Home Blog Page 46

ಸಮ ಸಮಾಜಕ್ಕಾಗಿ ಸಿಂಹಾಸನವೇ ತೊರೆದ ಬೊಂತಾದೇವಿ: ರಾಜೇಶ್ವರಿ ಬಡ್ನಿ

ವಿಜಯಸಾಕ್ಷಿ ಸುದ್ದಿ, ಮುಳಗುಂದ: 12ನೇ ಶತಮಾನದಲ್ಲಿ ಆಗಿ ಹೋದ ಶಿವಶರಣೆಯರಲ್ಲಿ ಬೊಂತಾದೇವಿ ಪ್ರಮುಖರಾಗಿದ್ದು, ಸಮ ಸಮಾಜ ನಿರ್ಮಾಣಕ್ಕಾಗಿ ರಾಜ್ಯವನ್ನೇ ತೊರೆದು ದೀನದಲಿತರ, ಮಹಿಳೆಯರು ಹಾಗೂ ಬಡವರ ಸೇವೆಗೆ ತಮ್ಮ ಬದುಕನ್ನು ಸಮರ್ಪಿಸಿಕೊಂಡ ಮಹಾನ್ ಶರಣೆಯಾಗಿದ್ದಾರೆ ಎಂದು ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ರಾಜೇಶ್ವರಿ ಬಡ್ನಿ ಹೇಳಿದರು.

ಪಟ್ಟಣದ ಎಸ್.ಸಿ. ಬಡ್ನಿ ಅವರ ಮನೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಆಯೋಜಿಸಿದ್ದ “ಮನೆಮನದಲ್ಲಿ ಶರಣ ಸಂಸ್ಕೃತಿ” ಕಾರ್ಯಕ್ರಮ ಹಾಗೂ ಅಧಿಕ ಮಾಸದ ಅಂಗವಾಗಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಶಿವಶರಣೆ ಬೊಂತಾದೇವಿ ಅವರ ವಚನ ನಿರೂಪಣೆ ಮಾಡಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರಮ್ಮ ಬಡ್ನಿ ವಹಿಸಿದ್ದರು. ಎಸ್.ಸಿ. ಬಡ್ನಿ, ಮಂಜುನಾಥ ಮಟ್ಟಿ, ಶೋಭಾ ಪಾಟೀಲ, ಪ್ರೇಮಾ ಬಡ್ನಿ, ಸುಮನ ಚವಡಿ, ಈರಣ್ಣ ದೊಟಿಕಲ್, ಮಹಾಂತೇಶ ನಪೂರಿಮಠ, ಶಿವಾನಂದ ಆಪ್ತಗೇರಿ ಸೇರಿದಂತೆ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.

ಬಡವರ ಬದುಕಿಗೆ ಬೆಳಕಾದ ಕಾಳಿದಾಸ ಸಂಸ್ಥೆ

ವಿಜಯಸಾಕ್ಷಿ ಸುದ್ದಿ, ಗದಗ: “ನಾವು ಹುಟ್ಟುಹಬ್ಬ ಆಚರಿಸುವಾಗ ಕೇಕ್ ಮೇಲಿನ ದೀಪವನ್ನು ಆರಿಸುತ್ತೇವೆ. ಆದರೆ ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯು ದೀಪವೇ ಇಲ್ಲದ ಗುಡಿಸಲಿನ ಮಕ್ಕಳ ಎದೆಯಲ್ಲಿ ಅಕ್ಷರದ ದೀಪ ಹಚ್ಚುವ ಮೂಲಕ ತನ್ನ 25ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ” ಎಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.

ನಗರದ ಕಳಸಾಪೂರ ರಸ್ತೆಯ ಬಯಲು ಆಂಜನೇಯ ದೇವಸ್ಥಾನ ಆವರಣದಲ್ಲಿ ಭಾನುವಾರ ನಡೆದ ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯ ರಜತ ಮಹೋತ್ಸವ ಅಂಗವಾಗಿ ವರ್ಷಪೂರ್ತಿ ನಡೆಯಲಿರುವ ಕಾರ್ಯಕ್ರಮಗಳಿಗೆ ಲ್ಯಾಪ್‌ಟಾಪ್‌ನಲ್ಲಿ ಗುಂಡಿಯನ್ನು ಒತ್ತುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಶಿಕ್ಷಣವೆಂದರೆ ಕೇವಲ ಶಾಲೆಯ ನಾಲ್ಕು ಗೋಡೆಗಳೊಳಗಿನ ಪಾಠವಲ್ಲ. ಈ ಜಗತ್ತೇ ದೊಡ್ಡ ಪಾಠಶಾಲೆ. ಅಮ್ಮನ ಜೋಗುಳ, ಅಪ್ಪನ ಬೈಗುಳ ಮನುಷ್ಯನ ಜೀವನವನ್ನು ಪರಿಪೂರ್ಣಗೊಳಿಸುತ್ತವೆ ಎಂದು ಶ್ರೀಗಳು ತಿಳಿಸಿದರು.

ಇಂದಿನ ಸಮಾಜದ ಮೌಲ್ಯಗಳ ಕುಸಿತದ ಕುರಿತು ಮಾತನಾಡಿದ ಅವರು, “ಸೂರ್ಯ, ಗಾಳಿ, ನೀರು, ಭೂಮಿ ಯಾವುದೂ ಕೆಟ್ಟಿಲ್ಲ. ಕೆಟ್ಟಿರುವುದು ಮನುಷ್ಯನ ಮನಸ್ಸು ಮಾತ್ರ” ಎಂದು ಅರ್ಥಪೂರ್ಣ ಸಂದೇಶ ನೀಡಿದರು.

