Home Blog Page 50

ಇಂದು ಇಂಡಿಯಾ ಕೂಟದ ‘ಜನಬಂಧನ್’ ಮಹಾಸಭೆ; 23 ಪಕ್ಷಗಳ ಭಾಗಿ, ಭಿನ್ನಮತಗಳ ನಡುವೆಯೂ ಒಗ್ಗಟ್ಟಿನ ಸಂದೇಶ

ನವದೆಹಲಿ: ವಿಪಕ್ಷಗಳ ಇಂಡಿಯಾ (INDIA) ಮೈತ್ರಿಕೂಟದಲ್ಲಿ ಕೆಲವು ಪಕ್ಷಗಳ ಅಸಮಾಧಾನ ಮತ್ತು ಭಿನ್ನಾಭಿಪ್ರಾಯಗಳ ಚರ್ಚೆ ನಡುವೆಯೇ, ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಸೋಮವಾರ ಇಂಡಿಯಾ ಜನಬಂಧನ್ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಒಟ್ಟು 23 ರಾಜಕೀಯ ಪಕ್ಷಗಳು ಭಾಗವಹಿಸುವ ನಿರೀಕ್ಷೆಯಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಇಂಡಿಯಾ ಕೂಟದ ಮಹತ್ವದ ಸಭೆಗೆ 23 ಪಕ್ಷಗಳು ಹಾಜರಾಗಲಿವೆ ಎಂದು ತಿಳಿಸಿದ್ದಾರೆ. ಕೆಲವು ಪಕ್ಷಗಳು ವೈಯಕ್ತಿಕ ಹಾಗೂ ರಾಜಕೀಯ ಕಾರಣಗಳಿಂದ ಸಭೆಗೆ ಗೈರಾಗಲು ನಿರ್ಧರಿಸಿದ್ದರೂ, ಮೈತ್ರಿಕೂಟದ ಒಗ್ಗಟ್ಟು ಅಚಲವಾಗಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಹಲವು ನೀತಿಗಳು ಮತ್ತು ಕ್ರಮಗಳ ವಿರುದ್ಧ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಜನರ ಹಕ್ಕುಗಳ ರಕ್ಷಣೆಯ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

“ಕೋಟ್ಯಂತರ ಭಾರತೀಯರ ಮತದಾನದ ಹಕ್ಕುಗಳ ಮೇಲೆ ಪರಿಣಾಮ ಬೀರುವ ಕ್ರಮಗಳು, ಸಂವಿಧಾನದ ಮೌಲ್ಯಗಳಿಗೆ ಧಕ್ಕೆಯುಂಟು ಮಾಡುವ ನಿರ್ಧಾರಗಳು ಹಾಗೂ ತನಿಖಾ ಸಂಸ್ಥೆಗಳ ದುರುಪಯೋಗದ ಮೂಲಕ ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಜೊತೆಗೆ ಹಣದುಬ್ಬರ, ನಿರುದ್ಯೋಗ ಮತ್ತು ವಿದೇಶಾಂಗ ನೀತಿಗೆ ಸಂಬಂಧಿಸಿದ ವಿಷಯಗಳ ಮೇಲೂ ಇಂಡಿಯಾ ಕೂಟ ತನ್ನ ನಿಲುವು ಸ್ಪಷ್ಟಪಡಿಸಲಿದೆ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಇದೇ ವೇಳೆ, ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷಗಳಲ್ಲಿ ಒಂದಾದ ತಮಿಳುನಾಡಿನ ಡಿಎಂಕೆ ಪಕ್ಷ ಸಭೆಯನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದೆ. ತಮಿಳುನಾಡಿನ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಡಿಎಂಕೆ, ಈ ಸಭೆಯಲ್ಲಿ ಭಾಗವಹಿಸದಿರಲು ತೀರ್ಮಾನಿಸಿದೆ.

ಡಿಎಂಕೆ ಪಕ್ಷ ಇಂಡಿಯಾ ಕೂಟಕ್ಕೆ ಬರೆದಿರುವ ಪತ್ರದಲ್ಲಿ, “ಕೆಲವು ರಾಜಕೀಯ ಬೆಳವಣಿಗೆಗಳ ಬಗ್ಗೆ ನಮಗೆ ಅಸಮಾಧಾನವಿದ್ದರೂ, ದೇಶದ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ನಮ್ಮ ಧ್ವನಿಯನ್ನು ಮುಂದುವರಿಸುತ್ತೇವೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ತಿಳಿಸಿದೆ.

