Home Blog Page 4

ಮಹಿಳಾಪರ ಗ್ಯಾರಂಟಿಗಳಿಗೆ ಅಪಾರ ಮೆಚ್ಚುಗೆ

0

ವಿಜಯಸಾಕ್ಷಿ ಸುದ್ದಿ, ರೋಣ: ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಲು ಸಾದ್ಯವಾಗಿದೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಮತ್ತಷ್ಟು ಶಕ್ತಿ ನೀಡಿದಂತಾಗಿದೆ ಎಂದು ರೋಣ ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲರಲ್ಲಿ ನೂರಾರು ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲರು ಕಳೆದ ಕೆಲ ದಿನಗಳಿಂದ ಪ್ರತಿ ಗ್ರಾಮಗಳಿಗೆ ತೆರಳಿ ಗ್ಯಾರಂಟಿ ಯೋಜನೆಗಳ ಮಹತ್ವ ಮತ್ತು ಕುಟುಂಬಗಳಿಗೆ ಆಗುತ್ತಿರುವ ಅನುಕೂಲತೆಯ ಬಗ್ಗೆ ಸಭೆಗಳನ್ನು ನಡೆಸಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಗುರುವಾರ ರೋಣ ಬಸ್ ನಿಲ್ದಾಣದತ್ತ ತೆರಳಿ ಮಹಿಳಾ ಪ್ರಯಾಣಿಕರ ಜೊತೆಗೆ ಶಕ್ತಿ ಯೋಜನೆ ಕುರಿತು ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಬಸ್ ನಿಲ್ದಾಣದಲ್ಲಿದ್ದ ನೂರಾರು ಮಹಿಳೆಯರು ಶಕ್ತಿ ಯೋಜನೆಯಿಂದ ಬಡ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ. ಅಲ್ಲದೆ, ನಿತ್ಯ ಬೆರೆ ಸ್ಥಳಗಳಿಗೆ ತೆರಳಿ ವ್ಯಾಪಾರ-ವಹಿವಾಟು ನಡೆಸುವ ಮತ್ತು ಬಟ್ಟೆ ಅಂಗಡಿಗಳಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರು ಸೇರಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೂ ಯೋಜನೆ ಸಹಕಾರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಗೃಹಲಕ್ಷ್ಮೀ, ಗೃಹ ಜ್ಯೋತಿ ಯೋಜನೆಗಳಿಂದಲೂ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಿದೆ. ದುಬಾರಿ ಕಾಲದಲ್ಲಿ ಬಡವರ ಬದುಕು ಹಸನುಗೊಳ್ಳಲು ಗ್ಯಾರಂಟಿ ಯೋಜನೆಗಳು ಲಾಭದಾಯಕವಾಗಿದ್ದು, ಇದರಿಂದ ಮಹಿಳೆಯರಿಗೆ ಕಾಂಗ್ರೆಸ್ ಸರಕಾರ ಶಕ್ತಿ ನೀಡಿದಂತಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಬಗ್ಗೆ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಗ್ಯಾರಂಟಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ನಮಗೆ ಹರ್ಷ ಮೂಡಿಸಿದೆ. ನಾನು ಸಹ ಪ್ರತಿ ಗ್ರಾಮಗಳಿಗೆ ತೆರಳಿ ಗ್ಯಾರಂಟಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿ, ಸಮಸ್ಯೆಗಳಿದ್ದಲ್ಲಿ ಸ್ಥಳದಲ್ಲಿಯೇ ಸರಿಪಡಿಸಿ ಫಲಾನುಭವಿಗಳಿಗೆ ಯೋಜನೆಗಳ ಲಾಭವನ್ನು ತಲುಪುವಂತೆ ಮಾಡಲಾಗುತ್ತಿದೆ.

– ಸಂಗನಗೌಡ ಪಾಟೀಲ.

ಅಧ್ಯಕ್ಷರು, ಗ್ಯಾರಂಟಿ ಸಮಿತಿ-ರೋಣ.

“ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಯ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆಗಳಿಂದ ನಮಗೆ ಅನುಕೂಲವಾಗಿದೆ. ಇವತ್ತು ಆರ್ಥಿಕ ಸ್ಥಿತಿ ಸುಧಾರಿಸಲು, ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಲು ಸಹಕಾರಿಯಾಗಿದೆ. ನಾವೆಲ್ಲ ಗ್ರಾಮಗಳಿಗೆ ತೆರಳಿ ಹಣ್ಣು ಮಾರಾಟ ಮಾಡುತ್ತೇವೆ. ಬಸ್ ಪ್ರಯಾಣ ಉಚಿತವಾದಾಗಿನಿಂದ ಬಡವರ್ಗದವರಿಗೆ ಸಹಾಯವಾಗಿದೆ.

– ಮಲ್ಲವ್ವ.

ಗ್ಯಾರಂಟಿ ಯೋಜನೆಯ ಫಲಾನುಭವಿ.

