Home Blog Page 41

ಕಾಂಗ್ರೆಸ್‌ ಸ್ಥಿತಿ ಭಿಕ್ಷುಕರ ರೀತಿ ಆಗಿದೆ: ಛಲವಾದಿ ನಾರಾಯಣ ಸ್ವಾಮಿ ವ್ಯಂಗ್ಯ

ಬೆಂಗಳೂರು: ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಇದ್ದ ಕಾಂಗ್ರೆಸ್‌, ನಟ ವಿಜಯ್‌ ನೇತೃತ್ವದ ಟಿವಿಕೆ ಪಕ್ಷ ಹೆಚ್ಚಿನ ಸ್ಥಾನ ಪಡೆದ ಕೂಡಲೇ ರಾತ್ರೋರಾತ್ರಿ ಆ ಪಕ್ಷದ ಮುಂದೆ ಹೋಗಿ ಸಚಿವ ಸ್ಥಾನಕ್ಕೆ ಭಿಕ್ಷೆ ಬೇಡುತ್ತಿದೆ. ಡಿಎಂಕೆ ಸಖ್ಯ ಬಿಟ್ಟು ಕಾಂಗ್ರೆಸ್‌ ಸ್ಥಿತಿ ಭಿಕ್ಷುಕರ ರೀತಿ ಆಗಿದೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ವ್ಯಂಗ್ಯವಾಡಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೆ ಇಂತಹ ಹೀನಾಯ ಸ್ಥಿತಿ ಬಂದಿದೆ. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುಸ್ಲಿಮರು ಸಾಕಷ್ಟು ಬೆಂಬಲ ನೀಡಿದ್ದಾರೆ. ಕಾಂಗ್ರೆಸ್‌ಗೆ ಮುಸ್ಲಿಮರು ಇಲ್ಲದಿದ್ದರೆ ತಿಪ್ಪೆಗುಂಡಿಗೆ ಹಾಕುವ ಕಸಕ್ಕೆ ಸಮ ಎಂದರು.

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವವಾದ ಜಯ ಸಿಕ್ಕಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಆಶೀರ್ವಾದ ಮಾಡಿದ್ದಾರೆ. ಆ ರಾಜ್ಯದಲ್ಲಿ ಟಿಎಂಸಿ ಆಡಳಿತದಲ್ಲಿ ಜನರು ನರಕಯಾತನೆ ಅನುಭವಿಸುತ್ತಿದ್ದರು. ಆ ನರಕದಿಂದ ಮೋದಿ ಅವರು ಜನರನ್ನು ಹೊರತಂದಿದ್ದಾರೆ. ಈ ಬಾರಿಯೂ ಬಿಜೆಪಿ ಗೆಲ್ಲದೇ ಇದ್ದಿದ್ದರೆ ಅಲ್ಲಿನ ಜನರ ಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಿ ಎಂದರು.

ಪಶ್ಚಿಮ ಬಂಗಾಳದಲ್ಲಿ ಗೆದ್ದ ಶಾಸಕರು ಯಾವುದಾದರೂ ರಸ್ತೆಗೆ ಈಗ ಬಂದರೆ ಹೆಣ್ಣು ಮಕ್ಕಳು ಕೈ ಮುಗಿದು ನಮ್ಮನ್ನು ರಕ್ಷಿಸಿ ಎಂದು ಮನವಿ ಮಾಡುತ್ತಿದ್ದಾರೆ. ಮಮತಾ ಅವರ ಆಡಳಿತದಲ್ಲಿ ನಾವು ನರಕ ಅನುಭವಿಸಿದ್ದೇವೆ ಇನ್ನು ಮುಂದೆ ಇಂತಹ ಸ್ಥಿತಿ ಬರದಿರಲಿ ಎಂದು ಹೇಳುತ್ತಿದ್ದಾರೆ. ಅಂದರೆ ಅಲ್ಲಿ ಯಾವ ಸ್ಥಿತಿ ಇತ್ತು ಎಂದು ಯೋಚಿಸಿ ಎಂದು ಹೇಳಿದರು.

ಅಸ್ಸಾಂ ಮತ್ತು ಪುದುಚೇರಿಯಲ್ಲಿ ನಮ್ಮ ಪಕ್ಷಕ್ಕೆ ಜನ ಬೆಂಬಲ ನೀಡಿದ್ದಾರೆ. ತಮಿಳುನಾಡು ಮತ್ತು ಕೇರಳದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ಬೆಂಬಲದಿಂದ ಮತಬ್ಯಾಂಕ್‌ ಹೆಚ್ಚಿಸಿಕೊಂಡಿದ್ದೇವೆ. ಇನ್ನೂ ಅಲ್ಲಿ ಮುಂದಿನ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಂತೆ ಬಿಜೆಪಿ ಶಕ್ತಿ ಹೆಚ್ಚಲಿದೆ. ಸ್ವತಂತ್ರ ಸರ್ಕಾರ ಮಾಡುವ ಶಕ್ತಿಯನ್ನು ಜನರು ಕೊಡ್ತಾರೆ. ಕೇರಳದಲ್ಲಿ ಕಾಂಗ್ರೆಸ್‌ ಯುಡಿಎಫ್‌ ಏಳು ಪಕ್ಷಗಳ ಜೊತೆಗೂಡಿದೆ. ತುಂಡು ತುಂಡು ಪಕ್ಷ ಸೇರಿ ಖಿಚಡಿ ಪಕ್ಷ ಆಗಿದೆ ಎಂದು ಗೇಲಿ ಮಾಡಿದರು.

