Home Blog Page 370

SSLC ತೃತೀಯ ಭಾಷೆಗೆ ಗ್ರೇಡ್ ಬೇಡ: ಅಂಕಗಳೇ ನೀಡಲು ಹೈಕೋರ್ಟ್ ಆದೇಶ

ಬೆಂಗಳೂರು: ಪ್ರಸ್ತುತ ಸಾಲಿನಿಂದಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಗ್ರೇಡ್ ಬದಲು ಅಂಕಗಳನ್ನು ನೀಡಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಈ ಕುರಿತು ಚಿಕ್ಕಮಗಳೂರಿನ ಸಹನಾ ಆರ್. ನಾಯ್ಕ ಸೇರಿ ಮೂವರು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, 2025-2026ನೇ ಸಾಲಿನಿಂದ ತೃತೀಯ ಭಾಷಾ ವಿಷಯಗಳಿಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವ ನಿರ್ಧಾರವನ್ನು ಸರ್ಕಾರ ಕೊನೆಯ ಕ್ಷಣದಲ್ಲಿ ತೆಗೆದುಕೊಂಡಿದೆ ಎಂದು ಆಕ್ಷೇಪಿಸಿದರು. ಇದಕ್ಕೂ ಮುನ್ನ ಮಂಡಳಿ ಹೊರಡಿಸಿದ್ದ ಮಾರ್ಗಸೂಚಿಯ ಪ್ರಕಾರ, 100 ಅಂಕಗಳ ವ್ಯವಸ್ಥೆ (80 ಲಿಖಿತ + 20 ಆಂತರಿಕ) ಜಾರಿಯಲ್ಲಿತ್ತು ಎಂದು ಹೇಳಿದರು.

ಇದಲ್ಲದೆ, ಯುಪಿಎಸ್‌ಸಿ ಹಾಗೂ ಬ್ಯಾಂಕಿಂಗ್ ಸೇರಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗ್ರೇಡ್ ಪರಿಗಣಿಸಲಾಗುವುದಿಲ್ಲ. ಕೇವಲ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಹೀಗಾಗಿ ಗ್ರೇಡ್ ನೀಡಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಾನಿಯಾಗಬಹುದು ಎಂದು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸರ್ಕಾರ ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದ್ದೆಯೇ ಎಂದು ಪ್ರಶ್ನಿಸಿತು. ಸರ್ಕಾರಿ ವಕೀಲರು, ಸದ್ಯ ಕರಡು ಅಧಿಸೂಚನೆ ಮಾತ್ರ ಹೊರಬಂದಿದೆ ಎಂದು ತಿಳಿಸಿದರು.

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ, ಹಾಲಿ ಇರುವ ನಿಯಮಗಳು ಹಾಗೂ ಮಾರ್ಗಸೂಚಿಯ ಪ್ರಕಾರವೇ 2025-2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ ಅಂಕಗಳನ್ನು ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ರಷ್ಯಾ, ಇರಾನ್ ತೈಲ ಖರೀದಿಗೆ ಭಾರತಕ್ಕೆ ನೀಡಿದ ವಿನಾಯಿತಿಯಲ್ಲಿ ಬದಲಾವಣೆ ಇಲ್ಲ: ಅಮೆರಿಕ

0

ವಾಷಿಂಗ್ಟನ್: ಅಮೆರಿಕ ಸರ್ಕಾರವು ಇರಾನ್ ಮತ್ತು ರಷ್ಯಾದ ತೈಲ ಖರೀದಿಗೆ ನೀಡಿದ್ದ ನಿರ್ಬಂಧ ವಿನಾಯಿತಿಯನ್ನು ಇನ್ನು ಮುಂದೆ ನವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ನಿರ್ಧಾರವು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಮಾತನಾಡಿ, ರಷ್ಯಾ ತೈಲದ ಮೇಲಿನ ಸಾಮಾನ್ಯ ಪರವಾನಗಿಯನ್ನು ಮುಂದುವರಿಸುವುದಿಲ್ಲ ಎಂದು ತಿಳಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆ, ಇಂಧನ ಪೂರೈಕೆಯನ್ನು ಸಮತೋಲನಗೊಳಿಸಲು ನೀಡಿದ್ದ ತಾತ್ಕಾಲಿಕ ವಿನಾಯಿತಿಗಳನ್ನು ಈಗ ಹಿಂತೆಗೆದುಕೊಳ್ಳಲಾಗುತ್ತಿದೆ.