ಸಾವರ್ಕರರನ್ನು ಪ್ರಶ್ನಿಸಿದರೆ ದೇಶದ್ರೋಹಿಯಾಗಬೇಕಾಗುತ್ತದೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗುಜರಾತ್‌ನಿಂದ ಜರ್ಮನಿಯವರೆಗೆ ಎಲ್ಲೆಡೆ ಮಹಾತ್ಮ ಗಾಂಧಿ ಪ್ರತಿಮೆ ಇದೆ. ಆದರೆ ಬಿಜೆಪಿಯವರಿಗೆ ಗೋಡ್ಸೆ ಬೇಕು, ವೀರ ಸಾವರ್ಕರ್ ಬೇಕು. ಮತ್ತೆ, ಗಾಂಧೀಜಿ ದೇಶದ್ರೋಹಿಯೇ? ಗಾಂಧೀಜಿ ಅವರಿಗೆ ಮಹಾತ್ಮ ಬಿರುದು ಕೊಟ್ಟವರು ಯಾರು ಎನ್ನುವುದು ಗೊತ್ತಿದೆ. ಸುಭಾಶ್ಚಂದ್ರ ಬೋಸ್ ಅವರಿಗೆ ನೇತಾಜಿ ಬಿರುದು ಯಾರು ಕೊಟ್ಟಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ ಸಾವರ್ವಕರ್ ಅವರಿಗೆ ವೀರ ಎಂಬ ಬಿರುದು ಕೊಟ್ಟವರು ಯಾರು ಎಂದು ಪ್ರಶ್ನಿಸಿದರೆ, ದೇಶದ್ರೋಹಿ ಎಂಬ ಪಟ್ಟ ಕಟ್ಟುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ನಗರದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಶನಿವಾರ ಗದಗ ಜಿಲ್ಲಾ ಯುವ ಕಾಂಗ್ರೆಸ್ ಚುನಾಯಿತ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ‘ಯುವಧ್ವನಿ’ ಉದ್ಘಾಟಿಸಿ ಅವರು ಮಾತನಾಡಿ, 2014ರಿಂದ ಈಚೆಗೆ ಆರ್‌ಎಸ್‌ಎಸ್, ವೀರ ಸಾವರ್ಕರ್ ಬಗ್ಗೆ ಪ್ರಶ್ನಿಸಿದರೆ ದೇಶದ್ರೋಹಿ ಎನ್ನುವ ಹಣೆಪಟ್ಟಿ ಕಟ್ಟಲಾಗುತ್ತಿದೆ. ರಾಷ್ಟ್ರ ನಿರ್ಮಾಣದಲ್ಲಿ ಕೈ ಜೋಡಿಸದ ಸಂಘಟನೆಗಳು ಇವತ್ತು ದೇಶಭಕ್ತಿಯ ಸರ್ಟಿಫಿಕೇಟ್ ಕೊಡುವಂತಾಗಿದೆ ಎಂದು ಆರೋಪಿಸಿದರು.

ಸಾವರ್ಕರ್ ತಮಗೆ ತಾವೇ ವೀರ ಎನ್ನುವ ಬಿರುದು ಕೊಟ್ಟುಕೊಂಡಿದ್ದಾರೆ. ಬ್ರಿಟಿಷರಿಂದ 60 ರೂ ಪಿಂಚಣಿ ಪಡೆದವರು, ಮುಸ್ಲಿಂರಿಗೆ ಪ್ರತ್ಯೇಕ ದೇಶ ಬೇಕು ಎಂದು ಮೊದಲು ಘೋಷಣೆ ಮಾಡಿದ್ದು ಸಾವರ್ಕರ್. ಅಂಡಮಾನ್ ಜೈಲಿನಲ್ಲಿದ್ದ 80 ಸಾವಿರ ಜನರ ಪೈಕಿ ಮೂವರು ಮಾತ್ರ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಬಿಡುಗಡೆಗೆ ವಿನಂತಿಸಿದರು. ಆ ಮೂವರಲ್ಲಿ ಸಾವರ್ಕರ್ ಮೊದಲಿಗರಾಗಿದ್ದು, ಆರು ಬಾರಿ ಕ್ಷಮಾಪಣೆ ಪತ್ರ ಬರೆದಿದ್ದಾರೆ. ಅಂಥವರನ್ನು ಬಿಜೆಪಿ ಹೊತ್ತು ಮೆರೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಕಾಂಗ್ರೆಸ್ ನುಡಿದಂತೆ ನಡೆದ ಪಕ್ಷ. ಇಂದಿರಾ ಗಾಂಧಿ ಕಾಲದಲ್ಲಿ 20 ಅಂಶಗಳ ಕಾರ್ಯಕ್ರಮ ಘೋಷಣೆ ಮಾಡಿ ಬಡತನ ನಿರ್ಮೂಲನೆಗೆ ನಾಂದಿ ಹಾಡಿದರು. ಸಿದ್ದರಾಮಯ್ಯ ಯುವಕರಿಗಾಗಿ ಯುವನಿಧಿ ಯೋಜನೆ ಸಹಿತ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಬಡವರನ್ನು ಬಡತನ ರೇಖೆಗಿಂತ ಮೇಲಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದರು.

ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಮಾತನಾಡಿ, ರಾಜಕಾರಣದಲ್ಲಿ ಮಹಾತ್ಮ ಗಾಂಧೀಜಿ ಅವರ ಆಶಯದಂತೆ ನಡೆಯುತ್ತಿರುವ ದೇಶದ ಏಕೈಕ ಪಕ್ಷ ಕಾಂಗ್ರೆಸ್. ಇಂಥ ಪಕ್ಷದ ಯುವ ಕಾರ್ಯಕರ್ತರು ಸೇವಾ ಮನೋಭಾವದಿಂದ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವಂತಾಗಲಿ ಎಂದು ಆಶಿಸಿದರು.

ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ರೋಣ ಶಾಸಕ ಜಿ.ಎಸ್. ಪಾಟೀಲ, ಶಾಸಕ ಎನ್.ಎಚ್. ಕೋನರೆಡ್ಡಿ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಬಿ.ಆರ್. ಯಾವಗಲ್, ರಾಮಣ್ಣ ಲಮಾಣಿ, ಜಿ.ಎಸ್. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ಯುವ ಘಟಕದ ರಾಜ್ಯಾಧ್ಯಕ್ಷ ಮಂಜುನಾಥಗೌಡ, ದೀಪಿಕಾ ರೆಡ್ಡಿ, ಎಂ.ಡಿ. ಸೌದಾಗರ್, ಮೋಹನ ಅಸುಂಡಿ, ಮುಖಂಡರಾದ ಎ.ಎಂ. ಹಿಂಡಸಗೇರಿ, ಐ.ಎಸ್. ಪಾಟೀಲ, ಸುಜಾತಾ ದೊಡ್ಡಮನಿ, ಅಕ್ಬರಸಾಬ್ ಬಬರ್ಚಿ, ವಾಸಣ್ಣ ಕುರುಡಗಿ, ಸಚಿನ್ ಪಾಟೀಲ, ವಿವೇಕ ಯಾವಗಲ್, ಪೀರಸಾಬ ಕೌತಾಳ, ಮಿಥುನ್ ಪಾಟೀಲ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಸಿದ್ದು ಪಾಟೀಲ, ಕೃಷ್ಣಾ ಪರಾಪುರ, ಶಕುಂತಲಾ ಅಕ್ಕಿ ಇತರರು ಉಪಸ್ಥಿತರಿದ್ದರು.

ಜಿಲ್ಲಾ ಯುವ ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳಿಗೆ ಶಾಸಕ ಜಿ.ಎಸ್. ಪಾಟೀಲ ಪ್ರಮಾಣವಚನ ಬೋಧಿಸಿದರು. ಸಲೀಂ ಅಹ್ಮದ್ `ಯುವ ಸಂಕಲ್ಪ’ ಆ್ಯಪ್ ಬಿಡುಗಡೆಗೊಳಿಸಿದರು. ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ ಸ್ವಾಗತಿಸಿದರು. ಯುವ ಘಟಕದ ನೂತನ ಜಿಲ್ಲಾಧ್ಯಕ್ಷ ಕೃಷ್ಣಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಮ್ಮ ವಿರೋಧ ಪಕ್ಷಗಳು ಜನರನ್ನು ವಿಭಜಿಸಿ, ಜಾತಿ-ಧರ್ಮದ ಮೇಲೆ ಚುನಾವಣೆಯನ್ನು ಗೆಲ್ಲಬಹುದು ಎಂದುಕೊಂಡಿದ್ದರೆ, ಹಾಗೆ ಮಾಡಲು ನಾವು ಬಿಡುವುದಿಲ್ಲ. ನಾವು ಸೇವೆ ಹಾಗೂ ರಾಷ್ಟ್ರ ಕಟ್ಟುವ ಕೆಲಸದ ಮೂಲಕ ಭ್ರಾತೃತ್ವ ಭಾವನೆ ಬೆಳೆಸಿ, ಸಮಾಜವನ್ನು ಗಟ್ಟಿಯಾಗಿ ಕಟ್ಟುವುದರ ಮೂಲಕ ಸರ್ವಜನಾಂಗದ ಶಾಂತಿಯ ತೋಟ ನಿರ್ಮಾಣ ಮಾಡಲು ದುಡಿಯಬೇಕು.

– ಎಚ್.ಕೆ. ಪಾಟೀಲ.

ಜಿಲ್ಲಾ ಉಸ್ತುವಾರಿ ಸಚಿವರು.

 

“ನರೇಂದ್ರ ಮೋದಿ ನೇತೃತ್ವದ ಸರಕಾರ ಕಳೆದ 11 ವರ್ಷಗಳಿಂದ ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಹಿಂದಿನ ಸರಕಾರದ ಯೋಜನೆಗಳಿಗೆ ಹೊಸ ಹೆಸರು ಕೊಡುವ ಕೆಲಸವನ್ನಷ್ಟೇ ಮೋದಿ ಮಾಡಿದ್ದಾರೆ. ಯುವಕರು ಈ ಬಗ್ಗೆ ಜಾಗೃತರಾಗಬೇಕು. ಸಾಮಾಜಿಕ ಜಾಲತಾಣದಲ್ಲಿ ಬರುವ ವಿಷಯಗಳನ್ನು ಪರಾಮರ್ಶಿಸುವ ಕೆಲಸ ಮಾಡಬೇಕು”

– ಪ್ರಿಯಾಂಕ್ ಖರ್ಗೆ.

ಗ್ರಾಮೀಣಾಭಿವೃದ್ಧಿ ಸಚಿವರು.

ಬಸವಣ್ಣ ವಿಶ್ವದ ಸಾಂಸ್ಕೃತಿಕ ನಾಯಕ

0

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಿಸಿ ಒಂದು ವರ್ಷವಾಗಿದೆ. ಬಸವಣ್ಣನವರು ಕರ್ನಾಟಕ ಮಾತ್ರವಲ್ಲ, ವಿಶ್ವದ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಕಾರಣ ಅವರು ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ನೈತಿಕ, ಸಾಂಸ್ಕೃತಿಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಪರಿವರ್ತನೆ ತಂದವರು. ಜಾತಿ, ಮತ, ಲಿಂಗ, ಬಡವ-ಬಲ್ಲಿದ ಎಂಬ ಬೇಧವಿಲ್ಲದ ಸಮಾಜವನ್ನು ನೆಲೆಗೊಳಿಸಿದವರು ಎಂದು ಲಿಂಗಾಯತ ಮಠಾಧೀಶರ ಒಕ್ಕೂಟದ ಮುಖ್ಯಸ್ಥರಾದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.

ಸೆಪ್ಟೆಂಬರ್ 9, 2025ರಂದು ಗದಗ ಜಿಲ್ಲಾ ಕೇಂದ್ರಕ್ಕೆ ‘ಬಸವ ಸಂಸ್ಕೃತಿ ಅಭಿಯಾನ’ ಆಗಮಿಸಲಿರುವ ಹಿನ್ನೆಲೆಯಲ್ಲಿ ಶ್ರೀ ತೋಂಟದಾರ್ಯ ಮಠದ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ಸಿದ್ಧತಾ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.

