Home Blog Page 46

ಸ್ನೇಹಿತನ ಮದುವೆಗೆ ಬಂದಿದ್ದ ಬೆಂಗಳೂರಿನ ಐಟಿ ಉದ್ಯೋಗಿ ಭದ್ರಾ ನದಿಯಲ್ಲಿ ಮುಳುಗಿ ಸಾವು

ಚಿಕ್ಕಮಗಳೂರು, ಏ.6: ಜಿಲ್ಲೆಯ ನರಸಿಂಹರಾಜಪುರ (ಎನ್.ಆರ್.ಪುರ) ತಾಲೂಕಿನ ಬನ್ನೂರು ಗ್ರಾಮದ ಬಳಿ ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐಟಿ ಉದ್ಯೋಗಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ಸಂಭವಿಸಿದೆ.

ಮೃತರನ್ನು ಗದಗ ಮೂಲದ ಅಭಿಷೇಕ್ (27) ಎಂದು ಗುರುತಿಸಲಾಗಿದೆ. ಅವರು ಬೆಂಗಳೂರಿನ ಖಾಸಗಿ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.

ಸ್ನೇಹಿತನ ಮದುವೆಯಲ್ಲಿ ಭಾಗವಹಿಸಲು ಸ್ನೇಹಿತರೊಂದಿಗೆ ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಮಕ್ಕೆ ಬಂದಿದ್ದ ಅಭಿಷೇಕ್, ಸ್ಥಳೀಯ ಹೋಂಸ್ಟೇನಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಬೆಳಿಗ್ಗೆ ಸ್ನೇಹಿತರೊಂದಿಗೆ ಭದ್ರಾ ನದಿಗೆ ಈಜಲು ತೆರಳಿದ ವೇಳೆ, ನೀರಿನ ಪ್ರಬಲ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಶೋಧ ಕಾರ್ಯಾಚರಣೆ ಕೈಗೊಂಡರು. ಗಂಟೆಗಳ ಕಾಲ ನಡೆದ ಹುಡುಕಾಟದ ಬಳಿಕ, ಬನ್ನೂರು ಸಮೀಪದ ನದಿಯಲ್ಲೇ ಅಭಿಷೇಕ್ ಅವರ ಮೃತದೇಹ ಪತ್ತೆಯಾಯಿತು.

ಮದುವೆ ಸಂಭ್ರಮದಲ್ಲಿದ್ದ ಸ್ನೇಹಿತರು ಹಾಗೂ ಕುಟುಂಬಸ್ಥರಲ್ಲಿ ಈ ಘಟನೆ ತೀವ್ರ ಶೋಕ ಮೆರೆಯಿಸಿದ್ದು, ಸಂತಸದ ವಾತಾವರಣ ಕ್ಷಣಾರ್ಧದಲ್ಲಿ ದುಃಖಕ್ಕೆ ತಿರುಗಿದೆ.

ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಎಲ್ಪಿಜಿ ಗ್ಯಾಸ್ ಸಂಕಷ್ಟ: ಆಟೋ ಚಾಲಕರ ಆಕ್ರೋಶ, ಸಚಿವ ಮುನಿಯಪ್ಪ ನಿವಾಸಕ್ಕೆ ಮುತ್ತಿಗೆ

ಬೆಂಗಳೂರು: ನಗರದಲ್ಲಿ ಉಂಟಾಗಿರುವ ಎಲ್ಪಿಜಿ ಗ್ಯಾಸ್ ಕೊರತೆ ಹೋಟೆಲ್ ಉದ್ಯಮಕ್ಕೆ ಮಾತ್ರ ಸೀಮಿತವಾಗದೇ, ಇದೀಗ ಆಟೋ ಚಾಲಕರ ಜೀವನೋಪಾಯಕ್ಕೂ ಭಾರೀ ಹೊಡೆತ ನೀಡುತ್ತಿದೆ. ಗ್ಯಾಸ್ ತುಂಬಿಸಲು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಗಿರುವ ಪರಿಸ್ಥಿತಿಗೆ ಬೇಸತ್ತ ಚಾಲಕರು, ಆಹಾರ ಸಚಿವ ಕೆ. ಹೆಚ್ ಮುನಿಯಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಹೆಬ್ಬಾಳದ ಸಂಜಯನಗರದಲ್ಲಿರುವ ಸಚಿವರ ನಿವಾಸದ ಎದುರು ಜಮಾಯಿಸಿದ ಆಟೋ ಚಾಲಕರು, “ಗ್ಯಾಸ್ ಕೊಡಿಸಲೇಬೇಕು” ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಹಲವೆಡೆ ಆಟೋಗಳಿಗೆ ಅಗತ್ಯವಿರುವ LPG ಗ್ಯಾಸ್ ಲಭ್ಯವಾಗದೆ, ದಿನನಿತ್ಯದ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ ಎಂದು ಚಾಲಕರು ಅಳಲು ತೋಡಿಕೊಂಡರು.