ಮಂಡ್ಯವೇ ನನ್ನ ರಾಜಕೀಯ ಜನ್ಮಭೂಮಿ; 2019ರ ಸೋಲು ನನಗೆ ಪಾಠ ಕಲಿಸಿತು – ನಿಖಿಲ್ ಕುಮಾರಸ್ವಾಮಿ

ಮಂಡ್ಯ: ನನ್ನ ರಾಜಕೀಯ ಪ್ರವೇಶ ಮಂಡ್ಯ ಜಿಲ್ಲೆಯಿಂದಲೇ ಆರಂಭವಾಗಿದೆ. ನಾವು ಮಂಡ್ಯದಲ್ಲಿ ಹುಟ್ಟದಿದ್ದರೂ ಈ ಜಿಲ್ಲೆಯ ಋಣ ನಮ್ಮ ಮೇಲಿದೆ. ಯಾವ ಊರಿಗೆ ಹೋದರೂ ಜನರು ತೋರಿಸುವ ಪ್ರೀತಿ ಮತ್ತು ವಿಶ್ವಾಸವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪಾಂಡವಪುರದಲ್ಲಿ ನಡೆದ ‘ಜನರೊಂದಿಗೆ ಜನತಾದಳ’ ಕಾರ್ಯಕ್ರಮ ಹಾಗೂ ಪಕ್ಷದ 25ನೇ ವರ್ಷದ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, 2019ರ ಲೋಕಸಭಾ ಚುನಾವಣೆಯ ಸೋಲು ತಮ್ಮ ರಾಜಕೀಯ ಜೀವನಕ್ಕೆ ಮಹತ್ವದ ಪಾಠ ಕಲಿಸಿತು ಎಂದು ಹೇಳಿದರು.

ಅಂದಿನ ನಿಖಿಲ್ ಮತ್ತು ಇಂದಿನ ನಿಖಿಲ್ ನಡುವೆ ಸಾಕಷ್ಟು ಬದಲಾವಣೆಗಳಾಗಿವೆ. ಆ ಸೋಲು ರಾಜಕೀಯವಾಗಿ ಮತ್ತಷ್ಟು ಪಕ್ವತೆ ಮತ್ತು ಅನುಭವ ನೀಡಿದೆ. ಜನರ ಆಶಯಗಳನ್ನು ಅರ್ಥಮಾಡಿಕೊಳ್ಳಲು ಅದು ನನಗೆ ನೆರವಾಗಿದೆ ಎಂದು ತಿಳಿಸಿದರು.

ಜೆಡಿಎಸ್ ಪಕ್ಷದ ಕುರಿತು ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೋರಾಟದ ಫಲವೇ ಜನತಾದಳ ಪಕ್ಷ. 25 ವರ್ಷಗಳ ರಜತ ಮಹೋತ್ಸವ ಆಚರಿಸುತ್ತಿರುವ ಜೆಡಿಎಸ್ ಕನ್ನಡ ನಾಡು, ನುಡಿ, ನೆಲ, ಜಲ ಮತ್ತು ಭಾಷೆಯ ಪರ ಸದಾ ಹೋರಾಟ ನಡೆಸಿದ ಪಕ್ಷವಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಅನೇಕ ಪ್ರಾದೇಶಿಕ ಪಕ್ಷಗಳು ಹುಟ್ಟಿ ಅಸ್ತಂಗತವಾಗಿವೆ. ಆದರೆ ಜನರ ಆಶೀರ್ವಾದ ಮತ್ತು ಕಾರ್ಯಕರ್ತರ ಶ್ರಮದಿಂದ ಜೆಡಿಎಸ್ ಗಟ್ಟಿಯಾಗಿ ಉಳಿದು ರಾಜ್ಯ ರಾಜಕಾರಣದಲ್ಲಿ ಸುಭದ್ರ ಸ್ಥಾನವನ್ನು ಕಾಯ್ದುಕೊಂಡಿದೆ ಎಂದು ನಿಖಿಲ್ ಕುಮಾರಸ್ವಾಮಿ ಪ್ರತಿಪಾದಿಸಿದರು.

