Home Blog Page 40

ಮೀಟರ್ ಬಡ್ಡಿ ಜಾಲದ ವಿರುದ್ಧ ಎಸ್ಪಿ ದೀಪನ್ ವಾರ್! ಜಮೀರ್ ಮೊಬೈಲ್ ತನಿಖೆಯಿಂದ ಪೊಲೀಸರಿಗೆ ಟೆನ್ಷನ್

ಕಾರವಾರ: ಮುಂಡಗೋಡಿನಲ್ಲಿ ಮೀಟರ್ ಬಡ್ಡಿ ದಂಧೆ ಮತ್ತೆ ತಲೆಎತ್ತಿರುವ ಬೆನ್ನಲ್ಲೇ ಉತ್ತರ ಕನ್ನಡ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಮೀಟರ್ ಬಡ್ಡಿ ದಂಧೆಯ ಪ್ರಮುಖ ಮುಖಂಡ ಜಮೀರ್ ಅಹ್ಮದ್ ದರ್ಗಾವಾಲೆ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದರೆ, ಇದೀಗ ಅದರ ಹಿಂದಿನ ಜಾಲವನ್ನು ಬಯಲಿಗೆಳೆಯಲು ಪೊಲೀಸರು ದೊಡ್ಡ ಮಟ್ಟದ ತನಿಖೆ ಆರಂಭಿಸಿದ್ದಾರೆ.

ಜಮೀರ್ ಕೊಲೆ ಪ್ರಕರಣದಲ್ಲಿ ಈಗಾಗಲೇ 7 ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ನಡೆಸುತ್ತಿರುವ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ತಂಡ, ಕೊಲೆ ಮತ್ತು ಮೀಟರ್ ಬಡ್ಡಿ ವ್ಯವಹಾರಗಳ ನಡುವಿನ ನಂಟಿನ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ.

ಇದೀಗ ಎಸ್ಪಿ ದೀಪನ್ ನೇರವಾಗಿ ಮೈದಾನಕ್ಕಿಳಿದು ಮುಂಡಗೋಡು, ಹಳಿಯಾಳ ಹಾಗೂ ದಾಂಡೇಲಿ ಭಾಗಗಳಲ್ಲಿ ಸಕ್ರಿಯವಾಗಿರುವ ದಂಧೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಸಜ್ಜಾಗಿದ್ದಾರೆ. ಕೆಲವರನ್ನು ಗಡಿಪಾರು ಮಾಡಲು ಸಿದ್ಧತೆ ನಡೆದಿದ್ದು, ವಾರದೊಳಗೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಇನ್ನೊಂದೆಡೆ, ಜಮೀರ್ ಜೊತೆ ಕೆಲ ಸ್ಥಳೀಯ ಪೊಲೀಸರ ಸಂಪರ್ಕವಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಜಮೀರ್ ಮೊಬೈಲ್ ಕಾಲ್ ಡೀಟೇಲ್ಸ್ ಮತ್ತು ವಾಟ್ಸಪ್ ಚಾಟ್‌ಗಳ ಪರಿಶೀಲನೆಗೆ ಎಸ್ಪಿ ದೀಪನ್ ಸೂಚನೆ ನೀಡಿದ್ದಾರೆ.

ಈ ಬೆಳವಣಿಗೆಗಳಿಂದ ಜಮೀರ್ ಜೊತೆ ಸಂಪರ್ಕದಲ್ಲಿದ್ದರೆನ್ನಲಾದ ಕೆಲ ಪೊಲೀಸರಲ್ಲಿ ಭಾರೀ ಆತಂಕ ಶುರುವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆ ವಿರುದ್ಧ ಇದೀಗ ಪೊಲೀಸ್ ಇಲಾಖೆ ಸಂಪೂರ್ಣ ಸಮರ ಘೋಷಿಸಿದಂತಾಗಿದೆ.

‘ಪುಷ್ಪ 2’ ದುರಂತದ ಬಾಲಕನಿಗೆ ಅಲ್ಲು ಕುಟುಂಬದ ಬೆಂಬಲ! ಶಿಕ್ಷಣದಿಂದ ಭವಿಷ್ಯವರೆಗೂ ಸಂಪೂರ್ಣ ಜವಾಬ್ದಾರಿ

‘ಪುಷ್ಪ 2’ ಪ್ರೀಮಿಯರ್ ವೇಳೆ ನಡೆದ ದುರಂತದಲ್ಲಿ ಗಾಯಗೊಂಡಿದ್ದ ಬಾಲಕ ಶ್ರೀತೇಜ್ ಕುಟುಂಬಕ್ಕೆ ಅಲ್ಲು ಕುಟುಂಬ ಮತ್ತೆ ಬೆನ್ನೆಲುಬಾಗಿ ನಿಂತಿದೆ. ನಟ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಹಾಗೂ ತಂದೆ ಅಲ್ಲು ಅರವಿಂದ್ ಬಾಲಕನ ಮನೆಗೆ ಭೇಟಿ ನೀಡಿ ಕುಟುಂಬದ ಸ್ಥಿತಿಗತಿ ವಿಚಾರಿಸಿದ್ದಾರೆ.

ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತದಲ್ಲಿ ಶ್ರೀತೇಜ್ ತೀವ್ರವಾಗಿ ಗಾಯಗೊಂಡಿದ್ದನು. ಈ ದುರ್ಘಟನೆಯಲ್ಲಿ ಆತನ ತಾಯಿ ಮೃತಪಟ್ಟಿದ್ದರು. ಮೆದುಳಿಗೆ ಪೆಟ್ಟು ಬಿದ್ದಿದ್ದ ಕಾರಣ ಹಲವು ತಿಂಗಳುಗಳ ಕಾಲ ಶ್ರೀತೇಜ್ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆದಿದ್ದನು. ಇದೀಗ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಮುಂದುವರಿದಿದೆ.

ಬಾಲಕನ ಆರೋಗ್ಯದ ಬಗ್ಗೆ ಮಾಹಿತಿ ಪಡೆದ ಅಲ್ಲು ಅರವಿಂದ್, ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯ ಮುಂದುವರಿಸುವುದಾಗಿ ಭರವಸೆ ನೀಡಿದ್ದಾರೆ. ಶ್ರೀತೇಜ್ ತಂಗಿಯ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ತಾವು ಭರಿಸುವುದಾಗಿ ಘೋಷಿಸಿರುವುದು ಗಮನ ಸೆಳೆದಿದೆ.

ಘಟನೆ ಬಳಿಕದಿಂದಲೇ ಅಲ್ಲು ಅರ್ಜುನ್ ಕುಟುಂಬ ಮತ್ತು ಮೈತ್ರಿ ಮೂವಿ ಮೇಕರ್ಸ್ ಬಾಲಕನ ವೈದ್ಯಕೀಯ ವೆಚ್ಚವನ್ನು ನೋಡಿಕೊಳ್ಳುತ್ತಿವೆ. ಇದೇ ವೇಳೆ ಶ್ರೀತೇಜ್ ಭವಿಷ್ಯಕ್ಕಾಗಿ 2 ಕೋಟಿ ರೂಪಾಯಿ ಫಿಕ್ಸ್‌ಡ್ ಡೆಪಾಸಿಟ್ ಇಡಲಾಗಿದ್ದು, ಅದರ ಬಡ್ಡಿಯಿಂದ ತಿಂಗಳಿಗೆ ಸುಮಾರು 1.5 ಲಕ್ಷ ರೂಪಾಯಿ ಆದಾಯ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.

ಈ ಭೇಟಿಯ ಮೂಲಕ ದುರಂತದ ನೋವಿನ ನಡುವೆ ಸಂತ್ರಸ್ತ ಕುಟುಂಬಕ್ಕೆ ಅಲ್ಲು ಕುಟುಂಬ ಮಾನವೀಯ ಸ್ಪರ್ಶ ನೀಡಿದೆ.

‘ಡ್ರ್ಯಾಗನ್’ಗೆ ಮತ್ತೊಂದು ದೊಡ್ಡ ಬಲ! ಜೂ ಎನ್‌ಟಿಆರ್ ಜೊತೆ ಮತ್ತೆ ಸ್ಕ್ರೀನ್ ಶೇರ್ ಮಾಡಲಿರುವ ಪ್ರಕಾಶ್ ರಾಜ್

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಜೂ ಎನ್‌ಟಿಆರ್ ಅವರ ಬಹುನಿರೀಕ್ಷಿತ ಸಿನಿಮಾ ‘ಡ್ರ್ಯಾಗನ್’ ದಿನದಿಂದ ದಿನಕ್ಕೆ ಭಾರೀ ಕುತೂಹಲ ಹುಟ್ಟಿಸುತ್ತಿದೆ. ಅಧಿಕೃತ ಹೆಸರು ಇನ್ನೂ ಘೋಷಣೆ ಆಗದಿದ್ದರೂ, ಚಿತ್ರದ ಪ್ರತಿಯೊಂದು ಅಪ್ಡೇಟ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ. ಇದೀಗ ಚಿತ್ರತಂಡಕ್ಕೆ ಹಿರಿಯ ನಟ ಪ್ರಕಾಶ್ ರಾಜ್ ಸೇರ್ಪಡೆಯಾಗಿರುವ ಸುದ್ದಿ ಸಿನಿಪ್ರಿಯರಲ್ಲಿ ಹೈಪ್ ಹೆಚ್ಚಿಸಿದೆ.

