Home Blog Page 5

ತಾಯಿ ಆಗುತ್ತಿರುವ ಸಮಂತಾರನ್ನು ಮನೆಗೆ ಕರೆದು ಸತ್ಕರಿಸಿದ ನಟ ಚಿರಂಜೀವಿ ದಂಪತಿ

ಹೈದರಾಬಾದ್: ಸಮಂತಾ ಋತ್ ಪ್ರಭು ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಯಶಸ್ಸಿನ ಅಲೆಯಲ್ಲಿ ಸಾಗುತ್ತಿರುವ ನಡುವೆಯೇ ಚಿತ್ರತಂಡಕ್ಕೆ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಚಿರಂಜೀವಿ ಅವರಿಂದ ವಿಶೇಷ ಗೌರವ ದೊರೆತಿದೆ. ಚಿತ್ರ ಯಶಸ್ಸನ್ನು ಗುರುತಿಸಿ ಅವರು ಚಿತ್ರತಂಡವನ್ನು ತಮ್ಮ ಮನೆಗೆ ಆಹ್ವಾನಿಸಿ ಆತ್ಮೀಯವಾಗಿ ಸತ್ಕರಿಸಿದ್ದಾರೆ.

ಈ ಸಂದರ್ಭದಲ್ಲಿ ಸಮಂತಾ ಸೇರಿದಂತೆ ಚಿತ್ರತಂಡದ ಪ್ರಮುಖರನ್ನು ಚಿರಂಜೀವಿ ಮತ್ತು ಅವರ ಪತ್ನಿ ಸುರೇಖಾ ಆತ್ಮೀಯವಾಗಿ ಬರಮಾಡಿಕೊಂಡರು. ಸಮಂತಾ ಅವರಿಗೆ ಸಾಂಪ್ರದಾಯಿಕ ಸೀರೆ ಸೇರಿದಂತೆ ಪವಿತ್ರ ಉಡುಗೊರೆಗಳನ್ನು ನೀಡಲಾಗಿದ್ದು, ಶಂಖವನ್ನು ಸಹ ಆಶೀರ್ವಾದ ರೂಪದಲ್ಲಿ ನೀಡಿದ್ದಾರೆ. ಈ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಚಿರಂಜೀವಿ ಅವರು ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಿರ್ದೇಶಕಿ ನಂದಿನಿ ರೆಡ್ಡಿಯ ಕಥನ ಶೈಲಿ, ಭಾವನೆಗಳ ನಿರೂಪಣೆ ಮತ್ತು ಮಹಿಳಾ ಕೇಂದ್ರಿತ ದೃಷ್ಟಿಕೋನವನ್ನು ಶ್ಲಾಘಿಸಿದ್ದಾರೆ. ಚಿತ್ರದಲ್ಲಿ ಆಕ್ಷನ್, ಹಾಸ್ಯ ಹಾಗೂ ಕೌಟುಂಬಿಕ ಭಾವನೆಗಳ ಸಮತೋಲನ ಉತ್ತಮವಾಗಿ ಮೂಡಿಬಂದಿದೆ ಎಂದು ಅವರು ಹೇಳಿದ್ದಾರೆ.

ಸಮಂತಾ ಅವರ ಅಭಿನಯ ವಿಶೇಷವಾಗಿ ಗಮನ ಸೆಳೆದಿದ್ದು, ಸೀರೆಯಲ್ಲಿ ಮಾಡಿದ ಆಕ್ಷನ್ ದೃಶ್ಯಗಳು ಚಿತ್ರಕ್ಕೆ ಹೊಸ ಶಕ್ತಿಯನ್ನು ನೀಡಿವೆ ಎಂದು ಚಿರಂಜೀವಿ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ರಾಜ್ ನಿಧಿಮೋರು ಸೇರಿದಂತೆ ಚಿತ್ರತಂಡದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿರುವ ಸಮಂತಾ ಅವರಿಗೆ ಚಿರಂಜೀವಿ ಶುಭ ಹಾರೈಸಿದ್ದು, ಚಿತ್ರರಂಗದಲ್ಲಿ ಉತ್ತಮ ಸಿನಿಮಾಗಳಿಗೆ ಸದಾ ಬೆಂಬಲ ನೀಡುವ ತಮ್ಮ ಪರಂಪರೆಯನ್ನು ಮುಂದುವರೆಸಿದ್ದಾರೆ. ಈ ನಡೆಗೆ ಅಭಿಮಾನಿಗಳು ಮತ್ತು ಚಿತ್ರರಸಿಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಿವ್ಯಾಂಗ ಯುವತಿಯ ಗರ್ಭಾಶಯ ತೆಗೆಯಲು ಹೈಕೋರ್ಟ್ ಗ್ರೀನ್ ಸಿಗ್ನಲ್