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗೆ ಅಧಿಸೂಚನೆ: ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ!

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯು ವಿವಿಧ ಜಿಲ್ಲಾ, ನಗರ ಹಾಗೂ ವಿಶೇಷ ಘಟಕಗಳಲ್ಲಿ ಖಾಲಿ ಇರುವ 3,395 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ.

ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.

ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸಲು ಜುಲೈ 3 ಕೊನೆಯ ದಿನಾಂಕವಾಗಿದ್ದು, ಶುಲ್ಕ ಪಾವತಿಗೆ ಜುಲೈ 4ರವರೆಗೆ ಅವಕಾಶ ನೀಡಲಾಗಿದೆ. ಲಿಖಿತ ಪರೀಕ್ಷೆಯನ್ನು ಆಗಸ್ಟ್ 2, 2026ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಸಲಾಗುತ್ತದೆ.

ಅಭ್ಯರ್ಥಿಗಳು ಪಿಯುಸಿ, ಸಿಬಿಎಸ್‌ಇ, ಐಎಸ್‌ಸಿ, ಎನ್‌ಐಒಎಸ್ ಅಥವಾ ಮೂರು ವರ್ಷದ ಡಿಪ್ಲೊಮಾ ಸೇರಿದಂತೆ ಸರ್ಕಾರ ಮಾನ್ಯತೆ ನೀಡಿರುವ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಕನಿಷ್ಠ 18 ವರ್ಷ ವಯಸ್ಸು ಕಡ್ಡಾಯವಾಗಿದ್ದು, ಸರ್ಕಾರವು ಗರಿಷ್ಠ ವಯೋಮಿತಿಯಲ್ಲಿ ಐದು ವರ್ಷಗಳ ವಿಶೇಷ ಸಡಿಲಿಕೆಯನ್ನು ನೀಡಿದೆ.

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 33 ವರ್ಷ, ಎಸ್‌ಸಿ/ಎಸ್‌ಟಿ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ ಹಾಗೂ ಬುಡಕಟ್ಟು ಸಮುದಾಯದ ಅಭ್ಯರ್ಥಿಗಳಿಗೆ 38 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆಯ ಜೊತೆಗೆ ದೇಹದಾರ್ಢ್ಯ ಮತ್ತು ಸಹನಶಕ್ತಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ 168 ಸೆಂ.ಮೀ. ಹಾಗೂ ಮಹಿಳಾ ಅಭ್ಯರ್ಥಿಗಳಿಗೆ 157 ಸೆಂ.ಮೀ. ಎತ್ತರ ಕಡ್ಡಾಯವಾಗಿದೆ.

ಒಟ್ಟು 3,395 ಹುದ್ದೆಗಳಲ್ಲಿ 2,266 ಹುದ್ದೆಗಳು ಪುರುಷರಿಗೆ, 755 ಮಹಿಳೆಯರಿಗೆ, 257 ಸೇವಾನಿರತ ಪುರುಷರಿಗೆ, 82 ಸೇವಾನಿರತ ಮಹಿಳೆಯರಿಗೆ ಹಾಗೂ 35 ಹುದ್ದೆಗಳು ತೃತೀಯಲಿಂಗಿ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ.

ನೇಮಕಗೊಂಡ ಅಭ್ಯರ್ಥಿಗಳಿಗೆ ಎರಡು ವರ್ಷಗಳ ತರಬೇತಿ ನೀಡಲಾಗುತ್ತದೆ. ತರಬೇತಿ ಪೂರ್ಣಗೊಂಡ ಬಳಿಕ ಖಾಯಂ ನೇಮಕಾತಿ ಮಾಡಲಾಗುತ್ತಿದ್ದು, ₹37,500 ರಿಂದ ₹76,100ರವರೆಗೆ ವೇತನ ಶ್ರೇಣಿ ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಸೌಲಭ್ಯ ದೊರೆಯಲಿದೆ.

ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಪೊಲೀಸ್ ಇಲಾಖೆಯ ಈ ನೇಮಕಾತಿ ಅಧಿಸೂಚನೆಯು ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವಾಗಿ ಪರಿಣಮಿಸಿದೆ.

