Home Blog Page 47

ರಿಷಭ್ ಪಂತ್ ಟೀಂ ಇಂಡಿಯಾ ಏಕದಿನ ಕೆರಿಯರ್ ಮುಗೀತಾ? ವೆಸ್ಟ್ ಇಂಡೀಸ್ ಸರಣಿ ಬಗ್ಗೆ ಆಕಾಶ್ ಚೋಪ್ರಾ ಹೇಳಿದ್ದೇನು?

0

ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟಿಸಲಾಗಿದ್ದು, ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಮತ್ತೊಂದೆಡೆ, ಇರಾನಿ ಕಪ್‌ಗಾಗಿ ರೆಸ್ಟ್ ಆಫ್ ಇಂಡಿಯಾ ತಂಡದ ನಾಯಕತ್ವವನ್ನು ಪಂತ್‌ಗೆ ವಹಿಸಲಾಗಿದೆ. ಈ ಎರಡು ನಿರ್ಧಾರಗಳ ಹಿನ್ನೆಲೆಯಲ್ಲಿ ಪಂತ್ ಅವರ ವೈಟ್‌ಬಾಲ್ ಕ್ರಿಕೆಟ್ ಭವಿಷ್ಯದ ಬಗ್ಗೆ ಚರ್ಚೆ ಶುರುವಾಗಿದೆ.

ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರ ಪ್ರಕಾರ, ಏಕದಿನ ತಂಡದಿಂದ ಪಂತ್ ಅವರನ್ನು ಹೊರಗಿಟ್ಟಿರುವುದು ಆಯ್ಕೆ ಸಮಿತಿಯ ದೃಷ್ಟಿಕೋನದ ಬಗ್ಗೆ ಒಂದು ಪ್ರಮುಖ ಸೂಚನೆಯಾಗಿದೆ. ಜಿಯೋಸ್ಟಾರ್ ಜೊತೆಗಿನ ಮಾತುಕತೆಯಲ್ಲಿ ಮಾತನಾಡಿದ ಚೋಪ್ರಾ, ಟೆಸ್ಟ್ ಕ್ರಿಕೆಟ್‌ನಲ್ಲಿ ಪಂತ್ ಪ್ರಮುಖ ಆಟಗಾರರಾಗಿದ್ದರೂ, ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಅವರ ಸ್ಥಾನಮಾನ ಬದಲಾಗಿರುವ ಸಾಧ್ಯತೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಂತ್ ಕಳೆದ ಕೆಲವು ವರ್ಷಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ಪಂದ್ಯಗಳನ್ನು ಆಡಿಲ್ಲ. ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೂ ಅವರನ್ನು ಆಯ್ಕೆ ಮಾಡಲಾಗಿಲ್ಲ. ಬದಲಾಗಿ ಧ್ರುವ್ ಜುರೆಲ್ ಅವರನ್ನು ತಂಡದಲ್ಲಿರುವ ವಿಕೆಟ್‌ಕೀಪರ್ ಆಗಿ ಆಯ್ಕೆ ಮಾಡಲಾಗಿದೆ.

ಆದರೆ, ಇದೇ ವೇಳೆ ರೆಸ್ಟ್ ಆಫ್ ಇಂಡಿಯಾ ತಂಡದ ನಾಯಕತ್ವವನ್ನು ಪಂತ್‌ಗೆ ವಹಿಸಲಾಗಿದೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಇರಾನಿ ಕಪ್‌ನಲ್ಲಿ ರಣಜಿ ಟ್ರೋಫಿ ಚಾಂಪಿಯನ್ ಜಮ್ಮು-ಕಾಶ್ಮೀರ ವಿರುದ್ಧ ರೆಸ್ಟ್ ಆಫ್ ಇಂಡಿಯಾ ತಂಡ ಕಣಕ್ಕಿಳಿಯಲಿದೆ. ಪಂತ್ ನಾಯಕನಾಗಿದ್ದರೆ, ಸರ್ಫರಾಜ್ ಖಾನ್ ಉಪನಾಯಕರಾಗಿದ್ದಾರೆ.

ಇನ್ನು, 2027ರ ಏಕದಿನ ವಿಶ್ವಕಪ್‌ ಸಿದ್ಧತೆಯ ದೃಷ್ಟಿಯಿಂದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಮಹತ್ವ ಪಡೆದಿದೆ. ಈ ಸರಣಿಗೆ ಶುಭ್‌ಮನ್ ಗಿಲ್ ನಾಯಕನಾಗಿ ಮುಂದುವರಿದಿದ್ದು, ಕನ್ನಡಿಗ ಕೆ.ಎಲ್. ರಾಹುಲ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರವೀಂದ್ರ ಜಡೇಜಾ ಏಕದಿನ ತಂಡಕ್ಕೆ ಮರಳಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಮೂರು ಏಕದಿನ ಪಂದ್ಯಗಳು ಸೆಪ್ಟೆಂಬರ್ 27ರಂದು ತಿರುವನಂತಪುರಂ, ಸೆಪ್ಟೆಂಬರ್ 30ರಂದು ಗುವಾಹಟಿ ಹಾಗೂ ಅಕ್ಟೋಬರ್ 3ರಂದು ನ್ಯೂ ಚಂಡೀಗಢದಲ್ಲಿ ನಡೆಯಲಿವೆ. ಬಳಿಕ ಅಕ್ಟೋಬರ್ 6ರಿಂದ ಐದು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ.

