Home Blog Page 38

ಮಧ್ಯಪ್ರಾಚ್ಯ ಯುದ್ಧ ಜಾಗತಿಕ ಸಂಕಷ್ಟಕ್ಕೆ ಕಾರಣವಾಗಬಹುದು: ಪುಟಿನ್ ಎಚ್ಚರಿಕೆ!

0

ಮಾಸ್ಕೋ: ಮಧ್ಯಪ್ರಾಚ್ಯದಲ್ಲಿನ ನಡೆಯುತ್ತಿರುವ ಸಂಘರ್ಷವು ಜಾಗತಿಕ ಮಟ್ಟದಲ್ಲಿ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ.

ಈ ಸಂಘರ್ಷವು ಕೋವಿಡ್ ಮಹಾಮಾರಿಯಂತೆಯೇ ವಿಶ್ವದ ಆರ್ಥಿಕತೆ ಮತ್ತು ಪೂರೈಕೆ ವ್ಯವಸ್ಥೆಗಳ ಮೇಲೆ ದೊಡ್ಡ ಹೊಡೆತ ನೀಡಬಹುದು. ಈಗಾಗಲೇ ಅಂತಾರಾಷ್ಟ್ರೀಯ ಲಾಜಿಸ್ಟಿಕ್ಸ್, ಉತ್ಪಾದನೆ ಮತ್ತು ಪೂರೈಕೆ ಸರಪಳಿಗಳು ಅಸ್ತವ್ಯಸ್ತಗೊಂಡಿದ್ದು, ಹೈಡ್ರೋಕಾರ್ಬನ್, ಲೋಹಗಳು ಮತ್ತು ರಸಗೊಬ್ಬರ ಕ್ಷೇತ್ರಗಳು ಭಾರೀ ಒತ್ತಡಕ್ಕೆ ಒಳಗಾಗಿವೆ ಎಂದಿದ್ದಾರೆ.

ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲ್ ದಾಳಿಗಳಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ಈ ಬಿಕ್ಕಟ್ಟು ಶೀಘ್ರದಲ್ಲೇ ಬಗೆಹರಿಯುವ ಸಾಧ್ಯತೆ ಕಡಿಮೆ ಎಂದು ಪುಟಿನ್ ಅಭಿಪ್ರಾಯಪಟ್ಟಿದ್ದಾರೆ. ಯುದ್ಧ ಯಾವಾಗ ಅಂತ್ಯವಾಗುತ್ತದೆ ಎಂಬುದು ಯಾರಿಗೂ ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ.

ಇದೀಗ ಅಮೆರಿಕ–ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷವು ಕೇವಲ ಕೆಲವು ದೇಶಗಳಿಗೆ ಮಾತ್ರ ಸೀಮಿತವಾಗದೆ, ಅನೇಕ ರಾಷ್ಟ್ರಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಫೆಬ್ರವರಿ 28ರಿಂದ ಆರಂಭವಾದ ಈ ಯುದ್ಧದಲ್ಲಿ ರಷ್ಯಾ ಇರಾನ್‌ಗೆ ಪರೋಕ್ಷ ಬೆಂಬಲ ನೀಡುತ್ತಿರುವುದು ಗಮನಾರ್ಹವಾಗಿದೆ. ಈ ನಡುವೆ ಹಾರ್ಮುಜ್ ಜಲಸಂಧಿ ಬಳಿ ನಡೆದ ದಾಳಿಯಲ್ಲಿ ಇರಾನ್ ನೌಕಾಪಡೆಯ ಪ್ರಮುಖ ಕಮಾಂಡರ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಉದ್ವಿಗ್ನಗೊಳಿಸಿದೆ.

ಈ ಬೆಳವಣಿಗೆಗಳ ನಡುವೆ, ಇರಾನ್ ತನ್ನ ಉನ್ನತ ಸೇನಾ ಅಧಿಕಾರಿಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ಸಾಧ್ಯತೆ ಇದ್ದು, ಇದರಿಂದ ಗಲ್ಫ್ ರಾಷ್ಟ್ರಗಳು ಹಾಗೂ ಅಂತಾರಾಷ್ಟ್ರೀಯ ಜಲಮಾರ್ಗಗಳ ಭದ್ರತೆಗೆ ಮತ್ತಷ್ಟು ಸವಾಲು ಎದುರಾಗುವ ಸಾಧ್ಯತೆ ಇದೆ.

ಗಂಡು ದೆವ್ವದ ಕಾಟ: ವಿಚಿತ್ರವಾಗಿ ವರ್ತಿಸಿ ಮಹಿಳೆ ಸಾವು!

ಚಿಕ್ಕಬಳ್ಳಾಪುರ: ದೆವ್ವ ಕಾಟವಿದೆ ಎಂಬ ಭಯದಿಂದ ಮಾನಸಿಕವಾಗಿ ಅಸ್ವಸ್ಥಳಾಗಿ ವರ್ತಿಸುತ್ತಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ಜಿಲ್ಲೆಯ ತೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಜುಳಾ (36) ಮೃತ ಮಹಿಳೆ.

ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದ ಮಂಜುಳಾರನ್ನು ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಕುರಿತು ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಜುಳಾ ಅವರು ದೊಡ್ಡಬಳ್ಳಾಪುರ ತಾಲೂಕಿನ ಸೋತೇನಹಳ್ಳಿ ಗ್ರಾಮದವರು. 16 ವರ್ಷಗಳ ಹಿಂದೆ ತೌಡನಹಳ್ಳಿ ಗ್ರಾಮದ ರಮೇಶ್ ಅವರನ್ನು ವಿವಾಹವಾಗಿದ್ದು, ದಂಪತಿಗಳ ನಡುವೆ ಯಾವುದೇ ಗೃಹ ಕಲಹ ಇರಲಿಲ್ಲವೆಂದು ತಿಳಿದುಬಂದಿದೆ. ಇತ್ತೀಚೆಗೆ ತವರು ಮನೆಗೆ ತೆರಳಿ, ಮಾವನ ತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದ ನಂತರ ಅವರು ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದ್ದರು ಎನ್ನಲಾಗಿದೆ.