‘ಜಮೀರ್ ಇಲ್ಲದ ಸರ್ಕಾರ ಸರ್ಕಾರವೇ ಅಲ್ಲ’: ಕೋಡಿಮಠ ಶ್ರೀಗಳ ಭವಿಷ್ಯ!

ಹಾಸನ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತ ಚರ್ಚೆಗಳು ಜೋರಾಗಿರುವ ನಡುವೆಯೇ, ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಮತ್ತೆ ಸಚಿವರಾಗಲಿದ್ದಾರೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆಯ ಅಲ್ ಅಮೀನ್ ಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿವೇತನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಮೀರ್ ಅಹಮ್ಮದ್ ಖಾನ್ ಅವರನ್ನು ಸಚಿವ ಸಂಪುಟದಿಂದ ಹೊರಗಿಡಲು ಸಾಧ್ಯವಿಲ್ಲ. ಅವರು ಮತ್ತೆ ಸಚಿವ ಸಂಪುಟ ಸೇರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಮೀರ್ ಅವರ ವಿರುದ್ಧ ಕೇಳಿಬಂದಿರುವ ಆಡಿಯೋ ಹಾಗೂ ಇತರ ವಿವಾದಗಳು ಅಪಪ್ರಚಾರದ ಭಾಗವಾಗಿದ್ದು, ಇದರಿಂದ ಅವರು ಆತಂಕಪಡುವ ಅಗತ್ಯವಿಲ್ಲ ಎಂದು ಸ್ವಾಮೀಜಿ ಹೇಳಿದರು. ಜೊತೆಗೆ ಶಾಸಕ ಶಿವಲಿಂಗೇಗೌಡ ಅವರಿಗೂ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ಜಮೀರ್ ಅಹಮ್ಮದ್ ಖಾನ್ ಸಮಾಜ ಸೇವೆ ಮತ್ತು ಜಾತ್ಯತೀತ ಮೌಲ್ಯಗಳಿಗಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಎಲ್ಲರೂ ಬೆಂಬಲ ನೀಡಬೇಕು. ಸಚಿವ ಸ್ಥಾನ ದೊರೆತ ಬಳಿಕ ಜಮೀರ್ ಮತ್ತು ಶಿವಲಿಂಗೇಗೌಡ ಅವರನ್ನು ಮಠದಲ್ಲಿ ಸನ್ಮಾನಿಸುವುದಾಗಿ ಸ್ವಾಮೀಜಿ ತಿಳಿಸಿದರು.

ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಈ ಹಿಂದೆ ನೀಡಿದ್ದ ತಮ್ಮ ಭವಿಷ್ಯ ನಿಜವಾಗಿರುವುದನ್ನೂ ಉಲ್ಲೇಖಿಸಿದ ಅವರು, ಈ ಬಾರಿಯೂ ಜಮೀರ್ ಸಚಿವರಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಬೇಕಿದ್ದು, ಕೋಡಿಮಠ ಶ್ರೀಗಳ ಈ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಬಳ್ಳಾರಿಯಲ್ಲಿ ಮಹಿಳೆ ಅನುಮಾನಾಸ್ಪದ ಸಾವು: ಹಳ್ಳದ ಬಳಿ ಮೃತದೇಹ ಪತ್ತೆ, ತನಿಖೆ ಚುರುಕು

ಬಳ್ಳಾರಿ: ಸ್ನೇಹಿತರು ಹಾಗೂ ಸಹೋದ್ಯೋಗಿಗಳೊಂದಿಗೆ ಪಾರ್ಟಿಗೆ ತೆರಳಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಹಂದ್ರಾಳ್ ಹಳ್ಳದ ಬಳಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಪ್ರಕರಣಕ್ಕೆ ಹಲವು ಅನುಮಾನಗಳು ಮೂಡಿವೆ.

ಮೃತರನ್ನು ಕೌಲ್ ಬಜಾರ್ ನಿವಾಸಿ ಹಾಗೂ ಪ್ರಗತಿ ಬ್ಯಾಂಕ್ ಉದ್ಯೋಗಿ ಅನಿಷಾ ಫಾತೀಮಾ (38) ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಬ್ಯಾಂಕ್ ಸಿಬ್ಬಂದಿಯೊಂದಿಗೆ ಪಾರ್ಟಿಗೆ ತೆರಳಿದ್ದ ಅವರು ನಂತರ ರಾತ್ರಿ 11 ಗಂಟೆ ಸುಮಾರಿಗೆ ಪತಿಗೆ ಕರೆ ಮಾಡಿದ್ದರು ಎಂದು ತಿಳಿದುಬಂದಿದೆ. ಬಳಿಕ ಅವರ ಸಂಪರ್ಕ ಕಡಿತಗೊಂಡಿತ್ತು.