ಟಿ20 ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕತ್ವ ವಹಿಸಲಿದ್ದು, ತಿಲಕ್ ವರ್ಮಾ ಉಪನಾಯಕರಾಗಿದ್ದಾರೆ. ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಇಬ್ಬರೂ ವಿಕೆಟ್‌ಕೀಪರ್‌ಗಳಾಗಿ ತಂಡದಲ್ಲಿದ್ದಾರೆ. ಯುವ ಆಟಗಾರ ವೈಭವ್ ಸೂರ್ಯವಂಶಿಗೂ ಟಿ20 ತಂಡದಲ್ಲಿ ಸ್ಥಾನ ನೀಡಲಾಗಿದೆ.

ಭಾರತ ಏಕದಿನ ತಂಡ

ಶುಭ್‌ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಋತುರಾಜ್ ಗಾಯಕ್ವಾಡ್, ಕೆ.ಎಲ್. ರಾಹುಲ್ (ಉಪನಾಯಕ), ಧ್ರುವ್ ಜುರೆಲ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಮೊಹಮ್ಮದ್ ಸಿರಾಜ್, ಆಕಿಬ್ ನಬಿ, ಯಶಸ್ವಿ ಜೈಸ್ವಾಲ್, ನಮನ್ ಧೀರ್.

ಭಾರತ ಟಿ20 ತಂಡ

ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ (ಉಪನಾಯಕ), ಶಿವಂ ದುಬೆ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ನಿತೀಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್.

ನಕಲಿ ಔಷಧ ಜಾಲದ ತನಿಖೆ ಮತ್ತಷ್ಟು ಚುರುಕು: ಔಷಧ ಸೇವಿಸಿದ ರೋಗಿಗಳ ಮಾಹಿತಿ ಸಂಗ್ರಹಕ್ಕೆ ಮುಂದಾದ FDA ಅಧಿಕಾರಿಗಳು

0

ಬೆಂಗಳೂರು: ರಾಜ್ಯದಲ್ಲಿ ಬೆಳಕಿಗೆ ಬಂದಿರುವ ನಕಲಿ ಔಷಧ ಜಾಲದ ತನಿಖೆ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ನಕಲಿ ಔಷಧಗಳು ಎಲ್ಲೆಲ್ಲಿಗೆ ಪೂರೈಕೆಯಾಗಿವೆ ಎಂಬುದರ ಜತೆಗೆ, ಅವುಗಳನ್ನು ಸೇವಿಸಿರುವ ರೋಗಿಗಳ ಮಾಹಿತಿ ಸಂಗ್ರಹಿಸಲು ಆಹಾರ ಮತ್ತು ಔಷಧ ಆಡಳಿತ (FDA) ಅಧಿಕಾರಿಗಳು ಮುಂದಾಗಿದ್ದಾರೆ.

ಯಾವ ಆಸ್ಪತ್ರೆಗಳಿಗೆ ನಕಲಿ ಔಷಧ ಪೂರೈಕೆಯಾಗಿದೆ ಎಂಬುದರ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಆಸ್ಪತ್ರೆಗಳ ಫಾರ್ಮಸಿಗಳಿಂದ ಔಷಧಗಳ ಖರೀದಿ ಮತ್ತು ಬಳಕೆಯ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಯಾವ ದಿನ, ಯಾವ ಆಸ್ಪತ್ರೆಯಲ್ಲಿ ಎಷ್ಟು ಪ್ರಮಾಣದ ಔಷಧ ಬಳಕೆಯಾಗಿದೆ ಎಂಬ ಮಾಹಿತಿಯನ್ನೂ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.

ನಕಲಿ ಔಷಧ ಪಡೆದಿರುವ ರೋಗಿಗಳ ವಿವರಗಳನ್ನು ಕಲೆಹಾಕಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಔಷಧ ಸೇವಿಸಿದ ಬಳಿಕ ರೋಗಿಗಳ ಆರೋಗ್ಯ ಸ್ಥಿತಿ ಹೇಗಿದೆ, ಅವರಿಗೆ ಯಾವುದೇ ತೊಂದರೆ ಅಥವಾ ಅಡ್ಡ ಪರಿಣಾಮ ಉಂಟಾಗಿದೆಯೇ ಎಂಬ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತಿದೆ.

ನಕಲಿ ಔಷಧದಿಂದ ರೋಗಿಗಳ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದ್ದು, ರೋಗಿಗಳಿಗೆ ನೀಡಲಾಗಿದ್ದ ಔಷಧದ ಬ್ಯಾಚ್‌ ಸಂಖ್ಯೆ, ಆಸ್ಪತ್ರೆ ಮತ್ತು ಫಾರ್ಮಸಿಯ ವಿವರಗಳನ್ನು ಕಲೆಹಾಕಲಾಗುತ್ತಿದೆ.

ಇದರ ಜತೆಗೆ ನಕಲಿ ಔಷಧದ ಸಂಪೂರ್ಣ ಪೂರೈಕೆ ಸರಪಳಿಯನ್ನು ಪತ್ತೆಹಚ್ಚಲು ಎಫ್‌ಡಿಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನಕಲಿ ಔಷಧ ಪೂರೈಕೆಯಾಗಿರುವ ಆಸ್ಪತ್ರೆಗಳು ಹಾಗೂ ಮೆಡಿಕಲ್‌ ಶಾಪ್‌ಗಳ ಪಟ್ಟಿಯನ್ನು ಸಿದ್ಧಪಡಿಸುವ ಕಾರ್ಯವೂ ನಡೆಯುತ್ತಿದೆ.