ತಮ್ಮ ಮುಂದೆ ಯಾರೋ ಕಾಣಿಸಿಕೊಂಡು ಕಾಡುತ್ತಿರುವ ಅನುಭವವಾಗುತ್ತಿದೆ ಎಂದು ಮಂಜುಳಾ ಹೇಳುತ್ತಿದ್ದರೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದರಿಂದ ಭಯಗೊಂಡ ಪತಿ ರಮೇಶ್ ಕೆಲಸ ಕಾರ್ಯಗಳನ್ನು ಬಿಟ್ಟು ದೇವಾಲಯಗಳು ಮತ್ತು ಮಂತ್ರ ಚಿಕಿತ್ಸಕರನ್ನು ಸಂಪರ್ಕಿಸಿ ಪರಿಹಾರ ಹುಡುಕಲು ಪ್ರಯತ್ನಿಸಿದ್ದರು. ಮೇಲೂರಿನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲೂ ಪೂಜೆ ಮಾಡಿಸಿ ತಾಯತ ಕಟ್ಟಿಸಿದ್ದರೂ ಯಾವುದೇ ಬದಲಾವಣೆ ಕಾಣಿಸಲಿಲ್ಲ.

ನಂತರ ವೈದ್ಯರ ಬಳಿ ತೋರಿಸಿದರೂ ಆರೋಗ್ಯದಲ್ಲಿ ಸುಧಾರಣೆ ಆಗದೇ, ಮಂಜುಳಾ ವಿಚಿತ್ರವಾಗಿ ವರ್ತಿಸುತ್ತಲೇ ಕೊನೆಗೆ ಮೃತಪಟ್ಟಿದ್ದಾರೆ. ಘಟನೆ ಕುರಿತಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಂದೇ ಭಾರತ್ ರೈಲಿನಲ್ಲಿ ಹುಳುಗಳಿರುವ ಮೊಸರು: ಐಆರ್‌ಸಿಟಿಸಿಗೆ 10 ಲಕ್ಷ ದಂಡ!

0

ಪಾಟ್ನಾ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಗೆ ನೀಡಿದ ಮೊಸರಿನಲ್ಲಿ ಹುಳುಗಳು ಪತ್ತೆಯಾದ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಸಚಿವಾಲಯವು ಐಆರ್‌ಸಿಟಿಸಿಗೆ 10 ಲಕ್ಷ ರೂ. ದಂಡ ವಿಧಿಸಿದೆ.

ಮಾರ್ಚ್ 15ರಂದು ಪಾಟ್ನಾ-ಟಾಟಾನಗರ ಮಾರ್ಗದ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ರಿತೇಶ್ ಕುಮಾರ್ ಸಿಂಗ್ ಅವರಿಗೆ ರಾತ್ರಿ ಊಟದ ವೇಳೆ ನೀಡಿದ ಮೊಸರಿನಲ್ಲಿ ಜೀವಂತ ಹುಳುಗಳು ಕಂಡುಬಂದಿವೆ. ಇದನ್ನು ಗಮನಿಸಿದ ಪ್ರಯಾಣಿಕರು ತಕ್ಷಣವೇ ರೈಲು ಸಿಬ್ಬಂದಿಯನ್ನು ಪ್ರಶ್ನಿಸಿದರೂ, ಸಿಬ್ಬಂದಿ ಅದನ್ನು ನಿರಾಕರಿಸಿ ‘ಕೇಸರಿ’ ಎಂದು ನಂಬಿಸಲು ಪ್ರಯತ್ನಿಸಿದ್ದಾರೆ

ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ನಂತರ ನಡೆದ ಪರಿಶೀಲನೆಯಲ್ಲಿ ಆ ಮೊಸರು ಅವಧಿ ಮೀರಿರುವುದೂ ಪತ್ತೆಯಾಗಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರೈಲ್ವೆ ಸಚಿವಾಲಯ, ಆಹಾರದ ಗುಣಮಟ್ಟದಲ್ಲಿ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ಐಆರ್‌ಸಿಟಿಸಿಗೆ 10 ಲಕ್ಷ ರೂ. ದಂಡ ವಿಧಿಸಿದೆ. ಜೊತೆಗೆ, ಆಹಾರ ಸರಬರಾಜು ಮಾಡುತ್ತಿದ್ದ ಖಾಸಗಿ ಸಂಸ್ಥೆಗೆ 50 ಲಕ್ಷ ರೂ. ದಂಡ ವಿಧಿಸಿ, ಅದರ ಒಪ್ಪಂದವನ್ನು ತಕ್ಷಣದಿಂದಲೇ ರದ್ದುಪಡಿಸಲು ಆದೇಶಿಸಿದೆ.

ಪ್ರಯಾಣಿಕರ ಸುರಕ್ಷತೆ ಮತ್ತು ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ ಎಂಬುದನ್ನು ರೈಲ್ವೆ ಇಲಾಖೆ ಪುನರುಚ್ಚರಿಸಿದೆ.