ಜೆ.ಎಲ್.ಎಂ. ಜಿಲ್ಲಾ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ, ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣ ಕೆ.ಎ.ಬಳಿಗೇರ, ಮುಂಡರಗಿ ತಾಲೂಕು ಜಾ.ಲಿಂ. ಮಹಾಸಭಾ ಅಧ್ಯಕ್ಷ ನವಲಗುಂದ ಮಾತನಾಡಿದರು.

ಗದಗ ಬೆಟಗೇರಿ ಬಸವದಳದ ಅಧ್ಯಕ್ಷರಾದ ವಿ.ಕೆ. ಕರೇಗೌಡ್ರ ಈ ಅಭಿಯಾನಕ್ಕೆ ಬಸವ ದಳದ ವತಿಯಿಂದ 10 ಸಾವಿರ, ಗಜೇಂದ್ರಗಡ ತಾಲೂಕು ಶ.ಸಾ.ಪ. ಅಧ್ಯಕ್ಷ ಬಸವರಾಜ ಕೊಟಗಿ ತಾಲೂಕಿನ ವತಿಯಿಂದ 25 ಸಾವಿರ, ಬಸವರಾಜ ಹಿರೇಹಡಗಲಿ 25 ಸಾವಿರ, ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಡಾ. ಧನೇಶ ದೇಸಾಯಿ ವೈಯಕ್ತಿಕವಾಗಿ 10 ಸಾವಿರ ರೂ ಹಾಗೂ ಜಾತ್ರಾ ಕಮಿಟಿಯ ವತಿಯಿಂದ 25 ಸಾವಿರ, ಈರಣ್ಣ ಮುದಗಲ್ಲ 5 ಸಾವಿರ, ಪ್ರೊ. ಎನ್.ಎಮ್. ಪವಾಡಿಗೌಡ್ರ 5 ಸಾವಿರ, ಶಿವಕುಮಾರ ರಾಮನಕೊಪ್ಪ 10 ಸಾವಿರ, ಶರಣು ಗದಗ 10 ಸಾವಿರ, ಎಸ್.ಎಸ್. ಕಳಸಾಪೂರಶೆಟ್ರ 5 ಸಾವಿರ, ಎಸ್.ಎಸ್. ಶೆಟ್ಟರ ವಕೀಲರು 25 ಸಾವಿರ, ರತ್ನಕ್ಕ ಪಾಟೀಲ 2 ಸಾವಿರ ಹಾಗೂ ಷಣ್ಮುಖ ನಂದಗಾವಿ 1 ಸಾವಿರ ರೂಪಾಯಿಗಳನ್ನು ಕೊಡುವ ವಾಗ್ದಾನ ಮಾಡಿದರು.

ಸಭೆಯ ಅಧ್ಯಕ್ಷತೆಯನ್ನು ಜೆ.ಎಲ್.ಎಂ. ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಚಟ್ಟಿ ಅವರು ವಹಿಸಿದ್ದರು. ಸಭೆಗೆ ಬಂದವರಿಗೆ ಧನ್ಯವಾದ ಹೇಳಿದರು. ಪಾಲಾಕ್ಷಿ ಗುಣದಿನ್ನಿ, ಬಸವರಾಜ ಅಂಗಡಿ, ಗೌರಕ್ಕ ಬಡಿಗಣ್ಣವರ, ಗಿರಿಜಾ ಹಸಬಿ, ಪ್ರೊ. ಕೆ.ಎಚ್. ಬೇಲೂರ, ಚನ್ನಬಸಪ್ಪ ಕಂಠಿ ಮತ್ತಿತರರು ಮಾತನಾಡಿದರು. ಸಭೆಯಲ್ಲಿ ಜಾ.ಲಿಂ. ಮಹಾಸಭಾ, ಬಸವದಳ, ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಬಸವ ಕೇಂದ್ರ, ತೋಂಟದಾರ್ಯ ಜಾತ್ರಾ ಸಮಿತಿ, ಲಿಂಗಾಯತ ಪ್ರಗತಿಶೀಲ ಸಂಘ, ಯೋಗ ಪಾಠಶಾಲೆ, ಕುಂಬಾರ, ಮಡಿವಾಳ, ಹಡಪದ ಸಮಾಜ, ದಲಿತ, ಪ್ರಗತಿಪರ ಸಂಘಟನೆಗಳ ಪ್ರಮುಖರು, ಎಲ್ಲಾ ತಾಲೂಕುಗಳ ಲಿಂಗಾಯತ, ಬಸವಪರ ಸಂಘಟನೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗಿಯಾಗಿದ್ದರು. ಶರಣ ಪ್ರಕಾಶ ಅಸುಂಡಿ ಸ್ವಾಗತಿಸಿದರೆ, ಶರಣೆ ಮಂಜುಳಾ ಹಾಸಿಲಕರ ವಚನ ಮಂಗಲ ಹಾಡಿದರು.

ಇಂಥ ದಾರ್ಶನಿಕರ ಆಶಯದಂತೆ ಸಮಸಮಾಜ ನಿರ್ಮಾಣ, ವ್ಯಸನಮುಕ್ತ ಸಮಾಜ ನಿರ್ಮಾಣ, ಅಂಧಶ್ರದ್ಧೆ ಅಳಿಸಿ ಸುಜ್ಞಾನ ಬೆಳೆಸುವದು, ಸದೃಢ ಸಮಾಜ ಕಟ್ಟುವುದು, ಮಕ್ಕಳಲ್ಲಿ ಆಧ್ಯಾತ್ಮದ ಅರಿವನ್ನು ಮೂಡಿಸುವದು, ಮಹಿಳೆಯರ ಘನತೆಯನ್ನು ಕಾಪಾಡುವದು, ವ್ಯಕ್ತಿತ್ವ ವಿಕಸನ ಇತ್ಯಾದಿ ಈ ಬಸವ ಸಂಸ್ಕೃತಿ ಅಭಿಯಾನದ ಆಶಯಗಳಾಗಿವೆ. ಆದ್ದರಿಂದ ಈ ಅಭಿಯಾನದಲ್ಲಿ ನಾವು ನೀವೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸೋಣ. ಈ ಅಭಿಯಾನದ ಕಾರ್ಯಕ್ರಮಕ್ಕೆ ಎಲ್ಲರೂ ತನು, ಮನ, ಧನ ಸಹಾಯ-ಸಹಕಾರ ನೀಡಬೇಕು ಎಂದು ತೋಂಟದ ಶ್ರೀಗಳು ಹೇಳಿದರು.

