Home Blog Page 53

ಬೀದರ್ ಜಿಲ್ಲೆಯಲ್ಲಿ 12ನೇ ಶತಮಾನದ ಶಿಲಾಶಾಸನ–ಶಿಲ್ಪ ಪತ್ತೆ: ವೈಜ್ಞಾನಿಕ ಸಂಶೋಧನೆಗೆ ಆಗ್ರಹ

0

ಬೀದರ್: ಐತಿಹಾಸಿಕ ಲಕ್ಕುಂಡಿ ಹಾಗೂ ಬಳ್ಳಾರಿಯಲ್ಲಿ ನಿಧಿ ಮತ್ತು ಶಿಲಾಶಾಸನಗಳು ಪತ್ತೆಯಾಗಿ ರಾಜ್ಯದ ಗಮನ ಸೆಳೆದ ಬೆನ್ನಲ್ಲೇ, ಇದೀಗ ಬೀದರ್ ಜಿಲ್ಲೆಯಲ್ಲೂ ಅಪರೂಪದ ಐತಿಹಾಸಿಕ ಪತ್ತೆಗಳು ಬೆಳಕಿಗೆ ಬಂದಿವೆ. ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಪ್ರಾಚೀನ ಶಿಲಾಶಾಸನಗಳು, ಶಿವಲಿಂಗಗಳು ಹಾಗೂ ಸರ್ಪ ರೂಪದ ಶಿಲ್ಪಗಳು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಕುತೂಹಲ ಮೂಡಿಸಿದೆ.

ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾವೇಶದ ಅಡುಗೆ ತಯಾರಿಗಾಗಿ ಭವಾನಿ ದೇವಸ್ಥಾನದ ಹಿಂಭಾಗದ ಜಾಗವನ್ನು ಸ್ವಚ್ಛಗೊಳಿಸುವ ವೇಳೆ ಈ ಪುರಾತನ ಅವಶೇಷಗಳು ಪತ್ತೆಯಾಗಿವೆ. ಐದು ಹೆಡೆಯ ಅಪರೂಪದ ನಾಗಮೂರ್ತಿ, ನಾಗ ಸರ್ಪದ ವಿಗ್ರಹಗಳು ಹಾಗೂ ಶಿಲಾಶಾಸನಗಳು ಭೂಗರ್ಭದಿಂದ ಹೊರಬಂದಿವೆ.

ಗ್ರಾಮಸ್ಥರ ಪ್ರಕಾರ, 12ನೇ ಶತಮಾನದ ಚಾಲುಕ್ಯರ ಕಾಲದಲ್ಲಿ ಇಲ್ಲಿ ಸುಮಾರು 108 ದೇವಸ್ಥಾನಗಳು ಒಂದೇ ಪ್ರದೇಶದಲ್ಲಿ ಇದ್ದವು ಎಂಬ ಪ್ರತೀತಿ ಇದೆ. ಈ ಹಿನ್ನೆಲೆಯಲ್ಲಿ ತಕ್ಷಣ ಪುರಾತತ್ವ ಇಲಾಖೆಯಿಂದ ವೈಜ್ಞಾನಿಕ ಸಂಶೋಧನೆ ನಡೆಸಬೇಕು ಎಂದು ಸರ್ಕಾರವನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅಯೋಧ್ಯೆ ರಾಮ ಮಂದಿರ ದಾಳಿ ಸಂಚು ಕೇಸ್‌ಗೆ ಶಾಕಿಂಗ್ ಟ್ವಿಸ್ಟ್: ಬಂಧಿತ ಆರೋಪಿ ಅಬ್ದುಲ್ ರೆಹಮಾನ್ ಜೈಲಿನಲ್ಲಿ ಹತ್ಯೆ

0

ಲಕ್ನೋ: ಅಯೋಧ್ಯೆಯ ರಾಮ ಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಆರೋಪಿಯೊಬ್ಬ ಫರಿದಾಬಾದ್ ಜೈಲಿನಲ್ಲೇ ಹತ್ಯೆಯಾಗಿರುವ ಘಟನೆ ವರದಿಯಾಗಿದೆ. ಅಬ್ದುಲ್ ರೆಹಮಾನ್ ಎಂಬ 20 ವರ್ಷದ ಆರೋಪಿಯನ್ನು ಜೈಲಿನಲ್ಲಿದ್ದ ಸಹ ಕೈದಿ ಅರುಣ್ ಚೌಧರಿ ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.