1 ಲಕ್ಷಕ್ಕೆ 2 ಲಕ್ಷ ಖೋಟಾ ನೋಟು! ಬೆಳಗಾವಿಯಲ್ಲಿ ಗ್ಯಾಂಗ್ ಅರೆಸ್ಟ್

ಬೆಳಗಾವಿ: ಬೆಳಗಾವಿ ಮಾರ್ಕೆಟ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಖೋಟಾ ನೋಟು ದಂಧೆಯನ್ನು ಭೇದಿಸಿದ್ದಾರೆ.

ಗೋವಾ ಮೂಲದ ಗ್ಯಾಂಗ್ ಬೆಳಗಾವಿಯಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನಿಸುತ್ತಿದ್ದ ವೇಳೆ ನಾಲ್ವರನ್ನು ಬಂಧಿಸಲಾಗಿದೆ.

ಬಂಧಿತರನ್ನು ಮೊಹಮ್ಮದ್ ಅರ್ಬಾಜ್ (21), ರೂಪೇಶ್ ವಾಕೋಡೆ (26), ಮೊಹಮ್ಮದ್ ಹುಸೇನ್ ಭಕ್ಷಿ (23) ಹಾಗೂ ಶ್ರವಣಕುಮಾರ (25) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಒಂದು ಕಾರು, 2.40 ಲಕ್ಷ ರೂ ಮುಖಬೆಲೆಯ ಖೋಟಾ ನೋಟುಗಳು ಮತ್ತು ನಾಲ್ಕು ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ತನಿಖೆ ಪ್ರಕಾರ, ಆರೋಪಿಗಳು 1 ಲಕ್ಷ ರೂ ಅಸಲಿ ಹಣಕ್ಕೆ 2 ಲಕ್ಷ ರೂ ಖೋಟಾ ನೋಟುಗಳನ್ನು ನೀಡುವ ಮೂಲಕ ದಂಧೆ ನಡೆಸುತ್ತಿದ್ದರು. ಬೆಳಗಾವಿಯ ಖಡೇಬಜಾರ್‌ನ ಅಂಗಡಿಯಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನಿಸಿದ ವೇಳೆ ಅಂಗಡಿ ಮಾಲೀಕನಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಲರ್ಟ್ ಆದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಇನ್ನು ಪ್ರಕರಣದ ಹಿನ್ನಲೆಯಲ್ಲಿ ದೊಡ್ಡ ಜಾಲವಿರುವುದು ಬೆಳಕಿಗೆ ಬಂದಿದೆ. ಗೋವಾದಲ್ಲಿ ಜೈಲಿನಲ್ಲಿರುವ ಮೊಹಮ್ಮದ್ ಸರ್ಫರಾಜ್ ಈ ದಂಧೆಯ ಪ್ರಮುಖ ಸೂತ್ರಧಾರ ಎಂದು ತಿಳಿದುಬಂದಿದೆ. ಆತ ಜೈಲಿನಿಂದಲೇ ಫೋನ್ ಮೂಲಕ ದಂಧೆಯನ್ನು ನಿಯಂತ್ರಿಸುತ್ತಿದ್ದನೆಂಬ ಶಂಕೆ ವ್ಯಕ್ತವಾಗಿದೆ. ಬಂಧಿತ ಅರ್ಬಾಜ್ ತನ್ನ ಅಣ್ಣ ಸರ್ಫರಾಜ್ ಸೂಚನೆಯಂತೆ ಖೋಟಾ ನೋಟುಗಳನ್ನು ತರಿಸಿಕೊಂಡು ವಿತರಣೆ ಮಾಡುತ್ತಿದ್ದನೆಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಈ ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಅಪರಿಚಿತ ವ್ಯಕ್ತಿಯಿಂದ ಖೋಟಾ ನೋಟು ಪೂರೈಕೆ ನಡೆದಿರುವ ಸುಳಿವು ಸಿಕ್ಕಿದ್ದು, ಆತನ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮುಂದಿನ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಇರಾನ್‌ನಿಂದ ಕಚ್ಚಾ ತೈಲ ಖರೀದಿಸಿಲ್ಲ: ಸುಳ್ಳು ವದಂತಿಗಳ ವಿರುದ್ದ ರಿಲಯನ್ಸ್ ಕಿಡಿ!

0

ಮುಂಬೈ: ಇರಾನ್‌ನಿಂದ ಕಚ್ಚಾ ತೈಲ ಖರೀದಿಸಿದ ಬಗ್ಗೆ ಹೊರಬಿದ್ದ ಸುದ್ದಿಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಸಂಪೂರ್ಣವಾಗಿ ತಳ್ಳಿಹಾಕಿದೆ.

ಕಂಪನಿಯು ತನ್ನ ಅಧಿಕೃತ ಹೇಳಿಕೆಯಲ್ಲಿ, ಇಂತಹ ವರದಿಗಳು ಆಧಾರರಹಿತವಾಗಿದ್ದು ದಾರಿತಪ್ಪಿಸುವಂತಿವೆ ಎಂದು ಸ್ಪಷ್ಟಪಡಿಸಿದೆ.

ಕೆಲವು ಮಾಧ್ಯಮಗಳಲ್ಲಿ, ಅಮೆರಿಕ ತೈಲ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸಡಿಲಿಸಿದ ಬಳಿಕ ಇರಾನ್‌ ಮೂಲದ ಸುಮಾರು 5 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ರಿಲಯನ್ಸ್ ಖರೀದಿಸಿದೆ ಎಂಬ ವರದಿಗಳು ಪ್ರಸಾರವಾಗಿದ್ದವು. ಆದರೆ ಈ ಆರೋಪಗಳನ್ನು ಕಂಪನಿ ಖಂಡಿಸಿದ್ದು, ಯಾವುದೇ ರೀತಿಯ ವ್ಯವಹಾರ ನಡೆದಿಲ್ಲ ಎಂದು ತಿಳಿಸಿದೆ.