ತುಮಕೂರಿನಲ್ಲಿ ನಿಲ್ಲದ ನವಿಲುಗಳ ಸರಣಿ ಸಾವು! H5N1 ಸೋಂಕಿನ ಶಂಕೆ ನಡುವೆ ಮತ್ತೆ ಎರಡು ಕಳೇಬರ ಪತ್ತೆ

0

ತುಮಕೂರು: ಜಿಲ್ಲೆಯಲ್ಲಿ ನವಿಲುಗಳ ಸಾವಿನ ಪ್ರಕರಣಗಳು ಮುಂದುವರಿಯುತ್ತಲೇ ಇವೆ. ಗೂಳರಿವೆ ಬಳಿಯ ಸುಣ್ಣಕಲ್ಲು ಕಟ್ಟೆ ಪ್ರದೇಶದಲ್ಲಿ ಇಂದು ಮತ್ತೆ ಎರಡು ನವಿಲುಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಜಿಲ್ಲೆಯಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಈ ಹಿಂದೆ ಜಿಲ್ಲೆಯ ವಿವಿಧ ಭಾಗಗಳಲ್ಲಿ 44 ನವಿಲುಗಳು ಸಾವನ್ನಪ್ಪಿದ್ದ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿತ್ತು. ಬೊಮ್ಮನಹಳ್ಳಿ, ಕೋಳಿಹಳ್ಳಿ, ಭೈರಸಂದ್ರ ಹಾಗೂ ಹುಲ್ಲೆನಹಳ್ಳಿ ಗ್ರಾಮಗಳಲ್ಲಿ ಏಪ್ರಿಲ್ ತಿಂಗಳಲ್ಲಿ ಸರಣಿ ಸಾವುಗಳು ಸಂಭವಿಸಿದ್ದವು. ಆರಂಭದಲ್ಲಿ ಬಿಸಿಲಿನ ತೀವ್ರತೆ ಕಾರಣ ಎನ್ನಲಾಗಿದ್ದರೂ, ಬಳಿಕ ನಡೆದ ಪರೀಕ್ಷೆಯಲ್ಲಿ ನವಿಲುಗಳಿಗೆ ಹೆಚ್5ಎನ್1 ಹಕ್ಕಿಜ್ವರ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ಇದೀಗ ಮತ್ತೆ ಎರಡು ನವಿಲುಗಳ ಕಳೇಬರ ಪತ್ತೆಯಾಗಿರುವುದರಿಂದ ಸೋಂಕು ಹರಡುವ ಭೀತಿ ಹೆಚ್ಚಾಗಿದೆ. ಸಾವಿನ ನಿಖರ ಕಾರಣ ತಿಳಿಯಲು ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಅರಣ್ಯ ಇಲಾಖೆ ಮತ್ತು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ತುಮಕೂರಿನಲ್ಲಿ ಮತ್ತೆ ನವಿಲುಗಳ ಸರಣಿ ಸಾವು; ಹಕ್ಕಿಜ್ವರ ಆತಂಕದ ನಡುವೆ ಎರಡು ನವಿಲುಗಳ ಕಳೇಬರ ಪತ್ತೆ

ತುಮಕೂರು: ಜಿಲ್ಲೆಯಲ್ಲಿ ನವಿಲುಗಳ ಸರಣಿ ಸಾವು ಆತಂಕ ಮೂಡಿಸಿದ್ದು, ತುಮಕೂರು ಹೊರವಲಯದ ಗೂಳರಿವೆ ಸಮೀಪದ ಸುಣ್ಣಕಲ್ಲು ಕಟ್ಟೆ ಪ್ರದೇಶದಲ್ಲಿ ಇಂದು ಮತ್ತೆ ಎರಡು ನವಿಲುಗಳ ಕಳೇಬರ ಪತ್ತೆಯಾಗಿದೆ.

ಕಳೆದ 15 ದಿನಗಳ ಹಿಂದಷ್ಟೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಒಟ್ಟು 44 ನವಿಲುಗಳು ಸಾವನ್ನಪ್ಪಿದ್ದ ಘಟನೆ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ನವಿಲುಗಳು ಮೃತಪಟ್ಟಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಕಳೆದ ತಿಂಗಳು ಏಪ್ರಿಲ್ 16ರಿಂದ 21ರ ಅವಧಿಯಲ್ಲಿ ಬೊಮ್ಮನಹಳ್ಳಿ, ಕೋಳಿಹಳ್ಳಿ, ಭೈರಸಂದ್ರ ಹಾಗೂ ಹುಲ್ಲೆನಹಳ್ಳಿ ಗ್ರಾಮಗಳಲ್ಲಿ ಸುಮಾರು 32 ನವಿಲುಗಳು ಮೃತಪಟ್ಟಿದ್ದವು. ಆರಂಭದಲ್ಲಿ ತೀವ್ರ ಬಿಸಿಗಾಳಿ ಮತ್ತು ಹೀಟ್ ಸ್ಟ್ರೋಕ್‌ನಿಂದ ನವಿಲುಗಳು ಸಾವನ್ನಪ್ಪಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು.

