Home Blog Page 39

ಕೈಕೊಟ್ಟ ಪ್ರಿಯತಮೆ; ಡೆತ್ ನೋಟ್ ಬರೆದಿಟ್ಟು ಬಾಡಿ ಬಿಲ್ಡರ್ ಸೂಸೈಡ್!

0

ಬೆಂಗಳೂರು:- ಮಹಾಲಕ್ಷ್ಮಿ ಲೇಔಟ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರೀತಿಸಿದ ಯುವತಿ ಕೈ ಕೊಟ್ಟ ಹಿನ್ನೆಲೆ ಮನನೊಂದು ಬಾಡಿ ಬಿಲ್ಡರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

26 ವರ್ಷದ ಕಿರಣ್ ಮೃತ ಬಾಡಿ ಬಿಲ್ಡರ್. ಮೃತ ಕಿರಣ್ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಯುವತಿ ಬೇರೆ ಯುವಕನೊಂದಿಗೆ ತನ್ನ ಮದುವೆ ನಿಶ್ಚಯವಾಗಿದೆ ಎಂದು ಮದುವೆಯ ಆಮಂತ್ರಣ ಪತ್ರಿಕೆ ಹಾಗೂ ಹೊಸ ಸೀರೆಯನ್ನು ತೋರಿಸಿದ್ದಳು. ಇದರಿಂದ ಮನನೊಂದ ಕಿರಣ್ ಮನೆಗೆ ಬಂದು ರೂಂನ ಬಾಗಿಲು ಲಾಕ್ ಮಾಡಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯ ಡೋರ್ ಓಪನ್ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಯುವತಿಗೆ ಮದುವೆಯ ನಿಶ್ಚಯವಾಗಿರುವ ವಿಷಯ ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿರುವ ಕಿರಣ್, ಆತ್ಮಹತ್ಯೆಗೆ ಪ್ರೇಯಸಿ ಹಾಗೂ ಆಕೆಯ ತಾಯಿಯೇ ಕಾರಣ ಅಂತಾ ಬರೆದಿದ್ದು, ತನ್ನ ಮೊಬೈಲ್ ಪಾಸ್‌ವರ್ಡ್ ಅನ್ನು ಕೂಡ ಪತ್ರದಲ್ಲಿ ಉಲ್ಲೇಖಿಸಿ ಬಳಿಕ ನೇಣಿಗೆ ಶರಣಾಗಿದ್ದಾನೆ.

ರೋಟರಿ ಸಂಸ್ಥೆ ಗದಗ-ಬೆಟಗೇರಿಗೆ `ರೋಟರಿ ಜಿಲ್ಲಾ ಪ್ರಶಸ್ತಿ’

0

ವಿಜಯಸಾಕ್ಷಿ ಸುದ್ದಿ, ಗದಗ: 2024-25ನೇ ಸಾಲಿನಲ್ಲಿ ಗದಗ-ಬೆಟಗೇರಿ ರೋಟರಿ ಸಂಸ್ಥೆಯು ಕೈಗೊಂಡ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಗುರುತಿಸಿ ರೋಟರಿ ಜಿಲ್ಲೆ 3170 ಅನೇಕ ಪ್ರಶಸ್ತಿ ಹಾಗೂ ಮನ್ನಣೆ ನೀಡಿದೆ.

ಕೊಲ್ಹಾಪೂರದಲ್ಲಿ ನಡೆದ 67ನೇ ಜಿಲ್ಲಾ ಸಮ್ಮೇಳನದಲ್ಲಿ ಜಿಲ್ಲಾ ಮಾಜಿ ಗವರ್ನರ್ ರೊ. ಶರದ ಪೈಯವರು ಸಂಸ್ಥೆಗೆ ಉತ್ತಮ ಸದಸ್ಯರ ಸಂಯೋಜಕ ಸಂಸ್ಥೆ ಹಾಗೂ ಉತ್ತಮ ಸಾಮಾಜಿಕ ಸೇವೆ ಸಂಸ್ಥೆಯೆಂದು ಪ್ರಶಸ್ತಿ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಅಸಿಸ್ಟಂಟ್ ಗವರ್ನರ್ ರೊ. ಶಿವಾಚಾರ್ಯ ಎಸ್.ಹೊಸಳ್ಳಿಮಠರಿಗೆ ರೋಟರಿ ಕ್ಲಬ್ ಗದಗ -ಬೆಟಗೇರಿ, ರೋಟರಿ ಕ್ಲಬ್ ಗಜೇಂದ್ರಗಡ ಹಾಗೂ ಗದಗ ರೋಟರಿ ಸೆಂಟ್ರಲ್ ಸಂಸ್ಥೆಗಳಿಗೆ ಉತ್ತಮ ಮಾರ್ಗದರ್ಶನ ಹಾಗೂ ಸಲಹೆ ನೀಡಿದನ್ನು ಪರಿಗಣಿಸಿ ಉತ್ತಮ ಅಸಿಸ್ಟಂಟ್ ಗವರ್ನರ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಮಾಜಿ ಅಧ್ಯಕ್ಷರಾದ ರೊ. ಡಾ. ಆರ್.ಬಿ. ಉಪ್ಪಿನ, ಕಾರ್ಯದರ್ಶಿಗಳಾದ ರೊ. ಸಂತೋಷ ಅಕ್ಕಿ, ರೊ. ಶಿವಾಚಾರ್ಯ ಹೊಸಳ್ಳಿಮಠ, ಅಧ್ಯಕ್ಷರಾದ ರೊ. ಡಾ. ಆರ್.ಕೆ. ಗಚ್ಛಿನಮಠ, ರೊ. ಬಾಲಕೃಷ್ಣ ಕಾಮತ್, ರೊ. ಶ್ರೀಧರ ಸುಲ್ತಾನಪೂರ ಸಮ್ಮೇಳನದಲ್ಲಿ ಭಾಗವಹಿಸಿದ್ದರು. 2024-25 ನೇ ಸಾಲಿನ ಅಧ್ಯಕ್ಷರಾದ ರೊ. ಡಾ. ಆರ್.ಬಿ. ಉಪ್ಪಿನ ಎಲ್ಲ ಸದಸ್ಯರನ್ನು ಅಭಿನಂದಿಸಿದರು.