ಪ್ರಶಾಂತ್ ನೀಲ್ ಸಿನಿಮಾಗಳ ವಿಶೇಷತೆ ಎಂದರೆ ವಿಭಿನ್ನ ಭಾಷೆಗಳ ಕಲಾವಿದರ ಸಮಾಗಮ. ‘ಕೆಜಿಎಫ್’, ‘ಸಲಾರ್’ ಬಳಿಕ ಈಗ ಈ ಸಿನಿಮಾದಲ್ಲೂ ಕನ್ನಡದ ಪ್ರತಿಭೆಗಳಿಗೆ ವಿಶೇಷ ಅವಕಾಶ ಸಿಕ್ಕಿದೆ. ರುಕ್ಮಿಣಿ ವಸಂತ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

ಬಹುಭಾಷಾ ನಟನಾಗಿ ದಶಕಗಳಿಂದ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಪ್ರಕಾಶ್ ರಾಜ್, ಯಾವುದೇ ಪಾತ್ರವನ್ನೂ ತಮ್ಮ ಅಭಿನಯದಿಂದ ಜೀವಂತಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ. ‘ಕೆಜಿಎಫ್ 2’ ಬಳಿಕ ಮತ್ತೆ ಪ್ರಶಾಂತ್ ನೀಲ್ ಜೊತೆ ಕೈಜೋಡಿಸಿರುವುದು ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆ ಹುಟ್ಟಿಸಿದೆ.

ಜೂ ಎನ್‌ಟಿಆರ್ ಮತ್ತು ಪ್ರಕಾಶ್ ರಾಜ್ ಕಾಂಬಿನೇಷನ್ ಈಗಾಗಲೇ ಹಲವು ಹಿಟ್ ಸಿನಿಮಾಗಳಲ್ಲಿ ವರ್ಕೌಟ್ ಆಗಿದೆ. ‘ಟೆಂಪರ್’ ಸಿನಿಮಾದಲ್ಲಿನ ಇವರಿಬ್ಬರ ತೀವ್ರ ಸನ್ನಿವೇಶಗಳು ಇಂದಿಗೂ ಅಭಿಮಾನಿಗಳ ಫೇವರಿಟ್. ಇದೀಗ ‘ಡ್ರ್ಯಾಗನ್’ನಲ್ಲಿ ಈ ಜೋಡಿ ಮತ್ತೆ ಮುಖಾಮುಖಿಯಾಗಲಿದ್ದು, ಸಿನಿಮಾ ಭಾರೀ ಮಟ್ಟದಲ್ಲಿ ಸದ್ದು ಮಾಡುವ ಲಕ್ಷಣ ಕಾಣುತ್ತಿದೆ.

‘ಸರ್ಕೆ ಚುನರಿ’ ವಿವಾದಕ್ಕೆ ಕೊನೆ! NCW ಮುಂದೆ ನೋರಾ ಕ್ಷಮೆ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ಘೋಷಣೆ

‘ಕೆಡಿ’ ಸಿನಿಮಾದ ‘ಸರ್ಸೆ ಸೆರಗು’ ಹಾಡಿನಿಂದ ಉಂಟಾಗಿದ್ದ ಭಾರೀ ವಿವಾದಕ್ಕೆ ಸಂಬಂಧಿಸಿ ನಟಿ ನೋರಾ ಫತೇಹಿ ಕೊನೆಗೂ ಮೌನ ಮುರಿದಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾದ ಅವರು ಲಿಖಿತ ಕ್ಷಮೆ ಸಲ್ಲಿಸಿದ್ದು, ಸಮಾಜಮುಖಿ ಹೆಜ್ಜೆಯೊಂದನ್ನೂ ಘೋಷಿಸಿದ್ದಾರೆ.

ಹಿಂದಿಯಲ್ಲಿ ‘ಸರ್ಕೆ ಚುನರಿ’ ಹೆಸರಿನಲ್ಲಿ ಬಿಡುಗಡೆಯಾಗಿದ್ದ ಈ ಹಾಡು ಮಹಿಳೆಯರನ್ನು ಅಶ್ಲೀಲವಾಗಿ ಚಿತ್ರಿಸಿದೆ ಎಂಬ ಆರೋಪದಡಿ ದೇಶಾದ್ಯಂತ ಟೀಕೆಗೆ ಗುರಿಯಾಗಿತ್ತು. ಹಾಡಿನ ದೃಶ್ಯಗಳು ಮತ್ತು ಸಾಹಿತ್ಯದ ವಿರುದ್ಧ ಸಾರ್ವಜನಿಕ ಆಕ್ರೋಶ ಹೆಚ್ಚಾದ ಬಳಿಕ ರಾಷ್ಟ್ರೀಯ ಮಹಿಳಾ ಆಯೋಗ ಪ್ರಕರಣ ದಾಖಲಿಸಿಕೊಂಡಿತ್ತು.

ಗುರುವಾರ ವಿಚಾರಣೆಗೆ ಹಾಜರಾದ ನೋರಾ ಫತೇಹಿ, ‘ಯಾರ ಭಾವನೆಗೂ ಧಕ್ಕೆ ತರುವ ಉದ್ದೇಶ ಇರಲಿಲ್ಲ. ಆದರೆ ಕಲಾವಿದೆಯಾಗಿ ನನ್ನ ಜವಾಬ್ದಾರಿಯನ್ನು ಅರಿತು ಕ್ಷಮೆ ಕೇಳುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಅಲ್ಲದೆ, ವಿವಾದಕ್ಕೆ ಪ್ರಾಯಶ್ಚಿತ್ತವಾಗಿ ಕೆಲವು ಅನಾಥ ಹೆಣ್ಣು ಮಕ್ಕಳ ಶಿಕ್ಷಣ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದ್ದಾರೆ. ಸಮಾಜಕ್ಕೆ ಮರಳಿ ಕೊಡುವ ಮನೋಭಾವದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಈಗಾಗಲೇ ನಟ ಸಂಜಯ್ ದತ್ ಕೂಡ ಕ್ಷಮೆಯಾಚಿಸಿ 50 ಬುಡಕಟ್ಟು ಹೆಣ್ಣು ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತಿದ್ದರು.

