಬ ಅಭಿಮಾನ, ಸ್ವಾಭಿಮಾನದಿಂದ ಪ್ರತಿಯೊಬ್ಬರೂ ಬದುಕಬೇಕು ಎಂದು ಗದಗ ಶ್ರೀ ರಾಮಕೃಷ್ಣ ವಿವೇಕಾನಂದಾಶ್ರಮದ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಹಾಸ್ವಾಮಿಗಳು ನುಡಿದರು.

ಅವರು ಪಟ್ಟಣದ ಶ್ರೀ ಸೋಮೇಶ್ವರ ತೇರಿನ ಮನೆಯ ಹತ್ತಿರ ನಡೆದ ಬೃಹತ್ ಹಿಂದೂ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಭೌದ್ಧಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ, ವೈಜ್ಞಾನಿಕ ಎಲ್ಲ ಕ್ಷೇತ್ರಗಳಲ್ಲಿ ಶ್ರೀಮಂತಿಕೆ ಹೊಂದಿದ ಹಿಂದೂ ಧರ್ಮ ಜಗತ್ತಿನ ಉಳಿದೆಲ್ಲ ದೇಶಗಳಿಗೆ ಮುಖವಾಣಿಯಾಗಿದೆ. ಹಿಂದೂ ಧರ್ಮ ಅಪರಿಮಿತ, ಸೀಮಾತೀತ, ಶಾಶ್ವತವಾಗಿದೆ. ಹಿಂದೂ ಧರ್ಮ ಸಕಲ ಜೀವರಾಶಿ, ಪ್ರಕೃತಿ ಸೇರಿ ಎಲ್ಲದರಲ್ಲಿ ಶ್ರೇಷ್ಠತೆಯನ್ನೇ ಸಾಧಿಸಿದೆ. ಇಂದು ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಸನಾತನ ಹಿಂದೂ ಧರ್ಮವೇ ಮೂಲಾಧಾರವಾಗಿದೆ. ವಿಜ್ಞಾನ ಹಿಂದೂ ಧರ್ಮದ ತುಣುಕಷ್ಟೇ. ನಮ್ಮ ದೇಶ, ಧರ್ಮ, ಗುರುಪರಂಪರೆಯ ಹಿರಿಮೆ-ಗರಿಮೆಯನ್ನು ಜಗತ್ತಿಗೆ ಸಾರಿದ ವಿವೇಕಾನಂದರನ್ನು ಓದಿದರೆ ನಮ್ಮ ರಕ್ತದ/ಧರ್ಮದ ಶ್ರೇಷ್ಠತೆ ಅರಿವಾಗುತ್ತದೆ.

ಈ ಪುಣ್ಯಭೂಮಿಯಲ್ಲಿ ಸಿಂಹದಂತೆ ಬದುಕಬೇಕಾದ ನಾವೆಲ್ಲ ನರಿ-ಕುರಿಗಳಂತೆ ಬದುಕುತ್ತಿದ್ದೇವೆ. ಕೆಲ ಕಾವಿಧಾರಿಗಳು, ಬುದ್ಧಿಜೀವಿಗಳೆನಿಸಿಕೊಂಡವರು ನಮ್ಮನ್ನು ಮತಿಗೇಡಿಗಳನ್ನಾಗಿಸುತ್ತಿದ್ದಾರೆ. ಜಗತ್ತಿನ ಶ್ರೀಮಂತ ದೇಶಗಳು, ವಿಶ್ವಮಾನ್ಯರೂ ಸಹ ಭಾರತವನ್ನು ಆಧರಿಸುತ್ತಿವೆ. ಹಿಂದೂ ಧರ್ಮದ ಸಾರ ಸಂಗ್ರಹ ಉನ್ನತಮಟ್ಟದ ಜ್ಞಾನ, ಆನಂದ, ಆತ್ಮಸ್ಥೈರ್ಯ ನೀಡುತ್ತದೆ. ಇನ್ನಾದರೂ ಧರ್ಮದ ಶ್ರೇಷ್ಠತೆ, ನಮ್ಮತನ, ಸ್ವರಕ್ಷಣೆಗಾಗಿ ಹೊಸ ಜೀವನದ ಸಂಕಲ್ಪಕ್ಕೆ ದಿಟ್ಟಹೆಜ್ಜೆ ಇಡೋಣ ಎಂದರು.