ಇದೇ ವೇಳೆ, ಕಂಪನಿಯ ವಿರುದ್ಧ ಹರಿದಾಡುತ್ತಿರುವ ತಪ್ಪು ಮಾಹಿತಿಗಳು ಗೊಂದಲ ಸೃಷ್ಟಿಸುವುದರ ಜೊತೆಗೆ ಜನರನ್ನು ದಾರಿ ತಪ್ಪಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ರಿಲಯನ್ಸ್ ಸಂಸ್ಥೆಯು ತನ್ನ ವ್ಯವಹಾರಗಳು ಕಾನೂನುಬದ್ಧವಾಗಿ ಹಾಗೂ ಅಂತರರಾಷ್ಟ್ರೀಯ ನಿಯಮಾವಳಿಗಳ ಪ್ರಕಾರವೇ ನಡೆಯುತ್ತವೆ ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರು ಹಿತಕ್ಕೆ ನಮ್ಮ ತೀರ್ಮಾನ ಟೀಕಿಸುತ್ತಿರುವವರು, ಮುಂದೆ ಸ್ಮರಿಸುತ್ತಾರೆ: ಡಿ.ಕೆ. ಶಿವಕುಮಾರ್

ಬೆಂಗಳೂರು: ಬೆಂಗಳೂರು ನಗರದ ಹಿತಕ್ಕೆ ನಾವು ಕೈಗೊಂಡಿರುವ ಅನೇಕ ತೀರ್ಮಾನಗಳ ಬಗ್ಗೆ ವಿರೋಧ ಪಕ್ಷದವರು ಟೀಕೆ ಮಾಡಬಹುದು, ಮಾಡಲಿ. ಆದರೆ ಮುಂದಿನ ಐದು ವರ್ಷಗಳ ನಂತರ ಡಿ.ಕೆ. ಶಿವಕುಮಾರ್ ಅವರು ಉತ್ತಮ ನಿರ್ಧಾರ ಕೈಗೊಂಡರು ಎಂದು ಹೇಳುತ್ತಾರೆ.

ನನಗೆ ಅಷ್ಟೇ ಸಾಕು. ಈಗ ನಾನು ಬೇರೆಯವರಿಗೆ ಒಪ್ಪಿಸಲು ಆಗದೇ ಇರಬಹು, ಆದರೆ ಸಮಯ ಬಂದಾಗ ಅವರು ಒಪ್ಪುತ್ತಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿರೋಧ ಪಕ್ಷಗಳ ನಾಯಕರಿಗೆ ತಿರುಗೇಟು ನೀಡಿದರು.

ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ವಿಚಾರವಾಗಿ ನಡೆದ ಚರ್ಚೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಗುರುವಾರ ಉತ್ತರಿಸಿದರು.

“ಜಿಬಿಎ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಅನೇಕ ಚರ್ಚೆ ನಡೆಸಿದ್ದಾರೆ. ಅರ್.ಅಶೋಕ್ ಅವರು ಅಶ್ವಥ್ ನಾರಾಯಣ್ ಅವರು ಅನೇಕ ಸಲಹೆಗಳನ್ನು ನೀಡಿದ್ದಾರೆ. ಇವರ ಸಲಹೆಗಳನ್ನು ನಾನು ಒಪ್ಪುತ್ತೇನೆ. ಜೊತೆಗೆ ಟೀಕೆಯನ್ನೂ ಸಹ ಮಾಡಿದ್ದಾರೆ.

ನಾನು ಟೀಕೆಯನ್ನು ಯಾವಾಗಲೂ ಸ್ವೀಕಾರ ಮಾಡುವವನು. ಟೀಕೆ ಇಲ್ಲದೇ ಹೋದರೆ ಯಾವುದೇ ಮನುಷ್ಯನನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಚಿನ್ನ ಪರೀಕ್ಷೆ ಮಾಡುವಾಗ ಬೆಂಕಿಗೆ ಹಾಕುತ್ತಾರೆ. ಮನುಷ್ಯನನ್ನು ಪರೀಕ್ಷೆ ಮಾಡುವಾಗ ಟೀಕೆಗಳು, ಆಪಾದ‌ನೆ ಮಾಡುತ್ತಾರೆ. ಇದನ್ನು ನಾವು ಯಾವ ರೀತಿ ತಿದ್ದಿಕೊಳ್ಳಬೇಕು ಎಂಬುದು ಇಲ್ಲಿ ಮುಖ್ಯವಾದುದು. ಟೀಕೆ ಮಾಡಿದರು ಎಂದ ತಕ್ಷಣ ನಾನು ಸಿಟ್ಟು ಮಾಡಿಕೊಳ್ಳುವುದು ಮಾಡುವುದಿಲ್ಲ” ಎಂದರು.

ಈ ಸದನದಲ್ಲಿ ಈ ಹಿಂದೆ ಇದ್ದ ನಾಯಕರಾದ ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಲಕ್ಕಪ್ಪ, ಮೇಲ್ಮನೆಯಲ್ಲಿ ನಾಣಯ್ಯ, ಎಕೆ ಸುಬ್ಬಯ್ಯ, ಎಂ.ಸಿ ನಾಣಯ್ಯ ಸೇರಿದಂತೆ ಅನೇಕರು ಚೆನ್ನಾಗಿ ಚರ್ಚೆ ಮಾಡುತ್ತಿದ್ದರು. ಆಗಿನ ಚರ್ಚೆಸಕಾರಾತ್ಮಕವಾಗಿ ನಡೆಯುತ್ತಿತ್ತು. ಚರ್ಚೆ ಈಗ ನಕರಾತ್ಮಕವಾಗಿ ಹೋಗುತ್ತಿದೆ.

