Home Blog Page 39

ಮಳೆ ಕೊರತೆಯಿಂದ ಕುರಿ ಸಾಕಾಣಿಕೆಗೆ ಭಾರೀ ಹೊಡೆತ; ಸಂಕಷ್ಟದಲ್ಲಿ ಕುರಿಗಾಹಿಗಳ ಬದುಕು!

ಬೀದರ್: ಮಳೆಗಾಲ ಆರಂಭವಾಗಿ ಹಲವು ವಾರಗಳು ಕಳೆದರೂ ಬೀದರ್ ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದ ಕಾರಣ ರೈತರ ಜೊತೆಗೆ ಕುರಿ-ಮೇಕೆ ಸಾಕಾಣಿಕೆಯನ್ನು ಅವಲಂಬಿಸಿರುವ ಕುರಿಗಾಹಿಗಳ ಜೀವನವೂ ಸಂಕಷ್ಟಕ್ಕೆ ಸಿಲುಕಿದೆ.

ಕಾಡು ಹಾಗೂ ಬಯಲು ಪ್ರದೇಶಗಳಲ್ಲಿ ಹಸಿರು ಸಂಪೂರ್ಣ ಮಾಯವಾಗಿದ್ದು, ಕುರಿಗಳಿಗೆ ಮೇವು ಮತ್ತು ಕುಡಿಯುವ ನೀರು ಸಿಗದೆ ಕುರಿಗಾಹಿಗಳು ಪ್ರತಿದಿನ ಹತ್ತಾರು ಕಿಲೋಮೀಟರ್ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಾರಿ ಮುಂಗಾರು ಕೈಕೊಟ್ಟಿರುವುದರಿಂದ ಜಿಲ್ಲೆಯಲ್ಲಿ ಬಯಲು ಪ್ರದೇಶಗಳು ಸಂಪೂರ್ಣ ಒಣಗಿದ್ದು, ಸಾಮಾನ್ಯವಾಗಿ ಹಚ್ಚಹಸಿರಿನಿಂದ ಕಂಗೊಳಿಸುವ ಪ್ರದೇಶಗಳು ಈಗ ಬರಿದಾಗಿವೆ. ಕಾಡಿನಲ್ಲೂ ಮೇವು ಸಿಗದ ಕಾರಣ ಕುರಿಗಾಹಿಗಳು ಪ್ರತಿದಿನ ಹೊಸ ಪ್ರದೇಶಗಳ ಹುಡುಕಾಟದಲ್ಲಿ ಅಲೆದಾಡುತ್ತಿದ್ದಾರೆ.

ಬೆಳಗ್ಗೆಯಿಂದಲೇ ನೂರಾರು ಕುರಿಗಳನ್ನು ಕರೆದುಕೊಂಡು ಕಾಡು, ಗುಡ್ಡ ಹಾಗೂ ಬಯಲು ಪ್ರದೇಶಗಳಲ್ಲಿ ಸುತ್ತಾಡಿದರೂ ಸಮರ್ಪಕ ಮೇವು ದೊರೆಯುತ್ತಿಲ್ಲ. ಇದರಿಂದ ಕುರಿಗಳನ್ನು ಸಾಕುವುದು ದಿನದಿಂದ ದಿನಕ್ಕೆ ಸವಾಲಾಗಿ ಪರಿಣಮಿಸಿದೆ.

ಕೆರೆ, ಹಳ್ಳ ಹಾಗೂ ನೀರಿನ ತೊರೆಗಳು ಬತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆಯೂ ತೀವ್ರಗೊಂಡಿದೆ. ಕೆಲವೊಮ್ಮೆ ದೂರದ ಗ್ರಾಮಗಳಿಗೆ ತೆರಳಿ ಕುರಿಗಳಿಗೆ ನೀರು ಕುಡಿಸಿ ಮತ್ತೆ ಮೇವು ಹುಡುಕುವ ಅನಿವಾರ್ಯತೆ ಎದುರಾಗಿದೆ.

ಕಳೆದ ಮೂರು ತಿಂಗಳಿಂದ ಇದೇ ಪರಿಸ್ಥಿತಿ ಮುಂದುವರಿದಿದ್ದು, ಸಮರ್ಪಕ ಆಹಾರ ಸಿಗದ ಕಾರಣ ಕುರಿಗಳ ತೂಕ ಗಣನೀಯವಾಗಿ ಇಳಿಕೆಯಾಗುತ್ತಿದೆ. ಹಸಿವಿನಿಂದ ಬಳಲುತ್ತಿರುವ ಕುರಿಗಳು ದುರ್ಬಲವಾಗುತ್ತಿದ್ದು, ವಿವಿಧ ರೋಗಗಳಿಗೆ ತುತ್ತಾಗುವ ಆತಂಕ ಹೆಚ್ಚಿದೆ.

ಇದರಿಂದ ಕುರಿ ಸಾಕಾಣಿಕೆಯನ್ನು ಜೀವನೋಪಾಯವಾಗಿ ನಂಬಿಕೊಂಡಿರುವ ಕುಟುಂಬಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಅಗತ್ಯ ನೆರವು ನೀಡಬೇಕು ಎಂದು ಕುರಿಗಾಹಿಗಳು ಆಗ್ರಹಿಸಿದ್ದಾರೆ.