ನಕಲಿ ಔಷಧ ಸೇವನೆಯಿಂದ ರೋಗಿಗಳಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಿದೆಯೇ ಎಂಬುದರ ಮೇಲೂ ಅಧಿಕಾರಿಗಳು ಗಮನಹರಿಸಿದ್ದಾರೆ. ರೋಗಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಕಂಡುಬಂದಿರುವುದು ದೃಢಪಟ್ಟರೆ, ಮುಂದಿನ ಕ್ರಮ ಕೈಗೊಳ್ಳಲು ಎಫ್‌ಡಿಎ ಸಿದ್ಧತೆ ನಡೆಸಿದೆ.

ಪ್ರಕರಣದ ತನಿಖೆಯ ಜತೆಗೆ ನಕಲಿ ಔಷಧ ಸೇವನೆಯಿಂದ ರೋಗಿಗಳ ಆರೋಗ್ಯದ ಮೇಲೆ ಉಂಟಾಗಿರುವ ಪರಿಣಾಮದ ಬಗ್ಗೆಯೂ ಪ್ರತ್ಯೇಕ ವರದಿ ಸಿದ್ಧಪಡಿಸುವ ಸಾಧ್ಯತೆಯಿದೆ. ಹೀಗಾಗಿ ನಕಲಿ ಔಷಧ ಜಾಲದ ಮೂಲದಿಂದ ಹಿಡಿದು, ಅದರ ಪೂರೈಕೆ, ಬಳಕೆ ಹಾಗೂ ರೋಗಿಗಳ ಆರೋಗ್ಯದ ಮೇಲಿನ ಪರಿಣಾಮದವರೆಗೆ ಅಧಿಕಾರಿಗಳು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

ಸೌಜನ್ಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೊಸ ‘SIT’ ರಚಿಸಿ 3 ತಿಂಗಳಲ್ಲಿ ಮರು ತನಿಖೆಗೆ ಸುಪ್ರೀಂ ಕೋರ್ಟ್ ಸೂಚನೆ!

0

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ಪ್ರಕರಣದ ಮರು ತನಿಖೆಗೆ ನಿರ್ದೇಶನ ನೀಡಿದೆ. ಹೊಸ ವಿಶೇಷ ತನಿಖಾ ತಂಡ (SIT) ರಚಿಸಿ ತನಿಖೆ ನಡೆಸುವಂತೆ ಸೂಚಿಸಿರುವ ಸುಪ್ರೀಂ ಕೋರ್ಟ್, ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದೆ.

ಸೌಜನ್ಯ ಪ್ರಕರಣದ ತನಿಖೆಯನ್ನು ಈ ಹಿಂದೆ ಕೇಂದ್ರ ತನಿಖಾ ಸಂಸ್ಥೆ (CBI) ನಡೆಸಿತ್ತು. ತನಿಖೆಯ ಬಳಿಕ ಆರೋಪಿಗಳನ್ನು ಖುಲಾಸೆಗೊಳಿಸಲಾಗಿತ್ತು. ಇದಾದ ಬಳಿಕ ಸೌಜನ್ಯ ಅವರ ತಾಯಿ ಕುಸುಮಾವತಿ ಅವರು ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದರು.

ಆದರೆ, ಮರು ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು. ಹೈಕೋರ್ಟ್‌ ಆದೇಶದ ಬಳಿಕ ಕುಸುಮಾವತಿ ಅವರು ಸುಪ್ರೀಂ ಕೋರ್ಟ್‌ಗೆ ವಿಶೇಷ ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ನಡೆಸಿದ್ದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ಪೀಠ ತೀರ್ಪನ್ನು ಕಾಯ್ದಿರಿಸಿತ್ತು.

ಇದೀಗ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಹೊಸ ಎಸ್‌ಐಟಿ ರಚಿಸಿ ಪ್ರಕರಣದ ತನಿಖೆ ನಡೆಸುವಂತೆ ಸೂಚಿಸಿರುವ ನ್ಯಾಯಾಲಯ, ಮೂರು ತಿಂಗಳ ಅವಧಿಯಲ್ಲಿ ತನಿಖೆಯನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದೆ.

ಅಲ್ಲದೆ, ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಅಧಿಕಾರಿಗಳನ್ನು ಹೊಸದಾಗಿ ರಚಿಸಲಾಗುವ ಎಸ್‌ಐಟಿಯಲ್ಲಿ ಸೇರ್ಪಡೆಗೊಳಿಸಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಸೂಚಿಸಿದೆ.

ಹೀಗಾಗಿ ಹಲವು ವರ್ಷಗಳಿಂದ ಚರ್ಚೆಯಲ್ಲಿರುವ ಧರ್ಮಸ್ಥಳ ಸೌಜನ್ಯ ಪ್ರಕರಣ ಇದೀಗ ಮತ್ತೊಮ್ಮೆ ಮರು ತನಿಖೆಯ ಹಂತಕ್ಕೆ ಬಂದಿದೆ. ಹೊಸ ಎಸ್‌ಐಟಿ ತನಿಖೆ ಆರಂಭಿಸಿದ ಬಳಿಕ ಪ್ರಕರಣದಲ್ಲಿ ಯಾವ ರೀತಿಯ ಬೆಳವಣಿಗೆಗಳು ನಡೆಯಲಿವೆ ಎಂಬುದು ಕುತೂಹಲ ಮೂಡಿಸಿದೆ.

ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಿಡಿಗೇಡಿತನ: ಅಪಾರ್ಟ್ಮೆಂಟ್ʼನಿಂದ ಮಾಂಸ ಎಸೆದ ಮೂವರ ಬಂಧನ

0

ಹೈದರಾಬಾದ್: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಅಪಾರ್ಟ್‌ಮೆಂಟ್ ಕಟ್ಟಡವೊಂದರ ಏಳನೇ ಮಹಡಿಯಿಂದ ಮಾಂಸ ಎಸೆದ ಆರೋಪಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ನಡೆದಿದ್ದು, ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಘಟನೆ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಚಾರ್ಮಿನಾರ್ ವಲಯದ ಪೊಲೀಸ್ ತಂಡಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾರ್ಟ್‌ಮೆಂಟ್‌ನ ಮೂವರು ನಿವಾಸಿಗಳನ್ನು ಬಂಧಿಸಲಾಗಿದೆ ಎಂದು ಚಾರ್ಮಿನಾರ್ ವಲಯದ ಡಿಸಿಪಿ ಖರೆ ಕಿರಣ್ ತಿಳಿಸಿದ್ದಾರೆ.

ಬಂಧಿತರನ್ನು ಮೊಹಮ್ಮದ್ ಇಮ್ರಾನ್ ಖುರೇಷಿ, ಅರ್ಷಿಯಾ ಬೇಗಂ ಮತ್ತು ಸಬೀನಾ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದೇ ವೇಳೆ ಪ್ರಕರಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಹಾಗೂ ಪರಿಶೀಲಿಸದ ಮಾಹಿತಿಯನ್ನು ನಂಬದಂತೆ ಸಾರ್ವಜನಿಕರಿಗೆ ಡಿಸಿಪಿ ಖರೆ ಕಿರಣ್ ಮನವಿ ಮಾಡಿದ್ದಾರೆ. ಯಾವುದೇ ದೃಢೀಕರಣವಿಲ್ಲದ ಮಾಹಿತಿಯನ್ನು ಇತರರಿಗೆ ಹಂಚಿಕೊಳ್ಳದಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಗಣಪತಿ ವಿಸರ್ಜನೆ ವೇಳೆ ಆಯತಪ್ಪಿ ನೀರಿಗೆ ಬಿದ್ದ ಯುವಕ: ಬೆಳಗ್ಗೆ ಪತ್ತೆಯಾದ ಮೃತದೇಹ

0

ಶಿವಮೊಗ್ಗ: ಜಿಲ್ಲಾಡಳಿತದ ಎಚ್ಚರಿಕೆ ಮತ್ತು ಮಾರ್ಗಸೂಚಿಗಳ ನಡುವೆಯೂ ಗಣೇಶ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ 20 ವರ್ಷದ ಯುವಕ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ನಡೆದಿದೆ. ದೇವರಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದು, ಮೃತ ಯುವಕನನ್ನು ರಾಕೇಶ್ ಎಂದು ಗುರುತಿಸಲಾಗಿದೆ.

ಭದ್ರಾವತಿಯಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ರಾಕೇಶ್, ಭದ್ರಾವತಿ ತಾಲೂಕಿನ ರಂಗನಾಥಪುರದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ. ಭಾನುವಾರ ಸಂಜೆ ಆರಂಭಗೊಂಡಿದ್ದ ಗಣೇಶ ವಿಸರ್ಜನಾ ಮೆರವಣಿಗೆ ತಡರಾತ್ರಿ ಸುಮಾರು 1 ಗಂಟೆ ವೇಳೆಗೆ ದೇವರಹಳ್ಳಿ ಕೆರೆ ಬಳಿ ತಲುಪಿತ್ತು.

ಈ ವೇಳೆ ಗಣೇಶ ವಿಸರ್ಜನೆ ಮಾಡುವ ಸಂದರ್ಭದಲ್ಲಿ ರಾಕೇಶ್ ಆಯತಪ್ಪಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದಾನೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ತಕ್ಷಣ ಶೋಧ ಕಾರ್ಯ ಆರಂಭಿಸಿದ್ದು, ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ರಾತ್ರಿಯಿಡೀ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದರು. ಆದರೆ ಕೆರೆಯಲ್ಲಿ ಗಿಡ-ಗಂಟಿಗಳು ಹಾಗೂ ಹುಲ್ಲು ಹೆಚ್ಚಾಗಿದ್ದರಿಂದ ಶೋಧ ಕಾರ್ಯಕ್ಕೆ ತೀವ್ರ ಅಡ್ಡಿಯಾಗಿತ್ತು. ನಿರಂತರ ಶೋಧ ಕಾರ್ಯದ ಬಳಿಕ ಇಂದು ಬೆಳಗ್ಗೆ ರಾಕೇಶ್ ಅವರ ಮೃತದೇಹ ಪತ್ತೆಯಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶಬರಿಮಲೆ ಅಯ್ಯಪ್ಪ ಸನ್ನಿಧಿಯಲ್ಲಿ ‘ಅರವಣ ಪಾಯಸಂ’ ಪ್ರಸಾದದ ಕೊರತೆ: ಭಕ್ತರ ಅಸಮಾಧಾನ

0

ತಿರುವನಂತಪುರ: ಹಿಂದೂಗಳ ಪವಿತ್ರ ಯಾತ್ರಾಕ್ಷೇತ್ರವಾದ ಶಬರಿಮಲೆ ಅಯ್ಯಪ್ಪ ಸನ್ನಿಧಿಯಲ್ಲಿ ಭಕ್ತರಿಗೆ ಅತ್ಯಂತ ಪ್ರಿಯವಾದ ಅರವಣ ಪಾಯಸಂ ಪ್ರಸಾದದ ಕೊರತೆ ಉಂಟಾಗಿದೆ. ಇದರಿಂದ ಭಕ್ತರಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಸಮಸ್ಯೆ ಕುರಿತು ಪರಿಶೀಲನೆ ನಡೆಸುವುದಾಗಿ ಕೇರಳದ ದೇವಸ್ವಂ ಸಚಿವ ಕೆ. ಮುರಳೀಧರನ್ ತಿಳಿಸಿದ್ದಾರೆ.