ಈ ವಿನಾಯಿತಿಗಳ ಪ್ರಮುಖ ಪ್ರಯೋಜನವನ್ನು ಭಾರತ ಸೇರಿದಂತೆ ಹಲವು ದೇಶಗಳು ಪಡೆದುಕೊಂಡಿದ್ದವು. ವಿಶೇಷವಾಗಿ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾದ ಸಮಸ್ಯೆಗಳ ಹಿನ್ನೆಲೆ, ಭಾರತಕ್ಕೆ ಬರುತ್ತಿದ್ದ ಅನೇಕ ತೈಲ ಹಡಗುಗಳು ಅಡಕವಾಗಿದ್ದವು. ಇದರಿಂದ ರಷ್ಯಾದ ತೈಲ ಖರೀದಿಗೆ ತಾತ್ಕಾಲಿಕ ಅನುಮತಿ ನೀಡಲಾಗಿತ್ತು.

ಅಮೆರಿಕ ಈ ಹಿಂದೆ ಇಂಧನ ಬೆಲೆ ಏರಿಕೆಯನ್ನು ನಿಯಂತ್ರಿಸಲು ಹಾಗೂ ಯುದ್ಧಕಾಲದಲ್ಲಿ ಪೂರೈಕೆ ಅಡಚಣೆಗಳನ್ನು ಕಡಿಮೆ ಮಾಡಲು ಸೀಮಿತ ಅವಧಿಗೆ ವಿನಾಯಿತಿ ನೀಡಿತ್ತು. ಮಾರ್ಚ್ 20ರಂದು ಇರಾನ್ ತೈಲಕ್ಕೂ ಇದೇ ರೀತಿಯ ಸಡಿಲಿಕೆ ನೀಡಲಾಗಿದ್ದು, ಸುಮಾರು 140 ಮಿಲಿಯನ್ ಬ್ಯಾರೆಲ್ ತೈಲ ಜಾಗತಿಕ ಮಾರುಕಟ್ಟೆಗೆ ತಲುಪಲು ಸಹಾಯ ಮಾಡಿತ್ತು.

ಈ ವಿನಾಯಿತಿ ಏಪ್ರಿಲ್ 19ರಂದು ಮುಕ್ತಾಯಗೊಳ್ಳಲಿದ್ದು, ಬಳಿಕ ಜಾಗತಿಕ ತೈಲ ಸರಬರಾಜು ಮತ್ತು ಬೆಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ನಾನು ಇನ್ನೂ 100% ಫಿಟ್ ಆಗಿಲ್ಲ: ಹೆಲ್ತ್ ಬಗ್ಗೆ ಅಪ್ಡೇಟ್ ಕೊಟ್ಟ ಕಿಂಗ್ ಕೊಹ್ಲಿ!

0

ಕ್ರಿಕೆಟ್ ಲೋಕದ ಕಿಂಗ್ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ಮೈದಾನದಲ್ಲಿ ಕೇವಲ ಆಟಗಾರರಷ್ಟೇ ಅಲ್ಲ, ಅದಮ್ಯ ಉತ್ಸಾಹದ ಪ್ರತೀಕ.

ಆದರೆ ಇದೇ ಮೊದಲ ಬಾರಿಗೆ ಅವರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದು, ಫೀಲ್ಡಿಂಗ್ ಮಾಡದೇ ಬ್ಯಾಟಿಂಗ್‌ಗೆ ಮಾತ್ರ ಬಂದಿರುವುದು ಗಮನಸೆಳೆದಿದೆ. ಇದಕ್ಕೆ ಪ್ರಮುಖ ಕಾರಣವಾಗಿ ಫಿಟ್‌ನೆಸ್ ಸಮಸ್ಯೆ ಹೊರಹೊಮ್ಮಿದೆ.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ 34 ಎಸೆತಗಳಲ್ಲಿ 49 ರನ್ ಬಾರಿಸಿ ಉತ್ತಮ ಪ್ರದರ್ಶನ ನೀಡಿದರು. ಫಿಟ್‌ನೆಸ್ ಸಮಸ್ಯೆಯ ನಡುವೆಯೂ ಅವರ ಈ ಬ್ಯಾಟಿಂಗ್ ತಂಡಕ್ಕೆ ಬಲವಾಯಿತು.

