Home Blog Page 44

ಸೂರಜ್ ಹೆಗ್ಡೆ ನಿಧನಕ್ಕೆ ರಾಹುಲ್ ಗಾಂಧಿ ಅಂತಿಮ ನಮನ: ಡಾಲರ್ಸ್ ಕಾಲೋನಿ ನಿವಾಸಕ್ಕೆ ಭೇಟಿ

ಬೆಂಗಳೂರು: ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾಗಿದ್ದ ಸೂರಜ್ ಹೆಗ್ಡೆ ಅವರ ನಿಧನಕ್ಕೆ ಕಾಂಗ್ರೆಸ್ ನಾಯಕರು ಸಂತಾಪ ಸೂಚಿಸಿದ್ದು, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ಬೆಂಗಳೂರಿನಲ್ಲಿ ಅಂತಿಮ ನಮನ ಸಲ್ಲಿಸಿದರು.

ದೆಹಲಿ ಪ್ರವಾಸದಿಂದ ಬೆಂಗಳೂರಿಗೆ ಆಗಮಿಸಿದ ರಾಹುಲ್ ಗಾಂಧಿ, ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಸೂರಜ್ ಹೆಗ್ಡೆ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಈ ವೇಳೆ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಉಪಸ್ಥಿತರಿದ್ದರು.

ಸೂರಜ್ ಹೆಗ್ಡೆ ಅವರು ಜೂನ್ 7ರಂದು ಹೃದಯಾಘಾತಕ್ಕೆ ಒಳಗಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಮುಂದುವರಿದರೂ ಫಲಕಾರಿಯಾಗದೆ ಅವರು ನಿಧನರಾಗಿದ್ದರು. ಅವರ ಅಗಲಿಕೆ ಕಾಂಗ್ರೆಸ್ ಪಕ್ಷದಲ್ಲಿ ಶೋಕದ ವಾತಾವರಣ ಸೃಷ್ಟಿಸಿದೆ.

ಸೂರಜ್ ಹೆಗ್ಡೆ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಮೊಮ್ಮಗರಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಅವರು ಎಐಸಿಸಿ ಕಾರ್ಯದರ್ಶಿ, ಕೆಪಿಸಿಸಿ ಉಪಾಧ್ಯಕ್ಷ ಹಾಗೂ ತಮಿಳುನಾಡು ಮತ್ತು ಪುದುಚೇರಿ ಕಾಂಗ್ರೆಸ್ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದರು.

ರಾಜಕೀಯ ಜೀವನದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ, ಕಾರ್ಮಿಕರ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ನಿರಂತರವಾಗಿ ಕೆಲಸ ಮಾಡಿದ್ದ ಸೂರಜ್ ಹೆಗ್ಡೆ, ಪಕ್ಷದ ಸಂಘಟನಾತ್ಮಕ ಬಲವರ್ಧನೆಗೂ ಮಹತ್ವದ ಕೊಡುಗೆ ನೀಡಿದ್ದರು.

ಅರ್ಜುನ ಗುರೂಜಿ ದರ್ಶನ ಪಡೆದ ಅಂಡರ್-19 ತಂಡದ ನಾಯಕ ಆಯುಷ್ ಮಾತ್ರೆ

0

ಮೈಸೂರು: ಭಾರತೀಯ ಅಂಡರ್-19 ಕ್ರಿಕೆಟ್ ತಂಡದ ನಾಯಕ ಆಯುಷ್ ಮಾತ್ರೆ ಅವರು ಮೈಸೂರಿಗೆ ಭೇಟಿ ನೀಡಿ ಅವಧೂತ ಶ್ರೀ ಅರ್ಜುನ ಗುರೂಜಿ ಅವರ ಆಶೀರ್ವಾದ ಪಡೆದಿದ್ದಾರೆ. ಕುಟುಂಬ ಹಾಗೂ ಸ್ನೇಹಿತರೊಂದಿಗೆ ಗುರು ನಿವಾಸಕ್ಕೆ ಆಗಮಿಸಿದ ಅವರು, ಗುರೂಜಿಗಳೊಂದಿಗೆ ಸಮಯ ಕಳೆಯುವ ಮೂಲಕ ಆಶೀರ್ವಾದ ಸ್ವೀಕರಿಸಿದರು.

ಇದರ ಬೆನ್ನಲ್ಲೇ ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ವತಿಯಿಂದ ನಡೆದ ಲಲಿತಾ ಪರಮೇಶ್ವರಿ ಅಮ್ಮನವರ ಹರಿದ್ರಾ ಅರ್ಚನೆ ಕಾರ್ಯಕ್ರಮದಲ್ಲೂ ಭಾಗವಹಿಸಿದ ಆಯುಷ್ ಮಾತ್ರೆ, ವಿಶೇಷ ಪೂಜೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾದರು.

