ಲಕ್ಷ್ಮೇಶ್ವರ: ಕಳೆದ ಎರಡು-ಮೂರು ತಿಂಗಳಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ದೇಶದ ಮೇಲೂ ಬೀಳತೊಡಗಿದ್ದು, ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆಯ ನಡುವೆಯೇ ಇದೀಗ ಡಿಸೇಲ್ ಕೊರತೆ ರೈತರನ್ನು ಕಂಗಾಲಾಗಿಸಿದೆ.
ಪಟ್ಟಣದಲ್ಲಿ ಶನಿವಾರದಿಂದಲೇ ಪೆಟ್ರೋಲ್ ಬಂಕ್‌ಗಳ ಮುಂದೆ ಡಿಸೇಲ್‌ಗಾಗಿ ರೈತರು ಮುಗಿ ಬಿದ್ದ ದೃಶ್ಯ ಕಂಡುಬಂದಿದ್ದು, ಬಹುತೇಕ ಬಂಕ್‌ಗಳಲ್ಲಿ ಡಿಸೇಲ್ ಸಂಪೂರ್ಣ ಖಾಲಿಯಾಗಿದೆ. “ಮುಂದಿನ ಟ್ಯಾಂಕರ್ ಬರುವವರೆಗೂ ಕಾಯಿರಿ” ಎಂಬ ಉತ್ತರ ಕೇಳಿ ರೈತರು ನಿರಾಶೆಯಿಂದ ಹಿಂದಿರುಗುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಡೆ ಡಿಸೇಲ್ ಹಾಹಾಕಾರ ಉಂಟಾಗಿದೆ.
ಈ ಬಾರಿ ಮುಂಗಾರು ಪೂರ್ವ ಮಳೆ ಉತ್ತಮವಾಗಿರುವ ಹಿನ್ನೆಲೆಯಲ್ಲಿ ರೈತರು ಭೂಮಿ ಸಜ್ಜುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಹಿಂದೆ ಎತ್ತುಗಳ ಮೂಲಕ ಉಳುಮೆ ಮಾಡುತ್ತಿದ್ದ ಪರಿಸ್ಥಿತಿ ಈಗಿಲ್ಲ. ಬಹುತೇಕ ರೈತರು ಟ್ರ್ಯಾಕ್ಟರ್‌ಗಳನ್ನೇ ಅವಲಂಬಿಸಿದ್ದಾರೆ. ಆದರೆ ಟ್ರ್ಯಾಕ್ಟರ್‌ಗಳಿಗೆ ಅಗತ್ಯವಾದ ಡಿಸೇಲ್ ಸಿಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶನಿವಾರ ಹಾಗೂ ಭಾನುವಾರ ಡಿಸೇಲ್ ಲಭ್ಯವಿದ್ದ ಪೆಟ್ರೋಲ್ ಬಂಕ್‌ಗಳ ಮುಂದೆ ಟ್ರ್ಯಾಕ್ಟರ್‌ಗಳು, ಬೈಕ್‌ಗಳು, ಆಟೋಗಳು ಮತ್ತು ಕ್ಯಾನ್‌ಗಳೊಂದಿಗೆ ಜನರು ಸರದಿ ಸಾಲಿನಲ್ಲಿ ನಿಂತ ದೃಶ್ಯ ಸಾಮಾನ್ಯವಾಗಿತ್ತು. ಕೆಲವೆಡೆ ಟ್ರ್ಯಾಕ್ಟರ್‌ಗಳ ಸಾಲು ಕಿಲೋಮೀಟರ್‌ಗಳವರೆಗೆ ವಿಸ್ತರಿಸಿತ್ತು.
ಪಟ್ಟಣದಲ್ಲಿ ಸುಮಾರು ೮ ರಿಂದ ೧೦ ಪೆಟ್ರೋಲ್ ಬಂಕ್‌ಗಳಿದ್ದು, ಭಾನುವಾರ ಮಧ್ಯಾಹ್ನದೊಳಗೆ ಬಹುತೇಕ ಎಲ್ಲ ಬಂಕ್‌ಗಳಲ್ಲೂ ಡಿಸೇಲ್ ಖಾಲಿಯಾಗಿದೆ. ಶನಿವಾರ ಸಂಜೆದಿಂದ ಭಾನುವಾರ ಮಧ್ಯಾಹ್ನದವರೆಗೆ ಸಾವಿರಾರು ಲೀಟರ್ ಡಿಸೇಲ್ ಮಾರಾಟವಾಗಿದೆ ಎಂದು ತಿಳಿದುಬಂದಿದೆ.
