Home Blog Page 39

ಗದಗದಲ್ಲಿ ಜಮೀರ್ ಅಹ್ಮದ್ ಖಾನ್‌ಗೆ ಭರ್ಜರಿ ಸ್ವಾಗತ: ‘ಹಣೆಬರಹದಲ್ಲಿ ಇದ್ದಂತೆ ಆಗುತ್ತದೆ’ ಎಂದ ಸಚಿವ

0

ಗದಗ: ನಗರಕ್ಕೆ ಆಗಮಿಸಿದ ವಸತಿ ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ನಗರದಲ್ಲಿ ಭರ್ಜರಿ ಸ್ವಾಗತ ದೊರೆಯಿತು. ನಗರದ ಕೋರ್ಟ್ ಸರ್ಕಲ್ ಬಳಿ ನೂರಾರು ಅಭಿಮಾನಿಗಳು ಜಮಾಯಿಸಿ, ಹೂಮಳೆ ಸುರಿಸಿ, ‘ಶೇರ್ ಆಯಾ ಶೇರ್ ಆಯಾ’ ಎಂಬ ಘೋಷಣೆಗಳನ್ನು ಕೂಗಿದರು.

ಇತ್ತೀಚೆಗೆ ಸಂಸದ ಡಿ.ಕೆ. ಸುರೇಶ್ ನೀಡಿದ್ದ “ನಮ್ಮ ಅಣ್ಣನ ಹಣೆಬರಹದಲ್ಲಿ ಮುಖ್ಯಮಂತ್ರಿ ಆಗಬೇಕೆಂದಿದ್ದರೆ ಆಗ್ತಾರೆ” ಎಂಬ ಹೇಳಿಕೆ ಕುರಿತು ಗದಗನಲ್ಲಿ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್ ಖಾನ್, “ತಪ್ಪೇನಿದೆ? ನಾನು ಕೂಡ ಹಣೆಬರಹವನ್ನು ನಂಬುತ್ತೇನೆ” ಎಂದು ಸ್ಪಷ್ಟಪಡಿಸಿದರು.

ಮುಂದುವರೆದು ಮಾತನಾಡಿದ ಅವರು, “ಹಣೆಬರಹದಲ್ಲಿ ಇದ್ದಂಗೆ ಆಗೋದು. ನಾನು MLA ಆಗ್ತೀನಿ, ಮಂತ್ರಿ ಆಗ್ತೀನಿ ಅಂತಾ ಕನಸಲ್ಲೂ ಯೋಚನೆ ಮಾಡಿರಲಿಲ್ಲ. ಆದ್ರೆ ಇಂದು ನಾನು ಐದು ಬಾರಿ MLA ಆಗಿದ್ದೇನೆ, ಮೂರು ಬಾರಿ ಸಚಿವನಾಗಿದ್ದೇನೆ. ಇದು ಎಲ್ಲವೂ ನನ್ನ ಹಣೆಬರಹದಲ್ಲಿ ಬರೆಯಲ್ಪಟ್ಟಿದ್ದುದರಿಂದಲೇ ನಡೆದಿದೆ” ಎಂದು ಹೇಳಿದರು.
ಡಿ.ಕೆ. ಸುರೇಶ್ ಅವರ ಮಾತಿನಲ್ಲಿ ತಪ್ಪಿಲ್ಲ ಎಂದ ಜಮೀರ್, “ಹಣೆಬರಹದಲ್ಲಿ ಬರದಿದ್ದರೆ ಅವರೂ ಮುಖ್ಯಮಂತ್ರಿ ಆಗಬಹುದು. ಕೊನೆಗೂ ಆಗೋದು ಹಣೆಬರಹದಲ್ಲಿ ಇದ್ದಂತೆಯೇ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಲಕ್ಕುಂಡಿಯಲ್ಲಿ ಭೂಮಿ ಅಗೆದಂತೆಲ್ಲಾ ಇತಿಹಾಸ ಹೊರಬರುತ್ತಿದೆ! ದೇವಸ್ಥಾನದಲ್ಲೇ ಬದುಕಿದ ಕುಟುಂಬಕ್ಕೀಗ ಭಯ