ಆದರೆ ಬಳಿಕ ಮೃತಪಟ್ಟ ನವಿಲುಗಳ ಅಂಗಾಂಶಗಳನ್ನು ಪರೀಕ್ಷೆಗೆ ಕಳುಹಿಸಿದಾಗ, ಅವುಗಳಿಗೆ ಹೆಚ್5ಎನ್1 ಸೋಂಕು, ಅಂದರೆ ಹಕ್ಕಿಜ್ವರ ತಗುಲಿರುವುದು ದೃಢಪಟ್ಟಿತ್ತು. ಇದರಿಂದ ಜಿಲ್ಲೆಯಲ್ಲಿ ಹಕ್ಕಿಜ್ವರದ ಭೀತಿ ಹೆಚ್ಚಾಗಿದೆ.

ಇದೀಗ ಸುಣ್ಣಕಲ್ಲು ಕಟ್ಟೆ ಪ್ರದೇಶದಲ್ಲಿ ಪತ್ತೆಯಾದ ಎರಡು ನವಿಲುಗಳ ಸಾವಿನ ನಿಖರ ಕಾರಣ ಪತ್ತೆಹಚ್ಚಲು ಅವುಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಘಟನೆ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಹಾಗೂ ಪಶು ಸಂಗೋಪನಾ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಮಚಂದ್ರ ರಾವ್ ಅಮಾನತು ವಾಪಸ್‌ ರಾಜ್ಯಕ್ಕೆ ಕಪ್ಪುಚುಕ್ಕೆ: ಸರ್ಕಾರದ ವಿರುದ್ಧ ಎಚ್. ವಿಶ್ವನಾಥ್ ವಾಗ್ದಾಳಿ

ಮೈಸೂರು: ಹಿರಿಯ ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಮೇಲಿನ ಅಮಾನತು ಆದೇಶವನ್ನು ವಾಪಸ್ ಪಡೆದಿರುವುದು ಹಾಗೂ ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವ ಆಚರಣೆ ರಾಜ್ಯಕ್ಕೆ ಎರಡು ಕಪ್ಪುಚುಕ್ಕೆಗಳಂತಿವೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಚಂದ್ರ ರಾವ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದರೂ ಸರ್ಕಾರ ಏಕಾಏಕಿ ಅಮಾನತು ಆದೇಶ ಹಿಂಪಡೆದು ಮತ್ತೆ ಕರ್ತವ್ಯಕ್ಕೆ ನಿಯೋಜಿಸಿರುವುದು ಸರಿಯಲ್ಲ ಎಂದು ಟೀಕಿಸಿದರು.

ಕೇರಳ ಬಸ್‌ನಲ್ಲಿ ಸಿಕ್ಕಿದ್ದ 2 ಕೋಟಿ ರೂಪಾಯಿ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ವಿರುದ್ಧ ಕ್ರಮ ಕೈಗೊಂಡಿದ್ದ ರಾಮಚಂದ್ರ ರಾವ್, ನಂತರ ತಮ್ಮ ಸಾಕು ಮಗಳು ರನ್ಯಾ ರಾವ್ ಚಿನ್ನ ಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದರು. ಇದರ ಜೊತೆಗೆ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪವೂ ಕೇಳಿಬಂದಿತ್ತು ಎಂದು ವಿಶ್ವನಾಥ್ ನೆನಪಿಸಿದರು.

ನ್ಯಾಯಕ್ಕಾಗಿ ಬಂದಿದ್ದ ಮಹಿಳೆಯ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದ ಸಂಬಂಧ ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೋ ಕುರಿತು ರಾಮಚಂದ್ರ ರಾವ್ ಅದು ತಮ್ಮದಲ್ಲ ಎಂದು ವಾದಿಸಿದ್ದರು. ಆದರೆ ಬಳಿಕ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ವಿಡಿಯೋ ಅವರದ್ದೇ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಸರ್ಕಾರ ಅಮಾನತು ಮಾಡಿತ್ತು ಎಂದು ಹೇಳಿದರು.

ಇಂತಹ ಗಂಭೀರ ಆರೋಪಗಳ ನಡುವೆ ಇದೀಗ ಅಮಾನತು ಆದೇಶವನ್ನು ಹಿಂಪಡೆದು ಕರ್ತವ್ಯಕ್ಕೆ ಮರುನೇಮಕ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ರಾಜ್ಯದಲ್ಲಿ ನ್ಯಾಯಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ಇದೇ ವೇಳೆ, ಗೃಹ ಇಲಾಖೆಯನ್ನು ನಿಜವಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ನಡೆಸುತ್ತಿದ್ದಾರೋ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ನಡೆಸುತ್ತಿದ್ದಾರೋ ಎಂಬ ಅನುಮಾನ ವ್ಯಕ್ತಪಡಿಸಿದ ವಿಶ್ವನಾಥ್, ಅಮಾನತು ಆದೇಶ ಹಿಂಪಡೆಯಲು ದೊಡ್ಡ ಮಟ್ಟದ ಕಿಕ್‌ಬ್ಯಾಕ್ ನಡೆದಿರಬಹುದೆಂಬ ಶಂಕೆಯನ್ನೂ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಯಾವ ರೀತಿಯ ಆಡಳಿತ ನಡೆಯುತ್ತಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಆಸ್ಪತ್ರೆಯಲ್ಲೇ 9.7 ಲಕ್ಷ ಚಿನ್ನ ಕಳ್ಳತನ..! ನರ್ಸ್ ವೇಷದಲ್ಲಿ ಕೈಚಳಕ

