Home Blog Page 51

ಪಾನ್ ಶಾಪ್‌ನಲ್ಲಿ ನಿಗೂಢ ಸ್ಫೋಟ: ಮೂವರಿಗೆ ಗಾಯ- ತನಿಖೆ ಆರಂಭ

ವಿಜಯಪುರ: ಪಾನ್ ಶಾಪ್‌ನಲ್ಲಿ ಸಂಭವಿಸಿದ ನಿಗೂಢ ಸ್ಫೋಟದಿಂದ ಅಂಗಡಿ ಮಾಲೀಕ ಸೇರಿ ಮೂವರು ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ನಡೆದಿದೆ.

ರವಿಕಿರಣ ಎಂಬುವವರಿಗೆ ಸೇರಿದ ಪಾನ್ ಶಾಪ್‌ನಲ್ಲಿ ಏಕಾಏಕಿ ಸ್ಫೋಟ ಸಂಭವಿಸಿದ್ದು, ಸ್ಫೋಟದ ಶಬ್ದಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಘಟನೆಯ ವೇಳೆ ಅಂಗಡಿಯಲ್ಲಿ ಇದ್ದವರು ಗಾಯಗೊಂಡಿದ್ದಾರೆ.

ಪ್ರಾಥಮಿಕ ಪರಿಶೀಲನೆಯಲ್ಲಿ ಅಂಗಡಿಯೊಳಗಿದ್ದ ಫ್ರಿಡ್ಜ್ ಸೇರಿದಂತೆ ಕೆಲವು ವಸ್ತುಗಳಿಗೆ ಯಾವುದೇ ಹಾನಿಯಾಗದಿರುವುದು ಗಮನಕ್ಕೆ ಬಂದಿದ್ದು, ಸ್ಫೋಟವು ಹೊರಗಡೆಯಿಂದ ಸಂಭವಿಸಿರಬಹುದೆಂಬ ಅನುಮಾನ ಮೂಡಿಸಿದೆ.

ಸ್ಫೋಟದಲ್ಲಿ ಗಾಯಗೊಂಡ ರವಿಕಿರಣ ಹಾಗೂ ಇನ್ನಿಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಘಟನೆ ಕುರಿತು ಮಾಹಿತಿ ಪಡೆದ ಬಬಲೇಶ್ವರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ, ಸೊಕೋ ತಂಡ ಹಾಗೂ ಶ್ವಾನದಳದಿಂದ ಸ್ಥಳದಲ್ಲಿ ತಾಂತ್ರಿಕ ಪರಿಶೀಲನೆ ನಡೆಸಲಾಗಿದ್ದು, ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಒಸಿ-ಸಿಸಿ ಸಮಸ್ಯೆ ಮನೆಗಳಿಗೆ ಗುಡ್ ನ್ಯೂಸ್: ಇಂದಿನಿಂದ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಚಾಲನೆ

ಬೆಂಗಳೂರು: ಹಲವು ವರ್ಷಗಳಿಂದ ಒಸಿ (Occupancy Certificate) ಮತ್ತು ಸಿಸಿ (Completion Certificate) ಸಮಸ್ಯೆಯಿಂದಾಗಿ ತಾತ್ಕಾಲಿಕ ವಿದ್ಯುತ್ ಸಂಪರ್ಕದಲ್ಲೇ ಬದುಕು ಸಾಗಿಸುತ್ತಿದ್ದ ಸಾವಿರಾರು ಮನೆಗಳಿಗೆ ರಾಜ್ಯ ಸರ್ಕಾರ ಮಹತ್ವದ ಪರಿಹಾರ ಒದಗಿಸಿದೆ. ಇಂದಿನಿಂದ ಇಂತಹ ಮನೆಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಬಡ ಹಾಗೂ ಮಧ್ಯಮ ವರ್ಗದ ಮನೆ ಮಾಲೀಕರಿಗೆ ಅನುಕೂಲವಾಗುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಪ್ರಾರಂಭಿಕ ಪ್ರಮಾಣಪತ್ರ (OC) ಮತ್ತು ಸ್ವಾಧೀನಾನುಭವ ಪ್ರಮಾಣಪತ್ರ (CC) ನಿಯಮಗಳಿಗೆ ಒಂದು ಬಾರಿಯ ವಿನಾಯಿತಿ ನೀಡಿದೆ. ಈ ಸಂಬಂಧ ಜೂನ್ 5, 2026ರಂದು ಅಧಿಕೃತ ಆದೇಶ ಹೊರಡಿಸಲಾಗಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿತ್ತು. ಹಲವು ವರ್ಷಗಳಿಂದ ದಾಖಲೆಗಳ ಕೊರತೆಯಿಂದ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗದ ಮನೆಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.