ಬಲ್ದೋಟ ವಿರೋಧಿ ಹೋರಾಟಕ್ಕೆ ಶತದಿನ ಪೂರ್ಣ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಚುನಾವಣೆ ಬಂದಾಗ ಇಡೀ ಕೊಪ್ಪಳ ಜನ ಚುನಾವಣೆ ಬಹಿಷ್ಕಾರದ ಘೋಷಣೆ ಮಾಡಬೇಕು, ಮತ ಹಾಕಲ್ಲ ಎಂದು ನಿರ್ಣಯಿಸಿ ಹೋರಾಡಬೇಕು ಎಂದು ಪೂಜ್ಯ ಶ್ರೀ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಕರೆ ನೀಡಿದರು.

ಅವರು ನಗರಸಭೆ ಹತ್ತಿರದ ಹೋರಾಟದ ವೇದಿಕೆಯ ಹಿಂದುಗಡೆ ನಿರ್ಮಿಸಿದ ಬೃಹತ್ ವೇದಿಕೆಯಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ನಡೆದ ಬಲ್ದೋಟ ಕಾರ್ಖಾನೆಗಳ ವಿರೋಧಿ ಧರಣಿ ಸತ್ಯಾಗ್ರಹದ 100ನೇ ದಿನದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಹಳ್ಳಿಗಳಿಗೆ ಭೇಟಿ ನೀಡಿದಾಗ ನಮಗೆ ಅಲ್ಲಿನ ನರಕ ಪರಿಚಯ ಆಯಿತು. ಮಹಾತ್ಮ ಗಾಂಧಿ ಅವರ ಸರ್ವೋದಯ ಪರಿಕಲ್ಪನೆಯಲ್ಲಿ ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಆಡಳಿತ ಸುಧಾರಣೆ ಆದರೆ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಎನ್ನಬಹುದು. ದುರಾದೃಷ್ಟವಶಾತ್ ಇಲ್ಲಿ ಇವುಗಳ ಸ್ಥಿತಿ ಏನಾಗಿದೆ ಎಂದು ಪ್ರಶ್ನಿಸಿದರು.

ಈ ಹೋರಾಟ ಯಶಸ್ವಿಯಾಗಬೇಕು ಅಂದರೆ ಜನ ಸಂಘಟನೆ ಆಗಬೇಕಿದೆ. ಆಗ ಮಾತ್ರ ಅದು ಸಾಧ್ಯ. ಗೆಲ್ಲಬೇಕು ಎಂದರೆ ನಡೆ-ನುಡಿ ಶುದ್ಧವಾಗಿರಬೇಕು. ಕಾರ್ಖಾನೆ ವಿಸ್ತರಣೆ ಮಾಡಬಾರದು, ಎಚ್ಚರಿಕೆ ಕೊಡಬೇಕು ಅಲ್ಲದೇ ನಿಗಾ ವಹಿಸಬೇಕು. ಫೆ. 24ರ ಹೋರಾಟಕ್ಕೆ ಎಲ್ಲಾ ಜನಪ್ರತಿನಿಧಿಗಳು ಬರಲಿ, ನಾವೂ ಬರುತ್ತೇವೆ. ಮುಖ್ಯಮಂತ್ರಿ ಅವರನ್ನು ಭೇಟಿ ಮಾಡೋಣ, ಹೋರಾಟ ನಿಲ್ಲಿಸಬೇಕಾದರೆ ಕಾರ್ಖಾನೆ ನಿಲ್ಲಿಸಬೇಕು ಎಂದರು.