ಮುಂಗಾರು ಮತ್ತೆ ಚುರುಕು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ!

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದ ಜನರು ಎಚ್ಚರಿಕೆಯಿಂದಿದ್ದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಇದೀಗ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೂ ವ್ಯಾಪಿಸುವ ಸಾಧ್ಯತೆ ಇದೆ. ಜೂನ್ 27ರಂದು ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ.

ಈ ಭಾಗಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಇದೇ ರೀತಿಯ ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದೇ ವೇಳೆ, ಜೂನ್ 25ರ ಬೆಳಿಗ್ಗೆ 8.30ರಿಂದ ಜೂನ್ 26ರ ಬೆಳಿಗ್ಗೆ 8.30ರವರೆಗೆ ವಿಜಯಪುರ ಜಿಲ್ಲೆಯ ಚಡಚಣದಲ್ಲಿ 72.2 ಮಿಲಿ ಮೀಟರ್ ಮಳೆಯಾಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಮಳೆ ದಾಖಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಜಲವಳ್ಳಿಯಲ್ಲಿ 70.5 ಮಿಲಿ ಮೀಟರ್, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟುವಿನಲ್ಲಿ 50.5 ಮಿಲಿ ಮೀಟರ್ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇನ್ನಾದಲ್ಲಿ 46 ಮಿಲಿ ಮೀಟರ್ ಮಳೆಯಾಗಿದೆ.

ಮಳೆ ತೀವ್ರಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶದ ನಿವಾಸಿಗಳು, ರೈತರು ಹಾಗೂ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.

ಕಿಡ್ನಿ ಆರೋಗ್ಯ ಕಾಪಾಡಲು ಈ 5 ಅಭ್ಯಾಸಗಳನ್ನು ಇಂದೇ ರೂಢಿಸಿಕೊಳ್ಳಿ!

0

ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದು ಪ್ರತಿದಿನ ಸುಮಾರು 180–200 ಲೀಟರ್ ರಕ್ತವನ್ನು ಶುದ್ಧೀಕರಿಸಿ, ದೇಹದಲ್ಲಿನ ವಿಷಕಾರಿ ತ್ಯಾಜ್ಯ ಹಾಗೂ ಹೆಚ್ಚುವರಿ ದ್ರವವನ್ನು ಹೊರಹಾಕುತ್ತದೆ.

ಕಿಡ್ನಿ ಆರೋಗ್ಯ ಹದಗೆಟ್ಟರೆ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ಕಿಡ್ನಿಯ ಆರೈಕೆಗೆ ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸುವುದು ಅಗತ್ಯ.

1. ಪ್ರತಿದಿನ ವ್ಯಾಯಾಮ ಮಾಡಿ
ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವಾಕಿಂಗ್, ವ್ಯಾಯಾಮ ಅಥವಾ ಈಜು ಮಾಡುವುದರಿಂದ ತೂಕ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿದ್ದು, ಕಿಡ್ನಿಗಳ ಆರೋಗ್ಯಕ್ಕೂ ಸಹಕಾರಿ.

2. ಸಕ್ಕರೆ ಸೇವನೆ ಕಡಿಮೆ ಮಾಡಿ
ಅತಿಯಾದ ಸಕ್ಕರೆ ಸೇವನೆಯಿಂದ ಮಧುಮೇಹದ ಅಪಾಯ ಹೆಚ್ಚುತ್ತದೆ. ಮಧುಮೇಹವು ಕಿಡ್ನಿ ವೈಫಲ್ಯದ ಪ್ರಮುಖ ಕಾರಣಗಳಲ್ಲಿ ಒಂದಾಗಿರುವುದರಿಂದ ಸಿಹಿ ಪದಾರ್ಥಗಳು ಮತ್ತು ಸಕ್ಕರೆ ಪಾನೀಯಗಳನ್ನು ಮಿತವಾಗಿ ಸೇವಿಸಿ.

3. ರಕ್ತದೊತ್ತಡ ನಿಯಂತ್ರಿಸಿ
ಅಧಿಕ ರಕ್ತದೊತ್ತಡವು ಕಿಡ್ನಿಗಳ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡುತ್ತದೆ. ಆದ್ದರಿಂದ ನಿಯಮಿತವಾಗಿ ಬಿಪಿ ಪರೀಕ್ಷೆ ಮಾಡಿಸಿಕೊಂಡು, ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯಿರಿ.

4. ಆರೋಗ್ಯಕರ ಆಹಾರ ಸೇವಿಸಿ
ತರಕಾರಿ, ಹಣ್ಣುಗಳು, ಧಾನ್ಯಗಳು ಮತ್ತು ಬೇಳೆಕಾಳುಗಳನ್ನು ಆಹಾರದಲ್ಲಿ ಸೇರಿಸಿ. ಸಮತೋಲನ ಆಹಾರವು ದೇಹದ ತೂಕವನ್ನು ನಿಯಂತ್ರಿಸಿ ಕಿಡ್ನಿಗಳನ್ನು ಆರೋಗ್ಯವಾಗಿರಲು ನೆರವಾಗುತ್ತದೆ.

