Home Blog Page 5

ನಾಳೆ ಕೊಪ್ಪಳ ಬಂದ್: ಖಾಸಗಿ ಶಾಲೆ ರಜೆ, ವಿವಿ ಪರೀಕ್ಷೆ ಮುಂದೂಡಿಕೆ!

0

ಕೊಪ್ಪಳ: ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ನಾಳೆ (ಮಂಗಳವಾರ) ಜಿಲ್ಲೆಯಾದ್ಯಾಂತ ಬಂದ್ ಘೋಷಿಸಲಾಗಿದೆ.

ಸಾರ್ವಜನಿಕರ ಸುರಕ್ಷತೆ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಕೊಪ್ಪಳ ಖಾಸಗಿ ಶಾಲೆಗಳ ಒಕ್ಕೂಟವು ಎಲ್ಲಾ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದೆ. ಇದೊಂದಿಗೆ, ಕೊಪ್ಪಳ ವಿವಿಯ ಸ್ನಾತಕೋತ್ತರ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳನ್ನು ಕೂಡ ಮುಂದೂಡಲು ಆದೇಶ ಹೊರಡಿಸಲಾಗಿದೆ.

ನಾಳೆ ನಡೆಯಲಿರುವ ಬೃಹತ್ ಪ್ರತಿಭಟನೆ ಹಿನ್ನೆಲೆ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರು ಯಾವುದೇ ಅಪಾಯಕ್ಕೆ ಒಳಗಾಗದಂತೆ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಮಂಡ್ಯ: ಡಿಂಕಾ ಗ್ರಾಮದಲ್ಲಿ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ – 14 ಆರೋಪಿಗಳ ವಿರುದ್ಧ FIR ದಾಖಲು

0

ಮಂಡ್ಯ: ಮಂಡ್ಯ ಜಿಲ್ಲಾ ಪಾಂಡವಪುರ ತಾಲ್ಲೂಕಿನ ಡಿಂಕಾ ಗ್ರಾಮದಲ್ಲಿ ಭೀಕರ ದೌರ್ಜನ್ಯ ಘಟನೆ ನಡೆದಿದೆ.

ಫೆಬ್ರವರಿ 22ರಂದು ಮಧ್ಯಾಹ್ನ 3 ಗಂಟೆಗೆ, ಸ್ಥಳೀಯ ವ್ಯಕ್ತಿಯೊಬ್ಬರು ಬೈಕ್‌ನಲ್ಲಿ ಚಿನಕುರಳಿ ಕಡೆ ಸಾಗುತ್ತಿದ್ದಾಗ ಗಿರೀಶ್, ಮಂಜು (ಅಲಿಯಾಸ್ ಪ್ಲಗ್), ಜೀವನ್, ಶಶಿಕುಮಾರ, ಅಯ್ಯಪ್ಪ, ಮದನ್, ಮಾದಪ್ಪ, ರವಿ, ನಿಂಗಣ್ಣ ಮತ್ತು ಗಣೇಶ ಸೇರಿದಂತೆ ಹತ್ತಾರು ಮಂದಿ ಕೈಯಲ್ಲಿ ಕಲ್ಲು ಮತ್ತು ದೊಣ್ಣೆ ಹಿಡಿದು ಬೆನ್ನಟ್ಟಿ ಹಲ್ಲೆ ಮಾಡಿದ್ದಾರೆ.

ಘಟನೆಯ ವೇಳೆ, ವ್ಯಕ್ತಿಯ ಕಾಲು ಮತ್ತು ತಲೆಗೆ ಗಂಭೀರ ಗಾಯಗಳು ಸಂಭವಿಸಿದ್ದು, ಹಲ್ಲೆ ಮಾಡುವ ಕಿಡಿಗೇಡಿಗಳು ಈ ಕ್ರೌರ್ಯವನ್ನು ವಿಡಿಯೋದಲ್ಲಿ ದಾಖಲಿಸಿದ್ದರು. ಸ್ಥಳೀಯರು ಹಾಗೂ ಆಂಬ್ಯುಲೆನ್ಸ್ ಮೂಲಕ ಹಲ್ಲೆಗೀಡಾದ ವ್ಯಕ್ತಿಯನ್ನು ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ತರುವ ಮೂಲಕ ಚಿಕಿತ್ಸೆ ನೀಡಲಾಗಿತ್ತು. ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ಘಟನೆಯ ಹಿನ್ನೆಲೆಯಲ್ಲಿ ಪಾಂಡವಪುರ ಪೊಲೀಸ್ ಠಾಣೆಯಲ್ಲಿ 14 ಆರೋಪಿಗಳ ವಿರುದ್ಧ FIR ದಾಖಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಪೋಲೀಸರು ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ ಮತ್ತು ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ.

 

ಶಾಸಕ ಡಾ. ಚಂದ್ರು ಲಮಾಣಿ ಲೋಕಾಯುಕ್ತ ಕಸ್ಟಡಿಗೆ | ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಶನಿವಾರ ಮಧ್ಯರಾತ್ರಿ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದರಿಂದ ಬಹುತೇಕ ಕಾರ್ಯಕರ್ತರಲ್ಲಿ ಅಸಮಾಧಾನ ಮಡುಗಟ್ಟಿದೆ.

ಪ್ರತಿನಿತ್ಯ ನೂರಾರು ಜನ ಕಾರ್ಯಕರ್ತರು ಮನೆ ಬಳಿ ಬರುತ್ತಿದ್ದರು. ಅನೇಕ ಕೆಲಸ ಕಾರ್ಯಗಳ ಬೇಡಿಕೆಯನ್ನು ಹೊತ್ತು ತರುವ ಸಾರ್ವಜನಿಕರು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಮನೆ ಮುಂದೆ ತುಂಬಿರುತ್ತಿದ್ದರು. ಆದರೆ ರವಿವಾರ ಮನೆಯ ಸುತ್ತಲೂ ಖಾಲಿ ಖಾಲಿ ಆಗಿದೆ. ಮನೆಯ ಕೆಲಸಗಾರರನ್ನು ಹೊರತುಪಡಿಸಿ ಕುಟುಂಬಸ್ಥರು ಬೇರೆಕಡೆ ಸ್ಥಳಾಂತರವಾಗಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಶನಿವಾರದಿಂದಲೇ ಶಾಸಕರ ಪತ್ನಿ ಸರೋಜಾ ಮಾನಸಿಕ ಖಿನ್ನತೆಗೆ ಒಳಗಾಗಿ ಊಟವಿಲ್ಲದೆ, ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.