ಭಾನುವಾರ ಅಬ್ದುಲ್ ರೆಹಮಾನ್ ಮತ್ತು ಅರುಣ್ ಚೌಧರಿ ನಡುವೆ ಜಗಳ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ರಾತ್ರಿ 8 ಗಂಟೆ ಸುಮಾರಿಗೆ ಅರುಣ್ ಚೌಧರಿ ರೆಹಮಾನ್‌ನ ತಲೆಗೆ ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ರೆಹಮಾನ್‌ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

ಘಟನೆ ಸಂಬಂಧ ಜೈಲು ಆಡಳಿತ ಹಾಗೂ ಪೊಲೀಸ್ ಇಲಾಖೆ ತನಿಖೆಗೆ ಆದೇಶಿಸಿದ್ದು, ಜೈಲಿನ ಭದ್ರತಾ ವ್ಯವಸ್ಥೆಗಳ ಮೇಲೂ ಪರಿಶೀಲನೆ ನಡೆಸಲಾಗುತ್ತಿದೆ.

ಬನ್ನೇರುಘಟ್ಟ ರಸ್ತೆಯ ಪ್ಲಾಸ್ಟಿಕ್ ಗೋಡೌನ್‌ಗೆ ಭಾರೀ ಬೆಂಕಿ: ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ

0

ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ದೊಡ್ಡಕಮ್ಮನಹಳ್ಳಿ ಪ್ರದೇಶದಲ್ಲಿರುವ ಪ್ಲಾಸ್ಟಿಕ್ ಗೋಡೌನ್‌ಗೆ ಬೆಂಕಿ ತಗುಲಿ, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ. ಸೋಮವಾರ ಮಧ್ಯರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಘಟನೆ ನಡೆದ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಬೆಂಕಿಯ ತೀವ್ರತೆಯಿಂದಾಗಿ ಇನ್ನೂ ಸಂಪೂರ್ಣವಾಗಿ ಹತೋಟಿಗೆ ಬಂದಿಲ್ಲ ಎಂದು ತಿಳಿದುಬಂದಿದೆ.

ಪ್ಲಾಸ್ಟಿಕ್ ಗೋಡೌನ್ ಸಮೀಪದಲ್ಲೇ ಗ್ಯಾಸ್ ಸಿಲಿಂಡರ್ ಗೋಡೌನ್ ಇದ್ದುದರಿಂದ, ಬೆಂಕಿ ಅತ್ತ ವ್ಯಾಪಿಸಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಸಮಯಕ್ಕೆ ಸರಿಯಾಗಿ ಕೈಗೊಂಡ ಕ್ರಮಗಳಿಂದ ದೊಡ್ಡ ದುರಂತವೊಂದು ತಪ್ಪಿದೆ.

ಮೈಸೂರು ಸ್ಯಾಂಡಲ್ ಸೋಪ್‌ಗೆ ನವ ರೂಪ: ಕೆಎಸ್‌ಡಿಎಲ್ ಉತ್ಪನ್ನಗಳಿಗೆ ತಮನ್ನಾ ಭಾಟಿಯಾ ಬ್ರ್ಯಾಂಡ್ ಅಂಬಾಸಿಡರ್

ಬೆಂಗಳೂರು: ಶತಮಾನಕ್ಕೂ ಮೀರಿದ ಭವ್ಯ ಪರಂಪರೆ ಹೊಂದಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ–ಕೆಎಸ್‌ಡಿಎಲ್ ಸಂಸ್ಥೆ ತನ್ನ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಎರಡು ವರ್ಷಗಳ ಕಾಲ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಂಡಿದೆ. ಮಂಗಳವಾರದಿಂದ ಅವರ ಜಾಹೀರಾತು ಮತ್ತು ಪ್ರಚಾರ ಚಟುವಟಿಕೆಗಳು ಅಧಿಕೃತವಾಗಿ ಆರಂಭವಾಗಲಿವೆ.

