Home Blog Page 41

ರಾಘವೇಂದ್ರ ಸ್ವಾಮಿ ಫೋಟೋ ತಳ್ಳಿದ ಸಿದ್ದರಾಮಯ್ಯ; ಸಿಎಂ ನಡೆಗೆ ಕೆಂಡಕಾರಿದ ಜಗ್ಗೇಶ್

0

ಬೆಂಗಳೂರು: ಅಭಿಮಾನಿಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರು ರಾಘವೇಂದ್ರ ಸ್ವಾಮಿಗಳ ಫೋಟೋ ನೀಡಲು ಮುಂದಾದ ವೇಳೆ, ಸಿಎಂ ಫೋಟೋ ಸ್ವೀಕರಿಸದೇ ತಳ್ಳಿದ ಘಟನೆ ಇದೀಗ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ನಡೆಗೆ ನಟ ಹಾಗೂ ರಾಜ್ಯಸಭಾ ಸದಸ್ಯರೂ ಆಗಿರುವ ಜಗ್ಗೇಶ್ ತೀವ್ರ ಬೇಸರ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ವಿಡಿಯೊವನ್ನು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜಗ್ಗೇಶ್, “ರಾಯರನ್ನ ಅಪಮಾನ ಮಾಡಿದವರು ಉದ್ಧಾರವಾದ ಇತಿಹಾಸವಿಲ್ಲ. ರಾಯರ ಸಣ್ಣ ಕೃಪೆ ನಮ್ಮ ಮೇಲೆ ಬೀಳಲೆಂದು ಕೋಟ್ಯಂತರ ಭಕ್ತರು ಜಪ–ತಪ–ವೈರಾಗ್ಯದಿಂದ ಸೇವೆ ಮಾಡುತ್ತಾರೆ. ಭಕ್ತಿಯಿಂದ ತಂದಿದ್ದನ್ನು ಹೀಗೆ ತಿರಸ್ಕರಿಸಿದ ಮೊದಲ ವ್ಯಕ್ತಿಯನ್ನು ನನ್ನ ಜೀವನದಲ್ಲಿ ನೋಡುತ್ತಿದ್ದೇನೆ. ರಾಯರಿದ್ದಾರೆ… ಎದ್ದು ಬರುತ್ತಾರೆ… ಕಾಯಬೇಕು” ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ಏನಿದು ಘಟನೆ?

ಬೆಳಗಾವಿ ಪ್ರವಾಸಕ್ಕಾಗಿ HALಗೆ ತೆರಳುವ ಮುನ್ನ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದ ಗೇಟ್ ಬಳಿ ಸಾರ್ವಜನಿಕರಿಂದ ಮನವಿ ಪತ್ರಗಳನ್ನು ಸ್ವೀಕರಿಸುತ್ತಿದ್ದರು. ಈ ಸಂದರ್ಭ ಅಭಿಮಾನಿಯೊಬ್ಬರು ರಾಘವೇಂದ್ರ ಸ್ವಾಮಿಗಳ ಫೋಟೋವನ್ನು ಸಿಎಂಗೆ ನೀಡಲು ಮುಂದಾದಾಗ, ಸಿಎಂ ಫೋಟೋ ಸ್ವೀಕರಿಸದೇ ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ವೇಳೆ ಅಭಿಮಾನಿಯ ಮೇಲೆ ಗರಂ ಆಗಿದ್ದಾರೆಯೆಂಬ ಮಾತುಗಳು ಕೇಳಿಬಂದಿವೆ.

ಈ ಹಿಂದೆ ಕುಂಕುಮ ಹಾಗೂ ಪೇಟವನ್ನು ತಿರಸ್ಕರಿಸಿದ್ದ ಪ್ರಕರಣಗಳು ಚರ್ಚೆಗೆ ಬಂದಿದ್ದರೆ, ಇದೀಗ ರಾಘವೇಂದ್ರ ಸ್ವಾಮಿಗಳ ಫೋಟೋ ತಿರಸ್ಕಾರವು ಹೊಸ ವಿವಾದಕ್ಕೆ ಕಾರಣವಾಗಿದೆ. ಘಟನೆಗೆ ವಿಪಕ್ಷ ನಾಯಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕ ವಲಯದಲ್ಲಿ ಭಾವನಾತ್ಮಕ ಪ್ರತಿಕ್ರಿಯೆಗಳು ಹೆಚ್ಚುತ್ತಿವೆ.