ಶಾಸಕ ಚಂದ್ರು ಲಮಾಣಿ ಎಂದಿನಂತೆ ನಿಗದಿತ ಕಾರ್ಯಕ್ರಮಗಳ ಪ್ರಕಾರ ಶನಿವಾರ ಮುಂಜಾನೆ 7.30ರಿಂದಲೇ ಸೋಮೇಶ್ವರ ದೇವಸ್ಥಾನದಲ್ಲಿ ನಡೆದಿರುವ ಪುಲಿಗೆರೆ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಸುಮಾರು 1 ಗಂಟೆಗಳ ಕಾಲ ಸಂಗೀತ ಕಾರ್ಯಕ್ರಮ ಆಲಿಸಿದ ಅವರು ನಂತರ ಮನೆಗೆ ತೆರಳಿ 10 ಗಂಟೆಯ ಹೊತ್ತಿಗೆ ದೇವಸ್ಥಾನಕ್ಕೆ ಮರಳಿ ಬಂದು ಪುಲಿಗೆರೆ ಉತ್ಸವದ ನಿಮಿತ್ತ ನಡೆದ ಸೋಮೇಶ್ವರ ಪಲ್ಲಕ್ಕಿ ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡು ಸ್ವತಃ ಪಲ್ಲಕ್ಕಿಯನ್ನು ಹೊತ್ತು ಸೇವೆ ಸಲ್ಲಿಸಿದ್ದರು. ನಂತರ ಅಲ್ಲಿಂದ ತೆರಳಿದ ಅವರು ಆಸ್ಪತ್ರೆಯಲ್ಲಿ ವಿ.ಜಿ. ರಾಮ್‌ಜಿ ಉದ್ಯೋಗ ಖಾತ್ರಿ ಯೋಜನೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ಸಭೆಯನ್ನು ನಡೆಸಿದ್ದರು.

ಶನಿವಾರ ಮಧ್ಯಾಹ್ನ 1.30ರಿಂದ 2 ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿದ್ದಾಗಲೇ ಲೋಕಾಯುಕ್ತ ದಾಳಿ ನಡೆದಿದ್ದು, ಏಕಾಏಕಿ ನಡೆದ ದಾಳಿಯಿಂದ ಅವರು ಆಪ್ತ ಕಾರ್ಯದರ್ಶಿಗಳಾದ ಮಂಜುನಾಥ ವಾಲ್ಮೀಕಿ ಮತ್ತು ಗುರು ಅವರು ಸಹ ಈ ಘಟನೆಯಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲಿಂದ ಪ್ರಾರಂಭವಾದ ಲೋಕಾಯುಕ್ತ ತನಿಖೆ ಸುಮಾರು 12 ಗಂಟೆಗಳ ಕಾಲ, ಮಧ್ಯರಾತ್ರಿ 2 ಗಂಟೆಯವರೆಗೂ ನಡೆದು ಅಲ್ಲಿಂದ ಶಾಸಕ ಡಾ. ಚಂದ್ರು ಲಮಾಣಿಯವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ಗದುಗಿಗೆ ತೆರಳಿದರು.

ಶನಿವಾರ ಮಧ್ಯಾಹ್ನ ಶಾಸಕರ ಮೇಲೆ ಲೋಕಾಯುಕ್ತ ದಾಳಿ ನಡೆದ ಸುದ್ದಿ ಹರಡುತ್ತಿದ್ದಂತೆ ಸುದ್ದಿ ತಿಳಿದ ಬಿಜೆಪಿಯ ನೂರಾರು ಕಾರ್ಯಕರ್ತರು, ಮುಖಂಡರು ಜಮಾಯಿಸಿ ಶಾಸಕರ ಮೇಲೆ ಷಡ್ಯಂತ್ರದಿಂದ ಅವರನ್ನು ಸಿಲುಕಿಸುವ ಕಾರ್ಯವನ್ನು ಮಾಡಲಾಗಿದೆ, ದಲಿತ ಮುಖಂಡರನ್ನು ತುಳಿಯುವ ಕಾರ್ಯ ಇದಾಗಿದೆ, ಶಾಸಕರು ಅಮಾಯಕರು ಎಂದು ಆಕ್ರೋಶ ಹೊರಹಾಕಿದರು.

ಸಚಿವ ಎಚ್.ಕೆ. ಪಾಟೀಲರೇ ಇದಕ್ಕೆ ಕಾರಣ, ಅವರಿಂದಲೇ ಈ ಹೇಯ ಕೃತ್ಯ ನಡೆದಿದೆ, ಕಾನೂನು ಸಚಿವರಿಂದಲೇ ಕಾನೂನು ಉಲ್ಲಂಘನೆಯಾಗುತ್ತಿದೆ, ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜೋರಾಗಿ ಕೂಗುತ್ತಿದ್ದರು. ಇದು ಬಂಜಾರ ಸಮಾಜದ ಯುವ ಮುಖಂಡ ಬೆಳೆಯುತ್ತಿರುವದನ್ನು ಸಹಿಸಲಾಗದವರ ಕಾರ್ಯ ಎಂದು ಆಕ್ರೋಶದಿಂದ ಕೂಗಿದರು. ಮಧ್ಯರಾತ್ರಿ ಶಾಸಕರನ್ನು ಹೊರಕ್ಕೆ ಕರೆತರುತ್ತಿದ್ದಂತೆ ಕಾರ್ಯಕರ್ತರ ಅಕ್ರೋಶ ಮುಗಿಲುಮುಟ್ಟಿತ್ತು. ಪೊಲೀಸ್ ಅಧಿಕಾರಿಗಳು, ನೂರಾರು ಪೊಲೀಸ್ ಸಿಬ್ಬಂದಿಗಳು ಪರಿಸ್ಥಿತಿ ನಿಭಾಯಿಸಿದರು.