0

ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ 5ನೇ ದಿನವೂ ಉತ್ಖನನ ಕಾರ್ಯ ತೀವ್ರಗೊಂಡಿದ್ದು, ಇದೀಗ ಒಡೆದ ಪುರಾತನ ಮಡಿಕೆ ಅವಶೇಷ ಪತ್ತೆಯಾಗಿದೆ. ಈ ಮಡಿಕೆ ಹಳೆಯ ಕಾಲದ್ದು ಎನ್ನಲಾಗಿದ್ದು, ಕಾರ್ಮಿಕರು ಅದನ್ನು ಅತ್ಯಂತ ಜಾಗ್ರತೆಯಿಂದ ಸ್ವಚ್ಛಗೊಳಿಸಿ ಹೊರತೆಗೆದಿದ್ದಾರೆ.

ಈ ಮಡಿಕೆ ಧಾನ್ಯ ಸಂಗ್ರಹಕ್ಕೆ ಬಳಸಿದ ಪಾತ್ರೆಯೇ? ಅಥವಾ ಚಿನ್ನ-ಆಭರಣ ಇರಿಸುವುದಕ್ಕೆ ಉಪಯೋಗವಾಗಿತ್ತೇ? ಎಂಬ ಪ್ರಶ್ನೆಗಳು ಇದೀಗ ಕುತೂಹಲ ಹುಟ್ಟುಹಾಕಿವೆ. ಮಡಿಕೆಯ ಒಳಭಾಗದ ಮಣ್ಣಿನ ಪರಿಶೀಲನೆಯೂ ನಡೆಯುತ್ತಿದೆ.

ಇನ್ನೊಂದು ಕಡೆ, ಲಕ್ಕುಂಡಿಯಲ್ಲಿ ಹೊರಗೆ ಮನೆ, ಒಳಗೆ ದೇವಸ್ಥಾನ ಎಂಬ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಚಾಲುಕ್ಯರ ಕಾಲದ ಪುರಾತನ ಈಶ್ವರ ದೇವಸ್ಥಾನವೊಂದರಲ್ಲಿ ನಾಲ್ಕೈದು ತಲೆಮಾರುಗಳಿಂದ ಐದು ಕುಟುಂಬಗಳು ವಾಸಿಸುತ್ತಿವೆ.

ಸರ್ಕಾರ ದೇವಸ್ಥಾನವನ್ನು ವಶಕ್ಕೆ ಪಡೆದು ಜೀರ್ಣೋದ್ಧಾರ ಮಾಡಲು ಮುಂದಾಗಿದೆ ಎನ್ನಲಾಗಿದ್ದು, ಇದರಿಂದ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. “ಸರ್ಕಾರ ಸೂಕ್ತ ಪರಿಹಾರ ನೀಡಿದರೆ ಬಿಟ್ಟು ಹೋಗಲು ಸಿದ್ಧ” ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.

ಉತ್ಖನನದ ಎರಡನೇ ದಿನವೇ ಗೋಜರವಾಗಿದ್ದ ಶಿವಲಿಂಗದ ಪಾನಿಪೀಠ ಇದೀಗ ಸಂಪೂರ್ಣವಾಗಿ ಹೊರಗೆತ್ತಲಾಗಿದೆ. ಪುರಾತತ್ವ ಇಲಾಖೆಯ ಸಿಬ್ಬಂದಿಗಳು ಪಾನಿಪೀಠವನ್ನು ಬಹಳ ನಾಜೂಕಿನಿಂದ ಎರಡು ಭಾಗಗಳಲ್ಲಿ ಹೊರತೆಗೆದು ದಾಖಲಾತಿ ಕಾರ್ಯ ನಡೆಸಿದ್ದಾರೆ.