ಪಂದ್ಯದ ನಂತರ ಮಾತನಾಡಿದ ಕೊಹ್ಲಿ, “ನಾನು ಇನ್ನೂ 100% ಫಿಟ್ ಆಗಿಲ್ಲ. ಕಳೆದ ಪಂದ್ಯದಲ್ಲಿ ಮೊಣಕಾಲು ನೋವು ಕಾಣಿಸಿಕೊಂಡಿತ್ತು. ಕಳೆದ 4-5 ದಿನಗಳಿಂದ ಆರೋಗ್ಯದ ಏರುಪೇರಿನಿಂದ ವೈದ್ಯಕೀಯ ತಪಾಸಣೆಯಲ್ಲಿದ್ದೆ. ಆದರೂ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರುವುದು ಸಂತೋಷ ತಂದಿದೆ,” ಎಂದು ತಿಳಿಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬಗ್ಗೆ ಮಾತನಾಡಿದ ಅವರು, ಬಿಸಿಲಿನ ತಾಪಮಾನದಿಂದ ಪಿಚ್ ಒಣಗಿದ್ದರಿಂದ ಚೆಂಡು ನಿಧಾನವಾಗಿ ಬರುತ್ತಿತ್ತು. ಹೀಗಾಗಿ ಪವರ್‌ಪ್ಲೇನಲ್ಲಿ ಹೆಚ್ಚು ರನ್ ಗಳಿಸುವ ಯೋಜನೆ ರೂಪಿಸಿದ್ದೆವು ಎಂದು ಹೇಳಿದರು. ಫಿಲ್ ಸಾಲ್ಟ್ ಜೊತೆಗೂಡಿ ಆರಂಭದಲ್ಲೇ ತಂಡಕ್ಕೆ ಬಲವಾದ ಅಡಿಪಾಯ ಹಾಕಿದುದರಿಂದ ಪಂದ್ಯದಲ್ಲಿ ಹಿಡಿತ ಸಾಧಿಸಲು ಸಾಧ್ಯವಾಯಿತು ಎಂದು ವಿವರಿಸಿದರು.

ತಂಡದ ನಾಯಕ ರಜತ್ ಪಾಟಿದಾರ್ ಅವರ ಆಟವನ್ನು ಶ್ಲಾಘಿಸಿದ ಕೊಹ್ಲಿ, “ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಆಡುವ ರೀತಿ ಅದ್ಭುತವಾಗಿದೆ. ಬ್ಯಾಟಿಂಗ್ ಕ್ರಮಾಂಕ ನಮಗೆ ಸ್ವಾತಂತ್ರ್ಯ ನೀಡಿದ್ದು, ರಜತ್, ರೊಮಾರಿಯೋ ಮತ್ತು ಟಿಮ್ ಡೇವಿಡ್ ಇದ್ದರಿಂದ ಒತ್ತಡವಿಲ್ಲದೆ ಆಡಲು ಸಾಧ್ಯವಾಗುತ್ತಿದೆ,” ಎಂದರು.

ಆಧುನಿಕ ಕ್ರಿಕೆಟ್ ಬಗ್ಗೆ ಪ್ರತಿಕ್ರಿಯಿಸಿದ ಕೊಹ್ಲಿ, ಪ್ರತಿಯೊಂದು ಪಂದ್ಯವೂ 230-240 ರನ್‌ಗಳದ್ದಾಗುವುದಿಲ್ಲ. ಪರಿಸ್ಥಿತಿಗೆ ಹೊಂದಿಕೊಂಡು ಆಡುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.

ಮೊಣಕಾಲು ನೋವು ಹಾಗೂ ಆರೋಗ್ಯ ಸಮಸ್ಯೆಯ ನಡುವೆಯೂ ತಂಡಕ್ಕಾಗಿ ಕಣಕ್ಕಿಳಿದ ಕೊಹ್ಲಿಯ ಬದ್ಧತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ನಾನು ಕೇವಲ 10 ಪ್ರತಿಶತ ರಿದಮ್‌ನಲ್ಲಿದ್ದೇನೆ” ಎಂದಿದ್ದರೂ, ಅವರ ಆಟ ಎದುರಾಳಿ ಬೌಲರ್‌ಗಳಿಗೆ ಸವಾಲಾಗಿರುವುದು ವಿಶೇಷವಾಗಿದೆ.