ಈ ಹಿನ್ನೆಲೆಯಲ್ಲಿ ಮೈಸೂರು ಸ್ಯಾಂಡಲ್ ಸೋಪನ್ನು ನವ ವಿನ್ಯಾಸದೊಂದಿಗೆ ಬಿಡುಗಡೆ ಮಾಡಲಾಗುತ್ತಿದ್ದು, ಶವರ್ ಜೆಲ್, ಟಾಲ್ಕಂ ಪೌಡರ್, ಹ್ಯಾಂಡ್ ವಾಶ್, ಅಗರಬತ್ತಿ, ಸಾಂಬ್ರಾಣಿ, ಧೂಪ, ಮಿಲೆನಿಯಂ ಸೋಪ್ ಸೇರಿದಂತೆ ಸಂಸ್ಥೆಯ 57 ಉತ್ಕೃಷ್ಟ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ ಇದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಪ್ರಚಾರ ರಾಯಭಾರಿಯಾಗಿರುವ ಅವಧಿಯಲ್ಲಿ ತಮನ್ನಾ ಭಾಟಿಯಾ ಅವರು ಇದೇ ರೀತಿಯ ಖಾಸಗಿ ಕಂಪನಿಗಳ ಉತ್ಪನ್ನಗಳಿಗೆ ರೂಪದರ್ಶಿಯಾಗಿ ಕಾಣಿಸಿಕೊಳ್ಳುವುದಿಲ್ಲ ಎಂಬ ಷರತ್ತು ವಿಧಿಸಲಾಗಿದೆ. ವಿಜಯಪುರ ಮತ್ತು ಡಾಬಸ್‌ಪೇಟೆ ಕೈಗಾರಿಕಾ ಪ್ರದೇಶಗಳಲ್ಲಿ ಹೊಸ ಉತ್ಪಾದನಾ ಘಟಕಗಳನ್ನು ಆರಂಭಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ರಫ್ತು ವಹಿವಾಟನ್ನು 25–30 ಕೋಟಿ ರೂಪಾಯಿಯಿಂದ ದ್ವಿಗುಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ಇನ್ನು, ಕೆಎಸ್‌ಡಿಎಲ್ ಸಂಸ್ಥೆಯ ಅಧ್ಯಕ್ಷ ಸಿ.ಎಸ್. ಅಪ್ಪಾಜಿ ನಾಡಗೌಡ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ಅವರು, ದೆಹಲಿ ಮತ್ತು ಮಧ್ಯ ಭಾರತದ ಮಾರುಕಟ್ಟೆ ವಿಸ್ತರಣೆಯೊಂದಿಗೆ 2025–26ರ ವೇಳೆಗೆ ಸಂಸ್ಥೆಯ ವಹಿವಾಟು 2,000 ಕೋಟಿ ರೂ. ತಲುಪುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ತುಮಕೂರಿನಲ್ಲಿ ಮದುವೆ ಮಂಟಪದಲ್ಲೇ ಟ್ವಿಸ್ಟ್: ಮೊದಲ ಪತ್ನಿ ಎಂಟ್ರಿ ಬಳಿಕ ವಧುವಿಂದಲೂ ವರನ ವಿರುದ್ಧ ದೂರು

0

ತುಮಕೂರು: ಮೊದಲ ಪತ್ನಿಯ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ಮತ್ತೊಂದು ಮದುವೆಗೆ ಮುಂದಾಗಿದ್ದ ವರನಿಗೆ ಮದುವೆ ಮಂಟಪದಲ್ಲೇ ಭಾರೀ ಶಾಕ್ ಎದುರಾಗಿದೆ. ಮಂಟಪದಲ್ಲಿ ನಡೆದ ಹೈಡ್ರಾಮಾ ನೇರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

ತುಮಕೂರಿನ ಎಡೆಯೂರು ದೇವಸ್ಥಾನದ ಸಮೀಪದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಬೇಕಿತ್ತು. ಮದುವೆ ಮಂಟಪದಲ್ಲಿ ಇನ್ನೇನು ಮದುಮಗ ಹರಿಪ್ರಸಾದ್ ವಧುವಿಗೆ ತಾಳಿ ಕಟ್ಟಬೇಕಿದ್ದ ಕ್ಷಣದಲ್ಲೇ, ಆತನ ಮೊದಲ ಪತ್ನಿ ಲೇಪಾಕ್ಷಿ ಮಂಟಪಕ್ಕೆ ಎಂಟ್ರಿ ನೀಡಿ ರಂಪಾಟ ನಡೆಸಿ ಮದುವೆಯನ್ನು ನಿಲ್ಲಿಸಿದ್ದಳು.