ಹಿತ್ತಲಿನಲ್ಲಿರುವ ಒಂದು ಹೂವು ಬೆಳಿಗ್ಗೆ ಅರಳಿ ಸಂಜೆ ಬಾಡಿದರೂ ದೇವರ ಪಾದ ಸೇರಿ ತನ್ನ ಬದುಕು ಸಾರ್ಥಕ ಮಾಡಿಕೊಳ್ಳುತ್ತದೆ. ಅದೇ ರೀತಿ ಮನುಷ್ಯನ ಬದುಕಿಗೂ ಅರ್ಥಪೂರ್ಣ ಗುರಿ ಇರಬೇಕು ಎಂದು ಶ್ರೀಗಳು ಹೇಳಿದರು.

ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಮಾತನಾಡಿ, ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯು ರಜತ ಮಹೋತ್ಸವವನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೇ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ವಿಶಿಷ್ಟ ಸಂದೇಶ ನೀಡಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಡಾ. ಜಿ.ಬಿ. ಪಾಟೀಲ ನಿರೂಪಣೆ ಮಾಡಿದರು. ಎಸ್.ಜಿ. ಪಲ್ಲೇದ, ಬಿ.ಬಿ. ಬಾವಿಕಟ್ಟಿ, ಫಕೀರಪ್ಪ ಹೆಬಸೂರ, ಶಶಿಧರ ರೊಳ್ಳಿ, ಆರ್.ಡಿ. ಕಡ್ಲಿಕೊಪ್ಪ, ನೀಲಕಂಠ ಮರಡಿ, ವೈ.ಬಿ. ಬಾನಾಪೂರ, ಆರ್.ಎಂ. ನಿಂಬನಾಯ್ಕರ, ಎಸ್.ಡಿ. ಸಿಂಗಟಾಲಕೇರಿ, ಎಸ್.ಎಸ್. ಕರಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ದೇವರಾಜ ಅರಸು ಹಾಸ್ಟೆಲ್ ಆವರಣದಲ್ಲಿ ಶಶಿಧರ ರೊಳ್ಳಿ ಕುಟುಂಬದವರಿಂದ ಗವಿಸಿದ್ದೇಶ್ವರ ಶ್ರೀಗಳಿಗೆ ಪಾದಪೂಜೆ ಕಾರ್ಯಕ್ರಮ ನಡೆಯಿತು.

ಶಿವಮೊಗ್ಗದಲ್ಲಿ ಶಾಲಾ ವಾಹನಗಳ ದಿಢೀರ್ ತಪಾಸಣೆ; ಕುಡಿದು ಚಾಲನೆ ಮಾಡಿದ 7 ಚಾಲಕರ ವಿರುದ್ಧ ಪ್ರಕರಣ ದಾಖಲು

ಶಿವಮೊಗ್ಗ: ಜಿಲ್ಲೆಯಾದ್ಯಂತ ಸಂಚಾರಿ ಪೊಲೀಸರು ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಾಹನಗಳ ಮೇಲೆ ದಿಢೀರ್ ತಪಾಸಣೆ ನಡೆಸಿದ್ದಾರೆ.

ಈ ವೇಳೆ 7 ಚಾಲಕರು ಮದ್ಯ ಸೇವಿಸಿ ವಾಹನ ಚಾಲನೆ ಮಾಡಿರುವುದು ಪತ್ತೆಯಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತಪಾಸಣೆಯ ವೇಳೆ ಒಟ್ಟು 457 ಶಾಲಾ ವಾಹನಗಳನ್ನು ಸಂಚಾರಿ ಠಾಣೆ ಪೊಲೀಸರು ತಡೆದು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕೆಲವು ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂಬಂಧಿತ ಚಾಲಕರ ವಿರುದ್ಧ ‘ಡ್ರಂಕ್ & ಡ್ರೈವ್’ ಪ್ರಕರಣ ದಾಖಲಿಸಲಾಗಿದ್ದು, ಅವರ ಚಾಲನಾ ಪರವಾನಗಿ (DL) ರದ್ದುಪಡಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸಂಚಾರಿ ಪೊಲೀಸರು ಪತ್ರ ಬರೆದಿದ್ದಾರೆ.

ಇದೇ ವೇಳೆ ವಾಹನಗಳ ಸುರಕ್ಷತೆಗೂ ವಿಶೇಷ ಗಮನ ನೀಡಿದ ಪೊಲೀಸರು, ವಿಮೆ, ಎಮಿಷನ್ ಹಾಗೂ ಫಿಟ್‌ನೆಸ್ ಸರ್ಟಿಫಿಕೇಟ್‌ಗಳನ್ನು ಕಡ್ಡಾಯವಾಗಿ ಚಾಲ್ತಿಯಲ್ಲಿ ಇಟ್ಟುಕೊಳ್ಳುವಂತೆ ವಾಹನ ಮಾಲೀಕರಿಗೆ ಸೂಚನೆ ನೀಡಿದ್ದಾರೆ.

ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಇಂತಹ ತಪಾಸಣೆಗಳನ್ನು ಮುಂದುವರಿಸುವುದಾಗಿ ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ರಾಜಕೀಯ ಜಿದ್ದಾಜಿದ್ದಿಗೆ ರಸ್ತೆಯೇ ಬಲಿಯಾಯಿತಾ?