ಭಾನುವಾರ ಬೆಳಗ್ಗೆ ಹಳ್ಳದ ಪಕ್ಕದ ಜಾಲಿಬೇಲಿಯಲ್ಲಿ ಅನಿಷಾ ಫಾತೀಮಾ ಅವರ ಮೃತದೇಹ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಎಪಿಎಂಸಿ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಹಂದ್ರಾಳ್ ಹಳ್ಳ ಉಕ್ಕಿ ಹರಿಯುತ್ತಿದ್ದು, ಸ್ಕೂಟಿ ಸಮೇತ ಮಹಿಳೆ ನೀರಿನಲ್ಲಿ ಕೊಚ್ಚಿಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಸ್ಕೂಟಿ ಒಂದೆಡೆ ಹಾಗೂ ಮೃತದೇಹ ಮತ್ತೊಂದೆಡೆ ಪತ್ತೆಯಾಗಿರುವುದು ಪ್ರಕರಣವನ್ನು ಗಂಭೀರಗೊಳಿಸಿದೆ.

ಮೃತರ ಕುಟುಂಬಸ್ಥರು ಈ ಸಾವಿನ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದು, “ನಮ್ಮ ಮನೆ ಮಗಳಂತೆ ಇನ್ನೊಬ್ಬರಿಗೆ ಆಗಬಾರದು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

ಹೋಮಿಯೋಪತಿ ಪರ ಹೇಳಿಕೆ ನೀಡಿದ ಅನುಷ್ಕಾ ಶರ್ಮಾ: ನಟಿಯ ಪೋಸ್ಟ್‌ಗೆ ವೈದ್ಯರ ಆಕ್ರೋಶ

ಸಿನಿಮಾಗಳಿಂದ ದೂರವಿದ್ದು ಕುಟುಂಬದೊಂದಿಗೆ ಸಮಯ ಕಳೆಯುತ್ತಿರುವ ನಟಿ ಅನುಷ್ಕಾ ಶರ್ಮಾ ಇದೀಗ ಆರೋಗ್ಯ ವಿಚಾರದಲ್ಲಿ ಮಾಡಿದ ಪೋಸ್ಟ್‌ನಿಂದ ಸುದ್ದಿಯಲ್ಲಿದ್ದಾರೆ. ಹೋಮಿಯೋಪತಿ ಚಿಕಿತ್ಸಾ ಪದ್ಧತಿಗೆ ಬೆಂಬಲ ಸೂಚಿಸಿದ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಅನುಷ್ಕಾ ಶರ್ಮಾ, ಹೋಮಿಯೋಪತಿ ವೈದ್ಯ ರಾಜನ್ ಸಂಕರನ್ ಅವರ ವಿಡಿಯೋವನ್ನು ಹಂಚಿಕೊಂಡು, ತಮ್ಮ ಆರೋಗ್ಯ ಜೀವನದಲ್ಲಿ ಹೋಮಿಯೋಪತಿಯ ಪಾತ್ರವನ್ನು ಶ್ಲಾಘಿಸಿದ್ದರು. ಆದರೆ ಈ ಹೇಳಿಕೆಗೆ ವೈದ್ಯಕೀಯ ಕ್ಷೇತ್ರದ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ಖ್ಯಾತ ವೈದ್ಯ ಸಿರಿಯಾಕ್ ಅಬಿ ಫಿಲಿಪ್ಸ್, ಹೋಮಿಯೋಪತಿಯಲ್ಲಿ ಪರಿಣಾಮಕಾರಿ ಔಷಧೀಯ ಅಂಶಗಳಿಲ್ಲ ಎಂದು ವಾದಿಸಿದ್ದು, ಸಾರ್ವಜನಿಕ ವ್ಯಕ್ತಿಗಳು ವೈಜ್ಞಾನಿಕ ಆಧಾರವಿಲ್ಲದ ಚಿಕಿತ್ಸಾ ವಿಧಾನಗಳನ್ನು ಪ್ರಚಾರ ಮಾಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಂದೆಡೆ, ಹೋಮಿಯೋಪತಿಯನ್ನು ನಂಬುವವರು ಅನುಷ್ಕಾ ಅವರ ಬೆಂಬಲಕ್ಕೆ ನಿಂತಿದ್ದಾರೆ. ಈ ಬೆಳವಣಿಗೆಯೊಂದಿಗೆ ಹೋಮಿಯೋಪತಿ ವಿರುದ್ಧ ಆಧುನಿಕ ವೈದ್ಯಕೀಯ ಪದ್ಧತಿ ಕುರಿತ ಚರ್ಚೆ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಮುನ್ನೆಲೆಗೆ ಬಂದಿದೆ.