ದಾರಿ ಬಿಟ್ಟಿಲ್ಲ ಅಂತ ಬಸ್ ಚಾಲಕನಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ; ಬೈಕ್ ಸವಾರರ ಮೇಲೆ FIR!

0

ಬೀದರ್:- ಬೀದರ್ ತಾಲೂಕಿನ ಕಮಠಾಣ ಗ್ರಾಮದಲ್ಲಿ ದಾರಿ ಬಿಡದಿದ್ದಕ್ಕೆ ಬಸ್ ಚಾಲಕನಿಗೆ ಹಲ್ಲೆ ಮಾಡಿ, ಬೈಕ್ ಸವಾರ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಜರುಗಿದೆ.

ಅಶೋಕ್ ಮಾಣೀಕಪ್ಪ ಹಲ್ಲೆಗೊಳಗಾದ ಬಸ್ ಚಾಲಕ. ಘಟನೆ ಸಂಬಂಧ ಬಸ್ ಚಾಲಕ ಅಶೋಕ್ ದೂರು ದಾಖಲಿಸಿದ್ದು, ಬೈಕ್ ಸವಾರನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಎಸ್, ಮನ್ನಾಏಕೇಳಿಯಿಂದ ಬೀದರ್ ಕಡೆ ಬರುವಾಗ ಬದಗಲ್ ಬಳಿ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಬಸ್ ನಿಲ್ಲಿಸಿದ್ದಕ್ಕೆ ಹಿಂಬದಿಯಿಂದ ಬಂದು ಬೈಕ್ ಸವಾರನೊಬ್ಬ ದಾರಿ ಬಿಡುವಂತೆ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬಳಿಕ ಕಮಠಾಣಕ್ಕೆ ಬರುವಷ್ಟರಲ್ಲೇ ಬೈಕ್ ಸವಾರನ ಕಡೆಯವರು ಬಸ್ ತಡೆದು ನಮ್ಮವನಿಗೆ ಯಾಕೆ ದಾರಿಬಿಟ್ಟಿಲ್ಲ ಎಂದು ಅವಾಜ್ ಹಾಕಿದ್ದಾರೆ.

ಇದೇ ವೇಳೆ ಬೈಕ್ ಸವಾರ ಚಾಲಕನ ಕೊರಳಪಟ್ಟಿ ಹಿಡಿದು, ಎದೆಗೆ ಗುದ್ದಿ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹಲ್ಲೆಯ ದೃಶ್ಯಗಳನ್ನು ಚಾಲಕ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಈ ಸಂಬಂಧ ಬೀದರ್‌ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

‘ಎಷ್ಟೇ ದೊಡ್ಡವರಾದರೂ ಕಾನೂನಿಗೆ ಮೇಲುಗೈ’ – ಪವಿತ್ರಾ ಗೌಡಗೆ ಮನೆ ಊಟಕ್ಕೆ ಹೈಕೋರ್ಟ್ ಸ್ಪಷ್ಟ ನಿರಾಕರಣೆ

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಅವರಿಗೆ ಜೈಲಿನಲ್ಲಿ ಮನೆ ಊಟ ನೀಡುವ ವಿಚಾರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆಯಿತು. ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದೆ.

ಜೈಲಧಿಕಾರಿಗಳ ಪರವಾಗಿ ವಿಶೇಷ ಸರ್ಕಾರಿ ವಕೀಲ ಬಿ.ಎನ್. ಜಗದೀಶ್ ವಾದ ಮಂಡಿಸಿದ್ದು, ಸೆಷನ್ಸ್ ಕೋರ್ಟ್ ನೀಡಿದ್ದ ಮನೆ ಊಟ ಅನುಮತಿಗೆ ಹೈಕೋರ್ಟ್ ಈಗಾಗಲೇ ತಡೆ ನೀಡಿದೆ ಎಂದು ತಿಳಿಸಿದರು.
“ಎಷ್ಟೇ ದೊಡ್ಡವರಾಗಿದ್ದರೂ ಕಾನೂನಿನ ಮುಂದೆ ಎಲ್ಲರೂ ಒಂದೇ. ಯಾವುದೇ ಆರೋಪಿಗೂ ವಿಶೇಷ ಸವಲತ್ತು ನೀಡಬಾರದು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ” ಎಂದು ವಾದಿಸಿದರು.