ಕಾರ್ಖಾನೆಗಳ ವಿಸ್ತರಣೆ ಮತ್ತು ಹೊಸ ಕಾರ್ಖಾನೆಗಳ ಸ್ಥಾಪನೆ ವಿರೋಧಿಸಿ ನಡೆದ ಸುದೀರ್ಘ ಹೋರಾಟದ ಭಾಗವಾಗಿ 2025ರ ಫೆ. 24ರಂದು ಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಬಂದ್ ಮಾಡಿ ಹೋರಾಟ ಮಾಡಲಾದ ನೆನಪು ಹಾಗೂ ಹೋರಾಟ ತೀವ್ರಗೊಳಿಸುವ ನಿಟ್ಟಿನಲ್ಲಿ ಮತ್ತೊಮ್ಮೆ ಬೃಹತ್ ಹೋರಾಟ ಹಾಗೂ ಬಂದ್ ಕರೆ ಕೊಡಲಾಗಿದೆ. ಗವಿಮಠದಿಂದ ತಾಲೂಕು ಕ್ರೀಡಾಂಗಣದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಸುಮಾರು 10 ಸಾವಿರಕ್ಕೂ ಅಧಿಕ ಜನರು, ವಿದ್ಯಾರ್ಥಿಗಳು, ಮಹಿಳೆಯರು ಸೇರಿಸುವ ಗುರಿ ಇಡಲಾಗಿದೆ.

ಮುಖ್ಯ ಅತಿಥಿಗಳಾಗಿ ಧಾರವಾಡ ಸಾಹಿತಿ, ಚಿಂತಕ ರಂಜಾನ್ ದರ್ಗಾ, ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಲೂರು, ರಂಗಕರ್ಮಿ, ಕವಿ, ಸಾಹಿತಿ ಸೂರ್ಯಕಾಂತ ಗುಣಕಿಮಠ, ಧಾರವಾಡ ಸಾಹಿತಿ ಅಸ್ಲಂ ದರ್ಗಾ, ಮಹಿಳಾ ಧುರೀಣೆ ಜ್ಯೋತಿ ಎಂ.ಗೊಂಡಬಾಳ, ಸುಜಾತಾ ಗುರುರಾಜ ಹಲಗೇರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಆರೋಗ್ಯದ ಕುರಿತು ಮಾತನಾಡಿದರು. ಇದೇ ಸಮಯದಲ್ಲಿ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಡಾ. ಮಂಜುನಾಥ ಸಜ್ಜನ್ ನೇತೃತ್ವದಲ್ಲಿ ನಡೆಸಿದರು.

ಹೋರಾಟದಲ್ಲಿ ಡಿ.ಎಸ್. ಕೌಜಲಗಿ, ಎಚ್.ಎಸ್. ಪಾಟೀಲ್, ಎ.ಎಂ. ಮದರಿ, ಡಿ.ಎಂ. ಬಡಿಗೇರ, ಬಿ.ಜಿ. ಕರಿಗಾರ, ದಾನಪ್ಪ ಕವಲೂರು ಭಾಗ್ಯನಗರ, ಎಸ್.ಬಿ. ರಾಜೂರು, ಜಿ.ಬಿ. ಪಾಟೀಲ್, ಕಾವ್ಯಾ ಪ್ರಸನ್ನ ಗಡಾದ್, ಶಂಭುಲಿಂಗಪ್ಪ ಹಲಗೇರಿ, ಬಸವರಾಜ ಬಳ್ಳೊಳ್ಳಿ, ಪ್ರಭು ಹೆಬ್ಬಾಳ ವೇದಿಕೆಯಲ್ಲಿದ್ದರು.

ಮಂಜುನಾಥ ಜಿ.ಗೊಂಡಬಾಳ ಸ್ವಾಗತಿಸಿ, ಮಾತನಾಡಿದರು. ಪ್ರಾಸ್ತಾವಿಕವಾಗಿ ಶಿವಕುಮಾರ ಕುಕನೂರು, ಹೋರಾಟದ ಅನುಭವದ ನುಡಿಯನ್ನು ಡಿ.ಎಚ್. ಪೂಜಾರ ನುಡಿದರು.

ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆಗಳನ್ನು ಮುಚ್ಚಿಸಬೇಕು, ಅಲ್ಲಿಯವರೆಗೆ ಶುದ್ಧ ಸಂಸ್ಕರಿಸಿದ ನೀರನ್ನು ಜನ-ಜಾನುವಾರುಗಳಿಗೆ ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಬೇಕು. ಬಸಾಪುರ ಸಾರ್ವಜನಿಕ ಕೆರೆಯನ್ನು ಕೂಡಲೇ ಮರಳಿ ಜನರಿಗೆ ಬಿಟ್ಟು ಕೊಡಬೇಕು. ಭದ್ರಶ್ರೀ ಕಾರ್ಖಾನೆ ವಿಸ್ತರಣೆಗೆ ವಿರೋಧಿಸಿ ಹೋರಾಟ ತೀವ್ರಗೊಳಿಸುವುದು ಸೇರಿ ಇತರೆ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಡಂಬಳ: ನಮ್ಮ ದೇಶ ಸಾವಿರಾರು ದೇವರನ್ನು ಪೂಜಿಸುವ, ಆರಾಧಿಸುವ ಸಂಸ್ಕೃತಿ, ಪರಂಪರೆ, ಶ್ರೇಷ್ಠತೆಯ ಪ್ರತೀಕವಾಗಿದೆ. ಆ ಹಿನ್ನೆಲೆಯಲ್ಲಿ ಅಭಿವೃದ್ಧಿ ಜೊತೆಗೆ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಡಂಬಳ ಹೋಬಳಿಯ ಶಿವಾಜಿನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಂಡೂರ ಗ್ರಾಮದಲ್ಲಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಯೋಜನೆಯಡಿಯಲ್ಲಿ ಲೋಕಾಮಸಂದ ದೇವಸ್ಥಾನದ ಕಾಮಗಾರಿ, ಶ್ರೀ ಸೇವಾಲಾಲ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿ, ಗುರೇಶ ಲಕ್ಕವ್ವ ದೇವಸ್ಥಾನದ ಜೀರ್ಣೋದ್ಧಾರ, ಗಿರೀಶ್ ಸೋಮಲಪ್ಪ ನಾಯಕ ಇವರ ಮನೆಯಿಂದ ಚಂದ್ರು ಲಾಲಪ್ಪ ನಾಯಕ ಇವರ ಮನೆಯವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಸರ್ಕಾರದ ಅಭಿವೃದ್ಧಿ ಕೆಲಸಗಳು ಉಳಿಯುತ್ತವೆ. ಟೀಕೆಗಳು ಸಾಯುತ್ತವೆ. ಆದ್ದರಿಂದ ಯಾವುದೇ ಟೀಕೆಗೆ ಎದೆಗುಂದದೆ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳು ಜನರನ್ನು ತಲುಪುತ್ತಿವೆ. ಚುನಾವಣಾ ಸಂದರ್ಭದಲ್ಲಿ ರಾಜ್ಯದ ಜನರಿಗೆ ಭರವಸೆ ನೀಡಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ರಾಜ್ಯದ ಎಲ್ಲಾ ಜನರಿಗೆ ಒಂದಲ್ಲ ಒಂದು ಸೌಲಭ್ಯಗಳು ತಲುಪುವಂತೆ ಮಾಡುವಲ್ಲಿ ಸರ್ಕಾರ ಶ್ರಮಿಸುತ್ತಿದೆ. ರಾಜ್ಯದಲ್ಲಿ 56 ಸಾವಿರ ಕೋಟಿ ರೂ.ಗಳನ್ನು ವಾರ್ಷಿಕವಾಗಿ ಗ್ಯಾರಂಟಿ ಯೋಜನೆಗೆ ಬಳಸಲಾಗುತ್ತಿದೆ. ಶಕ್ತಿ ಯೋಜನೆಯಡಿ ರಾಜ್ಯದಲ್ಲಿ 600 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ.

ಮುಂದೆ ಬರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ, ಉಪಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಈಶಪ್ಪ ಓಲಿ, ಮುಖಂಡರಾದ ಮಹೇಶ ಗಡಗಿ, ಕುಬೇರ ನಾಯಕ, ಬಸವರಡ್ಡಿ ಬಂಡಿಹಾಳ, ಗೋಪಾಲ ಲಮಾಣಿ, ಬಾಬುಸಾಬ ಮೂಲಿಮನಿ, ಮಲ್ಲಿಕಾರ್ಜುನ ಪ್ಯಾಟಿ, ತೇಜಪ್ಪ ರಾಮಚಂದ್ರಪ್ಪ, ಗೋವಿಂದ ಲಮಾಣಿ, ನಾಗರಾಜ ಸಜ್ಜನ, ಶರಣಪ್ಪ ಚೆನ್ನಳ್ಳಿ, ಆನಂದ ಲಮಾಣಿ, ಕುಬೇರ ಲಮಾಣಿ, ಶಿವಪ್ಪ ನಾಯಕ, ಮಲ್ಲೇಶ ಲಮಾಣಿ, ಸಂತೋಷ ಲಮಾಣಿ, ಠಾಕೋರ ಲಮಾಣಿ, ಶಂಕ್ರಪ್ಪ ಲಮಾಣಿ, ಗಂಗಪ್ಪ ಲಮಾಣಿ, ಸೋಮು ನಾಯಕ ತಹಸೀಲ್ದಾರ ಯರಿಸ್ವಾಮಿ, ಸಿಪಿಐ ಯಶವಂತ ಬಿಸನಳ್ಳಿ, ಜಿ.ಪಂ ಕಾರ್ಯನಿರ್ವಾಹಕ ಅಭಿಯಂತರ ನರಲೇಕರ, ಆರ್‌ಡಬ್ಲುಎಸ್ ಮಂಜುನಾಥ ಕಲಬುರ್ಗಿ, ಕಂದಾಯ ಅಧಿಕಾರಿ ಪ್ರಭು ಬಾಗಲಿ ಸೇರಿದಂತೆ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಇದ್ದರು.

