Home Blog Page 6

ಶಿರಹಟ್ಟಿ ತಾಲೂಕಾಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಿ ಪೂರೈಕೆಗೆ ಸಾರ್ವಜನಿಕರ ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿಯ ತಾಲೂಕಾಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಿಗಳನ್ನು ಸಾರ್ವಜನಿಕರಿಗೆ ವಿತರಿಸುತ್ತಿದ್ದು, ಇದನ್ನು ಪ್ರಶ್ನಿಸಿದರೆ ಆಡಳಿತ ವೈದ್ಯಾಧಿಕಾರಿ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತೇನೆಂದು ಹೇಳುತ್ತಿದ್ದಾರೆಂದು ಸಾರ್ವಜನಿಕರು ಸೋಮವಾರ ಬೆಳಿಗ್ಗೆ ತಾಲೂಕಾ ಆಸ್ಪತ್ರೆಯಲ್ಲಿ ತಮಗೆ ನೀಡಿದ ಅವಧಿ ಮೀರಿದ ಔಷಧಿ ಬಾಟಲ್ ಮತ್ತು ತಪಾಸಣಾ ಪುಸ್ತಕದಲ್ಲಿ ನಮೂದಾಗಿರುವುದನ್ನು ಪ್ರದರ್ಶಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಖಾನಾಪೂರ ಗ್ರಾಮದಲ್ಲಿನ ಆಶಾಬಿ ದೊಡ್ಡಮನಿ ಎಂಬುವರು ಮಾನಸಿಕ ಕಾಯಿಲೆ ಇದ್ದ ಬಗ್ಗೆ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಅವಧಿ ಮೀರಿದ ಔಷಧಿ ಸೇವನೆ ಮಾಡಿರುವುದರಿಂದ ನಿದ್ದೆ ಜಾಸ್ತಿ ಬರುತ್ತಿದ್ದು, ಮೈ-ಕೈ ನೋವು ಜಾಸ್ತಿಯಾಗುತ್ತಿದೆ. ಈ ಬಗ್ಗೆ ಕೇಳಿದರೆ ಇದನ್ನು ನಾವು ಪೂರೈಸಿಲ್ಲ ಎನ್ನುತ್ತಿದ್ದು, ಔಷಧಿ ವಿತರಿಸಿ ತಾವೇ ಸಹಿ ಮಾಡಿ ನೀಡಿದ್ದಾರೆಂದು ಆಶಾಬಿ ದೊಡ್ಡಮನಿ ಆರೋಪಿಸಿದರು.

ದಲಿತ ಮುಖಂಡ ಪ್ರಕಾಶ ಬಡೆಣ್ಣವರ, ಶಿಶಿರ ಪಾಟೀಲ ಮಾತನಾಡಿ, ಅವಧಿ ಮೀರಿದ ಔಷಧಿ ಪೂರೈಕೆ ಮಾಡಿದ್ದರ ಕುರಿತು ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡದೇ ನಾವು ಔಷಧಿಯನ್ನೇ ನೀಡಿಲ್ಲ ಎಂದು ಹೇಳುತ್ತಿದ್ದಾರೆ. ರೋಗಿಯ ಪುಸ್ತಕದಲ್ಲಿ ಔಷಧಿ ನೀಡಿ ಸಹಿಯನ್ನು ಸಹ ಮಾಡಿದ್ದಾರೆ. ಶಿರಹಟ್ಟಿ ಶಹರವೂ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಿಂದ ಇಲ್ಲಿ ನಿತ್ಯವೂ ನೂರಾರು ಸಂಖ್ಯೆಯಲ್ಲಿ ರೋಗಿಗಳು ಬಂದರೂ ಅವರಿಗೆ ಸಮರ್ಪಕ ಚಿಕಿತ್ಸೆ ಲಭಿಸುತ್ತಿಲ್ಲ. ಗರ್ಭಿಣಿಯರು, ಮಕ್ಕಳು ಸಕಾಲಕ್ಕೆ ಚಿಕಿತ್ಸೆ ಸಿಗದೇ ಬೇರೆ ಊರುಗಳಿಗೆ ತೆರಳಬೇಕಾದ ಪರಿಸ್ಥಿತಿ ಇದ್ದು, ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.

ಈ ಕುರಿತು ತಾಲೂಕಾ ಆರೋಗ್ಯಾಧಿಕಾರಿ ಡಾ. ಸುಭಾಸ ದೈಗೊಂಡ ಮಾತನಾಡಿ, ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಂತೆಯೇ ತಾಲೂಕಾಸ್ಪತ್ರೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪ್ರತಿಭಟನಾಕಾರರಿಗೆ ಮನವೊಲಿಸುವ ಪ್ರಯತ್ನವಾಗಲೀ, ಇಲ್ಲವೇ ಆರೋಪಗಳಿಗೆ ಉತ್ತರ ನೀಡಲು ಯಾರೂ ಮುಂದೆ ಬರಲಿಲ್ಲ. ಇದಕ್ಕೂ ತಮಗೆ ಸಂಬಂಧವಿಲ್ಲವೆನ್ನುವ ರೀತಿ ಕೆಲ ಸಿಬ್ಬಂದಿಗಳು ತಮ್ಮ ಪಾಡಿಗೆ ಕೆಲಸ ಮಾಡುವಲ್ಲಿ ತಲ್ಲೀನರಾಗಿರುವುದು ಕಂಡುಬಂದಿತು.

ಈ ಕುರಿತು ಪ್ರತಿಕ್ರಿಯೆ ನೀಡಲು ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿ ಗೋಪಾಲ್‌ರಾಜ್ ನಿರಾಕರಿಸಿದರು.