5. ಉಪ್ಪಿನ ಪ್ರಮಾಣ ಕಡಿಮೆ ಮಾಡಿ
ಹೆಚ್ಚು ಉಪ್ಪು ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚಾಗಬಹುದು. ಸಂಸ್ಕರಿತ ಆಹಾರಗಳನ್ನು ಕಡಿಮೆ ಮಾಡಿ, ನಿಂಬೆ, ಬೆಳ್ಳುಳ್ಳಿ ಹಾಗೂ ನೈಸರ್ಗಿಕ ಸುವಾಸನೆ ಪದಾರ್ಥಗಳನ್ನು ಬಳಸುವುದು ಉತ್ತಮ.

ಕಿಡ್ನಿ ಆರೋಗ್ಯವಾಗಿದ್ದರೆ ದೇಹವೂ ಆರೋಗ್ಯವಾಗಿರುತ್ತದೆ. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಹಾಗೂ ಉತ್ತಮ ಜೀವನಶೈಲಿಯಿಂದ ಕಿಡ್ನಿ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಬಹುದು.

‘ಸತ್ತವರ ಖಾತೆಗೆ ಹಣ ಹೋಗಿದೆ, ಸರಿಪಡಿಸುತ್ತಿದ್ದೇವೆ’: ಗೃಹಲಕ್ಷ್ಮಿ ವಿವಾದಕ್ಕೆ ಹೆಚ್‌.ಎಂ. ರೇವಣ್ಣ ಸ್ಪಷ್ಟನೆ

0

ರಾಯಚೂರು: ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಸಿಎಜಿ ವರದಿಯಲ್ಲಿರುವ 60 ಕೋಟಿ ರೂ. ಹಣ ಬ್ಯಾಂಕ್ ಖಾತೆ ಇಲ್ಲದವರಿಗೆ ಜಮೆಯಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಹೆಚ್‌.ಎಂ. ರೇವಣ್ಣ ಸ್ಪಷ್ಟಪಡಿಸಿದ್ದಾರೆ. ಆದರೆ ಮೃತಪಟ್ಟ ಫಲಾನುಭವಿಗಳ ಖಾತೆಗಳಿಗೆ ಹಣ ಜಮೆಯಾಗಿರುವುದು ನಿಜವಾಗಿದ್ದು, ಆ ಹಣವನ್ನು ಮರುಪಡೆಯುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆ ವೇಳೆ 2.80 ಲಕ್ಷ ಮೃತ ಫಲಾನುಭವಿಗಳು ಪತ್ತೆಯಾಗಿದ್ದು, ಅವರ ಖಾತೆಗಳಿಗೆ 115 ಕೋಟಿ ರೂ. ಜಮೆಯಾಗಿರುವುದು ಗೊತ್ತಾಗಿದೆ. ಇದರಲ್ಲಿ 15 ಕೋಟಿ ರೂ. ಈಗಾಗಲೇ ವಾಪಸ್ ಪಡೆಯಲಾಗಿದ್ದು, ಉಳಿದ 100 ಕೋಟಿ ರೂ. ವಸೂಲಿಗೆ ಬ್ಯಾಂಕ್‌ಗಳೊಂದಿಗೆ ಮಾತುಕತೆ ನಡೆಯುತ್ತಿದೆ ಎಂದರು.

ಒಂದೇ ಬ್ಯಾಂಕ್ ಖಾತೆಗೆ 20 ಮಂದಿ ಫಲಾನುಭವಿಗಳ ಹಣ ಜಮೆಯಾಗಿದೆ ಎಂಬ ಆರೋಪದ ಕುರಿತು ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ ಅವರು, ಯೋಜನೆ ಆರಂಭದ ವೇಳೆಯಲ್ಲಿ ಸಂಪೂರ್ಣ ಆನ್‌ಲೈನ್ ನೋಂದಣಿ ಹಾಗೂ ಹಣ ವರ್ಗಾವಣೆ ವ್ಯವಸ್ಥೆ ಜಾರಿಗೊಳಿಸಿದ್ದರಿಂದ ಕೆಲವು ತಾಂತ್ರಿಕ ಲೋಪಗಳು ಕಂಡುಬಂದಿವೆ ಎಂದು ಹೇಳಿದರು.

ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಸೌಲಭ್ಯವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿರುವ ಪ್ರಕರಣಗಳು ಹಾಗೂ ಅನ್ನಭಾಗ್ಯ ಯೋಜನೆಯಲ್ಲಿ ನಕಲಿ ರೇಷನ್ ಕಾರ್ಡ್ ಬಳಕೆಯ ಆರೋಪಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕೆಗೆ ಪ್ರತಿಕ್ರಿಯಿಸಿದ ರೇವಣ್ಣ, “ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವುದು ಕಾಂಗ್ರೆಸ್ ಸರ್ಕಾರ. ಲೋಪಗಳು ಕಂಡುಬಂದಲ್ಲಿ ಅವುಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಹೇಳಿದವರಿಗೆ ಈಗ ಉತ್ತರ ಸಿಕ್ಕಿದೆ” ಎಂದು ತಿರುಗೇಟು ನೀಡಿದರು.