ವಿವಾದ ತಾರಕ್ಕೇರಿದ ಬಳಿಕ ‘ಸರ್ಕೆ ಚುನರಿ’ ಹಾಡನ್ನು ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿತ್ತು. ಇದೀಗ ಬಿಡುಗಡೆಯಾಗಿರುವ ‘ಕೆಡಿ’ ಸಿನಿಮಾದಲ್ಲೂ ಆ ಹಾಡಿಗೆ ಜಾಗ ನೀಡಲಾಗಿಲ್ಲ.

ಕಾಂಗ್ರೆಸ್‌ ಸ್ಥಿತಿ ಭಿಕ್ಷುಕರ ರೀತಿ ಆಗಿದೆ: ಛಲವಾದಿ ನಾರಾಯಣ ಸ್ವಾಮಿ ವ್ಯಂಗ್ಯ

ಬೆಂಗಳೂರು: ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಇದ್ದ ಕಾಂಗ್ರೆಸ್‌, ನಟ ವಿಜಯ್‌ ನೇತೃತ್ವದ ಟಿವಿಕೆ ಪಕ್ಷ ಹೆಚ್ಚಿನ ಸ್ಥಾನ ಪಡೆದ ಕೂಡಲೇ ರಾತ್ರೋರಾತ್ರಿ ಆ ಪಕ್ಷದ ಮುಂದೆ ಹೋಗಿ ಸಚಿವ ಸ್ಥಾನಕ್ಕೆ ಭಿಕ್ಷೆ ಬೇಡುತ್ತಿದೆ. ಡಿಎಂಕೆ ಸಖ್ಯ ಬಿಟ್ಟು ಕಾಂಗ್ರೆಸ್‌ ಸ್ಥಿತಿ ಭಿಕ್ಷುಕರ ರೀತಿ ಆಗಿದೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ವ್ಯಂಗ್ಯವಾಡಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೆ ಇಂತಹ ಹೀನಾಯ ಸ್ಥಿತಿ ಬಂದಿದೆ. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುಸ್ಲಿಮರು ಸಾಕಷ್ಟು ಬೆಂಬಲ ನೀಡಿದ್ದಾರೆ. ಕಾಂಗ್ರೆಸ್‌ಗೆ ಮುಸ್ಲಿಮರು ಇಲ್ಲದಿದ್ದರೆ ತಿಪ್ಪೆಗುಂಡಿಗೆ ಹಾಕುವ ಕಸಕ್ಕೆ ಸಮ ಎಂದರು.

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವವಾದ ಜಯ ಸಿಕ್ಕಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಆಶೀರ್ವಾದ ಮಾಡಿದ್ದಾರೆ. ಆ ರಾಜ್ಯದಲ್ಲಿ ಟಿಎಂಸಿ ಆಡಳಿತದಲ್ಲಿ ಜನರು ನರಕಯಾತನೆ ಅನುಭವಿಸುತ್ತಿದ್ದರು. ಆ ನರಕದಿಂದ ಮೋದಿ ಅವರು ಜನರನ್ನು ಹೊರತಂದಿದ್ದಾರೆ. ಈ ಬಾರಿಯೂ ಬಿಜೆಪಿ ಗೆಲ್ಲದೇ ಇದ್ದಿದ್ದರೆ ಅಲ್ಲಿನ ಜನರ ಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಿ ಎಂದರು.

ಪಶ್ಚಿಮ ಬಂಗಾಳದಲ್ಲಿ ಗೆದ್ದ ಶಾಸಕರು ಯಾವುದಾದರೂ ರಸ್ತೆಗೆ ಈಗ ಬಂದರೆ ಹೆಣ್ಣು ಮಕ್ಕಳು ಕೈ ಮುಗಿದು ನಮ್ಮನ್ನು ರಕ್ಷಿಸಿ ಎಂದು ಮನವಿ ಮಾಡುತ್ತಿದ್ದಾರೆ. ಮಮತಾ ಅವರ ಆಡಳಿತದಲ್ಲಿ ನಾವು ನರಕ ಅನುಭವಿಸಿದ್ದೇವೆ ಇನ್ನು ಮುಂದೆ ಇಂತಹ ಸ್ಥಿತಿ ಬರದಿರಲಿ ಎಂದು ಹೇಳುತ್ತಿದ್ದಾರೆ. ಅಂದರೆ ಅಲ್ಲಿ ಯಾವ ಸ್ಥಿತಿ ಇತ್ತು ಎಂದು ಯೋಚಿಸಿ ಎಂದು ಹೇಳಿದರು.