ಪ್ರತಿಭಟನಾಕಾರರ ಜೊತೆ ಮಾತನಾಡಿದ ಸಚಿವ ಮುನಿಯಪ್ಪ, ಕೇಂದ್ರ ಸರ್ಕಾರದಿಂದ ಪ್ರತಿದಿನ ಸುಮಾರು 3 ಸಾವಿರ ಸಿಲಿಂಡರ್‌ಗಳ ಪೂರೈಕೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿ, ಸರಬರಾಜಿನಲ್ಲಿ ವ್ಯತ್ಯಾಸ ಇಲ್ಲ ಎಂದು ಹೇಳಿದರು. ಆದರೆ ಕೆಲವು ಖಾಸಗಿ ಗ್ಯಾಸ್ ಬಂಕ್‌ಗಳಲ್ಲಿ ಹೆಚ್ಚುವರಿ ದರ ವಸೂಲಿ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು, ಬಂಕ್ ಮಾಲೀಕರೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.

ಆಟೋ ಚಾಲಕರಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ ಸಚಿವರು, ಏಪ್ರಿಲ್ 10ರಂದು ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ಸಭೆ ನಡೆಸಿ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು. ಇಂದು ಮಧ್ಯಾಹ್ನದ ನಂತರವೂ ಸಂಬಂಧಪಟ್ಟವರೊಂದಿಗೆ ಚರ್ಚೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಪ್ರತಿಭಟನೆ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟರು. ಸಮಸ್ಯೆ ತಕ್ಷಣ ಪರಿಹಾರವಾಗದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ವಿವಿಧ ಆಟೋ ಚಾಲಕರ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಇದರ ನಡುವೆ, ಪೀಸ್ ಆಟೋ ಸಂಘಟನೆಯ ಅಧ್ಯಕ್ಷ ರಘು ಸರ್ಕಾರದ ವಿರುದ್ಧ ಕಿಡಿಕಾರಿದ್ದು, ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಚಿವರು ತೆರಳುವ ಎಲ್ಲೆಡೆ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಹಾಗೂ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಜನಪ್ರತಿನಿಧಿಗಳ ಮನೆಗಳಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.

ಕಲಬುರಗಿಯಲ್ಲಿ ಭೀಕರ ಕೊಲೆ: ಸರ್ಕಾರಿ ಶಾಲಾ ಶಿಕ್ಷಕಿ ಹತ್ಯೆ ಬಳಿಕ ಶವ ಸುಟ್ಟುಹಾಕಿದ ದುಷ್ಕರ್ಮಿಗಳು

0

ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಲೆಗೈದು, ಬಳಿಕ ಶವವನ್ನು ಸುಟ್ಟುಹಾಕಿದ ಭೀಕರ ಘಟನೆ ಬೆಳಕಿಗೆ ಬಂದಿದೆ.

