Home Blog Page 55

ಮುಂದಿನ 24 ಗಂಟೆಗಳಲ್ಲಿ ಕರಾವಳಿ ಸೇರಿ ಈ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ: ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಹಾಗೂ ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯಂತೆ, ಮುಂದಿನ 24 ಗಂಟೆಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಹಾಗೂ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆಯ ಅಬ್ಬರ ಮುಂದುವರಿಯಲಿದೆ.

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗಗಳಲ್ಲಿ ಮಳೆಯೊಂದಿಗೆ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ.

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಲಘುವಿನಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಈ ಭಾಗಗಳಲ್ಲಿಯೂ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ.

ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಿದ್ದರೂ, ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ ಕೆಲವೆಡೆ ಲಘು ಮಳೆಯೊಂದಿಗೆ ಬಲವಾದ ಗಾಳಿ ಬೀಸುವ ನಿರೀಕ್ಷೆಯಿದೆ.

ಇದೇ ವೇಳೆ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

 

ದಸರಾದಲ್ಲಿ ಕಂಬಳ ಆಯೋಜನೆಗೆ ಸರ್ಕಾರ ಚಿಂತನೆ: ಯದುವೀರ್-ಪ್ರತಾಪ್ ಸಿಂಹ ಆಕ್ಷೇಪ

0

ಬೆಂಗಳೂರು/ಮೈಸೂರು: ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಕರಾವಳಿಯ ಕಂಬಳ ಕ್ರೀಡೆಯನ್ನು ಸೇರಿಸುವ ಪ್ರಸ್ತಾವ ವಿವಾದಕ್ಕೆ ಕಾರಣವಾಗಿದೆ. ಸರ್ಕಾರ ಈ ಕುರಿತು ಚಿಂತನೆ ನಡೆಸುತ್ತಿರುವ ಬೆನ್ನಲ್ಲೇ, ಕಂಬಳ ಪರ ಮತ್ತು ವಿರೋಧದ ಧ್ವನಿಗಳು ಜೋರಾಗಿವೆ.

ವಿಧಾನಸೌಧದಲ್ಲಿ ನಡೆದ ದಸರಾ ಸಿದ್ಧತಾ ಸಭೆಯಲ್ಲಿ ಕಂಬಳ ಆಯೋಜನೆ ವಿಷಯ ಪ್ರಸ್ತಾಪವಾಗಿದ್ದು, ಅಂತಿಮ ನಿರ್ಧಾರವನ್ನು ಮುಂದಿನ ಸಭೆಗೆ ಮುಂದೂಡಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಲ್ಲಾ ಅಭಿಪ್ರಾಯಗಳನ್ನು ಪರಿಗಣಿಸಿ ಬಳಿಕ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಪುತ್ತೂರು ಶಾಸಕ ಅಶೋಕ್ ರೈ, ಬೆಂಗಳೂರಿನ ಬಳಿಕ ಮೈಸೂರು ದಸರಾದಲ್ಲೂ ಕಂಬಳ ಆಯೋಜಿಸುವ ಮೂಲಕ ಕರಾವಳಿಯ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶವಿದೆ ಎಂದಿದ್ದಾರೆ. ಕಾರ್ಯಕ್ರಮಕ್ಕಾಗಿ 5ರಿಂದ 6 ಕೋಟಿ ರೂ. ಅಗತ್ಯವಿದ್ದು, ಜುಲೈ 15ರಿಂದಲೇ ಸಿದ್ಧತೆ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಆದರೆ ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್, ದಸರಾದ ಪರಂಪರೆಯಲ್ಲಿ ಕಂಬಳ ಸೇರಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕರಾವಳಿಯ ಹೆಮ್ಮೆಯ ಕಂಬಳವನ್ನು ಅದರ ಮೂಲ ನೆಲೆಯಲ್ಲೇ ವಿಜೃಂಭಣೆಯಿಂದ ನಡೆಸಬೇಕು ಎಂಬುದು ಅವರ ಅಭಿಪ್ರಾಯ.

ಮಾಜಿ ಸಂಸದ ಪ್ರತಾಪ್ ಸಿಂಹ ಸಹ ಇದೇ ನಿಲುವು ವ್ಯಕ್ತಪಡಿಸಿದ್ದು, ದಸರಾ ತನ್ನದೇ ಆದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಗುರುತನ್ನು ಹೊಂದಿದೆ. ಕಂಬಳದಂತಹ ಬೇರೆ ಆಚರಣೆಗಳನ್ನು ದಸರಾ ಕಾರ್ಯಕ್ರಮದೊಳಗೆ ಸೇರಿಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.