ಸರ್ಕಾರದ ಆದೇಶದ ಬೆನ್ನಲ್ಲೇ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದು, ಬಾಕಿ ಉಳಿದಿರುವ ತಾತ್ಕಾಲಿಕ ವಿದ್ಯುತ್ ಸಂಪರ್ಕಗಳನ್ನು ಶಾಶ್ವತ ಸಂಪರ್ಕಗಳಾಗಿ ಪರಿವರ್ತಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ. ಈ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಬೆಸ್ಕಾಂ ಅಂಕಿಅಂಶಗಳ ಪ್ರಕಾರ, 30×40 ಹಾಗೂ 60×40 ನಿವೇಶನಗಳಲ್ಲಿ ನಿರ್ಮಾಣಗೊಂಡಿರುವ ಮನೆಗಳನ್ನು ಸೇರಿಸಿ ಒಟ್ಟು 1.54 ಲಕ್ಷಕ್ಕೂ ಹೆಚ್ಚು ವಿದ್ಯುತ್ ಸಂಪರ್ಕ ಅರ್ಜಿಗಳು ಬಾಕಿ ಉಳಿದಿವೆ. ಈ ಎಲ್ಲಾ ಅರ್ಜಿಗಳನ್ನು ಹಂತ ಹಂತವಾಗಿ ಪರಿಶೀಲಿಸಿ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.

ವರ್ಷಗಳಿಂದ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿದ್ದ ಸಾವಿರಾರು ಕುಟುಂಬಗಳಿಗೆ ಸರ್ಕಾರದ ಈ ನಿರ್ಧಾರ ಮಹತ್ತರ ನೆಮ್ಮದಿ ತಂದಿದ್ದು, ಮನೆಗಳ ವಿದ್ಯುತ್ ಸೌಲಭ್ಯಕ್ಕೆ ಸಂಬಂಧಿಸಿದ ದೀರ್ಘಕಾಲದ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಮೂಡಿಸಿದೆ.

ರಾಜ್ಯ ಸರ್ಕಾರದ ಈ ಕ್ರಮದಿಂದ ವಿಶೇಷವಾಗಿ ನಗರ ಮತ್ತು ಉಪನಗರ ಪ್ರದೇಶಗಳಲ್ಲಿರುವ ಬಡ ಹಾಗೂ ಮಧ್ಯಮ ವರ್ಗದ ಮನೆ ಮಾಲೀಕರು ಹೆಚ್ಚಿನ ಪ್ರಯೋಜನ ಪಡೆಯಲಿದ್ದು, ವಿದ್ಯುತ್ ಸಂಪರ್ಕ ಪ್ರಕ್ರಿಯೆ ಸುಗಮಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಚಿವ ಸ್ಥಾನಕ್ಕಾಗಿ ಜಿ.ಎಸ್. ಪಾಟೀಲ ಪರ ಗದಗದಲ್ಲಿ ಶಕ್ತಿ ಪ್ರದರ್ಶನ: ಉರುಳು ಸೇವೆ, ದೀರ್ಘದಂಡ ನಮಸ್ಕಾರ