ಮೃತರನ್ನು ಜ್ಯೋತಿ ಕಪಾಳೆ ಹಿರೇಮಠ (57) ಎಂದು ಗುರುತಿಸಲಾಗಿದೆ. ಇವರು ಕಲಬುರಗಿ ನಗರದ ಆನಂದ್ ಕಾಲೋನಿ ನಿವಾಸಿಯಾಗಿದ್ದು, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಂದರಖೇಡ ಗ್ರಾಮದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಜ್ಯೋತಿ ಅವರು ಸಾಮಾನ್ಯವಾಗಿ ವಾರಕ್ಕೊಮ್ಮೆ ಕಲಬುರಗಿಗೆ ಬಂದು ಮತ್ತೆ ಬೀದರ್‌ಗೆ ತೆರಳುತ್ತಿದ್ದರು. ಇದೇ ವೇಳೆ ಕಲಬುರಗಿಯಿಂದ ಬೀದರ್‌ಗೆ ತೆರಳುವ ಮಾರ್ಗ ಮಧ್ಯೆ, ಕಮಲಾಪುರ ಸಮೀಪದ ಕಲ್ಮೂಡ ಗ್ರಾಮದಲ್ಲಿ ದುಷ್ಕರ್ಮಿಗಳು ಅವರನ್ನು ಕೊಲೆಗೈದು, ರಸ್ತೆ ಬದಿಯಲ್ಲಿ ಪೆಟ್ರೋಲ್ ಸುರಿದು ಶವವನ್ನು ಸುಟ್ಟುಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರಂಭದಲ್ಲಿ ಅಪರಿಚಿತ ಶವ ಪತ್ತೆ ಪ್ರಕರಣವಾಗಿ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ವೇಳೆ ಮೃತರ ಗುರುತು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತನಿಖೆ ಮುಂದುವರಿದಿದೆ.

ಹಾವೇರಿಯಲ್ಲಿ ಘೋರ ದುರಂತ: ಟ್ರ್ಯಾಕ್ಟರ್ ಹರಿದು 2 ವರ್ಷದ ಪುಟ್ಟ ಕಂದಮ್ಮ ಸಾವು!

0

ಹಾವೇರಿ:  ಹಾವೇರಿ ಜಿಲ್ಲೆಯಲ್ಲಿ ಘೋರ ದುರಂತ ಸಂಭವಿಸಿದ್ದು, ಮನೆಯ ಮುಂದೆ ನಿಂತಿದ್ದ 2 ವರ್ಷದ ಮಗುವಿನ ಮೇಲೆ ಟ್ರ್ಯಾಕ್ಟರ್ ಹರಿದು ಮಗು ಸ್ಥಳದಲ್ಲಿಯೇ ಮೃತ ಪಟ್ಟಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ಹಳೆಬಂಕಾಪುರ ಗ್ರಾಮದಲ್ಲಿ ನಡೆದಿದೆ.

ರಬೀಯಾ ದೊಡ್ಡಮನಿ (2) ಮೃತ ಮಗು ಎಂದು ಗುರುತಿಸಲಾಗಿದೆ. ಮನೆಯ ಮುಂದೆ ನಿಂತಿದ್ದ ಮಗುವಿನ ಮೇಲೆ ಏಕಾಏಕಿ ಟ್ರ್ಯಾಕ್ಟರ್ ಹರಿದು ಸಾವನ್ನಪ್ಪಿದೆ. ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾನೆ. ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇಂದೂ ಗುಡುಗು ಸಹಿತ ಮಳೆಯಾಗುವ ಸಂಭವ: 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​!

ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯ ಅಬ್ಬರ ಮುಂದುವರಿದಿದ್ದು, ಇಂದೂ ಸಹ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಕಲಬುರ್ಗಿ, ಧಾರವಾಡ, ಗದಗ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಕರಾವಳಿ ಭಾಗಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ರಾಯಚೂರು ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.

ಇನ್ನೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ, ಚಾಮರಾಜನಗರ, ಮೈಸೂರು, ಮಂಡ್ಯ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಗಂಟೆಗೆ 30–40 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಮಳೆಯ ತೀವ್ರತೆ ಹೆಚ್ಚಿರಲಿದೆ. ಗುಡುಗು, ಮಳೆ ಹಾಗೂ ಗಾಳಿಯ ಹಿನ್ನೆಲೆ ಜನರು ಅಗತ್ಯವಿದ್ದರೆ ಮಾತ್ರ ಹೊರಗೆ ತೆರಳುವುದು, ಮರಗಳ ಕೆಳಗೆ ನಿಲ್ಲದಿರುವುದು ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.