ಅಸ್ಸಾಂ ಮತ್ತು ಪುದುಚೇರಿಯಲ್ಲಿ ನಮ್ಮ ಪಕ್ಷಕ್ಕೆ ಜನ ಬೆಂಬಲ ನೀಡಿದ್ದಾರೆ. ತಮಿಳುನಾಡು ಮತ್ತು ಕೇರಳದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ಬೆಂಬಲದಿಂದ ಮತಬ್ಯಾಂಕ್‌ ಹೆಚ್ಚಿಸಿಕೊಂಡಿದ್ದೇವೆ. ಇನ್ನೂ ಅಲ್ಲಿ ಮುಂದಿನ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಂತೆ ಬಿಜೆಪಿ ಶಕ್ತಿ ಹೆಚ್ಚಲಿದೆ. ಸ್ವತಂತ್ರ ಸರ್ಕಾರ ಮಾಡುವ ಶಕ್ತಿಯನ್ನು ಜನರು ಕೊಡ್ತಾರೆ. ಕೇರಳದಲ್ಲಿ ಕಾಂಗ್ರೆಸ್‌ ಯುಡಿಎಫ್‌ ಏಳು ಪಕ್ಷಗಳ ಜೊತೆಗೂಡಿದೆ. ತುಂಡು ತುಂಡು ಪಕ್ಷ ಸೇರಿ ಖಿಚಡಿ ಪಕ್ಷ ಆಗಿದೆ ಎಂದು ಗೇಲಿ ಮಾಡಿದರು.

ಮಂಡ್ಯವೇ ನನ್ನ ರಾಜಕೀಯ ಜನ್ಮಭೂಮಿ; 2019ರ ಸೋಲು ನನಗೆ ಪಾಠ ಕಲಿಸಿತು – ನಿಖಿಲ್ ಕುಮಾರಸ್ವಾಮಿ

ಮಂಡ್ಯ: ನನ್ನ ರಾಜಕೀಯ ಪ್ರವೇಶ ಮಂಡ್ಯ ಜಿಲ್ಲೆಯಿಂದಲೇ ಆರಂಭವಾಗಿದೆ. ನಾವು ಮಂಡ್ಯದಲ್ಲಿ ಹುಟ್ಟದಿದ್ದರೂ ಈ ಜಿಲ್ಲೆಯ ಋಣ ನಮ್ಮ ಮೇಲಿದೆ. ಯಾವ ಊರಿಗೆ ಹೋದರೂ ಜನರು ತೋರಿಸುವ ಪ್ರೀತಿ ಮತ್ತು ವಿಶ್ವಾಸವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪಾಂಡವಪುರದಲ್ಲಿ ನಡೆದ ‘ಜನರೊಂದಿಗೆ ಜನತಾದಳ’ ಕಾರ್ಯಕ್ರಮ ಹಾಗೂ ಪಕ್ಷದ 25ನೇ ವರ್ಷದ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, 2019ರ ಲೋಕಸಭಾ ಚುನಾವಣೆಯ ಸೋಲು ತಮ್ಮ ರಾಜಕೀಯ ಜೀವನಕ್ಕೆ ಮಹತ್ವದ ಪಾಠ ಕಲಿಸಿತು ಎಂದು ಹೇಳಿದರು.

ಅಂದಿನ ನಿಖಿಲ್ ಮತ್ತು ಇಂದಿನ ನಿಖಿಲ್ ನಡುವೆ ಸಾಕಷ್ಟು ಬದಲಾವಣೆಗಳಾಗಿವೆ. ಆ ಸೋಲು ರಾಜಕೀಯವಾಗಿ ಮತ್ತಷ್ಟು ಪಕ್ವತೆ ಮತ್ತು ಅನುಭವ ನೀಡಿದೆ. ಜನರ ಆಶಯಗಳನ್ನು ಅರ್ಥಮಾಡಿಕೊಳ್ಳಲು ಅದು ನನಗೆ ನೆರವಾಗಿದೆ ಎಂದು ತಿಳಿಸಿದರು.

ಜೆಡಿಎಸ್ ಪಕ್ಷದ ಕುರಿತು ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೋರಾಟದ ಫಲವೇ ಜನತಾದಳ ಪಕ್ಷ. 25 ವರ್ಷಗಳ ರಜತ ಮಹೋತ್ಸವ ಆಚರಿಸುತ್ತಿರುವ ಜೆಡಿಎಸ್ ಕನ್ನಡ ನಾಡು, ನುಡಿ, ನೆಲ, ಜಲ ಮತ್ತು ಭಾಷೆಯ ಪರ ಸದಾ ಹೋರಾಟ ನಡೆಸಿದ ಪಕ್ಷವಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಅನೇಕ ಪ್ರಾದೇಶಿಕ ಪಕ್ಷಗಳು ಹುಟ್ಟಿ ಅಸ್ತಂಗತವಾಗಿವೆ. ಆದರೆ ಜನರ ಆಶೀರ್ವಾದ ಮತ್ತು ಕಾರ್ಯಕರ್ತರ ಶ್ರಮದಿಂದ ಜೆಡಿಎಸ್ ಗಟ್ಟಿಯಾಗಿ ಉಳಿದು ರಾಜ್ಯ ರಾಜಕಾರಣದಲ್ಲಿ ಸುಭದ್ರ ಸ್ಥಾನವನ್ನು ಕಾಯ್ದುಕೊಂಡಿದೆ ಎಂದು ನಿಖಿಲ್ ಕುಮಾರಸ್ವಾಮಿ ಪ್ರತಿಪಾದಿಸಿದರು.