ಗದಗ: ರೋಣ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಗದಗ ನಗರದಲ್ಲಿ ಜಿ.ಎಸ್. ಪಾಟೀಲ ಅಭಿಮಾನಿಗಳು ಭಾರೀ ಶಕ್ತಿ ಪ್ರದರ್ಶನ ನಡೆಸಿದ್ದು, ಜಿಲ್ಲೆಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಗದಗ ನಗರದ ಪುಟ್ಟರಾಜ ಗವಾಯಿಗಳ ಸರ್ಕಲ್‌ನಿಂದ ಗವಾಯಿಗಳ ಮಠದವರೆಗೆ ನೂರಾರು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ಡೊಳ್ಳು ಕುಣಿತ, ವಿವಿಧ ವಾದ್ಯಗಳ ಸದ್ದು, ಘೋಷಣೆಗಳ ಮಧ್ಯೆ ಮಹಿಳೆಯರು ಸೇರಿದಂತೆ ಕಾರ್ಯಕರ್ತರು ಉರುಳು ಸೇವೆ ಹಾಗೂ ದೀರ್ಘದಂಡ ನಮಸ್ಕಾರ ಸಲ್ಲಿಸಿ ಗಮನ ಸೆಳೆದರು. ನೂರಕ್ಕೂ ಹೆಚ್ಚು ಕಾರ್ಯಕರ್ತರು ರಸ್ತೆಯಲ್ಲೇ ಉರುಳು ಸೇವೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು.

“40 ವರ್ಷಗಳಿಂದ ರೋಣ ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಈ ಬಾರಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಜಿ.ಎಸ್. ಪಾಟೀಲರಿಗೆ ಅವಕಾಶ ನೀಡಲೇಬೇಕು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಚ್.ಕೆ. ಪಾಟೀಲ ಹಾಗೂ ಶಾಸಕ ಜಿ.ಎಸ್. ಪಾಟೀಲ ನಡುವಿನ ಸಚಿವ ಸ್ಥಾನ ಪೈಪೋಟಿ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕಾರ್ಯಕರ್ತರ ಬಹಿರಂಗ ಶಕ್ತಿ ಪ್ರದರ್ಶನ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

“ಈ ಬಾರಿಯೂ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ಕೈತಪ್ಪಿದರೆ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು” ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ರೋಣ ಕ್ಷೇತ್ರಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು ಕಾಂಗ್ರೆಸ್ ಹೈಕಮಾಂಡ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡುವ ಮೂಲಕ ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.

ರಸಗೊಬ್ಬರ ಕೊರತೆ, ಇಂಧನ ಬೆಲೆ ಏರಿಕೆ ಖಂಡಿಸಿ ರೈತರ ಆಕ್ರೋಶ; ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ

ಚಂಡೀಗಢ: ರಸಗೊಬ್ಬರ ಕೊರತೆ, ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಹಾಗೂ ಕೃಷಿ ಭೂ ಸ್ವಾಧೀನ ಪ್ರಕ್ರಿಯೆಗಳ ವಿರುದ್ಧ ಅಖಿಲ ಭಾರತ ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ಸೋಮವಾರ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ಆರಂಭವಾಗಿದೆ.

ಪಂಜಾಬ್‌ನ 17 ಜಿಲ್ಲೆಗಳು ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ರೈತ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದು, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಬಿಹಾರದ ರೈತರು ಕೂಡ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ರೈತ ಮುಖಂಡರ ಪ್ರಕಾರ, ರಸಗೊಬ್ಬರದ ಕೊರತೆ ಸಮಸ್ಯೆ ಯಾವುದೇ ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ. ದೇಶದಾದ್ಯಂತ ರೈತರು ಈ ಸಮಸ್ಯೆಯನ್ನು ಎದುರಿಸುತ್ತಿದ್ದು, ಜಾಗತಿಕ ಪೂರೈಕೆ ವ್ಯವಸ್ಥೆಯಲ್ಲಿನ ಅಡಚಣೆಗಳು ಮತ್ತು ಅಂತರರಾಷ್ಟ್ರೀಯ ಬೆಳವಣಿಗೆಗಳ ಪರಿಣಾಮ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ಲಭ್ಯವಾಗುತ್ತಿಲ್ಲ ಎಂದು ಆರೋಪಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ರೈತ ಮುಖಂಡ ಸರ್ವನ್ ಸಿಂಗ್ ಪಂಧೇರ್, ಬಿತ್ತನೆ ಅವಧಿಯಲ್ಲಿ ರೈತರಿಗೆ ಅಗತ್ಯ ಕೃಷಿ ಪರಿಕರಗಳು ಮತ್ತು ರಸಗೊಬ್ಬರಗಳ ಕೊರತೆ ಉಂಟಾಗಿರುವುದು ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.