ಕ್ರಿಕೆಟ್ ವಲಯದಲ್ಲಿ ಈಗಾಗಲೇ ತನ್ನದೇ ಛಾಪು ಮೂಡಿಸಿರುವ ಆಯುಷ್ ಮಾತ್ರೆ, ಏಷ್ಯಾಕಪ್ ಹಾಗೂ ದೇಶೀಯ ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಇರಾನಿ ಕಪ್‌ನಲ್ಲಿ ಸಿಡಿಸಿದ 176 ರನ್‌ಗಳ ಅದ್ಭುತ ಇನ್ನಿಂಗ್ಸ್ ಅವರ ಪ್ರತಿಭೆಗೆ ಸಾಕ್ಷಿಯಾಗಿದೆ.

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಅವಕಾಶ ಪಡೆದಿದ್ದ ಯುವ ಬ್ಯಾಟರ್, ತನ್ನ ಆಕ್ರಮಣಕಾರಿ ಆಟದ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಕ್ರೀಡಾ ಸಾಧನೆಗಳ ನಡುವೆಯೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆಯುಷ್ ಮಾತ್ರೆ ಅವರ ಭೇಟಿ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಅಕ್ರಮ ಮಣ್ಣು ಗಣಿಗಾರಿಕೆಯ ಹೊಂಡದಲ್ಲಿ ಬಿದ್ದು ವ್ಯಕ್ತಿ ಸಾವು: ಕೋಟುಮಚಗಿಯಲ್ಲಿ ಆಡಳಿತ ವಿರುದ್ದ ಆಕ್ರೋಶ

ಗದಗ: ಮಳೆಗಾಲ ಆರಂಭವಾಗಿದ್ದರೂ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿರುವ ದುಸ್ಥಿತಿ ಗದಗ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಬಯಲಾಗಿದೆ. ನೀರು ತರಲು ತೆರಳಿದ್ದ ವ್ಯಕ್ತಿಯೊಬ್ಬ ಅಕ್ರಮ ಮಣ್ಣು ಗಣಿಗಾರಿಕೆ ನಡೆಸಿ ಬಿಟ್ಟಿದ್ದ ಆಳವಾದ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ಚೆನ್ನಯ್ಯ ಬಳಗೇರಮಠ (55) ಮೃತ ದುರ್ದೈವಿ. ಜೂನ್ 2 ರಂದು ಘಟನೆ ನಡೆದಿದ್ದು, ಇದೀಗ ಪ್ರಕರಣದ ವಿರುದ್ಧ ಗ್ರಾಮಸ್ಥರ ಆಕ್ರೋಶ ಭುಗಿಲೆದ್ದಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಸುಮಾರು 3 ಕಿಲೋ ಮೀಟರ್ ದೂರದಲ್ಲಿರುವ ಹೊಂಡಗಳಿಗೆ ಹೋಗಿ ನೀರು ತರಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.

ಇದೇ ವೇಳೆ ಅಕ್ರಮ ಮಣ್ಣು ಗಣಿಗಾರಿಕೆ ನಡೆಸಿದ ದಂಧೆಕೋರರು 30 ರಿಂದ 40 ಅಡಿ ಆಳದ ಬೃಹತ್ ಹೊಂಡಗಳನ್ನು ನಿರ್ಮಿಸಿದ್ದು, ಅವೇ ಈಗ ಜೀವಹಾನಿಗೆ ಕಾರಣವಾಗುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.

ಕೋಟುಮಚಗಿ ಗ್ರಾಮದ ಸುತ್ತ ನಾಲ್ಕೈದು ಭಾರೀ ಅಕ್ರಮ ಗಣಿಗಾರಿಕೆ ಹೊಂಡಗಳಿದ್ದು, ಅವು “ಸಾವಿನ ಹೊಂಡ”ಗಳಾಗಿ ಪರಿಣಮಿಸಿವೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಗಣಿ ಇಲಾಖೆ ಹಾಗೂ ಜಿಲ್ಲಾಡಳಿತದ ಗಮನಕ್ಕೆ ಹಲವು ಬಾರಿ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ತಿಂಗಳು ಪಕ್ಕದ ತಿಮ್ಮಾಪೂರ ಗ್ರಾಮದಲ್ಲೂ ಇದೇ ರೀತಿಯ ಹೊಂಡದಲ್ಲಿ ನೀರು ತರಲು ತೆರಳಿದ್ದ ಇಬ್ಬರು ಬಾಲಕಿಯರು ಬಿದ್ದು ಮೃತಪಟ್ಟ ಘಟನೆ ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ. ಆದರೂ ಗಣಿ ಇಲಾಖೆ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಗದಗ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಇಂತಹ ಅಕ್ರಮ ಗಣಿಗಾರಿಕೆ ಹೊಂಡಗಳಲ್ಲಿ ಬಿದ್ದು ಐದಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಆದರೂ ಅಧಿಕಾರಿಗಳು ತಲೆಕೆಡಿಸಿಕೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. “ಯಾಮಾರಿದ್ರೆ ಶಿವನಪಾದ ಸೇರೋದು ಪಕ್ಕಾ” ಎಂಬ ಭಯ ಜನರಲ್ಲಿ ಮನೆ ಮಾಡಿದೆ.