22 ಪ್ರಕರಣಗಳಲ್ಲಿ ಜಪ್ತಿಯಾಗಿದ್ದ ಕೋಟಿ ಕೋಟಿ ಮೌಲ್ಯದ ಮಾದಕ ದ್ರವ್ಯ ಧ್ವಂಸ: ಡ್ರಗ್ ಮಾಫಿಯಾಗೆ ಪೊಲೀಸರ ಖಡಕ್ ಸಂದೇಶ

0

ಬೀದರ್: ಡ್ರಗ್ ಮಾಫಿಯಾಗೆ ಬೀದರ್ ಪೊಲೀಸರು ಮತ್ತೊಮ್ಮೆ ಖಡಕ್ ಸಂದೇಶ ರವಾನಿಸಿದ್ದಾರೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾದ 22 ಪ್ರಕರಣಗಳಲ್ಲಿ ಜಪ್ತಿಯಾಗಿದ್ದ ₹9.41 ಕೋಟಿ ಮೌಲ್ಯದ ಮಾದಕ ದ್ರವ್ಯಗಳನ್ನು ನಿಯಮಾನುಸಾರ ಧ್ವಂಸಗೊಳಿಸಲಾಗಿದೆ.

ಭಾಲ್ಕಿ ತಾಲೂಕಿನ ಧನ್ನೂರು ಸಮೀಪದ ಜೈವಿಕ ತ್ಯಾಜ್ಯ ವಿಲೇವಾರಿ ಘಟಕದಲ್ಲಿ 997 ಕೆಜಿ ಗಾಂಜಾ, 51 ಸಾವಿರಕ್ಕೂ ಹೆಚ್ಚು ನಶೆ ಗುಳಿಗೆಗಳು ಮತ್ತು 743 ಮಾದಕ ಸಿರಪ್‌ಗಳನ್ನು ಜಿಲ್ಲಾ ಡ್ರಗ್ಸ್ ವಿಲೇವಾರಿ ಸಮಿತಿಯ ನಿಯಮಾವಳಿಯಂತೆ ನಾಶಪಡಿಸಲಾಯಿತು.

ಜಿಲ್ಲಾ ಎಸ್‌ಪಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ನಡೆದ ಈ ಪ್ರಕ್ರಿಯೆಯಲ್ಲಿ, ಮಾದಕ ವಸ್ತುಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಮುಂದುವರಿಸಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದರು. ಅಕ್ರಮ ಡ್ರಗ್ಸ್ ಮಾರಾಟ ಮತ್ತು ಸಾಗಣೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಸ್‌ಪಿ ಎಚ್ಚರಿಕೆ ನೀಡಿದರು.

ರಾಮಭಕ್ತರ ನಂಬಿಕೆಗೆ ಧಕ್ಕೆ ತಂದವರನ್ನು ಬಿಡುವುದಿಲ್ಲ: ಯೋಗಿ ಆದಿತ್ಯನಾಥ್ ಎಚ್ಚರಿಕೆ

0

ಲಕ್ನೋ: ಅಯೋಧ್ಯೆ ರಾಮಮಂದಿರದ ಕಾಣಿಕೆ ಹಣ ದುರುಪಯೋಗ ಪ್ರಕರಣದ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಎಚ್ಚರಿಕೆ ನೀಡಿದ್ದಾರೆ. ರಾಮಭಕ್ತರು ತಮ್ಮ ಭಕ್ತಿ ಮತ್ತು ನಂಬಿಕೆಯಿಂದ ಕಾಣಿಕೆ ನೀಡುತ್ತಾರೆ. ಆ ಹಣದಲ್ಲಿ ಅಕ್ರಮ ಎಸಗುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಡಿಯೋರಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ, ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಲಾಗಿದ್ದು, ಈಗಾಗಲೇ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಸನಾತನ ಧರ್ಮದ ಭಾವನೆಗಳಿಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಈ ವಿಚಾರವನ್ನು ರಾಜಕೀಯಗೊಳಿಸುವ ಪ್ರಯತ್ನಗಳ ವಿರುದ್ಧವೂ ಯೋಗಿ ಅಸಮಾಧಾನ ವ್ಯಕ್ತಪಡಿಸಿದರು. ರಾಮಮಂದಿರ ನಿರ್ಮಾಣವನ್ನು ಮೊದಲಿನಿಂದಲೂ ವಿರೋಧಿಸಿದ್ದವರೇ ಈಗ ಈ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

“ರಾಮನೇ ಇಲ್ಲ ಎಂದು ಹೇಳಿದ್ದವರು, ದೇವಾಲಯದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದವರು, ರಾಮಭಕ್ತರ ಮೇಲೆ ಗುಂಡು ಹಾರಿಸಿದ್ದವರು ಮತ್ತು ರಾಮನವಮಿ ವೇಳೆ ಗಲಭೆಗಳಿಗೆ ಕಾರಣರಾದವರೇ ಈಗ ಮತ್ತೆ ಈ ವಿಚಾರವನ್ನು ಎತ್ತುತ್ತಿದ್ದಾರೆ” ಎಂದು ಅವರು ವಾಗ್ದಾಳಿ ನಡೆಸಿದರು.