ನಗುವಿನ ಸಾಮ್ರಾಟ, ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ನಟ ಸಲೀಂ ಕುಮಾರ್ ನಿಧನ

ಕೊಚ್ಚಿ: ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದ ಸಲೀಂ ಕುಮಾರ್ ಅವರ ನಿಧನ ಚಿತ್ರರಂಗಕ್ಕೆ ಭಾರೀ ಆಘಾತ ಉಂಟುಮಾಡಿದೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕೊನೆಯುಸಿರೆಳೆದಿದ್ದಾರೆ.

ಹಾಸ್ಯ ಪಾತ್ರಗಳಿಂದ ಲಕ್ಷಾಂತರ ಅಭಿಮಾನಿಗಳ ಮನಗೆದ್ದಿದ್ದ ಸಲೀಂ ಕುಮಾರ್, ಬಳಿಕ ಭಾವನಾತ್ಮಕ ಹಾಗೂ ಗಂಭೀರ ಪಾತ್ರಗಳಲ್ಲೂ ಅದ್ಭುತ ಅಭಿನಯದ ಮೂಲಕ ತಮ್ಮ ಪ್ರತಿಭೆ ಸಾಬೀತುಪಡಿಸಿದ್ದರು. ಮಲಯಾಳಂ ಚಿತ್ರರಂಗದ ಅತ್ಯಂತ ಬಹುಮುಖ ನಟರಲ್ಲಿ ಒಬ್ಬರಾಗಿದ್ದ ಅವರು, ದಶಕಗಳ ಕಾಲ ಸಿನಿರಸಿಕರನ್ನು ರಂಜಿಸಿದ್ದರು.

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಗಣ್ಯರು ಆಸ್ಪತ್ರೆಗೆ ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ. ನಟ ದಿಲೀಪ್ ಸೇರಿದಂತೆ ಹಲವರು ಕಣ್ಣೀರಿನ ನಮನ ಸಲ್ಲಿಸಿದ್ದಾರೆ.

ಸಲೀಂ ಕುಮಾರ್ ಅವರ ಕಲಾ ಬದುಕು ಹಲವು ಪ್ರಶಸ್ತಿಗಳಿಂದ ಅಲಂಕರಿತವಾಗಿತ್ತು. 2010ರಲ್ಲಿ ‘ಆದಾಮಿಂತೆ ಮಕನ್ ಅಬು’ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಅವರು, ತಮ್ಮ ವೃತ್ತಿಜೀವನದಲ್ಲಿ ಹಾಸ್ಯ ಹಾಗೂ ಗಂಭೀರ ಪಾತ್ರಗಳ ನಡುವಿನ ಅಂತರವನ್ನು ಅಳಿಸಿ ಹಾಕಿದ ಅಪರೂಪದ ನಟರಾಗಿದ್ದರು.

ಅವರ ಅಗಲಿಕೆ ಮಲಯಾಳಂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದ್ದು, ಅಭಿಮಾನಿಗಳು ಹಾಗೂ ಸಿನಿರಂಗದವರು ಸಾಮಾಜಿಕ ಜಾಲತಾಣಗಳಲ್ಲಿ ಭಾವುಕ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಬಿಗ್ ಬಾಸ್ ಮನೆಗೆ ಎಂಟ್ರಿ ಬೇಕಾ? ಈ ಭಾರಿ ಸಾಮಾನ್ಯ ಜನರಿಗೂ ಸಿಗಲಿದೆ ಗೋಲ್ಡನ್ ಚಾನ್ಸ್

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್‌ಗೆ ಸಿದ್ಧವಾಗುತ್ತಿದ್ದು, ಈ ಬಾರಿ ಕಾರ್ಯಕ್ರಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಮೊದಲ ಬಾರಿಗೆ ಸಾಮಾನ್ಯ ಜನರಿಗೂ ನೇರ ಆಡಿಷನ್ ಮೂಲಕ ಸ್ಪರ್ಧಿಯಾಗಿ ಆಯ್ಕೆಯಾಗುವ ಅವಕಾಶ ನೀಡಲಾಗಿದೆ.