ಹೈಕಮಾಂಡ್‌ಗೆ ಪತ್ರ ಬರೆದಿದ್ದು ಸತ್ಯ, ಸಚಿವ ಸ್ಥಾನಕ್ಕಾಗಿ ಅಲ್ಲ; ಶಾಸಕ ಇಕ್ಬಾಲ್ ಹುಸೇನ್ ಸ್ಪಷ್ಟನೆ

0

ರಾಮನಗರ: ರಾಮನಗರದಿಂದ ಕಾಂಗ್ರೆಸ್ ಶಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇಕ್ಬಾಲ್ ಹುಸೇನ್ ಅವರು, ಸಚಿವ ಸ್ಥಾನಕ್ಕಾಗಿ ಹೈಕಮಾಂಡ್‌ಗೆ ಪತ್ರ ಬರೆದ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

ಸಚಿವ ಸ್ಥಾನಕ್ಕಾಗಿ ಹೈಕಮಾಂಡ್‌ಗೆ ಕಾಂಗ್ರೆಸ್ ಶಾಸಕರು ಪತ್ರ ಬರೆದ ವಿಚಾರ ಕುರಿತು ರಾಮನಗರದಲ್ಲಿ ಮಾತನಾಡಿದ ಅವರು, ಕೆಲವು ಸಚಿವರು ತಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ನಮಗೆ ಕನಿಷ್ಠ ಗೌರವವನ್ನೂ ಕೊಡುತ್ತಿಲ್ಲ. ಸಂಪುಟದಲ್ಲಿ ಕೆಲವು ಬದಲಾವಣೆ ಆಗಬೇಕು. ಎಲ್ಲಾ ಸಚಿವರನ್ನೂ ಬದಲಾಯಿಸಬೇಕು ಅಂತಲ್ಲ, ಕೆಲವರಿಗೆ ಅವಕಾಶ ಕಲ್ಪಿಸಬೇಕು” ಎಂದರು.

“ಹೈಕಮಾಂಡ್‌ಗೆ ಪತ್ರಕ್ಕೆ ನಾನು ಸಹಿ ಹಾಕಿದ್ದೇನೆ. ಆದರೆ ನನಗೆ ಸಚಿವ ಸ್ಥಾನ ಬೇಕೆಂದು ನಾನು ಸಹಿ ಹಾಕಿಲ್ಲ. ಬದಲಾವಣೆ ಮಾಡಿ ಅಂತಲೇ ಸಹಿ ಹಾಕಿದ್ದೇನೆ. ನನಗೆ ವಿಧಾನಸಭಾ ಸದಸ್ಯ ಸ್ಥಾನವೇ ಸಾಕು, ಜನರ ಸೇವೆಯನ್ನು ಮುಂದುವರೆಸುತ್ತೇನೆ. ಬೇರೆ ಅನುಭವಸ್ಥ ಶಾಸಕರಿಗೂ ಅವಕಾಶ ಸಿಗಬೇಕು” ಎಂದರು.

ಇಕ್ಬಾಲ್ ಹುಸೇನ್ ಅವರು, ಈ ಪತ್ರವನ್ನು ಎಐಸಿಸಿಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ. ಹೈಕಮಾಂಡ್ ತಮ್ಮ ಮನವಿಗೆ ಸ್ಪಂದಿಸುವ ಭರವಸೆ ಹೊಂದಿದ್ದು, ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದೆ ಎಂದಿದ್ದಾರೆ.

35ರ ನಂತರ ಮಹಿಳೆಯರು ಆಹಾರದಲ್ಲಿ ಈ ವಿಷಯಗಳನ್ನು ಕಡ್ಡಾಯವಾಗಿ ಗಮನಿಸಬೇಕು!

0

ಸಾಮಾನ್ಯವಾಗಿ 35 ವರ್ಷ ವಯಸ್ಸಿನ ನಂತರ ಮಹಿಳೆಯರ ದೇಹದಲ್ಲಿ ಹಲವು ರೀತಿಯ ಹಾರ್ಮೋನು ಬದಲಾವಣೆಗಳು ಆರಂಭವಾಗುತ್ತವೆ. ಈ ಹಂತದಲ್ಲಿ ಚಯಾಪಚಯ ಕ್ರಿಯೆ ನಿಧಾನಗೊಳ್ಳುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ಜೊತೆಗೆ ಥೈರಾಯ್ಡ್ ಅಸಮತೋಲನ, ರಕ್ತಹೀನತೆ, ಮೂಳೆ ದುರ್ಬಲತೆ, ವಿಟಮಿನ್ ಡಿ ಹಾಗೂ ವಿಟಮಿನ್ ಬಿ12 ಕೊರತೆ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ಸಮಸ್ಯೆಗಳ ಅಪಾಯವೂ ಹೆಚ್ಚಾಗುತ್ತದೆ. ಅನೇಕ ಮಹಿಳೆಯರಲ್ಲಿ ಪಿಸಿಓಎಸ್, ಅನಿಯಮಿತ ಮುಟ್ಟು ಅಥವಾ ಮುಟ್ಟು ನಿಲ್ಲುವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಹೀಗಾಗಿ 35ರ ನಂತರ ಆಹಾರ ಪದ್ಧತಿಯಲ್ಲಿ ವಿಶೇಷ ಎಚ್ಚರಿಕೆ ಅಗತ್ಯ. ಸರಿಯಾದ ಆಹಾರ ಸೇವನೆಯ ಮೂಲಕ ಈ ಆರೋಗ್ಯ ಸಮಸ್ಯೆಗಳ ಬಹುಪಾಲನ್ನು ನಿಯಂತ್ರಿಸಬಹುದು.

ಯಾವ ಆಹಾರ ಸೇವಿಸಬೇಕು?
ಎಲೆ ತರಕಾರಿಗಳು, ದಾಳಿಂಬೆ, ಬೀಟ್ರೂಟ್ ಮತ್ತು ಬೆಲ್ಲ ಕಬ್ಬಿಣಾಂಶಕ್ಕೆ ಸಹಕಾರಿ. ಧಾನ್ಯಗಳು, ಓಟ್ಸ್ ಮತ್ತು ಹಣ್ಣುಗಳು ಫೈಬರ್ ನೀಡುತ್ತವೆ, ಇದರಿಂದ ಜೀರ್ಣಕ್ರಿಯೆ ಸುಧಾರಿಸಿ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಒಮೆಗಾ–3ಗಾಗಿ ವಾಲ್ನಟ್ಸ್ ಮತ್ತು ಅಗಸೆ ಬೀಜಗಳನ್ನು ಆಹಾರದಲ್ಲಿ ಸೇರಿಸಬಹುದು. ವಿಟಮಿನ್ ಡಿಗಾಗಿ ಸೂರ್ಯನ ಬೆಳಕು ಪಡೆಯುವುದು ಉತ್ತಮ; ಅಗತ್ಯವಿದ್ದರೆ ವೈದ್ಯರ ಸಲಹೆಯಂತೆ ಪೂರಕ ಮಾತ್ರೆಗಳನ್ನು ಸೇವಿಸಬಹುದು. ಜೊತೆಗೆ ದಿನವಿಡೀ ಸಾಕಷ್ಟು ನೀರು ಕುಡಿಯುವುದು ಅತ್ಯಂತ ಮುಖ್ಯ.