ಈ ಘಟನೆಯ ಬಳಿಕ ಥಂಡ ಹೊಡೆದಿದ್ದ ಹರಿಪ್ರಸಾದ್‌ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಎರಡನೇ ಮದುವೆಗೆ ಹಸೆಮಣೆ ಏರಿದ್ದ ಮಂಡ್ಯ ಮೂಲದ ಯುವತಿ ಕೂಡ ಹರಿಪ್ರಸಾದ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಮೊದಲ ಮದುವೆ ವಿಚಾರವನ್ನು ಮರೆಮಾಚಿ, ಮದುವೆಗೆಂದು ಲಕ್ಷ ಲಕ್ಷ ಹಣ ಹಾಗೂ ಚಿನ್ನಾಭರಣ ಪಡೆದುಕೊಂಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಮೃತೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ವಂಚನೆ ಪ್ರಕರಣವನ್ನು ಯುವತಿಯ ಸ್ವಂತ ಜಿಲ್ಲೆ ಮಂಡ್ಯದಲ್ಲಿ ದಾಖಲಿಸುವಂತೆ ಪೊಲೀಸರು ಸೂಚಿಸಿದ್ದಾರೆ.

ವಸಂತ ನಾಯ್ಕ ಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಜ್ಯೋತಿಷಿ ಕಮಲಾಕರ ಭಟ್‌ಗೆ ಹನಿಟ್ರ್ಯಾಪ್–ಬ್ಲ್ಯಾಕ್‌ಮೇಲ್ ಆರೋಪ

0

ಕಾರವಾರ: ಸಿದ್ದಾಪುರದ ವಸಂತ ನಾಯ್ಕ ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಗಳು ಹೊರಬಿದ್ದಿವೆ. ಆರೋಪಿ ಸುಚಿತ್ರಾ, ಜ್ಯೋತಿಷಿ ಕಮಲಾಕರ ಭಟ್‌ಗೆ ಹನಿಟ್ರ್ಯಾಪ್ ಮಾಡಿ ಖಾಸಗಿ ಕ್ಷಣಗಳ ವಿಡಿಯೋಗಳ ಮೂಲಕ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು ಎಂದು ಸುಚಿತ್ರಾ ಪತಿ ಮಹೇಶ್ ನಾಯ್ಕ ಆರೋಪಿಸಿದ್ದಾರೆ.

ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಮಹೇಶ್ ನಾಯ್ಕ, ಕಮಲಾಕರ ಭಟ್ ಸಂಪರ್ಕಕ್ಕೆ ಬಂದ ಬಳಿಕ ಸುಚಿತ್ರಾ ಅವರ ಖಾಸಗಿ ಕ್ಷಣಗಳ ವಿಡಿಯೋಗಳನ್ನು ಮಾಡಿಟ್ಟುಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ. ಮಕ್ಕಳೊಂದಿಗೆ ನಾನು ನಿನ್ನ ಜೊತೆ ಬರುತ್ತೇನೆ, ನನ್ನನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ ಮರ್ಯಾದೆ ತೆಗೆಯುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಳು ಎಂದು ಆರೋಪಿಸಿದ್ದಾರೆ.

ಈ ಬ್ಲ್ಯಾಕ್‌ಮೇಲ್‌ನ ಭಯದಿಂದ ಮರ್ಯಾದೆಗೆ ಅಂಜಿ ಕಮಲಾಕರ ಭಟ್ ಸುಚಿತ್ರಾವನ್ನು ತನ್ನೊಂದಿಗೆ ಇರಿಸಿಕೊಂಡಿದ್ದ ಎಂದು ಮಹೇಶ್ ನಾಯ್ಕ ಹೇಳಿದ್ದಾರೆ. ಈ ವಿಚಾರವನ್ನು ಇತ್ತೀಚೆಗೆ ತನ್ನ ಮಗಳು ತಿಳಿಸಿದ್ದಾಳೆ ಎಂದೂ, ಭಯದಿಂದಾಗಿ ಮೊದಲು ಈ ವಿಷಯವನ್ನು ಮಗಳು ಹೇಳಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಸಂತ ನಾಯ್ಕ ಹತ್ಯೆ ಪ್ರಕರಣದಲ್ಲಿ ಹೊರಬರುತ್ತಿರುವ ಈ ಹೊಸ ಆರೋಪಗಳು ಪ್ರಕರಣದ ತನಿಖೆಗೆ ಮತ್ತೊಂದು ದಿಕ್ಕು ನೀಡುವ ಸಾಧ್ಯತೆ ಇದೆ.