ಸರ್ಕಾರ ಅಂತಿಮ ತೀರ್ಮಾನವನ್ನು ಇನ್ನೂ ಪ್ರಕಟಿಸದಿದ್ದರೂ, ದಸರಾದಲ್ಲಿ ಕಂಬಳ ಆಯೋಜನೆ ಕುರಿತ ಚರ್ಚೆ ಈಗಾಗಲೇ ರಾಜಕೀಯ ಹಾಗೂ ಸಾಂಸ್ಕೃತಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ವಿಜಯ್ ಬಳಿಕ ಕೊಲ್ಲೂರಿಗೆ ಕೇರಳ ಸಿಎಂ ಸತೀಶನ್ ಭೇಟಿ: ಮೂಕಾಂಬಿಕಾ ದರ್ಶನಕ್ಕೆ ರಾಜಕೀಯ ಮಹತ್ವ

0

ಉಡುಪಿ: ತಮಿಳುನಾಡಿನ ರಾಜಕೀಯ ನಾಯಕ ವಿಜಯ್ ಭೇಟಿ ಬಳಿಕ ಇದೀಗ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರದ ಅವರ ಮೊದಲ ಕ್ಷೇತ್ರ ಭೇಟಿ ಇದಾಗಿದ್ದು, ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

ಬೆಳಗ್ಗೆಯೇ ದೇವಸ್ಥಾನಕ್ಕೆ ಆಗಮಿಸಿದ ಸತೀಶನ್, ವಿಶೇಷ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆದರು. ದೇವಸ್ಥಾನದ ಆಡಳಿತ ಮಂಡಳಿ ಅವರನ್ನು ಸನ್ಮಾನಿಸಿ ಗೌರವಿಸಿತು.

ಅವರ ಭೇಟಿಯ ಹಿನ್ನೆಲೆಯಲ್ಲಿ ಕೊಲ್ಲೂರು ಪ್ರದೇಶದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು. Z-ಪ್ಲಸ್ ಭದ್ರತೆಯಲ್ಲಿ ಆಗಮಿಸಿದ ಮುಖ್ಯಮಂತ್ರಿಯವರ ಸಂಚಾರಕ್ಕೆ ಅಗತ್ಯ ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಪೂಜೆ ಬಳಿಕ ಅವರು ಮಂಗಳೂರಿಗೆ ತೆರಳಿ ಅಲ್ಲಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನವು ದಕ್ಷಿಣ ಭಾರತದ ಹಲವು ರಾಜಕೀಯ ನಾಯಕರ ಆಧ್ಯಾತ್ಮಿಕ ನಂಬಿಕೆಯ ಕೇಂದ್ರವಾಗಿದೆ. ಚುನಾವಣೆ, ಅಧಿಕಾರ ಸ್ವೀಕಾರ ಅಥವಾ ಮಹತ್ವದ ರಾಜಕೀಯ ನಿರ್ಧಾರಗಳ ಮುನ್ನ ಅನೇಕ ನಾಯಕರು ದೇವಿಯ ದರ್ಶನ ಪಡೆಯುವುದು ಸಾಮಾನ್ಯ. ಇತ್ತೀಚೆಗೆ ವಿಜಯ್ ಭೇಟಿ ನೀಡಿದ್ದ ಬೆನ್ನಲ್ಲೇ ಕೇರಳ ಮುಖ್ಯಮಂತ್ರಿ ಸತೀಶನ್ ಆಗಮನವೂ ರಾಜಕೀಯ ವಲಯದಲ್ಲಿ ವಿಶೇಷ ಚರ್ಚೆಗೆ ಕಾರಣವಾಗಿದೆ.

ಪುರುಷರಿಗಿಂತ ಮಹಿಳೆಯರಲ್ಲೇ ಥೈರಾಯ್ಡ್‌ ಸಮಸ್ಯೆ ಏಕೆ ಹೆಚ್ಚು? ವೈದ್ಯರು ಹೇಳುವ ಪ್ರಮುಖ ಕಾರಣಗಳು ಇಲ್ಲಿವೆ

0

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿ ಪರಿಣಮಿಸಿದೆ. ಆರೋಗ್ಯ ತಜ್ಞರ ಪ್ರಕಾರ, ಪುರುಷರಿಗಿಂತ ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ ಸುಮಾರು 5ರಿಂದ 8 ಪಟ್ಟು ಹೆಚ್ಚು ಕಂಡುಬರುತ್ತದೆ.

ಹಠಾತ್ ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು, ನಿರಂತರ ಆಯಾಸ, ಕೂದಲು ಉದುರುವುದು ಹಾಗೂ ಮಾಸಿಕ ಚಕ್ರದಲ್ಲಿ ಅಸಮತೋಲನದಂತಹ ಲಕ್ಷಣಗಳು ಕಂಡುಬಂದರೆ ಥೈರಾಯ್ಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಥೈರಾಯ್ಡ್ ಗ್ರಂಥಿಯು ಕತ್ತಿನ ಮುಂಭಾಗದಲ್ಲಿರುವ ಚಿಟ್ಟೆಯಾಕಾರದ ಅಂಗವಾಗಿದ್ದು, ದೇಹದ ಚಯಾಪಚಯ ಕ್ರಿಯೆ, ಶಕ್ತಿ ಉತ್ಪಾದನೆ ಮತ್ತು ಹಲವು ಪ್ರಮುಖ ದೈಹಿಕ ಕಾರ್ಯಗಳನ್ನು ನಿಯಂತ್ರಿಸುವ ಹಾರ್ಮೋನ್‌ಗಳನ್ನು ಉತ್ಪಾದಿಸುತ್ತದೆ. ಈ ಗ್ರಂಥಿಯ ಕಾರ್ಯದಲ್ಲಿ ವ್ಯತ್ಯಯ ಉಂಟಾದರೆ ದೇಹದ ಅನೇಕ ಅಂಗಾಂಗಗಳ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀಳಬಹುದು.

ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ ಹೆಚ್ಚಾಗಲು ಕಾರಣವೇನು?

ತಜ್ಞರ ಪ್ರಕಾರ, ಮಹಿಳೆಯರಲ್ಲಿ ರೋಗನಿರೋಧಕ ವ್ಯವಸ್ಥೆಯ ಕಾರ್ಯವೈಖರಿ ಹಾಗೂ ಹಾರ್ಮೋನ್ ಬದಲಾವಣೆಗಳು ಥೈರಾಯ್ಡ್ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ.

ಹಶಿಮೋಟೋಸ್ ಥೈರಾಯಿಡಿಟಿಸ್ ಹಾಗೂ ಗ್ರೇವ್ಸ್ ರೋಗದಂತಹ ಆಟೋಇಮ್ಯೂನ್ ಕಾಯಿಲೆಗಳು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಜೊತೆಗೆ ಗರ್ಭಧಾರಣೆ, ಹೆರಿಗೆಯ ನಂತರದ ಅವಧಿ ಮತ್ತು ಮೆನೋಪಾಸ್ ಸಮಯದಲ್ಲಿ ಉಂಟಾಗುವ ಹಾರ್ಮೋನ್ ಬದಲಾವಣೆಗಳು ಥೈರಾಯ್ಡ್ ಗ್ರಂಥಿಯ ಕಾರ್ಯದ ಮೇಲೆ ಪರಿಣಾಮ ಬೀರಬಹುದು.

ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

  • ನಿರಂತರ ಆಯಾಸ ಮತ್ತು ದೌರ್ಬಲ್ಯ
  • ಹಠಾತ್ ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು
  • ಕೂದಲು ಉದುರುವುದು ಹಾಗೂ ಚರ್ಮ ಒಣಗುವುದು
  • ಮಾಸಿಕ ಚಕ್ರದಲ್ಲಿ ಅಸಮತೋಲನ
  • ಗರ್ಭಧಾರಣೆಯಲ್ಲಿ ತೊಂದರೆ
  • ಮನಸ್ಥಿತಿಯಲ್ಲಿ ಆಗಾಗ ಬದಲಾವಣೆ
  • ಕುತ್ತಿಗೆಯಲ್ಲಿ ಊತ ಕಾಣಿಸಿಕೊಳ್ಳುವುದು

ವಿಶೇಷವಾಗಿ ಮಧ್ಯವಯಸ್ಸು ಹಾಗೂ ವಯಸ್ಸಾದ ಮಹಿಳೆಯರಲ್ಲಿ ಈ ಲಕ್ಷಣಗಳನ್ನು ಕೆಲವೊಮ್ಮೆ ಮೆನೋಪಾಸ್‌ನ ಭಾಗವೆಂದು ತಪ್ಪಾಗಿ ಅರ್ಥೈಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇಂತಹ ಲಕ್ಷಣಗಳು ನಿರಂತರವಾಗಿ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಗತ್ಯ.

ಥೈರಾಯ್ಡ್ ಸಮಸ್ಯೆಯನ್ನು ನಿಯಂತ್ರಿಸುವುದು ಹೇಗೆ?

ಆರಂಭಿಕ ಹಂತದಲ್ಲೇ ಥೈರಾಯ್ಡ್ ಸಮಸ್ಯೆಯನ್ನು ಪತ್ತೆಹಚ್ಚಿದರೆ ಔಷಧೋಪಚಾರ ಹಾಗೂ ನಿಯಮಿತ ವೈದ್ಯಕೀಯ ತಪಾಸಣೆಯ ಮೂಲಕ ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಸಮತೋಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಆರೋಗ್ಯಕರ ಜೀವನಶೈಲಿ ಹಾಗೂ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುವುದು ಉತ್ತಮ.

ಆರೋಗ್ಯ ತಜ್ಞರ ಪ್ರಕಾರ, ಥೈರಾಯ್ಡ್‌ಗೆ ಸಂಬಂಧಿಸಿದ ಯಾವುದೇ ಲಕ್ಷಣಗಳನ್ನು ನಿರ್ಲಕ್ಷಿಸದೆ ಸಮಯಕ್ಕೆ ಸರಿಯಾಗಿ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಸಮಸ್ಯೆಯನ್ನು ಆರಂಭದಲ್ಲೇ ಗುರುತಿಸಿ, ಗಂಭೀರ ಆರೋಗ್ಯ ತೊಂದರೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.

18 ನಗರ, 400 ಶಾಲೆ, 5 ಲಕ್ಷ ವಿದ್ಯಾರ್ಥಿಗಳು: ‘ರಾಮಾಯಣ’ ಚಿತ್ರದ ಮೆಗಾ ಪ್ರಚಾರಕ್ಕೆ ಭರ್ಜರಿ ಚಾಲನೆ

ಮುಂಬೈ: ‘ರಾಮಾಯಣ’ ಚಿತ್ರದ ಬಿಡುಗಡೆಗೂ ಮುನ್ನವೇ ದೇಶಾದ್ಯಂತ ಭಾರೀ ಮಟ್ಟದ ಶಾಲಾ ಪ್ರಚಾರ ಅಭಿಯಾನಕ್ಕೆ ಚಿತ್ರತಂಡ ಚಾಲನೆ ನೀಡಿದೆ. ಜುಲೈ 9ರಿಂದ ಆರಂಭವಾದ ಈ ಅಭಿಯಾನವು 18 ನಗರಗಳ 400ಕ್ಕೂ ಹೆಚ್ಚು ಶಾಲೆಗಳನ್ನು ತಲುಪಲಿದ್ದು, ಐದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಾಮಾಯಣದ ಕಥೆ ಮತ್ತು ಅದರ ಸಾಂಸ್ಕೃತಿಕ ಮೌಲ್ಯಗಳನ್ನು ಪರಿಚಯಿಸುವ ಗುರಿ ಹೊಂದಿದೆ.