ಇಂಧನ ದರ ಏರಿಕೆಯ ವಿಚಾರವನ್ನೂ ಪ್ರಸ್ತಾಪಿಸಿದ ರೈತ ಸಂಘಟನೆಗಳು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದರೂ ಅದರ ಲಾಭ ರೈತರಿಗೆ ತಲುಪುತ್ತಿಲ್ಲ ಎಂದು ಆರೋಪಿಸಿವೆ. ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳದಿಂದ ನೀರಾವರಿ, ಕೃಷಿ ಯಂತ್ರೋಪಕರಣಗಳ ಬಳಕೆ, ಬೆಳೆ ಸಾಗಣೆ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳ ವೆಚ್ಚ ಹೆಚ್ಚಾಗಿದೆ ಎಂದು ಸಂಘಟನೆಗಳು ತಿಳಿಸಿವೆ.

ಇದರ ಜೊತೆಗೆ, ಭಾರತ್ಮಾಲಾ ಸೇರಿದಂತೆ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ರೈತರ ಸಮರ್ಪಕ ಒಪ್ಪಿಗೆ ಪಡೆಯದೇ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪವನ್ನೂ ರೈತ ಸಂಘಟನೆಗಳು ಮಾಡಿವೆ.

ದೇಶದಾದ್ಯಂತ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ರೈತರು ಹಾಗೂ ಕೃಷಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟನೆಗಳು ಕರೆ ನೀಡಿವೆ. ಸರ್ಕಾರಗಳು ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆ! ಪತಿ ಕುಟುಂಬದ ವಿರುದ್ಧ ಕೊಲೆ ಆರೋಪ

ಮೈಸೂರು: ನಗರದ ಸರಸ್ವತಿಪುರಂ ವ್ಯಾಪ್ತಿಯಲ್ಲಿ ಗೃಹಿಣಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೃತಳನ್ನು ಸಂಧ್ಯಾ (30) ಎಂದು ಗುರುತಿಸಲಾಗಿದ್ದು, ಪತಿ ಕುಟುಂಬಸ್ಥರ ವಿರುದ್ಧ ಆಕೆಯ ಪೋಷಕರು ಕೊಲೆ ಆರೋಪ ಮಾಡಿದ್ದಾರೆ.

ಸಂಧ್ಯಾ ಅವರು ಹುಣಸೂರು ಪುರಸಭೆಯ ಮಾಜಿ ಅಧ್ಯಕ್ಷೆ ಗೀತಾ ನಿಂಗರಾಜು ಅವರ ಪುತ್ರಿಯಾಗಿದ್ದು, ಮೈಸೂರಿನ ಸರಸ್ವತಿಪುರಂನ ಜವರೇಗೌಡ ಉದ್ಯಾನವನದ ಸಮೀಪ ವಾಸವಾಗಿದ್ದರು. ಅವರನ್ನು ಟಿ.ಕೆ. ಬಡಾವಣೆ ನಿವಾಸಿ ಮಹದೇವ್ ಅವರ ಪುತ್ರ ಅಕ್ಷಯ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು.