ಕೆಲವು ಬಂಕ್‌ಗಳಲ್ಲಿ ಶನಿವಾರವೇ ಡಿಸೇಲ್ ಖಾಲಿಯಾಗಿದ್ದರೆ, ಭಾನುವಾರ ಮುಂಜಾನೆಯಿಂದಲೇ ಮತ್ತೆ ಉದ್ದನೆಯ ಕ್ಯೂಗಳು ಆರಂಭವಾಗಿದ್ದವು. ನೂರಾರು ಕ್ಯಾನ್‌ಗಳೊಂದಿಗೆ ಜನರು ಬಂಕ್ ಮುಂದೆ ಸಾಲಿನಲ್ಲಿ ನಿಂತಿದ್ದು, ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮಧ್ಯಾಹ್ನ ವೇಳೆಗೆ ಡಿಸೇಲ್ ಸಂಪೂರ್ಣ ಖಾಲಿಯಾಗುತ್ತಿದ್ದಂತೆ ಹಲವರು ಬರಿಗೈಯಲ್ಲಿ ಮನೆಗೆ ಮರಳಬೇಕಾಯಿತು. ಕೆಲ ಬಂಕ್‌ಗಳಲ್ಲಿ ಕ್ಯಾನ್‌ಗಳಿಗೆ ಕೇವಲ ೨ ಸಾವಿರ ರೂ. ಮೌಲ್ಯದ ಡಿಸೇಲ್ ಮಾತ್ರ ನೀಡಲಾಗುತ್ತಿತ್ತು. ಹೀಗಾಗಿ ರೈತರು ೩-೪ ಕ್ಯಾನ್‌ಗಳನ್ನು ಹೊತ್ತು ತರುವ ದೃಶ್ಯ ಕಂಡುಬಂತು.
ಲಕ್ಷ್ಮೇಶ್ವರ ಪಟ್ಟಣ ಮಾತ್ರವಲ್ಲದೆ ತಾಲೂಕಿನ ಶಿಗ್ಲಿ, ಸೂರಣಗಿ, ಗೊಜನೂರು, ಬಾಲೇಹೊಸೂರು, ಮಾಡಳ್ಳಿ, ಯಳವತ್ತಿ ಸೇರಿದಂತೆ ಅನೇಕ ಗ್ರಾಮಗಳಲ್ಲೂ ಡಿಸೇಲ್ ಕೊರತೆ ತೀವ್ರವಾಗಿದೆ. ಈ ನಡುವೆ ಕೆಲವರು ಡಿಸೇಲ್ ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.
*ಬಿತ್ತನೆ ಹೊತ್ತಲ್ಲೇ ಇಂಧನ ಸಂಕಷ್ಟ*
ಈಗಾಗಲೇ ಮಳೆಯು ಪೂರಕವಾಗಿ ಸುರಿಯುತ್ತಿರುವ ಹಿನ್ನೆಲೆ ರೈತರು ಹರಗುವುದು ಸೇರಿದಂತೆ ಹೆಸರು, ಶೇಂಗಾ, ಸೋಯಾಬಿನ್, ಉದ್ದು ಬೆಳೆಗಳ ಬಿತ್ತನೆಗೆ ಸಜ್ಜಾಗುತ್ತಿದ್ದಾರೆ. ಬಹುತೇಕ ರೈತರು ಭೂಮಿ ಹರಗಲು, ಬಿತ್ತನೆ ಮಾಡಲು ಹಾಗೂ ಎಡೆ ಹೊಡೆಯಲು ಟ್ರ್ಯಾಕ್ಟರ್‌ಗಳನ್ನೇ ಅವಲಂಬಿಸಿದ್ದಾರೆ.
ಇಂತಹ ಸಮಯದಲ್ಲೇ ಡಿಸೇಲ್ ಕೊರತೆ ಎದುರಾಗಿರುವುದು ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇದೇ ತಿಂಗಳಿಂದ ಬಿತ್ತನೆ ಕಾರ್ಯ ಚುರುಕುಗೊಳ್ಳಲಿರುವ ಹಿನ್ನೆಲೆ ಡಿಸೇಲ್ ಸಮಸ್ಯೆ ಮುಂದುವರಿದರೆ ಕೃಷಿ ಚಟುವಟಿಕೆಗಳ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
“ರೈತರು ಬಿತ್ತನೆ ಬೀಜ, ಗೊಬ್ಬರ ಖರೀದಿ, ಬೆಳೆದ ಫಸಲು ಮಾರಾಟ, ಹಣ ಪಡೆಯುವುದು, ಬೆಳೆಹಾನಿ ಹಾಗೂ ವಿಮೆ ಪರಿಹಾರಕ್ಕಾಗಿ ಈಗಾಗಲೇ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೃಷಿ ಚಟುವಟಿಕೆಗಳು ಭರದಿಂದ ಸಾಗುತ್ತಿರುವ ಸಂದರ್ಭದಲ್ಲಿ ಇದೀಗ ಡಿಸೇಲ್‌ಗಾಗಿ ಹಗಲು-ರಾತ್ರಿ ಕಾಯುವ ಪರಿಸ್ಥಿತಿ ಬಂದಿದೆ. ಒಟ್ಟಿನಲ್ಲಿ ರೈತರ ಬದುಕು ಹೋರಾಟದಿಂದಲೇ ಕೂಡಿದೆ. ಬಿತ್ತನೆ ಹಂಗಾಮಿನಲ್ಲಿ ಒಂದು ದಿನ ವ್ಯತ್ಯಯವಾದರೂ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ. ಸರ್ಕಾರ ರೈತರಿಗೆ ಸಮರ್ಪಕವಾಗಿ ಡಿಸೇಲ್ ಪೂರೈಕೆ ಆಗುವಂತೆ ತಕ್ಷಣ ಕ್ರಮ ಕೈಗೊಳ್ಳಬೇಕು.”
— ನಂದೀಶ ಬಂಡಿವಾಡ, ರೈತ