ಶಾಲಾ ವಿದ್ಯಾರ್ಥಿಗಳನ್ನು ಕೇಂದ್ರವಾಗಿಟ್ಟುಕೊಂಡು ರೂಪಿಸಿರುವ ಈ ಕಾರ್ಯಕ್ರಮದಲ್ಲಿ ರೇಖಾಚಿತ್ರ ಸ್ಪರ್ಧೆ, ಕ್ವಿಜ್, ಸಂವಾದ ಸೇರಿದಂತೆ ಹಲವು ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಇದರ ಮೂಲಕ ರಾಮಾಯಣವನ್ನು ಕೇವಲ ಪೌರಾಣಿಕ ಕಥೆಯಾಗಿ ಅಲ್ಲದೆ, ಜೀವನ ಮೌಲ್ಯಗಳನ್ನು ಸಾರುವ ಶಾಶ್ವತ ಕೃತಿಯಾಗಿ ಪರಿಚಯಿಸುವ ಪ್ರಯತ್ನ ಮಾಡಲಾಗುತ್ತಿದೆ.

‘ನಮ್ಮ ಸತ್ಯ, ನಮ್ಮ ಇತಿಹಾಸ’ ಎಂಬ ಪರಿಕಲ್ಪನೆಯಡಿ ನಡೆಯುತ್ತಿರುವ ಈ ಅಭಿಯಾನ ಯುವ ಪೀಳಿಗೆಯಲ್ಲಿ ಭಾರತೀಯ ಪರಂಪರೆಯ ಬಗ್ಗೆ ಆಸಕ್ತಿ ಮೂಡಿಸುವುದರ ಜೊತೆಗೆ ಕುಟುಂಬ ಮಟ್ಟದಲ್ಲೂ ಸಾಂಸ್ಕೃತಿಕ ಸಂವಾದಕ್ಕೆ ವೇದಿಕೆ ಕಲ್ಪಿಸಲಿದೆ ಎಂದು ಚಿತ್ರತಂಡ ಹೇಳಿದೆ.

ನಿತೇಶ್ ತಿವಾರಿ ನಿರ್ದೇಶನದ ಈ ಮೆಗಾ ಬಜೆಟ್ ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಮತ್ತು ಸನ್ನಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಪ್ರೈಮ್ ಫೋಕಸ್ ಸ್ಟುಡಿಯೋಸ್, DNEG ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಗಳಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

‘ಜನ ನಾಯಗನ್’ಗೆ ‘ಎ’ ಸರ್ಟಿಫಿಕೆಟ್: 12 ಕಟ್‌ಗಳ ಬಳಿಕವೇ ವಿಜಯ್ ಚಿತ್ರದ ಬಿಡುಗಡೆಗೆ ಗ್ರೀನ್ ಸಿಗ್ನಲ್

ಚೆನ್ನೈ: ವಿಜಯ್ ಅಭಿನಯದ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣಪತ್ರ ನೀಡಿದ್ದು, ಬಿಡುಗಡೆಗೆ ಇದ್ದ ಪ್ರಮುಖ ಅಡ್ಡಿ ನಿವಾರಣೆಯಾಗಿದೆ. ಆದರೆ ಚಿತ್ರಕ್ಕೆ ಅನುಮತಿ ನೀಡುವ ಮುನ್ನ ಸಿಬಿಎಫ್‌ಸಿ ಒಟ್ಟು 12 ಬದಲಾವಣೆಗಳನ್ನು ಕಡ್ಡಾಯಗೊಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ವರದಿಗಳ ಪ್ರಕಾರ, ವಿಜಯ್ ಅವರ ರಾಜಕೀಯ ಪಕ್ಷ ‘ಟಿವಿಕೆ’ ಹೆಸರಿರುವ ಸಂಭಾಷಣೆಗಳನ್ನು ಮ್ಯೂಟ್ ಮಾಡುವಂತೆ ಹಾಗೂ ರಾಷ್ಟ್ರಧ್ವಜ ಕಾಣಿಸುವ ದೃಶ್ಯವೊಂದನ್ನು ತೆಗೆದುಹಾಕುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ.

ಇದೇ ವೇಳೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವಿರುವ ಪುಸ್ತಕದ ಮುಖಪುಟ ಬದಲಾಯಿಸುವಂತೆ ಮತ್ತು ಅವರಿಗೆ ಸಂಬಂಧಿಸಿದ ಕೆಲವು ಸಂಭಾಷಣೆಗಳನ್ನು ತಿದ್ದುಪಡಿ ಮಾಡುವಂತೆ ನಿರ್ದೇಶಿಸಲಾಗಿದೆ.