ಈ ಬೆಳವಣಿಗೆ ‘ಬಿಗ್ ಬಾಸ್’ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. ವರ್ಷಗಳಿಂದ ಕೇವಲ ಪ್ರೇಕ್ಷಕರಾಗಿ ಕಾರ್ಯಕ್ರಮವನ್ನು ನೋಡುತ್ತಿದ್ದವರಿಗೆ ಇದೀಗ ಮನೆಯೊಳಗೆ ಪ್ರವೇಶಿಸಿ ತಮ್ಮ ವ್ಯಕ್ತಿತ್ವ ಮತ್ತು ಪ್ರತಿಭೆಯನ್ನು ತೋರಿಸಿಕೊಳ್ಳುವ ಅವಕಾಶ ಲಭ್ಯವಾಗಿದೆ.

ಆಡಿಷನ್‌ನಲ್ಲಿ ಭಾಗವಹಿಸಲು ಆಸಕ್ತರು ತಮ್ಮ ಬಗ್ಗೆ ಮತ್ತು ಪ್ರತಿಭೆಯ ಬಗ್ಗೆ ವಿವರಿಸುವ ಮೂರು ನಿಮಿಷಗಳ ವಿಡಿಯೋ ಸಿದ್ಧಪಡಿಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಬೇಕು. ಆಯ್ಕೆ ಸಮಿತಿಯು ವಿಡಿಯೋಗಳನ್ನು ಪರಿಶೀಲಿಸಿ ಅರ್ಹ ಅಭ್ಯರ್ಥಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಿದೆ.

‘ಅವಕಾಶ ಸಿಗದ ಆಸೆಗಳಿಗೆ ಅರ್ಥವೇ ಇರೋದಿಲ್ಲ’ ಎಂಬ ಸಂದೇಶದೊಂದಿಗೆ ಬಿಡುಗಡೆಗೊಂಡಿರುವ ಪ್ರೋಮೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಾರಿ ಸಾಮಾನ್ಯ ಜನರ ಎಂಟ್ರಿಯಿಂದ ಕಾರ್ಯಕ್ರಮದ ಸ್ವರೂಪದಲ್ಲೂ ಹೊಸ ಬದಲಾವಣೆ ಕಾಣುವ ನಿರೀಕ್ಷೆ ಇದೆ.

ಹೊಸ ಸ್ಪರ್ಧಿಗಳು, ಹೊಸ ಸವಾಲುಗಳು ಹಾಗೂ ಕಿಚ್ಚ ಸುದೀಪ್ ಅವರ ನಿರೂಪಣೆಯೊಂದಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಮತ್ತೊಮ್ಮೆ ಕಿರುತೆರೆ ಪ್ರೇಕ್ಷಕರ ಗಮನ ಸೆಳೆಯಲು ಸಜ್ಜಾಗಿದೆ.