ಜೈಲಿನಲ್ಲಿ ಈಗಾಗಲೇ ಎಫ್‌ಎಸ್‌ಎಸ್‌ಎಐ ಸಂಸ್ಥೆಯಿಂದ 4 ಸ್ಟಾರ್ ರೇಟಿಂಗ್ ಪಡೆದ ಗುಣಮಟ್ಟದ ಆಹಾರ ಒದಗಿಸಲಾಗುತ್ತಿದೆ. ಹೀಗಾಗಿ ಪವಿತ್ರಾ ಗೌಡ, ಲಕ್ಷ್ಮಣ್ ಹಾಗೂ ನಾಗರಾಜ್ ಅವರಿಗೆ ಮನೆ ಊಟ ನೀಡಲು ಯಾವುದೇ ಕಾರಣವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಮಾಡಿದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಎಚ್ಚರಿಕೆಯೂ ಇದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 3ಕ್ಕೆ ಮುಂದೂಡಲಾಗಿದೆ.

ಬೆಂಗಳೂರು| ಕುಖ್ಯಾತ ಮನೆಗಳ್ಳ ಬೆಂಗಳೂರಿನಲ್ಲಿ ಲಾಕ್; ತಪ್ಪಿಸಿಕೊಂಡವನ ಮೇಲಿದೆ 40ಕ್ಕೂ ಹೆಚ್ಚು ಕೇಸ್​!

0

ಬೆಂಗಳೂರು:- ಸಕ್ಕರೆ ನಾಡು ಮಂಡ್ಯದ ಅಲಗೂರು ಗ್ರಾಮದಲ್ಲಿ ನಡೆದ ಮನೆಗಳ್ಳತನ ಪ್ರಕರಣ ಸಂಬಂಧ ಬೆಂಗಳೂರಲ್ಲಿ ಕುಖ್ಯಾತ ಮನೆಗಳ್ಳನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಲಗೂರು ಗ್ರಾಮದಲ್ಲಿ ಮನೆ ಬಾಗಿಲು ಒಡೆದು ಚಿನ್ನಾಭರಣ ಕದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶ್ರೀಕಾಂತ್ ನನ್ನು ಮಾದನಾಯಕನಹಳ್ಳಿಯ ಅಂಚೆಪಾಳ್ಯದಲ್ಲಿ ಅರೆಸ್ಟ್ ಮಾಡಲಾಗಿದ್ದು, ಆರೋಪಿಯಿಂದ 42 ಲಕ್ಷ ಮೌಲ್ಯದ 348 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ಸಿದ್ದುಗಾಗಿ ಪೊಲೀಸರಿಂದ ಹುಡುಕಾಟ ಮುಂದುವರಿದಿದೆ.

ಆರೋಪಿಗಳಾದ ಸಿದ್ದು ಮತ್ತು ಶ್ರೀಕಾಂತ್ ಸೇರಿ ಸುಮಾರು 248 ಗ್ರಾಂ ಚಿನ್ನಾಭರಣವನ್ನು ಅಲಗೂರು ಗ್ರಾಮದ ಮನೆಗಳಿಂದ ಕದ್ದಿದ್ದರು. ಸಿದ್ದು ಈಗಾಗಲೇ 40ಕ್ಕೂ ಅಧಿಕ ಕಳ್ಳತನ ಪ್ರಕರಣಗಳಲ್ಲಿ ಆರೋಪಿ ಆಗಿದ್ದಾನೆ. ಆದರೆ ಶ್ರೀಕಾಂತ್ ಮುಂಚೆ ಮಳವಳ್ಳಿ ಮಾರುಕಟ್ಟೆಯಲ್ಲಿ ಸಣ್ಣಪುಟ್ಟ ಕಳ್ಳತನಗಳಲ್ಲಿ ಭಾಗಿಯಾಗಿದ್ದ. ಆರೋಪಿಗಳು ಬೈಕ್ ಮೂಲಕ ಬಂದು ಮನೆಗಳ್ಳತನ ಮಾಡಿದಂತೆ ಮಾಹಿತಿ ದೊರಕಿದ್ದು, ಕಳೆದ ಆಗಸ್ಟ್‌ನಲ್ಲಿ ಮನೆಯವರು ತಮಿಳುನಾಡಿಗೆ ಹೋದ ಸಮಯದಲ್ಲಿ ಈ ಕಳ್ಳತನ ನಡೆದಿದೆ.