ಕಾರ್ಯಕ್ರಮದ ದಿಕ್ಸೂಚಿ ನುಡಿಗಳನ್ನಾಡಿದ ಧಾರವಾಡ ವಿಭಾಗ ಸಂಘ ಸಂಚಾಲಕ ಗೋವಿಂದಪ್ಪ ಗೌಡಪ್ಪಗೋಳ, 100 ವರ್ಷಗಳ ಹಿಂದೆ ಹಿಂದೂ ಧರ್ಮ ಸಂಘಟನೆ ಮಾಡುವದೇ ಅಪರಾಧ ಎನ್ನುವ ಭಾವನೆ ಕಾಡುತ್ತಿತ್ತು. ಅಂತಹ ವೇಳೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹರಿಕಾರ ಡಾ. ಕೇಶವ ಬಲಿರಾಂ ಹೆಡಗೆವಾರ ಬಿತ್ತಿದ ಹಿಂದೂ ಧರ್ಮದ ಶ್ರೇಷ್ಠವಾದ ಸಸಿ ಇಂದು ಆಲದ ಮರದಂತೆ ಎಲ್ಲರಿಗೂ ನೆರಳಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ. ನಾವೆಲ್ಲ ಬಂಧುಗಳೆಂಬ ಭಾವನೆಯೊಂದಿಗೆ ಧರ್ಮದ ಸಂಘಟನೆ-ರಕ್ಷಣೆಯ ಜತೆಗೆ ರಾಷ್ಟ್ರವನ್ನು ಉತ್ತುಂಗಕ್ಕೇರಿಸುವ ಸಂಕಲ್ಪದೊಂದಿಗೆ ಬಾಳಬೇಕು ಎಂದರು.

ಶಾಸಕ ಡಾ.ಚಂದ್ರು ಲಮಾಣಿ, ಸಣ್ಣೀರಪ್ಪ ಹಳ್ಳೆಪ್ಪನವರ, ಎಂ.ಎಸ್. ದೊಡ್ಡಗೌಡ್ರ, ಬಸಣ್ಣ ಬೆಟಗೇರಿ, ಲೋಹಿತ್ ನೆಲವಿಗಿ, ಶಂಕರ ಬ್ಯಾಡಗಿ, ನಿಂಬಣ್ಣ ಮಡಿವಾಳರ, ಮಹದೇವಪ್ಪ ಬೆಳವಿಗಿ ಸೇರಿ ಗಣ್ಯಮಾನ್ಯರು, ಹಿರಿಯರು, ಹಿಂದೂಪರ ಸಂಘಟನೆಗಳವರು ಇದ್ದರು. ಈರಣ್ಣ ಗಾಣಿಗೇರ, ವೈ.ಪಿ. ನೆಗಳೂರ, ಗಂಗಾಧರ ಮೆಣಸಿನಕಾಯಿ, ಷಣ್ಮುಕ ಗಡ್ಡೆಣ್ಣವರ ನಿರೂಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಧ್ಯಾತ್ಮಿಕ ಚಿಂತಕ ಚಂದ್ರಣ್ಣ ಮಹಾಜನಶೆಟ್ಟರ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಹಿಂದೂ ರಾಷ್ಟ್ರ ವಿಶ್ವಮಾನವತೆಯನ್ನು ಸಾರಿದೆ. ಈಗಲೂ ಸಹ ನಮ್ಮೊಳಗೆ ಧರ್ಮದ ವಿಷಬೀಜ ಬಿತ್ತುತ್ತಿದ್ದು ಎಚ್ಚರಿಕೆಯಿಂದ ಕಿತ್ತುಹಾಕಬೇಕಿದೆ. ಹಿಂದೂ ಧರ್ಮ, ಸಂಸ್ಕೃತಿ, ದೇವಾಲಯ, ಶಿಕ್ಷಣ, ಸಂಪತ್ತು, ಶಿಲ್ಪಕಲೆಗಳ ಮೇಲೆ ಎಷ್ಟೇ ಘೋರವಾದ ದಾಳಿಯಾಗಿದ್ದರೂ ಕಾಲಕಾಲಕ್ಕೆ ದೇವಮಾನವರಾಗಿ ಅವತರಿಸಿದ ಮಹಾಪುರುಷರು ಅವೆಲ್ಲವನ್ನೂ ಹಿಮ್ಮೆಟ್ಟಿಸಿದ್ದಾರೆ. ಹಿಂದೂ ಧರ್ಮದ ಬೆಳಕು ವಿಶ್ವಕ್ಕೆಲ್ಲ ಬೆಳಕು ನೀಡುತ್ತಿದೆ ಎಂದರು.