ಸಾಮಾನ್ಯವಾಗಿ ಶಬರಿಮಲೆ ದೇವಸ್ಥಾನದ ಬಾಗಿಲು ಮುಚ್ಚಿರುವ ಅವಧಿಯಲ್ಲಿ ಪ್ರಸಾದ ಘಟಕದ ನವೀಕರಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಮುಂಬರುವ ಶಬರಿಮಲೆ ಯಾತ್ರೆ ಆರಂಭಕ್ಕೂ ಮುನ್ನ ಅರವಣ ಪಾಯಸಂ ತಯಾರಿಕಾ ಘಟಕದ ನವೀಕರಣ ಕಾಮಗಾರಿ ಪೂರ್ಣಗೊಳಿಸಬೇಕಿದ್ದು, ಸದ್ಯ ಈ ಕಾರ್ಯ ನಡೆಯುತ್ತಿದೆ.

ಈ ನಡುವೆ ಮುಂದಿನ ಸಂಕ್ರಾಂತಿ ಸಂದರ್ಭದಲ್ಲಿ ಶಬರಿಮಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಭಕ್ತರು ಈಗಿನಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಶಬರಿಮಲೆಗೆ ಆಗಮಿಸುತ್ತಿದ್ದಾರೆ. ಇದರಿಂದ ಅರವಣ ಪ್ರಸಾದಕ್ಕೆ ಬೇಡಿಕೆ ಹೆಚ್ಚಾಗಿ ಕೊರತೆ ಉಂಟಾಗಿದೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಸಚಿವ ಕೆ. ಮುರಳೀಧರನ್, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತಿರುವಾಂಕೂರು ದೇವಸ್ವಂ ಬೋರ್ಡ್‌ (ಟಿಡಿಬಿ) ಅಧ್ಯಕ್ಷ ಕೆ. ಜಯಕುಮಾರ್ ಅವರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ.

ಶಬರಿಮಲೆ ಯಾತ್ರೆ ಆರಂಭವಾದ ಬಳಿಕವೂ ಅರವಣ ಪ್ರಸಾದದ ಕೊರತೆ ಮುಂದುವರಿಯಬಹುದೇ ಎಂಬ ಆತಂಕ ಭಕ್ತರಲ್ಲಿ ಮೂಡಿದೆ. ಯಾತ್ರೆ ಸಂದರ್ಭದಲ್ಲಿ ಭಕ್ತರಿಗೆ ಈ ರೀತಿಯ ತೊಂದರೆ ಎದುರಾಗದಂತೆ ನೋಡಿಕೊಳ್ಳುವುದು ಸರ್ಕಾರದ ಹಾಗೂ ದೇವಸ್ವಂ ಮಂಡಳಿಯ ಜವಾಬ್ದಾರಿಯಾಗಿದೆ ಎಂದು ಸಚಿವರು ಹೇಳಿದ್ದಾರೆ.

ಅರವಣ ಪಾಯಸಂ ತಯಾರಿಕಾ ಘಟಕದ ನವೀಕರಣ ಕಾಮಗಾರಿ ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಸಚಿವರು ತಿಳಿಸಿದ್ದಾರೆ. ಅರವಣ ಪಾಯಸಂ ಶಬರಿಮಲೆ ಅಯ್ಯಪ್ಪ ಸನ್ನಿಧಿಯ ಪ್ರಸಿದ್ಧ ಸಿಹಿ ಪ್ರಸಾದವಾಗಿದ್ದು, ಕೆಂಪು ಅಕ್ಕಿ, ಬೆಲ್ಲ ಹಾಗೂ ತುಪ್ಪ ಬಳಸಿ ಸಾಂಪ್ರದಾಯಿಕವಾಗಿ ತಯಾರಿಸಲಾಗುತ್ತದೆ.

ಪೆಟ್ರೋಲ್ ಬಂಕ್‌ನಲ್ಲಿ ಗುಂಡಿನ ದಾಳಿ; ಇಬ್ಬರಿಗೆ ಗಾಯ, ಆರೋಪಿ ವಶಕ್ಕೆ!

0

ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ಮಟ್ಟಿಹಾಳ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಗುಂಡಿನ ದಾಳಿಗೆ ತಿರುಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಮಟ್ಟಿಹಾಳ ಗ್ರಾಮದ ಪೆಟ್ರೋಲ್ ಬಂಕ್‌ನಲ್ಲಿ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಸುಖದೇವ್ ಹಾಗೂ ರಾಜು ಎಂದು ಗುರುತಿಸಲಾಗಿದೆ.

ಸುಖದೇವ್ ಅವರು ಸ್ನೇಹಿತ ರಾಜು ಜೊತೆ ಪೆಟ್ರೋಲ್ ಬಂಕ್‌ಗೆ ತೆರಳಿದ್ದ ವೇಳೆ ಬಂಕ್ ಮಾಲೀಕ ಸಂಗಪ್ಪ ಪೂಜಾರಿ ಅವರೊಂದಿಗೆ ಜಗಳ ನಡೆದಿದೆ ಎನ್ನಲಾಗಿದೆ. ಬಳಿಕ ಸಂಗಪ್ಪ ಮನೆಗೆ ತೆರಳಿ ಪರವಾನಗಿ ಹೊಂದಿದ್ದ ಪಿಸ್ತೂಲ್ ತಂದು ಇಬ್ಬರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ತಿಳಿದುಬಂದಿದೆ.