ಕುಟುಂಬದ ಮೂಲಗಳ ಪ್ರಕಾರ, ಕಳೆದ ಕೆಲವು ದಿನಗಳಿಂದ ಪತಿ-ಪತ್ನಿಯ ನಡುವೆ ಕುಟುಂಬ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಈ ನಡುವೆ ಸಂಧ್ಯಾ ಅವರು ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೋಷಕರು, ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದಾರೆ. ಪತಿ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಘಟನೆ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ನಿಖರ ಕಾರಣ ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ತನಿಖೆಯ ಬಳಿಕವೇ ಪ್ರಕರಣದ ಕುರಿತು ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆ ಇದೆ.

ಬೈಕ್‌ನಲ್ಲಿ ತೆರಳುತ್ತಿದ್ದಾಗ ಮರ ಬಿದ್ದು ಯುವಕ ಸ್ಥಳದಲ್ಲೇ ಸಾವು

ರಾಮನಗರ: ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಯುವಕನ ಮೇಲೆ ಮರ ಬಿದ್ದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ಹುಣಸನಹಳ್ಳಿ ಗ್ರಾಮದ ಬಳಿ ನಡೆದಿದೆ.

ಮೃತ ಯುವಕನನ್ನು ಪ್ರಶಾಂತ್ (19) ಎಂದು ಗುರುತಿಸಲಾಗಿದೆ.

ಹುಣಸನಹಳ್ಳಿ ಗ್ರಾಮದ ಬಳಿ ಬೆಳಗ್ಗೆ ಸಂಭವಿಸಿದ ಈ ಘಟನೆಯಲ್ಲಿ, ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವಕನ ಮೇಲೆ ರಸ್ತೆಯ ಪಕ್ಕದಲ್ಲಿದ್ದ ದೊಡ್ಡ ಮರವು ಏಕಾಏಕಿ ಬುಡಸಮೇತ ಉರುಳಿ ಬಿದ್ದಿದೆ. ಮಳೆ ಮತ್ತು ಗಾಳಿಯ ತೀವ್ರತೆಯಿಂದ ಮರ ಕುಸಿದಿರುವ ಸಾಧ್ಯತೆ ವ್ಯಕ್ತವಾಗಿದೆ.

ಘಟನೆಯ ರಭಸಕ್ಕೆ ಬೈಕ್ ಸಂಪೂರ್ಣ ಜಖಂ ಆಗಿದ್ದು, ಯುವಕ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

7 ಪ್ರಕರಣಗಳಲ್ಲಿ ವಾಂಟೆಡ್ ಆಗಿದ್ದ TMC ನಾಯಕ: ತಲೆಮರೆಸಿಕೊಂಡಿದ್ದ ಆರೋಪಿ ನೇಪಾಳ ಗಡಿಯಲ್ಲಿ ಅರೆಸ್ಟ್

ಕೋಲ್ಕತ್ತಾ: ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಜಹಾಂಗೀರ್ ಖಾನ್ ಅವರನ್ನು ಪಶ್ಚಿಮ ಬಂಗಾಳ ರಾಜ್ಯ ಪೊಲೀಸ್ ವಿಶೇಷ ಕಾರ್ಯಪಡೆ (STF) ಅಧಿಕಾರಿಗಳು ಬಂಧಿಸಿದ್ದಾರೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ಜಹಾಂಗೀರ್ ಖಾನ್ ಅವರನ್ನು ಸೋಮವಾರ ಮುಂಜಾನೆ ನೇಪಾಳ ಗಡಿ ಸಮೀಪ ವಿಶೇಷ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ. ಕಳೆದ ಕೆಲವು ದಿನಗಳಿಂದ ಅವರ ಚಲನವಲನಗಳ ಕುರಿತು ನಿಗಾ ವಹಿಸಿದ್ದ ಎಸ್ಟಿಎಫ್ ತಂಡ, ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ.