ಬೆಂಗಳೂರು: ರೋಗಿಗಳ ಭದ್ರತೆ ಇರಬೇಕಾದ ಆಸ್ಪತ್ರೆಯಲ್ಲೇ ಕಳ್ಳತನ ನಡೆದಿರುವ ಘಟನೆ ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆಯೊಬ್ಬರ 9.7 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಅಲ್ಲಿನ ಮಹಿಳಾ ಸಿಬ್ಬಂದಿಯೇ ಕದ್ದಿರುವುದು ಬಹಿರಂಗವಾಗಿದೆ.

ಯಲಹಂಕ ನಿವಾಸಿಯಾದ 41 ವರ್ಷದ ವ್ಯಕ್ತಿಯೊಬ್ಬರು ನೀಡಿದ ದೂರಿನ ಪ್ರಕಾರ, ಮೇ 1ರಂದು ತಮ್ಮ ಪತ್ನಿಯನ್ನು ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಿದ್ದರು. ಆಪರೇಷನ್ ಮುನ್ನ ಆಭರಣಗಳನ್ನು ತೆಗೆದು ಕಪಾಟಿನಲ್ಲಿ ಇಡುವಂತೆ ನರ್ಸಿಂಗ್ ಸಿಬ್ಬಂದಿ ಸೂಚಿಸಿದ್ದರು. ಅದರಂತೆ 65 ಗ್ರಾಂ ಚಿನ್ನದ ಮಾಂಗಲ್ಯ ಸರ, 9 ಗ್ರಾಂ ಕಿವಿಯೋಲೆ ಮತ್ತು 10 ಗ್ರಾಂ ಬೆಳ್ಳಿ ಕಾಲುಗಜ್ಜೆಗಳನ್ನು ಬ್ಯಾಗ್‌ನಲ್ಲಿ ಇಟ್ಟು ವಾರ್ಡ್‌ನ ಕಪಾಟಿನಲ್ಲಿ ಇಡಲಾಗಿತ್ತು.

ಆದರೆ ಶಸ್ತ್ರಚಿಕಿತ್ಸೆ ಮುಗಿದ ಬಳಿಕ ಪರಿಶೀಲಿಸಿದಾಗ ಆಭರಣಗಳು ನಾಪತ್ತೆಯಾಗಿದ್ದವು. ಕಪಾಟು ಒಡೆದ ಗುರುತುಗಳೂ ಇಲ್ಲದ ಕಾರಣ ಆಸ್ಪತ್ರೆಯೊಳಗಿನವರ ಮೇಲೆಯೇ ಅನುಮಾನ ಮೂಡಿತ್ತು. ತಕ್ಷಣ ಆಸ್ಪತ್ರೆ ಆಡಳಿತಕ್ಕೆ ಮಾಹಿತಿ ನೀಡಲಾಗಿದ್ದು, ನಂತರ ಹೆಣ್ಣೂರು ಪೊಲೀಸರಿಗೆ ದೂರು ಸಲ್ಲಿಸಲಾಯಿತು.

ತನಿಖೆ ವೇಳೆ ಇತ್ತೀಚೆಗೆ ಕೆಲಸಕ್ಕೆ ಸೇರಿದ್ದ ಮಹಿಳಾ ಸಿಬ್ಬಂದಿಯೇ ಈ ಕಳ್ಳತನ ನಡೆಸಿರುವುದು ಬಹಿರಂಗವಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಕದ್ದ ಆಭರಣಗಳ ಪತ್ತೆಗಾಗಿ ಮುಂದಿನ ತನಿಖೆ ಚುರುಕುಗೊಂಡಿದೆ.