ಸರ್ಕಾರಿ ಬಸ್‌ನಲ್ಲಿ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಓಡಾಡಬಹುದಾಗಿದೆ. 200 ಯೂನಿಟ್‌ವರೆಗೆ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರ ರೂ. ಕಲ್ಪಿಸಲಾಗುತ್ತದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ರ ನೇತೃತ್ವದ ಸರ್ಕಾರ ಯಾವುದೇ ಧರ್ಮ, ಜಾತಿ ನೋಡಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಸರ್ಕಾರದ ಗ್ಯಾರಂಟಿ ಯೋಜನೆಗಳು ಎಲ್ಲಾ ಜನರಿಗೂ ತಲುಪುತ್ತಿದ್ದು, ನುಡಿದಂತೆ ನಡೆಯುತ್ತಿರುವ ಸರ್ಕಾರ ನಮ್ಮದಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಶಿವಮೊಗ್ಗ| ಖಾಸಗಿ ಆಸ್ಪತ್ರೆಯಲ್ಲಿ ಮೃಗಾಲಯದ 15 ವರ್ಷದ ಗಂಡು ಚಿರತೆಗೆ ಸ್ಕ್ಯಾನಿಂಗ್!

0

ಶಿವಮೊಗ್ಗ:- ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಅನಾರೋಗ್ಯಕ್ಕೀಡಾದ 15 ವರ್ಷದ ಗಂಡು ಚಿರತೆಯನ್ನು ತುರ್ತಾಗಿ ನಂಜಪ್ಪ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಮಾಡಲಾಯಿತು.

ಕಳೆದ ಎರಡು ದಿನದಿಂದ ಚಿರತೆ ನಿತ್ರಾಣಗೊಂಡಿದ್ದದರಿಂದ, ಮೃಗಾಲಯದ ವೈದ್ಯರು ತುರ್ತಾಗಿ ಸ್ಕ್ಯಾನಿಂಗ್‌ ಅಗತ್ಯವಿದೆ ಎಂದು ಸೂಚಿಸಿದ್ದರು. ಶಿವಮೊಗ್ಗ ಮೃಗಾಲಯದಲ್ಲಿ ಹಾಗೂ ಪಶುವೈದ್ಯಕೀಯ ಕಾಲೇಜಿನಲ್ಲಿ ಎಂಆರ್‌ಐ ಸೌಲಭ್ಯದ ಕೊರತೆ ಇದ್ದುದರಿಂದ, ಚಿರತೆಯನ್ನು ಮಂಪರು ಇಂಜೆಕ್ಷನ್ ನೀಡಿ ಮೃಗಾಲಯದ ವಾಹನದಲ್ಲಿ ನಂಜಪ್ಪ ಆಸ್ಪತ್ರೆಗೆ ಕರೆತಂದು, ಬೆಳಗಿನ ಹೊತ್ತಿನಲ್ಲಿ ಜನ ಹೆಚ್ಚಿರುವ ಹಿನ್ನೆಲೆಯಲ್ಲಿ ಮಧ್ಯರಾತ್ರಿಯಲ್ಲಿಯೇ ಸ್ಕ್ಯಾನಿಂಗ್‌ ಮಾಡಲಾಯಿತು.

ಸ್ಕ್ಯಾನಿಂಗ್ ಪ್ರಕ್ರಿಯೆ ಸುಮಾರು ಅರ್ಧ ಗಂಟೆ ನಡೆಯಿತು.

ಬಾಲಮಂದಿರದಲ್ಲೇ ಪೋಕ್ಸೋ ಸಂತ್ರಸ್ತ ಬಾಲಕಿ ಆತ್ಮಹತ್ಯೆಗೆ ಯತ್ನ!

0

ಕಾರವಾರ:- ಕಾರವಾರದ ಸರ್ಕಾರಿ ಬಾಲಮಂದಿರದಲ್ಲಿ ಪೋಕ್ಸೋ ಸಂತ್ರಸ್ತ ಬಾಲಕಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಿಂದ ಬಾಲ ಮಂದಿರದ ರಕ್ಷಣಾ ವ್ಯವಸ್ಥೆಯ ಲೋಪ ಎತ್ತಿ ತೋರಿಸಿದೆ.