ಬೈಕ್‌ಗೆ ಡಿಕ್ಕಿ ಹೊಡೆದ ಗೂಡ್ಸ್ ವಾಹನ: ಅರಣ್ಯ ಇಲಾಖೆಯ ಇಬ್ಬರು ವಾಚರ್ಸ್ ಸ್ಥಳದಲ್ಲೇ ಸಾವು

0

ಬಳ್ಳಾರಿ: ಬೈಕ್‌ಗೆ ಹಿಂಬದಿಯಿಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಅರಣ್ಯ ಇಲಾಖೆಯ ಇಬ್ಬರು ವಾಚರ್ಸ್ ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವೆಂಕಟಾಪುರ ಗ್ರಾಮದ ಬಳಿ ನಡೆದಿದೆ.

ಮೃತರನ್ನು ಕಮಲಾಪುರದ ಕೃಷ್ಣ (26) ಮತ್ತು ವೆಂಕಟಾಪುರದ ಹನುಮಂತಪ್ಪ (50) ಎಂದು ಗುರುತಿಸಲಾಗಿದೆ. ಇವರು ಹೊರಗುತ್ತಿಗೆ ಆಧಾರದ ಮೇಲೆ ಅರಣ್ಯ ಇಲಾಖೆಯಲ್ಲಿ ವಾಚರ್ಸ್ ಆಗಿ ಕೆಲಸ ಮಾಡುತ್ತಿದ್ದರು.

ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬೈಕ್‌ಗೆ ಹಿಂಬದಿಯಿಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ಬಳಿಕ ಪರಾರಿಯಾಗಲು ಯತ್ನಿಸಿದ ಬುಲೇರೋ ಗೂಡ್ಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸ್ಥಳಕ್ಕೆ ರಾಜೇಶ್ ಭಟಗುರ್ಕಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

 

2017ರ ದರೋಡೆ–ಕೊಲೆ ಪ್ರಕರಣಕ್ಕೆ ತೀರ್ಪು: ಪ್ರಮುಖ ಆರೋಪಿಗೆ ಜೀವಾವಧಿ ಶಿಕ್ಷೆ

0

ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ತಾಂಡದಲ್ಲಿ 2017ರಲ್ಲಿ ನಡೆದಿದ್ದ ಭೀಕರ ದರೋಡೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದ್ದ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಈ ಪ್ರಕರಣದಲ್ಲಿ ಹಶ್ಯಾ ಅಲಿಯಾಸ್ ರಮೇಶ್‌ಗೆ ಜೀವಾವಧಿ ಶಿಕ್ಷೆಯ ಜೊತೆಗೆ 30 ಸಾವಿರ ರೂ. ದಂಡ ವಿಧಿಸಲಾಗಿದೆ. ಕದ್ದ ಚಿನ್ನಾಭರಣವನ್ನು ಖರೀದಿಸುತ್ತಿದ್ದ ಮೌನೇಶ್‌ಗೆ 2 ವರ್ಷಗಳ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ರಾಯಚೂರಿನ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಘಟನೆ ವೇಳೆ ದರೋಡೆಯನ್ನು ತಡೆಯಲು ಮುಂದಾದ ಮನೆ ಮಾಲೀಕ ಡಾಕ್ಯಾನಾಯಕ್ ಅವರ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ದರೋಡೆ ಕೃತ್ಯವನ್ನು ಮೂವರು ಪುರುಷರು ಮತ್ತು ಇಬ್ಬರು ಮಹಿಳೆಯರನ್ನು ಒಳಗೊಂಡ ಐದು ಸದಸ್ಯರ ಪಾರ್ದಿ ಗ್ಯಾಂಗ್ ನಡೆಸಿತ್ತು. ಆರೋಪಿಗಳು ಸುಮಾರು 50 ಸಾವಿರ ರೂ. ನಗದು ಮತ್ತು 30,400 ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದರು.

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪರ್ಲಿ ಮೂಲದ ಈ ಗ್ಯಾಂಗ್ ಸದಸ್ಯರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಇಸ್ರಾಮ್ ಮತ್ತು ಪಲ್ಲು ಗೋವಿಂದ ಎಂಬ ಆರೋಪಿಗಳು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ತಪ್ಪಿಸಿಕೊಂಡು ಪರಾರಿಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ.

