Home Blog Page 45

ಪಾಳು ಬಿದ್ದ ಸಮೂಹ ಸಂಪನ್ಮೂಲ ಕೇಂದ್ರ; ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಶಿಕ್ಷಕರ ತರಬೇತಿ, ಶೈಕ್ಷಣಿಕ ಗುಣಮಟ್ಟ ವೃದ್ಧಿ ಹಾಗೂ ಇಲಾಖೆಯ ಸಮಾಲೋಚನಾ ಸಭೆಗಳ ಉದ್ದೇಶದಿಂದ ನಿರ್ಮಿಸಲಾದ ಮುಳಗುಂದದ ಸಮೂಹ ಸಂಪನ್ಮೂಲ ಕೇಂದ್ರ (ಸಿಆರ್‌ಸಿ) ನಿರ್ವಹಣೆ ಕೊರತೆಯಿಂದ ಪಾಳುಬಿದ್ದು ಅನಾಥ ಕಟ್ಟಡವಾಗಿ ಮಾರ್ಪಟ್ಟಿದೆ.

ಮುಳಗುಂದ ಕ್ಲಸ್ಟರ್ ವ್ಯಾಪ್ತಿಯ 12 ಶಾಲೆಗಳಿಗಾಗಿ ನಿರ್ಮಿಸಲಾದ ಈ ಕೇಂದ್ರದಲ್ಲಿ ಹಿಂದೆ ಶಿಕ್ಷಕರ ಸಭೆಗಳು, ತರಬೇತಿ ಹಾಗೂ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ ಅನುದಾನದ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಟ್ಟಡ ಹಾಳಾಗಿದ್ದು, ಕಿಟಕಿ-ಬಾಗಿಲುಗಳು ಮುರಿದು, ಒಳಗೆ ಮದ್ಯದ ಬಾಟಲಿಗಳು, ಇಸ್ಪೀಟ್ ಕಾರ್ಡ್‌ಗಳ ಕಸದ ರಾಶಿ ತುಂಬಿಕೊಂಡಿದೆ. ಕಟ್ಟಡ ಇದೀಗ ಆಗಸ್ಟ್‌ 15 ಹಾಗೂ ಜನವರಿ 26ರಂದು ಧ್ವಜಾರೋಹಣಕ್ಕೆ ಮಾತ್ರ ಸೀಮಿತವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಆರ್. ತಡೆದಮಠ ಮಾತನಾಡಿ, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ನಿರ್ಮಿಸಿದ ಕಟ್ಟಡವನ್ನು ಕೂಡಲೇ ದುರಸ್ತಿ ಮಾಡಿ ಚಟುವಟಿಕೆ ಆರಂಭಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಕ್ಲಸ್ಟರ್ ಸಿಆರ್‌ಪಿ ರಮೀಜಾ ಅಣ್ಣಿಗೇರಿ, ಕಟ್ಟಡ ಜೀರ್ಣಾವಸ್ಥೆಯಲ್ಲಿದ್ದು, ದುರಸ್ತಿ ಹಾಗೂ ಸುಣ್ಣ-ಬಣ್ಣ ಕಾಮಗಾರಿ ನಡೆಸಿ ಶೈಕ್ಷಣಿಕ ಚಟುವಟಿಕೆಗಳನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ವೈರಲ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಳ: ಆರೋಗ್ಯ ಸಮಸ್ಯೆಗೆ ವೈದ್ಯರು ಬಿಚ್ಚಿಟ್ಟ ಕಾರಣವೇನು?

ಬೆಂಗಳೂರು: ನಗರದಲ್ಲಿ ಉಸಿರಾಟ ಸಂಬಂಧಿತ ವೈರಲ್ ಸೋಂಕುಗಳ ಪ್ರಕರಣಗಳು ಹೆಚ್ಚುತ್ತಿರುವುದು ಕಂಡುಬಂದಿದೆ.