ಸಹಕಾರಿ ಸಂಘದ ನೂತನ ನ್ಯಾಯಬೆಲೆ ಅಂಗಡಿ, ಕಡಲೆ ಖರೀದಿ ಕೇಂದ್ರ ಪ್ರಾರಂಭ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಗ್ರಾಮದಿಂದ ದೂರವಿರುವ ಮಾರುತಿ ನಗರ ಕುಟುಂಬಗಳ ಬೇಡಿಕೆಯಂತೆ ನ್ಯಾಯಬೆಲೆ ಅಂಗಡಿಯ ಪರವಾನಿಗೆಯ ನಂತರ ತಡವಾಗಿಯಾದರೂ ಆರಂಭವಾಗಿದ್ದು, ಆ ಭಾಗದ ಬಡವರಿಗೆ ಅನುಕೂಲವಾಗಲಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ. 2ರ ನೂತನ ಅಧ್ಯಕ್ಷ ಮಹೇಶ ಮುಸ್ಕಿನಭಾವಿ ಹೇಳಿದರು.

ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ. 2ರ ನೂತನ ನ್ಯಾಯಬೆಲೆ ಅಂಗಡಿ ಹಾಗೂ ಸರ್ಕಾರದಿಂದ ಬೆಂಬಲ ಬೆಲೆಯ ಕಡಲೆ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮುಂದಿನ ತಿಂಗಳಿನಿಂದ ಮಾರುತಿ ನಗರದ ಸಾರ್ವಜನಿಕ ಸಮುದಾಯ ಭವನದಲ್ಲಿ ತಾತ್ಕಾಲಿಕವಾಗಿ ನ್ಯಾಯಬೆಲೆ ಅಂಗಡಿ ತೆರೆದು ಪಡಿತರ ವಿತರಿಸಲಾಗುವುದು. ಈ ಹಿಂದೆ ಗ್ರಾಮ ಸಭೆಯ ನಿರ್ಣಯದಂತೆ ಅಭಿವೃದ್ಧಿ ಅಧಿಕಾರಿಗಳು ಖಾಲಿ ಇರುವ ನಿವೇಶನವನ್ನು ನಮ್ಮ ಸಂಘಕ್ಕೆ ಒದಗಿಸಿಕೊಡಬೇಕು. ಕಡಲೆ ಖರೀದಿಗೆ ಪ್ರತಿ ಕ್ವಿಂಟಲ್‌ಗೆ ಸರ್ಕಾರ 5875 ರೂ. ಬೆಂಬಲ ಬೆಲೆ ನಿಗದಿ ಮಾಡಿದ್ದು, ಪ್ರತಿ ಎಕರೆಗೆ 4 ಕ್ವಿಂಟಲ್‌ನಂತೆ ಒಂದು ಖಾತೆಗೆ 10 ಎಕರೆವರೆಗೆ 40 ಕ್ವಿಂಟಲ್ ಖರೀದಿ ಮಾಡಲಾಗುತ್ತಿದ್ದು, ರೈತರು ಸಹಕಾರ ನೀಡಬೇಕು ಎಂದರು.

ಪಿ.ಡಿ.ಒ ಅಮೀರನಾಯಕ ಮಾತನಾಡಿ, ರೈತರ ಧ್ವನಿಯಾಗಿರುವ ಸಹಕಾರ ಸಂಘವು ಇನ್ನು ಮುಂದೆ ಬಡವರಿಗೆ ಸರ್ಕಾರ ಉಚಿತವಾಗಿ ನೀಡುವ ಆಹಾರ ಧಾನ್ಯವನ್ನು ಪೂರೈಕೆ ಮಾಡುವ ಜವಾಬ್ದಾರಿ ವಹಿಸಿಕೊಂಡಿರುವುದು ಶ್ಲಾಘನೀಯ. ಗ್ರಾಮಸಭೆಯ ನಿರ್ಣಯದಂತೆ ಸಂಘಕ್ಕೆ ಗ್ರಾಮ ಪಂಚಾಯಿತಿಯಿಂದ ನಿವೇಶನ ಒದಗಿಸುವ ಕುರಿತು ಪರಿಶೀಲಿಸಲಾಗುವುದು ಎಂದರು.

ಸಂಘದ ಉಪಾಧ್ಯಕ್ಷ ಪರಸಪ್ಪ ಕರಿಯಲ್ಲಪ್ಪನವರ, ಲಕ್ಕುಂಡಿ ಬಿ.ಜೆ.ಪಿ ಮಂಡಲದ ಅಧ್ಯಕ್ಷ ಪ್ರಕಾಶ ಅರಹುಣಶಿ ಮಾತನಾಡಿದರು. ಹಿರಿಯರಾದ ಎ.ಬಿ. ಬಿರಾದಾರ, ನಿರ್ದೇಶಕರಾದ ಅಶೋಕ ಮುಸ್ಕಿನಭಾವಿ, ಮಲ್ಲಪ್ಪ ಹಗರಿ, ನಿಂಗಪ್ಪ ಮಂಗಳೂರು, ವಿರೂಪಾಕ್ಷಪ್ಪ ಕಮತರ, ಪಂಚಾಕ್ಷರಯ್ಯ ನಾಗಾವಿಮಠ, ಅನ್ನಪೂರ್ಣ ಹಡಗಲಿ, ಗಂಗವ್ವ ಮುಕ್ಕಣ್ಣವರ, ಕಲ್ಲಪ್ಪ ಬಣವಿ ವೇದಿಕೆಯಲ್ಲಿದ್ದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಬಿ. ಬೆಣಕಲ್ ಸ್ವಾಗತಿಸಿದರು. ಬಸವರಾಜ ಮುಳ್ಳಾಳ ನಿರೂಪಿಸಿದರು. ಶಿವು ಭಜಂತ್ರಿ ವಂದಿಸಿದರು.