ಗ್ಯಾರಂಟಿ ಯೋಜನೆ ಸಕಾಲದಲ್ಲಿ ಅರ್ಹರಿಗೆ ತಲುಪಲಿ

0

ವಿಜಯಸಾಕ್ಷಿ ಸುದ್ದಿ, ಗದಗ: ಗೃಹಲಕ್ಷ್ಮೀ ಯೋಜನೆಯಲ್ಲಿ ಜಿ.ಎಸ್.ಟಿ. ಹಾಗೂ ಮನೆ ಯಜಮಾನಿ ನಿಧನ ಹೊಂದಿದವರ ಹೆಸರನ್ನು ಬದಲಾವಣೆ ಮಾಡಿ ಬೇರೆಯವರಿಗೆ ನೋಂದಣಿ ಮಾಡಿಸಬೇಕು. ಯಾವ ಬಡ ಕುಟುಂಬವೂ ಈ ಯೋಜನೆಯಿಂದ ದೂರ ಉಳಿಯಬಾರದು. ಅಂಗನವಾಡಿ ಕಾರ್ಯಕರ್ತೆಯರಿಂದ ಸರ್ವೆ ಮಾಡಿಸುವುದು ಕಡ್ಡಾಯವಾಗಿದೆ ಎಂದು ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಸೂಚನೆ ನೀಡಿದರು.

ಹಿರೇಹಾಳ ಗ್ರಾಮ ಪಂಚಾಯಿತಿಯಲ್ಲಿ ನಡೆದ ರೋಣ ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆಯಲ್ಲಿ ಅವರು ಮಾತನಾಡಿದರು.

ರೋಣ ತಾಲೂಕ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ (ಮಿಥುನ್) ಜಿ.ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷ ಪರಶುರಾಮ ಅಳಗವಾಡಿ, ತಾಲೂಕ ಗ್ಯಾರಂಟಿ ಸಮಿತಿಯ ಸದಸ್ಯರಾದ ಶಫೀಕ್ ಮೂಗನೂರ, ಬಿ.ಎಸ್. ರಡ್ಡೇರ, ಸಂಗು ನವಲಗುಂದ, ಮೇಘರಾಜ್ ಬಾವಿ, ಸಿದ್ದಪ್ಪ ಯಾಳಗಿ, ಹನುಮಂತಪ್ಪ ಸ್ವಾಲದ, ನಾಜಬೇಗಂ ಎಲಿಗಾರ, ಬಸವರಾಜ್ ತಳವಾರ, ಸುರೇಶ್ ಬಸವ ರೆಡ್ಡಿರ, ಯಲ್ಲಪ್ಪ ಕಿರೆಸೂರು, ಬಸವರಾಜ್ ಜಗ್ಗಲ, ಶಿವಪ್ಪ ಗಾಣಿಗೇರ, ಗೀತಾ ಕೊಪ್ಪದ, ಶರಣಪ್ಪ ಕುರಿಯವರ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರತಿಯೊಬ್ಬರೂ ಸಾಧಕರಾಗಲು ಕ್ರಿಯಾಶೀಲರಾಗೋಣ

0

ವಿಜಯಸಾಕ್ಷಿ ಸುದ್ದಿ, ಗದಗ: ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಸಾಧನೆಗೈದಿದ್ದು ಹೆಮ್ಮೆಯ ಸಂಗತಿ. ಸಾಧಕ ಮಹಿಳೆಯರನ್ನು ಸಮಾಜವು ಗುರುತಿಸಿ ಗೌರವಿಸಿದರೆ ಅವರಿಗೆ ನಾವು ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ. ಅವರಂತೆಯೇ ನಾವೂ ಸಹಿತ ಸಾಧಕರಾಗಲು ಕ್ರಿಯಾಶೀಲರಾಗೋಣ ಎಂದು ಗದಗ ಜೇಂಟ್ಸ್ ಗ್ರುಪ್ ಆಫ್ ಸಖಿ ಸಹೇಲಿ ಸಂಘಟನೆಯ ಅಧ್ಯಕ್ಷೆ ಸುಮಾ ಪಾಟೀಲ ಹೇಳಿದರು.

ಅವರು ಗದುಗಿನ ಹಾಲಕೇರಿ ಮಠದ ಆವರಣದಲ್ಲಿ ಗದಗ ಜೇಂಟ್ಸ್ ಗ್ರುಪ್ ಆಫ್ ಸಖಿ ಸಹೇಲಿ ಸಂಘಟನೆಯಿಂದ ಜರುಗಿದ ಸಾಧಕ ಮಹಿಳೆಗೆ ಸನ್ಮಾನ ಕಾರ್ಯಕ್ರಮದಲ್ಲಿ ಜಯಶ್ರೀ ಉಗಲಾಟದ ಅವರನ್ನು ಸನ್ಮಾನಿಸಿ ಮಾತನಾಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಗದಗ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ಜಯಶ್ರೀ ಅವರು ಆಯ್ಕೆಯಾಗಿದ್ದು ನಮಗೆಲ್ಲ ಸಂತಸ ತಂದಿದೆ. ಇಂತಹ ಮಹಿಳೆಯರು ನಮಗೆ ಆದರ್ಶರು. ಪ್ರತಿಯೊಬ್ಬ ಮಹಿಳೆಯರು ಕುಟುಂಬ ನಿರ್ವಹಣೆಯ ಜೊತೆಗೆ ಸಾಮಾಜಿಕವಾಗಿ ಕಾರ್ಯ ಪ್ರವೃತ್ತರಾಗಬೇಕು ಎಂದರು.