ಬಂಧಿತ ಶ್ರೀಕಾಂತ್​​ ವಿಚಾರಣೆ ವೇಳೆ ಕದ್ದ ಚಿನ್ನಾಭರಣವನ್ನು ಇವರು ಗಿರಿವಿಗೆ ಇಟ್ಟಿದ್ದರು ಎಂಬುದು ಕೂಡ ಗೊತ್ತಾಗಿದೆ. ಮತ್ತೋರ್ವ ಆರೋಪಿಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ.

ಅಪರಿಚಿತರೊಂದಿಗೆ ಮಾತಾಡಲ್ಲ ಎಂದಿದ್ದಕೆ ಬಾಲಕಿ ಮೇಲೆ ಆಸಿಡ್ ಎರಚಿದ್ದ ಫೋಟೋಗ್ರಾಫರ್ ಅರೆಸ್ಟ್!

0

ಜೈಪುರ:- ರಾಜಸ್ಥಾನದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಅಪರಿಚಿತರೊಂದಿಗೆ ಮಾತನಾಡಲ್ಲ ಎಂದಿದ್ದಕ್ಕೆ ಬಾಲಕಿ ಮೇಲೆ ಆಸಿಡ್ ದಾಳಿ ಮಾಡಿದ್ದ ಫೋಟೋಗ್ರಾಫರ್ ನನ್ನು ಅರೆಸ್ಟ್ ಮಾಡಲಾಗಿದೆ.

19 ವರ್ಷದ ಓಂಪ್ರಕಾಶ್ ಅಲಿಯಾಸ್ ಜಾನಿ ಕೃತ್ಯ ಎಸಗಿದ ಫೋಟೋಗ್ರಾಫರ್. ಓಂಪ್ರಕಾಶ್ ಮದುವೆಯೊಂದರಲ್ಲಿ ಫೋಟೋಗ್ರಾಫರ್ ಆಗಿ ಹೋಗಿದ್ದ ವೇಳೆ ಬಾಲಕಿಯನ್ನು ನೋಡಿದ್ದಾನೆ. ಬಳಿಕ ಆಕೆಯನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾನೆ. ಈ ವೇಳೆ ಬಾಲಕಿ ತಾನು ಅಪರಿಚಿತರೊಂದಿಗೆ ಮಾತನಾಡುವುದಿಲ್ಲ ಎಂದು ಆತನಿಗೆ ಬೈದಿದ್ದಾಳೆ. ಇದರಿಂದ ಕೋಪಗೊಂಡ ಫೋಟೋಗ್ರಾಫರ್ ಆಕೆಯ ಮೇಲೆ ಆಸಿಡ್ ದಾಳಿ ಮಾಡಲು ಮುಂದಾಗಿದ್ದಾನೆ.

ಘಟನೆಯ ಬಳಿಕ ಬಾಲಕಿ ಶ್ರೀ ಗಂಗಾನಗರ ಜಿಲ್ಲೆಯ ಸುಭಾಷ್ ಪಾರ್ಕ್ ಪ್ರದೇಶದಲ್ಲಿ ತನ್ನ ಶಾಲೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಓಂಪ್ರಕಾಶ್ ಬೈಕ್‌ನಲ್ಲಿ ತೆರಳಿ ಆಕೆಯ ಮೇಲೆ ಆಸಿಡ್ ಬಾಟಲಿ ಎಸೆದಿದ್ದಾನೆ. ಇದರ ಪರಿಣಾಮ ಬಾಲಕಿಯ ಬಟ್ಟೆ ಮತ್ತು ಬೆರಳಿಗೆ ಸುಟ್ಟ ಗಾಯಗಳಾಗಿದೆ. ಇನ್ನು ಆರೋಪಿ ಓಂಪ್ರಕಾಶ್ ಪೊಲೀಸರ ಕೈಗೆ ಸಿಕ್ಕಿ ಬೀಳಬಾರದೆಂದು ತಾನು ಬಂದಿದ್ದ ಬೈಕಿನ ನಂಬರ್ ಪ್ಲೇಟ್ ಅನ್ನು ಬಟ್ಟೆಯಿಂದ ಮರೆಮಾಚಿದ್ದು, ಮುಖವನ್ನು ಬಟ್ಟೆ ಮತ್ತು ಹೆಲ್ಮೆಟ್‌ನಿಂದ ಮುಚ್ಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.