ವೈದ್ಯರ ಮಾಹಿತಿ ಪ್ರಕಾರ, ಕೋವಿಡ್-19 ಪ್ರಕರಣಗಳಲ್ಲಿ ಸ್ವಲ್ಪ ಏರಿಕೆ ಕಂಡುಬಂದರೂ, ಸೀಸನಲ್ ಇನ್‌ಫ್ಲುಯೆನ್ಜಾ ಸೋಂಕುಗಳು ಹೆಚ್ಚು ಪ್ರಮಾಣದಲ್ಲಿ ವರದಿಯಾಗುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್‌ಫ್ಲುಯೆನ್ಜಾ A ವೈರಸ್, ಅದರಲ್ಲೂ H3N2 ಹಾಗೂ ಸ್ವೈನ್ ಫ್ಲೂ ಪ್ರಕರಣಗಳು ಸದ್ಯ ಹೆಚ್ಚಾಗಿ ಕಾಣಿಸುತ್ತಿವೆ. ಪ್ರತಿದಿನ ಸುಮಾರು 10 ರಿಂದ 15 ಇನ್‌ಫ್ಲುಯೆನ್ಜಾ ಪ್ರಕರಣಗಳು ವರದಿಯಾಗುತ್ತಿವೆ ಎಂದು ಕಿಮ್ಸ್ ಆಸ್ಪತ್ರೆಯ ಆಂತರಿಕ ವೈದ್ಯಕೀಯ ತಜ್ಞೆ ಡಾ. ಅಂಕಿತಾ ತೇಜಾ ನಾರಾಯಣ್ ತಿಳಿಸಿದ್ದಾರೆ.

ಹೆಚ್ಚಿನ ರೋಗಿಗಳು ಜ್ವರ, ಕೆಮ್ಮು, ಗಂಟಲು ನೋವು ಹಾಗೂ ಮೂಗಿನಿಂದ ನೀರು ಸುರಿಯುವಂತಹ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ಬರುತ್ತಿದ್ದು, ಸಾಮಾನ್ಯ ಚಿಕಿತ್ಸೆಯಿಂದಲೇ ಗುಣಮುಖರಾಗುತ್ತಿದ್ದಾರೆ. ಆದರೆ ಹಿರಿಯ ನಾಗರಿಕರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಕೆಲವರು ತೀವ್ರ ಉಸಿರಾಟದ ಸಮಸ್ಯೆಯಿಂದ ಐಸಿಯು ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.

ಸಾಕ್ರಾ ವರ್ಲ್ಡ್ ಆಸ್ಪತ್ರೆಯ ಹಿರಿಯ ಆಂತರಿಕ ವೈದ್ಯಕೀಯ ತಜ್ಞ ಡಾ. ಎಂ. ರವಿ ಕುಮಾರ್ ಅವರ ಪ್ರಕಾರ, ಕೋವಿಡ್-19 ಈಗ ಸ್ಥಳೀಯವಾಗಿ ನಿರಂತರವಾಗಿ ಕಾಣಿಸಿಕೊಳ್ಳುವ ಸೋಂಕಾಗಿ ರೂಪಾಂತರಗೊಂಡಿದ್ದು, JN.1 ರೂಪಾಂತರಿ ಸೌಮ್ಯ ಲಕ್ಷಣಗಳೊಂದಿಗೆ ಮುಂದುವರಿಯುತ್ತಿದೆ.

ಇನ್ನೊಂದೆಡೆ, ಶಾಲೆಗಳು ಪುನರಾರಂಭವಾಗಿರುವುದರಿಂದ ಮಕ್ಕಳ ಮೂಲಕ ಸೋಂಕು ಕುಟುಂಬಗಳಿಗೆ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

‘ದರ್ಶನ್ ವಿರುದ್ಧ ಸಾಕ್ಷಿ ಹೇಳಿದ್ರೆ ಜೀವ ಉಳಿಯಲ್ಲ’; ಕೋರ್ಟ್ ಸಾಕ್ಷಿಗೆ ಧಮ್ಕಿ, ಫ್ಯಾನ್ ಗ್ಯಾಂಗ್‌ನ ಮೂವರು ಪೊಲೀಸ್ ಬಲೆಗೆ