ಯಾವ ಆಹಾರ ತಪ್ಪಿಸಬೇಕು?
35ರ ನಂತರ ಹೆಚ್ಚು ಹುರಿದ, ಕರಿದ, ಸಂಸ್ಕರಿಸಿದ ಹಾಗೂ ಜಂಕ್ ಫುಡ್ ಸೇವನೆ ತಪ್ಪಿಸಬೇಕು. ಸಕ್ಕರೆ ಮತ್ತು ಉಪ್ಪಿನ ಪ್ರಮಾಣ ಕಡಿಮೆ ಮಾಡುವುದು ಅಗತ್ಯ, ಏಕೆಂದರೆ ಅವು ತೂಕ ಹೆಚ್ಚಾಗಲು, ರಕ್ತದೊತ್ತಡ ಹಾಗೂ ಸಕ್ಕರೆ ಮಟ್ಟ ಹೆಚ್ಚಲು ಕಾರಣವಾಗುತ್ತವೆ. ಸಕ್ಕರೆ ಪಾನೀಯಗಳು ಮತ್ತು ಪ್ಯಾಕ್ ಮಾಡಿದ ತಿಂಡಿಗಳನ್ನು ದೂರವಿಡುವುದು ಉತ್ತಮ. ಆಗಾಗ ಹೊರಗಿನ ಆಹಾರ ಸೇವನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಆಹಾರ ಮಾತ್ರವಲ್ಲದೆ ಜೀವನಶೈಲಿಯಲ್ಲೂ ಬದಲಾವಣೆ ಅಗತ್ಯ. ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ ಅಥವಾ ಚುರುಕಾದ ನಡಿಗೆ, ಉತ್ತಮ ನಿದ್ರೆ, ಒತ್ತಡ ನಿಯಂತ್ರಣ ಹಾಗೂ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು 35ರ ನಂತರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ.

 

ಗದಗ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಭೀಕರ ಅಪಘಾತ: ಇಬ್ಬರು ಮಹಿಳೆಯರ ಮೇಲೆ ಹರಿದ ಬಸ್; ಸಿಸಿ ಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

0

ಗದಗ: ನಗರದ ಗದಗ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಇಂದು ನಡೆದ ಭೀಕರ ಅಪಘಾತ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದ ಇಬ್ಬರು ಮಹಿಳೆಯರ ಮೇಲೆ ಸಾರಿಗೆ ಸಂಸ್ಥೆಯ ಬಸ್ ಹರಿದ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.

ಘಟನೆ ವಿವರ:

ಪ್ರತ್ಯಕ್ಷದರ್ಶಿಗಳ ಮಾಹಿತಿಯಂತೆ, ಮಹಿಳೆಯರು ಬಸ್ ನಿಲ್ದಾಣದಿಂದ ಹೊರಬರುತ್ತಿದ್ದ ವೇಳೆ ಪ್ಲಾಟ್‌ಫಾರಂ ಕಡೆಗೆ ಬರುತ್ತಿದ್ದ ಬಸ್ ಏಕಾಏಕಿ ವೇಗವಾಗಿ ಅವರತ್ತ ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿರುವ ಶಂಕೆ ವ್ಯಕ್ತವಾಗಿದೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ.

ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಮಹಿಳೆಯರು ಬಸ್ ಮುಂಭಾಗದಲ್ಲಿ ಸಿಲುಕುವ ಭೀಕರ ಕ್ಷಣಗಳು ದಾಖಲಾಗಿರುವುದು ಗಮನಕ್ಕೆ ಬಂದಿದೆ.

ಗಾಯಾಳುಗಳ ಸ್ಥಿತಿ:

ಅಪಘಾತದಲ್ಲಿ ಇಬ್ಬರು ಮಹಿಳೆಯರು ಗಾಯಗೊಂಡಿದ್ದು, ಅವರಲ್ಲಿ ಓರ್ವ ಮಹಿಳೆಗೆ ಕಾಲಿನಲ್ಲಿ ಗಂಭೀರ ಗಾಯವಾಗಿದೆ. ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಸಿಬ್ಬಂದಿ ತಕ್ಷಣವೇ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಗಾಯಾಳುಗಳಿಗೆ ಗದಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (GIMS)ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಓರ್ವ ಮಹಿಳೆಯ ಸ್ಥಿತಿ ಗಮನಾರ್ಹವಾಗಿದೆ ಎಂದು ಮೂಲಗಳು ತಿಳಿಸಿವೆ.

ಪೊಲೀಸ್ ಕ್ರಮ:

ಈ ಘಟನೆ ಗದಗ–ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗುತ್ತಿದೆ. ಸಿಸಿ ಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಚಾಲಕನ ವಿರುದ್ಧ ನಿರ್ಲಕ್ಷ್ಯ ಚಾಲನೆ ಸಂಬಂಧ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

ಸುರಕ್ಷತೆ ಕುರಿತ ಆತಂಕ:

ಗದಗ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಿರುವ ಸಂದರ್ಭಗಳಲ್ಲಿ ವಾಹನ ಸಂಚಾರ ನಿಯಂತ್ರಣದ ಕೊರತೆ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಪ್ರಯಾಣಿಕರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಾರ್ಚ್‌ 3ರಂದು ಗದಗ–ಬೆಟಗೇರಿ ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ!

0

ಗದಗ: ಗದಗ–ಬೆಟಗೇರಿ ನಗರಸಭೆಯ 10ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳ ಚುನಾವಣೆಯು ದಿನಾಂಕ 03-03-2026ರಂದು ನಡೆಯಲಿದೆ.

ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆ–1964ರ ಕಲಂ 42(2)ರಂತೆ ಹಾಗೂ ಸರ್ಕಾರದ ಪ್ರಕಟಣೆ ಸಂಖ್ಯೆ ಯುಡಿಡಿ/10/ಎಮ್‌ಎಲ್‌ಆರ್/2024(1) ದಿನಾಂಕ 05-08-2024 ಮತ್ತು ಗದಗ ಜಿಲ್ಲಾಧಿಕಾರಿಗಳ ನಿರ್ದೇಶನದನ್ವಯ ಈ ಚುನಾವಣೆ ನಡೆಸಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರಸಭೆ ಕಾರ್ಯಾಲಯದಲ್ಲಿ ದಿನಾಂಕ 03-03-2026ರಂದು ಮಧ್ಯಾಹ್ನ 2.00 ಗಂಟೆಗೆ ಚುನಾವಣಾ ಸಭೆ ನಡೆಯಲಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಆಸಕ್ತರಾದ ಅಭ್ಯರ್ಥಿಗಳು ಅದೇ ದಿನ ಬೆಳಿಗ್ಗೆ 10.00ರಿಂದ ಮಧ್ಯಾಹ್ನ 12.00 ಗಂಟೆಯೊಳಗೆ ನಗರಸಭೆ ಕಾರ್ಯಾಲಯದ ಸಭಾಭವನದಲ್ಲಿ ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಬಹುದು.