ಮೃತ ಚೆನ್ನಯ್ಯ ಕುಟುಂಬದ ಆಧಾರಸ್ತಂಭವಾಗಿದ್ದರು. ಅವರ ಸಾವಿನಿಂದ ಕುಟುಂಬ ಕಂಗಾಲಾಗಿದ್ದು, ಸೌಜನ್ಯಕ್ಕೂ ಜಿಲ್ಲಾಡಳಿತದ ಯಾವುದೇ ಅಧಿಕಾರಿ ಭೇಟಿ ನೀಡಿ ಸಾಂತ್ವಾನ ಹೇಳಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಬೇಕು, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಮೃತ ಕುಟುಂಬಕ್ಕೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಂಚನೆ ಹಣದಲ್ಲಿ ಸ್ಟಾರ್‌ಗಳ ಕಾರ್ಯಕ್ರಮ? ಶಿವಂ ಕೇಸ್‌ನಲ್ಲಿ ನಟ-ನಟಿಯರಿಗೆ ಸಿಐಡಿ ಸಮನ್ಸ್ ಸಾಧ್ಯತೆ

ಬೆಳಗಾವಿ: ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣದ ತನಿಖೆ ಹೊಸ ತಿರುವು ಪಡೆದುಕೊಂಡಿದ್ದು, ಹೂಡಿಕೆದಾರರ ಹಣದಲ್ಲಿ ಸ್ಯಾಂಡಲ್‌ವುಡ್ ತಾರೆಯರನ್ನು ಕರೆಸಿ ಅದ್ದೂರಿ ಕಾರ್ಯಕ್ರಮ ನಡೆಸಲಾಗಿದೆ ಎಂಬ ಅನುಮಾನ ತನಿಖಾ ಸಂಸ್ಥೆಗಳ ಗಮನ ಸೆಳೆದಿದೆ. ಈ ಹಿನ್ನೆಲೆಯಲ್ಲಿ ಹಲವು ಖ್ಯಾತ ನಟ-ನಟಿಯರಿಗೆ ಸಿಐಡಿ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ.

ಕೋಟ್ಯಂತರ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ ಶಿವಾನಂದ ನೀಲಣ್ಣವರ್ ಆಯೋಜಿಸಿದ್ದ ‘ಬೆಳಗಾವಿ ಹಬ್ಬ’ ಕಾರ್ಯಕ್ರಮ ಇದೀಗ ತನಿಖೆಯ ಕೇಂದ್ರಬಿಂದುವಾಗಿದೆ. ಸಾರ್ವಜನಿಕರಿಂದ ಸಂಗ್ರಹಿಸಲಾದ ಹಣವನ್ನೇ ಕಾರ್ಯಕ್ರಮದ ಖರ್ಚಿಗೆ ಬಳಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಹಣದ ಹರಿವಿನ ಕುರಿತು ಸಿಐಡಿ ಆಳವಾದ ಪರಿಶೀಲನೆ ಆರಂಭಿಸಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾಲಿ ಧನಂಜಯ, ಸಪ್ತಮಿ ಗೌಡ, ನೀನಾಸಂ ಸತೀಶ್, ರಾಗಿಣಿ ದ್ವಿವೇದಿ, ದಿಗಂತ್-ಐಂದ್ರಿತಾ ರೈ, ವಶಿಷ್ಠ ಸಿಂಹ ಹಾಗೂ ರಾಜೇಶ್ ಕೃಷ್ಣನ್ ಸೇರಿದಂತೆ ಹಲವರ ಸಂಭಾವನೆ ವಿವರಗಳನ್ನು ತನಿಖಾಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಪಾವತಿಗಳು ಯಾವ ಖಾತೆಯಿಂದ ನಡೆದಿವೆ, ಹಣದ ಮೂಲ ಏನು ಎಂಬುದನ್ನು ಪತ್ತೆಹಚ್ಚಲು ಬ್ಯಾಂಕ್ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಸಿಐಡಿ ಡಿಐಜಿ ಡಾ. ಭೀಮಾಶಂಕರ್ ಗುಳೇದ ಅವರ ಸೂಚನೆಯಂತೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಯಾಗುವ ಸಾಧ್ಯತೆ ಇದೆ. ವಂಚನೆ ಪ್ರಕರಣದ ಹಣಕಾಸು ವ್ಯವಹಾರಗಳ ಜಾಡು ಹಿಡಿದಿರುವ ಸಿಐಡಿ, ಈಗ ಚಿತ್ರರಂಗದ ಸಂಪರ್ಕಗಳ ಮೇಲೂ ಕಣ್ಣಿಟ್ಟಿದ್ದು, ಮುಂದಿನ ದಿನಗಳಲ್ಲಿ ತನಿಖೆ ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ.