ಇದರ ಜೊತೆಗೆ ಧಾರ್ಮಿಕ ಪದಗಳು, ಸದ್ದಾಂ ಹುಸೇನ್ ಗಲ್ಲು ಶಿಕ್ಷೆ ಕುರಿತ ಉಲ್ಲೇಖ, ಭಾರತದ ಬಗ್ಗೆ ಇರುವ ಕೆಲವು ಕಟು ಸಂಭಾಷಣೆಗಳು, ಮಹಿಳೆಯರ ದೇಹದ ಕುರಿತು ಆಕ್ಷೇಪಾರ್ಹ ಮಾತುಗಳು ಹಾಗೂ ಮಗುವನ್ನು ಸುಡುವ ದೃಶ್ಯ ಸೇರಿದಂತೆ ಹಲವು ಅಂಶಗಳಲ್ಲಿ ಬದಲಾವಣೆ ಮಾಡುವಂತೆ ಸೂಚಿಸಲಾಗಿದೆ.

ಸಿಬಿಎಫ್‌ಸಿ ಸೂಚಿಸಿದ ಎಲ್ಲ ತಿದ್ದುಪಡಿಗಳನ್ನು ಪೂರ್ಣಗೊಳಿಸಿದ ಬಳಿಕ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ನೀಡಲಾಗಿದ್ದು, ಈ ತಿಂಗಳ ಅಂತ್ಯದಲ್ಲಿ ಸಿನಿಮಾ ತೆರೆಕಾಣುವ ಸಾಧ್ಯತೆ ಇದೆ.

ಎರಡು ವರ್ಷಗಳ ಬಳಿಕ ಮತ್ತೆ ಸೋಲೊ ಹೀರೋ : ‘ಫಾರೆವರ್’ ಮೂಲಕ ಹೊಸ ಅವತಾರದಲ್ಲಿ ಲೂಸ್ ಮಾದ ಯೋಗಿ

ಬೆಂಗಳೂರು: ಕನ್ನಡ ನಟ ಲೂಸ್ ಮಾದ ಯೋಗಿ ತಮ್ಮ 51ನೇ ಸಿನಿಮಾ ‘ಫಾರೆವರ್’ಗೆ ಚಾಲನೆ ನೀಡಿದ್ದು, ಸುಮಾರು ಎರಡು ವರ್ಷಗಳ ಬಳಿಕ ಮತ್ತೆ ಸೋಲೊ ನಾಯಕನಾಗಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭದಲ್ಲಿ ನಟ ಧ್ರುವ ಸರ್ಜಾ ಭಾಗವಹಿಸಿ ಗೆಳೆಯ ಯೋಗಿಗೆ ಶುಭ ಹಾರೈಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.

‘ಗ್ರಾಮಾಯಣ’ ಸಿನಿಮಾ ಇನ್ನೂ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವ ನಡುವೆಯೇ ಹೊಸ ಪ್ರಾಜೆಕ್ಟ್ ಆರಂಭಿಸಿರುವ ಯೋಗಿ, ಈ ಚಿತ್ರದಲ್ಲಿ ತಮ್ಮ ವೃತ್ತಿಜೀವನದ ವಿಭಿನ್ನ ಪಾತ್ರವೊಂದನ್ನು ನಿರ್ವಹಿಸುತ್ತಿರುವುದಾಗಿ ಹೇಳಿದರು. ಲವ್, ಸೆಂಟಿಮೆಂಟ್, ಆ್ಯಕ್ಷನ್ ಜೊತೆಗೆ ಕಥೆಯಲ್ಲಿರುವ ಮತ್ತೊಂದು ವಿಶೇಷ ಅಂಶವನ್ನು ಶೀಘ್ರದಲ್ಲೇ ಬಹಿರಂಗಪಡಿಸುವುದಾಗಿ ತಿಳಿಸಿದರು.

ಶಾಲಾ ದಿನಗಳಿಂದಲೂ ಧ್ರುವ ಸರ್ಜಾ ತಮ್ಮ ಆಪ್ತ ಸ್ನೇಹಿತ ಎಂದು ಹೇಳಿದ ಯೋಗಿ, ತಮ್ಮ 51ನೇ ಚಿತ್ರದ ಆರಂಭಕ್ಕೆ ಅವರು ಸಾಕ್ಷಿಯಾಗಿರುವುದು ಖುಷಿ ತಂದಿದೆ ಎಂದರು. ಶಾಸಕ ಕೃಷ್ಣಪ್ಪ ಕ್ಯಾಮೆರಾ ಚಾಲನೆ ನೀಡಿದರೆ, ನಿರ್ಮಾಪಕ ಸಾಜಿದ್ ಖುರೇಶಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದರು.

ಎಂ. ವೆಂಕಟನಾರಾಯಣ್ (ಠಾಗೋರ್ ಕೃಷ್ಣ) ನಿರ್ಮಾಣದ ಈ ಚಿತ್ರಕ್ಕೆ ‘ಚಂದ್ರಿಕ’ ನಿರ್ದೇಶಕ ಯೋಗೇಶ್ ಎಂ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ನಾಯಕಿಯಾಗಿ ಆಕಾಂಕ್ಷಾ ರಾವ್ ನಟಿಸುತ್ತಿದ್ದು, ಇದು ಅವರ ಮೊದಲ ಕನ್ನಡ ಸಿನಿಮಾ.