ಬ್ರಹ್ಮ ಭೋಜನ, ಈಶ್ವರೀಯ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ವರ್ತಮಾನ ಸಮಯದಲ್ಲಿ ಜಾತಿ-ಬೇಧಗಳಿಂದ ಮುಕ್ತರಾಗಿ ಉನ್ನತ ಜೀವನವನ್ನು ನಡೆಸುವ ಆಧ್ಯಾತ್ಮಿಕತೆಯ ಮಾರ್ಗವಾಗಿದೆ ಎಂದು ಕಾನಿಪ ಸಂಘದ ಜಿಲ್ಲಾ ಉಪಾಧ್ಯಕ್ಷ ಪ್ರಭುಸ್ವಾಮಿ ಅರವಟಗಿಮಠ ಹೇಳಿದರು.

ಪಟ್ಟಣದ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಬ್ರಹ್ಮ ಭೋಜನ ಹಾಗೂ ಈಶ್ವರೀಯ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಸ್ತಿ ಎಷ್ಟಿದ್ದರೇನು, ಮನುಷ್ಯನಿಗೆ ಅಗತ್ಯವಿರುವುದು ನೆಮ್ಮದಿ ಮತ್ತು ಮನಃಶಾಂತಿ. ಈಶ್ವರೀಯ ವಿಶ್ವವಿದ್ಯಾಲಯಗಳು ಮನುಷ್ಯನಲ್ಲಿ ಮನಃಶಾಂತಿ ತುಂಬುತ್ತಿವೆ. ನಾಮ ಹಲವಾದರೂ, ದೇವನೊಬ್ಬನೇ ಎಂಬ ತತ್ವದಡಿ ಮುನ್ನಡೆಯುತ್ತಿವೆ. ಮಹಿಳೆಯರ ನೇತೃತ್ವದಲ್ಲಿ ವಿಶ್ವಶಾಂತಿಗಾಗಿ ಕೆಲಸ ಮಾಡುತ್ತಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜಗತ್ತಿನ ಯಾವುದೇ ಶಾಖೆಗೆ ಭೇಟಿ ನೀಡಿದರೂ ಅಧ್ಯಾತ್ಮ ಹಾಗೂ ನೆಮ್ಮದಿ ದೊರೆಯುತ್ತದೆ ಎಂದರು.

ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಸವಿತಕ್ಕ ಸಂದೇಶ ನೀಡಿ, ಎಲ್ಲ ಧರ್ಮಗಳೂ ಪರಮಾತ್ಮನನ್ನು ಜ್ಯೋತಿ ರೂಪದಲ್ಲಿ ಕಾಣುತ್ತವೆ. ಅಂತಹ ಜ್ಯೋತಿಯು ನಮ್ಮ ಆತ್ಮದ ಜೊತೆ ಅನುಸಂಧಾನ ಹೊಂದಬೇಕು. ಹೊರಗಿನ ಸಂಪತ್ತಿನ ಬದಲಾಗಿ, ಆಂತರಿಕ ಶಾಂತಿ ಮತ್ತು ಸಂತೃಪ್ತಿಯನ್ನು ಸಾಧಿಸುವುದೇ ಮುಖ್ಯ. ಆಧ್ಯಾತ್ಮದಿಂದ ಆಂತರಿಕ ಸಶಕ್ತೀಕರಣ ಸಾಧ್ಯವಾಗುತ್ತದೆ ಎಂದರು.