ತುಮಕೂರಿನಲ್ಲಿ ನಿಲ್ಲದ ನವಿಲುಗಳ ಸರಣಿ ಸಾವು! H5N1 ಸೋಂಕಿನ ಶಂಕೆ ನಡುವೆ ಮತ್ತೆ ಎರಡು ಕಳೇಬರ ಪತ್ತೆ

0

ತುಮಕೂರು: ಜಿಲ್ಲೆಯಲ್ಲಿ ನವಿಲುಗಳ ಸಾವಿನ ಪ್ರಕರಣಗಳು ಮುಂದುವರಿಯುತ್ತಲೇ ಇವೆ. ಗೂಳರಿವೆ ಬಳಿಯ ಸುಣ್ಣಕಲ್ಲು ಕಟ್ಟೆ ಪ್ರದೇಶದಲ್ಲಿ ಇಂದು ಮತ್ತೆ ಎರಡು ನವಿಲುಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಜಿಲ್ಲೆಯಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಈ ಹಿಂದೆ ಜಿಲ್ಲೆಯ ವಿವಿಧ ಭಾಗಗಳಲ್ಲಿ 44 ನವಿಲುಗಳು ಸಾವನ್ನಪ್ಪಿದ್ದ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿತ್ತು. ಬೊಮ್ಮನಹಳ್ಳಿ, ಕೋಳಿಹಳ್ಳಿ, ಭೈರಸಂದ್ರ ಹಾಗೂ ಹುಲ್ಲೆನಹಳ್ಳಿ ಗ್ರಾಮಗಳಲ್ಲಿ ಏಪ್ರಿಲ್ ತಿಂಗಳಲ್ಲಿ ಸರಣಿ ಸಾವುಗಳು ಸಂಭವಿಸಿದ್ದವು. ಆರಂಭದಲ್ಲಿ ಬಿಸಿಲಿನ ತೀವ್ರತೆ ಕಾರಣ ಎನ್ನಲಾಗಿದ್ದರೂ, ಬಳಿಕ ನಡೆದ ಪರೀಕ್ಷೆಯಲ್ಲಿ ನವಿಲುಗಳಿಗೆ ಹೆಚ್5ಎನ್1 ಹಕ್ಕಿಜ್ವರ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ಇದೀಗ ಮತ್ತೆ ಎರಡು ನವಿಲುಗಳ ಕಳೇಬರ ಪತ್ತೆಯಾಗಿರುವುದರಿಂದ ಸೋಂಕು ಹರಡುವ ಭೀತಿ ಹೆಚ್ಚಾಗಿದೆ. ಸಾವಿನ ನಿಖರ ಕಾರಣ ತಿಳಿಯಲು ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಅರಣ್ಯ ಇಲಾಖೆ ಮತ್ತು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ತುಮಕೂರಿನಲ್ಲಿ ಮತ್ತೆ ನವಿಲುಗಳ ಸರಣಿ ಸಾವು; ಹಕ್ಕಿಜ್ವರ ಆತಂಕದ ನಡುವೆ ಎರಡು ನವಿಲುಗಳ ಕಳೇಬರ ಪತ್ತೆ

ತುಮಕೂರು: ಜಿಲ್ಲೆಯಲ್ಲಿ ನವಿಲುಗಳ ಸರಣಿ ಸಾವು ಆತಂಕ ಮೂಡಿಸಿದ್ದು, ತುಮಕೂರು ಹೊರವಲಯದ ಗೂಳರಿವೆ ಸಮೀಪದ ಸುಣ್ಣಕಲ್ಲು ಕಟ್ಟೆ ಪ್ರದೇಶದಲ್ಲಿ ಇಂದು ಮತ್ತೆ ಎರಡು ನವಿಲುಗಳ ಕಳೇಬರ ಪತ್ತೆಯಾಗಿದೆ.

