ವಿಜಯಸಾಕ್ಷಿ ಸುದ್ದಿ, ಗದಗ: ಸತ್ಯ, ಅಹಿಂಸೆ, ತ್ಯಾಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, ಜಗತ್ತಿಗೆ ಮಾದರಿಯಾದ, ಜೀವನದ ಮೌಲ್ಯಗಳನ್ನು ತಮ್ಮ ಬದುಕಿನ ಮೂಲಕ ತೋರಿದ ಮಹಾತ್ಮ ಗಾಂಧೀಜಿಯವರು ಪ್ರತಿಯೊಬ್ಬರಲ್ಲೂ ಇದ್ದಾರೆ. ಅವರು ಬಿತ್ತಿದ ದೇಶಾಭಿಮಾನ, ದೇಶಭಕ್ತಿ ಇಂದಿಗೂ ನಮ್ಮಲ್ಲಿ ಜಾಗೃತವಾಗಿದ್ದು, ರಾಷ್ಟ್ರದ ಪ್ರಗತಿಗೆ ಕಾರಣವಾಗಿದೆ ಎಂದು ಗದಗ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಡಾ. ಬಸವರಾಜ ಬಳ್ಳಾರಿ ಅಭಿಪ್ರಾಯಪಟ್ಟರು.
ಅವರು ನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ಸೋಮವಾರ ಸಂಜೆ ರಂಗಾಯಣ ಶಿವಮೊಗ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ, ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಗದಗ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ ಪ್ರಯೋಗ ಉದ್ಘಾಟಿಸಿ ಮಾತನಾಡಿದರು.
ಜೀವಂತ ಅಭಿವ್ಯಕ್ತಿ ಕಲೆಯಾದ ರಂಗ ಕಲೆಗೆ ಗದಗ ಜಿಲ್ಲೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಶಿವಮೊಗ್ಗದ ರಂಗಾಯಣ ಪ್ರಸ್ತುತಪಡಿಸುವ `ನಮ್ಮೊಳಗೊಬ್ಬ ಗಾಂಧಿ’ ನಾಟಕ ಪ್ರದರ್ಶನ ಇಲ್ಲಿನ ಪ್ರೇಕ್ಷಕರಿಗೆ ಒಂದು ಉತ್ತಮ ಅವಕಾಶ ಎಂದರು.
ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಕಡ್ಲಿಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗದಗ-ಬೆಟಗೇರಿ ನಗರಸಭೆಯ ಸದಸ್ಯರಾದ ಮೆಹಬೂಬಸಾಬ ಡಿ.ನದಾಫ್, ಜಿಲ್ಲೆಯ ಹಿರಿಯ ಸಾಂಸ್ಕೃತಿಕ ಚಿಂತಕರಾದ ಡಾ. ಜಿ.ಬಿ. ಪಾಟೀಲ, ರಾಜ್ಯ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ರವಿ ಎಲ್. ಗುಂಜೀಕರ್, ಚಿನ್ಮಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷರಾದ ಮೌನೇಶ ಸಿ.ಬಡಿಗೇರ(ನರೇಗಲ್ಲ) ಮತ್ತು ಶಿವಮೊಗ್ಗ ರಂಗಾಯಣ ತಂಡದ ಶಂಕರ್ ಉಪಸ್ಥಿತರಿದ್ದರು.
ಮೌನೇಶ ಸಿ. ಬಡಿಗೇರ(ನರೇಗಲ್ಲ) ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕ ವಿಶ್ವನಾಥ ಯ.ಕಮ್ಮಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಅನಂತ ಶಿವಪೂರ, ಡಾ. ವಾಣಿ ಶಿವಪೂರ, ಪ್ರೊ. ಸಿದ್ದು ಯಾಪಲಪರವಿ, ಅಂದಾನೆಪ್ಪ ವಿಭೂತಿ, ರುದ್ರಣ್ಣ ಗುಳಗುಳಿ, ಡಾ. ದತ್ತಪ್ರಸನ್ನ ಲ.ಪಾಟೀಲ, ಸಿ.ವಿ. ಬಡಿಗೇರ, ವಿಶ್ವನಾಥ ಬೇಂದ್ರೆ, ಶ್ರೀನಿವಾಸ ಗುಂಜಾಳ, ಕೃಷ್ಣ ಕಡ್ಲಿಕೊಪ್ಪ, ಬಸವರಾಜ ಬಡಿಗೇರ, ಶ್ರೀಧರ ಕೊಣ್ಣೂರ, ಮಧುಸೂದನ ವಿಶ್ವಕರ್ಮ ಮುಂತಾದವರಿದ್ದರು.
ಹಿರಿಯ ರಂಗಕರ್ಮಿ ಶಶೀಲೇಂದ್ರ ಜೋಶಿ ಮಾತನಾಡಿ, ಕನ್ನಡ ರಂಗಭೂಮಿಗೆ ಗದಗ ಜಿಲ್ಲೆಯ ಕೊಡುಗೆ ಅಪಾರ. ಸಕ್ಕರಿ ಬಾಳಾಚಾರ್ಯರು, ಶಿರಹಟ್ಟಿಯ ವೆಂಕೊಬರಾಯರು, ಸದಾಶಿವರಾಯ ಗರುಡರು, ಜಯತೀರ್ಥ ಜೋಶಿ ಅವರ ರಂಗ ಸೇವೆ ಸದಾ ಸ್ಮರಣೀಯ ಎಂದರು.

