ಬೆಂಗಳೂರು: ಸರ್ಜಾಪುರದಲ್ಲಿ ನಡುರಾತ್ರಿ ಕಾಂಡಿಮೆಂಟ್ಸ್‌ಗೆ ನುಗ್ಗಿದ ಇಬ್ಬರು ಕಳ್ಳರು ನಗದು ಹಣ ಹಾಗೂ ಗುಟ್ಕಾ ಪಾಕೆಟ್‌ಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಕಳ್ಳರ ಕೃತ್ಯ ಸಂಪೂರ್ಣವಾಗಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಮದ್ಯದ ಅಮಲಿನಲ್ಲಿದ್ದ ಇಬ್ಬರು ಕಳ್ಳರು, ಕಾಂಡಿಮೆಂಟ್ಸ್‌ನ ಬಾಗಿಲಿನ ಬೀಗ ಒಡೆದು ಒಳನುಗ್ಗಿದ್ದಾರೆ. ಬಳಿಕ ಕ್ಯಾಶ್ ಕೌಂಟರ್‌ನಲ್ಲಿದ್ದ ಹಣವನ್ನು ಕದ್ದಿರುವುದಲ್ಲದೆ, ಅಂಗಡಿಯಲ್ಲಿದ್ದ ಗುಟ್ಕಾ ಪಾಕೆಟ್‌ಗಳನ್ನೂ ಕಳವು ಮಾಡಿದ್ದಾರೆ ಎನ್ನಲಾಗಿದೆ.
ಇಷ್ಟೇ ಅಲ್ಲದೆ, ಅಂಗಡಿಯೊಳಗೆ ನುಗ್ಗಿದ ಕಳ್ಳರು ಕ್ಯಾಶ್ ಕೌಂಟರ್ ಸಮೀಪ ಮೂತ್ರ ವಿಸರ್ಜನೆ ಮಾಡಿ ದುರ್ವರ್ತನೆ ತೋರಿದ್ದಾರೆ. ಸುಮಾರು 20 ನಿಮಿಷಗಳ ಕಾಲ ಅಂಗಡಿಯೊಳಗೆ ಕಾಲಹರಣ ಮಾಡಿದ ಬಳಿಕ ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ.
ಬೆಳಗ್ಗೆ ಅಂಗಡಿ ಮಾಲೀಕರು ಬಂದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಸರ್ಜಾಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ.
ಕಳ್ಳತನ ನಡೆಸಿದ ಇಬ್ಬರನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಹಾಗೂ ಅಂಗಡಿ ಮಾಲೀಕರು ಪೊಲೀಸರಿಗೆ ಮನವಿ ಮಾಡಿದ್ದಾರೆ.