ಗುಂಡಿನ ದಾಳಿಯಲ್ಲಿ ಸುಖದೇವ್ ಅವರ ಹೊಟ್ಟೆ ಮತ್ತು ಬೆನ್ನಿಗೆ ಗುಂಡುಗಳು ತಗುಲಿದ್ದು, ರಾಜು ಅವರಿಗೂ ಗಾಯಗಳಾಗಿವೆ. ಇಬ್ಬರನ್ನೂ ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಬಳಿಕ ಕೊಲ್ಹಾರ ಪೊಲೀಸರು ಸಂಗಪ್ಪ ಪೂಜಾರಿಯನ್ನು ವಶಕ್ಕೆ ಪಡೆದಿದ್ದು, ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಮೀನಿಗೆ ತೆರಳುತ್ತಿದ್ದ ರೈತನಿಗೆ ವಿದ್ಯುತ್ ಶಾಕ್; ಸ್ಥಳದಲ್ಲೇ ಸಾವು!

0

ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ರೈತರೊಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು 60 ವರ್ಷದ ರಂಗಶಾಮಣ್ಣ ಎಂದು ಗುರುತಿಸಲಾಗಿದೆ. ರಂಗಶಾಮಣ್ಣ ಅವರು ಎಂದಿನಂತೆ ಕೃಷಿ ಚಟುವಟಿಕೆಗಾಗಿ ತಮ್ಮ ಜಮೀನಿಗೆ ತೆರಳುತ್ತಿದ್ದರು. ಈ ವೇಳೆ ವಿದ್ಯುತ್ ತಂತಿಯೊಂದು ತುಂಡಾಗಿ ನೆಲಕ್ಕೆ ಬಿದ್ದಿತ್ತು. ಇದನ್ನು ಗಮನಿಸದೆ ರಂಗಶಾಮಣ್ಣ ಅವರು ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ್ದಾರೆ. ತಕ್ಷಣ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿದ್ಯುತ್ ತಂತಿಗಳ ನಿರ್ವಹಣೆಯಲ್ಲಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ವಿದ್ಯುತ್ ತಂತಿಗಳ ನಿರ್ವಹಣೆ ಹಾಗೂ ಸುರಕ್ಷತೆ ಬಗ್ಗೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಘಟನಾ ಸ್ಥಳಕ್ಕೆ ಶಿರಾ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಸ್ತೂರಿರಂಗನ್ ವರದಿ ವಿರೋಧಿಸಿ ಇಂದು ಶೃಂಗೇರಿ ಬಂದ್, ಖಾಸಗಿ ಶಾಲೆ-ಕಾಲೇಜಿಗೂ ರಜೆ!

0

ಚಿಕ್ಕಮಗಳೂರು : ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಕಸ್ತೂರಿರಂಗನ್ ವರದಿ ಅನುಷ್ಠಾನವನ್ನು ವಿರೋಧಿಸಿ ಇಂದು ಬಂದ್ ನಡೆಯುತ್ತಿದೆ.

ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್‌ಗೆ ಕರೆ ನೀಡಲಾಗಿದ್ದು, ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಸೇರಿದಂತೆ ಹಲವು ರೈತ ಸಂಘಟನೆಗಳು ಇದಕ್ಕೆ ಬೆಂಬಲ ಸೂಚಿಸಿವೆ.

ಕಸ್ತೂರಿರಂಗನ್ ವರದಿ ಜಾರಿಯಾದರೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಾಸಿಸುವ ಜನರ ಜೀವನದ ಮೇಲೆ ಪರಿಣಾಮ ಬೀರಲಿದೆ ಎಂದು ರೈತ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

ವರದಿ ಅವೈಜ್ಞಾನಿಕವಾಗಿದ್ದು, ಇದನ್ನು ಜಾರಿಗೊಳಿಸಬಾರದು ಎಂಬುದು ಪ್ರತಿಭಟನಾಕಾರರ ಪ್ರಮುಖ ಆಗ್ರಹವಾಗಿದೆ.

ಬಂದ್ ಹಿನ್ನೆಲೆಯಲ್ಲಿ ಶೃಂಗೇರಿಯ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ.

ಕೆಲವು ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪ್ರವಾಸಿಗರು ಕೂಡ ಶೃಂಗೇರಿಗೆ ಪ್ರಯಾಣಿಸದಂತೆ ಹೋರಾಟಗಾರರು ಮನವಿ ಮಾಡಿಕೊಂಡಿದ್ದಾರೆ.

ಕಸ್ತೂರಿರಂಗನ್ ವರದಿ ಜಾರಿ ಕುರಿತು ಜನರ ಅಭಿಪ್ರಾಯ ಸಂಗ್ರಹಿಸಲು ಸರ್ಕಾರ ಮುಂದಾಗಿರುವ ಸಂದರ್ಭದಲ್ಲೇ, ವರದಿ ವಿರೋಧಿಸಿ ಶೃಂಗೇರಿಯಲ್ಲಿ ಬಂದ್ ನಡೆಯುತ್ತಿದೆ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ Banana ತಿನ್ನುತ್ತೀರಾ? ಬಾಳೆಹಣ್ಣು ಸೇವನೆಗೆ ಸರಿಯಾದ ಸಮಯ ಮತ್ತು ವಿಧಾನ ತಿಳಿದುಕೊಳ್ಳಿ!