ಪೊಲೀಸರ ಪ್ರಕಾರ, ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆ ವ್ಯಾಪ್ತಿಯ ಫಾಲ್ಟಾ ಪೊಲೀಸ್ ಠಾಣೆಯಲ್ಲಿ ಜಹಾಂಗೀರ್ ಖಾನ್ ವಿರುದ್ಧ ಒಟ್ಟು ಏಳು ಎಫ್‌ಐಆರ್‌ಗಳು ದಾಖಲಾಗಿವೆ. ಪ್ರಕರಣಗಳು ದಾಖಲಾಗಿದ ಬಳಿಕ ಪೊಲೀಸರು ಹುಡುಕಾಟ ಆರಂಭಿಸಿದ್ದರೂ, ಅವರು ತಲೆಮರೆಸಿಕೊಂಡು ಓಡಾಡುತ್ತಿದ್ದರು ಎಂದು ತಿಳಿದುಬಂದಿದೆ.

ಖಾನ್ ಅವರ ಇರುವಿಕೆ ಕುರಿತು ದೊರೆತ ಗುಪ್ತಚರ ಮಾಹಿತಿಯ ಆಧಾರದ ಮೇಲೆ ವಿಶೇಷ ಕಾರ್ಯಪಡೆ ನಿರಂತರ ನಿಗಾ ವಹಿಸಿತ್ತು. ಅಂತಿಮವಾಗಿ ನೇಪಾಳ ಗಡಿ ಪ್ರದೇಶದಲ್ಲಿ ಅವರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಬಂಧಿತ ನಾಯಕನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೋಕ್ಸೋ ಸಂತ್ರಸ್ತೆಯ ತಾಯಿಯಿಂದ ಲಂಚ ಪಡೆಯುವಾದ ಲೋಕಾಯುಕ್ತ ಬಲೆಗೆ ಬಿದ್ದ ಎಎಸ್ಐ, ಕಾನ್‌ಸ್ಟೇಬಲ್

ಕಲಬುರಗಿ:  ಪೋಕ್ಸೋ ಸಂತ್ರಸ್ತೆಯ ಕುಟುಂಬಕ್ಕೆ ನೆರವು ನೀಡಬೇಕಿದ್ದ ಪೊಲೀಸ್ ಸಿಬ್ಬಂದಿಯೇ ಲಂಚಕ್ಕಾಗಿ ಕಿರುಕುಳ ನೀಡಿದ ಘಟನೆ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಎಎಸ್‌ಐ ಶಿವಶರಣಪ್ಪ ಮತ್ತು ಮಹಿಳಾ ಕಾನ್‌ಸ್ಟೆಬಲ್ ಜ್ಯೋತಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತೆಯ ತಾಯಿಗೆ ಕಾನೂನು ನೆರವು ಮತ್ತು ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಸಹಾಯ ಮಾಡುವುದಾಗಿ ಹೇಳಿ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಇವರ ಮೇಲಿದೆ. ಜೊತೆಗೆ ಸರ್ಕಾರಿ ಅಭಿಯೋಜಕರ ಶುಲ್ಕ ಎಂದು ಹೇಳಿ ಈಗಾಗಲೇ 1 ಸಾವಿರ ರೂಪಾಯಿ ಪಡೆದಿರುವುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ದೂರಿನ ಮೇರೆಗೆ ಬಲೆ ಬೀಸಿದ ಲೋಕಾಯುಕ್ತ ಅಧಿಕಾರಿಗಳು, ಮಹಿಳಾ ಕಾನ್‌ಸ್ಟೆಬಲ್ ಜ್ಯೋತಿ ಹಣ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿ ಬಂಧಿಸಿದರು. ಮತ್ತೊಂದೆಡೆ ಎಎಸ್‌ಐ ಶಿವಶರಣಪ್ಪ ತಪ್ಪಿಸಿಕೊಳ್ಳಲು ಯತ್ನಿಸಿದರೂ, ಅಧಿಕಾರಿಗಳ ತಂಡ ಆತನನ್ನು ಬೆನ್ನಟ್ಟಿ ಹಿಡಿದಿದೆ.