ಕೆ.ಎಚ್. ಪಾಟೀಲರ ರಾಜಕಾರಣ ಯುವಕರಿಗೆ ಆದರ್ಶ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ದಿ. ಕೆ.ಎಚ್. ಪಾಟೀಲ ವೃತ್ತದಲ್ಲಿ ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಸಹಕಾರಿ ರಂಗದ ಭೀಷ್ಮ ಕೆ.ಎಚ್. ಪಾಟೀಲ ಅವರ ಪುಣ್ಯತಿಥಿಯನ್ನು ಸೋಮವಾರ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಅಕ್ಬರಸಾಬ ಬಬರ್ಚಿ, ಜಿ.ಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ, ನಗರಸಭೆ ಮಾಜಿ ಅಧ್ಯಕ್ಷೆ ರುದ್ರಮ್ಮ ಕೆರಕಲಮಟ್ಟಿ, ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಸವರಾಜ ಕಡೆಮನಿ, ತಾ.ಪಂ ಮಾಜಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಉಮರಫಾರೂಖ್ ಹುಬ್ಬಳ್ಳಿ, ಗದಗ ಜಿಲ್ಲಾ ಕೆಡಿಪಿ ಸಮಿತಿ ಸಭೆಯ ಸದಸ್ಯರಾದ ಎಸ್.ಎನ್. ಬಳ್ಳಾರಿ, ಮುಖಂಡರಾದ ವೀಣಾ ಕಟ್ನಳ್ಳಿ, ಶಾರೂಖ್ ಹುಯಿಲಗೋಳ, ಶಹಬಾಜ್ ಮುಲ್ಲಾ, ಶಂಭು ಕಾಳೆ, ಮಹಮ್ಮದ್ ಶಾಲಗಾರ, ಸರ್ಫರಾಜ್ ಬಬರ್ಚಿ, ವಿನಾಯಕ ಬಳ್ಳಾರಿ, ಸೈಯದ್‌ಖಾಲಿದ ಕೊಪ್ಪಳ, ಅನ್ವರ ನದಾಫ್, ಮಹಾಂತೇಶ ಮಡಿವಾಳರ, ಪರಪ್ಪ ಕಮತರ, ಕಮಲಾಕ್ಷಿ ಹಾದಿಮನಿ, ಯಲ್ಲಮ್ಮ ಜಡಿ, ದ್ರಾಕ್ಷಾಯಣಿ ಹಾಸಿಲ್ಕರ್, ಪೂಜಾ ಬೇವೂರ, ಮರಿಯಪ್ಪ ಸಣ್ಣತಂಗಿಯವರ, ಮಹೇಶ ಪಟ್ಟಣಶೆಟ್ಟಿ, ಜಾಕೀರ ಕುನ್ನಿಬಾವಿ, ಪರಮೇಶಪ್ಪ ಜಂತ್ಲಿ, ಕರಬಸಯ್ಯ ನಾಲ್ವಾಡಮಠ, ಮಲಿಕ್ ಸಂಗಾಪೂರ, ಉಮರ್‌ಫಾರೂಖ್ ಬಾರಿಗಿಡದ, ಅಭಿಷೇಕ, ಶಿವು ಹಾದಿಮನಿ, ಸಂತೋಷ ರಾಮೇನಹಳ್ಳಿ, ಮಹಮ್ಮದ್ ಬೆಟಗೇರಿ, ಅಜ್ಜಪ್ಪ ವಗ್ಗನ್ನವರ, ವಿರುಪಾಕ್ಷ ನಂದೆಣ್ಣವರ, ಅಹ್ಮದ್ ಖಾಜಿ, ಹುಸೇನ್ ಓಲೇಕಾರ, ಅನ್ವರ ಶಿರಹಟ್ಟಿ, ಕಾಂಗ್ರೆಸ್ ಮುಖಂಡರು, ಕೆ.ಎಚ್. ಪಾಟೀಲ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಕೆ.ಎಚ್. ಪಾಟೀಲರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಕೆ.ಎಚ್. ಪಾಟೀಲರು ರೈತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಹಲವು ಖಾತೆಗಳನ್ನು ನಿಭಾಯಿಸಿದ್ದ ಅವರು, ನೇರ ಹಾಗೂ ನಿಷ್ಠುರತೆಯಿಂದ ಗುರುತಿಸಿಕೊಂಡಿದ್ದರು. ಪ್ರತಿಯೊಬ್ಬರೂ ಕೆ.ಎಚ್. ಪಾಟೀಲರ ಆದರ್ಶವನ್ನು ಅಳವಡಿಸಿಕೊಂಡು ಮುನ್ನಡೆದರೆ ಯಶಸ್ವಿ ಹಾಗೂ ಮಾದರಿ ರಾಜಕಾರಣಿಯಾಗಲು ಸಾಧ್ಯ ಎಂದರು.