ಬೆಂಗಳೂರು: 23 ವರ್ಷದ ದಿವ್ಯಾಂಗ ಯುವತಿಯ ಗರ್ಭಾಶಯ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಈ ಶಸ್ತ್ರಚಿಕಿತ್ಸೆಯನ್ನು ನಗರದ ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ನಡೆಸುವಂತೆ ನ್ಯಾಯಾಲಯ ಸೂಚಿಸಿದೆ.

ಪ್ರಕರಣದ ವಿವರಗಳ ಪ್ರಕಾರ, ಯುವತಿ ಗಂಭೀರ ಬೌದ್ಧಿಕ ಹಾಗೂ ಅಭಿವೃದ್ಧಿ ಸಂಬಂಧಿತ ಅಸಮರ್ಥತೆಯಿಂದ ಬಳಲುತ್ತಿದ್ದು, ದಿನನಿತ್ಯದ ಜೀವನದ ಮೂಲಭೂತ ಕಾರ್ಯಗಳನ್ನು ನಿರ್ವಹಿಸಲು ಸಹ ಅಸಮರ್ಥಳಾಗಿದ್ದಾಳೆ. ಆಕೆಯ ಬೌದ್ಧಿಕ ವಯಸ್ಸು ಸುಮಾರು 5 ವರ್ಷಗಳ ಮಟ್ಟದಲ್ಲಿದ್ದು, ಐಕ್ಯೂ 36 ಎಂದು ವೈದ್ಯಕೀಯ ದಾಖಲೆಗಳು ಸೂಚಿಸುತ್ತವೆ.

ಪೋಷಕರು ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ, ಯುವತಿಯ ಆರೋಗ್ಯ ಸಮಸ್ಯೆಗಳು ಹಾಗೂ ಸ್ವಚ್ಛತೆ ನಿರ್ವಹಣೆಯ ಕಷ್ಟಗಳನ್ನು ಉಲ್ಲೇಖಿಸಿದ್ದಾರೆ. ನಿಯಮಿತ ಋತುಚಕ್ರ ಸಮಸ್ಯೆಯಿಂದಾಗಿ ಮರುಮರು ಸೋಂಕುಗಳು ಮತ್ತು ಆರೋಗ್ಯ ಸಂಕೀರ್ಣತೆಗಳು ಉಂಟಾಗುತ್ತಿದ್ದು, ತಾವು ವಯೋವೃದ್ಧರಾಗಿರುವ ಕಾರಣ ಆರೈಕೆ ಮಾಡಲು ತೀವ್ರ ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.

ವೈದ್ಯಕೀಯ ಮಂಡಳಿ ನೀಡಿದ ವರದಿಯಲ್ಲಿ, ಯುವತಿ ಗ್ಲೋಬಲ್ ಡೆವಲಪ್ಮೆಂಟ್ ಡಿಲೆ ಹಾಗೂ ಮಧ್ಯಮ ಮಟ್ಟದ ಶಾಶ್ವತ ಬೌದ್ಧಿಕ ಮತ್ತು ಅಭಿವೃದ್ಧಿ ಅಸಮರ್ಥತೆಯಿಂದ ಬಳಲುತ್ತಿರುವುದಾಗಿ ಹೇಳಲಾಗಿದೆ. ಜೊತೆಗೆ ಅಪಸ್ಮಾರ ಸಮಸ್ಯೆಯೂ ಇರುವುದನ್ನು ದೃಢಪಡಿಸಲಾಗಿದೆ.

ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಪ್ರಕರಣದ ಎಲ್ಲಾ ವೈದ್ಯಕೀಯ ಹಾಗೂ ಮಾನವೀಯ ಅಂಶಗಳನ್ನು ಪರಿಶೀಲಿಸಿ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡಿದ್ದಾರೆ. ಈ ಕ್ರಮವನ್ನು ಆರೋಗ್ಯ, ಸ್ವಚ್ಛತೆ, ಘನತೆ ಹಾಗೂ ಜೀವನದ ಗುಣಮಟ್ಟ ಸುಧಾರಣೆಯ ಉದ್ದೇಶದಿಂದ ತೆಗೆದುಕೊಳ್ಳಲಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನ್ಯಾಯಾಲಯವು ಇದು ಯಾವುದೇ ರೀತಿಯ ಬಲವಂತದ ಕ್ರಮವಲ್ಲ ಹಾಗೂ ಸಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುವ ಉದ್ದೇಶವೂ ಇಲ್ಲ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ.

ಪಿಜಿ ಮುಂದೆ ಕುಡಿಯುತ್ತಿದ್ದವರನ್ನ ಪ್ರಶ್ನಿಸಿದ್ದೆ ತಪ್ಪಾಯ್ತಾ? ಮಾಲೀಕನ ಜೀವವೇ ಹೋಯ್ತು!

0

ಬೆಂಗಳೂರು: ಪಿಜಿ ಮುಂದೆ ಮದ್ಯಪಾನ ಮಾಡುತ್ತಿದ್ದವರನ್ನು ಪ್ರಶ್ನಿಸಿದ್ದಕ್ಕೆ ಪಿಜಿ ಮಾಲೀಕನನ್ನು ಬ್ಯಾಟ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ಮಾಧವ್ ಮೆಟ್ಲಿ (40) ಎಂದು ಗುರುತಿಸಲಾಗಿದೆ. ಅವರು ಕಸ್ತೂರಿಬಾ ನಗರದಲ್ಲಿ ಪಿಜಿ ನಡೆಸುತ್ತಿದ್ದರು.

ಮಾಹಿತಿಯ ಪ್ರಕಾರ, ಪಿಜಿ ಮುಂಭಾಗದಲ್ಲಿ ಇಬ್ಬರು ಆರೋಪಿಗಳು ಮದ್ಯಪಾನ ಮಾಡುತ್ತಾ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಮಾಧವ್ ಮೆಟ್ಲಿ, ಸ್ಥಳಕ್ಕೆ ತೆರಳಿ ಪ್ರಶ್ನಿಸಿದ್ದಾರೆ. ಈ ವೇಳೆ ಅವರ ಕೈಯಲ್ಲಿ ಬ್ಯಾಟ್ ಇದ್ದುದಾಗಿ ತಿಳಿದುಬಂದಿದೆ.

ಪ್ರಶ್ನೆ ಮಾಡಿದ ವಿಚಾರಕ್ಕೆ ಆರೋಪಿಗಳು ಹಾಗೂ ಮಾಲೀಕನ ನಡುವೆ ವಾಗ್ವಾದ ನಡೆದಿದ್ದು, ಪರಿಸ್ಥಿತಿ ಕೈಮೀರಿದೆ. ತಾನು ಹಲ್ಲೆಗೆ ಒಳಗಾಗುವ ಭಯದಿಂದ ಆರೋಪಿಗಳು ಮಾಧವ್ ಅವರ ಕೈಯಲ್ಲಿದ್ದ ಬ್ಯಾಟ್ ಕಸಿದುಕೊಂಡು ಅವರ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಮಾಧವ್ ಮೆಟ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಗದಗ ಪೊಲೀಸರಿಗೆ ಹೆಮ್ಮೆಯ ಗರಿ..! PSI ಮಾರುತಿ ಜೋಗದಂಡಕರಿಗೆ ರಾಜ್ಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿ

0

ಗದಗ: ಗದಗ ಜಿಲ್ಲಾ ಪೊಲೀಸ್ ಇಲಾಖೆಗೆ ಹೆಮ್ಮೆಯ ಕ್ಷಣ ಒದಗಿ ಬಂದಿದ್ದು, ಜಿಲ್ಲೆಯ ಪೊಲೀಸ್ ಉಪನಿರೀಕ್ಷಕ (PSI) ಮಾರುತಿ ಜೋಗದಂಡಕರ ಅವರು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪ್ರತಿಷ್ಠಿತ ಡಿಜಿ ಮತ್ತು ಐಜಿಪಿ ಕಮೆಂಡೇಶನ್ ಡಿಸ್ಕ್-2025-26 ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ, ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಸಲ್ಲಿಸಿದ ಗಮನಾರ್ಹ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪೊಲೀಸ್ ಇಲಾಖೆಯ ಅತ್ಯುನ್ನತ ಗೌರವಗಳಲ್ಲಿ ಒಂದಾಗಿರುವ ಈ ಪ್ರಶಂಸನಾ ಡಿಸ್ಕ್‌ಗೆ ಭಾಜನರಾಗಿರುವುದು ಗದಗ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.