‘ಸಿದ್ಲಿಂಗು 2’ ಬಳಿಕ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಯೋಗಿ, ‘ಫಾರೆವರ್’ ಮೂಲಕ ಮತ್ತೊಮ್ಮೆ ಬಾಕ್ಸ್ ಆಫೀಸ್‌ನಲ್ಲಿ ತಮ್ಮ ಛಾಪು ಮೂಡಿಸುವ ವಿಶ್ವಾಸದಲ್ಲಿದ್ದಾರೆ.

‘ಟು ಲೆಟ್’ ಖ್ಯಾತಿಯ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಳಿಯನ್ ನಿಧನ

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಸಿನಿಮಾಟೊಗ್ರಾಫರ್ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಳಿಯನ್ ಅವರು ವಿಧಿವಶರಾಗಿದ್ದಾರೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ 57 ವರ್ಷದ ಸಳಿಯನ್ ಅವರು ಚಿಕಿತ್ಸೆ ಫಲಿಸದೆ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದು, ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಳಿಯನ್ ತಮ್ಮ ಸಿನಿ ಪಯಣವನ್ನು 2007ರಲ್ಲಿ ‘ಕಲ್ಲೂರಿ’ ಚಿತ್ರದ ಮೂಲಕ ಆರಂಭಿಸಿದ್ದರು. ಬಳಿಕ ‘ಪರದೇಸಿ’, ‘ತರೈ ತಪ್ಪಾಟೈ’, ‘ಜೋಕರ್’, ‘ಸವಾರಿ’ ಸೇರಿದಂತೆ ಹಲವು ವಿಮರ್ಶಕರ ಮೆಚ್ಚುಗೆ ಪಡೆದ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿ ವಿಶಿಷ್ಟ ಗುರುತು ಮೂಡಿಸಿದ್ದರು.

2019ರಲ್ಲಿ ಅವರು ನಿರ್ದೇಶಿಸಿದ ‘ಟು ಲೆಟ್’ ಸಿನಿಮಾ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮೆಚ್ಚುಗೆ ಗಳಿಸಿ ರಾಷ್ಟ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಸಾಮಾನ್ಯ ಕುಟುಂಬದ ಜೀವನ ಹೋರಾಟವನ್ನು ನೈಜವಾಗಿ ತೆರೆದಿಟ್ಟಿದ್ದ ಈ ಸಿನಿಮಾ ಸಳಿಯನ್ ಅವರ ನಿರ್ದೇಶನ ಸಾಮರ್ಥ್ಯಕ್ಕೆ ಸಾಕ್ಷಿಯಾಗಿತ್ತು.

ಸಳಿಯನ್ ಅವರ ನಿಧನದಿಂದ ತಮಿಳು ಚಿತ್ರರಂಗ ಒಬ್ಬ ಪ್ರತಿಭಾವಂತ ಛಾಯಾಗ್ರಾಹಕ ಹಾಗೂ ಸಂವೇದನಾಶೀಲ ನಿರ್ದೇಶಕನನ್ನು ಕಳೆದುಕೊಂಡಿದೆ. ಇಂದು ಬೆಳಗ್ಗೆಯಿಂದಲೇ ಬಾಲ, ಮಿಸ್ಕಿನ್, ಸಸಿಕುಮಾರ್, ಸೀಮಾನ್ ಸೇರಿದಂತೆ ಅನೇಕ ಗಣ್ಯರು ಅವರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಗದಗ ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ: ಬಿಜೆಪಿ ರೈತ ಮೋರ್ಚಾ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಗದಗ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಡಿ.ವೈ. ಹುನಗುಂದ, ಹವಾಮಾನ ವೈಪರೀತ್ಯ, ಅಸಮರ್ಪಕ ಮಳೆ, ಬೆಳೆ ವೈಫಲ್ಯ, ದುಬಾರಿ ಬೀಜ ಹಾಗೂ ರಸಗೊಬ್ಬರ, ಮಾರುಕಟ್ಟೆಯ ಬೆಲೆ ಕುಸಿತದಿಂದ ಜಿಲ್ಲೆಯ ರೈತರು ಆರ್ಥಿಕವಾಗಿ ಸಂಪೂರ್ಣ ಕಂಗೆಟ್ಟಿದ್ದಾರೆ. ಬೆಳೆ ಬೆಳೆಯಲು ಮಾಡಿದ ಹೂಡಿಕೆಯನ್ನೂ ಮರಳಿ ಪಡೆಯಲಾಗದ ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಕೂಡಲೇ ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ವಿಶೇಷ ಪರಿಹಾರ ಪ್ಯಾಕೇಜ್ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ರಾಜ್ಯ ಸರ್ಕಾರದ ಪರಿಹಾರ ನಿಧಿಯಡಿ ಬಾಕಿ ಉಳಿದಿರುವ ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಹಾರದ ಮೊತ್ತವನ್ನು ಎರಡು ವಾರಗಳೊಳಗೆ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ರೈತರು ಬೆಳೆಯುವ ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಡ್ಡಾಯವಾಗಿ ಜಾರಿಗೊಳಿಸಿ, ಖಾಸಗಿ ಮಧ್ಯವರ್ತಿಗಳ ಶೋಷಣೆ ತಪ್ಪಿಸಲು ಜಿಲ್ಲೆಯಲ್ಲಿ ಅಗತ್ಯ ಸಂಖ್ಯೆಯ ಸರ್ಕಾರಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು.