ಸಂಘದ ಹಿರಿಯ ಸದಸ್ಯ ಅಜ್ಜಣ್ಣ ಪಾಟೀಲ ಮಾತನಾಡಿ, ಮಾರುತಿ ನಗರದ ಜನರ ಅನುಕೂಲಕ್ಕಾಗಿಯೇ ಕಳೆದ 4 ವರ್ಷದ ಹಿಂದೆಯೇ ಜಿಲ್ಲಾಧಿಕಾರಿಗಳು ನಮ್ಮ ಸಂಘಕ್ಕೆ ನ್ಯಾಯಬೆಲೆ ಅಂಗಡಿ ತೆರೆಯಲು ಅನುಮತಿ ನೀಡಿದ್ದರು. ಆದರೆ ಆಹಾರ ಇಲಾಖೆಯ ಅಧಿಕಾರಿಗಳ ನಿಷ್ಕಾಳಜಿಯಿಂದ ಇಲ್ಲಿಯವರೆಗೂ ಮುಂದೂಡುತ್ತಾ ಬಂದಿದ್ದು ವಿಷಾದನೀಯ. ಗ್ರಾಮದ ಅಭಿವೃದ್ಧಿ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಗ್ರಾಮದ ಜನರ ಕುಂದುಕೊರತೆಗಳ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ವಿ.ವಿ ಬ್ಲೂ ಆಗಿ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪಟ್ಟಣದ ಆರ್.ಎನ್. ದೇಶಪಾಂಡೆ ಸರಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿನಿ ರೇಖಾ ಗೋಕಾವಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜರುಗಿದ ಮಹಿಳಾ ಖೋಖೋ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಬ್ಲೂ ಆಗಿ ಆಯ್ಕೆಯಾಗಿದ್ದಾರೆ.

ಏಪ್ರಿಲ್ 4ರಂದು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಅಂತರ ವಿಶ್ವವಿದ್ಯಾಲಯಗಳ ದಕ್ಷಿಣ ವಲಯ ಖೋಖೋ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವುದಕ್ಕೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಾನೂನು ಹಾಗೂ ಸಂಸದಿ ವ್ಯವಹಾರ ಸಚಿವ ಎಚ್.ಕೆ. ಪಾಟೀಲ ಹಾಗೂ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಪ್ರಾಚಾರ್ಯರು ಆರ್.ಎಂ. ಕಲ್ಲನಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಕಲ್ಪ ಶಾಲೆಯಲ್ಲಿ ‘ಟ್ರೆಡಿಷನಲ್ ಡೇ’

0

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಪ್ರಕಲ್ಪ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಟ್ರೆಡಿಷನಲ್ ಡೇ’ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ವಿವಿಧ ರಾಜ್ಯಗಳ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ್ದು ಶಾಲಾ ಆವರಣದಲ್ಲಿ ವೈವಿಧ್ಯಮಯ ಸಂಸ್ಕೃತಿಯ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಕನ್ನಡ, ತಮಿಳು, ತೆಲುಗು, ಮರಾಠಿ ಹಾಗೂ ಉತ್ತರ ಭಾರತದ ಸಂಪ್ರದಾಯಿಕ ವೇಷಭೂಷಣಗಳಲ್ಲಿ ಕಂಗೊಳಿಸಿದ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದರು.

ಶಾಲೆಯ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಎಸ್.ವಿ. ಹುಬ್ಬಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಉಡುಪಿನ ಸೊಬಗು ಮತ್ತೆ ನೆನಪಾಗಲಿ. ವೇಷ-ಭೂಷಣ ಬದಲಾಗಬಹುದು. ಆದರೆ, ಸಂಸ್ಕೃತಿ ಮತ್ತು ಸಂಸ್ಕಾರ ಎಂದಿಗೂ ಶಾಶ್ವತವಾಗಿರುತ್ತದೆ ಎಂದರು.

ವಿದ್ಯಾರ್ಥಿಗಳು ಪರಂಪರೆಯ ಆಚರಣೆಗಳ ಮಹತ್ವವನ್ನು ವಿವರಿಸಿ, ನಮ್ಮ ಸಂಸ್ಕೃತಿಯನ್ನು ಉಳಿಸುವ ಅಗತ್ಯತೆಯನ್ನು ಒತ್ತಿ ಹೇಳಿದರು. ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿಗಳಾದ ಪಿ.ಎಸ್. ಹುಬ್ಬಳ್ಳಿ ಹಾಗೂ ಮಾರ್ಗದರ್ಶಕರಾದ ಎಸ್.ಎಸ್. ಹುಬ್ಬಳ್ಳಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟ ಶಾಲೆಯ ಎಲ್ಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಎಂ.ಎಂ. ಡಂಬಳ ಅಭಿನಂದಿಸಿದರು.

ಬೆಂಗಳೂರು: ಎಂ.ಫಾರ್ಮಾ ಎರಡನೇ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ

0

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಂ.ಫಾರ್ಮಾ ಕೋರ್ಸ್ ಪ್ರವೇಶ ಎರಡನೇ ಮತ್ತು ಅಂತಿಮ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಫೆ.25ರಂದು ಮಧ್ಯಾಹ್ನ 2 ಗಂಟೆಯೊಳಗೆ ವಿದ್ಯಾರ್ಥಿಗಳು ತಮ್ಮ ಇಚ್ಛೆ/ಆಯ್ಕೆಗಳನ್ನು ದಾಖಲಿಸಬಹುದು ಎಂದು ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ. ಫೆ.25ರಂದು ಸಂಜೆ 8 ಗಂಟೆಗೆ ತಾತ್ಕಾಲಿಕ ಫಲಿತಾಂಶ ಪ್ರಕಟವಾಗಿದ್ದು, ಫೆ.26ರಂದು ಮಧ್ಯಾಹ್ನ 2 ಗಂಟೆಗೆ ಅಂತಿಮ ಫಲಿತಾಂಶ ಪ್ರಕಟವಾಗಲಿದೆ. ಸೀಟು ಹಂಚಿಕೆಗೊಳ್ಳುವ ವಿದ್ಯಾರ್ಥಿಗಳು ಫೆ.27ರಿಂದ ಮಾರ್ಚ್ 4ರವರೆಗೆ ಶುಲ್ಕ ಪಾವತಿಸಿ ಪ್ರವೇಶ ಪತ್ರಗಳನ್ನು ಪಡೆಯಬೇಕು. ನಂತರ, ಮಾರ್ಚ್ 5ರೊಳಗೆ ತಮ್ಮ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು.