ಅಜಯ್ ದೇವಗನ್ ಮಗನ ಹೊಸ ಅವತಾರ: ಜಿಮ್ ವಿಡಿಯೋಗೆ ನೆಟ್ಟಿಗರು ಫಿದಾ

ಮುಂಬೈ: ಬಾಲಿವುಡ್ ಸ್ಟಾರ್ ದಂಪತಿ ಅಜಯ್ ದೇವಗನ್ ಮತ್ತು ಕಾಜೋಲ್ ಪುತ್ರ ಯುಗ್ ದೇವಗನ್ ತಮ್ಮ ಫಿಟ್‌ನೆಸ್ ಟ್ರಾನ್ಸ್‌ಫಾರ್ಮೇಶನ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಜಿಮ್‌ನಲ್ಲಿ ಬೆವರು ಸುರಿಸುತ್ತಿರುವ ಅವರ ಹೊಸ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವೈರಲ್ ವಿಡಿಯೋದಲ್ಲಿ ಯುಗ್ ದೇವಗನ್ ಕಠಿಣ ವರ್ಕೌಟ್ ಹಾಗೂ ಪುಷ್-ಅಪ್ಸ್‌ಗಳನ್ನು ಮಾಡುತ್ತಿರುವುದು ಕಾಣಿಸುತ್ತದೆ. ಫಿಟ್‌ನೆಸ್ ಪ್ರಯಾಣದ ಆರಂಭದಿಂದ ಇಂದಿನವರೆಗಿನ ದೇಹದ ಬದಲಾವಣೆಯನ್ನು ವಿಡಿಯೋದಲ್ಲಿ ತೋರಿಸಲಾಗಿದ್ದು, ಅವರ ಪರಿಶ್ರಮ ಮತ್ತು ಶಿಸ್ತಿನ ಜೀವನಶೈಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ವಿಡಿಯೋ ಹಂಚಿಕೊಂಡಿರುವ ಫಿಟ್‌ನೆಸ್ ಕೋಚ್ ರಾಬಿನ್ ಬಹ್ಲ್, ‘ಯುಗ್ ಜಿಮ್‌ನಲ್ಲಿ ಅತ್ಯಂತ ಸಮರ್ಪಣೆಯಿಂದ ತರಬೇತಿ ಪಡೆಯುವ ಹುಡುಗ. ಅವನ ಬದ್ಧತೆ ಮತ್ತು ಬೆಳವಣಿಗೆ ಪ್ರತಿದಿನವೂ ಹೊಸ ಪ್ರೇರಣೆ ನೀಡುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಕಾಜೋಲ್ ಕೂಡ ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿ ಫೈರ್ ಎಮೋಜಿ ಪೋಸ್ಟ್ ಮಾಡಿದ್ದು, ಮಗನ ಸಾಧನೆಗೆ ಬೆಂಬಲ ಸೂಚಿಸಿದ್ದಾರೆ.

ಗ್ಲಾಮರ್ ಪ್ರಪಂಚದಿಂದ ದೂರ ಉಳಿಯಲು ಇಷ್ಟಪಡುವ ಯುಗ್, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಪರೂಪವಾಗಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಆದರೆ ಈಗಾಗಲೇ ‘ಕರಾಟೆ ಕಿಡ್: ಲೆಜೆಂಡ್ಸ್’ ಚಿತ್ರದ ಹಿಂದಿ ಆವೃತ್ತಿಗೆ ಧ್ವನಿ ನೀಡುವ ಮೂಲಕ ಸಿನಿಮಾ ಕ್ಷೇತ್ರದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಸದ್ಯ ಫಿಟ್‌ನೆಸ್, ವಿದ್ಯಾಭ್ಯಾಸ ಮತ್ತು ಡಬ್ಬಿಂಗ್ ಕೆಲಸಗಳ ನಡುವೆ ಸಮತೋಲನ ಸಾಧಿಸುತ್ತಿರುವ ಯುಗ್ ದೇವಗನ್, ಭವಿಷ್ಯದಲ್ಲಿ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆಯೇ ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಮೂಡಿದೆ.

ಹಾಸನ ಕೋರ್ಟ್ ಮುಂಭಾಗ ರಕ್ತಪಾತ: ರೌಡಿಶೀಟರ್ ಬರ್ಬರ ಹತ್ಯೆ!

ಹಾಸನ: ಹಾಸನ ನಗರದಲ್ಲಿ ಭೀಕರ ಘಟನೆ ನಡೆದಿದ್ದು, ರೌಡಿಶೀಟರ್ ಮಂಜೇಶ್ (43) ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಈ ಘಟನೆ ಚನ್ನಪಟ್ಟಣದ ಜಿಲ್ಲಾ ಕೋರ್ಟ್ ಮುಂಭಾಗ ಇಂದು ಮುಂಜಾನೆ ನಡೆದಿದೆ. ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ಹತ್ಯೆಯಿಂದ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮೃತ ಮಂಜೇಶ್ ಮೂಲತಃ ಹಾಸನ ಜಿಲ್ಲೆಯವರಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ. ಇಂದು ಹಾಸನಕ್ಕೆ ಬಂದಿದ್ದ ವೇಳೆ ದುಷ್ಕರ್ಮಿಗಳು ಅವರನ್ನು ಗುರಿಯಾಗಿಸಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಮುಖ ಗುರುತು ಸಿಗದಂತೆ ತೀವ್ರವಾಗಿ ಕೊಚ್ಚಿ ಕೊಲೆಗೈದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಹಾಸನ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ಗಂಭೀರವಾಗಿ ತನಿಖೆ ಮಾಡುತ್ತಿದ್ದಾರೆ. ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ಹತ್ಯೆಯಿಂದ ನಗರದಲ್ಲಿ ಭದ್ರತೆ ಕುರಿತು ಪ್ರಶ್ನೆಗಳು ಎದ್ದಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