ಅಘೋಷಿತ ವಿದ್ಯುತ್ ಕಡಿತ ಹಾಗೂ ವೋಲ್ಟೇಜ್ ಏರಿಳಿತದಿಂದ ಪಂಪ್‌ಸೆಟ್‌ಗಳು ಹಾಳಾಗುತ್ತಿದ್ದು, ಹಗಲು ವೇಳೆಯಲ್ಲಿ ಕನಿಷ್ಠ ಏಳು ಗಂಟೆಗಳ ಗುಣಮಟ್ಟದ ತ್ರಿಫೇಸ್ ವಿದ್ಯುತ್ ಪೂರೈಸಬೇಕು. ಹಿಂಗಾರು ಹಂಗಾಮಿಗೆ ಮುನ್ನವೇ ರೈತ ಸಂಪರ್ಕ ಕೇಂದ್ರ ಹಾಗೂ ಸಹಕಾರ ಸಂಘಗಳ ಮೂಲಕ ಸಬ್ಸಿಡಿ ದರದಲ್ಲಿ ಗುಣಮಟ್ಟದ ಬೀಜ ಮತ್ತು ರಸಗೊಬ್ಬರ ವಿತರಿಸಬೇಕು. ನಕಲಿ ಕೃಷಿ ಪರಿಕರ ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಅವರ ಪರವಾನಗಿ ರದ್ದುಪಡಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಜು ಕುರಡಗಿ ಮಾತನಾಡಿ, ಸರಣಿ ಬೆಳೆ ವೈಫಲ್ಯದಿಂದ ಕಂಗಾಲಾಗಿರುವ ರೈತರಿಗೆ ಬ್ಯಾಂಕುಗಳು ಸಾಲ ವಸೂಲಾತಿ ಹೆಸರಿನಲ್ಲಿ ನೀಡುತ್ತಿರುವ ಕಿರುಕುಳವನ್ನು ತಕ್ಷಣ ನಿಲ್ಲಿಸಬೇಕು. ಕೃಷಿ ಸಾಲಮನ್ನಾ ಪ್ರಕ್ರಿಯೆಗೆ ಚಾಲನೆ ನೀಡುವುದರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಬರ ಕಾಮಗಾರಿಗಳನ್ನು ಆರಂಭಿಸಿ ಕೂಲಿಕಾರರ ಗುಳೆ ತಪ್ಪಿಸಬೇಕು ಎಂದು ಆಗ್ರಹಿಸಿದರು.

ಬೇಡಿಕೆಗಳನ್ನು ಜಿಲ್ಲಾಡಳಿತ ತಕ್ಷಣವೇ ರಾಜ್ಯ ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜಿಲ್ಲೆಯ ಪ್ರಮುಖ ಹೆದ್ದಾರಿಗಳನ್ನು ತಡೆದು, ಸರ್ಕಾರಿ ಕಚೇರಿಗಳ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಬಿಜೆಪಿ ರೈತ ಮೋರ್ಚಾ ಎಚ್ಚರಿಕೆ ನೀಡಿತು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ
ಪ್ರಧಾನ ಕಾರ್ಯದರ್ಶಿ ಮಹೇಶ್ ಶಿರಹಟ್ಟಿ, ಅಶೋಕ್ ಬ್ಯಾಹಟ್ಟಿ, ಎಂ.ಎಸ್. ಕರಿಗೌಡ್ರ, ಚನ್ನವೀರಪ್ಪ ಹೂಗಾರ, ಫಕ್ಕೀರೇಶ ರಟ್ಟಿಹಳ್ಳಿ, ವೈ.ಪಿ. ಅಡ್ನೂರ, ಸಂತೋಷ ಅಕ್ಕಿ, ಭೀಮಸಿಂಗ್ ರಾಠೋಡ್, ದೇವರಾಜ ಮೇಟಿ, ಶಂಕರ ಕರಿಬಿಷ್ಟಿ, ರವಿ ವಗ್ಗನವರ, ಸುರೇಶ್ ಮರಳಪ್ಪನವರ, ಬುಡಪ್ಪ ಹಳ್ಳಿ, ಲಕ್ಷ್ಮಣ ರಣತೂರು, ಬಸವರಾಜ ಕುರ್ತಕೋಟಿ, ರಮೇಶ್ ಸಜ್ಜಗಾರ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

“ಮಳೆ ಇಲ್ಲ, ಬೆಳೆ ಇಲ್ಲ, ಪರಿಹಾರವೂ ಇಲ್ಲ. ರೈತರ ಬದುಕು ಉಳಿಸಬೇಕಾದರೆ ಗದಗ ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ ಸರ್ಕಾರ ನೆರವಿಗೆ ಬರಬೇಕು.” 