ಮಧ್ಯಾಹ್ನ 2.00 ಗಂಟೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಪರಿಶೀಲನೆಯ ತಕ್ಷಣ ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತದೆ. ಅಗತ್ಯವಿದ್ದಲ್ಲಿ ಮತದಾನವನ್ನು ಕೈ ಎತ್ತುವ ಮೂಲಕ ನಡೆಸಲಾಗುವುದು ಎಂದು ತಿಳಿಸಲಾಗಿದೆ.

ಚುನಾವಣಾ ಸಭೆ ಆರಂಭವಾಗುವ 15 ನಿಮಿಷಗಳ ಮುಂಚಿತವಾಗಿ ಎಲ್ಲಾ ಸದಸ್ಯರು ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಸರ್ಕಾರದ ಆದೇಶದಂತೆ ವರ್ಗವಾರು ಮೀಸಲಾತಿ ವಿವರಗಳನ್ನು ಈ ಚುನಾವಣಾ ನೋಟೀಸ್‌ಗೆ ಲಗತ್ತಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗೆ ನಗರಸಭೆ ಕಾರ್ಯಾಲಯವನ್ನು ಸಂಪರ್ಕಿಸುವಂತೆ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಪ್ರತಿದಿನ ಬಿಸಿ ನೀರಿನಲ್ಲಿ ಸ್ನಾನ ಮಾಡ್ತೀರಾ? ಇದನ್ನೊಮ್ಮೆ ಓದಿ!

0

ನೈರ್ಮಲ್ಯದ ದೃಷ್ಟಿಯಿಂದ ಪ್ರತಿದಿನ ಸ್ನಾನ ಮಾಡುವುದು ಅತ್ಯಂತ ಉತ್ತಮ ಅಭ್ಯಾಸ. ಹೀಗಾಗಿ ಬಹುತೇಕ ಜನರು ದಿನವೂ ತಪ್ಪದೆ ಸ್ನಾನ ಮಾಡುತ್ತಾರೆ.

ಕೆಲವರು ತಣ್ಣೀರಿನಲ್ಲಿ, ಇನ್ನೂ ಕೆಲವರು ಉಗುರುಬೆಚ್ಚಗಿನ ನೀರಲ್ಲಿ, ಮತ್ತಷ್ಟು ಮಂದಿ ಚಳಿಗಾಲ ಮಾತ್ರವಲ್ಲದೆ ಬೇಸಿಗೆಯಲ್ಲಿಯೂ ಸುಡು ಬಿಸಿ ನೀರಿನಿಂದಲೇ ಸ್ನಾನ ಮಾಡುವ ಅಭ್ಯಾಸ ಹೊಂದಿರುತ್ತಾರೆ.

ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ದೇಹಕ್ಕೆ ರಿಲ್ಯಾಕ್ಸ್‌ ಸಿಗುತ್ತದೆ, ಸ್ನಾಯುಗಳ ಬಿಗಿತ ಕಡಿಮೆಯಾಗುತ್ತದೆ ಎಂಬ ಭಾವನೆ ಇದೆ. ಆದರೆ ತಜ್ಞರ ಪ್ರಕಾರ, ಅತಿಯಾಗಿ ಬಿಸಿ ನೀರನ್ನು ಬಳಸುವುದು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಹಾಗಾದರೆ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಉಂಟಾಗುವ ಸಮಸ್ಯೆಗಳೇನು ಎಂಬುದನ್ನು ನೋಡೋಣ.

ಚರ್ಮ ಒಣಗುವುದು:

ಬಿಸಿನೀರಿನ ಸ್ನಾನ ಚರ್ಮದ ನೈಸರ್ಗಿಕ ತೇವಾಂಶ ಮತ್ತು ರಕ್ಷಣಾತ್ಮಕ ತೈಲಗಳನ್ನು ತೆಗೆದುಹಾಕುತ್ತದೆ. ಇದರಿಂದ ಚರ್ಮ ಒಣಗುವುದು, ತುರಿಕೆ, ಕಿರಿಕಿರಿ ಹಾಗೂ ಚರ್ಮದ ಅಲರ್ಜಿ ಸಮಸ್ಯೆಗಳು ಉಂಟಾಗಬಹುದು.

ಕೂದಲು ಮತ್ತು ನೆತ್ತಿಗೆ ಹಾನಿ:

ಬಿಸಿನೀರು ಕೂದಲಿನ ನೆತ್ತಿಯಲ್ಲಿರುವ ನೈಸರ್ಗಿಕ ಎಣ್ಣೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಇದರಿಂದ ನೆತ್ತಿ ಒಣಗುವುದು, ತಲೆಹೊಟ್ಟು ಹೆಚ್ಚಾಗುವುದು ಹಾಗೂ ಕೂದಲು ಉದುರುವಿಕೆ ಸಮಸ್ಯೆ ತೀವ್ರವಾಗಬಹುದು.

ರಕ್ತದೊತ್ತಡದಲ್ಲಿ ಏರಿಳಿತ:

ಸುಡು ಬಿಸಿನೀರಿನಲ್ಲಿ ಸ್ನಾನ ಮಾಡುವಾಗ ದೇಹದ ರಕ್ತನಾಳಗಳು ಹಿಗ್ಗುತ್ತವೆ. ಇದರಿಂದ ರಕ್ತದೊತ್ತಡ ಹಠಾತ್‌ವಾಗಿ ಕಡಿಮೆಯಾಗಿ ತಲೆತಿರುಗುವಿಕೆ, ಆಯಾಸ ಅಥವಾ ದುರ್ಬಲತೆ ಕಾಣಿಸಿಕೊಳ್ಳಬಹುದು.