ಇದಲ್ಲದೆ, ಮಹಿಳಾ ಆರೋಪಿಗಳಾದ ಗೌರಿತಾಯಿ ಮತ್ತು ಶಿಶಬಾಯಿ ಜಾಮೀನು ಪಡೆದ ಬಳಿಕ ನಾಪತ್ತೆಯಾಗಿದ್ದಾರೆ. ಹೀಗಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಇಬ್ಬರು ಆರೋಪಿಗಳಿಗೆ ಮಾತ್ರ ಶಿಕ್ಷೆ ಪ್ರಕಟವಾಗಿದೆ.

ಪೊಲೀಸ್ ತನಿಖೆಯಲ್ಲಿ, ಈ ಅಲೆಮಾರಿ ಗ್ಯಾಂಗ್ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಕಳ್ಳತನ ನಡೆಸಿ, ಕದ್ದ ಚಿನ್ನಾಭರಣವನ್ನು ಮೌನೇಶ್‌ಗೆ ನೀಡುತ್ತಿದ್ದು, ಹಣ ಪಡೆಯುತ್ತಿದ್ದುದಾಗಿ ಬಹಿರಂಗವಾಗಿದೆ. 2017ರಲ್ಲಿ ಈ ಗ್ಯಾಂಗ್ ಹಾವಳಿ ಜಿಲ್ಲೆಯ ಜನರಲ್ಲಿ ಭೀತಿ ಹುಟ್ಟಿಸಿತ್ತು.

ಲಾರಿಯೊಳಗೆ ನೇಣಿಗೆ ಕೊರಳೊಡ್ಡಿದ ಚಾಲಕ! ಅಂತದ್ದೇನಾಯ್ತು?

ಬೆಂಗಳೂರು: ಬೆಂಗಳೂರಿನ ಜೆ.ಪಿ.ನಗರದಲ್ಲಿ ಚಾಲಕನೋರ್ವ ಲಾರಿಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

ಮೃತ ಲಾರಿ ಚಾಲಕನನ್ನು ಷಣ್ಮುಗ ಎಂದು ಗುರುತಿಸಲಾಗಿದೆ. ಪೊಲೀಸರು ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ವೇಳೆ ಷಣ್ಮುಗ ಮದ್ಯಪಾನ ಮಾಡಿರುವುದು ಪತ್ತೆಯಾಗಿದೆ. ಹೀಗಾಗಿ ಪೊಲೀಸರು, ಚಾಲಕ ಷಣ್ಮುಗಗೆ ದಂಡ ವಿಧಿಸಿ ಬಳಿಕ ಲಾರಿಯನ್ನು ಜೆ.ಪಿ.ನಗರ ಠಾಣೆಗೆ ಎಳೆದೊಯ್ದಿದ್ದಾರೆ. ಆದ್ರೆ, ಷಣ್ಮುಗ ಠಾಣೆಯ ಬಳಿ ನಿಲ್ಲಿಸಿದ್ದ ಲಾರಿಯಲ್ಲೇ ನೇಣು ಬಿಗಿದುಕೊಂಡಿಕೊಂಡು ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆಯಿಂದ ಮನನೊಂದು ಚಾಲಕ, ತಡರಾತ್ರಿ ಈ ದುರಂತ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ.

ಇಂದು ಬೆಳಿಗ್ಗೆ ಲಾರಿಯೊಳಗೆ ಚಾಲಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ UDR ಕೇಸ್ ದಾಖಲಾಗಿದೆ.

ಸ್ಕೂಟಿಗೆ ಡಿಕ್ಕಿ ಹೊಡೆದ ಟ್ರಕ್: ಮಹಿಳೆ ಸಾವು, ಪತಿ ಗಂಭೀರ!

0

ಹೈದರಾಬಾದ್: ಮಾಧಾಪುರ ಮೈಂಡ್‌ಸ್ಪೇಸ್ ಪ್ರದೇಶದಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ 22 ವರ್ಷದ ಹನಿಯಾ ಆಯೇಷಾ ಮೃತಪಟ್ಟಿದ್ದಾರೆ.