ಉಜ್ವಲ ಯೋಜನೆ ಫಲಾನುಭವಿಗಳಿಗೆ ಶಾಕ್: ಇನ್ಮುಂದೆ 9 ಸಿಲಿಂಡರ್ ಬದಲು 4 ಮಾತ್ರ ಸಿಗಲಿದೆ!

ನವದೆಹಲಿ: ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಸಬ್ಸಿಡಿ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಘೋಷಿಸಿದೆ. ಹೊಸ ನಿಯಮದ ಪ್ರಕಾರ, ಯೋಜನೆಯ ಫಲಾನುಭವಿಗಳು ಇನ್ನುಮುಂದೆ ವರ್ಷಕ್ಕೆ ನಾಲ್ಕು ಎಲ್‌ಪಿಜಿ ಸಿಲಿಂಡರ್‌ಗಳಿಗೆ ಮಾತ್ರ ಹೆಚ್ಚುವರಿ ಸಬ್ಸಿಡಿ ಪಡೆಯಲಿದ್ದಾರೆ.

ಇಲ್ಲಿಯವರೆಗೆ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ವಾರ್ಷಿಕವಾಗಿ ಒಂಬತ್ತು ಸಬ್ಸಿಡಿ ಸಿಲಿಂಡರ್‌ಗಳ ಸೌಲಭ್ಯ ಲಭ್ಯವಿತ್ತು. ಇದೀಗ ಆ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸಲಾಗಿದ್ದು, ದೇಶದಾದ್ಯಂತ ಯೋಜನೆಯಡಿ ಸಂಪರ್ಕ ಪಡೆದಿರುವ 10.60 ಕೋಟಿ ಕುಟುಂಬಗಳ ಮೇಲೆ ಈ ಬದಲಾವಣೆ ಅನ್ವಯವಾಗಲಿದೆ.

ಕೇಂದ್ರ ಸರ್ಕಾರದ ಪ್ರಕಾರ, ಸರಾಸರಿ ಬಳಕೆಯ ಅಂಕಿ-ಅಂಶಗಳನ್ನು ಪರಿಶೀಲಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಉಜ್ವಲ ಯೋಜನೆಯಡಿ ಸಂಪರ್ಕ ಪಡೆದ ಬಹುತೇಕ ಕುಟುಂಬಗಳು ವರ್ಷಕ್ಕೆ ಸರಾಸರಿ 4 ರಿಂದ 5 ಸಿಲಿಂಡರ್‌ಗಳನ್ನು ಮಾತ್ರ ಬಳಸುತ್ತಿರುವುದರಿಂದ, ನೈಜ ಬಳಕೆಗೆ ಅನುಗುಣವಾಗಿ ಸಬ್ಸಿಡಿ ವ್ಯವಸ್ಥೆಯನ್ನು ಮರುಸಂಘಟಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2016ರಲ್ಲಿ ಆರಂಭಗೊಂಡ ಉಜ್ವಲ ಯೋಜನೆಯಡಿ ಆರಂಭದಲ್ಲಿ ಫಲಾನುಭವಿಗಳಿಗೆ ವರ್ಷಕ್ಕೆ 12 ಸಬ್ಸಿಡಿ ಸಿಲಿಂಡರ್‌ಗಳನ್ನು ನೀಡಲಾಗುತ್ತಿತ್ತು. ಬಳಿಕ ಈ ಸಂಖ್ಯೆಯನ್ನು ಒಂಬತ್ತಕ್ಕೆ ಇಳಿಸಲಾಗಿತ್ತು. ಇದೀಗ ಮತ್ತೊಮ್ಮೆ ಪರಿಷ್ಕರಣೆ ಮಾಡಿ ನಾಲ್ಕು ಸಿಲಿಂಡರ್‌ಗಳಿಗೆ ಸೀಮಿತಗೊಳಿಸಲಾಗಿದೆ.