ಪತ್ರಕರ್ತ ಈಶ್ವರ ಬೆಟಗೇರಿ ಮಾತನಾಡಿದರು. ಕಾರ್ಯಕ್ರಮವನ್ನು ಕಾನಿಪ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಆದರ್ಶ ಕುಲಕರ್ಣಿ ಉದ್ಘಾಟಿಸಿದರು. ಕಾನಿಪ ಸಂಘದ ಪದಾಧಿಕಾರಿಗಳಿಗೆ ಸನ್ಮಾನ ಜರುಗಿತು. ಕಾನಿಪ ತಾಲೂಕ ಉಪಾಧ್ಯಕ್ಷ ಮಲ್ಲಯ್ಯ ಗುಂಡಗೋಪುರಮಠ, ಕಾರ್ಯದರ್ಶಿ ಸಂಗಮೇಶ ಮೆಣಸಿಗಿ, ಗವಿಸಿದ್ದಪ್ಪ ಗೊಡಚಪ್ಪನವರ, ಹುಚ್ಚಿರಪ್ಪ ಈಟಿ, ಎಂ.ಎಸ್. ಪೂಜಾರ, ಬಿ.ವಿ. ದೇಸಾಯಿಪಟ್ಟಿ, ಎಸ್.ಕೆ. ಪ್ರಭುಸ್ವಾಮಿಮಠ, ಮಲ್ಲಣ್ಣ ಕಾತರಕಿ, ವೀರಣ್ಣ ಹತ್ತಿಕಟಗಿ, ಹನಮಂತ ರಾಚನಗೌಡ್ರ, ರಾಮಣ್ಣ ಕುಲಕರ್ಣಿ ಸೇರಿದಂತೆ ಈಶ್ವರೀಯ ಪರಿವಾರದವರಿದ್ದರು.

ಪ್ರಜ್ವಲ್ ರಿತ್ತಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇತ್ತೀಚೆಗೆ ಮನೆ ನಿರ್ಮಾಣ ಕಾಮಗಾರಿಯ ಸಂದರ್ಭದಲ್ಲಿ ಸಿಕ್ಕಿದ್ದ ಚಿನ್ನಾಭರಣ ಹಾಗೂ ಬಂಗಾರದ ನಾಣ್ಯಗಳನ್ನು ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿಯನ್ನು ಇಲ್ಲಿಯ ಗದಗ ತಾಲೂಕು ಉಣ್ಣೆ ಉದ್ಯಮಿಕ ಸಹಕಾರಿ ಸಂಘವು ಸನ್ಮಾನಿಸಿ ಗೌರವಿಸಿತು.

ಬಜಾರ್ ರಸ್ತೆಯಲ್ಲಿ ನೂತನವಾಗಿ ಆರಂಭವಾದ ಸಹಕಾರಿ ಸಂಘದಲ್ಲಿ ದತ್ತಾತ್ರೇಯ ಜೋಶಿ ಅವರ ನೇತೃತ್ವದಲ್ಲಿ ನಡೆದ ಸತ್ಯನಾರಾಯಣ ಹಾಗೂ ನವಗ್ರಹ ಪೂಜೆ ಕಾರ್ಯಕ್ರಮದಲ್ಲಿ ಪ್ರಜ್ವಲ್ ರಿತ್ತಿಯನ್ನು ಸನ್ಮಾನಿಸಿದರು.