ಮಹತ್ವದ ಸೂಚನೆ: ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ಶುಲ್ಕ ಪಾವತಿಸದ ಅಭ್ಯರ್ಥಿಗಳಿಗೆ ಎರಡನೇ ಸುತ್ತಿನಲ್ಲಿ ಭಾಗವಹಿಸಲು ಅವಕಾಶವಿಲ್ಲ. ಇದುವರೆಗೆ ಯಾವುದೇ ಸೀಟು ಹಂಚಿಕೆಯಾಗದ ಅಥವಾ ಈಗಾಗಲೇ ಕಾಲೇಜಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಎರಡನೇ ಸುತ್ತಿನಲ್ಲಿ ಲಭ್ಯವಿರುವ ಸೀಟುಗಳಿಗೆ ಆಯ್ಕೆ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ KEA ವೆಬ್‌ಸೈಟ್ ಪರಿಶೀಲಿಸುವಂತೆ ತಿಳಿಸಲಾಗಿದೆ.

 

ಶಾಸಕ ಡಾ. ಚಂದ್ರು ಜನರಿಗೆ ದ್ರೋಹವೆಸಗಿದ್ದಾರೆ: ರಾಮಣ್ಣ ಲಮಾಣಿ 

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಾಸಕ ಡಾ. ಚಂದ್ರು ಲಮಾಣಿ ಭ್ರಷ್ಟಾಚಾರದ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದು ಈ ಕ್ಷೇತ್ರದ ಜನರ ನಂಬಿಕೆ, ವಿಶ್ವಾಸಕ್ಕೆ ದ್ರೋಹ ಮಾಡಿದ್ದಾರೆ. ಇವರಿಗೆ ಅಧಿಕಾರದಲ್ಲಿ ಮುಂದುವರೆಯುವ ಯಾವುದೇ ನೈತಿಕ ಹಕ್ಕಿಲ್ಲದ ಕಾರಣ ಕೂಡಲೇ ರಾಜೀನಾಮೆ ಕೊಟ್ಟು ಪ್ರಾಮಾಣಿಕವಾಗಿ ವೈದ್ಯರ ವೃತ್ತಿ ಮುಂದುವರೆಸಬೇಕು ಎಂದು ಮಾಜಿ ಶಾಸಕರಾದ ರಾಮಣ್ಣ ಲಮಾಣಿ ಮತ್ತು ರಾಮಕೃಷ್ಣ ದೊಡ್ಡಮನಿ ಆಗ್ರಹಿಸಿದರು.

ಅವರು ಸೋಮವಾರ ಪಟ್ಟಣದಲ್ಲಿ ಶಾಸಕರ ಮನೆ ಮೇಲೆ ಲೋಕಾಯುಕ್ತ ದಾಳಿಯಾದ ವೇಳೆ ಬಿಜೆಪಿ ಕಾರ್ಯಕರ್ತರು ಇದು ಕಾಂಗ್ರೆಸ್ ಪಕ್ಷ ಮತ್ತು ಹೆಚ್.ಕೆ. ಪಾಟೀಲರ ಷಡ್ಯಂತ್ರ ಎಂಬ ಸುಳ್ಳು ಆರೋಪ ಮಾಡಿರುವುದನ್ನು ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಶಿರಹಟ್ಟಿ ಮತಕ್ಷೇತ್ರ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಿದೆ. ದಿ. ಉಪನಾಳ ಗೂಳಪ್ಪನವರು, ಟಿ.ಬಿ. ಬಾಳಿಕಾಯಿ, ಎಸ್.ಎಸ್. ಪಾಟೀಲ, ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ ಮತ್ತು ನಾನು ಸೇರಿ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಕ್ಷೇತ್ರಕ್ಕೆ ಹೆಸರು ತರುವ ಕೆಲಸ ಮಾಡಿದ್ದೇವೆ. ಆದರೆ ವಿದ್ಯಾವಂತನೆಂದು ಜನರು ಕೊಟ್ಟ ಅವಕಾಶವನ್ನು ದುರುಪಯೋಗ ಮಾಡಿಕೊಂಡು ಲಂಚದ ಮೂಲಕ ಕ್ಷೇತ್ರಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ವಿದ್ಯೆ ಇದ್ದರೂ ವಿನಯ, ಸಂಸ್ಕಾರವೇ ಇಲ್ಲದ ಅಧಿಕಾರದ ಮದದಿಂದ ಕ್ಷೇತ್ರದ ಅಭಿವೃದ್ಧಿಯ ಹಣ ಕೊಳ್ಳೆ ಹೊಡೆದುಕೊಂಡು ಹೋಗುವ ಇವರಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಜೀವಬೆದರಿಕೆ, ಜಾತಿನಿಂದನೆ ಕೇಸ್ ಮಾಡಿಸುವ ಸಂಸ್ಕೃತಿಯ ಶಾಸಕನಿಂದ ಜನ ರೋಸಿ ಹೋಗಿದ್ದಾರೆ. ಪಕ್ಷಕ್ಕೆ ನೈತಿಕ ಹಕ್ಕಿದ್ದರೆ ಬಿಜೆಪಿ ಪಕ್ಷದವರು ಮತ್ತು ಜನರ ಹಿತದೃಷ್ಟಿಯಿಂದ ರಾಜ್ಯಪಾಲರು ಇವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಕ್ಷೇತ್ರಕ್ಕೆ ಕೋಟ್ಯಾಂತರ ರೂ. ಹಣ ಹರಿದು ಬಂದಿದೆ. ಆದರೆ ಡಾ. ಚಂದ್ರು ಲಮಾಣಿ ಕಾಂಗ್ರೆಸ್ ಪಕ್ಷದಿಂದ ನಯಾಪೈಸೆ ದುಡ್ಡು ಬಂದಿಲ್ಲ ಎಂದು ಹೇಳುವ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡುತ್ತಾ ಭ್ರಷ್ಟಾಚಾರದಲ್ಲಿ ತೊಡಗಿದ್ದರು. ಮಾಡಲು ಸಾಕಷ್ಟು ಕೆಲಸವಿದ್ದರೂ ಅವರ ಚಿತ್ತ ಕೇವಲ ದುಡ್ಡು ಮಾಡುವತ್ತ ಇದೆ. ಆದಾಗ್ಯೂ ಕಾಂಗ್ರೆಸ್ ಪಕ್ಷದ ಪ್ರಶ್ನಾತೀತ ರಾಜರಾಣಿ ಹೆಚ್.ಕೆ. ಪಾಟೀಲರ ಹೆಸರನ್ನು ಎಳೆದು ತರುವ ಕೆಟ್ಟ ಮನಸ್ಥಿತಿ ಜನರಿಗೆ ಅರ್ಥವಾಗುತ್ತದೆ. ವಿದ್ಯಾವಂತರಾದ ಇವರು ಆತ್ಮಸಾಕ್ಷಿಯಿಂದ ರಾಜಕೀಯ ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕು ಎಂದರು.