ಇದೇ ವೇಳೆ, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷಗಳು ಹಾಗೂ ಹಾರ್ಮುಜ್ ಜಲಸಂಧಿ ಮಾರ್ಗದಲ್ಲಿನ ಸವಾಲುಗಳ ನಡುವೆಯೂ ದೇಶದಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ಯಾವುದೇ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಭಾರತ ತನ್ನ ಎಲ್‌ಪಿಜಿ ಅಗತ್ಯದ ಬಹುಪಾಲನ್ನು ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಪರ್ಯಾಯ ಪೂರೈಕೆ ಮೂಲಗಳನ್ನು ಅಭಿವೃದ್ಧಿಪಡಿಸಲಾಗಿದೆ. ಓಮನ್, ಅಮೆರಿಕ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಿಂದ ಎಲ್‌ಪಿಜಿ ಆಮದು ಹೆಚ್ಚಿಸುವ ಮೂಲಕ ಪೂರೈಕೆ ಸರಪಳಿಯನ್ನು ಬಲಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪ್ರವೀಣ್ ಮಲ್ ಖನುಜಾ ಮಾತನಾಡಿ, ಉಜ್ವಲ ಯೋಜನೆಯ ಗ್ರಾಹಕರ ಸರಾಸರಿ ಬಳಕೆಯನ್ನು ಆಧರಿಸಿ ವರ್ಷಕ್ಕೆ ನಾಲ್ಕು ಸಿಲಿಂಡರ್‌ಗಳಿಗೆ ತಲಾ ₹300 ನೇರ ಸಬ್ಸಿಡಿ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿ ವೆಚ್ಚ ಏರಿಕೆಯಾಗಿದ್ದರೂ ಗ್ರಾಹಕರಿಗೆ ಕಡಿಮೆ ದರದಲ್ಲಿ ಸಿಲಿಂಡರ್ ಒದಗಿಸಲು ಸರ್ಕಾರ ಬೆಲೆ ನಿಯಂತ್ರಣ ಕ್ರಮಗಳನ್ನು ಮುಂದುವರಿಸಿದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಹೆಚ್ಚುವರಿ ಸಬ್ಸಿಡಿಯೊಂದಿಗೆ ಮೊದಲ ನಾಲ್ಕು ಸಿಲಿಂಡರ್‌ಗಳು ಕಡಿಮೆ ದರದಲ್ಲಿ ಲಭ್ಯವಾಗಲಿವೆ.

ಕೇಂದ್ರ ಸರ್ಕಾರ ಕಳೆದ ಎರಡು ಹಣಕಾಸು ವರ್ಷಗಳಲ್ಲಿ ತೈಲ ಮಾರುಕಟ್ಟೆ ಕಂಪನಿಗಳಿಗೆ ಸಾವಿರಾರು ಕೋಟಿ ರೂಪಾಯಿ ಆರ್ಥಿಕ ನೆರವು ನೀಡಿದ್ದು, ಇಂಧನ ಬೆಲೆ ಏರಿಕೆಯ ಪರಿಣಾಮ ಜನಸಾಮಾನ್ಯರ ಮೇಲೆ ಕಡಿಮೆಯಾಗುವಂತೆ ಕ್ರಮ ಕೈಗೊಂಡಿದೆ ಎಂದು ತಿಳಿಸಿದೆ.

ಗ್ರಾಮೀಣ ಭಾಗದ ಮಹಿಳೆಯರಿಗೆ ಶುದ್ಧ ಇಂಧನ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಉಜ್ವಲ ಯೋಜನೆಯು ಮುಂದಿನ ದಿನಗಳಲ್ಲೂ ಪರಿಣಾಮಕಾರಿಯಾಗಿ ಮುಂದುವರಿಯಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

‘ಬಿಗ್ ಬಾಸ್’ ಭರ್ಜರಿ ಪ್ರೋಮೋ ರಿಲೀಸ್: ಗಮನ ಸೆಳೆದ ಹೊಸ ನಿರೂಪಕನ ಎಂಟ್ರಿ

ಹತ್ತು ವರ್ಷಗಳ ಬಳಿಕ ‘ಬಿಗ್ ಬಾಸ್ ಬಾಂಗ್ಲಾ’ ಮತ್ತೆ ವೀಕ್ಷಕರ ಮುಂದೆ ಬರಲು ಸಜ್ಜಾಗಿದ್ದು, ಈ ಬಾರಿ ಶೋಗೆ ಹೊಸ ತೂಕ ನೀಡಿರುವುದು ಮಾಜಿ ಕ್ರಿಕೆಟ್ ನಾಯಕ ಸೌರವ್ ಗಂಗೂಲಿ ಅವರ ಎಂಟ್ರಿ. ಶೋನ ಮೊದಲ ಟೀಸರ್ ಬಿಡುಗಡೆಯಾಗಿದ್ದು, ಬೆಂಗಾಲಿ ಪ್ರೇಕ್ಷಕರಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ.