ಮಾಜಿ ಸಚಿವ ಬಿ.ಆರ್. ಯಾವಗಲ್, ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಸಿದ್ಧಲಿಂಗೇಶ್ವರ ಪಾಟೀಲ, ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ, ರವಿ ದಂಡಿನ, ವೀರಯ್ಯ ಗಂಧದ, ಮಹೇಶ ಮುಸ್ಕಿನಭಾವಿ, ಬಸವರಾಜ ಮುಳ್ಳಾಳ, ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಉಮಚಗಿ, ಉಪಾಧ್ಯಕ್ಷ ಕೊಟ್ರಪ್ಪ ಬೆನ್ನಳ್ಳಿ, ನಿರ್ದೇಶಕರಾದ ನಾಗರಾಜ ಖಂಡು, ರಾಘವೇಂದ್ರ ವಿಠೋಜಿ, ಕೇಶವ ಗುದಗಿ, ಮಂಜುನಾಥ ಕರಿಯಲ್ಲಪ್ಪನವರ, ಹನುಮಂತ ಗಾಜಿ, ರವಿರಾಜ ಕಟಿಗ್ಗಾರ, ಫಕ್ಕೀರಪ್ಪ ಬಾಳಿಕಟ್ಟಿ, ಶಾರದಾ ತೋಫಿನ, ಮಲ್ಲಿಕಾರ್ಜುನ ಬಿನ್ನಾಳ, ರೇಣುಕಾ ಗರ್ಜಪ್ಪನವರ, ಸುಭಾಸ ಸತ್ಯಣ್ಣವರ, ಶರಣಪ್ಪ ಭಜಂತ್ರಿ ಪಾಲ್ಗೊಂಡಿದ್ದರು.

ಉದ್ಯಮಿಗಳು ಲೆಕ್ಕಪತ್ರವನ್ನು ಸರಿಯಾಗಿ ನಿರ್ವಹಿಸಿ: ರೂಪಾರಾಣಿ

0

ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಬೆಳದಂತೆ ನಮ್ಮ ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದಲ್ಲಿ ಹೊಸತನವನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ವ್ಯಾಪಾರೋದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಯಾಗಬೇಕಾಗಿದೆ. ಜೊತೆಗೆ ನಮ್ಮ ಲೆಕ್ಕಪತ್ರವನ್ನು ಸರಿಯಾಗಿ ಇಟ್ಟುಕೊಳ್ಳುವುದು ಅಷ್ಟೇ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಹೊಸದಾಗಿ ಅಭಿವೃದ್ಧಿಗೊಂಡ ಟ್ಯಾಲಿ ಪ್ರೈಮ್ 7.0ನ್ನು ಪ್ರತಿಯೊಬ್ಬ ವ್ಯಾಪಾರಸ್ಥರು ಮತ್ತು ಕೈಗಾರಿಕೋದ್ಯಮಿಗಳು ಅಳವಡಿಸಿಕೊಂಡು ತಮ್ಮ ಲೆಕ್ಕಪತ್ರ, ಆದಾಯ ತೆರಿಗೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಗಳಿಗೆ ಫೈಲಿಂಗ್‌ಗಳನ್ನು ಸುಲಭವಾಗಿ ನಿಭಾಯಿಸಬಹುದು ಎಂದು ರೂಪಾರಾಣಿ ಹೇಳಿದರು.

ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಪುವಿ ಬೆಂಗಳೂರು ಹಾಗೂ ಅಕೌಂಟ್ ಪ್ರೋ ಸಲ್ಯೂಶನ್ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಟ್ಯಾಲಿ ಪ್ರೈಮ್ 7.0 ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ರೆಸ್ಟ್ ಆಫ್ ಕರ್ನಾಟಕ ಟ್ಯಾಲಿ ಸೊಲ್ಯೂಶನ್ ಬೆಂಗಳೂರು ಇದರ ರಿಜಿನಲ್ ಮ್ಯಾನೇಜರ್ ರಾಮನಗೌಡ ಜಿ.ಪಿ. ಹಾಗೂ ಟ್ಯಾಲಿ ಸೊಲ್ಯೂಶನ್ ಹುಬ್ಬಳ್ಳಿಯ ಜಯರಾಜ ಎಸ್ ಮಾತನಾಡುತ್ತಾ, ವ್ಯಾಪಾರಸ್ಥರು ತಮ್ಮ ಲೆಕ್ಕಪತ್ರವನ್ನು ಸರಿಯಾಗಿ ನಿಭಾಯಿಸಲು ಈ ಟ್ಯಾಲಿ ಪ್ರೈಮ್ ಅನುಕೂಲವಾಗುತ್ತದೆ ಎಂದು ಮಾಹಿತಿ ನೀಡಿದರು.

