ಗದಗ: ಮಳೆಗಾಲ ಆರಂಭವಾಗಿದ್ದರೂ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿರುವ ದುಸ್ಥಿತಿ ಗದಗ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಬಯಲಾಗಿದೆ. ನೀರು ತರಲು ತೆರಳಿದ್ದ ವ್ಯಕ್ತಿಯೊಬ್ಬ ಅಕ್ರಮ ಮಣ್ಣು ಗಣಿಗಾರಿಕೆ ನಡೆಸಿ ಬಿಟ್ಟಿದ್ದ ಆಳವಾದ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ಚೆನ್ನಯ್ಯ ಬಳಗೇರಮಠ (55) ಮೃತ ದುರ್ದೈವಿ. ಜೂನ್ 2 ರಂದು ಘಟನೆ ನಡೆದಿದ್ದು, ಇದೀಗ ಪ್ರಕರಣದ ವಿರುದ್ಧ ಗ್ರಾಮಸ್ಥರ ಆಕ್ರೋಶ ಭುಗಿಲೆದ್ದಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಸುಮಾರು 3 ಕಿಲೋ ಮೀಟರ್ ದೂರದಲ್ಲಿರುವ ಹೊಂಡಗಳಿಗೆ ಹೋಗಿ ನೀರು ತರಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಇದೇ ವೇಳೆ ಅಕ್ರಮ ಮಣ್ಣು ಗಣಿಗಾರಿಕೆ ನಡೆಸಿದ ದಂಧೆಕೋರರು 30 ರಿಂದ 40 ಅಡಿ ಆಳದ ಬೃಹತ್ ಹೊಂಡಗಳನ್ನು ನಿರ್ಮಿಸಿದ್ದು, ಅವೇ ಈಗ ಜೀವಹಾನಿಗೆ ಕಾರಣವಾಗುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
ಕೋಟುಮಚಗಿ ಗ್ರಾಮದ ಸುತ್ತ ನಾಲ್ಕೈದು ಭಾರೀ ಅಕ್ರಮ ಗಣಿಗಾರಿಕೆ ಹೊಂಡಗಳಿದ್ದು, ಅವು “ಸಾವಿನ ಹೊಂಡ”ಗಳಾಗಿ ಪರಿಣಮಿಸಿವೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಗಣಿ ಇಲಾಖೆ ಹಾಗೂ ಜಿಲ್ಲಾಡಳಿತದ ಗಮನಕ್ಕೆ ಹಲವು ಬಾರಿ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳು ಪಕ್ಕದ ತಿಮ್ಮಾಪೂರ ಗ್ರಾಮದಲ್ಲೂ ಇದೇ ರೀತಿಯ ಹೊಂಡದಲ್ಲಿ ನೀರು ತರಲು ತೆರಳಿದ್ದ ಇಬ್ಬರು ಬಾಲಕಿಯರು ಬಿದ್ದು ಮೃತಪಟ್ಟ ಘಟನೆ ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ. ಆದರೂ ಗಣಿ ಇಲಾಖೆ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಗದಗ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಇಂತಹ ಅಕ್ರಮ ಗಣಿಗಾರಿಕೆ ಹೊಂಡಗಳಲ್ಲಿ ಬಿದ್ದು ಐದಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಆದರೂ ಅಧಿಕಾರಿಗಳು ತಲೆಕೆಡಿಸಿಕೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. “ಯಾಮಾರಿದ್ರೆ ಶಿವನಪಾದ ಸೇರೋದು ಪಕ್ಕಾ” ಎಂಬ ಭಯ ಜನರಲ್ಲಿ ಮನೆ ಮಾಡಿದೆ.
ಮೃತ ಚೆನ್ನಯ್ಯ ಕುಟುಂಬದ ಆಧಾರಸ್ತಂಭವಾಗಿದ್ದರು. ಅವರ ಸಾವಿನಿಂದ ಕುಟುಂಬ ಕಂಗಾಲಾಗಿದ್ದು, ಸೌಜನ್ಯಕ್ಕೂ ಜಿಲ್ಲಾಡಳಿತದ ಯಾವುದೇ ಅಧಿಕಾರಿ ಭೇಟಿ ನೀಡಿ ಸಾಂತ್ವಾನ ಹೇಳಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಬೇಕು, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಮೃತ ಕುಟುಂಬಕ್ಕೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.