ಕಳೆದ 15 ದಿನಗಳ ಹಿಂದಷ್ಟೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಒಟ್ಟು 44 ನವಿಲುಗಳು ಸಾವನ್ನಪ್ಪಿದ್ದ ಘಟನೆ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ನವಿಲುಗಳು ಮೃತಪಟ್ಟಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಕಳೆದ ತಿಂಗಳು ಏಪ್ರಿಲ್ 16ರಿಂದ 21ರ ಅವಧಿಯಲ್ಲಿ ಬೊಮ್ಮನಹಳ್ಳಿ, ಕೋಳಿಹಳ್ಳಿ, ಭೈರಸಂದ್ರ ಹಾಗೂ ಹುಲ್ಲೆನಹಳ್ಳಿ ಗ್ರಾಮಗಳಲ್ಲಿ ಸುಮಾರು 32 ನವಿಲುಗಳು ಮೃತಪಟ್ಟಿದ್ದವು. ಆರಂಭದಲ್ಲಿ ತೀವ್ರ ಬಿಸಿಗಾಳಿ ಮತ್ತು ಹೀಟ್ ಸ್ಟ್ರೋಕ್‌ನಿಂದ ನವಿಲುಗಳು ಸಾವನ್ನಪ್ಪಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು.

ಆದರೆ ಬಳಿಕ ಮೃತಪಟ್ಟ ನವಿಲುಗಳ ಅಂಗಾಂಶಗಳನ್ನು ಪರೀಕ್ಷೆಗೆ ಕಳುಹಿಸಿದಾಗ, ಅವುಗಳಿಗೆ ಹೆಚ್5ಎನ್1 ಸೋಂಕು, ಅಂದರೆ ಹಕ್ಕಿಜ್ವರ ತಗುಲಿರುವುದು ದೃಢಪಟ್ಟಿತ್ತು. ಇದರಿಂದ ಜಿಲ್ಲೆಯಲ್ಲಿ ಹಕ್ಕಿಜ್ವರದ ಭೀತಿ ಹೆಚ್ಚಾಗಿದೆ.

ಇದೀಗ ಸುಣ್ಣಕಲ್ಲು ಕಟ್ಟೆ ಪ್ರದೇಶದಲ್ಲಿ ಪತ್ತೆಯಾದ ಎರಡು ನವಿಲುಗಳ ಸಾವಿನ ನಿಖರ ಕಾರಣ ಪತ್ತೆಹಚ್ಚಲು ಅವುಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಘಟನೆ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಹಾಗೂ ಪಶು ಸಂಗೋಪನಾ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಮಚಂದ್ರ ರಾವ್ ಅಮಾನತು ವಾಪಸ್‌ ರಾಜ್ಯಕ್ಕೆ ಕಪ್ಪುಚುಕ್ಕೆ: ಸರ್ಕಾರದ ವಿರುದ್ಧ ಎಚ್. ವಿಶ್ವನಾಥ್ ವಾಗ್ದಾಳಿ

ಮೈಸೂರು: ಹಿರಿಯ ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಮೇಲಿನ ಅಮಾನತು ಆದೇಶವನ್ನು ವಾಪಸ್ ಪಡೆದಿರುವುದು ಹಾಗೂ ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವ ಆಚರಣೆ ರಾಜ್ಯಕ್ಕೆ ಎರಡು ಕಪ್ಪುಚುಕ್ಕೆಗಳಂತಿವೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಚಂದ್ರ ರಾವ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದರೂ ಸರ್ಕಾರ ಏಕಾಏಕಿ ಅಮಾನತು ಆದೇಶ ಹಿಂಪಡೆದು ಮತ್ತೆ ಕರ್ತವ್ಯಕ್ಕೆ ನಿಯೋಜಿಸಿರುವುದು ಸರಿಯಲ್ಲ ಎಂದು ಟೀಕಿಸಿದರು.

ಕೇರಳ ಬಸ್‌ನಲ್ಲಿ ಸಿಕ್ಕಿದ್ದ 2 ಕೋಟಿ ರೂಪಾಯಿ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ವಿರುದ್ಧ ಕ್ರಮ ಕೈಗೊಂಡಿದ್ದ ರಾಮಚಂದ್ರ ರಾವ್, ನಂತರ ತಮ್ಮ ಸಾಕು ಮಗಳು ರನ್ಯಾ ರಾವ್ ಚಿನ್ನ ಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದರು. ಇದರ ಜೊತೆಗೆ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪವೂ ಕೇಳಿಬಂದಿತ್ತು ಎಂದು ವಿಶ್ವನಾಥ್ ನೆನಪಿಸಿದರು.

ನ್ಯಾಯಕ್ಕಾಗಿ ಬಂದಿದ್ದ ಮಹಿಳೆಯ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದ ಸಂಬಂಧ ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೋ ಕುರಿತು ರಾಮಚಂದ್ರ ರಾವ್ ಅದು ತಮ್ಮದಲ್ಲ ಎಂದು ವಾದಿಸಿದ್ದರು. ಆದರೆ ಬಳಿಕ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ವಿಡಿಯೋ ಅವರದ್ದೇ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಸರ್ಕಾರ ಅಮಾನತು ಮಾಡಿತ್ತು ಎಂದು ಹೇಳಿದರು.