ಕಣ್ಣುಗಳಿಗೆ ತೊಂದರೆ:

ಬಿಸಿ ನೀರಿನ ಆವಿಯ ನೇರ ಸಂಪರ್ಕ ಕಣ್ಣುಗಳ ನೈಸರ್ಗಿಕ ತೇವಾಂಶವನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ ಕಣ್ಣುಗಳು ಕೆಂಪಾಗುವುದು, ಉರಿ ಮತ್ತು ತುರಿಕೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ದೇಹದ ತಾಪಮಾನ ಅಸಮತೋಲನ:

ನಿರಂತರವಾಗಿ ಬಿಸಿ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸ ದೇಹದ ನೈಸರ್ಗಿಕ ತಾಪಮಾನ ನಿಯಂತ್ರಣ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಇದರಿಂದ ಚಳಿ ಹವಾಮಾನವನ್ನು ಎದುರಿಸುವ ಶಕ್ತಿ ಕಡಿಮೆಯಾಗಬಹುದು.

ತಜ್ಞರ ಸಲಹೆ:

ಸ್ನಾನಕ್ಕೆ ಯಾವಾಗಲೂ ಉಗುರು ಬೆಚ್ಚಗಿನ ನೀರನ್ನು ಬಳಸುವುದು ಉತ್ತಮ. ಇದರಿಂದ ಚರ್ಮದ ತೇವಾಂಶ ಕಾಪಾಡಿಕೊಳ್ಳಬಹುದು, ನೈಸರ್ಗಿಕ ಎಣ್ಣೆಗಳು ಉಳಿಯುತ್ತವೆ ಹಾಗೂ ಕೂದಲು ಮತ್ತು ನೆತ್ತಿಗೆ ಹಾನಿಯಾಗುವುದಿಲ್ಲ.

ಮನರೇಗಾ ಉಳಿಸಿ, ಹಳ್ಳಿಗಳು, ಕಾರ್ಮಿಕರು, ಪಂಚಾಯಿತಿಗಳು ಹಾಗೂ ಮಹಾತ್ಮಾ ಗಾಂಧಿ ಹೆಸರು ರಕ್ಷಿಸಬೇಕು: ಡಿ.ಕೆ. ಶಿವಕುಮಾರ್

0

ಬೆಂಗಳೂರು: ದೀಪ ಆರುವಾಗ ಜೋರಾಗಿ ಉರಿಯುತ್ತದೆಯಂತೆ. ಅದೇ ರೀತಿ ಬಿಜೆಪಿಯ ಅಂತಿಮ ದಿನಗಳು ಸಮೀಪಿಸಿರುವ ಕಾರಣ, ಮಹಾತ್ಮಾ ಗಾಂಧಿ ಅವರ ಹೆಸರು ಬದಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು. ಚಿಕ್ಕಬಳ್ಳಾಪುರದಲ್ಲಿ ಸೋಮವಾರ ನಡೆದ ಮನರೇಗಾ ಬಚಾವೋ ಸಂಗ್ರಾಮ ಪ್ರತಿಭಟನಾ ಸಮಾವೇಶದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ಈ ದೇಶ ಉಳಿಸಲು ಇಂದು ನಾವು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಪಕ್ಷ ಸದಾ ಎಲ್ಲಾ ವರ್ಗದ ಜನರಿಗೆ ಕಾರ್ಯಕ್ರಮ ನೀಡುತ್ತಾ ಬದುಕಿನಲ್ಲಿ ಬದಲಾವಣೆ ತರುವ ಕೆಲಸ ಮಾಡಿಕೊಂಡು ಬರುತ್ತಿದೆ. ಮಹಾತ್ಮ ಗಾಂಧಿ ಅವರ ಹೆಸರಿನಲ್ಲಿ 20 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರವು ಬಡವರಿಗಾಗಿ ಉದ್ಯೋಗ ಖಾತರಿ ಕಾರ್ಯಕ್ರಮ ನೀಡಿತ್ತು. ಇದು ದೇಶದ ಪಾಲಿಗೆ ಕ್ರಾಂತಿಕಾರಿ ಕಾರ್ಯಕ್ರಮ” ಎಂದು ತಿಳಿಸಿದರು.

ಮನರೇಗಾ ಉಳಿಸಿ, ಹಳ್ಳಿಗಳು, ಕಾರ್ಮಿಕರು, ಪಂಚಾಯಿತಿಗಳು ಹಾಗೂ ಮಹಾತ್ಮಾ ಗಾಂಧಿ ಹೆಸರು ರಕ್ಷಿಸಬೇಕು

“ಈ ಕಾರ್ಯಕ್ರಮದಲ್ಲಿ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಯಾವ ಕಾಮಗಾರಿ ಮಾಡಬೇಕು ಎಂಬ ತೀರ್ಮಾನ ಮಾಡುವ ಅಧಿಕಾರ ಹೊಂದಿದ್ದವು. ಹಸಿದ ಹೊಟ್ಟೆ, ಖಾಲಿ ಜೇಬಿನ ನೋವು ಏನು ಎಂಬುದು ನಮಗೆ ಅರಿವಿದೆ. 60% ಗ್ರಾಮೀಣ ಭಾಗದ ಮಹಿಳೆಯರು ಕೂಲಿ ಮಾಡುತ್ತಿದ್ದಾರೆ.

ರಾಜ್ಯದಲ್ಲಿರುವ 5900 ಪಂಚಾಯ್ತಿಗಳಲ್ಲಿ, ಕನಿಷ್ಠ 1-2 ಕೋಟಿಯಷ್ಟು ಹಣವನ್ನು ಪಂಚಾಯಿತಿಗಳಲ್ಲಿ ನೀಡಿ ಅಲ್ಲಿ ಶಾಶ್ವತ ಆಸ್ತಿ ಸೃಷ್ಟಿಸಿ ಜನರಿಗೆ ಉದ್ಯೋಗ ಕಲ್ಪಿಸಲಾಗುತ್ತಿತ್ತು. ಮನರೇಗಾ ಉಳಿಸುವ ಮೂಲಕ, ಹಳ್ಳಿಗಳು, ಈ ದೇಶ, ಕಾರ್ಮಿಕರು, ಪಂಚಾಯಿತಿಗಳು ಹಾಗೂ ಮಹಾತ್ಮ ಗಾಂಧಿ ಅವರ ಹೆಸರು ಉಳಿಸಬೇಕಾಗಿದೆ” ಎಂದು ಕರೆ ನೀಡಿದರು.

ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಮಹಾತ್ಮಾ ಗಾಂಧಿ ಹೆಸರಿಡಲು ತೀರ್ಮಾನ

“ನೋಟಿನ ಮೇಲಿರುವ ಗಾಂಧಿ ಫೋಟೋವನ್ನು ತೆಗೆದು ನಿಮ್ಮ ಫೋಟೋ ಹಾಕಿಕೊಳ್ಳುವಂತೆ ನಾನು ಸವಾಲು ಹಾಕಿದೆ. ನಮ್ಮ ಪಕ್ಷ ಹಾಗೂ ಸರ್ಕಾರ ಚರ್ಚೆ ಮಾಡಿ ಪ್ರತಿ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಮಹಾತ್ಮಾ ಗಾಂಧಿ ಹೆಸರಿಡಲು ತೀರ್ಮಾನಿಸಿದ್ದೇವೆ.