ರಾಧಿಕಾ ಮೂಡಲಗಿಗೆ ಪಿಎಚ್‌ಡಿ ಪದವಿ

0

ವಿಜಯಸಾಕ್ಷಿ ಸುದ್ದಿ, ಗದಗ: ಅನ್ವಯಿಕ ಅನುವಂಶಶಾಸ್ತ್ರ ವಿಷಯದ ಕುರಿತು ನಗರದ ರಾಧಿಕಾ ಕಿಶೋರ್ ಮೂಡಲಗಿ ಅವರು `ಮಾಲಿಕ್ಯುಲರ್ ಕ್ಯಾರಕ್ಟರೈಜೇಷನ್ ಆಂಡ್ ಅ ಪ್ರೈಮರ್ ಸೆಲೆಕ್ಷನ್ ಫಾರ್ ಐಡೆಂಟಿಫಿಕೇಶನ್ ಆಫ್ ಅಸಿನೆಟೋಬ್ಯಾಕ್ಟರ್ ಬೌಮನ್ನಿ’ ಪ್ರಬಂಧ ಮಂಡಿಸಿದ ಹಿನ್ನೆಲೆಯಲ್ಲಿ ಧಾರವಾಡದ ಕರ್ನಾಟಕ ವಿವಿಯು ಡಾಕ್ಟರ್ ಆಫ್ ಫಿಲಾಸಾಫಿ ಪಿಎಚ್‌ಡಿ ಪದವಿ ಘೋಷಿಸಿದೆ.

ಕರ್ನಾಟಕ ವಿವಿಯ ಸ್ನಾತಕೋತ್ತರ ಅನ್ವಯಿಕ ಅನುವಂಶಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸುರೇಶ ಬಿ. ಅರಕೇರಾ ಅವರು ಮಾರ್ಗದರ್ಶನ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಕಂದಾಯ ಇಲಾಖೆ ಸಂಪೂರ್ಣ ಡಿಜಿಟಲೀಕರಣಕ್ಕೆ ಸರ್ಕಾರ ಬದ್ಧ: ಸಚಿವ ಕೃಷ್ಣ ಬೈರೇಗೌಡ

0

ವಿಜಯಸಾಕ್ಷಿ ಸುದ್ದಿ, ಗದಗ: ಕಂದಾಯ ಇಲಾಖೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿ ಸಾರ್ವಜನಿಕರಿಗೆ ಪಾರದರ್ಶಕ ಸೇವೆ ಒದಗಿಸುವುದು ಸರ್ಕಾರದ ಗುರಿಯಾಗಿದ್ದು, ಇದರಿಂದ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬೀಳಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ತಹಸೀಲ್ದಾರ್ ಕಚೇರಿಗಳಲ್ಲಿ 10,774 ಅವಧಿ ಮೀರಿದ ಪ್ರಕರಣಗಳಿದ್ದವು. ವಿಶೇಷ ಅಭಿಯಾನ ಹಮ್ಮಿಕೊಂಡು ಅವುಗಳನ್ನು ವಿಲೇವಾರಿ ಮಾಡಲಾಗಿದ್ದು, ಸದ್ಯ 478 ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ. ಅವುಗಳನ್ನೂ ಶೀಘ್ರ ಇತ್ಯರ್ಥಗೊಳಿಸಲು ಸೂಚನೆ ನೀಡಲಾಗಿದೆ ಎಂದರು.