ಸ್ಟಾರ್ ಜಲ್ಶಾ ಹಂಚಿಕೊಂಡಿರುವ ಪ್ರೋಮೋದಲ್ಲಿ ಹುಲಿಯ ಥೀಮ್‌ನೊಂದಿಗೆ ಸೌರವ್ ಗಂಗೂಲಿ ಅದ್ಧೂರಿಯಾಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ‘ದಾದಾ’ ನಿರೂಪಕರಾಗಿ ಕಾಲಿಡುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಎಂಡೆಮೋಲ್ ಶೈನ್ ಇಂಡಿಯಾದ ಮುಖ್ಯಸ್ಥ ರಿಷಿ ನೇಗಿ ಪ್ರಾದೇಶಿಕ ಭಾಷಾ ವೀಕ್ಷಕರನ್ನು ಮತ್ತಷ್ಟು ತಲುಪುವ ಗುರಿಯೊಂದಿಗೆ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಬೆಂಗಾಲಿ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಪ್ರಭಾವ ಹೊಂದಿರುವ ವ್ಯಕ್ತಿಯನ್ನೇ ಆಯ್ಕೆ ಮಾಡಲಾಗಿದೆ ಎಂಬ ಮಾತು ಕೂಡ ಕೇಳಿಬಂದಿದೆ.

ಇದೇ ವೇಳೆ ಬಿಗ್ ಬಾಸ್‌ನ ಡಿಜಿಟಲ್ ಆವೃತ್ತಿಯಾಗಿರುವ ‘ಬಿಗ್ ಬಾಸ್ ಒಟಿಟಿ’ಗೆ ತಾತ್ಕಾಲಿಕ ಬ್ರೇಕ್ ನೀಡುವ ಚಿಂತನೆಯೂ ನಡೆದಿದೆ. ಸದ್ಯ ಟಿವಿ ಹಾಗೂ ಡಿಜಿಟಲ್ ಲೈವ್ ಸ್ಟ್ರೀಮಿಂಗ್ ವೇದಿಕೆಗಳ ಮೂಲಕವೇ ವೀಕ್ಷಕರನ್ನು ತಲುಪುವ ತಂತ್ರವನ್ನು ಸಂಸ್ಥೆ ಅನುಸರಿಸುತ್ತಿದೆ.

‘ಬಿಗ್ ಬಾಸ್ ಬಾಂಗ್ಲಾ’ ಹೊಸ ಸೀಸನ್‌ಗೆ ಸಂಬಂಧಿಸಿದ ಸ್ಪರ್ಧಿಗಳ ಪಟ್ಟಿ, ಪ್ರಸಾರದ ದಿನಾಂಕ ಹಾಗೂ ಇತರ ಮಾಹಿತಿಗಳನ್ನು ಚಿತ್ರತಂಡ ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.

ಅಪ್ರಾಪ್ತ ಬಾಲಕನಿಂದ ಕಾರು ಚಾಲನೆ; ಬೈಕ್‌ಗೆ ಡಿಕ್ಕಿ, ಇಬ್ಬರಿಗೆ ಗಾಯ

ಬೆಂಗಳೂರು: ಅಪ್ರಾಪ್ತ ಬಾಲಕನೊಬ್ಬ ಕಾರು ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ನಗರದ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಶನಿವಾರ ಸಂಜೆ 6.45ರ ಸುಮಾರಿಗೆ ಬಿಡಿಎ ಪಾರ್ಕ್ ಸಮೀಪ ಈ ಅಪಘಾತ ಸಂಭವಿಸಿದೆ. ಅಪ್ರಾಪ್ತ ಬಾಲಕ ಚಾಲನೆ ಮಾಡುತ್ತಿದ್ದ ಕಾರು, ಹಿಂಬದಿಯಿಂದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರರಾದ ಅರುಣ್ ಕುಮಾರ್ ಹಾಗೂ ವಿನಯ್ ಗಾಯಗೊಂಡಿದ್ದಾರೆ.

ಅಪಘಾತದ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಆದರೆ ಸ್ಥಳೀಯರು ತಕ್ಷಣವೇ ಕಾರನ್ನು ಅಡ್ಡಗಟ್ಟಿ ಚಾಲಕನನ್ನು ಹಿಡಿದಿದ್ದಾರೆ. ಬಳಿಕ ಆತ ಅಪ್ರಾಪ್ತ ಬಾಲಕ ಎಂಬುದು ತಿಳಿದುಬಂದಿದೆ.

ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಬಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದು, ಅಪ್ರಾಪ್ತನಿಗೆ ವಾಹನ ನೀಡಿದ ಪೋಷಕರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ಸಂಬಂಧ ಅಪ್ರಾಪ್ತ ಬಾಲಕ ಹಾಗೂ ಆತನ ಪೋಷಕರ ವಿರುದ್ಧ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ಹೊಸ ರೂಲ್ಸ್: ಹಣ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ!

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ದುರುಪಯೋಗ ತಡೆಯಲು ಸರ್ಕಾರ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿದೆ.

ಮುಂದಿನ ತಿಂಗಳಿನಿಂದ ಹೊಸ ನಿಯಮ ಜಾರಿಗೆ ಬರಲಿದ್ದು, ಫಲಾನುಭವಿಗಳಿಗೆ ಬಯೋಮೆಟ್ರಿಕ್ ಕಡ್ಡಾಯವಾಗಲಿದೆ.

ಹೊಸ ನಿಯಮದ ಪ್ರಕಾರ, ಬಯೋಮೆಟ್ರಿಕ್ ಮಾಡಿಸದಿದ್ದರೆ ಪ್ರತಿ ತಿಂಗಳ 2,000 ರೂ. ಹಣ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿದುಬಂದಿದೆ. ಬಯೋಮೆಟ್ರಿಕ್ ನೋಂದಣಿಗೆ ಫಲಾನುಭವಿಗಳು 5 ರೂ. ಶುಲ್ಕ ಪಾವತಿಸಬೇಕಾಗುತ್ತದೆ.

ಇದರ ಜೊತೆಗೆ ಗೃಹಲಕ್ಷ್ಮಿ ಸೊಸೈಟಿಗೆ ಸದಸ್ಯತ್ವ ಪಡೆಯುವ ವ್ಯವಸ್ಥೆಯನ್ನೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪರಿಚಯಿಸುತ್ತಿದ್ದು, ಸದಸ್ಯತ್ವ ಬಯಸುವವರು 1,250 ರೂ. ಪಾವತಿಸಬೇಕಾಗುತ್ತದೆ. ಆದರೆ ಸದಸ್ಯತ್ವ ಬೇಡ ಎಂದರೆ ಕೇವಲ ಬಯೋಮೆಟ್ರಿಕ್ ಮಾತ್ರ ಮಾಡಿಸಿಕೊಳ್ಳಬಹುದಾಗಿದೆ.

ಬಯೋಮೆಟ್ರಿಕ್ ಪ್ರಕ್ರಿಯೆ ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಸೇವಾಸಿಂಧು ಕೇಂದ್ರಗಳಲ್ಲಿ ನಡೆಯುವ ಸಾಧ್ಯತೆ ಇದೆ. ಒಂದು ಬಾರಿ ಬಯೋಮೆಟ್ರಿಕ್ ದಾಖಲಿಸಿದ ಬಳಿಕ ಫಲಾನುಭವಿಯ ಗುರುತಿನ ಆಧಾರದ ಮೇಲೆ ನೇರವಾಗಿ ಹಣ ಪಾವತಿ ಆಗಲಿದೆ.

ಬಯೋಮೆಟ್ರಿಕ್ ಮಾಡಲು ಫಲಾನುಭವಿಗಳು ಆಧಾರ್ ಕಾರ್ಡ್ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಲಾಕ್‌ಬಸ್ಟರ್ ಕಲೆಕ್ಷನ್ ನಡುವೆ ‘ಪೆದ್ದಿ’ ಚಿತ್ರಕ್ಕೆ ಸಂಕಷ್ಟ! ದಾಖಲಾಯ್ತು ದೂರು, ಆರೋಪ ಏನು?

ಹೈದರಾಬಾದ್: ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ, ನಿರ್ದೇಶಕ ಬುಚ್ಚಿ ಬಾಬು ಸನಾ ಅವರ ಬಿಗ್ ಬಜೆಟ್ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ ‘ಪೆದ್ದಿ’ ಚಿತ್ರವು ಥಿಯೇಟರ್‌ಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

ಬಿಡುಗಡೆಯಾದ ಕೇವಲ 5 ದಿನಗಳಲ್ಲಿ ವಿಶ್ವಾದ್ಯಂತ ಸುಮಾರು 248.92 ಕೋಟಿ ರೂ. ಗಳಿಕೆ ದಾಖಲಿಸಿದ್ದು, ಭಾರತದಲ್ಲೇ 169.70 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದರೂ, ಅದರ ಜೊತೆಗೆ ಹಲವು ವಿವಾದಗಳಿಗೂ ಸಿಲುಕಿದೆ.