Positive thinkers always have a solution for every problem. Negative thinker always have problem for every solution. ಧನಾತ್ಮಕ ಎಂಬುದು ಯಾವಾಗಲೂ ಇರಬೇಕು. ಆಸಕ್ತಿ ಪಟ್ಟು ಬೆಂಗಳೂರು ಅಭಿವೃದ್ದಿ ಖಾತೆಯನ್ನು ವಹಿಸಿಕೊಂಡಿದ್ದೇನೆ. ನಾನು ಈ ಹಿಂದೆ ನಗರಾಭಿವೃದ್ದಿ ಸಚಿವನಾಗಿದ್ದೆ, ಇಂಧನ ಸಚಿವನಾಗಿದ್ದೆ, ನನಗೆ ಈಗ ಸಾಕಷ್ಟು ಅನುಭವ ಹೊಂದಿದ್ದು ಬೆಂಗಳೂರಿನಲ್ಲೂ ಬದಲಾವಣೆ ಮಾಡಬೇಕು ಎಂದು ಹೊರಟಿದ್ದೇನೆ. ಆದರೂ ಒಂದಷ್ಟು ಜನ ತಪ್ಪು ಕಂಡುಹಿಡಿದರು. ಇದು ವಿರೋಧ ಪಕ್ಷದ ಕರ್ತವ್ಯವೂ ಹೌದು” ಎಂದರು.

“ಕುಮಾರಸ್ವಾಮಿ ಅವರಿಗೆ ಇದೇ ಸದನದಲ್ಲಿ ಒಮ್ಮೆ ಡಿವಿಜಿ ಅವರ ಸಾಲುಗಳನ್ನು ಹೇಳಿದ್ದೆ. ಎದ್ದೆದ್ದು ಬೀಳುತಿಹೆ ಗುದ್ದಾಡಿ ಸೋಲುತಿಹೆ ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ, ಜಗವನ್ನು ಉದ್ದರಿಸುವೆ ಎನುತಿಹೆ ಸಖನೇ ನಿನ್ನ ಉದ್ದಾರ ಎಷ್ಟಾಯಿತೋ ಮಂಕುತಿಮ್ಮ ಎನ್ನುವ ಮಾತು ವಿರೋಧ ಪಕ್ಷದ ನಾಯಕರ ಮಾತು ಕೇಳಿ ನೆನಪಿಗೆ ಬಂತು.

ನಾನು ಬೆಂಗಳೂರು ಅಭಿವೃದ್ಧಿ ಇಲಾಖೆ ಜವಾಬ್ದಾರಿ ಹೊತ್ತುಕೊಂಡ ಮೇಲೆ ಸಾಕಷ್ಟು ಅಧ್ಯಯನ ನಡೆಸಿದ್ದೇನೆ. ಬೆಂಗಳೂರಿನ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿದ್ದೇನೆ. ಆಗ 70 ಲಕ್ಷ ಇದ್ದ ಜನಸಂಖ್ಯೆ ಈಗ 1.40 ಕೋಟಿ ಆಗಿದೆ. 1.30 ಲಕ್ಷ ವಾಹನಗಳಿವೆ. ಬೇರೆ ನಗರಗಳಲ್ಲಿ ದೊಡ್ಡ ರಸ್ತೆಗಳು ಶೇ.16 ರಷ್ಟಿವೆ. ನಮ್ಮಲ್ಲಿ ಶೇ. 8 ರಷ್ಟು ಮಾತ್ರ ಇದೆ. ಈ ಹಿಂದೆ ನೈಸ್ ರಸ್ತೆ ಮಾಡಿದರೂ ಪೂರ್ಣಗೊಳಿಸಲಿಲ್ಲ. ಫೆರಿಫೆರಲ್ ರಿಂಗ್ ರಸ್ತೆ ಅಂದು ಮಾಡಿದ್ದರೆ 3 ಸಾವಿರ ಕೋಟಿಗೆ ಮುಗಿದು ಹೋಗುತ್ತಾ ಇತ್ತು. ಈ ಎಲ್ಲಾ ಕಾರಣಗಳಿಂದ ಸಂಚಾರ ದಟ್ಟಣೆ ಉಂಟಾಗಿದೆ” ಎಂದರು.

“ಬೆಂಗಳೂರು ನಗರದ ಆಡಳಿತ ಸುಧಾರಣೆಗಾಗಿ 2025 ಮೇ 15 ರಂದು ಹೊಸ ನೋಟಿಫಿಕೇಶನ್ ಮಾಡಿ ಪ್ರಸ್ತುತ ಇರುವ ಪ್ರದೇಶಗಳನ್ನು ಸೇರಿ ಐದು ಪಾಲಿಕೆಗಳನ್ನು ಮಾಡಲಾಯಿತು. ಸೆಪ್ಟೆಂಬರ್ 2 ರಂದು 74 ನೇ ತಿದ್ದುಪಡಿ ತರಬೇಕು ಎಂದು ಹೊರಡಲಾಯಿತು. ಏಕಾಏಕಿ ತೀರ್ಮಾನ ಮಾಡಲಿಲ್ಲ. ವಿರೋಧ ಪಕ್ಷದ ನಾಯಕರ ಮಾತಿನಂತೆ ಸದನ ಸಮತಿ ರಚನೆ ಮಾಡಿ ಅವರು ನೀಡಿದ ಸಲಹೆಗಳನ್ನು ತೆಗೆದುಕೊಳ್ಳಲಾಯಿತು.