ಮಧು ಕರಬಿಷ್ಠಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜಮುಖಿ ಕಾರ್ಯಗಳಿಂದ ನಾವು ಜನರ ಮನದಲ್ಲಿ ಇರುತ್ತೇವೆ. ಸಮಾಜ ಸೇವಕರನ್ನು ಸಮೂಹವು ಗುರುತಿಸಿ ಜವಾಬ್ದಾರಿಯುತ ಸ್ಥಾನ ನೀಡಿ ಗೌರವಿಸುತ್ತದೆ. ನಾವು ನಮ್ಮೊಂದಿಗೆ ಇತರರನ್ನು ಸಹಿತ ಇಂತಹ ಸಮಾಜಮುಖಿ ಕೆಲಸಗಳಿಗೆ ಜೊತೆಗೂಡಿಸಿಕೊಂಡು ಸಾಗಬೇಕು ಎಂದರು.

ಪ್ರಿಯಾಂಕಾ ಹಳ್ಳಿ ಮತ್ತು ರೇಖಾ ರೊಟ್ಟಿ ಪ್ರಾರ್ಥಿಸಿದರು. ನಿರ್ಮಲಾ ಪಾಟೀಲ ಸ್ವಾಗತಿಸಿದರು. ಅಶ್ವಿನಿ ಮಾದಗುಂಡಿ ನಿರೂಪಿಸಿದರು. ಸುಗ್ಗಲಾ ಯಳಮಲಿ ವಂದಿಸಿದರು.

ಕಾರ್ಯಕ್ರಮದಲ್ಲಿ ಮಾಧುರಿ ಮಾಳೆಕೊಪ್ಪ, ಶಶಿಕಲಾ ಮಾಲಿಪಾಟೀಲ, ಸುಷ್ಮಿತಾ ವೆರ್ಣೇಕರ, ಚಂದ್ರಕಲಾ ಸ್ಥಾವರಮಠ, ಶ್ರೀದೇವಿ ಮಹೇಂದ್ರಕರ, ವಿದ್ಯಾ ಶಿವನಗುತ್ತಿ, ಶೋಭಾ ಹಿರೇಮಠ, ಜಯಶ್ರೀ ಪಾಟೀಲ, ರೇಣುಕಾ ಅಮಾತ್ಯ, ವಿದ್ಯಾ ಗಂಜಿಹಾಳ, ಪದ್ಮಿನಿ ಮುಂತಾದವರು ಉಪಸ್ಥಿತರಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಯಶ್ರೀ ಉಗಲಾಟದ, ನಮ್ಮ ಸಾಧನೆಗೆ ನಿರಂತರ ಪ್ರಯತ್ನ, ಆತ್ಮೀಯರ ಸಹಕಾರ, ಕುಟುಂಬದವರ ಪ್ರೋತ್ಸಾಹದಿಂದ ವಿವಿಧ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವ ಅವಕಾಶ ಒದಗಿ ಬಂದಿತು. ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಪ್ರಯತ್ನಿಸುವೆ ಎಂದರು.

ಜುಲೈ 12ರಂದು ಫ.ಗು. ಹಳಕಟ್ಟಿ ಕುರಿತು ಉಪನ್ಯಾಸ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಾಹಿತ್ಯ ಚಿಂತನ ಮಾಲಿಕೆಯಲ್ಲಿ ಜುಲೈ 12ರಂದು ಸಂಜೆ 6.30 ಗಂಟೆಗೆ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನ, ಕಸಾಪ ಕಾರ್ಯಾಲಯದಲ್ಲಿ ವಚನ ಸಾಹಿತ್ಯ ಸಂಶೋಧನಾ ಪಿತಾಮಹ ಫ.ಗು. ಹಳಕಟ್ಟಿ ಅವರ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ವಚನ ಸಾಹಿತ್ಯದ ಸಂರಕ್ಷಣೆಗೆ ಫ.ಗು. ಹಳಕಟ್ಟಿ ಅವರ ಕೊಡುಗೆ ಕುರಿತು ಶರಣ ಸಂಸ್ಕೃತಿ ಚಿಂತಕರಾದ ಗೌರಕ್ಕ ಬಡಿಗಣ್ಣವರ ಉಪನ್ಯಾಸ ನೀಡುವರು. ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲ ವಹಿಸುವರು. ಮುಖ್ಯ ಅತಿಥಿಗಳಾಗಿ ಶರಣ ಸಂಸ್ಕೃತಿ ಚಿಂತಕರಾದ ಶಿವಲೀಲಾ ಭಾಗವಹಿಸುವರು.

ಕಾರ್ಯಕ್ರಮದಲ್ಲಿ ಸಾಹಿತ್ಯಾಭಿಮಾನಿಗಳು, ಸಾಹಿತಿಗಳು, ಪರಿಷತ್ತಿನ ಸದಸ್ಯರು ಭಾಗವಹಿಸಬೇಕೆಂದು ಕಿಶೋರಬಾಬು ನಾಗರಕಟ್ಟಿ, ದತ್ತಪ್ರಸನ್ನ ಪಾಟೀಲ, ಡಿ.ಎಸ್. ಬಾಪುರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜುಲೈ 14ರಂದು ಶಕ್ತಿ ಯೋಜನೆ ಸಂಭ್ರಮಾಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಾದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆಯೂ ಸಹ ಒಂದಾಗಿದೆ. ಶಕ್ತಿ ಯೋಜನೆಯನ್ನು 11-06-2023ರಿಂದ ಜಾರಿಗೊಳಿಸಿದ್ದು, ಅಂದಿನಿಂದ ರಾಜ್ಯದ ಎಲ್ಲ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ರಾಜ್ಯ ಸರ್ಕಾರ ಒದಗಿಸಿದೆ.