ಆಸಿಡ್ ದಾಳಿಯ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಘಟನೆ ನಡೆದು ಮೂರು ದಿನಗಳ ಬಳಿಕ ಆರೋಪಿಯ ಜಾಡು ಹಿಡಿದು ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

SSLC ಪ್ರಶ್ನೆಪತ್ರಿಕೆ ಲೀಕ್ ಬೆನ್ನಲ್ಲೇ ಎಚ್ಚೆತ್ತ ಶಿಕ್ಷಣ ಇಲಾಖೆ; ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ!

0

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬೆನ್ನಲ್ಲೇ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಹೊಸ ಮಾರ್ಗಸೂಚಿಗಳಂತೆ, ಎರಡನೇ ಪೂರ್ವಸಿದ್ಧತಾ ಪರೀಕ್ಷೆಗಳು ಜನವರಿ 27ರಿಂದ ಫೆಬ್ರವರಿ 2ರವರೆಗೆ ನಡೆಯಲಿದ್ದು, ಪರೀಕ್ಷೆ ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ. ವಿದ್ಯಾರ್ಥಿಗಳು ಬೆಳಿಗ್ಗೆ 9 ಗಂಟೆಯಿಂದಲೇ ಶಾಲೆಗೆ ಹಾಜರಾಗಬೇಕಾಗುತ್ತದೆ. ಪ್ರಶ್ನೆಪತ್ರಿಕೆಗಳನ್ನು ಶಾಲೆಯ ಲಾಗಿನ್ ಮೂಲಕ ಬೆಳಿಗ್ಗೆ 9.30ಕ್ಕೆ ಡೌನ್‌ಲೋಡ್ ಮಾಡಿ, 10 ಗಂಟೆಯೊಳಗೆ ಮುದ್ರಿಸಬೇಕು. ಬೆಳಿಗ್ಗೆ 10.50ಕ್ಕೂ ಮೊದಲು ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಹಾಲ್‌ಗೆ ಕಳುಹಿಸಬಾರದು ಎಂದು ಸೂಚಿಸಲಾಗಿದೆ.

ಪ್ರಶ್ನೆಪತ್ರಿಕೆ ಸೋರಿಕೆಯಾದರೆ ಮುಖ್ಯಶಿಕ್ಷಕ, ನೋಡಲ್ ಶಿಕ್ಷಕ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಉಪನಿರ್ದೇಶಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಪ್ರತ್ಯೇಕ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ ವಾರ ಗಣಿತ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಶಿವಮೊಗ್ಗ ಮತ್ತು ಕಲಬುರಗಿಯಲ್ಲಿ ಲೀಕ್ ಆಗಿದ್ದು, ಕೆಲವು ಶಾಲೆಗಳೇ ಪ್ರಶ್ನೆಪತ್ರಿಕೆಗಳನ್ನು ಮೂರು ಗಂಟೆಗಳ ಮುಂಚಿತವಾಗಿ ವಿದ್ಯಾರ್ಥಿಗಳಿಗೆ ಹಂಚಿದ್ದವು. ಇನ್‌ಸ್ಟಾಗ್ರಾಂನಲ್ಲಿ ‘ಡೆಲ್ಟಾ ಹ್ಯಾಕರ್’ ಹೆಸರಿನಲ್ಲಿ ಹಲವು ಖಾತೆಗಳ ಮೂಲಕ ಪ್ರಶ್ನೆಪತ್ರಿಕೆ ಮಾರಾಟ ಯತ್ನ ನಡೆದಿರುವುದು ಕೂಡ ಬೆಳಕಿಗೆ ಬಂದಿದೆ.

ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಡಿಜಿಪಿ ರಾಮಚಂದ್ರರಾವ್‌ಗೆ ನೋಟಿಸ್!

0

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ವಿರುದ್ಧದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಡಿಜಿಪಿ ರಾಮಚಂದ್ರರಾವ್ ಅವರಿಗೆ ನೋಟಿಸ್ ಜಾರಿಯಾಗಿದೆ.