ಇದರಲ್ಲಿ ತಪ್ಪುಗಳಿದ್ದರೆ ಅದನ್ನೂ ಸಹ ತಿದ್ದುಪಡಿ ಮಾಡಲಾಗುವುದು. ಈಗ 369 ವಾರ್ಡ್ ಗಳನ್ನು ಮಾಡಲಾಗಿದೆ. ಬೆಂಗಳೂರನ್ನು ಯಾವುದೇ ಕಾರಣಕ್ಕೂ ಒಡೆಯುತ್ತಿಲ್ಲ. ಇದು ಆಡಳಿತದ ವಿಕೇಂದ್ರಿಕರಣ. ಬೆಂಗಳೂರಿನಲ್ಲಿ ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಅದಕ್ಕೆ ಸರ್ಕಾರ ಸಹಾಯ ಬೇಕುತ್ತದೆ ಅದಕ್ಕೆ ಜಿಬಿಎಗೆ ಮುಖ್ಯಮಂತ್ರಿಯವರನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಬೆಂಗಳೂರಿಗೆ ಪ್ಲಾನಿಂಗ್ ಅಥಾರಿಟಿ ಇರಲಿಲ್ಲ ಅದನ್ನು ಸಹ ಬಗೆಹರಿಸಲಾಗಿದೆ. ಜಿಬಿಎ ಇದರ ಬಗ್ಗೆ ತೀರ್ಮಾನ ಮಾಡುತ್ತದೆ” ಎಂದು ತಿಳಿಸಿದರು.

“ಬೆಂಗಳೂರಿನ ಅಭಿವೃದ್ಧಿಗೆ 2008 ಬಿಜೆಪಿ ಸರ್ಕಾರ ಐದು ವರ್ಷಕ್ಕೆ 1960 ಕೋಟಿ ಅನುದಾನ ನೀಡಿತ್ತು. ನಮ್ಮ ಸರ್ಕಾರ 7 ಸಾವಿರ ಕೋಟಿ ನೀಡಿತ್ತು, ಬಿಜೆಪಿ 12 ಸಾವಿರ ಕೋಟಿಗೆ ಏರಿಕೆ ಮಾಡಿತ್ತು. ಹೀಗೆ ಹಂತ ಹಂತವಾಗಿ ನಾವು 3 ಸಾವಿರ ಕೋಟಿ, 2025 ರಲ್ಲಿ 7 ಸಾವಿರ ಕೋಟಿ ಹಾಗೂ ಮುಖ್ಯಮಂತ್ರಿಯವರ ಅನುದಾನದಲ್ಲಿ ಮತ್ತೆ 1,500 ಕೋಟಿ ನೀಡಿದ್ದಾರೆ. ಈ ವರ್ಷ 7 ಸಾವಿರ ಕೋಟಿ ನೀಡಲಾಗಿದೆ.

ಹೀಗೆ ಕಾಲಕ್ಕೆ ತಕ್ಕಂತೆ ಅನುದಾನ ಜಾಸ್ತಿಯಾಗುತ್ತಾ ಹೋಗಿದೆ. ಬಿಜೆಪಿ 2020 ರಲ್ಲಿ ಬಿಜೆಪಿ ಸರ್ಕಾರ ಮಾಡಿದ ತೆರಿಗೆ ಕಾನೂನನ್ನು ಬದಲಾವಣೆ ಮಾಡಿಲ್ಲ. ನಾವು ಜನರಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದ್ದೇವೆ. ಒಟಿಎಸ್, ಕಡಿಮೆ ದಂಡ ಸೇರಿದಂತೆ ಅನೇಕ ಅವಕಾಶ ಕೊಡಲಾಗಿದೆ. ಒಟಿಎಸ್ ಜಾರಿ ಮಾಡಿದ ಕಾರಣಕ್ಕೆ 1277 ಕೋಟಿ ಹೆಚ್ಚುವರಿ ಆದಾಯ ಬಂದಿದೆ” ಎಂದು ತಿಳಿಸಿದರು.

“ಮೋದಿಯವರು ಏಕೆ ಬೆಂಗಳೂರನ್ನು ಗ್ಲೋಬಲ್ ಸಿಟಿ ಎಂದು ಕರೆದರು. ಭವಿಷ್ಯದ ಎಲ್ಲಾ ಸವಾಲುಗಳಿಗೆ ಬೆಂಗಳೂರನ್ನು ಸಿದ್ದತೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು. ಅಟಲ್ ಬಿಹಾರಿ ವಾಜಪೇಯಿ ಅವರು ಬೆಂಗಳೂರು ಮೂಲಕ ಭಾರತವನ್ನು ನೋಡಲಾಗುತ್ತದೆ ಎಂದು ಹೇಳಿದ್ದರು. ಜಾಗತಿಕ ನಾಯಕರು ಮೊದಲು ದೆಹಲಿಗೆ ಬರುತ್ತಿದ್ದರು ಈಗ ಸಮಯ ಬದಲಾಗಿದೆ ಮೊದಲು ಬೆಂಗಳೂರಿಗೆ ಬರುತ್ತಾರೆ ಎಂದಿದ್ದರು. ಇದು ಕೇವಲ ನಮ್ಮಿಂದ ಮಾತ್ರವಲ್ಲ, ಪ್ರತಿಭಾವಂತ ಯುವಕರು, ನಾಗರೀಕರು ಎಲ್ಲಾ ಸರ್ಕಾರಗಳಿಂದ ಸಾಧ್ಯವಾಗಿದೆ” ಎಂದು ತಿಳಿಸಿದರು.

GBA ಪಂಚ ಪಾಲಿಕೆ ಚುನಾವಣೆ: ಬಿಜೆಪಿ ಗೆಲುವಿಗೆ ಶ್ರಮಿಸೋಣ – ಬಿ.ವೈ. ವಿಜಯೇಂದ್ರ ಕರೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಪಂಚ ಪಾಲಿಕೆಗಳ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಸಂಘಟಿತವಾಗಿ ಶ್ರಮಿಸೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಕರೆ ನೀಡಿದ್ದಾರೆ.