ಎ.ಸಿ ನ್ಯಾಯಾಲಯಗಳಲ್ಲಿ 73,624 ಅವಧಿ ಮೀರಿದ ಪ್ರಕರಣಗಳಿದ್ದರೆ, ಈಗ ಅವು 11,605ಕ್ಕೆ ಇಳಿದಿವೆ. ಐದು ವರ್ಷಕ್ಕಿಂತ ಹೆಚ್ಚು ಕಾಲ ಬಾಕಿ ಇದ್ದ 32,782 ಪ್ರಕರಣಗಳಲ್ಲಿ ಕೇವಲ 3,155 ಮಾತ್ರ ಉಳಿದಿದ್ದು, ಮುಂದಿನ ಎರಡು ತಿಂಗಳಲ್ಲಿ ಇವುಗಳನ್ನು ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಬಗರ್ ಹುಕುಂ ರೈತರ ಜಮೀನುಗಳ ಸರ್ವೇ ಮತ್ತು ಆರ್.ಟಿ.ಸಿ ಸಮಸ್ಯೆ ನಿವಾರಣೆಗೆ `ನನ್ನ ಭೂಮಿ ಅಭಿಯಾನ’ ಆರಂಭಿಸಲಾಗಿದೆ. 2013-18ರ ಅವಧಿಯಲ್ಲಿ 5,842 ಪೋಡಿ ದುರಸ್ತಿ ಆಗಿದ್ದರೆ, 2018-23ರಲ್ಲಿ 8,500 ಪ್ರಕರಣಗಳು ವಿಲೇವಾರಿಯಾಗಿವೆ. ಜನವರಿ 2025ರಿಂದ ಆರಂಭವಾದ ಅಭಿಯಾನದಡಿ ಸದ್ಯ ರಾಜ್ಯಾದ್ಯಂತ 1,93,615 ಪ್ರಕರಣಗಳಲ್ಲಿ ಸರ್ವೇ ಮತ್ತು ಪೋಡಿ ದುರಸ್ತಿ ನಡೆಯುತ್ತಿದೆ. ಅಧಿಕಾರಿಗಳು ಮನೆಬಾಗಿಲಿಗೆ ತೆರಳಿ ಸೇವೆ ನೀಡುತ್ತಿರುವುದು ಸರ್ಕಾರದ ಬದ್ಧತೆಯ ಕಾರ್ಯ ಎಂದರು.

ತಾಂಡಾ ಹಾಗೂ ಹಟ್ಟಿಗಳ ದಾಖಲೆ ರಹಿತ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕ್ರಮದಡಿ ಹಿಂದಿನ ಆರು ವರ್ಷಗಳಲ್ಲಿ ಒಂದು ಲಕ್ಷ ಹಕ್ಕುಪತ್ರ ವಿತರಿಸಲಾಗಿತ್ತು. ನಮ್ಮ ಸರ್ಕಾರದ ಎರಡೂವರೆ ವರ್ಷದ ಅವಧಿಯಲ್ಲಿ 1.10 ಲಕ್ಷ ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಫೆ. 14ರಂದು ಹಾವೇರಿಯಲ್ಲಿ ಸಮಾವೇಶ ನಡೆಸಿ ಇದೇ ಸಂಖ್ಯೆಯ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಮೃತರ ಹೆಸರಿನಲ್ಲಿ ಉಳಿದಿದ್ದ 49 ಲಕ್ಷ ಜಮೀನುಗಳನ್ನು ಗುರುತಿಸಿ ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ 12 ಲಕ್ಷ ಮೂಲ ವಾರಸುದಾರರಿಗೆ ಜಮೀನು ಹಸ್ತಾಂತರಿಸಲಾಗಿದೆ. ಗದಗ ಜಿಲ್ಲೆಯಲ್ಲಿ ಇಂತಹ 50 ಸಾವಿರ ಪ್ರಕರಣಗಳಿದ್ದು, ಸದ್ಯ 12 ಸಾವಿರ ಮಾತ್ರ ಬಾಕಿ ಉಳಿದಿವೆ. ಗ್ರಾಮ ಲೆಕ್ಕಾಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದು, ಅವರಿಗೆ ಪ್ರೋತ್ಸಾಹಧನವಾಗಿ 5 ಕೋಟಿ ರೂ. ನೀಡಲು ಸರ್ಕಾರ ತೀರ್ಮಾನಿಸಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ಉಪಸ್ಥಿತರಿದ್ದರು.