ಮಹಿಳಾ ಘಟಕದ ಅಧ್ಯಕ್ಷರಾದ ಜ್ಯೋತಿ ರಾಮನಗೌಡ ದಾನಪ್ಪಗೌಡ್ರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ವ್ಯಾಪಾರ-ವ್ಯವಹಾರವನ್ನು ಎಷ್ಟು ಅಚ್ಚುಕಟ್ಟಾಗಿ ನಿಭಾಯಿಸುತ್ತೇವೆಯೋ ಅಷ್ಟೇ ಲೆಕ್ಕಪತ್ರ ಇಡುವುದು ಮುಖ್ಯವಾಗಿದೆ. ಹೊಸ ಹೊಸ ತಂತ್ರಜ್ಞಾನ ಬೆಳೆದಂತೆ ನಾವು ಅವುಗಳನ್ನು ಅಳವಡಿಸಿಕೊಂಡು ವ್ಯಾಪಾರೋದ್ಯಮವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕೆಂದರು.

ಪದ್ಮಾ ಕಬಾಡಿ ಪ್ರಾರ್ಥಿಸಿದರು. ಸಂಸ್ಥೆಯ ಮಹಿಳಾ ಘಟಕದ ಗೌರವ ಕಾರ್ಯದರ್ಶಿ ಪೂರ್ಣಿಮಾ ಕೆ.ಆಟದ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಘಟಕದ ಕೋಶಾಧ್ಯಕ್ಷರಾದ ರೇಣುಕಾ ಲಿಂಗರಾಜ ಅಮಾತ್ಯ ವಂದಿಸಿದರು.

ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾದ ಶರಣಬಸಪ್ಪ ಸಂಗಪ್ಪ ಗುಡಿಮನಿ ಮಾತನಾಡುತ್ತಾ, ವ್ಯಾಪಾರ ಮಾಡಿದರೆ ಸಾಲದು, ಲೆಕ್ಕಪತ್ರವನ್ನು ಇಡುವುದು ಅತಿ ಅವಶ್ಯಕವಾಗಿದೆ. ಕೊಟ್ಟಿಗಟ್ಟಲೇ ವ್ಯಾಪಾರ ಮಾಡುತ್ತೇವೆ. ಆದರೆ ಲೆಕ್ಕಪತ್ರವನ್ನು ನಿಭಾಯಿಸುವುದು ಅತಿ ಮುಖ್ಯವಾಗಿದೆ ಎಂದು ತಿಳಿಸಿದರು.

ಪ್ರತಿಯೊಬ್ಬರಲ್ಲೂ ಗಾಂಧೀಜಿ ಇದ್ದಾರೆ: ಡಾ. ಬಸವರಾಜ ಬಳ್ಳಾರಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸತ್ಯ, ಅಹಿಂಸೆ, ತ್ಯಾಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, ಜಗತ್ತಿಗೆ ಮಾದರಿಯಾದ, ಜೀವನದ ಮೌಲ್ಯಗಳನ್ನು ತಮ್ಮ ಬದುಕಿನ ಮೂಲಕ ತೋರಿದ ಮಹಾತ್ಮ ಗಾಂಧೀಜಿಯವರು ಪ್ರತಿಯೊಬ್ಬರಲ್ಲೂ ಇದ್ದಾರೆ. ಅವರು ಬಿತ್ತಿದ ದೇಶಾಭಿಮಾನ, ದೇಶಭಕ್ತಿ ಇಂದಿಗೂ ನಮ್ಮಲ್ಲಿ ಜಾಗೃತವಾಗಿದ್ದು, ರಾಷ್ಟ್ರದ ಪ್ರಗತಿಗೆ ಕಾರಣವಾಗಿದೆ ಎಂದು ಗದಗ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಡಾ. ಬಸವರಾಜ ಬಳ್ಳಾರಿ ಅಭಿಪ್ರಾಯಪಟ್ಟರು.

ಅವರು ನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ಸೋಮವಾರ ಸಂಜೆ ರಂಗಾಯಣ ಶಿವಮೊಗ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ, ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಗದಗ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ ಪ್ರಯೋಗ ಉದ್ಘಾಟಿಸಿ ಮಾತನಾಡಿದರು.