IPL 2026: ಚಿನ್ನಸ್ವಾಮಿಯಲ್ಲಿ ಹಾಡು ವಿವಾದ: ಬಿಸಿಸಿಐಗೆ ಸಿಎಸ್‌ಕೆ ದೂರು

0

ಐಪಿಎಲ್ ಅಂಗಳದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಪಂದ್ಯ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ತಂಡದ ಡಿಜೆ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಬಿಸಿಸಿಐಗೆ ಅಧಿಕೃತ ದೂರು ಸಲ್ಲಿಸಿದೆ.

ಏಪ್ರಿಲ್ 5ರಂದು ನಡೆದ ಪಂದ್ಯದಲ್ಲಿ ಸಿಎಸ್‌ಕೆ ಆಟಗಾರರು ಔಟಾದಾಗ “ದೋಸೆ, ಇಡ್ಲಿ, ಸಾಂಬಾರ್, ಚಟ್ನಿ…” ಎಂಬ ಹಾಡನ್ನು ಡಿಜೆ ಪದೇ ಪದೇ ಪ್ಲೇ ಮಾಡಿದ್ದಾಗಿ ಆರೋಪಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಹಾಡು ದಕ್ಷಿಣ ಭಾರತೀಯರನ್ನು, ವಿಶೇಷವಾಗಿ ತಮಿಳು ಜನರನ್ನು ಅಣಕಿಸಲು ಬಳಸಲಾಗುತ್ತದೆ ಎನ್ನಲಾಗಿದ್ದು, ಇದು ಸಿಎಸ್‌ಕೆ ತಂಡದ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸಿಎಸ್‌ಕೆ ಮ್ಯಾನೇಜಿಂಗ್ ಡೈರೆಕ್ಟರ್ ಕಾಶಿ ವಿಶ್ವನಾಥನ್, ಆಟಗಾರರ ಹಾಗೂ ಅಭಿಮಾನಿಗಳ ಗೌರವಕ್ಕೆ ಧಕ್ಕೆ ಉಂಟುಮಾಡುವ ರೀತಿಯ ವರ್ತನೆ ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ, ಆಟಗಾರರು ಪೆವಿಲಿಯನ್‌ಗೆ ಹಿಂತಿರುಗುವ ವೇಳೆ ಡಿಜೆ ಮೈಕ್‌ನಲ್ಲಿ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿರುವುದಾಗಿ ಆರೋಪಿಸಿದ್ದಾರೆ.

“ತವರು ತಂಡವನ್ನು ಬೆಂಬಲಿಸುವುದು ಸರಿ, ಆದರೆ ಎದುರಾಳಿ ತಂಡವನ್ನು ಅವಮಾನಿಸುವುದು ತಪ್ಪು” ಎಂದು ಸಿಎಸ್‌ಕೆ ಸ್ಪಷ್ಟಪಡಿಸಿದೆ. ಕಳೆದ ಸೀಸನ್‌ನಲ್ಲಿಯೂ ಇದೇ ರೀತಿಯ ಘಟನೆಗಳ ಹಿನ್ನೆಲೆ ಇರುವುದರಿಂದ, ಈ ವಿವಾದ ಮತ್ತಷ್ಟು ತೀವ್ರವಾಗಿದೆ.

ಈ ದೂರನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದ್ದು, ಕ್ರೀಡಾಂಗಣಗಳಲ್ಲಿ ಮನರಂಜನೆಯ ಹೆಸರಿನಲ್ಲಿ ಯಾವುದೇ ಪ್ರಾದೇಶಿಕ ಅಥವಾ ಅವಹೇಳನಕಾರಿ ಅಂಶಗಳು ನಡೆಯದಂತೆ ಹೊಸ ಮಾರ್ಗಸೂಚಿಗಳನ್ನು ತರಲು ಚಿಂತನೆ ನಡೆಸುತ್ತಿದೆ. ಮುಂದಿನ ಪಂದ್ಯಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕ್ಯಾಂಟರ್ ಗುದ್ದಿ ಮಿನಿ ಟೆಂಪೋ ಪಲ್ಟಿ: ರಸ್ತೆ ಮೇಲೆಲ್ಲಾ ಚಲ್ಲಾಪಿಲ್ಲಿಯಾದ ಮೊಟ್ಟೆಗಳು!