ಪತ್ತೆಯಾದ ಪಾನಿಪೀಠವು ಪುರಾತನ ಕಾಲದದ್ದು ಎಂದು ಅಂದಾಜಿಸಲಾಗಿದ್ದು, ಅದರ ಮೇಲ್ಭಾಗದಲ್ಲಿ ಶಿವಲಿಂಗ ಇದ್ದಿರಬಹುದಾದ ಲಕ್ಷಣಗಳು ಕಂಡುಬಂದಿವೆ. ಇದು ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ದೃಢಪಡಿಸಿದೆ.

ಇನ್ನೂ ಮುಂಜಾನೆ ವೇಳೆ ಪುರಾತನ ಮಡಿಕೆ ಹಾಗೂ ಕವಡೆಗಳು ಪತ್ತೆಯಾಗಿದ್ದರೆ, ಸಂಜೆ ವೇಳೆಗೆ ಎರಡು ಭಾಗಗಳಲ್ಲಿ ಪಾನಿಪೀಠ ಪತ್ತೆಯಾಗಿದೆ. ಪ್ರತಿಯೊಂದು ಅವಶೇಷವನ್ನು ಪುರಾತತ್ವ ಇಲಾಖೆಯ ಸಿಬ್ಬಂದಿಗಳು ಫೋಟೋಗ್ರಫಿ ಮೂಲಕ ದಾಖಲಿಸಿ, ಪಿನ್-ಟು-ಪಿನ್ ದಾಖಲೆ ಸಂಗ್ರಹಿಸುತ್ತಿದ್ದಾರೆ.

ವೇತನವೇ ಇಲ್ಲದೆ ನಲುಗಿದ ಗ್ರಾಮ ಆಡಳಿತಾಧಿಕಾರಿ: ರಾಷ್ಟ್ರಪತಿಗೆ ದಯಾಮರಣಕ್ಕೆ ಪತ್ರ ಬರೆದ ಯೋಗೇಶ ಕುರಹಟ್ಟಿ

0

ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಗ್ರಾಮ ಆಡಳಿತಾಧಿಕಾರಿ ಯೋಗೇಶ ದ್ಯಾಮಪ್ಪ ಕುರಹಟ್ಟಿ ಅವರು ರಾಷ್ಟ್ರಪತಿಗಳಿಗೆ ದಯಾಮರಣಕ್ಕೆ ಮನವಿ ಸಲ್ಲಿಸಿರುವ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.

ಯೋಗೇಶ ಕುರಹಟ್ಟಿ ಅವರು ಹಿಂದಿ ಭಾಷೆಯಲ್ಲಿ ಬರೆದಿರುವ ಪತ್ರದಲ್ಲಿ, ಕಂದಾಯ ಇಲಾಖೆಯ ಇತರ ಎಲ್ಲಾ ಸಿಬ್ಬಂದಿಗೆ ವೇತನ ಪಾವತಿಯಾಗಿದ್ದರೂ, ತಮಗೆ ಮಾತ್ರ ಎರಡು ತಿಂಗಳಿಂದ ವೇತನ ನೀಡಿಲ್ಲ ಎಂದು ಉಲ್ಲೇಖಿಸಿದ್ದಾರೆ. ವೇತನ ಇಲ್ಲದ ಕಾರಣ ತಮ್ಮ ವೃದ್ಧ ತಾಯಿಗೆ ಅಗತ್ಯವಾದ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದು ಮನವಿಯಲ್ಲಿ ಹೇಳಿದ್ದಾರೆ.

ಮುಂಡರಗಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಬಾಡಿಗೆಯನ್ನೂ ಕಟ್ಟಲು ಸಾಧ್ಯವಾಗಿಲ್ಲ. ದಿನಚರಿ ಸಲ್ಲಿಕೆ ಹಾಗೂ ಕಂದಾಯ ನಿರೀಕ್ಷಕರಿಗೆ ವರದಿ ನೀಡಿದ್ದರೂ ಸಹ ವೇತನ ತಡೆಹಿಡಿಯಲಾಗಿದೆ ಎಂದು ಆರೋಪಿಸಿದ್ದಾರೆ.