ಉದ್ಯೋಗ ಖಾತರಿ ಯೋಜನೆ ಕಾಂಗ್ರೆಸ್ ಕಾರ್ಯಕ್ರಮ ಮಾತ್ರವಲ್ಲ. ದೇಶದ ಬಡವರು, ಕೂಲಿ ಕಾರ್ಮಿಕರ ಕಾರ್ಯಕ್ರಮ. ಗ್ರಾಮೀಣ ಭಾಗದ ಕಾರ್ಮಿಕರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮ. ಮತ್ತೊಮ್ಮೆ ಮನರೇಗಾ ಯೋಜನೆ ಮರುಸ್ಥಾಪಿಸಿ, ಉದ್ಯೋಗದ ಹಕ್ಕು ಹಾಗೂ ಗ್ರಾಮಗಳ ಸ್ವಯಂ ಆಡಳಿತ ಹಕ್ಕನ್ನು ಪುನರ್ ಸ್ಥಾಪಿಸಬೇಕಾಗಿದೆ” ಎಂದು ಸಂದೇಶ ನೀಡಿದರು.

ಕೇಂದ್ರ ಸರ್ಕಾರದ ನೂತನ ಕಾನೂನು ಮರಣ ಶಾಸನ

“ಕನ್ನಡಿಗರ ಮೇಲೆ, ಬಡವರ ಮೇಲೆ ಅನ್ಯಾಯ ನಡೆಯುತ್ತಿದೆ. ಈಗ ಹೊಸ ಯೋಜನೆಯಲ್ಲಿ ರಾಜ್ಯ ಸರ್ಕಾರ 40% ಅನುದಾನ ಭರಿಸಬೇಕಾಗಿದೆ. ಬಿಜೆಪಿ ಆಡಳಿತ ಯಾವುದೇ ರಾಜ್ಯಗಳಲ್ಲಿ ಈ ಯೋಜನೆ ಜಾರಿಯಾಗುವುದಿಲ್ಲ. ನೆರೆ ರಾಜ್ಯ ಚಂದ್ರಬಾಬು ನಾಯ್ಡು ಅವರು ನಮ್ಮಿಂದ ಸಾಧ್ಯವಿಲ್ಲ ಎಂದಿದ್ದಾರೆ. ಇದರಿಂದ ಸರ್ಕಾರ ಬಿದ್ದು ಹೋಗುವ ಭಯದಿಂದ ಅವರಿಗೆ ಓಲೈಕೆ ಮಾಡುತ್ತಿದ್ದಾರೆ.

ಈ ಬಡವರ ರಕ್ಷಣೆಗೆ ನಾವು ಹೋರಾಟ ಮಾಡಬೇಕಿದೆ. ಮರದಿಂದ ಬಿದ್ದ ಹೂವು ಯಾವತ್ತು ಅರಳುವುದಿಲ್ಲ. ನಮ್ಮ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆ ಕಾರ್ಯಕ್ರಮ ನೀಡಿದ್ದು ಕಾರ್ಮಿಕರ ಪ್ರತಿನಿತ್ಯದ ಬದುಕಿಗಾಗಿ. ಅವರ ಹೊಟ್ಟೆ ತುಂಬಿಸಲು. ಆದರೆ ಕೇಂದ್ರ ಸರ್ಕಾರದ ಈ ನೂತನ ಕಾನೂನು ಮರಣ ಶಾಸನವಾಗಿದೆ” ಎಂದು ಕಿಡಿಕಾರಿದರು.

ನೀವು ಇಂದು ಈ ಹೋರಾಟಕ್ಕೆ ಹೆಜ್ಜೆ ಹಾಕಿದ್ದು, ಬಡತನದ ಅನುಭವವಿರುವವರಿಗೆ ಮಾತ್ರ ಅನ್ನದ ಬೆಲೆ ಗೊತ್ತಿದೆ. ಮನರೇಗಾ ಕೂಡ ಉದ್ಯೋಗ ಗ್ಯಾರಂಟಿ ನೀಡುವ ಯೋಜನೆಯಾಗಿತ್ತು. ಬಡವರಿಗೆ ಆರ್ಥಿಕ ಶಕ್ತಿ ತುಂಬಲು ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆ ತಂದಿದೆ. ಇದರ ಮೂಲಕ ನಿಮ್ಮ ಮನೆಯನ್ನು ಉಚಿತವಾಗಿ ಬೆಳಗಿಸಲಾಗುತ್ತಿದೆ. ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇನ್ನು ಮುಂದೆ 5 ಕೆ.ಜಿ ಅಕ್ಕಿ ಉಳಿದ ಐದು ಕೆ.ಜಿ ವಿವಿಧ ದಿನಸಿ ಪದಾರ್ಥ ನೀಡಲು ಸರ್ಕಾರ ಮುಂದಾಗಿದೆ. ಬಡ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ನೀಡಲಾಗುತ್ತಿದೆ. ಇದು ನಮ್ಮ ಸರ್ಕಾರದ ಐತಿಹಾಸಿಕ ತೀರ್ಮಾನ” ಎಂದರು.

ಗ್ಯಾರಂಟಿ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ

“ನಮ್ಮ ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯವರು ಟೀಕೆ ಮಾಡುತ್ತಿದ್ದರು. ಆದರೆ ಈ ಗ್ಯಾರಂಟಿ ಯೋಜನೆಗಳು ದೇಶದ ಯೋಜನೆಯಾಗಿದೆ. ಈ ಯೋಜನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಹೋರಾಟ ಮಾಡುವವನು ಗೆದ್ದೇ ಗೆಲ್ಲುತ್ತಾನೆ. ಯಾವ ಕಾರಣಕ್ಕೂ ಅವನಿಗೆ ಸೋಲಿನ ಭಯ ಇರುವುದಿಲ್ಲ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ಅದೇ ರೀತಿ ನಾವು ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ಬದುಕಿನಲ್ಲಿ ಹೆಜ್ಜೆ ಗುರುತು ಉಳಿಸಿಕೊಂಡು ಹೋಗಬೇಕು.