ಬೆಂಗಳೂರು: ಇಡೀ ರಾಜ್ಯದ ಗಮನ ಸೆಳೆದಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ಬೆಳವಣಿಗೆ ನಡೆದಿದೆ. ಪ್ರಕರಣದ ಪ್ರಮುಖ ಸಾಕ್ಷಿದಾರನಿಗೆ ಬೆದರಿಕೆ ಹಾಕಿ ನ್ಯಾಯಾಲಯದಲ್ಲಿ ಆರೋಪಿಗಳ ಪರವಾಗಿ ಹೇಳಿಕೆ ನೀಡುವಂತೆ ಒತ್ತಡ ಹೇರಿದ ಆರೋಪದಡಿ ನಟ ದರ್ಶನ್ ಅಭಿಮಾನಿ ಬಳಗದ ಮೂವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ 49ನೇ ಸಾಕ್ಷಿಯಾಗಿರುವ ಸಂದೀಪ್ ಅವರು ನ್ಯಾಯಾಲಯದಲ್ಲಿ ಸಾಕ್ಷಿ ಹೇಳುವ ಮುನ್ನವೇ ಅಪರಿಚಿತರಿಂದ ಬೆದರಿಕೆ ಎದುರಿಸಿದ್ದಾಗಿ ನ್ಯಾಯಾಧೀಶರ ಮುಂದೆ ಬಹಿರಂಗಪಡಿಸಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಪೊಲೀಸರು ಅವರಿಗೆ ಬಿಗಿ ಭದ್ರತೆ ಒದಗಿಸಿ, ವಿಶೇಷ ತನಿಖಾ ಕಾರ್ಯಾಚರಣೆ ನಡೆಸಿದರು. ಕಾರ್ಯಾಚರಣೆಯಲ್ಲಿ ವೇಣು, ಸುಹಾಸ್ ಹಾಗೂ ಪುನೀತ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ತನಿಖೆಯಲ್ಲಿ ಆರೋಪಿಗಳ ಸಂಚಿನ ವಿವರಗಳು ಬೆಳಕಿಗೆ ಬಂದಿವೆ. ಸಂದೀಪ್ ಅವರನ್ನು ಮಾತುಕತೆ ನೆಪದಲ್ಲಿ ಕರೆಸಿಕೊಂಡ ಆರೋಪಿಗಳು, ಬಳಿಕ ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ವಿವಿಧ ಕಡೆ ಸುತ್ತಾಡಿಸಿದ್ದಾರೆ. ಈ ವೇಳೆ “ದರ್ಶನ್ ವಿರುದ್ಧ ಕೋರ್ಟ್‌ನಲ್ಲಿ ಸಾಕ್ಷಿ ಹೇಳಬಾರದು, ಆರೋಪಿಗಳನ್ನು ಗುರುತಿಸಲು ಆಗಲ್ಲ ಎಂದು ಹೇಳಬೇಕು” ಎಂದು ನಿರಂತರ ಒತ್ತಡ ಹೇರಲಾಗಿದೆ ಎನ್ನಲಾಗಿದೆ. ಸಾಕ್ಷಿದಾರ ನಿರಾಕರಿಸಿದಾಗ, ಜೈಲಿನಲ್ಲಿರುವ ದರ್ಶನ್ ಹೆಸರನ್ನು ಉಲ್ಲೇಖಿಸಿ ಜೀವ ಬೆದರಿಕೆ ಹಾಕಿರುವ ಆರೋಪವೂ ಕೇಳಿಬಂದಿದೆ.

ಬಂಧಿತರ ಪೈಕಿ ಪುನೀತ್ ಸಾಮಾಜಿಕ ಜಾಲತಾಣದಲ್ಲಿ ‘ಡಿ ಕಂಪನಿ’ ಹೆಸರಿನ ದರ್ಶನ್ ಅಭಿಮಾನಿಗಳ ಫ್ಯಾನ್ ಪೇಜ್ ನಿರ್ವಹಿಸುತ್ತಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ. ಇನ್ನಿಬ್ಬರು ಆರೋಪಿಗಳಾದ ವೇಣು ಹಾಗೂ ಸುಹಾಸ್ ತುಮಕೂರಿನ ದರ್ಶನ್ ಅಭಿಮಾನಿ ಸಂಘದ ಸಕ್ರಿಯ ಸದಸ್ಯರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಮತ್ತು ಪವಿತ್ರಾ ಗೌಡ ಸೇರಿ ಹಲವರು ಆರೋಪಿಗಳಾಗಿದ್ದು, ಬೆಂಗಳೂರಿನ ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ ತೀವ್ರಗತಿಯಲ್ಲಿ ಸಾಗುತ್ತಿದೆ. ಇದೇ ವೇಳೆ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಯತ್ನ ಬೆಳಕಿಗೆ ಬಂದಿರುವುದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಇದರ ಹಿಂದೆ ಇನ್ನಾರಾದರೂ ಇದ್ದಾರೆಯೇ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಡ್ರಗ್ಸ್ ಚಟಕ್ಕೆ ಬಲಿಯಾಗಿ ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಖದೀಮರ ಗ್ಯಾಂಗ್ ಅರೆಸ್ಟ್!

ತುಮಕೂರು: ಮಾದಕ ವಸ್ತುಗಳ ನಶೆಗೆ ಬಲಿಯಾಗಿ ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್ ಅನ್ನು ತುರುವೆಕೆರೆ ಪೊಲೀಸರು ಬೃಹತ್ ಕಾರ್ಯಾಚರಣೆ ಮೂಲಕ ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಈ ಗ್ಯಾಂಗ್ ಕನಿಷ್ಠ 22 ದೇವಸ್ಥಾನಗಳ ಬೀಗ ಮುರಿದು ಕಳವು ಮಾಡಿದ್ದು, ಹುಂಡಿ ಹಣ ಹಾಗೂ ಗರ್ಭಗುಡಿಯ ಚಿನ್ನದ ತಾಳಿಗಳನ್ನು ದೋಚುತ್ತಿದ್ದದು ಬಹಿರಂಗವಾಗಿದೆ.