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಸೂರಣಗಿ-ಬಾಲೆಹೊಸೂರ ಸಂಪರ್ಕಿಸುವ ಪಿಡಬ್ಲ್ಯೂಡಿ ಜಿಲ್ಲಾ ಮುಖ್ಯ ರಸ್ತೆ ಕಳೆದ ಎರಡು ದಶಕಗಳಿಂದ ಅಭಿವೃದ್ಧಿ ಕಾಣದೇ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ರಸ್ತೆ ದುಸ್ಥಿತಿಯಿಂದ ಬೇಸತ್ತ ಜನರು ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮೇಶ್ವರದಿಂದ ಬಾಲೆಹೊಸೂರ ಮಾರ್ಗವಾಗಿ ಗುತ್ತಲ ಹಾಗೂ ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಡಾಂಬರ್‌ನ ಗುರುತುಗಳೇ ಕಾಣದಂತಾಗಿದೆ. ಮೊಣಕಾಲು ಆಳದ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ನಿತ್ಯ ಎದ್ದು-ಬಿದ್ದು ಸಾಗುವ ದುಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಕೆಸರುಮಯವಾಗುತ್ತಿದ್ದು, ವಾಹನಗಳು ಪಂಕ್ಚರ್ ಆಗುವುದು, ಜಾರಿ ಬಿದ್ದು ಆಸ್ಪತ್ರೆಗೆ ಸೇರುವುದು ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ. ಕೆಎಸ್‌ಆರ್‌ಟಿಸಿ ಚಾಲಕರು ಸಹ ಈ ಮಾರ್ಗದಲ್ಲಿ ಬಸ್ ಓಡಿಸಲು ಹಿಂದೇಟು ಹಾಕುತ್ತಿರುವುದರಿಂದ ಕೆಲ ದಿನ ಬಸ್ ಸಂಚಾರವೇ ಸ್ಥಗಿತಗೊಳ್ಳುವ ಪರಿಸ್ಥಿತಿ ಉಂಟಾಗಿದೆ.

ಈ ಭಾಗದಲ್ಲಿರುವ ಬಾಲೆಹೊಸೂರ ಮಠ, ಪ್ರಸಿದ್ಧ ಆಂಜನೇಯ ದೇವಸ್ಥಾನ, ಸರ್ಕಾರಿ ಆಸ್ಪತ್ರೆ, ಶಾಲೆ, ಬ್ಯಾಂಕ್ ಸೇರಿದಂತೆ ವಿವಿಧ ಸೇವೆಗಳಿಗೆ ಆಗಮಿಸುವ ಜನರು ರಸ್ತೆ ಸಮಸ್ಯೆಯಿಂದ ಪರದಾಡುತ್ತಿದ್ದಾರೆ.

7 ಕೋಟಿ ಮಂಜೂರು… ಟೆಂಡರ್ ಪೂರ್ಣ… ಕಾಮಗಾರಿ ಮಾತ್ರ ಶೂನ್ಯ!

ಗ್ರಾಮಸ್ಥರ ಹೋರಾಟ ಹಾಗೂ ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ಒಂದೂವರೆ ವರ್ಷದ ಹಿಂದೆಯೇ ರಸ್ತೆ ಅಭಿವೃದ್ಧಿಗೆ 7 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದ್ದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ.

ರಾಜಕೀಯ ವೈಮನಸ್ಸು, ವೈಯಕ್ತಿಕ ಪ್ರತಿಷ್ಠೆ ಹಾಗೂ ಪ್ರಭಾವಿಗಳ ಒತ್ತಡದಿಂದ ಗುತ್ತಿಗೆದಾರ ಹಿಂದೆ ಸರಿದಿದ್ದಾನೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಬಳಿಕ ಮರು ಟೆಂಡರ್ ಪ್ರಕ್ರಿಯೆ ನಡೆದರೂ ಕಾಮಗಾರಿ ಆರಂಭದ ಸ್ಥಳ ಬದಲಾವಣೆ ಸೇರಿದಂತೆ ಹಲವು ತಾಂತ್ರಿಕ ಕಾರಣಗಳಿಂದ ವಿಳಂಬ ಮುಂದುವರಿದಿದೆ.

ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ರಸ್ತೆ ಸಮಸ್ಯೆ ಮತ್ತಷ್ಟು ಗಂಭೀರವಾಗಿದ್ದು, ಜನರ ನಿರೀಕ್ಷೆಯಂತೆ ಕಾಮಗಾರಿ ಆರಂಭವಾಗುತ್ತದೆಯೇ ಎಂಬ ಪ್ರಶ್ನೆ ಈಗ ಗ್ರಾಮೀಣ ಭಾಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮಳೆ ಬಂದರೆ ಕೆಸರು, ಬಿಸಿಲಾದರೆ ಧೂಳು..! ಲಕ್ಷ್ಮೇಶ್ವರ ನಿವಾಸಿಗಳ ಗೋಳು

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಹೊಸ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಕಲಾಂ ನಗರ, ಇಂದಿರಾ ನಗರ ಹಾಗೂ ಬಸವೇಶ್ವರ ನಗರ ಪ್ರದೇಶಗಳು ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ರಸ್ತೆ ಮತ್ತು ಚರಂಡಿಗಳಿಲ್ಲದೇ ನಿವಾಸಿಗಳು ಸಂಕಷ್ಟದ ಬದುಕು ನಡೆಸುವಂತಾಗಿದೆ.