0

ಬೆಳಗ್ಗೆ ಎದ್ದ ತಕ್ಷಣ ಒಂದು ಬಾಳೆಹಣ್ಣು ತಿಂದರೆ ದಿನವಿಡೀ ಚುರುಕಾಗಿರಬಹುದು ಎಂಬ ನಂಬಿಕೆ ಹಲವರಲ್ಲಿದೆ. ಬಾಳೆಹಣ್ಣು ನೈಸರ್ಗಿಕ ಸಕ್ಕರೆ, ಪೊಟ್ಯಾಸಿಯಮ್, ವಿಟಮಿನ್‌ಗಳು ಹಾಗೂ ನಾರಿನಂಶ ಹೊಂದಿರುವ ಪೌಷ್ಟಿಕ ಹಣ್ಣಾಗಿದೆ. ಬೆಳಗಿನ ಉಪಾಹಾರದ ಭಾಗವಾಗಿ ಅಥವಾ ವ್ಯಾಯಾಮಕ್ಕೂ ಮುನ್ನ ಇದನ್ನು ಸೇವಿಸುವುದು ಕೆಲವರಿಗೆ ಉತ್ತಮ ಆಯ್ಕೆಯಾಗಬಹುದು.

ಆದರೆ ಬಾಳೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಒಂಟಿಯಾಗಿ ಸೇವಿಸುವುದೇ ಎಲ್ಲರಿಗೂ ಸೂಕ್ತ ಎಂಬ ನಿಯಮವಿಲ್ಲ. ಕೆಲವರಿಗೆ ಯಾವುದೇ ಸಮಸ್ಯೆಯಾಗದಿದ್ದರೂ, ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆ ಹೊಂದಿರುವವರಲ್ಲಿ ಹೊಟ್ಟೆ ಉಬ್ಬರ, ಅಸ್ವಸ್ಥತೆ ಅಥವಾ ಆಸಿಡಿಟಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ವ್ಯಕ್ತಿಯ ಆರೋಗ್ಯ ಸ್ಥಿತಿ ಮತ್ತು ಆಹಾರ ಪದ್ಧತಿಗೆ ಅನುಗುಣವಾಗಿ ಸೇವಿಸುವುದು ಉತ್ತಮ.

ಬಾಳೆಹಣ್ಣಿನ ಪ್ರಮುಖ ಆರೋಗ್ಯ ಲಾಭಗಳೇನು?

ತ್ವರಿತ ಶಕ್ತಿಗೆ ಸಹಕಾರಿ:
ಬಾಳೆಹಣ್ಣಿನಲ್ಲಿ ಗ್ಲುಕೋಸ್, ಫ್ರಕ್ಟೋಸ್ ಮತ್ತು ಸುಕ್ರೋಸ್ ಸೇರಿದಂತೆ ನೈಸರ್ಗಿಕ ಸಕ್ಕರೆಗಳಿವೆ. ಇವು ದೇಹಕ್ಕೆ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತವೆ. ಹೀಗಾಗಿ ಬೆಳಗ್ಗೆ ವ್ಯಾಯಾಮ ಅಥವಾ ವರ್ಕೌಟ್ ಮಾಡುವವರು ಬಾಳೆಹಣ್ಣನ್ನು ತಮ್ಮ ಆಹಾರದ ಭಾಗವಾಗಿ ಸೇರಿಸಿಕೊಳ್ಳಬಹುದು.

ಜೀರ್ಣಕ್ರಿಯೆಗೆ ನೆರವು:
ಬಾಳೆಹಣ್ಣಿನಲ್ಲಿ ನಾರಿನಂಶವಿದ್ದು, ಇದು ಕರುಳಿನ ಆರೋಗ್ಯಕ್ಕೆ ಸಹಕಾರಿಯಾಗಿದೆ. ಸಮತೋಲಿತ ಆಹಾರದ ಭಾಗವಾಗಿ ಸೇವಿಸಿದಾಗ ಮಲಬದ್ಧತೆ ಸೇರಿದಂತೆ ಕೆಲವು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ನಿರ್ವಹಿಸಲು ನೆರವಾಗಬಹುದು.

ಪೊಟ್ಯಾಸಿಯಮ್‌ನ ಉತ್ತಮ ಮೂಲ:
ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದ್ದು, ಇದು ದೇಹದ ದ್ರವ ಸಮತೋಲನ, ಸ್ನಾಯುಗಳ ಕಾರ್ಯ ಮತ್ತು ನರಗಳ ಸಾಮಾನ್ಯ ಕಾರ್ಯನಿರ್ವಹಣೆಗೆ ಅಗತ್ಯವಾದ ಖನಿಜವಾಗಿದೆ. ಸಾಕಷ್ಟು ಪೊಟ್ಯಾಸಿಯಮ್ ಹೊಂದಿರುವ ಸಮತೋಲಿತ ಆಹಾರವು ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಬಹುದು.

ವಿಟಮಿನ್‌ ಬಿ6 ಕೂಡ ಲಭ್ಯ:
ಬಾಳೆಹಣ್ಣಿನಲ್ಲಿ ವಿಟಮಿನ್‌ ಬಿ6 ಇದೆ. ಇದು ದೇಹದಲ್ಲಿ ಹಲವು ಚಯಾಪಚಯ ಕ್ರಿಯೆಗಳಿಗೆ ಅಗತ್ಯವಾಗಿದ್ದು, ನರಮಂಡಲದ ಸಾಮಾನ್ಯ ಕಾರ್ಯನಿರ್ವಹಣೆಯಲ್ಲೂ ಪಾತ್ರವಹಿಸುತ್ತದೆ.

ಖಾಲಿ ಹೊಟ್ಟೆಯಲ್ಲಿ ತಿಂದರೆ ಏನಾಗಬಹುದು?