ಪಂಚ ಪಾಲಿಕೆಗಳ ಚುನಾವಣಾ ಕಾರ್ಯತಂತ್ರ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನ ಆಡಳಿತದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡುವ ಮೂಲಕ ಬಿಜೆಪಿ ಗೆಲುವಿಗೆ ದಾರಿ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಜಿಬಿಎ ಚುನಾವಣಾ ಉಸ್ತುವಾರಿ ರಾಮ್ ಮಾಧವ್, ಸಹ ಉಸ್ತುವಾರಿಗಳಾದ ಸತೀಶ್ ಪೂನಿಯಾ, ಸಂಜಯ್ ಉಪಾಧ್ಯಾಯ, ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ಹಲವಾರು ನಾಯಕರು ಭಾಗವಹಿಸಿದ್ದರು.

ಇದಲ್ಲದೆ, ಮಾಜಿ ಸಚಿವರಾದ ಎಸ್. ಸುರೇಶ್ ಕುಮಾರ್, ಕೆ. ಗೋಪಾಲಯ್ಯ, ಬೈರತಿ ಬಸವರಾಜ್, ಎನ್. ಮುನಿರತ್ನ, ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್, ಶಾಸಕ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ, ಶಾಸಕರಾದ ಎಲ್.ಎ. ರವಿಸುಬ್ರಹ್ಮಣ್ಯ, ಸುರೇಶ್ ಗೌಡ ಹಾಗೂ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಸೇರಿದಂತೆ ಪಕ್ಷದ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.

LPG ಬಿಕ್ಕಟ್ಟು ಅಂತ್ಯ: ಇರಾನ್‌ʼನಿಂದ ಮಂಗಳೂರಿಗೆ ಬಂದ ಗ್ಯಾಸ್ ಹಡಗು!

ಮಂಗಳೂರು: ದೇಶದಲ್ಲಿ ಎದುರಾಗಿರುವ LPG ಗ್ಯಾಸ್ ಸಮಸ್ಯೆ ಮತ್ತು ಕಚ್ಚಾ ತೈಲ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಭಾರತವು ಹಗಲಿರುಳು ಪ್ರಯತ್ನಗಳನ್ನು ನಡೆಸುತ್ತಿದೆ. ಇದರ ಭಾಗವಾಗಿ, ನವಮಂಗಳೂರು ಬಂದರಿಗೆ ಎಲ್‌ಪಿಜಿ ಹೊತ್ತ ಹಡಗು ಆಗಮಿಸಿದೆ.

‘ಅಪೋಲೋ ಓಷನ್’ ಹೆಸರಿನ ಹಡಗು ಸುಮಾರು 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಸಾಗಿಸಿಕೊಂಡು ಮಂಗಳೂರಿಗೆ ತಲುಪಿದ್ದು,

ಇಳಿಸುವ ಕಾರ್ಯಾಚರಣೆಗಳು ಪ್ರಾರಂಭಗೊಂಡಿವೆ. ಈ ಮೊದಲು ಕತಾರ್‌ನ ರಾಸ್ ಲಫಾನ್‌ನಿಂದ 46 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ‘ಶಿವಾಲಿಕ್’ ಸರಕು ಹಡಗು ಮಾ.16ರಂದು ಗುಜರಾತಿನ ಮುದ್ರಾ ಬಂದರಿಗೆ ತಲುಪಿತ್ತು. ನಂತರ ಈ ಹಡಗು ಮಂಗಳೂರಿಗೆ ಬರಬೇಕಾಗಿದ್ದರೂ, ಅದರಲ್ಲಿದ್ದ ಸಂಪೂರ್ಣ ಸರಕು ಮುದ್ರಾ ಬಂದರಲ್ಲೇ ಇಳಿಸಲಾಗಿತ್ತು.

ಅಲ್ಲಿ ಸುಮಾರು 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ‘ಅಪೋಲೋ ಓಷನ್’ ಹಡಗಿಗೆ ವರ್ಗಾಯಿಸಿ ಮಂಗಳೂರಿಗೆ ಕಳುಹಿಸಲಾಗಿದೆ. ಇನ್ನೂ ಎರಡು ಕಚ್ಚಾ ತೈಲ ಟ್ಯಾಂಕರ್‌ಗಳು ಶೀಘ್ರದಲ್ಲೇ ಮಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ ಎಂದು ಬಂದರು ಅಧಿಕಾರಿಗಳು ತಿಳಿಸಿದ್ದಾರೆ.

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ, ಪತ್ನಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರಿಗೆ ಕರ್ನಾಟಕ ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ‘ಬಿ’ ರಿಪೋರ್ಟ್‌ ಅನ್ನು ಪ್ರಶ್ನಿಸಿ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ.

ನ್ಯಾಯಾಲಯವು ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸೇರಿದಂತೆ ಲೋಕಾಯುಕ್ತ ಪೊಲೀಸರು, ಜಾರಿ ನಿರ್ದೇಶನಾಲಯ (ಇಡಿ), ಮಲ್ಲಿಕಾರ್ಜುನಸ್ವಾಮಿ ಮತ್ತು ದೇವರಾಜ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧದ ಮುಡಾ ಭೂ ಹಗರಣ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ‘ಬಿ’ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಒಪ್ಪಿಕೊಂಡಿತ್ತು. ಇದನ್ನು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಹೈಕೋರ್ಟ್ ಇದೀಗ ನೋಟಿಸ್ ಜಾರಿ ಮಾಡಿರುವುದು ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ.