ಬಂಧಿತರಿಂದ ಸುಮಾರು ₹14 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ದೇವಾಲಯದ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ.

19 ರಿಂದ 29 ವರ್ಷದೊಳಗಿನ ಯುವಕರ ಈ ಗ್ಯಾಂಗ್ ಡ್ರಗ್ಸ್ ಚಟಕ್ಕೆ ದಾಸರಾಗಿ, ಕಳವು ಹಣವನ್ನು ಐಷಾರಾಮಿ ಜೀವನ ಹಾಗೂ ಮಾದಕ ವಸ್ತುಗಳ ಖರ್ಚಿಗೆ ಬಳಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಹಾಸನ ಮತ್ತು ಮಂಡ್ಯ ಮೂಲದ ಆರು ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೂ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.

ತುರುವೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ರೋಣದಲ್ಲಿ ಆಹಾರ ಇಲಾಖೆ ಮತ್ತೊಂದು ಬೇಟೆ..! ಪಿಡಿಎಸ್ ಅಕ್ಕಿ ಅಕ್ರಮ ಸಾಗಾಟ ಪತ್ತೆ

ವಿಜಯಸಾಕ್ಷಿ ಸುದ್ದಿ, ರೋಣ: ಸರ್ಕಾರದ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಅಕ್ಕಿಯನ್ನು ಕಾಳಸಂತೆಗೆ ಸಾಗಿಸುತ್ತಿದ್ದ ಆರೋಪದ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸುಮಾರು 9 ಕ್ವಿಂಟಲ್ ಅಕ್ಕಿಯನ್ನು ಜಪ್ತಿ ಮಾಡಿದ್ದು, ಮಹಿಳೆ ಸೇರಿ ಇಬ್ಬರ ವಿರುದ್ಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜುಲೈ 1ರಂದು ಬೆಳಿಗ್ಗೆ ಸುಮಾರು 5 ಗಂಟೆ ವೇಳೆಗೆ ರೋಣ-ಸವಡಿ ರಸ್ತೆಯಲ್ಲಿ ಆಹಾರ ನಿರೀಕ್ಷಕಿ ಸುವರ್ಣಾ ಮುಕ್ಕಣ್ಣ ಜಮ್ಮನಕಟ್ಟಿ ನೇತೃತ್ವದ ತಂಡ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ, ಕೆ.ಎ.22-ಎಫ್-5079 ಸಂಖ್ಯೆಯ ವಾಹನವನ್ನು ತಡೆದು ಪರಿಶೀಲಿಸಿತು. ಪರಿಶೀಲನೆ ವೇಳೆ ವಾಹನದಲ್ಲಿ ಸರ್ಕಾರದ ಪಡಿತರ ಯೋಜನೆಗೆ ಮೀಸಲಾದ 18 ಚೀಲಗಳಲ್ಲಿದ್ದ ಸುಮಾರು 9 ಕ್ವಿಂಟಲ್ (900 ಕೆ.ಜಿ.) ಪಿಡಿಎಸ್ ಅಕ್ಕಿ ಯಾವುದೇ ಮಾನ್ಯ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಮುತ್ತಪ್ಪ ಯಲ್ಲಪ್ಪ ಭಜಂತ್ರಿ (35) ಹಾಗೂ ರೋಣದ ಸಂಗೀತಾ ಭೀಮಪ್ಪ ಭಜಂತ್ರಿ (40) ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜಪ್ತಿ ಮಾಡಲಾದ ಅಕ್ಕಿಯ ಮೌಲ್ಯ ಸುಮಾರು ₹16,200 ಎಂದು ಅಂದಾಜಿಸಲಾಗಿದೆ. ವಾಹನವನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ, 1955ರ ಕಲಂ 3 ಮತ್ತು 7 ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆ (ನಿಯಂತ್ರಣ) ಆದೇಶ, 2016ರ ಕಲಂ 18ರಡಿ ರೋಣ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 124/2026 ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಕಾಂಗ್ರೆಸ್‌ಗೆ ಹೊಸ ತಲೆನೋವು; ಡಿಕೆ ಕನಸಿನ ಯೋಜನೆಗೆ ತಮ್ಮದೇ ಶಾಸಕರಿಂದ ಬಹಿರಂಗ ವಿರೋಧ!