ಮಳೆಯಾದರೆ ರಸ್ತೆಗಳು ಸಂಪೂರ್ಣ ಕೆಸರಿನ ಕೆರೆಯಾಗುತ್ತಿದ್ದು, ಸಂಚಾರ ದುಸ್ತರವಾಗುತ್ತಿದೆ. ಜೀವಭಯದಲ್ಲೇ ಜನರು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಾರು 25 ವರ್ಷಗಳಾದರೂ ಈ ಭಾಗದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಪರಿಣಾಮ, ಮಳೆ ನೀರು ರಸ್ತೆಗಳಲ್ಲಿ ನಿಂತು ಕೊಳಚೆ ವಾತಾವರಣ ಸೃಷ್ಟಿಯಾಗಿದ್ದು, ನಿವಾಸಿಗಳ ಆರೋಗ್ಯಕ್ಕೂ ಅಪಾಯ ಎದುರಾಗಿದೆ.

ಈ ಪ್ರದೇಶದಲ್ಲೇ ಶ್ರವಣ ನ್ಯೂನತೆಯುಳ್ಳ ಮಕ್ಕಳ ಶಾಲೆ, ಮಹಿಳಾ ವಸತಿ ನಿಲಯ ಹಾಗೂ ಕಲಾಂ ಶಾಲೆ ಇರುವುದರಿಂದ ವಿದ್ಯಾರ್ಥಿಗಳು ಪ್ರತಿದಿನ ಪರದಾಡುತ್ತ ಸಂಚರಿಸುವಂತಾಗಿದೆ. ಪೇಪರ್, ಹಾಲು ಹಾಗೂ ತರಕಾರಿ ವಿತರಕರು ಸಹ ಕೆಸರು ರಸ್ತೆಯಲ್ಲಿ ಜಾರಿ ಬೀಳುವ ಭೀತಿಯಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ.

ರಸ್ತೆ ದುರಸ್ತಿ ಹಾಗೂ ಮೂಲ ಸೌಲಭ್ಯ ಕಲ್ಪಿಸುವಂತೆ ಹಲವು ಬಾರಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಸದ್ಯ ಕಲಾಂ ನಗರದ ರಸ್ತೆ ಪರಿಸ್ಥಿತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ಕನ್ನಡಿಯಂತಿದ್ದು, ಸ್ಥಳೀಯರು ತ್ವರಿತ ಅಭಿವೃದ್ಧಿ ಕಾಮಗಾರಿಗೆ ಆಗ್ರಹಿಸಿದ್ದಾರೆ.

ತಾನು ಅನುಭವಿಸಿದ ನೋವು ಮತ್ತೊಬ್ಬರಿಗೆ ಬರಬಾರದು..!

ವಿಜಯಸಾಕ್ಷಿ ಸುದ್ದಿ, ಗದಗ: ಕಿಡ್ನಿ ಕಸಿಗಾಗಿ ತಾವು ಅನುಭವಿಸಿದ ಸಂಕಷ್ಟ ಮತ್ತೊಬ್ಬರಿಗೆ ಎದುರಾಗಬಾರದು ಎಂಬ ಮಾನವೀಯ ಚಿಂತನೆಯಿಂದ ಹುಲಕೋಟಿಯಲ್ಲಿ ಬಡವರ ಅನುಕೂಲಕ್ಕಾಗಿ ಆಸ್ಪತ್ರೆ ನಿರ್ಮಿಸಿದ ಕೆ.ಎಚ್. ಪಾಟೀಲರ ಸಂಕಲ್ಪ ಸಮಾಜಕ್ಕೆ ಮಾದರಿಯಾಗಿದೆ ಎಂದು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಹುಲಕೋಟಿಯ ದಿ ರೂರಲ್ ಮೆಡಿಕಲ್ ಸರ್ವೀಸ್ ಸೊಸೈಟಿಯ ಕೆ.ಎಚ್. ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಗೆ ಶನಿವಾರ ಭೇಟಿ ನೀಡಿದ ಅವರು, ಆಸ್ಪತ್ರೆಯ ಸೇವಾ ಕಾರ್ಯವನ್ನು ಶ್ಲಾಘಿಸಿ ಆಶೀರ್ವಚನ ನೀಡಿದರು.

ಆಸ್ಪತ್ರೆಯ ಸೇವಾ ಕಾರ್ಯವನ್ನು ಮೆಚ್ಚಿದ ಶ್ರೀಗಳು, “ಮನುಷ್ಯನ ಬದುಕಿಗೆ ಸೇವೆಯೇ ಶ್ರೇಷ್ಠ ಧರ್ಮ. ತಾನು ಅನುಭವಿಸಿದ ನೋವನ್ನು ಸಮಾಜದ ಮತ್ತೊಬ್ಬರು ಅನುಭವಿಸಬಾರದು ಎನ್ನುವ ಮನಸ್ಸೇ ದೊಡ್ಡ ಸಂಪತ್ತು” ಎಂದು ಹೇಳಿದರು.

ಒಬ್ಬ ಬಡ ಮಹಿಳೆ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡ ಬಳಿಕ, ತನ್ನಂತ ನೋವು ಮತ್ತೊಬ್ಬರಿಗೆ ಆಗಬಾರದು ಎಂದು ಕಾಯಿಪಲ್ಲೆ ಮಾರಾಟದಿಂದ ಉಳಿಸಿದ ಹಣದಲ್ಲಿ ಗ್ರಾಮದಲ್ಲಿ ಆಸ್ಪತ್ರೆ ಕಟ್ಟಿಸಿದ ಘಟನೆಯನ್ನು ಉದಾಹರಿಸಿದ ಶ್ರೀಗಳು, “ಇಂತಹ ಮನಸ್ಸುಗಳೇ ಸಮಾಜವನ್ನು ಉಳಿಸುತ್ತವೆ” ಎಂದು ಅಭಿಪ್ರಾಯಪಟ್ಟರು.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಮಣ ಮಹರ್ಷಿಗಳ ತ್ಯಾಗ ಮನೋಭಾವವನ್ನು ಸ್ಮರಿಸಿದ ಅವರು, “ಬದುಕಿರುವ ತನಕ ಈ ದೇಹದಿಂದ ಇನ್ನೊಬ್ಬ ಜೀವಿಯಾದರೂ ಬದುಕಲಿ ಎನ್ನುವ ಭಾವನೆ ಮನುಷ್ಯನಲ್ಲಿ ಬರಬೇಕು” ಎಂದು ಕಿವಿಮಾತು ಹೇಳಿದರು.