ಬಂಡೀಪುರ, ನಾಗರಹೊಳೆ ಜಂಗಲ್ ಸಫಾರಿಗೆ ಮತ್ತೆ ಗ್ರೀನ್ ಸಿಗ್ನಲ್: ರಾಜ್ಯ ಸರ್ಕಾರದಿಂದ ಪೂರ್ಣ ಪ್ರಮಾಣದಲ್ಲಿ ಪುನರಾರಂಭ

ಬೆಂಗಳೂರು: ತಜ್ಞರು ಹಾಗೂ ಅಧಿಕಾರಿಗಳ ತಾಂತ್ರಿಕ ಸಮಿತಿಯ ಶಿಫಾರಸಿನ ಮೇರೆಗೆ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಜಂಗಲ್ ಸಫಾರಿ (ಉದ್ಯಾನ ಪ್ರವಾಸ)ಯನ್ನು ಪೂರ್ಣ ಪ್ರಮಾಣದಲ್ಲಿ ಪುನರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಕುರಿತು ತಾಂತ್ರಿಕ ಸಮಿತಿಯ ವರದಿಯನ್ನು ಸರ್ಕಾರ ಅಂಗೀಕರಿಸಿದ್ದು, ವೈಜ್ಞಾನಿಕ ಮೌಲ್ಯಮಾಪನದ ಆಧಾರದ ಮೇಲೆ ಪರಿಣಾಮಕಾರಿ ಸಾಗಣೆ ಸಾಮರ್ಥ್ಯ (Carrying Capacity) ಪರಿಶೀಲಿಸಿ ಜಂಗಲ್ ಸಫಾರಿ ಪುನರಾರಂಭಕ್ಕೆ ಹಸಿರು ನಿಶಾನೆ ನೀಡಲಾಗಿದೆ.

ಸಮಿತಿಯ ಶಿಫಾರಸಿನಂತೆ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ನಿಯಂತ್ರಿತ ರೀತಿಯಲ್ಲಿ ಜಂಗಲ್ ಸಫಾರಿ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕರ್ನಾಟಕವು ಪರಿಸರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದ್ದು, ಸುಸ್ಥಿರ ಪ್ರವಾಸೋದ್ಯಮ ಮಾದರಿಯನ್ನು ಅನುಸರಿಸುತ್ತಿದೆ. ಜಂಗಲ್ ಸಫಾರಿ ಪುನರಾರಂಭದಿಂದ ಸ್ಥಳೀಯ ಜನರಿಗೆ ಉದ್ಯೋಗ ಹಾಗೂ ಜೀವನೋಪಾಯದ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಲಿದ್ದು, ಸ್ಥಳೀಯ ಆರ್ಥಿಕತೆಯ ಬೆಳವಣಿಗೆಗೂ ಉತ್ತೇಜನ ದೊರೆಯಲಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಪರಿಸರ ವ್ಯವಸ್ಥೆಯ ಸಮಗ್ರತೆಯನ್ನು ಕಾಪಾಡುವ ಜೊತೆಗೆ ವನ್ಯಜೀವಿ ಸಂರಕ್ಷಣೆ, ಸ್ಥಳೀಯ ಸಮುದಾಯಗಳ ಜೀವನೋಪಾಯ ಹಾಗೂ ಪ್ರವಾಸಿಗರಿಗೆ ಉತ್ತಮ ಅನುಭವ ಒದಗಿಸುವ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಸಿಎಜಿ ವರದಿ ಸತ್ಯಕ್ಕೆ ದೂರ; ಗೃಹಲಕ್ಷ್ಮಿ ಹಣ ಪಡೆದ ಮೃತರ ಖಾತೆಗಳಿಂದ ₹15 ಕೋಟಿ ವಾಪಸ್ – ಹೆಚ್.ಎಂ. ರೇವಣ್ಣ

ರಾಯಚೂರು: ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ನಿಯಂತ್ರಕ ಮತ್ತು ಮಹಾಲೇಖಪರಿಶೋಧಕರ (ಸಿಎಜಿ) ವರದಿಯಲ್ಲಿ ಉಲ್ಲೇಖಿಸಿರುವ 60 ಕೋಟಿ ರೂಪಾಯಿ ಬ್ಯಾಂಕ್ ಖಾತೆಯೇ ಇಲ್ಲದವರಿಗೆ ಜಮೆಯಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಎಂ. ರೇವಣ್ಣ ಹೇಳಿದ್ದಾರೆ.