ಇಂತಹ ಗಂಭೀರ ಆರೋಪಗಳ ನಡುವೆ ಇದೀಗ ಅಮಾನತು ಆದೇಶವನ್ನು ಹಿಂಪಡೆದು ಕರ್ತವ್ಯಕ್ಕೆ ಮರುನೇಮಕ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ರಾಜ್ಯದಲ್ಲಿ ನ್ಯಾಯಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ಇದೇ ವೇಳೆ, ಗೃಹ ಇಲಾಖೆಯನ್ನು ನಿಜವಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ನಡೆಸುತ್ತಿದ್ದಾರೋ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ನಡೆಸುತ್ತಿದ್ದಾರೋ ಎಂಬ ಅನುಮಾನ ವ್ಯಕ್ತಪಡಿಸಿದ ವಿಶ್ವನಾಥ್, ಅಮಾನತು ಆದೇಶ ಹಿಂಪಡೆಯಲು ದೊಡ್ಡ ಮಟ್ಟದ ಕಿಕ್‌ಬ್ಯಾಕ್ ನಡೆದಿರಬಹುದೆಂಬ ಶಂಕೆಯನ್ನೂ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಯಾವ ರೀತಿಯ ಆಡಳಿತ ನಡೆಯುತ್ತಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಆಸ್ಪತ್ರೆಯಲ್ಲೇ 9.7 ಲಕ್ಷ ಚಿನ್ನ ಕಳ್ಳತನ..! ನರ್ಸ್ ವೇಷದಲ್ಲಿ ಕೈಚಳಕ

ಬೆಂಗಳೂರು: ರೋಗಿಗಳ ಭದ್ರತೆ ಇರಬೇಕಾದ ಆಸ್ಪತ್ರೆಯಲ್ಲೇ ಕಳ್ಳತನ ನಡೆದಿರುವ ಘಟನೆ ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆಯೊಬ್ಬರ 9.7 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಅಲ್ಲಿನ ಮಹಿಳಾ ಸಿಬ್ಬಂದಿಯೇ ಕದ್ದಿರುವುದು ಬಹಿರಂಗವಾಗಿದೆ.

ಯಲಹಂಕ ನಿವಾಸಿಯಾದ 41 ವರ್ಷದ ವ್ಯಕ್ತಿಯೊಬ್ಬರು ನೀಡಿದ ದೂರಿನ ಪ್ರಕಾರ, ಮೇ 1ರಂದು ತಮ್ಮ ಪತ್ನಿಯನ್ನು ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಿದ್ದರು. ಆಪರೇಷನ್ ಮುನ್ನ ಆಭರಣಗಳನ್ನು ತೆಗೆದು ಕಪಾಟಿನಲ್ಲಿ ಇಡುವಂತೆ ನರ್ಸಿಂಗ್ ಸಿಬ್ಬಂದಿ ಸೂಚಿಸಿದ್ದರು. ಅದರಂತೆ 65 ಗ್ರಾಂ ಚಿನ್ನದ ಮಾಂಗಲ್ಯ ಸರ, 9 ಗ್ರಾಂ ಕಿವಿಯೋಲೆ ಮತ್ತು 10 ಗ್ರಾಂ ಬೆಳ್ಳಿ ಕಾಲುಗಜ್ಜೆಗಳನ್ನು ಬ್ಯಾಗ್‌ನಲ್ಲಿ ಇಟ್ಟು ವಾರ್ಡ್‌ನ ಕಪಾಟಿನಲ್ಲಿ ಇಡಲಾಗಿತ್ತು.

ಆದರೆ ಶಸ್ತ್ರಚಿಕಿತ್ಸೆ ಮುಗಿದ ಬಳಿಕ ಪರಿಶೀಲಿಸಿದಾಗ ಆಭರಣಗಳು ನಾಪತ್ತೆಯಾಗಿದ್ದವು. ಕಪಾಟು ಒಡೆದ ಗುರುತುಗಳೂ ಇಲ್ಲದ ಕಾರಣ ಆಸ್ಪತ್ರೆಯೊಳಗಿನವರ ಮೇಲೆಯೇ ಅನುಮಾನ ಮೂಡಿತ್ತು. ತಕ್ಷಣ ಆಸ್ಪತ್ರೆ ಆಡಳಿತಕ್ಕೆ ಮಾಹಿತಿ ನೀಡಲಾಗಿದ್ದು, ನಂತರ ಹೆಣ್ಣೂರು ಪೊಲೀಸರಿಗೆ ದೂರು ಸಲ್ಲಿಸಲಾಯಿತು.

ತನಿಖೆ ವೇಳೆ ಇತ್ತೀಚೆಗೆ ಕೆಲಸಕ್ಕೆ ಸೇರಿದ್ದ ಮಹಿಳಾ ಸಿಬ್ಬಂದಿಯೇ ಈ ಕಳ್ಳತನ ನಡೆಸಿರುವುದು ಬಹಿರಂಗವಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಕದ್ದ ಆಭರಣಗಳ ಪತ್ತೆಗಾಗಿ ಮುಂದಿನ ತನಿಖೆ ಚುರುಕುಗೊಂಡಿದೆ.

error: Content is protected !!