ನನ್ನ ಜವಾಬ್ದಾರಿ ನಿಭಾಯಿಸಲು ಆಗುತ್ತಿಲ್ಲ”

ಪತ್ರದಲ್ಲಿ ಅವರು, “ತಾಯಿಗೆ ಚಿಕಿತ್ಸೆ ಕೊಡಿಸಲು ಹಣ ಇಲ್ಲ. ವೇತನ ಇಲ್ಲದೆ ಬದುಕು ಬಹಳ ಕಷ್ಟಕರವಾಗಿದೆ. ನನ್ನ ಜವಾಬ್ದಾರಿಗಳನ್ನು ನಿಭಾಯಿಸಲು ಆಗದ ಸ್ಥಿತಿಗೆ ತಲುಪಿದ್ದೇನೆ” ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಇಲಾಖೆಯ ಎಲ್ಲ ಉದ್ಯೋಗಿಗಳ ವೇತನ ಪಾವತಿಯಾಗಿದ್ದರೂ ತಮಗೆ ಮಾತ್ರ ವೇತನ ತಡೆಹಿಡಿಯಲಾಗಿದೆ ಎಂಬುದು ಅನುಮಾನಗಳಿಗೆ ಕಾರಣವಾಗಿದ್ದು, ಇದೀಗ ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.

ನಿತಿನ್ ನಬಿನ್ ನನ್ನ ಬಾಸ್ ಎಂದ ಪ್ರಧಾನಿ ಮೋದಿ! ಬಿಜೆಪಿ ಹೊಸ ಯುಗಕ್ಕೆ ಎಂಟ್ರಿ?

0

ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಿತಿನ್ ನಬಿನ್ ಅವರನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಅವರು ಪಕ್ಷದ ಪರಂಪರೆಯನ್ನು ಮುಂದುವರಿಸುವ ಮಿಲೇನಿಯಲ್ ನಾಯಕ ಎಂದು ಬಣ್ಣಿಸಿದ್ದಾರೆ.

“ಪಕ್ಷದ ವಿಚಾರ ಬಂದರೆ ನಿತಿನ್ ನಬಿನ್ ಅವರೇ ಬಾಸ್. ನಾನು ಕೇವಲ ಬಿಜೆಪಿ ಕಾರ್ಯಕರ್ತ” ಎಂದು ಹೇಳಿದ ಮೋದಿ ಮಾತು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಿಜೆಪಿ ಹೊಸಬರಿಗೆ ಅವಕಾಶ ನೀಡುವ ಪಕ್ಷ. ಅಧ್ಯಕ್ಷರ ಹೊಣೆಗಾರಿಕೆ ಪಕ್ಷಕ್ಕೆ ಮಾತ್ರ ಸೀಮಿತವಲ್ಲ, ಎನ್‌ಡಿಎ ಒಕ್ಕೂಟದಲ್ಲಿ ಸಮನ್ವಯ ಸಾಧಿಸುವುದೂ ಅವರ ಕರ್ತವ್ಯ ಎಂದು ಮೋದಿ ಸ್ಪಷ್ಟಪಡಿಸಿದರು.

ನಿತಿನ್ ನಬಿನ್ ಬಗ್ಗೆ ಮಾತನಾಡಿದ ಮೋದಿ, “ಅವರು ರೇಡಿಯೋ ಯುಗದಿಂದ ಎಐ ಯುಗದವರೆಗೆ ಬದಲಾವಣೆಗಳನ್ನು ಕಂಡ ಪೀಳಿಗೆಯವರು. ಯುವ ಉತ್ಸಾಹವೂ ಇದೆ, ಸಂಘಟನಾ ಅನುಭವವೂ ಇದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದಲ್ಲದೇ, “ಬಿಜೆಪಿ ಒಂದು ಕುಟುಂಬ. ಇಲ್ಲಿ ಮೆಂಬರ್‌ಶಿಪ್‌ಗಿಂತ ರಿಲೇಷನ್‌ಶಿಪ್ ಮುಖ್ಯ. ನಾಯಕತ್ವ ಬದಲಾಗಬಹುದು, ಆದರೆ ನಮ್ಮ ದಿಕ್ಕು ಮತ್ತು ಆದರ್ಶಗಳು ಒಂದೇ” ಎಂದು ಮೋದಿ ಹೇಳಿದರು.