ಮೂಲತಃ ಹಳಿಯಾಳ ತಾಲೂಕಿನವಳಾದ ಈ ಬಾಲಕಿ, ಕಳೆದ ಆಗಸ್ಟ್‌ನಲ್ಲಿ ಪೋಕ್ಸೋ ಪ್ರಕರಣವೊಂದರ ಅಡಿಯಲ್ಲಿ ರಕ್ಷಿಸಿ ಕಾರವಾರದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಬಾಲಮಂದಿರಕ್ಕೆ ದಾಖಲಿಸಲಾಗಿತ್ತು.

ಈಕೆ ಕಾರವಾರದ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಆದರೆ, ಮಾನಸಿಕ ಒತ್ತಡದ ಕಾರಣ ಕಳೆದ ಎರಡು ವಾರಗಳಿಂದ ಶಾಲೆಗೆ ಹೋಗದೆ ಬಾಲಮಂದಿರದಲ್ಲಿಯೇ ಉಳಿದುಕೊಂಡಿದ್ದಳು. ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ, ಯಾರೂ ಇಲ್ಲದ ಸಮಯ ನೋಡಿ ಮೇಲಿನ ಕೋಣೆಗೆ ತೆರಳಿ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾಳೆ. ತಕ್ಷಣ ಗಮನಿಸಿದ ಸಿಬ್ಬಂದಿ ಆಕೆಯನ್ನು ರಕ್ಷಿಸಿ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಆಕೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಬಾಲಮಂದಿರದಲ್ಲಿ 20 ಬಾಲಕಿಯರಿಗೆ 10 ಮಂದಿ ಸಿಬ್ಬಂದಿ ಇದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ಸಿಬ್ಬಂದಿ ಇದ್ದರೂ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪದೇ ಪದೇ ಬೆದರಿಕೆ ಹಾಕುತ್ತಿದ್ದ ಬಾಲಕಿ ಒಬ್ಬಂಟಿಯಾಗಿ ಬಿಟ್ಟಿರುವುದೇ ತಪ್ಪು. ವಿವಿಧ ಪ್ರಕರಣಗಳಲ್ಲಿ ಸಂತ್ರಸ್ತರಾಗಿ ಬರುವ ಮಕ್ಕಳಿಗೆ ಕೇವಲ ಆಶ್ರಯ ನೀಡಿದರೆ ಸಾಲದು, ಅವರಿಗೆ ಮಾನಸಿಕ ಧೈರ್ಯ ತುಂಬುವ ತಜ್ಞರ ಅವಶ್ಯಕತೆ ಇಂತಹ ಕೇಂದ್ರಗಳಲ್ಲಿ ಹೆಚ್ಚಾಗಿರುತ್ತದೆ.

ಇದೀಗ ಬಾಲಕಿಯ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆದರೆ, ಈ ಘಟನೆಯ ನಂತರ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಬಾಲಮಂದಿರದ ಭದ್ರತೆ ಮತ್ತು ಮಕ್ಕಳ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳಬೇಕಿದೆ.

ಉಡುಪಿ ಶ್ರೀಕೃಷ್ಣನ ಮಠಕ್ಕೆ ಭೇಟಿ ಕೊಟ್ಟ ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡ!

0

ಉಡುಪಿ:- ವಿಶ್ವಕಪ್ ಗೆದ್ದ ಅಂಧ ಮಹಿಳೆಯರ ಕ್ರಿಕೆಟ್ ತಂಡದ ಆಟಗಾರ್ತಿಯರು ಇಂದು ಉಡುಪಿ ಶ್ರೀ ಕೃಷ್ಣನ ಮಠಕ್ಕೆ ಭೇಟಿ ನೀಡಿದರು.

ನೇಪಾಳವನ್ನು ಮಣಿಸಿ ಅಂಧ ಮಹಿಳೆಯರ ಚೊಚ್ಚಲ ಟಿ-20 ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರ್ತಿಯರು ಇಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದುಕೊಂಡಿದ್ದಾರೆ.

ವಿಜೇತ ಆಟಗಾರ್ತಿಯರು ಕನಕನ ಕಿಂಡಿಯ ಮೂಲಕ ದೇವರಿಗೆ ಕೈಮುಗಿದು ಭಕ್ತಿಭಾವ ತೋರಿದರು. ಪರ್ಯಾಯ ಶ್ರೀ ಶಿರೂರು ಮಠದ ವೇದವರ್ಧನ ತೀರ್ಥರು ತಂಡಕ್ಕೆ ಗೌರವಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ, ತಂಡದ ಸದಸ್ಯರು ಶ್ರೀಗಳೊಂದಿಗೆ ತಮ್ಮ ಸಾಧನೆ, ಅನುಭವಗಳು ಮತ್ತು ಮುಂದಿನ ಕಾರ್ಯಕ್ರಮಗಳ ಕುರಿತು ಸಮಾಲೋಚನೆ ನಡೆಸಿದರು. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಕೂಡ ಈ ಸಂದರ್ಭದಲ್ಲಿ ಆಟಗಾರ್ತಿಯರೊಂದಿಗೆ ಮಾತನಾಡಿ, ಅವರ ಪ್ರಯತ್ನಗಳನ್ನು ಮೆಚ್ಚಿ ಪ್ರೋತ್ಸಾಹ ನೀಡಿದರು.