ಸಂಖ್ಯಾಬಲದ ಸುತ್ತ ಸಸ್ಪೆನ್ಸ್..! 118 ಬೆಂಬಲದ ಡೆಡ್‌ಲೈನ್‌ನಲ್ಲಿ ಸಿಲುಕಿದ ವಿಜಯ್ ಸರ್ಕಾರ ರಚನೆ ಪ್ರಯತ್ನ

ಚೆನ್ನೈ: ತಮಿಳುನಾಡಿನಲ್ಲಿ ಟಿವಿಕೆ ಪಕ್ಷದ ನಾಯಕ ವಿಜಯ್ ಅವರ ರಾಜಕೀಯ ಪಯಣ ಇದೀಗ ಅತ್ಯಂತ ಗಂಭೀರ ಹಂತವನ್ನು ತಲುಪಿದೆ. ರಾಜ್ಯಪಾಲ ಆರ್‌ವಿ ಅರ್ಲೇಕರ್ ಅವರು ಸರ್ಕಾರ ರಚನೆಗೆ ಅವಕಾಶ ನೀಡುವ ಮೊದಲು 118 ಶಾಸಕರ ಲಿಖಿತ ಬೆಂಬಲ ಅಗತ್ಯ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪ್ರಸ್ತುತ ಟಿವಿಕೆ ಬಳಿ 107 ಶಾಸಕರು ಇದ್ದು, ಕಾಂಗ್ರೆಸ್ ಬೆಂಬಲದೊಂದಿಗೆ ಈ ಸಂಖ್ಯೆ 113ಕ್ಕೆ ಏರಿದೆ. ಆದರೆ ರಾಜ್ಯಪಾಲರು ಇನ್ನೂ “ಸಂಖ್ಯೆ ಸ್ಪಷ್ಟವಾಗಿಲ್ಲ” ಎಂಬ ನಿಲುವಿನಲ್ಲಿ ಇದ್ದು, ಪ್ರಮಾಣವಚನ ಪ್ರಕ್ರಿಯೆಗೆ ಅನುಮತಿ ನೀಡಿಲ್ಲ. ಎರಡನೇ ಬಾರಿ ರಾಜಭವನಕ್ಕೆ ತೆರಳಿದ ವಿಜಯ್‌ಗೆ ಇದು ದೊಡ್ಡ ರಾಜಕೀಯ ಪರೀಕ್ಷೆಯಾಗಿದೆ.

ವಿಜಯ್ ತಮ್ಮ ಮೈತ್ರಿಕೂಟದ ಮೂಲಕ ಸಿಪಿಐ, ಸಿಪಿಐ(ಎಂ), ವಿಸಿಕೆ ಮತ್ತು ಪಿಎಂಕೆ ಬೆಂಬಲ ಪಡೆಯುವ ಯತ್ನದಲ್ಲಿ ಇದ್ದಾರೆ. ಆದರೆ ಈ ಪಕ್ಷಗಳು ವಿಭಿನ್ನ ಮೈತ್ರಿಕೂಟಗಳಲ್ಲಿ ಇರುವುದರಿಂದ ಒಗ್ಗೂಡಿಸುವುದು ದೊಡ್ಡ ಸವಾಲಾಗಿದೆ. ಯಶಸ್ವಿಯಾದರೆ ಅವರ ಬಲ 122ರ ಮಟ್ಟಕ್ಕೆ ತಲುಪಬಹುದು ಎಂದು ಅಂದಾಜಿಸಲಾಗಿದೆ.

ಇನ್ನೊಂದೆಡೆ ಎಐಎಡಿಎಂಕೆಯ ಒಳಗಿರುವ ಅಸಮಾಧಾನಿತ ಶಾಸಕರು ವಿಜಯ್ ಕಡೆ ವಾಲುವ ಸಾಧ್ಯತೆಗಳ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಪಕ್ಷದ ನಾಯಕತ್ವ ಇದನ್ನು ಸ್ಪಷ್ಟವಾಗಿ ನಿರಾಕರಿಸಿದೆ.

ಸುರಕ್ಷತಾ ಕಾರಣಗಳಿಂದ ವಿಜಯ್ ತಮ್ಮ ಶಾಸಕರನ್ನು ರೆಸಾರ್ಟ್‌ನಲ್ಲಿ ಇರಿಸಿರುವುದು ರಾಜಕೀಯ ಹೈಡ್ರಾಮಾಗೆ ಮತ್ತಷ್ಟು ರಂಗು ತಂದಿದೆ. ಈಗ ರಾಜ್ಯದ ಕಣ್ಣು ಸಂಪೂರ್ಣವಾಗಿ ರಾಜ್ಯಪಾಲರ ಮುಂದಿನ ನಿರ್ಧಾರದತ್ತ ನೆಟ್ಟಿದೆ—ವಿಜಯ್ ಸರ್ಕಾರ ರಚನೆಗೆ ಅವಕಾಶ ಸಿಗುತ್ತದೆಯಾ ಅಥವಾ ತಮಿಳುನಾಡು ಮತ್ತೆ ರಾಜಕೀಯ ಅನಿಶ್ಚಿತತೆಯತ್ತ ಸಾಗುತ್ತದೆಯಾ ಎಂಬುದು ಮುಂದಿನ ದೊಡ್ಡ ಪ್ರಶ್ನೆ.