0

ತುಮಕೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಕಾಂಗ್ರೆಸ್‌ನಲ್ಲೇ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಗುಬ್ಬಿ ಕಾಂಗ್ರೆಸ್ ಶಾಸಕ ಎಸ್‌.ಆರ್‌. ಶ್ರೀನಿವಾಸ್, ಯೋಜನೆ ಜಾರಿಯಾದರೆ ಕಾಂಗ್ರೆಸ್‌ನಲ್ಲಿ ಮುಂದುವರಿಯಬೇಕೋ ಬೇಡವೋ ಯೋಚಿಸಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಈ ಹಿಂದೆ ಇದೇ ಲಿಂಕ್ ಕೆನಾಲ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದ ಕಾರಣ ಜೆಡಿಎಸ್ ತೊರೆದಿದ್ದೆ. ಈಗ ಮತ್ತೆ ಅದೇ ಯೋಜನೆ ಜಾರಿಗೆ ಬಂದರೆ ನನ್ನ ಮುಂದಿನ ರಾಜಕೀಯ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ” ಎಂದು ಹೇಳಿದರು.

ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ವೇಳೆ, ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಹಾಗೂ ಡಿ.ಕೆ. ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದರು. ಆಗ ಯೋಜನೆಗೆ ಸಂಪುಟ ಅನುಮೋದನೆ ನೀಡಿದಾಗ ತಾವು ಕ್ಯಾಬಿನೆಟ್ ಸಭೆಯಲ್ಲೇ ತೀವ್ರ ವಿರೋಧ ವ್ಯಕ್ತಪಡಿಸಿ ಹೊರನಡೆದಿದ್ದೆ ಎಂದು ಅವರು ನೆನಪಿಸಿಕೊಂಡರು.

ಮುಖ್ಯಮಂತ್ರಿಗೆ ಈಗಾಗಲೇ ತಮ್ಮ ಅಭಿಪ್ರಾಯ ತಿಳಿಸಿರುವುದಾಗಿ ಹೇಳಿದ ಶ್ರೀನಿವಾಸ್, ನಾಲೆ ಮಾರ್ಗದ ಮೂಲಕ ಯೋಜನೆ ರೂಪಿಸುವಂತೆ ಸಲಹೆ ನೀಡಿದ್ದೇನೆ. ನಮ್ಮ ಮಾತಿಗೆ ಬೆಲೆ ಸಿಗುತ್ತದೆಯೇ ಎಂಬುದನ್ನು ನೋಡೋಣ ಎಂದರು.

“ಯೋಜನೆ ಆರಂಭವಾದರೆ ಸಾರ್ವಜನಿಕ ಹೋರಾಟಗಳು ಅನಿವಾರ್ಯ. ನಾನು ಕಾಂಗ್ರೆಸ್‌ನಲ್ಲಿ ಇದ್ದು ಬೀದಿಗಿಳಿದು ಪ್ರತಿಭಟನೆ ಮಾಡುವುದು ಸರಿಯಲ್ಲ. ಆದರೆ ನನ್ನ ವಿರೋಧವನ್ನು ತಲುಪಬೇಕಾದವರಿಗೆ ತಲುಪಿಸಿದ್ದೇನೆ. ಪರಿಸ್ಥಿತಿಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ” ಎಂದು ಎಸ್‌.ಆರ್‌. ಶ್ರೀನಿವಾಸ್ ಸ್ಪಷ್ಟಪಡಿಸಿದರು.