ಮಠದಲ್ಲಿ ಪ್ರಸಾದ ಸ್ವೀಕರಿಸಿದ ತಂಡ, ನಾಳೆ ನಡೆಯಲಿರುವ ಮಣಿಪಾಲ್ ಮ್ಯಾರಥಾನ್‌ನಲ್ಲಿ ಭಾಗವಹಿಸಲು ಸಿದ್ಧತೆಗೊಳಗಾದರು. ಈ ಭೇಟಿ ಮೂಲಕ ಅಂಧ ಮಹಿಳೆಯರ ಕ್ರಿಕೆಟ್ ತಂಡದ ಸಾಧನೆಗೆ ಉಡುಪಿ ವಾಸಿಗಳಿಂದ ಶುಭಾಶಯ ಕೋರಲಾಗಿದೆ.

‘ವ್ಯಾಲಂಟೈನ್ ಡೇ’ ಅನಾಚಾರಗಳನ್ನು ತಡೆಗಟ್ಟಲು ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ಫೆಬ್ರವರಿ 14ರಂದು ‘ವ್ಯಾಲಂಟೈನ್ ಡೇ’ ಆಚರಿಸುವ ಪಾಶ್ಚಾತ್ಯರ ಕೆಟ್ಟ ರೂಢಿ ಭಾರತದಲ್ಲಿಯೂ ವ್ಯಾಪಕವಾಗಿ ಹರಡಿದೆ. ಪಾಶ್ಚಾತ್ಯರು ತಮ್ಮ ವ್ಯಾವಹಾರಿಕ ಲಾಭಕ್ಕಾಗಿ ಪ್ರೇಮದ ಹೆಸರಿನಲ್ಲಿ ಈ ವಿಕೃತ ಕಲ್ಪನೆಯನ್ನು ಪ್ರಚಾರ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಯುವ ಪೀಳಿಗೆ ಅನೈತಿಕತೆಯತ್ತ ಸಾಗುತ್ತಿದೆ. ‘ವ್ಯಾಲಂಟೈನ್ ಡೇ’ ಹಿನ್ನೆಲೆಯಲ್ಲಿ ಯುವತಿಯರ ಮೇಲಿನ ಕಿರುಕುಳ ಹಾಗೂ ಹಲವಾರು ಹಿಂಸಾತ್ಮಕ ಘಟನೆಗಳು ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ವ್ಯಾಲಂಟೈನ್ ಡೇ ವೇಳೆ ಪಾರ್ಟಿಗಳಲ್ಲಿ ಯುವಕ-ಯುವತಿಯರು ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಸೇವನೆ ಮುಂತಾದ ಅನಾಚಾರಗಳಲ್ಲಿ ತೊಡಗುವುದು ಬೆಳಕಿಗೆ ಬಂದಿದೆ. ಯುವತಿಯರನ್ನು ಪ್ರಭಾವಿತರನ್ನಾಗಿಸಲು ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುವುದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅಲ್ಲದೆ, ಸುಳ್ಳು ಹೆಸರು ಹೇಳಿ ಯುವತಿಯರಿಗೆ ಮೋಸ ಮಾಡುವವರು ‘ಲವ್ ಜಿಹಾದ್’ ಮೂಲಕ ಅವರ ಬದುಕನ್ನು ಹಾಳು ಮಾಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಫೆಬ್ರವರಿ 14ರಂದು ನಗರದಲ್ಲಿ ವಿಶೇಷ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಕಾಲೇಜು ಆವರಣಗಳಲ್ಲಿ ಕಾನೂನು ವಿರೋಧಿ ಕೃತ್ಯಗಳಲ್ಲಿ ತೊಡಗುವವರ ಮೇಲೆ ನಿಗಾ ಇಡಬೇಕು, ಅತಿವೇಗದಲ್ಲಿ ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆಪತ್ತಿನ ಸಂದರ್ಭಗಳಲ್ಲಿ ಯುವತಿಯರಿಗೆ ಸಹಾಯ ಮಾಡಲು ವಿಶೇಷ ಹೆಲ್ಪ್ಲೈನ್ ನಂಬರ್‌ನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ರಾಣಿ ಚಂದಾವರಿ, ಮಹೇಶ್ ಜಾದವ, ಭೀಮಸಿ ಗೋಕಾವಿ, ಹಿಂದೂ ಜನಜಾಗೃತಿ ಸಮಿತಿಯ ಡಾ. ರವಿ ನಂದಿ, ಲಕ್ಷ್ಮೀ ಇತರರು ಉಪಸ್ಥಿತರಿದ್ದರು.