ಲಾರಿ-ಬೈಕ್ ಮುಖಾಮುಖಿ ಡಿಕ್ಕಿ; ಸವಾರ Spot Death

0

ಹಾವೇರಿ:- ಜಿಲ್ಲೆ ಹಾನಗಲ್ ತಾಲೂಕಿನ ನಾಲ್ಕರ್ ಕ್ರಾಸ್ ಬಳಿ ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಜರುಗಿದೆ.

ಹೊಂಕಣ ಗ್ರಾಮದ ನಟರಾಜ್ ದಳವಾಯಿ (43) ಮೃತ ಬೈಕ್ ಸವಾರ. ಹಾನಗಲ್ ಕಡೆಯಿಂದ ಹೊಂಕಣ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಸದ್ಯ ಪೊಲೀಸರು ಲಾರಿಯನ್ನ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಅಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್‌ಗೆ Z ಕ್ಯಾಟಗರಿ ಭದ್ರತೆ

0

ನವದೆಹಲಿ: ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ CRPF ವಿಐಪಿ ಭದ್ರತಾ ವಿಭಾಗದಿಂದ ಝೆಡ್ ಕ್ಯಾಟಗರಿ ಭದ್ರತೆ ಒದಗಿಸಲಾಗಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಅಧಿಕೃತ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಐದು ಬಾರಿ ಬಿಹಾರ ಶಾಸಕರಾಗಿರುವ ನಿತಿನ್ ನಬಿನ್, ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ ಅತಿ ಕಿರಿಯ ವಯಸ್ಸಿನಲ್ಲಿ ಈ ಹುದ್ದೆ ಅಲಂಕರಿಸಿದ ನಾಯಕ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.

ನಿತಿನ್ ನಬಿನ್ ಅವರನ್ನು ಪ್ರಧಾನಿ ಮೋದಿ ಕೂಡ ಬಹಿರಂಗವಾಗಿ ಶ್ಲಾಘಿಸಿದ್ದು, “ಅವರು ನನ್ನ ಬಾಸ್‌, ನಾನು ಪಕ್ಷದ ಕಾರ್ಯಕರ್ತ” ಎಂದು ಹೇಳಿದ್ದಾರೆ.

ಈ ಹಿಂದೆ ಜೆ.ಪಿ. ನಡ್ಡಾ ಅವರಿಗೆ ಕೂಡ ಇದೇ ರೀತಿಯ ಭದ್ರತೆ ಒದಗಿಸಲಾಗಿತ್ತು. ಈಗ ನಿತಿನ್ ನಬಿನ್ ಕೂಡ ಕೇಂದ್ರದ ಉನ್ನತ ಭದ್ರತಾ ಪಟ್ಟಿಗೆ ಸೇರಿದ್ದಾರೆ.