ಮಳೆ ಬರುವವರೆಗೂ ಮೌನ ವ್ರತ!; ಊಟ-ನಿದ್ದೆ ತ್ಯಜಿಸಿ ಜಮೀನಿನಲ್ಲೇ ರೈತನ ಕಠಿಣ ಅನುಷ್ಠಾನ

ಗದಗ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಗದಗ ಜಿಲ್ಲೆಯಲ್ಲಿ ರೈತರ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾಲ-ಸೋಲ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಒಣಗಲಾರಂಭಿಸಿದ್ದು, ಸಂಕಷ್ಟಕ್ಕೀಡಾದ ರೈತರು ಈಗ ದೇವರ ಮೊರೆ ಹೋಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಶಿರಹಟ್ಟಿ ತಾಲೂಕಿನ ಬೂದಿಹಾಳ ಗ್ರಾಮದ ರೈತ ಭೀಮಪ್ಪ ಚಳ್ಳಿಕೇರಿ ಮಳೆ ಸುರಿಯುವವರೆಗೆ ಮೌನ ಅನುಷ್ಠಾನ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ಮೈಲಾರ ದೇವರ ಆರಾಧಕರಾಗಿರುವ ಭೀಮಪ್ಪ ಚಳ್ಳಿಕೇರಿ, ಗ್ರಾಮದ ಹೊರವಲಯದ ತಮ್ಮ ಜಮೀನಿನಲ್ಲಿರುವ ಮರದ ಕೆಳಗೆ ಮೌನ ವ್ರತ ಆರಂಭಿಸಿದ್ದಾರೆ. ಊಟ, ನಿದ್ದೆ ಸೇರಿದಂತೆ ಎಲ್ಲ ಸೌಕರ್ಯಗಳನ್ನು ತ್ಯಜಿಸಿ ದೇವರ ನಾಮಸ್ಮರಣೆಯಲ್ಲಿ ತೊಡಗಿರುವ ಅವರು, ಮಳೆ ಬಂದ ಬಳಿಕವೇ ಅನುಷ್ಠಾನ ಅಂತ್ಯಗೊಳಿಸುವ ಸಂಕಲ್ಪ ಮಾಡಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಶೇಕಡ 50ರಷ್ಟು ರೈತರು ಹೆಸರು, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಪೂರ್ಣಗೊಳಿಸಿದ್ದಾರೆ. ಆದರೆ ನಿರೀಕ್ಷಿತ ಮಳೆಯಿಲ್ಲದೆ ಬೆಳೆಗಳು ಒಣಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ಕಾರಣಕ್ಕೆ ಭೀಮಪ್ಪ ಅವರು ಇತರ ರೈತರೊಂದಿಗೆ ಚರ್ಚಿಸಿ ಈ ವಿಶೇಷ ಅನುಷ್ಠಾನ ಆರಂಭಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಭೀಮಪ್ಪ ಅವರ ಮೌನ ತಪಸ್ಸು ನೋಡಲು ಸುತ್ತಮುತ್ತಲಿನ ಗ್ರಾಮಗಳಿಂದ ಜನರು ಆಗಮಿಸುತ್ತಿದ್ದಾರೆ. ಮಹಿಳೆಯರು ಜಾನಪದ ಗೀತೆಗಳನ್ನು ಹಾಡಿ ಮಳೆರಾಯನನ್ನು ಪ್ರಾರ್ಥಿಸುತ್ತಿದ್ದು, ಗ್ರಾಮದ ನೂರಾರು ಜನರು ರೈತನ ಸಂಕಲ್ಪಕ್ಕೆ ಬೆಂಬಲ ಸೂಚಿಸಿದ್ದಾರೆ.

ಇದೇ ವೇಳೆ, ಮಳೆ ಕೊರತೆಯಿಂದ ಗದಗ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರಿಗೆ ಸರ್ಕಾರ ತಕ್ಷಣ ನೆರವು ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವರದಕ್ಷಿಣೆ ಕಿರುಕುಳ ಆರೋಪ: ದಪ್ಪ, ಕಪ್ಪಾಗಿದ್ದಳೆಂದು ಹೆಂಡ್ತಿಯನ್ನೇ ಕೊಲೆಗೈದ ಪತಿ!

ಧಾರವಾಡ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ಹೆಂಡತಿಯನ್ನು ಪತಿ ಕತ್ತು ಹಿಸುಕಿ ಕೊಲೆ ಮಾಡಿದ ಭೀಕರ ಘಟನೆ ನಡೆದಿದೆ.

ಮೃತ ಮಹಿಳೆಯನ್ನು ಪ್ರಿಯಾಂಕ್ ಕಮಲಾಕರ್ (29) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಬಸವರಾಜ್ ವಡ್ಡರ್ ಎಂದು ಪೊಲೀಸರು ತಿಳಿಸಿದ್ದಾರೆ.

2024 ರಲ್ಲಿ ಪ್ರಿಯಾಂಕ್‌ಳನ್ನ ಮದುವೆಯಾಗಿದ್ದ ಬಸವರಾಜ್ ಮದುವೆಯಾದ ಒಂದೇ ವರ್ಷದಲ್ಲಿ ಬಂಗಾರ ತರುವಂತೆ ಕಿರುಕುಳ ನೀಡುತಿದ್ದ. ತವರು ‌ಮನೆಯಿಂದ ಬಂಗಾರ, ಹಣ ತರುವಂತೆ ಕಿರುಕುಳ ನೀಡಿದ್ದಲ್ಲದೇ ನೀನು ದಪ್ಪ ಇದ್ದಿ, ಗರ್ಭಿಣಿ ಆಗಲ್ಲ ಅಂತ ಕೊಲೆಗೈದಿದ್ದಾನೆ.‌