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತಪಟ್ಟವರ ಖಾತೆಗಳಿಗೆ ಹಣ ಜಮೆಯಾಗಿರುವ ಅಂಶ ಮಾತ್ರ ಸರಿಯಾಗಿದೆ. ಆದರೆ ಒಂದೇ ಬ್ಯಾಂಕ್ ಖಾತೆಗೆ 20 ಮಂದಿ ಫಲಾನುಭವಿಗಳ ಹಣ ಜಮೆಯಾಗಿದೆ ಎಂಬ ವರದಿಯ ಕುರಿತು ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ಪಂಚ ಗ್ಯಾರಂಟಿ ಯೋಜನೆಗಳನ್ನು ಆರಂಭಿಸಿದ ವೇಳೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸಂಪೂರ್ಣ ಆನ್‌ಲೈನ್ ವ್ಯವಸ್ಥೆಯ ಮೂಲಕ ಅರ್ಜಿ ಸ್ವೀಕಾರ, ನೋಂದಣಿ ಮತ್ತು ಹಣ ಜಮೆ ಪ್ರಕ್ರಿಯೆ ನಡೆಸಲಾಗಿತ್ತು. ಈ ಕಾರಣದಿಂದ ಕೆಲ ತಾಂತ್ರಿಕ ಲೋಪಗಳು ನಡೆದಿರುವುದು ಈಗ ಪರಿಶೀಲನೆಯಲ್ಲಿ ಗೊತ್ತಾಗಿದೆ ಎಂದು ಅವರು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆ ವೇಳೆ ಸುಮಾರು 2.80 ಲಕ್ಷ ಫಲಾನುಭವಿಗಳು ಮೃತಪಟ್ಟಿರುವುದು ಪತ್ತೆಯಾಗಿದೆ. ಅವರ ಖಾತೆಗಳಿಗೆ ಒಟ್ಟು 115 ಕೋಟಿ ರೂಪಾಯಿ ಜಮೆಯಾಗಿದ್ದು, ಈಗಾಗಲೇ 15 ಕೋಟಿ ರೂಪಾಯಿಯನ್ನು ವಾಪಸ್ ಪಡೆಯಲಾಗಿದೆ. ಉಳಿದ 100 ಕೋಟಿ ರೂಪಾಯಿ ಮರುಪಡೆಯಲು ಬ್ಯಾಂಕ್‌ಗಳೊಂದಿಗೆ ಚರ್ಚೆ ನಡೆಯುತ್ತಿದೆ ಎಂದು ರೇವಣ್ಣ ಮಾಹಿತಿ ನೀಡಿದರು.

ಗೃಹಜ್ಯೋತಿ ಯೋಜನೆಯಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯವನ್ನು ಕೆಲವು ಅಂಗಡಿ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಬಳಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿ ರೇಷನ್ ಕಾರ್ಡ್‌ಗಳನ್ನು ಪಡೆದು ಸೌಲಭ್ಯ ಪಡೆಯುತ್ತಿರುವ ಪ್ರಕರಣಗಳೂ ಬೆಳಕಿಗೆ ಬಂದಿದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆ ಎಂದರು.

ಇಡಿ ದಾಳಿ ಅಚ್ಚರಿ ತಂದಿದೆ; ರಾಜಕೀಯ ಪ್ರೇರಿತ ಸಂಚು ಇದೆಯೇ ಕಾದು ನೋಡಬೇಕು – ಸತೀಶ್ ಜಾರಕಿಹೊಳಿ

ಬೆಳಗಾವಿ: ತಮ್ಮ ಭಾಮೈದ ವೈ. ಮಂಜುನಾಥ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿರುವ ದಾಳಿ ಅಚ್ಚರಿ ಮೂಡಿಸಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಪ್ರಕರಣದ ಸಂಪೂರ್ಣ ಮಾಹಿತಿ ಸಿಕ್ಕ ಬಳಿಕವೇ ಹೆಚ್ಚಿನ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ಮಂಜುನಾಥ್ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣದ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಹಿಂದೆ ಹೈಕೋರ್ಟ್ ಒಂದು ಹಳೆಯ ಪ್ರಕರಣವನ್ನು ರದ್ದುಪಡಿಸಿತ್ತು. ಇಂತಹ ಸಂದರ್ಭದಲ್ಲಿ ಭ್ರಷ್ಟಾಚಾರ ಆರೋಪದಡಿ ಇಡಿ ದಾಳಿ ನಡೆಸಿರುವುದು ಅಚ್ಚರಿ ಮೂಡಿಸಿದೆ” ಎಂದು ಹೇಳಿದರು.

ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ರಾಜ್ಯದಲ್ಲಿ ಲೋಕಾಯುಕ್ತ ಮತ್ತು ಇತರ ತನಿಖಾ ಸಂಸ್ಥೆಗಳಿವೆ. ಕೇಂದ್ರ ಸರ್ಕಾರದ ಮಟ್ಟದಲ್ಲಿ ತನಿಖೆ ಅಗತ್ಯವಿದ್ದರೆ ಸಿಬಿಐ ತನಿಖೆ ನಡೆಸಬಹುದಿತ್ತು. ಆದರೆ ಇಡಿ ದಾಳಿ ನಡೆಸಿರುವುದರ ಹಿಂದೆ ರಾಜಕೀಯ ಪ್ರೇರಿತ ಉದ್ದೇಶ ಇದೆಯೇ ಎಂಬುದನ್ನು ಕಾದು ನೋಡಬೇಕಿದೆ. ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದರ ಆಧಾರದ ಮೇಲೆ ಮುಂದಿನ ಬೆಳವಣಿಗೆಗಳು ಸ್ಪಷ್ಟವಾಗಲಿವೆ ಎಂದು ಅಭಿಪ್ರಾಯಪಟ್ಟರು.