ಸಾಮಾನ್ಯ ಭ್ರಷ್ಟಾಚಾರದ ಪ್ರಕರಣಗಳಿಗಿಂತ ಭಿನ್ನವಾಗಿ, ಪೋಕ್ಸೋ ಸಂತ್ರಸ್ತೆಯ ಕುಟುಂಬವನ್ನೇ ಗುರಿಯಾಗಿಸಿಕೊಂಡು ಲಂಚ ಕೇಳಿರುವ ಆರೋಪ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಪೆಟ್ರೋಲ್, ಗ್ಯಾಸ್ ಬಳಿಕ ಅಕ್ಕಿ ದರ ಶಾಕ್; ಬೇಡಿಕೆ ಹೆಚ್ಚಳ, ಪೂರೈಕೆ ಕೊರತೆಯಿಂದ ಬೆಲೆ ಜಿಗಿತ

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟ ಎದುರಿಸುತ್ತಿರುವ ಗ್ರಾಹಕರಿಗೆ ಮತ್ತೊಂದು ಆಘಾತ ಎದುರಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ತರಕಾರಿ ದರ ಏರಿಕೆಯ ನಡುವೆಯೇ ಇದೀಗ ಅಕ್ಕಿ ಬೆಲೆಯೂ ಗಣನೀಯವಾಗಿ ಹೆಚ್ಚಳವಾಗಿದ್ದು, ಕುಟುಂಬಗಳ ಮಾಸಿಕ ಖರ್ಚಿನ ಮೇಲೆ ಹೆಚ್ಚುವರಿ ಹೊರೆ ಬೀಳುವಂತಾಗಿದೆ.

ಮಾರುಕಟ್ಟೆಯಲ್ಲಿ ವಿವಿಧ ತಳಿಯ ಅಕ್ಕಿಗಳ ದರದಲ್ಲಿ ಕೆಜಿಗೆ ₹10ರಿಂದ ₹20ರವರೆಗೆ ಏರಿಕೆ ದಾಖಲಾಗಿದ್ದು, ಗ್ರಾಹಕರು ಹೆಚ್ಚುವರಿ ಹಣ ಪಾವತಿಸಿ ಅಕ್ಕಿ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿಗೆ ಬೇಡಿಕೆ ಹೆಚ್ಚಾಗಿರುವುದು ಮತ್ತು ಪೂರೈಕೆ ಪ್ರಮಾಣ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಇದರ ಜೊತೆಗೆ ವಿವಿಧ ದೇಶಗಳಿಗೆ ಅಕ್ಕಿ ರಫ್ತು ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿರುವ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿಯ ಲಭ್ಯತೆ ಕುಂಠಿತವಾಗಿದ್ದು, ದರ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಇನ್ನೂ ಹೊಸ ಅಕ್ಕಿ ಬೆಳೆ ನವೆಂಬರ್ ತಿಂಗಳ ವೇಳೆಗೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದ್ದು, ಅಲ್ಲಿಯವರೆಗೆ ಪೂರೈಕೆ ಕೊರತೆ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಕ್ಕಿ ದರ ಮತ್ತಷ್ಟು ಏರಿಕೆಯಾಗುವ ಆತಂಕವೂ ವ್ಯಕ್ತವಾಗಿದೆ.

ವಿವಿಧ ತಳಿಯ ಅಕ್ಕಿ ಹೊಸ ದರಗಳು

  • ಸ್ಟೀಮ್ ರೈಸ್ – ಕೆಜಿಗೆ ₹42ರಿಂದ ₹56ಕ್ಕೆ ಏರಿಕೆ
  • ರಾ ರೈಸ್ – ಕೆಜಿಗೆ ₹50ರಿಂದ ₹62ಕ್ಕೆ ಹೆಚ್ಚಳ
  • ಕೋಲಂ ರೈಸ್ – ಕೆಜಿಗೆ ₹68ರಿಂದ ₹80ಕ್ಕೆ ಜಿಗಿತ
  • ಕೋಲಂ ಸ್ಟೀಮ್ ರೈಸ್ – ಕೆಜಿಗೆ ₹55ರಿಂದ ₹65ಕ್ಕೆ ಏರಿಕೆ