ರಾಸಲೀಲೆ ಪ್ರಕರಣದ ಬೆನ್ನಲ್ಲೇ ಇದೀಗ ರನ್ಯಾ ರಾವ್ ಗ್ಲೋಲ್ಡ್ ಸ್ಮಗ್ಲಿಂಗ್ ಕೇಸ್‌ ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರಿ ವಾಹನ ದುರ್ಬಳಕೆ ಆರೋಪದಲ್ಲಿ ರಾಮಚಂದ್ರರಾವ್ ವಿರುದ್ಧ ಚಾರ್ಜ್ ಮೆಮೊ ನೀಡಲಾಗಿತ್ತು. ಡಿಜಿಪಿ ರಾಮಚಂದ್ರರಾವ್ ಅವರ ಪುತ್ರಿ ರನ್ಯಾ ರಾವ್ ಸರ್ಕಾರಿ ವಾಹನವನ್ನು ಅನಧಿಕೃತವಾಗಿ ಬಳಸಿದ್ದಾರೆನ್ನುವ ಆರೋಪ ಕೇಳಿಬಂದಿತ್ತು.

ಇನ್ನೂ, ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿ ಇಲಾಖಾ ತನಿಖೆಗೆ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಐಜಿಪಿಯಾಗಿದ್ದ ಅವಧಿಯಲ್ಲಿ ಕಚೇರಿಯಲ್ಲಿ ಸಮವಸ್ತ್ರದಲ್ಲಿಯೇ ರಾಸಲೀಲೆ ನಡೆಸಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೂ ಮುನ್ನ ಡಿಆರ್‌ಐ ಅಧಿಕಾರಿಗಳು ರಾಮಚಂದ್ರರಾವ್ ಅವರಿಗೆ ನೋಟಿಸ್ ನೀಡಿ ಮ್ಯಾರಥಾನ್ ವಿಚಾರಣೆ ನಡೆಸಿದ್ದರು.

ವಿಚಾರಣೆಯಲ್ಲಿ ರನ್ಯಾ ರಾವ್ ಹಾಗೂ ರಾಮಚಂದ್ರರಾವ್ ನಡುವಿನ ಸಂಬಂಧ, ಚಿನ್ನ ಸಾಗಾಟಕ್ಕೆ ಸಹಾಯ ಮಾಡಲಾಗಿತ್ತೇ?, ಪ್ರೋಟೋಕಾಲ್ ದುರ್ಬಳಕೆ ಮಾಡಿಕೊಂಡಿದ್ದಾರೇ?, ಹಾಗೂ ಕಳೆದ ಎರಡು ತಿಂಗಳಲ್ಲಿ 20ಕ್ಕೂ ಹೆಚ್ಚು ಬಾರಿ ದುಬೈಗೆ ತೆರಳಿ ಬಂದಿರುವ ವಿಚಾರಗಳ ಕುರಿತು ಸವಿವರವಾಗಿ ಪ್ರಶ್ನಿಸಲಾಗಿದೆ.

ಮನೆಯೊಳಗೇ ಚಾಲುಕ್ಯರ ಕಾಲದ ದೇವಸ್ಥಾನ ಪತ್ತೆ! ಲಕ್ಕುಂಡಿಯಲ್ಲಿ ಇತಿಹಾಸದ ಅಚ್ಚರಿ ಅನಾವರಣ!

0

ಗದಗ: ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿರುವ ಮನೆ ನೋಡಿದರೆ ಸಾಮಾನ್ಯ ಮನೆ, ಆದರೆ ಒಳಗೆ ಪ್ರವೇಶಿಸಿದರೆ ಚಾಲುಕ್ಯರ ಕಾಲದ ಪುರಾತನ ದೇವಸ್ಥಾನ ಕಾಣಿಸುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

ಲಕ್ಕುಂಡಿ ಗ್ರಾಮದ ಚೌಕಿಮಠ ಕುಟುಂಬದ ಮನೆಯ ಸಂಕೀರ್ಣದಲ್ಲಿ ಈಶ್ವರ ಹಾಗೂ ಅರ್ಧನಾರೇಶ್ವರ ದೇವಸ್ಥಾನಗಳು ಇರುವುದನ್ನು ಇತಿಹಾಸಕಾರರು ಗುರುತಿಸಿದ್ದಾರೆ. ಇದು ಚಾಲುಕ್ಯರ ಕಾಲಕ್ಕೆ ಸೇರಿದ ದೇವಸ್ಥಾನ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮನೆಯೊಳಗೆ ಸುಮಾರು ಹತ್ತು ಅಡಿ ಮಟ್ಟಿಗೆ ದೇವಸ್ಥಾನ ಮುಚ್ಚಿಹೋಗಿದ್ದು, ಅದರ ಐತಿಹಾಸಿಕ ಮಹತ್ವ ಇದೀಗ ಸರ್ಕಾರದ ಗಮನ ಸೆಳೆದಿದೆ. ದೇವಸ್ಥಾನವನ್ನು ಸರ್ಕಾರದ ವಶಕ್ಕೆ ಪಡೆದು ಜೀರ್ಣೋದ್ಧಾರ ಮಾಡುವ ಯೋಜನೆ ರೂಪುಗೊಳ್ಳುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಚೌಕಿಮಠ ಕುಟುಂಬದ ಶೇಖರಯ್ಯ ಚೌಕಿಮಠ ಅವರು ಪ್ರತಿಕ್ರಿಯಿಸಿ, “ಸರ್ಕಾರ ಸೂಕ್ತ ಪರಿಹಾರ ನೀಡಿದರೆ ದೇವಸ್ಥಾನವನ್ನು ಬಿಟ್ಟು ಕೊಡಲು ನಾವು ಸಿದ್ಧ” ಎಂದು ತಿಳಿಸಿದ್ದಾರೆ.