ಸತೀಶ್ ಜಾರಕಿಹೊಳಿ ಅವರ ಸಂಬಂಧಿಯಾಗಿರುವ ಕಾರಣಕ್ಕೆ ದಾಳಿ ನಡೆದಿದೆಯೇ ಅಥವಾ ಸಚಿವರ ಪ್ರಭಾವದಿಂದಲೇ ಆಸ್ತಿ ಸಂಪಾದಿಸಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಮಂಜುನಾಥ್ ಒಬ್ಬ ಸರ್ಕಾರಿ ಅಧಿಕಾರಿ ಮಾತ್ರ. ಅವರು ಕೆಲಸ ಮಾಡುವ ಇಲಾಖೆಯಲ್ಲಿ ನಮ್ಮ ಯಾವುದೇ ಪ್ರಭಾವ ಇರುವುದಿಲ್ಲ. ಅದು ಸೀಮಿತ ಅಧಿಕಾರದ ಹುದ್ದೆಯಾಗಿದೆ” ಎಂದು ಸ್ಪಷ್ಟಪಡಿಸಿದರು.

ಮಾವಲಿ ಚೆಕ್‌ಪೋಸ್ಟ್ ಸಮೀಪದ ರೆಸಾರ್ಟ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಆ ರೆಸಾರ್ಟ್ ಮಂಜುನಾಥ್ ಹೆಸರಿನಲ್ಲಿಲ್ಲ. ಅದು ಅವರ ಸಹೋದರರ ಹೆಸರಿನಲ್ಲಿದ್ದು, ಕಳೆದ 30 ವರ್ಷಗಳಿಂದ ಅವರ ಕುಟುಂಬವೇ ರೆಸಾರ್ಟ್ ಉದ್ಯಮ ನಡೆಸುತ್ತಿದೆ” ಎಂದು ತಿಳಿಸಿದರು.

ಇಡಿ ದಾಳಿ ನಡೆದು ಮೂರು ದಿನಗಳು ಕಳೆದಿದ್ದು, ಅಧಿಕಾರಿಗಳು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಲು ಸಮಯ ಬೇಕಾಗುತ್ತದೆ. ಇಂದು ಮಂಜುನಾಥ್ ಅವರನ್ನು ಭೇಟಿಯಾಗಿ ಪ್ರಕರಣದ ಕುರಿತು ಮಾಹಿತಿ ಪಡೆಯುತ್ತೇನೆ. ಬಳಿಕ ಅಗತ್ಯವಿದ್ದರೆ ಈ ಬಗ್ಗೆ ಮತ್ತಷ್ಟು ಪ್ರತಿಕ್ರಿಯೆ ನೀಡುತ್ತೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ರೈತರು ಭೂಮಿ ಕೊಡಲು ಒಪ್ಪಿದರೆ ನನ್ನದೇನೂ ತಕರಾರು ಇಲ್ಲ: ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ಬಿಡದಿಯ ಭಾಧಿತ ರೈತರ ಹಿತಾಸಕ್ತಿಯ ಬಗ್ಗೆ ಚರ್ಚಿಸಲು ನಾನು ನಾಳೆ (ಜೂನ್ 27 ಶನಿವಾರ) ಭೈರಮಂಗಲದಲ್ಲಿ ಮುಖ್ಯಮಂತ್ರಿಗಳಾಗಿ ಕಾಯುತ್ತೇನೆ. ಅವರು ಸ್ಥಳಕ್ಕೆ ಬಂದರೆ ಸಮಸ್ಯೆಯ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಸಚಿವರು; ಮುಖ್ಯಮಂತ್ರಿಗಳ ಜತೆ ಪತ್ರ ಸಮರ ಅಂತೇನಿಲ್ಲ. ವಿಧಾನಸೌಧಕ್ಕೆ ಬರುವಂತೆ ಅವರು ಪತ್ರ ಬರೆದಿದ್ದರು. ವಿಧಾನಸೌಧ ಬೇಡ, ಭೈರಮಂಗಲದಲ್ಲಿ ನೊಂದ ರೈತರ ಸಮ್ಮುಖದಲ್ಲಿಯೇ ಚರ್ಚೆ ನಡೆಯುವುದು ಸೂಕ್ತ ಎಂದು ನಾನು ಪತ್ರದಲ್ಲಿ ತಿಳಿಸಿದ್ದೆ.

ಅಲ್ಲದೆ, ಜೂನ್ 27ರಂದು, ಅಂದರೆ ಶನಿವಾರ ಬಿಡದಿಯ ಭೈರಮಂಗಲದಲ್ಲಿ ಬಹಿರಂಗ ಚರ್ಚೆಗೆ ಬರುತ್ತೇನೆ ಎಂದು ಹೇಳಿದ್ದೆ. ಅದರಂತೆ ನಾನು ಬುಧವಾರ ಭೈರಮಂಗಲಕ್ಕೆ ತೆರಳಿ ಮುಖ್ಯಮಂತ್ರಿಗಳಾಗಿ ಕಾಯುತ್ತೇನೆ. ಅವರು ಬಂದರೆ ಚರ್ಚೆ ನಡೆಸುತ್ತೇನೆ ಎಂದರು ಅವರು.