ಲಕ್ಕುಂಡಿ ಪಾರಂಪರಿಕ ತಾಣಗಳಿಗೆ ಹೈಕೋರ್ಟ್ ಆಡಳಿತಾತ್ಮಕ ನ್ಯಾಯಾಧೀಶ ನ್ಯಾ.ಜಿ. ಬಸವರಾಜ ಭೇಟಿ

0

ಗದಗ: ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಾಧೀಶರಾದ ನ್ಯಾ.ಮೂ. ಜಿ. ಬಸವರಾಜ ಅವರು ಶನಿವಾರ ಲಕ್ಕುಂಡಿಯಲ್ಲಿ ವಸ್ತು ಸಂಗ್ರಹಾಲಯ, ಜೈನ್ ಬಸದಿ, ಕೋಟೆ ವೀರಭದ್ರೇಶ್ವರ ದೇವಸ್ಥಾನ ಹಾಗೂ ಉತ್ಖನನದ ಸ್ಥಳಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಗದಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ನಾಗವೇಣಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಜಿ. ಕಲ್ಲೂರ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಡಾ. ಶರಣು ಗೋಗೇರಿ, ಸಮಿತಿ ಸದಸ್ಯರಾದ ಅ.ದ. ಕಟ್ಟಿಮನಿ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಸಮಾವೇಶದ ಯಶಸ್ಸಿಗೆ ಇಲಾಖೆಗಳ ಸಹಕಾರ ಅಗತ್ಯ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಗದಗ ಜಿಲ್ಲಾ ಮಟ್ಟದ ಸಮಾವೇಶ ಕಾರ್ಯಕ್ರಮವನ್ನು ಫೆಬ್ರವರಿ 18ರಂದು ನಗರದ ವಿವೇಕಾನಂದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಮಾವೇಶವನ್ನು ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ನಿರ್ವಹಿಸಿ ಯಶಸ್ವಿಗೊಳಿಸಲು ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಪಂಚ ಗ್ಯಾರಂಟಿ ಯೋಜನೆಗಳ ಗದಗ ಜಿಲ್ಲಾ ಮಟ್ಟದ ಸಮಾವೇಶ ಏರ್ಪಡಿಸುವ ಕುರಿತು ಜರುಗಿದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಲು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಆಯಾ ಸಮಿತಿಯ ಅಧಿಕಾರಿಗಳು ತಮಗೆ ವಹಿಸಿದ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಕಾರ್ಯಕ್ರಮದ ಸ್ಥಳವು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಶಿಷ್ಟಾಚಾರದನ್ವಯ ಆಮಂತ್ರಣ ಪತ್ರಿಕೆ ಮುದ್ರಣಕ್ಕೆ ಕ್ರಮ ವಹಿಸಬೇಕು. ಕಾರ್ಯಕ್ರಮದ ಸ್ಥಳದಲ್ಲಿ ಸೂಕ್ತ ಆಸನದ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಇರುವಂತೆ ನೋಡಿಕೊಳ್ಳಬೇಕು. ಪಂಚ ಗ್ಯಾರಂಟಿ ಯೋಜನೆಗಳ ಹಾಗೂ ವಿವಿಧ ಇಲಾಖೆಗಳ ಯೋಜನೆಗಳ ಕುರಿತು ಬಿಂಬಿಸುವ ಮಳಿಗೆಗಳನ್ನು (ಸ್ಟಾಲ್‌ಗಳನ್ನು) ನಿರ್ಮಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ನಿರ್ದೇಶನ ನೀಡಿದರು.

ಸಭೆಯಲ್ಲಿ ಬ್ಯಾನರ್‌ಗಳ ಅಳವಡಿಕೆ, ಕಲಾ ತಂಡಗಳ ಆಯ್ಕೆ, ಊಟ-ಉಪಹಾರದ ವ್ಯವಸ್ಥೆ, ಸೂಕ್ತ ಬಂದೋಬಸ್ತ್, ತುರ್ತು ವೈದ್ಯಕೀಯ ಸೇವೆ, ಫಲಾನುಭವಿಗಳ ಯಶೋಗಾಥೆ, ಸಾರಿಗೆ ವ್ಯವಸ್ಥೆ, ಎಲ್.ಇ.ಡಿ ಅಳವಡಿಕೆ, ವೇದಿಕೆ ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮ ಕುರಿತಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಜಿ.ಪಂ ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ, ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ, ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ಮಲ್ಲೂರ ಬಸವರಾಜ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಮಾತನಾಡಿ, ಸಮಾವೇಶ ಕಾರ್ಯಕ್ರಮವು ಯಾವುದೇ ಲೋಪದೋಷಗಳಿಲ್ಲದಂತೆ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಜರುಗುವಂತೆ ನೋಡಿಕೊಳ್ಳಬೇಕು ಎಂದರು.

error: Content is protected !!