ಆಸ್ಪತ್ರೆ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಆರಂಭಿಸಿದ ಶ್ರೀಗಳು, ಬಳಿಕ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ಕೊಪ್ಪಳ ಜಿಲ್ಲೆಯ ಪತ್ರಕರ್ತ ಹನುಮಂತ ಹಳ್ಳಿಕೇರಿ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ರೋಗಿಗಳ ಯೋಗಕ್ಷೇಮ ವಿಚಾರಿಸಿದರು.

“ಬಹುವರ್ಷಗಳ ಬಳಿಕ ಆಸ್ಪತ್ರೆಗೆ ಭೇಟಿ ನೀಡಿದ್ದು ಸಂತೋಷ ತಂದಿದೆ. ಆಸ್ಪತ್ರೆಯ ಸೇವಾ ಚಟುವಟಿಕೆಗಳು ಇನ್ನಷ್ಟು ವಿಸ್ತಾರವಾಗಲಿ” ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ. ಅವಿನಾಶ ಓದುಗೌಡ್ರ, ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ವೇಮನ ಸಾಹುಕಾರ, ಡಾ. ಪ್ಯಾರ್ ಅಲಿ ನೂರಾನಿ, ಡಾ. ದೀಪಕ, ಕಾನಿಪ ಸಂಘದ ಅಧ್ಯಕ್ಷ ರಾಜು ಹೆಬ್ಬಳ್ಳಿ, ಶರಣು ದೊಡ್ಡೂರ, ವೆಂಕಟೇಶ ಇಮರಾಪೂರ, ರಘೋತ್ತಮ ಕೊಪ್ಪರ, ಸುರೇಶ ಕಡ್ಲಿಮಟ್ಟಿ, ಹರೀಶ್ ಹೆಚ್.ಎಸ್., ಸಂತೋಷ ದೇಶಪಾಂಡೆ, ಮೌಲಾಹುಸೇನ್ ಬುಲ್ಡಿಯಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಿಕ್ಷಕ ವೃತ್ತಿಯೇ ಬದುಕಿಗೆ ಸಾರ್ಥಕತೆ: ಎಸ್.ವಿ. ಹಿರೇಮಠ

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದುದು. ಮಕ್ಕಳ ನಿಷ್ಕಳಂಕ ಮನಸ್ಸುಗಳ ಜೊತೆ ಕಳೆದ ಕ್ಷಣಗಳು ಬದುಕಿಗೆ ಸಾರ್ಥಕತೆ ನೀಡಿವೆ ಎಂದು ನಿವೃತ್ತ ಶಿಕ್ಷಕಿ ಎಸ್.ವಿ. ಹಿರೇಮಠ ಭಾವುಕರಾಗಿ ನುಡಿದರು.

ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.1ರಲ್ಲಿ ನಿವೃತ್ತ ಶಿಕ್ಷಕರಾದ ಎಸ್.ವಿ. ಹಿರೇಮಠ, ಎಸ್.ಎಚ್. ಉಪ್ಪಾರ ಹಾಗೂ ವರ್ಗಾವಣೆಗೊಂಡ ಎಂ.ಎಂ. ಕೊಪ್ಪಳ ಅವರಿಗೆ ಆಯೋಜಿಸಿದ್ದ ಸನ್ಮಾನ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿಕ್ಷಕರ ವೃತ್ತಿಯಲ್ಲಿ ಎದುರಾಗುವ ಕಷ್ಟಗಳು ಮಕ್ಕಳ ಜೊತೆಗಿನ ಆತ್ಮೀಯತೆಯಿಂದ ಮರೆಯಾಗುತ್ತವೆ. ಶಾಲೆಯೊಂದಿಗಿನ ನೆನಪುಗಳು ಜೀವನಪೂರ್ತಿ ಉಳಿಯುತ್ತವೆ ಎಂದು ಹೇಳಿದರು.

ನಿವೃತ್ತ ಶಿಕ್ಷಕರಾದ ಎಸ್.ಎಚ್. ಉಪ್ಪಾರ ಮಾತನಾಡಿ, ಶಿಕ್ಷಕರ ವೃತ್ತಿಯಿಂದ ಸಾವಿರಾರು ಮಕ್ಕಳ ಭವಿಷ್ಯ ರೂಪಿಸುವ ಅವಕಾಶ ದೊರೆತಿದ್ದು, ಅದು ಜೀವನದಲ್ಲಿ ಅಪಾರ ತೃಪ್ತಿ ನೀಡಿದೆ ಎಂದರು.