ಬೆಂಗಳೂರು: ಕೆಆರ್ ಪುರದ ಟಿಸಿ ಪಾಳ್ಯ ಸಿಗ್ನಲ್ ಬಳಿ ಇಂದು ಬೆಳಗ್ಗೆ ಬೃಹತ್ ಕ್ಯಾಂಟರ್ ಮತ್ತು ಮೊಟ್ಟೆ ತುಂಬಿದ್ದ ಮಿನಿ ಟೆಂಪೋ ನಡುವೆ ಅಪಘಾತ ಸಂಭವಿಸಿದೆ.

ಈ ಘಟನೆಯಲ್ಲಿ ಸಾವಿರಾರು ಮೊಟ್ಟೆಗಳು ರಸ್ತೆ ಮೇಲೆ ಬಿದ್ದು ಸಂಪೂರ್ಣವಾಗಿ ನಾಶವಾಗಿವೆ.

ಮಾರುಕಟ್ಟೆಗೆ ಮೊಟ್ಟೆ ಸಾಗಿಸುತ್ತಿದ್ದ ಮಿನಿ ಟೆಂಪೋಗೆ ಹಿಂದಿನಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಪಲ್ಟಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನದಲ್ಲಿ ತುಂಬಿದ್ದ ಮೊಟ್ಟೆಗಳು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದು ಹಾನಿಗೊಂಡಿವೆ.

ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಸ್ಥಳಕ್ಕೆ ಕೆಆರ್ ಪುರ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಅಪಘಾತ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

RCB Vs LSG: ಲಕ್ನೋ ಮಣಿಸಿ ಅಗ್ರಸ್ಥಾನಕ್ಕೇರಿದ ಬೆಂಗಳೂರು; ಕಿಂಗ್ ಕೊಹ್ಲಿ ಆರ್ಭಟಕ್ಕೆ ವಿಶ್ವ ದಾಖಲೆ ಧೂಳಿಪಟ!

0

ಬೆಂಗಳೂರು: ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 20 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಯಿತು.

ಸುಲಭ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ 15.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿ ಜಯಭೇರಿ ಬಾರಿಸಿತು. ಈ ಗೆಲುವಿನೊಂದಿಗೆ ಉತ್ತಮ ನೆಟ್ ರನ್‌ರೇಟ್ ಸಹಾಯದಿಂದ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

ಪಂದ್ಯದಲ್ಲಿ ಆರ್​ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 34 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 49 ರನ್​ ಬಾರಿಸಿದ್ದರು. ಈ 49 ರನ್​ಗಳೊಂದಿಗೆ ಕಿಂಗ್ ಕೊಹ್ಲಿ ಟಿ20 ಇತಿಹಾಸದಲ್ಲೇ ಒಂದೇ ಮೈದಾನದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಇಂತಹದೊಂದು ಭರ್ಜರಿ ದಾಖಲೆ ಇಂಗ್ಲೆಂಡ್​ನ ಜೇಮ್ಸ್​ ವಿನ್ಸ್​ ಹೆಸರಿನಲ್ಲಿತ್ತು. ಸೌತಂಪ್ಟನ್​ನ ರೋಸ್ ಬೌಲ್​ ಮೈದಾನದಲ್ಲಿ 117 ಇನಿಂಗ್ಸ್​ಗಳಲ್ಲಿ 3585 ರನ್​ ಕಲೆಹಾಕುವ ಮೂಲಕ ಜೇಮ್ಸ್​ ವಿನ್ಸ್, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಗ್ರೌಂಡ್​ನಲ್ಲಿ ಅತೀ ಹೆಚ್ಚು ರನ್​ಗಳಿಸಿದ ಬ್ಯಾಟರ್​ ಎನಿಸಿಕೊಂಡಿದ್ದರು.

ಇದೀಗ ಈ ದಾಖಲೆಯನ್ನು ವಿರಾಟ್ ಕೊಹ್ಲಿ ಅಳಿಸಿ ಹಾಕಿದ್ದಾರೆ. ಕಿಂಗ್ ಕೊಹ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈವರೆಗೆ 109 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಕೊಹ್ಲಿ ಬರೋಬ್ಬರಿ 3750+ ರನ್​ ಗಳಿಸಿದ್ದಾರೆ. ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಮೈದಾನದಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮಂತ್ರಾಲಯ ಬಳಿ ಭೀಕರ ಅಪಘಾತ: ರಾಯರ ದರ್ಶನಕ್ಕೆ ತೆರಳುತ್ತಿದ್ದ 8 ಮಂದಿ ದುರ್ಮರಣ