ಇದುವರೆಗೆ ‘ಶಕ್ತಿ’ ಯೋಜನೆಯ ಫಲಾನುಭವಿಗಳ ಸಂಖ್ಯೆ 500 ಕೋಟಿ ಗಡಿಯನ್ನು ದಾಟಿದ್ದು, ಇದೊಂದು ಸಂಭ್ರಮದ ಸಂಗತಿ. ಶಕ್ತಿ ಯೋಜನೆಯಡಿಯಲ್ಲಿ ನಮ್ಮ ನಾಡಿನ 500 ಕೋಟಿ ಹೆಣ್ಣು ಮಕ್ಕಳು ರಾಜ್ಯದ ಎಲ್ಲಾ ಸರ್ಕಾರಿ ಸ್ವಾಮ್ಯದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಿರುವ ಹೆಗ್ಗಳಿಕೆಯನ್ನು ಸರಳ ಹಾಗೂ ಸಂಭ್ರಮದಿಂದ ಆಚರಿಸುವುದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಹಾಗೂ ತಾಲೂಕು ಸದಸ್ಯರ ಹಕ್ಕುಭಾದ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಜುಲೈ 14ರಂದು ರಾಜ್ಯದ ಎಲ್ಲಾ ಜಿಲ್ಲೆಗಳ ಹಾಗೂ ತಾಲೂಕುಗಳ ಬಸ್ ಡಿಪೊ/ಬಸ್ ನಿಲ್ದಾಣ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಆಯಾ ಸಮಿತಿಯ ಸದಸ್ಯರುಗಳು ಒಂದು ಬಸ್ಸಿಗೆ ಪೂಜೆಯನ್ನು ಸಲ್ಲಿಸಿ, ಪ್ರಯಾಣಿಕರಿಗೆ ಸಿಹಿ ಹಂಚುವುದರೊಂದಿಗೆ ಆಚರಿಸಲಾಗುತ್ತಿದೆ.

ಗದಗ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಜುಲೈ 14ರಂದು ಬೆಳಿಗ್ಗೆ 11 ಗಂಟೆಗೆ ಗದಗ ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಬಿ. ಅಸೂಟಿ ಅವರು ಬಸ್ಸಿಗೆ ಪೂಜೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು, ಸದಸ್ಯರು, ಗಣ್ಯರು, ವಿವಿಧ ಅಧಿಕಾರಿಗಳು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ರಾಷ್ಟ್ರೀಯ ಖಾದ್ಯತೈಲ ಎಣ್ಣೆಕಾಳು ಅಭಿಯಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರದ ವಿವಿಧ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ರಾಮಣ್ಣ ಹೂವಣ್ಣವರ ಹೇಳಿದರು.

ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ 2025-26ನೇ ಸಾಲಿನ ರಾಷ್ಟ್ರೀಯ ಖಾದ್ಯತೈಲ ಎಣ್ಣೆಕಾಳು ಅಭಿಯಾನ ಯೋಜನೆಯಲ್ಲಿ ಸೂರ್ಯಕಾಂತಿ ಬೀಜಗಳ ಕಿರುಚೀಲಗಳನ್ನು ವಿತರಿಸಿ ಮಾತನಾಡಿದರು.

ರೈತರು ಸರ್ಕಾರದ ಯೋಜನೆಗಳನ್ನು ಪಡೆಯುವ ಮೂಲಕ ಆರ್ಥಿಕವಾಗಿ ಸದೃಢವಾಗಬಹುದು. ಅಲ್ಲದೆ, ಕೃಷಿ ಇಲಾಖೆಯು ನೀಡುವ ಹಲವಾರು ಮಾಹಿತಿಗಳ ಅನ್ವಯ ರೈತರು ತಮ್ಮ ಬೆಳೆಗಳಗಳನ್ನು ರಕ್ಷಣೆ ಮಾಡಬಹುದು. ಆದ್ದರಿಂದ ರೈತರು ಸರ್ಕಾರದ ಯೋಜನೆಗಳನ್ನು ಪಡೆಯಲು ಮುಂದೆ ಬರಬೇಕು ಎಂದು ಹೇಳಿದರು.