ಮಾರಕಾಸ್ತ್ರಗಳಿಂದ ಕೊಚ್ಚಿ ಬಂಡೆಪಾಳ್ಯ ರೌಡಿಶೀಟರ್ ಕೊಲೆ ಕೇಸ್: 8 ಮಂದಿ ಆರೋಪಿಗಳು ಅರೆಸ್ಟ್

0

ಬೆಂಗಳೂರು: ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರೌಡಿಶೀಟರ್ ಮಹಮ್ಮದ್ ಶಬ್ಬೀರ್ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಈ ಸಂಬಂಧ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನೂರುಲ್ಲ, ನದೀಮ್, ಸಲ್ಮಾನ್ ಖಾನ್, ಮೊಹಮ್ಮದ್ ಅಲಿ, ಸಯ್ಯದ್ ಇಸ್ಮಾಯಿಲ್, ಮೊಹಮ್ಮದ್ ಸಿದ್ದಿಕ್, ಸಯ್ಯದ್ ಕಲೀಂ ಹಾಗೂ ಉಮ್ರೇಜ್ ಎಂದು ಗುರುತಿಸಲಾಗಿದೆ. ಹಳೆ ವೈಷಮ್ಯದ ಹಿನ್ನೆಲೆ ಶಬ್ಬೀರ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದ 12ನೇ ತಾರೀಖು ಸಂಜೆ ಸುಮಾರು 5 ಗಂಟೆ ವೇಳೆಗೆ, ಆರೋಪಿಗಳು ಶಬ್ಬೀರ್‌ನನ್ನು ಹಿಂಬಾಲಿಸಿಕೊಂಡು ಮಂಗಮ್ಮನ ಪಾಳ್ಯದ ಪೆಟ್ರೋಲ್ ಬಂಕ್ ಬಳಿ ತಡೆದು ನಿಲ್ಲಿಸಿ, ಮೊದಲು ಕಣ್ಣಿಗೆ ಖಾರದ ಪುಡಿ ಎರಚಿ, ನಂತರ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ ಶಬ್ಬೀರ್, ಹಲವು ವಿಚಾರಗಳಲ್ಲಿ ಆರೋಪಿಗಳೊಂದಿಗೆ ದ್ವೇಷ ಬೆಳೆಸಿಕೊಂಡಿದ್ದ ಎನ್ನಲಾಗಿದೆ. ಈ ಕಾರಣದಿಂದ ಆರೋಪಿಗಳು ಹಲವು ದಿನಗಳಿಂದ ಸಂಚು ರೂಪಿಸಿ, ಶಬ್ಬೀರ್ ಚಲನವಲನಗಳ ಮೇಲೆ ನಿಗಾ ಇಟ್ಟು ಕೊಲೆ ನಡೆಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಕೊಲೆ ಬಳಿಕ ಆರೋಪಿಗಳು ಹೈದ್ರಾಬಾದ್ ಹಾಗೂ ಮುಂಬೈಗೆ ತಲೆಮರೆಸಿಕೊಂಡಿದ್ದರು. ಕುಟುಂಬಸ್ಥರನ್ನು ಭೇಟಿ ಮಾಡಲು ಇಂದು ರೈಲ್ವೆ ನಿಲ್ದಾಣಕ್ಕೆ ಬಂದ ವೇಳೆ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಎಲ್ಲಾ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಈ ಕುರಿತು ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

ಕಚೇರಿಯಲ್ಲಿ ಡಿಜಿಪಿ ರಾಸಲೀಲೆ ಪ್ರಕರಣ; ಸರ್ಕಾರ ಕ್ರಮ ಕೈಗೊಂಡಿದೆ ಎಂದ ಸಿದ್ದರಾಮಯ್ಯ!