ಡಿ.ವೈ. ಹುನಗುಂದ, ಜಿಲ್ಲಾಧ್ಯಕ್ಷ, ಬಿಜೆಪಿ ರೈತ ಮೋರ್ಚಾ

ನಿಖರ ದತ್ತಾಂಶವೇ ಅಭಿವೃದ್ಧಿಯ ದಿಕ್ಸೂಚಿ: ಸಿ.ಆರ್. ಮುಂಡರಗಿ

0

ವಿಜಯಸಾಕ್ಷಿ ಸುದ್ದಿ, ಗದಗ: ಪಾರದರ್ಶಕ, ಜವಾಬ್ದಾರಿಯುತ ಹಾಗೂ ಜನಸ್ನೇಹಿ ಆಡಳಿತ ವ್ಯವಸ್ಥೆ ರೂಪಿಸಲು ನಿಖರವಾದ ಅಂಕಿ-ಅಂಶಗಳು ಮತ್ತು ಆಡಳಿತಾತ್ಮಕ ದತ್ತಾಂಶದ ಸಮರ್ಪಕ ಬಳಕೆ ಅತ್ಯಂತ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಹೇಳಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ವತಿಯಿಂದ ಭಾರತೀಯ ಸಂಖ್ಯಾಶಾಸ್ತ್ರದ ಪಿತಾಮಹ ಪ್ರೊ. ಪಿ.ಸಿ. ಮಹಲನೋಬಿಸ್ ಅವರ ಜನ್ಮದಿನದ ಅಂಗವಾಗಿ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನ (ಮಹಲನೋಬಿಸ್ ದಿನಾಚರಣೆ) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸಕ್ತ ವರ್ಷದ ಧ್ಯೇಯವಾದ “ಆಡಳಿತಾತ್ಮಕ ದತ್ತಾಂಶದ ಸಾಮರ್ಥ್ಯವನ್ನು ಮುಕ್ತಗೊಳಿಸುವುದು” ಎಂಬ ಪರಿಕಲ್ಪನೆಯನ್ನು ಪ್ರತಿಯೊಂದು ಸರ್ಕಾರಿ ಇಲಾಖೆಯ ಕಾರ್ಯವೈಖರಿಯಲ್ಲಿ ಅಳವಡಿಸಿಕೊಳ್ಳಬೇಕು. ವಿಶ್ವಾಸಾರ್ಹ ದತ್ತಾಂಶದ ಆಧಾರದ ಮೇಲೆ ತೆಗೆದುಕೊಳ್ಳುವ ನಿರ್ಧಾರಗಳು ಆಡಳಿತದ ಗುಣಮಟ್ಟವನ್ನು ಮತ್ತಷ್ಟು ಉತ್ತಮಗೊಳಿಸುತ್ತವೆ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲೆ ಜಯದೇವಿ ಅರಕೇರಿಮಠ ಮಾತನಾಡಿ, ಆಡಳಿತಾತ್ಮಕ ದತ್ತಾಂಶವನ್ನು ಕೇವಲ ದಾಖಲೆಯಾಗಿ ಸಂಗ್ರಹಿಸಿಡದೇ, ಅಭಿವೃದ್ಧಿ ಯೋಜನೆಗಳ ರೂಪುರೇಷೆ, ನೀತಿ ನಿರೂಪಣೆ ಹಾಗೂ ದೈನಂದಿನ ಆಡಳಿತಾತ್ಮಕ ನಿರ್ಧಾರಗಳಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ ಮಾತನಾಡಿ, ಮಾನವ ಅಭಿವೃದ್ಧಿ ಸೂಚ್ಯಂಕ ಸೇರಿದಂತೆ ವಿವಿಧ ಅಭಿವೃದ್ಧಿ ಮಾನದಂಡಗಳ ನಿರ್ಧಾರದಲ್ಲಿ ಸಂಖ್ಯಾಶಾಸ್ತ್ರದ ಪಾತ್ರ ಮಹತ್ವದ್ದಾಗಿದೆ. ದೇಶದ ಆರ್ಥಿಕ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಪ್ರೊ. ಪಿ.ಸಿ. ಮಹಲನೋಬಿಸ್ ಅವರ ಕೊಡುಗೆ ಶಾಶ್ವತವಾಗಿ ಸ್ಮರಣೀಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಬಿ.ಎಸ್. ಪಾಟೀಲ ಮಾತನಾಡಿ, ಇಲಾಖೆಯ ಸಿಬ್ಬಂದಿ ದತ್ತಾಂಶ ಸಂಗ್ರಹಣೆ ಮತ್ತು ನಿರ್ವಹಣೆಯಲ್ಲಿ ನಿಖರತೆಗೆ ಆದ್ಯತೆ ನೀಡಿ, ಜನಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಿವೃತ್ತ ಹಿರಿಯ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ, ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಬಿ.ಎಲ್. ಕೊಪ್ಪಳ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಸಾಂಖ್ಯಿಕ ನಿರೀಕ್ಷಕಿ ಶ್ರುತಿ ಕದಂ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಅರ್ಜುನ ಕಾರ್ಯಕ್ರಮ ನಿರೂಪಿಸಿದರು. ಗಣತಿದಾರ ಕಾವ್ಯ ಕುಸ್ಲಾಪೂರು ವಂದಿಸಿದರು.

“ನಿಖರ ಅಂಕಿ-ಅಂಶಗಳ ಆಧಾರದ ಮೇಲೆ ರೂಪಿಸುವ ನೀತಿಗಳು ಮತ್ತು ಯೋಜನೆಗಳೇ ಪರಿಣಾಮಕಾರಿ ಆಡಳಿತಕ್ಕೆ ಬಲ ನೀಡುತ್ತವೆ.”

– ಸಿ.ಆರ್. ಮುಂಡರಗಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