ಬಳಿಕ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಶಾಸಕ ಡಾ. ಚಂದ್ರು ಲಮಾಣಿ ಅವರ ರಾಜೀನಾಮೆ ಪಡೆಯಬೇಕು ಎಂದು ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ವೇಳೆ ರಾಮಣ್ಣ ಲಮಾಣಿ (ಶಿಗ್ಲಿ), ಯಲ್ಲಪ್ಪ ಸೂರಣಗಿ, ನೀಲಪ್ಪ ಶರಸೂರಿ, ಶಿವಣ್ಣ ಕಬ್ಬೇರ, ಕಲ್ಲಪ್ಪ ಗಂಗಣ್ಣವರ, ಮನೋಜ ರಾಟೋಡ, ಜಗದೀಶ ಹುಲಿಗೆಮ್ಮನವರ, ಶಿವರಾಜಗೌಡ ಪಾಟೀಲ, ಪರಮೇಶ ಲಮಾಣಿ, ತಿಪ್ಪಣ್ಣ ಸಂಶಿ, ನಾಗರಾಜ ದೊಡ್ಡಮನಿ, ವಾಸೀಂ ಅಕ್ರಮ ಮುಚ್ಚಾಲೆ, ರಾಜು ಓಲೇಕಾರ, ರಾಜರತ್ನ ಹುಲಗೂರ, ನೀಲಪ್ಪ ಪಡಗೇರಿ, ಶಶಿಕಲಾ ಬಡಿಗೇರ, ರಫೀಕ ಕಲಬುರ್ಗಿ, ಸಂತೋಷ ತೇಲಿ, ರಂಜಾನಸಾಬ ನದಾಫ್ ಮುಂತಾದವರಿದ್ದರು.

ಕೆಪಿಸಿಸಿ ಸದಸ್ಯೆ ಸುಜಾತಾ ದೊಡ್ಡಮನಿ, ಚನ್ನಪ್ಪ ಜಗಲಿ, ಕಾಂಗ್ರೆಸ್ ಬ್ಲಾಕ್ ಕಮಿಟಿ ಅಧ್ಯಕ್ಷ ಜಿ.ಆರ್. ಕೊಪ್ಪದ, ಫಕ್ಕಿರೇಶ ಮ್ಯಾಟಣ್ಣವರ, ವಿರೇಂದ್ರ ಪಾಟೀಲ, ನಾಗರಾಜ ಮಡಿವಾಳರ, ಎಸ್.ಪಿ. ಬಳಿಗಾರ, ಶರಣು ಗೋಡಿ, ಸೋಮಣ್ಣ ಬೆಟಗೇರಿ ಮಾತನಾಡಿ, ಭ್ರಷ್ಟಾಚಾರದಿಂದ ಶಿಕ್ಷೆಗೊಳಗಾದ ಶಾಸಕನನ್ನು ಬಿಜೆಪಿ ಸಮರ್ಥಿಸಿಕೊಂಡರೆ, ಬೆಂಬಲಿಸಿದರೆ ಇದು ಬಿಜೆಪಿ ಸಂಸ್ಕೃತಿಯನ್ನು ಸಾಕ್ಷೀಕರಿಸಿದಂತಾಗುತ್ತದೆ. ಬಿಜೆಪಿಗರ ಹೋರಾಟಕ್ಕೆ ಯಾರೂ ಬೆಂಬಲ ನೀಡಬಾರದು. ಹಾಗೇನಾದರೂ ಆದರೆ ಇದಕ್ಕೆ ಕಾಂಗ್ರೆಸ್ ಪಕ್ಷವೂ ದಿಟ್ಟ ಹೋರಾಟಕ್ಕೆ ಸಿದ್ಧ ಎಂದರು.