0

ಬೆಂಗಳೂರು:- ಸರ್ಕಾರಿ ಕಚೇರಿಯಲ್ಲಿ ಹಲವು ಮಹಿಳೆಯರ ಜೊತೆ ರಾಸಲೀಲೆ ನಡೆಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗುತ್ತಿದ್ದಂತೆ ಡಿಜಿಪಿ ರಾಮಚಂದ್ರರಾವ್ ಮೇಲೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಪ್ರಕರಣದಲ್ಲಿ ಸರ್ಕಾರ ಕ್ರಮ ತೆಗೆದುಕೊಂಡಿದೆ. ಈಗಾಗಲೇ ರಾಮಚಂದ್ರರಾವ್‌ರನ್ನ ಅಮಾನತು ಮಾಡಿದ್ದೇವೆ. ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಎಲ್ಲಾ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಸಚಿವ ತಿಮ್ಮಾಪುರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಹೇಳಿರೋ ಬಗ್ಗೆ ಗೊತ್ತಿಲ್ಲ. ಅವರನ್ನ ಕರೆದು ಮಾತಾಡ್ತೀನಿ. ಅವರು ಹೇಳಿಲ್ಲ ನೀವೆ ಹಾಗೆ ಕೇಳ್ತಾ ಇದ್ದೀರಿ ಎಂದರು. ಇನ್ನೂ, ನಾಯಕತ್ವ ಬದಲಾವಣೆ ವಿಚಾರವಾಗಿ ದೆಹಲಿಗೆ ಹೋಗ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಹೈಕಮಾಂಡ್ ಕರೆದರೆ ದೆಹಲಿಗೆ ಹೋಗುವುದಾಗಿ ಹೇಳಿದ್ದಾರೆ.

ರಾಘವೇಂದ್ರ ಸ್ವಾಮಿ ಫೋಟೋ ತಳ್ಳಿದ ಸಿದ್ದರಾಮಯ್ಯ; ಸಿಎಂ ನಡೆಗೆ ಕೆಂಡಕಾರಿದ ಜಗ್ಗೇಶ್

0

ಬೆಂಗಳೂರು: ಅಭಿಮಾನಿಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರು ರಾಘವೇಂದ್ರ ಸ್ವಾಮಿಗಳ ಫೋಟೋ ನೀಡಲು ಮುಂದಾದ ವೇಳೆ, ಸಿಎಂ ಫೋಟೋ ಸ್ವೀಕರಿಸದೇ ತಳ್ಳಿದ ಘಟನೆ ಇದೀಗ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ನಡೆಗೆ ನಟ ಹಾಗೂ ರಾಜ್ಯಸಭಾ ಸದಸ್ಯರೂ ಆಗಿರುವ ಜಗ್ಗೇಶ್ ತೀವ್ರ ಬೇಸರ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ವಿಡಿಯೊವನ್ನು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜಗ್ಗೇಶ್, “ರಾಯರನ್ನ ಅಪಮಾನ ಮಾಡಿದವರು ಉದ್ಧಾರವಾದ ಇತಿಹಾಸವಿಲ್ಲ. ರಾಯರ ಸಣ್ಣ ಕೃಪೆ ನಮ್ಮ ಮೇಲೆ ಬೀಳಲೆಂದು ಕೋಟ್ಯಂತರ ಭಕ್ತರು ಜಪ–ತಪ–ವೈರಾಗ್ಯದಿಂದ ಸೇವೆ ಮಾಡುತ್ತಾರೆ. ಭಕ್ತಿಯಿಂದ ತಂದಿದ್ದನ್ನು ಹೀಗೆ ತಿರಸ್ಕರಿಸಿದ ಮೊದಲ ವ್ಯಕ್ತಿಯನ್ನು ನನ್ನ ಜೀವನದಲ್ಲಿ ನೋಡುತ್ತಿದ್ದೇನೆ. ರಾಯರಿದ್ದಾರೆ… ಎದ್ದು ಬರುತ್ತಾರೆ… ಕಾಯಬೇಕು” ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ಏನಿದು ಘಟನೆ?

ಬೆಳಗಾವಿ ಪ್ರವಾಸಕ್ಕಾಗಿ HALಗೆ ತೆರಳುವ ಮುನ್ನ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದ ಗೇಟ್ ಬಳಿ ಸಾರ್ವಜನಿಕರಿಂದ ಮನವಿ ಪತ್ರಗಳನ್ನು ಸ್ವೀಕರಿಸುತ್ತಿದ್ದರು. ಈ ಸಂದರ್ಭ ಅಭಿಮಾನಿಯೊಬ್ಬರು ರಾಘವೇಂದ್ರ ಸ್ವಾಮಿಗಳ ಫೋಟೋವನ್ನು ಸಿಎಂಗೆ ನೀಡಲು ಮುಂದಾದಾಗ, ಸಿಎಂ ಫೋಟೋ ಸ್ವೀಕರಿಸದೇ ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ವೇಳೆ ಅಭಿಮಾನಿಯ ಮೇಲೆ ಗರಂ ಆಗಿದ್ದಾರೆಯೆಂಬ ಮಾತುಗಳು ಕೇಳಿಬಂದಿವೆ.