ಮಾರುತಿ ಜೋಗದಂಡಕರ ಅವರು ತಮ್ಮ ಸೇವಾ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ, ಅಪರಾಧ ತಡೆ ಹಾಗೂ ಪತ್ತೆ ಕಾರ್ಯಗಳಲ್ಲಿ, ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವಲ್ಲಿ ಮತ್ತು ಇಲಾಖೆಯ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮವಹಿಸಿ ಕಾರ್ಯನಿರ್ವಹಿಸಿದ್ದಾರೆ. ಅವರ ಸೇವಾ ನಿಷ್ಠೆ ಹಾಗೂ ಕಾರ್ಯಕ್ಷಮತೆಯನ್ನು ಗುರುತಿಸಿ ರಾಜ್ಯ ಪೊಲೀಸ್ ಇಲಾಖೆ ಈ ಪ್ರತಿಷ್ಠಿತ ಗೌರವ ನೀಡಿ ಸನ್ಮಾನಿಸಿದೆ.

ಈ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸಂತಸ ಮನೆಮಾಡಿದ್ದು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಗಣ್ಯರು ಹಾಗೂ ಸಾರ್ವಜನಿಕರು ಮಾರುತಿ ಜೋಗದಂಡಕರ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಲಿವ್-ಇನ್ ಸಂಬಂಧಕ್ಕೆ ವಿರೋಧ; ಪ್ರಿಯಕರನ ಜೊತೆ ಸೇರಿ ಹೆತ್ತ ತಂದೆ-ತಾಯಿ, ತಂಗಿಯನ್ನೇ ಕೊಂದ ಮಗಳು!

0

ಬೆಂಗಳೂರು: ಲಿವ್-ಇನ್ ರಿಲೇಷನ್‌ಶಿಪ್‌ಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ಆಕ್ರೋಶಗೊಂಡ ಯುವತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಹೆತ್ತ ತಂದೆ, ತಾಯಿ ಹಾಗೂ ಸ್ವಂತ ತಂಗಿಯನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಭೀಕರ ಘಟನೆ ಬೆಂಗಳೂರು ನಗರದ ಕೆ.ಆರ್. ಪುರಂ ವ್ಯಾಪ್ತಿಯ ಸಿಗೇಹಳ್ಳಿಯಲ್ಲಿ ನಡೆದಿದೆ.

ಸೋಮಸುಂದರ್ (55), ಪತ್ನಿ ಮುತ್ತುಲಕ್ಷ್ಮಿ (48) ಹಾಗೂ ಕಿರಿಯ ಪುತ್ರಿ ಸುಪ್ರಿಯಾ (20) ಕೊಲೆಯಾದವರು. ಪ್ರಕರಣದ ಪ್ರಮುಖ ಆರೋಪಿಗಳಾದ ಹಿರಿಯ ಮಗಳು ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ಘಟನೆ ಬಳಿಕ ಪರಾರಿಯಾಗಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಶ್ವೇತಾ ಮದುವೆಯಾಗದೆ ಕೆನತ್ ಜೊತೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದಳು. ಮಗಳ ಈ ಸಂಬಂಧಕ್ಕೆ ಕುಟುಂಬ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಮಾತುಕತೆ ನಡೆಸಲು ಸೋಮಸುಂದರ್, ಪತ್ನಿ ಮತ್ತು ಕಿರಿಯ ಪುತ್ರಿಯೊಂದಿಗೆ ಸಿಗೇಹಳ್ಳಿಯ ಡಾಮ್ನಿಕ್ ಲೇಔಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು.