ಖಾಕಿ ಪವರ್‌ಗೆ ಸಿಕ್ಕಿತು ಭರ್ಜರಿ ಯಶಸ್ಸು..! ಕಲಬುರಗಿಯಲ್ಲಿ 785 ಕಳೆದುಹೋದ ಮೊಬೈಲ್ ರಿಕವರಿ

ಕಲಬುರಗಿ: ಕಳೆದುಹೋದ ಮೊಬೈಲ್ ಫೋನ್ ಮರಳಿ ಸಿಗೋದು ಕನಸೇ ಸರಿ ಎನ್ನುವ ಕಾಲದಲ್ಲಿ ಕಲಬುರಗಿ ನಗರ ಪೊಲೀಸರು ದಾಖಲೆ ಬರೆದಿದ್ದಾರೆ. ಎರಡು ತಿಂಗಳ ಅವಧಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, ಬರೋಬ್ಬರಿ 785 ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ ಅಸಲಿ ಮಾಲೀಕರ ಕೈಗೆ ಒಪ್ಪಿಸಿದ್ದಾರೆ.

ಈ ಮೊಬೈಲ್‌ಗಳ ಒಟ್ಟು ಮೌಲ್ಯ 1 ಕೋಟಿ 44 ಲಕ್ಷ 90 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಸಿಇಐಆರ್ ಪೋರ್ಟಲ್ ಸಹಾಯದಿಂದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ಮೊಬೈಲ್‌ಗಳನ್ನು ಟ್ರೇಸ್ ಮಾಡಿ ಪೊಲೀಸರು ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಅವರ ಮಾರ್ಗದರ್ಶನದಲ್ಲಿ ನಡೆದ ಈ ಆಪರೇಷನ್ ಸಾರ್ವಜನಿಕರಲ್ಲಿ ಭಾರೀ ವಿಶ್ವಾಸ ಮೂಡಿಸಿದೆ. ಮೊಬೈಲ್ ಕಳೆದುಕೊಂಡು ನಿರಾಶರಾಗಿದ್ದ ನೂರಾರು ಮಂದಿ ಮತ್ತೆ ತಮ್ಮ ಫೋನ್ ಪಡೆದು ಖುಷಿಪಟ್ಟಿದ್ದಾರೆ.

“ಪೊಲೀಸರು ಇಷ್ಟು ವೇಗವಾಗಿ ಮೊಬೈಲ್ ಹುಡುಕಿ ಕೊಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ” ಎಂದು ಸಾರ್ವಜನಿಕರು ಪೊಲೀಸರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿದ ಕಲಬುರಗಿ ಪೊಲೀಸರ ಈ ಸಾಧನೆ ಈಗ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

‘ದಿ ಯಶ್ ಎಫೆಕ್ಟ್’ ಜಾಗತಿಕ ಸಂಚಲನ..! ವೆರೈಟಿ ಕವರ್ ಪೇಜ್ ಮೇಲೆ ಮಿಂಚಿದ ಕನ್ನಡದ ರಾಕಿಂಗ್ ಸ್ಟಾರ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಈಗ ಕೇವಲ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲ, ಗ್ಲೋಬಲ್ ಸಿನೆಮಾ ಐಕಾನ್ ಆಗಿ ಹೊರಹೊಮ್ಮುತ್ತಿದ್ದಾರೆ. ‘ಕೆಜಿಎಫ್’ ಬಳಿಕ ವಿಶ್ವ ಸಿನಿರಂಗದ ಗಮನ ಸೆಳೆದಿದ್ದ ಯಶ್, ಇದೀಗ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮ್ಯಾಗಜೀನ್ ‘ವೆರೈಟಿ’ ಕವರ್ ಪೇಜ್ ಮೇಲೆ ಮಿಂಚಿ ಮತ್ತೊಮ್ಮೆ ಭಾರತೀಯ ಸಿನೆಮಾದ ಶಕ್ತಿ ಪ್ರದರ್ಶಿಸಿದ್ದಾರೆ.

‘ದಿ ಯಶ್ ಎಫೆಕ್ಟ್’ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾದ ಈ ಕವರ್ ಫೋಟೋದಲ್ಲಿ ಯಶ್ ಅತ್ಯಂತ ಸ್ಟೈಲಿಶ್ ಮತ್ತು ಕ್ಲಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಳಿ ಸೂಟ್, ಹ್ಯಾಟ್ ಹಾಗೂ ಐಷಾರಾಮಿ ಕಾರಿನೊಳಗಿನ ಅವರ ರಾಯಲ್ ಪೋಸ್ ಅಭಿಮಾನಿಗಳಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿದೆ.

ಈ ವಿಶೇಷ ಲೇಖನದಲ್ಲಿ ಯಶ್ ಅವರ ಜಾಗತಿಕ ಮಾರುಕಟ್ಟೆ, ಅವರ ನಿರ್ಮಾಣ ಸಂಸ್ಥೆ ಮತ್ತು ‘ಟಾಕ್ಸಿಕ್’ ಚಿತ್ರದ ಮಹತ್ವದ ಬಗ್ಗೆ ವಿಶ್ಲೇಷಣೆ ಮಾಡಲಾಗಿದೆ. ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಸಿನಿಮಾ ಭಾರತೀಯ ಸಿನೆಮಾವನ್ನು ಹೊಸ ಹಂತಕ್ಕೆ ಕೊಂಡೊಯ್ಯಲಿದೆ ಎಂಬ ಭರವಸೆ ವ್ಯಕ್ತವಾಗಿದೆ.