ಶನಿವಾರ ಮಧ್ಯಾಹ್ನದವರೆಗೂ ನಾನು ಬೈರಮಂಗಲದಲ್ಲಿ ಮುಖ್ಯಮಂತ್ರಿಗಳಿಗಾಗಿ ಕಾಯುತ್ತೇನೆ. ಅವರು ಬಂದರೆ ಸಂತೋಷ. ಚರ್ಚೆಗೆ ಬನ್ನಿ ಎಂದು ಪತ್ರ ಬರೆದಿದ್ದೇನೆ. ಅವರು ಇನ್ನೂ ಏನು ಉತ್ತರ ಕೊಟ್ಟಿಲ್ಲ. ನಾವೇನು ಗಲಾಟೆ ಮಾಡಿಸಲು ಹೋಗುತ್ತಿಲ್ಲ. ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಕೊಡುತ್ತಿದ್ದೇವೆ ಅಷ್ಟೇ. ನಾನು ಕೊಟ್ಟ ಸಮಯಕ್ಕೆ ಹೋಗುತ್ತಿದ್ದೇನೆ. ಅವರು ಬಂದರೆ ಒಳ್ಳೆಯದು.

ನಿನ್ನೆಯಿಂದ ಹದಿನೈದು ಇಪ್ಪತ್ತು ಜನ ಭೂಮಿ ಕೊಡಲು ಸಿದ್ದ ಅಂತ ಕೂತಿದ್ದಾರೆ. ಇದರ ಹಿಂದಿನ ವಿಚಾರಗಳನ್ನು ನಾನೂ ಅರ್ಥ ಮಾಡಿಕೊಂಡಿದ್ದೇನೆ. ಇದರಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿ ಏನಿಲ್ಲ. ರೈತರು ಭೂಮಿ ಕೊಡಲು ಒಪ್ಪಿದರೆ ನನ್ನದೇನೂ ತಕರಾರು ಇಲ್ಲ. ಬಲವಂತವಾಗಿ ರೈತರನ್ನು ಬೆದರಿಸಿದರೆ ಸರಿ ಇರೋದಿಲ್ಲ ಎಂದು ಕೇಂದ್ರ ಸಚಿವರು ಹೇಳಿದರು.

ನಾನು ಕೂಡ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದೇನೆ. ಅನೇಕ ಸಂದರ್ಭಗಳಲ್ಲಿ ರೈತರ ಬಳಿಯೇ ಹೋಗಿದ್ದೇನೆ. ಇದೇ ಬಿಡದಿ ಯೋಜನೆ ಪ್ರಶ್ನೆ ಬಂದಾಗ ರೈತರನ್ನು ಕೃಷ್ಣಾ ಕಚೇರಿಗೆ ಕರೆಸಿಕೊಂಡು ಅವರ ಸಮ್ಮುಖದಲ್ಲಿಯೇ ಸಭೆ ಮಾಡಿದ್ದೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರೇ ಬಿಡದಿ ಉಪನಗರ ಯೋಜನೆಯನ್ನು ವಿರೋಧ ಮಾಡಿದ್ದರು. ರೈತರು ಬೇಡ ಎಂದರು ಕಾಂಗ್ರೆಸ್ ನಾಯಕರಿಗೆ ಯೋಜನೆ ಬೇಕಾಗಿದೆ ಎಂದು ಅವರು ಹೇಳಿದರು.

ರೈತರಿಗೆ ಬೆಂಬಲ ಕೊಡಲು ಬೈರಮಂಗಲಕ್ಕೆ ಹೋಗುತ್ತಿದ್ದೇನೆ. ಕಾನೂನು ಮೀರಿ ರೈತರೇನು ಹೋರಾಟ ಮಾಡುತ್ತಿಲ್ಲ. ನಾನು ಕೂಡ ಕಾನೂನು ಪ್ರಕಾರವೇ ಹೋರಾಟದಲ್ಲಿ ಭಾಗಿಯಾಗುತ್ತೇನೆ. ಶನಿವಾರ ಮಧ್ಯಾಹ್ನದವರಿಗೂ ನಾನು ಭೈರಮಂಗಲದಲ್ಲಿಯೇ ಇದ್ದು ರೈತರ ಮನವಿಗಳನ್ನು ಆಲಿಸುತ್ತೇನೆ. ಮುಖ್ಯಮಂತ್ರಿಗಳು ಚರ್ಚೆಗೆ ಬಂದರೆ ಎಲ್ಲವೂ ಸುಗಮವಾಗಿ ಆಗುತ್ತದೆ. ಸರಕಾರದವರೇ ಬೈರಮಂಗಲದಲ್ಲಿ144 ಸೆಕ್ಷನ್ ಹಾಕಲು ಹೊರಟಿದ್ದಾರೆ. ನಾವೇನೂ ಗಲಾಟೆ ಮಾಡಲು ಹೋಗುತ್ತಿಲ್ಲ ಎಂದು ಸಚಿವರು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.

ಕೆಲ ರೈತರು ಭೂಮಿ ಕೊಡಲು ಒಪ್ಪಿರಬಹುದು. ಬಹು ಪ್ರಮಾಣದ ರೈತರು ಭೂಮಿ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಅವರಲ್ಲಿ ಎಲ್ಲಾ ಮಾಹಿತಿಯು ಇದೆ. ಆದರೆ ಸರ್ಕಾರದವರು ಎಲ್ಲರ ಮೇಲೆಯೂ ಗದ ಪ್ರಹಾರ ನಡೆಸಲು ಹೋಗುತ್ತಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.