ಕೃಷಿ ಅಧಿಕಾರಿಗಳಾದ ಬಸವರಾಜೇಶ್ವರಿ ಸಜ್ಜನರ ಮಾತನಾಡಿ, ಜಿಲ್ಲೆಯಲ್ಲಿ ಎಣ್ಣೆಕಾಳು ಬೆಳೆಗಳ ವಿಸ್ತೀರ್ಣವನ್ನು ಹೆಚ್ಚಿಸುವುದು ಈ ಯೋಜನೆ ಮುಖ್ಯ ಉದ್ದೇಶವಾಗಿದೆ. ಅಟಲ್ ಭೂ ಜಲ ಯೋಜನೆಯಡಿ ಸೂಕ್ಷ್ಮ ನೀರಾವರಿ ಘಟಕಗಳು ಲಭ್ಯವಿದ್ದು, ರೈತರು ರೈತ ಸಂಪರ್ಕ ಕೇಂದ್ರ ಬೆಟಗೇರಿಗೆ ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಗದಗ ತಾಲೂಕ ಕೃಷಿಕ ಸಮಾಜದ ಉಪಾಧ್ಯಕ್ಷ ಎಂ.ಎಸ್. ಮಲ್ಲಾಪುರ ಮಾತನಾಡಿದರು. ಈ ಸಂದರ್ಭದಲ್ಲಿ ಚನ್ನಪ್ಪ ಹುಬ್ಬಳ್ಳಿ, ವೆಂಕಟೇಶ ದೋಂಗಡೆ, ಪ್ರಸನ್ನಗೌಡ ಮಲ್ಲಾಪೂರ, ಚಂದ್ರಗೌಡ ಪಾಟೀಲ, ಚಂದ್ರಶೇಖರ ವಸ್ತ್ರದ, ಮಲ್ಲಿಕಾರ್ಜುನ ರಾಯಚೂರ, ಶಿವು ಟೆಂಗಿನಕಾಯಿ, ಮಹಾಂತೇಶ ಕಮತರ, ನಿಂಗಪ್ಪ ಮಣ್ಣೂರ, ಪಂಚಪ್ಪ ಬಳಿಗೇರ, ಅಂದಪ್ಪ ಮೆಣಸಿನಕಾಯಿ, ಮಂಜುನಾಥ ಸಜ್ಜನ, ಗೌರಮ್ಮ ಲಕ್ಕುಂಡಿ ಸೇರಿದಂತೆ ಲಕ್ಕುಂಡಿ ಗ್ರಾಮದ ನೂರಾರು ರೈತರು ಪಾಲ್ಗೊಂಡಿದ್ದರು.

ಬರೀ ನಾಯಿಗಳಿಗೆ ಏಕೆ..? ಬೆಕ್ಕು, ಹೆಗ್ಗಣಗಳಿಗೂ ಒಂದೊಂದು ಯೋಜನೆ ಮಾಡಿ: ಅಶೋಕ್ ವ್ಯಂಗ್ಯ

ಬೆಂಗಳೂರು: ಬರೀ ನಾಯಿಗಳಿಗೆ ಏಕೆ..? ಬೆಕ್ಕು, ಹೆಗ್ಗಣಗಳಿಗೂ ಒಂದೊಂದು ಯೋಜನೆ ಮಾಡಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಹಳ್ಳ ಬಿದ್ದು ಬೆಂಗಳೂರಿನ ರಸ್ತೆಗಳೆಲ್ಲವೂ ಹಾಳಾಗಿವೆ.

ಒಂದೊಂದು ಪೈಸೆ, ಒಂದೊಂದು ಲಕ್ಷಕ್ಕೂ ಅಲೆಯುವ ಪರಿಸ್ಥಿತಿ ಇದೆ. ಇಂಥ ಸಂದರ್ಭದಲ್ಲಿ ಬಿಬಿಎಂಪಿ ಹಣ ತಿನ್ನೋಕೆ ಒಂದು ದಾರಿ ಹುಡುಕಿಕೊಂಡಿದೆ ಅಂತ ಅಶೋಕ್ ಆರೋಪಿಸಿದ್ದಾರೆ.

ಬರೀ ನಾಯಿಗಳಿಗೆ ಏಕೆ..? ಬೆಕ್ಕುಗಳು ಇದ್ದಾವೆ, ಹೆಗ್ಗಣಗಳು ಇದ್ದಾವೆ, ಏನೇನು ಇದೆಯೋ ಹುಡುಕಿ ಅದಕ್ಕೆಲ್ಲ ಒಂದು ಸ್ಕೀಮ್ ಹಾಕಿ ಖರ್ಚು ಮಾಡಿ ಅಂತ ವ್ಯಂಗ್ಯವಾಡಿದ್ದಾರೆ.

Shivamogga: ಜೈಲಿನಲ್ಲಿ ಮೊಬೈಲ್ ನುಂಗಿದ ಕೈದಿ..! ಮುಂದೇನಾಯ್ತು..?

ಶಿವಮೊಗ್ಗ: ನಗರದ ಸೋಗಾನೆಯ ಕೇಂದ್ರ ಕಾರಾಗೃಹದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಜೈಲಿನ ಕೈದಿಯೊಬ್ಬನ ಹೊಟ್ಟೆಯಲ್ಲಿ ಮೂರು ಇಂಚು ಉದ್ದದ ಮೊಬೈಲ್ ಫೋನ್ ಪತ್ತೆಯಾಗಿದೆ! 30 ವರ್ಷದ ದೌಲತ್ ಅಲಿಯಾಸ್ ಗುಂಡ,  ಜೂ.24 ರಂದು ಜೈಲಿನ ಆಸ್ಪತ್ರೆಗೆ ಬಂದು, ಕಲ್ಲು ನುಂಗಿದ್ದೇನೆ ಎಂದು ವೈದ್ಯರಿಗೆ ಗುಂಡ ತಿಳಿಸಿದ್ದ.

ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಿದ್ದರು. ಎಕ್ಸ್‌ ರೇ ಮಾಡಿದಾಗ ದೌಲತ್‌ನ ಹೊಟ್ಟೆಯಲ್ಲಿ ವಸ್ತುವೊಂದು ಇರುವುದು ಗೊತ್ತಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಿದಾಗ ಮೊಬೈಲ್‌ ಫೋನ್‌ ಪತ್ತೆಯಾಗಿದೆ.

ನಿಷೇಧವಿದ್ದರೂ ಜೈಲಿನೊಳಗೆ ಮೊಬೈಲ್‌ ಫೋನ್‌ ತಲುಪಿರುವ ಕುರಿತು ತನಿಖೆ ನಡೆಸುವಂತೆ ಕೇಂದ್ರ ಕಾರಾಗೃಹದ ಅಧೀಕ್ಷಕ ರಂಗನಾಥ್‌.ಪಿ ಅವರು ತುಂಗಾ ನಗರ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ.

error: Content is protected !!