ಈ ವೇಳೆ ಕುಟುಂಬ ಸದಸ್ಯರು ಹಾಗೂ ಶ್ವೇತಾ-ಕೆನತ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗುತ್ತಿದ್ದಂತೆ, ಇಬ್ಬರು ಆರೋಪಿಗಳು ಸೇರಿ ಮೂವರ ಮೇಲೂ ಚಾಕುವಿನಿಂದ ಮನಬಂದಂತೆ ದಾಳಿ ನಡೆಸಿದ್ದಾರೆ.

ದಾಳಿಯಲ್ಲಿ ಮುತ್ತುಲಕ್ಷ್ಮಿ ಮತ್ತು ಸುಪ್ರಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸೋಮಸುಂದರ್ ಮನೆ ಹೊರಗೆ ಬಂದು ಸಹಾಯಕ್ಕಾಗಿ ಕೂಗಿದ್ದಾರೆ. ಅಪಾರ್ಟ್‌ಮೆಂಟ್ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆದರೂ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ.

ಸಾವಿಗೂ ಮುನ್ನ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, “ಮಗಳು ಮತ್ತು ಆಕೆಯ ಪ್ರಿಯಕರ ನಮ್ಮ ಮೇಲೆ ದಾಳಿ ಮಾಡಿದ್ದಾರೆ” ಎಂದು ಸೋಮಸುಂದರ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಕೆ.ಆರ್. ಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಶ್ವೇತಾ ಮತ್ತು ಕೆನತ್ ಬಂಧನಕ್ಕಾಗಿ ವಿಶೇಷ ತಂಡ ರಚಿಸಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಬಿಳಿಗಿರಿ ರಂಗನಾಥ ದೇವಾಲಯದಲ್ಲಿ ಒಂಟಿ ಸಲಗ ದಾಂಧಲೆ; ಕಾರು, ಅಂಗಡಿಗೆ ಹಾನಿ!

ಚಾಮರಾಜನಗರ: ಯಳಂದೂರು ತಾಲೂಕಿನ ಬಿಳಿಗಿರಿ ರಂಗನಾಥಸ್ವಾಮಿ ಟೈಗರ್ ರಿಸರ್ವ್ ಅರಣ್ಯ ಪ್ರದೇಶದಲ್ಲಿರುವ ಪ್ರಸಿದ್ಧ ಬಿಳಿಗಿರಿರಂಗನಾಥ ದೇವಾಲಯ ಆವರಣದಲ್ಲಿ ಒಂಟಿ ಸಲಗವೊಂದು ದಾಂಧಲೆ ನಡೆಸಿದ ಘಟನೆ ನಡೆದಿದೆ.

ಇದುವರೆಗೆ ಅರಣ್ಯದ ಒಳಭಾಗದಲ್ಲಷ್ಟೇ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು, ಇದೀಗ ದೇವಾಲಯದ ಗೋಪುರದ ಬಳಿ ನುಗ್ಗಿ ಹಾನಿ ಮಾಡಿರುವುದು ಭಕ್ತರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ರಾತ್ರಿ ಕರ್ತವ್ಯ ಮುಗಿಸಿ ಹೋಮ್ ಗಾರ್ಡ್ ರಂಗನಾಥ್ ತಮ್ಮ ಕಾರನ್ನು ದೇವಾಲಯದ ಆವರಣದಲ್ಲೇ ಪಾರ್ಕ್ ಮಾಡಿದ್ದರು. ಮುಂಜಾನೆ ನೋಡಿದಾಗ ಕಾಡಾನೆ ಕಾರಿನ ವೈಪರ್ ಕಿತ್ತುಹಾಕಿ, ದಂತದಿಂದ ತಿವಿದು ವಾಹನವನ್ನು ಜಖಂ ಮಾಡಿರುವುದು ಬೆಳಕಿಗೆ ಬಂದಿದೆ.

ಇದೇ ವೇಳೆ ಸಮೀಪದಲ್ಲಿದ್ದ ಒಂದು ಪೆಟ್ಟಿ ಅಂಗಡಿಯ ಶಟರ್‌ಗೂ ಆನೆ ಹಾನಿ ಮಾಡಿರುವುದು ವರದಿಯಾಗಿದೆ.