ಈ ಘಟನೆ ಜೂನ್ 29ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೃತೆಯ ಪೋಷಕರು ಈ ಮಾಹಿತಿ ತಿಳಿದು ಕಲಬುರಗಿಯಿಂದ ನವಲಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ಪ್ರಕರಣ ಸಂಬಂಧ ಬಸವರಾಜ್ ಸೇರಿದಂತೆ ರೇಣವ್ವ, ಸುಭಾಷ್ ಮತ್ತು ಸಿದ್ದರಾಮೇಶ್ ಅವರನ್ನು ಕೂಡ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಆಷಾಢ ಶುಕ್ರವಾರ: ಚಾಮುಂಡಿಬೆಟ್ಟಕ್ಕೆ ಹೊಸ ಗೈಡ್‌ಲೈನ್; ₹300 ಟಿಕೆಟ್ ರದ್ದು, VIPಗಳಿಗೆ ಮಿತಿ!

0

ಮೈಸೂರು: ಚಾಮುಂಡಿಬೆಟ್ಟದ ಆಷಾಢ ಶುಕ್ರವಾರ ಮಹೋತ್ಸವಕ್ಕೆ ಜಿಲ್ಲಾಡಳಿತ ಈ ಬಾರಿ ಕಠಿಣ ನಿಯಮ ಜಾರಿಗೊಳಿಸಿದೆ. ಸಾಮಾನ್ಯ ಭಕ್ತರಿಗೆ ತೊಂದರೆಯಾಗದಂತೆ ₹300 ವಿಶೇಷ ದರ್ಶನ ಟಿಕೆಟ್ ರದ್ದು, ಶಿಫಾರಸು ಪತ್ರದ ಮೂಲಕ ದರ್ಶನಕ್ಕೆ ಅವಕಾಶ ಇಲ್ಲ, ವಿಐಪಿಗಳಿಗೆ ನಿಗದಿತ ಸಮಯ, ಖಾಸಗಿ ವಾಹನಗಳ ಪ್ರವೇಶ ನಿಷೇಧ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಲಾಗಿದೆ.

ಜುಲೈ 17ರಿಂದ ಆರಂಭವಾಗಲಿರುವ ವಿಶೇಷ ಪೂಜೆಗಳ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಿದ್ಧತಾ ಸಭೆ ನಡೆಸಿದರು.

ಸಭೆಯಲ್ಲಿ ₹300 ದರ್ಶನ ಟಿಕೆಟ್ ವ್ಯವಸ್ಥೆಯನ್ನು ಸಂಪೂರ್ಣ ರದ್ದುಗೊಳಿಸಿ, ₹2,000 ನೇರ ದರ್ಶನ ಟಿಕೆಟ್ ಮಾತ್ರ ಮುಂದುವರಿಸಲು ತೀರ್ಮಾನಿಸಲಾಯಿತು. ರಾಜಕೀಯ ನಾಯಕರು ಅಥವಾ ಅಧಿಕಾರಿಗಳ ಶಿಫಾರಸು ಪತ್ರದ ಆಧಾರದ ಮೇಲೆ ಯಾವುದೇ ವಿಶೇಷ ಪ್ರವೇಶ ನೀಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಆಷಾಢ ಶುಕ್ರವಾರಗಳಂದು ಬೆಳಿಗ್ಗೆ 5.30ರಿಂದ 9.30ರವರೆಗೆ ಮಾತ್ರ ವಿಐಪಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಕೇವಲ ಪ್ರೋಟೋಕಾಲ್ ವ್ಯಾಪ್ತಿಯ ಗಣ್ಯರಿಗೆ ಮಾತ್ರ ಈ ಸೌಲಭ್ಯ ದೊರೆಯಲಿದ್ದು, ಉಳಿದ ಸಮಯದಲ್ಲಿ ಸಂಪೂರ್ಣವಾಗಿ ಸಾಮಾನ್ಯ ಭಕ್ತರ ದರ್ಶನಕ್ಕೆ ಆದ್ಯತೆ ನೀಡಲಾಗುತ್ತದೆ.

ಸಂಚಾರ ನಿಯಂತ್ರಣಕ್ಕಾಗಿ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಲಲಿತ ಮಹಲ್ ಪಾರ್ಕಿಂಗ್‌ನಿಂದ ಕೆಎಸ್‌ಆರ್‌ಟಿಸಿಯ ಉಚಿತ ಬಸ್ ಸೇವೆ ಮೂಲಕ ಭಕ್ತರನ್ನು ಬೆಟ್ಟಕ್ಕೆ ಕರೆದೊಯ್ಯಲಾಗುತ್ತದೆ.

ಸಭೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಕಾರ್ಯದರ್ಶಿ ರೂಪಾ ಹಾಗೂ ಡಿಸಿಪಿ ಸುಂದರಾಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿ ಭದ್ರತೆ ಮತ್ತು ವ್ಯವಸ್ಥೆಗಳ ಕುರಿತು ಅಂತಿಮ ಸಿದ್ಧತೆ ಪರಿಶೀಲಿಸಿದರು.

‘ಆರೋಪಿಗಳನ್ನು ಗುರುತಿಸಬೇಡ’… ರೇಣುಕಾಸ್ವಾಮಿ ಕೇಸ್‌ನಲ್ಲಿ ಸಾಕ್ಷಿಗೆ ವಾಟ್ಸಾಪ್ ಬೆದರಿಕೆ! ಕೋರ್ಟ್‌ನಿಂದ ಭದ್ರತೆಗೆ ಆದೇಶ

ಬೆಂಗಳೂರು: ನಟ ದರ್ಶನ್ ಆರೋಪಿ ಆಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಹೊಸ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಸಾಕ್ಷಿಯೊಬ್ಬರಿಗೆ ಅಪರಿಚಿತ ವ್ಯಕ್ತಿಯಿಂದ ವಾಟ್ಸಾಪ್ ಕರೆ ಮಾಡಿ ಆರೋಪಿಗಳ ಪರವಾಗಿ ಸಾಕ್ಷ್ಯ ನೀಡುವಂತೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ನ್ಯಾಯಾಲಯದಲ್ಲಿ ಕೇಳಿಬಂದಿದೆ.

ವಿಚಾರಣೆ ವೇಳೆ ಸಾಕ್ಷಿ, ಅಪರಿಚಿತ ವ್ಯಕ್ತಿಯೊಬ್ಬ ‘ಆರೋಪಿಗಳನ್ನು ಗುರುತಿಸಲು ಸಾಧ್ಯವಿಲ್ಲ ಎಂದು ಹೇಳು, ಬಾರ್‌ನ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ವಶಪಡಿಸಿಕೊಂಡರು ಎಂದು ಹೇಳು, ಅಪಹರಣ ಮಾಡಿದವರನ್ನು ಗುರುತಿಸಲಾಗುವುದಿಲ್ಲ ಎಂದು ಹೇಳು, ಪೊಲೀಸ್ ಮಹಜರಿನ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳು’ ಎಂದು ಸೂಚಿಸಿದ್ದಾನೆ ಎಂದು ನ್ಯಾಯಾಧೀಶರ ಮುಂದೆ ತಿಳಿಸಿದ್ದಾರೆ.

ಇದರ ಜೊತೆಗೆ, ತಮ್ಮ ಬಾರ್ ಬಳಿ ಅಪರಿಚಿತ ವ್ಯಕ್ತಿಗಳ ಸಂಚಾರ ಹೆಚ್ಚಾಗಿದ್ದು, ನಿರಂತರ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಸಾಕ್ಷಿ ಹೇಳಿದ್ದಾರೆ.

ಈ ಹೇಳಿಕೆಯನ್ನು ದಾಖಲಿಸಿಕೊಂಡ 59ನೇ ಸಿಸಿಎಚ್ ನ್ಯಾಯಾಲಯ, ಸಾಕ್ಷ್ಯ ತಿರುಚುವ ಯತ್ನದ ಕುರಿತು ಪ್ರತ್ಯೇಕ ಪ್ರಮಾಣಪತ್ರ ಸಲ್ಲಿಸಲು ಸೂಚನೆ ನೀಡಿದೆ. ಜೊತೆಗೆ, ಸಾಕ್ಷಿಯ ಹೇಳಿಕೆ ಪೂರ್ಣಗೊಳ್ಳುವವರೆಗೆ ಭದ್ರತೆ ಒದಗಿಸುವಂತೆ ತನಿಖಾಧಿಕಾರಿಗೆ ನಿರ್ದೇಶನ ನೀಡಿದೆ.

ಪ್ರಕರಣದಲ್ಲಿ ನಟ ದರ್ಶನ್ ಎ2 ಆರೋಪಿಯಾಗಿದ್ದು, ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ ಮುಂದುವರಿದಿದೆ. ಇದೇ ವೇಳೆ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದ ಹಿಂದಿರುವ ವ್ಯಕ್ತಿಗಳು ಯಾರು ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಸುವ ಸಾಧ್ಯತೆ ಹೆಚ್ಚಾಗಿದೆ.