ಈ ಹಿಂದೆ ಕುಂಕುಮ ಹಾಗೂ ಪೇಟವನ್ನು ತಿರಸ್ಕರಿಸಿದ್ದ ಪ್ರಕರಣಗಳು ಚರ್ಚೆಗೆ ಬಂದಿದ್ದರೆ, ಇದೀಗ ರಾಘವೇಂದ್ರ ಸ್ವಾಮಿಗಳ ಫೋಟೋ ತಿರಸ್ಕಾರವು ಹೊಸ ವಿವಾದಕ್ಕೆ ಕಾರಣವಾಗಿದೆ. ಘಟನೆಗೆ ವಿಪಕ್ಷ ನಾಯಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕ ವಲಯದಲ್ಲಿ ಭಾವನಾತ್ಮಕ ಪ್ರತಿಕ್ರಿಯೆಗಳು ಹೆಚ್ಚುತ್ತಿವೆ.

ದಾರಿ ಬಿಟ್ಟಿಲ್ಲ ಅಂತ ಬಸ್ ಚಾಲಕನಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ; ಬೈಕ್ ಸವಾರರ ಮೇಲೆ FIR!

0

ಬೀದರ್:- ಬೀದರ್ ತಾಲೂಕಿನ ಕಮಠಾಣ ಗ್ರಾಮದಲ್ಲಿ ದಾರಿ ಬಿಡದಿದ್ದಕ್ಕೆ ಬಸ್ ಚಾಲಕನಿಗೆ ಹಲ್ಲೆ ಮಾಡಿ, ಬೈಕ್ ಸವಾರ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಜರುಗಿದೆ.

ಅಶೋಕ್ ಮಾಣೀಕಪ್ಪ ಹಲ್ಲೆಗೊಳಗಾದ ಬಸ್ ಚಾಲಕ. ಘಟನೆ ಸಂಬಂಧ ಬಸ್ ಚಾಲಕ ಅಶೋಕ್ ದೂರು ದಾಖಲಿಸಿದ್ದು, ಬೈಕ್ ಸವಾರನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಎಸ್, ಮನ್ನಾಏಕೇಳಿಯಿಂದ ಬೀದರ್ ಕಡೆ ಬರುವಾಗ ಬದಗಲ್ ಬಳಿ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಬಸ್ ನಿಲ್ಲಿಸಿದ್ದಕ್ಕೆ ಹಿಂಬದಿಯಿಂದ ಬಂದು ಬೈಕ್ ಸವಾರನೊಬ್ಬ ದಾರಿ ಬಿಡುವಂತೆ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬಳಿಕ ಕಮಠಾಣಕ್ಕೆ ಬರುವಷ್ಟರಲ್ಲೇ ಬೈಕ್ ಸವಾರನ ಕಡೆಯವರು ಬಸ್ ತಡೆದು ನಮ್ಮವನಿಗೆ ಯಾಕೆ ದಾರಿಬಿಟ್ಟಿಲ್ಲ ಎಂದು ಅವಾಜ್ ಹಾಕಿದ್ದಾರೆ.

ಇದೇ ವೇಳೆ ಬೈಕ್ ಸವಾರ ಚಾಲಕನ ಕೊರಳಪಟ್ಟಿ ಹಿಡಿದು, ಎದೆಗೆ ಗುದ್ದಿ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹಲ್ಲೆಯ ದೃಶ್ಯಗಳನ್ನು ಚಾಲಕ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಈ ಸಂಬಂಧ ಬೀದರ್‌ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!