ಅವರು ಹಾಗೂ ಪತಿ ಅಬ್ದುಲ್ ಬಾಸಿತ್ (26) ಸಿನಿಮಾ ನೋಡಿ ಮನೆಗೆ ಹಿಂತಿರುಗುತ್ತಿದ್ದರು. ಸ್ಕೂಟಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಆಯೇಷಾ ಮತ್ತು ಸ್ಕೂಟಿ ಟ್ರಕ್ ಅಡಿಯಲ್ಲಿ ಸಿಲುಕಿಕೊಂಡು ಸುಮಾರು ಒಂದು ಕಿಲೋಮೀಟರ್ ಎಳೆದೊಯ್ಯಲ್ಪಟ್ಟಿದ್ದಾರೆ. ಪತಿ ಅಬ್ದುಲ್ ಬಾಸಿತ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಟ್ರಕ್ ಕ್ಲೀನರ್‌ನನ್ನು ಹಿಡಿದು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಚಾಲಕನನ್ನು ಹುಡುಕಲು ತಂಡಗಳನ್ನು ರಚಿಸಲಾಗಿದೆ.

ಗೌರವ ಡಾಕ್ಟರೇಟ್ ಪದವಿ ನಿರಾಕರಿಸಿದ ಬೊಮ್ಮಾಯಿ! ಮಾಜಿ ಸಿಎಂ ಹೇಳಿದ್ದೇನು?

ಬೆಂಗಳೂರು:- ಮಾಜಿ ಸಿಎಂ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಅವರು ಗೌರವ ಡಾಕ್ಟರೇಟ್ ಪದವಿಯನ್ನು ನಿರಾಕರಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಹಾವೇರಿ ವಿಶ್ವವಿದ್ಯಾಲಯವು ತಮ್ಮ ಸಿಂಡಿಕೇಟ್ ಸಭೆಯಲ್ಲಿ ನನಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿರುವುದಕ್ಕೆ ಕುಲಪತಿಗಳು, ಉಪಕುಲಪತಿಗಳು, ಕುಲಸಚಿವರು ಹಾಗೂ ಸಿಂಡಿಕೇಟ್ ಸದಸ್ಯರಿಗೆ ಹೃತ್ಪೂರ್ವಕ ಕೃತಜ್ಞತೆಗಳು ಮತ್ತು ಧನ್ಯವಾದಗಳು.

ನಾನು ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲವೆಂದು ಈಗಾಗಲೇ ಕುಲಪತಿಗಳಿಗೆ ತಿಳಿಸಿದ್ದೇನೆ. ನಾನು ಸಾರ್ವಜನಿಕ ಸೇವೆಯಲ್ಲಿ ಇರುವುದರಿಂದ, ಸಾರ್ವಜನಿಕ ಸೇವೆಗೆ ಯಾವುದೇ ಪ್ರಶಸ್ತಿಯನ್ನು ಅಪೇಕ್ಷಿಸುವುದಿಲ್ಲ. ಸಾರ್ವಜನಿಕ ಸೇವೆಗೆ ಜನರ ಪ್ರೀತಿ ಮತ್ತು ವಿಶ್ವಾಸವೇ ನನಗೆ ಅತ್ಯಂತ ದೊಡ್ಡ ಗೌರವವೆಂದು ಭಾವಿಸುತ್ತೇನೆ. ಆದ್ದರಿಂದ ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲವೆಂದು ವಿನಮ್ರವಾಗಿ ಪುನರುಚ್ಚರಿಸುತ್ತೇನೆ.

ಗೌರವ ಡಾಕ್ಟರೇಟ್ ಎಂಬುದು ದೀರ್ಘಕಾಲದಿಂದ ಯಾವುದಾದರೂ ಕ್ಷೇತ್ರದಲ್ಲಿ ವಿಶಿಷ್ಟ ಮತ್ತು ಮಹತ್ತರ ಸೇವೆ ಸಲ್ಲಿಸಿದವರಿಗೆ ನೀಡಬೇಕಾದ ಗೌರವವೆಂಬುದು ನನ್ನ ಅಭಿಪ್ರಾಯ. ಹೀಗಾಗಿ ಇದನ್ನು ಅಂಥ ಸಾಧಕರಿಗೆ ನೀಡಬೇಕು. ರಾಜಕಾರಣಿಗಳಿಗೆ ಅಥವಾ ಸ್ವಯಂ ಪ್ರೇರಣೆಯಿಂದ ಸಮಾಜ ಸೇವೆಯಲ್ಲಿ ತೊಡಗಿರುವವರಿಗೆ ಗೌರವ ಡಾಕ್ಟರೇಟ್ ನೀಡುವುದು ಸಮಂಜಸವಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ.

error: Content is protected !!