ವರ್ಗಾವಣೆಗೊಂಡ ಶಿಕ್ಷಕರಾದ ಎಂ.ಎಂ. ಕೊಪ್ಪಳ ಮಾತನಾಡಿ, “ಕಲಿತ ಶಾಲೆಯಲ್ಲೇ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ಪೂರ್ವಜನ್ಮದ ಪುಣ್ಯ. ವರ್ಗಾವಣೆ ಸಾಮಾನ್ಯ ಪ್ರಕ್ರಿಯೆಯಾಗಿದ್ದರೂ ಮತ್ತೆ ಅವಕಾಶ ಸಿಕ್ಕರೆ ಇದೇ ಶಾಲೆಗೆ ಮರಳಿ ಬರುವೆ” ಎಂದು ಭಾವುಕರಾದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ಡಿ. ಸಿದ್ದನಗೌಡರ ವಹಿಸಿದ್ದರು. ಶಾಲಾ ಪ್ರಧಾನಗುರು ಎಲ್.ಎ. ನಡುವಿನಮನಿ, ಸೇರಿದಂತೆ ಪಿ.ಬಿ. ಕೆಂಚನಗೌಡರ, ಎಂ.ಎಂ. ಮೆಗಲಮನಿ, ಕೆ.ಎಂ. ಹೆರಕಲ್ಲ, ಶಿದ್ದಲಿಂಗೇಶ ಶಿರಕೋಳ, ಎಸ್.ಎಸ್. ಹುಣಶಿಮರದ, ಜಿ.ಎಂ. ಗಾಡಿ, ಎಚ್.ಆರ್. ಭಜೆಂತ್ರಿ, ಟಿ. ವೀಣಾ, ವಿ.ಎಂ. ಕಂಠಿ, ಎಸ್.ಡಿ. ಪಂಡಿತ, ತ್ರೀವೇಣಿ ಬಡ್ನಿ, ರತ್ನಾ ಬಬಲಿ, ಶೈಲಾ ದೊಡ್ಡಮನಿ, ಶಭಾನಾ ಢಾಲಾಯತ, ವಿದ್ಯಾ ಹಾಳಕೇರಿ, ಸಂಕಮ್ಮ ಯಳವತ್ತಿ, ರೇಣುಕಾ ಬಗಾಡೆ, ಲಕ್ಷ್ಮೀ ಬೆಂದ್ರೆ, ಮಾಬುಬ್ಬಿ ಹೊಸೂರ, ರೂಪಾ ಬಗಾಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಈ ಶಾಲೆ ನಮ್ಮ ಬದುಕಿಗೆ ಬೆಳಕಾಗಿದೆ. ಇಲ್ಲಿನ ಶಿಕ್ಷಕರ ಆತ್ಮೀಯತೆ ಎಂದಿಗೂ ಮರೆಯಲು ಸಾಧ್ಯವಿಲ್ಲ.”

ಎಸ್.ವಿ. ಹಿರೇಮಠ, ನಿವೃತ್ತ ಶಿಕ್ಷಕಿ

ಪ್ರತಿಷ್ಠಿತ ಶಾಲೆಗಳ ಪ್ರವೇಶಕ್ಕೆ ಮಾರ್ಗದರ್ಶನ: ವಿದ್ಯಾರ್ಥಿನಿಯರಿಗೆ ಕೌನ್ಸೆಲಿಂಗ್

ವಿಜಯಸಾಕ್ಷಿ ಸುದ್ದಿ, ಗದಗ: ಪರಿಶಿಷ್ಟ ವರ್ಗದ ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯಕ್ಕೆ ಹೊಸ ದಿಕ್ಕು ತೋರಿಸುವ ಮಹತ್ವದ ಹೆಜ್ಜೆಯಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರತಿಷ್ಠಿತ ಶಾಲೆಗಳ ಪ್ರವೇಶಕ್ಕಾಗಿ ಕೌನ್ಸೆಲಿಂಗ್ ಕಾರ್ಯಕ್ರಮವನ್ನು ನಗರದ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

2026-27ನೇ ಶೈಕ್ಷಣಿಕ ಸಾಲಿಗೆ ವಿವಿಧ ಪ್ರತಿಷ್ಠಿತ ಶಾಲೆಗಳಿಗೆ ಆಯ್ಕೆಯಾಗಿರುವ ವಿದ್ಯಾರ್ಥಿನಿಯರಿಗೆ ತಮ್ಮ ಆಸಕ್ತಿ, ಸಾಮರ್ಥ್ಯ ಹಾಗೂ ಭವಿಷ್ಯದ ಗುರಿಗಳಿಗೆ ಅನುಗುಣವಾಗಿ ಸೂಕ್ತ ಶಾಲೆ ಆಯ್ಕೆ ಮಾಡಿಕೊಳ್ಳಲು ನೆರವಾಗುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀಮತಿ ನಂದಾ ಹಣಬರಟ್ಟಿ, ಡಯಟ್ ಉಪ ಪ್ರಾಂಶುಪಾಲರಾದ ಜಿ.ಎಂ. ಮುಂದಿನಮನಿ, ಎಂ.ಎಚ್. ಸವದತ್ತಿ ಸೇರಿದಂತೆ ವಿವಿಧ ಪ್ರತಿಷ್ಠಿತ ಶಾಲೆಗಳ ಪ್ರಾಂಶುಪಾಲರು ಭಾಗವಹಿಸಿದ್ದರು.

ಗದಗದ ರಾಜರಾಜೇಶ್ವರಿ ಹುಲಕೋಟಿ ಶಾಲೆ, ಮಹಾವೀರ ಜೈನ್ ಶಾಲೆ, ಚಿಕ್ಕಟ್ಟಿ ಶಾಲೆ ಹಾಗೂ ಲಕ್ಷ್ಮೇಶ್ವರದ ಚಂದನ್ ಸ್ಕೂಲ್‌ನ ಪ್ರಾಂಶುಪಾಲರು ತಮ್ಮ ಶಾಲೆಗಳ ಶೈಕ್ಷಣಿಕ ಸೌಲಭ್ಯಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ವಿಶೇಷ ಕಾರ್ಯಕ್ರಮಗಳು ಹಾಗೂ ಉನ್ನತ ಶಿಕ್ಷಣದ ಅವಕಾಶಗಳ ಕುರಿತು ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.