ಹಳೆ ದಾಖಲೆಗಳ ನಕಲಿ ತಡೆಗಟ್ಟಲು `ಭೂಸುರಕ್ಷಾ’ ಯೋಜನೆಯಡಿ 64 ಲಕ್ಷಕ್ಕೂ ಹೆಚ್ಚು ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಸಾರ್ವಜನಿಕರು ಆನ್‌ಲೈನ್‌ನಲ್ಲೇ ಕಂದಾಯ ದಾಖಲೆಗಳನ್ನು ಪಡೆಯುವ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಭೂಮಿಯ ಮಾಲಿಕತ್ವಕ್ಕೆ ಗ್ಯಾರಂಟಿ ನೀಡುವ ಉದ್ದೇಶದಿಂದ ಯೋಜನೆ ಜಾರಿಗೆ ತರಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳಿಗೆ 5 ಸಾವಿರ ಲ್ಯಾಪ್‌ಟಾಪ್‌ಗಳನ್ನು ವಿತರಿಸಿದ್ದು, ಅತ್ಯಾಧುನಿಕ ಸರ್ವೇ ಉಪಕರಣಗಳನ್ನು ಕೂಡ ಒದಗಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ವಿವರಿಸಿದರು.

ಮತದಾರರ ಮ್ಯಾಪಿಂಗ್ ಕಾರ್ಯ ಪರಿಶೀಲನೆ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಸೋಮವಾರ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ವಾರ್ಡ್ ನಂ. 3 ಮತ್ತು 4ರ ಮಡ್ಡಿಗೇರಿ ಓಣಿ ಮತ್ತು ಉಳ್ಳಾಗಡ್ಡಿ ಓಣಿಯಲ್ಲಿ ಮತದಾರರ ಮ್ಯಾಪಿಂಗ್ ಕಾರ್ಯವನ್ನು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಹಾಗೂ ಶಿರಹಟ್ಟಿ ಮತದಾರರ ನೋಂದಣಿ ಅಧಿಕಾರಿ ಡಾ. ನಂದಾ ಹಣಬರಟ್ಟಿ ಮತ್ತು ತಹಸೀಲ್ದಾರ ಕೆ. ರಾಘವೇಂದ್ರ ರಾವು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ, ಮತದಾರರ ಮ್ಯಾಪಿಂಗ್ ಹಾಗೂ ಪ್ರೋಜಿನಿ ಮ್ಯಾಪಿಂಗ್ ಮಾಡುವ ಕೆಲಸ ಪ್ರಗತಿಯಲ್ಲಿದ್ದು, ಎಲ್ಲ ಮತದಾರರು ತಮ್ಮ 2002ರ ಮತದಾರರ ಪಟ್ಟಿಯ ಸಂಖ್ಯೆ, ಕ್ರಮ ಸಂಖ್ಯೆ ಹಾಗೂ ಮದುವೆಯಾಗಿ ಬಂದ ಮಹಿಳೆಯರು ತಮ್ಮ ತಂದೆ-ತಾಯಿ 2002ರಲ್ಲಿ ಇರುವ ಭಾಗದ ಸಂಖ್ಯೆ, ಕ್ರಮ ಸಂಖ್ಯೆಯನ್ನು ತಮ್ಮ ವ್ಯಾಪ್ತಿಯ ಬಿಎಲ್‌ಓ ಅವರಿಗೆ ಅಥವಾ ಗ್ರಾಮ ಆಡಳಿತ ಅಧಿಕಾರಿಗಳಿಗೆ ನೀಡಿ ತಮ್ಮ ಮ್ಯಾಪಿಂಗ್ ಆದ ಬಗ್ಗೆ ಪರಿಶೀಲನೆ ಮಾಡಬೇಕೆಂದು ಹೇಳಿದರು.

error: Content is protected !!