ದೇಶದಲ್ಲಿ ಮಹಾತ್ಮಾ ಗಾಂಧಿ ಹೆಸರು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಗಾಂಧಿ ಅವರು ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿಕೊಂಡು ನೂರು ವರ್ಷವಾಗಿದೆ. ಅವರು ಅಧಿಕಾರ ವಹಿಸಿಕೊಂಡ ಬಳಿಕ ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ಈ ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ನೀಡಿದೆ. ಮನರೇಗಾ ನಾಶವಾಗಲು ಬಿಡುವುದಿಲ್ಲ, ರೈತರ ಉದ್ಯೋಗ ಕಿತ್ತುಕೊಳ್ಳಲು ಅವಕಾಶ ಕೊಡುವುದಿಲ್ಲ” ಎಂದು ಭರವಸೆ ನೀಡಿದರು.

“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಹಕ್ಕು ಕಸಿಯುವ ಪ್ರಯತ್ನದಂತೆ, ಉದ್ಯೋಗದ ಹಕ್ಕನ್ನು ಕಸಿಯಲಾಗುತ್ತಿದೆ. ನಮ್ಮ ತಾಲ್ಲೂಕಿನಲ್ಲಿ ವರ್ಷಕ್ಕೆ 5 ಕೋಟಿಯಷ್ಟು ಅನುದಾನ ಬಳಸಿಕೊಂಡು ಕೆಲಸ ಮಾಡಿರುವುದಕ್ಕೆ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದೆ.

ಬಡವರ ಬದುಕಿಗೆ ಉದ್ಯೋಗ ಖಾತ್ರಿ ಮೂಲಕ ಹೊಸ ರೂಪ ನೀಡಿದ್ದೇವೆ. 60 ಸಾವಿರ ಇಂಗು ಗುಂಡಿ, 54 ಸಾವಿರ ಕೊಟ್ಟಿಗೆ ನಿರ್ಮಾಣ ಮಾಡಿದ್ದೇವೆ. ನಿಮ್ಮದೇ ಜಮೀನಿನಲ್ಲಿ ಕೂಲಿ ಮಾಡಿಕೊಳ್ಳಲು, ಜಮೀನು ಮಟ್ಟ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೇವೆ. ಇಂತಹ ಕಾರ್ಯಕ್ರಮವನ್ನು ಬದಲಾಯಿಸಲು ಅವಕಾಶ ನೀಡುವುದು ಬೇಡ. ನಮ್ಮ ಹೋರಾಟಕ್ಕೆ ನಿಮ್ಮ ಸಹಕಾರ ಬೇಕು” ಎಂದು ತಿಳಿಸಿದರು.

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಶ್ವಾರಾಧ್ಯರ ಭವ್ಯ ರಥೋತ್ಸವ: ಅಬ್ಬೆತುಮಕೂರಿನಲ್ಲಿ ಭಕ್ತಿ ಸಾಗರ

0

ಯಾದಗಿರಿ: ಜಿಲ್ಲೆ ಮತ್ತೊಮ್ಮೆ ಭಕ್ತಿಭಾವದಲ್ಲಿ ತೇಲಿತು. ಕಲ್ಯಾಣ ಕರ್ನಾಟಕದ ಪ್ರಸಿದ್ಧ ಕ್ಷೇತ್ರ ಅಬ್ಬೆತುಮಕೂರುನಲ್ಲಿ ಸಿದ್ಧಿ ಪುರುಷ ಶ್ರೀ ವಿಶ್ವಾರಾಧ್ಯರ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಭವ್ಯವಾಗಿ ನೆರವೇರಿತು.

ಬೆಳಿಗ್ಗೆ ರಥಾಂಗ ಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಡಾ. ಗಂಗಾಧರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದವು. ನಂತರ ನಂದಿಕೋಲು ನೃತ್ಯ ಹಾಗೂ ಸಾಂಸ್ಕೃತಿಕ ಕಲಾತಂಡಗಳ ಪ್ರದರ್ಶನ ಜಾತ್ರೆಗೆ ವಿಶೇಷ ಮೆರುಗು ತಂದವು.

ಸಂಜೆ ನಡೆದ ರಥೋತ್ಸವದಲ್ಲಿ ಭಕ್ತರ ಜಯಘೋಷ ಗಗನಮುಟ್ಟಿತು. ಭಕ್ತರು ಕಾರಿಕಾ, ಉತ್ತತ್ತಿ ಹಾಗೂ ಬಾಳೆಹಣ್ಣುಗಳನ್ನು ಅರ್ಪಿಸಿ ತಮ್ಮ ಭಕ್ತಿ ವ್ಯಕ್ತಪಡಿಸಿದರು.

ಜಾತ್ರೆಯಲ್ಲಿ ಸಚಿವರಾದ ಶರಣಬಸ್ಸಪ್ಪಗೌಡ ದರ್ಶನಾಪುರ, ರಾಮಲಿಂಗಾರೆಡ್ಡಿ, ಹಾಗೂ ಕೊಪ್ಪಳದ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸೇರಿದಂತೆ ಅನೇಕ ಮಠಾಧೀಶರು ಹಾಗೂ ರಾಜಕೀಯ ಗಣ್ಯರು ಭಾಗವಹಿಸಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಿಂದಲೂ ಅಪಾರ ಭಕ್ತರು ಆಗಮಿಸಿದ್ದು, ಅಬ್ಬೆತುಮಕೂರು ಕ್ಷೇತ್ರ ಭಕ್ತ ಸಾಗರವಾಗಿ ಮಾರ್ಪಟ್ಟಿತ್ತು.

ಹುಲಿ ದಾಳಿ ಬಳಿಕ ಸ್ಥಗಿತಗೊಂಡಿದ್ದ ಸಫಾರಿ ಮತ್ತೆ ಚಾಲು: ಬಂಡೀಪುರದಲ್ಲಿ ಬಿಗಿ ಬಂದೋಬಸ್ತ್

0

ಚಾಮರಾಜನಗರ: ಹುಲಿಗಳ ದಾಳಿಗೆ ಮೂವರು ರೈತರು ಬಲಿಯಾದ ಘಟನೆಗಳ ಬಳಿಕ ಸ್ಥಗಿತಗೊಂಡಿದ್ದ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಸಫಾರಿ ಸೇವೆ ಇದೀಗ ಪುನರಾರಂಭಗೊಂಡಿದೆ. ರೈತ ಸಂಘಟನೆಗಳ ತೀವ್ರ ವಿರೋಧದ ನಡುವೆಯೇ ಪೊಲೀಸ್ ಸರ್ಪಗಾವಲಿನಲ್ಲಿ ಸಫಾರಿ ಆರಂಭಿಸಲಾಗಿದೆ.