ಇತಿಹಾಸ ಪ್ರಸಿದ್ಧ ಬಿಳಿಗಿರಿರಂಗನಾಥ ಸ್ವಾಮಿ ದೇವಸ್ಥಾನದ ಆವರಣಕ್ಕೆ ಕಾಡಾನೆ ನುಗ್ಗಿರುವುದು ಭಕ್ತರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದು, ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

 

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಾಮೆಂಟ್ ಪ್ರಕರಣ: ಮೂವರ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಅಶ್ಲೀಲ ಹಾಗೂ ಅವಹೇಳನಕಾರಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ ಆರೋಪ ಎದುರಿಸುತ್ತಿರುವ ಮೂವರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ.

ಪ್ರಶಾಂತ್ ತಲ್ವಾರ್, ಚಂದ್ರಶೇಖರ್ ಹಾಗೂ ನಿಂಗರಾಜ್ ಗುಲಾಪ್ಪ ತಲ್ವಾರ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಠಿಣ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಡೆವಿಲ್’ ಚಿತ್ರದ ಪ್ರಚಾರದ ಸಂದರ್ಭ ವಿಜಯಲಕ್ಷ್ಮಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ನಿಂದನಾತ್ಮಕ ಕಾಮೆಂಟ್‌ಗಳು ಹರಿದಾಡಿದ್ದವು. ಈ ಕುರಿತು ವಿಜಯಲಕ್ಷ್ಮಿ ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ವಿಚಾರಣೆ ವೇಳೆ ನ್ಯಾಯಾಲಯ, ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಹೆಸರಿನಲ್ಲಿ ಯಾರೊಬ್ಬರ ಮಾನಹಾನಿ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಸ್ಪಷ್ಟಪಡಿಸಿದೆ. ಸಂವಿಧಾನ ನೀಡಿರುವ ಹಕ್ಕುಗಳಿಗೆ ಕಾನೂನುಬದ್ಧ ಮಿತಿಗಳಿದ್ದು, ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆಗಳು ಮತ್ತು ಪೋಸ್ಟ್‌ಗಳು ಗಂಭೀರ ಅಪರಾಧವೆಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ತೀರ್ಪು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ವಿರುದ್ಧ ನಡೆಯುವ ಆನ್‌ಲೈನ್ ದೌರ್ಜನ್ಯಗಳ ವಿರುದ್ಧ ಕಠಿಣ ಸಂದೇಶವಾಗಿ ಪರಿಗಣಿಸಲಾಗುತ್ತಿದೆ.

ಜೂನ್ 24ರಂದು ಮುಂಡರಗಿ, ಡಂಬಳ, ಶಿಂಗಟಾಲೂರಲ್ಲಿ ವಿದ್ಯುತ್ ವ್ಯತ್ಯಯ

0

ವಿಜಯಸಾಕ್ಷಿ ಸುದ್ದಿ, ಗದಗ: 110 ಕೆ.ವಿ. ಮುಂಡರಗಿ, ಡಂಬಳ ಹಾಗೂ ಶಿಂಗಟಾಲೂರು ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 24ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

110 ಕೆ.ವಿ. ಡಂಬಳ ಉಪಕೇಂದ್ರದಿಂದ ಹೊರಹೋಗುವ ಎಲ್ಲ 11 ಕೆ.ವಿ. ಮಾರ್ಗಗಳು, ಸುಜಲಾನ್, ಎನರ್ಕಾನ್, ಅಕಿಲಾಗ್ಯಾ ಸೋಲಾರ್ ಹಾಗೂ ಚುರ್ಚಿಹಾಳ ನೀರಾವರಿ ಮಾರ್ಗಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ಅದೇ ರೀತಿ 110 ಕೆ.ವಿ. ಮುಂಡರಗಿ ಉಪಕೇಂದ್ರದಿಂದ ಹೊರಹೋಗುವ ಎಲ್ಲ 11 ಕೆ.ವಿ. ಮಾರ್ಗಗಳು, ವಿಜಯನಗರ ಶುಗರ್ಸ್ ಹಾಗೂ ಬೀಡನಾಳ ನೀರಾವರಿ ಮಾರ್ಗಗಳಲ್ಲಿಯೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