ವಿದ್ಯಾರ್ಥಿನಿಯರು ಮತ್ತು ಪಾಲಕರು ವಿವಿಧ ಶಾಲೆಗಳ ಕುರಿತು ತಮ್ಮ ಸಂದೇಹಗಳನ್ನು ಕೇಳಿ ಪರಿಹಾರ ಪಡೆದುಕೊಂಡರು. ಕೌನ್ಸೆಲಿಂಗ್ ಮೂಲಕ ಲಭ್ಯವಿರುವ ಶೈಕ್ಷಣಿಕ ಅವಕಾಶಗಳ ಬಗ್ಗೆ ಸಮಗ್ರ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಹೆಚ್ಚು ಆತ್ಮವಿಶ್ವಾಸದಿಂದ ಶಾಲೆ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.

ಈ ಕಾರ್ಯಕ್ರಮವು ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯಕ್ಕೆ ಸ್ಪಷ್ಟ ದಿಕ್ಕು ನೀಡುವುದರ ಜೊತೆಗೆ, ಉನ್ನತ ಶಿಕ್ಷಣದ ಕನಸುಗಳನ್ನು ಸಾಕಾರಗೊಳಿಸುವ ಉತ್ಸಾಹ ಮತ್ತು ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.

ಸಮಾಜದ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಶಿಕ್ಷಣದ ಅವಕಾಶ ಕಲ್ಪಿಸುವ ಸರ್ಕಾರದ ಪ್ರಯತ್ನಕ್ಕೆ ಈ ಕೌನ್ಸೆಲಿಂಗ್ ಕಾರ್ಯಕ್ರಮ ಮತ್ತಷ್ಟು ಬಲ ತುಂಬಿದಂತಾಯಿತು.

ಹೆಚ್ಚುವರಿ ದರ ವಸೂಲಿ ಮಾಡಿದರೆ ಕಾನೂನು ಕ್ರಮ: ರಸಗೊಬ್ಬರ ಅಕ್ರಮಕ್ಕೆ ಡಿಸಿ ಖಡಕ್ ವಾರ್ನಿಂಗ್

ವಿಜಯಸಾಕ್ಷಿ ಸುದ್ದಿ, ಗದಗ: ಮುಂಗಾರು ಹಂಗಾಮು ಆರಂಭವಾಗುತ್ತಿದ್ದಂತೆಯೇ ಜಿಲ್ಲೆಯ ರೈತರಿಗೆ ಅಗತ್ಯವಿರುವ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಪೂರೈಕೆಯನ್ನು ಖಚಿತಪಡಿಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ರಸಗೊಬ್ಬರ ವಿತರಣೆಯಲ್ಲಿ ಯಾವುದೇ ಅಕ್ರಮ, ಕೃತಕ ಅಭಾವ ಸೃಷ್ಟಿ ಅಥವಾ ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ವಸೂಲಿ ಮಾಡಿದರೆ ಅಂತಹ ಮಾರಾಟಗಾರರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಖಡಕ್ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮುಂಗಾರು ಹಂಗಾಮಿನ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರು ಕೇವಲ ರಾಸಾಯನಿಕ ಗೊಬ್ಬರಗಳ ಮೇಲೆ ಅವಲಂಬಿಸದೇ ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಹಸಿರು ಗೊಬ್ಬರ ಹಾಗೂ ಜೀವಾಮೃತದಂತಹ ನೈಸರ್ಗಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನ್ಯಾನೋ ಯೂರಿಯಾ ಬಳಕೆಯಿಂದ ಬೆಳೆಗೆ ಅಗತ್ಯ ಸಾರಜನಕ ಸಮರ್ಪಕವಾಗಿ ಲಭ್ಯವಾಗುವುದರ ಜೊತೆಗೆ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಅಗತ್ಯವಿರುವಷ್ಟು ರಸಗೊಬ್ಬರ ದಾಸ್ತಾನು ಲಭ್ಯವಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.

ಜಂಟಿ ಕೃಷಿ ನಿರ್ದೇಶಕರಾದ ಚೇತನಾ ಪಾಟೀಲ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಜನವರಿಯಿಂದ ಜೂನ್‌ವರೆಗೆ ವಾಡಿಕೆ 118.9 ಮಿ.ಮೀ ಮಳೆಯ ವಿರುದ್ಧ 150.4 ಮಿ.ಮೀ ಮಳೆಯಾಗಿದೆ ಎಂದರು.

ಹೆಸರು, ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿ ಹಾಗೂ ಶೇಂಗಾ ಪ್ರಮುಖ ಮುಂಗಾರು ಬೆಳೆಗಳಾಗಿದ್ದು, ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುವುದು ಎಂದು ತಿಳಿಸಿದರು.

2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 3,05,975 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಸಾಧ್ಯತೆ ಇದ್ದು, 67,598 ಕ್ವಿಂಟಲ್ ಬಿತ್ತನೆ ಬೀಜ ಅಗತ್ಯವಿದೆ.

ಪ್ರಸ್ತುತ ಜಿಲ್ಲೆಯಲ್ಲಿ 11,706 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಇದ್ದು, ಈಗಾಗಲೇ 1,337.8 ಕ್ವಿಂಟಲ್ ವಿತರಣೆಗೊಂಡಿದೆ. ಉಳಿದಂತೆ 10,368.2 ಕ್ವಿಂಟಲ್ ಬೀಜ ಲಭ್ಯವಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು.