ಸಫಾರಿ ಅವಧಿಯನ್ನು ಎಂಟು ಗಂಟೆಯಿಂದ ಐದು ಗಂಟೆಗೆ ಇಳಿಸಲಾಗಿದೆ. ಬೆಳಿಗ್ಗೆ 6:30–9 ಮತ್ತು ಸಂಜೆ 3:30–6ರವರೆಗೆ ಮಾತ್ರ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ವಾಹನಗಳ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಿ 50% ಮಾತ್ರ ಕಾರ್ಯನಿರ್ವಹಣೆಗೆ ಇಡಲಾಗಿದೆ.

ಮೇಲುಕಾಮನಹಳ್ಳಿ ಕೇಂದ್ರದಿಂದ ಅರಣ್ಯ ಪ್ರವೇಶ ದ್ವಾರದವರೆಗೆ ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲೂ ಹುಲಿ ದಾಳಿ ಪ್ರಕರಣಗಳು ನಡೆದ ಹಿನ್ನೆಲೆ ಮಾನವ-ವನ್ಯಜೀವಿ ಸಂಘರ್ಷ ಮತ್ತೆ ಚರ್ಚೆಗೆ ಕಾರಣವಾಗಿದೆ.

ಚಾಮರಾಜನಗರದಲ್ಲಿ ರೈತ ಸಂಘಟನೆಗಳು ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿವೆ. ಸಫಾರಿ ಪುನಾರಂಭದಿಂದ ಸಂಘರ್ಷ ಹೆಚ್ಚಾಗಲಿದೆ ಎಂದು ಆರೋಪಿಸಿರುವ ರೈತರು, ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಫೆಬ್ರವರಿ 25ರಂದು ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಒಂದೆಡೆ ಪ್ರವಾಸೋದ್ಯಮ ಚಟುವಟಿಕೆ ಪುನಶ್ಚೇತನ, ಇನ್ನೊಂದೆಡೆ ರೈತರ ಜೀವಭದ್ರತೆ — ಈ ಎರಡರ ನಡುವೆ ಸಮತೋಲನ ಸಾಧಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.

ಶಾಸಕ ಸ್ಥಾನದಿಂದ ಅಮಾನತುಗೊಳಿಸಿ: ಡಾ. ಚಂದ್ರು ಲಮಾಣಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

0

ಗದಗ: ಶಾಸಕ ಡಾ. ಚಂದ್ರು ಲಮಾಣಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಹಟ್ಟಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಶಾಸಕ‌ ಡಾ.ಚಂದ್ರು ಲಮಾಣಿ ವಿರುದ್ಧ ಪ್ರತಿಭಟನೆ ಮಾಡಲಾಯಿತು. ಡಾ. ಚಂದ್ರು ಲಮಾಣಿಗೆ ಶಾಸಕ ಸ್ಥಾನದಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡಲಾಗಿದ್ದು,

ಶಿರಹಟ್ಟಿ ಪೇಟೆ ಆಂಜನೇಯ ದೇವಸ್ಥಾನದಿಂದ ತಹಶಿಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿ ಕಾಂಗ್ರೆಸ್ ಕಾರ್ಯಕರ್ತರು ತಹಶಿಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಮಾಜಿ ಶಾಸಕರುಗಳಾದ ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.

ಪ್ರಕರಣದ ಹಿನ್ನೆಲೆ

ಶಾಸಕ ಚಂದ್ರು ಲಮಾಣಿ, 1 ಕೋಟಿ ರೂಪಾಯಿ ಮೌಲ್ಯದ ಕಾಂಟ್ರಾಕ್ಟ್​ಗಾಗಿ ಗುತ್ತಿಗೆದಾರರಿಂದ 11 ಲಕ್ಷ ರೂಪಾಯಿ ಕಮಿಷನ್ ಕೇಳಿದ್ದರು. ಈ ಸಂಬಂಧ ಶಾಸಕ ಚಂದ್ರು ಲಮಾಣಿ, ಆಪ್ತ ಸಹಾಯಕರಾದ ಗುರು ಮತ್ತು ಮಂಜುನಾಥ್ ಅವರನ್ನು ಕೂಡ ಹಣ ಸ್ವೀಕರಿಸಿದ್ದಕ್ಕಾಗಿ ವಶಕ್ಕೆ ಪಡೆಯಲಾಗಿತ್ತು.

ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರ ವಿಜಯ ಪೂಜಾರ ಎಂಬುವರಿಂದ 5 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ದಾಳಿ ನಡೆಸಿದ್ದರು. ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಸೇರಿದ್ದು ಎಂದು ಹೇಳಲಾಗುತ್ತಿರುವ ಲಕ್ಷ್ಮೇಶ್ವರ ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲಿ ಲಂಚ ಪಡೆಯುತ್ತಿರುವಾಗಲೇ ದಾಳಿ ನಡೆದಿತ್ತು.

ಕಮಿಷನ್​ಗೆ ಬೇಡಿಕೆ ಇಟ್ಟ ಬಗ್ಗೆ ಗುತ್ತಿಗೆದಾರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ, ಕಾರ್ಯಾಚರಣೆ ನಡೆದಿದ್ದು, ಪ್ಲಾನ್​ ಪ್ರಕಾರ ಪೂಜಾರ ಕಮಿಷನ್ ಕೊಡಲು ಒಪ್ಪಿಕೊಂಡಿದ್ದರು. ಅದರಂತೆ, ಆಸ್ಪತ್ರೆಯಲ್ಲಿ ಶಾಸಕರ ಪಿಎಗಳಿಗೆ ಮೊದಲ ಕಂತಿನ 5 ಲಕ್ಷ ರೂ.ಗಳನ್ನು ನೀಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದರು.

ಗದಗ ಜಿಲ್ಲೆಯ ಸಂಕದಾಳ ಗ್ರಾಮದ ರಸ್ತೆ ಬದಿಯ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಸುಮಾರು 1 ಕೋಟಿ ರೂಪಾಯಿ ವೆಚ್ಚ ಅಂದಾಜಿಸಲಾಗಿದೆ. ಈ ಕಾಮಗಾರಿಗೆ ಸಂಬಂಧಿಸಿದಂತೆ 1% ಕಮಿಷನ್ (ಲಂಚ) ಬೇಡಿಕೆ ಇಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಲಕ್ಷ್ಮೇಶ್ವರ ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.

error: Content is protected !!