110 ಕೆ.ವಿ. ಶಿಂಗಟಾಲೂರು ಉಪಕೇಂದ್ರದಿಂದ ಹೊರಹೋಗುವ ಎಲ್ಲ 11 ಕೆ.ವಿ. ಮಾರ್ಗಗಳಲ್ಲಿಯೂ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ಹೀಗಾಗಿ ಮುಂಡರಗಿ, ಡಂಬಳ, ಶಿಂಗಟಾಲೂರು ವ್ಯಾಪ್ತಿಯ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಎಲ್ಲಾ 11 ಕೆ.ವಿ. ವಿತರಣಾ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಿ ಹೆಸ್ಕಾಂ ಇಲಾಖೆಯೊಂದಿಗೆ ಸಹಕರಿಸುವಂತೆ ಕಾರ್ಯನಿರ್ವಾಹಕ ಎಂಜಿನಿಯರ್ (ವಿ), ಕಾರ್ಯ ಮತ್ತು ಪಾಲನೆ ವಿಭಾಗ, ಹೆಸ್ಕಾಂ ಗದಗ ಮನವಿ ಮಾಡಿದ್ದಾರೆ.

ಶಕ್ತಿ ಯೋಜನೆ ನಡುವೆಯೇ ಪುರುಷ ಪ್ರಯಾಣಿಕರಿಗೆ ಮತ್ತೊಂದು ಹೊರೆ: ಬಿಎಂಟಿಸಿ ಪಾಸ್ ದರ ಹೆಚ್ಚಳ ಜಾರಿ

ಬೆಂಗಳೂರು: ಬಿಎಂಟಿಸಿ ಬಸ್ ಸೇವೆಗಳ ವಿಸ್ತರಣೆಯ ನೆಪದಲ್ಲಿ ಪ್ರಯಾಣಿಕರ ಮೇಲೆ ಮತ್ತೊಂದು ದರ ಏರಿಕೆಯ ಬರೆ ಎಳೆಯಲಾಗಿದೆ. ಬೆಂಗಳೂರು ಹೊರವಲಯದ ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕರಿಗಾಗಿ ಪರಿಚಯಿಸಿರುವ ‘ವಿಸ್ತಾರ ಮಾಸಿಕ ಪಾಸ್’ ದರವನ್ನು ₹1200ರಿಂದ ₹1500ಕ್ಕೆ ಏರಿಸಲಾಗಿದ್ದು, ಇಂದಿನಿಂದಲೇ ಹೊಸ ದರ ಜಾರಿಗೆ ಬಂದಿದೆ.

ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಚಿಕ್ಕಬಳ್ಳಾಪುರ, ಮಾಲೂರು ಸೇರಿದಂತೆ ದೂರದ ಪ್ರದೇಶಗಳಿಗೆ ಈಗ ಬಿಎಂಟಿಸಿ ಸೇವೆ ವಿಸ್ತರಿಸಿರುವುದರಿಂದ ಹೊಸ ಪಾಸ್ ವ್ಯವಸ್ಥೆ ಜಾರಿಗೆ ತರಲಾಗಿದೆ. ವಿಸ್ತರಿತ ಕಾರ್ಯಾಚರಣೆ ವೆಚ್ಚವನ್ನು ಸಮರ್ಥಿಸಿಕೊಳ್ಳಲು ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ನಿಗಮ ಸಮರ್ಥನೆ ನೀಡಿದೆ.

ಇದೇ ವೇಳೆ ಬಿಎಂಟಿಸಿಯ ವಜ್ರ ಎಸಿ ಬಸ್ ಮಾಸಿಕ ಪಾಸ್ ದರ ಹೆಚ್ಚಳಕ್ಕೂ ಸಿದ್ಧತೆ ನಡೆದಿರುವ ಮಾಹಿತಿ ಲಭ್ಯವಾಗಿದೆ. ಸದ್ಯ ₹2000 ಇರುವ ಎಸಿ ಪಾಸ್ ದರವನ್ನು ₹2500ಕ್ಕೆ ಹೆಚ್ಚಿಸುವ ಪ್ರಸ್ತಾವನೆ ನಿಗಮದ ಮಟ್ಟದಲ್ಲಿ ಚರ್ಚೆಯಲ್ಲಿದೆ ಎನ್ನಲಾಗಿದೆ.