ಶಾಸಕ ಡಾ. ಚಂದ್ರು ಲಮಾಣಿ ಶಾಸಕ ಸ್ಥಾನದಿಂದ ಅಮಾನತ್ತಿಗೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಸೋಮವಾರ ಶಿರಹಟ್ಟಿಯ ಬ್ಲಾಕ್ ಕಾಂಗ್ರೆಸ್ ಕಮಿಟಿ ವತಿಯಿಂದ ಶಾಸಕ ಡಾ. ಚಂದ್ರು ಲಮಾಣಿಯವರನ್ನು ಶಾಸಕ ಸ್ಥಾನದಿಂದ ಅಮಾನತ್ತು ಮಾಡಿ ಸದಸ್ಯತ್ವ ರದ್ದುಗೊಳಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಗುತ್ತಿಗೆದಾರನಿಂದ ಕಮೀಷನ್ ಹಣ (ಲಂಚ) ಸ್ವೀಕರಿಸುತ್ತಿದ್ದ ವೇಳೆ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಶಿರಹಟ್ಟಿ ಮೀಸಲು ಮತಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ತಕ್ಷಣ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ಕಾಂಗ್ರೆಸ್ ಪಕ್ಷದ ನಾಯಕರ ಕೈವಾಡವಿದೆ ಎಂದು ಬೇರೊಬ್ಬರ ಮೇಲೆ ಗೂಬೆ ಕೂರಿಸುವ ಕೆಲಸ ಆಗಬಾರದು. ಭ್ರಷ್ಟಾಚಾರ ಮಾಡಿರುವ ವ್ಯಕ್ತಿ ತನ್ನ ತಪ್ಪನ್ನು ಒಪ್ಪಿಕೊಳ್ಳದೇ ಬೇರೊಬ್ಬರ ಮೇಲೆ ದೋಷಾರೋಪಣೆ ಮಾಡುವುದು ನೈತಿಕವಾಗಿ ಹಾಗೂ ಕಾನೂನುಬದ್ಧವಾಗಿ ತಪ್ಪಾಗಿದೆ. ಸಾರ್ವಜನಿಕ ಜೀವನದಲ್ಲಿರುವವರು ಹೇಗೆ ನಡೆದುಕೊಳ್ಳಬೇಕು ಎನ್ನುವ ಪರಿಜ್ಞಾನ ಇಲ್ಲದ ಶಾಸಕ ಪಾರದರ್ಶಕ ತನಿಖೆಗೆ ಸಹಕರಿಸಬೇಕು. ನೈತಿಕ ಹೊಣೆಗಾರಿಕೆ ವಹಿಸಿ ಶಾಸಕ ಸ್ಥಾನಕ್ಕೆ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಉತ್ತರ ಕರ್ನಾಟಕದ ಇತಿಹಾಸದಲ್ಲೇ ತಾಲೂಕಿನಲ್ಲಿ ಯಾವ ಶಾಸಕರೂ ಇಂತಹ ಭ್ರಷ್ಟಾಚಾರದಲ್ಲಿ ಸಿಲುಕಿರುವುದು ಕಂಡುಬಂದಿಲ್ಲ. ಆದರೆ ಹೆಚ್ಚು ಕಲಿತು ವೈದ್ಯಕೀಯ ಸೇವೆ ಮಾಡಿರುವ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಭ್ರಷ್ಟಾಚಾರ ನಡೆಸಿ, ತನ್ನ ಒಡೆತನದ ಬಾಲಾಜಿ ಆಸ್ಪತ್ರೆಯಲ್ಲಿ ಕಮೀಷನ್ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಸಿಲುಕಿ ತಾಲೂಕಿನ ಮರ್ಯಾದೆಯನ್ನು ಹರಾಜು ಹಾಕಿದ್ದಾರೆ. ಇವರು ಶಾಸಕ ಸ್ಥಾನದಲ್ಲಿ ಮುಂದುವರೆಯುವ ಯಾವ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ಭ್ರಷ್ಟಾಚಾರ ನಡೆಸಿ ರೂ. 5 ಲಕ್ಷ ಹಣದ ಸಮೇತ ಅಧಿಕಾರಿಗಳ ಕೈಗೆ ಸಿಕ್ಕಿರುವುದರಿಂದ ನ್ಯಾಯಾಧೀಶರ ಆದೇಶದಂತೆ ಪೊಲೀಸರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದಿದ್ದು, ಶಾಸಕ ಕೂಡಲೇ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಒತ್ತಾಯಿಸಿದರು.

ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಹುಮಾಯೂನ್ ಮಾಗಡಿ, ಡಿ.ಕೆ. ಹೊನ್ನಪ್ಪನವರ, ಚನ್ನಪ್ಪ ಜಗಲಿ, ವಿರೇಂದ್ರ ಪಾಟೀಲ, ಶಿವನಗೌಡ ಪಾಟೀಲ, ಮಂಜುನಾಥ ಘಂಟಿ ಮಾತನಾಡಿದರು.

ಇದಕ್ಕೂ ಮೊದಲು ಪಟ್ಟಣದ ಶ್ರೀ ಮಾರುತಿ ದೇವಸ್ಥಾನದಿಂದ ಬೃಹತ್ ಪ್ರತಿಭಟನೆ ನಡೆಸಿ, ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ನೆಹರು ವೃತ್ತದ ಮಾರ್ಗವಾಗಿ ತಮಟೆ ಬಾರಿಸುತ್ತ ಕಾರ್ಯಕರ್ತರು ಧಿಕ್ಕಾರದ ಘೋಷಣೆ ಕೂಗುತ್ತಾ ತಹಸೀಲ್ದಾರ ಕಾರ್ಯಾಲಯಕ್ಕೆ ಆಗಮಿಸಿ ಮನವಿ ಸಲ್ಲಿಸಿದರು.

ಮುಖಂಡರಾದ ಮಹೇಂದ್ರ ಮುಂಡವಾಡ, ಲಕ್ಷ್ಮಣಗೌಡ ಪಾಟೀಲ, ಫಕ್ಕಿರೇಶ ಮ್ಯಾಟಣ್ಣವರ, ಚನ್ನಪ್ಪ ಜಗಲಿ, ವಿರೂಪಾಕ್ಷ ನಂದೆಣ್ಣವರ, ಹೊನ್ನಪ್ಪ ಶಿರಹಟ್ಟಿ, ಬುಡನಶ್ಯಾ ಮಕಾನದಾರ, ಶಿವನಗೌಡ ಪಾಟೀಲ, ರಮೇಶ ನಿರ್ವಾಣಶೆಟ್ಟರ, ಎಂ.ಕೆ. ಲಮಾಣಿ, ಮಹಾಂತೇಶ ದಶಮನಿ, ಅಜ್ಜುಗೌಡ್ರ ಪಾಟೀಲ, ಸೋಮನಗೌಡ ಮರಿಗೌಡ್ರ, ಚಾಂದಸಾಬ ಮುಳಗುಂದ, ದೇವಪ್ಪ ಲಮಾಣಿ, ಅಶ್ರತಅಲಿ ಢಾಲಾಯತ, ಮಾಬೂಸಾಬ ಲಕ್ಷ್ಮೇಶ್ವರ, ಈರಣ್ಣ ಚವ್ಹಾಣ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಜಿ.ಪಂ ಮಾಜಿ ಅಧ್ಯಕ್ಷೆ ಸುಜಾತ ದೊಡ್ಡಮನಿ ಮಾತನಾಡಿ, ಶಾಸಕ ಚಂದ್ರು ಲಮಾಣಿ ಮಾಡಬಾರದ ಕೆಲಸ ಮಾಡಿ ಕ್ಷೇತ್ರಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಸಚಿವ ಎಚ್.ಕೆ. ಪಾಟೀಲರನ್ನು ದೂರುತ್ತಿರುವುದು ಸರಿಯಲ್ಲ. ನಿಮ್ಮ ತಪ್ಪು ಮುಚ್ಚಿಕೊಳ್ಳಲು ಮತ್ತೊಬ್ಬರ ಮೇಲೆ ಆರೋಪ ಮಾಡುವುದು ಸರಿಯಲ್ಲ. ತಕ್ಷಣ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.