ಈ ಆವರಣದಲ್ಲಿ ಶರಣಯ್ಯ ಚೌಕಿಮಠ, ಶೇಖರಯ್ಯ ಚೌಕಿಮಠ, ಬಸವ್ವ ಈರಯ್ಯ ಚೌಕಿಮಠ, ಕೊಟ್ರಯ್ಯ ಚೌಕಿಮಠ, ಈರಮ್ಮ ಶಂಕ್ರಯ್ಯ ಚೌಕಿಮಠ ಕುಟುಂಬಗಳು ವಾಸವಿದ್ದು, ಎಲ್ಲರೂ ಬಡ ಕುಟುಂಬಗಳಾಗಿದ್ದಾರೆ. ಸರ್ಕಾರ ಪರಿಹಾರ ನೀಡಿದಲ್ಲಿ ಸಹಕಾರ ನೀಡುವುದಾಗಿ ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ.

ನಾಳೆ ಶಿವಕುಮಾರ ಶ್ರೀಗಳ 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಭಾಗಿ

0

ತುಮಕೂರು: “ನಡೆಯುವ ದೇವರು” ಎಂದೇ ಜನಮನದಲ್ಲಿ ನೆಲೆಸಿರುವ ಸಿದ್ದಗಂಗಾ ಶ್ರೀ ಶಿವಕುಮಾರ ಮಹಾಯೋಗಿಗಳ ಲಿಂಗೈಕ್ಯಕ್ಕೆ ನಾಳೆ 7 ವರ್ಷ. ಆದರೆ ಅವರ ಸೇವೆ, ತ್ಯಾಗ ಮತ್ತು ಮಾನವೀಯತೆ ಇಂದು ಕೂಡ ಲಕ್ಷಾಂತರ ಜನರ ಹೃದಯದಲ್ಲಿ ಜೀವಂತವಾಗಿದೆ.

ಈ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದಲ್ಲಿ ಭವ್ಯ ಪುಣ್ಯ ಸಂಸ್ಮರಣೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದೆ. ವಿಶೇಷವೆಂದರೆ, ಈ ಪವಿತ್ರ ಕಾರ್ಯಕ್ರಮಕ್ಕೆ ದೇಶದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಸ್ವತಃ ಆಗಮಿಸಿ ಗೌರವ ಸಲ್ಲಿಸಲಿದ್ದಾರೆ.

ಬೆಳಗ್ಗೆ 10:50ಕ್ಕೆ ಮಠಕ್ಕೆ ಆಗಮಿಸುವ ಉಪರಾಷ್ಟ್ರಪತಿಗಳು, ಮೊದಲು ಶಿವಕುಮಾರ ಶ್ರೀಗಳ ಗದ್ದಿಗೆಗೆ ಪೂಜೆ ಸಲ್ಲಿಸಿ, ನಂತರ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಕೇಂದ್ರ ಸಚಿವ ವಿ. ಸೋಮಣ್ಣ ಸಹ ಉಪಸ್ಥಿತರಿರಲಿದ್ದಾರೆ.

ಬೆಳಗ್ಗೆ 5 ಗಂಟೆಯಿಂದಲೇ ಮಠದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಲಿದ್ದು, ಮಂತ್ರಘೋಷಗಳೊಂದಿಗೆ ಗದ್ದಿಗೆ ಪೂಜೆ, ರುದ್ರಾಕ್ಷಿ ಮಂಟಪದಲ್ಲಿ ಪುತ್ಥಳಿ ಮೆರವಣಿಗೆ ಸೇರಿದಂತೆ ಭಕ್ತಿಭಾವದಿಂದ ಕೂಡಿದ ವಿಧಿವಿಧಾನಗಳು ನಡೆಯಲಿವೆ.

ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗಸ್ವಾಮೀಜಿ, ಸದ್ಗುರು ಮಧುಸೂದನ ಸಾಯಿ ಹಾಗೂ ಉತ್ತರಾಧಿಕಾರಿ ಶಿವಸಿದ್ದೇಶ್ವರ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಮತ್ತಷ್ಟು ಘನತೆ ನೀಡಲಿದ್ದಾರೆ.

ಸಿನಿಮಾ ಶೈಲಿಯಲ್ಲಿ ರೇಡ್; ಗೂಡ್ಸ್ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್!

0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡ್ರಗ್ಸ್ ದಂಧೆ ವಿರುದ್ಧ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಒಂದೊಂದೇ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುತ್ತಿದ್ದಾರೆ.

ಇತ್ತೀಚೆಗೆ ಮಂಗಳೂರು ಸಿಸಿಬಿ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ 4 ಕೋಟಿ ರೂ. ಮೌಲ್ಯದ ಎಂಡಿಎಂಎ ಡ್ರಗ್ಸ್ ಸಮೇತ ಉಗಾಂಡ ಮೂಲದ ಮಹಿಳೆಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಈ ಕಾರ್ಯಾಚರಣೆ ಬೆನ್ನಲ್ಲೇ ಇದೀಗ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಸಜಂಕಾಡಿ ಬಳಿ ಗೂಡ್ಸ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಭಾರೀ ಪ್ರಮಾಣದ ಗಾಂಜಾವನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಸುಮಾರು 106 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ಇದರ ಮೌಲ್ಯ ಸುಮಾರು 53 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಪ್ರಕರಣ ಸಂಬಂಧ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ನಿವಾಸಿಗಳಾದ ಅಬ್ದುಲ್ ಸಾದಿಕ್ (37) ಮತ್ತು ರಫೀಕ್ ಪಿ. (37) ಅವರನ್ನು ಬಂಧಿಸಲಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದಕ್ಕೂ ಮೊದಲು, ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಕೇರಳ ಮೂಲದ ಜೂಡ್ ಮಾಥ್ಯೂ (20) ಎಂಬ ಯುವಕನನ್ನು ಕದ್ರಿ ಪೊಲೀಸರು ಬಂಧಿಸಿದ್ದರು. ಎರ್ನಾಕುಲಂ ಜಿಲ್ಲೆಯ ನಿವಾಸಿಯಾಗಿರುವ ಆತ ಬೈಕ್‌ನಲ್ಲಿ ಎಂಡಿಎಂಎ ಸಾಗಿಸುತ್ತಿದ್ದ ವೇಳೆ ಪದವು ಗ್ರಾಮದ ಕೈಲಾಸ ಕಾಲೋನಿ ಬಳಿ ದಾಳಿ ನಡೆಸಿ ಬೈಕ್ ಹಾಗೂ ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ. ಸೀಜ್ ಮಾಡಲಾದ ವಸ್ತುಗಳ ಮೌಲ್ಯ ಸುಮಾರು 70 ಸಾವಿರ ರೂ. ಎಂದು ತಿಳಿದುಬಂದಿದೆ.

ಇದಲ್ಲದೆ, ಇತ್ತೀಚೆಗೆ ಜಿಲ್ಲೆಯ ಆರು ಪೆಡ್ಲರ್‌ಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಉಗಾಂಡ ಮೂಲದ ಮಹಿಳೆ ಜಲಿಯಾ ಝಲ್ವಾಂಗೋ ಅವರನ್ನು ಮಂಗಳೂರು ಸಿಸಿಬಿ ಪೊಲೀಸರು ಜಿಗಣಿ ಬಳಿ ಬಂಧಿಸಿದ್ದರು. ಆಕೆಯ ಬಳಿ 4 ಕೋಟಿ ರೂ. ಮೌಲ್ಯದ MDMA ವಶಕ್ಕೆ ಪಡೆಯಲಾಗಿದೆ. ಸಿಸಿಬಿ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ರಾಜ್ಯಾದ್ಯಂತ ಗಮನ ಸೆಳೆದಿತ್ತು.

error: Content is protected !!