KSOU ಕಾರ್ಯಕ್ರಮ ವಿವಾದ: ಉಪಕುಲಪತಿ ವಿರುದ್ಧ ಕ್ರಮಕ್ಕೆ ಹರಿಪ್ರಸಾದ್ ಆಗ್ರಹ

ಬೆಂಗಳೂರು: KSOUಯಲ್ಲಿ ದೀನದಯಾಳ್ ಉಪಾಧ್ಯಯ ಶೈಕ್ಷಣಿಕ ಕಾರ್ಯಕ್ರಮ ಆಯೋಜನೆ ವಿಚಾರವಾಗಿ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,  ಇದೊಂದು ರಾಜ್ಯದ ದುರಂತವಾಗಿದ್ದು,

ಶಿಕ್ಷಣ ಕ್ಷೇತ್ರದಲ್ಲಿ ಕೇಸರಿಕರಣ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ಈ ವಿಚಾರವನ್ನು ಸದನದಲ್ಲಿ ರಮೇಶ್ ಬಾಬು ಪ್ರಸ್ತಾಪಿಸಿದ್ದಾಗಿ ತಿಳಿಸಿದ ಅವರು, ವಿಶ್ವವಿದ್ಯಾಲಯದ ಉಪಕುಲಪತಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಉನ್ನತ ಶಿಕ್ಷಣ ಸಚಿವರು ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲವೆಂದು ಭರವಸೆ ನೀಡಿದ್ದರೂ, ಕಾರ್ಯಕ್ರಮ ನಡೆದಿರುವುದು ಸರ್ಕಾರದ ವಿರುದ್ಧ ನಡೆದ ಪಿತ್ತೂರಿಯಾಗಿದೆ ಎಂದು ಹರಿಪ್ರಸಾದ್ ಟೀಕಿಸಿದರು. ತಕ್ಷಣ ಉಪಕುಲಪತಿಯನ್ನು ಅಮಾನತು ಮಾಡಬೇಕು ಎಂದು ಅವರು ಒತ್ತಾಯಿಸಿದರು.ವಿಶ್ವವಿದ್ಯಾಲಯಗಳಿಗೆ ಸರ್ಕಾರವೇ ಹಣ, ಭೂಮಿ ಸೇರಿದಂತೆ ಎಲ್ಲಾ ಸೌಕರ್ಯ ಒದಗಿಸುತ್ತಿದ್ದು, ಸರ್ಕಾರದ ವಿರುದ್ಧ ಈ ರೀತಿಯ ನಡೆ ಖಂಡನೀಯ ಎಂದರು.

ಪಂಚರಾಜ್ಯಗಳ ಚುನಾವಣೆಯನ್ನು ಉಲ್ಲೇಖಿಸಿದ ಹರಿಪ್ರಸಾದ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ತಮಿಳುನಾಡು, ಕೇರಳ, ಪಾಂಡೀಚೇರಿಯಲ್ಲಿ ಬಿಜೆಪಿ ಶೂನ್ಯ ಸಾಧನೆ ಮಾಡಲಿದೆ ಎಂದು ಹೇಳಿ, ಅಸ್ಸಾಂನಲ್ಲಿ ಮಾತ್ರ ಪ್ರಯತ್ನಿಸುತ್ತಿದೆ ಎಂದರು.ವೆಸ್ಟ್ ಬೆಂಗಾಲ್‌ನಲ್ಲಿ ಅನಗತ್ಯ ಗಲಭೆ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಲಕ್ಷಾಂತರ ಪೊಲೀಸರನ್ನು ನಿಯೋಜಿಸಲಾಗಿದೆ ಎಂದರು. ಚುನಾವಣಾ ಆಯೋಗವೂ ಬಿಜೆಪಿ ಪ್ರಭಾವದಲ್ಲಿದೆ ಎಂದು ಟೀಕಿಸಿದರು.

ದೆಹಲಿಯಲ್ಲಿ ಕಾಂಗ್ರೆಸ್ ಕಚೇರಿ ತೆರವು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಎಷ್ಟು ಕಚೇರಿಗಳನ್ನು ಹೊಂದಿದೆ ಎಂದು ಪ್ರಶ್ನಿಸಿದರು. ನಾವು ಇದಕ್ಕೆ ಬಗ್ಗುವುದಿಲ್ಲ, ಜಗ್ಗುವುದಿಲ್ಲ ಎಂದು ಹೇಳಿದರು. ವಿಧಾನಸಭೆ ಮತ್ತು ಪರಿಷತ್ ಸದಸ್ಯರಿಗೆ ಸ್ಪೀಕರ್ ಆಯೋಜಿಸಿದ ಫೋಟೋಶೂಟ್ ಕುರಿತು ಪ್ರತಿಕ್ರಿಯಿಸಿದ ಹರಿಪ್ರಸಾದ್, ಇದರಲ್ಲಿ ಯಾವುದೇ ವಿಶೇಷ ಸಂದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಎಲ್ಲರಿಗೂ ಫೋಟೋ ತೆಗೆಸಿಕೊಳ್ಳುವ ಆಸೆ ಇರುತ್ತದೆ, ಅದಕ್ಕಾಗಿ ಕಾರ್ಯಕ್ರಮ ನಡೆಸಲಾಗಿದೆ ಎಂದರು. ಕೆಲವರ ಅವಧಿ ಮುಗಿಯಲಿರುವ ಹಿನ್ನೆಲೆ ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಉಹಾಪೋಹಗಳಿಗೆ ಆಸ್ಪದ ನೀಡಬಾರದು ಎಂದು ಹೇಳಿದರು.

error: Content is protected !!