ಶಿರಹಟ್ಟಿ ತಾಲೂಕಾಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಿ ಪೂರೈಕೆಗೆ ಸಾರ್ವಜನಿಕರ ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿಯ ತಾಲೂಕಾಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಿಗಳನ್ನು ಸಾರ್ವಜನಿಕರಿಗೆ ವಿತರಿಸುತ್ತಿದ್ದು, ಇದನ್ನು ಪ್ರಶ್ನಿಸಿದರೆ ಆಡಳಿತ ವೈದ್ಯಾಧಿಕಾರಿ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತೇನೆಂದು ಹೇಳುತ್ತಿದ್ದಾರೆಂದು ಸಾರ್ವಜನಿಕರು ಸೋಮವಾರ ಬೆಳಿಗ್ಗೆ ತಾಲೂಕಾ ಆಸ್ಪತ್ರೆಯಲ್ಲಿ ತಮಗೆ ನೀಡಿದ ಅವಧಿ ಮೀರಿದ ಔಷಧಿ ಬಾಟಲ್ ಮತ್ತು ತಪಾಸಣಾ ಪುಸ್ತಕದಲ್ಲಿ ನಮೂದಾಗಿರುವುದನ್ನು ಪ್ರದರ್ಶಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಖಾನಾಪೂರ ಗ್ರಾಮದಲ್ಲಿನ ಆಶಾಬಿ ದೊಡ್ಡಮನಿ ಎಂಬುವರು ಮಾನಸಿಕ ಕಾಯಿಲೆ ಇದ್ದ ಬಗ್ಗೆ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಅವಧಿ ಮೀರಿದ ಔಷಧಿ ಸೇವನೆ ಮಾಡಿರುವುದರಿಂದ ನಿದ್ದೆ ಜಾಸ್ತಿ ಬರುತ್ತಿದ್ದು, ಮೈ-ಕೈ ನೋವು ಜಾಸ್ತಿಯಾಗುತ್ತಿದೆ. ಈ ಬಗ್ಗೆ ಕೇಳಿದರೆ ಇದನ್ನು ನಾವು ಪೂರೈಸಿಲ್ಲ ಎನ್ನುತ್ತಿದ್ದು, ಔಷಧಿ ವಿತರಿಸಿ ತಾವೇ ಸಹಿ ಮಾಡಿ ನೀಡಿದ್ದಾರೆಂದು ಆಶಾಬಿ ದೊಡ್ಡಮನಿ ಆರೋಪಿಸಿದರು.

ದಲಿತ ಮುಖಂಡ ಪ್ರಕಾಶ ಬಡೆಣ್ಣವರ, ಶಿಶಿರ ಪಾಟೀಲ ಮಾತನಾಡಿ, ಅವಧಿ ಮೀರಿದ ಔಷಧಿ ಪೂರೈಕೆ ಮಾಡಿದ್ದರ ಕುರಿತು ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡದೇ ನಾವು ಔಷಧಿಯನ್ನೇ ನೀಡಿಲ್ಲ ಎಂದು ಹೇಳುತ್ತಿದ್ದಾರೆ. ರೋಗಿಯ ಪುಸ್ತಕದಲ್ಲಿ ಔಷಧಿ ನೀಡಿ ಸಹಿಯನ್ನು ಸಹ ಮಾಡಿದ್ದಾರೆ. ಶಿರಹಟ್ಟಿ ಶಹರವೂ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಿಂದ ಇಲ್ಲಿ ನಿತ್ಯವೂ ನೂರಾರು ಸಂಖ್ಯೆಯಲ್ಲಿ ರೋಗಿಗಳು ಬಂದರೂ ಅವರಿಗೆ ಸಮರ್ಪಕ ಚಿಕಿತ್ಸೆ ಲಭಿಸುತ್ತಿಲ್ಲ. ಗರ್ಭಿಣಿಯರು, ಮಕ್ಕಳು ಸಕಾಲಕ್ಕೆ ಚಿಕಿತ್ಸೆ ಸಿಗದೇ ಬೇರೆ ಊರುಗಳಿಗೆ ತೆರಳಬೇಕಾದ ಪರಿಸ್ಥಿತಿ ಇದ್ದು, ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.

ಈ ಕುರಿತು ತಾಲೂಕಾ ಆರೋಗ್ಯಾಧಿಕಾರಿ ಡಾ. ಸುಭಾಸ ದೈಗೊಂಡ ಮಾತನಾಡಿ, ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಂತೆಯೇ ತಾಲೂಕಾಸ್ಪತ್ರೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪ್ರತಿಭಟನಾಕಾರರಿಗೆ ಮನವೊಲಿಸುವ ಪ್ರಯತ್ನವಾಗಲೀ, ಇಲ್ಲವೇ ಆರೋಪಗಳಿಗೆ ಉತ್ತರ ನೀಡಲು ಯಾರೂ ಮುಂದೆ ಬರಲಿಲ್ಲ. ಇದಕ್ಕೂ ತಮಗೆ ಸಂಬಂಧವಿಲ್ಲವೆನ್ನುವ ರೀತಿ ಕೆಲ ಸಿಬ್ಬಂದಿಗಳು ತಮ್ಮ ಪಾಡಿಗೆ ಕೆಲಸ ಮಾಡುವಲ್ಲಿ ತಲ್ಲೀನರಾಗಿರುವುದು ಕಂಡುಬಂದಿತು.

ಈ ಕುರಿತು ಪ್ರತಿಕ್ರಿಯೆ ನೀಡಲು ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿ ಗೋಪಾಲ್‌ರಾಜ್ ನಿರಾಕರಿಸಿದರು.

error: Content is protected !!