ರಾಯಚೂರು: ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಸಮೀಪದ ಚಿಲಕನಡೋಣ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಸಿಮೆಂಟ್ ಟ್ಯಾಂಕರ್ ಮತ್ತು ಬುಲೆರೋ ವಾಹನ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರಾಯರ ದರ್ಶನಕ್ಕಾಗಿ ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಮೃತರು ಹಾಸನ ಮತ್ತು ಚಿಕ್ಕಮಗಳೂರು ಮೂಲದವರು ಎಂದು ತಿಳಿದುಬಂದಿದೆ. ಮೃತರಲ್ಲಿ ಐವರು ಮಹಿಳೆಯರು, ಇಬ್ಬರು ಪುರುಷರು ಹಾಗೂ ಮೂರು ವರ್ಷದ ಮಗು ಸೇರಿದ್ದಾರೆ.

ಬೀದರ್‌ನಿಂದ ತುಮಕೂರಿಗೆ ತೆರಳುತ್ತಿದ್ದ ಟ್ಯಾಂಕರ್, ಮಂತ್ರಾಲಯ ಕಡೆಗೆ ಹೋಗುತ್ತಿದ್ದ ಬುಲೆರೋ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ನಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನ ಸಂಪೂರ್ಣ ಜಖಂ ಆಗಿದ್ದು, ಸ್ಥಳದಲ್ಲೇ 8 ಮಂದಿ ಸಾವನ್ನಪ್ಪಿದ್ದಾರೆ.

ಘಟನೆಯ ನಂತರ ಗಾಯಾಳುಗಳನ್ನು ತಕ್ಷಣವೇ ಕರ್ನೂಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿವೋ ಟಿ5 ಪ್ರೊ 5ಜಿ ಭಾರತದಲ್ಲಿ ಬಿಡುಗಡೆ – ಬೆಲೆ ಹಾಗೂ ಫೀಚರ್ಸ್ ಹೀಗಿದೆ!

0

ಪ್ರಸಿದ್ಧ Vivo ಕಂಪನಿ ಭಾರತದಲ್ಲಿ ತನ್ನ ಹೊಸ Vivo T5 Pro 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.

ಈ ಫೋನ್ ಈ ತಿಂಗಳ ಕೊನೆಯಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮತ್ತು ಕಂಪನಿಯ ಆನ್‌ಲೈನ್ ಸ್ಟೋರ್ ಮೂಲಕ ಮಾರಾಟಕ್ಕೆ ಬರಲಿದೆ.

ಹೊಸ Vivo T5 Pro 5G ಎರಡು ಬಣ್ಣ ಆಯ್ಕೆಗಳಲ್ಲಿ ಹಾಗೂ ಮೂರು RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ. ಇದು ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 7 ಸರಣಿ ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, 9,020mAh ದೊಡ್ಡ ಬ್ಯಾಟರಿ ಹೊಂದಿದೆ.

ಭಾರತದಲ್ಲಿ ಇದರ ಬೆಲೆ ಹೀಗಿದೆ:

  • 8GB + 128GB: ₹29,999
  • 8GB + 256GB: ₹33,999
  • 12GB + 256GB: ₹39,999

ಕಂಪನಿ ಬ್ಯಾಂಕ್ ಆಫರ್‌ಗಳ ಮೂಲಕ ₹3,000 ವರೆಗೆ ರಿಯಾಯಿತಿ ಹಾಗೂ EMI ಸೌಲಭ್ಯ ನೀಡುತ್ತಿದೆ. ಈ ಫೋನ್ ಏಪ್ರಿಲ್ 21ರಂದು ಫ್ಲಿಪ್‌ಕಾರ್ಟ್ ಮತ್ತು Vivo ಆನ್‌ಲೈನ್ ಸ್ಟೋರ್‌ನಲ್ಲಿ ಮಾರಾಟಕ್ಕೆ ಬರಲಿದೆ.