ಜೀವಂತ ಅಭಿವ್ಯಕ್ತಿ ಕಲೆಯಾದ ರಂಗ ಕಲೆಗೆ ಗದಗ ಜಿಲ್ಲೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಶಿವಮೊಗ್ಗದ ರಂಗಾಯಣ ಪ್ರಸ್ತುತಪಡಿಸುವ `ನಮ್ಮೊಳಗೊಬ್ಬ ಗಾಂಧಿ’ ನಾಟಕ ಪ್ರದರ್ಶನ ಇಲ್ಲಿನ ಪ್ರೇಕ್ಷಕರಿಗೆ ಒಂದು ಉತ್ತಮ ಅವಕಾಶ ಎಂದರು.

ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಕಡ್ಲಿಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗದಗ-ಬೆಟಗೇರಿ ನಗರಸಭೆಯ ಸದಸ್ಯರಾದ ಮೆಹಬೂಬಸಾಬ ಡಿ.ನದಾಫ್, ಜಿಲ್ಲೆಯ ಹಿರಿಯ ಸಾಂಸ್ಕೃತಿಕ ಚಿಂತಕರಾದ ಡಾ. ಜಿ.ಬಿ. ಪಾಟೀಲ, ರಾಜ್ಯ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ರವಿ ಎಲ್. ಗುಂಜೀಕರ್, ಚಿನ್ಮಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷರಾದ ಮೌನೇಶ ಸಿ.ಬಡಿಗೇರ(ನರೇಗಲ್ಲ) ಮತ್ತು ಶಿವಮೊಗ್ಗ ರಂಗಾಯಣ ತಂಡದ ಶಂಕರ್ ಉಪಸ್ಥಿತರಿದ್ದರು.

ಮೌನೇಶ ಸಿ. ಬಡಿಗೇರ(ನರೇಗಲ್ಲ) ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕ ವಿಶ್ವನಾಥ ಯ.ಕಮ್ಮಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಅನಂತ ಶಿವಪೂರ, ಡಾ. ವಾಣಿ ಶಿವಪೂರ, ಪ್ರೊ. ಸಿದ್ದು ಯಾಪಲಪರವಿ, ಅಂದಾನೆಪ್ಪ ವಿಭೂತಿ, ರುದ್ರಣ್ಣ ಗುಳಗುಳಿ, ಡಾ. ದತ್ತಪ್ರಸನ್ನ ಲ.ಪಾಟೀಲ, ಸಿ.ವಿ. ಬಡಿಗೇರ, ವಿಶ್ವನಾಥ ಬೇಂದ್ರೆ, ಶ್ರೀನಿವಾಸ ಗುಂಜಾಳ, ಕೃಷ್ಣ ಕಡ್ಲಿಕೊಪ್ಪ, ಬಸವರಾಜ ಬಡಿಗೇರ, ಶ್ರೀಧರ ಕೊಣ್ಣೂರ, ಮಧುಸೂದನ ವಿಶ್ವಕರ್ಮ ಮುಂತಾದವರಿದ್ದರು.

ಹಿರಿಯ ರಂಗಕರ್ಮಿ ಶಶೀಲೇಂದ್ರ ಜೋಶಿ ಮಾತನಾಡಿ, ಕನ್ನಡ ರಂಗಭೂಮಿಗೆ ಗದಗ ಜಿಲ್ಲೆಯ ಕೊಡುಗೆ ಅಪಾರ. ಸಕ್ಕರಿ ಬಾಳಾಚಾರ್ಯರು, ಶಿರಹಟ್ಟಿಯ ವೆಂಕೊಬರಾಯರು, ಸದಾಶಿವರಾಯ ಗರುಡರು, ಜಯತೀರ್ಥ ಜೋಶಿ ಅವರ ರಂಗ ಸೇವೆ ಸದಾ ಸ್ಮರಣೀಯ ಎಂದರು.

ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕೆ ಸರ್ಕಾರದ ಬೆಂಬಲ: ಜಮೀರ ಅಹ್ಮದ್ ಖಾನ್

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರವು ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 4,500 ಕೋಟಿ ರೂ. ಬಜೆಟ್ ಒದಗಿಸಲಾಗಿದೆ. ಈ ಅನುದಾನದ ಪ್ರಮುಖ ಭಾಗವನ್ನು ಮಕ್ಕಳ ಶಿಕ್ಷಣಕ್ಕೆ ಬಳಸಲಾಗುತ್ತಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವರಾದ ಬಿ.ಝಡ್. ಜಮೀರ ಅಹ್ಮದ್ ಖಾನ್ ಹೇಳಿದರು.

ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಕರ್ನಾಟಕ ಮೌಲಾನಾ ಅಜಾದ ಪಬ್ಲಿಕ್ ಶಾಲೆ (ಆಂಗ್ಲ ಮಾಧ್ಯಮ)ಯ ನೂತನ ಕಟ್ಟಡದ ಲೋಕಾರ್ಪಣೆ ಹಾಗೂ ಹೆಚ್ಚುವರಿ ತರಗತಿಗಳ ಕಟ್ಟಡ ಶಂಕುಸ್ಥಾಪನೆ ಸಮಾರಂಭವನ್ನು ನಗರದ ಗಂಗಿಮಡಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 2.38 ಲಕ್ಷಕ್ಕೂ ಅಧಿಕ ಮಕ್ಕಳು ವಸತಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಅನೇಕ ವಸತಿ ಶಾಲೆಗಳು ಆರಂಭವಾಗಿದ್ದು, ಇದೀಗ 100 ವಸತಿ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ. 100 ಮದರಸಾಗಳಲ್ಲಿ 9–10ನೇ ತರಗತಿ ಓದುತ್ತಿರುವ ಸುಮಾರು 5 ಸಾವಿರ ಮಕ್ಕಳು ಉತ್ತೀರ್ಣರಾಗುತ್ತಿದ್ದಾರೆ. ಮದರಸಾಗಳಲ್ಲಿಯೂ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಬೇಕು ಎಂಬ ಕಳಕಳಿಯಿಂದ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ಕಡಿಮೆ ಅನುದಾನದಲ್ಲೇ ಗುಣಮಟ್ಟದ ಹಾಗೂ ವಿಶಾಲ ಕಟ್ಟಡ ನಿರ್ಮಾಣವಾಗಿರುವುದು ಸಂತೋಷದ ವಿಷಯ. ಈ ಕಾರ್ಯಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ವಿಶೇಷವಾಗಿ ಸಚಿವ ಡಾ. ಎಚ್.ಕೆ. ಪಾಟೀಲ ಅವರ ಸಹಕಾರಕ್ಕೆ ಸಚಿವ ಜಮೀರ ಅಹ್ಮದ್ ಖಾನ್ ಧನ್ಯವಾದ ತಿಳಿಸಿದರು.

ವೇದಿಕೆಯಲ್ಲಿ ಗದಗ–ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಮಟ್ಟದ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಕೃಷ್ಣಗೌಡ ಪಾಟೀಲ, ಫಾರುಕ್ ಹುಬ್ಬಳ್ಳಿ, ಎ.ಎಂ. ಹಿಂಡಸಗೇರಿ, ಬಸವರಾಜ್, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಕೆ.ಆರ್.ಐ.ಡಿ.ಎಲ್ ಕಾರ್ಯನಿರ್ವಾಹಕ ಅಭಿಯಂತರ ಅನಿಲ ಪಾಟೀಲ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಮಿತ್ ಬಿದರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ, ಶಾಲಾ ನೂತನ ಕಟ್ಟಡ ನಿರ್ಮಾಣಕ್ಕೆ 235 ಲಕ್ಷ ರೂ. ಹಾಗೂ ಹೆಚ್ಚುವರಿ ತರಗತಿಗಳ ಕಟ್ಟಡ ನಿರ್ಮಾಣಕ್ಕೆ 143 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಗುಣಮಟ್ಟದ ಕಾಮಗಾರಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ಈ ಕಟ್ಟಡದಲ್ಲಿ ಅಭ್ಯಾಸ ಮಾಡುವ ಎಲ್ಲ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಶುಭ ಕೋರಿದರು.

error: Content is protected !!