ಬಾಳೆಹಣ್ಣು ಪೌಷ್ಟಿಕ ಹಣ್ಣಾದರೂ, ಅದನ್ನು ಖಾಲಿ ಹೊಟ್ಟೆಯಲ್ಲಿ ಒಂಟಿಯಾಗಿ ತಿನ್ನುವುದರಿಂದ ಎಲ್ಲರಿಗೂ ಒಂದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ. ಕೆಲವರಲ್ಲಿ ಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆ ಬೇಗನೆ ಹೀರಲ್ಪಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ತಾತ್ಕಾಲಿಕ ಏರಿಕೆ ಕಾಣಿಸಿಕೊಳ್ಳಬಹುದು. ಆರೋಗ್ಯವಂತ ವ್ಯಕ್ತಿಗಳಲ್ಲಿ ಇದು ಸಾಮಾನ್ಯವಾಗಿ ದೊಡ್ಡ ಸಮಸ್ಯೆಯಾಗುವುದಿಲ್ಲ.

ಆದರೆ ಮಧುಮೇಹ ಅಥವಾ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ತಮ್ಮ ಆಹಾರದಲ್ಲಿ ಬಾಳೆಹಣ್ಣಿನ ಪ್ರಮಾಣ ಮತ್ತು ಸಮಯದ ಬಗ್ಗೆ ವೈದ್ಯರು ಅಥವಾ ಆಹಾರ ತಜ್ಞರ ಸಲಹೆ ಪಡೆಯುವುದು ಸೂಕ್ತ.

ಇನ್ನು ಕೆಲವರಿಗೆ ಬಾಳೆಹಣ್ಣು ಸೇರಿದಂತೆ ಕೆಲವು ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಹೊಟ್ಟೆ ಉಬ್ಬರ, ಗ್ಯಾಸ್ ಅಥವಾ ಅಸ್ವಸ್ಥತೆ ಉಂಟಾಗಬಹುದು. ಇಂತಹ ಸಮಸ್ಯೆ ಕಾಣಿಸಿಕೊಂಡರೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದನ್ನು ತಪ್ಪಿಸಿ, ಇತರ ಆಹಾರಗಳೊಂದಿಗೆ ಸೇವಿಸುವುದು ಪ್ರಯೋಜನಕಾರಿಯಾಗಬಹುದು.

ಹಾಗಾದರೆ ಬಾಳೆಹಣ್ಣನ್ನು ಹೇಗೆ ತಿನ್ನಬೇಕು?

ಬಾಳೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಒಂಟಿಯಾಗಿ ಸೇವಿಸುವ ಬದಲು, ಬಾದಾಮಿ, ವಾಲ್‌ನಟ್ಸ್‌ ಅಥವಾ ಇತರ ಬೀಜಗಳೊಂದಿಗೆ ಸೇವಿಸಬಹುದು. ಓಟ್ಸ್, ಮೊಸರು ಅಥವಾ ಸಮತೋಲಿತ ಉಪಾಹಾರದೊಂದಿಗೆ ಬಾಳೆಹಣ್ಣನ್ನು ಸೇರಿಸಿಕೊಳ್ಳುವುದು ಮತ್ತೊಂದು ಆಯ್ಕೆಯಾಗಿದೆ.

ಹಣ್ಣುಗಳಲ್ಲಿರುವ ನೈಸರ್ಗಿಕ ಸಕ್ಕರೆಯ ಜೊತೆಗೆ ಪ್ರೋಟೀನ್, ಆರೋಗ್ಯಕರ ಕೊಬ್ಬು ಮತ್ತು ನಾರಿನಂಶ ಇರುವ ಆಹಾರವನ್ನು ಸೇರಿಸುವುದರಿಂದ ಹೆಚ್ಚು ಸಮತೋಲಿತ ಉಪಾಹಾರವಾಗುತ್ತದೆ. ಇದರಿಂದ ಹೊಟ್ಟೆ ತುಂಬಿದ ಅನುಭವವೂ ಹೆಚ್ಚು ಸಮಯ ಇರಬಹುದು.

ಒಟ್ಟಿನಲ್ಲಿ, ಬಾಳೆಹಣ್ಣು ಆರೋಗ್ಯಕರ ಆಹಾರದ ಭಾಗವಾಗಬಲ್ಲ ಪೌಷ್ಟಿಕ ಹಣ್ಣಾಗಿದೆ. ಆದರೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನಬಾರದು ಎಂಬುದು ಎಲ್ಲರಿಗೂ ಅನ್ವಯಿಸುವ ವೈದ್ಯಕೀಯ ನಿಯಮವಲ್ಲ. ಅದೇ ರೀತಿ, ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಖಂಡಿತವಾಗಿಯೂ ಆಸಿಡಿಟಿ ಅಥವಾ ದಿಢೀರ್ ಆಯಾಸ ಉಂಟಾಗುತ್ತದೆ ಎಂಬುದಕ್ಕೂ ಸಾಮಾನ್ಯವಾಗಿ ಅನ್ವಯಿಸುವ ಸಾಕಷ್ಟು ಪುರಾವೆಗಳಿಲ್ಲ. ನಿಮ್ಮ ದೇಹಕ್ಕೆ ಯಾವ ರೀತಿಯ ಆಹಾರ ಸೂಕ್ತವಾಗಿ ಹೊಂದಿಕೊಳ್ಳುತ್ತದೆ ಎಂಬುದನ್ನು ಗಮನಿಸಿ, ಸಮತೋಲಿತ ಆಹಾರದ ಭಾಗವಾಗಿ ಬಾಳೆಹಣ್ಣನ್ನು ಸೇವಿಸುವುದು ಉತ್ತಮ.