Vivo T5 Pro 5G 6.83-ಇಂಚಿನ 1.5K AMOLED ಡಿಸ್ಪ್ಲೇ, 144Hz ರಿಫ್ರೆಶ್ ರೇಟ್ ಹಾಗೂ HDR10+ ಬೆಂಬಲ ಹೊಂದಿದೆ. ಇದು Android ಆಧಾರಿತ ColorOS‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ ವಿಭಾಗದಲ್ಲಿ 50MP ಮುಖ್ಯ ಕ್ಯಾಮೆರಾ (Sony IMX882 ಸೆನ್ಸರ್, OIS ಸಹಿತ), 2MP ಬೊಕೆ ಕ್ಯಾಮೆರಾ ಹಾಗೂ 32MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಹಿಂಭಾಗ ಮತ್ತು ಮುಂಭಾಗ ಎರಡರಲ್ಲೂ 4K ವಿಡಿಯೋ ರೆಕಾರ್ಡಿಂಗ್ ಸಾಧ್ಯ.

ಇದಲ್ಲದೆ 90W ಫಾಸ್ಟ್ ಚಾರ್ಜಿಂಗ್, Wi-Fi 6, Bluetooth 5.2 ಸೇರಿದಂತೆ ಆಧುನಿಕ ಸಂಪರ್ಕ ಸೌಲಭ್ಯಗಳನ್ನು ಹೊಂದಿದೆ.

ಜಿಬಿಎ ಚುನಾವಣೆಗೆ ಸರ್ಕಾರದಿಂದ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಕೆ!

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.

ವಾರ್ಡ್ ಪುನರ್ ವಿಂಗಡನೆ ಹಾಗೂ ಮೀಸಲಾತಿ ಪ್ರಕ್ರಿಯೆಗಳು ಪೂರ್ಣಗೊಂಡಿರುವುದಾಗಿ ಸರ್ಕಾರ ಕೋರ್ಟ್‌ಗೆ ಮಾಹಿತಿ ನೀಡಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಜೂನ್ 30ರ ಗಡುವು ವಿಧಿಸಿತ್ತು.

ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಅಗತ್ಯವಾದ ಎಲ್ಲ ಪೂರ್ವ ಪ್ರಕ್ರಿಯೆಗಳನ್ನು ಸರ್ಕಾರ ಪೂರ್ಣಗೊಳಿಸಿದ್ದು, ಇದೀಗ ಚುನಾವಣಾ ದಿನಾಂಕದ ಬಗ್ಗೆ ಅಂತಿಮ ನಿರ್ಧಾರವನ್ನು ಚುನಾವಣಾ ಆಯೋಗ ತೆಗೆದುಕೊಳ್ಳಲಿದೆ.

ಇದಕ್ಕೂ ಮುನ್ನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಗೆ ಕೊನೆಯ ಬಾರಿ 2015ರ ಆಗಸ್ಟ್‌ನಲ್ಲಿ ಚುನಾವಣೆ ನಡೆದಿತ್ತು. ಅದರ ಅವಧಿ 2020ರ ಸೆಪ್ಟೆಂಬರ್‌ನಲ್ಲಿ ಮುಕ್ತಾಯಗೊಂಡಿತ್ತು.

ಟರ್ಕಿ ಶಾಲೆಯಲ್ಲಿ ಗುಂಡಿನ ದಾಳಿ: 4 ಮಂದಿ ಸಾವು, 20 ಜನರಿಗೆ ಗಾಯ!

0

ನವದೆಹಲಿ: ಟರ್ಕಿಯ ಕಹ್ರಮನ್‌ಮರಾಸ್ ಪ್ರಾಂತ್ಯದ ಆಯ್ಸರ್ ಕ್ಯಾಲಿಕ್ ಮಾಧ್ಯಮಿಕ ಶಾಲೆಯಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಸುಮಾರು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮಾಹಿತಿಯ ಪ್ರಕಾರ, ಶಸ್ತ್ರಸಜ್ಜಿತ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ಗನ್ ಅನ್ನು ಬ್ಯಾಗ್‌ನಲ್ಲಿ ಶಾಲೆಗೆ ತಂದು ಗುಂಡು ಹಾರಿಸಿದ್ದಾನೆ. ಈ ದಾಳಿಯಲ್ಲಿ ಒಬ್ಬ ಶಿಕ್ಷಕ ಹಾಗೂ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡಿನ ದಾಳಿಯ ಬಳಿಕ ಆರೋಪಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ಬಳಿಕ ಸ್ಥಳಕ್ಕೆ ಭದ್ರತಾ ಪಡೆಗಳು ದೌಡಾಯಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.