ಚಿತ್ರದಲ್ಲಿ ಬುಡಕಟ್ಟು ಸಮುದಾಯವನ್ನು ಅವಮಾನಕರವಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ಆಂಧ್ರಪ್ರದೇಶದ ಮಾನ್ಯಂ ಹಾಗೂ ವಿಜಯನಗರಂ ಜಿಲ್ಲೆಗಳಲ್ಲಿ ಬುಡಕಟ್ಟು ಜನಾಂಗದ ನಾಯಕರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಚಿತ್ರದ ನಿರ್ದೇಶಕ ಬುಚ್ಚಿ ಬಾಬು ಸನಾ, ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಹಾಗೂ ಸಂಬಂಧಿತ ಸಂಭಾಷಣೆಗಳಿಗೆ ಅನುಮತಿ ನೀಡಿದ ಸೆನ್ಸಾರ್ ಮಂಡಳಿ ಸದಸ್ಯರ ವಿರುದ್ಧ SC/ST ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಬುಡಕಟ್ಟು ಸಂಘಟನೆಗಳು ಆಗ್ರಹಿಸಿವೆ.

ಇದಕ್ಕೂ ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ನಾಯಕಿ ಜಾನ್ವಿ ಕಪೂರ್ ಅವರ ಪಾತ್ರದ ಚಿತ್ರಣದ ಬಗ್ಗೆ ಕೂಡ ಚರ್ಚೆ ಜೋರಾಗಿದೆ. ಅವರ ಉಡುಪುಗಳು ಮತ್ತು ಪಾತ್ರದ ನಿರೂಪಣೆಯ ರೀತಿ ಅಸಮರ್ಪಕವಾಗಿದೆ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.

ಒಟ್ಟಿನಲ್ಲಿ, ಚಿತ್ರವು ಒಂದೆಡೆ ಭರ್ಜರಿ ಯಶಸ್ಸು ಸಾಧಿಸುತ್ತಿದ್ದರೆ, ಮತ್ತೊಂದೆಡೆ ವಿವಾದಗಳ ಸುತ್ತಲೂ ಸಿಲುಕಿಕೊಂಡಿದೆ.

ಉಕ್ಕು ಸ್ಥಾವರದಲ್ಲಿ ಅಗ್ನಿದುರಂತ: ಮೃತರ ಕುಟುಂಬಕ್ಕೆ 25 ಲಕ್ಷ ರೂ. ನೆರವು ಘೋಷಿಸಿದ ಕುಮಾರಸ್ವಾಮಿ!

ವಿಶಾಖಪಟ್ಟಣ: ಇಲ್ಲಿನ ರಾಷ್ಟ್ರೀಯ ಉಕ್ಕು ಸ್ಥಾವರದಲ್ಲಿ ನಡೆದ ಭೀಕರ ಕೈಗಾರಿಕಾ ಅವಘಡದಲ್ಲಿ 8 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೋಮವಾರ ರಾತ್ರಿ ಉಕ್ಕು ಕರಗಿಸುವ ಕೇಂದ್ರ ಸಂಖ್ಯೆ-1ರಲ್ಲಿ ದೊಡ್ಡ ಗಾತ್ರದ ಕರಗಿದ ಲೋಹವಿದ್ದ ಬಕೆಟ್ ಉರುಳಿ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಬಕೆಟ್ ಉರುಳುವ ಕೆಲವೇ ಕ್ಷಣಗಳ ಮೊದಲು ಸ್ಫೋಟ ಸಂಭವಿಸಿದ್ದು, ನಂತರ ಭಾರೀ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಘಟನೆಯ ನಂತರ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಹಾಗೂ ರಕ್ಷಣಾ ತಂಡಗಳು ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಕನಿಷ್ಠ ಆರು ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂ., ಗಾಯಾಳುಗಳಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಜೊತೆಗೆ ಮೃತರ ಕುಟುಂಬದ ಅರ್ಹ ಸದಸ್ಯರಿಗೆ ಉದ್ಯೋಗ ನೀಡಲಾಗುವುದು ಹಾಗೂ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಕಾರ್ಖಾನೆ ಭರಿಸಲಿದೆ ಎಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಹ ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರವನ್ನು ರಾಷ್ಟ್ರೀಯ ಪರಿಹಾರ ನಿಧಿಯಿಂದ ಘೋಷಿಸಿದ್ದಾರೆ.

ಈ ದುರಂತದ ಬಗ್ಗೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹಾಗೂ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆಯ ಕುರಿತು ಸಮಗ್ರ ತನಿಖೆಗೆ ಆದೇಶಿಸಲಾಗಿದೆ.

ಉಕ್ಕು ಸ್ಥಾವರದಲ್ಲಿ ಸುರಕ್ಷತಾ ಕ್ರಮಗಳ ಕೊರತೆಯೇ ಈ ದುರಂತಕ್ಕೆ ಕಾರಣವೇ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿದೆ.

error: Content is protected !!