ಜಿಲ್ಲೆಯಲ್ಲಿ ಒಟ್ಟು 67,536 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದ್ದು, ಆರಂಭಿಕ ಶಿಲ್ಕು ಸೇರಿ 37,702 ಮೆಟ್ರಿಕ್ ಟನ್ ಪೂರೈಕೆ ಲಭ್ಯವಿದೆ. ಏಪ್ರಿಲ್‌ನಿಂದ ಇಲ್ಲಿಯವರೆಗೆ 23,037 ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗಿದೆ ಎಂದು ತಿಳಿಸಲಾಯಿತು.

ಸಭೆಯಲ್ಲಿ ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್, ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ, ಆತ್ಮ ಯೋಜನೆ, ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರತಾ ಅಭಿಯಾನ, ರಾಷ್ಟ್ರೀಯ ಆಹಾರ ಭದ್ರತಾ ಮತ್ತು ಪೌಷ್ಟಿಕ ಅಭಿಯಾನ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಡಿಡಿಎಲ್‌ಆರ್ ರುದ್ರಣ್ಣಗೌಡ, ಉಪ ಕೃಷಿ ನಿರ್ದೇಶಕರು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

“ರೈತರು ಮಣ್ಣಿನ ಪರೀಕ್ಷೆ ಆಧರಿಸಿ ಮಾತ್ರ ಗೊಬ್ಬರ ಬಳಸಬೇಕು. ಯೂರಿಯಾ ಮತ್ತು ಡಿಎಪಿ ಗೊಬ್ಬರಗಳ ಅತಿಯಾದ ಬಳಕೆ ಮಣ್ಣಿನ ಫಲವತ್ತತೆಯನ್ನು ಹಾಳುಮಾಡುತ್ತಿದೆ.”

ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ

ವಿಶಾಖಪಟ್ಟಣ ಉಕ್ಕು ಕಾರ್ಖಾನೆಯಲ್ಲಿ ಭೀಕರ ದುರಂತ; ಕರಗಿದ ಲೋಹ ಹರಿದು 9 ಕಾರ್ಮಿಕರ ಸಾವು

ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣ ಉಕ್ಕು ಸ್ಥಾವರದಲ್ಲಿ ಸಂಭವಿಸಿದ ಭೀಕರ ಕೈಗಾರಿಕಾ ಅವಘಡದಲ್ಲಿ 9 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಸ್ಥಾವರದ ಉಕ್ಕು ಕರಗುವ ಕೇಂದ್ರ ಸಂಖ್ಯೆ-1ರಲ್ಲಿ ಟನ್‌ಗಟ್ಟಲೆ ಕರಗಿದ ಲೋಹವಿದ್ದ ಬೃಹತ್ ಬಕೆಟ್ ಉರುಳಿ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ.

ಅವಘಡದ ಬಳಿಕ ಘಟನಾ ಸ್ಥಳದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಇದುವರೆಗೆ ನಾಲ್ವರು ಕಾರ್ಮಿಕರ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದ್ದು, ಉಳಿದವರಿಗಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ರಕ್ಷಿಸಲ್ಪಟ್ಟ ಕಾರ್ಮಿಕರ ಮಾಹಿತಿ ಪ್ರಕಾರ, ಕರಗಿದ ಉಕ್ಕು ಕೆಳಗೆ ಬೀಳುವ ಕೆಲವೇ ಕ್ಷಣಗಳ ಮೊದಲು ಸ್ಫೋಟ ಸಂಭವಿಸಿತ್ತು. ಪರಿಣಾಮ ಹಲವು ಕಾರ್ಮಿಕರು ಬೆಂಕಿ ಮತ್ತು ಉಷ್ಣತೆಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ಹಲವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕನಿಷ್ಠ ಆರು ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿ ನಂದಿಸಲು ಹಲವು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಘಟನೆ ಕುರಿತು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರೊಂದಿಗೆ ಮಾತುಕತೆ ನಡೆಸಿ ರಕ್ಷಣಾ ಕಾರ್ಯಾಚರಣೆ ತ್ವರಿತಗೊಳಿಸುವಂತೆ ಸೂಚಿಸಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಇದೇ ವೇಳೆ, ಮಾಜಿ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಕೂಡ ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಕಾರ್ಮಿಕರ ಸುರಕ್ಷತೆಗೆ ಕೈಗಾರಿಕೆಗಳು ಹೆಚ್ಚಿನ ಆದ್ಯತೆ ನೀಡಬೇಕು. ಇಂತಹ ದುರಂತಗಳು ಮರುಕಳಿಸದಂತೆ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

2012ರ ಜೂನ್ ತಿಂಗಳಲ್ಲೂ ಇದೇ ಉಕ್ಕು ಸ್ಥಾವರದ ಉಕ್ಕು ಕರಗಿಸುವ ಘಟಕ ಸಂಖ್ಯೆ-3ರಲ್ಲಿ ಆಮ್ಲಜನಕ ಘಟಕ ಸ್ಫೋಟಗೊಂಡು 16 ಕಾರ್ಮಿಕರು ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಪ್ರಾಯೋಗಿಕ ಪರೀಕ್ಷೆ ವೇಳೆ ಅವಘಡ ಸಂಭವಿಸಿತ್ತು ಎಂದು ವರದಿಯಾಗಿತ್ತು.

error: Content is protected !!