ಸಾಮಾನ್ಯ ಮಾಸ್ ಸಿನಿಮಾಗಳ ಹಾದಿ ಬಿಟ್ಟು, ಕಲಾತ್ಮಕತೆ ಮತ್ತು ಗ್ಲೋಬಲ್ ಕಥಾಹಂದರದತ್ತ ಯಶ್ ಸಾಗುತ್ತಿರುವುದು ಸಿನಿಪ್ರಿಯರನ್ನು ಸೆಳೆಯುತ್ತಿದೆ. ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಮೂಲಕ ನಿರ್ಮಾಪಕರಾಗಿಯೂ ಯಶ್ ತಮ್ಮ ಪ್ರಭಾವ ವಿಸ್ತರಿಸುತ್ತಿದ್ದಾರೆ.

ವೆರೈಟಿ ಕವರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸೋಶಿಯಲ್ ಮೀಡಿಯಾ ಸ್ಫೋಟಗೊಂಡಿದ್ದು, #YashBOSS ಮತ್ತು #ToxicTheMovie ಟ್ರೆಂಡಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿವೆ. ಕನ್ನಡದ ನಟನೊಬ್ಬ ಹಾಲಿವುಡ್ ಮಟ್ಟದ ವೇದಿಕೆಯಲ್ಲಿ ಸದ್ದು ಮಾಡುತ್ತಿರುವುದು ಈಗ ಭಾರತೀಯ ಚಿತ್ರರಂಗಕ್ಕೆ ಹೊಸ ಹೆಮ್ಮೆ ತಂದಿದೆ.

ಬಿಹಾರ ರಾಜಕೀಯದಲ್ಲಿ ಹೊಸ ಅಧ್ಯಾಯ: ಸಂಪುಟ ಸೇರಿದ ನಿತೀಶ್ ಪುತ್ರ ನಿಶಾಂತ್, 31 ಸಚಿವರ ಪ್ರಮಾಣ ವಚನ

ಪಾಟ್ನಾ: ಬಿಹಾರ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಬಿಜೆಪಿ-ಎನ್‌ಡಿಎ ಸರ್ಕಾರ ತನ್ನ ನೂತನ ಸಂಪುಟವನ್ನು ವಿಸ್ತರಿಸಿದೆ. ಒಟ್ಟು 31 ಎನ್‌ಡಿಎ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಾಕ್ಷಿಯಾಗಿದ್ದು, ಎನ್‌ಡಿಎ ಮೈತ್ರಿಕೂಟದ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಯಿತು.

ನೂತನ ಸಂಪುಟದಲ್ಲಿ ಮಾಜಿ ಸಿಎಂ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ಸಚಿವರಾಗಿ ಸೇರ್ಪಡೆಯಾಗಿರುವುದು ರಾಜ್ಯ ರಾಜಕೀಯದಲ್ಲಿ ವಿಶೇಷ ಚರ್ಚೆಗೆ ಕಾರಣವಾಗಿದೆ. ಜೊತೆಗೆ ಬಿಜೆಪಿ, ಜೆಡಿ(ಯು), ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ಹಿಂದೂಸ್ತಾನಿ ಅವಾಮ್ ಮೋರ್ಚಾ ಹಾಗೂ ಇತರೆ ಮೈತ್ರಿ ಪಕ್ಷಗಳ ನಾಯಕರಿಗೆ ಅವಕಾಶ ನೀಡಲಾಗಿದೆ.

ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ, ಹಿರಿಯ ನಾಯಕರು ಶ್ರಾವಣ್ ಕುಮಾರ್ ಮತ್ತು ಅಶೋಕ್ ಚೌಧರಿ ಸೇರಿದಂತೆ ಅನುಭವಿಗಳಿಗೂ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಅನುಭವ ಮತ್ತು ಯುವ ನಾಯಕರ ಸಮತೋಲನ ಸಾಧಿಸುವ ಉದ್ದೇಶದಿಂದ ಸಂಪುಟ ರಚನೆ ಮಾಡಲಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ನಿತೀಶ್ ಕುಮಾರ್ ರಾಜ್ಯಸಭೆಗೆ ಆಯ್ಕೆಯಾದ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಬಿಹಾರದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಅವರ ನೇತೃತ್ವದಲ್ಲಿ ಸಂಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗಿದ್ದು, ಮುಂಬರುವ ಚುನಾವಣೆಗೆ ಎನ್‌ಡಿಎ ಒಗ್ಗಟ್ಟಿನ ಸಂದೇಶ ರವಾನಿಸಿದೆ.

error: Content is protected !!