ಒಂದು ಕಡೆ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಸೌಲಭ್ಯ ನೀಡಲಾಗುತ್ತಿದ್ದರೆ, ಮತ್ತೊಂದೆಡೆ ನಿಗಮದ ಆರ್ಥಿಕ ನಷ್ಟವನ್ನು ಸರಿದೂಗಿಸಲು ಪುರುಷ ಪ್ರಯಾಣಿಕರ ಮೇಲೆ ಪರೋಕ್ಷವಾಗಿ ಹೆಚ್ಚುವರಿ ಹೊರೆ ಹಾಕಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ದರ ಏರಿಕೆ ಘೋಷಣೆಯ ಬೆನ್ನಲ್ಲೇ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಬಿಎಂಟಿಸಿ ಮತ್ತಷ್ಟು ದರ ಪರಿಷ್ಕರಣೆಗೆ ಮುಂದಾಗುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಮಮತಾಗೆ ಪಕ್ಷದೊಳಗೇ ಶಾಕ್: ಅಧ್ಯಕ್ಷ ಸ್ಥಾನ ಕಿತ್ತುಕೊಂಡ ಬಂಡಾಯ ನಾಯಕರು

0

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸುವ ಬೆಳವಣಿಗೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದೊಳಗಿನ ಬಂಡಾಯ ಬಹಿರಂಗ ಸ್ಫೋಟಗೊಂಡಿದೆ. ಬಂಡಾಯ ಬಣವು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆಯಾಗಿದ್ದ ಮಮತಾ ಬ್ಯಾನರ್ಜಿ ಅವರನ್ನು ಹುದ್ದೆಯಿಂದ ವಜಾಗೊಳಿಸಿರುವುದಾಗಿ ಘೋಷಿಸಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಭಿಷೇಕ್ ಬ್ಯಾನರ್ಜಿ ಅವರನ್ನು ಅಮಾನತುಗೊಳಿಸಿರುವುದಾಗಿ ಪ್ರಕಟಿಸಿದೆ.

ಕೋಲ್ಕತ್ತಾದ ನ್ಯೂಟೌನ್‌ನ ಪಂಚತಾರಾ ಹೋಟೆಲ್‌ನಲ್ಲಿ ನಡೆದ ವಿಶೇಷ ಸಭೆಯಲ್ಲಿ ಬಂಡಾಯ ನಾಯಕರು ಮಹತ್ವದ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಬಂಡಾಯ ಬಣದ ನಾಯಕ ರುತಬ್ರತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಿರಿಯ ಶಾಸಕ ಅರೂಪ್ ರಾಯ್ ಅವರನ್ನು ಟಿಎಂಸಿಯ ಹೊಸ ಅಖಿಲ ಭಾರತ ಅಧ್ಯಕ್ಷರನ್ನಾಗಿ ಘೋಷಿಸಲಾಗಿದೆ.

ಅಭಿಷೇಕ್ ಬ್ಯಾನರ್ಜಿ ಅವರ ಕಾರ್ಯವೈಖರಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಂಡಾಯ ನಾಯಕರು, ಅವರನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಅಮಾನತುಗೊಳಿಸುವ ನಿರ್ಣಯಕ್ಕೆ ಸರ್ವಾನುಮತದ ಮುದ್ರೆ ಒತ್ತಿದ್ದಾರೆ. ಜೊತೆಗೆ ಪಕ್ಷದ ಸಂಘಟನೆಗೆ ಹೊಸ ರೂಪ ನೀಡಲು 20 ಸದಸ್ಯರ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನೂ ರಚಿಸಲಾಗಿದೆ.

ಬಂಡಾಯ ಬಣವು ತಾವುಗಳೇ “ನಿಜವಾದ ತೃಣಮೂಲ ಕಾಂಗ್ರೆಸ್” ಎಂದು ಘೋಷಿಸಿಕೊಂಡಿದ್ದು, ಪಕ್ಷದ ಮೇಲೆ ಹಕ್ಕು ಸ್ಥಾಪಿಸಲು ಚುನಾವಣಾ ಆಯೋಗದ ಮೆಟ್ಟಿಲೇರಲು ಸಿದ್ಧತೆ ನಡೆಸಿದೆ. ಈ ಬೆಳವಣಿಗೆ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಅತಿದೊಡ್ಡ ಬಿಕ್ಕಟ್ಟಿಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಕಾನೂನು ಮತ್ತು ರಾಜಕೀಯ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

error: Content is protected !!