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಈಗಾಗಲೇ ಆರ್ಥಿಕ ಒತ್ತಡ ಅನುಭವಿಸುತ್ತಿದ್ದು, ಅಕ್ಕಿ ದರ ಹೆಚ್ಚಳ ಮತ್ತಷ್ಟು ಸಂಕಷ್ಟ ಸೃಷ್ಟಿಸಿದೆ. ದಿನನಿತ್ಯದ ಜೀವನ ನಿರ್ವಹಣೆಯ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವುದರಿಂದ ಕುಟುಂಬದ ಬಜೆಟ್ ಸಮತೋಲನ ಕಾಯ್ದುಕೊಳ್ಳುವುದು ಕಷ್ಟಕರವಾಗಿದೆ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮನೆ ಆವರಣದಲ್ಲಿ ಬ್ರಹ್ಮಕಮಲಗಳ ಮಹಾ ವೈಭವ!

ಗದಗ: ನಗರದಲ್ಲಿ ಅಪರೂಪದ ಪ್ರಕೃತಿ ವೈಭವವೊಂದು ಜನರ ಗಮನ ಸೆಳೆದಿದೆ. ಎಸ್‌ಎಸ್‌ಕೆ ಸಮಾಜದ ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ ಅವರ ಮನೆ ಆವರಣದಲ್ಲಿ ಒಂದೇ ರಾತ್ರಿ ಬರೋಬ್ಬರಿ 55 ಬ್ರಹ್ಮಕಮಲ ಹೂಗಳು ಅರಳಿದ ಅಪರೂಪದ ದೃಶ್ಯ ಭಾನುವಾರ ರಾತ್ರಿ ನಡೆದಿದೆ.

ಸಾಮಾನ್ಯವಾಗಿ ರಾತ್ರಿ ವೇಳೆ ಅರಳಿ ಬೆಳಗ್ಗಿನೊಳಗೆ ಬಾಡುವ ಬ್ರಹ್ಮಕಮಲ ಹೂವು ಅಪರೂಪದ ಪುಷ್ಪವೆಂದೇ ಪ್ರಸಿದ್ಧಿ ಪಡೆದಿದೆ. ಅದರಲ್ಲೂ ಒಂದೇ ಸಮಯದಲ್ಲಿ ಇಷ್ಟು ಸಂಖ್ಯೆಯಲ್ಲಿ ಹೂಗಳು ಅರಳಿರುವುದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.

ಬಿಳಿ ಬಣ್ಣದ ಬ್ರಹ್ಮಕಮಲಗಳು ರಾತ್ರಿ ಹೊತ್ತಿನಲ್ಲಿ ಮತ್ತಷ್ಟು ಮನಮೋಹಕವಾಗಿ ಕಂಗೊಳಿಸಿದ್ದು, ಮನೆ ಆವರಣವೇ ಪುಷ್ಪ ಲೋಕದಂತೆ ಕಾಣಿಸುತ್ತಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು, ಪ್ರಕೃತಿ ಪ್ರೇಮಿಗಳು ಹಾಗೂ ಹೂವಿನ ಅಭಿಮಾನಿಗಳು ಸ್ಥಳಕ್ಕೆ ಆಗಮಿಸಿ ಈ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡರು.

ಇಂತಹ ದೃಶ್ಯವನ್ನು ಮೊದಲ ಬಾರಿಗೆ ನೋಡುತ್ತಿದ್ದೇವೆ. ಒಂದೇ ಮನೆಯಲ್ಲಿ ಇಷ್ಟು ಬ್ರಹ್ಮಕಮಲಗಳು ಅರಳಿರುವುದು ನಿಜಕ್ಕೂ ಆಶ್ಚರ್ಯಕರ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದರು. ಪ್ರಕೃತಿಯ ಈ ಅಪರೂಪದ ಕ್ಷಣವನ್ನು ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲು ಜನರು ಮುಗಿಬಿದ್ದ ದೃಶ್ಯ ವಿಶೇಷವಾಗಿತ್ತು.

error: Content is protected !!