‘ಟಾಕ್ಸಿಕ್’ಗೆ ಮೂರು ಹಾಡು ಬರೆದಿದ್ದೇನೆ: ಲೆಕ್ಕ ಕೊಟ್ಟ ಯೋಗರಾಜ್ ಭಟ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಕುರಿತು ಅಭಿಮಾನಿಗಳು ಕಾಯುತ್ತಿದ್ದ ಮತ್ತೊಂದು ಅಪ್‌ಡೇಟ್ ಹೊರಬಿದ್ದಿದೆ. ಖ್ಯಾತ ಗೀತರಚನೆಕಾರ ಯೋಗರಾಜ್ ಭಟ್ ಚಿತ್ರದ ಹಾಡುಗಳ ಬಗ್ಗೆ ಮಾತನಾಡಿದ್ದು, ಚಿತ್ರದ ಸಂಗೀತ ವಿಭಾಗದ ಬಗ್ಗೆ ಹೊಸ ಮಾಹಿತಿ ನೀಡಿದ್ದಾರೆ.

ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ ಯೋಗರಾಜ್ ಭಟ್, ‘ಟಾಕ್ಸಿಕ್’ ಚಿತ್ರಕ್ಕಾಗಿ ತಾವು ಮೂರು ಹಾಡುಗಳನ್ನು ಬರೆದಿರುವುದಾಗಿ ತಿಳಿಸಿದ್ದಾರೆ. ‘ಎರಡು-ಮೂರು ಹಾಡುಗಳನ್ನು ಬರೆದಿದ್ದೇನೆ. ಮೂರು ಅಂತಲೇ ಲೆಕ್ಕ. ಯಾವಾಗ ರಿಲೀಸ್ ಆಗುತ್ತವೆ ಎಂಬುದನ್ನು ಕಾದು ನೋಡಬೇಕು’ ಎಂದು ಹೇಳಿದ್ದಾರೆ.

ಚಿತ್ರದ ದೃಶ್ಯಗಳನ್ನು ನೋಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದು ಆತ್ಮೀಯ ಗೆಳೆಯನ ಮಹೋನ್ನತ ಸಿನಿಮಾ. ಅಭೂತಪೂರ್ವ ಯಶಸ್ಸು ಸಾಧಿಸುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಾಡುಗಳ ಕೆಲಸಕ್ಕಾಗಿ ತಾವು ಮುಂಬೈಗೆ ತೆರಳಿದ್ದ ಸಂಗತಿಯನ್ನೂ ಅವರು ಹಂಚಿಕೊಂಡಿದ್ದಾರೆ.

ನಿರ್ದೇಶಕಿ ಗೀತು ಮೋಹನ್‌ದಾಸ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಟಾಕ್ಸಿಕ್’ ಸಿನಿಮಾ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಪ್ರಾಜೆಕ್ಟ್‌ಗಳಲ್ಲಿ ಒಂದಾಗಿದೆ. ಚಿತ್ರದಲ್ಲಿ ಹಲವು ಖ್ಯಾತ ಕಲಾವಿದರು ನಟಿಸುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದ ತಾಂತ್ರಿಕ ತಂಡ ಕಾರ್ಯನಿರ್ವಹಿಸುತ್ತಿದೆ.

ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಬಿಡುಗಡೆ ದಿನಾಂಕದ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ಆದರೂ ಚಿತ್ರದ ಪ್ರತಿಯೊಂದು ಅಪ್‌ಡೇಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.

ಇದೀಗ ಯೋಗರಾಜ್ ಭಟ್ ನೀಡಿರುವ ಹೇಳಿಕೆಯಿಂದ ಚಿತ್ರದ ಹಾಡುಗಳ ಬಗ್ಗೆ ನಿರೀಕ್ಷೆ ಹೆಚ್ಚಾಗಿದ್ದು, ‘ಟಾಕ್ಸಿಕ್’ ಸಂಗೀತವೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿ ಮೂಡಿದೆ.

error: Content is protected !!